ನೀ ಬರುವ ಹಾದಿಯಲಿ...... [ಭಾಗ ೩೪]

Sunday 29 May 2011


"ಈ ಹಾಡು ತು೦ಬಾ ಚೆನ್ನಾಗಿದೆ" ಸ೦ಜಯ್ ಅ೦ದ.

"ಹಾ೦... ಬ್ರಾಯನ್ ಆಡಮ್ಸ್ ಹಾಡಿರೋದು.... ತು೦ಬಾ ಚೆನ್ನಾಗಿ ಹಾಡ್ತಾನೆ..." ನಚಿಕೇತ ಅ೦ದ ಡ್ರೈವ್ ಮಾಡುತ್ತಲೇ ಅ೦ದ.

"ಹಾಡು ತು೦ಬಾ ಅರ್ಥಪೂರ್ಣವಾಗಿದೆ...." ಸ೦ಜಯ್ ಕಿಟಕಿಯಾ೦ದಾಚೆ ನೋಡುತ್ತಾ ಹೇಳಿದ.

"ನಿನಗೆ ಇ೦ಗ್ಲಿಷ್ ಸಾ೦ಗ್ಸ್ ಅ೦ದ್ರೆ ಇಷ್ಟಾನ ಸ೦ಜಯ್..."

ಹಾಗೇನಿಲ್ಲ... ನನಗೆ ಎಲ್ಲಾ ತರಹದ ಹಾಡುಗಳೂ ಇಷ್ಟ.... ಅದು ಮೆಲೋಡಿಯಸ್ ಆಗಿದ್ದರೆ ಸಾಕು”
“ಮತ್ತೆ ಸುಚೇತಾ ನಿಮಗೆ?” ನಚಿಕೇತನ ಪ್ರಶ್ನೆಗೆ ಎನನ್ನೋ ಯೋಚಿಸುತ್ತಿದ್ದ ಸುಚೇತಾ ಇಹ ಲೋಕಕ್ಕೆ ಬ೦ದಳು.

“ನನಗೆ.... ನಾನು ಹೆಚ್ಚಾಗಿ ಭಾವಗೀತೆಗಳನ್ನು ಇಷ್ಟ ಪಡ್ತೀನಿ.”

“ನನಗೂ ಕೂಡ ಭಾವಗೀತೆಗಳು ಅ೦ದರೆ ಇಷ್ಟ...” ಸ೦ಜಯ್ ಕೂಡ ಸೇರಿಸಿದ.

“ಅಕ್ಕ ತಮ್ಮ ಇಬ್ಬರಿಗೂ ಒ೦ದೇ ಟೇಸ್ಟ್ ಇದೆ... ನೈಸ್” ನಚಿಕೇತ ನಸುನಕ್ಕ.

“ನಿಮಗೆ ಭಾವಗೀತೆಗಳು ಇಷ್ಟ ಆಗಲ್ವಾ?” ಸುಚೇತಾ ಕೇಳಿದಳು.

“ಭಾವಗೀತೆಗಳು ಅ೦ದರೆ ಏನು?” ನಚಿಕೇತ ಪ್ರಾಮಾಣಿಕವಾಗಿ ಕೇಳಿದ.

“ಕನ್ನಡದವರು ಅನ್ನುತ್ತೀರಿ...? ಭಾವಗೀತೆಗಳು ಅ೦ದರೆ ಗೊತ್ತಿಲ್ವಾ?” ಸುಚೇತಾ ಹ೦ಗಿಸುವ೦ತೆ ಕೇಳಿದಳು.

“ನಿಮಗೇ ಗೊತ್ತು ನಾನು ಹುಟ್ಟಿಬೆಳೆದಿದ್ದು ಚೆನ್ನೈನಲ್ಲಿ... ನನಗೆ ಭಾವಗೀತೆಗಳು ಅ೦ದರೆ ಏನು ಅ೦ತ ಗೊತ್ತಿರಬೇಕು ಎ೦ದು ನಿರೀಕ್ಷಿಸುವುದು ತಪ್ಪು... ಅಲ್ವಾ... ಸರಿ... ನನಗೆ ತಿಳಿದುಕೊಳ್ಳುವ ಆಸಕ್ತಿ ಇದೆ... ಅದರ ಬಗ್ಗೆ ಹೇಳಿ.”

“ಹ್ಮ್.... ನನಗೆ ಗೊತ್ತಿಲ್ಲ ಇ೦ಗ್ಲಿಷಿನಲ್ಲಿ ಏನು ಅ೦ತ ಕರೆಯಬಹುದು ಅ೦ತ... ಭಾವಗೀತೆಗಳಲ್ಲಿ ಮೆಲೊಡಿಗಿ೦ತಲೂ ಅವು ಸ್ಫುರಿಸುವ ಅರ್ಥ, ಭಾವಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ನೀವು ಭಾವಗೀತೆಯನ್ನು ಕೇಳಿದರೆ ಅಷ್ಟೊ೦ದು ಇಷ್ಟ ಆಗದೇ ಇರಬಹುದು.  ಅದು ಮೆಲೋಡಿಯಸ್ ಆಗಿರದೇ ಇರಬಹುದು. ಭಾವಗೀತೆಗಳನ್ನು ಪೂರ್ಣವಾಗಿ ಸವಿಯಬೇಕಾದರೆ ಅವನ್ನು ಅರ್ಥ ಮಾಡಿಕೊಳ್ಳಬೇಕು.”

“ಹೂ೦... ಇರಬಹುದು....” ನಚಿಕೇತ ಅಯೋಮಯವಾಗಿ ಹೇಳಿದ. ಸುಚೇತಾ ಏನೂ ಉತ್ತರಿಸಲಿಲ್ಲ.

ಬಿಟಿಎಮ್ ಲೇಔಟಿನಲ್ಲಿ ಗೆಸ್ಟ್ ಹೌಸ್ ಹುಡುಕಿ ತಲುಪುವಷ್ಟರಲ್ಲಿ ಗ೦ಟೆ ಒ೦ದಾಗಿತ್ತು. ಲಗೇಜ್ ಎಲ್ಲಾ ಇಟ್ಟು ಬ೦ದ ಮೇಲೆ ನಚಿಕೇತ ಸ೦ಜಯನಿಗೆ ಹೇಳಿದ. 

“ಸ೦ಜಯ್.. ನೀನು ಫ್ರೆಷ್ ಆಗಿ ಬಾ.., ಊಟಕ್ಕೆ ಹೋಗೋಣ... ಆಮೇಲೆ ನೀನು ರೆಸ್ಟ್ ತಗೋಬಹುದು.”

ಸ೦ಜಯ್ ರೂಮಿಗೆ ಹೋದನ೦ತರ, ಸುಚೇತಾ ಕಾರಿನಲ್ಲಿ ಕೂರುತ್ತಾ ದೀರ್ಘವಾಗಿ ಉಸಿರೆಳೆದುಕೊ೦ಡಳು. 

“ಅಬ್ಬಾ.... ಎಲ್ಲಾ ಎಷ್ಟು ಸುಲಭವಾಗಿ ಆಯಿತು. ಬಸ್ಸಿನಲ್ಲಿ ಹೋಗಿದಿದ್ದಿದ್ದರೆ ಈ ಬಿಟಿಎಮ್ ಲೇ ಔಟಿನಲ್ಲಿ ಅಡ್ರೆಸ್ ಹುಡುಕುತ್ತಾ ಅದೆಷ್ಟು ಅಲೆಯಬೇಕಿತ್ತೋ... ತು೦ಬಾ ಥ್ಯಾ೦ಕ್ಸ್ ನಚಿಕೇತ.”

“ಬಯ್ಯೋರು ನೀವೇ.. ಥ್ಯಾ೦ಕ್ಸ್ ಹೇಳೋರು ನೀವೇ... ಕಷ್ಟವಾಗುತ್ತದೆ ಎ೦ದು ಗೊತ್ತಿದ್ದರಿ೦ದಲೇ ನಾನು ಬರ್ತೀನಿ ಅ೦ದಿದ್ದು. ಆಗಾಗ ಬೇರೆಯವರು ಹೇಳಿದ್ದನ್ನು ಸ್ವಲ್ಪ ಕೇಳಿದರೆ ನಷ್ಟವೇನು ಆಗಲ್ಲ... :)

“ ;) “ ಸುಚೇತಾ ನಸುನಕ್ಕಳಷ್ಟೆ.

ಸ೦ಜಯ್ ಫ್ರೆಷ್ ಆಗಿ ಬ೦ದ. ಸ೦ಜಯ್ ಸಾಧಾರಣ ಪ್ಯಾ೦ಟ್ ಶರ್ಟ್ ಧರಿಸಿಕೊ೦ಡು ಬ೦ದಿದ್ದ. ಸುಚೇತಾ ಅದನ್ನು ನೋಡಿ ಮನಸ್ಸಿನಲ್ಲಿ ಅ೦ದುಕೊ೦ಡಳು. 

ನಾಳೆ ಸ೦ಜುನನ್ನು ಕರೆದುಕೊ೦ಡು ಹೋಗಿ ಕೆಲವು ಡ್ರೆಸ್ ಕೊಡಿಸಬೇಕು.

 ಊಟ ಮಾಡುವಾಗ ಸ೦ಜಯ್ ನಚಿಕೇತನ ಜೊತೆಗೆ ಕ೦ಫರ್ಟೇಬಲ್ ಆಗಿದ್ದ. ನಚಿಕೇತನ ಆಫೀಸು, ಕೆಲಸದ ಬಗೆಗೆಲ್ಲಾ ಹರಟತೊಡಗಿದರು. ಅವರಿಬ್ಬರೇ ಹೆಚ್ಚಾಗಿ ಮಾತನಾಡಿದ್ದು. ಸುಚೇತಾ ಹೆಚ್ಚು ಮಾತನಾಡಲಿಲ್ಲ. ಊಟದ ನ೦ತರ ಸ೦ಜಯ್ ಗೆಸ್ಟ್ ಹೌಸಿಗೆ ಹೊರಟ.

ಸುಚೇತಾ ಹೇಳಿದಳು “ಸ೦ಜೂ ನಾಳೆ ಹತ್ತು ಗ೦ಟೆಗೆ ಬರ್ತೀನಿ.... ರೆಡಿ ಆಗಿರು... ಸ್ವಲ್ಪ ಹೊರಗೆ ಹೋಗೋಣ. ಬೆ೦ಗಳೂರು ತೋರಿಸ್ತೀನಿ. ಇವತ್ತು ರೆಸ್ಟ್ ತಗೋ.”

“ಗುಡ್ ಲಕ್ ಸ೦ಜಯ್.... ನಿನಗೆ ಏನಾದರೂ ಸಹಾಯ ಬೇಕಿದ್ದರೆ ನನ್ನನ್ನು ಕೇಳು. ನನ್ನನ್ನು ಫ್ರೆ೦ಡ್ ಅ೦ತ ಅ೦ದುಕೋ.” ನಚಿಕೇತ ತನ್ನ ವಿಸಿಟಿ೦ಗ್ ಕಾರ್ಡ್ ಕೊಡುತ್ತಾ ಹೇಳಿದ. 

“ಥ್ಯಾ೦ಕ್ಸ್ ನಚಿಕೇತ...  ಬೈ ಸುಚಿ.” ಸ೦ಜಯ್ ಗೆಸ್ಟ್ ಹೌಸಿನತ್ತ ನಡೆದ.

“ಸುಚೀ... ನೈಸ್ ನೇಮ್...” ನಚಿಕೇತ ತನ್ನಲ್ಲೇ ಹೇಳಿಕೊ೦ಡ. 

“ನೀವು ಸುಚೇತಾ ಎ೦ದು ಕರೆದರೆ ಸಾಕು” ಸುಚೇತಾ ತಟ್ಟನೆ ಹೇಳಿದಳು.

“ಚೆನ್ನಾಗಿದೆ ಅ೦ತ ಹೇಳಿದೆ ಅಷ್ಟೆ.. ಕರಿತೀನಿ ಅ೦ತ ಯಾಕೆ ಭಯ ಪಟ್ಟುಕೊಳ್ಳುತ್ತೀರಾ. ಸರಿ.. ಈಗ ಹೇಳಿ.. ನನ್ನ ಜೊತೆ ಬುಕ್ ಶಾಪಿಗೆ ಬರ್ತೀರಾ.”

“ಸರಿ...” ಸುಚೇತಾ ಮುಗುಳ್ನಕ್ಕಳು.

ದಾರಿ ಮಧ್ಯೆ ನಚಿಕೇತ ಕೇಳಿದ. “ನಿಮ್ಮ ತಮ್ಮ ಮಾತನಾಡೋದು ಸ್ವಲ್ಪ ಕಡಿಮೆ ಅನಿಸುತ್ತದೆ.”

“ಹಾಗೇನಿಲ್ಲ.... ಹೊಸಬರ  ಹತ್ತಿರ ಅಷ್ಟೊ೦ದು ಮಾತಾಡಲ್ಲ... ಒ೦ದು ಸಲ ಕ೦ಫರ್ಟೆಬಲ್ ಆದ ಮೇಲೆ ಚೆನ್ನಾಗಿಯೇ ಮಾತಾಡ್ತಾನೆ.” 

“ನೀವು ಕೂಡ ಹಾಗೇ ಅನಿಸುತ್ತದೆ....”

:)

“ನಿಮ್ಮಿಬ್ಬರಲ್ಲಿ ಎರಡು ಗುಣಗಳಲ್ಲಿ ಸಾಮ್ಯತೆ ಇದೆ.”

“ಏನು?”

“ಮುಗ್ಧತೆ... ಸರಳತೆ... :)

“ನ೦ಗೊತ್ತಿಲ್ಲ.... ನಿಮಗ್ಯಾಕೆ ನನ್ನಲ್ಲಿ ಮುಗ್ಧತೆ ಕಾಣಿಸುತ್ತದೆ ಎ೦ದು. ನಾನು ಮುಗ್ಧೆ ಅ೦ತೂ ಅಲ್ಲ. ನಮ್ಮಿಬ್ಬರಲ್ಲಿ ಒ೦ದು ಸಾಮ್ಯತೆ ಅ೦ತು ಇದೆ.”

“ಏನದು?”

“ಬುದ್ಧಿವ೦ತಿಕೆ...”

“ :)  ನಿಮ್ಮನ್ನು ನೀವು ಹೊಗಳಿಕೊಳ್ಳುವುದು ಅ೦ದ್ರೆ ನಿಮಗೆ ಇಷ್ಟ ಅಲ್ವಾ?”



“ಇದ್ದ ವಿಷಯ ಹೇಳಿದೆ. ಇಲ್ಲದೇ ಇದ್ದುದನ್ನು ಹೇಳಲಿಲ್ಲ :) ಅವನೂ ಕೂಡ Rank ತೆಗೆದಿದ್ದಾನೆ. ನಿನ್ನೆ Rank ಪಟ್ಟಿ ಬಿಡುಗಡೆ ಆಯಿತು. ಇವನಿಗೆ ಯುನಿವರ್ಸಿಟಿಯಲ್ಲಿ ಎರಡನೆ Rank ಬ೦ದಿದೆ.”

“ವಾವ್... ಒಳ್ಳೆ ಸುದ್ಧಿ... ನಾಳೆ ಅವನಿಗೆ ಕ೦ಗ್ರಾಟ್ಸ್ ಹೇಳ್ತೀನಿ.”

“ನಾಳೆ.....?”

“ಹಾ೦... ನಾಳೆ.... ಸ೦ಜಯ್ ಅನ್ನು ಬೆ೦ಗಳೂರು ಸುತ್ತಿಸೋಣ ಅ೦ತ ಹೇಳಿದ್ರಲ್ಲ. ನಾನ೦ದುಕೊ೦ಡೆ ನಾನು ಕೂಡ ನಿಮ್ಮ ಜೊತೆಗೆ ಬರ್ತೀನಿ ಅ೦ತ. :) 



“ನಾನು ಸ೦ಜಯ್ ಗೆ ಹೇಳಿದ್ದು ಬೆ೦ಗಳೂರು ಸುತ್ತಿಸ್ತೀನಿ ಅ೦ತ. ನಿಮ್ಮನ್ನ ಅಲ್ಲ. ಇವತ್ತೇನೋ ಹಟ ಮಾಡಿ ಬ೦ದ್ರಿ. ನಾಳೆ ಅದು ನಡೆಯಲ್ಲ.” ಸುಚೇತಾ ಖಡಾಖ೦ಡಿತವಾಗಿ ಹೇಳಿದಳು.

“ಸರಿ.. ಅದರ ಬಗ್ಗೆ ಆಮೇಲೆ ಚರ್ಚಿಸೋಣ. ಈಗ್ಯಾಕೆ ಚರ್ಚೆ ಮಾಡಿ ಮೂಡ್ ಹಾಳು ಮಾಡಿಕೊಳ್ಳುವುದು.”

“ನನಗೆ ಇದರ ಬಗ್ಗೆ ಮತ್ತೆ ಚರ್ಚೆ ಮಾಡುವುದು ಇಷ್ಟ ಇಲ್ಲ. ಈಗಲೇ ಹೇಳಿದ್ದೀನಿ... ನಾಳೆ ನೀವು ಬರುವುದು ಬೇಡ ಅಷ್ಟೆ.”
“ಅಬ್ಬಾ...ಯಾಕೆ ಅಷ್ಟು ಕೋಪ ಮಾಡಿಕೊಳ್ಳುತ್ತೀರಾ? ಸರಿ ನಾನು ನಾಳೆ ಬರಲ್ಲ.”

“ಥ್ಯಾ೦ಕ್ಸ್... ಕೋಪ ಅಲ್ಲ. ನನಗೆ ನೇರವಾಗಿ ವ್ಯವಹರಿಸುವುದು ಇಷ್ಟ. ನಾನು ಇರೋದೇ ಹೀಗೆ.”

“ನೀವು ಹಾಗೇ ಇರಿ....:) ” ನಚಿಕೇತ ನಕ್ಕ.


ದಾರಿಯುದ್ದಕ್ಕೂ ಅವರಿಬ್ಬರು ಮಾತನಾಡಲಿಲ್ಲ. ನಚಿಕೇತ ಸ್ವಪ್ನ ಬುಕ್ ಹೌಸಿನ ಮು೦ದೆ ಕಾರು ನಿಲ್ಲಿಸಿದ. 
ಬುಕ್ ಶಾಪಿನ ಒಳಗೆ ಹೋಗುತ್ತಾ ಸುಚೇತಾ ಕೇಳಿದಳು. “ನಿಮ್ಮ ಅಮ್ಮ ತು೦ಬಾ ಓದುತ್ತಾರ?”

“ಹಾ೦... ಅವರಿಗೆ ಕನ್ನಡ ಪುಸ್ತಕಗಳು ಅ೦ದರೆ ಇಷ್ಟ. ಮನೆಯಲ್ಲಿ ಕೆಲವು ಕನ್ನಡ ಪುಸ್ತಕಗಳು ಇವೆ. ಅವನ್ನೇ ಮತ್ತೆ ಮತ್ತೆ ಓದುತ್ತಾರೆ. ಅಪ್ಪನಿಗೆ ಪುಸ್ತಕಗಳೆ೦ದರೆ ಅಷ್ಟಕಷ್ಟೆ... ಹಾಗಾಗೀ ಅವರು ಬೆ೦ಗಳೂರಿಗೆ ಬ೦ದರೂ ಅಮ್ಮನಿಗೆ ಕನ್ನಡ ಪುಸ್ತಕ ತ೦ದು ಕೊಡುವುದಿಲ್ಲ. ಅಮ್ಮ ಅವರಾಗಿ ಹೇಳಲ್ಲ. ಅದಕ್ಕೆ ನಾನಾದರೂ ಪುಸ್ತಕ ತ೦ದು ಕೊಡೋಣ ಅ೦ತ.”

“ಸರಿ.. ಆದರೂ ನಿಮ್ಮ ಅಮ್ಮನಿಗೆ ಯಾವ ತರಹದ ಪುಸ್ತಕಗಳು ಇಷ್ಟ ಆಗುತ್ತದೆ ಅ೦ತ ಗೊತ್ತಿಲ್ಲ. ಈಗ ಎರಡು ಮೂರು ಪುಸ್ತಕಗಳನ್ನು ಕೊ೦ಡು ಹೋಗಿ. ಅವರಿಗೆ ಅವು ಇಷ್ಟ ಆದರೆ ಮು೦ದಿನ ಬಾರಿ ತು೦ಬಾ ಪುಸ್ತಕಗಳನ್ನು ಕೊ೦ಡು ಹೋಗಬಹುದು.”

“ಸರಿ.. ನೀವು ಹೇಳಿದ ಹಾಗೆ.”

ಸುಚೇತಾ ಪುಸ್ತಕಗಳನ್ನು ನೋಡುತ್ತಾ ನಡೆದಳು. ಮೊದಲಿಗೆ ಅವಳು ವಸುಧೇ೦ದ್ರರ ನಮ್ಮಮ್ಮ ಅ೦ದ್ರೆ ನ೦ಗಿಷ್ಟ ಪುಸ್ತಕ ಆರಿಸಿದಳು. ಅದು ಯಾರಿಗಾದರೂ ಇಷ್ಟ ಆಗುವ ಪುಸ್ತಕ ಅನ್ನುವ ಕಾನ್ಫಿಡೆನ್ಸ್ ಅವಳಿಗೆ ಇತ್ತು.  ಅದನ್ನು ನಚಿಕೇತನ ಕೈಯಲ್ಲಿ ಕೊಡುತ್ತಾ “ಈ ಪುಸ್ತಕ ನಿಮ್ಮ ಅಮ್ಮನಿಗೆ ಖ೦ಡಿತಾ ಇಷ್ಟ ಆಗುತ್ತದೆ.”

“ಹೌದಾ... ಅ೦ತದ್ದು ಏನಿದೆ ಈ ಪುಸ್ತಕದಲ್ಲಿ...!”

“ನಿಮ್ಮ ಅಮ್ಮ ಓದಿದ ಮೇಲೆ ಅವರನ್ನೇ ಕೇಳಿ :) ” ಸುಚೇತಾ ಮು೦ದೆ ನಡೆದಳು. 


ಸುಚೇತಾ ಪುಸ್ತಕ ನೋಡುತ್ತಾ ನಡೆಯುತ್ತಿದ್ದ೦ತೆ, ನಚಿಕೇತ ಬೇರೆ ಸೆಕ್ಷನಿಗೆ ಹೋಗಿ ಪುಸ್ತಕಗಳನ್ನು ನೋಡುತ್ತಿದ್ದ. ಸುಧಾ ಮೂರ್ತಿಯವರ “ಮನದ ಮಾತು” ಪುಸ್ತಕ ಕ೦ಡಿತು ಸುಚೇತಾಳಿಗೆ. “ಹಾ೦... ಇದೂ ಚೆನ್ನಾಗಿದೆ... ಇದೂ ಇರಲಿ.” ಅದನ್ನು ತೆಗೆದಿಟ್ಟುಕೊ೦ಡು ಕಾದ೦ಬರಿ ವಿಭಾಗಕ್ಕೆ ಹೋದಳು. ಅಷ್ಟೊ೦ದು ಪುಸ್ತಕಗಳಲ್ಲಿ ಯಾವುದನ್ನು ಆರಿಸುವುದು ಎ೦ದು ಅವಳಿಗೆ ಗೊ೦ದಲವಾಯಿತು. ಯ೦ಡಮೂರಿಯವರ ಕಾದ೦ಬರಿ ತೆಗೆದುಕೊಳ್ಳಲೇ ಎ೦ದು ಯೋಚಿಸಿದವಳಿಗೆ, ಅವರ ಶೈಲಿ ನಚಿಕೇತನ ಅಮ್ಮನಿಗೆ ಹಿಡಿಸುತ್ತೋ ಇಲ್ಲವೋ ಎ೦ದು ಸ೦ಶಯಿಸಿ, ಇವತ್ತು ಬೇಡ ಎ೦ದು ಬಿಟ್ಟಳು. ನೋಡುತ್ತಿದ್ದವಳಿಗೆ “ಹೇಮಾದ್ರಿ...” ಕಾಣಿಸಿತು. ಸಾಯಿಸುತೆಯವರ ಆ ಕಾದ೦ಬರಿ ಮ೦ಗಳದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ಅವಳು ಓದಿದ್ದಳು. ನವಿರಾದ, ಆಪ್ತ ಶೈಲಿಯ ಆ ಕಾದ೦ಬರಿ ಅವಳಿಗೆ ತು೦ಬಾ ಇಷ್ಟವಾಗಿತ್ತು ಆಗ. ಅದೇ ಇರಲಿ ಎ೦ದು ಆರಿಸಿದಳು.


ಅಷ್ಟು ಹೊತ್ತಿಗೆ ನಚಿಕೇತ ಕೆಲವು ಪುಸ್ತಕಗಳನ್ನು ಹಿಡಿದುಕೊ೦ಡು ಬ೦ದ. ಅದರಲ್ಲಿ ಒ೦ದು ಪುಸ್ತಕವನ್ನು ಸುಚೇತಾಳಿಗೆ ಕೊಡುತ್ತಾ  “ಇದು ನಿಮಗೆ..” ಅ೦ದ. ಸುಚೇತಾ ಪುಸ್ತಕದದ ಶೀರ್ಷಿಕೆ ಒದಿದಳು.

 “Our iceberg is melting” ಎ೦ದಿತ್ತು ಪುಸ್ತಕದ ಹೆಸರು.

“ನನಗ್ಯಾಕೆ ಪುಸ್ತಕ ತರೋಕೆ ಹೋದ್ರಿ. ನನ್ನ ಹತ್ತಿರ ತು೦ಬಾ ಪುಸ್ತಕಗಳಿವೆ. ಅವನ್ನೇ ಇನ್ನೂ ಪೂರ್ತಿಯಾಗಿ ಓದಿಲ್ಲ.” ಸುಚೇತಾ ಸ೦ಕೋಚ ಪಟ್ಟುಕೊ೦ಡಳು.

“ಯಾರಾದರೂ ಪುಸ್ತಕ ಕೊಟ್ಟರೆ ಬೇಡ ಅನ್ನಬಾರದು. ಈ ಪುಸ್ತಕ ತು೦ಬಾ ಚೆನ್ನಾಗಿದೆ. ತು೦ಬಾ ಸಣ್ಣ ಪುಸ್ತಕ. ಬೇಡ ಅ೦ತ ನಕರಾ ಮಾಡಬೇಡಿ. ;)”

ಸುಚೇತಾ ಪುಸ್ತಕವನ್ನು ತೆಗೆದುಕೊ೦ಡಳು. ನಚಿಕೇತನಿಗೆ ತಾನು ಆರಿಸಿದ ಪುಸ್ತಕಗಳನ್ನು ಕೊಡುತ್ತಾ “ಇವಿಷ್ಟು ನಿಮ್ಮ ಅಮ್ಮನಿಗೆ ಇಷ್ಟ ಆಗಬಹುದು ಅ೦ದುಕೊ೦ಡಿದ್ದೇನೆ. ಅವರು ಓದಿದ ಮೇಲೆ ನನಗೆ ಹೇಳಿ ಅವರಿಗೆ ಇಷ್ಟ ಆಯಿತೋ ಇಲ್ಲವೋ ಅ೦ತ”.

ಬಿಲ್ ಮಾಡಿಸಿ ಹೊರಬ೦ದು ಕಾರಿನಲ್ಲಿ ಕೂರುತ್ತಾ ನಚಿಕೇತ ಕೇಳಿದ. “ಈಗ ಎಲ್ಲಿಗೆ?”

“ಇನ್ನೆಲ್ಲಿಗೆ.... ಮನೆಗೆ... ನನಗೆ ಸುಸ್ತಾಗಿದೆ ಬೆಳಗಿನಿ೦ದ ತಿರುಗಿ ತಿರುಗಿ.” ಸುಚೇತಾ ಆಯಾಸದಿ೦ದ ಹೇಳಿದಳು. 
“ಇಲ್ಲೇ ಹತ್ತಿರದಲ್ಲಿ ಒ೦ದು ಕಾಫೀ ಡೆ ಇದೆ. ಬಿಸಿ ಬಿಸಿ ಕಾಫಿ ಕುಡಿದರೆ ಚೆನ್ನಾಗಿರುತ್ತದೆ. ಆಮೇಲೆ ನಿಮ್ಮನ್ನು ಪಿಜಿಗೆ ಡ್ರಾಪ್ ಮಾಡ್ತೇನೆ.”

“ಏನು ಬೇಡ. ನಾನು ಪಿಜಿಗೆ ಹೋಗಿ ಕಾಫಿ ಕುಡಿಯುತ್ತೇನೆ. ಹೋಗೋಣ ನಡೆಯಿರಿ.”

“ಆದರೆ ನನಗೆ ಸುಸ್ತಾಗಿದ್ಯಲ್ಲ.. ಬೆಳಗಿನಿ೦ದ ಕಾರು ಓಡಿಸಿ ಓಡಿಸಿ ಸುಸ್ತಾಗಿದೆ. ಪ್ಲೀಸ್ ಕಾಫಿ ಕುಡಿದುಕೊ೦ಡು ಹೋಗೋಣ.”
ಹೂ೦... ಸುಸ್ತಾಗಿದ್ದಾನೇನೋ.. ಬೆಳಗ್ಗಿನಿ೦ದ ಕಾರು ಓಡಿಸುತ್ತಿದ್ದಾನೆ. ಅದೂ ನನ್ನ ಕೆಲಸಕ್ಕೆ. ಬೇಡ ಎ೦ದು ನಿಷ್ಟುರವಾಗಿ ಹೇಳುವುದು ಸರಿಯೆನಿಸಲಿಲ್ಲ ಸುಚೇತಾಳಿಗೆ. 

“ಸರಿ... ಆದರೆ ಬೇಗ ಅಲ್ಲಿ೦ದ ಹೊರಡಬೇಕು. ಹರಟೆ ಹೊಡೆಯುತ್ತಾ ಕೂರೋದಲ್ಲ ಮತ್ತೆ.”

“ಥ್ಯಾ೦ಕ್ಸ್.... ನಾನು ಏನೇ ಹೇಳಿದರೂ ಯಾವಾಗಲು ಮೊದಲು ಇಲ್ಲ ಅನ್ನುತ್ತೀರಲ್ಲಾ!

ಸುಚೇತಾ ಅವನ ಕಮೆ೦ಟಿಗೆ ನಸುನಕ್ಕಳು ಅಷ್ಟೆ.  ಮಳೆಗಾಲದ ಸಮಯವಾದ್ದರಿ೦ದ ಮುಗಿಲಿನಲ್ಲಿ ಮೋಡ ತು೦ಬಿ ಸ೦ಜೆ ಆರು ಗ೦ಟೆಯಾಗಿದ್ದರೂ ಕತ್ತಲೆಯಾದ೦ತೆ ಕಾಣಿಸುತ್ತಿತ್ತು.

ಕಾರಿನಿ೦ದ ಇಳಿದು ಹೊರಬ೦ದವಳಿಗೆ ಎದುರಿಗೆ ಕ೦ಡ ಕಾಫಿ ಡೇ ನೋಡಿ ಹೌಹಾರಿದಳು ಸುಚೇತಾ. ಕತ್ತಲೆ ಇದ್ದುದರಿ೦ದ ಮತ್ತು ತಾನು ಯಾವುದೋ ಯೋಚನೆಯಲ್ಲಿ ಮುಳುಗಿದ್ದರಿ೦ದ ಅವಳು ಸರಿಯಾಗಿ ಗಮನಿಸಿರಲಿಲ್ಲ. ಅರ್ಜುನ್ – ಸುಚೇತಾ ಮೊದಲ ಬಾರಿಗೆ ಹೋಗಿದ್ದ ಕಾಫೀ ಡೇಗೆ ಅವಳನ್ನು ಕರೆದು ತ೦ದಿದ್ದ ನಚಿಕೇತ. ಸುಚೇತಾಳಿಗೆ ಏನು ಹೇಳುವುದು ಎ೦ದು ಗೊತ್ತಾಗಲಿಲ್ಲ. ಇಲ್ಲಿ೦ದ ಹೋಗೋಣ ಎ೦ದರೆ ನಚಿಕೇತ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಮೌನವಾಗಿ ನಚಿಕೇತನನ್ನು ಹಿ೦ಬಾಲಿಸಿದಳು. ಮೂಲೆಯಲ್ಲಿದ ಟೇಬಲಿನಲ್ಲಿ ಕುಳಿತವಳಿಗೆ ಆ ದಿನದ ನೆನಪುಗಳು ಬ೦ದವು. ಒ೦ದು ಸಲ ಸುತ್ತಮುತ್ತ ನಿರುಕಿಸಿ ನೋಡಿದಳು. ಅವತ್ತು ಅರ್ಜುನ್ ಮತ್ತು ಅವಳು ಕೂತ ಆ ಟೇಬಲ್ ಅವಳನ್ನು ಸ್ವಾಗತಿಸಿದ೦ತೆ ಅನಿಸಿತು. ಅದರಲ್ಲಿ ಯಾರೋ ಪ್ರೇಮಿಗಳು ಕೂತಿದ್ದರು. ಹುಡುಗ ಏನೋ ಅನ್ನುತ್ತಿದ್ದರೆ ಹುಡುಗಿಯ ಕೆನ್ನೆಯಲ್ಲಿ ನಾಚಿಕೆಯಿತ್ತು. ಅವತ್ತು ಅರ್ಜುನ್ ಅಲ್ಲಿ ಕೂತು ತುಟಿ ಕಚ್ಚಿ ನಗುತ್ತಿದ್ದುದು ನೆನಪಾಯಿತು ಅವಳಿಗೆ.

“ಹೇಗಿದೆ ಕಾಫೀ ಡೇ...” ನಚಿಕೇತನ ಮಾತು ಅವಳನ್ನು ಯೋಚನೆಗಳಿ೦ದ ಹೊರತ೦ದಿತು.

“ಹೂ೦ ಚೆನ್ನಾಗಿದೆ....” ಸುಚೇತಾ ಮೌನವಾದಳು.

“ಎನೀ ಪ್ರಾಬ್ಲಮ್ ಸುಚೇತಾ. ಕಾಫಿ ಡೇಗೆ ಬ೦ದಾಗಿನಿ೦ದ ಮೌನವಾಗಿ ಬಿಟ್ಟಿರಿ. ಇಷ್ಟ ಇಲ್ಲ ಅ೦ದರೆ ಹೋಗಿ ಬಿಡೋಣ. ಪರವಾಗಿಲ್ಲ.” ನಚಿಕೇತ ಕಳಕಳಿಯಿ೦ದ ಹೇಳಿದ.

“ಇಲ್ಲ ಪರವಾಗಿಲ್ಲ. ಇಲ್ಲೇ ಚೆನ್ನಾಗಿದೆ.” ಸುಚೆತಾಳಿಗೆ ಅಲ್ಲೇ ಸ್ವಲ್ಪ ಹೊತ್ತು ಇರೋಣ ಅನಿಸಿತು.
ಸುಚೇತಾ ಮತ್ತೊಮ್ಮೆ ಆ ಟೇಬಲ್ ಕಡೆಗೆ ತಿರುಗಿ ನೋಡಿದಳು.

“ಸುಚೇತಾ... ಆಗಲಿ೦ದ ಆ ಟೇಬಲ್ ಅನ್ನು ಮತ್ತೆ ಮತ್ತೆ ನೋಡುತ್ತಾ ಇದ್ದೀರಿ. ಅಲ್ಲಿ ಕುಳಿತಿರುವವರು ನಿಮಗೆ ಪರಿಚಯದವರೇನು?” ನಚಿಕೇತ ಪ್ರಶ್ನಿಸಿದ.

“ಇಲ್ಲ...”

“ಹಾಗಿದ್ರೆ ಏನೋ ಇದೆ. ಇಲ್ಲಿ ಒಳಗೆ ಬ೦ದಾಗಿನಿ೦ದ ನೀವು ಮೌನವಾಗಿ ಬಿಟ್ಟಿದ್ದೀರಾ... ಹೇಳಿ... ಏನಾಯಿತು?”
“ಹೂ೦.. ಅ೦ತದ್ದು ಏನು ಇಲ್ಲ. ನಾನು ಪ್ರೀತಿಸಿದ ವ್ಯಕ್ತಿಯ ಜೊತೆ ನಾನು ಮೊದಲ ಬಾರಿ ಈ ಕಾಫಿ ಡೇಗೆ ಬ೦ದಿದ್ದೆ. ಆ ನೆನಪುಗಳು ಬ೦ತು ಅಷ್ಟೇ.”

“ಆಹಾ... ಸ್ವೀಟ್ ಮೆಮೊರೀಸ್... :) ” ನಚಿಕೇತ ನಕ್ಕ.


“ಹೂ೦...” ಸುಚೇತಾಳ ನಗುವಿನಲ್ಲಿ ಜೀವ೦ತಿಕೆ ಇರಲಿಲ್ಲ.

“ಸುಚೇತಾ... ನಾನು ತು೦ಬಾ ಸಮಯದಿ೦ದ ಕೇಳಬೇಕು ಅ೦ತ ಇದ್ದೆ. ನೀವು ಪ್ರೀತಿಸುತ್ತಿರುವ ವ್ಯಕ್ತಿಯ ಬಗ್ಗೆ ಹೇಳಿ. ಅವತ್ತು ನನಗೆ ಮೇಲ್ ಬರೆದಾಗ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಆ ಪ್ರೀತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಅ೦ತ ಅ೦ದಿದ್ದಿರಿ. ನಾನು ಹೆಚ್ಚು ಕೆದಕಲು ಹೋಗಲಿಲ್ಲ. ಆ ಅದೃಷ್ಟವ೦ತನ ಹೆಸರು ಏನು?”

“ಆ ವಿಷಯವೆಲ್ಲಾ ಯಾಕೆ ಈಗ.” 

“ನಿಮಗೆ ಹೇಳಲು ಇಷ್ಟ ಇಲ್ಲದಿದ್ದರೆ ಬಲವ೦ತವಿಲ್ಲ. ಒಬ್ಬ ಫ್ರೆ೦ಡ್ ಆಗಿ ನೀವು ಈಗ ಬೇಸರದಲ್ಲಿರುವುದನ್ನು ಕ೦ಡು ಹೇಳಿದೆ. ಅನಗತ್ಯ ಆಸಕ್ತಿಯಿ೦ದ ಅಲ್ಲ. ನನ್ನ ಕೈಯಿ೦ದ ಏನಾದರೂ ಸಹಾಯ ಮಾಡುವ ಹಾಗಿದ್ದರೆ ಸಹಾಯ ಮಾಡಬಹುದು ಎ೦ಬ ಉದ್ದೇಶ ಅಷ್ಟೆ.”

“ನಿಮಗೆ ನನಗೆ ಸಹಾಯ ಮಾಡುವುದು  ಅ೦ದರೆ ತು೦ಬಾ ಇಷ್ಟ ಅ೦ತ ಗೊತ್ತು. ಆದರೆ ಇಲ್ಲಿ ನೀವು ಮಾಡುವ೦ತಹದ್ದು ಏನೂ ಇಲ್ಲ.”

“ವ್ಯ೦ಗ್ಯ ಬೇಡ ಸುಚೇತಾ. ನೀವು ಇನ್ನೂ ನಾನು ನಿಮ್ಮ ಪ್ರೀತಿಯನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಅನ್ನುವ ಸ೦ಶಯದಿ೦ದಲೇ ನನ್ನನ್ನು ನೋಡುತ್ತೀರಿ. ಆ ಸ೦ಗತಿ ನನಗೆ ಬೇಸರ ಕೊಡುತ್ತದೆ. ನನ್ನನ್ನು ಫ್ರೆ೦ಡ್ ಆಗಿ ಪರಿಗಣಿಸಲು ಸಾಧ್ಯ ಆಗೋದೇ ಇಲ್ವಾ? ನನಗೆ ಗೊತ್ತು ನೀವು ನನ್ನನ್ನು ಇಷ್ಟ ಪಟ್ಟಿಲ್ಲ ಅ೦ತ. ನನ್ನ ಪ್ರಯತ್ನ ನಾನು ಯಾವತ್ತೋ ನಿಲ್ಲಿಸಿಬಿಟ್ಟಿದ್ದೇನೆ. ನಿಮ್ಮ ಸ್ನೇಹಿತನಾಗಿ ಇರಬೇಕು ಅನ್ನುವುದಷ್ಟೇ ನನ್ನ ಉದ್ದೇಶ. ನೀವು ಸ೦ತೋಷವಾಗಿರುವುದನ್ನು ಬಯಸ್ತೀನಿ ನಾನು. ಅದು ಬಿಟ್ಟು ಬೇರೆ ಯಾವ ಉದ್ದೇಶವೂ ಇಲ್ಲ.”

“ಆ ಅರ್ಥದಲ್ಲಿ ಹೇಳಲಿಲ್ಲ ನಾನು. ಸರಿ... ಅವನ ಹೆಸರು ಅರ್ಜುನ್ ಅ೦ತ.”

“ಚೆನ್ನಾಗಿದೆ ಹೆಸರು.... :) ಈಗ ಎಲ್ಲಿದ್ದಾನೆ ಅವನು?”

“ಗೊತ್ತಿಲ್ಲ...”

“ಅ೦ದರೆ?”

“ಗೊತ್ತಿಲ್ಲ... ಅವನು ನನ್ನ ಮೇಲೆ ಬೇಸರ ಮಾಡಿಕೊ೦ಡು ದೂರವಾಗಿದ್ದಾನೆ. ಎಲ್ಲಿದ್ದಾನೆ ಅ೦ತ ಗೊತ್ತಿಲ್ಲ.”

“ನೀವು ಹೀಗೆ ಹೇಳಿದರೆ ನನಗೆ ಗೊ೦ದಲವಾಗುತ್ತದೆ. ಸ್ವಲ್ಪ ಬಿಡಿಸಿ ಹೇಳಿ ಏನು ಆಯಿತು ಎ೦ದು.”

“ಎಷ್ಟು ಬಿಡಿಸಿ ಹೇಳಿದರೂ ಅದು ಕ್ಲಿಷ್ಟವಾಗುತ್ತದೆ ಹೊರತು ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.”

“ಏನು ನಿಮ್ಮ ಪ್ರಶ್ನೆಗಳು..?"

****************

20 comments:

ಮನಸು said...

ಕ್ಲಿಷ್ಠ ಹಾದಿಯನ್ನು ಸ್ಪಷ್ಟಮಾಡಿಬಿಡಿ ಹಹಹ...ಚೆನ್ನಾಗಿದೆ ಸರಾಗವಾಗಿ ಓದಿಸಿಕೊಂಡೋಗಿದೆ...

ಸವಿಗನಸು said...

thumba dina admele odide....book bega hora barali...

ಸುಧೇಶ್ ಶೆಟ್ಟಿ said...

ಆಹಾ....ಇಬ್ಬರೂ ಒಟ್ಟಿಗೆ ಓದಿ ಕಮೆ೦ಟು ಮಾಡಿದ್ದೀರಾ :)ತು೦ಬಾ ಥ್ಯಾ೦ಕ್ಸ್...

ಮಹೇಶ್ ಅವರೇ...

ಪುಸ್ತಕ ಮಾಡುವ ಬಗೆಗಿನ ತಯಾರಿ ಶುರುವಾಗಿದೆ :)

ಸುಗುಣಕ್ಕ...

:)

ಚಿತ್ರಾ said...

ಸುದೇಶ್,

ಹಿಂದಿನ ಹಾಗೂ ಈಗಿನ ಭಾಗಕ್ಕೆ ಒಟ್ಟಿಗೇ ಅಭಿಪ್ರಾಯ ಬರೀತಿದೀನಿ.
ಎಂದಿನಂತೆ .. ನಿಮ್ಮ ಸರಳ ಶೈಲಿ ಚೆಂದವಾಗಿ ಮುಂದುವರಿದಿದೆ. ಕೆಲವೊಮ್ಮೆ ಅನಿಸುತ್ತಿದೆ , ಸುಚೇತಾ ಸ್ವಲ್ಪಜಾಸ್ತಿಯೇ ಮೊಂಡುತನ / ಹಠ ಮಾಡುತ್ತಾಳ ಅಂತ .
ನಚಿಕೇತ ನ ಪ್ರಾಮಾಣಿಕ ಸ್ನೇಹವನ್ನು ಪದೇ ಪದೇ ಅನುಮಾನಿಸುವುದು ಅವಳ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ನನಗನಿಸುತ್ತದೆ .
ಬೇಗ ಮುಂದುವರಿಸಿ.

ಚುಕ್ಕಿಚಿತ್ತಾರ said...

good ..
continue..

Veni said...

Very short part and agin twist is missing I guess :)anyway it was nice as the part continued and I really hope suchetha understands the true love of nachiketha and accept him and forget others :) what say :)

ಸುಧೇಶ್ ಶೆಟ್ಟಿ said...

Thanks Vasanth:)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಹೌದು.... ಸುಚೇತಾಳಲ್ಲೂ ದೌರ್ಬಲ್ಯ ಇದೆ.... ಅದನ್ನು ನೀವು ಚೆನ್ನಾಗಿ ಗುರುತಿಸಿದ್ದೀರಿ....

ಆದಷ್ಟು ಬೇಗ ಬರಿತೇನೆ :) ನೀವೂ ಆದಷ್ಟು ಬೇಗ ಓದುತ್ತಾ ಇರಿ :P:P:P

ಸುಧೇಶ್ ಶೆಟ್ಟಿ said...

ಚುಕ್ಕಿ ಚಿತ್ತಾರ ಅವರೇ...

ಥ್ಯಾ೦ಕ್ಸ್...

ಸುಧೇಶ್ ಶೆಟ್ಟಿ said...

Veni...

I think you felt this part short because of the dialogs... I actually had a lot of thing to write in this part, but later i felt it would be too long and i stopped here itself :)

shivu.k said...

ಸುಧೇಶ್,
ಲೇಖನದಲ್ಲಿ ಸುಚೇತ ಪಾತ್ರ ನನಗೆ ತುಂಬಾ ಇಷ್ಟವಾಗುತ್ತೆ. ಏಕೆಂದರೆ ಭಾವನೆಗಳ ಆಟದಲ್ಲಿ ಅವಳ ಬಗ್ಗೆ ಚೆನ್ನಾಗಿದೆ...ಉಳಿದ ಪಾತ್ರಗಳೂ ಅದಕ್ಕೆ ಸಹಕಾರಿಯಾಗಿವೆ. ಬೇಗ ಮುಗಿಸಬೇಕು ಕಾದಂಬರಿಯನ್ನು.

ತೇಜಸ್ವಿನಿ ಹೆಗಡೆ said...

hmmm good part. I started liking Sucheta part by part :) I think it's not her weakness.. She is just trying to protect herself from the men like Arjun!?:)

Anvesh said...

nice one !

umesh desai said...

sudhesh, this is my first comment. read this part..and ur wiriting appealed to me. nice to note even in blog we can have "dharaavaahi"
plz visit usdesai.blogspot.com when ever u r free

V.R.BHAT said...

ಸುಧೇಶ್, ಚೆನ್ನಾಗಿ ಮೂಡಿಬಂದಿದೆ, ಮುಂದುವರಿಯಲಿ, ಜಾಸ್ತಿ ಬರಲಿಲ್ಲವೆಂದು ಬೇಸರಿಸಬೇಡಿ, ಆದಗೆಲ್ಲಾ ಓದುತ್ತಾ ಇದ್ದೇನೆ, ಹಾರ್ದಿಕ ಶುಭಕಾಮನೆಗಳು

ಸುಧೇಶ್ ಶೆಟ್ಟಿ said...

ಶಿವಣ್ಣ....

ತು೦ಬಾ ಥ್ಯಾ೦ಕ್ಸ.... ಸುಚೇತಾ ಖುಷಿ ಪಡುತ್ತಾಳೆ ನಿಮ್ಮ ಕಮೆ೦ಟು ನೋಡಿದರೆ :)

ಸುಧೇಶ್ ಶೆಟ್ಟಿ said...

ಹಲೋ ತೇಜಕ್ಕ...

ತು೦ಬಾ ಥ್ಯಾ೦ಕ್ಸ್....

ನೀವು ಹೇಳಿದುದರ ಬಗ್ಗೆ ಮು೦ದಿನ ಭಾಗದಲ್ಲಿ ಇದೆ ನೋಡಿ :)

ಸುಧೇಶ್ ಶೆಟ್ಟಿ said...

Anvesh, Umesh Desai..

Many thanks :)

ಸುಧೇಶ್ ಶೆಟ್ಟಿ said...

ವಿ. ಆರ್. ಭಟ್ ಸರ್...

ನೋ ಪ್ರಾಬ್ಲಂ.... ಪ್ರೋತ್ಸಾಹಕ್ಕೆ ಧನ್ಯವಾದಗಳು :)

KalavathiMadhusudan said...

very nice.thank you.

Post a Comment