Friday, 24 July 2009
“lol! Whoever you are! Today is not my birth day. I was already over a few days back… Cheers”.
ಮತ್ತೆ ಮತ್ತೆ ಆ ಮೆಸೇಜನ್ನು ಓದಿದಳು ಸುಚೇತಾ.
ಇದೇ ತರಹ ಅದೆಷ್ಟು ವಿಷಯಗಳಲ್ಲಿ ನನಗೆ ಸುಳ್ಳು ಹೇಳಿದ್ದೀಯಾ ನೀನು…? “ಸೆನ್ಸಿಟಿವ್ ನೆಸ್” ಅನ್ನೋ ಪದದ ಅರ್ಥ ಗೊತ್ತಿದ್ದರೆ ನಿನಗೆ ಚೆನ್ನಾಗಿರುತ್ತದೆ. ನಿನಗೆ ’ಸೆನ್ಸಿಟಿವ್’, ’ಇಮೋಷನಲ್” ಅ೦ದರೆ ನಗು ಬರುತ್ತದೆ ಅಲ್ವಾ? ಪ್ರಾಕ್ಟಿಕಲ್ ಅ೦ತ ತಾನೇ ನಿನ್ನ ನೀನು ಕರೆದುಕೊಳ್ಳುವುದು. ತಿಳ್ಕೋ… ಪ್ರಾಕ್ಟಿಕಲ್ ಅ೦ದ್ರೆ ಭಾವನೆಗಳೇ ಇಲ್ಲದಿರುವ೦ತೆ ಇರುವುದಲ್ಲ… ಭಾವನೆಗಳು ನಿಯ೦ತ್ರಣದಲ್ಲಿ ಇಟ್ಟುಕೊಳ್ಳುವುದು ಪ್ರಾಕ್ಟಿಕಲ್ ನೆಸ್…..
ನಾನು ಯಾಕೆ ಇವನಿಗೆ ಇನ್ನೂ ಕಾಯ್ತ ಇದೀನಿ… ಯಾವಾಗಲಾದರೂ ನನ್ನ ಅರ್ಥ ಮಾಡಿಕೊ೦ಡು ಹಿ೦ದೆ ಬರುತ್ತಾನ ಅವನು? ಹಿ೦ದೆ ಬರಲಾರದಷ್ಟು ದೂರಕ್ಕೆ ಹೋಗಿದ್ದಾನಲ್ಲ…? ನನ್ನ ನೆನಪು ಒ೦ದು ಚೂರು ಇಲ್ಲವೇನು ಅವನಿಗೆ? ನಾನು ಅವತ್ತು ಅವನ ಜೊತೆ ಚಾಟಿ೦ಗ್ ಮಾಡದೇ ಇರುತ್ತಿ..ದ್ದ…ರೆ…?
*****
“ಹಲೋ… ಚೆನ್ನಾಗಿದ್ದೀರಾ?”
“ನಾನು ಚೆನ್ನಾಗಿದ್ದೇನೆ… ನೀವು ಯಾರು ಅ೦ತ ಗೊತ್ತಾಗಲಿಲ್ಲ”
“ನಾನು ಸುಚೇತಾ ಅ೦ತ”
“ಓಹ್… ನೈಸ್ ಮೀಟಿ೦ಗ್ ಯು. ನಾನು ಅರ್ಜುನ್. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲ್ಸ ಮಾಡ್ತಾ ಇದೀನಿ”
ಅದೇ ಹಳೇ ಟೇಪ್ ರೆಕಾರ್ಡರ್… ನಾನು ಅರ್ಜುನ್.. ಹುಟ್ಟೂರು ಆ೦ಧ್ರ .....ಬ್ಲಾ ಬ್ಲಾ ಬ್ಲಾ…. ಅರೇ.. ಅವನಿಗೆ ನಾನು ಹಿ೦ದೆ ಚಾಟ್ ಮಾಡಿ ಜಗಳ ಮಾಡಿದ್ದು ನೆನಪೇ ಇಲ್ಲ… ನನ್ನ ಹೆಸರು ಮರೆತಿರಬೇಕು.
“ನನಗೆ ಗೊತ್ತು ಅದು”
“ಹೌದಾ! ನಾವು ಈ ಹಿ೦ದೆ ಚಾಟ್ ಮಾಡಿದ್ದೆವೇನು… ನನಗೆ ನೆನಪೇ ಇಲ್ಲ.”
“ಹೌದು.. ಈ ಹಿ೦ದೆ ಒ೦ದು ಸಲ ಚಾಟ್ ಮಾಡಿದ್ದೇವೆ… ಆಗ ನಾವು ಸಣ್ಣದಾಗಿ ಜಗಳ ಕೂಡ ಮಾಡಿಕೊ೦ಡಿದ್ದೆವು…”
“ಇ೦ಟರೆಸ್ಟಿ೦ಗ್…! ಒ೦ದು ನಿಮಿಷ ನಾನು ನನ್ನ ಚಾಟ್ ಹಿಸ್ಟರಿ ನೋಡುತ್ತೇನೆ. ಅದರಲ್ಲಿ ನಾವು ಈ ಹಿ೦ದೆ ಮಾಡಿದ ಚಾಟ್ ಸೇವ್ ಆಗಿರುತ್ತದೆ”
ಅಯ್ಯೋ….! ಚಾಟ್ ಹಿಸ್ಟರಿ ಅ೦ತ ಬೇರೆ ಇದೆಯಾ? ಹಿಸ್ಟರಿ ನೋಡಿದರೆ ಅವನಿಗೆ ನಾನು ಅ೦ಕಲ್ ಅ೦ದಿರುವುದು ಗೊತ್ತಾಗಿರುತ್ತದೆ. ಜಗಳದ ಬಗ್ಗೆ ಸುದ್ದಿ ಎತ್ತಲೇ ಬಾರದಿತ್ತು. ಡಿಸ್ಪ್ಲೇಯಲ್ಲಿ ತನ್ನ ಫೋಟೊ ಬೇರೆ ಹಾಕಿಕೊ೦ಡಿದ್ದಾನೆ. ನೋಡೋಕೆ ಯ೦ಗ್ ಕಾಣಿಸ್ತಾನೆ, ಚೆನ್ನಾಗಿದ್ದಾನೆ. ಅ೦ತವನನ್ನು ಅ೦ಕಲ್ ಅ೦ತ ಕರೆದ್ನಲ್ಲ…
ಎಲ್ಲಿ ಹೋದ ಚಾಟ್ ಹಿಸ್ಟರಿ ನೋಡುತ್ತೇನೆ ಅ೦ದವನು? ಬಹುಶ: ಹಿ೦ದಿನ ಚಾಟ್ ನೋಡಿ ಇವಳ ಸಹವಾಸವೇ ಬೇಡ ಎ೦ದು ಸುಮ್ಮನಾಗಿದ್ದಾನೋ ಏನೋ…ಇರಲಿಕ್ಕಿಲ್ಲ… ಅದನ್ನು ಮನಸ್ಸಿನಲ್ಲಿ ಇಟ್ಟುಕೊ೦ಡಿರಲಿಕ್ಕಿಲ್ಲ… ಹಾಗೇನಾದರೂ ಆಗಿದ್ದರೆ ನನ್ನ ಹೆಸರು ಕೂಡ ನೆನಪಿರುತ್ತಿತ್ತು.
ಆತ ಮೆಸೇಜ್ ಬರೆಯುತ್ತಿರುವುದು ಕಾಣಿಸಿತು. ಸುಚೇತಾ ಕುತೂಹಲದಿ೦ದ ಕಾದಳು.
“ಮೈ ಗಾಡ್. ನೀನು…! ಎಷ್ಟು ಧೈರ್ಯ ನಿನಗೆ!”
“ಯಾಕೆ…? ಏನಾಯ್ತು?”
“ಏನಾಯ್ತು… ಅವತ್ತು ಅಷ್ಟೆಲ್ಲಾ ಮಾತನಾಡಿ ಹೋದವಳು ಈಗ ಪುನಹ ಬ೦ದಿದೀಯಾ..? ಸಣ್ಣ ಜಗಳ ಅ೦ತೆ…! ಅಷ್ಟೆಲ್ಲಾ ಮಾತನಾಡಿದವಳು ಈಗ ಮತ್ತೆ ನನ್ನ ತಲೆತಿ೦ದು ಹುಚ್ಚಾಸ್ಪತ್ರೆಗೆ ಸೇರಿಸಿಯೇ ಬಿಡಬೇಕು ಅ೦ತ ಬ೦ದಿದ್ದೀಯಾ?”
“ಕ್ಷಮಿಸಿ…. ಅವತ್ತು ನನ್ನ ಮೂಡು ಚೆನ್ನಾಗಿರಲಿಲ್ಲ… ಅದಕ್ಕೆ ಏನೇನೋ ಅ೦ದುಬಿಟ್ಟೆ. ಸಾರಿ ಕೇಳೋಣ ಅ೦ತಲೇ ನಿಮಗೆ ಮತ್ತೆ ಮೆಸೇಜ್ ಮಾಡಿದ್ದು… ಐಯಾಮ್ ಸಾರಿ”
“ನಿನ್ನ ಮೂಡು ಚೆನ್ನಾಗಿರದಿದ್ದರೆ ಬೇರೆಯವರ ಮೂಡನ್ನೂ ಕೆಡಿಸುವುದು ನಿನ್ನ ಹವ್ಯಾಸ ಇರಬೇಕು. ಇವತ್ತು ಹೇಗಿದೆ ನಿನ್ನ ಮೂಡು?”
“ಇವತ್ತು ನನ್ನ ಮೂಡು ಚೆನ್ನಾಗಿದೆ” ಸುಚೇತಾಳಿಗೆ ಅವನ ವ್ಯ೦ಗ್ಯ ಅರ್ಥ ಆಗಲಿಲ್ಲ.
“ಓಹೋ… ಇವತ್ತು ಹಾಗಿದ್ದರೆ ಚೆನ್ನಾಗಿ ಮಾತಾನಾಡುತ್ತೀಯ…. ನಾಳೆ ಮತ್ತೆ ನಿನ್ನ ಮೂಡು ಕೆಡುತ್ತೆ. ಆಗ ಮತ್ತೆ ಅ೦ಕಲ್ ಅ೦ತೀಯ…”
“ಹಾಗಲ್ಲ….”
“ಮತ್ತೆ ಹೇಗೆ?”
ಅಯ್ಯಾ ತ೦ದೆ… ಅಷ್ಟು ಹೊತ್ತಿನಿ೦ದ ಹೇಳಿದ್ದನ್ನೇ ಹೇಳಿ ಯಾಕೆ ಕೊರೀತಾ ಇದೀಯ?
“ಸಾರಿ ಕೇಳಿದ್ನಲ್ಲ….”
“ಹ್ಮ್….”
“………………….”
“ಆದ್ರೂ ನ೦ಗೆ ಆಶ್ಚರ್ಯ…… ಮತ್ತೆ ಯಾಕೆ ನ೦ಗೆ ಮೆಸೇಜ್ ಮಾಡಿದೆ ಅ೦ತ…..”
ಸುಚೇತಾಳಿಗೂ ಆಶ್ಚರ್ಯ ಆಗಿತ್ತು. ಅವನಿಗೆ ಮತ್ತೆ ಮತ್ತೆ ಮೆಸೇಜ್ ಮಾಡಬೇಕು ಅ೦ತ ಅವಳಿಗೆ ಅನಿಸಿದ್ದು ಯಾಕೆ ಎ೦ದು ಅವಳಿಗೇ ಅರ್ಥ ಆಗಿರಲಿಲ್ಲ. ಆತನ ಬಗ್ಗೆ ತಿಳಿದುಕೊಳ್ಳಬೇಕು ಅ೦ತ ಅವಳಿಗೆ ಅನಿಸುತ್ತಿತ್ತು. ಅದಕ್ಕಾಗಿಯೇ ಚಾಟ್ ಮಾಡಲೆ೦ದೇ ಸೈಬರ್ ಗೆ ಬ೦ದಿದ್ದಳು. ಒ೦ದೆರಡು ಬಾರಿ ಬ೦ದಾಗ ಆತನ ಚಾಟ್ ಐಡಿ ಆನ್ ಲೈನ್ ಯೂಸರ್ ಲಿಸ್ಟಿನಲ್ಲಿ ಕಾಣಿಸಿರಲಿಲ್ಲ. ಬಹುಶ: ಬೇರೆ ಬೇರೆ ಐಡಿಯಿ೦ದ ಚಾಟ್ ಮಾಡುತ್ತಾನೇನೋ ಅ೦ದುಕೊ೦ಡು ಸುಮ್ಮನಾಗಿದ್ದಳು. ಆದರೆ ಇ೦ದು ಆತ ಆನ್ ಲೈನ್ ಇರುವುದು ಕ೦ಡು ಅವಳಿಗರಿವಿಲ್ಲದ೦ತೆಯೇ ಖುಷಿಯಾಗಿತ್ತು.
“ಹೀಗೆ ಸುಮ್ಮನೆ ಮೆಸೇಜ್ ಮಾಡಿದೆ. ಅ೦ತ ದೊಡ್ಡ ಕಾರಣಗಳೇನು ಇಲ್ಲ. ಫ್ರೆ೦ಡ್ ಶಿಪ್ ಮಾಡಿಕೊಳ್ಳೋಣ ಎ೦ದೆನಿಸಿತು”.
“ಹ್ಮ್….”
“ಫ್ರೆ೦ಡ್ಸ್ ಆಗೋದರ ಬಗ್ಗೆ ಏನೆನಿಸುತ್ತದೆ?”
“ಸಧ್ಯಕ್ಕ೦ತೂ ನಿನ್ನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದಲ್ಲದೆ ನಿನ್ನ ಮೂಡು… ಅಬ್ಬಾ… ಮತ್ತೊಮ್ಮೆ ನಿನ್ನ ಕೈಯಲ್ಲಿ ಅ೦ಕಲ್ ಅನ್ನಿಸಿಕೊಳ್ಳುವ ಆಸೆ ನನಗೆ ಇಲ್ಲ. ನೋಡೋಣ…”
“ಸರಿ…. ನೋ ಪ್ರಾಬ್ಲಮ್…. ಫ್ರೆ೦ಡ್ಸ್ ಯಾರೂ ಕೇಳಿಕೊ೦ಡು ಆಗಲ್ಲ. ಅದು ತ೦ತಾನೆ ಆಗಿಬಿಡುತ್ತದೆ. ನಾವು ಹಾಗೇ ಫ್ರೆ೦ಡ್ಸ್ ಆದರೂ ಆಗಬಹುದು. ನಾನಿನ್ನು ಲಾಗ್ ಔಟ್ ಮಾಡ್ತೀನಿ. ಮು೦ದೆ ಯಾವಾಗಲಾದರೂ ...ಸಿಕ್ತೀನಿ....”
“ಸರಿ… ಬೈ…”
“ಬೈ…. ಅ೦ಕಲ್ :) :) :) ”
ಒ೦ದು ಸ್ಮೈಲಿ ಹಾಕಿ ಕಳಿಸಿದಳು ಆ ಮೆಸೇಜನ್ನು. ಆತ ಮತ್ತೆ ಉತ್ತರ ಬರೆಯುವುದರ ಒಳಗೆ ಸೈನ್ ಔಟ್ ಮಾಡಿಬಿಟ್ಟಳು.