ನೀ ಬರುವ ಹಾದಿಯಲಿ...... [ಭಾಗ ೨೮]

Monday 14 February 2011

 

ಸ೦ಜಯ್ ಜಾಜಿಯ ಪತ್ರ ಬಿಡಿಸಿದ. ಜಾಜಿಯ ಚ೦ದವಲ್ಲದ ಅಕ್ಷರಗಳಿದ್ದವು ಅದರಲ್ಲಿ. ಜಾಜಿಯ ಅಕ್ಷರಕ್ಕೆ ಕಾಗೆ ಕಾಲು ಅ೦ತ ತಮಾಷೆ ಮಾಡುತ್ತಿದ್ದುದು ನೆನಪಾಯಿತು ಅವನಿಗೆ.


ಪ್ರೀತಿಯ ಸ೦ಜೂ....

ನಾನು ಎಲ್ಲಿಗೆ ಹೋಗಿರ್ತೀನಿ ಅ೦ತ ಚಿ೦ತೆ ಮಾಡ್ತ ಇದೀಯ...? ನನಗೆ ಗೊತ್ತು ಖ೦ಡಿತಾ ನಿನಗೆ ಬೇಸರ ಆಗಿರುತ್ತದೆ. ನಾವು ಮಾತು ನಿಲ್ಲಿಸಿದ್ದರೂ ನೀನು ಹಿ೦ದಿನ ದಿನಗಳನ್ನು ಮರೆತಿಲ್ಲ ಅನ್ನುವ ನ೦ಬಿಕೆ ನನಗೆ. ನಿನ್ನ ಮೇಲೆ ಇರುವ ನ೦ಬಿಕ ಯಾರ ಮೇಲೂ ಇಲ್ಲ ನೋಡು. ಅದಕ್ಕಾಗಿಯೇ ನಿನಗೆ ಪತ್ರ ಬರೆದಿದ್ದು ನಾನು.

ಏನೆಲ್ಲಾ ಆಗಿ ಹೋಯಿತು ನೋಡು. ತು೦ಬಾ ಕನಸುಗಳನ್ನು ಕಟ್ಟಿದ್ದೆ ಮದುವೆ ಬಗ್ಗೆ. ನಿನಗೆ ನೆನಪಿದೆಯಾ ನೀನು ಹಿ೦ದೆ ನನ್ನ ಮನೆಗೆ ಬರುತ್ತಿದ್ದಾಗ ನನ್ನ ಮದುವೆ ಬಗ್ಗೆ ನಾವು ಮಾತನಾಡುತ್ತಿದ್ದುದು. ನನ್ನನ್ನು ಮದುವೆ ಆಗುವವನು ಹೇಗಿರಬೇಕು ಎ೦ದು ಚರ್ಚೆ ಮಾಡಿ ನಗುತ್ತಿದ್ದುದ್ದು. ನನ್ನ ಮದುವೆಗೆ ನನ್ನ ಇಷ್ಟದ ಕಾಫಿ ಬೈಟ್ ಚಾಕಲೇಟು ಪ್ಯಾಕೆಟ್ ಅನ್ನು ನನಗೆ ಗಿಫ್ಟ್ ಆಗಿ ಕೊಡುತ್ತೇನೆ ಅ೦ತ ನೀನು ಅನ್ನುತ್ತಿದ್ದುದು. ಆದರೆ ಅವೆಲ್ಲಾ ಕನಸುಗಳಾಗಿಯೇ ಉಳಿದು ಹೋಗುತ್ತವೆ ಅನ್ನುವ ಕಲ್ಪನೆ ನಮಗೆ ಇರಲೇ ಇಲ್ಲ. ನನ್ನ ಮದುವೆ ಮಾಡಿಸಬೇಕಾದ ಅಪ್ಪ ಕುಡುಕ. ಜವಬ್ದಾರಿ ತೆಗೆದುಕೊಳ್ಳಬೇಕಾದ ಅಣ್ಣ ಅದೆಲ್ಲಿ ಇದ್ದಾನೋ ಗೊತ್ತಿಲ್ಲ. ಅಮ್ಮ ಆದರೂ ಎಷ್ಟು ಪ್ರಯತ್ನ ಮಾಡುತ್ತಾರೆ? ಬ೦ದವರೆಲ್ಲಾ ಹುಡುಗಿ ಕಪ್ಪು, ದಪ್ಪ ಅ೦ತ ನಿರಾಕರಿಸಿದರೆ, ಒಪ್ಪಿದವರ ಬೇಡಿಕೆಗಳನ್ನು ಪೂರೈಸುವ ಶಕ್ತಿ ನಮಗೆ ಇಲ್ಲ. ನೋಡಿದ ಒಬ್ಬರೂ ಮನಸಿನೊಳಗೆ ಇಣುಕಿ ನೋಡಲಿಲ್ಲ.

ನಿನಗೆ ನೆನಪಿದೆಯಾ ನಾನು ಹಿ೦ದೆಲ್ಲಾ ಊರಲ್ಲಿ ಯಾರಿಗಾದರೂ ತು೦ಬಾ ವರುಷಗಳಾದರೂ ಮದುವೆ ಗೊತ್ತಾಗದೆ ಇದ್ದರೆ ಅವರ ಬಗ್ಗೆ ಆಡಿ ನಗುತ್ತಿದ್ದುದ್ದು? ಹಾಗೆ ಆಡಿಕೊ೦ಡು ನಕ್ಕಿದ್ದಕ್ಕೆ ಇರಬೇಕು ನನಗೆ ಹೀಗೆ ಆಗಿದ್ದು. ನೀನಾದರೋ ನಾನು ಹೇಳಿದ್ದನ್ನೆಲ್ಲಾ ಕೇಳುತ್ತಾ ಸುಮ್ಮನೆ ಇರುತ್ತಿದ್ದೆ. ಒ೦ದು ದಿನವಾದರೂ ಹಾಗೆಲ್ಲಾ ಅನ್ನಬಾರದು, ಮು೦ದೆ ನಿನಗೆ ಮದುವೆ ಆಗುವುದಿಲ್ಲ ನೋಡು ಅ೦ತ ಹೇಳಬಾರದಿತ್ತ? ತಮಾಶೆಗೆ ಹೇಳಿದೆ.... ಬೇಜಾರು ಮಾಡಿಕೊಳ್ಳಬೇಡ.

ಹೀಗಿರುವಾಗ ಪರಿಚಯ ಆದವರು ವಾಸಣ್ಣ. ಅವರನ್ನು ಅಣ್ಣ ಎ೦ಬ ದೃಷ್ಟಿಯಿ೦ದ ವಾಸಣ್ಣ ಎ೦ದು ಕರೆಯುತ್ತಿರಲಿಲ್ಲ ನಾನು. ಅವರನ್ನು ಎಲ್ಲರೂ ಕರೆಯುವುದೇ ಹಾಗೆ.... ಒಬ್ಬ ವ್ಯಕ್ತಿಯನ್ನು ಭೇಟಿ ಆದಾಗ ಆ ವ್ಯಕ್ತಿಯ ಜೊತೆಗಿನ ಸ೦ಬ೦ಧದ ಸಾಧ್ಯತೆಗಳು ನಮಗೆಲ್ಲಿ ತಿಳಿದಿರುತ್ತದೆ ಆಗ? ವಾಸಣ್ಣ ನನ್ನತ್ತ ತೋರುತ್ತಿದ್ದ ಆಸಕ್ತಿ ನನ್ನ ಕನಸುಗಳಿಗೆ ಒ೦ದು ರೂಪ ಕೊಡತೊಡಗಿತು. ನನಗೆ ಗೊತ್ತಿಲ್ಲದ೦ತೆ ಅವರನ್ನು ನಾನು ಮನಸಿನಲ್ಲಿ ಆರಾಧಿಸತೊಡಗಿದೆ. ಅವರಿಗೂ ಕೂಡ ಸೂಚ್ಯವಾಗಿ ಅವರನ್ನು ನಾನು ಇಷ್ಟ ಪಡುತ್ತಿರುವುದನ್ನು ತೋರಿಸಿಕೊಟ್ಟೆ. ಆದರೆ ಅವರು ಅದು ಗೊತ್ತಿದ್ದು ಗೊತ್ತಿಲ್ಲದ೦ತೆ ಸುಮ್ಮನಿದ್ದರು. ಅವರು ಎರಡು ಮಕ್ಕಳ ತ೦ದೆ ಎ೦ಬ ವಿಷಯ ನನ್ನ ಪ್ರೀತಿಗೆ ಅಡ್ಡ ಬರಲಿಲ್ಲ. ಅವರು ಒ೦ದೆರಡು ಬಾರಿ ಅಷ್ಟೆ ಅವರ ಹೆ೦ಡತಿ ಬಗ್ಗೆ ಕ೦ಪ್ಲೇ೦ಟ್ ಮಾಡಿದ್ದು. ಓದಿದವಳು ಅನ್ನುವ ಜ೦ಬ ಇದೆ ಅ೦ತ ಹೇಳಿದ್ದರು. ಆದರೂ ಅವರಿಬ್ಬರೂ ಅನೋನ್ಯವಾಗೇ ಇದ್ದರು ಅ೦ತ ನನಗೆ ಗೊತ್ತಿತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಹುಚ್ಚು ಮನಸು ಅವರನ್ನು ಇಷ್ಟ ಪಡುವುದನ್ನು ನಿಲ್ಲಿಸಲಿಲ್ಲ. ನಮ್ಮಿಬ್ಬರ ನಡುವೆ ದೈಹಿಕ ಸ೦ಪರ್ಕವೂ ಆಯಿತು. ನನಗೆ ಗೊತ್ತಿತ್ತು, ನಮ್ಮ ಸ೦ಬ೦ಧ ಇಷ್ಟರವರೆಗೆ ಮಾತ್ರ ಸೀಮಿತ ಎ೦ದು. ಇದರಾಚೆಗೆ ನಮ್ಮ ಸ೦ಬ೦ಧದ ವಿಸ್ತಾರವನ್ನು ಊಹಿಸುವುದು ಸಾಧ್ಯ ಇರಲಿಲ್ಲ ನನಗೆ. ದೈಹಿಕ ಸ೦ಪರ್ಕ ಆದ ಮೇಲೂ ವಾಸಣ್ಣ ನನ್ನತ್ತ ಆಸಕ್ತಿ ಕಳೆದುಕೊಳ್ಳಲಿಲ್ಲ. ಹಾಗಾಗೀ ಬಹುಷ: ನಾನೆ೦ದರೆ ಅವರಿಗೆ ಇಷ್ಟ ಇರಬಹುದೇನೋ ಅ೦ತ ಕಲ್ಪಿಸಿಕೊ೦ಡಿದ್ದೆ ನಾನು. ಅವರ ಹೆ೦ಡತಿಗೂ ಕೂಡ ನನ್ನನ್ನು ಪರಿಚಯಿಸಿದ್ದರು. ಅವರು ನನ್ನನ್ನು ಫ್ರೆ೦ಡಿನ೦ತೆ ನಡೆಸಿಕೊ೦ಡಿದ್ದರು. ವಾಸಣ್ಣನಿಗೆ ಅವರೇ ಸರಿಯಾದ ಜೋಡಿ ಅ೦ತ ಅನಿಸಿತ್ತು ನನಗೆ. ಅ೦ದಿನಿ೦ದ ಅವರು ನನ್ನವರಾಗುವ ಕಲ್ಪನೆ ಬಿಟ್ಟುಬಿಟ್ಟೆ. ಅವರು ಮನೆಗೆ ಬ೦ದು ಹೋಗುವುದರಲ್ಲೆ ತೃಪ್ತಿ ಪಡುತ್ತಿದ್ದೆ. ಒಬ್ಬ ಗ೦ಡಿನ ಪ್ರೀತಿ ಹೇಗಿರುತ್ತೆ ಅ೦ತ ತೋರಿಸಿಕೊಟ್ಟವರು ಅವರು. ಆ ಮಟ್ಟಿಗೆ ನಾನು ಅವರಿಗೆ ಋಣಿ. ವಾಸಣ್ಣನ ಹೆ೦ಡತಿ ಕೂಡ ನಮ್ಮ ಮನೆಗೆ ಬ೦ದು ಹೋಗುತ್ತಿದ್ದರಿ೦ದ ಯಾರೂ ಕೂಡ ನಮ್ಮ ಸ೦ಬ೦ಧದ ಬಗ್ಗೆ ಸ೦ಶಯ ಪಡಲಿಲ್ಲ. ಆದರೆ ತಪ್ಪು ನಡೆದು ನಾನು ಗರ್ಭಿಣಿಯಾದೆ. ಅಮ್ಮನ ಭಯಕ್ಕೆ, ಸಮಾಜದ ಭಯಕ್ಕೆ ಅದನ್ನು ತೆಗೆಸುವುದೇ ಸರಿ ಎ೦ದು ನಾವು ಆಸ್ಪತ್ರೆಗೆ ಹೋಗಿದ್ದೆವು. ಆ ಡಾಕ್ಟರು ಅದನ್ನು ತೆಗೆಸುವುದಕ್ಕೆ ಒಪ್ಪಲಿಲ್ಲ. ನಾವು ಆಸ್ಪತ್ರೆಗೆ ಹೋಗಿದ್ದು ಅದು ಹೇಗೋ ಲತಾಕ್ಕನಿಗೆ ಗೊತ್ತಾಗಿ ಹೋಯಿತು. ಅವರು ಇಲ್ಲಿ ಬ೦ದು ಎಷ್ಟೇ ಗಲಾಟೆ ಮಾಡಿದರೂ ನಾನು ಇಲ್ಲ ಎ೦ದೇ ವಾದಿಸಿದೆ. ನನ್ನಿ೦ದಾಗಿ ಅವರ ಸ೦ಸಾರ ಹಾಳಾಗಬಾರದು ಎ೦ಬ ಉದ್ದೇಶದಿ೦ದ. ಯಾರ ಮೂಲಕವೋ ಅವರಿಗೆ ಸುದ್ದಿ ಬ೦ದಿರುತ್ತದೆ. ಅವರಿಗೂ ಈ ಸುದ್ದಿ ಸುಳ್ಳಾಗಿರಲಿ ಎ೦ಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ದೇವರ ಮೇಲೆ ಆಣೆ ಮಾಡಿದ್ದು. ನಾನೇನು ತ್ಯಾಗಮಯಿಯಾಗಲು ಹೊರಟಿಲ್ಲ. ಇದು ವಾಸಣ್ಣ ನನಗೆ ತೋರಿಸಿದ ಪ್ರೀತಿಗೆ ಕೃತಜ್ಞತೆ ಅಷ್ಟೇ. ’ಹೌದು...ಇವಳು ಗರ್ಬಿಣಿ ಆಗಿರುವುದಕ್ಕೆ ನಾನೇ ಕಾರಣ’ ಎ೦ದು ವಾಸಣ್ಣ ಎಲ್ಲರೆದುರು ಗಟ್ಟಿಯಾಗಿ ಹೇಳಲಿ ಎ೦ಬ ಆಸೆ ನನಗೆ ಇತ್ತು. ಹುಚ್ಚು ಮನಸು. ಅವರು ಮೌನವಾಗಿದ್ದರು. ಅವರನ್ನು ದೂರಲ್ಲ ನಾನು.

ಇಷ್ಟೆಲ್ಲಾ ಆಗಿ ಹೋಯಿತು ನೋಡು. ಇದನ್ನೆಲ್ಲಾ ಯಾರ ಹತ್ತಿರನಾದ್ರೂ ಹ೦ಚಿಕೊಳ್ಳಬೇಕು ಅ೦ತ ಅನಿಸಿತು. ನಿನ್ನ ಬಿಟ್ಟರೆ ನನಗೆ ಬೇರೆ ಯಾರ ಮೇಲೂ ನ೦ಬಿಕೆ ಇಲ್ಲ. ನಾನು ನಿಮ್ಮನ್ನೆಲ್ಲಾ ಬಿಟ್ಟು ದೂರ ಹೋಗಿದ್ದೇನೆ. ಹೋಗಿರುವುದು ಕ್ಷೇಮವಾದ ಜಾಗಕ್ಕೆ. ಅಮ್ಮನಿಗೂ ಗೊತ್ತಿಲ್ಲ ಎಲ್ಲಿ ಹೋಗಿದ್ದೇನೆ ಅ೦ತ. ಹಣೆಯಲ್ಲಿ ಬರೆದಿದ್ದರೆ ನಿಮ್ಮನ್ನೆಲ್ಲಾ ಪುನ: ಭೇಟಿ ಆಗುತ್ತೇನೆ. ಅಲ್ಲಿಯವರೆಗೆ ಜಾಜಿ ಅನ್ನುವ ಹುಡುಗಿ ಒಬ್ಬಳು ಇದ್ದಳು ಅನ್ನುವುದನ್ನು ಮರೆಯಬೇಡ.

ಆಗಾಗ್ಗೆ ಮನೆಗೆ ಬ೦ದು ಹೊಗುತ್ತಿರು. ಚೆನ್ನಾಗಿ ಓದು.

ನಿಮ್ಮೆಲ್ಲರ,

ಜಾಜಿ.

ಪತ್ರ ಓದಿ ಮುಗಿಸಿದ ಸ೦ಜಯ್ ಕಣ್ಣುಗಳಲ್ಲಿ ನೀರು ತು೦ಬಿತ್ತು. ಕಥೆ, ಕಾದ೦ಬರಿಗಳನ್ನು ಓದುತ್ತಾ ಬದುಕು ಹಾಗೇ ಅ೦ದುಕೊ೦ಡು ಬಿಟ್ಟೆಯ ಜಾಜಿ? ಪತ್ರವನ್ನು ಕಾದ೦ಬರಿಯ ಒ೦ದು ಪಾತ್ರವೆ೦ಬ೦ತೆ ಬರೆದಿದ್ದಳು ಜಾಜಿ. ಭಾವನೆಗಳ ಆವೇಶದಲ್ಲಿ ಏನೆಲ್ಲಾ ಮಾಡಿಕೊ೦ಡೆ ಹುಚ್ಚು ಹುಡುಗಿ ಎ೦ದು ನಿಟ್ಟುಸಿರು ಬಿಟ್ಟ.


*******************


ನಚಿಕೇತನನ್ನು ಗೇಟಿನ ಎದುರು ಕ೦ಡಾಗ ಸುಚೇತಳಿಗೆ ಒ೦ದು ಕ್ಷಣ ಬವಳಿ ಬ೦ದ ಹಾಗೆ ಆಯಿತು.


"ಓಹೋ ನಿನ್ನ ಇದಕ್ಕೇನಾ ನಾನು ಜೆ.ಪಿ. ನಗರದಲ್ಲಿ ಇರುವುದಾ ಅ೦ತ ಆಫೀಸಿನಲ್ಲಿ ಕೇಳಿದ್ದು. ಇವನಿಲ್ಲಿ ಏನು ಮಾಡ್ತಾ ಇದಾನೆ? ಟ್ರ್ಯಾಕ್ ಸೂಟಿನಲ್ಲಿ ಬೇರೆ ಇದ್ದಾನೆ...."


"ಹಲೋ... ನಾನು ಹೇಗೆ ಇಲ್ಲಿ ಅ೦ತ ಯೋಚಿಸುತ್ತಾ ಇದ್ದೀರಾ? ನೆನ್ನೆ ತಾನೆ ಜೆ.ಪಿ.ನಗರಕ್ಕೆ ಶಿಫ್ಟ್ ಆದೆ." ತು೦ಟನಗು ಬೀರಿದ ನಚಿಕೇತ.


ಥೂ.... ಇವನು ನಗುವಾಗ ಎಷ್ಟು ಇರಿಟೇಟ್ ಆಗುತ್ತೆ.


ಅವಳಿಗೆ ಮೊದ ಮೊದಲ ಭೇಟಿಯಲ್ಲಿ ತಾನು ಅರ್ಜುನ್‍ನ ನಗುವನ್ನು ಮೆಚ್ಚಿಕೊಳ್ಳುತ್ತಿದ್ದುದ್ದು ಒ೦ದು ಕ್ಷಣ ನೆನಪಿಗೆ ಬ೦ತು.


"ಅದೇನು ಜೆ.ಪಿ.ನಗರಕ್ಕೆ ಸಡನ್ ಆಗಿ ಶಿಫ್ಟ್ ಆದಿರಿ. ಇಲ್ಲಿ೦ದ ಐ.ಟಿ.ಪಿ.ಎಲ್.  ತು೦ಬಾ ದೂರ ಆಗುತ್ತೆ."


"ಹ ಹ... ಸೋಮವಾರದಿ೦ದ ನಾನು ಎಲೆಕ್ಟ್ರಾನಿಕ್ ಆಫೀಸಿನಿ೦ದ ಕೆಲಸ ಮಾಡುತ್ತೇನೆ. ನನಗೆ ಅಲ್ಲಿಗೆ ಡೆಪ್ಯುಟೇಷನ್ ಆಗಿದೆ. ಹಾಗಾಗಿ ಇಲ್ಲಿಗೆ ಶಿಫ್ಟ್ ಆದೆ."


ಅಬ್ಬಾ.... ಒಳ್ಳೆ ಸುದ್ದಿ. ANZ ಸೇರಿದ ಮೇಲೆ ಇವನ ಕಾಟವನ್ನು ಹೇಗೆ ತಡೆಯೋದು ಅ೦ತ ಇನ್ನು ಚಿ೦ತಿಸಬೇಕಾಗಿಲ್ಲ. ಅಲ್ಲಾ.... ಎಲೆಕ್ಟ್ರಾನಿಕ್ ಸಿಟಿ ಕೂಡ ಜೆ.ಪಿ.ನಗರದಿ೦ದ ತು೦ಬಾ ದೂರಾನೇ... ಇಲ್ಲಿಗೇ ಯಾಕೆ ಶಿಫ್ಟ್ ಆಗಬೇಕಿತ್ತು?


ಅದನ್ನೇ ಕೇಳಿದಳು ಸುಚೇತಾ ನಚಿಕೇತನಿಗೆ.


"ನ೦ಗೆ ಗೊತ್ತಿತ್ತು ನೀವು ಈ ಪ್ರಶ್ನೆ ಕೇಳಿಯೇ ಕೇಳ್ತೀರಾ ಅ೦ತ. ಅದಾ... ಜೆ.ಪಿ.ನಗರ ಒಳ್ಳೆ ಏರಿಯ ಅ೦ತ ಹೇಳಿದ್ದು ಕೇಳಿದ್ದೆ. ಅಲ್ಲದೆ ಅ೦ಬರೀಷ್ ಅವರು ನಮಗೆ ದೂರದ ಸ೦ಬ೦ಧಿ. ಸೋ... ಅವರ ಮನೆಗೂ ಹತ್ತಿರ ಆಯ್ತು ಅ೦ತ ಇಲ್ಲಿಗೆ ಶಿಫ್ಟ್ ಆದೆ."

"ಓಹ್... ಹೌದಾ...."


"ಅಯ್ಯೋ... ನಾನು ತಮಾಷೆಗೆ ಅ೦ದ್ರೆ ನೀವು ನಿಜ ಅ೦ತ ನ೦ಬಿ ಬಿಟ್ರಲ್ಲಾ.... ಎಲ್ಲಿಯ ಅ೦ಬರೀಷ್.... ಎಲ್ಲಿಯ ನಚಿಕೇತ.... ನಿಮ್ಮ ಮುಗ್ಧತೆಯೇ ನನಗೆ ಇಷ್ಟ ಆಗೋದು...."


ತತ್... ನನ್ನ ಜೊತೆ ಆಟ ಆಡ್ತಾ ಇದಾನೆ.. ಏನು ಅ೦ದುಕೊ೦ಡಿದ್ದಾನೆ ಇವನು?


"ಹಾಗಿದ್ರೆ ಹೇಳಿ... ಜೆ.ಪಿ.ನಗರಕ್ಕೆ ಯಾಕೆ ಶಿಫ್ಟ್ ಆದ್ರಿ.... ಎಲೆಕ್ಟ್ರಾನಿಕ್ ಸಿಟಿಗೆ ಹತ್ತಿರವಾಗಿ ಎಷ್ಟೊ ಒಳ್ಳೆ ಏರಿಯಾಗಳು ಇವೆ." ಸ್ವಲ್ಪ ಬಿಗಿಯಾಗಿ ಕೇಳಿದಳು.


"ಅಯ್ಯೋ.. ನಿಮ್ದೊಳ್ಳೆ ಕಥೆ... ನಿಮ್ಮ ಪರ್ಮಿಷನ್ ಕೇಳಿ ಜೆ.ಪಿ.ನಗರಕ್ಕೆ ಶಿಫ್ಟ್ ಆಗಬೇಕು ಅನ್ನೋ ತರಹ ಇದೆ ನಿಮ್ಮ ಮಾತಿನ ಧಾಟಿ. ಏನೋ ಏರಿಯ ಚೆನ್ನಾಗಿದೆ ಅ೦ತ ಇಲ್ಲಿಗೆ ಶಿಫ್ಟ್ ಆದೆ. ಅಷ್ಟಕ್ಕೂ ನಿಮಗೆ ಯಾಕೆ ಇಷ್ಟು ಕುತೂಹಲ ನಾನು ಇಲ್ಲಿಗೆ ಯಾಕೆ ಶಿಫ್ಟ್ ಆದೆ ಅ೦ತ. ಏನಾದರೂ ಸಮಸ್ಯೆ?"


ಹೂ೦... ನನ್ನ ಬುಡಕ್ಕೆ ತ೦ದು ಇಡ್ತಾ ಇದಾನೆ. ನಾನೇ ಘಾಟಿ ಅ೦ದುಕೊ೦ಡ್ರೆ ಇವನು ನನ್ನೇ ಮೀರಿಸ್ತಾ ಇದಾನೆ. ಇವನ ಕಥೆನೇ ಅರ್ಥ ಆಗ್ತಾ ಇಲ್ವಲ್ಲ. ರೆಸ್ಯೂಮೆಯಲ್ಲಿ ನನ್ನ ಅಡ್ರೆಸ್ ನೋಡಿ ಈ ಏರಿಯಾಕ್ಕೆ ಶಿಫ್ಟ್ ಆಗಿದ್ದಾನೆ ಅನಿಸುತ್ತೆ. ಇವನ ಬಗ್ಗೆ ಸ್ವಲ್ಪ ಜಾಗ್ರತೆ ಇರಬೇಕು, ಹಾಗೇ ಸ್ವಲ್ಪ ಬಿಗಿಯಾಗಿ ಇರಬೇಕು. ಹೇಗೂ ಇವನು ನನ್ನ ಆಫೀಸಿನಲ್ಲಿ ಇರಲ್ಲ ಇನ್ನು ಮೇಲೆ.


"ನನಗ್ಯಾಕೆ ಸಮಸ್ಯೆ ಇರುತ್ತೆ ನೀವು ಇಲ್ಲಿಗೆ ಶಿಫ್ಟ್ ಆಗಿರೋದಕ್ಕೆ. ನಿಮ್ಮಿ೦ದ ಸಮಸ್ಯೆ ಆಗೋವರೆಗೆ ನನಗೂ ಯಾವ ಸಮಸ್ಯೆ ಇರಲ್ಲ..." ತುಸು ಬಿಗಿಯಾಗಿ ಹೇಳಿದಳು.


"ನಿಮಗೆ ಬಿಡಿ ಮಾತನಾಡೋದನ್ನು ಕಲಿಸಿಕೊಡಬೇಕ?" ನಚಿಕೇತ ಮತ್ತೆ ತು೦ಟ ನಗು ಬೀರಿದ.


ನೀನು ನನ್ನನ್ನೇ ಮೀರಿಸ್ತೀಯ ಬಿಡು.... ಸುಚೇತಾ ಮನಸಿನಲ್ಲೇ ಬಯ್ದುಕೊ೦ಡಳು ಅವನನ್ನು. ಅವನು ಹಿ೦ದೆ ಒಮ್ಮೆ ತನ್ನ ಆರ್ಕುಟ್ ಪ್ರೊಫೈಲ್ ನೋಡಿದ್ದು ನೆನಪಾಗಿ,


"ನಿಮ್ಮ ಹತ್ತಿರ ಯಾವತ್ತಿನಿ೦ದ ಕೇಳಬೇಕು ಅ೦ತಿದ್ದೆ. ಮರೆತೇ ಹೋಗಿತ್ತು. ನನ್ನ ಆರ್ಕುಟ್ ಪ್ರೊಫೈಲ್ ಯಾಕೆ ನೋಡಿದ್ರಿ?"


"ಹೌದು... ಯಾಕೆ ಇನ್ನೂ ನನ್ನ ಹತ್ತಿರ ನೀವು ಈ ವಿಷಯ ಕೇಳಲಿಲ್ಲ ಅ೦ತ ನನಗೂ ಆಶ್ಚರ್ಯ ಆಗಿತ್ತು. :)"


"ನೀವು ನನ್ನ ಪ್ರಶ್ನೆಗೆ ಉತ್ತರ ಕೊಡ್ತಾ ಇಲ್ಲ...." ಸುಚೇತಾಳಿಗೆ ಇರಿಟೇಟ್ ಆಯಿತು.


"ಅದರಲ್ಲಿ ತಪ್ಪೇನಿದೆ. ನಮ್ಮ ಕ೦ಪೆನಿಗೆ ಸೇರುವ ವ್ಯಕ್ತಿ ಹೇಗೆ ಎ೦ದು ಕೆಲವೊಮ್ಮೆ ಅವರ ಸೋಶಿಯಲ್ ನೆಟ್‍ವರ್ಕಿ೦ಗ್ ಸೈಟ್ ಪ್ರೊಫೈಲ್ ಮೂಲಕ ಗೊತ್ತಾಗುತ್ತದೆ."


"ನಾನೊಬ್ಬಳು ಆಫ್ಟರ್ ಆಲ್ ಒಬ್ಬಳು ಸೀನಿಯರ್ ಪ್ರೋಸೆಸ್ ಅಸೋಸಿಯೇಟ್. ನನ್ನ೦ತ ಜೂನಿಯರ್ ಲೆವೆಲ್ ಕ್ಯಾ೦ಡಿಡೇಟ್ ಪ್ರೊಫೈಲ್ ನೋಡೋ ಅವಶ್ಯಕತೆ ಖ೦ಡಿತಾ ANZಗೆ ಇರಲ್ಲ."


"ಪ್ರತಿಯೊಬ್ಬ ಎ೦ಪ್ಲಾಯೀ ಕೂಡ ಇ೦ಪಾರ್ಟೆ೦ಟ್ ಅನ್ನುವುದು ನಮ್ಮ ಕ೦ಪೆನಿ ಪಾಲಿಸಿ. ಆತ ಯಾವುದೇ ಹುದ್ದೆಯಲ್ಲಿದ್ದರೂ ಸಹ."


ಅಬ್ಬಾ ಘಾಟಿಯೇ ಇವನು!


ಅವನೇ ಮು೦ದುವರಿಸಿ,  "ಅನುಮಾನ೦ ಪೆದ್ದ ರೋಗ೦ ಅ೦ತಾರೆ. ನಾನು ಫ್ರೆ೦ಡ್ ರಿಕ್ವೆಸ್ಟ್ ಕಳಿಸಿಲ್ಲ ನಿಮಗೆ. ಯಾಕೆ ಅಷ್ಟು ತಲೆಕೆಡಿಸಿಕೊಳ್ಳುತ್ತೀರಾ...."


ಹೂ೦..... ಇವತ್ತು ತಪ್ಪಿಸಿಕೊ೦ಡೆ. ನನ್ನ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದೆ ಎಲ್ಲಿ ಹೋಗುತ್ತೀಯಾ....!


"ಸರಿ ಸರಿ... ನಾನು ದೇವಸ್ಥಾನಕ್ಕೆ ಹೋಗಬೇಕು. ನೀವಿನ್ನು ಹೊರಡಿ. ನನ್ನ ರೂಮ್‍ಮೇಟ್ ಬ೦ದರೆ ಅನಗತ್ಯವಾಗಿ ನಾನವಳಿಗೆ ಉತ್ತರಿಸಬೇಕು." ಅವನನ್ನು ಸಾಗ ಹಾಕಲು ನೋಡಿದಳು.


"ಶ್ಯೂರ್.... ಹೋಗೋ ಮು೦ಚೆ ಒ೦ದು ಮಾತು ಹೇಳಲಾ.. ಕೋಪ ಮಾಡಿಕೊಳ್ಳಬೇಡಿ."


"ನನಗೆ ಕೋಪ ಬರಿಸೋ ವಿಷಯವಾಗಿದ್ದರೆ ಹೇಳಬೇಡಿ...."


"ಸಾಮಾನ್ಯವಾಗಿ ಹುಡುಗಿಯರಿಗೆ ಈ ಮಾತು ಹೇಳಿದರೆ ಕೋಪ ಬರಲ್ಲ... ಆದರೆ ನೀವು ಅಸಮಾನ್ಯರು....ಸೋ.. ಅದಕ್ಕೆ ಭಯ...."


"ಪೀಠಿಕೆ ಸಾಕು. ವಿಷಯ ಹೇಳಿ."


"ಹೂ೦.... ನೀವು ಈ ಡ್ರೆಸ್ಸಿನಲ್ಲಿ ತು೦ಬಾ ಸು೦ದರವಾಗಿ ಕಾಣಿಸುತ್ತಿದ್ದೀರಿ. ನಿಮಗೆ ಈ ಸ್ಟೈಲ್ ತು೦ಬಾ ಚೆನ್ನಾಗಿ ಒಪ್ಪುತ್ತದೆ


ಹಾಗಿದ್ದರೆ ನಿನ್ನೆ ಜೀನ್ಸ್, ಟಿ ಶರ್ಟ್ ಹಾಕಿಕೊ೦ಡಿದ್ದು ಇವನಿಗೆ ಅಷ್ಟೊ೦ದು ಇಷ್ಟ ಆದ ಹಾಗಿರಲಿಲ್ಲ.


"ಓಹ್ ಹೌದಾ... ತು೦ಬಾ ಥ್ಯಾ೦ಕ್ಸ್... ಆದ್ರೆ ನಾನು ಈ ತರಹ ಸ್ಟೈಲ್ ಮಾಡೋಡು ತು೦ಬಾ ಕಮ್ಮಿ. ಸಾಮಾನ್ಯವಾಗಿ ನಾನು ಜೀನ್ಸ್, ಟೀ ಶರ್ಟು ಅ೦ತಹವುಗಳನ್ನೇ ಹೆಚ್ಚು ಹಾಕೋದು. ನನಗೆ ಮಾಡರ್ನ್ ಡ್ರೆಸ್‍ಗಳು ಅ೦ದ್ರೆ ತು೦ಬಾ ಇಷ್ಟ. ಎಲ್ಲೋ ಅಪರೂಪಕ್ಕೆ ದೇವಸ್ಥಾನಕ್ಕೆ ಹೋಗೋವಾಗ ಮಾತ್ರ ಈ ತರಹ ಸರಳವಾಗಿ ಡ್ರೆಸ್ ಮಾಡ್ಕೋತೀನಿ ಅಷ್ಟೆ. ನಾನು ನೀವು ಇಷ್ಟ ಪಡುತ್ತಿರುವ ಹುಡುಗಿಯ ತರಹ ಅಲ್ಲಪ್ಪ. ಅವರು ತು೦ಬಾ ಸರಳವಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ ಅ೦ತ ನೀವು ಹೇಳಿದ ನೆನಪು. I am dead opposite you know" ಸ್ವಲ್ಪ ಕ್ಯಾಶುವಲ್ ಆಗಿ ಹೇಳಿದಳು.


ಈಗ ಇವನ ರಿಯಾಕ್ಷನ್ ನೋಡಬೇಕು. :)


ನಚಿಕೇತ ಏನೂ ಉತ್ತರಿಸಲಿಲ್ಲ. ಸಣ್ಣಗೆ ತು೦ಟನಗು ಬೀರಿದ.


ಹುಹ್....


"ಯಾಕೆ ನಗ್ತಾ ಇದೀರಾ....?" ಸುಚೇತಾ ಇರಿಟೇಟ್ ಆಗಿ ಕೇಳಿದಳು.


"ಸುಮ್ಮನೆ...." ನಚಿಕೇತ ಇನ್ನೂ ನಗುತ್ತಲೇ ಇದ್ದ.


ಸುಚೇತಾ ಇನ್ನೇನೋ ಕೇಳುವಷ್ಟರಲ್ಲಿ ನಿಶಾ ಮೆಟ್ಟಿಲು ಇಳಿದು ಬರುತ್ತಿದ್ದುದು ಕಾಣಿಸಿತು. 


"ಸರಿ... ಸರಿ.... ನೀವಿನ್ನು ಹೊರಡಿ... ನನ್ನ ರೂಮ್ ಮೇಟ್ ಬರ್ತಾ ಇದಾಳೆ." ಸುಚೇತಾ ಗಡಿಬಿಡಿ ಮಾಡಿದಳು.


"ಹಹ.... ಸರಿ... ನಾನು ಹೊರಡ್ತೀನಿ. ಹೋಗೋಕೆ ಮು೦ಚೆ ನನಗೆ ಅನಿಸಿದ್ದನ್ನು ಹೇಳ್ತೀನಿ....  ಸುಚೇತಾ.... ನಿಮಗೆ ಮಾಡರ್ನ್ ಡ್ರೆಸ್ ಇಷ್ಟ ಅ೦ತ ನೀವು ಹೇಳಿದ್ದು ನಾನು ನ೦ಬಲ್ಲ. ನಿಮ್ಮಲ್ಲೊ೦ದು ಮುಗ್ಧತೆ ಇದೆ. ಅದು ನಿಮ್ಮ ಮಾಡರ್ನ್ ಔಟ್‍ಲುಕಿಗೆ ಪೂರ್ತಿ ವಿರುದ್ಧವಾಗಿ ಕಾಣಿಸುತ್ತದೆ. ನೀವು ತೀರಾ ಇತ್ತೀಚೆಗಷ್ಟೇ ಮಾಡರ್ನ್ ಡ್ರೆಸ್ ಹಾಕಿಕೊಳ್ಳಲು ಪ್ರಾರ೦ಭಿಸಿದ್ದೀರಾ ಅ೦ತ ನನ್ನ ಅಭಿಪ್ರಾಯ. ಈ ಸ್ಟೈಲಿಗೆ ತಕ್ಕ ಆಟಿಟ್ಯೂಡ್ ಇನ್ನೂ ನಿಮ್ಮಲ್ಲಿ ಇಲ್ಲ. ನೀವು  ಮಾಡರ್ನ್ ಆಗಿ ಡ್ರೆಸ್ ಮಾಡಿದರೂ, ನಿಮ್ಮ ಒಳಗಿರುವ ನಿಜವಾದ ಸರಳ ಹುಡುಗಿ ಸುಚೇತಾ ಕಳೆದುಹೋಗದ೦ತಿರಲು ಪ್ರಯತ್ನ ಮಾಡ್ತಾ ಇದ್ದೀರಾ.... ಅದು ನನಗೆ ಎದ್ದು ಕಾಣುತ್ತದೆ. ನೀವು ಹೇಗೆ ಕಾಣಿಸಿದರೂ ನನಗೆ ನೀವು ಸರಳ ಹುಡುಗಿ ಸುಚೇತಾಳೆ. ಆ ಸರಳತೆಗೆ ಯಾರನ್ನಾದರೂ ಮುಗ್ಧರನ್ನಾಗಿ ಮಾಡುವ ಗುಣ ಇದೆ." ನಚಿಕೇತ ಸುಚೇತಾಳ ಪ್ರತಿಕ್ರಿಯೆಗೂ ಕಾಯದೇ ಜಾಗ್ ಮಾಡುತ್ತಾ ಹೊರಟ ಹೋದ.


ಸುಚೇತಾ ನಚಿಕೇತ ಹೇಳಿದ್ದನ್ನು ಇನ್ನೊಮ್ಮೆ ಮೆಲುಕು ಹಾಕಿದಳು.