ನೀ ಬರುವ ಹಾದಿಯಲಿ.... [ಭಾಗ ೧೯]

Monday, 3 May 2010

ಅಸ್ತವ್ಯಸ್ತ ಮನಸು....!ಚೂರಿಯನ್ನು ಅ೦ಗೈ ನರಕ್ಕೆ ಒತ್ತಿ ಹಿಡಿದು ಕಣ್ಣು ಮುಚ್ಚಿದಳು ಸುಚೇತ . ತು೦ಬಾ ಅತ್ತು ಬಿಡಬೇಕು ಅ೦ತ ಅವಳಿಗೆ ಅನಿಸುತಿತ್ತು. ಆದರೆ ಕಣ್ಣಲ್ಲಿ ಒ೦ದು ಹನಿ ನೀರೂ ಬರಲಿಲ್ಲ ಎಷ್ಟೇ ಅಳಬೇಕೆ೦ದರೂ. ಮನಸು ಬ್ಲಾ೦ಕ್ ಆಗಿತ್ತು .

"ಮಣಿಕಟ್ಟಿನ ನರವನ್ನು ಕಟ್ ಮಾಡಿಕೊಳ್ಳಲೇ" ಎ೦ದು ಯೋಚಿಸಿದಳು.

ಒ೦ದು ಕ್ಷಣ ಕಣ್ಣು ಬಿಟ್ಟು ತನ್ನ ಕೈಯನ್ನೇ ದಿಟ್ಟಿಸಿ ನೋಡಿದಳು.

ಒಂದು ಸಲ ನರವನ್ನು ಕತ್ತರಿಸಿಕೊ೦ದರೆ ಜೀವ ರಸ ಹನಿ ಹನಿಯಾಗಿ ಹರಿದು ಹೋಗುತ್ತದೆ. ಜೊತೆಗೆ ಜೀವವೂ ಕೂಡ ಹನಿ ಹನಿಯಾಗಿ ಸೋರಿಹೋಗುವುದು!

ಒ೦ದು ಸಲ ಅ೦ಗೈ ಮೇಲೆ ಸಣ್ಣದಾಗಿ ಗೀರಿಕೊ೦ಡಳು. ಸಣ್ಣದಾಗಿ ಗಾಯವಾಯಿತು ಮತ್ತು ಸ್ವಲ್ಪ ರಕ್ತ ಒಸರಿತು. ಆದರೂ ಸುಚೇತಾಳಿಗೆ ನೋವೆನಿಸಲಿಲ್ಲ. ಬದಲು ಮನಸ್ಸಿನಲ್ಲಿ ಒ೦ದು ರೀತಿಯ ಉದ್ರೇಕವಾಯಿತು ಮತ್ತು ಮೈ ಜುಮ್ ಎ೦ದಿತು ಒ೦ದು ಸಲ.

ಇನ್ನು ತಡಮಾಡಬಾರದು!

ಕಣ್ಣು ಮುಚ್ಚಿ ಮಣಿಕಟ್ಟಿನ ನರದ ಮೇಲೆ ಚೂರಿಯನ್ನು ಒತ್ತಿಹಿಡಿದಳು!


ಮೇಜಿನ ಮೇಲಿದ್ದ ಫೋನ್ ಸದ್ದು ಮಾಡಿತು. ಕಣ್ಣು ಮುಚ್ಚಿಕೊ೦ಡಿದ್ದ ಸುಚೇತಾ ಒ೦ದು ಸಲ ಫೋನ್ ನೋಡಲೋ ಬೇಡವೋ ಎ೦ದು ಯೋಚಿಸಿದಳು.

ಅರ್ಜುನ್ ಮೆಸೇಜ್ ಮಾಡಿರಬಹುದು!

ಫೋನ್ ಎತ್ತಿಕೊಂಡಳು. ಮೆಸೇಜ್ ಅರ್ಜುನ್ ಇ೦ದ ಬ೦ದಿತ್ತು.

"ನೀನು ಇಷ್ಟೊಂದು ಚೀಪ್ ಆಗಿ ಬಿಹೇವ್ ಮಾಡ್ತೀಯ ಅ೦ತ ನಾನು ಅ೦ದುಕೊ೦ಡಿರಲಿಲ್ಲ. ನಿನ್ನ ಬಗ್ಗೆ ಹೇಸಿಗೆಯಾಗುತ್ತಿದೆ." ಅಷ್ಟೇ ಇತ್ತು ಮೆಸೇಜ್.

"ದಯವಿಟ್ಟು ನನಗೆ ಇನ್ನು ಮೇಲೆ ಮೆಸೇಜ್ ಮಾಡಬೇಡಿ. ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ... ಮು೦ದೆ ಯಾರ ಜೊತೆಯೂ ಈ ತರಹ ಪ್ರೀತಿಯ ನಾಟಕ ಆಡಬೇಡಿ. ಇಷ್ಟೇ ನಾನು ನಿಮಗೆ ಕೊನೆಯದಾಗಿ ಹೇಳುವುದು."

ಪ್ರೀತಿ ಇಲ್ಲದ ಮೇಲೆ ನಾಟಕ ಯಾಕೆ ಆಡಬೇಕು? ಹೇಳಿ ಬಿಡಬಹುದಿತ್ತು ನೇರವಾಗಿ ನೀನು ಎ೦ದರೆ ನನಗೆ ಇಷ್ಟ ಇಲ್ಲ ಅ೦ತ. ಸುಮ್ಮನೆ ಪ್ರೀತಿ ನಾಟಕ ಯಾಕೆ ಆಡಬೇಕಿತ್ತು? ನಾನೇನು ಆಟದ ಗೊ೦ಬೆನಾ?

ಮೇಜಿನ ಮೇಲಿದ್ದ ಚೂರಿ ಸುಚೆತಾಳನ್ನೇ ಕಾಯುತ್ತಿತ್ತು. ಅದನ್ನು ದಿಟ್ಟಿಸಿ ನೋಡಿದಳು ಸುಚೇತ!
*******

"ಹಲೋ.."

"ಹಲೋ ವಿಕ್ರಂ... ನಾನು ಸ೦ಜಯ್...."

"ಸ೦ಜಯ್.... ! ಇವತ್ತು ಫೋನ್ ಮಾಡೋಕೆ ನೆನಪಾಯ್ತ? ಬೆ೦ಗಳೂರಿಗೆ ಹೋದಾಗಿನಿಂದ ಫೋನ್ ಮಾಡ್ತೀಯ ಅಂತ ಕಾಯ್ತಾ ಇದ್ದೆ. ನಾನಾಗೆ ಮಾಡ್ತೀನಿ ಅದಕ್ಕೂ ಒಪ್ಪಲ್ಲ ನೀನು. ಅಮ್ಮ, ಅಕ್ಕ ಅ೦ತ ನನ್ನ ಬಾಯಿ ಮುಚ್ಚಿಸ್ತೀಯ :("

"ಸಾರಿ.. ಏನು ಮಾಡೋದು? ಮೊಬೈಲ್ ಇಲ್ಲ ನನ್ನ ಹತ್ತಿರ. ಪರೀಕ್ಷೆಗೆ ಓದೋಕೆ ರಜೆ ಇರೋದ್ರಿಂದ ಸಿಟಿಗೆ ಹೋಗೋದಿಲ್ಲ. ಹಾಗಾಗಿ ಫೋನ್ ಮಾಡೋಕೆ ಲೇಟ್ ಆಯಿತು. ಮತ್ತೆ ಹೇಗಿದೆ ಬೆ೦ಗಳೂರು? ನನ್ನ ಮರೆತು ಬಿಟ್ಟಿದೀಯ ಹೇಗೆ?"

"ಸ್ವಲ್ಪ ಸುಮ್ಮನೆ ಇರ್ತೀಯ? ಮರೆಯೋದ೦ತೆ! ಎಷ್ಟು ಬೇಜಾರು ಆಗಿದೆ ಗೊತ್ತಾ ನಂಗೆ? ಪ್ಲೀಸ್ ಎಕ್ಸಾಮ್ ಮುಗಿಸಿ ಬೆ೦ಗಳೂರಿಗೆ ಬೇಗ ಬ೦ದು ಬಿಡೋ."

"ಹ್ಮ್ಮ್ಮ್.... ನನಗೂ ಏನೂ ತೋಚಲ್ಲ. ಮು೦ದೆ ಹೇಗೆ ಏನು ಅ೦ತ ಭಯ ಆಗುತ್ತೆ. ನಾನ್ಯಾಕೆ ಹೀಗಿದೀನಿ ಅ೦ತ ಬೇಜಾರು ಆಗುತ್ತೆ. ಮತ್ತೆ ಬೆ೦ಗಳೂರಿನಲ್ಲಿ ಎಲ್ಲ ಸೆಟಲ್ ಆಯ್ತಾ?"

"ಇಲ್ಲ.. ಇನ್ನೂ ಮನೆ ಹುಡುಕ್ತಾ ಇದ್ದೀನಿ. ಅದೇ ದೊಡ್ಡ ಪ್ರಾಬ್ಲಂ. ಸಧ್ಯ ಫ್ರೆಂಡ್ ಜೊತೆ ಇದ್ದೀನಿ. ಆದರೆ ಆದಷ್ಟು ಬೇಗ ಈ ರೂಮನ್ನು ಬಿಡಬೇಕು."

"ಹ್ಮ್ಮ್... ನನ್ನ ಅಕ್ಕನ್ನ ಕಾಂಟಾಕ್ಟ್ ಮಾಡು ಅ೦ದಿದ್ದೆ. ಮಾಡಿದ್ಯ? ಅವಳು ಹೆಲ್ಪ್ ಮಾಡಬಹುದು ನಿಂಗೆ ಮನೆ ಹುಡುಕೋಕೆ."

"ಇನ್ನೂ ಮಾಡಿಲ್ಲ. ಅವರಿಗೆ ನನ್ಮೇಲೆ ಸ೦ಶಯ ಇದೆ ಅ೦ದಿದ್ಯಲ್ಲ. ಅದಕ್ಕೆ ಸುಮ್ಮನಿದ್ದೆ."

"ಸುಮ್ನೆ ಫೋನ್ ಮಾಡು. ಡೌಟ್ ಇದ್ರೂ ಅವ್ಳು ನಿನ್ನ ಏನು ಕೇಳಲ್ಲ. ಆ ಭರವಸೆ ನಾನು ಕೊಡ್ತೀನಿ. ಡೌಟ್ ಇದ್ರೆ ಒ೦ದು ರೀತಿ ಒಳ್ಳೆಯದೇ ಅಲ್ವ? ಮು೦ದಕ್ಕೆ ಸುಲಭ ಆಗುತ್ತದೆ."

"ಸರಿ...ಸರಿ... ಫೋನ್ ಮಾಡ್ತೀನಿ."

"ಸರಿ... ಮರೆತು ಹೋಗಬೇಡ. ಮತ್ತಿನ್ನೇನು ವಿಷಯ?"

"ಏನಿಲ್ಲ... ನೀನೆ ಇಲ್ವೆ...! ನೀನು ಇದ್ದಿದ್ದರೆ ತುಂಬ ವಿಷಯಗಳು ಇರುತ್ತಿದ್ದವು :)"

"ಇದಕ್ಕೆ ಏನೂ ಕಡಿಮೆ ಇಲ್ಲ... ಸರಿ... ಫೋನ್ ಬಿಲ್ ಏರ್ತಾ ಇದೆ. ಇಡ್ತೀನಿ ಫೋನ್. ಬೈ, ಟೇಕ್ ಕೇರ್."

" :( ನ೦ಬರ್ ಕೊಡು ಯಾವುದಾದರೂ...ನಾನು ಫೋನ್ ಮಾಡ್ತೀನಿ."

"ಸಧ್ಯಕ್ಕೆ ಯಾವುದೂ ಇಲ್ಲ. ಆದಷ್ಟು ಬೇಗ ನಾನೇ ಫೋನ್ ಮಾಡ್ತೀನಿ. ಇಡ್ತೀನಿ."

ವಿಕ್ರಂ ಯೋಚಿಸತೊಡಗಿದ. "ಸ೦ಜಯ್ ಅಕ್ಕನಿಗೆ ಫೋನ್ ಮಾಡಲೋ ಬೇಡವೋ?"

ವಿಕ್ರಂ ಫೋನ್ ಮಾಡದೆ ಇದ್ದರೆ ಅನಾಹುತ ನಡೆಯಬಹುದಾದ ಸಾಧ್ಯತೆಗಳು ಇದ್ದವು ಎ೦ದು ಅವನಿಗೆ ತಿಳಿದಿರಲಿಲ್ಲ!

*************

ಸುಚೇತಾ ಗಟ್ಟಿಯಾಗಿ ಕಣ್ಣು ಮುಚಿಕೊ೦ಡಳು. ತನ್ನನ್ನು ಹಿ೦ಸಿಸಿಕೊಳ್ಳಬೇಕು ಎ೦ದು ಅವಳಿಗೆ ಅನಿಸುತ್ತಿತ್ತು. ತಾನು ಏನು ಮಾಡುತ್ತಿದ್ದೇನೆ ಎನ್ನುವುದನ್ನು ಆಲೋಚಿಸದಷ್ಟು ಮನಸು ಬ್ಲಾಂಕ್ ಆಗಿತ್ತು.

ಮೊಬೈಲ್ ಸದ್ದು ಮಾಡಿತು ಇನ್ನೊಮ್ಮೆ.

ಇಲ್ಲ ಈ ಬಾರಿ ಫೋನ್ ತೆಗೆಯುವುದಿಲ್ಲ ನಾನು!

ಸುಚೇತಾ ಮತ್ತೆ ಚೂರಿಯನ್ನು ತನ್ನ ಕೈಗೆ ಬಲವಾಗಿ ಒತ್ತಿಕೊಳ್ಳುತ್ತಾ ಬ೦ದಳು. ಮೊಬೈಲ್ ರಿ೦ಗ್ ನಿ೦ತಿತು. ಸುಚೇತಾ ಹಾಗೆ ನಿ೦ತಿದ್ದಳು . ಅವಳಿಗೆ ಏನಾದರೂ ಮಾಡಿಕೊಳ್ಳಬೇಕು ಅ೦ತ ಅನಿಸುತ್ತಿತ್ತು. ಆದರೆ ಏನು ಮಾಡಿಕೊಳ್ಳುವುದು ಎ೦ದೂ ಗೊತ್ತಿರಲಿಲ್ಲ. ತನ್ನನ್ನು ಹಿ೦ಸಿಸಿಕೊ೦ದು ಮನಸಿಗೆ ನೋವು ಕೊಟ್ಟು ತು೦ಬಾ ಅತ್ತು ಬಿಡಬೇಕು ಅ೦ತ ಅನಿಸುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬ೦ದಿರಲಿಲ್ಲ. ಅದರ ಬಗ್ಗೆ ಈವರೆಗೂ ಯೋಚಿಸಿದವಳೇ ಅಲ್ಲ.

ಮೊಬೈಲ್ ಮತ್ತೆ ಸದ್ದು ಮಾಡಿತು.

ಅರ್ಜುನ್ ಇರಬಹುದೇ?

ಅಷ್ಟೆಲ್ಲಾ ಆಗಿದ್ದರೂ ಅವಳಿಗೆ ಅರ್ಜುನ್ ಬಗ್ಗೆ ಇನ್ನೂ ಆಶಾಭಾವನೆ ಇತ್ತು. ಅವನಿಗೆ ಒಂದಲ್ಲ ಒ೦ದು ದಿನ ತನ್ನ ಪ್ರೀತಿ ಅರ್ಥ ಆಗಬಹುದು ಎ೦ದು ದೂರದ ಆಸೆಯೊ೦ದು ಇತ್ತು.

ನಡುಗುವ ಕೈಗಳಿ೦ದ ಮೊಬೈಲ್ ಎತ್ತಿಕೊ೦ಡಳು. ಫೋನ್ ಹೊಸ ನ೦ಬರಿನಿ೦ದ ಬ೦ದಿತ್ತು.

"ಹಲೋ..."

"ಹಲೋ... ಸುಚೇತಾ ಅವರಾ?"

ಅರ್ಜುನ್ ಅಲ್ಲ :(

"ಹೌದು... ಸುಚೇತಾ ಮಾತಾಡ್ತಾ ಇರೋದು. ತಾವ್ಯಾರು?"

"ನಾನು ವಿಕ್ರಂ ಅ೦ತ. ನಿಮ್ಮ ತಮ್ಮ ಸ೦ಜಯ್ ಫ್ರೆಂಡ್. ಗೊತ್ತಾಯ್ತ?"

ಇವನ್ಯಾಕೆ ನನಗೆ ಫೋನ್ ಮಾಡಿದಾನೆ. ಸ೦ಜಯ್ ವಿಷಯ ಏನಾದರೂ ಇರಬಹುದಾ?

"ಹೂ೦... ಗೊತ್ತಾಯ್ತು. ಹೇಳಿ, ಏನು ವಿಷಯ?"

"ಹ್ಮ್ಮ್. ನಾನೀಗ ಬೆ೦ಗಳೂರಿನಲ್ಲಿ ಇದೀನಿ. ಕೆಲ್ಸಕ್ಕೆ ಹೋದ ತಿ೦ಗು ಸೇರಿದೆ. ಸ೦ಜಯ್ ನಿಮಗೆ ಫೋನ್ ಮಾಡು ಅ೦ದಿದ್ದ. ಮನೆ ಹುಡುಕಲು ನೀವು ಸಹಾಯ ಮಾಡಬಹುದು ಅ೦ತ."

"ಓಹ್... ಹಾಗಾ? ನನಗೆ ಅಷ್ಟೊಂದು ಪರಿಚಯಗಳು ಇಲ್ಲ. ನನ್ನ ಪಿ.ಜಿ. ಓನರ್ ನ೦ಬರ್ ಕೊಡ್ತೀನಿ. ಅವರ ಹತ್ತಿರ ಬಾಡಿಗೆ ಮನೆಗಳು ಇವೆ. ಅವರನ್ನು ಕಾಂಟಾಕ್ಟ್ ಮಾಡಿ ನೀವು. ಏನಾದರೂ ಸಹಾಯ ಆಗಬಹುದು. ನ೦ಬರ್ ತಗೊಳ್ಳಿ."

"ತು೦ಬಾ ಥ್ಯಾಂಕ್ಸ್. ಅವರನ್ನು ಕಾಂಟಾಕ್ಟ್ ಮಾಡ್ತೀನಿ. ಮತ್ತೆ ನೀವು ಹೇಗಿದ್ದೀರಿ? ಸ೦ಜಯ್ ನಿಮ್ಮ ಬಗ್ಗೆ ತುಂಬ ಹೇಳ್ತಾನೆ."

"ಹ್ಮ್ಮ್.... ನಾನು ಚೆನ್ನಾಗಿದೀನಿ. ನಾನು ಕೂಡ ನಿಮ್ಮ ಬಗ್ಗೆ ತುಂಬ ಕೇಳಿದೀನಿ. ಅಮ್ಮ ಆಗಾಗ ಹೇಳ್ತಾರೆ."

"ಅಮ್ಮ ಹೇಳ್ತಾರ! ಏನ೦ತ? ನಾನೆಲ್ಲೋ ಸ೦ಜಯ್ ಹೇಳಿರ್ತಾನೆ ಅ೦ತ ಅ೦ದುಕೊ೦ಡಿದ್ದೆ."

"ಭಯ ಪಡಬೇಡಿ. ಕೆಟ್ಟದ್ದೇನೂ ಹೇಳಿಲ್ಲ :) ನೀವು ಸ೦ಜಯ್ ಸೀನಿಯರ್ ಆದರೂ ತು೦ಬ ಕ್ಲೋಸ್ ಫ್ರೆಂಡ್ಸ್ ಅ೦ತ. ಸ೦ಜಯ್ ನಿಮ್ಮ ಬಗ್ಗೆ ಏನು ಹೇಳಿಲ್ಲ ಇದುವರೆಗೆ. ಯಾಕೋ ಗೊತ್ತಿಲ್ಲ!"

"ಹೌದು.... ನಾವಿಬ್ಬರು ಬೆಸ್ಟ್ ಫ್ರೆಂಡ್ಸ್. ಫ್ರೆಂಡ್ಸ್ ಯಾರೂ ಬೇಕಾದರೂ ಆಗಬಹುದಲ್ಲ? ವಯಸ್ಸು ಒಂದೇ ಇರಬೇಕು ಅಂತ ಏನು ಇಲ್ಲವಲ್ಲ :) ನಿಮ್ಮ ಮನೆಗೂ ಒ೦ದೆರಡು ಸಲ ಬ೦ದಿದ್ದೆ. ಹಾಗಾಗಿ ಅಮ್ಮ ನಿಮ್ಮ ಹತ್ತಿರ ಹೇಳಿರಬೇಕು."

ವಿಕ್ರಂ ಹೇಳಿದ್ದು ಸರಿ... ಇವರ ಮನೆಯಲ್ಲಿ ಸ೦ಶಯ ಪಡುವುದು ಹುಟ್ಟು ಪ್ರವೃತಿ ಇರಬೇಕು!

"ಹ್ಮ್ಮ್ಮ್.. ಅದು ನಿಜ. ಯಾರು ಯಾವ ಸಮಯಕ್ಕೆ ಇಷ್ಟ ಆಗುತ್ತಾರೋ ಹೇಳೋಕ್ಕೆ ಆಗಲ್ಲ. ಕೆಲವರು ಎಷ್ಟು ಬೇಗ ಹತ್ತಿರ ಆಗುತ್ತಾರೋ ಅಷ್ಟೇ ಬೇಗ ದೂರ ಆಗಿ ಬಿಡ್ತಾರೆ." ಅರ್ಜುನ್ ಗು೦ಗಿನಲ್ಲಿ ಏನೋ ಹೇಳಿ ಬಿಟ್ಟಳು ಸುಚೇತಾ.

"ನೀವು ಹೇಳಿದ್ದು ನನಗೆ ಅರ್ಥ ಆಗ್ಲಿಲ್ಲ.... ಯಾವ ವಿಷಯದ ಬಗ್ಗೆ ಹೇಳ್ತಾ ಇದ್ದೀರಾ?" ವಿಕ್ರಂ ಗೆ ಸ್ವಲ್ಪ ಭಯ ಆಯ್ತು ಸುಚೆತಾಳಿಗೆ ಏನಾದರೂ ತನ್ನ ಮತ್ತು ಸ೦ಜಯ್ ವಿಷಯ ತಿಳಿದಿದೆಯೋ ಅಂತ!

"ಓಹ್... ಸಾರಿ. ಕ್ಯಾಶುವಲ್ ಆಗಿ ಏನೋ ಒ೦ದು ಹೇಳಿದೆ. ಸರಿ... ನಾನು ಕೊಟ್ಟ ನಂಬರ್ ಗೆ ಫೋನ್ ಮಾಡಿ. ಸುಚೇತಾ ಫ್ರೆಂಡ್ ಅ೦ತ ಹೇಳಿ. ಮತ್ತೆ ಏನಾದರೂ ಸಹಾಯ ಬೇಕಿದ್ದರೆ ಫೋನ್ ಮಾಡಿ. ಟೇಕ್ ಕೇರ್, ಬೈ."

"ಅಬ್ಬಾ.... ಅ೦ದುಕೊ೦ಡಷ್ಟು ಸ್ಟ್ರಿಕ್ಟ್ ಇಲ್ಲ. ಫ್ರೆ೦ಡ್ಲಿಯಾಗಿಯೇ ಮಾತಾಡ್ತಾರೆ. ಇಷ್ಟಿದ್ದರೆ ಬೇಕಾದಷ್ಟಾಯ್ತು...ಮು೦ದಿನ ಕೆಲಸ ಸುಲಭ." ವಿಕ್ರಂ ಮನಸಿನಲ್ಲೇ ಅ೦ದುಕೊ೦ಡ.

"ಪರವಾಗಿಲ್ಲ. ಡೀಸೆ೦ಟ್ ಹುಡುಗ ಅನಿಸುತ್ತದೆ. ಅವರಿಬ್ಬರ ಗೆಳೆತನದ ಬಗ್ಗೆ ಅಷ್ಟೊ೦ದು ಯೋಚಿಸಬೇಕಾದ ಅಗತ್ಯ ಇಲ್ಲ ಅನಿಸುತ್ತದೆ." ಸುಚೇತ ವಿಕ್ರಂ ಬಗ್ಗೆ ಅ೦ದುಕೊ೦ಡಳು.

ಫೋನಿಟ್ಟ ಮೇಲೆ ಮೇಜಿನ ಮೇಲಿದ್ದ ಚೂರಿ ಮತ್ತೆ ಕ೦ಡಿತು. ೧೦ ನಿಮಿಷ ಫೋನಿನಲ್ಲಿ ಮಾತನಾಡಿದ್ದಕ್ಕೋ ಏನೋ ಸುಚೆತಾಳ ಮನಸಿನ ಗಮನ ಸ್ವಲ್ಪ ಬೇರೆ ಕಡೆಗೆ ಹೊರಳಿತ್ತು. ಮನಸು ಮತ್ತೆ ಯೋಚಿಸುವ ಸ್ಥಿತಿಗೆ ಬ೦ದಿತ್ತು.

ಅಬ್ಬಾ... ನನ್ನ ಹುಚ್ಚು ಆಲೋಚನೆಗಳೇ....! ಏನು ಮಾಡಹೊರಟಿದ್ದೆ ನಾನು. ಒಬ್ಬ ಹುಡುಗನ ಪ್ರೀತಿಗಾಗಿ ಇಷ್ಟೆಲ್ಲಾ ಮಾಡಬೇಕಾದ ಅಗತ್ಯ ಇದೆಯಾ? ಅವನ ಎದುರು ಬದುಕಿ ತೋರಿಸಬೇಕು ಮತ್ತು ಅವನು ನನ್ನ ಪ್ರೀತಿಯನ್ನು ಕಳೆದುಕೊ೦ಡಿದ್ದಕ್ಕೆ ದು:ಖ ಪಡುವ ಹಾಗೆ ಬದುಕಬೇಕು.

ಚೂರಿಯನ್ನು ತೆಗೆದು ಹೊರಗೆ ಎಸೆದಳು. ಮನಸಿಗೆ ಒ೦ದು ರೀತಿಯ ಸಮಾಧಾನ ಆಯಿತು. ವಿಕ್ರಂಗೆ ಮನಸಿನಲ್ಲೇ ಥ್ಯಾಂಕ್ಸ್ ಹೇಳಿದಳು ಫೋನ್ ಮಾಡಿ ತನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದಕ್ಕೆ.

ಪ್ರೀತಿಯ ಸುಳಿವಿನಿಂದ ಅಷ್ಟು ಸುಲಭವಾಗಿ ಹೊರಬರಲು ಆಗದು ಅ೦ತ ಅವಳಿಗೆ ಆ ಸಮಯದಲ್ಲಿ ಗೊತ್ತಿರಲಿಲ್ಲ!