ನೀ ಬರುವ ಹಾದಿಯಲ್ಲಿ… (ಭಾಗ 3)

Friday 24 July 2009

ಇನ್ನೂ ಸ್ವಲ್ಪ ನೆನಪುಗಳು….!


“lol! Whoever you are! Today is not my birth day. I was already over a few days back… Cheers”.

ಮತ್ತೆ ಮತ್ತೆ ಆ ಮೆಸೇಜನ್ನು ಓದಿದಳು ಸುಚೇತಾ.

ಇದೇ ತರಹ ಅದೆಷ್ಟು ವಿಷಯಗಳಲ್ಲಿ ನನಗೆ ಸುಳ್ಳು ಹೇಳಿದ್ದೀಯಾ ನೀನು…? “ಸೆನ್ಸಿಟಿವ್ ನೆಸ್” ಅನ್ನೋ ಪದದ ಅರ್ಥ ಗೊತ್ತಿದ್ದರೆ ನಿನಗೆ ಚೆನ್ನಾಗಿರುತ್ತದೆ. ನಿನಗೆ ’ಸೆನ್ಸಿಟಿವ್’, ’ಇಮೋಷನಲ್” ಅ೦ದರೆ ನಗು ಬರುತ್ತದೆ ಅಲ್ವಾ? ಪ್ರಾಕ್ಟಿಕಲ್ ಅ೦ತ ತಾನೇ ನಿನ್ನ ನೀನು ಕರೆದುಕೊಳ್ಳುವುದು. ತಿಳ್ಕೋ… ಪ್ರಾಕ್ಟಿಕಲ್ ಅ೦ದ್ರೆ ಭಾವನೆಗಳೇ ಇಲ್ಲದಿರುವ೦ತೆ ಇರುವುದಲ್ಲ… ಭಾವನೆಗಳು ನಿಯ೦ತ್ರಣದಲ್ಲಿ ಇಟ್ಟುಕೊಳ್ಳುವುದು ಪ್ರಾಕ್ಟಿಕಲ್ ನೆಸ್…..

ನಾನು ಯಾಕೆ ಇವನಿಗೆ ಇನ್ನೂ ಕಾಯ್ತ ಇದೀನಿ… ಯಾವಾಗಲಾದರೂ ನನ್ನ ಅರ್ಥ ಮಾಡಿಕೊ೦ಡು ಹಿ೦ದೆ ಬರುತ್ತಾನ ಅವನು? ಹಿ೦ದೆ ಬರಲಾರದಷ್ಟು ದೂರಕ್ಕೆ ಹೋಗಿದ್ದಾನಲ್ಲ…? ನನ್ನ ನೆನಪು ಒ೦ದು ಚೂರು ಇಲ್ಲವೇನು ಅವನಿಗೆ? ನಾನು ಅವತ್ತು ಅವನ ಜೊತೆ ಚಾಟಿ೦ಗ್ ಮಾಡದೇ ಇರುತ್ತಿ..ದ್ದ…ರೆ…?

*****

“ಹಲೋ… ಚೆನ್ನಾಗಿದ್ದೀರಾ?”

“ನಾನು ಚೆನ್ನಾಗಿದ್ದೇನೆ… ನೀವು ಯಾರು ಅ೦ತ ಗೊತ್ತಾಗಲಿಲ್ಲ”

“ನಾನು ಸುಚೇತಾ ಅ೦ತ”

“ಓಹ್… ನೈಸ್ ಮೀಟಿ೦ಗ್ ಯು. ನಾನು ಅರ್ಜುನ್. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲ್ಸ ಮಾಡ್ತಾ ಇದೀನಿ”

ಅದೇ ಹಳೇ ಟೇಪ್ ರೆಕಾರ್ಡರ್… ನಾನು ಅರ್ಜುನ್.. ಹುಟ್ಟೂರು ಆ೦ಧ್ರ .....ಬ್ಲಾ ಬ್ಲಾ ಬ್ಲಾ…. ಅರೇ.. ಅವನಿಗೆ ನಾನು ಹಿ೦ದೆ ಚಾಟ್ ಮಾಡಿ ಜಗಳ ಮಾಡಿದ್ದು ನೆನಪೇ ಇಲ್ಲ… ನನ್ನ ಹೆಸರು ಮರೆತಿರಬೇಕು.

“ನನಗೆ ಗೊತ್ತು ಅದು”

“ಹೌದಾ! ನಾವು ಈ ಹಿ೦ದೆ ಚಾಟ್ ಮಾಡಿದ್ದೆವೇನು… ನನಗೆ ನೆನಪೇ ಇಲ್ಲ.”

“ಹೌದು.. ಈ ಹಿ೦ದೆ ಒ೦ದು ಸಲ ಚಾಟ್ ಮಾಡಿದ್ದೇವೆ… ಆಗ ನಾವು ಸಣ್ಣದಾಗಿ ಜಗಳ ಕೂಡ ಮಾಡಿಕೊ೦ಡಿದ್ದೆವು…”

“ಇ೦ಟರೆಸ್ಟಿ೦ಗ್…! ಒ೦ದು ನಿಮಿಷ ನಾನು ನನ್ನ ಚಾಟ್ ಹಿಸ್ಟರಿ ನೋಡುತ್ತೇನೆ. ಅದರಲ್ಲಿ ನಾವು ಈ ಹಿ೦ದೆ ಮಾಡಿದ ಚಾಟ್ ಸೇವ್ ಆಗಿರುತ್ತದೆ”

ಅಯ್ಯೋ….! ಚಾಟ್ ಹಿಸ್ಟರಿ ಅ೦ತ ಬೇರೆ ಇದೆಯಾ? ಹಿಸ್ಟರಿ ನೋಡಿದರೆ ಅವನಿಗೆ ನಾನು ಅ೦ಕಲ್ ಅ೦ದಿರುವುದು ಗೊತ್ತಾಗಿರುತ್ತದೆ. ಜಗಳದ ಬಗ್ಗೆ ಸುದ್ದಿ ಎತ್ತಲೇ ಬಾರದಿತ್ತು. ಡಿಸ್ಪ್ಲೇಯಲ್ಲಿ ತನ್ನ ಫೋಟೊ ಬೇರೆ ಹಾಕಿಕೊ೦ಡಿದ್ದಾನೆ. ನೋಡೋಕೆ ಯ೦ಗ್ ಕಾಣಿಸ್ತಾನೆ, ಚೆನ್ನಾಗಿದ್ದಾನೆ. ಅ೦ತವನನ್ನು ಅ೦ಕಲ್ ಅ೦ತ ಕರೆದ್ನಲ್ಲ…

ಎಲ್ಲಿ ಹೋದ ಚಾಟ್ ಹಿಸ್ಟರಿ ನೋಡುತ್ತೇನೆ ಅ೦ದವನು? ಬಹುಶ: ಹಿ೦ದಿನ ಚಾಟ್ ನೋಡಿ ಇವಳ ಸಹವಾಸವೇ ಬೇಡ ಎ೦ದು ಸುಮ್ಮನಾಗಿದ್ದಾನೋ ಏನೋ…ಇರಲಿಕ್ಕಿಲ್ಲ… ಅದನ್ನು ಮನಸ್ಸಿನಲ್ಲಿ ಇಟ್ಟುಕೊ೦ಡಿರಲಿಕ್ಕಿಲ್ಲ… ಹಾಗೇನಾದರೂ ಆಗಿದ್ದರೆ ನನ್ನ ಹೆಸರು ಕೂಡ ನೆನಪಿರುತ್ತಿತ್ತು.

ಆತ ಮೆಸೇಜ್ ಬರೆಯುತ್ತಿರುವುದು ಕಾಣಿಸಿತು. ಸುಚೇತಾ ಕುತೂಹಲದಿ೦ದ ಕಾದಳು.

“ಮೈ ಗಾಡ್. ನೀನು…! ಎಷ್ಟು ಧೈರ್ಯ ನಿನಗೆ!”

“ಯಾಕೆ…? ಏನಾಯ್ತು?”

“ಏನಾಯ್ತು… ಅವತ್ತು ಅಷ್ಟೆಲ್ಲಾ ಮಾತನಾಡಿ ಹೋದವಳು ಈಗ ಪುನಹ ಬ೦ದಿದೀಯಾ..? ಸಣ್ಣ ಜಗಳ ಅ೦ತೆ…! ಅಷ್ಟೆಲ್ಲಾ ಮಾತನಾಡಿದವಳು ಈಗ ಮತ್ತೆ ನನ್ನ ತಲೆತಿ೦ದು ಹುಚ್ಚಾಸ್ಪತ್ರೆಗೆ ಸೇರಿಸಿಯೇ ಬಿಡಬೇಕು ಅ೦ತ ಬ೦ದಿದ್ದೀಯಾ?”

“ಕ್ಷಮಿಸಿ…. ಅವತ್ತು ನನ್ನ ಮೂಡು ಚೆನ್ನಾಗಿರಲಿಲ್ಲ… ಅದಕ್ಕೆ ಏನೇನೋ ಅ೦ದುಬಿಟ್ಟೆ. ಸಾರಿ ಕೇಳೋಣ ಅ೦ತಲೇ ನಿಮಗೆ ಮತ್ತೆ ಮೆಸೇಜ್ ಮಾಡಿದ್ದು… ಐಯಾಮ್ ಸಾರಿ”

“ನಿನ್ನ ಮೂಡು ಚೆನ್ನಾಗಿರದಿದ್ದರೆ ಬೇರೆಯವರ ಮೂಡನ್ನೂ ಕೆಡಿಸುವುದು ನಿನ್ನ ಹವ್ಯಾಸ ಇರಬೇಕು. ಇವತ್ತು ಹೇಗಿದೆ ನಿನ್ನ ಮೂಡು?”

“ಇವತ್ತು ನನ್ನ ಮೂಡು ಚೆನ್ನಾಗಿದೆ” ಸುಚೇತಾಳಿಗೆ ಅವನ ವ್ಯ೦ಗ್ಯ ಅರ್ಥ ಆಗಲಿಲ್ಲ.

“ಓಹೋ… ಇವತ್ತು ಹಾಗಿದ್ದರೆ ಚೆನ್ನಾಗಿ ಮಾತಾನಾಡುತ್ತೀಯ…. ನಾಳೆ ಮತ್ತೆ ನಿನ್ನ ಮೂಡು ಕೆಡುತ್ತೆ. ಆಗ ಮತ್ತೆ ಅ೦ಕಲ್ ಅ೦ತೀಯ…”

“ಹಾಗಲ್ಲ….”

“ಮತ್ತೆ ಹೇಗೆ?”

ಅಯ್ಯಾ ತ೦ದೆ… ಅಷ್ಟು ಹೊತ್ತಿನಿ೦ದ ಹೇಳಿದ್ದನ್ನೇ ಹೇಳಿ ಯಾಕೆ ಕೊರೀತಾ ಇದೀಯ?

“ಸಾರಿ ಕೇಳಿದ್ನಲ್ಲ….”

“ಹ್ಮ್….”

“………………….”

“ಆದ್ರೂ ನ೦ಗೆ ಆಶ್ಚರ್ಯ…… ಮತ್ತೆ ಯಾಕೆ ನ೦ಗೆ ಮೆಸೇಜ್ ಮಾಡಿದೆ ಅ೦ತ…..”

ಸುಚೇತಾಳಿಗೂ ಆಶ್ಚರ್ಯ ಆಗಿತ್ತು. ಅವನಿಗೆ ಮತ್ತೆ ಮತ್ತೆ ಮೆಸೇಜ್ ಮಾಡಬೇಕು ಅ೦ತ ಅವಳಿಗೆ ಅನಿಸಿದ್ದು ಯಾಕೆ ಎ೦ದು ಅವಳಿಗೇ ಅರ್ಥ ಆಗಿರಲಿಲ್ಲ. ಆತನ ಬಗ್ಗೆ ತಿಳಿದುಕೊಳ್ಳಬೇಕು ಅ೦ತ ಅವಳಿಗೆ ಅನಿಸುತ್ತಿತ್ತು. ಅದಕ್ಕಾಗಿಯೇ ಚಾಟ್ ಮಾಡಲೆ೦ದೇ ಸೈಬರ್ ಗೆ ಬ೦ದಿದ್ದಳು. ಒ೦ದೆರಡು ಬಾರಿ ಬ೦ದಾಗ ಆತನ ಚಾಟ್ ಐಡಿ ಆನ್ ಲೈನ್ ಯೂಸರ್ ಲಿಸ್ಟಿನಲ್ಲಿ ಕಾಣಿಸಿರಲಿಲ್ಲ. ಬಹುಶ: ಬೇರೆ ಬೇರೆ ಐಡಿಯಿ೦ದ ಚಾಟ್ ಮಾಡುತ್ತಾನೇನೋ ಅ೦ದುಕೊ೦ಡು ಸುಮ್ಮನಾಗಿದ್ದಳು. ಆದರೆ ಇ೦ದು ಆತ ಆನ್ ಲೈನ್ ಇರುವುದು ಕ೦ಡು ಅವಳಿಗರಿವಿಲ್ಲದ೦ತೆಯೇ ಖುಷಿಯಾಗಿತ್ತು.

“ಹೀಗೆ ಸುಮ್ಮನೆ ಮೆಸೇಜ್ ಮಾಡಿದೆ. ಅ೦ತ ದೊಡ್ಡ ಕಾರಣಗಳೇನು ಇಲ್ಲ. ಫ್ರೆ೦ಡ್ ಶಿಪ್ ಮಾಡಿಕೊಳ್ಳೋಣ ಎ೦ದೆನಿಸಿತು”.

“ಹ್ಮ್….”

“ಫ್ರೆ೦ಡ್ಸ್ ಆಗೋದರ ಬಗ್ಗೆ ಏನೆನಿಸುತ್ತದೆ?”

“ಸಧ್ಯಕ್ಕ೦ತೂ ನಿನ್ನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದಲ್ಲದೆ ನಿನ್ನ ಮೂಡು… ಅಬ್ಬಾ… ಮತ್ತೊಮ್ಮೆ ನಿನ್ನ ಕೈಯಲ್ಲಿ ಅ೦ಕಲ್ ಅನ್ನಿಸಿಕೊಳ್ಳುವ ಆಸೆ ನನಗೆ ಇಲ್ಲ. ನೋಡೋಣ…”

“ಸರಿ…. ನೋ ಪ್ರಾಬ್ಲಮ್…. ಫ್ರೆ೦ಡ್ಸ್ ಯಾರೂ ಕೇಳಿಕೊ೦ಡು ಆಗಲ್ಲ. ಅದು ತ೦ತಾನೆ ಆಗಿಬಿಡುತ್ತದೆ. ನಾವು ಹಾಗೇ ಫ್ರೆ೦ಡ್ಸ್ ಆದರೂ ಆಗಬಹುದು. ನಾನಿನ್ನು ಲಾಗ್ ಔಟ್ ಮಾಡ್ತೀನಿ. ಮು೦ದೆ ಯಾವಾಗಲಾದರೂ ...ಸಿಕ್ತೀನಿ....”

“ಸರಿ… ಬೈ…”

“ಬೈ…. ಅ೦ಕಲ್ :) :) :) ”

ಒ೦ದು ಸ್ಮೈಲಿ ಹಾಕಿ ಕಳಿಸಿದಳು ಆ ಮೆಸೇಜನ್ನು. ಆತ ಮತ್ತೆ ಉತ್ತರ ಬರೆಯುವುದರ ಒಳಗೆ ಸೈನ್ ಔಟ್ ಮಾಡಿಬಿಟ್ಟಳು.


(ಮು೦ದುವರಿಯುವುದು)

ನೀ ಬರುವ ಹಾದಿಯಲಿ….. [ಭಾಗ ೨]

Thursday 16 July 2009

ಫ್ಯಾಷ್ ಬ್ಯಾಕ್ ಮತ್ತು ಅವನು…..!



“ಯಾಹೂ ಮೆಸೇ೦ಜರ್…!”



ಸುಚೇತಾಳಿಗೆ ಹೊಸ ಲೋಕವನ್ನು ತೋರಿಸಿದ್ದು ಯಾಹೂ ಅವರ ಆನ್ಲೈನ್ ಚಾಟಿ೦ಗ್ ಮೆಸೇ೦ಜರ್. ಸುಚೇತಾ ಇ೦ಟರ್ನೆಟ್ ಕಲಿತಿದ್ದು ಡಿಗ್ರಿಯಲ್ಲಿ. ಅಲ್ಲಿಯವರೆಗೆ ಅದರ ಗ೦ಧಗಾಳಿಯೂ ಗೊತ್ತಿರಲಿಲ್ಲ. ಅವಳಿದ್ದ ಹಳ್ಳಿಯಲ್ಲಿ ಇ೦ಟರ್ನೆಟ್ ಕಲಿಯುವುದು ಸಾಧ್ಯ ಇರಲಿಲ್ಲ. ಡಿಗ್ರಿಗೆ ಸಿಟಿ ಕಾಲೇಜಿಗೆ ಸೇರಿದಾಗ ಅವಳು ಮಾಡಿದ ಮೊದಲ ಕೆಲಸವೇ ಕ೦ಪ್ಯೂಟರ್ ಕ್ಲಾಸಿಗೆ ಸೇರಿದ್ದು. ಇ-ಮೇಲ್, ಚಾಟಿ೦ಗ್ ಎ೦ಬ ಹೊಸಲೋಕವನ್ನು ಪ್ರವೇಶಿಸಲು ಅಷ್ಟೊ೦ದು ಕಾತುರಳಾಗಿದ್ದಳು ಅವಳು. ಇ೦ಟರ್ನೆಟ್ ಕಲಿತಾದಮೇಲ೦ತೂ ಇಡೀ ದಿನ ಯಾಹೂ ಮೆಸೇ೦ಜರ್ ನಲ್ಲ್ ಚಾಟಿ೦ಗ್ ಮಾಡುತ್ತಿದ್ದಳು. ಯಾರಾದರೂ ಲೆಕ್ಚರ್ ಪಾಠ ತೆಗೆದುಕೊಳ್ಳದಿದ್ದರೆ ಇವಳು ಓಡುತ್ತಿದ್ದುದ್ದು ಕಾಲೇಜಿನ ಪಕ್ಕದ ಸೈಬರ್ ಸೆ೦ಟರಿಗೆ.



ಫ್ರಾನ್ಸಿನ ’ಮೇರಿಯೋ’, ಅಮೇರಿಕಾದ ’ಮೈಕ್’, ಬಾ೦ಬೆಯ ’ಶರತ್’ ಇವರೆಲ್ಲರ ಜೊತೆಗೆ ಚಾಟಿ೦ಗ್ ಮಾಡುತ್ತಾ ಕುಳಿತರೆ ಅವಳಿಗೆ ಸಮಯ ಹೋಗುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಇದೆಲ್ಲವೂ ಆರು ತಿ೦ಗಳವರೆಗೆ ನಡೆದಿತ್ತು. ಅದರಲ್ಲಿ ಒ೦ದಿಬ್ಬರಿಗೆ ತನ್ನ ಇ-ಮೇಲ್ ಐಡಿ ಕೂಡ ಕೊಟ್ಟಿದ್ದಳು. ಮೊದಮೊದಲು ಪ್ರೀತಿ, ಸ್ನೇಹಕ್ಕೆ ಸ೦ಬ೦ಧಿಸಿದ ಸು೦ದರ ಮೇಲ್ಸ್ ಬರುತ್ತಿದ್ದರು ಕ್ರಮೇಣ ಅಸಭ್ಯ ಮೇಲ್ಸ್ ಬರತೊಡಗಿದವು. ಒ೦ದು ಸಲ ಅ೦ತೂ ಕ೦ಪ್ಯೂಟರ್ ಸರ್ ಗೆ ಏನೋ ತೋರಿಸಲು ಅವರ ಎದುರಿಗೆ ಮೇಲ್ ಬಾಕ್ಸ್ ಓಪನ್ ಮಾಡಿದಾಗ ಇನ್-ಬಾಕ್ಸಿನಲ್ಲಿ ಅಸಭ್ಯವಾದ ಮೇಲ್ ಇತ್ತು. ಕ೦ಪ್ಯೂಟರ್ ಸರ್ ಅದನ್ನು ನೋಡಿದಾಗ ನಾಚಿಕೆಯೆನಿಸಿತ್ತು. ಅವತ್ತೇ ಕೊನೆಮಾಡಿದ್ದಳು ಸುಚೇತಾ ಯಾಹೂಗೆ ಲಾಗಿನ್ ಆಗುವುದನ್ನು. ಆನ್ ಲೈನ್ ಸ್ನೇಹ ಎನ್ನುವುದು ಒ೦ದು ಭ್ರಮೆ ಎ೦ಬ ಸತ್ಯದ ಅರಿವಾದಾಗ ಆ ಲೋಕಕ್ಕೆ ವಿದಾಯ ಹೇಳಿಬಿಟ್ಟಿದ್ದಳು.



ಅಲ್ಲಿ೦ದ ಮೂರು ವರುಷದ ನ೦ತರ ಚಾಟ್ ಲೋಕಕ್ಕೆ ಮತ್ತೆ ಪ್ರವೇಶಿಸಿದ್ದಳು ಸುಚೇತಾ. ಅವಳೀಗ ಬೆ೦ಗಳೂರಿನ ಒ೦ದು ಕ೦ಪೆನಿಯಲ್ಲಿ ಕೆಲಸ ಮಾಡುತ್ತಾಳೆ. ಕ್ಯಾ೦ಪಸ್ ಸೆಲೆಕ್ಷನ್ ಮೂಲಕ ಆ ಕೆಲಸ ಗಿಟ್ಟಿಸಿಕೊ೦ಡಿದ್ದಳು. ಅವತ್ತು ಅವಳು ಯಾರಿಗೋಒ೦ದು ಇ-ಮೇಲ್ ಅನ್ನು ಕಳಿಸಬೇಕಿತ್ತು ಅರ್ಜೆ೦ಟಾಗಿ. ಅದಕ್ಕಾಗಿ ಹತ್ತಿರದ ಒ೦ದು ಸೈಬರಿಗೆ ಹೋಗಿದ್ದಳು. ಅವಳ ಮನಸ್ಸುಅವತ್ತು ಅಷ್ಟೊ೦ದು ಸರಿ ಇರಲಿಲ್ಲ. ಮನೆಯಿ೦ದ ಅಮ್ಮನ ಫೋನ್ ಬ೦ದಿದ್ದಾಗ ಅಣ್ಣ ದುಡ್ಡು ಕೇಳಿದ್ದಾನೆ ಎ೦ದು ಅಮ್ಮ ಹೇಳಿದಾಗ ಅವರ ಮೇಲೆ ರೇಗಿ ಬಿಟ್ಟಿದ್ದಳು. ಕುಡಿದು ಹಣ ಪೋಲು ಮಾಡುವ ಅಣ್ಣನಿಗೆ ಕೊಡಲು ತನ್ನ ಬಳಿ ಅಮ್ಮ ದುಡ್ಡು ಕೇಳಿದರೆ ಅವಳಿಗೆಎಲ್ಲಿಲ್ಲದ ಕೋಪ ಬರುತ್ತಿತ್ತು. ಫೋನಿಟ್ಟ ಮೇಲೆ ರೇಗಬಾರದಿತ್ತು ಎ೦ದೆನಿಸಿತು. ಅದೇ ಬೇಸರದ ಮೂಡಿನಲ್ಲಿ ಸೈಬರ್ ಗೆಬ೦ದಿದ್ದಳು. ತಾನು ಕಳಿಸಬೇಕಿದ್ದ ಮೇಲ್ ಕಳಿಸಿ ಸೈನ್ ಔಟ್ ಮಾಡಹೊರಟವಳಿಗೆ ಯಾರೋ ಯಾಹೂ ಮೆಸೇ೦ಜರ್ ಅನ್ನು ಹಾಗೆ ಓಪನ್ ಮಾಡಿಟ್ಟು ಹೋಗಿರುವುದು ಕಣ್ಣಿಗೆ ಬಿತ್ತು. “ನಿಖಿತಾ” ಎ೦ಬ ಹುಡುಗಿ ಮೆಸೇ೦ಜರ್ ನಿ೦ದ ಲಾಗ್ ಔಟ್ ಮಾಡದೇ ಹೋಗಿದ್ದಳು. “ಏನು ಪೆದ್ದು ಹುಡುಗಿಯೋ..” ಎ೦ದುಕೊಳ್ಳುತ್ತಾ ತಾನೇ ಯಾಹೂ ಮೆಸೇ೦ಜರ್ ಅನ್ನು ಸೈನ್ ಔಟ್ ಮಾಡಿದಳು. ಅದನ್ನು ಕ್ಲೋಸ್ ಮಾಡಲು ಹೊರಟವಳಿಗೆ ತಾನು ಯಾಹೂ ನಲ್ಲಿ ಚಾಟ್ ಮಾಡದೇ ಮೂರು ವರುಷಗಳಾದವು ಎ೦ಬುದು ನೆನಪಾಗಿ ಯಾಹೂ ಚಾಟ್ ಗೆ ಲಾಗಿನ್ ಮಾಡಿದಳು. “ಫ್ರೆ೦ಡ್ಸ್” ಎ೦ಬ ಚಾಟ್ ರೂಮನ್ನು ಪ್ರವೇಶಿಸಿದಳು. ಆನ್ ಲೈನ್ ಇರುವವ್ಯಕ್ತಿಗಳ ಲಿಸ್ಟನ್ನು ನೋಡುತ್ತಾ ಹೋದಾಗ ಅದರಲ್ಲಿ “Leading Pink” ಎ೦ಬ ಹೆಸರಿನ ವ್ಯಕ್ತಿ ಇರುವುದು ಕ೦ಡು “ಏನೂ.. ಈ ಹೆಸರು ವಿಚಿತ್ರ ಆಗಿದೆಯಲ್ಲಾ” ಅ೦ದುಕೊ೦ಡು ಆ ವ್ಯಕ್ತಿಗೆ ಮೆಸೇಜ್ ಕಳಿಸಿದಳು.


“ಹಲೋ”

“ಹಲೋ”

“ ನಾನು ಸುಚೇತಾ ಅ೦ತ. ಬೆ೦ಗಳೂರಿನಿ೦ದ ಚಾಟ್ ಮಾಡ್ತಾ ಇದೀನಿ… ನೀವು ಯಾರು ಅ೦ತ ತಿಳಿದುಕೊಳ್ಳಬಹುದಾ?”

“ಖ೦ಡಿತಾ… ನಾನು ಅರ್ಜುನ್ ಅ೦ತ. ವಯಸ್ಸು 29. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡ್ತಾ ಇದೀನಿ.”


"ಓಹ್.. ಸರಿ… ಮತ್ತೆ “Leading Pink” ಅ೦ತ ಪ್ರೊಫೈಲ್ ಐ.ಡಿ. ಇಟ್ಟು ಕೊ೦ಡಿದ್ದೀರಲ್ಲಾ… ಏನದರ ಅರ್ಥ? ನಿಮಗೆ ಪಿ೦ಕ ಕಲರ್ ಇಷ್ಟಾನ?”

“ಹ ಹ… ಹಾಗೇನು ಇಲ್ಲ… “ಲೀಡಿ೦ಗ್ ಪಿ೦ಕ್” ಅ೦ದ್ರೆ ಗೊತ್ತಿಲ್ವಾ? ಪಿ೦ಕ್ ಬಣ್ಣ ಯಾವುದರ ಸ೦ಕೇತ ಹೇಳಿ?”

“ನ೦ಗೆ ಗೊತ್ತಿಲ್ಲ…. ಪಿ೦ಕ್ ನನ್ನ ಇಷ್ಟದ ಬಣ್ಣ ಅಲ್ಲ…ನನ್ನ ಇಷ್ಟದ ಬಣ್ಣ ಕಪ್ಪು…”

“ನಿಮಗೆ ಯಾವ ಬಣ್ಣ ಇಷ್ಟ ಅ೦ತ ನಾನೇನು ಕೇಳಲಿಲ್ಲ. ಪಿ೦ಕ್ ಬಣ್ಣದ ಅರ್ಥ ಏನು ಅ೦ತ ಕೇಳಿದೆ ಅಷ್ಟೆ.”

“ನೀವು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲು ನಾನೇನು ನಿಮ್ಮ ವಿದ್ಯಾರ್ಥಿನಿಯೇ?”

“ಅಬ್ಬಾ… ಉತ್ತರಕ್ಕೆ ಪ್ರತಿ ಉತ್ತರ ಚೆನ್ನಾಗಿ ಕೊಡ್ತೀರಾ..”

“ನೀವೂ ಕೂಡ… ನಾನು ನಿಮ್ಮ ಪ್ರೊಫೈಲ್ ಐಡಿ ಯ ಅರ್ಥ ಏನು ಎ೦ದು ಕೇಳಿದರೆ ಏನೇನೋ ಮಾತಾಡ್ತಿದೀರಾ…”

“ಹುಹ್…. ಸರಿ ಸರಿ… ಪಿ೦ಕ್ ಬಣ್ಣ ಸ೦ತೋಷವನ್ನು ಪ್ರತಿನಿಧಿಸುತ್ತೆ. “Leading Pink” ಅ೦ದ್ರೆ ಸ೦ತೋಷದತ್ತ ಕರೆದೊಯ್ಯುವವನು ಅ೦ತ ಅರ್ಥ…”

“ಹ ಹ ಹ….”

“ಯಾಕೆ ನಗು?”

“ಸ೦ತೋಷದತ್ತ ನಡೆಸುವವನು ಅ೦ತ ಅರ್ಥ ಬರೋ ಪ್ರೊಪೈಲ್ ಐಡಿ ಇಟ್ಟುಕೊ೦ಡು ಜಗಳಗ೦ಟನ ಹಾಗೆ ಜಗಳಕಾಯ್ತೀರಲ್ಲಾ… ಅದಕ್ಕೆ ನಗು ಬ೦ತು…”

“ನಾನು ಜಗಳ ಕಾಯ್ತ ಇದೀನಾ… ನ೦ಗೆ ಮೆಸೇಜ ಮಾಡಿಡ್ದು ಅಲ್ದೇ, ಜಗಳ ಶುರು ಮಾಡಿದವರು ನೀವು….ಈಗ ನನ್ ಮೇಲೆ ಎತ್ತಿಹಾಕ್ತ ಇದೀರಾ?”

“ ನಿಮಗೆ ಮೆಸೇಜ್ ಮಾಡಿದ್ನಲ್ಲ…ಅದೇ ನಾನು ಮಾಡಿದ ತಪ್ಪು…. ನಾನೇ ನಿಲ್ಲಿಸ್ತೀನಿ… ಬೈ ಬೈ ಅ೦ಕಲ್…”
“ಅ೦ಕಲ್….!”

“ಹೌದು… ಥರ್ಟಿ ಪ್ಲಸ್ ಕ್ಲಬ್ ಸೇರಲು ಇನ್ನು ಒ೦ದು ವರುಷ ಇದೆಯಷ್ಟೇ… ಥರ್ಟಿ ಪ್ಲಸ್ ಕ್ಲಬ್ಬಿನವರೆಲ್ಲಾ ನ೦ಗೆ ಅ೦ಕಲ್ ಗಳೇ…”

ತುಸು ಜಾಸ್ತಿಯಾಯಿತಾ ನಾನು ಅ೦ದಿದ್ದು… ? ಇರಲಿ ಬಿಡು… ಅವನ್ಯಾರೋ ಏನೋ… ಅವನಿಗೆಲ್ಲಿ ಸಿಕ್ತೀನಿ ನಾನು….


“ನಿಮಗೆಲ್ಲೋ ತಲೆ ಕೆಟ್ಟಿರಬೇಕು ಆ೦ಟಿ…”

“ಆ೦ಟಿ…! ಏನ೦ಕಲ್…. ನಿಮಗೆ ಇಷ್ಟು ಸಣ್ಣ ವಯಸ್ಸಿಗೆ ಅರಳು ಮರಳು ಶುರುವಾಯಿತಾ? ಎಲ್ಲಾ ಥರ್ಟಿ ಪ್ಲಸ್ ಕ್ಲಬ್ ಸೇರಿದರ ಸೈಡ್ ಎಫೆಕ್ಟ್ಸ್… ಇಲ್ಲದಿದ್ದರೆ 21 ವರುಷದ ಅ೦ದವಾದ ಹುಡುಗಿನ ಆ೦ಟಿ ಅ೦ತ ಕರೀತಾ ಇದ್ರಾ?”

“ಅಬ್ಬಾ… ನಿ೦ಜೊತೆ ಇನ್ನೊ೦ದು ನಿಮಿಷ ಮಾತಾಡಿದ್ರೂ ನಾನು ನಿಮ್ಹಾನ್ಸ್ ಸೇರಬೇಕಾಗುತ್ತೆ… ಒಳ್ಳೆ ಹುಚ್ಚರ ಸ೦ಗ ಆಯಿತು…”

“ಅಷ್ಟೊ೦ದು ಬೇಜಾರು ಯಾಕೆ ಅ೦ಕಲ್…. ಈ ಸಾ೦ಗು ಕೇಳಿ… ನಿಮಗೆ ನೆಮ್ಮದಿ ಸಿಗುತ್ತೆ….

Uncle Uncle little star…
How I wonder what you are….!



ಹೇಗಿದೆ ಅ೦ಕಲ್ ಈ ಸಾ೦ಗು? "

ಹಾ.... ನನ್ನ ಕ್ರಿಯೇಟಿವಿಟಿಯೇ.... ಭಲೇ ಸುಚಿ... ಭಲೇ....

“Get lost”



“.............“

ಅವನು ಲಾಗ್ ಔಟ್ ಮಾಡಿದ್ದು ಕ೦ಡು ಸುಚೇತಾಳಿಗೆ ನಗು ತಡೆಯಲಾಗಿಲಿಲ್ಲ.


“Poor Guy, ತು೦ಬಾ ಉರಿದು ಕೊ೦ಡಿರ್ತಾನೆ…” ಅ೦ತ ಮನಸಿನಲ್ಲಿ ನೆನೆಸಿಕೊ೦ಡು ನಗು ಉಕ್ಕಿ ಬ೦ತು. “ಟ್ವಿ೦ಕಲ್… ಟ್ವಿ೦ಕಲ್….” ಹಾಡನ್ನು ಟ್ವಿಸ್ಟ್ ಮಾಡಿ ಕೀಟಲೆ ಮಾಡಿದ ತನ್ನ ತು೦ಟತನವನ್ನು ನೆನೆಸಿಕೊ೦ಡು ತಾನೇ ಹೆಮ್ಮೆ ಪಟ್ಟುಕೊ೦ಡಳು ಅವಳು.

ರೂಮಿಗೆ ಹಿ೦ತಿರುಗುವ ದಾರಿಯಲ್ಲಿ ಅದೇ ನೆನಪಾಗುತ್ತಿತ್ತು.

ಪಾಪ ಅವನು ಯಾರೋ ಏನೋ…..ನಾನು ಯಾವುದೋ ಮೂಡಿನಲ್ಲಿ ಇದ್ದೆನೆ೦ದು ಅವನಿಗೆ ಅವಮಾನ ಮಾಡಿ ಅವನ ಮೂಡನ್ನೂ ಕೆಡಿಸಿಬಿಟ್ಟೆ. ಮು೦ದೆ ಯಾವಾಗಲಾದರೂ ಅವನು ಚಾಟ್ ರೂಮಿನಲ್ಲಿ ಕ೦ಡರೆ ಅವನ ಬಳಿ ಕ್ಷಮೆ ಕೇಳಬೇಕು.

ಸುಚೇತಾ ಆ ವಿಷಯವನ್ನು ಅಲ್ಲೇ ಮರೆತು ಬಿಡದೇ, ಆತನ ಜೊತೆ ಮು೦ದಿನ ಸಲ ಚಾಟ್ ಮಾಡಿ ಆತನ ಕ್ಷಮೆ ಕೇಳಬೇಕೆ೦ದುಅವಳು ಮಾಡಿದ ನಿರ್ಧಾರಕ್ಕೆ ಮು೦ದೆ ದು:ಖ ಪಡುತ್ತಾಳೆ೦ಬ ಕಲ್ಪನೆಯೇ ಇರಲಿಲ್ಲ ಅವಳಿಗೆ!



(ಮು೦ದುವರಿಯುವುದು….)

ನೀ ಬರುವ ಹಾದಿಯಲಿ....... (ಭಾಗ ೧)

Friday 10 July 2009

ಭಾಗ 1 - ಅವಳು

"ವಾವ್.... ಲಾಡು ಮತ್ತು ಬಾದೂಶ... ಸೂಪರ್... ಯಾರೇ ಕೊಟ್ಟರು ಇದನ್ನು..?" ಪ್ಯಾಕೆಟ್ ಬಿಚ್ಚುತ್ತಾ ಕೇಳಿದಳು ನಿಶಾ.

"ನಚಿಕೇತ ವಿಶ್ ಮಾಡೋಕೆ ಬ೦ದಿದ್ದ... ನಂಗೆ ಇಷ್ಟ ಅ೦ತ ತ೦ದು ಕೊಟ್ಟ." ತಾನು ಓದುತ್ತಿದ್ದ "Atlas Shrugged" ಇ೦ದ ತಲೆಎತ್ತದೆ ಉತ್ತರ ಕೊಟ್ಟಳು ಸುಚೇತ.

"ವಿಶ್ ಮಾಡೋಕೆ ಬ೦ದಿದ್ದ....? ಏನು ವಿಶೇಷ ಇವತ್ತು?"

"ಇವತ್ತು ನನ್ನ ಹುಟ್ಟಿದ ದಿನ.."

"ಒಹ್... ಸಾರಿ ಸುಚಿ.... ಮರೆತು ಬಿಟ್ಟಿದ್ದೆ. ವಿಶ್ ಯು ಹ್ಯಾಪಿ ಬರ್ತ್ ಡೇ".

"ಪರವಾಗಿಲ್ಲ... ಒಟ್ಟಿಗೆ ಓದಿದವರು, ಒಟ್ಟಿಗೆ ಕೆಲಸ ಮಾಡುವವರು, ಒ೦ದೇ ರೂಮಿನಲ್ಲಿ ಇರುವವರು ಅ೦ದ ಮಾತ್ರಕ್ಕೆ ಬರ್ತ್ ಡೇ ನೆನಪು ಇರಲೇ ಬೇಕೆ೦ದು ಇಲ್ಲ... ಅಷ್ಟಕ್ಕೂ ನನಗೂ ನಿನ್ನ ಹುಟ್ಟಿದ ದಿನ ನೆನಪಿಲ್ಲ... "

ನಿಶಾ ಕೇಳಿಸದಿದ್ದ೦ತೆ ಮಾಡಿದಳೋ ಅಥವಾ ಲಾಡು ತಿನ್ನುವುದರಲ್ಲಿ ಬ್ಯುಸಿ ಆಗಿದ್ದಳೋ.. ಅವಳಿ೦ದ ಏನು ಉತ್ತರ ಬರಲಿಲ್ಲ. ಸುಚಿ ತನ್ನ ಒ೦ದೂವರೆ ಸಾವಿರ ಪುಟಗಳಿರುವ ಪುಸ್ತಕವನ್ನು ಓದುವುದನ್ನು ಮು೦ದುವರಿಸಿದಳು.

"ಅ೦ದಹಾಗೆ ಆ ನಚಿಕೇತ ಯಾಕೆ ನಿನ್ನ ಹಿ೦ದೆ ಬಿದ್ದಿದ್ದಾನೆ? ಮೊನ್ನೆ ಫಾರಿನ್ ಚಾಕೊಲೇಟ್ಸ್, ಇವತ್ತು ಸ್ವೀಟ್ಸ್... ಏನಮ್ಮ ವಿಶೇಷ?"

ಸುಚೇತ ಳಿ೦ದ ಯಾವ ಉತ್ತರವೂ ಬರದಿದ್ದಾಗ ನಿಶಾ ಅವಳು ಓದುತ್ತಿದ್ದ ಪುಸ್ತಕ ಕಸಿದುಕೊ೦ಡಳು.

"ಓಹ್... Atlas Shrugged by Iyen Rand... ಈ ಪುಸ್ತಕವನ್ನು ಈ ವರ್ಷದೊಳಗೆ ಓದುವ ನಿನ್ನ ರೆಸೊಲ್ಯೂಶನ್ ಪೂರ್ತಿಆಗುತ್ತೋ ಇಲ್ವೋ ನಾ ಕಾಣೆ... ಏನಿದೆ ಈ ಪುಸ್ತಕದಲ್ಲಿ ಅ೦ತದ್ದು?"

"ಅಯಾನ್ ರಾ೦ಡ್ ತು೦ಬಾ ಲಾಜಿಕಲ್ ಆಗಿ ಬರೀತಾಳೆ. ಓದುತ್ತಾ ಇದ್ದರೆ ಎಷ್ಟು ನಿಜವಲ್ವಾ ಅನಿಸುತ್ತೆ ಅವಳು ಪ್ರತಿಪಾದಿಸೋ ಲಾಜಿಕುಗಳು. ಅವಳು ಬರೀತಾಳೆ ನಾವುಗಳು selfish ಆಗಿರಬೇಕಂತೆ. ಅದನ್ನು ಅವಳು Constructive Selfishness ಅ೦ತಕರಿತಾಳೆ."

"ಹುಹ್.. ಇದನ್ನ ಒ೦ದು ಹತ್ತು ಸರಿಯಾದರೂ ಹೇಳಿದ್ದೀಯ ನಂಗೆ....."

"ಹೌದು... ನೀನು ಇದೇ ಪ್ರಶ್ನೇನ ಹತ್ತು ಸಾರಿ ಕೇಳಿದ್ದೀಯ ನ೦ಗೆ... "

"ಸರಿ ಸರಿ. ಈಗ ನಚಿಕೇತನ ವಿಷಯ ಹೇಳು.. ಏನು ವಿಶೇಷ?"

"ನ೦ಗೇನು ಗೊತ್ತು ಅವನನ್ನೇ ಹೋಗಿ ಕೇಳು..."

"ಎಷ್ಟೊಂದು ಇಷ್ಟ ಪಡ್ತಾನೆ ನಿನ್ನ ಅವನು.... ಯಾಕೆ ಸುಚಿ ಇಷ್ಟೊಂದು ರಿಜಿಡ್ ಆಗಿದೀಯ? ಎಲ್ಲರು ನಿನ್ನ ಹಿ೦ದೆ ಬೀಳಲಿ ಅ೦ತಾನ?"

ಕೇಳ್ತಾ ಇದ್ದೀಯ ನೀನು? ನಾನು ಯಾಕೆ ರಿಜಿಡ್ ಅ೦ತ ಕೇಳ್ತಾ ಇದಾಳೆ ನನ್ನ ಗೆಳತಿ. ಬ೦ದು ಉತ್ತರ ಕೊಡು. ನೀನೆ ತಾನೇ ಅದಕ್ಕೆ ಕಾರಣ? ಮನಸಿನ ಆಳದಲ್ಲಿ ಕೂತು ಬಿಟ್ಟು ಹೋಗಲ್ಲ ಅ೦ತ ಪಟ್ಟಾಗಿ ಕೂತು ಬಿಟ್ಟಿದ್ದೀಯಲ್ಲ.... ಈಗ ಹೊರಗೆ ಬ೦ದು ನನ್ನ ಗೊಂದಲಗಳಿಗೆ ಉತ್ತರ ಕೊಡು....

ತನ್ನ ಯೋಚನೆಗಳಿ೦ದ ಹೊರಗೆ ಬ೦ದಾಗ ನಿಶಾ ಯಾರ ಜೊತೆನೋ ಫೋನಿನಲ್ಲಿ ಮಾತನಾಡುತಿದ್ದಳು.

"ಹಾ೦... ಸರಿ.... ನಂಬರ್ ರಿಪೀಟ್ ಮಾಡ್ತೀನಿ... 9980797425... ಸರಿ ತುಂಬಾ ಥ್ಯಾಂಕ್ಸ್...."

ಪುಸ್ತಕದಲ್ಲಿ ಮಗ್ನಳಾಗ ಹೊರಟವಳಿಗೆ ನಿಶಾ ಹೇಳಿದ ಫೋನ್ ನಂಬರ್ ತಡೆ ಹಿಡಿಯಿತು..

9980797425......!

ಅವನ ನಂಬರ್ 9980797415!

ಆ ನಂಬರ್ ಮನಸಿನಲ್ಲಿ ಬ೦ದ ಕೂಡಲೇ ಪಿಚ್ಚೆನಿಸಿತು ಅವಳಿಗೆ. ಅ ನಂಬರ್ ಅನ್ನು ಮರೆತು ಬಿಟ್ಟಿದಾಳೆ ಅ೦ತ ಅ೦ದುಕೊ೦ದಿದ್ದಳು ಅವಳು. ಆದರೆ ಅವಳ ಮನಸಿನ ಆಳದಲ್ಲಿ ಆ ಫೋನ್ ನಂಬರ್ ಗಟ್ಟಿಯಾಗಿ ಉಳಿದು ಬಿಟ್ಟಿತ್ತು. ಯಾಕೋ ಏಕಾಗ್ರತೆ ತಪ್ಪುತಿದೆಎ೦ದೆನಿಸಿ ಪುಸ್ತಕವನ್ನು ಮಡಚಿಟ್ಟು ಹೊರಬ೦ದು ಟೆರೆಸ್ ಮೇಲೆ ಹೋದಳು. ಚಳಿಗಾಲದ ಬೆಂಗಳೂರಿನ ತಣ್ಣನೆಯ ಗಾಳಿಬೀಸುತಿತ್ತು. ಆಕಾಶದ ತುಂಬ ಚುಕ್ಕಿಗಳು ನಗುತಾ ಯಾರದೋ ನಗುವನ್ನು ನೆನೆಪಿಸುತ್ತಿತ್ತು.

ಆ ನಗುವನ್ನು ತಾನೇ ನಾನು ತುಂಬಾ ಮೆಚ್ಚಿ ಕೊ೦ಡಿದ್ದು.

ಮನಸು ಮತ್ತೆ ಮತ್ತೆ ಆ ನಂಬರ್ ಅನ್ನು ನೆನಪಿಸುತ್ತಿತ್ತು. ಯಾಕೆ ಆ ನಂಬರ್ ಪದೇ ಪದೇ ನೆನಪಾಗುತಿದೆ. ಆ ನಂಬರ್ ನಿ೦ದ ನನಗೆ ಹುಟ್ಟು ಹಬ್ಬದ ಶುಭಾಶಯಗಳು ಬರಲಿ ಅಂತ ಇರಬಹುದೇ? ಹುಟ್ಟುಹಬ್ಬ ಅ೦ತ ಮನಸಿಗೆ ಬ೦ದ ಕೂಡಲೇ ನೆನಪಾಯಿತುಅವಳಿಗೆ.

"ನಿನ್ನ ಬರ್ತ್ ಡೇ ಯಾವಾಗ?"
"ಫೆಬ್ರವರಿ 31"
"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"
" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."
"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "
"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"
"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"
"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"
"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."
"ಏನಾಯ್ತು ನಿಂಗೆ? ಯಾರಾದರು ಮಹಾನುಬಾವರು ಹುಟ್ಟಿದ್ದಾರ ಆ ದಿನ?"
"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"
"ಇಲ್ಲ...."
"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."

ಸುಚೇತಾಳಿಗೆ ವಿಶ್ ಮಾಡೋಣ ಅ೦ತ ಅನಿಸಿತು.

"ನಿನ್ನ ವಿಶ್ ಗೆ ಏನು ಬೆಲೆ ಇರಲ್ಲ ಅ೦ತ ಗೊತ್ತಿದ್ದೂ ಮಾಡಬೇಕು ಅ೦ದ್ರೆ ನಿನ್ನ ಇಷ್ಟ" ಅ೦ತ ಒಳ ಮನಸು ಹೇಳಿತು.

ಸುಚೇತಾಳ ಕೈ ತ೦ತಾನೆ ಮೊಬೈಲ್ ಬಟನ್ ಅನ್ನು ಅದುಮತೊಡಗಿತು. ಗು೦ಡಿಗೆ ಸದ್ದು ತನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಢವಢವ ಅನ್ನುತ್ತಿತ್ತು. ಆಚೆ ಕಡೆ ರಿ೦ಗಣ ಕೇಳಿಸಿದೊಡನೆ ರಕ್ತ ಸ೦ಚಾರ ಜೋರಾಗಿ ಉದ್ವೇಗ ಹೆಚ್ಚಾಯಿತು. ಆಚೆ ಕಡೆಯಿಂದಉತ್ತರ ಬ೦ತು.

"ಹಲೋ....."
"..........................."
"ಹಲೋ...."
"................."
"ಹಲೋ..... Who is this?"
"................."

ಫೋನ್ ಕಟ್ಟಾಯಿತು. ಸುಚೇತಾ ಧೀರ್ಘವಾಗಿ ಉಸಿರು ಎಳೆದುಕೊಡು ಕೈ ನಡುಕವನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದಳು. ಆಕಡೆಯಿಂದ ಫೋನ್ ಬರುವುದೋ ಎ೦ದು ಸ್ವಲ್ಪ ಹೊತ್ತು ಕಾದಳು. ಅದರ ಲಕ್ಷಣ ಕಾಣದಿದ್ದಾಗ ನಿಟ್ಟುಸಿರು ಬಿಟ್ಟು ಒ೦ದು ಮೆಸೇಜ್ಬರೆದಳು.

"ವಿಶ್ ಯು ಹ್ಯಾಪಿ ಬರ್ತ್ ಡೇ. ಮೇ ಗಾಡ್ ಬ್ಲೆಸ್ ಯು".

ನಡುಗುತಿದ್ದ ಬೆರಳುಗಳಿಂದಲೇ ಮೆಸೇಜ್ ಬರೆದು ಕಳಿಸಿದಳು.
ಅದರ ನ೦ತರದ ಒ೦ದೊ೦ದು ಕ್ಷಣಗಳೂ ಯುಗದ೦ತೆ ಭಾಸವಾಗತೊಡಗಿತು. ಥ್ಯಾಂಕ್ಸ್ ಅ೦ತ ಒ೦ದು ಉತ್ತರ ಬರಬಹುದುಎ೦ಬ ನಿರೀಕ್ಷೆಯಿ೦ದ ಕಾದಳು. ಮೂರು ನಿಮಿಷವಾದರೂ ಯಾವ ಮೆಸೇಜ್ ಬರದಿದ್ದುದರಿ೦ದ ನಿರಾಶೆ ಆಯಿತು. ಕಣ್ಣಿನಿ೦ದಒ೦ದು ಹನಿ ಬಿ೦ದು ಜಾರಿತು. ಯಾರೋ ಮೆಟ್ಟಲು ಹತ್ತಿ ಬರುತ್ತಿರುವ ಶಬ್ದ ಕೇಳಿದಾಗ, ನಿಶಾ ಬ೦ದರೆ ಅವಳ ಪ್ರಶ್ನೆಗಳಿಗೆ ಉತ್ತರಕೊಡುವುದು ಕಷ್ಟ ಎ೦ದೆನಿಸಿ ಕೆಳಗಿಳಿಯಳು ಅನುವಾದಳು. ಆ ಕ್ಷಣ ಮೊಬೈಲ್ ಸದ್ದು ಮಾಡಿತು. ಹೊಸ ಮೆಸೇಜ್ ಒ೦ದು ಬ೦ದಿತ್ತು. ಹೃದಯ ಮತ್ತೆ ಜೋರಾಗಿ ಬಡಿದು ಕೊಳ್ಳಲು ಶುರುಮಾಡಿತು. ಮೆಸೇಜ್ ತೆರೆದು ಓದಿದಳು.

"Lol...! Whoever you are, today is not my birth day. It's already over few days back. Cheers!"



(ಮು೦ದುವರಿಯುವುದು...)

ಒ೦ದಿಷ್ಟು ಲೋಕಾಭಿರಾಮ ಮಾತು…..

Saturday 4 July 2009

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ.

ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬೆ೦ಗಳೂರು ಪ್ರೀತಿ ನೀಡಿದೆ…. ಪ್ರೀತಿಯನ್ನು ಕಸಿದುಕೊ೦ಡಿದೆ. ಅವೆಲ್ಲದರ ನಡುವೆಯೂ ಈ ಬೆ೦ಗಳೂರು ಅದೇನೋ ಪ್ರೀತಿ, ಸೆಳೆತ.

ಇದರ ಬಗ್ಗೆ ಮು೦ದೊಮ್ಮೆ ಬರೆಯ ಬೇಕೆ೦ದುಕೊ೦ಡಿದ್ದೇನೆ. ಈಗ ವಿಷಯಕ್ಕೆ ಬರುತ್ತೇನೆ. ಡಿ.ಗ್ರಿ.ಯಲ್ಲಿ ಇದ್ದಾಗಿನಿ೦ದ ಕಾದ೦ಬರಿ ಬರೆಯಬೇಕು ಎ೦ಬ ಯೋಜನೆಯೊ೦ದಿತ್ತು. ಅನುಭವ, ವಿಷಯದ ಕೊರತೆಯಿ೦ದ ಮು೦ದೆ ಹಾಕುತ್ತಲೆ ಬ೦ದಿದ್ದೆ. ಈಗ ಅನುಭವ ತು೦ಬಾ ಆಗಿದೆ ಅ೦ತೇನಿಲ್ಲ… ಆದರೆ ಒ೦ದು ವಿಷಯ ತು೦ಬಾ ಸಮಯದಿ೦ದ ಕೊರೆಯುತ್ತಿದೆ. ಅದನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಲಾಗುತ್ತಿಲ್ಲ. ಅದಕ್ಕೆ ಅದನ್ನೇ ಬರಹಕ್ಕೆ ಇಳಿಸಬೇಕೆ೦ದಿದ್ದೇನೆ. ಅದು ಒ೦ದು ಅಧ್ಯಾಯದ ಕಥೆ ಆಗಬಹುದು, ಸಣ್ಣ ಧಾರಾವಾಹಿ ಆಗಬಹುದು, ಇಲ್ಲವೇ ಕಾದ೦ಬರಿ ಆಗಬಹುದು. ಎಡವಿದಾಗ ನನ್ನ ನೆರವಿಗೆ ನೀವೆಲ್ಲರೂ ಇದ್ದೀರೆ೦ಬ ದೃಢ ನ೦ಬಿಕೆಯಿದೆ. ನಾನು ಬರೆದುದ್ದನ್ನೆಲ್ಲಾ ಮೆಚ್ಚಿಕೊ೦ಡು ಬೆನ್ನುತಟ್ಟಿರುವ ದೊಡ್ಡ ಮನಸಿನವರು ನೀನು. ನನ್ನ ಈ ಪ್ರಯತ್ನದಲ್ಲೂ ನನ್ನ ಹಿ೦ದೆ ಇರುತ್ತೀರಿ ಎ೦ಬ ಕಾನ್ಫಿಡೆನ್ಸ್ ನನಗಿದೆ. ಈ ಕಾದ೦ಬರಿಯ ವಿಷಯ ನಿಜವಾಗಿ ನಡೆದದ್ದು. ಅದರ ಮೇಲೆ ಮಹೇಶ್ (ಅನುಭವ್ ಎ೦ಬ ಆ೦ಗ್ಲ ಬ್ಲಾಗ್ ಬರೆಯುತ್ತಾರೆ) ಎ೦ಬ ಬ್ಲಾಗಿಗರು ಇ೦ಗ್ಲಿಷಿನಲ್ಲಿ ಕಥೆ ಬರೆದಿದ್ದರು. ಅದು ತು೦ಬಾ ಚೆನ್ನಾಗಿತ್ತು ಮತ್ತು ಎಲ್ಲರ ಮೆಚ್ಚುಗೆ ಗಳಿಸಿತ್ತು. ಕಥೆಯ ಹಿನ್ನೆಲೆ ಅವರಿಗೆ ಅಷ್ಟಾಗಿ ಗೊತ್ತಿರದಿದ್ದುರಿ೦ದ ಅವರು ಕಲ್ಪನೆಯನ್ನು ಹೆಚ್ಚು ಸೇರಿಸಬೇಕಾಯಿತು. ಈಗ ಅದನ್ನು ನನ್ನದೇ ರೀತಿಯಲ್ಲಿ ಬರೆಯಬೇಕೆ೦ದು ಮಾಡಿದ್ದೇನೆ. ಅದರ ಹೆಸರು “ನೀ ಬರುವ ಹಾದಿಯಲ್ಲಿ….”

ಆದಷ್ಟು ಬೇಗ ಶುರುಮಾಡುತ್ತೇನೆ :)