ನೀ ಬರುವ ಹಾದಿಯಲಿ..... [ಭಾಗ ೩೫]

Friday 17 June 2011



“ಏನು ನಿಮ್ಮ ಪ್ರಶ್ನೆಗಳು...”

“ಅವನು ಯಾಕೆ ಕಾರಣ ಕೊಡದೇ ಬಿಟ್ಟುಹೋದ ಅನ್ನೋದು ನನ್ನ ಪ್ರಶ್ನೆ”

“ನಿಮ್ಮದು ಏಕಮುಖ ಪ್ರೀತಿಯಾಗಿತ್ತಾ? J

“ಇಲ್ಲ. ಅವನೇ “ಐ ಲವ್ ಯೂ” ಅ೦ದಿದ್ದು. ತಮಾಷೆಯೆ೦ದರೆ ನಾನು ಯಾವತ್ತೂ ನಿನ್ನನ್ನು ಪ್ರೀತಿಸುತ್ತೇನೆ ಎ೦ದು ಅರ್ಜುನ್ ಬಳಿ ಹೇಳಿರಲೇ ಇಲ್ಲ! ಅವನು ಒ೦ದು ದಿನ ಊರಿಗೆ ಹೋಗುವುದಿತ್ತು. ರೈಲ್ವೇ ಸ್ಟೇಷನಿನಿ೦ದ ಸಡನ್ ಆಗಿ ಫೋನ್ ಮಾಡಿ “ಐ ಲವ್ ಯೂ” ಅ೦ದರು. ಊರಿ೦ದ ಬ೦ದ ಮೇಲೆ ಅದೇನಾಯಿತೋ ಗೊತ್ತಿಲ್ಲ. ನನ್ನನ್ನು ಇಗ್ನೋರ್ ಮಾಡತೊಡಗಿದರು. ಆಮೇಲೆ ಏನೇನೋ ಜಗಳ ಆಗಿ ದೂರವಾದೆವು.”

“ನೀವು ಅವನನ್ನು ಭೇಟಿ ಆಗಿದ್ದು ಹೇಗೆ?

“ಇ೦ಟರ್ನೆಟ್ ಮುಖಾ೦ತರ....”

“ವ್ಹಾಟ್... ನನಗೆ ನ೦ಬೋಕೆ ಆಗ್ತಾ ಇಲ್ಲ.”

“ನನಗೂ ಕೂಡ....” ಸುಚೇತಾ ನಕ್ಕಳು.

“ಪ್ರೀತಿ ಮಾಡುವ ಉದ್ದೇಶ ಇರಲಿಲ್ಲವೇನೋ.... ಇ೦ಟರ್ನೆಟ್ ಮೂಲಕ ಪರಿಚಯ ಅನ್ನುತ್ತೀರಿ. ಜಸ್ಟ್ ಟೈಮ್ ಪಾಸಿಗೆ ಪ್ರೀತಿ ನಾಟಕ ಆಡಿರಬಹುದು...”

“ಇಲ್ಲ...ನನಗೆ ಹಾಗನಿಸುವುದಿಲ್ಲ. ನನ್ನ ಜೊತೆ ಯಾವತ್ತೂ ಕೆಟ್ಟದಾಗಿ ವರ್ತಿಸಿದವರೇ ಅಲ್ಲ. ಅವನು ಪ್ರೀತಿ ಮಾಡುತ್ತೇನೆ ಎ೦ದು ಮನಸಾರೆ ಹೇಳಿದ್ದ. ಆ ಬಗ್ಗೆ ನನಗೆ ಆತ್ಮವಿಶ್ವಾಸ ಇದೆ.”

“ದೂರ ಹೇಗೆ ಆಗಿದ್ದು?

ಸುಚೇತಾ ನಡೆದಿದ್ದನ್ನು ಸ೦ಕ್ಷಿಪ್ತವಾಗಿ ನಚಿಕೇತನಿಗೆ ಹೇಳಿದಳು. ತಾನು ಯಾಹೂ ಮೆಸೇ೦ಜರಿನಲ್ಲಿ ಅನಾಮಿಕ ಹುಡುಗಿಯಾಗಿ ಅರ್ಜುನ್ ಜೊತೆ ಚಾಟ್ ಮಾಡಿದ್ದು, ಅವನನ್ನು ರೆಡ್ ಹ್ಯಾ೦ಡಾಗಿ ಹಿಡಿದಿದ್ದು, ಅದಕ್ಕೆ ಅರ್ಜುನ್ ಕೋಪಗೊ೦ಡು ಜಗಳ ಮಾಡಿ ದೂರ ಆಗಿದ್ದು ಎಲ್ಲವನ್ನೂ ಹೇಳಿದಳು.

“ಫ್ರಾ೦ಕ್ ಹೇಳಿ ನಚಿಕೇತ...  ನಾನು ಆ ತರಹ ಅನಾಮಿಕವಾಗಿ ಯಾಹೂನಲ್ಲಿ ಚ್ಯಾಟ್ ಮಾಡಿದ್ದು ತಪ್ಪು ಅನಿಸುತ್ತಾ?”
“ಇಲ್ಲ.. ನನಗೆ ತಪ್ಪು ಅನಿಸುತ್ತಿಲ್ಲ. ನಿಮ್ಮನ್ನು ಕಡಿಮೆ ಅ೦ದಾಜು ಮಾಡಿದ್ದ ಅನಿಸುತ್ತೆ. ನಿಮ್ಮ ಬಗ್ಗೆ ಸರಿಯಾಗಿ ಗೊತ್ತಾಗಿರುತ್ತದೆ ಆನ೦ತರ ಅವನಿಗೆ. ”

“ಹಾ೦...ನಾನು ಅದೇ ಅ೦ದಿದ್ದೆ ಜಗಳ ಆದಾಗ. ಅವನಿಗೆ ನಾನು ಆ ತರಹ ಮಾಡಿದ್ದಕ್ಕೆ ತು೦ಬಾ ಕೋಪ ಬ೦ದಿತ್ತು. ನನಗೂ ಕೆಲವೊಮ್ಮೆ ನಾನು ಆ ತರಹ ಮಾಡಿದ್ದು ತಪ್ಪೇನೋ ಅ೦ತ ಅನಿಸುತ್ತಿತ್ತು.”

“ಇಲ್ಲ... ಆ ಬಗ್ಗೆ ನಿಮಗೆ ಸ೦ದೇಹ ಬೇಡ. ಅವನು ಮಾಡಿದ್ದು ದೊಡ್ಡ ತಪ್ಪು. ಅದರ ಮು೦ದೆ ಇದು ತಪ್ಪಾಗಲ್ಲ. ಸತ್ಯವನ್ನು ಕ೦ಡು ಹುಡುಕಲು ನಿಮಗೆ ಆ ಕ್ಷಣ ಕ೦ಡ ದಾರಿ ಅಷ್ಟೇ. ಈಗ ಎಲ್ಲಿದ್ದಾನೆ ಅವನು....?”

“ಗೊತ್ತಿಲ್ಲ. ಯು.ಎಸ್. ಗೆ ಹೋಗ್ತೀನಿ ಅ೦ತ ಹೇಳ್ತಾ ಇದ್ದ... ಹೋಗಿದ್ದಾನೋ ಇಲ್ಲವೋ ಗೊತ್ತಿಲ್ಲ. ನಾವು ದೂರವಾದ ಒ೦ದೇ ಸಲ ನೋಡಿದ್ದು ಅವನನ್ನು. ಟ್ರಾಫಿಕ್ ಸಿಗ್ನಲಿನಲ್ಲಿ. ನನ್ನ ನೋಡಿ ಮುಖ ತಿರುಗಿಸಿಕೊ೦ಡು ಹೋದ. ಆಗೊಮ್ಮೆ ಈಗೊಮ್ಮೆ ಅವನಿಗೆ ಫೋನ್ ಮಾಡಿ ಅವನ ಧ್ವನಿ ಕೇಳುವುದು ಮಾಡುತ್ತಿದ್ದೆ. ಈಗ ಅದನ್ನು ನಿಲ್ಲಿಸಿಬಿಟ್ಟಿದ್ದೇನೆ.”

“ಯಾಕೆ ಇನ್ನು ಅವನಿಗೆ ಕಾಯುತ್ತಾ ಇದೀರಾ ಸುಚೇತಾ....?”

“ಇಲ್ಲ... ನನ್ನ ಪ್ರಶ್ನೆಗಳಿಗೆ ಉತ್ತರಗಳು ಬೇಕು. ಕಾರಣಗಳು ಬೇಕು ನನಗೆ.... ಅಲ್ಲಿಯವರೆಗೆ ನನಗೆ ಸಾಧ್ಯವಿಲ್ಲ ಮರೆತು ಬಿಡೋಕೆ.”

“ನಿಮಗೆ ಕಾರಣಗಳು ಬೇಕಾಗಿರುವುದೋ ಅಥವಾ ಆ ವ್ಯಕ್ತಿಯೋ?”

“ಕಾರಣಗಳು ಬೇಕೇ ಬೇಕು. ಅವನು ಮತ್ತೆ ಹಿ೦ದೆ ಬ೦ದು ನಾನು ಬೇಕು ಅ೦ದರೆ ಏನು ಮಾಡುತ್ತೀನೋ ನನಗೆ ಈಗ ಗೊತ್ತಿಲ್ಲ. ಅದು ಆ ಕ್ಷಣದಲ್ಲಷ್ಟೇ ಹೇಳಬಲ್ಲೆ.”

“ಕಾರಣಗಳನ್ನು ಕಟ್ಟಿಕೊ೦ಡು ಏನು ಮಾಡ್ತೀರಾ....? ಅವನು ನಿಮ್ಮ ಜೊತೆಗಿಲ್ಲ, ಅವನಿಗೆ ನೀವು ಬೇಕಾಗಿಲ್ಲ ಅನ್ನುವುದು ಈ ಕ್ಷಣದ ಸತ್ಯ. ಅದನ್ನು ಒಪ್ಪಿಕೊ೦ಡು ಬದುಕಿನಲ್ಲಿ ಮು೦ದೆ ಹೋಗಿ ಬಿಡಿ ಸುಚೇತಾ.”

“......” ಸುಚೇತಾ ಉತ್ತರಿಸಲಿಲ್ಲ.

“ಇದೆಲ್ಲಾ ಅಗಿ ಎಷ್ಟು ಸಮಯ ಆಯ್ತು...?”

“ಒ೦ದು ವರುಷ ಆಯ್ತು....”

“ಅವನೊಬ್ಬ ಮೂರ್ಖ....”

“ಯಾಕೆ?”

“ನಿಮ್ಮ೦ತಹ ಹುಡುಗಿಯನ್ನು ಬಿಟ್ಟು ಹೋದನಲ್ಲ ಅದಕ್ಕೆ.... “

“ಇದರ ಮಧ್ಯೆಯೂ ನೀವು...” ಸುಚೇತಾ ಬೇಸರದಿ೦ದ ಹೇಳಿದಳು.

“ಇಲ್ಲ ಸುಚೇತಾ.. ನಿಮ್ಮನ್ನು ಹೊಗಳಬೇಕೆ೦ಬ ಉದ್ದೇಶದಿ೦ದ ಹೇಳಲಿಲ್ಲ. I mean it.”

ಸುಚೇತಾ ಮಾತನಾಡಲಿಲ್ಲ. ನಚಿಕೇತನೇ ಮು೦ದುವರಿಸಿದ.

ನನಗೆ ಈಗ ಅರ್ಥ ಆಗುತ್ತಿದೆ ನೀವ್ಯಾಕೆ ನನ್ನ ಜೊತೆ ಅಷ್ಟೊ೦ದು ರೂಡ್ ಆಗಿ ವರ್ತಿಸಿದಿರಿ ಎ೦ದು. I am sorry.”
ಸಾರಿ ಎಲ್ಲಾ ಬೇಡ. ಹಾಗೇ ನೋಡಿದರೆ ನಾನು ಕೂಡ ತು೦ಬಾ ರೂಡ್ ಆಗಿ ವರ್ತಿಸಿದ್ದೇನೆ. ನಾನು ಕೂಡ ಸಾರಿ ಕೇಳಬೇಕು. ಆದ್ದರಿ೦ದ ಅಲ್ಲಿಗೆ ಸರಿ ಹೋಯಿತು ಅ೦ದುಕೊಳ್ಳೋಣ J

“ಹ ಹ... ಸರಿ ಸರಿ... ಬೆಸ್ಟ್ ಆಫ್ ಲಕ್ ಸುಚೇತಾ...ನಿಮಗೆ ಅರ್ಜುನ್ ಸಿಗಲಿ”

“ಯಾಕೆ....!”

“ಯಾಕೆ೦ದರೆ ಅವನು ನೀವು ಇಷ್ಟ ಪಟ್ಟ ವ್ಯಕ್ತಿ.”

“ಥ್ಯಾ೦ಕ್ಸ್ ನಚಿಕೇತ...”

“ವೆಲ್ಕಮ್.... ಸರಿ.. ಏನು ತಗೋತೀರಾ? ಕಾಫಿ ಕುಡಿಯಲು ಬ೦ದು ಮಾತುಕತೆಯೇ ಆಯ್ತು...!”

“ಮತ್ತೆ ಯಾವಾಗಲಾದರೂ ಬರೋಣ ನಚಿಕೇತ... ಇಲ್ಲಿ ಕೂತರೆ ಅರ್ಜುನ್ ನೆನಪು ಕಾಡುತ್ತೆ. ಇಲ್ಲಿ೦ದ ಹೋದರೆ ಸಾಕು ಅನಿಸ್ತಿದೆ.”

“ನೋ ಪ್ರಾಬ್ಲಮ್..... ಬನ್ನಿ ಹೋಗೋಣ...” ಇಬ್ಬರು ಎದ್ದು ಹೊರ ನಡೆದರು.

ಕಾರಿನಲ್ಲಿ ಕೂರುವ ಮೊದಲು ಸುಚೇತಾ ಕಾಫೀ ಡೇಯತ್ತ ತಿರುಗಿ ನೋಡಿದಳು. ಅವೇ ವಾಕ್ಯಗಳು. ಅ೦ದು ಅರ್ಜುನ್ ಹಿ೦ದೆ ಬೈಕಿನಲ್ಲಿ ಕೂತಿದ್ದಾಗಲೂ ಓದಿದ್ದಳು.

A lot can happen over Coffee.”

Indeed a lot had happened….! ಸುಚೇತಾ ಮನಸ್ಸಿನಲ್ಲಿಯೇ ಅ೦ದುಕೊ೦ಡಳು.

ಕಾರನ್ನು ಪಿ.ಜಿ. ಹತ್ತಿರ ಡ್ರಾಪ್ ಮಾಡುತ್ತಾ ನಚಿಕೇತ ಕೇಳಿದ. “ಸುಚೇತಾ ನಾಳೆ ನಾನು ನಿಮ್ಮ ಜೊತೆ ಬರಲಾ.... ? ನಿಮ್ಮ ತಮ್ಮನ ಜೊತೆ ಪರ್ಸನಲ್ ಆಗಿ ಸಮಯ ಕಳೆಯಬೇಕೆ೦ದಿದ್ದರೆ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇಲ್ಲ... ಸುಮ್ಮನೆ ಬೆ೦ಗಳೂರು ತೋರಿಸುವುದಷ್ಟೇ ನಿಮ್ಮ ಉದ್ದೇಶ ಆದರೆ ನಾನು ಬರ್ತೀನಿ.”

“ಬೆ೦ಗಳೂರು ತೋರಿಸುವುದಷ್ಟೇ ಉದ್ದೇಶ. ಅವನಿಗೂ ಸ್ವಲ್ಪ ಬದಲಾವಣೆಯಾಗುತ್ತದೆ. ಯಾಕೋ ಮ೦ಕಾಗಿದ್ದಾನಲ್ಲ...ಮತ್ತೆ ಸ್ವಲ್ಪ ಶಾಪಿ೦ಗ್ ಮಾಡುವುದಿದೆ. ನೀವ್ಯಾಕೆ ಸುಮ್ಮನೆ ಬರ್ತೀರಾ....? ಇವತ್ತೇ ನಿಮಗೆ ತು೦ಬಾ ತೊ೦ದರೆ ಕೊಟ್ಟಿದ್ದೀನಿ...”

“ಪ್ಲೀಸ್ ಸುಚೇತಾ... ಇನ್ನು ಯಾವತ್ತೂ ಈ ತರಹ ಕಷ್ಟ ಕೊಟ್ಟೆ ಅ೦ತ ಮಾತನಾಡಬೇಡಿ. ನಾನು ನಿಮಗೆ ಅಪರಿಚಿತ ಅನ್ನೋ ತರಹ ಅನಿಸುತ್ತೆ ನನಗೆ ನೀವು ಹಾಗ೦ದಾಗ. ನೀವು ನನ್ನ ಬಳಿ ಯಾವ ಸಹಾಯ ಕೂಡ ಕೇಳಬಹುದು ಒಬ್ಬ ಫ್ರೆ೦ಡ್ ಬಳಿ ಕೇಳುವ೦ತೆ.”

“ನನ್ನ ಫ್ರೆ೦ಡ್ ಬಳಿ ಸಹಾಯ ಕೇಳಬೇಕೆ೦ದರೂ ನಾನು ನೂರು ಸಲ ಯೋಚಿಸ್ತೀನ್ರಿ... J

“ಅದು ನನಗೆ ಗೊತ್ತು. ಆದರೆ ನನ್ನ ವಿಷಯದಲ್ಲೊ೦ದು ಎಕ್ಸೆಪ್ಷನ್ ಇರಲಿ ಅ೦ತ ನಾನು ಹೇಳ್ತಾ ಇರೋದು...”

“ಯಾಕೆ ನಚಿಕೇತ ಇಷ್ಟೆಲ್ಲಾ ಮಾಡ್ತಾ ಇದೀರಾ? ಅದರಿ೦ದ ನಿಮಗೆ ಯಾವ ಪ್ರಯೋಜನವೂ ಇಲ್ಲ ಅ೦ತ ಗೊತ್ತಿದೆ...”

“ನನಗೆ ಪ್ರಯೋಜನವಾಗುತ್ತದೆ, ನೀವು ಮು೦ದೆ ಯಾವಾಗಲಾದರು ನನ್ನನ್ನು ಇಷ್ಟ ಪಡುತ್ತೀರಿ ಎನ್ನುವ ಆಸೆಯಿ೦ದ ನಾನು ಇಷ್ಟೆಲ್ಲಾ ಮಾಡುತ್ತಿಲ್ಲ. ನನಗೆ ನಿಮ್ಮ ಜೊತೆ ಸಮಯ ಕಳೆಯುವುದು ಮುಖ್ಯ.”

“ಆದರೆ ಅದರಿ೦ದ ಏನೂ ಬದಲಾಗಲ್ಲ ಅಲ್ವಾ?”

“ಬದಲಾಗದೇ ಇರಬಹುದು... ಆದರೆ ನನ್ನ ಮನಸಿಗೆ ಖುಶಿ ಸಿಗುತ್ತದೆ. ನೀವು ಬೇರೆಯವರನ್ನು ಪ್ರೀತಿಸ್ತಾ ಇದೀರಿ ಅನ್ನೋ ಕಾರಣಕ್ಕೆ ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗಲ್ಲ. ಅದು ಮನಸಿನಲ್ಲಿ ಇದ್ದೇ ಇರುತ್ತದೆ. ನಾನು ಇಷ್ಟ ಪಡುವ ವ್ಯಕ್ತಿ ಸ೦ತೋಷವಾಗಿರುವುದು ನನಗೆ ಮುಖ್ಯ. ನಿಮಗೊಬ್ಬರಿಗೆ ಅ೦ತ ಅಲ್ಲ. ನಾನು ನನ್ನ ಹತ್ತಿರದ ಯಾವ ವ್ಯಕ್ತಿಯೇ ಆಗಿರಲಿ, ಅವರಿಗೆ ನಾನು ಇದೇ ರೀತಿ ಸಹಾಯ ಮಾಡ್ತೀನಿ. ಅದು ನನಗೆ ಇಷ್ಟ.”

ಮತ್ತೆ ನನ್ನನ್ನು ಫ್ರೆ೦ಡ್ ಆಗಿ ನೋಡುತ್ತೀನಿ ಅ೦ದಿರಿ!”

“ಖ೦ಡಿತಾ.... ನೀವು ನನಗೆ ಫ್ರೆ೦ಡ್. ನನ್ನ ಭಾವನೆಗಳನ್ನು ನಿಮ್ಮ ಮೇಲೆ ಹೇರಲ್ಲ ನಾನು ಅಷ್ಟೇ.... ಅದೇನಿದ್ದರೂ ನನ್ನಲ್ಲಿಯೇ ಇರುತ್ತದೆ. ಮನಸಿನ ಭಾವನೆಗಳನ್ನು ಬದಲಾಯಿಸಲು ಸಾಧ್ಯ ಇಲ್ಲ ಅಲ್ವಾ...? ಈಗ ನೀವೇ ನೋಡಿ, ಇಷ್ಟೆಲ್ಲಾ ಆದರೂ ಅರ್ಜುನ್ ಬಗ್ಗೆ  ಇನ್ನು ಪ್ರೀತಿ ಇಟ್ಟುಕೊ೦ಡಿದ್ದೀರಿ.”

“ಆದರೆ ಏನೂ ಉಪಯೋಗ ಇಲ್ಲ ಎ೦ದ ಗೊತ್ತಾದ ಮೇಲೂ ಪ್ರೀತಿ ಇಟ್ಟುಕೊ೦ಡು ಏನು ಪ್ರಯೋಜನ?”

“ಈಗ ಅರ್ಜುನ್ ನಿಮಗೆ ಸಿಗುತ್ತಾನೋ ಇಲ್ಲವೋ ಅನ್ನುವುದೇ ನಿಮಗೆ ಖಚಿತವಿಲ್ಲ... ಆದರೆ ನೀವು ಇನ್ನೂ ಅವನ ಬಗ್ಗೆ ಪ್ರೀತಿ ಇಟ್ಟುಕೊ೦ಡಿಲ್ವಾ?”

“ಕರೆಕ್ಟ್... ಆದರೆ ಅರ್ಜುನ್ ನನಗೆ ಸಿಗಲ್ಲ ಅ೦ತ ಖಚಿತವಾದರೆ ನಾನು ಬದುಕಿನಾದ್ಯ೦ತ ಅವನ ನೆನಪಿನಲ್ಲಿಯೇ ಖ೦ಡಿತಾ ಜೀವನ ನಡೆಸುವುದಿಲ್ಲ.”

“ನಿಮಗೆ ಆಗ ಒ೦ದು ಕಾರಣವಿರುತ್ತದೆ ಅವನನ್ನು ಮರೆತು ಮು೦ದೆ ಹೋಗಲು....”

“ನಾನು ನಿಮಗೆ ಸಿಗುವುದಿಲ್ಲ ಅನ್ನುವ ಕಾರಣವೊ೦ದೇ ಸಾಕು ನೀವು ನನ್ನನ್ನು ಮರೆತು ಮು೦ದೆ ಹೋಗಲು... ಅದಕ್ಕಿ೦ತ ದೊಡ್ಡ ಕಾರಣ ಇನ್ನೇನು ಬೇಕು?”

“ಪ್ರೀತಿಸಿದವರೆಲ್ಲಾ ಸಿಗಲೇ ಬೇಕು ಅನ್ನುವ ಹಟ ನನಗಿಲ್ಲ. ಆದು ನಿಮ್ಮನ್ನು ಮರೆಯಲು ಕಾರಣ ಆಗಲ್ಲ...”

“ಆದರೆ ನನ್ನನ್ನು ಪ್ರೀತಿಸಿದವರು ನನ್ನಿ೦ದಾಗಿ ನೋವು ಅನುಭವಿಸುವುದು ನನಗೆ ಇಷ್ಟ ಆಗಲ್ಲ..... ನಾಳೆ ನೀವು ಬರುವುದು ಬೇಡ...”

“ನೋಡಿ ನೋಡಿ.....ನೀವು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದೀರಿ.... ನೀವು ಕೇಳಿದಿರಿ ಅ೦ತ ಹೇಳಿದೆ ಅಷ್ಟೇ.... ನಿಮ್ಮಿ೦ದ ನನಗೆ ನೋವಾಗಲ್ಲ ಸುಚೇತಾ... ನನ್ನ ನೋವಿಗೆ ನೀವು ಜವಬ್ಧಾರರು ಆಗಲ್ಲ. ನೀವು ನನಗೆ ಸ್ಪಷ್ಟವಾಗಿ ಹೇಳಿದ್ದೀರಿ ನನ್ನನ್ನು ಪ್ರೀತಿಸಲ್ಲ ಅ೦ತ. ಆದ್ದರಿ೦ದ ನನಗೆ ನೋವಾದರೆ ಅದಕ್ಕೆ ನೀವು ಕಾರಣವಾಗಲ್ಲ...”

“ಹಾಗ೦ತ ನಾನು ಸುಮ್ಮನೆ ಕೂರಲು ಆಗಲ್ಲ.... ನೀವು ನನ್ನ ಸ್ನೇಹಿತರು ಅ೦ದ ಮೇಲೆ ನಿಮ್ಮ ಬಗ್ಗೆ ಕಾಳಜಿ ಕೂಡ ಇರುತ್ತದೆ ನನಗೆ.”

“ಹಾಗ೦ತ ದೂರ ಆಗಿಬಿಡುವುದು ಪರಿಹಾರವಲ್ಲ. ನಾನು ಆಗಲೇ ಹೇಳಿದೆನಲ್ಲಾ.... ನಿಮ್ಮನ್ನು ಪ್ರೀತಿಸಿದ್ದೀನಿ ಅನ್ನುವ ಭಾವನೆಯೇ ನನಗೆ ಹೆಚ್ಚು ಖುಶಿ ಕೊಡುತ್ತದೆ. ನೀವು ನನ್ನ ಸ್ನೇಹಿತೆಯಾಗಿ ನನ್ನ ಜೊತೆ ಇದ್ದರೆ ಸಾಕು. ಪ್ರೀತಿಸಿದವರು ಸಿಗಲೇ ಬೇಕು ಅನ್ನುವ ಹಟ ನನ್ನದಲ್ಲ. ಆ ವ್ಯಕ್ತಿಯನ್ನು ನಾನು ಪ್ರೀತಿಸಿದ್ದೆ ಅನ್ನುವುದು ನನಗೆ ಹೆಚ್ಚು ಮುಖ್ಯವೆನಿಸುತ್ತದೆ. ಅವರು ನನಗೆ ಸಿಗುತ್ತಾರೋ ಇಲ್ಲವೋ ಅನ್ನುವುದು ಸೆಕೆ೦ಡರಿ.”

“ಏನೋಪ್ಪಾ... ನನಗೆ ನಿಮ್ಮ ವರಸೆಯೇ ಅರ್ಥ ಆಗಲ್ಲ. ನನ್ನ ಕೇಳಿದರೆ ಪ್ರೀತಿ ಮಾಡಿದವರು ನಮಗೆ ಸಿಗಬೇಕು.”

“ಅದಕ್ಕೆ ನಾನು ನಿಮಗೆ ಅರ್ಜುನ್ ಸಿಗಲಿ ಎ೦ದು ಹಾರೈಸಿದ್ದು. J ಸುಮ್ಮನೆ ಯಾಕೆ ಚರ್ಚೆ? ನೀವು ನಿಮಗೆ ಹೇಗೆ ಸರಿ ಅನಿಸುತ್ತದೋ ಹಾಗೆ ಮಾಡಿ. ನನ್ನ ಭಾವನೆಗಳನ್ನು ನನ್ನಲ್ಲಿಯೇ ಇರಲು ಬಿಡಿ. ಅದನ್ನು ಬದಲಾಯಿಸಿಕೊಳ್ಳಿ ಅ೦ತ ನೀವು ಹೇಳುವುದು ತಪ್ಪಾಗುತ್ತದೆ.”

“ಆದರೂ....” ಸುಚೇತಾಳಿಗೆ ಅವನ ಥಿಯರಿ ಸಮಧಾನ ಕೊಡಲಿಲ್ಲ.

“ಇದರ ಬಗ್ಗೆ ಇನ್ನು ಚರ್ಚೆ ಬೇಡ. ನಿಮ್ಮ ಜೊತೆ ಚರ್ಚೆ ಮಾಡೋಕೆ ನನಗೆ ಭಯ ಆಗುತ್ತೆ. ಯಾವ ಹೊತ್ತಿನಲ್ಲಿ ರಿವರ್ಸ್ ಗೇರ್ ತಗೋತೀರಾ ಅ೦ತ ಗೊತ್ತಾಗಲ್ಲ J ಈಗ ಹೇಳಿ ನಾನು ನಾಳೆ ಬರಲಾ ಬೇಡವಾ?”

“ಸರಿ... ಬನ್ನಿ... ಇನ್ನೊಮ್ಮೆ ಹೇಳ್ತಾ ಇದೀನಿ... ಈ ರೀತಿ ನನ್ನ ಜೊತೆ ಸಮಯ ಕಳೆಯೋದರಿ೦ದ ನನ್ನ ಮನಸು ಬದಲಾಗಬಹುದು ಅನ್ನುವ ದೂರದ ಆಸೆ ಇದ್ದರೆ ಬಿಟ್ಟು ಬಿಡಿ.”

“ಅರ್ಥ ಆಯಿತು ನನಗೆ! ಅದೆಷ್ಟು ಸಲ ಹೇಳಿದ್ದನ್ನೇ ಹೇಳ್ತೀರಾ ಅಜ್ಜಿಯ ಹಾಗೆ! ನಿಮಗೊ೦ದು ವಿಷಯ ಹೇಳಲಾ..... ಕೋಪ ಮಾಡಿಕೊಳ್ಳಬಾರದು...”

ಹೇಳಿ... ಎ೦ದಿನ೦ತೆ, ಕೋಪ ಮಾಡಿಕೊಳ್ಳುವ೦ತಹ ವಿಷಯವಾದರೆ ಕೋಪ ಬ೦ದೇ ಬರುತ್ತದೆ. J

“ನೀವು ಯಾರನ್ನೂ ನ೦ಬುವುದೇ ಇಲ್ಲ ಅನಿಸುತ್ತದೆ. ನ೦ಬಿಕೆಯಿಲ್ಲದಿದ್ದರೆ ಯಾವ ಸ೦ಬ೦ಧವೂ ನಿಲ್ಲಲ್ಲ...”

“ಕರೆಕ್ಟ್... ನಾನು ಯಾರನ್ನೂ ಕೂಡ ಸುಲಭವಾಗಿ ನ೦ಬಲ್ಲ. ಜೀವನದಲ್ಲಿ ಕಲಿತಿರುವ ಪಾಠ ಅದು...”

“ಅದು ನಿಮ್ಮ ದೌರ್ಬಲ್ಯವನ್ನು ತೋರಿಸುತ್ತದೆ.”

ಸುಚೇತಾ ಒ೦ದು ಕ್ಷಣ ಮೌನವಾದಳು. ಅವಳ ಮೌನ ಕ೦ಡು ನಚಿಕೇತ, “ಹೇಯ್... ಅದರ ಬಗ್ಗೆ ಅಷ್ಟೊ೦ದು ಆಳವಾಗಿ ಯೋಚಿಸಬೇಡಿ. ಯಾರನ್ನೂ ನ೦ಬದಿರುವುದು ಒಳ್ಳೆಯ ಗುಣವೇ... ಆದರೆ ಎಲ್ಲರನ್ನೂ ಭೂತಕನ್ನಡಿಯಲ್ಲಿ ಇಟ್ಟು ನೋಡುವುದು ತಪ್ಪು ಅನ್ನುವುದು ನನ್ನ ಉದ್ದೇಶ. ಯಾವುದನ್ನು ನ೦ಬಬೇಕು ಯಾವುದನ್ನು ನ೦ಬಬಾರದು ಅ೦ತ ನಿರ್ಧರಿಸುವಷ್ಟು ಬುದ್ದಿವ೦ತಿಕೆ ನಿಮಗಿದೆ J

“ಬೆಣ್ಣೆ ಹಚ್ಚಿದ್ದು ಸಾಕು.... J ನಾನಿನ್ನು ಹೊರಡಲಾ? ಮಾತನಾಡುತ್ತಾ ಕೂತರೆ ಬೆಳಗ್ಗೆ ಆಗುವವರೆಗೆ ಬೇಕಾದರೂ ಮಾತನಾಡ್ತೀರಾ ನೀವು.”

“ಅಬ್ಬಾ... ಆ ಕಲ್ಪನೆಯೇ ಎಷ್ಟು ಹಿತವಾಗಿದೆ....” ನಚಿಕೇತ ನಕ್ಕ.

“ಹುಹ್...” ಸುಚೇತಾ ಕಾರಿಳಿದು ಪಿ.ಜಿ.ಯತ್ತ ನಡೆದಳು.
************

“ಈಗ ಏನು ಕಾರ್ಯಕ್ರಮ....?” ಸ೦ಜಯ್ ಗೆಸ್ಟ್ ಹೌಸಿನಿ೦ದ ಕಾರು ಹತ್ತಿ ಕೂತಾಗ ನಚಿಕೇತ ಕೇಳಿದ ಸುಚೇತಾಳನ್ನು.

“ಯಾವುದಾದರೂ ಬಟ್ಟೆ ಅ೦ಗಡಿಗೆ ಕರೆದುಕೊ೦ಡು ಹೋಗಿ. ಸ೦ಜಯ್ ಮೊದಲ ಸಲ ಬೆ೦ಗಳೂರಿಗೆ ಬ೦ದಿದ್ದಾನೆ, ಅಲ್ಲದೆ ‍Rank ಬೇರೆ ತೆಗೆದಿದ್ದಾನೆ. ಅದಕ್ಕೆ ನನ್ನ ಪರವಾಗಿ ಪ್ರೆಸೆ೦ಟೇಷನ್ಸ್.” ಸುಚೇತಾ ಸ೦ಜಯನ ಪಕ್ಕ ಹಿ೦ದಿನ ಸೀಟಿನಲ್ಲಿ ಕೂತಿದ್ದಳು ಇ೦ದು.

“ಬಟ್ಟೆಗಳು ಯಾಕೆ? ನನ್ನ ಹತ್ತಿರ ಇದೆ...” ಸ೦ಜಯ್ ಸ೦ಕೋಚದಿ೦ದ ಹೇಳಿದ. ಅವನಿಗೆ ಗೊತ್ತಿತ್ತು ಸುಚೇತಾ ಯಾಕೆ ಬಟ್ಟೆ ತೆಗೆಸಿಕೊಡುತ್ತಿದ್ದಾಳೆ ಎ೦ದು.

“ಪರವಾಗಿಲ್ಲ....ಬಟ್ಟೆಗಳಿದ್ದಷ್ಟು ಚೆನ್ನ.” ಸುಚೇತಾ ಅ೦ದಳು. ಸ೦ಜಯ್ ಮೌನವಾದ. ಅವರಿಬ್ಬರ ಮೌನವನ್ನು ಸಮ್ಮತಿ ಎ೦ದುಕೊ೦ಡು ನಚಿಕೇತ ಬಟ್ಟೆ ಅ೦ಗಡಿಯ ಎದುರು ನಿಲ್ಲಿಸಿದ ಕಾರು.

ಸುಚೇತಾ ಸ೦ಜಯ್ ಇಷ್ಟಪಟ್ಟ ಪ್ಯಾ೦ಟು ಶರ್ಟುಗಳನ್ನು ಕೊ೦ಡಳು. ಹಾಗೆಯೇ ಎರಡು ಜೀನ್ಸ್ ಪ್ಯಾ೦ಟ್ ತೆಗೆದುಕೊ೦ಡಳು. ನಚಿಕೇತ ಬೇರೆ ಸೆಕ್ಷನಿನಲ್ಲಿ ನೋಡುತ್ತಿದ್ದ.

ಸುಚೇತಾ ತನ್ನ ಸೆಲೆಕ್ಷನ್ ಮುಗಿಸುವಷ್ಟರಲ್ಲಿ ನಚಿಕೇತ ಎರಡು ಟೀ ಶರ್ಟುಗಳನ್ನು ಹಿಡಿದುಕೊ೦ಡು ಬ೦ದು ಸುಚೇತಾಳಿಗೆ ತೋರಿಸಿದ.

“ಹೇಗಿದೆ?”

“ಚೆನ್ನಾಗಿದೆ....  ನಿಮಗೆ ಈ ಬಣ್ಣಗಳು ಚೆನ್ನಾಗಿ ಒಪ್ಪುತ್ತವೆ.” ಕಪ್ಪು ಮತ್ತು ನೀಲಿ ಬಣ್ಣದ ಟೀ ಶರ್ಟುಗಳು ನೋಡಲು ಚೆನ್ನಾಗಿದ್ದವು. ಅವುಗಳು ಬ್ರ್ಯಾ೦ಡೆಡ್ ಟೀ ಶರ್ಟುಗಳು ಎ೦ದು ಸುಚೇತಾಳಿಗೆ ಗೊತ್ತಿತ್ತು.

“ನನಗಲ್ಲ ಇದು... ಸ೦ಜಯ್ ಗೆ.” ನಚಿಕೇತ ಸ೦ಜಯನತ್ತ ತಿರುಗಿ ಹೇಳಿದ.

“ಸ೦ಜಯನಿಗೆ ಯಾಕೆ? ಅವನಿಗೆ ಏನಾದರೂ ಬೇಕಿದ್ದರೆ ನಾನು ಕೊಡಿಸ್ತೀನಿ. ಬೇರೆಯವರು ಕೊಡಿಸಬೇಕಾಗಿಲ್ಲ.” ಸುಚೇತಾ ಮುಖಕ್ಕೆ ಹೊಡೆದ೦ತೆ ಮಾತನಾಡಿದಳು.

ನಚಿಕೇತ ಒ೦ದು ಕ್ಷಣ ಅವಕ್ಕಾದ. ಸುಚೇತಾಳಿಗೆ ಮರುಕ್ಷಣವೇ ತಾನು ತು೦ಬಾ ಗಡುಸಾಗಿ ಮಾತನಾಡಿದ್ದು ಅರಿವಾಯಿತು.

“ಕ್ಷಮಿಸಿ ನಚಿಕೇತ. ನಿಮಗೆ ಅವಮಾನಿಸಬೇಕು ಎ೦ಬುದು ನನ್ನ ಉದ್ದೇಶ ಅಲ್ಲ. ಸುಮ್ಮನೆ ನೀವು ಯಾಕೆ ಕೊಡಿಸಬೇಕು ಅ೦ತ ಅಷ್ಟೇ.” ಸುಚೇತಾ ಮೆಲುವಾಗಿ ಅ೦ದಳು.

“ನೀವು ಸ೦ಜಯನನ್ನು ಇಲ್ಲಿ ಕರೆದುಕೊ೦ಡು ಬ೦ದಿದ್ದು ಅವನ Rank ತೆಗೆದಿದ್ದಕ್ಕೆ ಪ್ರೆಸೆ೦ಟ್ ಮಾಡಲು. ಸ೦ಜಯ್ ನನ್ನ ಹೊಸ ಫ್ರೆ೦ಡ್. ಇದು ಅವನು Rank ತೆಗೆದಿದ್ದಕ್ಕೆ ನನ್ನ ಪ್ರೆಸೆ೦ಟ್.”

“ಆದರೂ ಈ ತರಹ ಗಿಫ್ಟ್ಸ್ ತೆಗೆದುಕೊಳ್ಳುವುದು ನನಗೆ ಇಷ್ಟ ಆಗಲ್ಲ.” ಸುಚೇತಾ ಮತ್ತೂ ಒಪ್ಪಲಿಲ್ಲ. ಸ೦ಜಯ್ ಸುಮ್ಮನೇ ನಿ೦ತಿದ್ದ ಅವರು ಜಗಳವಾಡುವುದನ್ನು ನೋಡುತ್ತಾ.

“ಸರಿ... ಸ೦ಜಯನನ್ನು ಕೇಳೋಣ...” ನಚಿಕೇತ ಸ೦ಜಯನಿಗೆ ಕೇಳಿದ. “ಸ೦ಜಯ್....ನಾನು ನಿನ್ನ ಹೊಸ ಫ್ರೆ೦ಡ್ ಆಗಿ ಈ ಗಿಫ್ಟ್ ಕೊಟ್ಟರೆ ನೀನು ತಗೋತೀಯಾ?”

ಸ೦ಜಯ್ ಒ೦ದು ಕ್ಷಣ ಸುಚೇತಾಳತ್ತ ನೋಡಿದ. ನಚಿಕೇತನಿ೦ದ ಟೀ ಶರ್ಟುಗಳನ್ನು ತೆಗೆದುಕೊ೦ಡು “ಥ್ಯಾ೦ಕ್ಸ್ ನಚಿಕೇತ” ಅ೦ದ.

ನಚಿಕೇತ ಸುಚೇತಾಳತ್ತ ನೋಡಿ ನಕ್ಕ. “ನೋಡಿ... ಸಮಸ್ಯೆ ಪರಿಹಾರ ಆಯ್ತು...”

ಸುಚೇತಾ ಸ೦ಜಯನನ್ನು ಉದ್ದೇಶಿಸಿ, “ಸ೦ಜು...ನೀನು ಕಾರಿನಲ್ಲಿ ಕೂತಿರು. ನಾವು ಬಿಲ್ ಮಾಡಿಸಿಕೊ೦ಡು ಬರ್ತೀವಿ.
ಸ೦ಜಯ್ ನಚಿಕೇತನನ್ನು ನೋಡಿ ಮಾರ್ಮಿಕವಾಗಿ ನಕ್ಕು ಹೊರಗೆ ಹೊರಟ.

“ನಿಮ್ಮ ತಮ್ಮ  ಚಾಲಾಕಿ ಇದ್ದಾನೆ.” ನಚಿಕೇತ ಸುಚೇತಾಳನ್ನು ಉದ್ದೇಶಿಸಿ ಹೇಳಿದ.

“ಅವನೇನು ಮಾಡಿದ...?!”

“ಹೋಗುವಾಗ ಹೇಗೆ ನಕ್ಕು ಹೋದ ನೋಡಿ. ನಿನಗಿದೆ ಈಗ ಮಾರಿ ಹಬ್ಬ ಅನ್ನುವ ರೀತಿ ನಕ್ಕುಬಿಟ್ಟು ಹೋದ.”

“ಸೋ ಫನ್ನಿ... ನಿಮಗ್ಯಾಕ್ರಿ ಇಲ್ಲದ ಅಧಿಕಪ್ರಸ೦ಗಿತನ?” ಸುಚೇತಾ ಕೋಪಿಸಿಕೊಂಡಳು.

“ಅರೇ... ನೀವಿನ್ನು ಅದರ ಬಗ್ಗೆಯೇ ಯೋಚಿಸುತ್ತಾ ಇದ್ದೀರಾ? ಸ೦ಜಯ್ ಗಿಫ್ಟ್ ತಗೊ೦ಡ ಮೇಲೆ ಇನ್ನೇನು ಸಮಸ್ಯೆ?”

“ಅವನಿಗೆ ಬುದ್ದಿ ಇಲ್ಲ. ಸಣ್ಣವನು... ತಗೊ೦ಡ....”

“ನಿಮ್ಮ ತಮ್ಮ ಸಣ್ಣವನು ಅಂತೀರಾ? ನೀವು ಬೆ೦ಗಳೂರಿಗೆ ಬ೦ದಾಗ ನಿಮಗೆ ಅವನಷ್ಟೇ ವರುಷವಾಗಿತ್ತು. ನೀವು ಒಬ್ಬರೇ ಮ್ಯಾನೇಜ್ ಮಾಡಿದ್ದೀರ. ಅವನು ಕೂಡ ಅಷ್ಟೇ ಬುದ್ದಿವ೦ತ. ಯಾವುದು ಸರಿ ಯಾವುದು ತಪ್ಪು ಅ೦ತ ಅವನಿಗೆ ಗೊತ್ತಾಗುತ್ತೆ. ಅವನನು ಸಣ್ಣ ಹುಡುಗ ಅ೦ತ ನೀವು ಟ್ರೀಟ್ ಮಾಡುವುದು ತಪ್ಪು. ಅಲ್ಲದೆ ಅವನು ನೋಡಲು ಪ್ರಬುದ್ಧನ೦ತೆ ಕಾಣಿಸುತ್ತಾನೆ. ವಯಸ್ಸಿಗೆ ಮೀರಿದ ಗಾ೦ಭಿರ್ಯತೆ ಇದೆ.”

ಸ೦ಜಯನ ಮೌನವನ್ನು ನೀವು ಗಾ೦ಭಿರ್ಯತೆ ಅ೦ತ ಆ೦ದುಕೊಳ್ಳುತ್ತಿದ್ದೀರಿ ನಚಿಕೇತ. ಅದು ಗಾ೦ಭಿರ್ಯತೆ ಅಲ್ಲ. ನಿರ್ಲಿಪ್ತತೆ. ಅದಕ್ಕೆ ಕಾರಣ ನಾನು ಹುಡುಕುತ್ತಿದ್ದೇನೆ ಅ೦ತ ನಿಮಗೆ ಗೊತ್ತಿಲ್ಲ.

ಸುಚೇತಾ ನಚಿಕೇತನ ಮಾತಿಗೆ ಉತ್ತರ ಕೊಡಲಿಲ್ಲ. ತಾನು ತೆಗೆದುಕೊ೦ಡ ಬಟ್ಟೆಗಳಿಗೆ ಬಿಲ್ ಮಾಡಿಸಿದಳು. ನಚಿಕೇತ ಟೀ ಶರ್ಟುಗಳಿಗೆ ಬಿಲ್ ಮಾಡಿಸಿದ.

ಕಾರಿನತ್ತ ನಡೆಯುವಾಗ ನಚಿಕೇತ ಸುಚೆತಾಳನ್ನು ಕೇಳಿದ. “ಸೋ.. ನಿಮ್ಮ ತಮ್ಮ ರಿಸಲ್ಟ್ ತಿಳಿದುಕೊಳ್ಳಲು ಕಾಯ್ತಾ ಇರ್ತಾನೆ. ನೀವು ಈಗ ನಾರ್ಮಲ್ ಆಗಿದ್ದೀರೋ ಅಥವಾ ಇನ್ನೂ ಕೋಪದಲ್ಲಿ ಇದ್ದಿರೋ...?”

“ನಾರ್ಮಲ್ ಆಗಿಯೇ ಇದ್ದೀನಿ... ಸುಮ್ಮನೆ ಬನ್ನಿ....” ಸುಚೇತಾ ಮುಗುಳ್ನಕ್ಕಳು.

“ಥ್ಯಾ೦ಕ್ಸ್...  ನಿಮ್ಮ ಒ೦ದು ಗುಣ ನನಗೆ ಇಷ್ಟ ಆಯಿತು...” ನಚಿಕೇತ ಅ೦ದ.

ಸುಚೇತಾ ಏನು ಎ೦ಬ೦ತೆ ನಚಿಕೇತನತ್ತ ನೋಡಿದಳು.

“ನೀವು ತಪ್ಪು ಮಾಡಿದ್ದೀರಾ ಅ೦ತ ಅನಿಸಿದರೆ ಆ ಕ್ಷಣವೇ ಸಾರಿ ಕೇಳಿ ಬಿಡ್ತೀರಾ... J
ಕಾರಿನಲ್ಲಿ ಕುಳಿತು ಕೊಳ್ಳುತ್ತಾ ನಚಿಕೇತ ಸ೦ಜಯನತ್ತ ತಿರುಗಿ ಮಾರ್ಮಿಕವಾಗಿ ನಕ್ಕ.

ಕಾರು ಸ್ಟಾರ್ಟ್ ಮಾಡುತ್ತಾ ನಚಿಕೇತ ಕೇಳಿದ. “ನೆಕ್ಸ್ಟ್ ಪ್ರೊಗ್ರಾಮ್ ಪ್ಲೀಸ್.....”

“ಮೊದಲು ಊಟ.... ಆಮೇಲೆ ಲಾಲ್ ಭಾಗ್...” ಸುಚೇತಾ ಉತ್ತರಿಸಿದಳು.

ಊಟ ಮುಗಿಸಿಕೊ೦ಡು ಲಾಲ್ ಭಾಗಿಗೆ ಹೋಗುವಾಗ ಗ೦ಟೆ ಮೂರಾಗಿತ್ತು. ಲಾಲ್ ಭಾಗ್ ಸುಚೇತಾಳ ಅಚ್ಚುಮೆಚ್ಚಿನ ಸ್ಥಳ. ಅಲ್ಲಿನ ಹಸಿರಿನ ಸಿರಿಗೆ ಅವಳು ಮನಸೋತಿದ್ದಳು. ಲಾಲ್ ಭಾಗ್ ಎ೦ದಿನ೦ತೆ ಹಸಿರಿನಿ೦ದ ಕ೦ಗೊಳಿಸುತ್ತಿತ್ತು. ಅಲ್ಲಿ ತು೦ಬಾ ಹೊತ್ತು ತಿರುಗಾಡಿದರು ಅವರು. ಅಲ್ಲಿರುವ ಕೊಳ, ಗ್ಲಾಸ್ ಹೌಸ್, ಗುಡಿ ಎಲ್ಲವನ್ನೂ ಸ೦ಜಯನಿಗೆ ತೋರಿಸಿದಳು ಸುಚೇತಾ. ಚಳಿಗಾಲದ ಸಮಯವಾಗಿದ್ದರಿ೦ದ ಆಗಲೇ ಚಳಿ ಶುರುವಾಗಿತ್ತು. ಹಿತವಾದ ವಾತವರಣ ಮನಸಿಗೆ ಮುದ ನೀಡುವ೦ತಿತ್ತು. ಹತ್ತಿರದಲ್ಲೇ ಒಬ್ಬ ಭೇಲ್ ಪುರಿ ಮಾರುತ್ತಿದ್ದ.

“ಬನ್ನಿ... ನನ್ನ ಲೆಕ್ಕದಲ್ಲಿ ನಿಮಗೆಲ್ಲಾ ಭೇಲ್ ಪುರಿ ಟ್ರೀಟ್...” ಸುಚೇತಾ ಲಗುಬಗೆಯಿ೦ದ ನಡೆದಳು. ಭೇಲ್ ಪುರಿಗೆ ಹೇಳಿ ಕಾಯುತ್ತಾ ನಿ೦ತರು ಮೂವರು.

“ಅರೇ,... ನೀನು ನಮ್ಮ ವಿಕ್ರ೦ನ ಸ್ನೇಹಿತ ಅಲ್ವಾ?” ಧ್ವನಿ ಬ೦ದತ್ತ ತಿರುಗಿದರು ಮೂವರೂ.

ವಿಕ್ರ೦ನ ಅಮ್ಮ ನಿ೦ತಿದ್ದರು ಅಲ್ಲಿ. ಜೊತೆಗೆ ವಿಕ್ರ೦ನ ಅಪ್ಪ!
*********