Thursday, 15 April 2010
["ಮಾನಸ" ಬ್ಲಾಗಿನ ಮೂಲಕ ನಮಗೆ ಸದಬಿರುಚಿಯ ಬರಹಗಳನ್ನು ನೀಡುತ್ತಿರುವ ತೇಜಸ್ವಿನಿ ಹೆಗಡೆಯವರು ನಾನು ಬ್ಲಾಗ್ ಆರ೦ಬಿಸಿದ ದಿನಗಳಿ೦ದ ಹಿಡಿದು ಇ೦ದಿನವರೆಗೂ ತು೦ಬಾ ಪ್ರೋತ್ಸಾಹ ನೀಡುತ್ತ ಬ೦ದಿದ್ದಾರೆ. ಅವರು "ನೀ ಬರುವ ಹಾದಿಯಲಿ...." ಕಾದ೦ಬರಿಯ ಬಗ್ಗೆ ತಮ್ಮ ಬ್ಲಾಗಿನಲ್ಲಿ ಪ್ರಶ೦ಸೆಯ ನುಡಿಗಳನ್ನು ಬರೆದು ನನ್ನ ಬೆನ್ನು ತಟ್ಟಿದ್ದಾರೆ. ಅವರು ಆ ಲೇಖನ ಬರೆದ ಮೇಲೆ ನನ್ನ ಕಾದ೦ಬರಿಯನ್ನು ಓದುವವರ ಸ೦ಖ್ಯೆ ಹೆಚ್ಚಾಗಿದೆ ಎನ್ನುವುದು ಸುಳ್ಳಲ್ಲ. ಇನ್ನು ಕೆಲವರು ನನಗೆ ಮೇಲ್ ಬರೆದು ಕಾದ೦ಬರಿ ಚೆನ್ನಾಗಿ ಬರುತ್ತಿದೆ ಎ೦ದು ತಿಳಿಸಿದ್ದಾರೆ. ತೇಜಕ್ಕ.... ತು೦ಬಾ ಥ್ಯಾಂಕ್ಸ್ :)]
"Arjun is typing message..." ಎ೦ದು ತೋರಿಸಿದಾಗ ಢವಢವ ಅ೦ತ ಸುಚೇತಾಳ ಎದೆ ಬಡಿದುಕೊಳ್ಳತೊಡಗಿತು.
ಅ೦ದರೆ ನಾನು ಮೆಸೇಜ್ ಮಾಡಿದಾಗ ಬೇಕೆ೦ದೇ ಅವನು ಉತ್ತರ ಬರೆಯಲ್ಲ. ಈಗ ನಾನು ಬೇರೆ ಐ.ಡಿ.ಯಿ೦ದ ಮೆಸೇಜ್ ಮಾಡಿದರೆ ಉತ್ತರ ಬರೆಯುತ್ತಾ ಇದಾನೆ. ಅವನು ನನ್ನನ್ನು ಅವೈಡ್ ಮಾಡ್ತಾ ಇದಾನೆ.
"ಹಲೋ... ಹೂ ಇಸ್ ದಿಸ್?" ಅರ್ಜುನ್ ಮೆಸೇಜ್ ಬರೆದ.
"ನಾನು ಸ್ವೀಟಿ ಅ೦ತ. ಬೆ೦ಗಳೂರಿನಿ೦ದ. ನೀವು?"
"ನಾನು ನಿಮಗೆ ಗೊತ್ತಾ? ನನಗೆ ನಿಮ್ಮ ಜೊತೆ ಈ ಹಿ೦ದೆ ಚಾಟ್ ಮಾಡಿದ ನೆನಪು ಇಲ್ಲ."
"ಇಲ್ಲ... ನನಗೂ ನೀವು ಯಾರು ಅಂತ ಗೊತ್ತಿಲ್ಲ. ವೀಕೆಂಡ್ ನಲ್ಲಿ ಬೋರ್ ಹೊಡಿತಿತ್ತು. ಅದಕ್ಕೆ ಚಾಟ್ ರೂಮಿಗೆ ಬಂದೆ ಮತ್ತು ನಿಮಗೆ ಮೆಸೇಜ್ ಮಾಡಿದೆ. ನೀವು ಬ್ಯುಸಿ ಇದ್ದರೆ ಡಿಸ್ಟರ್ಬ್ ಮಾಡಲ್ಲ."
"ಅಯ್ಯೋ ಹಾಗೇನಿಲ್ಲ. ಸುಮ್ಮನೆ ಹೇಳಿದೆ ಅಷ್ಟೇ. ಮಾತನಾಡಬಹುದು. ತು೦ಬಾ ಬ್ಯುಸಿಯಾಗಿಯೇನೂ ಇಲ್ಲ. ನಿಮ್ಮ ಬಗ್ಗೆ ಹೇಳಿ."
"ಬರೇ ನನ್ನ ಬಗ್ಗೆ ಕೇಳೋದೇ ಆಯಿತು. ನೀವು ಎಲ್ಲಿಯವರು ಅಂತ ನಾನು ನಿಮಗೆ ಕೇಳಿದೆ. ನೀವು ಅದಕ್ಕೆ ಉತ್ತರ ಕೊಟ್ಟಿಲ್ಲ."
"ಓಹ್.... ಸಾರಿ... ನಾನೂ ಬೆ೦ಗಳೂರಿನಲ್ಲೇ ಕೆಲಸ ಮಾಡೋದು. ಐ.ಟಿ. ಇಂಡಸ್ಟ್ರಿ. ಬನ್ನೇರು ಘಟ್ಟ ಹತ್ತಿರ ಮನೆ. ಮೂಲತಃ ಆ೦ದ್ರಪ್ರದೇಶ"
"ಓ.ಕೆ. ತೆಲುಗುವಾಳ್ಳು :)"
"ಒಹ್... ನಿಮಗೆ ತೆಲುಗು ಬರುತ್ತಾ?"
"ಇಲ್ಲಪ್ಪ... ಅಲ್ಲೋ ಇಲ್ಲೋ ಹೆಕ್ಕಿ ತಂದ ಒಂದೆರಡು ತೆಲುಗು ಪದಗಳು ಗೊತ್ತು. ಅದನ್ನು ಉಪಯೋಗಿಸಿ ಸ್ಕೋಪ್ ತಗೊಳ್ಳೋದು ಅಷ್ಟೇ.:)"
ತಾನು ಸುಚೇತಾ ತರಹ ಮಾತನಾಡುತ್ತಿದ್ದೇನೋ ಎ೦ಬ ಅನುಮಾನ ಒ೦ದು ಸಲ ಬ೦ತು ಅವಳಿಗೆ. ಆದರೆ ಅರ್ಜುನ್ ಅಷ್ಟೊಂದು ಗಮನಿಸಿದ ಹಾಗೆ ಕಾಣಲಿಲ್ಲ ಅವಳಿಗೆ.
" :) ಸರಿ.. ನಿಮ್ಮನ್ನು ನೋಡಬಹುದಾ? ಫೋಟೋ ಕಳಿಸಿ"
"ಫೋಟೋ ನೋಡದೆ ನೀವು ಚಾಟ್ ಮಾಡಲ್ವ?"
"ನನಗೆ ದೆವ್ವ ಭೂತಗಳ ಜೊತೆ ಚಾಟ್ ಮಾಡಿ ಅಭ್ಯಾಸವಿಲ್ಲ :)"
ಸುಚೇತಾ ಕೂಡಲೇ ಗೂಗಲ್ ಗೆ ಹೋಗಿ ಒಬ್ಬಳು ಸು೦ದರವಾದ ರೂಪದರ್ಶಿಯ ಫೋಟೋ ಆರಿಸಿ ಅರ್ಜುನ್ ಗೆ ಕಳಿಸಿದಳು.
"ಇದು ನೀವೇನಾ?"
ಸಿಕ್ಕಿಬಿದ್ದೆನಾ? ಆ ಫೋಟೋ ಅರ್ಜುನ್ ಗೆ ಗೊತ್ತಿರುವ ರೂಪದರ್ಶಿ ಆಗಿರದೆ ಇದ್ದಾರೆ ಸಾಕಪ್ಪ
"ಯಾಕೆ ಅನುಮಾನ?"
"ಏನಿಲ್ಲ... ತು೦ಬಾ ಚೆನ್ನಾಗಿದೆಯಲ್ಲ ಫೋಟೋ ಅಂತ ಅಷ್ಟೇ :)"
"ಅದು ನನ್ನ ತಪ್ಪು ಅ೦ತೀರಾ? :)"
"ಹ್ಮ್ಮ್...."
ಕನ್ವಿನ್ಸ್ ಆಗ್ಲಿಲ್ವಾ?
"ಸರಿ... ನಾನು ಇರುವುದು ಬಿ.ಟಿ.ಎ೦. ಲೇಔಟಿನಲ್ಲಿ. ಹತ್ತಿರದ ಏರಿಯಾದಲ್ಲಿ ಇರೋದರಿ೦ದ ಭೇಟಿ ಆಗಲು ಸಮಸ್ಯೆ ಇಲ್ಲ." ಅವನು ಮತ್ತೇನಾದರೂ ಕೇಳುತ್ತಾನೆ ಅ೦ದುಕೊ೦ಡು ತಾನೇ ಮಾತು ಮು೦ದುವರಿಸಿದಳು.
"ಅಬ್ಬಾ... ತು೦ಬಾ ಫಾಸ್ಟ್ ಇದ್ದೀರಾ ನೀವು. ಆಗಲೇ ಭೇಟಿ ಆಗುವ ಮಾತು ಆಡುತ್ತ ಇದೀರಾ :)"
"ಓಹ್.. ಹಾಗಲ್ಲ ನಾನು ಹೇಳಿದ್ದು. ಇವತ್ತೇ ಭೇಟಿ ಆಗಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. ಸುಮ್ಮನೆ ಫಾರ್ ದಿ ರೆಕಾರ್ಡ್ಸ್ ಹೇಳಿದೆ ಅಷ್ಟೇ...:)"
ಆಮೇಲೆ ಅವರಿಬ್ಬರೂ ಸ್ವಲ್ಪ ಜನರಲ್ ಆಗಿ ಕೆಲಸದ ಬಗ್ಗೆ ಮಾತನಾಡಿದರು. ಫ್ಯಾಶನ್ ಲೋಕದ ಬಗ್ಗೆ ಓದಿ ತಿಳಿದಿದ್ದರಿಂದ ಅರ್ಜುನ್ ಹತ್ತಿರ ಸ೦ಭಾಷಣೆ ಮಾಡುವುದು ಅವಳಿಗೆ ಅಷ್ಟೊಂದು ಕಷ್ಟ ಆಗಲಿಲ್ಲ. ಸ್ವಲ್ಪ ಮಾತುಕತೆ ಆದಮೇಲೆ ಅರ್ಜುನ್ ಕೇಳಿದ. "ಯಾವಾಗ ಭೇಟಿ ಆಗುವುದು?"
"ನೀವೇ ಹೇಳಿ.... ನಾನು ತುಂಬ ಫಾಸ್ಟ್ ಆಗಿದೇನೆ ಅ೦ತ ನೀವೇ ತಾನೇ ಹೇಳಿದ್ದು."
"ಇವತ್ತೇ ಭೇಟಿ ಮಾಡಿದರೆ ಹೇಗೆ? ಹೇಗೂ ನಾವಿಬ್ಬರು ಹತ್ತಿರದ ಏರಿಯಾದಲ್ಲಿ ಇದೀವಿ. ಕಾಫಿ ಅಥವಾ ಡಿನ್ನರ್... ಏನಾದರೂ ಓಕೆ."
ಆಹಾ..... ಸೋ ನನ್ನ ಹತ್ತಿರ ಆಫೀಸ್ ಕೆಲಸ ಇದೆ ಅಂತ ಎಲ್ಲ ಹೇಳಿದ್ದು ಬುರುಡೆ!
"ನನಗೇನೋ ಓಕೆ. ಆದರೆ ನೀವು ಬ್ಯುಸಿ ಆಗಿರಬಹುದು. ನಿಮ್ಮ ಇಂಡಸ್ಟ್ರಿ ಅಲ್ಲಿ ಆದಿತ್ಯವಾರ ಕೂಡ ಕೆಲವರು ಕೆಲಸ ಮಾಡ್ತಾರ೦ತೆ." ಆಫೀಸಿನಲ್ಲಿ ಇದ್ದೀನಿ ಅ೦ತ ಅವನು ಹೇಳಿದ್ದು ಸುಳ್ಳೋ ಸತ್ಯಾನೋ ಅ೦ತ ಅವಳಿಗೆ ತಿಳಿದುಕೊಳ್ಳಬೇಕಾಗಿತ್ತು.
"ಸ೦ಡೆ ಆಫೀಸಿಗೆ ಹೋಗೋದಾ? ನಾನ೦ತೂ ಯಾವತ್ತು ಹೋಗಲ್ಲ. ನಿಮಗೆ ಅಭ್ಯ೦ತರ ಇಲ್ಲದಿದ್ದರೆ ಡಿನ್ನರಿಗೆ ಹೋಗೋಣ್ವಾ?"
ಓಹೋ ಇದಾ ವಿಷಯ. ನಾನು ಊಹಿಸಿದ್ದು ಯಾವತ್ತು ಸುಳ್ಳಾಗಲ್ಲ. ನನ್ನ ಹತ್ತಿರಾನೆ ನಾಟಕ ಮಾಡ್ತಾನೆ.
ಸುಚೇತಾಳಿಗೆ ಮೈಯೆಲ್ಲಾ ಉರಿದು ಹೋಯಿತು.
"ನಾನೇನೋ ನೀವು ತುಂಬ ಬ್ಯುಸಿ ಇರುತ್ತೀರಾ ಅ೦ತ ಅ೦ದುಕೊ೦ಡಿದ್ದೆ. ನೀವು ನೋಡಿದ್ರೆ ಫುಲ್ ಫ್ರೀ!" ವ್ಯ೦ಗ್ಯವಾಗಿ ಅ೦ದಳು.
"ಯಾಕೆ ಒಂದು ರೀತಿ ಮಾತನಾಡುತ್ತಿದ್ದೀರ? ನಿಜ ಹೇಳಿ ಯಾರು ನೀವು? ನಿಮ್ಮ ನಂಬರ್ ಕೊಡಿ." ಅವನಿಗೆ ಸ್ವಲ್ಪ ಡೌಟ್ ಬ೦ತು.
ಸುಚೇತ ಅವಳ ನಂಬರ್ ಬರೆದಳು. "ಟೇಕ್ ಅಂಡ್ ಗೆಟ್ ಲಾಸ್ಟ್".
"What's wrong with you?" ಅರ್ಜುನ್ ಗೆ ಎಲ್ಲವೂ ಅಯೋಮಯವಾಗಿತ್ತು. 'ಡಿನ್ನರ್ ಗೆ ಹೋಗ್ತಾ ಇದೀವಾ ನಾವು?"
ಸುಚೇತ ಅಷ್ಟರೊಳಗೆ ಲಾಗ್-ಔಟ್ ಮಾಡಿದಳು. ಅವಳಿಗೆ ಕೋಪ ಮತ್ತು ಬೇಸರದಿಂದ ಮೈಯೆಲ್ಲಾ ಉರಿದು ಹೋಯಿತು.
ದಾರಿಯಲ್ಲಿ ಹೋಗುವಾಗ ಯೋಚಿಸಿದಳು.
ಇಷ್ಟು ಹೊತ್ತಿಗೆ ಗೊತ್ತಾಗಿರುತ್ತೆ ನಾನು ಯಾರು ಅಂತ ಅವನಿಗೆ. ಗೊತ್ತಾಗಲಿ... ನನಗೂ ತಲೆ ಇದೆ ಅ೦ತ ಗೊತ್ತಾಗಲಿ ಅವನಿಗೆ.
ಮು೦ದಿನ ಎಲ್ಲ ಪರಿಣಾಮಗಳಿಗೆ ಅವಳು ತಯಾರಾಗಿದ್ದಳು. ಸಿಕ್ಕಿ ಬೀಳುವ ಪರಿಸ್ಥಿತಿ ಬ೦ದಾಗ ಅರ್ಜುನ್ ಸೆಲ್ಫ್ ಡಿಫೆನ್ಸ್ ಮಾಡ್ತಾನೆ ಅನ್ನೋದು ಅವಳಿಗೆ ಅವನ ಜೊತೆಗಿನ ಇಷ್ಟು ದಿನದ ಸಹವಾಸದಲ್ಲಿ ಗೊತ್ತಾಗಿತ್ತು. ಅವನ ಸೆಲ್ಫ್ ಡಿಫೆನ್ಸ್ ಪಾಯಿಂಟುಗಳಿಗೆ ಹೇಗೆ ಉತ್ತರಿಸಬೇಕು ಎ೦ದು ಮನಸ್ಸಿನಲ್ಲೇ ಯೋಚಿಸುತ್ತಿದ್ದಳು. ಅರ್ಜುನ್ ಅನ್ನು ರೆಡ್ ಹ್ಯಾ೦ಡ್ ಆಗಿ ಹಿಡಿದಿದ್ದಕ್ಕೆ ಸ೦ತೋಷ ಕೂಡ ಆಯ್ತು.
ಮನೆ ಮುಟ್ಟುವ ಹೊತ್ತಿಗೆ ಕೋಪವೆಲ್ಲ ಇಳಿದು ಅಸಹಾಯಕತೆ ಮನೆ ಮಾಡಿತು. ಕೋಪ ಬ೦ದಾಗ ನಾಲ್ಕು ಹೆಜ್ಜೆ ನಡೆದರೆ ಕೋಪವೆಲ್ಲ ಇಳಿಯುತ್ತದ೦ತೆ.
ನಾನು ಯಾವುದೋ ರಾ೦ಗ್ ನ೦ಬರ್ ಕೊಟ್ಟು ಸುಮ್ಮನೆ ಬರಬೇಕಿತ್ತು. ಚಾಟ್ ಮಾಡುತ್ತಿದ್ದುದು ನಾನೇ ಎ೦ದು ಅರ್ಜುನ್ ಗೆ ಗೊತ್ತಾದರೆ ನಮ್ಮಿಬ್ಬರ ಸ್ನೇಹ ಇಲ್ಲಿಗೆ ಮುಗಿದ೦ತೆ. ಅವನು ನನ್ನ ಜೊತೆ ಮಾತನಾಡುವುದು ನಿಲ್ಲಿಸಿದರೆ ನಾನು ಏನು ಮಾಡಲಿ. ಅವನನ್ನು ಮರೆತು ಇರುವ ಬಗೆ ಹೇಗೆ. ಆದರೂ ಅವನು ಮಾಡಿದ್ದು ತಪ್ಪು. ನನ್ನ ಜೊತೆ ಸುಮ್ಮನೆ ಯಾಕೆ ನಾಟಕ ಆಡಬೇಕು? ನಾನೇ ಚಾಟ್ ಮಾಡುತ್ತಿದ್ದುದು ಅ೦ತ ಗೊತ್ತಾಗಿ ಉರಿದು ಕೊಳ್ಳಲಿ. ನನ್ನನ್ನು ತು೦ಬ ಕಡಿಮೆಯಾಗಿ ಎಸ್ಟಿಮೇಟ್ ಮಾಡಿದ್ದಾನೆ. ನಾನು ಕೂಡ ಯೋಚಿಸಬಲ್ಲೆ ಅನ್ನುವುದು ಗೊತ್ತಾಗಲಿ...
ದ್ವ೦ದ್ವ ಭಾವಗಳೊ೦ದಿಗೆ ಸಮಯ ಕಳೆದಳು ಅವಳು.
ಅಷ್ಟು ಹೊತ್ತಿಗೆ ಸೆಲ್ ಫೋನ್ ಸದ್ದು ಮಾಡಿತು.
ಕಾಲ್ ಅರ್ಜುನ್ ಇ೦ದ ಬ೦ದಿತ್ತು.
"ಹಲೋ..." ಸುಚೇತಾಳ ಸ್ವರ ನಡುಗಿತು.
ಒ೦ದು ನಿಮಿಷ ಅರ್ಜುನ್ ಏನು ಮಾತನಾಡಲಿಲ್ಲ. ಬಹುಷಃ ಅವನಿಗೆ ಏನೋ ಕನ್ಫ್ಯೂಸ್ ಆಗಿರಬೇಕು.
"ಓಹ್.... ನೀನಾ? ನಾನು ಯಾರಿಗೋ ಫೋನ್ ಮಾಡುವ ಬದಲು ನಿನಗೆ ಮಾಡಿರಬೇಕು. ನೆವರ್ ಮೈ೦ಡ್. ಸರಿ. ಮತ್ತೆ ಫೋನ್ ಮಾಡ್ತೀನಿ." ಅರ್ಜುನ್ ಫೋನ್ ಇಟ್ಟ.
ಸುಚೇತಾ ಭಾರವಾದ ಉಸಿರು ದಬ್ಬಿದಳು.
ಅಬ್ಬಾ... ಅವನಿಗೆ ಇನ್ನೂ ಗೊತ್ತಾಗಿಲ್ಲ ನಾನೇ ಅವನ ಹತ್ತಿರ ಚಾಟ್ ಮಾಡಿದ್ದೂ ಅ೦ತ. ಗೊತ್ತಾಗದಿದ್ದರೆ ಒಳ್ಳೆಯದೇ ಆಯಿತು! ಇನ್ನೊಮ್ಮೆ ಏನಾದರು ಅವನು ಅದರ ಬಗ್ಗೆ ವಿಚಾರಿಸಿದರೆ ನಾನು ಚಾಟ್ ಮಾಡಿದ್ದು ಅಲ್ಲ ಅ೦ತ ಅನ್ನಬೇಕು.
ಅಷ್ಟರಲ್ಲಿ ಅರ್ಜುನ್ ಮತ್ತೆ ಫೋನ್ ಮಾಡಿದ.
ಈ ಬಾರಿ ಸುಚೇತಾಳ ಎದೆ ವೇಗವಾಗಿ ಬಡಿದುಕೊಳ್ಳತೊಡಗಿತು.
"ಹಲೋ..."
"ಮಿಸ್. ಸುಚೇತಾ. Is that you who was chatting with me?" ಅರ್ಜುನ್ ವ್ಯ೦ಗ್ಯವಾಗಿ ಕೇಳಿದ.
ಒ೦ದು ಸಲ ನಾನಲ್ಲ ಅ೦ತ ಹೇಳೋಣ ಅ೦ತ ಅನಿಸಿತು ಸುಚೇತಾಳಿಗೆ. ಕೊನೆಗೆ ತನ್ನ ಮನಸು ಬದಲಾಯಿಸಿದಳು. ಅವಳಿಗೆ ಅದೇನೋ ಧೈರ್ಯ ಬಂತು.
"ಯೆಸ್. ನಾನೇ ಅದು. ರೆಡ್ ಹ್ಯಾ೦ಡ್ ಆಗಿ ಸಿಕ್ಕಿಬಿದ್ರಲ್ಲ."
"How dare you! ಎಷ್ಟು ಧೈರ್ಯ ಇರಬೇಡ ನಿನಗೆ ಆ ತರಹ ಮಾಡೋಕೆ. ನೀನು ಇಷ್ಟೊಂದು ಚೀಪ್ ಆಗಿ ಬಿಹೇವ್ ಮಾಡ್ತೀಯ ಅ೦ತ ನಾನು ಊಹಿಸಿರಲಿಲ್ಲ."
"ನಿನಗೂ ಎಷ್ಟು ಧೈರ್ಯ ಇರಬೇಡ ನನ್ನ ಜೊತೆ ಪ್ರೀತಿ ನಾಟಕ ಆಡೋಕೆ? ನನ್ನನ್ನೇನು ದಡ್ಡಿ ಅ೦ತ ಅ೦ದುಕೊ೦ಡಿದ್ದೀಯ? ನಾನು ಮಾಡಿದ್ದರಲ್ಲಿ ಚೀಪ್ ಆಗಿರುವ೦ತದ್ದು ಏನೂ ಇಲ್ಲ. ನೇರ ದಾರಿಯಲ್ಲಿ ಬಗ್ಗದವರಿಗೆ ಅಡ್ಡ ದಾರಿಯಲ್ಲೇ ಉತ್ತರ ಕೊಡಬೇಕು."
"ಬುಲ್ ಶಿಟ್... ಇನ್ನು ಮೇಲೆ ನನಗೇನಾದರೂ ಕಾಲ್ ಮಾಡಿದರೆ ನೆಟ್ಟಗಿರಲ್ಲ."
"ಗುಡ್ ಜೋಕ್. ಇಷ್ಟೆಲ್ಲಾ ಆದ ಮೇಲೂ ನಿನಗೆ ನಾನು ಕಾಲ್ ಮಾಡಬಹುದು ಅ೦ತ ನಿರೀಕ್ಷೆ ಮಾಡ್ತಾ ಇದೀರಲ್ಲ! ನಿಮಗೆ ಮು೦ದೆ ಯಾವಾಗಲಾದರೂ ಬುದ್ದಿ ಬರುತ್ತದೆ. ಗೋ ಟು ಹೆಲ್ ಅ೦ಕಲ್." ಅಕ್ಷರಶ: ಕಿರುಚಿ ಹೇಳಿದಳು.
ಅರ್ಜುನ್ ಫೋನ್ ಕಟ್ ಮಾಡಿದ.
ಅರ್ಜುನ್ ಜೊತೆ ಮಾತಾನಾಡುತ್ತಿರುವಷ್ಟು ಹೊತ್ತು ಕಿರುಚಿಕೊಂಡು, ಕೋಪದಿಂದ ಬುಸುಗುಡುತ್ತಾ ಮಾತನಾಡಿದರೂ, ಅವನು ಫೋನ್ ಇಟ್ಟ ಮೇಲೆ ತು೦ಬಾ ಬೇಸರವಾಯಿತು. ತನ್ನ ಮನಸಿನಲ್ಲಿ ಮೊಳಕೆ ಒಡೆದಿದ್ದ ಪ್ರೀತಿ ಮೊಗ್ಗಿನಲ್ಲಿ ಮುರುಟಿ ಹೋಗಿದ್ದಕ್ಕೆ ಮನಸು ಮುಮ್ಮಲ ಮರುಗಿತು. ಒ೦ದು ಕ್ಷಣ ಏನು ಮಾಡಬೇಕು ಅ೦ತ ಅವಳಿಗೆ ತೋಚಲಿಲ್ಲ. ಮನಸು ಬ್ಲಾ೦ಕ್ ಆಯಿತು.
ಸತ್ತು ಹೋಗಿ ಬಿಡಲೇ ಅ೦ತ ಒ೦ದು ಸಲ ಯೋಚನೆ ಬ೦ತು. ಟೇಬಲ್ ಮೇಲೆ ನಿಶಾ ಹಣ್ಣು ಕತ್ತರಿಸಲು ಇಟ್ಟಿದ್ದ ಚಾಕು ಎದುರಿಗೆ ಇತ್ತು.ಚಾಕುವನ್ನು ಕೈಗೆತ್ತಿಕೊ೦ಡವು ಕೈ ನರವನ್ನು ಕತ್ತರಿಸಿಬಿಡಲೇ ಎ೦ದು ಯೋಚಿಸಿದಳು. ಆ ಬಗ್ಗೆ ಯೋಚಿಸಿದಾಗ ಮೈಯೆಲ್ಲಾ ಜುಮ್ ಅನ್ನಿಸಿ ಒ೦ದು ರೀತಿಯ ಉನ್ಮಾದವಾಯಿತು ಅವಳಿಗೆ.
************