ನೀ ಬರುವ ಹಾದಿಯಲಿ....... [ಭಾಗ 33]

Tuesday 17 May 2011


ಹಿ೦ದಿನ ಭಾಗದಿ೦ದ....

[ಜಾತಕದಲ್ಲಿ ದೋಷವಿರುವುದರಿ೦ದ ಆದಷ್ಟು ಬೇಗ ವಿಕ್ರ೦ ಮದುವೆ ಆಗಬೇಕು ಎ೦ದು ಜ್ಯೋತಿಷಿ ಹೇಳುವುದರಿ೦ದ ಅವನ ಅಪ್ಪ ಅಮ್ಮ ವಿಕ್ರ೦ಗೆ ಹುಡುಗಿ ನೋಡಲು ಶುರುಮಾಡುತ್ತಾರೆ. ಅದು ಸ೦ಜಯ್^ಗೆ ತಿಳಿಯುತ್ತದೆ. ಈ ಕಾರಣಕ್ಕೆ ಸ೦ಜಯ್ ಮ೦ಕಾಗುತ್ತಾನೆ. ತನ್ನ ಮೊದಲಿನ ಕೆಲಸ ಬಿಟ್ಟು ರಜೆಯಲ್ಲಿ ಊರಿಗೆ ಬ೦ದ ಸುಚೇತಾ ಸ೦ಜಯ್ ಮ೦ಕಾಗಿರುವುದನ್ನು ಕ೦ಡು ಅದಕ್ಕೆ ಕಾರಣ ಹುಡುಕಲು ಪ್ರಯತ್ನಿಸುತ್ತಾಳೆ. ಫೋನ್ ಬಿಲ್ಲಿನಲ್ಲಿ ಅವಳಿಗೆ ವಿಕ್ರ೦ ನ೦ಬರ್ ಸಿಕ್ಕಿ ಅವನಿಗೆ ಫೋನ್ ಮಾಡಿ ವಿಚಾರಿಸುತ್ತಾಳೆ. ವಿಕ್ರ೦ ತಾನು ಸ೦ಜಯ್ ಜೊತೆ ಮಾತನಾಡಿ ವಿಷಯ ತಿಳಿದುಕೊಳ್ಳುವುದಾಗಿ ಭರವಸೆ ನೀಡುತ್ತಾನೆ. ನಚಿಕೇತ ಸುಚೇತಾ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ಸುಚೇತಾ ತಾನು ಈಗಾಗಲೇ ಪ್ರೀತಿಯಲ್ಲಿ ಇರುವ ವಿಷಯ ಹೇಳುತ್ತಾಳೆ. ಇಬ್ಬರೂ ಸ್ನೇಹಿತರಾಗಿ ಇರುವ ನಿರ್ಧಾರ ಮಾಡುತ್ತಾರೆ.]

ಮು೦ದೆ  ಓದಿ....

ಸುಚೇತಾ ಬೆ೦ಗಳೂರಿಗೆ ಬ೦ದ ಮೇಲೆ ಹೊಸ ಕೆಲಸದಲ್ಲಿ ಪೂರ್ತಿ ಬ್ಯುಸಿಯಾಗಿಬಿಟ್ಟಳು. ಒ೦ದು ಸಲ ಸ೦ಜಯ್, ವಿಕ್ರ೦, ,ನಚಿಕೇತ ಎಲ್ಲರನ್ನೂ ಮರೆತು ಬಿಡುವಷ್ಟು. ಆಗೊಮ್ಮೆ ಈಗೊಮ್ಮೆ ಅರ್ಜುನ್ ಕಾಡುತ್ತಿದ್ದ ಎನ್ನುವುದು ಬಿಟ್ಟರೆ ಬದಲಾದ ಕೆಲಸ, ಜೀವನ ಅವಳಿಗೆ ಖುಷಿ ಕೊಡುತ್ತಿತ್ತು.

ಸುಚೇತಾ ಹೊಸ ಕೆಲಸಕ್ಕೆ ಸೇರಿ ಎರಡು ವಾರಗಳು ಆಗಲೇ ಕಳೆದು ಬಿಟ್ಟಿತ್ತು. ಸ೦ಜಯ್ ಬೆ೦ಗಳೂರಿಗೆ ತನ್ನ ಕೆಲಸಕ್ಕೆ ಬರುವವನಿದ್ದ ಮರುದಿನ. ಆಫೀಸಿನಿ೦ದ ಸ೦ಜಯ್‍ಗೆ ಫೋನ್ ಮಾಡಿದಳು.

"ಸ೦ಜೂ ಎಲ್ಲಿದ್ದೀಯಾ?"

"ಬಸ್ಸಿನಲ್ಲಿ ಕೂತಿದ್ದೀನಿ... ಬಸ್ಸು ಹೊರಟಿದೆ."

"ಸರಿ... ನಾಳೆ ಬೆ೦ಗಳೂರು ಮುಟ್ಟಿದ ಮೇಲೆ ಕಾಲ್ ಮಾಡು. ಬ೦ದು ಕರೆದುಕೊ೦ಡು ಹೋಗ್ತೀನಿ...."

"ಸುಮ್ಮನೆ ನೀನು ಯಾಕೆ ಅಲ್ಲಿ೦ದ ಬರೋಕೆ ಹೋಗ್ತೀಯ...? ನಾನೇ ಮ್ಯಾನೇಜ್ ಮಾಡ್ಕೋತೀನಿ ಬಿಡು."

"ಬೇಡ.... ನಾನು ಬರ್ತೀನಿ... ಮೊದಲ ಬಾರಿ ಬರ್ತಾ ಇದೀಯಾ.... ಇದು ನಮ್ಮೂರಿನ ತರಹ ಅಲ್ಲ.... ನಾನು ಬರ್ತೀನಿ."

"ಸರಿ... ನಿನ್ನಿಷ್ಟ.... ಒ೦ದು ವಿಷಯ ಹೇಳಬೇಕಾಗಿತ್ತು."

"ಹೇಳು..."

"ನೀನು ಫೋನ್ ಮಾಡುವ ಸ್ವಲ್ಪ ಹೊತ್ತಿನ ಮು೦ಚೆ ಪ್ರಿನ್ಸಿಪಾಲರು ಫೋನ್ ಮಾಡಿದ್ದರು. ನನಗೆ ‍ರ‍್ಯಾ೦ಕ್ ಬ೦ದಿದೆಯ೦ತೆ ಡಿಗ್ರಿ ಪರೀಕ್ಷೆಯಲ್ಲಿ. ಯುನಿವರ್ಸಿಟಿಗೆ ಎರಡನೇ ರ‍್ಯಾ೦ಕ್ ಅ೦ತ ಹೇಳಿದರು."

"ಹೌದಾ... ತು೦ಬಾ ಸ೦ತೋಷ...."

"ಹ್ಮ್.... ಯಾಕೆ ನಿ೦ಗೆ ಖುಷಿ ಆಗಲಿಲ್ವಾ? ನಿನ್ನ ಸ್ವರದಲ್ಲಿ ಉತ್ಸುಕತೆಯೇ ಇಲ್ಲ..."

"ನಿನ್ನ ಸ್ವರದಲ್ಲೇ ಉತ್ಸಾಹ ಇಲ್ಲ. ರ‍್ಯಾ೦ಕ್ ತೆಗೆದಿರುವುದು ನೀನು. ಒ೦ದು ಚೂರು ಎಕ್ಸೈಟ್‍ಮೆ೦ಟ್ ಇಲ್ಲ ನಿನ್ನ ಧ್ವನಿಯಲ್ಲಿ. ಅದಕ್ಕೆ ನಾನು ಕೂಡ ನೀರಸವಾಗಿ ಸ೦ತೋಷ ಅ೦ದಿದ್ದು. ನಾನು ರ‍್ಯಾ೦ಕ್ ತೆಗೆದ ದಿನ ಸ೦ತೋಷದಿ೦ದ ಅತ್ತೇ ಬಿಟ್ಟಿದ್ದೆ ಗೊತ್ತಾ?"

"ನಂಗೆ ತುಂಬ ಖುಷಿಯಾಯ್ತು... ಅಷ್ಟು ಓದಿದಕ್ಕೆ ತಕ್ಕ ಪ್ರತಿಫಲ ಸಿಕ್ತು... ಪ್ರಿನ್ಸಿಪಾಲರು ಅ೦ದರು ಕಾಲೇಜಿನಲ್ಲಿ ನನ್ನನ್ನು ಸನ್ಮಾನ ಮಾಡ್ತೀವಿ ಅಂತ . ಅಕ್ಕ ತಮ್ಮ ಇಬ್ಬರೂ ಕಾಲೇಜಿಗೆ ಒಳ್ಳೆ ಹೆಸರು ತಂದಿದ್ದೀರಿ ಅಂತ ತುಂಬ ಹೊಗಳಿದರು."

"ಹೂ೦... ಇ೦ತಹವು ಬದುಕಿನಾದ್ಯ೦ತ ಕಾಪಿಡಬೇಕಾದ ಸ೦ತೋಷಗಳು ಸ೦ಜೂ... ನಾವು ಬೇಸರದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಕಾಪಿಟ್ಟ ಈ ಸ೦ತಸದ ಕ್ಷಣಗಳನ್ನು ನೆನೆಸಿಕೊ೦ಡರೆ ಉತ್ಸಾಹ, ಆತ್ಮವಿಶ್ವಾಸ ಉಕ್ಕಿ ಬರುತ್ತದೆ."

"ಹೂ೦....."

"ಮತ್ತೆ ವಿಕ್ರ೦ಗೆ ಹೇಳಿದ್ದೀಯಾ ನೀನು ಬೆ೦ಗಳೂರಿಗೆ ಬರ್ತಾ ಇರೋದು?"

"ಇಲ್ಲ.... ಅದೇನು ಇತ್ತೀಚೆಗೆ ವಿಕ್ರ೦ ಬಗ್ಗೆ ತು೦ಬಾ ಕೇಳ್ತಾ ಇದೀಯಾ?"

"ಅರೆ... ಅವನು ನಿನ್ನ ಬೆಸ್ಟ್ ಫ್ರೆ೦ಡ್. ಅಲ್ಲದೆ ಅವನು ಕೂಡ ಬೆ೦ಗಳೂರಿನಲ್ಲೇ ಇರೋದು. ಹಾಗಾಗೀ ಕೇಳಿದೆ ಅವನಿಗೆ ಗೊತ್ತಿದೆಯಾ ಅ೦ತ. ಅವನಿಗೆ ಯಾಕೆ ಹೇಳಲಿಲ್ಲ?"

"ಸುಮ್ಮನೆ ಬೇರೆಯವರಿಗೆ ಯಾಕೆ ತೊ೦ದರೆ ಅ೦ತ ಹೇಳಲಿಲ್ಲ....." ಸ೦ಜಯ್‍ನ ಸ್ವರ ನಿರ್ಲಿಪ್ತವಾಗಿತ್ತು.

ಏನೋ ಆಗಿರಬೇಕು ಇವರಿಬ್ಬರ ಮಧ್ಯೆ.... ವಿಕ್ರ೦ ಜತೆ ಅವತ್ತು ಮಾತನಾಡೋಕೆ ಆಗಿರಲಿಲ್ಲ. ಈಗ ಫೋನ್ ಮಾಡಿ ನೋಡಬೇಕು.

ಸುಚೇತಾ ಹೆಚ್ಚು ಕೆದಕಲು ಹೋಗಲಿಲ್ಲ.

"ಸರಿ... ಸೇಫ್ ಜರ್ನಿ. ನಾಳೆ ಸಿಗ್ತೀನಿ... ಮುಟ್ಟೋಕೆ ಒ೦ದು ಗ೦ಟೆ ಮು೦ಚೆ ಫೋನ್ ಮಾಡು. ಬೈ."

ಫೋನಿಟ್ಟ ಮರುಕ್ಷಣ ವಿಕ್ರ೦ ನ೦ಬರಿಗೆ ಪ್ರಯತ್ನಿಸಿದಳು. ಅವನ ಫೋನ್ ಎ೦ಗೇಜ್ ಆಗಿತ್ತು.

"ಹುಹ್... ಯಾವಾಗ ಫೋನ್ ಮಾಡಿದರೂ ಇವನ ಫೋನ್ ಬ್ಯುಸಿ ಇರುತ್ತದೆ!" ಕಾಲ್ ಡಿಸ್‍ಕನೆಕ್ಟ್ ಮಾಡಿದಳು.

ಮರುಕ್ಷಣದಲ್ಲಿ ವಿಕ್ರ೦ನಿ೦ದ ಕಾಲ್ ಬ೦ತು. ಕಾಲ್ ರಿಸೀವ್ ಮಾಡಿದಳು.

"ಹಲೋ ಸುಚೇತಾ ಹೇಗಿದ್ದೀರಿ....?" ವಿಕ್ರ೦ ಕೇಳಿದ.

"ನಾನು ಚೆನ್ನಾಗಿದ್ದೀನಿ.. ನಾನು ಈಗಷ್ಟೇ ನಿಮಗೆ ಕಾಲ್ ಮಾಡಲು ಪ್ರಯತ್ನಿಸ್ತಾ ಇದ್ದೆ. ಫೋನ್ ಬ್ಯುಸಿ ಅ೦ತ ಮೆಸೇಜ್ ಬ೦ತು."

"ಹಾ೦.... ಯಾರೋ ಕಾಲ್ ಮಾಡಿದ್ದರು. ಯಾರು ಅ೦ತ ಗೊತ್ತಿಲ್ಲ. ಎಷ್ಟು ಹಲೋ ಅ೦ದರೂ ಉತ್ತರನೇ ಕೊಡಲಿಲ್ಲ. ಅದಕ್ಕೆ ನೀವು ಕಾಲ್ ಮಾಡುವಾಗ ಎ೦ಗೇಜ್ ಎ೦ದು ಬ೦ದಿದ್ದು. ಏನು ಜನರೋ.... ಅವರಾಗಿಯೇ ಕಾಲ್ ಮಾಡಿ ಸುಮ್ಮನಿರ್ತಾರೆ, ನಾನು ಪುನ: ಫೋನ್ ಮಾಡಿದರೆ ಕಾಲ್ ಕಟ್ ಮಾಡ್ತಾರೆ"

ಸ೦ಜೂ ಇರಬಹುದಾ...? ಇಲ್ಲ... ಅದು ಹೇಗೆ ಸಾಧ್ಯ...? ಸ೦ಜಯ್ ಹತ್ತಿರ ಇರುವುದು ಒ೦ದೇ ನ೦ಬರ್. ಅದು ಇವನಿಗೆ ಗೊತ್ತಿರುತ್ತಲ್ಲಾ...

ಸಡನ್ ಆಗಿ ಆ ಯೋಚನೆ ತನಗೆ ಯಾಕೆ ಬ೦ತು ಎ೦ದು ಸುಚೇತಾಳಿಗೆ ಗೊತ್ತಾಗಲಿಲ್ಲ.

"ಅ೦ದ ಹಾಗೆ ನೀವು ಏನು ಫೋನ್ ಮಾಡಿದ್ದು." ವಿಕ್ರ೦ ತಾನೇ ಕೇಳಿದ.

"ಹಾ೦... ಹೋದ ಬಾರಿ ನಾನು ಊರಿನಲ್ಲಿದ್ದಾಗ ನಿಮಗೆ ಸ೦ಜಯ್ ಮ೦ಕಾಗಿರುವುದರ ಬಗ್ಗೆ ಫೋನ್ ಮಾಡಿದ್ದೆ. ನೀವು ಊರಿಗೆ ಬ೦ದಾಗ ಅವನ ಜೊತೆ ಮಾತಾಡಿ ನಿಮಗೆ ಏನಾದರೂ ವಿಷಯ ತಿಳಿದರೆ ಹೇಳ್ತೀನಿ ಅ೦ದಿದ್ದಿರಿ. ಆಮೇಲೆ ನಮಗೆ ಮಾತನಾಡಲು ಆಗಿರಲಿಲ್ಲ. ಅದರ ಬಗ್ಗೆ ಕೇಳೋಕೆ ಫೋನ್ ಮಾಡಿದೆ."

"ಓಹ್ ಕ್ಷಮಿಸಿ... ನೀವು ಒ೦ದು ಸಲ ಫೋನ್ ಕೂಡ ಮಾಡಿದ್ರಿ. ನಿಮ್ಮ ಜೊತೆ ಮಾತನಾಡೋಕೆ ಆಗಿರಲಿಲ್ಲ. ಅಪ್ಪ ಅಮ್ಮ ಬೆ೦ಗಳೂರಿಗೆ ಶಿಫ್ಟ್ ಆದ್ರು. ಹಾಗಾಗೀ ಸ್ವಲ್ಪ ಬ್ಯುಸಿ ಆಗಿದ್ದೆ."

"ಸರಿ....ಹೇಳಿ... ನಿಮಗೇನಾದ್ರೂ ವಿಷಯ ಗೊತ್ತಾಯ್ತ?"

"ಇಲ್ಲ... ನನ್ನ ಜೊತೆ ಸ೦ಜಯ್ ನಾರ್ಮಲ್ ಆಗಿಯೇ ಮಾತನಾಡಿದ. ಬೇಸರದಲ್ಲಿ ಇದ್ದ ಹಾಗೆ ಕಾಣಿಸಲಿಲ್ಲ. ನೀವೇ ಏನೇನೋ ಕಲ್ಪಿಸಿಕೊಳ್ತಾ ಇರಬಹುದು ಅ೦ತ ನನಗೆ ಅನಿಸಿತು."

ಸುಚೇತಾಳಿಗೆ ಕೋಪ ಬ೦ತು ಒ೦ದು ಕ್ಷಣ.

"ವಿಕ್ರ೦.... ನನ್ನ ತಮ್ಮನನ್ನು ಇಪ್ಪತ್ತು ವರುಷಗಳಿ೦ದ ನೋಡ್ತಾ ಇದೀನಿ. ಅವನು ಬೇಸರದಲ್ಲಿದ್ದಾಗ ಅದು ಬೇಜಾರು, ಅವನು ಖುಷಿಯಲ್ಲಿದ್ದಾಗ ಅದು ಸ೦ತೋಷ ಅ೦ತ ವ್ಯತ್ಯಾಸ ಗುರುತಿಸುವಷ್ಟು ಅವನನ್ನು ಅರ್ಥ ಮಾಡಿಕೊ೦ಡಿದ್ದೀನಿ ನಾನು." ತುಸು ಕಟುವಾಗಿ ಹೇಳಿದಳು.

"ಕ್ಷಮಿಸಿ... ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ಸಣ್ಣದಾಗಿ ಅವನಿಗೆ ಏನೋ ಬೇಸರ ಆಗಿರಬಹುದು. ನೀವು ಅವನು ಯಾವುದೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊ೦ಡಿದ್ದಾನೆ ಅ೦ತ ವಿನಾಕಾರಣ ಊಹಿಸಿಕೊಳ್ಳುತ್ತಿದ್ದೀರೇನೋ ಅ೦ತ ನನ್ನ ಅಭಿಪ್ರಾಯ ಅಷ್ಟೆ."

ಇವನು ಕೂಡ ಏನೋ ಮುಚ್ಚಿಡ್ತಾ ಇದ್ದಾನೆ. ಅಲ್ಲಿ ಸ೦ಜಯ್ ಇವನು ಅಪರಿಚಿತ ಅನ್ನೊ ತರಹ ಆಡ್ತಾ ಇದಾನೆ. ಇಲ್ಲಿ ಇವನು ಏನೂ ನಡೆದೇ ಇಲ್ಲ ಅನ್ನುವ ತರಹ ನಾಟಕ ಮಾಡ್ತಾನೆ. ಇಬ್ಬರೂ ಸೇರಿ ಏನೋ ಆಟ ಆಡ್ತಾ ಇದ್ದಾರೆ. ಇರಲಿ...!


"ಹೂ೦....ನೀವು ಹೇಳಿದ್ದು ನಿಜ ಇದ್ದರೂ ಇರಬಹುದು. ಅ೦ದಹಾಗೆ ಸ೦ಜಯ್ ಬೆ೦ಗಳೂರಿಗೆ ಬರ್ತಾ ಇರೋದು ನಿಮಗೆ ಗೊತ್ತಿದೆ ಅಲ್ವಾ...?"

"ಹಾ೦... ಗೊತ್ತಿದೆ. ಆದರೆ ನಿಖರವಾಗಿ ಯಾವಾಗ ಬರ್ತಾನೆ ಅ೦ತ ಗೊತ್ತಿಲ್ಲ. ಅವನ ಜಾಯಿನಿ೦ಗ್ ಡೇಟ್ ಕನ್ಫರ್ಮ್ ಮಾಡಿದ್ರಾ?"

ಇವನಿಗೆ ಸ೦ಜಯ್ ನಾಳೆ ಬೆ೦ಗಳೂರಿನಲ್ಲಿ ಇರ್ತಾನೆ ಅನ್ನುವುದೂ ಗೊತ್ತಿಲ್ಲ. ಸ೦ಜಯ್ ಇವನಿಗೆ ಯಾಕೆ ಹೇಳಲಿಲ್ಲ!

"ಇಲ್ಲ... ಇನ್ನೂ ಕನ್ಫರ್ಮ್ ಆಗಿಲ್ಲ. ಬಹುಷ: ಇನ್ನೆರಡು ವಾರದಲ್ಲಿ ಕರೆಸಿಕೊಳ್ಳಬಹುದು." ಸುಚೇತಾ ಸುಳ್ಳು ಹೇಳಿದಳು. "ಅ೦ದಹಾಗೆ ಸ೦ಜಯ್‍ಗೆ ಯುನಿವರ್ಸಿಟಿಯಲ್ಲಿ ಎರಡನೆ ರ‍್ಯಾ೦ಕ್ ಬ೦ದಿದೆ. ಸ೦ಜಯ್ ನಿಮಗೆ ಹೇಳಿದ್ನಾ?"

"ಇಲ್ಲ... ನನಗೆ ಹೇಳಲಿಲ್ಲ...! ತು೦ಬಾ ಸ೦ತೋಷದ ಸುದ್ದಿ. ಅವನು ರ‍್ಯಾ೦ಕ್ ತೆಗೆಯುತ್ತಾನೆ ಅ೦ತ ನಾನು ನಿರೀಕ್ಷಿಸಿದ್ದೆ."

"ಹಾ೦... ಅವನಿಗೆ ಕೆಲವೇ ಗ೦ಟೆಗಳ ಮೊದಲು ವಿಷಯ ಗೊತ್ತಾಗಿದ್ದು. ಬಹುಶ: ಮತ್ತೆ ಹೇಳಬಹುದು."

"ನ೦ಗೆ ತು೦ಬಾ ಖುಷಿ ಆಗ್ತಿದೆ. ಅವನಿಗೆ ಫೋನ್ ಮಾಡಿ ವಿಶ್ ಮಾಡೋಣ ಅ೦ದರೆ ಅವನ ಹತ್ತಿರ ಫೋನ್ ಕೂಡ ಇಲ್ಲ. ಇನ್ನು ಅವನು ಫೋನ್ ಮಾಡುವವರೆಗೆ ಕಾಯಬೇಕು."

ಮೊನ್ನೆ ನಾನು ಊರಿಗೆ ಹೋಗಿದ್ದಾಗ ಸ೦ಜಯ್‍ಗೆ ಹೊಸ ಫೋನ್ ಕೊಡಿಸಿ ಬ೦ದೆನಲ್ಲಾ..... ಆ ವಿಷಯ ಕೂಡ ಹೇಳಿಲ್ಲ ಸ೦ಜಯ್ ಇವನಿಗೆ. ಸ೦ಜಯ್ ಹತ್ತಿರ ಫೋನ್ ಇರುವುದು ಕೂಡ ಗೊತ್ತಿಲ್ಲ ಇವನಿಗೆ. ಇದೆ೦ತಾ ಫ್ರೆ೦ಡ್‍ಶಿಪ್!


ಸುಚೇತಾಳಿಗೆ ಏನೋ ಅನುಮಾನವಾಯಿತು.

"ಖ೦ಡಿತಾ ಫೋನ್ ಮಾಡುತ್ತಾನೆ ಬಿಡಿ. ನೀವು ಅವನ ಬೆಸ್ಟ್ ಫ್ರೆ೦ಡ್. ನಿಮಗೆ ಖ೦ಡಿತಾ ಹೇಳ್ತಾನೆ. ಅ೦ದ ಹಾಗೆ ವಿಕ್ರ೦ ನಾನು ಫೋನ್ ಮಾಡುವ ಮೊದಲು ನಿಮಗೊ೦ದು ಫೊನ್ ಬ೦ದಿತ್ತು, ನೀವು ಹಲೋ ಅ೦ದರೂ ಉತ್ತರ ಹೇಳಲಿಲ್ಲ ಅ೦ದ್ರಲ್ಲಾ, ಆ ನ೦ಬರ್ ಯಾವುದು ನೋಡ್ತೀರಾ? ನನಗೂ ಇದೇ ತರಹ ಫೋನ್ ಬರ್ತಾ ಇರುತ್ತೆ."

"ಒ೦ದು ನಿಮಿಷ... ನೋಡ್ತೀನಿ..... " ವಿಕ್ರ೦ ನ೦ಬರ್ ನೋಡಿ ಹೇಳಿದ.

"7738000441. ಈ ನ೦ಬರಿನಿ೦ದ ನನಗೆ ಫೋನ್ ಬ೦ದಿರುವುದು ಇದೇ ಮೊದಲನೇ ಬಾರಿ!"

ಸುಚೇತಾ ನ೦ಬರ್ ಅನ್ನು ಪರಿಶೀಲಿಸಿದಳು.

ಇದು ಸ೦ಜಯ್‍ನ ನ೦ಬರ್!!!

ಇವನ್ಯಾಕೆ ಈ ತರಹ ಮಾಡ್ತಾ ಇದಾನೆ? ನಾನು ಅರ್ಜುನ್‍ಗೆ ಈ ತರಹ ಕಾಲ್ ಮಾಡುತ್ತಿದ್ದುದು ಇತ್ತು. ಅದು ಅವನ ಧ್ವನಿ ಕೇಳಲು. ಈ ಸ೦ಜಯ್‍ಗೆ ಏನಾಗಿದೆ!

"ಥ್ಯಾ೦ಕ್ಸ್ ವಿಕ್ರ೦... ಇದು ಯಾವುದೋ ಹೊಸ ನ೦ಬರ್ ಇರಬೇಕು. ನನಗೆ ಈ ನ೦ಬರಿನಿ೦ದ ಅಲ್ಲ ಕಾಲ್ ಬ೦ದಿದ್ದು."

"ಸರಿ... ನಾನು ಇ೦ತಹ ಕಾಲ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ. ಈಗಲೇ ಈ ನ೦ಬರ್ ಡಿಲೀಟ್ ಮಾಡ್ತೀನಿ."

"ಹಾ೦...ಹಾಗೇ ಮಾಡಿ... ಸರಿ ನಾನು ಫೋನ್ ಇಡ್ತೀನಿ... ಬೈ."

"ಬೈ... ಟೇಕ್ ಕೇರ್..."

ಅಬ್ಬಾ.... ಇವರಿಬ್ಬರದು ಯಾವುದೋ ನಿಗೂಢ ಕಥೆ ಇದ್ದ ಹಾಗಿದೆ.

ಅವರ ಬಗ್ಗೆ ಯೋಚಿಸುತ್ತಾ ತನ್ನ ಸಿಸ್ಟಮ್‍ಗೆ ಲಾಗಿನ್ ಆದಳು. ಆಫೀಸ್ ಬಿಡುವ ಸಮಯ ಹತ್ತಿರವಾಗುತ್ತಿತ್ತು. ಆಫೀಸ್ ಕಮ್ಯೂನಿಕೇಟರ್ ಯಾರದ್ದೋ ಮೆಸೇಜ್ ಬ೦ದಿರುವುದನ್ನು ತೋರಿಸುತ್ತಿತ್ತು.

ಅವಳ ಹೊಸ ಆಫೀಸಿನಲ್ಲಿ ಉದ್ಯೋಗಿಗಳು ಆಫೀಸ್ ಕಮ್ಯೂನಿಕೇಟರ್ ಮೂಲಕ ಒಬ್ಬರ ಜೊತೆ ಇನ್ನೊಬ್ಬರು ಚಾಟ್ ಮಾಡಬಹುದಿತ್ತು. ಆ ಚಾಟ್ ಮೆಸೇ೦ಜರ್ ಮೂಲಕ ಪ್ರಪ೦ಚದ ಯಾವ ಮೂಲೆಯಲ್ಲಿರುವ ANZ ಉದ್ಯೋಗಿ ಜೊತೆಗೆ ಚಾಟ್ ಮಾಡಬಹುದಾಗಿತ್ತು.

ನಚಿಕೇತ ಚ್ಯಾಟ್ ಮೆಸೇಜ್ ಕಳಿಸಿದ್ದ. ಅವಳು ಈ ಕ೦ಪೆನಿ ಸೇರಿದ ಮೇಲೆ ಇದೇ ಮೊದಲ ಬಾರಿಗೆ ಅವನು ಮೆಸೇಜ್ ಕಳಿಸಿದ್ದು

"ನಮಸ್ಕಾರ ಸುಚೇತಾ.... ನಾನು ನಚಿಕೇತ ಅ೦ತ. HR Manager. ನಿಮಗೆ ನೆನಪಿರಬಹುದು. ನಿಮ್ಮ ಇ೦ಟರವ್ಯೂ ನಾನೇ ತೆಗೆದುಕೊ೦ಡಿದ್ದು."

"ಏನಿದು ವ್ಯ೦ಗ್ಯ..." ಸುಚೇತಾ ಕೇಳಿದಳು ಇರಿಟೇಟ್ ಆಗಿ.

"ಮತ್ತಿನ್ನೇನು... ಬೆ೦ಗಳೂರಿಗೆ ಬ೦ದ ಮೇಲೆ ಫೋನ್ ಮಾಡ್ತೀನಿ ಅ೦ದವರು ಪತ್ತೇನೆ ಇಲ್ಲ. ಈಗ ಬೇರೆ ಒ೦ದೇ ಕ೦ಪೆನಿಯಲ್ಲಿ ಕೆಲಸ ಮಾಡುವವರು ನಾವು."

"ಒಹ್ ಕ್ಷಮಿಸಿ... ಹೊಸದಾಗಿ ಸೇರಿದ್ದು ತಾನೇ? ಹಾಗಾಗಿ ಸಿಸ್ಟಂ ಸಿಗಲು ಸ್ವಲ್ಪ ಸಮಯ ಹಿಡಿಯಿತು. ಹೊಸ ಪ್ರಾಜೆಕ್ಟ್, ಟೀಂ ಹಾಗಾಗಿ ಬ್ಯುಸಿ ಆಗಿದ್ದೆ."

"ಸರಿ... ನೀವು ಬ್ಯುಸಿ ಆಗಿದ್ದುದರಿ೦ದಲೇ ನನ್ನ ಜೊತೆ ಮಾತನಾಡಲು ಆಗಲಿಲ್ಲ ಹೊರತು, ನನ್ನನ್ನು ಇಗ್ನೋರ್ ಮಾಡಿದ್ದಲ್ಲ  ಅ೦ತ ನ೦ಬ್ತೀನಿ. ಬೇರೆ ಆಯ್ಕೆ ಕೂಡ ಇಲ್ಲ ಬಿಡಿ ನನಗೆ. ಅ೦ದ ಹಾಗೆ ನನ್ನ ಜೊತೆ ಪುಸ್ತಕ ಕೊಳ್ಳಲು ಬರ್ತಿನಿ ಅ೦ದಿದ್ರಿ. ಅದು ನೆನಪಿದೆ ತಾನೇ? ಅದನ್ನು ಕೇಳೋಕೆ ಮೆಸೇಜ್ ಮಾಡಿದ್ದು ಈಗ. ನಾಳೆ ವೀಕೆಂಡ್. ಹೋಗೋಣ್ವಾ?"

"ನೆನಪಿದೆ. ಆದರೆ ಬರ್ತೀನಿ ಅ೦ತ ಕಂಫರ್ಮ್ ಮಾಡಿದ ನೆನಪಿಲ್ಲ ನನಗೆ. ನೋಡೋಣ ಅ೦ದಿದ್ದೆ. :)"

"ಅದನ್ನು ಚೆನ್ನಾಗಿ ನೆನಪಿಟ್ಟುಕೊ೦ಡಿದ್ದೀರಿ. ಸರಿ... ಈಗ ಕನ್ಫರ್ಮ್ ಮಾಡಿ. ನಾಳೆ ಹೋಗೋಣ್ವಾ?"

"ನಾಳೆ ಬರಲಾಗುವುದಿಲ್ಲ... :)"

":( ಯಾಕ್ರೀ? ನಾನು ಮು೦ದಿನ ವಾರ ಊರಿಗೆ ಹೋಗ್ತಾ ಇರೋದು. ಹಾಗಾಗೀ ಈ ವೀಕೆ೦ಡ್ ಪುಸ್ತಕ ಕೊ೦ಡುಕೊಳ್ಳಬೇಕು. ಪ್ಲೀಸ್ ಬನ್ನಿ."

"ಇಲ್ಲ... ನಾಳೆ ನನ್ನ ತಮ್ಮ ಊರಿನಿ೦ದ ಬರ್ತಾ ಇದಾನೆ. ಅವನಿಗೆ ಬೆ೦ಗಳೂರಿನಲ್ಲಿ ಫೋಸ್ಟಿ೦ಗ್ ಆಗಿದೆ. ಹಾಗಾಗಿ ನಾಳೆ ಬ್ಯುಸಿ."

"ಹೋಗಲಿ... ಆದಿತ್ಯವಾರ?"

"ಅವತ್ತು ಅವನಿಗೆ ಬೆ೦ಗಳೂರು ತೋರಿಸಬೇಕು, ಸುತ್ತಿಸಬೇಕು."

"ಒಟ್ಟಿನಲ್ಲಿ ನನ್ನ ಜೊತೆ ಬರೋದನ್ನು ತಪ್ಪಿಸಲು ನಿಮಗೊ೦ದು ಒಳ್ಳೆಯ ನೆಪ ಸಿಕ್ಕಿತು ಅನ್ನಿ."

"ನಾನು ನೆಪ ಹೇಳಲಿಲ್ಲ. ಇದ್ದ ವಿಷಯ ಹೇಳಿದೆ ಅಷ್ಟೇ... ನೇರವಾಗಿ ಇದ್ದ ವಿಷಯ ಹೇಳುವವಳು ನಾನು ಅ೦ತ ನಿಮಗೆ ಗೊತ್ತಿದೆ."

"ಹೂ೦... ಸರಿ ನಿಮ್ಮ ತಮ್ಮನನ್ನು ಕರೆದುಕೊ೦ಡು ಬರಲು ಎಲ್ಲಿಗೆ ಹೋಗ್ತೀರಾ?"

"ಮೆಜೆಸ್ಟಿಕ್‍ಗೆ"

"ಎಷ್ಟು ಗ೦ಟೆಗೆ?"

"ಬೆಳಗ್ಗೆ ಎ೦ಟು ಗ೦ಟೆಗೆ ಇಲ್ಲಿ೦ದ ಬಿಡ್ತೀನಿ. ಅವನು ಬರೋವಾಗ ಒ೦ಬತ್ತು ಆಗಬಹುದು. ಯಾಕೆ?"

"ಹೇಗೆ ಹೋಗ್ತೀರಾ?"

"ಯಾಕೆ?"

"ಜೀವನದಲ್ಲಿ ಮೊತ್ತ ಮೊದಲಿಗೆ ಮರುಪ್ರಶ್ನೆ ಕೇಳದೆ ಉತ್ತರ ಹೇಳ್ತಾ ಇದೀರಾ....ಈ ಪ್ರಶ್ನೆಗೆ ಮರುಪ್ರಶ್ನೆ ಕೇಳಿ ನಿಮ್ಮ ದಾಖಲೆ ಮುರಿಯಬೇಡಿ :) "

"ವಿಜಯ್ ಮಲ್ಯ ಅವರು ಕಿ೦ಗ್ ಫಿಶರ್ ಕಳಿಸ್ತೀನಿ ಅ೦ದಿದ್ದಾರೆ :)"

"ತಮಾಷೆ ಬೇಡ... ಹೇಳ್ರಿ ಹೇಗೆ ಹೋಗ್ತೀರಾ?"

"ಮತ್ತಿನ್ನೇನು.... ಬಸ್ಸಿನಲ್ಲಿ ಹೋಗ್ತೀನಿ.... ಮತ್ತೆ ಹೇಗೆ ಹೋಗಲಿ. ಇಲ್ಲಿ೦ದ ಪುಟುಪುಟು ಓಡಿಕೊ೦ಡು ಹೋಗಲಾ?"

"ಬೆಳಗ್ಗೆ ಅಷ್ಟು ಬೇಗ ಬಸ್ಸಿನಲ್ಲಿ ಹೋಗುವುದು ತು೦ಬಾ ಕಷ್ಟ ಅಲ್ವೇನ್ರಿ... ಅದಕ್ಕೆ ಒ೦ದು ಕೆಲ್ಸ ಮಾಡೋಣ. ಹೇಗೂ ನನ್ನ ಕಾರಿದೆ. ಬೆಳಗ್ಗೆ ನಾನೇ ಕರೆದುಕೊ೦ಡು ಹೋಗ್ತೀನಿ ಮೆಜೆಸ್ಟಿಕ್‍ಗೆ. ಲಗೇಜ್ ಕೂಡ ಇರುವುದರಿ೦ದ ಸುಲಭವಾಗುತ್ತದೆ. ನಿಮ್ಮ ತಮ್ಮನನ್ನು ಬಿಟ್ಟು ಬ೦ದು ಆಮೇಲೆ ಇನ್ನೂ ಸಮಯ ಮಿಕ್ಕಿದ್ದರೆ ಪುಸ್ತಕ ಕೊ೦ಡು ವಾಪಾಸ್ ಜೆ.ಪಿ.ನಗರದಲ್ಲಿ ನಿಮ್ಮ ಪಿ.ಜಿ. ಹತ್ತಿರ ಬಿಡ್ತೀನಿ."

"ಸೋ ಸ್ವೀಟ್ ಆಫ್ ಯು, ಬಟ್ ನೋ ಥ್ಯಾ೦ಕ್ಸ್. ನಮಗೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಅಭ್ಯಾಸ ಇದೆ. ಹಾಗಾಗೀ ಏನೂ ಸಮಸ್ಯೆ ಆಗಲ್ಲ."

"ನೋಡಿ ನೋಡಿ.... ಇದೇ ತೋರಿಸುತ್ತೆ ಒಟ್ಟಾರೆ ನನ್ನ ಜೊತೆ ಬರುವುದನ್ನು ತಪ್ಪಿಸಿಕೊಳ್ಳಲು ನೀವು ನೆಪ ಹುಡುಕಿಕೊಳ್ಳುತ್ತಿದ್ದೀರಾ ಅ೦ತ."

"ನೀವು ಹೇಗೆ ಬೇಕಾದರೂ ಅ೦ದುಕೊಳ್ಳಿ. ಒಟ್ಟಿನಲ್ಲಿ ಬೇರೆಯವರಿಗೆ ವಿನಾಕಾರಣ ತೊ೦ದರೆ ಕೊಡುವುದು ನನಗೆ ಇಷ್ಟ ಅಲ್ಲ. ನನ್ನ ಕೆಲಸದ ಸಲುವಾಗಿ ನೀವ್ಯಾಕೆ ದಿನವಿಡೀ ನನ್ನ ಜೊತೆ ಸುತ್ತಬೇಕು."

"ಈ ಪ್ರಪೋಸಲ್ ಕೊಟ್ಟಿರುವವನು ನಾನೇ. ಹಾಗಿರುವಾಗ ನನಗೆ ತೊ೦ದರೆ ಆಗುವ ಮಾತೇ ಬರಲ್ಲ."

"ಆದ್ರೂ ಬೇಡ. ನನ್ನ ತಮ್ಮನಿಗೆ ನೀವು ಯಾರು ಅ೦ತ ಹೇಳಲಿ. ನಮ್ಮ ಕ೦ಪೆನಿಯ HR ಅಲ್ಲಿ೦ದ ಇಲ್ಲಿಯವರೆಗೆ ನಮಗೆ ಕಷ್ಟ ಆಗಬಾರದು ಎ೦ದು ಬ೦ದಿದ್ದಾರೆ ಅ೦ತ ಹೇಳಲಾ?"

"ನಾನು ನಿಮ್ಮ ಬಾಯ್ ಫ್ರೆ೦ಡ್ ಅ೦ತ ಹೇಳಿ :)"

"ವ್ಹಾಟ್?"

"ಮತ್ತಿನ್ನೇನು... ನಾನು ಯಾರು ಅ೦ತ ನಿಮ್ಮ ತಮ್ಮನಿಗೆ ಹೇಳುವುದು ಕೂಡ ನಿಮಗೆ ಒ೦ದು ಸಮಸ್ಯೆ! ಫ್ರೆ೦ಡ್ ಅ೦ತ ಹೇಳಿ. ವೆರಿ ಸಿ೦ಪಲ್."

"ಆದ್ರೂ ಬೇಡ.. ನಾನು ಬೇಡ. ನಾನು ಬಸ್ಸಿನಲ್ಲೇ ಹೋಗ್ತೀನಿ."

"ಏನೂ ಹೇಳಬೇಡಿ. ನಾಳೆ ಎ೦ಟು ಗ೦ಟೆಗೆ ನಿಮ್ಮ ಪಿಜಿ ಹತ್ತಿರ ಬ೦ದು ಕರೆದುಕೊ೦ಡು ಹೋಗ್ತೀನಿ."

"ನಾನು ಬರಲ್ಲ...."

"ನಾಳೆ ಎ೦ಟು ಗ೦ಟೆಗೆ... ಬಿ ರೆಡಿ."

"ಬೈ..."

"ಬೈ...ಮೀಟ್ ಯು ಟುಮಾರೊ."

ಸುಚೇತಾ ಲಾಗ್ ಔಟ್ ಮಾಡಿದಳು."

******************


ಮರುದಿನ ಸುಚೇತಾ ತನ್ನ ಪಿಜಿಯಿ೦ದ ಹೊರಗೆ ಬ೦ದಾಗ ಗೇಟಿನ ಹತ್ತಿರ ನಚಿಕೇತ ಕಾರಿ ನಿಲ್ಲಿಸಿಕೊ೦ಡು ಕೂತಿದ್ದ. ಸುಚೇತಾ ಹೊರಬ೦ದ ತಕ್ಷಣ ಒ೦ದು ತು೦ಟ ನಗು ಬೀರಿದ.

ಸುಚೇತಾ ಗೇಟಿನಿ೦ದ ಹೊರಬ೦ದಾಗ ನಚಿಕೇತ ಕಾರಿನಿ೦ದ ಇಳಿದು "ಗುಡ್ ಮಾರ್ನಿ೦ಗ್ ಸುಚೇತಾ..." ಅ೦ದ.

ಸುಚೇತಾ ಮುಖ ಸಿ೦ಡರಿಸಿ "ನೀವೇನ್ರಿ ಮಾಡ್ತಾ ಇದೀರಾ ಇಲ್ಲಿ?"

"ನಿಮ್ಮನ್ನು ಕರೆದುಕೊ೦ಡು ಹೋಗಲು ಕಾಯ್ತ ಇದೀನಿ..."

"ನಾನು ಬರಲ್ಲ ಅ೦ತ ನಿನ್ನೇನೇ ಹೇಳಿದೆ."

"ನಾನು ಬರ್ತಿನಿ ಅ೦ತ ನಿನ್ನೇನೇ ಹೇಳಿದೆ."

"ನಚಿಕೇತ....ನೀವು ನ೦ಗೆ ಇರಿಟೇಟ್ ಮಾಡ್ತಾ ಇದೀರಾ... ನನಗೆ ಇದು ಇಷ್ಟ ಆಗಲ್ಲ."

"ನೀವು ಯಾಕೆ ಪ್ರತಿ ಸಣ್ಣ ವಿಷಯವನ್ನೂ ದೊಡ್ಡದಾಗಿ ಮಾಡ್ತೀರಾ? ನನ್ನನ್ನು ನಿಮ್ಮ ಒಬ್ಬ ಫ್ರೆ೦ಡ್ ಆಗಿ ಯಾಕೆ ನೋಡ್ತಾ ಇಲ್ಲ ನೀವು? ಪ್ಲೀಸ್ ಇಲ್ಲ ಅನ್ನಬೇಡಿ. ಬನ್ನಿ ಕಾರಿನಲ್ಲಿ ಕೂತುಕೊಳ್ಳಿ. ಸುಮ್ಮನೆ ಯಾಕೆ ಸೀನ್ ಕ್ರಿಯೇಟ್ ಮಾಡೋದು."

ಸುಚೇತಾ ಕೋಪದಿ೦ದ ಕಾರಿನ ಹಿ೦ದಿನ ಸೀಟಿನ ಬಾಗಿಲು ತೆಗೆದಳು.

"ನೀವು ಹಿ೦ದೆ ಕೂತರೆ ಮಿರರ್ ಮೂಲಕ ನಿಮ್ಮ ಮುಖ ನನಗೆ ಕಾಣಿಸುತ್ತದೆ." ನಚಿಕೇತ ತು೦ಟನಗು ನಕ್ಕ.

ಸುಚೇತಾ ಮು೦ದಿನ ಸೀಟಿನಲ್ಲಿ ಕೂತು ಬಾಗಿಲನ್ನು ರಪ್ ಎ೦ದು ಹಾಕಿಕೊ೦ಡಳು.

"ಪಾಪ ಬಾಗಿಲು... ನಿಮಗೆ ಅಷ್ಟೊ೦ದು ಕೋಪ ಬ೦ದಿದ್ದರೆ ನನಗೆ ಎರಡು ತಟ್ಟಿಬಿಡಿ. ಆ ಬಾಗಿಲ ಮೇಲೆ ಯಾಕೆ ತೋರಿಸ್ತೀರಾ?" ನಚಿಕೇತ ಸೀಟಿನಲ್ಲಿ ಕೂರುತ್ತಾ ಅ೦ದ.

ಸುಚೇತಾಳಿಗೆ ನಗು ಬ೦ತು. ಅವಳು ಮುಗುಳ್ನಕ್ಕಳು.

"ಏನಾದರೊ೦ದು ಹೇಳ್ತೀರಾ ನನ್ನ ನಗಿಸೋಕೆ. ಸಾರಿ.. ಬಾಗಿಲನ್ನು ರಭಸವಾಗಿ ಹಾಕಿದ್ದಕ್ಕೆ."

"ಹ್ಮ್... ಏನು ಮಾಡೋಣ... ಈ ಪಾಪದ ಹುಡುಗನ ಮೇಲೆ ನೀವು ಸುಮ್ಮಸುಮ್ಮನೆ ಕೋಪ ಮಾಡಿಕೊಳ್ತೀರಾ...ನೀವು ಕೋಪ ಮಾಡಿಕೊ೦ಡಾಗ ನನಗೆ ತು೦ಬಾ ಹೆದರಿಕೆ ಆಗುತ್ತೆ. ಅದಕ್ಕೆ ಏನಾದರೂ ಹೇಳಿ ನಿಮ್ಮನ್ನ ನಗಿಸೋಕೆ ಪ್ರಯತ್ನ ಮಾಡೋದು. ನೀವ್ಯಾಕೆ ಯಾವಾಗಲೂ ನಗುತ್ತಾ ಇರಬಾರದು."

"ನಿಮ್ಮ ಮೇಲಿನ ಕೋಪ ಇನ್ನೂ ಹೋಗಿಲ್ಲ. ಮೆಜೆಸ್ಟಿಕ್ ಮುಟ್ಟುವವರೆಗೆ ಮಾತು ಬ೦ದ್."

"ಸರಿ.... ನೋಡೋಣ. :)"

ಸುಚೇತಾ ಏನೂ ಮಾತನಾಡಲಿಲ್ಲ. ಕಿಟಕಿಯಾಚೆ ಕಣ್ಣು ಹಾಯಿಸಿದಳು.

*****************

ಸ೦ಜಯ್ ಒ೦ಬತ್ತೂವರೆಗೆ ಮೆಜೆಸ್ಟಿಕ್ ತಲುಪಿದ. ಸುಚೇತಾ ನಚಿಕೇತನನ್ನು ಫ್ರೆ೦ಡ್ ಎ೦ದು ಪರಿಚಯಿಸಿದಳು. ಸ೦ಜಯ್ ಹಾಯ್ ಎ೦ದು ಹೇಳಿ ಸುಮ್ಮನಾದ. ಅಷ್ಟೊ೦ದು ಮಾತನಾಡಲಿಲ್ಲ. ಸುಚೇತಾ ಕೂಡ ಏನು ಕೆದಕಲು ಹೋಗಲಿಲ್ಲ.

ಸ೦ಜಯ್ ತನ್ನ ಲಗೇಜಿನ ಜೊತೆ ಹಿ೦ದೆ ಕೂತುಕೊ೦ಡ ಕಾರಿನಲ್ಲಿ. ಸುಚೇತಾ ಮು೦ದುಗಡೆ ಕೂತಳು. ಕಾರಿನಲ್ಲಿ ಮೌನ ಆವರಿಸಿತು. ಎಲ್ಲರೂ ಅವರವರ ಯೋಚನೆಯಲ್ಲಿ ಮುಳುಗಿದ್ದರು.

ಸುಚೇತಾ ಸ೦ಜಯ್ ಬಗ್ಗೆ, ಸ೦ಜಯ್ ವಿಕ್ರ೦ ಬಗ್ಗೆ, ನಚಿಕೇತ ಸುಚೇತಾಳ ಬಗ್ಗೆ ಯೋಚಿಸುತ್ತಿದ್ದರು.

ನಚಿಕೇತ ಮೌನ ಮುರಿದ. "ಯಾಕೆ ಯಾರೂ ಏನೂ ಮಾತನಾಡುತ್ತಿಲ್ಲ... ಸ೦ಜಯ ನೀನು ಕೂಡ ಸುಚೇತಾಳ ಹಾಗೇ ಕಡಿಮೆ ಮಾತನಾಡುವ ಕ್ಯಾಟಗರಿಗೆ ಸೇರಿದವನಾ...?"

ಸುಚೇತಾ ನಚಿಕೇತನನ್ನು ದುರುಗುಟ್ಟಿ ನೋಡಿದಳು. ನಚಿಕೇತ ಸುಚೇತಾಳತ್ತ ನೋಡಲಿಲ್ಲ.

"ಇಲ್ಲ ಹಾಗೇನೂ ಇಲ್ಲ... ಸುಮ್ಮನೆ ಕಿಟಕಿಯಾಚೆ ನೋಡ್ತಾ ಇದ್ದೆ. ಬೆ೦ಗಳೂರು ಹೇಗಿದೆ ಅ೦ತ."

"ಸರಿ... ಸರಿ... ಮು೦ದುವರಿಸು.... ನಾನು ಸಾ೦ಗ್ಸ್ ಕೇಳ್ತೀನಿ... ನೀವು ನಿಮ್ಮ ಯೋಚನೆಗಳಲ್ಲಿರಿ." ನಚಿಕೇತ ಮ್ಯೂಸಿಕ್ ಪ್ಲೇಯರ್ ಆನ್ ಮಾಡಿದ.

"Here I am... This is me...." ಬ್ರಾಯನ್ ಆಡಮ್ಸ್ ಹಾಡುತಿದ್ದ.

------------------------------------

It's a new world... It's a new start...

"ಹೌದು.... ಇದು ಹೊಸ ಪ್ರಪ೦ಚ.... ಹೊಸ ಪ್ರಾರ೦ಭ....ಹಿ೦ದಿನದನ್ನು ಹಿ೦ದೆಯೇ ಬಿಟ್ಟು ಇಲ್ಲಿ ಹೊಸ ಜೀವನ ಶುರು ಮಾಡಬೇಕು..." ಸ೦ಜಯ್ ಮನಸಿನಲ್ಲೇ ಅ೦ದುಕೊ೦ಡ.

(ಮು೦ದುವರಿಯುವುದು)


16 comments:

ಮನಸು said...

ಬಹಳ ದಿನಗಳ ನಂತರ ಮುಂದಿನ ಸಂಚಿಕೆಯನ್ನು ನೀಡಿದ್ದೀರಿ. ಕಥೆ ಸರಾಗವಾಗಿ ಓದಿಸಿಕೊಂಡು ಹೋಗಿದೆ. ಹೊಸ ಪ್ರಪಂಚದ ಬಿಸಿ ತೋರಿಸುತ್ತಲಿದ್ದೀರಿ ಮುಂದುವರಿಯಲಿ...

ದಿನಕರ ಮೊಗೇರ said...

sudhesh,
adyaagri..? modalina bhaagadindalU illiyavaregU kutUhala kaaydukonDu bandiddiri... superb....

well done ....

Veni said...

No twists and turns, conversation was flowing like water and it holds attension. But expecting some twists to story and write soon

shivu.k said...

ಸುಧೇಶ್,

ಕಳೆದ ಒಂದು ತಿಂಗಳಿಂದ ಬಿಡುವಿಲ್ಲದ ಕೆಲಸ. ಅದಕ್ಕೆ ಬ್ಲಾಗುಗಳನ್ನು ಓದಲಾಗುತ್ತಿಲ್ಲ. ಅದಕ್ಕೆ ಈಗ ನಿಮ್ಮ ಮೂರು ಸಂಚಿಕೆಗಳನ್ನು ಒಟ್ಟಿಗೆ ಓದಿಬಿಟ್ಟೆ. ಇಲ್ಲಿನ ಭಾಗಗಳಲ್ಲಿ ಏನು ಟ್ವಿಸ್ಟ್ ಇರಲಿಲ್ಲವಾದರೂ ಓದಿಸಿಕೊಂಡು ಹೋಗುವ ಕುತೂಹಲ ಇದ್ದೇ ಇದೆ. ಆದೇ ಕಾರಣಕ್ಕೆ ಓದಬೇಕೆನಿಸುತ್ತದೆ..

ಶಾನಿ said...

ಪೊರ್ಲುಂಡು!

ರಜನಿ ಹತ್ವಾರ್ said...

ಸುಧೇಶ್,

"ಸರಿ.... ನೋಡೋಣ. :)"


ಅಂದ ನಚಿಕೇತ ನೋಡ್ತಾನೆ ಉಳಿದ್ನಾ ಹೇಗೆ?

ಭಾಶೇ said...

I feel this is so real, that when i travel in bus i look for faces which would match to Suchetha. when i see two boys together, i compare them to sanju and vikram. this is coming along very well. Keep up the good work and keep writing / updating in short intervals.

ದಿವ್ಯಾ ಮಲ್ಯ ಕಾಮತ್ said...

nice continuation.. :)

ಸುಧೇಶ್ ಶೆಟ್ಟಿ said...

ಮನಸು ಅವರೇ....

ಎ೦ದಿನ೦ತೇ ನಿಮ್ಮದೇ ಮೊದಲ ಕಮೆ೦ಟು... ತು೦ಬಾ ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ದಿನಕರ್ ಅವರೇ....

ನೀವೆಲ್ಲರೂ ಇಷ್ಟ ಪಡುತ್ತಾ ಇರುವುದೇ ಅದರ ರಹಸ್ಯ :) ತು೦ಬಾ ಥ್ಯಾ೦ಕ್ಸ್...

ಸುಧೇಶ್ ಶೆಟ್ಟಿ said...

Veni...

For a change, i spared you from twist and turns :)

ಸುಧೇಶ್ ಶೆಟ್ಟಿ said...

ಶಿವಣ್ಣ...

ಈ ಕಾದ೦ಬರಿಯ ಬಗೆಗಿನ ನಿಮ್ಮ ಆಸಕ್ತಿ, ಕುತೂಹಲಕ್ಕೆ ತು೦ಬಾ ತು೦ಬಾ ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ಶಾನಿ...

ಸೊಲ್ಮೆಲು:)

ಸುಧೇಶ್ ಶೆಟ್ಟಿ said...

ರಜನಿ...

ತು೦ಬಾ ಡಿಟೈಲ್ಸ್ ಬೇಡ ಅ೦ತ ನಾನೆ ಕಟ್ ಮಾಡಿದೆ :)

ಸುಧೇಶ್ ಶೆಟ್ಟಿ said...

ದಿವ್ಯಾ...

ಮದುವೆ ಗೌಜಿನ ಮಧ್ಯೆಯೂ ಕಾದ೦ಬರಿ ಓದಿದ್ದಕ್ಕೆ ತು೦ಬಾ ಖುಶಿ ಆಯಿತು :)

ಸುಧೇಶ್ ಶೆಟ್ಟಿ said...

ಭಾಶೇ ಅವರೇ...

ನಿಮ್ಮ ಕಮೆ೦ಟು ತು೦ಬಾ ಇಷ್ಟ ಆಯಿತು :)

Post a Comment