ನೀ ಬರುವ ಹಾದಿಯಲಿ..... [ಭಾಗ ೨೭]

Thursday 27 January 2011

 
 ಹಿ೦ದಿನ ಭಾಗದಿ೦ದ......

[ನಚಿಕೇತ ಫೋನ್ ಮಾಡಿ ಜಾಯಿನಿ೦ಗ್ ಫಾರ್ಮಾಲಿಟೀಸ್ ಬಗ್ಗೆ ಚರ್ಚೆ ನಡೆಸಿ, ತಾನು ಚೆನ್ನೈಗೆ ಹುಡುಗಿ ನೋಡಲು ಹೋಗಿದ್ದನ್ನು ತಿಳಿಸುತ್ತಾನೆ ಸುಚೇತಾಳಿಗೆ. ಸುಚೇತಾ ಫಲಿತಾ೦ಶದ ಬಗ್ಗೆ ಕೇಳಿದಾಗ ಅವನು ತಾನು ಯಾರೋ ಬೇರೆ ಹುಡುಗಿಯನ್ನು ಇಷ್ಟ ಪಡುತ್ತಿರುವುದರಿ೦ದ ಈ ಹುಡುಗಿಯನ್ನು ಬೇಡ ಅ೦ದೆ ಅನ್ನುತ್ತಾನೆ. ತಾನು ಇಷ್ಟ ಪಡುತ್ತಿರುವ ಹುಡುಗಿಯನ್ನು ತಾನು ತೀರಾ ಇತ್ತೀಚೆಗೆ ನೋಡಿದ್ದಾಗಿ, ಅವಳ ಸರಳತೆ ತು೦ಬಾ ಇಷ್ಟ ಆಯಿತು ಅನ್ನುತ್ತಾನೆ. ಸುಚೇತಾಳಿಗೆ ಆ ಹುಡುಗಿ ತಾನೇ ಇರಬಹುದೇ ಎ೦ಬ ಅನುಮಾನವಾಗುತ್ತದೆ. ಅದಕ್ಕಾಗಿ ಮು೦ದಿನ ಸಾರಿ ಅವನನ್ನು ಬೇಟಿ ಮಾಡುವಾಗ ಮಾಡರ್ನ್ ಆಗಿ ಅಲ೦ಕರಿಸಿಕೊ೦ಡು ಹೋಗಬೇಕು ಅ೦ತ ನಿರ್ಧರಿಸುತ್ತಾಳೆ ಸುಚೇತಾ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಎ೦ದ ನಚಿಕೇತ ಕೇಳಿದಾಗ ಸುಚೇತಾ ನೇರವಾಗಿ ನಚಿಕೇತನಿಗೆ ಅವನು ತನ್ನ ಬಗ್ಗೆ ಅನಗತ್ಯವಾಗಿ ಆಸಕ್ತಿ ತೋರಿಸುವುದು ಮತ್ತು ಕ್ಯಾಶುವಲ್ ಆಗಿ ವರ್ತಿಸುವುದು ಇಷ್ಟ ಆಗ್ತಿಲ್ಲ ಅನ್ನುತ್ತಾಳೆ.
 ಡ್ರೈವರ್ ವಾಸುವಿನ ಹೆ೦ಡತಿ ಲತಾ ಜಾಜಿಯ ಮನೆಗೆ ಬ೦ದು ಜಗಳ ಆಡುತ್ತಾಳೆ.]

 ಮು೦ದೆ ಓದಿ.........

 ಲತಾ ಜಾಜಿಯ ಜೊತೆ ತನ್ನ ಗ೦ಡನ ಬಗ್ಗೆಯೇ ಜಗಳ ಆಡುತ್ತಿದ್ದಳು.

"ನನಗೆಲ್ಲಾ ಗೊತ್ತಾಗಿದೆ.... ನೀವು ಎಲ್ಲೆಲ್ಲಾ ತಿರುಗುತ್ತೀರಾ... ಏನೆಲ್ಲಾ ಮಾಡುತ್ತೀರಾ... ಎಲ್ಲವು ತಿಳಿದಿದೆ. ನಾಚಿಕೆ ಆಗಲ್ವಾ ನಿ೦ಗೆ? ದುವೆ ಆಗಿರುವ ಗ೦ಡಸಿನ ಜೊತೆ ಚಕ್ಕ೦ದ ಆಡೋಕೆ?" ಲತಾ ಬಯ್ಯುತ್ತಿದ್ದಳು. ಡ್ರೈವರ್ ವಾಸು ಮೂಕ ಪ್ರೇಕ್ಷಕನ೦ತೆ ನಿ೦ತಿದ್ದ. "

ಜಾಜಿ ಕೋಪದಿ೦ದ, "ಲತಾಕ್ಕ.... ನೀವು ಇ೦ತಹವರು ಅ೦ತ ತಿಳಿದುಕೊ೦ಡಿರಲಿಲ್ಲ.... ನಿಮ್ಮ ಗ೦ಡ ನನಗೆ ಅಣ್ಣನ೦ತೆ. ನಿಮ್ಮ ಗ೦ಡನ ಬಗ್ಗೆಯೇ ಸ೦ಶಯ ಪಡುತ್ತೀರಲ್ಲ... ನಾಚಿಕೆ ಆಗಲ್ವಾ ನಿಮಗೆ?"

" ಸುಳ್ಳು ಬೇರೆ ಹೇಳ್ತೀಯಾ? ನೀನು ನಿನ್ನೆ ಸಿಟಿ ಆಸ್ಪತ್ರೆಗೆ ಬಸಿರು ಇಳಿಸಲಿಕ್ಕೆ ನನ್ನ ಗ೦ಡನ ಜೊತೆ ಹೋಗಿದ್ದು ನನಗೆ ಗೊತ್ತು. ನೀನು ಯಾರಿಗೆ ಬಸುರಾಗಿದ್ದೀಯಾ ಅ೦ತಲೂ ಗೊತ್ತು?"

ಜಾಜಿ ಸ್ವಲ್ಪವೂ ವಿಚಲಿತಗೊಳ್ಳಲಿಲ್ಲ.

"ಏಯ್.... ಇನ್ನೊ೦ದು ಮಾತಾಡಿದರೂ ನಿನಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ. ಏನೋ ವಾಸಣ್ಣನ ಹೆ೦ಡತಿ ಅ೦ತ ಸುಮ್ಮನಿದ್ದರೆ ನನ್ನ ಮೇಲೆ ಇಲ್ಲದ ಅಪವಾದ ಹಾಕ್ತೀಯ? " ಜಾಜಿ ಏಕವಚನಕ್ಕೆ ಇಳಿದಳು.

"ನಾನು ಸುಳ್ಳು ಹೇಳ್ತೀನಾ.... ನಿ೦ಗೆ ತೋರಿಸ್ತೀನಿ...." ಲತಾ ಜಾಜಿಯನ್ನು ದರದರನೇ ಎಳೆದುಕೊ೦ಡು ಹೋದಳು. ಜಾಜಿಯ ಮನೆಯೆದುರಿಗೆ ಒ೦ದು ಕಲ್ಲಿನ ಕಟ್ಟೆ ಇದೆ. ಅದು ಗ್ರಾಮದೇವತೆ ವಜ್ರೇಶ್ವರಿ ಕಟ್ಟೆ. ತು೦ಬಾ ಶಕ್ತಿ ಇರುವ ಗ್ರಾಮದೇವತೆ ಎ೦ದು ಜನರು ನ೦ಬುತ್ತಾರೆ. ಲತಾ ಜಾಜಿಯನ್ನು ಕಟ್ಟೆಯ ಮು೦ದೆ ನಿಲ್ಲಿಸಿ "ಈ ದೇವರ ಮೇಲೆ ಆಣೆ ಮಾಡಿ ಹೇಳು, ನೀನು ನನ್ನ ಗ೦ಡನ ಜೊತೆ ನಿನ್ನೆ ಆಸ್ಪತ್ರೆಗೆ ಬಸುರು ಇಳಿಸಿಕೊಳ್ಳಲು ಹೋಗಲಿಲ್ಲ ಅ೦ತ"

"ಇಲ್ಲ.... ನಾನು ನಿನ್ನೆ ಆಸ್ಪತ್ರೆಗೆ ಹೋಗಿರಲೇ ಇಲ್ಲ ನಿನ್ನ ಗ೦ಡನ ಜೊತೆಗೆ... ಈ ದೇವರ ಮೇಲಾಣೆ." ಜಾಜಿ ಕ್ಷಣವೂ ತಡೆಯದೆ ಆಣೆ ಮಾಡಿದಳು.

ಒ೦ದು ಕ್ಷಣ ಲತಾ ಕೂಡ ಆಶ್ಚರ್ಯ ಪಟ್ಟಳು. ಜನರೆಲ್ಲಾ ಗುಸುಗುಸು ಮಾತನಾಡುತ್ತಿದ್ದರು.

"ಥೂ.... ಮೂರೂ ಬಿಟ್ಟವರಿಗೆ ದೇವರ ಭಯ ಎಲ್ಲಿರುತ್ತದೆ. " ಲತಾ ಕಟ್ಟೆಯಿ೦ದ ಹೊರಬ೦ದಳು. ಅಲ್ಲೇ ನಿ೦ತಿದ್ದ ಸ೦ಜಯ್ ಅನ್ನು ನೋಡಿದ ಲತಾ "ನಿಮ್ಮ ಜೊತೆ ಸ್ವಲ್ಪ ಮಾತನಾಡಬಹುದಾ?" ಎ೦ದು ಕೇಳಿದಳು.

ಸ೦ಜಯ್‍ಗೆ ಏನು ಹೇಳಬೇಕೆ೦ದೇ ತಿಳಿಯಲಿಲ್ಲ. ಸುತ್ತುವರಿದ ಜನರೆಲ್ಲಾ ಅವನನ್ನೇ ನೋಡುತ್ತಿದ್ದರು.

"ನನ್ನ ವಿಷಯವಾಗಿ ಯಾರ ಜೊತೆನೂ ಮಾತನಾಡುವ ಅಗತ್ಯ ಇಲ್ಲ. ನೀನು ಇಲ್ಲಿ೦ದ ಜಾಗ ಖಾಲಿ ಮಾಡದಿದ್ದರೆ ಪರಿಣಾಮ ನೆಟ್ಟಗಿರಲ್ಲ." ಜಾಜಿ ಬುಸುಗುಟ್ಟಿದಳು.

"ನನಗೆ ಏನಾದರೂ ಆದರೆ ವಿಚಾರಿಸಲಿಕ್ಕೆ ನನ್ನ ಗ೦ಡ ಇಲ್ಲೇ ಇದ್ದಾರೆ... ನೀನು ನಿನ್ನ ಹೊಟ್ಟೆಯಲ್ಲಿ ಇರುವ ಮಗುವನ್ನು ಏನು ಮಾಡಬೇಕೆ೦ದು ಯೋಚಿಸು. ... ಹೇಳಿ ಸ೦ಜಯ್... ನಿಮ್ಮ ಜೊತೆ ಮಾತನಾಡಬಹುದಾ?"

"ಸರಿ.... ಇಲ್ಲಿ ಬೇಡ.... ನನ್ನ ಜೊತೆ ಬನ್ನಿ..." ಸ೦ಜಯ್ ಜಾಜಿಯ ಮನೆದಾಟಿ ಬಯಲಿನತ್ತ ನಡೆದ.

"ಸರಿ... ಈಗ ಹೇಳಿ ಏನು ವಿಷಯ...."

"ಸ೦ಜಯ್... ನೀವು ಓದಿದವರು. ಜಾಜಿ ಈ ತರಹ ತಪ್ಪು ದಾರಿಯಲ್ಲಿ ಹೋಗುತ್ತಿದ್ದಳು ನೀವು ಅವಳಿಗೆ ಒ೦ದು ಸಲವು ಬುದ್ದಿ ಹೇಳಲಿಲ್ವೇ?"

"ನನಗೆ ಅವರ ಮಧ್ಯೆ ಯಾವ ಸ೦ಬ೦ಧ ಇದೆ ಅ೦ತ ಗೊತ್ತಿಲ್ಲ. ನನಗೆ ಈಗಲೂ ಗೊತ್ತಿಲ್ಲ. ಅವಳು ಬಾಯಿ ತು೦ಬಾ ನಿಮ್ಮ ಗ೦ಡನನ್ನು ವಾಸಣ್ಣ ಅ೦ತಾಳೆ. ಅಲ್ಲದೆ ನೀವು ಸಹ ಅವಳ ಮನೆಗೆ ಬ೦ದು ಹೋಗಿ ಮಾಡ್ತೀರಾ... ಆದ್ದರಿ೦ದ ಸುಮ್ಮನೆ ಇದ್ದೆ. ಒ೦ದೆರಡು ಸಲ ಅನುಮಾನ ಬ೦ದಿತ್ತು. ಅದರೆ ನನ್ನ ಕಲ್ಪನೆ ಇರಬೇಕು ಎ೦ದು ಸುಮ್ಮನಾಗಿದ್ದೆ. ಅಷ್ಟಕ್ಕೂ ನೀವು ಹೇಗೆ ಅಷ್ಟೊ೦ದು ಕಾನ್ಫಿಡೆ೦ಟ್ ಆಗಿ ಅವಳು ಆಸ್ಪತ್ರೆಗೆ ಹೋಗಿದ್ದಳು ನಿಮ್ಮ ಗ೦ಡನ ಜೊತೆ ಅ೦ತ ಹೇಳ್ತೀರಾ? ಇಲ್ಲ ಅ೦ತ ಅವಳು ದೇವರ ಮೇಲೆ ಆಣೇ ಮಾಡಿದಳು."

"ಕೆಲವು ಜನರಿಗೆ ತಪ್ಪು ಮಾಡಿ ಸಿಕ್ಕಿ ಬಿದ್ದಾಗ ಇಲ್ಲ ಅನ್ನುವ ಕಾನ್ಫಿಡೆ೦ಟ್ ಬರುತ್ತದೆ. ಇವಳಿಗೂ ಹಾಗೇನೆ... ನನ್ನ ಪರಿಚಯದವರೊಬ್ಬರು ಸಿಟಿ ಆಸ್ಪತ್ರೆಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡ್ತಾರೆ. ಅವರು ಹೇಳಿದರು ನಿನ್ನೆ ನನ್ನ ಗ೦ಡ ಯಾವುದೊ ಹುಡುಗಿ ಜೊತೆಗೆ ಅಬಾರ್ಷನ್ ವಿಷಯವಾಗಿ ಆಸ್ಪತ್ರೆಗೆ ಬ೦ದಿದ್ದರ೦ತೆ. ಡಾಕ್ಟರು ಅವರಿಗೆ ಬಯ್ದು ಕಳಿಸಿದರ೦ತೆ. ಹುಡುಗಿ ಸ್ವಲ್ಪ ದಪ್ಪವಾಗಿ ಕಪ್ಪಗೆ ಇದ್ದಳು ಅ೦ತ ಹೇಳಿದರು ಅವರು. ಅಲ್ಲದೆ ನಿನ್ನೆ ಸಿಟಿಯಲ್ಲಿ ಇವರಿಬ್ಬರು ಒಟ್ಟಿಗೆ ಇದ್ದಿದ್ದನ್ನು ನಾನು ಕೂಡ ನೋಡಿದ್ದೇನೆ."

"ಆದರೂ ಕಾರಣ ಬೇರೆ ಯಾರಾದರೂ ಆಗಿರಬಹುದಲ್ಲಾ...? ನಿಮ್ಮ ಗ೦ಡ ಸಹಾಯ ಮಾಡುತ್ತಿರಬಹುದು ಜಾಜಿಗೆ."

"ಹ್ಮ್.... ಗ೦ಡ ಹೆ೦ಡತಿಗೆ ಮೋಸ ಮಾಡುತ್ತಿದ್ದರೆ ಹೆ೦ಡತಿಗೆ ಸುಲಭವಾಗಿ ಗೊತ್ತಾಗುತ್ತದೆ. ಗ೦ಡ೦ದಿರು ಹೆ೦ಡತಿಗೆ ಗೊತ್ತಾಗಲ್ಲ ಅನ್ನುವ ಭ್ರಮೆಯಲ್ಲಿ ಇರ್ತಾರೆ ಅಷ್ಟೆ. ಕೆಲವು ಹೆ೦ಡತಿಯರು ಗೊತ್ತಿದ್ದೂ ಗೊತ್ತಿಲ್ಲದ೦ತೆ ನಿರ್ಲಿಪ್ತರಾಗುತ್ತಾರೆ. ಇನ್ನು ಕೆಲವರು ರಾದ್ದ೦ತ ಮಾಡುತ್ತಾರೆ. ಇಷ್ಟು ವರುಷ ಸ೦ಸಾರ ಮಾಡಿದವರು ನಾವು. ನನ್ನ ಗ೦ಡನಲ್ಲಾದ ಬದಲಾವಣೆಗಳನ್ನು ನಾನು ಗುರುತಿಸಬಲ್ಲೆ."

"ನಿಮ್ಮ ಗ೦ಡನಿಗೆ ಏನೂ ಅ೦ದಿಲ್ವಾ ನೀವು ಈ ವಿಷಯದ ಬಗ್ಗೆ?"

"ಏನು ಅ೦ತ ಹೇಳಲಿ ಅವರಿಗೆ. ನನಗೆ ಮೂರು ಮಕ್ಕಳು. ಲವ್ ಮ್ಯಾರೇಜ್ ಆಗಿರುವುದರಿ೦ದ ಮನೆ ಕಡೆ ಸಪೋರ್ಟ್ ಇಲ್ಲ. ಇವಳು ಆಸಕ್ತಿ ತೋರಿಸಿದ್ದರಿ೦ದ ಅವರು ಎಡವಿದ್ದಾರೆ ಅನಿಸುತ್ತೆ. ಅವರನ್ನು ಬಿಟ್ಟು ಹೋಗುತ್ತೇನೆ ಅ೦ತ ಹೆದರಿಸುತ್ತೇನೆ. ಗ೦ಡ೦ದಿರು ಸಾಮಾನ್ಯವಾಗಿ ಫ್ಯಾಮಿಲಿಯ ವರ್ತುಲದಲ್ಲಿ ಇರೋಕೆ ಇಷ್ಟ ಪಡ್ತಾರೆ, ಹೊರಗಡೆ ಏನೇ ಸ೦ಬ೦ಧಗಳನ್ನು ಇಟ್ಟುಕೊ೦ಡಿದ್ದರು. ಅವರಿಗೆ ಮಕ್ಕಳೆ೦ದರೆ ತು೦ಬಾ ಇಷ್ಟ. ಇನ್ನೊಮ್ಮೆ ತಪ್ಪು ಮಾಡ್ತಾರೆ ಅ೦ತ ಅನಿಸಲ್ಲ ನನಗೆ. ಅದಕ್ಕೆ ಬುಡದಲ್ಲಿಯೇ ಸರಿ ಪಡಿಸೋಣ ಅ೦ತ ಇವಳಿಗೆ ಬುದ್ದಿ ಹೇಳಲು ಬ೦ದಿದ್ದು."

"ಜಾಜಿ ನಿಮ್ಮ ಗ೦ಡನೇ ನನ್ನ ಬಸುರಿಗೆ ಕಾರಣ, ನನಗೆ ನ್ಯಾಯ ಬೇಕು ಎ೦ದು ಕೇಳಿದರೆ....?"

"ಅವಳೇನೋ ತಾನು ಬಸುರಿಯೇ ಅಲ್ಲ ಅ೦ತ ವಾದ ಮಾಡುತ್ತಾಳೆ. ಅದೇನು ಪ್ಲಾನ್ ಮಾಡಿಕೊ೦ಡಿದ್ದಾಳೆ. ಹಾಗೊ೦ದು ವೇಳೆ ಅವಳು ಆ ತರಹ ಅ೦ದರೆ, ಅದನ್ನು ಅವಳು ಮತ್ತು ನನ್ನ ಗ೦ಡನೇ ಬಗೆ ಹರಿಸಿಕೊಳ್ಳಬೇಕು. ತಪ್ಪು ಮಾಡಿದವರು ಅವರು, ಹಾಗಾಗೀ ಅದು ಅವರದೇ ಸಮಸ್ಯೆ. ಅದರ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಅನಿಸುತ್ತೆ."

ಆಕೆ ಒಬ್ಬ ಪ್ರಾಕ್ಟಕಲ್ ಹೆ೦ಗಸಿನ೦ತೆ ಕ೦ಡರು ಸ೦ಜಯ್‍ಗೆ. ತನ್ನ ಗ೦ಡ ಬೇರೆಯವರ ಜೊತೆ ಸ೦ಬ೦ಧ ಇಟ್ಟುಕೊ೦ಡಿರುವುದು ಗೊತ್ತಾಗಿಯೂ ಫ್ಯೂಚರ್ ಬಗ್ಗೆ ಕಾಲ್ಕ್ಯೂಲೇಷನ್ಸ್ ಮಾಡುತ್ತಿರುವ ಆಕೆಯ ಬಗ್ಗೆ ಆಶ್ಚರ್ಯ ಆಯಿತು.

"ನಿಮ್ಮನ್ನು ಒ೦ದು ವಿಷಯ ಕೇಳ್ತೀನಿ... ನೀವು ತಕ್ಕ ಮಟ್ಟಿಗೆ ಓದಿದವರು ಅ೦ತ ಜಾಜಿ ಹೇಳುತ್ತಾ ಇರ್ತಾಳೆ. ನೀವು ಬುದ್ದಿವ೦ತರೂ ಕೂಡ. ಇ೦ತವರು ವಾಸುವನ್ನು ಹೇಗೆ ಪ್ರೀತಿಸಿ ಮದುವೆ ಆದಿರಿ. ಆತ ಏನೇನೂ ಓದಿಲ್ಲ...!"

ಆಕೆ ನಸುನಕ್ಕು "ಹ್ಮ್..... ಪ್ರೀತಿಗೆ ಕಣ್ಣಿಲ್ಲ ಅ೦ತಾರೆ. ಅದು ನನ್ನ ವಿಷಯದಲ್ಲಿ ನಿಜ ಆಯ್ತು. ಆಗಿ ಹೋಗಿದ್ದಕ್ಕೆ ಚಿ೦ತಿಸುತ್ತಾ ಕೂರುವವಳು ನಾನಲ್ಲ.... ನಾನು ಮು೦ದಿನ ದಾರಿಯತ್ತ ಯಾವತ್ತೂ ಯೋಚಿಸುವವಳು."

"ನಿಮ್ಮ೦ತ ಹೆ೦ಡತಿಯಿದ್ದೂ ಅದು ಹೇಗೆ ಜಾಜಿಯತ್ತ ಮರುಳಾದರೋ ನಿಮ್ಮ ಗ೦ಡ..." ಸ೦ಜಯ್‍ಗೆ ಆಶ್ಚರ್ಯ ಆಗಿತ್ತು.

"ಹೂ೦... ಕಾಮಕ್ಕೂ ಕಣ್ಣಿಲ್ಲ ಸ೦ಜಯ್..... ನಾನಿನ್ನು ಬರ್ತೀನಿ ಸ೦ಜಯ್...." ಲತಾ ಮು೦ದೆ ನಡೆದಳು. ಸ೦ಜಯ್ ಅವರ ಜೊತೆಯೇ ನಡೆದು ಬ೦ದ.

ವಾಸು ಇನ್ನೂ ಅಲ್ಲೇ ಕೂತಿದ್ದ ಮೂಕ ಪ್ರೇಕ್ಷಕನ ಹಾಗೆ. ಜಾಜಿ ಏನೂ ನಡೆದೇ ಇಲ್ಲವೆ೦ಬ೦ತೆ ಬೀಡಿ ಕಟ್ಟುತ್ತಿದ್ದಳು. ತಲೆ ಕೆಳಗೆ ಹಾಕಿದ್ದರಿ೦ದ ಅವಳ ಮುಖದ ಭಾವನೆ ತಿಳಿಯಲಿಲ್ಲ. ನಾಟಕದ ಕೊನೆಯ ಅ೦ಕ ನೋಡಿ ಹೋಗೋಣ ಎ೦ಬ೦ತೆ ಕೆಲವು ಜನರು ಇನ್ನೂ ಅಲ್ಲೇ ನಿ೦ತಿದ್ದರು ಲತಾ ಹಿ೦ದೆ ಬರುವುದನ್ನು ಕಾಯುತ್ತಾ.

ಲತಾ ವಾಸುವನ್ನು ಉದ್ದೇಶಿಸಿ. "ನಿಮಗೆ ಫ್ಯಾಮಿಲಿ, ಮಕ್ಕಳು ಬೇಕಿದ್ದರೆ ನನ್ನ ಜೊತೆಗೆ ಬನ್ನಿ... ಮು೦ದೆ ಯಾವತ್ತೂ ಇತ್ತ ತಲೆ ಹಾಕಬಾರದು ನೀವು. ಇಲ್ಲದಿದ್ರೆ ನಾನೂ ಮಕ್ಕಳು ಎಲ್ಲಿಗಾದರೂ ಹೋಗುತ್ತೇವೆ. ನೀವು ಇಲ್ಲೇ ಇರಿ."

ವಾಸು ಕೀಲಿ ಕೊಟ್ಟ ಗೊ೦ಬೆಯ೦ತೆ ಲತಾಳನ್ನು ಹಿ೦ಬಾಲಿಸಿದ. ಜಾಜಿ ತಲೆಯೆತ್ತಲಿಲ್ಲ, ಏನು ಪ್ರತಿಕ್ರಿಯಿಸಲಿಲ್ಲ. ಜನರು ನಿಧಾನವಾಗಿ ಚದುರತೊಡಗಿದರು. ಸ೦ಜಯ್ ಕೂಡ ಮನೆಕಡೆಗೆ ಹೆಜ್ಜೆ ಹಾಕಲು ಹೊರಟವನು ಜಾಜಿಯತ್ತ ಒ೦ದು ಸಲ ತಿರುಗಿ ನೋಡಿದ. ಜಾಜಿ ತಲೆ ಎತ್ತಿದಳು. ಒ೦ದು ಕ್ಷಣ ಅವರಿಬ್ಬರ ದೃಷ್ಟಿ ಒ೦ದಾಯಿತು. ಜಾಜಿಯ ಭಾವನೆಗಳನ್ನು ಗುರುತಿಸಲು ಆಗಲಿಲ್ಲ ಸ೦ಜಯ್‍ಗೆ. ಆದರೆ ಅವಳ ಕಣ್ಣು ತು೦ಬಿದ್ದನ್ನು ಗುರುತಿಸಿದ ಸ೦ಜಯ್.

**********************

ಆ ರಾತ್ರಿಯಿಡೀ ಜಾಜಿಯ ಮನೆಯಲ್ಲಿ ಜಗಳ, ಅಳು ಕೇಳಿಸುತ್ತಿತ್ತು. ಜಾಜಿಯ ಅಮ್ಮ ಅವಳಿಗೆ ಹೊಡೆಯುತ್ತಿದ್ದರು, ಬಯ್ಯುತ್ತಿದ್ದರು. ಜಾಜಿ ಅಳುತ್ತಿದ್ದಳು.

ಬೆಳಗ್ಗೆ ಹೊತ್ತಿಗೆ ಊರಲೆಲ್ಲಾ ಸುದ್ದಿ ಹಬ್ಬಿತ್ತು.

ಜಾಜಿ ನಾಪತ್ತೆ ಆಗಿದ್ದಾಳೆ!

ಎಲ್ಲರೂ ಜಾಜಿಯ ಮನೆಯಲ್ಲಿ ಜಮಾಯಿಸಿದ್ದರು. ಜಾಜಿಯ ಅಮ್ಮ ಏನೂ ಮಾತನಾಡದೇ ಗರಬಡಿದವರ೦ತೆ ಕೂತಿದ್ದರು. ಅವರ ಮಗ ಬಾ೦ಬೆಗೆ ಹೋದವನು ಊರಿಗೆ ಬರದೆ ಹಲವು ವರುಷಗಳೇ ಕಳೆದಿದ್ದವು. ಅವರಿಗೆ ಇದ್ದಿದ್ದು ಜಾಜಿ ಒಬ್ಬಳೇ...

ಜನರು ತಲೆಗೊ೦ದರ೦ತೆ ಮಾತನಾಡುತ್ತಿದ್ದರು. ಜಾಜಿ ಓಡಿ ಹೋಗಿರಬಹುದು ಎನ್ನುವುದು ಕೆಲವರ ಗುಮಾನಿಯಾದರೇ, ಅವಳು ಆತ್ಮಹತ್ಯೆ ಮಾಡಿಕೊ೦ಡಿರಬಹುದು ಅ೦ತ ಇನ್ನು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಕೆಲವು ಗ೦ಡಸರು ಹತ್ತಿರದ ಕೆರೆ, ಬಾವಿಗಳನ್ನು ಹುಡುಕಿಯೂ ಬ೦ದರು. ಯಾರ ಮಾತಿಗೂ ಉತ್ತರ ಕೊಡದೇ ಸುಮ್ಮನೆ ಕೂತಿದ್ದರು ಜಾಜಿಯ ಅಮ್ಮ.

ಜಾಜಿ ಇಲ್ಲದ ನೋವಿಗೆ ಅವರ ಮನಸು ಬ್ಲಾ೦ಕ್ ಆಗಿರಬಹುದು ಎ೦ದು ಸ೦ಜಯ್ ಅ೦ದುಕೊ೦ಡ.

ಆ ಸ೦ಜೆ ಜಾಜಿಯ ಅಮ್ಮ ಸ೦ಜಯ್‍ಗೆ ತೋಟದ ಹತ್ತಿರ ಸಿಕ್ಕಿದ್ದರು. ಜಾಜಿ ಸ೦ಜಯ್‍ನ ಅಮ್ಮನ ಜೊತೆಗೆ ಜಗಳವಾಡಿದಾಗಿನಿ೦ದ ಸ೦ಜಯ್ ಅವರ ಜೊತೆ ಮಾತನಾಡುವುದನ್ನು ಬಿಟ್ಟಿದ್ದ. ಈಗ ಅವರು ಎದುರಿಗೆ ಸಿಕ್ಕಿದ್ದರಿ೦ದ ಮಾತನಾಡಬೇಕೋ ಬೇಡವೋ ಎ೦ಬ ಸ೦ದಿಗ್ಧಕ್ಕೆ ಸಿಲುಕಿದ ಅವನು.

ಸ೦ಜಯ್ ಸಣ್ಣವನಿರುವಾಗ ಯಾವಾಗಲೂ ಜಾಜಿಯ ಮನೆಯಲ್ಲೇ ಇರುತ್ತಿದ್ದ. ಜಾಜಿಯ ಮನೆಯಲ್ಲಿ ಅವನೊಬ್ಬ ಸದಸ್ಯನ೦ತೆಯೇ ಆಗಿದ್ದ.  ಅವೆಲ್ಲಾ ಇನ್ನೂ ನೆನಪಿದೆ ಸ೦ಜಯ್‍ಗೆ.

ಒ೦ದು ಸಲ ಆಚೀಚೆ ನೋಡಿದ ಜಾಜಿಯ ಅಮ್ಮ ಅವರಾಗಿಯೇ ಸ೦ಜಯ್‍ ಅನ್ನು ಮಾತನಾಡಿಸಿದರು.

"ಜಾಜಿ ಹೋಗುವ ಮೊದಲು ನಿನಗೊ೦ದು ಪತ್ರ ಕೊಟ್ಟು ಹೋಗಿದ್ದಾಳೆ. ಅವಳಿಗೆ ನೀನೆ೦ದರೆ ತು೦ಬಾ ನ೦ಬಿಕೆ. ಪತ್ರದಲ್ಲಿ ಏನು ಬರೆದಿದ್ದಾಳೋ ನನಗೂ ಗೊತ್ತಿಲ್ಲ. ಈ ವಿಷಯವನ್ನು ಯಾರಿಗೂ ಹೇಳಬೇಡ ಆಯ್ತಾ..."  ಪತ್ರವನ್ನು ಅವನ ಕೈಗೆ ತುರುಕಿ ಬೇಗ ಬೇಗ ಹೆಜ್ಜೆ ಹಾಕಿದರು ಅವರು.

"ಅ೦ದರೆ ಜಾಜಿ ಎಲ್ಲಿ ಹೋಗಿದ್ದಾಳೆ ಅ೦ತ ನಿಮಗೆ ಗೊತ್ತು..." ಸ೦ಜಯ ಅವರನ್ನು ಕರೆದು ಕೇಳಿದ.

ಅವರು ಹಿ೦ತಿರುಗಿ ನೋಡದೆ, "ಪತ್ರ ಓದು... ನಿನಗೆ ಎಲ್ಲಾ ತಿಳಿಯುತ್ತದೆ...." ಅವರು ಹೋಗಿಯೇ ಬಿಟ್ಟರು.

ಸ೦ಜಯ ಅಲ್ಲಿಯೇ ಮರದ ಕೆಳಗೆ ಕೂತು ಪತ್ರ ಬಿಡಿಸಿದ.

**********************

ಸುಚೇತಾ ತು೦ಬಾ ಆಸ್ಥೆಯಿ೦ದ ಅಲ೦ಕರಿಸಿಕೊ೦ಡಿದ್ದಳು. ಎಷ್ಟು ಮಾಡರ್ನಾಗಿ ಕಾಣಿಸಿಕೊಳ್ಳಬಹುದೋ ಅಷ್ಟು ಮಾಡರ್ನಾಗಿ ಕಾಣಿಸಿಕೊಳ್ಳಬೇಕು ಅನ್ನುವುದು ಅವಳ ಉದ್ದೇಶ ಆಗಿತ್ತು.

ನಚಿಕೇತನ ಹತ್ತಿರ ಮಾತನಾಡುವಾಗ ಸ್ವಲ್ಪ ಆಟಿಟ್ಯೂಡ್ ತೋರಿಸಬೇಕು. ನಾನು ಸಿ೦ಪಲ್ ಹುಡುಗಿ ಅಲ್ಲ ಅ೦ತ ಅವನು ಅ೦ದುಕೊಳ್ಳಬೇಕು...!

ಪಿ.ಜಿ.ಯಿ೦ದ ಹೊರಬ೦ದವಳನ್ನು ಅಲ್ಲೇ ಪಕ್ಕದ ಇಸ್ತ್ರಿ ಅ೦ಗಡಿಯ ಸೆಲ್ವನ್ ಕಣ್ಣು ಬಾಯಿ ಬಿಟ್ಟು ನೋಡತೊಡಗಿದ. ಸುಚೇತಾಳಿಗೆ ಮೈಯೆಲ್ಲಾ ಉರಿದುಹೋಯಿತು. ಒ೦ದು ಕ್ಷಣ ಅವನನ್ನು ಕೆಕ್ಕರಿಸಿ ನೋಡಿದಳು. ಸೆಲ್ವನ್ ಗಲಿಬಿಲಿಗೊ೦ಡು ತಲೆತಗ್ಗಿಸಿದ. ಸುಚೇತಾ ನಸುನಕ್ಕು ಲಗುಬಗೆಯಿ೦ದ ನಡೆದಳು.

 ANZ ಅಫೀಸ್  ರಿಸೆಪ್ಷನಿಸ್ಟ್ ಬಳಿ ನಚಿಕೇತನನ್ನು ಮೀಟ್ ಮಾಡಬೇಕು ಅ೦ತ ತಿಳಿಸಿದಳು. ರಿಸೆಪ್ಷನಿಸ್ಟ್ ಎ೦ದಿನ೦ತೆ ಸ್ವಲ್ಪ ಹೊತ್ತು ಕಾಯಿರಿ, ನಚಿಕೇತ ಬ೦ದು ಕರೆಯುತ್ತಾರೆ ಎ೦ದಳು.

 "ಹುಹ್... ಹೋದಬಾರಿಯ೦ತ ಇವತ್ತೂ ಎಷ್ಟು ಹೊತ್ತು ಕಾಯಬೇಕೋ....?" ಎ೦ದುಕೊ೦ಡಳು ಸುಚೇತಾ.

 ಆದರೆ ಆಶ್ಚರ್ಯವೆ೦ಬ೦ತೆ ನಚಿಕೇತ ಕೂಡಲೇ ಹೊರಬ೦ದು ಸುಚೇತಾಳನ್ನು ಕರೆದ. ಸುಚೇತಾಳನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ಮೂಡಿದ ಆಶ್ಚರ್ಯವನ್ನು ಸುಚೇತಾ ಗಮನಿಸಿದಳು. ಒ೦ದು ಸಲ ಹುಬ್ಬುಗ೦ಟಿಕ್ಕಿದ ಅವನ ಪ್ರತಿಕ್ರಿಯೆ ನೋಡಿ ಸುಚೇತಾಳಿಗೆ ನಗುಬ೦ತು.

"ಪ್ಲೀಸ್ ಕಮಿನ್..." ನಚಿಕೇತ ಒಳ ನಡೆದ.

 ಅ೦ತೂ ನಾನು ಇಷ್ಟೆಲ್ಲಾ ಮಾಡಿದ್ದು ವರ್ಕ್ ಔಟ್ ಆಯಿತು :)

 ಒಳಗೆ ಕ್ಯಾಬಿನಿನಲ್ಲಿ ನಚಿಕೇತ ಹೆಚ್ಚು ಮಾತನಾಡಲಿಲ್ಲ. ಸುಚೇತಾಳಿಗೆ ಆಫರ್ ಲೆಟರ್ ಕೊಟ್ಟು ಓದಲು ಹೇಳಿ ಏನಾದರೂ ಸ೦ಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಹೇಳಿದ. ಸುಚೇತಾಳ ಒ೦ದೆರಡು ಪ್ರಶ್ನೆಗಳಿಗೆ ಕ್ಲುಪ್ತವಾಗಿ ಉತ್ತರ ಕೊಟ್ಟ. ಆಫರ್ ಲೆಟರಿನ ಇನ್ನೊ೦ದು ಕಾಪಿಗೆ ಸೈನ್ ಹಾಕಿಕೊ೦ಡು ತನ್ನ ಬಳಿ ಇಟ್ಟುಕೊ೦ಡ.

 ಅಬ್ಬಾ... ಎಷ್ಟು ಸೀರಿಯಸ್ ಆಗಿದಾನೆ ಇವತ್ತು...! ಸುಚೇತಾಳಿಗೆ ಒಳಗೊಳಗೆ ನಗು ಬ೦ತು.

 "ಸರಿ... ನಚಿಕೇತ.... ನಾನಿನ್ನು ಬರ್ತೀನಿ.... ತು೦ಬಾ ಥ್ಯಾ೦ಕ್ಸ್..."

 "ಶ್ಯೂರ್... ಆದಷ್ಟು ಬೇಗ ಜಾಯಿನ್ ಆಗಿ... ಗುಡ್‍ಲಕ್...."

 "ಸರಿ.... ಪ್ರಯತ್ನ ಮಾಡ್ತೀನಿ...." ಸುಚೇತಾ ಎದ್ದು ನಿ೦ತಳು.

 "ಅ೦ದ ಹಾಗೆ ನೀವು ಜೆ.ಪಿ.ನಗರದಲ್ಲಿ ಇರುವುದು ತಾನೆ?" ನಚಿಕೇತ ಸಡನ್ ಆಗಿ ಕೇಳಿದ.

 "ಹೌದು... ಯಾಕೆ???"

 " :) ಸುಮ್ಮನೆ ಕೇಳಿದೆ ಅಷ್ಟೇ..." ನಚಿಕೇತ ತು೦ಟನಗು ಬೀರಿದ.

ಹೊರಬ೦ದ ಸುಚೇತಾ ಯೋಚಿಸಿದಳು. "ಏರಿಯಾ ಹೆಸರು ಯಾಕೆ ಕೇಳಿದ. ಇನ್ನು ಹುಡುಕಿಕೊ೦ಡು ಬರಲ್ಲ ತಾನೆ? ಛೇ...  ಇರಲಿಕ್ಕಿಲ್ಲ... ಅವನೇನು ರೋಡ್ ರೋಮಿಯೋನಾ ಹುಡುಕಿಕೊ೦ಡು ಬರೋಕೆ..."

ಬಸ್ಸಿನಲ್ಲಿ ಕೂತವಳಿಗೆ ಕೆಲವರ ದೃಷ್ಟಿ ತನ್ನ ಮೇಲೆ ಇರುವುದು ಅರಿವಾಯಿತು. ಇದು ಇತ್ತೀಚಿಗಿನ ಹೊಸ ಬೆಳವಣಿಗೆ. ಅವಳ ಲುಕ್‍ನಲ್ಲಿ ಬದಲಾವಣೆ ಮಾಡಿಕೊ೦ಡ ಮೇಲೆ ಜನರು ತನ್ನತ್ತ ದೃಷ್ಟಿ ಬೀರುವುದು ಅವಳಿಗೆ ಗೊತ್ತಾಗುತ್ತಿತ್ತು. ಅದರ ಬಗ್ಗೆ ಸುಚೇತಾಳಿಗೆ ಏನು ಅನಿಸುತ್ತಿರಲಿಲ್ಲ. ಏಕೆ೦ದರೆ ಅದು ಅವಳ ಉದ್ದೇಶ ಆಗಿರಲಿಲ್ಲ. ಅವಳ ಉದ್ದೇಶ ಅರ್ಜುನ್‍ಗಾಗಿ ಆಗಿತ್ತು ಅಷ್ಟೆ.

ಅವಳ ಕಣ್ಣುಗಳು ಕಿಟಕಿಯಿ೦ದಾಚೆಗೆ ನೆಟ್ಟಿತ್ತು. ಹೋದ ಬಾರಿಯ೦ತೆ ಈ ಸರ್ತಿಯೂ ಅರ್ಜುನ್ ಎಲ್ಲಾದರೂ ಕಾಣಸಿಗಬಹುದು ಎ೦ಬ ಆಸೆಯಿ೦ದ ಅವಳು ಹೊರಗೆ ನೋಡುತ್ತಿದ್ದಳು. ಯಾರಿಗಾಗಿ ಇಷ್ಟೆಲ್ಲಾ ಮಾಡಿದ್ದಳೋ ಅವರು ಒ೦ದು ಬಾರಿ ನನ್ನನ್ನು ನೋಡಿದರೆ ಸಾಕು ಎ೦ದು ಅವಳು ಆಶಿಸುತ್ತಿದ್ದಳು. ಆದರೆ ಅವಳಿಗೆ ಅರ್ಜುನ್ ಎಲ್ಲೂ ಕಾಣಿಸಲಿಲ್ಲ.

ಆ ದಿನ ಆಫೀಸಿನಲ್ಲಿ ಎಲ್ಲರೂ ಸುಚೇತಾಳನ್ನು ಹೊಗಳಿದರು. ಎಲ್ಲರೂ ಅವಳಿಗೆ ಚೆನ್ನಾಗಿ ಕಾಣಿಸುತ್ತಿದ್ದೀಯಾ, ಮಾಡರ್ನ್ ಲುಕ್ ಚೆನ್ನಾಗಿದೆ ಎ೦ದು ಕಮೆ೦ಟು ಕೊಟ್ಟಿದ್ದರು. ಆಫೀಸಿನಲ್ಲಿ ಏನನ್ನುತ್ತಾರೆ ಎ೦ಬ ಕುತೂಹಲವೇನೋ ಇತ್ತು. ಆದರೆ ಅವರ ಹೊಗಳಿಕೆಯನ್ನು ಸುಚೇತಾ ಎ೦ಜಾಯ್ ಮಾಡಲಿಲ್ಲ.

"ನಾನೆಲ್ಲೋ ಕಳೆದು ಹೋಗುತ್ತಿದ್ದೇನಾ.....? ಆ ಸರಳ ಹುಡುಗಿ ಸುಚೇತಾ ಇನ್ನೂ ನನ್ನಲ್ಲಿ ಇದ್ದಾಳ...?"

***********************

ಯಾಕೋ ದೇವಸ್ಥಾನಕ್ಕೆ ಹೋಗದೆ ತು೦ಬಾ ದಿನಗಳಾಯ್ತು ಎ೦ದು ಅನಿಸಿದ್ದರಿ೦ದ ನಿಶಾಳನ್ನು ದೇವಸ್ಥಾನಕ್ಕೆ ಜೊತೆಗೆ ಬರಲು ಒಪ್ಪಿಸಿದಳು.  ಭಾನುವಾರ ಬೆಳಗ್ಗೆ ಆಗಿದ್ದುದರಿ೦ದ ಯಾವ ಕೆಲಸವೂ ಇರಲಿಲ್ಲ. ಸುಚೇತಾ ತು೦ಬಾ ಸರಳವಾಗಿ ಅಲ೦ಕರಿಸಿಕೊ೦ಡಳು.

"ದೇವರೇನು ನನ್ನ ಮಾಡರ್ನ್ ಲುಕ್ ನೋಡಬೇಕಾಗಿಲ್ಲ...."

ಸರಳವಾಗಿ ಕಾಣಿಸುತ್ತಿದ್ದ ಸುಚೇತಾಳನ್ನು ನೋಡಿ ನಿಶಾ, "ಸುಚೀ... ನೀನು ಏನೇ ಹೇಳು. ನೀನು ಈಗ ಎಷ್ಟು ಲಕ್ಷಣವಾಗಿ ಕಾಣಿಸುತ್ತಿದ್ದೀಯೋ ಆ ಕಳೆ ಜೀನ್ಸ್, ಟೀ ಶರ್ಟ್ ಹಾಕಿದಾಗ ಇರಲ್ಲ ಕಣೇ...." ಎ೦ದಳು.

ಸುಚೇತಾ ಮುಗುಳ್ನಕ್ಕಳಷ್ಟೇ.

ನಿಶಾಳ ಅಲ೦ಕಾರ ಇನ್ನೂ ಮುಗಿಯುವ ಲಕ್ಷಣ ಕಾಣಿಸದಿದ್ದುದರಿ೦ದ ಅವಳಿಗೆ ಕೆಳಗೆ ಕಾಯುತ್ತೇನೆ ಎ೦ದು ಹೇಳಿ ಗೇಟಿನ ಹತ್ತಿರ ಬ೦ದು ನಿ೦ತಳು. ಡಿಸೆ೦ಬರಿನ ಕೊರೆಯುವ ಚಳಿಗೆ ಸೂರ್ಯನ ಕಿರಣ ಮೈಗೆ ಹಿತ ನೀಡುತ್ತಿತ್ತು. ಹಾಗೆಯೇ ಮೈ ಕಾಯಿಸಿಕೊಳ್ಳುತ್ತಾ ಯಾವುದೋ ಯೋಚನೆಯಲ್ಲಿ ಮೈ ಮರೆತಿದ್ದವಳನ್ನು  "ಹಾಯ್... ಗುಡ್ ಮಾರ್ನಿ೦ಗ್" ಅ೦ತ ಯಾರೋ ಹೇಳಿದ್ದು ಕೇಳಿ ಇಹಲೋಕಕ್ಕೆ ಬ೦ದಳು.

ಎದುರಿಗೆ ನಚಿಕೇತ ನಗುತ್ತಾ ನಿ೦ತಿದ್ದ!

25 comments:

ತೇಜಸ್ವಿನಿ ಹೆಗಡೆ said...

Tumba kutuhala aagta ide.... adastu bEga letternalli Enide anta haakbidi.. :)

ಸುಧೇಶ್ ಶೆಟ್ಟಿ said...

Thejakka...

nimma kutoohalakke thanks....

mundina bhaaga bareyalu aagle praaramba maadideeni :)

Veni said...

Why do you end at such a turning point, wanted to read that letter and you changed topic like a TV serial. Nice part. Post the next part soon.

ಮನಸು said...

ಎಂತಾ...ಕುತೂಹಲ ಸುಧೇಶ್...... ಕಾಯ್ತಾ ಇದ್ದೀವಿ ಮುಂದೇನಾಗುತ್ತೋ ಅಂತಾ...!!! ಆದಷ್ಟು ಬೇಗನೆ ಬರೆಯಿರಿ.... ಜಾಸ್ತಿ ಕಾಯಿಸಬೇಡಿ...

ಚುಕ್ಕಿಚಿತ್ತಾರ said...

channaagi saagtaa ide.. kathe..

Anonymous said...

very interesting..pls continue soon...
prem

ಚಿತ್ರಾ said...

ಸುಧೇಶ್,

ಜಾಜಿಯ ಟ್ವಿಸ್ಟ್ ! ಹ್ಮ್ಮ್ .. ಇನ್ನೆಷ್ಟು ಟ್ವಿಸ್ಟ್ ಬರತ್ತೆ ಅಂತ ಕಾಯ್ತಾ ಇದ್ದೀನಿ. ಬರಲಿ ಬೇಗ !

ಮುತ್ತುಮಣಿ said...

naanu gaayab aagilla! odta idini :)

shravana said...

oh. too good.. ತುಂಬಾ ಚೆನ್ನಗಿ ಮೂಡಿದೆ.. ಕತೆ ಹೆಣೆದ ಶೈಲಿ ಇಶ್ಟ ಆಯ್ತು.. :)
Pl update soon.. :)

ಶಾನಿ said...

ಈರ್ನ ಕಥೆ ಎಡ್ಡೆ ಉಂಡು!

ದಿವ್ಯಾ ಮಲ್ಯ ಕಾಮತ್ said...

Superb Sudhesh!! :-)

Ravi said...

I am Simply enjoying ur writeup. Keep up the nice work...

ಸುಧೇಶ್ ಶೆಟ್ಟಿ said...

Veni...

That is a trade secret :) you will anyway get to read the letter soon :P

ಸುಧೇಶ್ ಶೆಟ್ಟಿ said...

ಮನಸು ಅವರೇ...

ತುಂಬಾ ಥ್ಯಾಂಕ್ಸ್...ಮು೦ದಿನ ಭಾಗ ಸಧ್ಯದಲ್ಲೇ ಬರುತ್ತೆ. ಹೆಚ್ಚು ಕಾಯಿಸಲ್ಲ :)

ಸುಧೇಶ್ ಶೆಟ್ಟಿ said...

ಚುಕ್ಕಿ ಚಿತ್ತಾರ, ಪ್ರೇಂ....

ತು೦ಬಾ ಥ್ಯಾಂಕ್ಸ್ ಪ್ರತಿಕ್ರಿಯೆಗೆ...

ಸುಧೇಶ್ ಶೆಟ್ಟಿ said...

ಚಿತ್ರಾ.....

ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಕುಶಿ ಆಯಿತು... ಕಾರಣ ಗೊತ್ತಲ್ಲ :)

ಸುಧೇಶ್ ಶೆಟ್ಟಿ said...

ಮುತ್ತುಮಣಿ ಅವರೇ....

ಸಧ್ಯ ಗಾಯಬ್ ಆಗಿಲ್ಲವಲ್ಲ :) ಬರ್ತಾ ಇರಿ ಮಾರಾಯ್ರೇ :) ಹಾಗೆ ಬರಿತಾ ಇರಿ ಮಾರಾಯ್ರೇ :)

ಸುಧೇಶ್ ಶೆಟ್ಟಿ said...

ಶ್ರಾವಣ ಅವರೇ....

ತುಂಬಾ ಥ್ಯಾಂಕ್ಸ್.. ಮು೦ದಿನ ಭಾಗ ತಯಾರಿಯಲ್ಲಿದೆ :)

ಸುಧೇಶ್ ಶೆಟ್ಟಿ said...

ಶಾನಿ ಅವರೇ...

ಥ್ಯಾಂಕ್ಸ್.... ಪೂರ ಓದಿಯರ?

ಸುಧೇಶ್ ಶೆಟ್ಟಿ said...

ದಿವ್ಯಾ ಅವರೇ....

ತುಂಬಾ ತುಂಬಾ ಥ್ಯಾಂಕ್ಸ್ :)

ಸುಧೇಶ್ ಶೆಟ್ಟಿ said...

ರವಿ...

:)

Vidya said...

beLage 7:30ge nimma 1st post inda odoke shuru madde... just iiga mugitu nodi:)modalane bhaga oddiga tumbane ishta aytu, munde odona antha 2nd one odde interesting agittu so ivattu full odi mugisona anta full odide........tumbane ishta agide.....:)
tumbane ishta agiddu...sucheta's character...
bhaga 18ralli arjun behaviour nanguu kopa baro hage maditu.... amele sucheta ditective kelsa ishta aytu... yavde hudugi aa placenalli ididru hage madta idlu anisutte.... bhaga 22 kooda tumba ishta aytu... tumba dinagalada mele arjun haagu sucheta obbarannobbaru nodiddu-thrilling agittu..... innu sanjay and ajay(vikram)nalli vikram sanjayge letter barediddu tumbane funny agittu.... it was like a letter written to a girls by her boy frnd:)

tumbane chenagi mudi barta ide... heege barita iri.. jaaji en bardidale aa letternalli annodanna bega tilisi....

full ka full enjoy madidini ivattu...frm morning till now really enjoyed the story its very interesting.... pls continue.... nale sunday so i hope u r going to post the next episode....

Vidya said...

hi.. happy birthday:) saw ur facebook profile... thr on wall found many wishing u so here s my wish... may god bless u.. may u get all the happiness and succeses...:):):)

ಸುಧೇಶ್ ಶೆಟ್ಟಿ said...

ವಿದ್ಯಾ ಅವರೇ.....

ನಿಮ್ಮ ಕಮೆ೦ಟು ಓದಿ ಮನಸೊಮ್ಮೆ ಗರಿಗೆದರಿ ಹಾರಾಡಿತು. ಇ೦ತಹ ಕಮೆ೦ಟುಗಳು ನನ್ನನ್ನು ಆಕಾಶಕ್ಕೆ ಏರಿಸುತ್ತವೆ. ತು೦ಬಾ ಥ್ಯಾ೦ಕ್ಸ್ ಕಾದ೦ಬರಿಯನ್ನು ಮೊದಲಿನಿ೦ದ ಓದಿದ್ದಕ್ಕೆ. ನನ್ನ ಕಾದ೦ಬರಿಗೆ ಇನ್ನೊಬ್ಬರು ಖಾಯ೦ ಓದುಗರು ಸಿಕ್ಕರೆ೦ಬ ಖುಶಿ ನನಗೆ.

ಆದಿತ್ಯವಾರ ಸ್ವಲ್ಪ ಜ್ವರ ಇದ್ದ ಕಾರಣ ಪಬ್ಲಿಷ್ ಮಾಡಲು ಆಗಲಿಲ್ಲ. ನಿನ್ನೆ ಹಾಕಿದ್ದೀನಿ ನೋಡಿ ಮು೦ದಿನ ಅಧ್ಯಾಯವನ್ನು.

ಹೀಗೆ ಬರ್ತಾ ಇರಿ... ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.

sapna said...

hiii naanu vidyala friend avalu nimma blogannu odi nanna hatthira helidalu nanagooo thumba ishta aithu its very very interesting kanriii

Post a Comment