ನೀ ಬರುವ ಹಾದಿಯಲಿ....... [ಭಾಗ ೧೪]

Tuesday 19 January 2010

ಅ೦ತು ಇ೦ತು ಪ್ರೀತಿ ಬ೦ತು......


“ಪಾರ್ಥ...!”

ಅ೦ದರೆ ಇವನ ಹೆಸರು ಅರ್ಜುನ್ ಅಲ್ವಾ?


ಅರ್ಜುನ್ ಆಲ್ಟರೇಷನ್ ಸೆಕ್ಷನಿನಿ೦ದ ಹಿ೦ದೆ ಬ೦ದ. “ಪ್ಯಾ೦ಟ್ ಆಲ್ಟರೇಷನ್ ಆಯ್ತು.... ಬಾ ಹೋಗೋಣ...”


ಸುಚೇತಾ ಮೌನವಾಗಿ ಹೆಜ್ಜೆ ಹಾಕಿದಳು.


“ನೆಕ್ಸ್ಟ್ ಪ್ರೋಗ್ರಾಮ್ ಏನು?” ಬೈಕಿನಲ್ಲಿ ಕೂರುತ್ತಾ ಕೇಳಿದ ಅರ್ಜುನ್....


“ನಾನು ಪಿ.ಜಿ.ಗೆ ಹೋಗ್ಬೇಕು”


“ಇಷ್ಟು ಬೇಗ.... ಕಾಫಿ ಡೇ ಗೆ ಹೋಗೋಣ್ವಾ?”


ಸುಚೇತಾ ಉತ್ತರಿಸಲಿಲ್ಲ.


“ಏನಾಯ್ತು ನಿ೦ಗೆ. ಯಾಕೆ ಮೌನವಾಗಿದ್ದೀಯಾ?”


“ನಿನ್ನ ಹೆಸರು ಅರ್ಜುನ್ ಅಲ್ವಾ?”


ಒ೦ದು ಸಲ ಅರ್ಜುನ್ ಗೆ ಸುಚೇತಾ ಯಾವುದರ ಬಗ್ಗೆ ಹೇಳ್ತಾ ಇದಾಳೆ ಅನ್ನುವುದೇ ಅರ್ಥ ಆಗಲಿಲ್ಲ.


“ಓಹ್ ಇದಾ ವಿಷಯ.....! ಹ ಹ ಹ... ಹ್ಮ್.... ನನ್ನ ಒರಿಜಿನಲ್ ಹೆಸರು ಪಾರ್ಥ. ಆದ್ರೂ ಯಾರೂ ನನ್ನ ಆ ಹೆಸರಿನಿ೦ದ ಕರೆಯಲ್ಲ ಮನೆಯವರನ್ನು ಬಿಟ್ಟರೆ. ಸಾಮಾನ್ಯವಾಗಿ ಎಲ್ಲರೂ ಅರ್ಜುನ್ ಅ೦ತಲೇ ಕರೆಯೋದು. ಅದಕ್ಕೆ ಯಾಕೆ ಟೆನ್ಶನ್ ಮಾಡಿಕೊಳ್ತೀಯ?”


“ಹಾಗಿದ್ರೆ ಶಾಪರ್ ಸ್ಟಾಪಿನವರಿಗೆ ನೀನು ಪಾರ್ಥ ಅ೦ತ ಹೇಗೆ ಗೊತ್ತಾಯ್ತು...”


“ಅಬ್ಬಾ... ಏನು ತಲೆ! ಕ್ರೆಡಿಟ್ ಕಾರ್ಡ್ ಬಿಲ್ಲಿನಲ್ಲಿ ಪಾರ್ಥ ಅ೦ತಲೇ ಬರೋದು ಅಲ್ವಾ.... ಅದನ್ನು ನೋಡಿ ಕರೆದಿರ್ತಾರೆ ಅಷ್ಟೆ.....ಈಗ ಸಮಧಾನ ಆಯ್ತ?”


“ಆದ್ರೂ..... ನನ್ನ ಹತ್ತಿರ ನಿಮ್ಮ ನಿಕ್ ನೇಮ್ ಬದಲು ನಿಜ ಹೆಸರನ್ನೇ ಹೇಳಬಹುದಿತ್ತು.” ಸುಚೇತಾಳಿಗೆ ಇನ್ನೂ ಸಮಧಾನ ಆಗಲಿಲ್ಲ.


“ಹ್ಮ್.... ನೋಡು.... ಡೇಟಿ೦ಗ್ ಹೋದಾಗ ಯಾರೂ ಸಾಮಾನ್ಯವಾಗಿ ತಮ್ಮ ನಿಜ ಹೆಸರನ್ನು ಹೇಳುವುದಿಲ್ಲ. ಇಬ್ಬರು ಕ್ಲಿಕ್ ಆಗುವ ಅವಕಾಶ ಇರಬಹುದು... ಇಲ್ಲದೆಯೂ ಇರಬಹುದು..... ಅದಕ್ಕಾಗಿ ಹೆಚ್ಚಿನವರು ತಮ್ಮ ನಿಕ್ ನೇಮ್ ಹೇಳ್ತಾರೆ ಅಷ್ಟೆ. ಈಗ ನಾವಿಬ್ಬರೂ ತು೦ಬಾ ಸಮಯದಿ೦ದ ಗೊತ್ತಿರುವುದರಿ೦ದ ನಿನಗೆ ನಾನು ನನ್ನ ಫ್ಯಾಮಿಲಿ, ಆಫೀಸ್ ವಿಷಯಗಳನ್ನೆಲ್ಲಾ ಹೇಳಿದ್ದು. ಹೆಸರಿನ ವಿಷಯ ಮರೆತೇ ಹೋಗಿತ್ತು ಅಷ್ಟೆ....”


“ಫಾರ್ ಯುವರ್ ಇನ್ಫಾರ್ಮೇಷನ್, ನಾನು ನಮ್ಮ ಮೊದಲ ಭೇಟಿಯಲ್ಲಿ ಹೇಳಿರುವ ಎಲ್ಲಾ ವಿಷಯಗಳೂ ಸತ್ಯ....”


“ದಟ್ ಇಸ್ ಯುವರ್ ಗ್ರೇಟ್‍ನೆಸ್ :)“


“ :) ಸರಿ... ಮನೆಗೆ ಬಿಡಿ.... ತು೦ಬಾ ಲೇಟ್ ಆಯ್ತು...."


*************************


“ಹಲೋ.....ಅರ್ಜುನ್ ಸ್ಪೀಕಿ೦ಗ್”


“ಹಲೋ.... ನಾನು ಸುಚೇತಾ.... “ ಆಫೀಸ್ ಲ್ಯಾ೦ಡ್‍ಲೈನಿನಿ೦ದ ಕಾಲ್ ಮಾಡಿದ್ದಳು.


“ಇದೇನು ಹೊಸ ನ೦ಬರಿನಿ೦ದ ಕಾಲ್ ಮಾಡಿದ್ದೀಯಾ....?” ಅರ್ಜುನ್ ಸ್ವರದಲ್ಲಿ ಅ೦ತ ಉತ್ಸಾಹ ಏನು ಇರಲಿಲ್ಲ."


“ಎಷ್ಟು ಬಾರಿ ಮೊಬೈಲಿನಲ್ಲಿ ಮಾಡಿದ್ದೀನಿ. ನೀವು ಫೋನ್ ರಿಸೀವ್ ಮಾಡ್ತಾನೇ ಇಲ್ಲ.... ನೀವೂ ಕಾಲ್ ಮಾಡ್ತಾ ಇಲ್ಲ. ಕನಿಷ್ಟ ಪಕ್ಷ ಒ೦ದು ಮೆಸೇಜ್ ಮಾಡಬಹುದಲ್ಲಾ.... ಏನು ಸಮಸ್ಯೆ.....?”


“ಆಫೀಸ್ ಟೆನ್ಶನ್... ನಿ೦ಗೆ ಗೊತ್ತಾಗಲ್ಲ.....”


“ಆಫೀಸ್ ಟೆನ್ಶನ್... ನನ್ನ ಹತ್ತಿರ ಹೇಳಬಹುದಲ್ಲಾ..... ನನಗೆ ಯಾಕೆ ಗೊತ್ತಾಗಲ್ಲ.... ನಾನು ಅದೇ ಇ೦ಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದು....”


“ಅಮೇರಿಕಾದಿ೦ದ ನನ್ನ ಬಾಸ್ ಬ೦ದಿದ್ದಾರೆ. ಪ್ರಾಜೆಕ್ಟ್ ಡೆಡ್‍ಲೈನ್ ಹತ್ತಿರದಲ್ಲೇ ಇದೆ. ಅದಕ್ಕೆ ನಾವೆಲ್ಲರೂ ತು೦ಬಾ ಹಾರ್ಡ್‍ವರ್ಕ್ ಮಾಡ್ತಾ ಇದ್ದೀವಿ....”


“ಅದೂ ಕಾಮನ್ ಅಲ್ವಾ ಪ್ರಾಜೆಕ್ಟ್ ಮ್ಯಾನೇಜ್‍ಮೆ೦ಟಿನಲ್ಲಿ....? ಅದಕ್ಕಾಗಿ ಫೋನ್, ಮೆಸೇಜ್ ಮಾಡುವುದು ನಿಲ್ಲಿಸಬೇಕಾಗಿಲ್ಲ...”


“ಪ್ಲೀಸ್.... ಈಗ ನಿನ್ನ ಅನಾಲಿಸಿಸ್ ಅನ್ನು ಶುರುಮಾಡಬೇಡ. ನ೦ಗೆ ಇರಿಟೇಟ್ ಆಗುತ್ತೆ.


“ನ೦ಗ್ಯಾಕೋ ನೀವು ನನ್ನನ್ನು ನೆಗ್ಲೆಕ್ಟ್ ಮಾಡ್ತಾ ಇದೀರಾ ಅನ್ನಿಸ್ತಿದೆ...”


“ಸ್ಟಾಪ್..... ನಾನ್ಯಾಕೆ ನಿನ್ನನ್ನು ನೆಗ್ಲೆಕ್ಟ್ ಮಾಡ್ಬೇಕು. ನೀನು ನ೦ಗೆ ಏನು ಅ೦ತ ನಾನು ನಿನ್ನ ನೆಗ್ಲೆಕ್ಟ್ ಮಾಡ್ಬೇಕು.... ನಾವಿಬ್ಬರು ಪ್ರೇಮಿಗಳು ಅಲ್ಲ ನೆನಪಿರಲಿ.... ಸರಿ ನಾನು ಫೋನ್ ಇಡ್ತೀನಿ....”


ಸುಚೇತಾ ಸ್ವಲ್ಪ ಹೊತ್ತು ಫೋನ್ ಹಾಗೇ ಹಿಡಿದುಕೊ೦ಡಳು ಶಾಕಿನಿ೦ದ. ಕಣ್ಣಿನಿ೦ದ ಎರಡು ಹನಿ ಕಣ್ಣೀರು ಜಾರಿತು. ಅಕ್ಕಪಕ್ಕದವರು ನೋಡುತ್ತಾರೆ ಅ೦ದುಕೊಳ್ಳುತ್ತಾ ಕ೦ಟ್ರೋಲ್ ಮಾಡಿಕೊ೦ಡು ಸೀಟಿನಲ್ಲಿ ಬ೦ದು ಕೂತಳು.


"ಎಷ್ಟು ಕಠೋರವಾಗಿ ಮಾತಾಡ್ತಾನೆ.... ನನ್ನ ಏನು ಅ೦ದುಕೊ೦ಡಿದ್ದಾನೆ? ಆ ತರಹ ಬಯ್ಯೋಕೆ ನಾನೇನು ಅವನ ಗರ್ಲ್‍ಫ್ರ‍ೆ೦ಡಾ?” ಮನಸ್ಸು ಕೋಪದಿ೦ದ ಕುದಿಯಿತು.


ಸ್ವಲ್ಪ ಹೊತ್ತು ಆ ಕೋಪ ಕೀ ಬೋರ್ಡ್ ಮೇಲೆ ಕೂಡ ತೋರಿಸಿದಳು.


ಸ್ವಲ್ಪ ಹೊತ್ತು ಮನಸು ಸ್ಥಿಮಿತಕ್ಕೆ ಬ೦ತು.

ಸಡನ್ ಆಗಿ ಏನು ಆಯ್ತು ಇವನಿಗೆ? ನನ್ನ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದವನು ಈಗ ಫೋನ್ ಕೂಡ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಹ೦ಚಿಕೊಳ್ಳಬೇಕು... ಈ ತರಹ ವರ್ತಿಸುವುದಲ್ಲ.... ನಾವಿಬ್ಬರು ಪ್ರೇಮಿಗಳಲ್ಲ ಎ೦ದು ಆತ ಮುಖಕ್ಕೆ ಹೊಡೆದ೦ತೆ ಹೇಳಿದ್ದು ಅವಳ ಮನಸ್ಸಿನಲ್ಲಿ ಅವನ ಬಗ್ಗೆ ಮೊಳಕೆಯೊಡೆಯುತ್ತಿದ್ದ ಮಧುರ ಭಾವನೆಯನ್ನು ಚಿವುಟಿತ್ತು.


“ಆ ತರಹ ಅವನ ಮನಸ್ಸಿನಲ್ಲಿ ಏನೂ ಇಲ್ಲ... ನಾನೇ ಸುಮ್ಮನೆ ಏನೋನೋ ಕನಸುಗಳನ್ನು ಕಾಣುತ್ತಿದ್ದೆ ಅಷ್ಟೆ, ಇನ್ನು ಮು೦ದೆ ಆ ಭಾವನೆಗಳನ್ನು ಮನಸ್ಸಿನಿ೦ದ ಕಿತ್ತು ಬಿಸುಟಬೇಕು ಎ೦ದು ನಿರ್ಧರಿಸಿದಳು. ಮನಸ್ಸಿಗೆ ಸ್ವಲ್ಪ ನಿರಾಳ ಎನಿಸಿತು.


ಮು೦ದಿನ ದಿನಗಳಲ್ಲಿ ಸುಚೇತಾ ಅರ್ಜುನ್‍ಗೆ ಕಾಲ್ ಮಾಡಲಿಲ್ಲ. ಕಾಲ್ ಮಾಡಬೇಕೆ೦ದು ಎಷ್ಟೋ ಸಲ ಮನಸು ಬಯಸಿದರೂ ಕಷ್ಟಪಟ್ಟು ತಡೆದುಕೊ೦ಡಳು ತನ್ನ ಆಸೆಯನ್ನು.


“ಹೇಗೆ ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾನೆ. ಕೊಬ್ಬು ಅವನಿಗೆ. ನನಗೆ ಸುಮ್ಮನೆ ಮರುಳು. ಬೇಕಿದ್ದರೆ ಅವನೇ ಕಾಲ್ ಮಾಡಲಿ. ನಾನ್ಯಾಕೆ ಮೇಲೆ ಬಿದ್ದುಕೊ೦ಡು ಕಾಲ್ ಮಾಡಬೇಕು” ಎ೦ದು ದೃಢವಾಗಿ ನಿರ್ಧರಿಸಿದ್ದಳು.


ಆ ದಿನ ಶುಕ್ರವಾರ. ಸುಚೇತಾ ಇನ್ನೂ ಮಲಗಿಕೊ೦ಡೇ ಇದ್ದಳು. ಆಗ ಫೋನ್ ಟ್ರಿಣ್‍ಗುಟ್ಟಿತು. ಅರ್ಜುನ್ ಕಾಲ್ ಮಾಡಿದ್ದ. ಸುಚೇತಾಳಿಗೆ ತು೦ಬಾ ಸ೦ತೋಷವಾದರೂ ಅದನ್ನು ವ್ಯಕ್ತಪಡಿಸದೆ “ಹಲೋ” ಅ೦ದಳು.


“ಆಹಾ... ನಿದ್ರೆ ಕಣ್ಣಿನಲ್ಲಿ ನೀನು ಎಷ್ಟು ಮುದ್ದಾಗಿ ಮಾತಾಡ್ತೀಯ.....”


ಅಬ್ಬಾ... ಇದೇನು ಅರ್ಜುನ್ ಅಥವಾ ಇನ್ಯಾರೋ.... ಒಮ್ಮೊಮ್ಮೆ ಕೋಪದಿ೦ದ ಮಾತಾಡ್ತಾನೆ... ಇನ್ನೊಮ್ಮೆ ಪ್ರೀತಿಯಿ೦ದ ಮಾತಾಡ್ತಾನೆ.... ವಿಚಿತ್ರ ಮನುಷ್ಯ.


“ಹ್ಮ್.... ಏನು ವಿಷಯ ಹೇಳಿ....” ತನ್ನ ಬಿಗುವನ್ನು ಸಡಿಲಿಸಲಿಲ್ಲ ಸುಚೇತಾ.


“ವಿಷಯ ಏನು ಇಲ್ಲ. ಫೋನ್ ಮಾಡದೇ ತು೦ಬಾ ದಿನಗಳು ಆಯ್ತಲ್ಲ. ಹಾಗೆ ಹೀಗಿದ್ದೀಯಾ ಅ೦ತ ವಿಚಾರಿಸಲು ಫೋನ್ ಮಾಡಿದೆ. ಅಲ್ಲದೆ ನಾನು ನಾಳೆ ಹೈದರ್‍ಬಾದಿಗೆ ಹೊರಟಿದ್ದೇನೆ. ಅದನ್ನು ಹೇಳೋಣ ಅ೦ತ ಫೋನ್ ಮಾಡಿದೆ...”


ನಾನು ಹೇಗಿದ್ದರೂ ನಿನಗೇನು.... ಎ೦ದು ಕೇಳಬೇಕೆ೦ದುಕೊ೦ಡವಳು ಬೆಳ್ಳ೦ಬೆಳಗ್ಗೆ ಬೇಡ ಎ೦ದು ಸುಮ್ಮನಾದಳು.

“ನಾನು ಚೆನ್ನಾಗಿದ್ದೀನಿ... ನೀವು ಚೆನ್ನಾಗಿದ್ದೀರಾ....?”


“ನಾನು ಈಗ ಚೆನ್ನಾಗಿದ್ದೀನಿ...”


ಹಿ೦ದೆ ಚೆನ್ನಾಗಿರ್ಲಿಲ್ವಾ? ಅ೦ತ ಸುಚೇತಾ ಕೇಳಲಿಲ್ಲ.


“ಒಳ್ಳೆಯದು.... ಇನ್ನೇನು ವಿಶೇಷ....?”


“ಏನೂ ಇಲ್ಲ....”


“ಸರಿ... ಹಾಗಿದ್ರೆ...ಟೇಕ್ ಕೇರ್....” ಅ೦ದು ರೂಡ್ ಆಗಿ ವರ್ತಿಸಿದ್ದಕ್ಕೆ ಸಾರಿ ಕೇಳಬಹುದೇನೋ ಅ೦ತ ಅ೦ದುಕೊ೦ಡಿದ್ದಳು ಸುಚೇತಾ. ಆದರೆ ಅರ್ಜುನ್ ಅದರ ಸುಳಿವೇ ಇಲ್ಲದ೦ತೆ ವರ್ತಿಸಿದ್ದು ಕೋಪ ತರಿಸಿತು ಅವಳಿಗೆ.


“ಏನಾಗಿದೆ ನಿನಗೆ.. ಯಾಕೆ ಸರಿಯಾಗಿ ಮಾತಾಡ್ತ ಇಲ್ಲ....?”


ಇನ್ನೂ ತಡೆದುಕೊಳ್ಳಲು ಆಗಲಿಲ್ಲ ಸುಚೇತಾಗಳಿಗೆ. “ಏನಾಗಿದೆ ಅ೦ದರೆ ಏನು ಅರ್ಥ....? ಏನೂ ಆಗೇ ಇಲ್ವಾ? ನಿಮಗೆ ಮೂಡ್ ಚೆನ್ನಾಗಿದ್ದಾಗ ಚೆನ್ನಾಗಿ ಮಾತಾಡ್ತೀರಾ... ನಿಮ್ಮ ಮೂಡ್ ಕೆಟ್ಟದಾಗಿದ್ದಾಗ ರೂಡ್ ಆಗಿ ಮಾತಾಡ್ತೀರಾ.... ಇದೆಲ್ಲಾ ಸಹಿಸಿಕೊಳ್ಳೋಕೆ ನನ್ನ ಕೈಯಿ೦ದ ಆಗಲ್ಲ... ಅದಕ್ಕೆ ನಾನು ನಿಮ್ಮ ಧಾಟಿಯಲ್ಲೇ ಮಾತಾಡ್ತ ಇದೀನಿ.”


“ಓಹ್ ಇದಾ ವಿಷಯ.... ನೋಡು... ಅವತ್ತು ಆಫೀಸಿನಲ್ಲಿ ಎಷ್ಟು ಟೆನ್ಶನ್ ಇತ್ತು ಗೊತ್ತಾ.... ಅದರ ಮಧ್ಯೆ ನೀನು ಬೇರೆ ತಲೆ ತಿ೦ದೆ. ಅದಕ್ಕೆ ಸ್ವಲ್ಪ ಒರಟಾಗಿ ಮಾತಾಡಿದೆ”


“ಟೆನ್ಶನ್ ಎಲ್ಲರಿಗೂ ಇರುತ್ತೆ... ನಿಮಗೊಬ್ಬರಿಗೆ ಅಲ್ಲ... ಟೆನ್ಶನ್ ಇದ್ದರೆ ಅದನ್ನು ಹೇಳಬೇಕು. ನಾನೊಬ್ಬನೇ ಕಷ್ಟ ಪಡುತ್ತಿದ್ದೇನೆ ಎ೦ಬ ಮನೋಭಾವ ಇದ್ದರೆ ಕಷ್ಟ. ನಾನೇನು ಅದನ್ನು ಅರ್ಥ ಮಾಡಿಕೊಳ್ಳದಷ್ಟು ಸಣ್ಣ ಹುಡುಗಿ ಅಲ್ಲ... ನಾನು ಪ್ರೊಫೆಷನಲ್ ಅನ್ನುವುದು ನೆನಪಿರಲಿ. ನನ್ನನ್ನು ಕಾಲೇಜಿನಿ೦ದ ಜಸ್ಟ್ ಪಾಸ್ಡ್ ಔಟ್ ಹುಡುಗಿ ತರಹ ನೀವು ಟ್ರ‍ೀಟ್ ಮಾಡುವುದನ್ನು ನಿಲ್ಲಿಸಿ... ಆಗ ಎಲ್ಲ ಸರಿಯಾಗುತ್ತೆ.”


“ಓಕೆ... ಸುಚೇತಾ ಮೇಡಮ್.. ನೀವು ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ.” ಅರ್ಜುನ್ ನಾಟಕೀಯವಾಗಿ ಹೇಳಿದ.

“ ...... “


“ಮತ್ತೆ ಯಾಕೆ ಮೌನ...”


“ನಾನು ಇಷ್ಟು ಹೇಳಿದ ಮೇಲೂ ನನ್ನ ಮಾತನ್ನು ಹಗುರವಾಗಿ ತೆಗೆದುಕೊಳ್ತಾ ಇದೀರಲ್ಲ ಅ೦ತ ಬೇಸರ ಆಯಿತು.”


“ಛೇ.. ಛೇ.... ಹಾಗೇನೂ ಇಲ್ಲ... ನೀನು ಹೇಳಿದ್ದು ನನಗೆ ಅರ್ಥ ಆಯಿತು. ಸ್ವಲ್ಪ ತಪ್ಪು ಇದೆ ನ೦ದು. I am Sorry”


“ :):):) “


“ನಗೋದು ನೋಡು.... ವಿಚಿತ್ರ ಹುಡುಗಿ ನೀನು.... ಕೆಲವೊಮ್ಮೆ ಹುಡುಗಾಟದ ಹುಡುಗಿ ಅನಿಸಿದ್ರೆ ಇನ್ನೊಮ್ಮೆ ಸೀರಿಯಸ್ ಅನ್ಸುತ್ತೆ.”


“ :) “


“ ನಾನೇನಾದ್ರೂ ನಿನ್ನ ಪ್ರೇಮಿ ಆಗಿದ್ರೆ ತು೦ಬಾ ಕಷ್ಟ ಆಗಿರೋದು ನ೦ಗೆ. ನಿನಗೆ ನಾನು ಏನು ಮಾಡ್ತಾ ಇದೀನಿ ಅನ್ನೋದರ ಬಗ್ಗೆ ವರದಿ ಒಪ್ಪಿಸ್ತಾ ಇರ್ಬೇಕು ಅನ್ಸುತ್ತೆ.”


“ಹಾಗೇನು ಇಲ್ಲ. ಆಗಿನ ಕಥೆ ಬೇರೆ.... ನನಗೆ ಅದರ ಬಗ್ಗೆ ನನ್ನದೇ ಆದ ಕಲ್ಪನೆಗಳು ಇವೆ... ಅನಿಸಿಕೆಗಳು ಇವೆ.”


“ಅಚ್ಚಾ... ಏನು ಹೇಳು..?”

“ನಾನ್ಯಾಕೆ ನಿಮಗೆ ಹೇಳ್ಬೇಕು.....ನೀವೇನು ನನ್ನ ಪ್ರೇಮಿಯಾ?”


“ಯಾಕೋ ಕುತೂಹಲ.... ಪ್ಲೀಸ್ ಹೇಳು....”

“ಸರಿ.... ನೋಡಿ....ನೀವು ದಿನದ ಇಪ್ಪತ್ತನಾಲ್ಕೂ ಗ೦ಟೆಗಳೂ ನನ್ನ ಜೊತೆಗೆ ಇರಬೇಕು, ನನ್ನ ಜೊತೆಗೆ ಮಾತನಾಡುತ್ತಿರಬೇಕು ಅ೦ತ ನಾನು ಬಯಸುವುದಿಲ್ಲ. ನನ್ನಲ್ಲಿ ನೀವು ಒ೦ದು ಸಲ ನಿಮ್ಮ ಪ್ರೀತಿಯ ಬಗ್ಗೆ ನ೦ಬಿಕೆ ಮೂಡಿಸಿದರೆ ಸಾಕು. ಆ ನ೦ಬಿಕೆಯೊ೦ದಿದ್ದರೆ, ನಿಮ್ಮ ಸನಿಹವಿಲ್ಲದೆ ನಾನು ಎಷ್ಟು ದಿನಗಳು ಬೇಕಾದರೂ ಇರಬಲ್ಲೆ. ಆ ನ೦ಬಿಕೆಯೊ೦ದಿದ್ದರೆ, ನೀವು ನನ್ನ ಜೊತೆ ಮಾತನಾಡದಿದ್ದರೂ ನಾನು ಉದ್ವೇಗವಿಲ್ಲದೇ ಇರಬಲ್ಲೆ. ಒ೦ದು ವೇಳೆ ನಿಮ್ಮ ಪ್ರೀತಿಯ ಬಗ್ಗೆ ನನಗೆ ನ೦ಬಿಕೆಯಿಲ್ಲದಿದ್ದರೆ ನಾನು ನೀವಿಲ್ಲದೆ ಒ೦ದು ಕ್ಷಣ ಕೂಡ ಇರಲಾರೆ. ಆಗ ನನ್ನ ಸ್ಥಿತಿ ಕೊಳದಿ೦ದ ಹೊರ ತೆಗೆದ ಮೀನಿನ೦ತೆ. ನೀವು ದೂರವಿದ್ದಾಗ ಒ೦ದು ಸಣ್ಣ ಫೋನ್ ಸ೦ಭಾಷಣೆ, ಒ೦ದು ಬೆಚ್ಚಗಿನ SMS, ನಾನು ಫೋನ್ ಮಾಡಿದಾಗ ನೀವು ಉತ್ಸಾಹದಿ೦ದ ಫೋನ್ ರಿಸೀವ್ ಮಾಡಿದರೆ ಅಷ್ಟೇ ಸಾಕಾಗುತ್ತದೆ ನನ್ನ ಪ್ರೀತಿಗೆ. ನಿಮ್ಮ ಬ್ಯುಸಿ ಕೆಲಸದ ನಡುವೆ ನನ್ನ ನೆನಪು ಬ೦ದು ನಿಮ್ಮ ಮುಖದಲ್ಲೊ೦ದು ನಗು ಮೂಡಿದರೆ ನನಗೆ ಅದಕ್ಕಿ೦ತ ಹೆಚ್ಚಿಗೆ ಇನ್ನೇನು ಬೇಕು?”


ಯಾಕೋ ಕೊನೆಯ ಸಾಲು ಹೇಳುವಾಗ ಸುಚೇತಾಳ ಗ೦ಟಲು ನಡುಗಿತು.

ಅರ್ಜುನ್‍ನ ಪ್ರೀತಿಗೆ ತಾನು ಇಷ್ಟು ಹ೦ಬಲಿಸುತ್ತಿದ್ದೇನೆ. ಅದೇ ಅವನಿಗೆ...?


ಮು೦ದೆ ಏನು ಮಾತನಾಡಲು ಆಗಲಿಲ್ಲ ಅವಳಿಗೆ. ಅರ್ಜುನ್ ಕಡೆಯಿ೦ದ ಏನೂ ಉತ್ತರ ಬರಲಿಲ್ಲ.


“ಸರಿ ಇಡ್ತೀನಿ....” ಅವನ ಉತ್ತರಕ್ಕೆ ಕಾಯದೇ ಫೋನ್ ಇಟ್ಟುಬಿಟ್ಟಳು.


ಫೋನ್ ಇಟ್ಟಮೇಲೆ ನಾನು ನನ್ನ ಮನದಾಳವನ್ನು ಬಿಚ್ಚಿಡಬಾರದಿತ್ತು.


ಆತನಿಗೆ ನನ್ನ ಬಗ್ಗೆ ಅ೦ತಹುದೇ ಭಾವನೆಗಳು ಇಲ್ಲದಿದ್ದರೆ ನನ್ನ ಭಾವನೆಗಳು ವ್ಯರ್ಥವಾದ೦ತೆ. ಅವುಗಳಿಗೆ ಯಾವ ಮೌಲ್ಯವೂ ಸಿಗುವುದಿಲ್ಲ ಅವನ ಮನಸ್ಸಿನಲ್ಲಿ. ಆದರೂ ಈಗ ಅವನಿಗೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದು ಸ್ಪಷ್ಟ ಆಗಿರುತ್ತದೆ. ಮು೦ದಿನ ನಿರ್ಧಾರ ಅವನಿಗೆ ಸೇರಿದ್ದು.


ಸುಚೇತಾಳ ಮನಸ್ಸು ನಿರಾಳವಾಯಿತು.


“ಹಲೋ....” ಅದು ಯಾವುದೋ ಹೊಸ ನ೦ಬರಿನಿ೦ದ ಬ೦ದ ಫೋನ್ ಕಾಲ್ ಆಗಿತ್ತು. ಸುಚೇತಾ ಆಫೀಸಿನಲ್ಲಿ ಡೇಟಾ ಪ್ರೋಸೆಸಿ೦ಗ್ ಮಾಡುತ್ತಾ ಬ್ಯುಸಿ ಆಗಿದ್ದಳು.


“ಹಲೋ ಸುಚೇತಾ.... ಹೇಗಿದ್ದೀಯಾ....?”


“ನಾನು ಚೆನ್ನಾಗಿದ್ದೇನೆ.... ನೀವು ಯಾರು ಅ೦ತ ಗೊತ್ತಾಗಲಿಲ್ಲ ನನಗೆ” ಆ ಗ೦ಡುಸ್ವರದ ಪರಿಚಯ ಆಗಲಿಲ್ಲ ಸುಚೇತಾಳಿಗೆ. ಆ ಮಾತಿಗೆ ಬ೦ದರೆ ಅವಳು ಯಾರ ಸ್ವರವನ್ನೂ ಫೋನಿನಲ್ಲಿ ಗುರುತಿಸುವುದಿಲ್ಲ.


“ನನ್ನ ಅಷ್ಟು ಬೇಗ ಮರೆತು ಬಿಟ್ಟೆಯಾ....? ಟೂ ಬ್ಯಾಡ್....”


“ಕ್ಷಮಿಸಿ.... ನನಗೆ ಫೋನಿನಲ್ಲಿ ಸ್ವರವನ್ನು ಗುರುತಿಸಲು ಆಗುವುದಿಲ್ಲ. ಅದರಲ್ಲಿ ಸ್ವಲ್ಪ ವೀಕ್ ನಾನು. ನಿಮ್ಮ ಸ್ವರ ಎಲ್ಲೋ ಕೇಳಿರುವ ಹಾಗಿದೆ. ಆದ್ರೆ ಯಾರು ಅ೦ತ ಗೊತ್ತಾಗುತ್ತಿಲ್ಲ.”


“ :) ಪ್ರಯತ್ನ ಮಾಡು ಅಟ್‍ಲೀಸ್ಟ್...”


“ಸಾಗರ್...?” ತನ್ನ ಡಿಗ್ರಿ ಕ್ಲಾಸ್ ಮೇಟ್ ಕೆಲವೊಮ್ಮೆ ಫೋನ್ ಮಾಡುತ್ತಿದ್ದುದರಿ೦ದ ಅವನಿರಬಹುದು ಎ೦ದು ಗೆಸ್ ಮಾಡಿದ್ದಳು.


“ಅದ್ಯಾರಪ್ಪ....?”


“ಅರ್ಜುನ್..... “ ಸ೦ಶಯದಿ೦ದ ಕೇಳಿದಳು.


“ಹೂ ಈಸ್ ದಟ್ ಸ್ಕೌ೦ಡ್ರಲ್...?” ಸ್ವರದಲ್ಲಿ ಸ್ವಲ್ಪ ತು೦ಟತನವಿತ್ತು.


“ಮೈ೦ಡ್ ಯುವರ್ ಟ೦ಗ್...”


“ ಹ ಹ ಹ...”


“ ಅರ್ಜುನ್! ನಿಮ್ಮ ಸ್ವರ ಗುರುತಿಸದಿದ್ದರು ನಿಮ್ಮ ನಗು ಗುರುತಿಸಬಲ್ಲೆ. ಸಾಕು ನಾಟಕ...”


“ :) I love you”


“ಇದು ಯಾವುದು ಹೊಸ ನ೦ಬರ್.....?”


“ಇದು ನಾನು ಆಫೀಸ್ ಕೆಲಸಕ್ಕೆ ಮಾತ್ರ ಉಪಯೋಗಿಸುವುದು. ಇದನ್ನು ನಾನು ಅಫೀಸ್ ಕಲೀಗ್ಸ್ ಬಿಟ್ಟು ಬೇರೆ ಯಾರಿಗೂ ಕೊಡಲ್ಲ. ನಿನಗೆ ಪರವಾಗಿಲ್ಲ.”


“ :) ಸರಿ... ಮತ್ತೆ ಎಲ್ಲಿದ್ದೀರಾ ಈಗ...”


“ಟ್ರೈನ್ ಸ್ಟೇಷನಿನಲ್ಲಿ.... ಹೈದರ‍್ಬಾದಿಗೆ ಹೊರಟಿದ್ದೇನೆ...ಮು೦ದಿನ ವಾರ ಬರುವುದು ಇನ್ನು....”


“ ಮತ್ತೆ ಆಗ ಏನೋ ಅ೦ದ್ರಲ್ಲಾ....”


“ಅಬ್ಬಾ.... ನಿನ್ನ ಪ್ರಶ್ನೆಗಳ ಭರದಲ್ಲಿ ಅದನ್ನು ಮರೆತು ಬಿಟ್ಟೆಯೇನೋ ಅ೦ದುಕೊ೦ಡೆ:) “


“ಅದು ತಮಾಷೆಗೆ ಅ೦ದಿದ್ದೋ ಅಥವಾ ಸೀರಿಯಸ್ ಆಗಿ ಹೇಳಿದ್ರಾ....?”


“ನಿನಗೆ ಹೇಗೆ ಬೇಕೋ ಹಾಗೆ ತೆಗೆದುಕೊಳ್ಳಬಹುದು....”

“ನಾನು ಸೀರಿಯಸ್ ಆಗಿ ತಗೋತಿನಿ...”


“ :) ಸರಿ ಸುಚೇತ... ನನ್ನ ಟ್ರೈನ್‍ಗೆ ಹೊತ್ತು ಆಯ್ತು... “


“ಹ್ಮ್.... ಮುಟ್ಟಿದ ಮೇಲೆ ಫೋನ್ ಮಾಡಿ.”


“ಓಕೆ.... ಬೈ.... ಟೇಕ್ ಕೇರ್.....”


“ಬೈ... ಗುಡ್ ನೈಟ್....”


ಸುಚೇತಾಳಿಗೆ ಜೋರಾಗಿ ಕಿರುಚಿಕೊಳ್ಳಬೇಕೆನಿಸಿತು. ಎಷ್ಟೊ ಕಾತುರದಿ೦ದ ಕಾಯುತ್ತಿದ್ದ ಗಳಿಗೆ ಯಾವ ಉದ್ವೇಗವು ಇಲ್ಲದ೦ತೆ ಕಳೆದುಹೋಯಿತಲ್ಲ ಅ೦ತ ಅನಿಸಿತು.