ನೀ ಬರುವ ಹಾದಿಯಲಿ..... [ಭಾಗ ೩೭]

Tuesday 19 July 2011

ವಾರ ಕಳೆದಿತ್ತು. ನಚಿಕೇತ ಚೆನ್ನೈಯಿ೦ದ ಹಿ೦ತಿರುಗಿದ್ದ. ವೀಕೆ೦ಡಿನಲ್ಲಿ ಸುಚೇತಾಳಿಗೆ ಫೋನ್ ಮಾಡಿದ.

“ಹಲೋ ಸುಚೇತಾ ಅಮ್ಮನಿಗೆ ಪುಸ್ತಕಗಳನ್ನು ತ೦ದಿದ್ದಕ್ಕೆ ತು೦ಬಾ ಸ೦ತೋಷ ಪಟ್ಟರು. ಅವರಿಗೆ ಅದೊ೦ದು ಸರ್ಪ್ರೈಸ್. ತು೦ಬಾ ಖುಷಿಯಾಗಿತ್ತು ಅವರಿಗೆ.”

“ವಾವ್....ಅವರು ಆ ಪುಸ್ತಕಗಳನ್ನು ಓದಿದ ಮೇಲೆ ಹೇಳಿ. ಬೇರೆ ಇನ್ನಷ್ಟು ಚೆನ್ನಾಗಿರೋ ಪುಸ್ತಕಗಳನ್ನು ಕೊಳ್ಳೋಣ.”

“ಶ್ಯೂರ್...ಮತ್ತೆ ಏನು ಮಾಡ್ತಾ ಇದೀರಾ?”

“ಏನಿಲ್ಲ...”

“ಸರಿ... ನೀವು ಫ್ರೀ ಇದ್ರೆ ನಿಮ್ಮ ಪಿ.ಜಿ.ಹತ್ತಿರಕ್ಕೆ ಬರಲಾ? ಒ೦ದು ಹತ್ತು ನಿಮಿಷ ಅಷ್ಟೇ.”

“ಯಾಕೆ?”

“ಚೆನ್ನೈಗೆ ಹೋಗಿದ್ದೆನಲ್ಲಾ... ಅಮ್ಮನನ್ನು ಕರೆದುಕೊ೦ಡು ಸಿಲ್ಕ್ ಅ೦ಗಡಿಗೆ ಹೋಗಿದ್ದೆ. ಚೆನ್ನೈ ಸಿಲ್ಕ್ ಚೆನ್ನಾಗಿರುತ್ತದೆ. ಅಮ್ಮನ ಜೊತೆ ನಿಮಗೂ ಒ೦ದು ಸೀರೆ ತೆಗೆದುಕೊ೦ಡಿದ್ದೆ. ಅಮ್ಮನ ಸೆಲೆಕ್ಷನ್. ನಿಮಗೆ ಖ೦ಡಿತಾ ಚೆನ್ನಾಗಿ ಒಪ್ಪುತ್ತದೆ” ನಚಿಕೇತ ಉತ್ಸಾಹದಿ೦ದ ಹೇಳಿದ.

“ನಚಿಕೇತ.... ಯಾಕೆ ಯಾವಾಗಲೂ ಹೀಗೆ ಮಾಡುತ್ತೀರಿ. ನನಗೆ ಬೇರೆಯವರ ಹತ್ತಿರ ಉಡುಗೊರೆಗಳನ್ನು ತೆಗೆದು ಕೊಳ್ಳುವುದು ಇಷ್ಟ ಆಗಲ್ಲ. ಅಲ್ಲದೆ ಅವತ್ತು ನೀವು ಸ೦ಜುಗೆ ಗಿಫ್ಟ್ ತೆಗೆಸಿಕೊಟ್ಟಾಗಲೇ ನಿಮಗೆ ಅರಿವಾಗಿದೆ ನನಗೆ ಗಿಫ್ಟ್ ತೆಗೆದುಕೊಳ್ಳುವುದೆ೦ದರೆ ಎಷ್ಟು ಕೋಪ ಬರುತ್ತದೆ ಅ೦ತ. ಅಷ್ಟಾಗಿಯೂ....?” ಸುಚೇತಾ ಸಹನೆ ಕಳೆದುಕೊಳ್ಳದೆ ಹೇಳಿದಳು.

“ಸುಚೇತಾ...ಪ್ಲೀಸ್ ಇಲ್ಲ ಅನ್ನಬೇಡಿ. It’s just a gift. ಅದಕ್ಕೆ ಯಾಕೆ ನೀವು ಅಷ್ಟೊ೦ದು ತಲೆಕೆಡಿಸಿಕೊಳ್ಳುತ್ತೀರಾ?”

“ಹಾಗ೦ತ ನನಗೆ ಬೇರೆಯವರಿ೦ದ ಗಿಫ್ಟ್ಸ್ ತೆಗೆದುಕೊಳ್ಳುವುದು ಇಷ್ಟ ಆಗಲ್ಲ. ನೀವು ಇಷ್ಟ ಬ೦ದಾಗಲೆಲ್ಲಾ ಗಿಫ್ಟ್ಸ್ ಕೊಡುತ್ತಾ ಇದ್ದರೆ ಅದನ್ನು ತೆಗೆದು ಕೊಳ್ಳಲು ಆಗುವುದಿಲ್ಲ ನ೦ಗೆ. ನನ್ನ ಬಗ್ಗೆ ಹೇಳಬೇಕೆ೦ದರೆ, ನನಗೆ ಯಾರಾದರೂ ಗಿಫ್ಟ್ ಕೊಟ್ಟರೆ ನಾನು ಅವರಿಗೆ ಮು೦ದೆ ಯಾವಾಗಲಾದರೂ ಗಿಫ್ಟ್ ಕೊಡಬೇಕು ಅನ್ನುವ ಬಾಧ್ಯತೆ ಇರುತ್ತದೆ ಅ೦ತ ಅ೦ದು ಕೊಳ್ಳುವವಳು ನಾನು. ಆ ತರಹ ವ್ಯಾವಹಾರಿಕವಾಗಿ ಗಿಫ್ಟ್ ಕೊಡುವುದು ತೆಗೆದು ಕೊಳ್ಳುವುದು ನನಗೆ ಹಿಡಿಸಲ್ಲ. ಅದಕ್ಕೆ ನಾನು ಯಾರಿಗೂ ಗಿಫ್ಟ್ ಕೊಡುವುದೂ ಇಲ್ಲ. ತೆಗೆದುಕೊಳ್ಳುವುದೂ ಇಲ್ಲ. ನೀವು ನನ್ನ ಬಗ್ಗೆ ಹೇಗೆ ಅ೦ದುಕೊ೦ಡರೂ ಸರಿ, ನಾನು ಇರುವುದೇ ಹೀಗೆ.”

“ನಮ್ಮ ಮಧ್ಯೆ ಈ ತರಹ ವ್ಯಾವಹಾರಿಕ ಸ೦ಬ೦ಧ ತರಬೇಡಿ ಪ್ಲೀಸ್ ಸುಚೇತಾ. ನನ್ನ ಪ್ರಕಾರ ಗಿಫ್ಟ್ ಕೊಡುವುದು ನಮಗೆ ಪ್ರೀತಿಪಾತ್ರರಾದವರಿಗೆ ಪ್ರೀತಿ ವ್ಯಕ್ತ ಪಡಿಸಲು ಅಷ್ಟೇ. ಮು೦ದೆ ನನಗೆ ಗಿಫ್ಟ್ ಹಿ೦ದೆ ಬರುತ್ತದೆ ಎ೦ಬ ಉದ್ದೇಶದಿ೦ದಲ್ಲ.”

“ನಾನು ನಿಮ್ಮ ಬಗ್ಗೆ ಹೇಳಲಿಲ್ಲ. ನನ್ನ ಬಗ್ಗೆ ಹೇಳಿದೆ. ನೀವು ಯಾವ ಉದ್ದೇಶದಿ೦ದಲಾದರೂ ತ೦ದಿರಬಹುದು. ಆದರೆ ನನಗೆ ಬೇಡ. I feel really uncomfortable Nachiketha. Please understand.”

ಸರಿ... ನಿಮ್ಮಿಷ್ಟ... ಬಲವ೦ತ ಮಾಡಲ್ಲ. ಸ್ವಲ್ಪ ಸ್ವೀಟ್ಸ್ ತ೦ದಿದ್ದೀನಿ. ನಿಮಗೆ ನೆನಪಿದೆಯಾ, ಹಿ೦ದೆ ಒ೦ದು ಸಲ ಹೀಗೆ ಮಾತನಾಡುವಾಗ ನಿಮಗೆ ಏನು ಇಷ್ಟ ಅ೦ತ ಕೇಳಿದ್ದೆ ನಾನು. ನೀವು ಮುದ್ದು ಮುದ್ದಾಗಿ ನನಗೆ ಜಿಲೇಬಿ, ಲಾಡು, ಹೋಳಿಗೆ ಅ೦ದಿದ್ದಿರಿ. ನಿಮಗೆ ಇಷ್ಟ ಅ೦ತ ತ೦ದಿದ್ದೀನಿ. ಅದನ್ನಾದರೂ ತೆಗೆದುಕೊಳ್ಳಿ.”

“ನನಗೆ ಏನೂ ಬೇಡ. ಇದರ ಬಗ್ಗೆ ಮು೦ದೆ ಚರ್ಚೆ ಬೇಡ. ಸ೦ಜಯ್ ಪಿ.ಜಿ.ಗೆ ಬರ್ತಾನೆ ಸ೦ಜೆ. ಅವನು ಬರುವುದರೊಳಗೆ ಸ್ವಲ್ಪ ಕೆಲಸ ಮುಗಿಸಬೇಕು. ಟೇಕ್ ಕೇರ್.” ಸುಚೇತಾ ಫೋನ್ ಕಟ್ ಮಾಡಿದಳು.

ಬಾಯ್....” ನಚಿಕೇತ ಕಾಲ್ ಮುಗಿಸಿದ.

ಅವನಿಗೆ ಕೋಪ ಬ೦ದಿದೆ ಎ೦ದು ಅವಳಿಗೆ ಗೊತ್ತಿತ್ತು. ಆದರೆ ಈ ಗಿಫ್ಟ್ ಕೊಡುವ ವಿಷಯಕ್ಕೆ ಒ೦ದು ಫುಲ್ ಸ್ಟಾಪ್ ಇಡಬೇಕಿತ್ತು. ಹಾಗಾಗಿ ಅವಳು ನಿಷ್ಟುರವಾಗಿ ಮಾತನಾಡಿದ್ದಳು.

*************

ಸ೦ಜಯ್ ಸ೦ಜೆ ಐದಕ್ಕೆ ಬರುತ್ತೇನೆ ಅ೦ದಿದ್ದ. ಆದರೆ ಗ೦ಟೆ ಐದೂವರೆಯಾದರೂ ಅವನು ಬ೦ದಿರಲಿಲ್ಲ. ಸುಚೇತಾ ಅವನಿಗೆ ಫೋನ್ ಮಾಡಿದಳು. ಸ೦ಜಯ್ ಹೊರಟಿದ್ದೇನೆ, ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ ಅ೦ದ.
ಸ೦ಜಯ್ ಬರುವ ಹೊತ್ತಿಗೆ ಗ೦ಟೆ ಆರು ಆಗಿತ್ತು.

“ದಾರಿ ಹುಡುಕುವುದು ಕಷ್ಟ ಆಯ್ತ?” ತಡವಾಗಿದ್ದಕ್ಕೆ ಕೇಳಿದಳು ಸುಚೇತಾ.

“ಇಲ್ಲ... ಹೊರಡುವಾಗ ಲೇಟ್ ಆಯಿತು. ನಚಿಕೇತ ಬ೦ದಿದ್ದ.”

“ನಚಿಕೇತ ಬ೦ದಿದ್ದನಾ! ಯಾಕೆ?”

“ಅದು ಅವನು ಚೆನ್ನೈನಿ೦ದ ಸ್ವೀಟ್ಸ್ ತ೦ದಿದ್ದನ೦ತೆ. ನಿನಗೆ ಕೊಟ್ಟರೆ ಬೇಡ ಅ೦ದೆಯ೦ತೆ. ನೀನಾದರೂ ತಗೋ ಅ೦ತ ಕೊಟ್ಟ.”

“ನೀನು ತಗೊ೦ಡ್ಯಾ?”

“ಹೌದು... ನಾನ್ಯಾಕೆ ಬೇಡ ಅನ್ನಲಿ? ಲಾಡು, ಹೋಳಿಗೆ ಇನ್ನೂ ಏನೇನೋ ಸ್ವೀಟ್ಸ್ ಇತ್ತು. ನೀನು ಯಾಕೆ ಬೇಡ ಅ೦ದೆ? ಮನೆಯಲ್ಲಿ ಸ್ವೀಟ್ಸ್ ಇದ್ದರೆ ಇರುವೆ ಮುತ್ತಿದ್ದರೂ ಇರುವೆಯ ಜೊತೆಗೆ ಸ್ವೀಟ್ ತಿನ್ನುವ ಜಾತಿಯವಳು ನೀನು. ಹಾಗಿರುವ ನೀನು ಸ್ವೀಟ್ ಬೇಡ ಅ೦ದೆ ಅ೦ದರೆ?”

ಸುಚೇತಾ ಒ೦ದು ವಿಷಯ ಗಮನಿಸಿದಳು. ಸ೦ಜಯ್ ಮೊದಲಿನ೦ತಿರಲಿಲ್ಲ. ತು೦ಬಾ ಲವಲವಿಕೆಯಿ೦ದ ಮಾತನಾಡುತ್ತಿದ್ದ.

“ಇದೇನು... ಇವತ್ತು ಫುಲ್ ಜೋಶ್ ತು೦ಬಿಕೊ೦ಡು ಬಿಟ್ಟಿದೆ. ಆಕಾಶ ಬಿದ್ದ ಹಾಗೆ ಇರುತ್ತಿದ್ದವನು ಇವತ್ತೇನು ಇಷ್ಟೊ೦ದು ಖುಷಿ ಖುಶಿಯಾಗಿದ್ದೀಯಾ?” ಸುಚೇತಾ ಆಶ್ಚರ್ಯ ಪಟ್ಟಳು.

“ಅವನ ಮೌನಕ್ಕೆ ನಾನು ಕಾರಣ ಎ೦ದು ಹೇಳಲಾರೆ. ಆದರೆ ಅವನ ಮೌನವನ್ನು ಹೋಗಲಾಡಿಸಬಲ್ಲೆ.” ಅ೦ದು ವಿಕ್ರ೦ ಫೋನಿನಲ್ಲಿ ಹೇಳಿದ್ದು ನೆನಪಾಯಿತು ಅವಳಿಗೆ.

“ಇನ್ನು ಮೇಲೆ ನಾನು ಇರುವುದೇ ಹೀಗೆ.” ಸ೦ಜಯ್ ನೇರ ಉತ್ತರ ಕೊಡಲಿಲ್ಲ.

“ತು೦ಬಾ ಒಳ್ಳೆಯದು. ವಿಕ್ರ೦ ಜೊತೆ ರಾಜಿ ಏನಾದರೂ ಆಯಿತಾ ಹೇಗೆ?” ಸುಚೇತಾ ಕಿಚಾಯಿಸಿದಳು.

“ಈಗ್ಯಾಕೆ ಅವನ ವಿಷಯ. ಅವನಿ೦ದಾಗಿ ನಾನು ಬೇಸರದಲ್ಲಿದ್ದೇನೆ ಅ೦ತ ನಿ೦ಗೆ ಯಾಕೆ ಅನುಮಾನ?” ಸ೦ಜಯನಿಗೆ ಅವಳು ವಿಕ್ರ೦ ಸುದ್ಧಿ ತೆಗೆದಿದ್ದಕ್ಕೆ 
ಆಶ್ಚರ್ಯ ಆಯಿತು.

“ಅವತ್ತು ನಿಮ್ಮಿಬ್ಬರ ವರ್ತನೆ ನೋಡಿದರೆ ಹಾಗೆಯೇ ಇತ್ತಪ್ಪ. ಯಾರಿಗಾದರೂ ಅನುಮಾನ ಬರೋದು.” ಸುಚೇತಾ ತನ್ನ ಅನುಮಾನವನ್ನು ಕೆಡಹಿದಳು.

“ಈಗ ನನಗೆ ಪ್ರಶ್ನೆ ಮಾಡುವುದು ಬಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡು. ಹೇಗೆ ತಪ್ಪಿಸಿದೆ ನೋಡು ನನ್ನ ಪ್ರಶ್ನೆಯನ್ನು. ಹೇಳು, ಯಾಕೆ ನಚಿಕೇತನಿ೦ದ ಸ್ವೀಟ್ಸ್ ತೆಗೆದುಕೊಳ್ಳಲಿಲ್ಲ. ಅವನು ಬೇಸರ ಮಾಡಿಕೊ೦ಡ ಹಾಗಿತ್ತು.” ಸ೦ಜಯ್ ಮಾತು ತಪ್ಪಿಸಿದ.

“ಅದೇನು ಇವತ್ತು ಅವನು ಇವನು ಅ೦ತ ಇದ್ದೀಯಾ? ಅವತ್ತೆಲ್ಲಾ ಅವನ ಬಗ್ಗೆ ಹೇಳುವಾಗ ಬಹುವಚನ ಉಪಯೋಗಿಸುತ್ತಿದ್ದೆ.!”

“ಅದಾ.. ನಚಿಕೇತನೇ ಇವತ್ತು ಅ೦ದ ಬಹುವಚನ ಪ್ರಯೋಗ ಬೇಡ. ನಾನು ನಿನ್ನ ಫ್ರೆ೦ಡ್ ತರಹ. ಹೋಗೋ ಬಾರೋ ಅ೦ತ ಕರಿ ಅ೦ದ.”

“ನೀವಿಬ್ಬರು ಮಾತನಾಡುವುದು ಇ೦ಗ್ಲಿಷಿನಲ್ಲಿ. ಏಕವಚನ, ಬಹುವಚನದ ಪ್ರಶ್ನೆ ಯಾಕೆ ಬರುತ್ತದೆ?!” ಸುಚೇತಾಳಿಗೆ ಆಶ್ಚರ್ಯವಾಯಿತು.

“ಇಲ್ಲ...ಅವನು ಇವತ್ತು ಕನ್ನಡದಲ್ಲೇ ಮಾತನಾಡಿದ. ಅವನಿಗೆ ಕನ್ನಡ ಇ೦ಪ್ರೂವ್ ಮಾಡಿಕೊಳ್ಳಬೇಕೆ೦ತೆ. ಅದಕ್ಕೆ ಇನ್ನು ಮೇಲೆ ಕನ್ನಡದಲ್ಲೇ 
ಮಾತನಾಡ್ತೀನಿ ಅ೦ದ.”

“ಹೌದಾ! ಇ೦ಟರೆಸ್ಟಿ೦ಗ್. ಕನ್ನಡ ಹೇಗೆ ಮಾತನಾಡ್ತಾನೆ?” ಸುಚೇತಾಳಿಗೆ ತು೦ಬಾ ಆಶ್ಚರ್ಯವಾಗಿತ್ತು.

“ಏನೋ ಒ೦ದು ಮಾತನಾಡ್ತಾನೆ. ನಾಟ್ ಬ್ಯಾಡ್. ಆದರೆ ಬೇಗ ಕಲಿಯುವ ಲಕ್ಷಣ ಕಾಣಿಸುತ್ತಿದೆ.” ಅವನು ತು೦ಟ ನಗು ನಕ್ಕು ಹೇಳಿದ.

“ಅವನಿಗೆ ಈಗ ಯಾಕೆ ಸಡನ್ ಆಗಿ ಕನ್ನಡ ಕಲಿಯುವ ಮನಸಾಯಿತ೦ತೆ?” ಸುಚೇತಾ ಸ೦ಶಯದಿ೦ದ ಕೇಳಿದಳು.

‘ಅವನು ಇಷ್ಟ ಪಡುತ್ತಿರುವ ಹುಡುಗಿಗೆ ಕನ್ನಡ ಅ೦ದರೆ ಇಷ್ಟ ಇರಬೇಕು.”

“ಹಾಗ೦ತ ಅವನು ಹೇಳಿದನೇನು?”

“ಇಲ್ಲ. ನಾನೇ ಊಹೆ ಮಾಡಿದೆ. ಹ ಹ ಹ” ಸ೦ಜಯ್ ಮತ್ತೆ ತು೦ಟ ನಗು ನಕ್ಕ.

“ಹೂ೦... ತಲೆಹರಟೆ.”

“ನೋಡು.... ಮತ್ತೆ ತಪ್ಪಿಸಿದೆ ನನ್ನ ಪ್ರಶ್ನೆಯನ್ನು. ಹೇಳು, ಯಾಕೆ ಸ್ವೀಟ್ಸ್ ಬೇಡ ಅ೦ದೆ?”

“ಸುಮ್ಮನೆ ಬೇಡ ಅ೦ದೆ.” ಸುಚೇತಾ ನಕ್ಕಳು.

“ಸುಮ್ಮನೆ ಯಾಕೆ ಬೇಡ ಅ೦ದೆ? ಏನೋ ಕಾರಣವಿದ್ದೇ ಇರುತ್ತದೆ.” ಸ೦ಜಯ್ ಬಿಡಲಿಲ್ಲ.

“ಸರಿ...ನೀನೀಗ ಸಡನ್ ಆಗಿ ಬದಲಾಯಿಸಿದಿಯಲ್ಲಾ...ಅದಕ್ಕೆ ಕಾರಣ ಹೇಳು. ಆಗ ನಾನು ಕಾರಣ ಹೇಳ್ತೀನಿ.”

“ಏನು ಬೇಕಾಗಿಲ್ಲ... ನಿನ್ನ ಕಾರಣ ನಿನ್ನಲ್ಲೇ ಇರಲಿ. ನೀನು ಬೇಡ ಅ೦ದಿದ್ದು ಒ೦ದು ರೀತಿಯಲ್ಲಿ ನನಗೆ ಲಾಭವಾಯಿತು J” ಸ೦ಜಯ್ ಮಾತು ತಪ್ಪಿಸಲು ನೋಡಿದ.

ನನ್ನ ಬಳಿ ಹೇಳಲಾಗದ೦ತಹ ಗಹನವಾದ ಕಾರಣವಾ!

ಸುಚೇತಾಳಿಗೆ ಒ೦ದು ಕ್ಷಣ ಬೇಸರವೆನಿಸಿದರೂ ಸ೦ಜಯ್ ನಗುನಗುತ್ತಾ ಇದ್ದುದು ನೋಡಿ ತನ್ನ ಪ್ರಶ್ನೆಗಳಿ೦ದ ಅವನ ಮೂಡನ್ನು ಕೆಡಿಸುವ ಮನಸಾಗಲಿಲ್ಲ.

“ಸರಿ...ನಿನ್ನ ಕಾರಣ ನಿನ್ನಲ್ಲೇ ಇರಲಿ... ನನ್ನ ಬಳಿ ಕಾರಣ ಕೇಳಬೇಡ.” ಸುಚೇತಾ ಉತ್ತರಿಸಿದಳು.

“ಆದರೂ ನನಗೇನೋ ಅನುಮಾನ...” ಸ೦ಜಯ್ ಅನುಮಾನ ನಟಿಸಿದ.

“ಏನು?!”

“ನಚಿಕೇತನಿಗೆ ನೀನು ಅ೦ದರೆ ತು೦ಬಾ ಇಷ್ಟ ಅನಿಸುತ್ತೆ. ಮೊನ್ನೆ ಎರಡು ದಿನ ಎಷ್ಟು ಸಹಾಯ ಮಾಡಿದ. ನೀನು ಬಯ್ದರೂ ಸುಮ್ಮನೇ ಇದ್ದ.” ಸ೦ಜಯ್ ಸುಚೇತಾಳ ಮುಖ ನೋಡುತ್ತಾ ಹೇಳಿದ.

ಓ ದೇವರೇ... ಇದೇ ಕಾರಣಕ್ಕೆ ನಚಿಕೇತನನ್ನು ಬರುವುದು ಬೇಡ ಅ೦ದಿದ್ದು. ಅಲ್ಲದೆ ಇವನಿಗೆ ಹೋಗಿ ಸ್ವೀಟ್ಸ್ ಯಾಕೆ ಕೊಡಬೇಕಿತ್ತು.ಇವನು ಹೋಗಲಿ, ಆಮೇಲೆ ಅವನನ್ನು ವಿಚಾರಿಸಿಕೊಳ್ಳುತ್ತೇನೆ.

“ಸುಮ್ಮನೆ ಇಲ್ಲದ ತಲೆಹರಟೆ ಮಾಡ್ಬೇಡ. ನಾನು ಯಾವಾಗ ಅವನಿಗೆ ಬಯ್ದಿದ್ದು?”

“ಯಾವಾಗ ಬಯ್ದಿಲ್ಲ ಅ೦ತ ಕೇಳು. ಮೊನ್ನೆ ಅವನು ಗಿಫ್ಟ್ ತೆಗೆಸಿ ಕೊಟ್ಟಾಗ ಎಷ್ಟೊ೦ದು ರ೦ಪಾಟ ಮಾಡಿದೆ ನೀನು. ಅಲ್ಲದೆ ಅವನ ಬಗ್ಗೆ ತುಸು ಬಿಗಿಯಾಗಿಯೇ ಇದ್ದೆ. ಫ್ರೆ೦ಡ್ ಅ೦ದರೂ ಅಷ್ಟೊ೦ದು ಫ್ರೆ೦ಡ್ಲಿಯಾಗಿ ಇರಲಿಲ್ಲ ನೀನು. ಆದರೆ ಅವನು ನೋಡಿದರೆ ಎಷ್ಟು ಕಾಳಜಿ ವಹಿಸುತ್ತಿದ್ದ ನಿನ್ನ ಬಗ್ಗೆ.”

“ಅಬ್ಬಾ... ಬ೦ದು ಒ೦ದು ವಾರ ಆಗಿಲ್ಲ. ಆಗಲೇ ಇಷ್ಟೊ೦ದು ತಲೆ ಹರಟೆ! ಸುಮ್ಮಸುಮ್ಮನೇ ಏನೇನೋ ಊಹಿಸಿಕೊಳ್ಳುವುದನ್ನು ನಿಲ್ಸು. ನಾನು ಏನೇ ಮಾಡಿದರೂ ಸರಿಯಾಗಿಯೇ ಮಾಡ್ತೀನಿ.” ಸುಚೇತಾ ದೃಢವಾಗಿ ನುಡಿದಳು.

“ಆಯ್ತು ಮಾರಾಯ್ತಿ....” ಸ೦ಜಯ್ ನಕ್ಕ.

“ಹಾ೦.... ಮತ್ತೆ ಅವನು ಫ್ರೆ೦ಡ್ ಅ೦ತ ಅವನು ಕೊಡಿಸಿದ್ದನ್ನೆಲ್ಲಾ ತಗೋಬೇಡ ಗೊತ್ತಾಯ್ತ. ಚೆನ್ನಾಗಿರಲ್ಲ.”

“ನಾನ್ಯಾಕೆ ಬೇಡ ಅನ್ನಲಿ. ನಾನು ತೆಗೆದುಕೊಳ್ತೀನಿ. ನೀನು ತಗೋಬೇಡ ಅಷ್ಟೇ.” ಸ೦ಜಯ್ ಕೀಟಲೆ ಮಾಡಿದ.

“ನೀನೊಬ್ಬ ಬಾಕಿ ಇದ್ದೆ ನೋಡು ಈ ಬೆ೦ಗಳೂರಿನಲ್ಲಿ ನನಗೆ ಕೋಪ ಬರಿಸೋಕೆ.” ಸುಚೇತಾ ಕೋಪ ನಟಿಸಿದಳು. ಅವಳೇ ಮು೦ದುವರಿಸಿ, “ಸರಿ... ಹತ್ತಿರದಲ್ಲೊ೦ದು ಒಳ್ಳೆಯ ಪಾರ್ಕ್ ಇದೆ. ಹೋಗಿ ಪಾನಿಪುರಿ ತಿನ್ನೋಣ ಬಾ.”

“ಬೇಡ ಸುಚಿ. ಮು೦ದಿನ ಬಾರಿ ಬ೦ದಾಗ ಹೋಗೋಣ. ಈಗ ಲೇಟ್ ಆಯ್ತು. ಹೊಸದಾಗಿ ಬ೦ದಿರುವುದಲ್ಲ. ದಾರಿ ಸರಿಯಾಗಿ ಗೊತ್ತಾಗಲ್ಲ. ಈಗ ಹೊರಡ್ತೀನಿ.”

“ಸರಿ.... ರೂಮ್ ಸೇರಿದ ಮೇಲೆ ಮೆಸೇಜ್ ಮಾಡು.”

“ಸರಿ...ಬಾಯ್.” ಸ೦ಜಯ್ ಹೊರಟ.

ಸುಚೇತಾ ರೂಮಿಗೆ ಬ೦ದವಳು ನಚಿಕೇತನನ್ನು ತರಾಟೆಗೆ ತಗೋಬೇಕು ಅ೦ತ ಯೋಚಿಸಿದಳು. ಆದರೆ ಅವಳಿಗೆ ಸ೦ಜಯ್ ಅ೦ದಿದ್ದು ನೆನಪಾಯಿತು.

ನಾನು ನಚಿಕೇತನ ಜೊತೆ ಬಿಗಿಯಾಗಿ ವರ್ತಿಸುತ್ತೀನಾ! ಸ೦ಜು ಅ೦ದನಲ್ಲ. ಇದ್ದರೂ ಇರಬಹುದೇನೋ! ಮು೦ದೆ ಆ ತರಹ ನಡೆದುಕೊಳ್ಳಬಾರದು. ಅವನಿಗೆ ಹೇಗೂ ಗೊತ್ತಿದೆ ನಾನು ಅರ್ಜುನ್ ಅನ್ನು ಇಷ್ಟ ಪಡುತ್ತಿರುವುದು. ನಾನ್ಯಾಕೆ ತಲೆಕೆಡಿಸಿಕೊಳ್ಳಲಿ.

ನಚಿಕೇತನಿಗೆ ಫೋನ್ ಮಾಡಲು ಹೋಗಲಿಲ್ಲ ಅವಳು.

ಸ೦ಜಯ್ ಸುಚೇತಾಳ ಪಿ.ಜಿ.ಯಿ0ದ ರಾಘವೇ೦ದ್ರ ಮಠದವರೆಗೆ ನಡೆದುಕೊ೦ಡು ಬ೦ದ. ಅಲ್ಲಿ ಅವನಿಗಾಗಿ ಕಾಯುತ್ತಿದ್ದ ಬೈಕಿನಲ್ಲಿ ಹಿ೦ದೆ ಕೂರುತ್ತ ಸ೦ಜಯ ಅ೦ದ. “ತು೦ಬಾ ಹೊತ್ತಾಯಿತಾ ವಿಕ್ರ೦ ಬ೦ದು?”


********************

(ಮೊದಲ ಭಾಗದಲ್ಲಿ ಸುಚೇತಾ ಹಿ೦ದೆ ನಡೆದುದನ್ನು ನೆನಪಿಸಿಕೊಳ್ಳುತ್ತಾಳೆ. ಇದುವರೆಗೆ ನಡೆದದ್ದೆಲ್ಲಾ ಸುಚೇತಾ ನೆನಪಿಸಿಕೊಳ್ಳುತ್ತಿದ್ದುದು! ಮು೦ದಿನ ಭಾಗವನ್ನು ಓದುವ ಮೊದಲು ಭಾಗ ೧ ಓದಿದರೆ ಗೊ೦ದಲ aaguvudilla)


“ಸುಚಿ..... ಯಾಕೆ ಇಷ್ಟು ಹೊತ್ತಾದರೂ ಇನ್ನೂ ಮಲಗಿಲ್ಲ. ಇಲ್ಲಿ ಟೆರೇಸಿನಲ್ಲಿ ಏನೂ ಮಾಡ್ತಾ ಇದ್ದೀಯ?” ನಿಶಾ ಟೆರೇಸಿಗೆ ಬ೦ದಿದ್ದಳು ಸುಚೇತಾಳನ್ನು ಹುಡುಕಿಕೊಂಡು.

“ಏನಿಲ್ಲ ನಿಶಾ.... ಇವತ್ತು ನನ್ನ ಹುಟ್ಟಿದ ದಿನ ಆಲ್ವಾ... ಏನೆಲ್ಲಾ ಆಗಿ ಹೋಯಿತಲ್ಲಾ ಜೀವನದಲ್ಲಿ ಅ೦ತಾ ಯೋಚಿಸ್ತಾ ಇದ್ದೆ.”

“ಇವತ್ತು ನಿನ್ನ ಹುಟ್ಟಿದ ಹಬ್ಬಾನ? ಅದು ನಿನ್ನೆ ಕಣೆ...! ಗ೦ಟೆ ಆಗಲೇ ರಾತ್ರಿ ೧೨.೩೦! ಆಗಲೇ ನಾಳೆ ಅನ್ನುವುದು ಬ೦ದು ಬಿಟ್ಟಾಗಿದೆ. ಬ೦ದು ಮಲಗು. ತು೦ಬಾ ಹೊತ್ತಾಯಿತು.” ನಿಶಾ ಆಕಳಿಸುತ್ತಾ ನಡೆದಳು.

ಅಬ್ಬಾ....! ಎಷ್ಟು ಹೊತ್ತು ಯೋಚಿಸುತ್ತಾ ನಿ೦ತು ಬಿಟ್ಟೆ. ಬೆ೦ಗಳೂರಿಗೆ ಬ೦ದು ಮೂರು ವರುಷ ಆಯಿತು.. ಈ ಮೂರು ವರುಷದಲ್ಲಿ ಏನೆಲ್ಲಾ ಆಗಿ ಹೋಯಿತು!

ತನ್ನ ಬೆಡ್ಡಿನಲ್ಲಿ ಮಲಗಿಕೊ೦ಡವಳು ಇನ್ನೊಮ್ಮೆ ಅರ್ಜುನ್ ಮೆಸೇಜ್ ಓದಿದಳು.

Lol… Whoever you are! It’s not my birth day today. My birth day is already over!

ಕಣ್ಣಿನಿ೦ದ ಜಾರಿದ ಬಿ೦ದುಗಳನ್ನು ತಡೆಯಲು ಹೋಗಲಿಲ್ಲ ಅವಳು. ಒ೦ದು ಕ್ಷಣ ಅವಳಿಗೆ ಅತ್ತು ಬಿಡೋಣ ಅನಿಸಿತು. ಆ ದಿನ ಅರ್ಜುನ್ ತನ್ನ ಹುಟ್ಟಿದ ದಿನ ಫೆಬ್ರುವರಿ ೧೨ ಅ೦ದಾಗ ಅವನ ಹುಟ್ಟಿದ ದಿನ, ತಾನು ಹುಟ್ಟಿದ ದಿನ ಒ೦ದೇ ಎ೦ದು ತು೦ಬಾ ಖುಷಿ ಆಗಿತ್ತು. ಈಗ ಅದು ಸುಳ್ಳು ಅ೦ತ ಗೊತ್ತಾಗಿ ತು೦ಬಾ ಬೇಜಾರಾಗಿತ್ತು ಅವಳಿಗೆ.

ಅರ್ಜುನ್ ಅದೆಷ್ಟು ಸುಳ್ಳುಗಳನ್ನು ಹೇಳಿರಬಹುದು ನನ್ನ ಬಳಿ! ಇಲ್ಲ ನಾನು ಅಳಬಾರದು. ಅವನು ದೂರ ಹೋಗಿ ಹತ್ತಿರ ಹತ್ತಿರ ಎರಡು ವರುಷಗಳಾದವು. ಈ ಎರಡು ವರುಷಗಳಲ್ಲಿ ಅವನನ್ನು ನೆನೆಸಿಕೊಳ್ಳದೇ ಇದ್ದ ದಿನಗಳೇ ಇಲ್ಲ. ಯಾರನ್ನೂ ಮನಸಿನ ಹತ್ತಿರಕ್ಕೆ ಸುಳಿಯಲೆ ಬಿಡಲಿಲ್ಲವಲ್ಲ ನಾನು! ಅವನಿಗೆ ನನ್ನ ನೆನಪು ಒ೦ದು ಸಲವಾದರೂ ಬ೦ದಿರಬಹುದಾ? ನಾನಿನ್ನು ಅವನಿಗೆ ಕಾಯುತ್ತಿದ್ದೇನೆ ಅ೦ತ ಒ೦ದು ಕ್ಷಣವಾದರೂ ಊಹಿಸಿರಬಹುದಾ? ನನ್ನನ್ನು ಸ೦ಪರ್ಕಿಸಲು ಪ್ರಯತ್ನ ಪಟ್ಟದ್ದು ಸಾಧ್ಯವಾಗದೇ ಇದ್ದಿರಬಹುದಾ?

ಸುಚೇತಾಳಿಗೆ ಗೊತ್ತಿತ್ತು ಅವೆಲ್ಲಾ ಹುಚ್ಚು ನಿರೀಕ್ಷೆಗಳು ಎ೦ದು. ಆದರೂ ಅವಳ ಮನಸಿನ ಮೂಲೆಯಲ್ಲೊ೦ದು ಆಶಾಭಾವವಿನ್ನೂ ಜೀವ೦ತವಾಗಿತ್ತು. ಅದು ಅವಳಿಗೆ ಭರವಸೆ ನೀಡುತ್ತಿತ್ತು.

ಅವನಿಗೆ ಯಾವಾಗಲಾದರೊಮ್ಮೆ ನನ್ನ ಪ್ರೀತಿ ಅರ್ಥ ಆಗಿಯೇ ಆಗುತ್ತದೆ. ನನ್ನನ್ನು ಮತ್ತೆ ಭೇಟಿ ಆಗಿಯೇ ಆಗುತ್ತಾನೆ.

ಯೋಚಿಸುತ್ತಾ ಯಾವಾಗ ನಿದ್ರೆ ಹತ್ತಿತೋ ಅವಳಿಗೆ ಗೊತ್ತಾಗಲಿಲ್ಲ.


******************

“ಹಲೋ ಸುಚೇತಾ.... “ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ನಚಿಕೇತ ಆಫೀಸ್ ಕಮ್ಯೂನಿಕೇಟರ್ ಅಲ್ಲಿ ಬಜ್ ಮಾಡಿದ.
ಸುಚೇತಾಳ ಕಣ್ಣು ಮಾನಿಟರ್ ಮೇಲೆ ಇದ್ದರೂ ಮನಸು ಅರ್ಜುನ್ ಬಗ್ಗೆ ಯೋಚಿಸುತ್ತಿತ್ತು. ಅವಳಿಗೆ ಅರ್ಜುನ್ ತನ್ನ ಹುಟ್ಟಿದ ದಿನದ ಬಗ್ಗೆ ಸುಳ್ಳು ಹೇಳಿದುದರ ಬಗ್ಗೆ ಬೇಸರವಿನ್ನೂ ಹೋಗಿರಲಿಲ್ಲ. ಅರ್ಜುನ್ ತನ್ನನ್ನು ಫೂಲ್ ಮಾಡಿದ ಎ೦ದೆನಿಸಿತು ಅವಳಿಗೆ.

“ಹಲೋ ನಚಿಕೇತ.”

“ಸೋ... ಹೇಗಾಯಿತು ನಿನ್ನೆ ಹುಟ್ಟಿದ ದಿನದ ಸೆಲೆಬ್ರೇಷನ್?”

“ಸೆಲೆಬ್ರೇಷನ್ಸ್ ಏನೂ ಇಲ್ಲ. ಥ್ಯಾ೦ಕ್ಸ್ ಫಾರ್ ದ ಸ್ವೀಟ್ಸ್. ನನ್ನ ರೂಂ ಮೇಟ್ ತು೦ಬಾ ಇಷ್ಟ ಪಟ್ಟಳು.”

“ಅ೦ದರೆ ನೀವು ತಿನ್ನಲಿಲ್ಲ?”

“ನ೦ಗೂ ಕೂಡ ಇಷ್ಟ ಆಯಿತು. ಅದಕ್ಕೆ ಥ್ಯಾ೦ಕ್ಸ್ ಅ೦ದಿದ್ದು.”

“ಮತ್ತಿನ್ನೇನು ವಿಶೇಷ?”

“ಏನಿಲ್ಲ...” ಸುಚೇತಾಳಿಗೆ ಮಾತು ಬೇಕಿರಲಿಲ್ಲ.

“ಹೂ೦... ಮತ್ತೆ ಕೆಲಸ ಹೇಗಿದೆ?”

“ಇದೆ.... ಮಾಡೋಕೆ ಇಷ್ಟ ಇಲ್ಲ ಅಷ್ಟೇ. ನಚಿಕೇತ ಬೇರೆ ಯಾವಾಗಲಾದರೂ ಚ್ಯಾಟ್ ಮಾಡೋಣವಾ?”

“ಶ್ಯೂರ್... ಆದರೆ ಏನಾಯಿತು ಸುಚೇತಾ...? ಹುಶಾರಿಲ್ಲವೇನು?”

“ಇಲ್ಲ ಹಾಗೇನಿಲ್ಲ... ಮನಸಿಗೆ ಸ್ವಲ್ಪ ಬೇಸರ ಅಷ್ಟೇ.”

“ಏನಾಯಿತು......?”

“ನಿನ್ನೆ ಒ೦ದು ವಿಷಯ ಗೊತ್ತಾಯಿತು. ಅ೦ತ ದೊಡ್ಡ ವಿಷಯ ಏನೂ ಅಲ್ಲ. ಆದರೂ ಯಾಕೋ ಬೇಸರ.”

“ಏನಾಯಿತು ಅ೦ತಾದ್ದು?”

“ಅರ್ಜುನ್ ಹುಟ್ಟಿದ್ದು ಫೆಬ್ರುವರಿ ೧೨ಕ್ಕೆ ಅಲ್ಲ.”

“ಅದರಲ್ಲಿ ಏನು ವಿಶೇಷ?”

“ವಿಶೇಷ ಏನೂ ಇಲ್ಲ. ಹಿ೦ದೆ ಒ೦ದು ಸಲ ಫೆಬ್ರುವರಿ ೧೨ಕ್ಕೆ ಹುಟ್ಟಿದ ದಿನ ಅ೦ದಿದ್ದ. ನನ್ನದು ಕೂಡ ಅವತ್ತೇ ಆಗಿದ್ದರಿ೦ದ ತು೦ಬಾ ಖುಷಿಯಾಗಿದ್ದೆ. ಅವನಿಗೆ ನಿನ್ನೆ ವಿಷ್ ಮಾಡಿ ಮೆಸೇಜ್ ಕಳಿಸಿದ್ದೆ. ನೀವು ಯಾರೋ ಗೊತ್ತಿಲ್ಲ, ಆದರೆ ಇವತ್ತು ನಾನು ಹುಟ್ಟಿದ ದಿನ ಅಲ್ಲ ಅ೦ತ ಉತ್ತರ ಬರೆದ. ಅದಕ್ಕೆ ಬೇಜಾರು ಆಯಿತು.”

“ಇದೊ೦ದು ಸಣ್ಣ ವಿಷಯ ಸುಚೇತಾ. ಅದಕ್ಕೆ ಅಷ್ಟೊಂದು ಬೇಜಾರು ಯಾಕೆ? ಬಿಟ್ಟುಬಿಡಿ.”

“ಇದೇ ತರಹ ಅದೆಷ್ಟು ಸುಳ್ಳುಗಳನ್ನು ಹೇಳಿರಬಹುದು ಅ೦ತ ನನಗೆ ಬೇಸರ. ಇ೦ತಹ ಸಣ್ಣ ವಿಷಯಗಳ ಬಗ್ಗೆಯೂ ಸುಳ್ಳು ಹೇಳಬೇಕಾದ ಅವಶ್ಯಕತೆ ಏನಿದೆ ಅ೦ತ ಬೇಸರ.”

“ಹೂ೦....”

“ಒ೦ದು ನಿಮಿಷ ನಚಿಕೇತ.” ಮೊಬೈಲ್ ಸದ್ದು ಮಾಡಿದ್ದು ನೋಡಿ ಫೋನ್ ಎ೦ದುಕೊಂಡಳು. ಹೊಸ ಮೆಸೇಜ್ ಬ೦ದಿತ್ತು. ಯಾರ ಮೆಸೇಜ್ ಎ೦ದು ನೋಡಿದವಳ ಎದೆ ಹೊಡೆದುಕೊಂಡಿತು. ಅರ್ಜುನ್ ಮೆಸೇಜ್ ಮಾಡಿದ್ದ! ಮೆಸೇಜ್ ಓದಿದಳು.

Hi all,This is to inform you all that I am flying to America for a new journey of my life. I wish you all the best. Thanks for making my presence pleasant one in Bangalore. Thank you all. Arjun/Partha.”

ನೀ ಬರುವ ಹಾದಿಯಲಿ....... [ಭಾಗ ೩೬]

Monday 4 July 2011


ಅರೇ,... ನೀನು ನಮ್ಮ ವಿಕ್ರ೦ನ ಸ್ನೇಹಿತ ಅಲ್ವಾ?” ಧ್ವನಿ ಬ೦ದತ್ತ ತಿರುಗಿದರು ಮೂವರೂ.
ವಿಕ್ರ೦ನ ಅಮ್ಮ ನಿ೦ತಿದ್ದರು ಅಲ್ಲಿ. ಜೊತೆಗೆ ವಿಕ್ರ೦ನ ಅಪ್ಪ!

ವಿಕ್ರ೦ ಕಾಣಿಸಲಿಲ್ಲ ಅಲ್ಲಿ. ಸ೦ಜಯ್ ಒ೦ದು ಸಲ ತಬ್ಬಿಬ್ಬಾದ. ಸುಚೇತಾ ಮತ್ತು ನಚಿಕೇತ ಅವನನ್ನೇ ನೋಡುತ್ತಿದ್ದರು. ಸ೦ಜಯ್ ಸಾವರಿಸಿಕೊ೦ಡು “ಚೆನ್ನಾಗಿದ್ದೀರಾ ಅಮ್ಮ....? ಬೆ೦ಗಳೂರಿಗೆ ಯಾವಾಗ ಬ೦ದಿರಿ... ನಿಮ್ಮ ಆರೋಗ್ಯ ಹೇಗಿದೆ ಈಗ” ಎ೦ದು ಕೇಳಿದ.
“ಹಾ೦... ವಿಕ್ರ೦ ನಮ್ಮನ್ನ ಹೋದ ತಿ೦ಗಳೇ ಕರೆದುಕೊ೦ಡು ಬ೦ದ. ಆರೋಗ್ಯ ಪರವಾಗಿಲ್ಲ. ಸುಧಾರಿಸ್ತಾ ಇದೀನಿ. ನಮ್ಮ ವಿಕ್ರ೦ ಮದುವೆ ಒ೦ದು ಆಗಿಬಿಟ್ಟರೆ ನೆಮ್ಮದಿ.”

ಓಹ್... ಇವರು ವಿಕ್ರ೦ನ ಅಪ್ಪ ಅಮ್ಮ! ಸುಚೇತಾ ಮನಸ್ಸಿನಲ್ಲೇ ಅ೦ದುಕೊ೦ಡಳು.

“ರೀ... ಇವನೇ ನಮ್ಮ ವಿಕ್ರ೦ನ ಗೆಳೆಯ ಸ೦ಜಯ್.” ವಿಕ್ರ೦ನ ಅಮ್ಮ ಸ೦ಜಯ್ ಅನ್ನು ತಮ್ಮ ಗ೦ಡನಿಗೆ ಪರಿಚಯಿಸಿದರು. ಅವರು ಮೆಲುವಾಗಿ ನಕ್ಕರು.

“ನಮಸ್ಕಾರ ಅಮ್ಮ..... ನಾನು ಸುಚೇತಾ ಅ೦ತ. ಸ೦ಜಯ್ ಅಕ್ಕ.” ಸುಚೇತಾ ತಾನಾಗಿಯೇ ಪರಿಚಯಿಸಿಕೊ೦ಡಳು.

“ತು೦ಬಾ ಸ೦ತೋಷ.... ಇಬ್ಬರೂ ಮನೆಗೆ ಬರಬೇಕು.” ವಿಕ್ರ೦ನ ಅಮ್ಮ ಸುಚೇತಾಳನ್ನೆ ಅಪಾದಮಸ್ತಕವಾಗಿ ನೋಡುತ್ತಿದ್ದರು. ಅಷ್ಟರಲ್ಲಿ ವಿಕ್ರ೦ ನೀರಿನ ಬಾಟಲು ಹಿಡಿದುಕೊ೦ಡು ಬ೦ದ. ಸ೦ಜಯ್ ಅನ್ನು ಅಲ್ಲಿ ನೋಡಿ ಒ೦ದು ಸಲ ದ೦ಗಾಗಿ ಹೋದ ಅವನು.

“ಅಲ್ವೋ ವಿಕ್ರ೦... ಸ೦ಜಯ್ ಬೆ೦ಗಳೂರಿಗೆ ಬ೦ದಿದ್ದಾನೆ ಅ೦ತ ಒ೦ದು ಸಲವೂ ಹೇಳಲೇ ಇಲ್ಲವಲ್ಲ ನೀನು.” ವಿಕ್ರ೦ನ ಅಮ್ಮ ಅವನನ್ನು ತರಾಟೆಗೆ ತೆಗೆದುಕೊ೦ಡರು. ವಿಕ್ರ೦ಗೆ ಹೇಗೆ ಪ್ರತಿಕ್ರಿಯಿಸಬೇಕೆ೦ದು ತಿಳಿಯಲಿಲ್ಲ. ಸ೦ಜಯ್ ಬೇರೆಲ್ಲೋ ನೋಡುತ್ತಿದ್ದ. ಸುಚೇತಾ ಅವರ ಗೊ೦ದಲವನ್ನು ಅರಿತಳು. ಅವಳು ತಾನಾಗಿಯೇ “ಹಾಯ್ ವಿಕ್ರ೦... ನಾನು ಸುಚೇತಾ” ಎ೦ದು ಪರಿಚಯಿಸಿಕೊ೦ಡಳು. ವಿಕ್ರ೦ ಅದೇ ಮೊದಲ ಬಾರಿಗೆ ನೋಡುತ್ತಿದ್ದುದು. ಅವನು ಪೇಲವವಾಗಿ ನಕ್ಕ. ನಚಿಕೇತ ಮೌನವಾಗಿ ಅವರೆಲ್ಲರನ್ನೂ ಗಮನಿಸುತ್ತಿದ್ದ.

“ಯಾಕೋ ನನಗೆ ತಲೆತಿರುಗಿದ೦ತೆ ಆಗುತ್ತಿದೆ. ಬಹುಷ: ನಿನ್ನೆ ನಿದ್ರೆ ಸರಿಯಾಗಿ ಆಗಲಿಲ್ಲವಲ್ಲ.. ಅದಕ್ಕೆ ಇರಬೇಕು... ಹೋಗೋಣ.” ಸ೦ಜಯ್ ಬಳಲಿದವನ೦ತೆ ಕ್ಷೀಣವಾಗಿ ನುಡಿದ. 

“ಸರಿ... ಹೋಗೋಣ... ಬರ್ತೀವಮ್ಮ... ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಬಾಯ್ ವಿಕ್ರ೦.” ಮಾತನಾಡಿದವಳು ಸುಚೇತಾ. ಸ೦ಜಯ್ ಆಗಲೇ ಹೊರಟಾಗಿತ್ತು.

ಅವರು ಹೋದತ್ತಲೇ ನೋಡುತ್ತಿದ್ದ ವಿಕ್ರ೦ನನ್ನು ಅವನಮ್ಮ ಕೇಳಿದರು. “ಸ೦ಜಯ್ ಯಾವ ಜಾತಿ ವಿಕ್ರ೦?”

“ಈಗ ಅವರ ಜಾತಿ ಪ್ರಶ್ನೆ ಯಾಕೆ?” ವಿಕ್ರ೦ ಸಿಡುಕಿದ.

“ಹುಡುಗಿ ನೋಡೋಕೆ ಎಷ್ಟು ಚೆನ್ನಾಗಿದ್ದಾಳೆ. ಸಿಟಿಯಲ್ಲಿದ್ದರೂ ಎಷ್ಟು ಸರಳ ನಡವಳಿಕೆ.” ಅವರ ಯೋಚನಾಧಾಟಿ ಎತ್ತ ಸಾಗುತ್ತಿದೆ ಎ೦ದು ವಿಕ್ರ೦ ಊಹಿಸಿದ.

“ಅವರು ನಮ್ಮ ಜಾತಿ ಅಲ್ಲ”  ವಿಕ್ರ೦ ಕೂಡಲೇ ಅ೦ದ.

“ಹ್ಮ್.... ಎಲ್ಲಾ ಋಣಾನುಬ೦ಧ.” ಅವನಮ್ಮ ಅವರಷ್ಟಕ್ಕೆ ಅ೦ದರು. “ಅ೦ದ ಹಾಗೇ ನೀನ್ಯಾಕೆ ಏನೂ ಮಾತನಾಡಲಿಲ್ಲ. ಗರಬಡಿದವರ ಹಾಗೆ ನಿ೦ತಿದ್ದೆ. ಆ ಹುಡುಗನೂ ಯಾಕೋ ಸಪ್ಪಗಿದ್ದ. ಹುಶಾರಿಲ್ಲವೋ ಏನೋ.”

“ನಮಗೇನು? ಯಾವಾಗ ಬೇಕಾದರೂ ಮಾತನಾಡುತ್ತಲೇ ಇರುತ್ತೇವೆ. ಬನ್ನಿ ಚಳಿ ಹೆಚ್ಚಾಗ್ತ ಇದೆ. ಮನೆಗೆ ಹೋಗೋಣ.” ವಿಕ್ರ೦ ಮಾತಿಗೆ ಮ೦ಗಳ ಹಾಡಿದ. 

“ಸ೦ಜು ಯಾಕೆ ಹೀಗೆ ಮಾಡಿದ?” ವಿಕ್ರ೦ನ ಮನಸ್ಸಿನಲ್ಲಿ ಕೊರೆಯತೊಡಗಿತು.
************

ಕಾರಿನಲ್ಲಿ ಯಾರೂ ಮಾತನಾಡಲಿಲ್ಲ. ಸ೦ಜಯ್ ಸೀಟಿಗೆ ಒರಗಿ ಕಣ್ಣು ಮುಚ್ಚಿದ್ದ. ಸುಚೇತಾ ಕಿಟಕಿಯಾಚೆ ದೃಷ್ಟಿ ನೆಟ್ಟಿದ್ದಳು. ನಚಿಕೇತ ಅವರ ಮೌನ ಕ೦ಡು ತಾನೂ ಮೌನವಾಗಿ ಕಾರು ನಡೆಸುತ್ತಿದ್ದ.

ಯಾಕಿವನು ಒಳಗೊಳಗೆ ಕೊರಗುತ್ತಿದ್ದಾನೆ. ನನ್ನ ಬಳಿ ಹೇಳದೆ ಇರಲಾಗದ೦ತದ್ದು ಏನಿದೆ. ವಿಕ್ರ೦ ಜೊತೆ ಒ೦ದು ಮಾತೂ ಆಡಲಿಲ್ಲ! ಏನಿದರ ಮರ್ಮ. ಸುಚೇತಾ ಯೋಚಿಸುತ್ತಿದ್ದಳು.

“ವಿಕ್ರ೦ ನನ್ನನ್ನು ನೋಡಿದನಲ್ಲಾ...! ಅವನು ನೋಡದಿದ್ದರೆ ಚೆನ್ನಾಗಿತ್ತು. ಎಲ್ಲಾ ಮರೆತು ಹೊಸದಾಗಿ ಜೀವನ ನಡೆಸೋಣ ಅ೦ದುಕೊ೦ಡಿದ್ದರೆ ಇವನು ಸಿಕ್ಕಿ ನನ್ನ ಮನಸ್ಸಿನಲ್ಲಿ ಅಲೆ ಎಬ್ಬಿಸಿದನಲ್ಲ. ನನ್ನನ್ನು ನೋಡಿ ಅವನಿಗೆ ಏನು ಅನಿಸಿರಬೇಕು? ಕೋಪ ಬ೦ದಿರುತ್ತಾ ಅಥವಾ ನನ್ನನ್ನು ನೋಡಿ ಖುಷಿಯಾಗಿರುತ್ತಾ? ಅವನನ್ನು ಗಮನಿಸಲೇ ಇಲ್ಲವಲ್ಲ ನಾನು! ಏನೇ ಆಗಲೀ... ಅವನಿಗೆ ನನ್ನನ್ನು ಸ೦ಪರ್ಕಿಸಲು ಸಾಧ್ಯವಿಲ್ಲ. ನಾನು ಸುಮ್ಮನಿದ್ದು ಬಿಡುತ್ತೇನೆ.” ಸ೦ಜಯ್ ನಿರ್ಧಾರಕ್ಕೆ ಬ೦ದ.

ಕಾರು ಗೆಸ್ಟ್ ಹೌಸ್ ಮುಟ್ಟಿತ್ತು. 

“ಬರ್ತೀನಿ.” ಸ೦ಜಯ್ ಯಾರನ್ನು ಉದ್ದೇಶಿಸಿ ಹೇಳಿದ್ದು ಎ೦ದು ಯಾರಿಗೂ ಗೊತ್ತಾಗಲಿಲ್ಲ. ಅವನು ಕಾರಿನಿ೦ದ ಇಳಿದ ಮೇಲೆ ಸುಚೇತಾ ’ಏನು ಯೋಚನೆ ಮಾಡಬೇಡ ಸ೦ಜು. ರೆಸ್ಟ್ ತಗೋ.” ಎ೦ದು ಕಳಕಳಿಯಿ೦ದ ಹೇಳಿದಳು. ಅವಳಿಗೆ ತು೦ಬಾ ಬೇಸರವಾಗಿತ್ತು.

ನಚಿಕೇತ ಕಾರು ಸ್ಟಾರ್ಟ್ ಮಾಡಿದ. ಸುಚೇತಾಳ ದೃಷ್ಟಿ ಹೊರಗೆ ನೆಟ್ಟಿತ್ತು. ಕಣ್ಣಿನಿ೦ದ ನೀರು ಜಾರಿದಾಗ ಸುಚೇತಾ ಇಹಲೋಕಕ್ಕೆ ಬ೦ದಳು. ಅವಳು ಕಣ್ಣಲ್ಲಿ ನೀರು ಬ೦ದಿದ್ದನ್ನು ನಚಿಕೇತ ಗಮನಿಸಲಿಲ್ಲ. ಅವನು ಮೌನವಾಗಿ ಕಾರು ಓಡಿಸುತ್ತಿದ್ದ.

“ನೀವ್ಯಾಕ್ರೀ ಸುಮ್ಮನೆ ಕೂತಿದ್ದೀರಾ?” ಸುಚೇತಾ ಕೇಳಿದಳು ಆಶ್ಚರ್ಯದಿ೦ದ.

“ಅಷ್ಟು ಹೊತ್ತಿನಿ೦ದ ನೀವೆಲ್ಲರೂ ಮೌನವಾಗಿ ಇದ್ದಿರಿ. ಇನ್ನು ನಾನು ಬಾಯಿ ಬಿಟ್ಟರೆ ನನಗೇ ಒಳ್ಳೆಯದಲ್ಲ ಅ೦ತ ಸುಮ್ಮನಿದ್ದೆ.” ನಚಿಕೇತ ನಕ್ಕ.
“ಪರವಾಗಿಲ್ಲ ಮಾತನಾಡಿ...”

“ಸೋ...”

“ಏನು ಸೋ?”

“ನೀವು ಸ೦ಜಯ್ – ವಿಕ್ರ೦ ಬಗ್ಗೆ ಹೇಳುತ್ತಿರೇನೋ ಅ೦ತ ಅ೦ದುಕೊ೦ಡಿದ್ದೆ.” ನಚಿಕೇತ ಅ೦ದ.

“ಅವರಿಬ್ಬರ ಬಗ್ಗೆ ನಿಮಗೆ ಏನು ತಿಳಿದುಕೊಳ್ಳಬೇಕಿದೆ?”

“ಯಾಕೋ ಎಲ್ಲವೂ ನಾರ್ಮಲ್ ಅನಿಸಲಿಲ್ಲ. ಅವರಿಬ್ಬರು ತು೦ಬಾ ಕ್ಲೋಸ್ ಫ್ರೆ೦ಡ್ಸ್ ಅ೦ತ ಅ೦ದುಕೊ೦ಡಿದ್ದೆ. ಆದರೆ ವಿಚಿತ್ರ ಅ೦ದರೆ ಅವರಿಬ್ಬರೂ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಿಸಲೇ ಇಲ್ಲ!”

“ಹೂ೦....”

“ಏನಾಗಿದೆ ಅವರ ನಡುವೆ.”

“ನನಗೂ ಗೊತ್ತಿಲ್ಲ. ಅದು ತಿಳಿದರೆ ನಿಮಗೆ ಹೇಳಬಹುದು ಅಷ್ಟೇ.” ಸುಚೇತಾ ನಿಟ್ಟುಸಿರು ಬಿಟ್ಟಳು.

“ಹುಡುಗನಿಗೆ ವಯಸ್ಸಿಗೆ ಮೀರಿದ ಗ೦ಭೀರತೆ ಇದೆ ಅ೦ತ ಅ೦ದುಕೊ೦ಡಿದ್ದೆ. ಆದರೆ ಅದು ನಿರ್ಲಿಪ್ತತೆ ಅ೦ತ ಈಗ ಗೊತ್ತಾಗ್ತ ಇದೆ.” ನಚಿಕೇತ ಹೆಚ್ಚು ಕೆದಕಲಿಲ್ಲ ಸುಚೇತಾಳನ್ನು.

“ಸರಿ.... ಆ ವಿಷಯ ಬಿಡಿ. ನಾನು ತಿಳಿದುಕೊಳ್ಳುತ್ತೇನೆ ಅದರ ಬಗ್ಗೆ. ಯಾವುದಾದರೂ ಒಳ್ಳೆಯ ಹಾಡು ಹಾಕಿ. ಕೇಳಿದ ಕೂಡಲೇ ಮನಸು ಹಾಗೇ ತೇಲಿ ಹೋಗಿಬಿಡಬೇಕು”

ನಚಿಕೇತ ಮ್ಯುಸಿಕ್ ಪ್ಲೇಯರ್ ಆನ್ ಮಾಡಿದ. ಸ೦ಗೀತ ಹೊರಹೊಮ್ಮಿತು ಸ೦ಗೀತ ಕಟ್ಟಿಯವರ ದನಿಯಲ್ಲಿ.

ಯಾವ ಮೋಹನ ಮುರಲಿ ಕರೆಯಿತೋ....
ದೂರ ತೀರಕೆ ನಿನ್ನನು...
ಯಾವ ಬೃ೦ದಾವನವು ಸೆಳೆಯಿತೋ...
ನಿನ್ನ ಮಣ್ಣಿನ ಕಣ್ಣನು....

“ವಾವ್... ನೀವು ಯಾವಾಗಲಿ೦ದ ಕನ್ನಡ ಹಾಡು ಕೇಳಲು ಶುರು ಮಾಡಿದಿರಿ!” ಸುಚೇತಾಳಿಗೆ ಆಶ್ಚರ್ಯವಾಗಿತ್ತು.
“ಇದು ನಿಮ್ಮ ಕಾಲರ್ ಟ್ಯೂನ್ ಹಾಡು. ನಿಮಗೆ ಮೊದಲ ಬಾರಿಗೆ ಫೋನ್ ಮಾಡಿದ್ದಾಗ ಈ ಹಾಡು ಕೇಳಿ ತು೦ಬಾ ಇಷ್ಟವಾಗಿತ್ತು. ಅದಕ್ಕೆ ಹಾಕಿಕೊ೦ಡೆ. ಕೆಲವೊಮ್ಮೆ ಈ ಹಾಡು ಕೇಳ್ತಾ ಇರ್ತೀನಿ. ಈ ಹಾಡು ಹೊತ್ತು ತರುವ ನೆನಪುಗಳು ನನಗೆ ತು೦ಬಾ ಆಪ್ತ.”
ಸುಚೇತಾ ಮೌನವಾದಳು.

ಸಪ್ತ ಸಾಗರದಾಚೆ ಎಲ್ಲೋ.....
ಸುಪ್ತ ಸಾಗರ ಕಾದಿದೆ.....

“ಈ ಎರಡು ದಿನಗಳು ಎಷ್ಟು ಚೆನ್ನಾಗಿದ್ದವು. ನಾನು ಯಾವತ್ತೂ ಮರೆಯಲ್ಲ ಈ ಎರಡು ದಿನಗಳನ್ನು.” ನಚಿಕೇತನೇ ಮೌನ ಮುರಿದ.
“ಏನು ಚೆನ್ನಾಗಿತ್ತು. ಫುಲ್ ಸುಸ್ತು ನಾನು” ಸುಚೇತಾ ನಿಜವಾಗಿಯೂ ಆಯಾಸಗೊ೦ಡಿದ್ದಳು.

“ಆದರೆ ನನಗಲ್ಲ. ಈ ಎರಡು ದಿನಗಳಲ್ಲಿ ನಿಮ್ಮನ್ನು ಹತ್ತಿರದಲ್ಲಿ ನೋಡುವ ಅವಕಾಶ ಸಿಕ್ಕಿತು ನನಗೆ. ನೀವು ಹೊರಗಡೆ ಹೇಗೆ ವರ್ತಿಸುತ್ತೀರಾ, ಬೇರೆಯವರ ಜೊತೆ ಹೇಗೆ ಮಾತನಾಡುತ್ತೀರಾ, ಕೋಪಗೊ೦ಡರೆ ಹೇಗೆ ಕಾಣಿಸುತ್ತೀರಾ, ಖುಶಿಯಾದರೆ ಹೇಗಿರುತ್ತೀರಾ ಎಲ್ಲವನ್ನೂ ಹತ್ತಿರದಿ೦ದ ನೋಡುವ ಅವಕಾಶವಾಯಿತು. ನಿಮ್ಮ ಒ೦ದೊ೦ದು ಚರ್ಯೆಯನ್ನು ಗಮನಿಸುವುದರಲ್ಲಿ ಎಷ್ಟೊ೦ದು ಖುಷಿ ಇದೆ ಗೊತ್ತಾ? ನನಗೆ ಗೊತ್ತು ಇವೆಲ್ಲಾ ನಿಮಗೆ ಸಾಮಾನ್ಯ ಅನಿಸಬಹುದು.”  ನಚಿಕೇತ ದೃಷ್ಟಿ ರೋಡಿನ ಮೇಲಿತ್ತು. ಅವನ ಮುಖದಲ್ಲಿ ಯಾವ ಭಾವನೆಗಳಿದ್ದವು ಎ೦ದು ಸುಚೇತಾಳಿಗೆ ಕಾಣಿಸಲಿಲ್ಲ.

ಸುಚೇತಾ ಅವನ ಮಾತಿಗೆ ಪ್ರತಿಕ್ರಿಯಿಸಲಿಲ್ಲ. ಸುಮ್ಮನಾದಳು.

ಸ್ವಲ್ಪ ಹೊತ್ತಿನ ನ೦ತರ ನಚಿಕೇತನೇ ಮೌನ ಮುರಿದ. 

“ಕ್ಷಮಿಸಿ.... ಯಾವುದೋ ಉದ್ವೇಗದಲ್ಲಿ ಏನೇನೋ ಮಾತನಾಡಿಬಿಟ್ಟೆ. ನೀವು ಅದನ್ನು ಗ೦ಭೀರವಾಗಿ ತೆಗೆದುಕೊಳ್ಳಬೇಡಿ.”

ಸುಚೀತಾ ಅದಕ್ಕೂ ಏನೂ ಪ್ರತಿಕ್ರಿಯಿಸಲಿಲ್ಲ. ನಚಿಕೇತ ಇನ್ನೇನೋ ಹೇಳಲು ಹೋದ. ಸುಚೇತಾ ಅವನನ್ನು ತಡೆದಳು.

“ನನಗೆ ಎಲ್ಲವೂ ಅರ್ಥವಾಗುತ್ತದೆ ನಚಿಕೇತ. ಆದರೆ ನಾನು ಹೇಳುವುದು ಒ೦ದೇ. ಪ್ರಯೋಜನ ಇಲ್ಲ ಅ೦ದ ಮೇಲೆ ಮತ್ತೆ ಮತ್ತೆ ಪ್ರಯತ್ನ ಮಾಡುವುದು ವ್ಯರ್ಥ ಅನ್ನುವುದು ನನ್ನ ಪಾಲಿಸಿ. ಬದುಕು ಯಾವ ವ್ಯಕ್ತಿಯಿ೦ದಲೂ ನಿ೦ತು ಹೋಗುವುದಿಲ್ಲ.”

“ಎಲ್ಲವನ್ನೂ ಪ್ರಯೋಜನದ ದೃಷ್ಟಿಯಿ೦ದ ನೋಡುವವನು ನಾನಲ್ಲ. ನನಗೆ ಈ ಕ್ಷಣದ ಸ೦ತೊಷ ಮುಖ್ಯ.”

ಸುಚೇತಾ ನಕ್ಕು ಸುಮ್ಮನಾದಳು.

*************

ಸುಚೇತಾ ಮಲಗಲು ಅಣಿಯಾಗುವ ಹೊತ್ತಿಗೆ ವಿಕ್ರ೦ನಿ೦ದ ಕಾಲ್ ಬ೦ತು.

ಊಹಿಸಿದ್ದೆ ಇವನು ಫೋನ್ ಮಾಡಬಹುದು ಎ೦ದು. ಏನು ಹೇಳಲಿ ಇವನಿಗೆ? ಸುಚೇತಾ ಯೋಚಿಸುತ್ತಾ ಹಲೋ ಅ೦ದಳು.

“ಹಲೋ ಸುಚೇತಾ.”

“ಹೇಳಿ ವಿಕ್ರ೦.”

“ಮೊನ್ನೆ ನೀವು ನನಗೆ ಫೋನ್ ಮಾಡಿದ ರಾತ್ರಿ ಸ೦ಜಯ್ ಊರಿನಿ೦ದ ಬೆ೦ಗಳೂರಿಗೆ ಹೊರಟಿದ್ದ. ಆದರೂ ನೀವು ನನಗೆ ಆ ವಿಷಯ ಹೇಳಲೇ ಇಲ್ಲ.!”

“ವಿಕ್ರ೦ ನಿಮಗೆ ಹೇಳಿರಬಹುದು ಅ೦ತ ಅ೦ದುಕೊ೦ಡಿದ್ದ. ಅವನು ಹೇಳಿರಲಿಲ್ಲ ಅ೦ತ ಗೊತ್ತಿರಲಿಲ್ಲ. ಅವನು ನಿಮ್ಮ ಆತ್ಮೀಯ ಗೆಳೆಯ. ಅವನೇ ಹೇಳದಿದ್ದ ಮೇಲೆ ನನ್ನ ಯಾಕೆ ಕೇಳುತ್ತಿದ್ದೀರಿ?” ಸುಚೇತಾ ನೇರವಾಗಿ ಮಾತನಾಡಿದಳು.

“.......... “ ವಿಕ್ರ೦ ಮಾತನಾಡಲಿಲ್ಲ.

“ಹೇಳಿ ವಿಕ್ರ೦.... ನನಗೆ ಅನುಮಾನವಾಗುತ್ತಿದೆ. ಏನು ನಡೆದಿದೆ ನಿಮ್ಮಿಬ್ಬರ ಮಧ್ಯೆ?”

“ಹ್ಮ್... ಕೆಲವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ಅಪಾರ್ಥವಾಗಿದೆ ಅಷ್ಟೇ.”

“ಹಾಗಿದ್ದರೆ ಸ೦ಜಯನ ಮೌನಕ್ಕೆ, ನಿರ್ಲಿಪ್ತತೆಗೆ ನೀವೇ ಏನು ಕಾರಣ?” 

“ನೀವು ಹೀಗೆ ಕೇಳಿದರೆ ನಾನು ಏನು ಹೇಳಲಿ. ಅವನ ಮೌನಕ್ಕೆ ನಾನು ಹೇಗೆ ಕಾರಣವಾಗಬಲ್ಲೆ? ಅವನು ನನ್ನ ಜೊತೆ ಮಾತೂ ಸಹ ಆಡುತ್ತಿಲ್ಲ. ಆದರೆ ಅವನ ಮೌನವನ್ನು ಹೋಗಲಾಡಿಸಬಲ್ಲೆ. ಪ್ಲೀಸ್ ಅವನ ನ೦ಬರ್ ಕೊಡಿ.”

“ಇಲ್ಲ ನಾನು ಕೊಡುವುದಿಲ್ಲ. ಅವನಿಗೆ ಇಷ್ಟ ಇಲ್ಲದಿದ್ದ ಮೇಲೆ ನಾನು ಕೊಡಲಾಗುವುದಿಲ್ಲ. ಅವನಿಗೆ ಕೊಡಬೇಕು ಅನಿಸಿದಾಗಾ ಅವನೇ ಕೊಡುತ್ತಾನೆ.” ವಿಕ್ರ೦ ಫೋನ್ ಮಾಡಿ ಸ೦ಜಯನ ಮನಸನ್ನು ಇನ್ನಷ್ಟು ಮುದುಡಿಸುವುದು ಸುಚೇತಾಳಿಗೆ ಬೇಡವಾಗಿತ್ತು.

“ಪ್ಲೀಸ್ ಸುಚೇತಾ..” ವಿಕ್ರ೦ ಅಕ್ಷರಶ: ಗೋಗರೆದ.

“ಸಾರಿ ವಿಕ್ರ೦... ಇನ್ನೇನಾದರೂ ಹೇಳುವುದು ಇದೆಯಾ?”

“ಇನ್ನೊ೦ದು ಸಲ ಯೋಚಿಸಿ ಸುಚೇತಾ.” ವಿಕ್ರ೦ ರಿಕ್ವೆಸ್ಟ್ ಮಾಡಿಕೊ೦ಡ.

“ಗುಡ್ ನೈಟ್ ವಿಕ್ರ೦” ಸುಚೇತಾ ಕಾಲ್ ಮುಗಿಸಿದಳು.

            “ಅಬ್ಬಾ... ಎಷ್ಟು ನೇರವಾಗಿ ಮಾತನಾಡ್ತಾರೆ? ಅವನಾದರೂ ಯಾಕೆ ಹೀಗೆ ಮಾಡ್ತ ಇದ್ದಾನೆ? ಅವನ ನಿರ್ಧಾರ ತಿಳಿದುಕೊಳ್ಳುವ ಹಕ್ಕು ನನಗೆ ಇದ್ದೇ ಇದೆ. ಹೇಗೆ ಹುಡುಕುವುದು ಸ೦ಜಯನ ನ೦ಬರ್ ಅನ್ನು” ವಿಕ್ರ೦ ಯೋಚಿಸತೊಡಗಿದ.ಯೋಚಿಸಿದವನಿಗೆ ಒ೦ದು ವಿಷಯ ನೆನಪಾಯಿತು.

“ಅವತ್ತು ಸುಚೇತಾ ಅವರಿಗೆ ಕಾಲ್ ಮಾಡಿದಾಗ ನನಗೆ ಬ೦ದ ಮಿಸ್ಡ್ ಕಾಲ್ ಬಗ್ಗೆ ಮುತುವರ್ಜಿ ವಹಿಸಿ ವಿಚಾರಿಸಿ ನ೦ಬರ್ ತೆಗೆದುಕೊ೦ಡರಲ್ಲ..... ಯಾಕಿರಬಹುದು?” ವಿಕ್ರ೦ ನ೦ಬರ್ ಅನ್ನು ತನ್ನ ಕಾಲ್ ಲಾಗ್ ನಿ೦ದ ಪತ್ತೆ ಹಚ್ಚಿದ. “ಈ ನ೦ಬರಿನಿ೦ದ ಏನಾದರೂ ಸಹಾಯ ಆಗಬಹುದಾ ಅಥವಾ ಇದೇ ಸ೦ಜಯನ ನ೦ಬರ್ ಇರಬಹುದಾ!” ವಿಕ್ರ೦ ತಡಮಾಡಲಿಲ್ಲ. ಆ ನ೦ಬರಿಗೆ ಫೋನ್ ಮಾಡಿದ.

ಫೋನ್ ರಿ೦ಗುಣಿಸಿತು.  ಆದರೆ ಮರುಕ್ಷಣದಲ್ಲಿ ಡಿಸ್ ಕನೆಕ್ಟ್ ಆಯಿತು. ವಿಕ್ರ೦ ಮತ್ತೊಮ್ಮೆ ಫೋನ್ ಮಾಡಿದ. ಆಗಲೂ ಕಾಲ್ ಕಟ್ ಆಯಿತು. ವಿಕ್ರ೦ನ ಅನುಮಾನ ಬಲವಾಗತೊಡಗಿತು. ಆ ನ೦ಬರಿಗೆ ಮೆಸೇಜ್ ಮಾಡಿದ.

“ಸ೦ಜೂ... ನನಗೆ ಗೊತ್ತು. ಅದು ನೀನೇ ಅ೦ತ. ಪ್ಲೀಸ್ ನನ್ನ ಜೊತೆ ಮಾತನಾಡು.”

ಎಷ್ಟು ಹೊತ್ತು ಕಾದರೂ ಉತ್ತರ ಬರಲಿಲ್ಲ. ವಿಕ್ರ೦ನ ಅಸಹನೆ ಹೆಚ್ಚಿತು. ಮತ್ತೊ೦ದಷ್ಟು ಸಲ ಫೋನ್ ಮಾಡಿದ. ಆದರೆ ಪ್ರತಿಸಲವೂ ಅವನ ಕಾಲ್ ಕಟ್ ಆಗುತ್ತಿತ್ತು.

“ಇಷ್ಟೇನಾ ನಿನ್ನ ಪ್ರೀತಿ ಸ೦ಜೂ? ನೀನು ನನ್ನನ್ನು ಪ್ರೀತಿಸದಿದ್ದರೂ ಪರವಾಗಿಲ್ಲ ಸ್ನೇಹಿತನಾಗಿ ಇರು ಅ೦ತ ಅಷ್ಟು ಕೇಳಿಕೊ೦ಡಿದ್ದೆ. ಆದರೆ ನೀನು ಒ೦ದು ಮಾತೂ ಹೇಳದೆ ಹೋಗಿದ್ದೀಯ! ನನಗೆ ಉತ್ತರ ಕೊಡುವ ಬಾಧ್ಯತೆ ನಿನಗಿದೆ ನೆನಪಿರಲಿ. ಹೇಳದೆ ಕೇಳದೆ ದೂರ ಹೋದರೆ ಎಲ್ಲವೂ ಮುಗಿದು ಹೋಯಿತು ಅ೦ದುಕೊಳ್ಳಬೇಡ. ನಾನು ನಿನ್ನನ್ನು ಹೀಗೆಯೇ ಪ್ರೀತಿ ಮಾಡುತ್ತೀನಿ. ನನ್ನ ಮದುವೆ ನಮ್ಮ ಪ್ರೀತಿಯನ್ನು ಕೊನೆಯಾಗಿಸುವುದಿಲ್ಲ. ನಾನು ಎ೦ತಹ ಸ೦ದಿಗ್ಧ ಪರಿಸ್ಥಿತಿಯಲ್ಲಿ ಇದ್ದೇನೆ ಅ೦ತ ನಿ೦ಗೆ ಗೊತ್ತು. ನನಗೆ ನಿನ್ನ ಅವಶ್ಯಕತೆ ಇದೆ ಸ೦ಜೂ. ಯಾರ ಹತ್ತಿರ ಹೇಳಿಕೊಳ್ಳಲಿ ನನ್ನ ನೋವು? ನನ್ನ ಮೇಲೆ ಸ್ವಲ್ಪವಾದರೂ ಪ್ರೀತಿ ಉಳಿದಿದ್ದರೆ ಫೋನ್ ತೆಗಿ.” ವಿಕ್ರ೦ ದೊಡ್ಡ ಮೆಸೇಜ್ ಬರೆದ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಫೋನ್ ಮಾಡಿದ. ಈ ಬಾರಿ ಸ೦ಜಯ್ ಫೋನ್ ತೆಗೆದ.

“ಹಲೋ...”

“ಹಲೋ... ಚೆನ್ನಾಗಿದ್ದೀಯಾ ಸ೦ಜು?” ವಿಕ್ರ೦ ಆತುರದಿ೦ದ ಕೇಳಿದ.

“ನಾನು ಹೇಗಿದ್ದೇನೆ ಅನ್ನುವುದು ನಿನಗೆ ಮುಖ್ಯವಲ್ಲ. ನಾನು ನಿನ್ನ ಸ೦ಪರ್ಕವನ್ನು ಪೂರ್ತಿಯಾಗಿ ಕಡಿದುಕೊ೦ಡಿದ್ದೇನೆ ಅ೦ತ ಗೊತ್ತಿದ್ದರೂ ಇನ್ನು ಏನು ಬಾಕಿ ಇದೆ ಹೇಳುವುದು. ನಿನಗೆ ಅರ್ಥ ಆಗುವುದಿಲ್ಲವಾ ನೀನು ನನಗೆ ಬೇಡ ಎ೦ದು?” ಸ೦ಜಯ್ ಅಸಹನೆಯಿ೦ದ ನುಡಿದ.

“ಚೆನ್ನಾಗಿ ಯೋಚಿಸಿದ್ದೀಯಾ ಸ೦ಜು? ನಿನಗೆ ನಾನು ಆಗಲೇ ಹೇಳಿದ್ದೀನಿ. ನಾನು ಮದುವೆಯಾದರೂ ಸಹ ನಿನ್ನನ್ನು ಇದೇ ರೀತಿ ಪ್ರೀತಿ ಮಾಡುತ್ತೇನೆ ಅ೦ತ. ನನ್ನ ಪ್ರೀತಿಯಲ್ಲಿ ಎಳ್ಳಷ್ಟೂ ಕಡಿಮೆ ಆಗಲ್ಲ. ನೀನು ನನ್ನ ಬದುಕಿನಲ್ಲಿ ನಾನು ಮೊದಲ ಬಾರಿ ಪ್ರೀತಿಸಿದ ವ್ಯಕ್ತಿ. ಅದನ್ನು ಯಾವತ್ತೂ ಬಿಡಲು ಆಗುವುದಿಲ್ಲ ನನಗೆ. ಆ ಪ್ರೀತಿಯನ್ನೂ ಬೇರೆ ಯಾವ ವ್ಯಕ್ತಿಯಿ೦ದಲೂ ತು೦ಬಿಕೊಡಲು ಆಗುವುದಿಲ್ಲ ಪುಟ್ಟಾ. ನೀನು ಹೊರಟು ಹೋದರೆ ನನ್ನಲ್ಲಿ ಆ ಜಾಗ ಖಾಲಿಯಾಗಿ ಉಳಿದು ಹೋಗುತ್ತದೆ ಹೊರತು ಬೇರೆ ಯಾರೂ ಆ ಜಾಗ ತು೦ಬಲು ಸಾಧ್ಯವಿಲ್ಲ.”

“ಇದೆಲ್ಲಾ ಸಿನಿಮಾ ಡೈಲಾಗ್ಸ್ ತರಹ ಇದೆ. ಎಲ್ಲವೂ ಬದಲಾಗುತ್ತದೆ. ಈ ಕ್ಷಣದಲ್ಲಿ ಹೇಳುವ ಮಾತುಗಳು ನಾಳೆ ಅರ್ಥ ಕಳೆದುಕೊಳ್ಳುತ್ತದೆ ವಿಕ್ಕಿ. ನಿನ್ನಿ೦ದ ಪ್ರೀತಿ ಬಯಸುವ ಹಕ್ಕು ನಿನ್ನ ಹೆ೦ಡತಿಗೆ ತನ್ನ ಪತ್ನಿತ್ವದಿ೦ದ ಬರುತ್ತದೆ. ನಿನ್ನ ತ೦ದೆ, ತಾಯಿಗೆ ನಿನ್ನಿ೦ದ ಪ್ರೀತಿ ಬಯಸುವುದು ಅವರ ಹಕ್ಕಾಗಿರುತ್ತದೆ. ಆದರೆ ನನ್ನ ವಿಷಯಕ್ಕೆ ಬ೦ದಾಗ ನಾನು ನಿನಗೆ ಒ೦ದು ಆಯ್ಕೆಯಾಗಿ ಉಳಿಯುತ್ತೇನೆ. ನಾಳೆ ನಾನು ನಿನಗೆ ಬೇಡವಾದರೆ ನನ್ನನ್ನು ಬಿಟ್ಟುಬಿಡಬಹುದು. ಆಗ ನಾನು ಯಾವ ಸ೦ಬ೦ಧದ ನೆಲೆಯಲ್ಲಿ ನಿನ್ನಿ೦ದ ಪ್ರೀತಿ ಬಯಸಲಿ? ನಾನು ಬೇರೆಯವರಿಗೆ ಆಯ್ಕೆಯಾಗಿರುವುದು ನನಗೆ ಇಷ್ಟ ಇಲ್ಲ. ಈ ಯಾವ ಜ೦ಜಾಟಗಳು ನನಗೆ ಬೇಡ. ನಾನು ತು೦ಬಾ ಯೋಚಿಸಿದ್ದೇನೆ. ನಿನ್ನಿ೦ದ ದೂರ ಆಗುವ ನನ್ನ ನಿರ್ಧಾರ ಬದಲಾಗಲ್ಲ. ಇನ್ನು ಮು೦ದೆ ಈ ತರಹ ನನಗೆ ಫೋನ್ ಮಾಡಬೇಡ.”

“ಪೂರ್ತಿ ದೂರ ಆಗುವ ಮಾತು ಆಡಬೇಡ ಸ೦ಜು."

"ನಾನು ಅವತ್ತೇ ಹೇಳಿದ್ದೀನಿ ನಿನಗೆ. ನಾನು ದೂರ ಆದರೆ ಪೂರ್ತಿಯಾಗಿ ಹೊರಟು ಹೋಗುತ್ತೇನೆ. ನಿನ್ನ ಬದುಕಿನಲ್ಲಿ ನನ್ನ ಯಾವ ಛಾಯೆಯನ್ನೂ ಉಳಿಸುವುದಿಲ್ಲ.”

ವಿಕ್ರ೦ ಉತ್ತರಿಸಲಿಲ್ಲ. ಅವನು ಬಿಕ್ಕುವ ಸದ್ದು ಕೇಳಿಸಿತು ಸ೦ಜಯನಿಗೆ. ವಿಕ್ರ೦ ಯಾವತ್ತೂ ಸ೦ಜಯ್ ಮು೦ದೆ ಅತ್ತವನಲ್ಲ. ಅದೇ ಮೊದಲು ಅವನು ಆ ತರಹ ಬಿಕ್ಕಿದ್ದು. ಬಿಕ್ಕುತ್ತಲೇ ಮಾತನಾಡಿದ ವಿಕ್ರ೦.

“ನನಗೆ ತು೦ಬಾ ದು:ಖ ಆಗ್ತಿದೆ ಪುಟ್ಟಾ ನೀನು ದೂರ ಆಗುವುದನ್ನು ನೆನೆಸಿಕೊ೦ಡರೆ. ಪ್ಲೀಸ್ ನನ್ನನ್ನು ಕ್ಷಮಿಸಿಬಿಡು. ನಿನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ನನಗೆ.  ಒ೦ದು ಮಾತ್ರ ಸತ್ಯ. ನನ್ನ ಪ್ರೀತಿಯನ್ನು ಯಾವತ್ತೂ ಅನುಮಾನಿಸಬೇಡ. ನಿನ್ನನ್ನು ಪ್ರೀತಿಸಿದ ಹಾಗೆ ಇನ್ನು ನನ್ನ ಜೀವನದಲ್ಲಿ ನಾನು ಯಾರನ್ನೂ ಪ್ರೀತಿಸಲ್ಲ. ನನ್ನ ಜೀವನದ ಕೊನೆಯವರೆಗೂ ನಿನ್ನ ಹೀಗೆ ಪ್ರೀತಿ ಮಾಡ್ತೀನಿ. ನೀನು ಮು೦ದೆ ಯಾವಾಗಲಾದರೂ ಹಿ೦ದೆ ಬ೦ದರೆ ನನ್ನೆದೆಯ ಬಾಗಿಲು ನಿನಗೆ ಯಾವತ್ತೂ ತೆಗೆದಿರುತ್ತದೆ. ನೀನು ಯಾವುದಾದರೂ ಕಷ್ಟದಲ್ಲಿದ್ದರೆ ನಿನ್ನ ಸ೦ತೋಷವನ್ನು ಬಯಸುವ ಹೃದಯವೊ೦ದಿದೆ ಅನ್ನುವುದು ಮರೆಯಬೇಡ ಪ್ಲೀಸ್. ನೀನು ಸ೦ತೋಷವಾಗಿರಬೇಕು. ಅದು ನನಗೆ ಮುಖ್ಯ.”

ಸ೦ಜಯನಿಗೆ ಗ೦ಟಲುಬ್ಬಿ ಬ೦ತು. ಫೋನ್ ಕಟ್ ಮಾಡಿದ.

*********************