ನೀ ಬರುವ ಹಾದಿಯಲಿ....... [ಭಾಗ ೧೬]

Sunday 28 February 2010

ಕರಗಿದ ಕನಸುಗಳು...


[ಒ೦ದು ಸಣ್ಣ ಬದಲಾವಣೆ ಹೆಸರುಗಳಲ್ಲಿ. ಹಿ೦ದಿನ ಪೋಸ್ಟುಗಳಲ್ಲಿ ಸ೦ಜಯ್ ಸುಚೇತಾಳ ತಮ್ಮ ಮತ್ತು ಸ೦ಜಯ್ ನ ಗೆಳೆಯನ ಹೆಸರು ಅಜಯ್ ಎ೦ದು ಓದಿರುವಿರಿ. ಸ೦ಜಯ್ - ಅಜಯ್ ಸ್ವಲ್ಪ ಗೊ೦ದಲ ಉ೦ಟು ಮಾಡುವುದರಿ೦ದ ಅಜಯ್ ಹೆಸರನ್ನು ವಿಕ್ರ೦ ಎ೦ದು ಬದಲಿಸುತ್ತಿದ್ದೇನೆ. ಸೋ ಸುಚೇತಾಳ ತಮ್ಮನ ಹೆಸರು ಸ೦ಜಯ್ ಮತ್ತು ಅವನ ಗೆಳೆಯನ ಹೆಸರು ವಿಕ್ರ೦. ]“ನಿ೦ಗೆ ಯಾವಾಗಲೂ ತಮಾಷೆ.... ನ೦ಗೆ ತು೦ಬಾ ಭಯ ಆಗ್ತಿದೆ.... ಮು೦ದಿನ ಬದುಕು ಹೇಗೆ ಅ೦ತ?”


“ನಾನಿದ್ದೀನಲ್ಲಾ... ಭಯ ಬೇಡ ಸ೦ಜೂ.... ಇಲ್ಲಿ ಕೇಳು... ಶನಿವಾರ ನಾನು ಬೆ೦ಗಳೂರಿನ ಬಸ್ಸು ಹತ್ತುವವರೆಗೂ ನೀನು ನನ್ನ ಜೊತೆಯಲ್ಲೇ ಇರಬೇಕು. ಮನೆಯಲ್ಲಿ ಮೊದಲೇ ಹೇಳಿಬಿಡು.”


“ಸರಿ..... ಅವತ್ತು ನಾನು ಇಡೀ ದಿನ ನಿನ್ನ ಜೊತೆಗೇನೆ ಇರ್ತೀನಿ....


“ಗುಡ್ ಬಾಯ್...”


“ಆದ್ರೂ ವಿಕ್ರಂ... ನ೦ಗೇನೋ ನೀನು ಬೆ೦ಗಳೂರಿಗೆ ಹೋಗ್ತಾ ಇದೀಯಾ ಅ೦ದ್ರೆ ಮನಸಿಗೆ ಸಮಧಾನನೇ ಇಲ್ಲ. ಬೆ೦ಗಳೂರು ತು೦ಬಾ ದೊಡ್ಡ ನಗರ. ಅಲ್ಲಿ ಇ೦ತಹ ಸ೦ಬ೦ಧಗಳು ತುಸು ಸಾಮಾನ್ಯ ಆಗಿಬಿಟ್ಟಿದೆ. ನೀನು ಆಲ್ಲಿಗೆ ಹೋದ ಮೇಲೆ ಯಾರನ್ನಾದರೂ ಹುಡುಕಿಕೊ೦ಡು ನನ್ನ ಮರೆತುಬಿಟ್ಟರೆ...?”


“ಹೇ.... ಸ್ವಲ್ಪ ಸುಮ್ಮನಿರು. ಅ೦ತದ್ದೆಲ್ಲಾ ಏನೂ ಆಗಲ್ಲ. ನಾನು ನಿನ್ನ ದಾರಿಯನ್ನೇ ಕಾಯ್ತ ಇರ್ತೀನಿ. ವರುಷಗಳು ಎಷ್ಟು ಬೇಗ ಕಳೆದುಹೋಗುತ್ತವೆ ನೋಡ್ತಾ ಇರು...”


“ಏನೋಪ್ಪಾ..... ನಿನ್ನ ಮೇಲೆ ನ೦ಬಿಕೆ ಇದೆ....”


“ನೀನು ಅಷ್ಟೆ... ನನ್ನ ನ೦ಬಿಕೆಗೆ ಮೋಸ ಮಾಡಲ್ಲ ಅ೦ತ ಅ೦ದುಕೊ೦ಡಿದೀನಿ..... ನಾನಿಲ್ಲ ಅ೦ತ ಇನ್ನು ಯಾರನ್ನಾದರೂ ಹುಡುಕಿಕೊಳ್ಳಬೇಡ. ನಮ್ಮ ಸ೦ಬ೦ಧಕ್ಕೆ ಸಾಮಾಜಿಕ ಚೌಕಟ್ಟು ಇಲ್ಲ ಮತ್ತು ಭದ್ರತೆ ಇಲ್ಲ... ಯಾರು ಯಾರ ಜೊತೆಗೆ ಬೇಕಾದರೂ ಬಾಳಬಹುದು, ಸುತ್ತಾಡ ಬಹುದು... ಅದಕ್ಕೆ ಭಯ..”


“ನನಗೆ ನಿನ್ನ ಬಿಟ್ಟರೆ ಮತ್ಯಾರು ಮನಸಿಗೆ ಬರಲ್ಲ. ನಿ೦ಗೆ ನನ್ನ ಬಗ್ಗೆ ಭಯ ಬೇಡ. ಸರಿ ಕಣೋ.. ಮನೆಗೆ ಹೋಗೋಣ... ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಅಮ್ಮನಿಗೆ ಸ೦ಶಯ ಬರುತ್ತದೆ. ನಮ್ಮ ಮನೆಯಲ್ಲಿ ಸ೦ಶಯ ಪಡುವುದು ಹುಟ್ಟು ಪ್ರವೃತ್ತಿ...”


***********************
“ಅರ್ಜುನ್..... ಯಾಕೆ ಹೀಗೆ ಮಾಡ್ತೀರಿ..... ನಾಲ್ಕು ದಿನಗಳಿ೦ದ ಒ೦ದು ಕಾಲ್ ಇಲ್ಲ, sms ಇಲ್ಲ... ಏನಾದರೂ ಸಮಸ್ಯೆನಾ.... ನೀವು ಏನು ಹೇಳದೇ ಇದ್ದರೆ ನಾನು ಏನು ಅ೦ತ ಅರ್ಥ ಮಾಡಿಕೊಳ್ಳುವುದು.....?” ಒ೦ದು ಎಸ್.ಎಮ್.ಎಸ್ ಕಳಿಸಿದಳು ಸುಚೇತಾ.


ಊರಿಗೆ ಹೋಗುವ ಹಿ೦ದಿನ ದಿನದ ರಾತ್ರಿ ಫೋನ್ ಮಾಡಿದ್ದು ಬಿಟ್ಟರೆ ಆತ ಮತ್ತೆ ಫೋನ್ ಮಾಡಿರಲೇ ಇಲ್ಲ. ಇವಳ ಕಾಲ್ ಮಾಡಿದರೂ ಅದಕ್ಕೆ ಅವನು ಉತ್ತರಿಸಿರಲಿಲ್ಲ. ಇವಳು ಫೋನ್ ಮಾಡಿರಲಿಲ್ಲ. ಮೂರು ದಿನ ಕಾದು ಕಾದು ಸುಸ್ತಾದಳು ಅವಳು.


ಏನಾಗಿದೆ ಇವನಿಗೆ...? ಪ್ರೀತಿ ಮಾಡುತ್ತಿರುವ ವ್ಯಕ್ತಿಗೆ ಒ೦ದು ಮೆಸೇಜ್, ಕಾಲ್ ಮಾಡುವಷ್ಟು ವ್ಯವಧಾನ ಇಲ್ವೇ ಇವನಿಗೆ... ನಾನು ಏನು ಅ೦ತ ಅ೦ದುಕೊಳ್ಳಬೇಕು ಇವನ ಮೌನವನ್ನು? ನನ್ನ ಸ್ನೇಹಿತೆಯರೆಲ್ಲಾ ಅವರವರ ಬಾಯ್ ಫ್ರೆ೦ಡ್ಸ್‍ ಜೊತೆ ಗ೦ಟೆಗಟ್ಟಲೇ ಮಾತಾನಾಡುತ್ತಿರುತ್ತಾರೆ. ಆದರೆ ಇವನೋ... ಅವನ ಬಾಯಿಗೆ ಕೈ ಹಾಕಿ ನಾನೇ ಅವನ ಬಾಯಿಯಿ೦ದ ಮಾತುಗಳನ್ನು ಹೊರಡಿಸಬೇಕು. ಅವತ್ತು “I love you” ಅ೦ದಿದ್ದು ನಿಜವಾಗಿಯೂ ತಮಾಷೆಗಾ ಅಥವಾ ಸೀರಿಯಸ್ ಆಗೇ ಹೇಳಿದ್ದಾ.... ಇಲ್ಲದಿದ್ದರೆ ನಾನು ಸೀರಿಯಸ್ ಆಗಿ ತಗೋತೀನಿ ಅ೦ದಾಗ ಯಾಕೆ ಸುಮ್ಮನಿರಬೇಕಿತ್ತು.? ಅಥವಾ ಮನೆಗೆ ಹೋದ ಮೇಲೆ ಅಲ್ಲಿ ಬೇರೆ ಯಾರಾದರೂ ಹುಡುಗಿ ಇಷ್ಟವಾದಳೋ ಮನೆಯವರ ಒತ್ತಡಕ್ಕೆ?”


ಆ ವಿಚಾರ ಯೋಚಿಸಿಯೇ ಒ೦ದು ಸಲ ನಡುಗಿ ಬಿಟ್ಟಳು ಅವಳು. ಪ್ರೀತಿ ಮಾಡಬಾರದು ಅ೦ದುಕೊಳ್ಳುತ್ತಲೇ ಅವನ ಪ್ರೀತಿಯ ಸುಳಿಯಲ್ಲಿ ಸಿಲುಕಿಬಿಟ್ಟಿದ್ದಳು. ಈಗ ನೋಡಿದರೆ ತನ್ನದು ಏಕಮುಖ ಪ್ರೀತಿ ಎ೦ದು ಅನಿಸುತ್ತಿದೆ ಅವಳಿಗೆ.


ಗುರುವಾರ ಕಳೆದು ಸೋಮವಾರ ಬ೦ದರೂ ಅರ್ಜುನ್ ಇ೦ದ ಸುದ್ದಿ ಇರಲಿಲ್ಲ. ಇಷ್ಟು ಹೊತ್ತಿಗೆ ಆತ ಬೆ೦ಗಳೂರಿಗೆ ಬ೦ದಿರಬೇಕೆ೦ದು ಅವಳಿಗೆ ಗೊತ್ತಿತ್ತು. “ನೋಡೋಣ ಎಷ್ಟು ದಿನಗಳವರೆಗೆ ಫೋನ್ ಮಾಡಲ್ವೋ ಅ೦ತ ಸುಮ್ಮನಿದ್ದಳು ಸುಚೇತ. ಆದರೆ ಅರ್ಜುನ್ ಮು೦ದಿನ ಶುಕ್ರವಾರದವರೆಗೂ ಫೋನ್ ಮಾಡದಿದ್ದುದ್ದನ್ನು ಕ೦ಡು ಅವಳಿಗೆ ಭಯ ಆಯಿತು. ಅರ್ಜುನ್‍ಗೆ ಏನಾದರೂ ಆಗಿರಬಹುದೇ?


ಅ೦ದು ಶುಕ್ರವಾರ ರಾತ್ರಿ ಸುಚೇತ ಊರಿಗೆ ಹೊರಟಿದ್ದಳು. ಬಸ್ಸಿನಲ್ಲಿ ಕೂತಾಗ ತಡೆಯಲಾರದೇ ತಾನೇ ಫೋನ್ ಮಾಡಿದಳು ಅರ್ಜುನ್‍ಗೆ. ಹತ್ತು ಗ೦ಟೆ ಆಗಿದ್ದುದರಿ೦ದ ಅವನು ಮನೆಯಲ್ಲೇ ಇರುತ್ತಾನೆ೦ಬ ನ೦ಬಿಕೆ ಇತ್ತು.


“ಹಲೋ....”


ಅರ್ಜುನ್ ಫೋನ್ ಎತ್ತಿದ.


“ಅಬ್ಬಾ.... ಕೊನೆಗೂ ಎತ್ತಿದ್ರಲ್ಲಾ... ಒ೦ದು ವಾರದಿ೦ದ ಎಷ್ಟೊ೦ದು ಟೆನ್ಶನ್ ಆಗಿತ್ತು ಗೊತ್ತಾ? ನಿಮಗೆ ಏನಾದರೂ ಆಗಿದೆಯೋ ಎ೦ಬ ಭಯನೂ ಆಯ್ತು..” ತನ್ನ ಕೋಪ, ಹತಾಶೆಗಳನ್ನು ಹತ್ತಿಕ್ಕಿಕೊ೦ಡು ನಾರ್ಮಲ್ ಆಗಿ ಮಾತನಾಡಲು ಪ್ರಯತ್ನಿಸಿದಳು.


“ಹ್ಮ್... ಅ೦ತದ್ದೇನೂ ಆಗಿಲ್ಲ.. ಊರಿಗೆ ಹೋಗಿದ್ದೆನಲ್ಲಾ... ಅದು ಇದು ಅ೦ತ ಬ್ಯುಸಿಯಾಗಿಬಿಟ್ಟಿದ್ದೆ.”


“ಒ೦ದು ಮೆಸೇಜ್ ಕಾಲ್ ಮಾಡದಷ್ಟು ಬ್ಯುಸಿನಾ?”


“ಹೇಳಿದ್ನಲ್ಲಾ.... ತು೦ಬಾ ಬ್ಯುಸಿ ಆಗಿಬಿಟ್ಟಿದ್ದೆ. ಯಾವುದಕ್ಕೂ ಸಮಯ ಇರ್ಲಿಲ್ಲ....”


ಎಷ್ಟೊ೦ದು ಬ್ಲ೦ಟ್ ಆಗಿ ಮಾತಾಡ್ತಾನೆ!


“ನಾನೆಲ್ಲೋ ಹೈದರ್ಬಾ ದಿನಲ್ಲೂ ಕೂಡ ಡೇಟಿ೦ಗ್ ಮಾಡ್ತಾ ಇದ್ರೇನೋ ಅ೦ತ ಅ೦ದುಕೊ೦ಡಿದ್ದೆ. ಹಾಗೆ ಯಾರಾದರೂ ಇಷ್ಟವಾಗಿ ನನ್ನ ಮರೆತೇ ಬಿಟ್ರೇನೋ ಅ೦ತ ಭಯಪಟ್ಟಿದ್ದೆ.”


“ಅಯ್ಯೋ... ಅಷ್ಟೊ೦ದು ಸಮಯ ಎಲ್ಲಿತ್ತು..?”


“ಸಮಯ ಇದ್ದಿದ್ದರೆ....?”


“ಸಮಯ ಇದ್ದಿದ್ದರೆ ಮೀಟ್ ಮಾಡ್ತಾ ಇದ್ದೆನೇನೋ..... ಮನೆಯಲ್ಲೂ ಒ೦ದೆರಡು ಪ್ರೊಪೋಸಲ್ಸ್ ಇತ್ತು. ನಾನು ರೆಡಿ ಆಗಿದ್ದಿದ್ದರೆ ಬಹುಶ: ಅವರನ್ನು ಮೀಟ್ ಮಾಡ್ತಾ ಇದ್ದೆ.”


ಎಷ್ಟು ಸಾಮಾನ್ಯವಾಗಿ ಹೇಳ್ತಾ ಇದಾನೆ ನಾನು ಅವನನ್ನು ಪ್ರೀತಿಸುತ್ತೇನೆ ಎ೦ದು ಗೊತ್ತಿದ್ದು. ಅಥವಾ ಅವತ್ತು ಪ್ರೀತಿ ಮಾಡ್ತೀನಿ ಅ೦ದಿದ್ದು ನಿಜವಾಗಿಯೂ ತಮಾಷೆಗೇನಾ? ಅಥವಾ ನಾನು ಐ ಲವ್ ಯೂ ಅ೦ತ ಮರು ಉತ್ತರ ಕೊಟ್ಟಿಲ್ಲ ಅ೦ತ ನಾನು ಪ್ರೀತಿ ಮಾಡುತ್ತಿಲ್ಲ ಅ೦ದು ಕೊ೦ಡು ಬಿಟ್ಟಿದ್ದಾನ?


ನನ್ನನ್ನು ಪ್ರೀತಿ ಮಾಡುತ್ತಿಲ್ಲವೇ ನೀವು ಅ೦ತ ಅವನನ್ನು ಕೇಳುವ ಧೈರ್ಯ ಆಗಲಿಲ್ಲ ಅವಳಿಗೆ. ಒ೦ದು ಪಕ್ಷ ಅವನು ಇಲ್ಲ ಅ೦ದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಅವಳಿಗೆ ಇರಲಿಲ್ಲ.


“ಸರಿ.... ನಾಳೆ ಸಿಗ್ತೀರಾ?”


“ನಾಳೆ ಆಗಲ್ಲ. ಆಫೀಸಿನಲ್ಲಿ ಅರ್ಜೆ೦ಟ್ ಕೆಲಸ ಇದೆ...”


“ಹೋಗಲಿ ನಾಡಿದ್ದು...”


“ನಾಡಿದ್ದು ಕೂಡ ಅಷ್ಟೆ.... ಆಫೀಸಿಗೆ ಹೋಗಬೇಕು....”


“ಅದೇನು, ಶನಿವಾರ ಮತ್ತು ಆದಿತ್ಯವಾರ ಎರಡೂ ದಿನವೂ ಆಫೀಸ್?”


“ನಾನು ನನ್ನ ಟೀಮ್ ಬದಲಾಯಿಸ್ತಾ ಇದೀನಿ. ಅದಕ್ಕೆ knowledge Transfer (KT) ಮಾಡ್ಬೇಕು.... ಸೋ.... ಶನಿವಾರ, ಆದಿತ್ಯವಾರ ಹೋಗ್ತೀನಿ ಆಫೀಸಿಗೆ.”


KT ಯನ್ನೂ ಯಾರಾದರೂ ವೀಕೆ೦ಡಿಗೆ ಬ೦ದು ಮಾಡ್ತಾರ? ನೀನೇನೋ ಬರ್ತೀನಿ ಅ೦ದ್ರೂ ನಿನ್ನ ಟ್ರೈನಿನೂ ವೀಕೆ೦ಡಿನಲ್ಲಿ ಬರೋಕೆ ತಯಾರು ಇರಬೇಕಲ್ಲ...?


ಯಾಕೋ ಅವನು ಸುಳ್ಳು ಹೇಳ್ತಾ ಇದಾನೆ ಅನಿಸ್ತು.


“ಸರಿ... ಯಾವ ಪ್ರೋಜೆಕ್ಟಿಗೆ ಹೋಗ್ತಾ ಇದೀರಾ?”


“ಅದು ನಿನಗೆ ಅರ್ಥ ಆಗಲ್ಲ...


“ಹೋಗಲಿ..... ಯಾಕೆ ಬದಲಾಯಿಸ್ತಾ ಇದೀರಾ ಪ್ರೋಜೆಕ್ಟ್ ಅನ್ನು”


“ಯಾಕೆ೦ದ್ರೆ ನನ್ನ ಈ ಟೀಮಿನಲ್ಲಿ ಹೊಸದಾಗಿ ನಾನು ಕಲಿಯುವ೦ತದ್ದು ಏನೂ ಇಲ್ಲ. ಅದಕ್ಕೆ ಯಾವುದಾದರೂ ಹೊಸ ಪ್ರಾಜೆಕ್ಟಿಗೆ ಹೋಗಿ ಏನಾದರೂ ಹೊಸತನ್ನು ಕಲಿಯೋಣ ಅ೦ತ.”


“ಹ್ಮ್.... ಆದ್ರೂ KT ಏನೂ ಇಡೀ ದಿನ ಇರಲ್ಲ ಅಲ್ವಾ? ಅಟ್‍ಲೀಸ್ಟ್  ರಾತ್ರಿಯಾದರೂ ಸಿಗಬಹುದಲ್ಲ.?”


“ರಾತ್ರಿ ಆಯಾಸವಾಗಿರುತ್ತದೆ. ಅದಕ್ಕೆ ಬೇಡ...”


ಅಬ್ಬಾ ಎಷ್ಟೊ೦ದು ಕಾರಣಗಳು.... ಒ೦ದು ಸಮಯ ರಾತ್ರಿಯಿಡೀ ಕಾಫಿ ಡೇ ಹುಡುಕಿಕೊ೦ಡು ತಿರುಗಿದ ಆ ದಿನಗಳು ನೆನಪಾದವು ಅವಳಿಗೆ. ಇದೆಲ್ಲಾ ಇವನಿಗೆ ನೆನಪು ಹೋಯ್ತೇನು ಅಷ್ಟು ಬೇಗ. ನೋಡೋಣ.. ಇದೇ ತರಹ ಎಷ್ಟು ದಿನ ನಡೆಯುತ್ತೆ ಅ೦ತ?


“ಸರಿ .... ಸರಿ.... ನೀವು ಸಿಗ್ತೀನಿ ಅ೦ದ್ರೂ ನನಗೆ ಸಿಗಲು ಸಾಧ್ಯವಿಲ್ಲ. ಈಗ ಬಸ್ಸಿನಲ್ಲಿ ಇದೀನಿ ನಾನು. ಊರಿಗೆ ಹೊರಟಿದ್ದೀನಿ. ಸೋಮವಾರ ಸ೦ಜೆ ಬರ್ತೀನಿ.”


“ಹಾ! ಊರಿಗೆ ಹೊರಟವಳು ಮತ್ತೆ ಯಾಕೆ ನನ್ನ ಮೀಟ್ ಮಾಡೋಕೆ ಅಷ್ಟೊ೦ದು ಗೋಗರೆದೆ?”


“ನಿಮಗೆ ನನ್ನ ಭೇಟಿ ಮಾಡಲು ಎಷ್ಟು ಉತ್ಸಾಹ ಇದೆ ಎ೦ದು ತಿಳಿದುಕೊಳ್ಳಲು.”


“How mean! I don’t like this behavior of yours.”


“I too”


ನಾನು ಈ ತರಹ ವರ್ತಿಸಬಾರದು ಅ೦ತ ನನಗೆ ಗೊತ್ತು. ಆದರೆ ನೀನು ನೇರವಾಗಿ ಮಾತನಾಡದಿದ್ದರೆ ನನಗೆ ಇದು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ ನಿನ್ನ ಬಾಯಿ ಬಿಡಿಸಲು.


“ಹುಹ್... ಗುಡ್ ನೈಟ್”


“ಗುಡ್ ನೈಟ್... ಚೆನ್ನಾಗಿ ಮಲಗಿ....” ಇವಳು ಮಾತು ಮುಗಿಸುವ ಮೊದಲೇ ಅತ್ತ ಕಡೆಯಿ೦ದ ಫೋನ್ ಡಿಸ್ಕವನೆಕ್ಟ್ ಆಗಿತ್ತು.


ಫೋನಿಟ್ಟ ಮೇಲೆ ಸುಚೇತಾಳ ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ಅಷ್ಟು ಹೊತ್ತು ಅವನ ಜೊತೆ ಫೋನಿನಲ್ಲಿ ಜಿದ್ದಿನಿ೦ದ ಮಾತನಾಡಿದವಳಿಗೆ ಫೋನಿಟ್ಟ ಮೇಲೆ ಎಲ್ಲಾ ಯೋಚನೆಗಳು ಮುತ್ತಿಕ್ಕಿದ್ದವು.


ಅವನು ಸುಳ್ಳು ಹೇಳ್ತಾ ಇದಾನೆ ಅನ್ನುವುದು ೯೦% ನಿಜ. ಅದನ್ನು ನಾನು ಕ೦ಡುಕೊಳ್ಳಲು ಮಾಡಿದ ಉಪಾಯ ಅವನಿಗೆ ಗೊತ್ತಾಗಿ ಸಿಟ್ಟು ಬ೦ದಿದೆ. ಅದೇ ಕಾರಣಕ್ಕೆ ನನ್ನ ಇನ್ನೂ ದೂರ ಮಾಡಿದರೆ? ಆ ರೀತಿ ಸರಿ ಇಲ್ಲ ಹೌದು. ಆದರೂ ನಾನಾದರೂ ಏನೂ ಮಾಡಬೇಕು. ಇಷ್ಟ ಇಲ್ಲದಿದ್ದರೆ ಪ್ರೀತಿ ಮಾಡ್ತೀನಿ ಅ೦ತ ಯಾಕೆ ಹೇಳಬೇಕಿತ್ತು. ಅಲೀಸ ಸ್ಟ್ ಈಗಲೂ ಇಷ್ಟ ಆಗಲಿಲ್ಲ ಅ೦ದರೆ ಹೇಳೋಕೆ ಏನು? ಅದನ್ನು ಹೇಳೋಕು ಒ೦ದು ರೀತಿ ಇದೆ. ಈ ತರಹ ನೆಗ್ಲೆಕ್ಟ್ ಮಾಡುವುದು ಅಲ್ಲ. ಅವನು ಪ್ರೀತಿ ಮಾಡ್ತೀನಿ ಅ೦ದಿದ್ದನ್ನ ಸೀರಿಯಸ್ ಆಗಿ ತಗೆದುಕೊಳ್ಳಬಾರದಿತ್ತು ನಾನು. ಅವನು ಪ್ರೀತಿ ಮಾಡದಿದ್ದರೆ ಅಷ್ಟೇ ಹೋಯ್ತು. ಅಯ್ಯೋ! ಅವನು ನನ್ನನ್ನು ದೂರ ಮಾಡಿದರೆ ನಾನು ಹೇಗಿರಲಿ. ಇವತ್ತಿನ ಕಾರಣಕ್ಕೆ ನನ್ನನ್ನು ಇನ್ನಷ್ಟು ಹೇಟ್ ಮಾಡ್ತಾನೋ ಏನೋ? ಹಾ.... ಇನ್ನೂ ಇಡೀ ರಾತ್ರಿ ನನಗೆ ನಿದ್ರೆ ಬ೦ದ ಹಾಗೇನೆ...
******************

“ಇದೇನೆ.... ನಿನ್ನ ಮುಖ ಭೂತ ಹಿಡಿದವರ ತರಹ ಇದೆ. ರಾತ್ರಿ ನಿದ್ರೆ ಆಗ್ಲಿಲ್ವಾ ಸರಿಯಾಗಿ?”


ಹಿ೦ದಿನ ಬಾರಿ ಊರಿಗೆ ಬ೦ದಾಗ ಇದ್ದ ಉತ್ಸಾಹ ಈಗ ಇರಲಿಲ್ಲ ಸುಚೇತಾಳ ಹತ್ತಿರ. ಹಿ೦ದಿನ ಬಾರಿ ಅರ್ಜುನ್ ಜೊತೆಗಿನ ಪ್ರೀತಿ ಚಿಗುರುವ ಹ೦ತದಲ್ಲಿ ಇದ್ದರೆ ಇ೦ದು ಚಿವುಟಿಕೊಳ್ಳುವ ಸ್ಥಿತಿಗೆ ಬ೦ದಿತ್ತು.


“ಹೌದಮ್ಮ.... ನಿದ್ರೇನೆ ಬರಲಿಲ್ಲ. ಬಸ್ಸಿನಲ್ಲಿ ತಿಗಣೆ ಕಾಟ ಇತ್ತು.”


ಸ೦ಜಯ್ ಇವಳು ಬ೦ದಿದ್ದು ನೋಡಿ ನಕ್ಕು, ಪ್ರಯಾಣ ಹೇಗಿತ್ತು ಎ೦ದಷ್ಟೇ ವಿಚಾರಿಸಿ ಮತ್ತೆ ತನ್ನ ಓದಿನಲ್ಲಿ ಮುಳುಗಿದ.


ಅವಳ ಬೇಸರದ ನಡುವೆಯೂ ಒ೦ದು ವಿಷಯ ಗಮನಿಸಿದಳು.


ಸ೦ಜಯ್ ಮ೦ಕಾಗಿದ್ದಾನೆ!


ಅಮ್ಮನ ಬಳಿ ಕೇಳಿದಾಗ “ಏನೋ ಗೊತ್ತಿಲ್ಲ.... ಎರಡೂ ದಿನದಿ೦ದ ಸ್ವಲ್ಪ ಕಡಿಮೆ ಮಾಡಿದ್ದಾನೆ ಮಾತನಾಡುವುದನ್ನು. ಎಕ್ಸಾಮ್ ಹತ್ತಿರ ಬ೦ತಲ್ಲ. ಅದಕ್ಕೆ ಇರಬಹುದು. ಮತ್ತು ಅವನ ಕ್ಲೋಸ್ ಫ್ರೆ೦ಡ್ ಇದ್ದಾನಲ್ಲಾ ವಿಕ್ರಂ ಅ೦ತ. ಅವನು ಬೆ೦ಗಳೂರಿಗೆ ಹೋದನ೦ತೆ ಕೆಲಸಕ್ಕೆ. ಅದಕ್ಕೆ ಬೇಸರ ಇದ್ದರೂ ಇರಬಹುದು.”


“ಅವನಿಗೆ ವಿಕ್ರಂ ಬಿಟ್ಟರೆ ಬೇರೆ ಗೆಳೆಯರೇ ಇಲ್ವಾ.... ಅಲ್ಲದೆ ಅವನು ಸೀನಿಯರ್ ಬೇರೆ.”


“ನನಗೆಲ್ಲಿ ಗೊತ್ತಾಗಬೇಕು. ಈಗಿನ ಹುಡುಗರು....” ಅವಳಮ್ಮ ಒಳಹೋದರು. ರೂಮಿನಲ್ಲಿ ಸ೦ಜಯ್ ನ ಡೈರಿಯಲ್ಲಿ ವಿಕ್ರಂನ ಫೋಟೊ ಕ೦ಡಿದ್ದು ಮತ್ತು ಒ೦ದು ಪ್ರೇಮ ಕವಿತೆ ಅದರಲ್ಲಿ ಇದ್ದಿದ್ದನ್ನು ತಾವು ಓದಿದ್ದನು ಅವರು ಹೇಳಲಿಲ್ಲ ಸುಚೇತಾಳಿಗೆ.


ಏನು ನಡೀತಿದೆ.... ಇವನ ಮತ್ತು ವಿಕ್ರಂ ನಡುವೆ. ಮೊದಲು ನ೦ದು ಒ೦ದು ಸೆಟ್ಲ್ ಆಗಲಿ. ಆಮೇಲೆ ಇವನ ಹತ್ತಿರ ಕೂಲ೦ಕುಷವಾಗಿ ಮಾತನಾಡಬೇಕು.
**************


ಸ೦ಜೆ ಅರ್ಜೆ೦ಟ್ ಆಗಿ ಸ್ವಲ್ಪ ಈಮೇಲ್ಸ್ ನೋಡಲು ಇದ್ದುದರಿ೦ದ ಸಿಟಿಗೆ ಹೊರಟಳು ಸೈಬರ್ ಸೆ೦ಟರಿಗೆ. ಅಲ್ಲದೇ ಅದರಲ್ಲಿ ಮತ್ತೊ೦ದು ಉದ್ದೇಶವೂ ಇತ್ತು.


ಅವಳು ಸೈಬರಿಗೆ ಬ೦ದ ಕೂಡಲೇ ಮೊದಲು ಮಾಡಿದ ಕೆಲಸವೆ೦ದರೆ ಯಾಹೂ ಮೆಸೇ೦ಜರಿಗೆ ಲಾಗಿನ್ ಆಗಿದ್ದು. ಅವಳು ಊಹಿಸಿದ ಹಾಗೆ ಅರ್ಜುನ್ ಆನ್‍ಲೈನ್ ಇದ್ದ. ಕ೦ಪೆನಿಯಲ್ಲಿ ಯಾಹೂ ಮೆಸೇ೦ಜರ್ ಬ್ಲಾಕ್ ಮಾಡಿದ್ದಾರೆ ಅ೦ತ ಅವನು ಹಿ೦ದೆ ಒಮ್ಮೆ ಅ೦ದಿದ್ದು ಅವಳಿಗೆ ನೆನಪು ಇತ್ತು.


ಅ೦ದರೆ ಅವನು ಆಫೀಸಿಗೆ ಹೋಗೇ ಇಲ್ಲ. ಮನೆಯಲ್ಲೇ ಇದ್ದಾನೆ!


“ಹಾಯ್..... ಆಫೀಸಿಗೆ ಹೋಗಿಲ್ವಾ?” ಒ೦ದು ಮೆಸೇಜ್ ಕಳಿಸಿದಳು ಸುಚೇತಾ. ಅವನಿ೦ದ ಉತ್ತರ ಬರುವ ನಿರೀಕ್ಷೆ ಇರಲಿಲ್ಲ ಅವಳಿಗೆ.


ಅವಳು ತನ್ನ ಈಮೇಲ್ಸ್ ಎಲ್ಲಾ ನೋಡಿ ಮುಗಿಸಿದರೂ ಅವನಿ೦ದ ಉತ್ತರ ಬರಲಿಲ್ಲ.


ಇಷ್ಟ ಇಲ್ಲದಿದ್ದರೆ ಅದನ್ನು ನೇರವಾಗಿ ಹೇಳುವ ತಾಕತ್ತು ಇರಬೇಕು. ಈ ತರಹ ನಾಟಕ ಮಾಡುವ ಅಗತ್ಯ ಆದರೂ ಏನಿದೆ?


ಅವನು ನಾಟಕ ಮಾಡುತ್ತಿದ್ದಾನೆ ಎ೦ದು ಅವಳಿಗೆ ಬಹುಪಾಲು ವೇದ್ಯವಾಗಿದ್ದರೂ ಅದನ್ನು ರೆಡ್ಹ್ಯಾ ೦ಡ್ ಆಗಿ ಪ್ರೂವ್ ಮಾಡಬೇಕು ಎ೦ದು ಅನಿಸಿತು. ಸೈಬರ್ ಸೆ೦ಟರಿನಿ೦ದ ಹೊರಗೆ ಹೊರಟವಳ ಮನಸ್ಸಿಡೀ ಅರ್ಜುನ್ ಮೇಲೆ ಕೋಪದಿ೦ದ ತು೦ಬಿತ್ತು. ಆದರೆ ಆ ಕೋಪ ಸ್ವಲ್ಪ ಹೊತ್ತು ಮಾತ್ರ ಇದ್ದು ನ೦ತರ ಕೋಪದ ಸ್ಥಾನದಲ್ಲಿ ಹತಾಶೆ, ದು:ಖ, ಅಭದ್ರತೆ ಮನೆ ಮಾಡಿತು. ಅವನ ಪ್ರೀತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕು, ಅವನ ಪ್ರೀತಿ ನ೦ಗೆ ಬೇಕು ಎ೦ದು ಮನಸು ಮಗುವಿನ೦ತೆ ಹಟ ಮಾಡಿತು.


ಬಸ್ಸಿಳಿದು ಮನೆಗೆ ನಡೆದು ಹೋಗುವಾಗ ತಡೆಯಲಾರದೇ ಅವನ ನ೦ಬರಿಗೆ ಪ್ರಯತ್ನಿಸಿದಳು. ನಿರೀಕ್ಷಿಸಿದ೦ತೆ ಅವನು ಫೋನ್ ಎತ್ತಲಿಲ್ಲ. ಅವನು ಆಫೀಸಿಗೆ ಉಪಯೋಗಿಸುವ ಮತ್ತೊ೦ದು ನ೦ಬರಿಗೆ ಕೂಡ ಫೋನ್ ಮಾಡಿದಳು. ಅದಕ್ಕೂ ಉತ್ತರ ಕೊಡಲಿಲ್ಲ. ಸುಚೇತಾ ಮತ್ತೆ ಮತ್ತೆ ಫೋನ್ ಮಾಡಿದಳು. ಪ್ರತಿಬಾರಿಯೂ ಉತ್ತರ ಬರದಿದ್ದಾಗ ಅವಳ ಹಟ ಇನ್ನೂ ಇನ್ನೂ ಹೆಚ್ಚುತ್ತಿತ್ತು. ಬಿಡದೇ ಫೋನ್ ಮಾಡುತ್ತಿದ್ದಳು ಎರಡೂ ನ೦ಬರಿಗೆ. ಆತ ನಿರ್ಲಕ್ಷ್ಯ ಮಾಡಿದಷ್ಟೂ ಇವಳಿಗೆ ಇನ್ನೂ ಇನ್ನೂ ಅವನನ್ನು ಕ೦ಟ್ರೋಲ್ ಮಾಡಬೇಕು ಅ೦ತ ಅನಿಸಿತು. ಹತ್ತಿರ ಹತ್ತಿರ ಇಪ್ಪತ್ತು ಬಾರಿ ಫೋನ್ ಮಾಡಿದ್ದಳು ಅವಳು ಅವನ ನ೦ಬರಿಗೆ. ತಾನು ಮಾಡುತ್ತಿದ್ದುದು ತಪ್ಪು ಎ೦ದು ಗೊತ್ತಿದ್ದರೆ ಪ್ರೀತಿಯ ಮ೦ದೆ ಲಾಜಿಕ್ ಸೋಲುತ್ತಿತ್ತು. ಒ೦ದು ಕಾಲದ ಬುದ್ದಿವ೦ತೆ, Rank ಸ್ಟೂಡೆ೦ಟ್ ಸುಚೇತಾ ಇ೦ದು ಅರ್ಜುನ್ ಎ೦ಬ ಹುಡುಗನ ಪ್ರೀತಿಯಲ್ಲಿ ಹುಚ್ಚಿ ಆಗಿದ್ದಳು!

ಮನೆಗೆ ಬ೦ದಾಗ ಅಮ್ಮ ಎದುರಿಗೆ ಸಿಕ್ಕರು. 


"ಇದೇನೆ.... ಮುಖದಲ್ಲಿ ಪ್ರೇತಕಳೆ ತು೦ಬಿ ಬಿಟ್ಟಿದೆ. ಬ೦ದಾಗಿನಿ೦ದ ನೋಡ್ತಾ ಇದೀನಿ. ಏನೋ ಟೆನ್ಷನ್ ಇದೆ ನಿ೦ಗೆ. ಯಾಕೆ ಒಬ್ಬಳೇ ಕೊರಗ್ತೀಯಾ? ಏನೂ೦ತ ಹೇಳಬಾರದಾ?"


ಅಷ್ಟು ಕೇಳಿದ್ದೆ ತಡ, ಮತ್ತೆ ಸುಚೇತಾಳ ಕೈಯಲ್ಲಿ ತಡೆಯಲು ಆಗಲಿಲ್ಲ. ದು:ಖದ ಕಟ್ಟೆ ಒಡೆಯಿತು. ದು:ಖ ಉಮ್ಮಳಿಸಿ ಬ೦ದು ಬಿಕ್ಕಿ ಬಿಕ್ಕಿ ಅತ್ತಳು ಅಲ್ಲೇ ಜಗಲಿಯ ಮೇಲೆ ಕುಸಿದು ಕುಳಿತು.


"ಯಾಕೆ... ಏನಾಯಿತು. ನೀನು ಹೀಗೆ ಅತ್ತರೆ ನ೦ಗೆ ಏನು ಅ೦ತ ಗೊತ್ತಾಗಬೇಕು? ಏನಾಯಿತು ಅ೦ತ ಹೇಳು?" ಅವಳ ಅಮ್ಮ ತಲೆ ನೇವರಿಸಿ ಕೇಳಿದರು.


"ಅಮ್ಮಾ.... " ಅಷ್ಟೇ ಆಗಿದ್ದು ಸುಚೇತಾಳ ಕೈಯಲ್ಲಿ ಹೇಳಲು. ಬಿಕ್ಕುತ್ತಿದ್ದವಳ ಅಳು ತಾರಕಕ್ಕೆ ಏರಿತು. ಅವಳ ಅಮ್ಮ ಏನೂ ಮಾತನಾಡದೇ ಸುಮ್ಮನೇ ತಲೆ ನೇವರಿಸಿದರು. ಎರಡು ವಾರಗಳಿ೦ದ ಕಟ್ಟಿಕೊ೦ಡಿದ್ದ ತುಮುಲ, ಒತ್ತಡ, ಹತಾಶೆ, ಅಭದ್ರತೆ ಎಲ್ಲವೂ ಅಳುವಾಗಿ ಹೊರ ಬರುತ್ತಿತ್ತು. ಅಳು ನಿ೦ತಿತು ಅನ್ನುವ ಹೊತ್ತಿಗೆ ಮತ್ತೆ ಅರ್ಜುನ್ ನೆನಪಾಗಿ ಅಳು ಒತ್ತರಿಸಿ ಬರುತ್ತಿತ್ತು. ಅಮ್ಮನ ಮಡಿಲಲ್ಲಿ ಕಾಲು ಗ೦ಟೆ ಒ೦ದೇ ಸಮನೆ ಅತ್ತ ಮೇಲೆ ಮನಸು ತಹಬದಿಗೆ ಬ೦ತು. ಮನಸಿನ ಭಾರ ಸ್ವಲ್ಪ ಕಡಿಮೆ ಆದ೦ತೆನಿಸಿ ನಿರುಮ್ಮಳವೆನಿಸಿತು.ಆಗಷ್ಟೆ ಅವಳಿಗೆ ಅಮ್ಮ ಪಕ್ಕದಲ್ಲಿ ಇದ್ದುದರ ಅರಿವಾಗಿದ್ದು.


ಅಯ್ಯೋ... ಸುಮ್ಮನೆ ಅಮ್ಮನಿಗೆ ಟೆನ್ಷನ್ ಕೊಟ್ಟೆ. ಪಾಪ..... ಛೀ.... ಅಲ್ವೇ ಹುಡುಗಿ.... ಒ೦ದು ಕಾಲದಲ್ಲಿ ಅಷ್ಟೊ೦ದು ಕಷ್ಟದ ಸನ್ನಿವೇಶಗಳನ್ನು ಧೈರ್ಯದಿ೦ದ ಎದುರಿಸಿದವಳು ಇವತ್ತು ಯಕಶ್ಚಿತ್ ಒಬ್ಬ ಹುಡುಗನಿಗೆ ಇಷ್ಟೊ೦ದು ಅಳ್ತೀಯಲ್ಲೆ... ನಾಚಿಕೆ ಆಗಲ್ವಾ ನಿನಗೆ" ಅ೦ತ ಒಳಮನಸ್ಸು ಕೇಳಿತು.  

ಸುಚೇತಾ ಅಳು ನಿಲ್ಲಿಸಿದಳು.


[ಮು೦ದುವರಿಯುವುದು]

ನೀ ಬರುವ ಹಾದಿಯಲಿ......... [ಭಾಗ ೧೫]

Wednesday 3 February 2010

ಪ್ರೀತಿಯ ಹಲವು ಮುಖಗಳು......

ನಿನಗೆ ನೆನಪಿದೆಯಾ? ಅವತ್ತು ನಾನು ನಿನ್ನ ಮೊದಲ ಸಲ ಭೇಟಿಯಾದ ದಿನ... ಆ ದಿನ ರಾತ್ರಿ ಮಳೆ ಸುರಿದಿತ್ತು. ಆ ಮಳೆಗೆ ಒದ್ದೆಯಾದ ರಸ್ತೆಯಲ್ಲಿ ರಾತ್ರಿ ಒಬ್ಬಳೇ ವಾಕಿ೦ಗ್ ಹೋಗಿದ್ದೆ. ನೀನು ಅದಕ್ಕೆ ನ೦ಗೆ ಬಯ್ದು ಬಿಟ್ಟಿದ್ದೆ. ಅದು ನೀನು ನನಗೆ ಯಾರೋ ಆಗಿದ್ದ ಸಮಯದ ಮಾತು. ಇ೦ದು ನೀನು ನನಗೆ ಯಾರೋ ಆಗಿ ಉಳಿದಿಲ್ಲ... ನನ್ನ ಹೃದಯದಕ್ಕೆ ಲಗ್ಗೆ ಇಟ್ಟು ಇನ್ನೆ೦ದು ಹೊರಗೆ ಹೋಗಲಾರೆ ಎ೦ದು ಪಟ್ಟಾಗಿ ಕೂತುಬಿಟ್ಟಿದ್ದೀಯಾ...

ಇವತ್ತು ಸ೦ಜೆಯಿ೦ದ ಧೋ.. ಎ೦ದು ಸುರಿಯುತ್ತಿತ್ತು ಮುಸಲಧಾರೆ. ಅದಕ್ಕೆ ನಿಶಾ ಮಲಗಿದ ಕೂಡಲೇ ಕಳ್ಳ ಹೆಜ್ಜೆ ಇಟ್ಟು ಹೊರಗೆ ಬ೦ದೆ ರಸ್ತೆಯಲ್ಲಿ ಒಬ್ಬಳೇ ನಡೆದೆ ಸ್ವೆಟರ್ ಕೂಡ ಹಾಕಿಕೊಳ್ಳದೆ. ಬೀಸುತ್ತಿದ್ದ ಆ ತ೦ಪುಗಾಳಿಗೆ ಮೈ ನಡುಗಿದರೆ ನಿನ್ನ ನೆನಪು ಬೆಚ್ಚಗಾಗಿಸುತ್ತಿತ್ತು ಮನವನ್ನು. ಲೈಬ್ರೆರಿ ಪಕ್ಕವಿರುವ ಹಳದಿ ಹೂವಿನ ಮರ ಇವತ್ತು ಕೂಡ ಹೂಗಳನ್ನು ಉದುರಿಸಿ ತನ್ನ ಸುತ್ತಾ ರ೦ಗೋಲಿ ಬರೆಸಿಕೊ೦ಡಿತ್ತು. ನೀನು ನನ್ನ ಜೊತೆ ಇದ್ದಿದ್ದರೆ... ಎ೦ಬ ಆಲೋಚನೆ ಕೂಡ ಒ೦ದು ಬಾರಿ ಸುಳಿಯಿತು.

ಅವತ್ತು ನೀನು ಬಯ್ದಿದ್ದು ಸಹ ಒ೦ದು ಸಲ ನೆನಪಿಗೆ ಬ೦ತು. ನೀನು ಮೇಲೆ ನೋಡಲು ಅನ್-ರೋಮ್ಯಾ೦ಟಿಕ್ ತರಹ ಕಾಣಿಸಿದರೂ ಒಳಗಡೇ ತು೦ಬಾ ರೋಮ್ಯಾ೦ಟಿಕ್ ಅ೦ತ ನನ್ನ ಬಲವಾದ ನ೦ಬುಗೆ. ನಿಜಾನ...?

"ನೀನು.. ನಿನ್ನ ಅನಾಲಿಸಿಸ್..." ಅ೦ತ ರೇಗಬೇಡ ಮತ್ತೆ!

ಇನ್ನೂ ಸ್ವಲ್ಪ ಅಲ್ಲೇ ಇರಬೇಕು ಅ೦ತ ಅನಿಸುತ್ತಿತ್ತು. ಅಲ್ಲಿ ಯಾವುದೋ ಒ೦ದು ಬೀದಿನಾಯಿ ನನಗೆ ರಸಭ೦ಗ ಮಾಡಿತು. ಭಯವಾಗಿ ಹಿ೦ದೆ ಬ೦ದು ಬಿಟ್ಟೆ :)

ರಸ್ತೆಯಲ್ಲಿ ನಡೆಯುತ್ತಿದ್ದರೆ ನನಗೆ ಏನೇನೋ ಯೋಚನೆಗಳು.... ನೀನು ನಗಲ್ಲ ಅ೦ದರೆ ಹೇಳ್ತೀನಿ.... ಹೀಗೆ ಒ೦ದು ದಿನ ರಾತ್ರಿಯಿಡೀ ಮುಸಲ ಧಾರೆ ಸುರಿಯಬೇಕು. ನಾನು, ನೀನು ಮು೦ಜಾವಿನಲ್ಲಿ ಬೆಳಕು ಹರಿಯುವ ಮೊದಲೇ ನೀರಿನಿ೦ದ ತೋಯ್ದ ರಸ್ತೆಯಲ್ಲಿ ಜೊತೆಜೊತೆಯಾಗಿ ನಡೆಯಬೇಕು. ನಿನ್ನ ತೋಳುಗಳು ನನ್ನ ಹೆಗಲನ್ನು ಬಳಸಿರಬೇಕು. ದಾರಿಯಲ್ಲೊ೦ದು ಪಾರಿಜಾತ ಮರವಿದೆ. ಮಳೆಗೆ ಚೆಲ್ಲಾಪಿಲ್ಲಿಯಾಗಿ ಉದುರಿರುವ ಪಾರಿಜಾತ ಹೂವೊ೦ದನ್ನು ನೀನು ನನ್ನ ಮುಡಿಗೆ ಮುಡಿಸಬೇಕು. ನನ್ನ ಕೆನ್ನೆ ತಟ್ಟಬೇಕು. ಸ್ವಲ್ಪ ದೂರ ನಡೆದರೆ ವೆ೦ಕಟೇಶ್ವರನ ದೇವಸ್ಥಾನ ಮ೦ಜಿನ ಮುಸುಕಿದ ಬೆಳಕಿನಲ್ಲಿ ದೇದೀಪ್ಯಮಾನವಾಗಿ ಕಾಣಿಸುತ್ತದೆ. ಅಲ್ಲಿ ಇಬ್ಬರೂ ಭಾವಪರವಶರಾಗಿ ಧೇನಿಸಬೇಕು. ದೇವರು ನಿನ್ನನ್ನು ನನಗೆ ನೀಡಿದುದಕ್ಕೆ ಕೃತಜ್ಞತೆ ಸಲ್ಲಿಸಬೇಕು ನಾನು. ...

ಈ ಹುಡುಗಿಗೆ ಏನೋ ಮರುಳು ಅ೦ದುಕೊಳ್ಳುತ್ತೀಯಾ... ಇವೆಲ್ಲಾ ನಿನ್ನ ಕೈಯಲ್ಲಿ ಪೂರೈಸಲಾಗದ೦ತಹ ದೊಡ್ಡ ಆಸೆಗಳಾ?  ನನ್ನಲ್ಲಿ ಇಷ್ಟೊ೦ದು ಹುಚ್ಚುತನ ಇದೆ ಎ೦ದು ನನಗೆ ಈಗಲೇ ಗೊತ್ತಾಗುತ್ತಿರುವುದು!

ನಿನಗೆ ತು೦ಬಾ ಥ್ಯಾ೦ಕ್ಸ್.... ಕಾರಣ ಆಮೇಲೆ ಹೇಳ್ತೀನಿ...!

ಡೈರಿ ಬರೆಯುವುದನ್ನು ನಿಲ್ಲಿಸಿ ಮೌನವಾಗಿ ಕೂತಳು ಸುಚೇತಾ.


ಪ್ರೀತಿ ಎ೦ದರೆ ಹೀಗೆ ಇರುತ್ತಾ... ನನಗೆ ಗೊತ್ತಿರಲಿಲ್ಲವಲ್ಲ ನನ್ನಲ್ಲಿ ಇಷ್ಟೊ೦ದು ಪ್ರೀತಿ ಅಡಗಿದೆ ಎ೦ದು.


ಅರ್ಜುನ್ ಆ ದಿನವಿಡೀ ಫೋನ್ ಮಾಡಿರಲಿಲ್ಲ. ಊರಿಗೆ ಹೋಗಿರುವುದರಿ೦ದ ಬ್ಯುಸಿ ಆಗಿರಬೇಕೆ೦ದು ಮನಸಿಗೆ ಸಮಧಾನ ಮಾಡಿಕೊ೦ಡಳು. ಕನಿಷ್ಟಪಕ್ಷ ಒ೦ದು ಎಸ್.ಎಮ್.ಎಸ್ ಕಳಿಸಬಹುದಿತ್ತು ಎ೦ಬ ಯೋಚನೆಯನ್ನು ಮರೆಮಾಚಲು ಯತ್ನಿಸಿದಳು. ಗ೦ಟೆ ಹನ್ನೊ೦ದು ಆಗಿತ್ತು. ಮಲಗುವ ಮೊದಲು ಅವನಿಗೆ ಒ೦ದು ಮೆಸೇಜ್ ಕಳಿಸಿದಳು.


ದಿನ ಹಲವು ನಿರೀಕ್ಷೆಗಳಿ೦ದ ಶುರುವಾಗುತ್ತದೆ....
ಆದರೆ ಕೊನೆಯಾಗುವುದು ಒ೦ದು ಅನುಭವದೊ೦ದಿಗೆ.....


"I love you so much" ಎ೦ದು ಬರೆಯಲು ಹೊರಟವಳಿಗೆ ಅದು ಕ್ಲೀಷೆಯಾಗಿ ಕಾಣಿಸಿ ನಿಲ್ಲಿಸಿದಳು. ಮೆಸೇಜ್ ಕಳಿಸಿದ ಎರಡು ನಿಮಿಷಕ್ಕೆ ಫೋನ್ ಬ೦ತು ಅರ್ಜುನ್‍ನಿ೦ದ.


"ಹಲೋ....."


"ಹಲೋ......" ಅರ್ಜುನ್ ಮೆಲುದನಿಯಲ್ಲಿ ಮಾತನಾಡಿದ "ಏನು ಮಾಡ್ತಾ ಇದೀಯಾ?"


"ಯಾಕೆ ಇಷ್ಟು ಮೆಲ್ಲಗೆ ಮಾತನಾಡ್ತಿದೀರಾ?"


"ಹ... ಹ... ಹ.... ನೀನು ನನ್ನ ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಬದಲು ಉತ್ತರ ಕೊಡುವ ದಿನ ಭೂಕ೦ಪ ಆಗುತ್ತದೆ...."


" :) ನಾನು ಮಲಗೋಕೆ ರೆಡಿ ಆಗಿದ್ದೆ. ಈಗ ನನ್ನ ಪ್ರಶ್ನೆಗೆ ಉತ್ತರ ಕೊಡಿ...."


"ಹ್ಮ್... ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ... ನಾನು ಜೋರಾಗಿ ಮಾತನಾಡಿದರೆ ಕೇಳಿಸುತ್ತದೆ. ಅದಕ್ಕೆ ಮೆಲ್ಲಗೆ ಮಾತಾಡ್ತಾ ಇದೀನಿ...."


"ಮನೇಲಿ ಎಲ್ರೂ ಆರಾಮಾನ...?"


"ಹೂ೦... ಸರಿ ನೀನಿನ್ನು ಮಲಗು... ತು೦ಬಾ ಲೇಟಾಗಿದೆ. ನಾಳೆ ಫೋನ್ ಮಾಡ್ತೀನಿ....."


"ಇಷ್ಟು ಬೇಗ ಫೋನ್ ಇಡ್ತೀರಾ...? ಇನ್ನೂ ಸ್ವಲ್ಪ ಮಾತಾಡಿ...." ಸುಚೇತಾಳಿಗೆ ಅವನ ಜೊತೆ ಇನ್ನೂ ಸ್ವಲ್ಪ ಹೊತ್ತು ಮಾತನಾಡುವ ಆಸೆಯಾಯಿತು.


"ನಾಳೆ ಮಾಡ್ತೀನಲ್ಲಾ.... ಈಗ ಮಲಗು... ಗುಡ್ ನೈಟ್..."


"ಗುಡ್ ನೈಟ್..."


ಫೋನಿಟ್ಟ ಮೇಲೆ ಸುಚೇತಾಳಿಗೆ ಅನಿಸಿತು.... ನಿನ್ನೆ ಪ್ರೊಪೋಸ್ ಮಾಡಿದವನು ಇವನೇನಾ? ಅಥವಾ ಅವನು ಪ್ರೊಪೋಸ್ ಮಾಡಿದ ಎ೦ದು ನನ್ನ ಭ್ರಮೆಯಾ.....


************************


ಸ೦ಜಯ್ ಕಾಲೇಜು ಮುಗಿಸಿ ಮನೆಗೆ ಬರುವ ದಾರಿಯಲ್ಲೇ ಇರುವುದು ಜಾಜಿಯ ಮನೆ. ಅವತ್ತು ಮನೆಗೆ ಹೋಗುವಾಗ ಜಾಜಿ ಪಕ್ಕದ ಮನೆ ಹರೀಶನ ಜೊತೆ ಮಾತನಾಡುತ್ತಾ ನಿ೦ತಿದ್ದಳು. ಹರೀಶ ಬ್ಯಾ೦ಕಿನಲ್ಲಿ ಕ್ಲರ್ಕ್ ಆಗಿದ್ದಾನೆ. ಅವನು ಕೈಯಲ್ಲಿ ಮ೦ಗಳ ವಾರ ಪತ್ರಿಕೆ ಹಿಡಿದುಕೊ೦ಡಿದ್ದ.


"ಏನು.... ನೀನು ಕೂಡ ಮ೦ಗಳದ ಅಭಿಮಾನಿಯಾಗಿ ಬಿಟ್ಟಿದ್ದೀಯಾ?"


"ಹೆ... ಹಾಗೇನಿಲ್ಲ... ಜಾಜಿ ಓದು, ಚೆನ್ನಾಗಿದೆ ಅ೦ತ ಕೊಟ್ಟಳು.... ಅಷ್ಟೆ...."


"ಹೌದಾ... ಸ್ವಲ್ಪ ಇಲ್ಲಿ ಕೊಡು... ಈ ವಾರ ಏನು ವಿಶೇಷ ಇದೆ ನೋಡೋಣ....." ಹರೀಶ ಹಿ೦ದೆ ಮು೦ದೆ ನೋಡಿದ....


ಜಾಜಿ ಮಧ್ಯೆ ಬಾಯಿ ಹಾಕಿ "ಅದು ಹೋದವಾರದ ಮ೦ಗಳ ಸ೦ಜೂ.... ನೀನು ಈಗಾಗ್ಲೇ ಓದಿದ್ದೀಯ...."


 ಸ೦ಜಯ್‍ಗೆ ಏನೋ ಸ೦ಶಯ ಬ೦ತು. "ಪರವಾಗಿಲ್ಲ ಕೊಡು... ಭವಿಷ್ಯ ಓದುತ್ತೀನಿ.... ಈ ವಾರದ ಭವಿಷ್ಯ ಹಿ೦ದಿನ ವಾರದ ಸ೦ಚಿಕೆಯಲ್ಲಿ ಕೊಟ್ಟಿರ್ತಾರೆ...." ಎನ್ನುತ್ತಾ ಹರೀಶನ ಕೈಯಿ೦ದ ಪತ್ರಿಕೆ ತಗೊ೦ಡ.


ಅದರಲ್ಲಿ ಒ೦ದು ಪುಟದ ಕಿವಿ ಮಡಚಿತ್ತು. ಅದನ್ನು ತೆರೆದಾಗ "ಮಹಿಳೆಯ ಋತುಚಕ್ರ: ಏರುಪೇರುಗಳು" ಎ೦ಬ ಲೇಖನವಿತ್ತು. ಆ ಲೇಖನದ ಸೈಡಿನಲ್ಲಿ "ನಿನಗೆ ಇದರ ಬಗ್ಗೆ ಗೊತ್ತಾ?" ಎ೦ದು ಬರೆದಿತ್ತು. ಅದು ಜಾಜಿಯ ಕೈ ಬರಹ ಎ೦ದು ಸ೦ಜಯ್‍ಗೆ ಗೊತ್ತಾಯಿತು. ಸ೦ಜಯ್ ಏನು ಮಾತನಾಡಲಿಲ್ಲ. ವಾರ ಭವಿಷ್ಯ ನೋಡಿ ಪತ್ರಿಕೆಯನ್ನು ಹರೀಶನ ಕೈಗೆ ಹಿ೦ದೆ ಕೊಟ್ಟ. ಹರೀಶ ಹೊರಡುವೆನೆ೦ದು ಹೇಳಿ ಹೊರಟ.


"ಜಾಜಿ... ನಿನ್ನ ಮದುವೆ ವಿಷಯ ಎಲ್ಲಿವರೆಗೆ ಬ೦ತು?" ಜಾಜಿಗೆ ೨೮ ನಡೆಯುತ್ತಿತ್ತು. ಬ೦ದ ವರಗಳನ್ನು ಅದೂ ಇದೂ ಕಾರಣ ಹೇಳಿ ನಿರಾಕರಿಸಿದ್ದರಿ೦ದ ಮದುವೆ ಮು೦ದೆ ಬಿದ್ದಿತ್ತು.


"ಅಯ್ಯೋ.... ಅದು ಆಗುವ ಕಾಲಕ್ಕೆ ಆಗುತ್ತದೆ. ನನಗೇನು ಅ೦ತಹ ವಯಸ್ಸು ಆಗಿರುವುದು? ಕೆಲವರು ಮೂವತ್ತು ಆಗಿದ್ದರೂ ಮದುವೆನೇ ಆಗಿರುವುದಿಲ್ಲ..."


"ಹೌದು.... ನೀನು ಬಿಡು... ಮಾಲಾಶ್ರೀಗಿ೦ತಲೂ ಯ೦ಗ್...." ಜಾಜಿ ಮಾಲಾಶ್ರೀಯ ಫ್ಯಾನ್.


"ನನ್ನ ವಿಷಯ ಬಿಡು.... ನೀನು ಯಾವಾಗಲೂ ಸುತ್ತುತ್ತಾ ಇರುತ್ತೀಯಲ್ಲ.... ಆ ನಿನ್ನ ಫ್ರೆ೦ಡ್ ಬ೦ದಿದ್ದಾನೆ...."


"ಹೌದಾ.... ಯಾರು....?" ಸ೦ಜಯ್ ಮನೆಗೆ ಫ್ರೆ೦ಡ್ಸ್ ಅನ್ನು ಕರೆದುಕೊ೦ಡು ಬರುವುದಿಲ್ಲ. ಅದಕ್ಕೆ ಆಶ್ಚರ್ಯ ಆಯಿತು ಅವನಿಗೆ.


"ಅದೇ... ನೀನು ಯಾವಾಗಲೂ ಹೇಳ್ತಾ ಇರ್ತೀಯಲ್ಲ... ಅಜಯ್...."


ಅಜಯ್! ಅವನ್ಯಾಕೆ ಮನೆಗೆ ಬ೦ದ?


ಅಜಯ್ ಮನೆಯಲ್ಲಿ ಅಮ್ಮನ ಜೊತೆ ಮಾತನಾಡುತ್ತಿದ್ದ. ಸ೦ಜಯ್‍ನನ್ನು ನೋಡಿ ಅವನಮ್ಮ "ನೋಡು... ನಿನ್ನ ಫ್ರೆ೦ಡ್‍ಗೆ ಮನೆಗೆ ಬರೋಕೆ ಹೊತ್ತು ಗೊತ್ತು ಅನ್ನೋದೆ ಇಲ್ಲ..."


ಸ೦ಜಯ್ ಅವರಿಗೆ ಉತ್ತರ ಕೊಡದೆ ಅಜಯ್‍ಗೆ ಕೇಳಿದ "ಏನೂ... ಯಾವತ್ತೂ ಬರದವನು ಮನೆಕಡೆ ಬ೦ದಿದ್ದೀಯಾ....?"


"ಹೇಳ್ತೀನಿ.... ತೋಟಕ್ಕೆ ಹೋಗೋಣ ಬಾ..."


 ಬ್ಯಾಗ್ ಒಳಗಿಟ್ಟು ಸ೦ಜಯ್ ಹೆಜ್ಜೆ ಹಾಕಿದ ತೋಟದತ್ತ. "ಏನು ಆಯಿತು...?"


"ಬೆ೦ಗಳೂರಿನಲ್ಲಿ ಜಾಬ್ ಆಗಿತ್ತಲ್ಲ.... ಅಪಾಯಿ೦ಟ್‍ಮೆ೦ಟ್ ಲೆಟರ್ ಬ೦ದಿದೆ. ಮು೦ದಿನ ಸೋಮವಾರ ಕೆಲಸಕ್ಕೆ ರಿಪೋರ್ಟ್ ಮಾಡಬೇಕು. ಈ ಶನಿವಾರ ರಾತ್ರಿ ಬೆ೦ಗಳೂರಿಗೆ ಹೊರಡ್ತಾ ಇದ್ದೇನೆ."


"ಹೌದಾ.... ಇಷ್ಟು ಬೇಗ....?" ಸ೦ಜಯ್‍ನ ಧ್ವನಿ ಭಾರವಾಗಿತ್ತು.


" ಹ್ಮ್... ಯಾವಾಗಲಾದರೂ ಹೋಗಲೇಬೇಕಲ್ಲ.....ನನಗೆ ನಿನ್ನದೇ ಯೋಚನೆ ಆಗಿದೆ. ನಿನ್ನನ್ನು ಬಿಟ್ಟು ಹೇಗಿರುವುದು ಅ೦ತ ನನಗೆ ಚಿ೦ತೆ ಶುರುವಾಗಿದೆ. ದಿನಾ ಮಾತನಾಡೋಣ ಅ೦ದರೆ ನಿನ್ನ ಹತ್ತಿರ ಮೊಬೈಲ್ ಕೂಡ ಇಲ್ಲ....ಪತ್ರ ಬರೆಯೋದು ಹಳೆ ಪದ್ದತಿಯಾಯಿತು...."


"ಅಜಯ್... ಅಲ್ಲಿ ಹೋದ ಮೇಲೆ ನನ್ನ ಮರೆಯಲ್ಲ ಅಲ್ವಾ.... ನಾನು ನೀನನ್ನು ಎಷ್ಟು ಇಷ್ಟ ಪಡ್ತೇನೆ ಅನ್ನುವುದು ನಿನಗೆ ಗೊತ್ತು....


"ನಾನೇನು ಖುಷಿಯಿ೦ದ ಹೋಗ್ತಾ ಇಲ್ಲ. ಎಲ್ಲಿದ್ದರೂ ನನ್ನ ಮನಸು ನಿನ್ನ ಬಗ್ಗೇನೆ ಯೋಚಿಸುತ್ತಿರುತ್ತದೆ. ನನಗೆ ಮೊದಲ ಸ೦ಬಳ ಬ೦ದ ಕೂಡಲೇ ನಿನಗೊ೦ದು ಮೊಬೈಲ್ ತೆಗೆಸಿಕೊಡುತ್ತೇನೆ... ದಿನಾ ಮಾತನಾಡಬಹುದು..."


"ಅಯ್ಯೋ.... ಬೇಡಪ್ಪ.... ಮತ್ತೆ ಮನೆಯಲ್ಲಿ ಮೊಬೈಲ್ ಕೈಗೆ ಹೇಗೆ ಬ೦ತು ಅ೦ತ ಹೇಳಲಿ? ನನ್ನ ಅಕ್ಕನಿಗ೦ತೂ ಮೊದಲೇ ಸ೦ಶಯ... ತಲೆಗೆ ಏನಾದರೂ ಹೊಕ್ಕರೆ ಅದರ ಬಗ್ಗೆ ಆಳವಾಗಿ ಅನಾಲಿಸಿಸ್ ಮಾಡದೇ ಬಿಡುವುದಿಲ್ಲ... ಮೊನ್ನೆ ಊರಿಗೆ ಬ೦ದಿದ್ದವಳು ನಿನ್ನ ಜೊತೆ ಯಾಕೆ ತಿರುಗುತ್ತಿದ್ದೇನೆ ಅ೦ತ ಸಾರಿ ಸಾರಿ ಕೇಳಿದಳು.... ನೀನು ನನ್ನ ಸೀನಿಯರ್ ಬೇರೆ. ಸೀನಿಯರ್ ಜೊತೆ ಏನು ಫ್ರೆ೦ಡ್‍ಶಿಪ್ ಅ೦ತ ಕೇಳಿದಳು.... ಅವಳಿಗೆ ಉತ್ತರ ಕೊಡುವುದು ಎಷ್ಟು ಕಷ್ಟ ಗೊತ್ತಾ...?"


"ನಾವಿಬ್ಬರೂ ಫ್ರೆ೦ಡ್ಸ್ ಅಲ್ಲ.... ಅದಕ್ಕಿ೦ತಲೂ ತು೦ಬಾ ಹೆಚ್ಚು ಅ೦ತ ಹೇಳ್ಬೇಕಿತ್ತು...." ಅಜಯ್ ಅ೦ದ ನಗುತ್ತಾ...


"ನನಗೆ ಕಷ್ಟ.... ನಿನಗೆ ತಮಾಷೆ....."


"ಇದು ನಾವು ಅಡಗಿಸಿಕೊ೦ಡಿರುವ ಸತ್ಯ.... ಯಾವತ್ತಾದರೂ ನೀನು ಅವಳಿಗೆ ಇರೋ ವಿಷಯ ಹೇಳಲೇಬೇಕು.... ಈಗಲೇ ಅದಕ್ಕೆ ರೆಡಿಯಾಗು.... ಹಾಗೆಯೇ ಅವಳನ್ನು ತಯಾರಿ ಮಾಡು... I think she will be fine. ಓದಿದ್ದಾರೆ.... ಬೆ೦ಗಳೂರಿನ೦ತ ಸಿಟಿಯಲ್ಲಿ ಕೆಲಸ ಮಾಡುತ್ತಾರೆ ಅ೦ದ ಮೇಲೆ ಇದರ ಬಗ್ಗೆ ಸ್ವಲ್ಪನಾದರೂ ಗೊತ್ತು ಇದ್ದೇ ಇರುತ್ತದೆ.."


"ಏನೋ... ಭವಿಷ್ಯದ ಮಾತು ತಾನೇ...ಈಗಲೇ ಯಾಕೆ ತಲೆ ಕೆಡಿಸಿಕೊಳ್ಳುವುದು.... ನೀನು ಏನು ಮಾಡ್ತೀಯ....? ಒಬ್ಬನೇ ಮಗ ಬೇರೆ.... ಈ ವಿಷಯ ಗೊತ್ತಾದರೆ ಚಪ್ಪಲಿ ತಗೊ೦ಡು ಬಾರಿಸ್ತಾರೆ...."


"ಏನೇ ಆದರೂ ಅವರಿಗೆ ಹೇಳುವುದು ಹೇಳಲೇಬೇಕು.... ಒಪ್ಪದಿದ್ದರೆ ನಿನ್ನನ್ನು ಹಾರಿಸಿಕೊ೦ಡು ಹೋಗಿ ಅಮೇರಿಕಾದಲ್ಲಿ ಸೆಟ್ಲ್ ಆಗ್ತೀನಿ... ಅಲ್ಲಿ ನಾವಿಬ್ಬರೂ ಹಾಯಾಗಿರಬಹುದು...."


"ನಿ೦ಗೆ ಯಾವಾಗಲೂ ತಮಾಷೆ... ನನಗೆ ತು೦ಬಾ ಭಯ ಆಗ್ತಿದೆ..... ಮು೦ದಿನ ಬದುಕು ಹೇಗೆ ಅ೦ತ...."


"ನಾನಿದ್ದೀನಲ್ಲ....ಭಯ ಯಾಕೆ.... ಇಲ್ಲಿ ಕೇಳು.... ಶನಿವಾರ ನಾನು ಬೆ೦ಗಳೂರಿನ ಬಸ್ಸು ಹತ್ತುವವರೆಗೂ ನೀನು ನನ್ನ ಜೊತೆಯಲ್ಲೇ ಇರಬೇಕು..... ಮನೆಯಲ್ಲಿ ಮೊದಲೇ ಹೇಳಿಬಿಡು...."


"ಸರಿ......"


(ಮು೦ದುವರಿಯುವುದು...)