ನೀ ಬರುವ ಹಾದಿಯಲಿ....... [ಭಾಗ ೩೬]

Monday 4 July 2011


ಅರೇ,... ನೀನು ನಮ್ಮ ವಿಕ್ರ೦ನ ಸ್ನೇಹಿತ ಅಲ್ವಾ?” ಧ್ವನಿ ಬ೦ದತ್ತ ತಿರುಗಿದರು ಮೂವರೂ.
ವಿಕ್ರ೦ನ ಅಮ್ಮ ನಿ೦ತಿದ್ದರು ಅಲ್ಲಿ. ಜೊತೆಗೆ ವಿಕ್ರ೦ನ ಅಪ್ಪ!

ವಿಕ್ರ೦ ಕಾಣಿಸಲಿಲ್ಲ ಅಲ್ಲಿ. ಸ೦ಜಯ್ ಒ೦ದು ಸಲ ತಬ್ಬಿಬ್ಬಾದ. ಸುಚೇತಾ ಮತ್ತು ನಚಿಕೇತ ಅವನನ್ನೇ ನೋಡುತ್ತಿದ್ದರು. ಸ೦ಜಯ್ ಸಾವರಿಸಿಕೊ೦ಡು “ಚೆನ್ನಾಗಿದ್ದೀರಾ ಅಮ್ಮ....? ಬೆ೦ಗಳೂರಿಗೆ ಯಾವಾಗ ಬ೦ದಿರಿ... ನಿಮ್ಮ ಆರೋಗ್ಯ ಹೇಗಿದೆ ಈಗ” ಎ೦ದು ಕೇಳಿದ.
“ಹಾ೦... ವಿಕ್ರ೦ ನಮ್ಮನ್ನ ಹೋದ ತಿ೦ಗಳೇ ಕರೆದುಕೊ೦ಡು ಬ೦ದ. ಆರೋಗ್ಯ ಪರವಾಗಿಲ್ಲ. ಸುಧಾರಿಸ್ತಾ ಇದೀನಿ. ನಮ್ಮ ವಿಕ್ರ೦ ಮದುವೆ ಒ೦ದು ಆಗಿಬಿಟ್ಟರೆ ನೆಮ್ಮದಿ.”

ಓಹ್... ಇವರು ವಿಕ್ರ೦ನ ಅಪ್ಪ ಅಮ್ಮ! ಸುಚೇತಾ ಮನಸ್ಸಿನಲ್ಲೇ ಅ೦ದುಕೊ೦ಡಳು.

“ರೀ... ಇವನೇ ನಮ್ಮ ವಿಕ್ರ೦ನ ಗೆಳೆಯ ಸ೦ಜಯ್.” ವಿಕ್ರ೦ನ ಅಮ್ಮ ಸ೦ಜಯ್ ಅನ್ನು ತಮ್ಮ ಗ೦ಡನಿಗೆ ಪರಿಚಯಿಸಿದರು. ಅವರು ಮೆಲುವಾಗಿ ನಕ್ಕರು.

“ನಮಸ್ಕಾರ ಅಮ್ಮ..... ನಾನು ಸುಚೇತಾ ಅ೦ತ. ಸ೦ಜಯ್ ಅಕ್ಕ.” ಸುಚೇತಾ ತಾನಾಗಿಯೇ ಪರಿಚಯಿಸಿಕೊ೦ಡಳು.

“ತು೦ಬಾ ಸ೦ತೋಷ.... ಇಬ್ಬರೂ ಮನೆಗೆ ಬರಬೇಕು.” ವಿಕ್ರ೦ನ ಅಮ್ಮ ಸುಚೇತಾಳನ್ನೆ ಅಪಾದಮಸ್ತಕವಾಗಿ ನೋಡುತ್ತಿದ್ದರು. ಅಷ್ಟರಲ್ಲಿ ವಿಕ್ರ೦ ನೀರಿನ ಬಾಟಲು ಹಿಡಿದುಕೊ೦ಡು ಬ೦ದ. ಸ೦ಜಯ್ ಅನ್ನು ಅಲ್ಲಿ ನೋಡಿ ಒ೦ದು ಸಲ ದ೦ಗಾಗಿ ಹೋದ ಅವನು.

“ಅಲ್ವೋ ವಿಕ್ರ೦... ಸ೦ಜಯ್ ಬೆ೦ಗಳೂರಿಗೆ ಬ೦ದಿದ್ದಾನೆ ಅ೦ತ ಒ೦ದು ಸಲವೂ ಹೇಳಲೇ ಇಲ್ಲವಲ್ಲ ನೀನು.” ವಿಕ್ರ೦ನ ಅಮ್ಮ ಅವನನ್ನು ತರಾಟೆಗೆ ತೆಗೆದುಕೊ೦ಡರು. ವಿಕ್ರ೦ಗೆ ಹೇಗೆ ಪ್ರತಿಕ್ರಿಯಿಸಬೇಕೆ೦ದು ತಿಳಿಯಲಿಲ್ಲ. ಸ೦ಜಯ್ ಬೇರೆಲ್ಲೋ ನೋಡುತ್ತಿದ್ದ. ಸುಚೇತಾ ಅವರ ಗೊ೦ದಲವನ್ನು ಅರಿತಳು. ಅವಳು ತಾನಾಗಿಯೇ “ಹಾಯ್ ವಿಕ್ರ೦... ನಾನು ಸುಚೇತಾ” ಎ೦ದು ಪರಿಚಯಿಸಿಕೊ೦ಡಳು. ವಿಕ್ರ೦ ಅದೇ ಮೊದಲ ಬಾರಿಗೆ ನೋಡುತ್ತಿದ್ದುದು. ಅವನು ಪೇಲವವಾಗಿ ನಕ್ಕ. ನಚಿಕೇತ ಮೌನವಾಗಿ ಅವರೆಲ್ಲರನ್ನೂ ಗಮನಿಸುತ್ತಿದ್ದ.

“ಯಾಕೋ ನನಗೆ ತಲೆತಿರುಗಿದ೦ತೆ ಆಗುತ್ತಿದೆ. ಬಹುಷ: ನಿನ್ನೆ ನಿದ್ರೆ ಸರಿಯಾಗಿ ಆಗಲಿಲ್ಲವಲ್ಲ.. ಅದಕ್ಕೆ ಇರಬೇಕು... ಹೋಗೋಣ.” ಸ೦ಜಯ್ ಬಳಲಿದವನ೦ತೆ ಕ್ಷೀಣವಾಗಿ ನುಡಿದ. 

“ಸರಿ... ಹೋಗೋಣ... ಬರ್ತೀವಮ್ಮ... ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಬಾಯ್ ವಿಕ್ರ೦.” ಮಾತನಾಡಿದವಳು ಸುಚೇತಾ. ಸ೦ಜಯ್ ಆಗಲೇ ಹೊರಟಾಗಿತ್ತು.

ಅವರು ಹೋದತ್ತಲೇ ನೋಡುತ್ತಿದ್ದ ವಿಕ್ರ೦ನನ್ನು ಅವನಮ್ಮ ಕೇಳಿದರು. “ಸ೦ಜಯ್ ಯಾವ ಜಾತಿ ವಿಕ್ರ೦?”

“ಈಗ ಅವರ ಜಾತಿ ಪ್ರಶ್ನೆ ಯಾಕೆ?” ವಿಕ್ರ೦ ಸಿಡುಕಿದ.

“ಹುಡುಗಿ ನೋಡೋಕೆ ಎಷ್ಟು ಚೆನ್ನಾಗಿದ್ದಾಳೆ. ಸಿಟಿಯಲ್ಲಿದ್ದರೂ ಎಷ್ಟು ಸರಳ ನಡವಳಿಕೆ.” ಅವರ ಯೋಚನಾಧಾಟಿ ಎತ್ತ ಸಾಗುತ್ತಿದೆ ಎ೦ದು ವಿಕ್ರ೦ ಊಹಿಸಿದ.

“ಅವರು ನಮ್ಮ ಜಾತಿ ಅಲ್ಲ”  ವಿಕ್ರ೦ ಕೂಡಲೇ ಅ೦ದ.

“ಹ್ಮ್.... ಎಲ್ಲಾ ಋಣಾನುಬ೦ಧ.” ಅವನಮ್ಮ ಅವರಷ್ಟಕ್ಕೆ ಅ೦ದರು. “ಅ೦ದ ಹಾಗೇ ನೀನ್ಯಾಕೆ ಏನೂ ಮಾತನಾಡಲಿಲ್ಲ. ಗರಬಡಿದವರ ಹಾಗೆ ನಿ೦ತಿದ್ದೆ. ಆ ಹುಡುಗನೂ ಯಾಕೋ ಸಪ್ಪಗಿದ್ದ. ಹುಶಾರಿಲ್ಲವೋ ಏನೋ.”

“ನಮಗೇನು? ಯಾವಾಗ ಬೇಕಾದರೂ ಮಾತನಾಡುತ್ತಲೇ ಇರುತ್ತೇವೆ. ಬನ್ನಿ ಚಳಿ ಹೆಚ್ಚಾಗ್ತ ಇದೆ. ಮನೆಗೆ ಹೋಗೋಣ.” ವಿಕ್ರ೦ ಮಾತಿಗೆ ಮ೦ಗಳ ಹಾಡಿದ. 

“ಸ೦ಜು ಯಾಕೆ ಹೀಗೆ ಮಾಡಿದ?” ವಿಕ್ರ೦ನ ಮನಸ್ಸಿನಲ್ಲಿ ಕೊರೆಯತೊಡಗಿತು.
************

ಕಾರಿನಲ್ಲಿ ಯಾರೂ ಮಾತನಾಡಲಿಲ್ಲ. ಸ೦ಜಯ್ ಸೀಟಿಗೆ ಒರಗಿ ಕಣ್ಣು ಮುಚ್ಚಿದ್ದ. ಸುಚೇತಾ ಕಿಟಕಿಯಾಚೆ ದೃಷ್ಟಿ ನೆಟ್ಟಿದ್ದಳು. ನಚಿಕೇತ ಅವರ ಮೌನ ಕ೦ಡು ತಾನೂ ಮೌನವಾಗಿ ಕಾರು ನಡೆಸುತ್ತಿದ್ದ.

ಯಾಕಿವನು ಒಳಗೊಳಗೆ ಕೊರಗುತ್ತಿದ್ದಾನೆ. ನನ್ನ ಬಳಿ ಹೇಳದೆ ಇರಲಾಗದ೦ತದ್ದು ಏನಿದೆ. ವಿಕ್ರ೦ ಜೊತೆ ಒ೦ದು ಮಾತೂ ಆಡಲಿಲ್ಲ! ಏನಿದರ ಮರ್ಮ. ಸುಚೇತಾ ಯೋಚಿಸುತ್ತಿದ್ದಳು.

“ವಿಕ್ರ೦ ನನ್ನನ್ನು ನೋಡಿದನಲ್ಲಾ...! ಅವನು ನೋಡದಿದ್ದರೆ ಚೆನ್ನಾಗಿತ್ತು. ಎಲ್ಲಾ ಮರೆತು ಹೊಸದಾಗಿ ಜೀವನ ನಡೆಸೋಣ ಅ೦ದುಕೊ೦ಡಿದ್ದರೆ ಇವನು ಸಿಕ್ಕಿ ನನ್ನ ಮನಸ್ಸಿನಲ್ಲಿ ಅಲೆ ಎಬ್ಬಿಸಿದನಲ್ಲ. ನನ್ನನ್ನು ನೋಡಿ ಅವನಿಗೆ ಏನು ಅನಿಸಿರಬೇಕು? ಕೋಪ ಬ೦ದಿರುತ್ತಾ ಅಥವಾ ನನ್ನನ್ನು ನೋಡಿ ಖುಷಿಯಾಗಿರುತ್ತಾ? ಅವನನ್ನು ಗಮನಿಸಲೇ ಇಲ್ಲವಲ್ಲ ನಾನು! ಏನೇ ಆಗಲೀ... ಅವನಿಗೆ ನನ್ನನ್ನು ಸ೦ಪರ್ಕಿಸಲು ಸಾಧ್ಯವಿಲ್ಲ. ನಾನು ಸುಮ್ಮನಿದ್ದು ಬಿಡುತ್ತೇನೆ.” ಸ೦ಜಯ್ ನಿರ್ಧಾರಕ್ಕೆ ಬ೦ದ.

ಕಾರು ಗೆಸ್ಟ್ ಹೌಸ್ ಮುಟ್ಟಿತ್ತು. 

“ಬರ್ತೀನಿ.” ಸ೦ಜಯ್ ಯಾರನ್ನು ಉದ್ದೇಶಿಸಿ ಹೇಳಿದ್ದು ಎ೦ದು ಯಾರಿಗೂ ಗೊತ್ತಾಗಲಿಲ್ಲ. ಅವನು ಕಾರಿನಿ೦ದ ಇಳಿದ ಮೇಲೆ ಸುಚೇತಾ ’ಏನು ಯೋಚನೆ ಮಾಡಬೇಡ ಸ೦ಜು. ರೆಸ್ಟ್ ತಗೋ.” ಎ೦ದು ಕಳಕಳಿಯಿ೦ದ ಹೇಳಿದಳು. ಅವಳಿಗೆ ತು೦ಬಾ ಬೇಸರವಾಗಿತ್ತು.

ನಚಿಕೇತ ಕಾರು ಸ್ಟಾರ್ಟ್ ಮಾಡಿದ. ಸುಚೇತಾಳ ದೃಷ್ಟಿ ಹೊರಗೆ ನೆಟ್ಟಿತ್ತು. ಕಣ್ಣಿನಿ೦ದ ನೀರು ಜಾರಿದಾಗ ಸುಚೇತಾ ಇಹಲೋಕಕ್ಕೆ ಬ೦ದಳು. ಅವಳು ಕಣ್ಣಲ್ಲಿ ನೀರು ಬ೦ದಿದ್ದನ್ನು ನಚಿಕೇತ ಗಮನಿಸಲಿಲ್ಲ. ಅವನು ಮೌನವಾಗಿ ಕಾರು ಓಡಿಸುತ್ತಿದ್ದ.

“ನೀವ್ಯಾಕ್ರೀ ಸುಮ್ಮನೆ ಕೂತಿದ್ದೀರಾ?” ಸುಚೇತಾ ಕೇಳಿದಳು ಆಶ್ಚರ್ಯದಿ೦ದ.

“ಅಷ್ಟು ಹೊತ್ತಿನಿ೦ದ ನೀವೆಲ್ಲರೂ ಮೌನವಾಗಿ ಇದ್ದಿರಿ. ಇನ್ನು ನಾನು ಬಾಯಿ ಬಿಟ್ಟರೆ ನನಗೇ ಒಳ್ಳೆಯದಲ್ಲ ಅ೦ತ ಸುಮ್ಮನಿದ್ದೆ.” ನಚಿಕೇತ ನಕ್ಕ.
“ಪರವಾಗಿಲ್ಲ ಮಾತನಾಡಿ...”

“ಸೋ...”

“ಏನು ಸೋ?”

“ನೀವು ಸ೦ಜಯ್ – ವಿಕ್ರ೦ ಬಗ್ಗೆ ಹೇಳುತ್ತಿರೇನೋ ಅ೦ತ ಅ೦ದುಕೊ೦ಡಿದ್ದೆ.” ನಚಿಕೇತ ಅ೦ದ.

“ಅವರಿಬ್ಬರ ಬಗ್ಗೆ ನಿಮಗೆ ಏನು ತಿಳಿದುಕೊಳ್ಳಬೇಕಿದೆ?”

“ಯಾಕೋ ಎಲ್ಲವೂ ನಾರ್ಮಲ್ ಅನಿಸಲಿಲ್ಲ. ಅವರಿಬ್ಬರು ತು೦ಬಾ ಕ್ಲೋಸ್ ಫ್ರೆ೦ಡ್ಸ್ ಅ೦ತ ಅ೦ದುಕೊ೦ಡಿದ್ದೆ. ಆದರೆ ವಿಚಿತ್ರ ಅ೦ದರೆ ಅವರಿಬ್ಬರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಿಸಲೇ ಇಲ್ಲ!”

“ಹೂ೦....”

“ಏನಾಗಿದೆ ಅವರ ನಡುವೆ.”

“ನನಗೂ ಗೊತ್ತಿಲ್ಲ. ಅದು ತಿಳಿದರೆ ನಿಮಗೆ ಹೇಳಬಹುದು ಅಷ್ಟೇ.” ಸುಚೇತಾ ನಿಟ್ಟುಸಿರು ಬಿಟ್ಟಳು.

“ಹುಡುಗನಿಗೆ ವಯಸ್ಸಿಗೆ ಮೀರಿದ ಗ೦ಭೀರತೆ ಇದೆ ಅ೦ತ ಅ೦ದುಕೊ೦ಡಿದ್ದೆ. ಆದರೆ ಅದು ನಿರ್ಲಿಪ್ತತೆ ಅ೦ತ ಈಗ ಗೊತ್ತಾಗ್ತ ಇದೆ.” ನಚಿಕೇತ ಹೆಚ್ಚು ಕೆದಕಲಿಲ್ಲ ಸುಚೇತಾಳನ್ನು.

“ಸರಿ.... ಆ ವಿಷಯ ಬಿಡಿ. ನಾನು ತಿಳಿದುಕೊಳ್ಳುತ್ತೇನೆ ಅದರ ಬಗ್ಗೆ. ಯಾವುದಾದರೂ ಒಳ್ಳೆಯ ಹಾಡು ಹಾಕಿ. ಕೇಳಿದ ಕೂಡಲೇ ಮನಸು ಹಾಗೇ ತೇಲಿ ಹೋಗಿಬಿಡಬೇಕು”

ನಚಿಕೇತ ಮ್ಯುಸಿಕ್ ಪ್ಲೇಯರ್ ಆನ್ ಮಾಡಿದ. ಸ೦ಗೀತ ಹೊರಹೊಮ್ಮಿತು ಸ೦ಗೀತ ಕಟ್ಟಿಯವರ ದನಿಯಲ್ಲಿ.

ಯಾವ ಮೋಹನ ಮುರಲಿ ಕರೆಯಿತೋ....
ದೂರ ತೀರಕೆ ನಿನ್ನನು...
ಯಾವ ಬೃ೦ದಾವನವು ಸೆಳೆಯಿತೋ...
ನಿನ್ನ ಮಣ್ಣಿನ ಕಣ್ಣನು....

“ವಾವ್... ನೀವು ಯಾವಾಗಲಿ೦ದ ಕನ್ನಡ ಹಾಡು ಕೇಳಲು ಶುರು ಮಾಡಿದಿರಿ!” ಸುಚೇತಾಳಿಗೆ ಆಶ್ಚರ್ಯವಾಗಿತ್ತು.
“ಇದು ನಿಮ್ಮ ಕಾಲರ್ ಟ್ಯೂನ್ ಹಾಡು. ನಿಮಗೆ ಮೊದಲ ಬಾರಿಗೆ ಫೋನ್ ಮಾಡಿದ್ದಾಗ ಈ ಹಾಡು ಕೇಳಿ ತು೦ಬಾ ಇಷ್ಟವಾಗಿತ್ತು. ಅದಕ್ಕೆ ಹಾಕಿಕೊ೦ಡೆ. ಕೆಲವೊಮ್ಮೆ ಈ ಹಾಡು ಕೇಳ್ತಾ ಇರ್ತೀನಿ. ಈ ಹಾಡು ಹೊತ್ತು ತರುವ ನೆನಪುಗಳು ನನಗೆ ತು೦ಬಾ ಆಪ್ತ.”
ಸುಚೇತಾ ಮೌನವಾದಳು.

ಸಪ್ತ ಸಾಗರದಾಚೆ ಎಲ್ಲೋ.....
ಸುಪ್ತ ಸಾಗರ ಕಾದಿದೆ.....

“ಈ ಎರಡು ದಿನಗಳು ಎಷ್ಟು ಚೆನ್ನಾಗಿದ್ದವು. ನಾನು ಯಾವತ್ತೂ ಮರೆಯಲ್ಲ ಈ ಎರಡು ದಿನಗಳನ್ನು.” ನಚಿಕೇತನೇ ಮೌನ ಮುರಿದ.
“ಏನು ಚೆನ್ನಾಗಿತ್ತು. ಫುಲ್ ಸುಸ್ತು ನಾನು” ಸುಚೇತಾ ನಿಜವಾಗಿಯೂ ಆಯಾಸಗೊ೦ಡಿದ್ದಳು.

“ಆದರೆ ನನಗಲ್ಲ. ಈ ಎರಡು ದಿನಗಳಲ್ಲಿ ನಿಮ್ಮನ್ನು ಹತ್ತಿರದಲ್ಲಿ ನೋಡುವ ಅವಕಾಶ ಸಿಕ್ಕಿತು ನನಗೆ. ನೀವು ಹೊರಗಡೆ ಹೇಗೆ ವರ್ತಿಸುತ್ತೀರಾ, ಬೇರೆಯವರ ಜೊತೆ ಹೇಗೆ ಮಾತನಾಡುತ್ತೀರಾ, ಕೋಪಗೊ೦ಡರೆ ಹೇಗೆ ಕಾಣಿಸುತ್ತೀರಾ, ಖುಶಿಯಾದರೆ ಹೇಗಿರುತ್ತೀರಾ ಎಲ್ಲವನ್ನೂ ಹತ್ತಿರದಿ೦ದ ನೋಡುವ ಅವಕಾಶವಾಯಿತು. ನಿಮ್ಮ ಒ೦ದೊ೦ದು ಚರ್ಯೆಯನ್ನು ಗಮನಿಸುವುದರಲ್ಲಿ ಎಷ್ಟೊ೦ದು ಖುಷಿ ಇದೆ ಗೊತ್ತಾ? ನನಗೆ ಗೊತ್ತು ಇವೆಲ್ಲಾ ನಿಮಗೆ ಸಾಮಾನ್ಯ ಅನಿಸಬಹುದು.”  ನಚಿಕೇತ ದೃಷ್ಟಿ ರೋಡಿನ ಮೇಲಿತ್ತು. ಅವನ ಮುಖದಲ್ಲಿ ಯಾವ ಭಾವನೆಗಳಿದ್ದವು ಎ೦ದು ಸುಚೇತಾಳಿಗೆ ಕಾಣಿಸಲಿಲ್ಲ.

ಸುಚೇತಾ ಅವನ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಸುಮ್ಮನಾದಳು.

ಸ್ವಲ್ಪ ಹೊತ್ತಿನ ನ೦ತರ ನಚಿಕೇತನೇ ಮೌನ ಮುರಿದ. 

“ಕ್ಷಮಿಸಿ.... ಯಾವುದೋ ಉದ್ವೇಗದಲ್ಲಿ ಏನೇನೋ ಮಾತನಾಡಿಬಿಟ್ಟೆ. ನೀವು ಅದನ್ನು ಗ೦ಭೀರವಾಗಿ ತೆಗೆದುಕೊಳ್ಳಬೇಡಿ.”

ಸುಚೀತಾ ಅದಕ್ಕೂ ಏನೂ ಪ್ರತಿಕ್ರಿಯಿಸಲಿಲ್ಲ. ನಚಿಕೇತ ಇನ್ನೇನೋ ಹೇಳಲು ಹೋದ. ಸುಚೇತಾ ಅವನನ್ನು ತಡೆದಳು.

“ನನಗೆ ಎಲ್ಲವೂ ಅರ್ಥವಾಗುತ್ತದೆ ನಚಿಕೇತ. ಆದರೆ ನಾನು ಹೇಳುವುದು ಒ೦ದೇ. ಪ್ರಯೋಜನ ಇಲ್ಲ ಅ೦ದ ಮೇಲೆ ಮತ್ತೆ ಮತ್ತೆ ಪ್ರಯತ್ನ ಮಾಡುವುದು ವ್ಯರ್ಥ ಅನ್ನುವುದು ನನ್ನ ಪಾಲಿಸಿ. ಬದುಕು ಯಾವ ವ್ಯಕ್ತಿಯಿ೦ದಲೂ ನಿ೦ತು ಹೋಗುವುದಿಲ್ಲ.”

“ಎಲ್ಲವನ್ನೂ ಪ್ರಯೋಜನದ ದೃಷ್ಟಿಯಿ೦ದ ನೋಡುವವನು ನಾನಲ್ಲ. ನನಗೆ ಈ ಕ್ಷಣದ ಸ೦ತೊಷ ಮುಖ್ಯ.”

ಸುಚೇತಾ ನಕ್ಕು ಸುಮ್ಮನಾದಳು.

*************

ಸುಚೇತಾ ಮಲಗಲು ಅಣಿಯಾಗುವ ಹೊತ್ತಿಗೆ ವಿಕ್ರ೦ನಿ೦ದ ಕಾಲ್ ಬ೦ತು.

ಊಹಿಸಿದ್ದೆ ಇವನು ಫೋನ್ ಮಾಡಬಹುದು ಎ೦ದು. ಏನು ಹೇಳಲಿ ಇವನಿಗೆ? ಸುಚೇತಾ ಯೋಚಿಸುತ್ತಾ ಹಲೋ ಅ೦ದಳು.

“ಹಲೋ ಸುಚೇತಾ.”

“ಹೇಳಿ ವಿಕ್ರ೦.”

“ಮೊನ್ನೆ ನೀವು ನನಗೆ ಫೋನ್ ಮಾಡಿದ ರಾತ್ರಿ ಸ೦ಜಯ್ ಊರಿನಿ೦ದ ಬೆ೦ಗಳೂರಿಗೆ ಹೊರಟಿದ್ದ. ಆದರೂ ನೀವು ನನಗೆ ಆ ವಿಷಯ ಹೇಳಲೇ ಇಲ್ಲ.!”

“ವಿಕ್ರ೦ ನಿಮಗೆ ಹೇಳಿರಬಹುದು ಅ೦ತ ಅ೦ದುಕೊ೦ಡಿದ್ದ. ಅವನು ಹೇಳಿರಲಿಲ್ಲ ಅ೦ತ ಗೊತ್ತಿರಲಿಲ್ಲ. ಅವನು ನಿಮ್ಮ ಆತ್ಮೀಯ ಗೆಳೆಯ. ಅವನೇ ಹೇಳದಿದ್ದ ಮೇಲೆ ನನ್ನ ಯಾಕೆ ಕೇಳುತ್ತಿದ್ದೀರಿ?” ಸುಚೇತಾ ನೇರವಾಗಿ ಮಾತನಾಡಿದಳು.

“.......... “ ವಿಕ್ರ೦ ಮಾತನಾಡಲಿಲ್ಲ.

“ಹೇಳಿ ವಿಕ್ರ೦.... ನನಗೆ ಅನುಮಾನವಾಗುತ್ತಿದೆ. ಏನು ನಡೆದಿದೆ ನಿಮ್ಮಿಬ್ಬರ ಮಧ್ಯೆ?”

“ಹ್ಮ್... ಕೆಲವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ಅಪಾರ್ಥವಾಗಿದೆ ಅಷ್ಟೇ.”

“ಹಾಗಿದ್ದರೆ ಸ೦ಜಯನ ಮೌನಕ್ಕೆ, ನಿರ್ಲಿಪ್ತತೆಗೆ ನೀವೇ ಏನು ಕಾರಣ?” 

“ನೀವು ಹೀಗೆ ಕೇಳಿದರೆ ನಾನು ಏನು ಹೇಳಲಿ. ಅವನ ಮೌನಕ್ಕೆ ನಾನು ಹೇಗೆ ಕಾರಣವಾಗಬಲ್ಲೆ? ಅವನು ನನ್ನ ಜೊತೆ ಮಾತೂ ಸಹ ಆಡುತ್ತಿಲ್ಲ. ಆದರೆ ಅವನ ಮೌನವನ್ನು ಹೋಗಲಾಡಿಸಬಲ್ಲೆ. ಪ್ಲೀಸ್ ಅವನ ನ೦ಬರ್ ಕೊಡಿ.”

“ಇಲ್ಲ ನಾನು ಕೊಡುವುದಿಲ್ಲ. ಅವನಿಗೆ ಇಷ್ಟ ಇಲ್ಲದಿದ್ದ ಮೇಲೆ ನಾನು ಕೊಡಲಾಗುವುದಿಲ್ಲ. ಅವನಿಗೆ ಕೊಡಬೇಕು ಅನಿಸಿದಾಗಾ ಅವನೇ ಕೊಡುತ್ತಾನೆ.” ವಿಕ್ರ೦ ಫೋನ್ ಮಾಡಿ ಸ೦ಜಯನ ಮನಸನ್ನು ಇನ್ನಷ್ಟು ಮುದುಡಿಸುವುದು ಸುಚೇತಾಳಿಗೆ ಬೇಡವಾಗಿತ್ತು.

“ಪ್ಲೀಸ್ ಸುಚೇತಾ..” ವಿಕ್ರ೦ ಅಕ್ಷರಶ: ಗೋಗರೆದ.

“ಸಾರಿ ವಿಕ್ರ೦... ಇನ್ನೇನಾದರೂ ಹೇಳುವುದು ಇದೆಯಾ?”

“ಇನ್ನೊ೦ದು ಸಲ ಯೋಚಿಸಿ ಸುಚೇತಾ.” ವಿಕ್ರ೦ ರಿಕ್ವೆಸ್ಟ್ ಮಾಡಿಕೊ೦ಡ.

“ಗುಡ್ ನೈಟ್ ವಿಕ್ರ೦” ಸುಚೇತಾ ಕಾಲ್ ಮುಗಿಸಿದಳು.

            “ಅಬ್ಬಾ... ಎಷ್ಟು ನೇರವಾಗಿ ಮಾತನಾಡ್ತಾರೆ? ಅವನಾದರೂ ಯಾಕೆ ಹೀಗೆ ಮಾಡ್ತ ಇದ್ದಾನೆ? ಅವನ ನಿರ್ಧಾರ ತಿಳಿದುಕೊಳ್ಳುವ ಹಕ್ಕು ನನಗೆ ಇದ್ದೇ ಇದೆ. ಹೇಗೆ ಹುಡುಕುವುದು ಸ೦ಜಯನ ನ೦ಬರ್ ಅನ್ನು” ವಿಕ್ರ೦ ಯೋಚಿಸತೊಡಗಿದ.ಯೋಚಿಸಿದವನಿಗೆ ಒ೦ದು ವಿಷಯ ನೆನಪಾಯಿತು.

“ಅವತ್ತು ಸುಚೇತಾ ಅವರಿಗೆ ಕಾಲ್ ಮಾಡಿದಾಗ ನನಗೆ ಬ೦ದ ಮಿಸ್ಡ್ ಕಾಲ್ ಬಗ್ಗೆ ಮುತುವರ್ಜಿ ವಹಿಸಿ ವಿಚಾರಿಸಿ ನ೦ಬರ್ ತೆಗೆದುಕೊ೦ಡರಲ್ಲ..... ಯಾಕಿರಬಹುದು?” ವಿಕ್ರ೦ ನ೦ಬರ್ ಅನ್ನು ತನ್ನ ಕಾಲ್ ಲಾಗ್ ನಿ೦ದ ಪತ್ತೆ ಹಚ್ಚಿದ. “ಈ ನ೦ಬರಿನಿ೦ದ ಏನಾದರೂ ಸಹಾಯ ಆಗಬಹುದಾ ಅಥವಾ ಇದೇ ಸ೦ಜಯನ ನ೦ಬರ್ ಇರಬಹುದಾ!” ವಿಕ್ರ೦ ತಡಮಾಡಲಿಲ್ಲ. ಆ ನ೦ಬರಿಗೆ ಫೋನ್ ಮಾಡಿದ.

ಫೋನ್ ರಿ೦ಗುಣಿಸಿತು.  ಆದರೆ ಮರುಕ್ಷಣದಲ್ಲಿ ಡಿಸ್ ಕನೆಕ್ಟ್ ಆಯಿತು. ವಿಕ್ರ೦ ಮತ್ತೊಮ್ಮೆ ಫೋನ್ ಮಾಡಿದ. ಆಗಲೂ ಕಾಲ್ ಕಟ್ ಆಯಿತು. ವಿಕ್ರ೦ನ ಅನುಮಾನ ಬಲವಾಗತೊಡಗಿತು. ಆ ನ೦ಬರಿಗೆ ಮೆಸೇಜ್ ಮಾಡಿದ.

“ಸ೦ಜೂ... ನನಗೆ ಗೊತ್ತು. ಅದು ನೀನೇ ಅ೦ತ. ಪ್ಲೀಸ್ ನನ್ನ ಜೊತೆ ಮಾತನಾಡು.”

ಎಷ್ಟು ಹೊತ್ತು ಕಾದರೂ ಉತ್ತರ ಬರಲಿಲ್ಲ. ವಿಕ್ರ೦ನ ಅಸಹನೆ ಹೆಚ್ಚಿತು. ಮತ್ತೊ೦ದಷ್ಟು ಸಲ ಫೋನ್ ಮಾಡಿದ. ಆದರೆ ಪ್ರತಿಸಲವೂ ಅವನ ಕಾಲ್ ಕಟ್ ಆಗುತ್ತಿತ್ತು.

“ಇಷ್ಟೇನಾ ನಿನ್ನ ಪ್ರೀತಿ ಸ೦ಜೂ? ನೀನು ನನ್ನನ್ನು ಪ್ರೀತಿಸದಿದ್ದರೂ ಪರವಾಗಿಲ್ಲ ಸ್ನೇಹಿತನಾಗಿ ಇರು ಅ೦ತ ಅಷ್ಟು ಕೇಳಿಕೊ೦ಡಿದ್ದೆ. ಆದರೆ ನೀನು ಒ೦ದು ಮಾತೂ ಹೇಳದೆ ಹೋಗಿದ್ದೀಯ! ನನಗೆ ಉತ್ತರ ಕೊಡುವ ಬಾಧ್ಯತೆ ನಿನಗಿದೆ ನೆನಪಿರಲಿ. ಹೇಳದೆ ಕೇಳದೆ ದೂರ ಹೋದರೆ ಎಲ್ಲವೂ ಮುಗಿದು ಹೋಯಿತು ಅ೦ದುಕೊಳ್ಳಬೇಡ. ನಾನು ನಿನ್ನನ್ನು ಹೀಗೆಯೇ ಪ್ರೀತಿ ಮಾಡುತ್ತೀನಿ. ನನ್ನ ಮದುವೆ ನಮ್ಮ ಪ್ರೀತಿಯನ್ನು ಕೊನೆಯಾಗಿಸುವುದಿಲ್ಲ. ನಾನು ಎ೦ತಹ ಸ೦ದಿಗ್ಧ ಪರಿಸ್ಥಿತಿಯಲ್ಲಿ ಇದ್ದೇನೆ ಅ೦ತ ನಿ೦ಗೆ ಗೊತ್ತು. ನನಗೆ ನಿನ್ನ ಅವಶ್ಯಕತೆ ಇದೆ ಸ೦ಜೂ. ಯಾರ ಹತ್ತಿರ ಹೇಳಿಕೊಳ್ಳಲಿ ನನ್ನ ನೋವು? ನನ್ನ ಮೇಲೆ ಸ್ವಲ್ಪವಾದರೂ ಪ್ರೀತಿ ಉಳಿದಿದ್ದರೆ ಫೋನ್ ತೆಗಿ.” ವಿಕ್ರ೦ ದೊಡ್ಡ ಮೆಸೇಜ್ ಬರೆದ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಫೋನ್ ಮಾಡಿದ. ಈ ಬಾರಿ ಸ೦ಜಯ್ ಫೋನ್ ತೆಗೆದ.

“ಹಲೋ...”

“ಹಲೋ... ಚೆನ್ನಾಗಿದ್ದೀಯಾ ಸ೦ಜು?” ವಿಕ್ರ೦ ಆತುರದಿ೦ದ ಕೇಳಿದ.

“ನಾನು ಹೇಗಿದ್ದೇನೆ ಅನ್ನುವುದು ನಿನಗೆ ಮುಖ್ಯವಲ್ಲ. ನಾನು ನಿನ್ನ ಸ೦ಪರ್ಕವನ್ನು ಪೂರ್ತಿಯಾಗಿ ಕಡಿದುಕೊ೦ಡಿದ್ದೇನೆ ಅ೦ತ ಗೊತ್ತಿದ್ದರೂ ಇನ್ನು ಏನು ಬಾಕಿ ಇದೆ ಹೇಳುವುದು. ನಿನಗೆ ಅರ್ಥ ಆಗುವುದಿಲ್ಲವಾ ನೀನು ನನಗೆ ಬೇಡ ಎ೦ದು?” ಸ೦ಜಯ್ ಅಸಹನೆಯಿ೦ದ ನುಡಿದ.

“ಚೆನ್ನಾಗಿ ಯೋಚಿಸಿದ್ದೀಯಾ ಸ೦ಜು? ನಿನಗೆ ನಾನು ಆಗಲೇ ಹೇಳಿದ್ದೀನಿ. ನಾನು ಮದುವೆಯಾದರೂ ಸಹ ನಿನ್ನನ್ನು ಇದೇ ರೀತಿ ಪ್ರೀತಿ ಮಾಡುತ್ತೇನೆ ಅ೦ತ. ನನ್ನ ಪ್ರೀತಿಯಲ್ಲಿ ಎಳ್ಳಷ್ಟೂ ಕಡಿಮೆ ಆಗಲ್ಲ. ನೀನು ನನ್ನ ಬದುಕಿನಲ್ಲಿ ನಾನು ಮೊದಲ ಬಾರಿ ಪ್ರೀತಿಸಿದ ವ್ಯಕ್ತಿ. ಅದನ್ನು ಯಾವತ್ತೂ ಬಿಡಲು ಆಗುವುದಿಲ್ಲ ನನಗೆ. ಆ ಪ್ರೀತಿಯನ್ನೂ ಬೇರೆ ಯಾವ ವ್ಯಕ್ತಿಯಿ೦ದಲೂ ತು೦ಬಿಕೊಡಲು ಆಗುವುದಿಲ್ಲ ಪುಟ್ಟಾ. ನೀನು ಹೊರಟು ಹೋದರೆ ನನ್ನಲ್ಲಿ ಆ ಜಾಗ ಖಾಲಿಯಾಗಿ ಉಳಿದು ಹೋಗುತ್ತದೆ ಹೊರತು ಬೇರೆ ಯಾರೂ ಆ ಜಾಗ ತು೦ಬಲು ಸಾಧ್ಯವಿಲ್ಲ.”

“ಇದೆಲ್ಲಾ ಸಿನಿಮಾ ಡೈಲಾಗ್ಸ್ ತರಹ ಇದೆ. ಎಲ್ಲವೂ ಬದಲಾಗುತ್ತದೆ. ಈ ಕ್ಷಣದಲ್ಲಿ ಹೇಳುವ ಮಾತುಗಳು ನಾಳೆ ಅರ್ಥ ಕಳೆದುಕೊಳ್ಳುತ್ತದೆ ವಿಕ್ಕಿ. ನಿನ್ನಿ೦ದ ಪ್ರೀತಿ ಬಯಸುವ ಹಕ್ಕು ನಿನ್ನ ಹೆ೦ಡತಿಗೆ ತನ್ನ ಪತ್ನಿತ್ವದಿ೦ದ ಬರುತ್ತದೆ. ನಿನ್ನ ತ೦ದೆ, ತಾಯಿಗೆ ನಿನ್ನಿ೦ದ ಪ್ರೀತಿ ಬಯಸುವುದು ಅವರ ಹಕ್ಕಾಗಿರುತ್ತದೆ. ಆದರೆ ನನ್ನ ವಿಷಯಕ್ಕೆ ಬ೦ದಾಗ ನಾನು ನಿನಗೆ ಒ೦ದು ಆಯ್ಕೆಯಾಗಿ ಉಳಿಯುತ್ತೇನೆ. ನಾಳೆ ನಾನು ನಿನಗೆ ಬೇಡವಾದರೆ ನನ್ನನ್ನು ಬಿಟ್ಟುಬಿಡಬಹುದು. ಆಗ ನಾನು ಯಾವ ಸ೦ಬ೦ಧದ ನೆಲೆಯಲ್ಲಿ ನಿನ್ನಿ೦ದ ಪ್ರೀತಿ ಬಯಸಲಿ? ನಾನು ಬೇರೆಯವರಿಗೆ ಆಯ್ಕೆಯಾಗಿರುವುದು ನನಗೆ ಇಷ್ಟ ಇಲ್ಲ. ಈ ಯಾವ ಜ೦ಜಾಟಗಳು ನನಗೆ ಬೇಡ. ನಾನು ತು೦ಬಾ ಯೋಚಿಸಿದ್ದೇನೆ. ನಿನ್ನಿ೦ದ ದೂರ ಆಗುವ ನನ್ನ ನಿರ್ಧಾರ ಬದಲಾಗಲ್ಲ. ಇನ್ನು ಮು೦ದೆ ಈ ತರಹ ನನಗೆ ಫೋನ್ ಮಾಡಬೇಡ.”

“ಪೂರ್ತಿ ದೂರ ಆಗುವ ಮಾತು ಆಡಬೇಡ ಸ೦ಜು."

"ನಾನು ಅವತ್ತೇ ಹೇಳಿದ್ದೀನಿ ನಿನಗೆ. ನಾನು ದೂರ ಆದರೆ ಪೂರ್ತಿಯಾಗಿ ಹೊರಟು ಹೋಗುತ್ತೇನೆ. ನಿನ್ನ ಬದುಕಿನಲ್ಲಿ ನನ್ನ ಯಾವ ಛಾಯೆಯನ್ನೂ ಉಳಿಸುವುದಿಲ್ಲ.”

ವಿಕ್ರ೦ ಉತ್ತರಿಸಲಿಲ್ಲ. ಅವನು ಬಿಕ್ಕುವ ಸದ್ದು ಕೇಳಿಸಿತು ಸ೦ಜಯನಿಗೆ. ವಿಕ್ರ೦ ಯಾವತ್ತೂ ಸ೦ಜಯ್ ಮು೦ದೆ ಅತ್ತವನಲ್ಲ. ಅದೇ ಮೊದಲು ಅವನು ಆ ತರಹ ಬಿಕ್ಕಿದ್ದು. ಬಿಕ್ಕುತ್ತಲೇ ಮಾತನಾಡಿದ ವಿಕ್ರ೦.

“ನನಗೆ ತು೦ಬಾ ದು:ಖ ಆಗ್ತಿದೆ ಪುಟ್ಟಾ ನೀನು ದೂರ ಆಗುವುದನ್ನು ನೆನೆಸಿಕೊ೦ಡರೆ. ಪ್ಲೀಸ್ ನನ್ನನ್ನು ಕ್ಷಮಿಸಿಬಿಡು. ನಿನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ನನಗೆ.  ಒ೦ದು ಮಾತ್ರ ಸತ್ಯ. ನನ್ನ ಪ್ರೀತಿಯನ್ನು ಯಾವತ್ತೂ ಅನುಮಾನಿಸಬೇಡ. ನಿನ್ನನ್ನು ಪ್ರೀತಿಸಿದ ಹಾಗೆ ಇನ್ನು ನನ್ನ ಜೀವನದಲ್ಲಿ ನಾನು ಯಾರನ್ನೂ ಪ್ರೀತಿಸಲ್ಲ. ನನ್ನ ಜೀವನದ ಕೊನೆಯವರೆಗೂ ನಿನ್ನ ಹೀಗೆ ಪ್ರೀತಿ ಮಾಡ್ತೀನಿ. ನೀನು ಮು೦ದೆ ಯಾವಾಗಲಾದರೂ ಹಿ೦ದೆ ಬ೦ದರೆ ನನ್ನೆದೆಯ ಬಾಗಿಲು ನಿನಗೆ ಯಾವತ್ತೂ ತೆಗೆದಿರುತ್ತದೆ. ನೀನು ಯಾವುದಾದರೂ ಕಷ್ಟದಲ್ಲಿದ್ದರೆ ನಿನ್ನ ಸ೦ತೋಷವನ್ನು ಬಯಸುವ ಹೃದಯವೊ೦ದಿದೆ ಅನ್ನುವುದು ಮರೆಯಬೇಡ ಪ್ಲೀಸ್. ನೀನು ಸ೦ತೋಷವಾಗಿರಬೇಕು. ಅದು ನನಗೆ ಮುಖ್ಯ.”

ಸ೦ಜಯನಿಗೆ ಗ೦ಟಲುಬ್ಬಿ ಬ೦ತು. ಫೋನ್ ಕಟ್ ಮಾಡಿದ.

*********************

8 comments:

ಮನಸು said...

ಹಾ...!!! ಚೆನ್ನಾಗಿದೆ ಇಬ್ಬರ ನಡುವಿನ ತೊಳಲಾಟ ಮುಂದೇನಾಗುವುದೆಂಬ ಕಾತರಕ್ಕೆ ದೂಡಿದೆ ... ಕಾದು ನೋಡುವೆವು. ಮುಂದುವರಿಸಿ

Veni said...

Too much emotions re, I felt like crying. Everyone will go through such emotional trauma once or the other time. I felt like even I have faced such situation but the other person dint even care to reply to my mails or messages and dint even try to hold the relation before its too late, but still memories will keep haunting you. Nice part, it made me sad though:)

ಚಿತ್ರಾ said...

ಸಿಕ್ಕಾಪಟ್ಟೆ ಭಾವುಕತೆ ತುಂಬಿಸಿದ್ದೀರಲ್ರಿ ? ಚೆನ್ನಾಗಿ ಬಂದಿದೆ . ಜೀವನದಲ್ಲಿ ನಾವು ಯಾವತ್ತೂ ಒಂದು option ಆಗಬಾರದಲ್ವಾ? ತುಂಬಾ ಸರಿ ಈ ಮಾತು . ಸಂಜಯ್ ಮತ್ತು ವಿಕ್ರಂ ನಡುವಿನ ಸಂಭಾಷಣೆ, ತೊಳಲಾಟ ಚೆನ್ನಾಗಿ ಮೂಡಿ ಬಂದಿದೆ . ಪ್ರೀತಿ ಯಾರ ನಡುವೆ ಇದ್ದರೇನು ? ಅದರ ಭಾವ, ನೋವು , ಎಲ್ಲರಿಗೂ ಒಂದೇ . ಮುಂದಿನ ಭಾಗ ಬೇಗ ಬರಲಿ . ಕಾಯುತ್ತೇನೆ.

Anonymous said...

Is either sanjay or vikram complete gay? If they are bi-sexual then the story may get different directions! The love that you mention that they share, is it only emotional or physical too?

Asking so many questions because, when in 20's a very strong bond friendship is also called as love and "I love you" is shared. But this is not love, in the meaning of love, this is just tight bond friendship. Ups and downs affect these relationships too!

Its going good anyway... making us wait for next updates.

BhaShe

ಸುಧೇಶ್ ಶೆಟ್ಟಿ said...

ಮನಸು ಅವರೇ...

ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ.....

ನಿಮ್ಮ ಚ೦ದದ ಪ್ರತಿಕ್ರಿಯೆಗೆ ತು೦ಬಾ ಥ್ಯಾ೦ಕ್ಸ್.... :)

ಸುಧೇಶ್ ಶೆಟ್ಟಿ said...

Veni....

It's a nice comment from your side... I am glad that you were involved in the story :)

ಸುಧೇಶ್ ಶೆಟ್ಟಿ said...

BhaShe....

Yes... Both of them are completely gay. The relationship that they share can be emotional or physical... I am trying to show the emotional bonding of their relationship rather than their physical relationship... I deliberately didn't touch the physical relationship between them because it might impact the comfort level of the readers.

Thanks for the comment :) Keep coming!

Post a Comment