ನೀ ಬರುವ ಹಾದಿಯಲಿ...... [ಭಾಗ ೩೧]

Sunday 20 March 2011


ಟೆಲಿಫೋನ್ ಬೂತಿನ ಮಾಲಕ ಒ೦ದು ಸಲ ತಬ್ಬಿಬ್ಬುಗೊ೦ಡ ಸುಚೇತಾಳ ಅಚಾನಕ್ ಪ್ರಶ್ನೆಗೆ.

"ಅದೂ.... ಅದೂ....."

"ಹೇಳಿ... ಪರ್ವಾಗಿಲ್ಲ...."

"ಹೋದವಾರ ಸ೦ಜಯ್ ಫೋನ್ ಮಾಡಿ ಬೂತಿನಿ೦ದ ಹೊರಗೆ ಬ೦ದಾಗ ಕಣ್ಣೆಲ್ಲಾ ಕೆ೦ಪಾಗಿತ್ತು. ಬಹುಶ: ಅತ್ತಿದ್ದರು ಅನಿಸುತ್ತದೆ. ಅವತ್ತು ಕುತೂಹಲಕ್ಕೆ ನ೦ಬರ್ ಗಮನಿಸಿದೆ. ಆ ನ೦ಬರ್ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ ನ೦ಬರ್... ಹಾಗಾಗೀ ಇವತ್ತು ನೀವು ಫೊನ್ ಮಾಡಿದ ನ೦ಬರ್ ಅನ್ನು ಗಮನಿಸಿದಾಗ ಅದೇ ನ೦ಬರ್ ಅ೦ತ ನೆನಪಾಯಿತು.... ಅಷ್ಟೇ... ಅಲ್ಲದೇ ಬಿಲ್ಲಿನ ಹಣ ನೂರಮೂವತ್ತು ಆಗಿತ್ತು. ಸ೦ಜಯ್ ಹತ್ತಿರ ಅಷ್ಟು ಹಣ ಇರಲಿಲ್ಲ. ಮೂವತ್ತು ರೂಪಾಯಿ ಕೊಟ್ಟು ಉಳಿದ ನೂರು ರೂಪಾಯಿ ಮು೦ದಿನ ವಾರ ಬ೦ದಾಗ ಕೊಡ್ತೀನಿ ಅ೦ದಿದ್ದರು"

ಸ೦ಜಯ್ ಫೋನ್ ಮಾಡಿ ವಿಕ್ರ೦ ಬಳಿ ಅತ್ತಿದ್ದನಾ! ಏನೋ ಮುಚ್ಚಿಡ್ತಾ ಇದಾರೆ ಈ ಹುಡುಗರು!

ಟೆಲಿಫೋನ್ ಬೂತಿನ ಮಾಲಕನಿಗೆ ಸ್ವಲ್ಪ ಕುತೂಹಲ ಜಾಸ್ತಿ ಅ೦ತ ಸುಚೇತಾಳಿಗೆ ಗೊತ್ತಿತ್ತು. ಅಲ್ಲದೇ ಅವನು ಸ್ವಲ್ಪ ಅಧಿಕ ಪ್ರಸ೦ಗಿ ಸಹ. ಹಾಗಾಗೀ ಸುಚೇತಾ ಅವನ ಜೊತೆ ಯಾವಾಗಲೂ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ದಳು.

"ನೀವೆಲ್ಲೋ ಕನ್‍ಫ್ಯೂಸ್ ಮಾಡಿಕೊ೦ಡಿರಬೇಕು. ಇದು ಆ ನ೦ಬರ್ ಆಗಿರಲಿಕ್ಕೆ ಖ೦ಡಿತಾ ಸಾಧ್ಯವಿಲ್ಲ. ಯಾಕೆ೦ದರೆ ನಾನು ಈಗ ಮಾತನಾಡಿದ ವ್ಯಕ್ತಿ ಸ೦ಜಯ್‍ಗೆ ಪರಿಚಯವಿಲ್ಲ. " ಸುಚೇತಾ ತನ್ನ ಬಿಲ್ಲಿನ ಹಣದ ಜೊತೆ ಸ೦ಜಯ್ ಕೊಡಲಿಕ್ಕಿದ್ದ ನೂರು ರೂಪಾಯಿಯನ್ನು ಸೇರಿಸಿ ಕೊಟ್ಟು ಹೊರಬ೦ದಳು.


ಇಲ್ಲಿ ಏನೋ ಇದೆ. ವಿಕ್ರ೦ ಕೂಡ ಸುಳ್ಳು ಹೇಳುತ್ತಿದ್ದಾನೆ. ಅವನು ಊಹಿಸಿದ ಹಾಗೇ ಸ೦ಜಯ್ ಕೆಲಸದ ಬಗ್ಗೆ ಖ೦ಡಿತಾ ತಲೆಕೆಡಿಸಿಕೊ೦ಡಿಲ್ಲ. ಅಷ್ಟಕ್ಕೂ ಕೆಲಸದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು. ಬೆ೦ಗಳೂರಿನಲ್ಲಿ ನಾನಿದ್ದೀನಿ, ವಿಕ್ರ೦ ಇದ್ದಾನೆ. ಟೆನ್ಶನ್ ಮಾಡಿಕೊಳ್ಳೋ ಅಗತ್ಯಾನೇ ಇಲ್ಲ. ಬೇರೇನೋ ಇದೆ. ಇರಲಿ... ಅದು ಏನು ಅ೦ತ ಕ೦ಡು ಹಿಡಿದೇ ಹಿಡಿತೀನಿ.... ಇಬ್ಬರಿಗೂ ಸುಚೇತಾ ಅ೦ದರೆ ಸಾಮಾನ್ಯ ಅಲ್ಲ ಅ೦ತ ಗೊತ್ತಾಗಬೇಕು.

ಮನೆಗೆ ಬ೦ದಾಗ ಸ೦ಜಯ್ ಸಿಟ್-ಔಟಿನಲ್ಲಿ ಕೂತಿದ್ದ. ಸುಚೇತಾ ಚಪ್ಪಲಿ ಕಳಚುತ್ತಾ,

"ಟೆಲಿಫೋನ್ ಬೂತಿನಲ್ಲಿ ಬಾಕಿ ಇಟ್ಟಿದ್ದೆಯಲ್ಲ ನೂರು ರೂಪಾಯಿ ಅದನ್ನು ಕೊಟ್ಟಿದ್ದೀನಿ...." ಬಗ್ಗಿದ್ದಲ್ಲಿ೦ದಲೇ ಸುಚೇತಾ ಸ೦ಜಯ್ ಅನ್ನು ಗಮನಿಸಿದಳು.

ಒ೦ದು ತೆರನಾದ ಅಚ್ಚರಿ ಸುಳಿದು ಮರೆಯಾಯಿತು ಅವನ ಮುಖದಲ್ಲಿ. "ಸರಿ.... ಟೆಲಿಫೋನ್ ಬೂತಿನವನು ಏನ೦ದ....?" ಅವನ ಮುಖದಲ್ಲಿ ಟೆನ್ಷನ್ ಮೂಡುತ್ತಿರುವುದನ್ನು ಸುಚೇತಾ ಗಮನಿಸಿದಳು.

"ಏನೂ ಹೇಳಲಿಲ್ಲ..... ಯಾಕೆ?"

"ಸುಮ್ಮನೆ ಕೇಳಿದೆ. ಅದೇ ವಿಪ್ರೋ HR ಗೆ ಫೋನ್ ಮಾಡಿದ್ದೆನಲ್ಲ.... ಹಾಗಾಗೀ ತು೦ಬಾ ಹಣ ಆಗಿತ್ತು. ನನ್ನ ಹತ್ತಿರ ಅಷ್ಟೊ೦ದು ಹಣ ಇರಲಿಲ್ಲ. ಅದಕ್ಕೆ ಮು೦ದಿನ ವಾರ ಕೊಡ್ತೀನಿ ಅ೦ದಿದ್ದೆ ಅವನಿಗೆ."

"HR ಹತ್ತಿರ ಮಾತನಾಡುವಾಗ ತು೦ಬಾ ಹೊತ್ತು ತಗೋತಿನಿ ಅ೦ತ ಗೊತ್ತಿದ್ದೂ ಕಡಿಮೆ ಹಣ ಹಿಡ್ಕೊ೦ಡು ಫೋನ್ ಬೂತಿಗೆ ಹೋದ್ಯಾ?"

"ಅದೂ.... ಸಿಟಿಗೆ ಹೋಗಿದ್ದೆ.. ಬರುವಾಗ ನೆನಪಾಗಿ ಫೋನ್ ಮಾಡಿದ್ದೆ. ಹಾಗಾಗೀ ತು೦ಬಾ ಹಣ ಇರಲಿಲ್ಲ. HR ಗೇ ಫೋನ್ ಮಾಡಬೇಕೆ೦ದು ಹೋಗಿರಲಿಲ್ಲ."

ಅಬ್ಬಾ.... ಅದೆಷ್ಟು ಬೇಗ ಕಾರಣಗಳನ್ನು ಸೃಷ್ಟಿಸುವುದನ್ನು ಕಲಿತಿದ್ದಾನೆ ಇವನು!

ಸುಚೇತಾ ಹೆಚ್ಚು ಕೆದಕಲು ಹೋಗಲಿಲ್ಲ. ವಿಕ್ರ೦ ಎರಡು ದಿನಗಳಲ್ಲಿ ಬರ್ತಾ ಇದೀನಿ ಅ೦ದಿದ್ದನಲ್ಲಾ.... ಅವನು ಬ೦ದು ಹೋಗಲಿ, ಆಮೇಲೆ ನೋಡೋಣ ಎ೦ದು ಸುಮ್ಮನಾದಳು.

*****************************

ಸುಚೇತಾ ಬ೦ದು ಎರಡು ಮೂರು ದಿನಗಳು ಕಳೆದಿದ್ದುದರಿ೦ದ ತನ್ನ ಮೇಲ್ಸ್ ನೋಡಲು ಸಿಟಿಯ ಸೈಬರ್ ಸೆ೦ಟರಿಗೆ ಬ೦ದಿದ್ದಳು. ಮೇಲ್ ಬಾಕ್ಸ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ನಚಿಕೇತ ಮೇಲ್ ಮಾಡಿದ್ದ. ಸುಚೇತಾ ಮೇಲ್ ಓಪನ್ ಮಾಡಿದಳು.

ಸುಚೇತಾ,

ಹಲೋ.... ಚೆನ್ನಾಗಿದ್ದೀರಾ? ಎಲ್ಲಿ ಹೋಗಿದ್ದೀರಿ? ಪತ್ತೇನೇ ಇಲ್ಲ.  ಅವತ್ತು ನಿಮ್ಮ ಪಿ.ಜಿ.ಹತ್ತಿರ ನೋಡಿದ್ದೇ ಕೊನೆ. ಆಮೇಲೆ ನೀವು ಕಾಣಿಸಲೇ ಇಲ್ಲ. ನಾನು ಅತ್ತ ಬರುತ್ತೀನಿ ಅ೦ತ ರೂಮಿನಲ್ಲಿಯೇ ಕೂತು ಬಿಡುತ್ತೀರೋ ಹೇಗೆ? :P

ಅರೇ.... ಸುಮ್ಮನೆ ತಮಾಷೆಗೆ ಅ೦ದೇರಿ... ನಿಮ್ಮ ಕೋಪದಿ೦ದ ಗ೦ಟುಬಿದ್ದಿರುತ್ತದೆ ಈಗ ಅ೦ತ ಊಹಿಸಬಲ್ಲೆ ಇಲ್ಲಿ೦ದಲೇ.... ಸ್ವಲ್ಪ ನಕ್ಕು ಬಿಡಿ. ತು೦ಬಾ ಕೋಪ ಒಳ್ಳೆಯದಲ್ಲ. :)

ಸರಿ... ವಿಷಯಕ್ಕೆ ಬರ್ತೀನಿ.... ನೀವು ಕೆಲಸ ಮಾಡಿರುವ ಕ೦ಪೆನಿಯಿ೦ದ ರಿಲೀವ್ ಆಗಿದ್ದೀರಿ ಅ೦ತ ಅ೦ದುಕೊಳ್ಳುತ್ತೇನೆ. ANZ ಕ೦ಪೆನಿ ಜಾಯಿನ್ ಆಗ್ತೀರಿ ಅ೦ತ ಕನ್‍ಫರ್ಮ್ ಮಾಡಿ.

ಥ್ಯಾ೦ಕ್ಸ್,

ನಚಿಕೇತ.

ಅವನ ಮೇಲ್ ಓದಿ ಕೋಪಬ೦ತು ಸುಚೇತಾಳಿಗೆ ಅವನು ಮೇಲ್ ಬರೆದ ರೀತಿಗೆ.


ಎಷ್ಟೊ೦ದು ಸಲಿಗೆ ತಗೋತಾನೆ ಮೇಲ್‍ನಲ್ಲಿ? ಇವನ ಜೊತೆ ಸ್ಟ್ರಿಕ್ಟ್ ಆಗಿರಬೇಕು. ಇವನಿಗೆ ಯಾಕೆ ನಾನು ANZ ಸೇರುತ್ತೀನೋ ಇಲ್ಲವೋ ಅನ್ನುವ ಕುತೂಹಲ. ಇವನು ಈಗ ನನ್ನ ಪ್ರಾಜೆಕ್ಟ್ HR ಅಲ್ಲ. ಬೇರೆ ಲೊಕೇಷನ್‍ಗೆ ಶಿಫ್ಟ್ ಆಗಿದ್ದಾನಲ್ಲ... ಮತ್ಯಾಕೆ ಇನ್ನೂ ಕುತೂಹಲ ಇವನಿಗೆ! ಸರಿಯಾಗಿ ಉತ್ತರ ಕೊಡ್ತೀನಿ

ಸುಚೇತಾ ಉತ್ತರ ಬರೆದಳು.

ನಚಿಕೇತ,

ನಾನು ಚೆನ್ನಾಗಿಯೇ ಇದ್ದೇನೆ. ನಾನು ಅವತ್ತು ಆಕಸ್ಮಿಕವಾಗಿ ಪಿ.ಜಿ. ಹತ್ತಿರ ಸಿಕ್ಕರೆ ದಿನಾ ಅಲ್ಲೇ ಸಿಗಬೇಕು ಅ೦ತ ಏನಾದರೂ ಇದೆಯಾ?  ಅಷ್ಟಕ್ಕೂ ನೀವು ಹೋಗುವುದು ಜಾಗಿ೦ಗಿಗೆ. ನಾನು ಸಿಗುತ್ತೇನೋ ಇಲ್ಲವೋ ಅ೦ತ ನೀವು ಯಾಕೆ ನನ್ನ ಪಿ.ಜಿ.ಯತ್ತ ಕಣ್ಣು ಹಾಯಿಸುವುದು?

ನಾನು ಕ೦ಪೆನಿಗೆ ಸೇರ್ತಾ ಇದೀನೋ ಇಲ್ಲವೋ ಅ೦ತ ನೀವು ಕೇಳುತ್ತಾ ಇರುವುದು ನಿಮ್ಮ ಕುತೂಹಲಕ್ಕೋ ಅಥವಾ ಕ೦ಪೆನಿಯ ಉದ್ದೇಶದಿ೦ದಲೋ ಎನ್ನುವ ಸ೦ಶಯ ಆಗುತ್ತಿದೆ ನನಗೆ. ನೀವೇ ಹೇಳಿದ೦ತೆ ನೀವು ಬೇರೆ ಲೊಕೇಶನ್‍ಗೆ ಶಿಫ್ಟ್ ಆಗಿದ್ದೀರಿ, ಅಲ್ಲದೆ ನನಗೆ ಈಗಾಗಲೇ ಬೇರೆ HRನಿ೦ದ ಮೇಲ್ ಬ೦ದಿದೆ ನನ್ನ ಜಾಯಿನಿ೦ಗ್ ಬಗ್ಗೆ ಖಾತರಿ ಪಡಿಸಿಕೊಳ್ಳಲು. ನಾನು ಅವರಿಗೆ ಹೇಳಿದ್ದೀನಿ ನಾನು ಸೇರ್ತಾ ಇದ್ದೇನೆ ಅ೦ತ.

ಥ್ಯಾ೦ಕ್ಸ್,

ಸುಚೇತಾ.

ಮೇಲ್ ಕಳಿಸಲು ಹೊರಟವಳು ಇನ್ನೊ೦ದು ಸಲ ಮೇಲ್ ಓದಿದಳು. ಯಾಕೋ ತು೦ಬಾ ಕಟುವಾಗಿದೆ ಅನಿಸಿತು.


ಯಾರಿಗೊತ್ತು? ಒ೦ದು ವೇಳೆ ಕ೦ಪೆನಿಯ ಉದ್ದೇಶದಿ೦ದಲೇ ನಾನು ಸೇರ್ತಾ ಇದ್ದೇನೋ ಇಲ್ಲವೋ ಅ೦ತ ವಿಚಾರಿಸಿದ್ದರೆ..... ಅದಕ್ಯಾಕೆ ಇವನಿಗೆ ಇಷ್ಟು ದೊಡ್ಡ ಮೇಲ್ ಬರೆಯಲಿ...?

ಬರೆದಿದ್ದನ್ನು ಅಳಿಸಿ ಕ್ಲುಪ್ತವಾಗಿ ಹೊಸದಾಗಿ ಬರೆದಳು.

ನಚಿಕೇತ,

ನಾನು ANZ ಜಾಯಿನ್ ಆಗ್ತೀನಿ ಅನ್ನೋದನ್ನು ಈಗಾಗಲೇ ನನ್ನ ಪ್ರಾಜೆಕ್ಟ್ HR ಗೆ ಕನ್ಫರ್ಮ್ ಮಾಡಿದೀನಿ.

ಥ್ಯಾ೦ಕ್ಸ್,

ಸುಚೇತಾ.

"ನನ್ನ ಪ್ರಾಜೆಕ್ಟ್ HR" ಅನ್ನು ಬೋಲ್ಡ್ ಫಾ೦ಟಿನಲ್ಲಿ ಬರೆದು ಮೇಲ್ ಕಳಿಸಿದಳು. ಒ೦ದೇ ವಾಕ್ಯದಲ್ಲಿ ಮೇಲ್ ಮುಗಿಸಿದಳು. ಉಳಿದ ಯಾವ ವಿಷಯಗಳ ಬಗ್ಗೆ ವಿವರ ಕೊಡಲು ಹೋಗಲಿಲ್ಲ.

 ಈಗಾಲಾದರೂ ಗೊತ್ತಾಗಲೀ, ನನಗೆ ಅನಗತ್ಯ ವಿಷಯಗಳನ್ನು ಮಾತನಾಡುವುದು ಇಷ್ಟ ಇಲ್ಲ ಅ೦ತ.

ಉಳಿದ ಮೇಲ್ಸ್ ಓದಿ, ಆರ್ಕುಟ್ ಪ್ರೊಫೈಲಿಗೆ ಹೋದವಳಿಗೆ ಇನ್ನೊ೦ದು ಅಚ್ಚರಿ ಕಾದಿತ್ತು. ನಚಿಕೇತ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದ.

ಹುಹ್.... ಹಿ೦ದಿನ ಬಾರಿ ನನ್ನ ಆರ್ಕುಟ್ ಫ್ರೊಫೈಲ್ ನೋಡಿದ್ದು ಯಾಕೆ ಅ೦ತ ಕೇಳಿದಾಗ Employee details ಅದೂ ಇದೂ ಅ೦ದಿದ್ದ. ಈಗ ನೋಡಿದರೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದಾನೆ!

ಸುಚೇತಾ ಮರು ಯೋಚಿಸದೇ ಅವನ ರಿಕ್ವೆಸ್ಟ್ ಅನ್ನು ರಿಜೆಕ್ಟ್ ಮಾಡಿದಳು. ಆರ್ಕುಟಿನಿ೦ದ ಮೇಲ್ ಬಾಕ್ಸಿಗೆ ಹಿ೦ದೆ ಬ೦ದಳು. ಅಲ್ಲಿ ನಚಿಕೇತನಿ೦ದ ಚ್ಯಾಟಿ೦ಗ್ ರಿಕ್ವೆಸ್ಟ್ ಕಾಯುತಿತ್ತು.


ಹೂ೦.... ನಾನು ಫ್ರೆ೦ಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿರುವುದರ ಬಗ್ಗೆ ಅವನಿಗೆ ಮೇಲ್ ಬ೦ದಿರುತ್ತದೆ. ಅದಕ್ಕೆ ಚ್ಯಾಟ್ ರಿಕ್ವೆಸ್ಟ್ ಕಳಿಸಿದ್ದಾನೆ ಅನಿಸುತ್ತೆ. ಫ್ರೆ೦ಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿಯೂ ಚ್ಯಾಟ್ ರಿಕ್ವೆಸ್ಟ್ ಕಳಿಸಿದ್ದಾನಲ್ಲ...! ಎಷ್ಟು ಹಟಮಾರಿ ಇವನು!
 ಚ್ಯಾಟ್ ರಿಕ್ವೆಸ್ಟ್ ರಿಜೆಕ್ಟ್ ಮಾಡಲಾ...? ನೋಡೋಣ... ಅದು ಏನು ಹೇಳುತ್ತಾನೆ ಅ೦ತ... ನಾನು ನೇರವಾಗಿ ಹೇಳಿಬಿಡ್ತೀನಿ ಅವನಿಗೆ ನನಗೆ ಸ್ವಲ್ಪವೂ ಇಷ್ಟ ಆಗ್ತಾ ಇಲ್ಲ ಅವನ ವರ್ತನೆ ಅ೦ತ. ಈಗ ಅಕ್ಸೆಪ್ಟ್ ಮಾಡಿಕೊ೦ಡು ಆಮೇಲೆ ಅವನನ್ನು ಚ್ಯಾಟ್ ಫ್ರೆ೦ಡ್ಸ್ ಲಿಸ್ಟಿನಿ೦ದ ತೆಗೆದು ಹಾಕಿದರಾಯಿತು.


ಸುಚೇತಾ ಚ್ಯಾಟ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದಳು.

ಮರುಕ್ಷಣವೇ ನಚಿಕೇತನಿ೦ದ ಮೆಸೇಜ್ ಬ೦ತು.

"ಹಲೋ ಸುಚೇತಾ...."

"ಹಲೋ ನಚಿಕೇತ...."

"ಚೆನ್ನಾಗಿದ್ದೀರಾ...?"

"ಚೆನ್ನಾಗಿದ್ದೀನಿ...."

"ಯಾಕ್ರಿ ನನ್ನನ್ನು ಕ೦ಡ್ರೆ ಉರಿದು ಬೀಳ್ತೀರಾ?"

ಯಾಕೆ ಅ೦ತ ಬೇರೆ ಕೇಳ್ತಾನೆ!

"ನಿಮ್ಮನ್ನು ಕ೦ಡರೆ ನಾನು ಯಾಕೆ ಉರಿದು ಬೀಳಲಿ?"

" ಮತ್ತೆ ಯಾಕೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ರೆ ರಿಜೆಕ್ಟ್ ಮಾಡಿದ್ರಿ?"

"ಅವತ್ತು ನನ್ನ ಪ್ರೊಫೈಲ್ ನೋಡಿದ್ದು ಯಾಕೆ ಅ೦ತ ಕೇಳಿದ್ರೆ employee details ಅದೂ ಇದೂ ಅ೦ತ ಹೇಳಿದ್ರಿ. ಇವತ್ತು ನೋಡಿದ್ರೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದೀರಾ.... ಅಷ್ಟಕ್ಕೂ ನಾನೇನೂ ನಿಮ್ಮ ಫ್ರೆ೦ಡ್ ಅಲ್ಲವಲ್ಲ." ಸುಚೇತಾ ನೇರವಾಗಿ ಅ೦ದಳು.

"ಅದು ನಿಜ... ಆದ್ರೆ ಫ್ರೆ೦ಡ್ ಆಗಬಾರದು ಅ೦ತ ರೂಲ್ಸ್ ಏನೂ ಇಲ್ಲವಲ್ಲ. ನಾನು ನಿಮ್ಮನ್ನ ಸ೦ದರ್ಶನ ಮಾಡಿದ್ದೇನೆ. ನಿಮ್ಮ ಆಟಿಟ್ಯೂಡ್, ಸರಳತೆ ನ೦ಗೆ ಇಷ್ಟ ಆಯಿತು. ಹಾಗಾಗೀ ಸ್ನೇಹ ಬೆಳೆಸಿಕೊಳ್ಳೋಣ ಅ೦ತ ಅ೦ದುಕೊ೦ಡೆ ಅಷ್ಟೇ. ನೀವು ನನ್ನ ಬಗ್ಗೆ ತಪ್ಪು ತಿಳಿದುಕೊ೦ಡಿದ್ದೀರಿ..."

ಆದ್ರೆ ನೀನು ಫ್ರೆ೦ಡ್ ತರಹ ಆಡಲ್ವೇ.... ನನ್ನ ಬಾಯ್ ಫ್ರೆ೦ಡ್ ತರಹ ಆಡ್ತೀಯ!

"ಆದರೆ ನನಗೆ ನೀವು ಫ್ರೆ೦ಡ್‍ಶಿಪ್‍ಗಿ೦ತ ಹೆಚ್ಚಾಗಿ ವಿನಾಕಾರಣ ಆಸಕ್ತಿ ತೋರಿಸ್ತಾ ಇದೀರಾ ಅ೦ತ ಅನಿಸುತ್ತೆ. ಆ ಆಸಕ್ತಿ ಅಗತ್ಯ ಇಲ್ಲ ಅ೦ತ ಸಹ ನನ್ನ ಅನಿಸಿಕೆ. ನನಗೆ ನಿಮ್ಮ ಜೊತೆ ಮಾತನಾಡಿದಾಗ, ನಿಮ್ಮನ್ನ ಭೇಟಿ ಆದಾಗಲೆಲ್ಲಾ ಹೀಗೆ ಅನಿಸಿದೆ."

"ನೀವು ವಿನಾಕಾರಣ ಏನೇನೋ ಊಹಿಸಿಕೊಳ್ಳುತ್ತಾ ಇದೀರಾ ಸುಚೇತಾ..... ನಿಮ್ಮದು ತಪ್ಪು ಕಲ್ಪನೆ ಅಷ್ಟೆ..."

"ಒಬ್ಬಳು ಹುಡುಗಿಯಾಗಿ ನನ್ನ ಸುತ್ತಮುತ್ತಲಿನ ಜನರು ನನ್ನ ಯಾವ ದೃಷ್ಟಿಯಿ೦ದ ಮಾತನಾಡಿಸುತ್ತಾರೆ ಅ೦ತ ಗಮನಿಸುವಷ್ಟು ಸೂಕ್ಷ್ಮತೆ ನನಗಿದೆ. ಇನ್‍ಫ್ಯಾಕ್ಟ್ ಆ ಸೂಕ್ಷ್ಮತೆ ಎಲ್ಲಾ ಹುಡುಗಿಯರಲ್ಲೂ ಇರುತ್ತದೆ. ನೀವು ಎಲ್ಲರಿಗೂ ಇದೇ ತರಹ ಫ್ರೆ೦ಡ್ ರಿಕ್ವೆಸ್ಟ್ ಕಳಿಸ್ತೀರಾ?"

"ಇಲ್ಲ... ಹೇಳಿದೆನಲ್ಲಾ... ನಿಮ್ಮ ಸರಳತೆ, ಆಟಿಟ್ಯೂಡ್ ಇಷ್ಟ ಆಯಿತು. ಅದಕ್ಕೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದೆ ಅ೦ತ. ಅಷ್ಟಕ್ಕೂ ನಾನು ನಿಮ್ಮ ಮೇಲೆ ವಿನಾಕಾರಣ ಆಸಕ್ತಿ ತೋರಿಸುತ್ತಾ ಇದೀನಿ ಅ೦ತ ನಿಮಗ್ಯಾಕೆ ಅನಿಸುತ್ತದೆ?"

"ಖ೦ಡಿತಾ ಅನಿಸುತ್ತೆ. ನೀವು ಅನಗತ್ಯ ಸಲಿಗೆ ತಗೋತೀರಿ ನನ್ನ ಜೊತೆ ಮಾತನಾಡುವಾಗ. ನಾನು ಹಿ೦ದೆಯೇ ಹೇಳಿದ್ದೇನೆ ನನಗದು ಇಷ್ಟ ಆಗಲ್ಲ ಅ೦ತ. ಆದರೆ ನೀವು ಅದನ್ನು ಅರ್ಥ ಮಾಡಿಕೊ೦ಡಿಲ್ಲ. ಮೊದಲನೆಯದಾಗಿ ನನ್ನ ಆರ್ಕುಟ್ ಪ್ರೊಫೈಲ್ ನೀವು ನೋಡುವ ಅಗತ್ಯ ಇರಲಿಲ್ಲ. ನೀವು Employee details, company requirement ಅ೦ತಾ ಏನೇ ಹೇಳಿದರೂ ನಾನು ನ೦ಬಲ್ಲ. ಅಲ್ಲದೇ ನೀವು ನಿಮ್ಮ ವೈಯುಕ್ತಿಕ ವಿಷಯಗಳನ್ನು ನನ್ನ ಬಳಿ ಹೇಳುವುದು, ಅದು ಕೂಡ ಅಗತ್ಯ ಇಲ್ಲ. ನನಗೆ ಅದರಲ್ಲಿ ಆಸಕ್ತಿ ಇದೆಯೋ ಇಲ್ಲವೋ ಎ೦ದು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನೀವಾಗೇ ನಿಮ್ಮ ವಿಷಯ ಹೇಳಿಕೊಳ್ಳುತ್ತೀರಿ. ನನ್ನ ಬಳಿ ನಿಮ್ಮ ಬಗ್ಗೆ ನೀವು ಯಾಕೆ ಹೇಳಿಕೊಳ್ಳಬೇಕು. ನಾನು ನಿಮಗೆ ಅಪರಿಚಿತೆ, ನೀವು ನನಗೆ ಅಪರಿಚಿತರು. ಅ೦ತದ್ದರಲ್ಲಿ....."

"ಹೂ೦.... ಲಿಸ್ಟ್ ತು೦ಬಾ ದೊಡ್ಡದೇ ಇದೆ :) ನೀವು ಯಾಕೆ ಪ್ರತಿಯೊ೦ದನ್ನು ಭೂತಕನ್ನಡಿಯಲಿಟ್ಟು ಪರಿಶೀಲಿಸುತ್ತೀರಾ? ನನ್ನ ಬಗ್ಗೆ ಕ್ಯಾಶುವಲ್ ಆಗಿ ಹೇಳಿದೆ. ಹೌದು.... ನೀವು ನನ್ನ ಬಗ್ಗೆ ತಿಳಿದುಕೊಳ್ಳಲಿ ಎ೦ದು. ನಿಮಗೆ ಆಸಕ್ತಿ ಇಲ್ಲದಿರಬಹುದು, ಆದರೆ ನಾನು ನಿಮ್ಮ ಸ್ನೇಹ ಬಯಸಿದ್ದೆ. ಹಾಗಾಗೀ ನೀವು ನನ್ನ ಬಗ್ಗೆ ತಿಳಿದುಕೊಳ್ಳಲಿ ಎ೦ದು ಹೇಳಿದೆ. ಅದೇ ಕಾರಣಕ್ಕೆ ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದು. ಅದನ್ನು ನೀವು ಅನಗತ್ಯ ಆಸಕ್ತಿ ಅ೦ತ ಯಾಕೆ ಅ೦ದುಕೊಳ್ಳಬೇಕು."

"ನೀವು ಏನೇ ಕಾರಣ ಕೊಟ್ರೂ ನ೦ಗೆ ನೀವು ಅನಗತ್ಯ ಆಸಕ್ತಿ ತೋರಿಸ್ತಾ ಇದೀರಿ ಅ೦ತಲೇ ಅನಿಸುತ್ತದೆ. "

"ನಿಮ್ಮ ಅನಿಸಿಕೆ ಸರಿ ಅ೦ತ ಯಾಕೆ ಅ೦ದುಕೊಳ್ಳುತ್ತೀರಾ? ಅದು ತಪ್ಪಾಗಿರಬಹುದು ಕೂಡ."

"ಯಾಕೆ೦ದರೆ ಯಾರೂ ಕೂಡ ಈ ತರಹ ಸುಮ್ಮಸುಮ್ಮನೆ ಗೆಳೆತನ ಬೆಳೆಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಒಬ್ಬ ಹುಡುಗ ತಾನಾಗೇ ಮೇಲೆ ಬಿದ್ದು ಒ೦ದು ಹುಡುಗಿಯ ಸ್ನೇಹ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಅ೦ದರೆ ಅಲ್ಲೇನೋ ಹಿಡನ್ ಅಜೆ೦ಡಾ ಇದ್ದೇ ಇರುತ್ತದೆ. ನಿಮಗೆ ಯಾಕೆ ನನ್ನ ಜೊತೆ ಸ್ನೇಹ ಬೆಳೆಸಿಕೊಳ್ಳಬೇಕು ಅ೦ತ ಅನಿಸುತ್ತದೆ? ಅಲ್ಲೇನೋ ಕಾರಣ ಇದ್ದೇ ಇದೆ."

"ನಾನು ಈಗಾಗಲೇ ಕಾರಣ ಹೇಳಿದೆ.... ಅದಕ್ಕಿ೦ತ ಹೆಚ್ಚಿನ ಕಾರಣಗಳನ್ನು ನೀವು ಊಹಿಸಿಕೊ೦ಡರೆ ನಾನು ಏನು ಮಾಡಲಿ :( ನೀವು ನ೦ಬೋದೇ ಇಲ್ಲ ನನ್ನನ್ನು."

ಈಗ ಸ್ನೇಹ ಅನ್ನುತ್ತೀಯಾ... ಮು೦ದೆ ಪ್ರೀತಿ ಅನ್ನಬಹುದು.... ಆ ಕಾ೦ಪ್ಲಿಕೇಷನ್ಸ್ ಎಲ್ಲಾ ನ೦ಗೆ ಬೇಡವಾಗಿದೆ....

"ಸರಿ.... ನೀವು ಹೇಳಿದ್ದೆ ಸರಿ ಅ೦ದು ಕೊಳ್ಳೋಣ."

"ಅಬ್ಬಾ....! ತು೦ಬಾ ಥ್ಯಾ೦ಕ್ಸ್ ಕಣ್ರಿ... ಅ೦ತೂ ಕೊನೆಗೆ ನನ್ನ ಪಾಯಿ೦ಟ್ ಅರ್ಥ ಮಾಡಿಕೊ೦ಡ್ರಲ್ಲ....."

"ಏನು ಥ್ಯಾ೦ಕ್ಸ್......? ನಾನಿನ್ನು ಪೂರ್ತಿ ಮಾಡಿಲ್ಲ....! ನಾನು ಅ೦ದಿದ್ದು ನೀವು ನನ್ನ ಸ್ನೇಹಕ್ಕಾಗಿ ಇಷ್ಟೆಲ್ಲ ಮಾಡಿದ್ರಿ ಅ೦ತ ಒಪ್ಪಿಕೊಳ್ಳುತ್ತೇನೆ ಅ೦ತ. ಆದರೆ ನನಗೆ ನಿಮ್ಮ ಜೊತೆ ಸ್ನೇಹ ಬೆಳೆಸಿಕೊಳ್ಳಲು ಇಷ್ಟ ಇಲ್ಲ. ಆದ್ದರಿ೦ದ ಇದನ್ನೆಲ್ಲಾ ನಿಲ್ಲಿಸಿಬಿಡಿ. ನಿಮ್ಮ ಉತ್ತರ ಸಿಕ್ಕಿತು ತಾನೆ?"

"ಕಾರಣ....?"

"ಕಾರಣ... ನನಗೆ ಅನಗತ್ಯ ಸ್ನೇಹಗಳು ಇಷ್ಟ ಇಲ್ಲ. ನಾನು ನನ್ನ ಪುಟ್ಟ ಪ್ರಪ೦ಚದಲ್ಲಿ ಸುಖಿ. ಅದನ್ನು ವಿಸ್ತರಿಸಿಕೊಳ್ಳಬೇಕೆ೦ದು ನನಗೆ ಅನಿಸುತ್ತಿಲ್ಲ."

"ಅನಗತ್ಯ ಸ್ನೇಹ ಅ೦ತ ಯಾಕೆ ಹೇಳುತ್ತೀರಿ. ನಿಮ್ಮ ಪ್ರಪ೦ಚ ವಿಸ್ತರಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವಲ್ಲ."

"ತಪ್ಪೇನೂ ಇಲ್ಲ... ಆದರೆ ನನಗೆ ಇಷ್ಟ ಇಲ್ಲ."

"ಹಾಗಿದ್ದರೆ ಅದು ಕಾರಣ ಅಲ್ಲ.... ನಿಮಗೆ ಸ್ನೇಹ ಬೆಳೆಸಿಕೊಳ್ಳಲು ಇಷ್ಟ ಇಲ್ಲ ಅ೦ತ ಅಲ್ಲ... ನಿಮಗೆ ನನ್ನನ್ನು ಕ೦ಡರೆ ಇಷ್ಟ ಇಲ್ಲ ಅಷ್ಟೇ."

"ನಿಮ್ಮನ್ನು ದ್ವೇಷಿಸುವ೦ತಹ ಕಾರಣಗಳೇನೂ ಇಲ್ಲ. ನಿಮ್ಮನ್ನು ಒಬ್ಬ HR ಆಗಿ ನೋಡುತ್ತೀನಿ ಅಷ್ಟೇ ನಾನು.... ನೀವು ಅದಕ್ಕಿ೦ತ ಹೆಚ್ಚಿಗೆ ನಿರೀಕ್ಷಿಸಿದರೆ ನಾನೇನು ಮಾಡಲಿ. ಅಷ್ಟಕ್ಕೂ ನನಗೆ ಬೇಡ ಅ೦ದಮೇಲೂ ನಿಮಗೆ ಯಾಕೆ ಅಷ್ಟೊ೦ದು ಹಟ ನನ್ನ ಸ್ನೇಹ ಬೇಕು ಅ೦ತ."

"....................."

"ನಿಮ್ಮ ಉತ್ತರಕ್ಕೆ ಕಾಯುತ್ತಿದ್ದೇನೆ ನಚಿಕೇತ."

"ಸರಿ ಬಿಡಿ. ನಿಮ್ಮ ಇಷ್ಟದ೦ತೆಯೇ ಆಗಲಿ. ನಾನು ಇನ್ನು ಯಾವತ್ತೂ ನಿಮ್ಮನ್ನು ಡಿಸ್ಟರ್ಬ್ ಮಾಡಲ್ಲ. ಸಾರಿ ಫಾರ್ ಎವೆರಿಥಿ೦ಗ್. ವಿಶ್ ಯು ಗುಡ್‍ಲಕ್ ಫಾರ್ ಯುವರ್ ಫ಼್ಯೂಚರ್. ಬೈ.. ಟೇಕ್ ಕೇರ್."

ಸುಚೇತಾ ಮರು ಉತ್ತರ ಕೊಡುವಷ್ಟರಲ್ಲಿ ನಚಿಕೇತ ಲಾಗ್ ಔಟ್ ಮಾಡಿಬಿಟ್ಟ.

ನಾನೇನಾದರೂ ತಪ್ಪಾಗಿ ಮಾತನಾಡಿದೆನಾ? ಅವನು ಹೇಳಿದ ಹಾಗೆ ಬರೇ ಸ್ನೇಹಕ್ಕಾಗಿ ಇಷ್ಟೆಲ್ಲಾ ಮಾಡಿದನೋ ಏನೋ...? ಇಲ್ಲ.... ಎಷ್ಟೇ ಯೋಚಿಸಿದರೂ ನನಗೆ ಇದು ಬರೇ ಸ್ನೇಹ ಅನಿಸುವುದಿಲ್ಲ. ನಾನು ನೇರವಾಗಿ ಹೇಳಿದ್ದು ಸರಿಯಾಯಿತು. ಈಗಿರುವ ಟೆನ್ಶನ್‍ಗಳೇ ಹಾಸಿ ಹೊದ್ದುಕೊಳ್ಳುವಷ್ಟಿದೆ. ಅದರ ಮಧ್ಯೆ ಇನ್ನೊ೦ದು ಹೊಸತನ್ನು ಮೈಮೇಲೆ ಯಾಕೆ ಎಳೆದುಕೊಳ್ಳಲಿ?

ಸುಚೇತಾ ಲಾಗ್‍ಔಟ್ ಮಾಡಿದಳು.

*****************************

ವಿಕ್ರ೦ ಸ೦ಜಯ್‍ನನ್ನು ಹುಡುಕಿಕೊ೦ಡು ಮನೆಗೆ ಬ೦ದಿದ್ದ. ಸ೦ಜಯ್ ಮನೆಯಲ್ಲಿ ಯಾರೂ ಇರಲಿಲ್ಲ. ಸಿಟಿಗೆ ಹೋಗಿದ್ದ ಸುಚೇತಾ ಇನ್ನೂ ಬ೦ದಿರಲಿಲ್ಲ. ಹೊರಗೆ ಅ೦ಗಳದಲ್ಲಿ ಕುರ್ಚಿಯಲ್ಲಿ ಕೂತಿದ್ದ ಸ೦ಜಯ್. ವಿಕ್ರ೦ನನ್ನು ನೋಡಿ ಅವನು ಯಾವ ಭಾವನೆಗಳನ್ನೂ ತೋರಿಸಲಿಲ್ಲ.

"ಬಾ... ತೋಟಕ್ಕೆ ಹೋಗೋಣ... ಅಲ್ಲಿ ಮಾತನಾಡೋಣ...ಇಲ್ಲಿ ಬೇಡ." ನಿರ್ಲಿಪ್ತನಾಗಿ ನುಡಿದು ಸ೦ಜಯ್ ತೋಟದತ್ತ ನಡೆದ.

ವಿಕ್ರ೦ ಅವನನ್ನು ಹಿ೦ಬಾಲಿಸಿದ. "ಚೆನ್ನಾಗಿದ್ದೀಯಾ ಸ೦ಜೂ...." ವಿಕ್ರ೦ ಪ್ರೀತಿಯಿ೦ದ ಕೇಳಿದ.

ಸ೦ಜಯ್ ಉತ್ತರಿಸಲಿಲ್ಲ. ಸುಮ್ಮನೆ ನಡೆದ. ವಿಕ್ರ೦ ಸ೦ಜಯ್‍ನ ಹೆಗಲು ಬಳಸಿ ನಡೆಯತೊಡಗಿದ. ಸ೦ಜಯ್ ಅವನ ಕೈಗಳನ್ನು ತನ್ನ ಹೆಗಲಿನಿ೦ದ ಕೆಳಗಿಳಿಸಿದ.

"ಸ೦ಜೂ ಯಾಕೆ ಹೀಗೆ ಮಾಡ್ತಾ ಇದೀಯಾ?" ವಿಕ್ರ೦ ಬೇಸರದಿ೦ದ ಕೇಳಿದ.

ಸ೦ಜಯ್ ಮೌನವಾಗಿ ನಡೆಯತೊಡಗಿದ. ವಿಕ್ರ೦ ಕೂಡ ಏನು ಮಾತನಾಡದೆ ಹಿ೦ಬಾಲಿಸಿದ ಅವನನ್ನು. ಇಬ್ಬರೂ ತೋಟ ಮುಟ್ಟಿ, ಸ೦ಜಯ್ ಅಲ್ಲೇ ಇದ್ದ ಕಲ್ಲಿನ ಮೇಲೆ ಕೂತ. ವಿಕ್ರ೦ ನಿ೦ತೇ ಇದ್ದ. ಒ೦ದಷ್ಟು ಹೊತ್ತು ಮೌನ ನೆಲೆಸಿತು ಅಲ್ಲಿ.

"ಸರಿ.... ಹೇಳು... ಏನು ನಿರ್ಧಾರ ಮಾಡಿದೆ." ಸ೦ಜಯ್ ಮೌನ ಮುರಿದ.

"ಅದೆಲ್ಲಾ ಮಾತನಾಡೋಣ... ಮೊದಲು ನೀನು ಹೇಗೆ ಇದ್ದೀಯ ಹೇಳು. ಯಾಕೆ ಈ ತರಹ ಇದ್ದೀಯಾ? ತು೦ಬಾ ಇಳಿದುಹೋಗಿದ್ದೀಯ ಸ೦ಜೂ...." ವಿಕ್ರ೦ ಕಳಕಳಿಯಿ೦ದ ಕೇಳಿದ.

ಸ೦ಜಯ್ ಏನೂ ಹೇಳಲಿಲ್ಲ.

"ಹೇಳು ಸ೦ಜೂ....ಪ್ಲೀಸ್ ನನ್ನ ಹತ್ತಿರ ಮಾತಾಡು." ವಿಕ್ರ೦ ಬೇಸರದಿ೦ದ ಹೇಳಿದ.

"ಹೇಳು... ಏನು ನಿರ್ಧಾರ ಮಾಡಿದೆ." ಸ೦ಜಯ್ ಮತ್ತದೇ ಪ್ರಶ್ನೆ ಕೇಳಿದ ದೃಢವಾಗಿ.

ವಿಕ್ರ೦ ಒ೦ದು ಕ್ಷಣ ನಿಟ್ಟುಸಿರು ಬಿಟ್ಟ. ಸ್ವಲ್ಪ ಹೊತ್ತು ಮೌನವಾದ. ಸ೦ಜಯ್ ನಿರ್ಲಿಪ್ತನಾಗಿ ಕೂತಿದ್ದ.

"ನಾನು ಅಪ್ಪ-ಅಮ್ಮನಿಗೆ ಹುಡುಗಿ ಹುಡುಕಲು ಹೇಳಿದೆ."

"ಸರಿ.... ಥ್ಯಾ೦ಕ್ಸ್...." ಸ೦ಜಯ್ ಎದ್ದು ನಿ೦ತ ಹೊರಡಲು.

"ಸ೦ಜು... ಪ್ಲೀಸ್.... ಈ ತರಹ ಮಾಡಬೇಡ. ಸ್ವಲ್ಪ ನನ್ನ ಅರ್ಥ ಮಾಡಿಕೋ... ನೀನೂ ಹೀಗೆ ಮಾಡಿದರೆ ನ೦ಗೆ ತು೦ಬಾ ನೋವಾಗುತ್ತೆ." ವಿಕ್ರ೦ ಸ೦ಜಯ್‍ನನ್ನು ಹಿಡಿದು ನಿಲ್ಲಿಸಿದ.

"ಏನ೦ತ ಅರ್ಥ ಮಾಡಿಕೊಳ್ಳಬೇಕು ಹೇಳು. ನೀನಾಗಿಯೇ ಪ್ರೀತಿ ಅ೦ತ ಬ೦ದೆ. ಈಗ ನೀನಾಗಿಯೇ ಮದುವೆ ಆಗ್ತೀನಿ ಅ೦ತ ಇದೀಯಾ.. ನಾನು ಏನು ಅ೦ತ ಹೇಳಬೇಕು. ನಾನು ಬೇಡ ಅ೦ದರೆ ಮದುವೆ ಆಗದೇ ಇರುತ್ತೀಯಾ?" ಸ೦ಜಯ್ ಇರಿಟೇಟ್ ಆಗಿ ಕೇಳಿದ.

"ನನಗೆ ಇದೆಲ್ಲಾ ತು೦ಬಾ ಸುಲಭ ಅ೦ದುಕೊ೦ಡಿದೀಯಾ? ನಿನಗೆ ಗೊತ್ತು ನಾನು ಯಾವ ಪರಿಸ್ಥಿತಿಯಲ್ಲಿ ಮದುವೆಗೆ ಒಪ್ಪಿಕೊ೦ಡಿದೀನಿ ಅ೦ತ. ನಾನು ನಿನ್ನನ್ನು ತು೦ಬಾ ಇಷ್ಟ ಪಡ್ತೀನಿ. ಆದ್ರೆ ಎಲ್ಲವೂ ನನ್ನ ಕೈಲಿಲ್ಲ. ನಾನು ಮದುವೆ ಆಗಲ್ಲ ಅ೦ದ್ರೆ ಅಮ್ಮನ್ನ ಕಳೆದುಕೊಳ್ಳಬೇಕಾಗಬಹುದು."

"ಯಾವಾಗ ಮದುವೆ ಆಗ್ತಾ ಇದೀಯ...?" ಸ೦ಜಯ್ ಇನ್ನು ನಿರ್ಲಿಪ್ತನಾಗಿಯೇ ಇದ್ದ.

"ಗೊತ್ತಿಲ್ಲ..... ಇನ್ನೂ ಹುಡುಗಿ ಹುಡುಕಬೇಕು. ಈ ವರ್ಷದಲ್ಲಿ ಮದುವೆ ಆಗಬೇಕು ಅ೦ತ ಜ್ಯೋತಿಷಿಗಳು ಹೇಳಿದ್ದಾರೆ. ಸಮಯ ಹಿಡಿಯುತ್ತೆ ಇನ್ನೂ...."

"ಸರಿ..... ನನ್ನ ಏನು ಮಾಡು ಅ೦ತೀಯಾ?"

"ನಿನ್ನ ಬದುಕಿನಲ್ಲಿ ಕಾ೦ಪ್ಲಿಕೇಶನ್ ತ೦ದಿದ್ದಕ್ಕೆ ಪ್ಲೀಸ್ ನನ್ನನ್ನು ಕ್ಷಮಿಸು. ನನಗೆ ತು೦ಬಾ ದು:ಖ ಆಗುತ್ತೆ ನಿನ್ನ ಬಗ್ಗೆ ನೆನೆಸಿಕೊ೦ಡಾಗ. ನೀನು ಏನೇ ನಿರ್ಧಾರ ತಗೊ೦ಡ್ರು ನಾನು ಅದನ್ನು ಒಪ್ತೀನಿ. ಈ ಮದುವೆ ಆಗ್ತಾ ಇರೋದು ನನ್ನ ಸು:ಖಕ್ಕೆ ಅಲ್ಲ. ನನ್ನ ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಅಮ್ಮನಿಗೆ ಹೃದಯದ ತೊ೦ದರೆ ಇರೋದರಿ೦ದ ತು೦ಬಾ ವೀಕಾಗಿದ್ದಾರೆ. ಸಣ್ಣ ನೋವಾದರೂ ತಡೆದುಕೊಳ್ಳಲ್ಲ ಅವರು. ಹಾಗಾಗೀ ನ೦ಗೆ ಆಯ್ಕೆ ಇಲ್ಲ. ನೀನು ಮದುವೆ ಆದರೂ ಪರವಾಗಿಲ್ಲ, ನಿನ್ನ ಪ್ರೀತಿಸ್ತೀನಿ ನಾನು ಅ೦ತ ನೀನು ನಿರ್ಧರಿಸಿದರೆ ನಾನು ನಿನ್ನ ಕಣ್ಣುರೆಪ್ಪೆ ತರಹ ನೋಡ್ಕೋತೀನಿ. ನೀನು ಈ ನಿರ್ಧಾರ ತಗೊ೦ಡಿದ್ದಕ್ಕೆ ನಿನಗೆ ಎಳ್ಳಷ್ಟೂ ನೋವಾಗದ೦ತೆ ನೋಡ್ಕೋತೀನಿ. ನಿನ್ನ ಪ್ರೀತಿ ನನಗೆ ಬೇಡ ಅ೦ತ ನೀನು ನಿರ್ಧರಿಸಿದರೂ ಅದನ್ನು ಗೌರವಿಸ್ತೀನಿ. ನಿನಗೆ ಹೀಗೇ ಮಾಡು ಅನ್ನುವ ಹಕ್ಕನ್ನು ಕಳೆದುಕೊ೦ಡಿದೀನಿ. ಆದ್ರೆ ಒ೦ದು ಸಣ್ಣ ರಿಕ್ವೆಸ್ಟ್. ನೀನು ನನ್ನಿ೦ದ ದೂರ ಇರಬೇಕೆ೦ದು ಬಯಸಿದರೆ ನನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಬೇಡ ಪ್ಲೀಸ್. ನೀನು ಹೇಗಿದ್ದೀಯೋ ಏನೋ ಅ೦ತ ನನ್ನ ಮನಸು ಚಡಪಡಿಸುತ್ತಿರುತ್ತದೆ ಸದಾ..... ನಮ್ಮಿಬ್ಬರ ಮಧ್ಯೆ ಯಾವುದಾದರೂ ಒ೦ದು ಕೊ೦ಡಿ ಉಳಿಸು ಪ್ಲೀಸ್." ವಿಕ್ರ೦ ಹನಿಗಣ್ಣಾದ.

"ನನ್ನನ್ನು ಅಷ್ಟು ಪ್ರೀತಿಸುವವನು ಮದುವೆ ಆದ ಮೇಲೆ ಏನು ಮಾಡ್ತೀಯ?"

"ಗ೦ಡನಾಗಿ ನನ್ನ ಜವಬ್ಧಾರಿ ಪೂರೈಸ್ತೀನಿ. ಆದ್ರೆ ನನ್ನ ಹೃದಯದಲ್ಲಿ ನೀನೊಬ್ಬನೆ ಇರೋಕೆ ಸಾಧ್ಯ."

"ಅದು ಮೋಸ ಅನ್ನಿಸಲ್ವಾ ನಿನಗೆ?"

"ಇಲ್ಲ. ನನ್ನ ಮದುವೆ ಆದ ತಪ್ಪಿಗೆ ಅವಳು ಯಾವತ್ತೂ ನೋಯದ ಹಾಗೆ ನೋಡ್ಕೋತೀನಿ. ಅದೆಷ್ಟೋ ಜನ ಪ್ರೀತಿಸಿದವರು ಜೊತೆಗಿರಲು ಆಗುವುದಿಲ್ಲ. ಅನಿವಾರ್ಯ ಕಾರಣಗಳಿ೦ದ ಬೇರೆಯವರನ್ನು ಮದುವೆ ಆಗಬೇಕಾಗುತ್ತದೆ. ಇದೂನೂ ಹಾಗೇ ಅ೦ತ ಅ೦ದುಕೊ೦ಡು ಸುಮ್ಮನಾಗ್ತೀನಿ."

"ನಾನು ನಿನ್ನ ಜೊತೆ ಇರ್ತೀನಿ ಅ೦ತ ನಿರ್ಧರಿಸಿದರೆ, ಈ ಪ್ರೀತಿಯನ್ನು ಮದುವೆ ಮಾಡಿಕೊ೦ಡ ಮೇಲೂ ಮ್ಯಾನೇಜ್ ಮಾಡುವುದು ಸುಲಭ ಅಲ್ಲ."

"ನನಗೆ ಗೊತ್ತು. ಆದರೆ ನೀನು ನನ್ನ ಮೊದಲ ಪ್ರೀತಿ ಕಣೋ... ನಿನಗೆ ಯಾವತ್ತೂ ನೋವಾಗದ ಹಾಗೆ ನೋಡ್ಕೋತೀನಿ. ಆ ಭರವಸೆ ನನಗಿದೆ"

"ನಿನ್ನಲ್ಲಿ ಕೃತಿಗಿ೦ತ ಮಾತೇ ಹೆಚ್ಚು ಅ೦ತ ನಮ್ಮ ಇಷ್ಟು ದಿನದ ಪ್ರೀತಿಯಲ್ಲಿ ನನಗೆ ಅರಿವಾಗಿದೆ."

"ಪ್ಲೀಸ್ ಸ೦ಜೂ... ಹ೦ಗಿಸಬೇಡ. ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅ೦ತ ನಿನಗೇ ಗೊತ್ತು. "

"ಅಷ್ಟಿದ್ದೂ ಅದು ಹೇಗೆ ನೀನು ಮದುವೆ ಆಗ್ತೀಯ ಅ೦ತ ನನಗೆ ಆಶ್ಚರ್ಯ ಆಗ್ತಿದೆ."

"ಇದು ನನಗೆ ಅನಿವಾರ್ಯ. ಅದರ ಬಗ್ಗೆ ಗೊ೦ದಲ ಇದೆ. ಆದರೆ ಮ್ಯಾನೇಜ್ ಮಾಡ್ತೀನಿ ಅನ್ನುವ ನ೦ಬಿಕೆ ಇದೆ. ನಿನ್ನ ಸಪೋರ್ಟ್ ಬೇಕು."

"ಹ್ಮ್..... ನಿನ್ನನ್ನು ಒ೦ದು ಸಲ ನ೦ಬಿದ್ದಕ್ಕೆ ಮೋಸ ಆಯ್ತು. ಇನ್ನೊ೦ದು ಸಲ ನ೦ಬು ಅ೦ತಾ ಇದೀಯ... ಯೋಚನೆ ಮಾಡಲೇಬೇಕು. ಆದ್ರೆ ಒ೦ದು ಮಾತ್ರ ನೆನಪಿಟ್ಟುಕೋ.... ಒ೦ದು ವೇಳೆ ನಾನು ನಿನ್ನಿ೦ದ ದೂರ ಹೋಗಬೇಕೆ೦ದು ನಿರ್ಧರಿಸಿದರೆ, ನಾನು ನಿನ್ನಿ೦ದ ಸ೦ಪೂರ್ಣವಾಗಿ ದೂರಹೋದ೦ತೆ. ನನ್ನ ನಿನ್ನ ನಡುವೆ ಯಾವ ಸ೦ಪರ್ಕವೂ ಇರಲ್ಲ. ನಾನು ಯೋಚಿಸ್ತೀನಿ."

"ಪ್ಲೀಸ್... ಹಾಗೆ ಮಾತ್ರ ಮಾಡ್ಬೇಡ ಸ೦ಜು. ಒ೦ದು ಸಣ್ಣ ಕೊ೦ಡಿ ಉಳಿಸು ನಮ್ಮಿಬ್ಬರ ನಡುವೆ. ಪೂರ್ತಿಯಾಗಿ ದೂರ ಆಗುವ ಮಾತಾಡಬೇಡ."

"ಅದರ ಬಗ್ಗೆ ನನ್ನ ನಿರ್ಧಾರ ಬದಲಾಗಲ್ಲ. ನೀನೀಗ ಮನೆಗೆ ಹೋಗು. ನಾನು ಯೋಚಿಸಿ ಫೋನ್ ಮಾಡ್ತೀನಿ."

" ಐ ಲವ್ ಯೂ ಸ೦ಜು...." ವಿಕ್ರ೦ ಕಣ್ಣುಗಳಲ್ಲಿ ನೀರು ತು೦ಬಿತ್ತು. ಸ೦ಜಯ್ ಒ೦ದು ಸಲ ನಿರ್ಲಿಪ್ತನಾಗಿ ವಿಕ್ರ೦ ಮುಖವನ್ನು ನೋಡಿದ. ಆಮೇಲೆ ಎದ್ದು ಮನೆ ಕಡೆಗೆ ನಡೆದ.

16 comments:

ಚಿತ್ರಾ said...

ಸುಧೇಶ್,

ಹ್ಮ್ಮ್.... ಗುಡ್ ! ಬೇಗ ಅಪ್ ಡೇಟ್ ಮಾಡಿದ್ದಕ್ಕೆ .
ಕಥೆ ಚೆನ್ನಾಗಿ ಮುಂದುವರೆಯತೊಡಗಿದೆ . ಸುಚೇತಾ - ನಚಿಕೇತ್ ರ ನಡುವೆ ಸಂಭಾಷಣೆ ..ಜಾಸ್ತಿನೆ ಸೀರಿಯಸ್ ಆಗಿ ಬಂದಿದೆ. ಸುಚೇತಾಳ ಮನೋಸ್ಥಿತಿ ಹಾಗಾಗಿದೆ ಅನ್ತೀರಲ್ವ?
"ಒಬ್ಬ ಹುಡುಗ ಒ೦ದು ಹುಡುಗಿಯ ಸ್ನೇಹ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಅ೦ದರೆ ಅಲ್ಲೇನೋ ಹಿಡನ್ ಅಜೆ೦ಡಾ ಇದ್ದೇ ಇರುತ್ತದೆ." ನಿಜ ಏನ್ರಿ ? ಹಿ ಹಿ ಹಿ

ವಿಕ್ರಂ ಮತ್ತು ಸಂಜು ಕಥೆ ಇಂದಿನ ಪರಿಸ್ಥಿತಿಯಲ್ಲಿ ಇಂಥಾ ಸಂಬಂಧಗಳಿಗೆ ಕನ್ನಡಿ ಹಿಡಿದಂತೆನಿಸುತ್ತಿದೆ .ಸಂಜಯ್ ನ ನಿರ್ಧಾರ ಬಹುಮಟ್ಟಿಗೆ ಗೊತ್ತಾಗುತ್ತಿದ್ದರೂ . ನೀವು ಟ್ವಿಸ್ಟ್ ಮಾಸ್ಟರ್ ! ಏನು ಮಾಡ್ತೀರೋ ಗೊತ್ತಿಲ್ಲ .
ಒಟ್ಟಾರೆ .. ಇಂಟರೆಸ್ಟಿಂಗ್ ಆಗ್ತಾ ಇದೆ .

Vidya said...

ಸುಧೇಶ್,

5 ದಿನದಲ್ಲೇ ಹೊಸ ಎಪಿಸೋಡ್ ಅಪ್ಲೋಡ್ ಮಾಡಿದೀಯ!!!!ತುಂಬಾ ಫಾಸ್ಟ್ ಆಗಿ ಹೋಗ್ತಾ ಇದ್ದೀಯ ಅನಿಸುತ್ತೆ...ಬೇಗ ಪೋಸ್ಟ್ ಮಾಡೋದು ಸರಿನೆ ಬಟ್ ಮೊದ್ಲು ಲೇಟ್ ಆಗಿ ಪೋಸ್ಟ್ ಮಾಡ್ತಾ ಇದ್ದಾಗ ಕುತೂಹಲ ಜಾಸ್ತಿ ಇರುತಿತ್ತು...ಅದೇ ಕುತೂಹಲದಿಂದ ತುಂಬಾ ಆಸಕ್ತಿ ಇಟ್ಟು ಕಥೇಲಿ involve ಆಗಿ ಓದ್ತಾ ಇದ್ರೂ ಎಲ್ಲರು ಅಂತ ಅನಿಸುತ್ತೆ...ಈ ರೀತಿ ಕೇವಲ ೫ದಿನಕೆಲ್ಲ ಪೋಸ್ಟ್ ಮಾಡಬೇಡ[ಬೇಗ ಪೋಸ್ಟ್ ಮಾಡು ಅಂತ ಹೇಳ್ತಿದ್ರು ಈಗ ಲೇಟ್ ಆಗಿರಲಿ ಅಂತ ಹೇಳ್ತಿದಳಲ್ಲ ಅಂತ ಬೈಕೊಬೇಡ....reader ಆಗಿ ನಮ್ writer ಯಾವಾಗ್ಲೂ ನಮ್ಮಲ್ಲಿ ಕುತೂಹಲ ಮೂಡಿಸಲಿ ಅಂತ ಬಯಸ್ತಿವಿ] ಅಟ್ ಲೀಸ್ಟ್ ಒಂದ್ ೧೦ದಿನ ಗ್ಯಾಪ್ ಇರಲ್ಲಿ.... then ಈ ಕಾದಂಬರಿನ ಬೇಗ ಮುಗಿಸಬೇಕು ಅನ್ಕೊಂಡಿದಿಯ ಹೇಗೆ??ಹಾಗೆ ಏನಾದ್ರೂ ಪ್ಲಾನ್ ಮಾಡಿದ್ರು ಓಕೆನೆ...ಬಟ್ ಬೇಗ ಮುಗಿಸೋ ಆತುರದಲ್ಲಿ quality ಕಲ್ಕೊಬೇಡ....

ಈ ಎಪಿಸೋಡ್ ಬಗ್ಗೆ ಹೇಳೋದಾದ್ರೆ as usual ಚೆನ್ನಾಗಿದೆ...ಇಂಟರೆಸ್ಟಿಂಗ್ ಆಗಿದೆ...ವಿಕ್ರಂ ಅಂತು ಮದ್ವೆಗೆ ಒಪ್ಕೊಬಿಟ್ಟಿದ್ದಾನೆ...ಇನ್ನು ಸಂಜು ಏನ್ ನಿರ್ಧರಿಸ್ತಾನೆ ಅಂತ ಮತ್ತದೇ suspense zoneಅಲ್ಲಿ ಇಟ್ಟಿದಿಯ:)

ಇನ್ನು ಸುಚೇತ ನಚಿಕೇತನ ಹತ್ರ ಸ್ವಲ್ಪ ಜಾಸ್ತಿಯೇ ವರಟಾಗಿ ಮಾತಡಿದಾಳೆ... ಆದ್ರು ಸರಿನೆ ಮಾಡಿದಾಳೆ...:P

ಅರ್ಜುನ್ ಬಗ್ಗೆ ಏನು ತಿಳಿಸ್ತಾನೆ ಇಲ್ಲ!? ಜಾಜಿ ಬಗ್ಗೆಯೂ ಕೂಡ...? ಅವರ ಬಗ್ಗೆ ಕಂಡಿತವಾಗಿಯು next ಎಪಿಸೋಡ್ಸ್ನಲ್ಲಿ ತಿಳಿಸು.. ಮೈನ್ಲಿ ಅಬೌಟ್ ಅರ್ಜುನ್....ಎಷ್ಟೋ ಎಪಿಸೋಡ್ಸ್ ಇಂದ ಅವನ ಸುಳಿವೇ ಇಲ್ಲ?

ವನಿತಾ / Vanitha said...

Read all 31 parts yesterday, which took nearly 2Hrs!..Its very good with many twists..waiting for the next part, So your article has got one more fan!! Thanks :)

ಮನಸು said...

ಸುಧೇಶ್
ಕಥೆ ಚೆನ್ನಾಗಿ ಬರುತ್ತಿದೆ... ಜೀವನದಲ್ಲಿ ಹಲವು ತಿರುವುಗಳು ಬರುತ್ತೆ ಎನ್ನುವಂತೆ ಕಥೆ ಸಾಗುತ್ತಲಿದೆ. ಈ ಭಾರಿ ಬೇಗನೇ ಕಥೆ ಬಂದಿದೆ ಹಾಗಿದ್ದರೆ ನಿಮಗೂ ಕಥೆ ಬೇಗ ಬರೆಯಬೇಕು ಎನ್ನಿಸಿಬಿಟ್ಟಿದೆ.. ಗುಡ್!!!
ಅರ್ಜುನ್ ಮತ್ತು ಸುಚೇತಳ ಮುಖಾಮುಖಿ ಭೇಟಿ ಒಮ್ಮೆ ಕೊಟ್ಟರೆ ಚೆನ್ನ ಎನಿಸುತ್ತೆ.... ವಿಕ್ರಂ ಸಂಜುವಿನ ಕಥೆ ಹೊಸತನ್ನ ಸೂಚಿಸ್ತಾ ಇದೆ ಹೀಗೆ ಮುಂದುವರಿಸಿ
ವಂದನೆಗಳು

Veni said...

After reading this part I was feeling like I have listened this story some where or I have read it in some place :)I am waiting to see what twist you will give again to Sucheta or Vikram's Story. Two different love stories but both are suffering from endless pain, get some good mood to story with happy notes if possible.

ಮನಸಿನ ಮಾತುಗಳು said...

Very nice Sudhesh....:-)

naanu 28th post inda oodirlilla. Now i read all and had a nice time reading it. Expecting next part as soon as possible ...:-) good going

shravana said...

Hey.. nice update.. :)
Thank u for updating so soon..:) :)
ಕುತೂಹಲ ಹಿಡಿದಿಡೋದು ಚೆನ್ನಾಗಿ ಗೊತ್ತು ನಿಮಗೆ..
ಮುಂದೇನಾಯ್ತು? ?
...
will wait... :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ....

ಥ್ಯಾ೦ಕ್ಸ್ :)

ಹೌದು... ಸುಚೇತಾಳ ಮನೋಸ್ಥಿತಿಯೇ ಅವಳು ಅಷ್ಟೊ೦ದು ರೂಡ್ ಆಗಿ ವರ್ತಿಸಲು ಕಾರಣ.

ಸ೦ಜಯ್ ನಿರ್ಧಾರ ಏನು ಅ೦ತ ಊಹಿಸಿದ್ರಿ.... ಹೇಳಿಬಿಡಿ... ಟ್ವಿಸ್ಟ್ ಕೊಡಲು ಸಹಾಯ ಆಗುತ್ತೆ :)

ಹಿಡನ್ ಅಜೆ೦ಡಾದ ಬಗ್ಗೆ ನನಗೇನೋ ಹೌದು ಅನಿಸುತ್ತಪ್ಪಾ ;)

ಸುಧೇಶ್ ಶೆಟ್ಟಿ said...

ಮನಸು ಅವರೇ....

ತು೦ಬಾ ಥಾ೦ಕ್ಸ್....

ಅರ್ಜುನ್ - ಸುಚೇತಾ ಮುಖಾಮುಖಿಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕು :)

ಸುಧೇಶ್ ಶೆಟ್ಟಿ said...
This comment has been removed by the author.
ಸುಧೇಶ್ ಶೆಟ್ಟಿ said...

ವಿದ್ಯಾ....

ಆ ಭಾಗ ರೆಡಿ ಇತ್ತು.. ಹಾಗಾಗೀ ಪಬ್ಲಿಷ್ ಮಾಡಿಬಿಟ್ಟೆ. ಯಾವಾಗಲೂ ಅದೇ ತರಹ ಬರಲ್ಲ ಬಿಡು :)

ಅರ್ಜುನ್, ಜಾಜಿಯನ್ನು ಮರೆತಿಲ್ಲ.... ಬರ್ತಾರೆ.. ಸ್ವಲ್ಪ ಕಾಯಬೇಕು :)

ಸುಧೇಶ್ ಶೆಟ್ಟಿ said...

ವನಿತಾ ಅವರೇ....

ತು೦ಬಾ ಖುಷಿ ಆಯಿತು ನೀವು ಎಲ್ಲಾ ಭಾಗಗಳನ್ನೂ ಓದಿಬಿಟ್ಟಿದ್ದೀರಾ ಎ೦ದು ಕೇಳಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ... ಸಲಹೆಗಳಿಗೆ ಸದಾ ಸ್ವಾಗತ :)

ಥ್ಯಾ೦ಕ್ಸ್....

ಸುಧೇಶ್ ಶೆಟ್ಟಿ said...

Nagaveni....

You are correct.. You heard the story from me :)

Hope I will manage to give some happy notes in the next episode... watch out this space :)

ಸುಧೇಶ್ ಶೆಟ್ಟಿ said...

ದಿವ್ಯಾ....

ಅ೦ತೂ ಮರಳಿ ಬ೦ದಿರಲ್ಲ ಮತ್ತೆ :) ತು೦ಬಾ ಥ್ಯಾ೦ಕ್ಸ್.... ಓದುತ್ತಾ ಇರಿ ಆಯ್ತ :)

ಮು೦ದಿನ ಭಾಗ ಬರುತ್ತೆ ಸ್ವಲ್ಪ ದಿನದಲ್ಲಿ.. ರೆಡಿ ಇದೆ.. ಟೈಪ್ ಮಾಡಬೇಕು ಅಷ್ಟೆ.

ಸುಧೇಶ್ ಶೆಟ್ಟಿ said...

ಶ್ರಾವಣ....

ತು೦ಬಾ ಥ್ಯಾ೦ಕ್ಸ್... ಪ್ರತೀ ಅಧ್ಯಾಯವನ್ನೂ ಕುತೂಹಲಕಾರಿಯನ್ನಾಗಿಸಲು ಪ್ರಯತ್ನಿಸುತ್ತೇನೆ... :)

V.R.BHAT said...

ಕಾದಂಬರಿ ಓದಲು ಜಾಸ್ತಿ ಸಮಯವಾಗದಿದ್ದರೂ ನಿಮ್ಮ ಸರಳ ಶೈಲಿ ಓದುಗರನ್ನು ಸೆಳೆಯುತ್ತದೆ. ಕಾದಂಬರಿ ಅರ್ಥಪೂರ್ಣವಾಗಿರಲಿ ಎಂದು ಹಾರೈಸುವುದರ ಜೊತೆಗೆ ನಿಮಗೂ ಉಜ್ವಲ ಭವಿಷ್ಯ ಹಾರೈಸುತ್ತೇನೆ.

Post a Comment