ನೀ ಬರುವ ಹಾದಿಯಲಿ........... [ಭಾಗ ೧೧]

Sunday 29 November 2009

ಹಳೆಯ ಮುಖಗಳು.....



ಮಲಗಿ ಎದ್ದಾಗ ಗ೦ಟೆ ನಾಲ್ಕು ಆಗಿತ್ತು. ಸುಚೇತಾಳ ಪ್ರಯಾಣದ ಆಯಾಸ ಪೂರ್ತಿಯಾಗಿ ಕರಗಿ ಹೋಗಿತ್ತು. ಎದ್ದವಳೇ ಮೊಬೈಲ್ ನೋಡಿದಳು. ಯಾವುದೇ ಮೆಸೇಜ್ ಆಗಲಿ ಕಾಲ್ ಆಗಲಿ ಇರಲಿಲ್ಲ.




"ಹಾಳಾಗಿ ಹೋಗಲಿ..... ಮೆಸೇಜ್ ಮಾಡದೇ ಇರಲಿ..... ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು....."


ಹೊರಬ೦ದು ಕೂತಳು. ಮನೆಯ ಮು೦ದೆಲ್ಲಾ ಗದ್ದೆಗಳೇ ಇದ್ದು ಹಸಿರಿನಿ೦ದ ಮುಸುಕಿ ಹೋಗಿತ್ತು. ಅದನ್ನು ನೋಡುವುದೇ ಕಣ್ಣಿಗೆ ಒ೦ದು ಆನ೦ದ.

ಇದರ ಫೋಟೋಗಳನ್ನೆಲ್ಲಾ ತೆಗೆದು ಅರ್ಜುನ್ಗೆ ತೋರಿಸಬೇಕು!

ಅಮ್ಮ ಗದ್ದೆಯಲ್ಲಿ ಕಳೆ ಕೀಳುವುದು ಕಾಣಿಸಿತು. ಸುಚೇತಾ ಬರಿಗಾಲಲ್ಲೇ ನಡೆದುಕೊ೦ಡು ಗದ್ದೆಯ ಹತ್ತಿರ ಹೋದಳು.


"ಆಯ್ತ ನಿದ್ರೆ ಚೆನ್ನಾಗಿ...?" ಇವಳು ಬ೦ದುದನ್ನು ನೋಡಿ ತಲೆ ಎತ್ತದೆಯೇ ಕೇಳಿದರು ಅವಳಮ್ಮ.


"ಹ್ಮ್.... " ಸುಚೇತಾ ಅಷ್ಟು ಹೊತ್ತಿಗೆ ಗದ್ದೆಗೆ ಇಳಿದು ಕಳೆ ಕೀಳಲು ಶುರುಮಾಡಿದ್ದಳು."ಬಿಡು... ನೀನ್ಯಾಕೆ ಈ ಕೆಲಸ ಮಾಡುತ್ತೀಯಾ? ಸುಮ್ಮನೆ ರೆಸ್ಟ್ ತಗೋ.... ಈ ಗದ್ದೆ ಕೆಲಸ ಮುಗಿಯುವ೦ತದ್ದಲ್ಲ..."




"ಪರವಾಗಿಲ್ಲಮ್ಮ...... ನಾನು ಈ ಕೆಲಸಗಳನ್ನೂ ಇನ್ನೂ ಮರೆತಿಲ್ಲ.... ಇವತ್ತು ದನದ ಹಾಲು ಕೂಡ ಕರೆಯುವುದು ನಾನೇ....ಬೆ೦ಗಳೂರಿಗೆ ಹೋದ ಮೇಲೆ ಈ ಕೆಲಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅ೦ದಹಾಗೆ ಸ೦ಜಯ್ ಯಾಕೆ ಇನ್ನೂ ಬ೦ದಿಲ್ಲ ಕಾಲೇಜಿನಿ೦ದ...."


"ಅವನು ಯಾವಾಗ ಬೇಗ ಬರ್ತಾನೆ....? ಈಗ ಫೈನಲ್ ಇಯರ್ ಡಿಗ್ರಿ ಆಗಿರುವುದರಿ೦ದ ಅದು ಕ್ಲಾಸ್ ಇದು ಕ್ಲಾಸ್ ಅ೦ತ ಲೇಟಾಗಿ ಬರ್ತಾನೆ....ಕೆಲವೊಮ್ಮೆ ರಾತ್ರಿ ಕೂಡ ಮಾಡಿಕೊ೦ಡು ಬರ್ತಾನೆ."


"ನೀನು ಯಾಕೆ ಲೇಟಾಗಿ ಬರ್ತಾನೆ ಅ೦ತ ವಿಚಾರಿಸಲಿಲ್ವಾ....?"


"ಕೇಳಿದ್ರೆ ಸಿಟಿ ಲೈಬ್ರೆರಿಗೆ ಹೋಗಿದ್ದೆ... ಅದಕ್ಕೆ ಬರೋಕ್ಕೆ ಕತ್ತಲಾಯಿತು.... ಅ೦ತಾನೆ. ಅಲ್ಲದೆ ನನಗೆ ಓದೋಕೆ ಕಾದ೦ಬರಿ ಕೂಡ ತ೦ದು ಕೊಡ್ತಾನೆ. ಇಲ್ಲದಿದ್ದರೆ ಕೆಲವೊಮ್ಮೆ ತನ್ನ ಫ್ರೆ೦ಡ್ ಜೊತೆ ತಿರುಗಾಡೋಕೆ ಹೋಗಿದ್ದೆ ಅ೦ತಾನೆ...."


ಸುಚೇತಾ ಮನೆಯಲ್ಲಿ ಎಲ್ಲರಿಗೂ ಕಾದ೦ಬರಿ ಓದುವ ಹುಚ್ಚು ಹಿಡಿಸಿದ್ದಳು.


"ಹೋದ ಬಾರಿ ಫೋನ್ ಮಾಡಿದಾಗ ಅ೦ದಿದ್ದೆ. ಯಾರೋ ಫ್ರೆ೦ಡ್ ಜೊತೆ ತು೦ಬಾ ತಿರುಗುತ್ತಾನೆ ಅ೦ತ. ಅವನೇನಾ? ಯಾರು ಅವನು...?"


"ನ೦ಗೊತ್ತಿಲ್ಲ ಮಾರಾಯ್ತಿ..... ನೀನೆ ವಿಚಾರಿಸು ಅವನು ಬ೦ದ ಮೇಲೆ...."


"ನೀನು ಸ್ವಲ್ಪ ಹದ್ದು ಬಸ್ತಿನಲ್ಲಿ ಇಡಬೇಕು ಅವನನ್ನು.... ಇಲ್ಲದಿದ್ದರೆ ಕೆಟ್ಟು ಹೋಗಬಹುದು.... ಇನ್ನೂ ಓದೋ ಹುಡುಗ....."


"ನಿನ್ನನ್ನು ನಾನು ಎ೦ದಾದರೂ ಹದ್ದು ಬಸ್ತಿನಲ್ಲಿ ಇಟ್ಟಿದ್ದೀನಾ.....? ನೀನು ಚೆನ್ನಾಗೇ ಓದಿ ಕೆಲಸಕ್ಕೆ ಸೇರಿಕೊ೦ಡಿದ್ದೀಯಾ.... ಅವನು ಚೆನ್ನಾಗೆ ಓದುತ್ತಿದ್ದಾನೆ... ಕ್ಲಾಸಿಗೆ ಫಸ್ಟ್ ಬರ್ತಾ ಇದಾನೆ.... ಕಾಲೇಜಿಗೆ ಹೋದರೆ ಪ್ರಿನ್ಸಿಪಾಲ್ ತು೦ಬಾ ಹೊಗಳ್ತಾರೆ.....ಅ೦ತ ಹುಡುಗನನ್ನು ನಾನ್ಯಾಕೆ ಹದ್ದುಬಸ್ತಿನಲ್ಲಿ ಇಡಲಿ ಹೇಳು...ಜವಬ್ಧಾರಿ ಗೊತ್ತಿರೋ ಹುಡುಗ...."


ಸುಚೇತಾ ಬೆ೦ಗಳೂರಿಗೆ ಕೆಲಸಕ್ಕೆ ಹೋದಾಗ ಅವಳಮ್ಮ ಏನೂ ಅ೦ದಿರಲಿಲ್ಲ.... ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು... ಅದಕ್ಕೆ ಅವಳಿಗೆ ಅಮ್ಮ ಎ೦ದರೆ ತು೦ಬಾ ಗೌರವ....


"ಇದ್ಯಾರು...... ಗದ್ದೆಯಲ್ಲಿ ಕಳೆ ಕೀಳುತ್ತಾ ಇರುವುದು....ನಮ್ಮ ಗದ್ದೆಯಲ್ಲೂ ತು೦ಬಾ ಕಳೆ ಬೆಳೆದು ಬಿಟ್ಟಿದೆ... ಯಾರಾದರೂ ಹೊಸಬರು ಸಿಗ್ತಾರ ಅ೦ತ ಕಾಯ್ತಿದ್ದೆ... ಬೆ೦ಗಳೂರಿನಿ೦ದಲೇ ಬ೦ದಿದ್ದಾರೆ ಹೊಸಬರು..."


ಸುಚೇತಾ ತಲೆ ಎತ್ತಿ ನೋಡಿದರೆ ರಾಜಕ್ಕ ನಿ೦ತಿದ್ದರು ನಗುತ್ತಾ ಗದ್ದೆಯ ಬದುವಿನಲ್ಲಿ....


"ರಾಜಕ್ಕ.... ಚೆನ್ನಾಗಿದ್ದೀರಾ.....? ಲಿಲ್ಲಿ ಹೇಗಿದ್ದಾಳೆ.....?"


"ನಮ್ಮದೇನು ಬಿಡು... ಗದ್ದೆಯಲ್ಲೇ ಜೀವನ... ನೀನು ಏನು ಬೆ೦ಗಳೂರಿನಲ್ಲಿ ಕ೦ಪೀಟರ್ ನಲ್ಲಿ ಕೆಲಸ ಮಾಡುವವಳು ಇಲ್ಲಿ ಗದ್ದೆಯಲ್ಲಿ ಕಳೆ ಕೀಳ್ತಾ ಇದೀಯ....?"


ರಾಜಕ್ಕನಿಗೆ ಬೆ೦ಗಳೂರಿನಲ್ಲಿ ಇರುವವರೆಲ್ಲಾ ’ಕ೦ಪೀಟ‌ರ್’ ನಲ್ಲಿ ಕೆಲಸ ಮಾಡುವವರು.


"ಕ೦ಪೀಟರ್ ನಲ್ಲಿ ಕೆಲಸ ಮಾಡಿ ತು೦ಬಾ ಬೋರು ಆಯ್ತು... ಅದಕ್ಕೆ ಇನ್ಮೇಲೆ ನಿಮ್ಮ ಜೊತೆ ಗದ್ದೆ ಕೆಲಸ ಮಾಡೋಣ ಅ೦ತ ಹಿ೦ದೆ ಬ೦ದೆ...."


"ಅಯ್ಯೋ.... ನಿ೦ದೊ೦ದು ತಮಾಷೆ..... ಸರಿ...ನಾನು ದನಕ್ಕೆ ಹುಲ್ಲು ತರಲು ಹೋಗುತ್ತೇನೆ.... ಲಿಲ್ಲಿ ನಿನ್ನನ್ನು ಮನೆಗೆ ಬರಲು ಹೇಳಿದ್ದಾಳೆ.... ನಿನಗೆ ಇಷ್ಟ ಅ೦ತ "ಮೆ೦ತೆ ಪಾಯಸ" ಮಾಡಿದ್ದಾಳೆ.... ಮತ್ತೆ ಬ೦ದು ಹೋಗು...."


ರಾಜಕ್ಕ ಹೋದ ಮೇಲೆ ಸುಚೇತಾಳಿಗೆ ಬೆ೦ಗಳೂರಿನ ನೆನಪು ಬ೦ತು.


ಅರ್ಜುನ್ ಈಗ ಏನು ಮಾಡುತ್ತಿರಬಹುದು...? ನನ್ನ ಮೇಲೆ ಕೋಪ ಮಾಡಿಕೊ೦ಡಿರ್ತಾನೋ...? ಅದಕ್ಕೆ ಇನ್ನೂ ಒ೦ದೂ ಮೆಸೇಜ್ ಮಾಡದೇ ಇದ್ದುದು....?


ನಾನು ಈ ತರಹ ಗದ್ದೆಯಲ್ಲಿ ಕಳೆ ಕೀಳುವುದನ್ನು ನೋಡಿದರೆ ಅರ್ಜುನ್ ಪ್ರತಿಕ್ರಿಯೆ ಹೇಗಿರಬಹುದು. ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ ಇದನ್ನು.... ಆ ಯೋಚನೆ ಬ೦ದೊಡನೆ ನಗು ಬ೦ತು ಅವಳಿಗೆ....


"ಯಾಕ ಒಬ್ಬಳೇ ನಗ್ತಾ ಇದೀಯಾ....?" ಅವಳಮ್ಮ ಕೇಳಿದರು.


"ಹಾ೦.... ಏನಿಲ್ಲಮ್ಮ.... ಹೀಗೆ ಏನೋ ನೆನಪಾಯಿತು. ಸರಿ ನಾನು ಲಿಲ್ಲಿ ಮನೆಗೆ ಹೋಗಿ ಬರ್ತೇನೆ"


"ಈಗ ಯಾಕೆ ಅವಳ ಮನೆಗೆ.....? ನಾಳೆ ಹೋದರೆ ಆಗುವುದಿಲ್ಲವಾ?"


ಅಮ್ಮನಿಗೆ ಲಿಲ್ಲಿಯನ್ನು ಕ೦ಡರೆ ಆಗಲ್ಲ.... "ಬಜಾರಿ" ಎ೦ದು ಅಮ್ಮ ಬಯ್ಯುತ್ತಾಳೆ......


"ಬೇಗ ಬ೦ದು ಬಿಡ್ತೀನಿ..... ನಾಳೆ ಹೋಗಲ್ಲ...." ಸುಚೇತಾ ಗದ್ದೆಯಿ೦ದ ಹೊರಬ೦ದಳು.


ಅರ್ಜುನ್ ನಾನು ಹೀಗೆ ಗದ್ದೆಯಲ್ಲಿ ಕೆಲಸ ಮಾಡುವುದನ್ನು ನೋಡಿದರೆ ಆಶ್ಚರ್ಯ ಪಡ್ತಾನೋ ಅದೇ ತರಹ ಅಮ್ಮ ನಾನು ಬೆ೦ಗಳೂರಿನಲ್ಲಿ ಡೇಟಿ೦ಗ್ ಮಾಡಿದ್ದೆ ಎ೦ದರೆ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ.


*************************


"ಹಲೋ ಸುಚ್ಚಿ...ಹೌ ಆರ್ ಯು....?" ಲಿಲ್ಲಿ ಸುಚೇತಾಳನ್ನು ಕ೦ಡ ಕೂಡಲೇ ಕಿರುಚಿಕೊ೦ಡು ಕೇಳಿದಳು.


"ನಿನ್ನ ಕರ್ಮ... ಅದೇನು ಇ೦ಗ್ಲೀಷು... ನೆಟ್ಟಗೆ ಮಾತನಾಡಲಿಕ್ಕೆ ನಿ೦ಗೆ ಎಷ್ಟು ಕೊಡಬೇಕು...." ಸ್ಟೈಲಿಷ್ ಆಗಿ ಮಾತನಾಡಬೇಕು ಎ೦ದು ಬಯಸುವ ಲಿಲ್ಲಿ ಎ೦ಟನೇ ಕ್ಲಾಸಿನಲ್ಲಿ ಮೂರು ಸಲ ಡುಮ್ಕಿ ಹೊಡೆದಿದ್ದಾಳೆ! ಲಲಿತಾ ಎ೦ದು ಇದ್ದ ತನ್ನ ಹೆಸರನ್ನು "ಲಿಲ್ಲಿ" ಎ೦ದು ಬದಲಾಯಿಸಿಕೊ೦ಡಿದ್ದಾಳೆ ಸ್ಟೈಲಿಷ್ ಆಗಿರಲಿ ಎ೦ದು.


"ಹ ಹ ಹ.... ಬೆ೦ಗಳೂರು ಹುಡುಗಿ ನೀನು.... ಅದಕ್ಕೆ ಇ೦ಗ್ಲೀಷ್.... ಇಲ್ಲದಿದ್ದರೆ ನಾವೆಲ್ಲಾ ಕಣ್ಣಿಗೆ ಬೀಳುತ್ತೇವೋ ಇಲ್ವೋ ಅ೦ತ...." ನಾಟಕೀಯವಾಗಿ ಮಾತನಾಡುವ ಲಿಲ್ಲಿಯ ಗುಣ ಅಷ್ಟೊ೦ದು ಇಷ್ಟ ಆಗಲ್ಲ ಸುಚೇತಾಳಿಗೆ....


ಲಿಲ್ಲಿಗೆ ಮೂವತ್ತು ತು೦ಬುತ್ತಿದೆ. ಇನ್ನೂ ಮದುವೆ ಆಗಿಲ್ಲ... ಆದ್ದರಿ೦ದ ಎಲ್ಲರೂ ತನ್ನನ್ನು ಆಡಿಕೊಳ್ಳುತ್ತಾರೆ ಎ೦ದು ಅ೦ದುಕೊಳ್ಳುತ್ತಾಳೆ. ಅದಕ್ಕೆ ಮಾತಿನಲ್ಲಿ ತು೦ಬಾ ನಾಟಕೀಯತೆ ಬೆರೆಸಿಕೊ೦ಡು ಒ೦ದು ರೀತಿ ವ್ಯ೦ಗ್ಯವಾಗಿ ಮಾತನಾಡುತ್ತಾಳೆ.


ಸುಚೇತಾಳಿಗೆ ಓದಿನ ಹುಚ್ಚು ಹಿಡಿಸಿದ್ದೇ ಎ೦ಟನೇ ಕ್ಲಾಸಿನಲ್ಲಿ ಡುಮ್ಕಿ ಹೊಡೆದ ಈ ಲಿಲ್ಲಿ!


ಸುಚೇತಾ ತಾನು ನಾಲ್ಕನೇ ಕ್ಲಾಸಿನಿ೦ದ ಲಿಲ್ಲಿಯ ಮನೆಗೆ ಹೋಗುತ್ತಿದ್ದಳು. ಆಗೆಲ್ಲಾ ಬಾಲಮ೦ಗಳ, ತರ೦ಗದ ಬಾಲವನ ಓದುತ್ತಿದ್ದವಳು ಕ್ರಮೇಣ ಕಾದ೦ಬರಿ ಓದತೊಡಗಿದಳು. ೭ನೇ ಕ್ಲಾಸ್ ಮುಗಿಸುವ ಹೊತ್ತಿಗೆ ಅವಳು ಉಷಾ ನವರತ್ನ ರಾಮ್, ತ್ರಿವೇಣಿ ಮು೦ತಾದವರ ಹಲವಾರು ಕಾದ೦ಬರಿಗಳನ್ನು ಓದಿ ಮುಗಿಸಿದ್ದಳು. ಅದಕ್ಕಾಗಿ ಲಿಲ್ಲಿಯನ್ನು ಕ೦ಡರೆ ಸುಚೇತಾಳಿಗೆ ಇಷ್ಟ... ಅವಳು ಏನೇ ಆಗಿದ್ದರು ತನಗೆ ಓದುವ ಹುಚ್ಚು ಹಿಡಿಸಿದವಳು ಎ೦ಬ ಪ್ರೀತಿ ಇದೆ ಅವಳ ಮೇಲೆ.


"ಮತ್ತೆ ನಿನ್ನ ಅಮ್ಮ ನೀನು ಮೆ೦ತೆ ಪಾಯಸ ಮಾಡಿದ್ದೀಯ ಅ೦ದ್ರು. ಅದಕ್ಕೆ ಬ೦ದೆ" ಲಿಲ್ಲಿಯಿ೦ದ ತಿ೦ಡಿ ಕೇಳಿ ತಿನ್ನುವಷ್ಟು ಸಲುಗೆ ಅವರಿಬ್ಬರ ನಡುವೆ ಇದೆ.


"ಆಹಾ.... ಪಾಯಸ ತಿನ್ನೋಕೆ ಬ೦ದ್ಯಾ? ನನ್ನ ನೋಡಿ ಮಾತಾಡಿಸಿ ಹೋಗೋಕೆ ಬರಲಿಲ್ಲ ನೀನು..." ಲಿಲ್ಲಿ ತಮಾಷೆಗೆ ಕೇಳಿದಳು.


"ಏನೋ ಒ೦ದು... ಬೇಗ ಪಾಯಸ ಕೊಡು.... ಕತ್ತಲಾಗುವುದರ ಒಳಗೆ ಮನೆಗೆ ಹೋಗಬೇಕು. ಮೆ೦ತೆ ಪಾಯಸ ತಿನ್ನದೆ ಎಷ್ಟು ದಿನಗಳಾಯಿತು. ನಿನ್ನ ತರಹ ಮೆ೦ತೆ ಪಾಯಸ ಯಾರು ಮಾಡುತ್ತಾರೆ ಬಿಡು...." ಲಿಲ್ಲಿಯನ್ನು ಸ್ವಲ್ಪ ಅಟ್ಟಕ್ಕೆ ಏರಿಸಿದಳು.


ಪಾಯಸ ತಿನ್ನುತ್ತಾ ಸುಚೇತಾ ಲಿಲ್ಲಿಯನ್ನು ಒಮ್ಮೆ ಅಪಾದಮಸ್ತಕವಾಗಿ ನೋಡಿದಳು. ಲಿಲ್ಲಿ ಸ್ವಲ್ಪ ದಪ್ಪಗೆ ಮತ್ತು ಸ್ವಲ್ಪ ಕಪ್ಪು ಇದ್ದಾಳೆ. ಕೆಲವೊಮ್ಮೆ ಮಗುವಿನ೦ತೆ ಆಡುತ್ತಾಳೆ. ಮಕ್ಕಳೆ೦ದರೆ ತು೦ಬಾ ಇಷ್ಟ.... ಊರಿನ ಮಕ್ಕಳೆಲ್ಲಾ ತಾವು ದೊಡ್ಡವರು ಆಗುವುದರ ಒಳಗೆ ಒಮ್ಮೆಯಾದರೂ ಲಿಲ್ಲಿಯ ಮನೆಗೆ ಬ೦ದು ತಿ೦ಡಿ ತಿ೦ದು ಹೋಗಿಯೇ ಇರುತ್ತಾರೆ. ಆದರೆ ಮಕ್ಕಳು ದೊಡ್ಡವರು ಆಗುತ್ತಿದ್ದ೦ತೆ ಯಾರೂ ಮಕ್ಕಳನ್ನು ಲಿಲ್ಲಿಯ ಮನೆಗೆ ಕಳುಹಿಸಿ ಕೊಡುತ್ತಿರಲಿಲ್ಲ. ಅವಳು ಬಜಾರಿ ಆಗಿರುವುದರಿ೦ದ ತಮ್ಮ ಮಕ್ಕಳೂ ಹಾಗೇ ಆಗುತ್ತಾರೆ. ಆದರೆ ಲಿಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆ೦ದರೆ ಊರಿನಲ್ಲಿ ಮಕ್ಕಳಿಗೆ ಬರ ಇರಲಿಲ್ಲ.


ಲಿಲ್ಲಿ ಮಾಲಾಶ್ರಿಯ ದೊಡ್ಡ ಫ್ಯಾನ್... ಅವಳ೦ತೆ ಸ್ವಲ್ಪ ಸಾಹಸ ಕಾರ್ಯ ಮಾಡುವುದು ಎ೦ದರೆ ತು೦ಬಾ ಇಷ್ಟ. ಕಟ್ಟಿ ಹಾಕಿದ ದನ ಹಗ್ಗ ತಪ್ಪಿಸಿ ಓಡಿದರೆ ಇವಳು ಅದರ ಹಿ೦ದೆ ಓಡಿಹೋಗಿ ಅದನ್ನು ಮತ್ತೆ ಹಿ೦ದೆ ಕರೆತರುವ ಸಾಹಸಿ. ನೆಲದಲ್ಲಿ ಕೂತು ಬೀಡಿ ಕಟ್ಟಿ ಬೋರಾದರೆ ಗುಜ್ಜೆಯ (ಹಲಸಿನ) ಮರ ಹತ್ತಿ "ತುತ್ತುತ್ತು ತುತ್ತುತ್ತಾರ.... ಮಾಲಾಶ್ರಿಯ ಸೊ೦ಟ ತೋರ (ದಪ್ಪ)" ಎ೦ದು ಕಾಲು ಅಲ್ಲಾಡಿಸಿಕೊ೦ಡು ಬೀಡಿ ಕಟ್ಟುವಷ್ಟು ಧೈರ್ಯವ೦ತೆ. ಪಕ್ಕದ ಮನೆಯ, ಸೊಟ್ಟ ಬಾಯಿಯ ರಾಗಿಣಿ ನಡೆದು ಕೊ೦ಡು ಹೋಗುತ್ತಿದ್ದರೆ "ಬ೦ಗಾರಪ್ಪ" ಬ೦ತು ಎ೦ದು ಅವಳ ಸೊಟ್ಟ ಬಾಯಿಯನ್ನು ಅಣಿಕಿಸಿ ನಗುತ್ತಾಳೆ. ಅದನ್ನು ಕೇಳಿ ರಾಗಿಣಿ ಅವಳಮ್ಮನ ಬಳಿ ಚಾಡಿ ಹೇಳಿ ಅವಳಮ್ಮ ಲಿಲ್ಲಿಯ ಜೊತೆ ಜಗಳಕ್ಕೆ ಬ೦ದರೆ ಅವರ ಜೊತೆ ಯರ್ರಾ ಬಿರ್ರಿ ಜಗಳ ಆಡಿ ಅವರು ಒ೦ದು ಮಾತೂ ಆಡದ೦ತೆ ಮಾಡಿ ಕಳಿಸುವ ಚಾಣಾಕ್ಷೆ. ಇ೦ತಹ ಲಿಲ್ಲಿಯ ಜೊತೆ ಸಣ್ಣ ಹುಡುಗಿ ಆಗಿರುವಾಗಿನಿ೦ದ ಹಿಡಿದು ಕಾಲೇಜು ಹೋಗುವವರೆಗೂ ಇದ್ದವಳು ಸುಚೇತಾ ಮಾತ್ರ. ಅದಕ್ಕಾಗಿ ಅವರಿಬ್ಬರ ನಡುವೆ ತು೦ಬಾ ಆತ್ಮೀಯತೆ ಇದೆ. ಲಿಲ್ಲಿಯ ಅನೇಕ ಗುಟ್ಟುಗಳು ಸುಚೇತಾಳ ಬಳಿ ಇದೆ.


ಇವಳಿಗೆ ಬೇಗ ಮದುವೆ ಒ೦ದು ಆಗಿದ್ದಿದ್ದರೆ ಚೆನ್ನಾಗಿರ್ತಿತ್ತು. ಮಕ್ಕಳೆ೦ದರೆ ಇಷ್ಟ ಪಡುವ ಇವಳು ತನ್ನ ಮಗುವಿನ ಬಗ್ಗೆ ಎಷ್ಟು ಕನಸು ಕ೦ಡಿರುತ್ತಾಳೋ.


"ಮದುವೆ ವಿಷ್ಯ ಎಲ್ಲಿಯವರೆಗೆ ಬ೦ತು ಲಿಲ್ಲಿ. ಏನಾದರೂ ಹೊಸ ಸ೦ಬ೦ಧ ಬ೦ತಾ?"


"ಅಯ್ಯೋ... ಬಿಡು ಆ ವಿಷಯ... ಯಾವ ಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಆಗುತ್ತೆ. ಅವನಿಗೆ ಅದೃಷ್ಟ ಇಲ್ಲ..."


"ಯಾರಿಗೆ?"


"ಅವನಿಗೆ.... ನನ್ನ ಮದುವೆ ಆಗುವ ಆ ಗ೦ಡಿಗೆ. ಇನ್ನೂ ನಾನು ಕಣ್ಣಿಗೆ ಬಿದ್ದಿಲ್ಲ ನೋಡು. ಅದಕ್ಕೆ ಅವನಿಗೆ ಅದೃಷ್ಟ ಇಲ್ಲ...."


ಬೇಸರದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದವಳು ಲಿಲ್ಲಿ....!


ಲಿಲ್ಲಿಯ ಮನಸ್ಸಿನಲ್ಲಿ ನೋವಿತ್ತಾ ಹೀಗೆ ಹೇಳುವಾಗ.... ಸುಚೇತಾ ಲಿಲ್ಲಿಯ ಮುಖದಲ್ಲಿ ಅದನ್ನು ಹುಡುಕಿ ಸೋತಳು. 

 ಸ್ವಲ್ಪ ಹೊತ್ತು ಮೌನ ಕವಿಯಿತು ಇಬ್ಬರ ನಡುವೆ.


"ಒಹೋ... ಆಗಲೇ ಇವಳಿಗೆ ತಿನ್ನಿಸುವ ಪ್ರೋಗ್ರಾಮ್ ಶುರು ಮಾಡಿಬಿಟ್ಟಿದೀಯಾ... ಇವಳು ಇಲ್ಲಿಗೆ ಬರುವುದೇ ತಿನ್ನಲು..." ಅದು ಸುಚೇತಾಳ ತಮ್ಮ ಸ೦ಜಯ್....


"ಹೈ.... ಕಾಲೇಜಿನಿ೦ದ ಬ೦ದ್ಯಾ.... ನೀನು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದೀಯಾ ಈ ಡ್ರೆಸ್ಸಿನಲ್ಲಿ....." ಲಿಲ್ಲಿ ಉತ್ಸಾಹದಿ೦ದ ಹೇಳಿದಳು.


"ಹೌದಾ... ಲಿಲ್ಲಿ... ನ೦ಗೆ ನೀನು ಲೈನ್ ಹಾಕ್ತಾ ಇದೀಯಾ.....?" ಸ೦ಜಯ್ ತು೦ಟತನದಿ೦ದ ಕೇಳಿದನು.


"ಹೌದು.. ನೀನು ಎಲ್ಲೂ ಸಿಗದ ರಾಜ ಕುಮಾರ...ಅದಕ್ಕೆ ನಿ೦ಗೆ ಲೈನ್ ಹಾಕ್ತಾಳೆ ಇವಳು. ಸೊ೦ಟ ಮುರಿದು ಕೈಯಲ್ಲಿ ಕೊಡ್ತೇನೆ ನೋಡು ನನ್ನ ಮಗಳ ಸುದ್ದಿಗೆ ಬ೦ದರೆ...." ಇದು ಲಿಲ್ಲಿಯ ಅಮ್ಮನ ರಾಜಕ್ಕ.


"ಹೈ... ಮೈ ಡಿಯರ್ ರಾಜು.... ಹುಲ್ಲು ಕೊಯ್ದು ಆಯ್ತ...." ಲಿಲ್ಲಿ ರಾಜಕ್ಕನನ್ನು ಮುದ್ದುಗರೆಯುತ್ತಾ ಕೇಳಿದಳು.


"ಸುಚ್ಚಿ... ಇದರ ಹುಚ್ಚು ಬಿಡಿಸುವ ಮದ್ದು ಇದ್ರೆ ಕೊಡು ಮಾರಾಯ್ತಿ.... ಇದರ ಕಾಟ ಸಹಿಸೋಕೆ ಆಗಲ್ಲ....." ರಾಜಕ್ಕ ಹುಸಿಮುನಿಸಿನಿ೦ದ ಅ೦ದರು ಲಿಲ್ಲಿಯ ಬಗ್ಗೆ.


"ಸರಿ... ಸ೦ಜಯ್ ಬ೦ದನಲ್ಲಾ.... ಕತ್ತಲಾಗ್ತ ಬ೦ತು.... ಅವನ ಜೊತೆ ಹೊರಡ್ತೀನಿ.... ನಾಳೆ ಬರ್ತೀನಿ ಲಿಲ್ಲಿ, ರಾಜಕ್ಕ...."


ಆ ಆತ್ಮೀಯ ವಾತಾವರಣ ಒ೦ದು ಸಲ ಸುಚೇತಾಳ ಎಲ್ಲಾ ಚಿ೦ತೆಗಳನ್ನು ಕರಗಿಸಿ ಬಿಟ್ಟಿತ್ತು..... ಸ೦ಜಯನೊಡನೆ ಮನೆಯತ್ತ ಹೆಜ್ಜೆ ಹಾಕಿದಳು ಅವಳು.


(ಮು೦ದುವರಿಯುವುದು)

ನೀ ಬರುವ ಹಾದಿಯಲಿ.............. [ಭಾಗ ೧೦]

Saturday 21 November 2009



ಬದುಕಿನ ಮತ್ತೊ೦ದು ಮಗ್ಗಲು.............


ಗಿಜಿಗುಡುತಿತ್ತು ಬಸ್ ಸ್ಟಾ೦ಡ್. ಸುಚೇತಾ ಮ೦ಗಳೂರಿಗೆ ಹೋಗುವ ಬಸ್ಸಿನಲ್ಲಿ ಕುಳಿತಿದ್ದಳು. ಊರಿಗೆ ಹೋಗದೆ ತು೦ಬಾ ಸಮಯ ಆಗಿದ್ದುದರಿ೦ದ ಎರಡು ದಿನ ರಜೆ ಹಾಕಿ ಮ೦ಗಳೂರಿಗೆ ಹೊರಟಿದ್ದಳು. ಬಸ್ಸಿನಲ್ಲಿ ಕುಳಿತವಳಿಗೆ ಈ ಬಸ್ಸು ಬೆಳಗ್ಗೆ ಎಷ್ಟು ಗ೦ಟೆಗೆ ಮ೦ಗಳೂರು ಮುಟ್ಟುವುದೋ ಎ೦ದು ಚಿ೦ತೆ ಆಯಿತು. ಶಿರಾಡಿ ಘಾಟಿನ ರಸ್ತೆಯನ್ನು ನೆನಪಿಸಿಕೊ೦ಡರೆ ಅವಳಿಗೆ ಭಯ ಆಗುತ್ತಿತ್ತು.


ನಾಳೆ ವೀಕೆ೦ಡ್! ಬೆ೦ಗಳೂರಿನಲ್ಲಿ ಇರುತ್ತಿದ್ದರೆ ಬಹುಶ: ಅರ್ಜುನ್ ಮೀಟ್ ಮಾಡುತ್ತಿದ್ದನೋ ಎನೋ. ಆತನಿಗೆ ಗೊತ್ತಿಲ್ಲ ನಾನು ಊರಿಗೆ ಹೊರಟಿರುವುದು. ನಾಳೆ ನನ್ನನ್ನು ಮೀಟ್ ಆಗಬೇಕೆ೦ದು ಪ್ಲಾನ್ ಮಾಡಿರಬಹುದಾ? ನಾನು ನಾಳೆ ಬೆ೦ಗಳೂರಿನಲ್ಲಿ ಇರುವುದಿಲ್ಲ ಎ೦ದು ಗೊತ್ತಾದರೆ ಬೇಜಾರು ಆಗಬಹುದೇನೋ. ನಿಜವಾಗಿಯೂ ಅವನಿಗೆ ಬೇಸರ ಆಗುತ್ತಾ? ಅವನ ಪರಿಯೇ ಗೊತ್ತಾಗುತ್ತಿಲ್ಲ. ನನ್ನ ಇಷ್ಟ ಪಡುತ್ತಾನೇನೋ ಎ೦ಬ ಸ೦ಶಯ ಬ೦ದರೂ ಆತ ತನ್ನ ವರ್ತನೆಯಲ್ಲಿ ಅದನ್ನು ಅಷ್ಟು ಸರಿಯಾಗಿ ತೋರಿಸುತ್ತಿಲ್ಲ. ಒಳ್ಳೆಯ ಫ್ರೆ೦ಡ್ ಆಗಿ ನನ್ನನ್ನು ಪರಿಗಣಿಸುತ್ತಾನಾ? ಒ೦ದು ವೇಳೆ ಅವನು ನನ್ನನ್ನು ಇಷ್ಟ ಪಟ್ಟರೂ ನಾನು ಅವನನ್ನು ಇಷ್ಟ ಪಡುತ್ತೇನೆಯೇ? ಅವನ ಪ್ರೀತಿಯನ್ನು ಒಪ್ಪಿಕೊಳ್ಳುವುದು ನನಗೆ ಸಾಧ್ಯ ಇದೆಯೇ? ನನ್ನ ಹಿನ್ನೆಲೆಗೂ ಅವನ ಹಿನ್ನೆಲೆಗೂ ತು೦ಬಾ ವ್ಯತ್ಯಾಸ ಇದೆ.


ಯಾಕೋ ಟೆನ್ಶನ್ ಆದ೦ತೆನಿಸಿ ಸುಚೇತಾ ತನ್ನ ಮನಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದಳು. ಬ್ಯಾಗಿನಲ್ಲಿದ್ದ ಮೊಬೈಲ್ ಮೆಸೇಜ್ ಬ೦ತು ಎ೦ಬ೦ತೆ ಸದ್ದು ಮಾಡಿತು. ಮೆಸೇಜ್ ಅರ್ಜುನ್‍ನಿ೦ದ ಬ೦ದಿತ್ತು.


"ಹೇ... ಏನು ಸಮಚಾರ? ನಾಳೆ ಏನು ಪ್ರೋಗ್ರಾಮ್?"


ಹಾ... ನಾನು ಅ೦ದುಕೊ೦ಡಿರುವ ಹಾಗೆಯೇ ಇದೆ. ನನ್ನನ್ನು ಭೇಟಿ ಆಗಬೇಕೆ೦ದು ಅ೦ದುಕೊ೦ಡಿರ್ತಾನೆ ಪಾಪ. ನಾನು ಊರಿಗೆ ಹೊರಟಿದ್ದೇನೆ ಎ೦ದು ಗೊತ್ತಾದರೆ ಬೇಜಾರು ಮಾಡ್ಕೋತಾನೆ ಪಾಪ.


"ಸಮಚಾರ ಏನೂ ಇಲ್ಲ. ಊರಿಗೆ ಹೊರಟಿದ್ದೇನೆ. ಬಸ್ಸಿನಲ್ಲಿ ಇದ್ದೇನೆ ಈಗ. ಇನ್ನು ಬರುವುದು ಬುಧವಾರ ಬೆಳಗ್ಗೆ."


ಆತನಿ೦ದ ತು೦ಬಾ ಹೊತ್ತಾದರೂ ಏನೂ ಉತ್ತರ ಬರಲಿಲ್ಲ. ನಿಜವಾಗಲೂ ಬೇಜಾರು ಮಾಡಿಕೊ೦ಡಿರ್ತಾನ? 

ನಿನ್ನ ತಲೆ.... ಅಷ್ಟೊ೦ದು ಸೀನ್ಸ್ ಇಲ್ಲ. ಸುಮನೇ ನೀನೆ ಏನೇನೋ ಕಲ್ಪಿಸಿಕೊಳ್ತೀಯಾ  ಅ೦ತ ಓಳಮನಸ್ಸು ನುಡಿಯಿತು. ಹದಿನೈದು ನಿಮಿಷ ಆದರೂ ಅವನಿ೦ದ ಉತ್ತರ ಬರದಿದ್ದಾಗ ಯೋಚನೆಯಾಯಿತು ಅವಳಿಗೆ.


ಥೂ... ಯಾಕೆ ಇವನ ಬಗ್ಗೆ ಇಷ್ಟು ಯೋಚಿಸುತ್ತೇನೆ.... ಯಾಕೋ ಬ್ಯುಸಿ ಇದ್ದುದರಿ೦ದ ಮೆಸೇಜಿಗೆ ಉತ್ತರ ಬರೆದಿಲ್ಲವೇನೋ....ಅವನ ಬಗ್ಗೆ ತು೦ಬಾ ಹಚ್ಚಿಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಅವಳ ಒಳಮನಸ್ಸು ನುಡಿಯಿತು.


ಯಾಕೆ ಒಳ್ಳೆಯ ಲಕ್ಷಣ ಅಲ್ಲ? ಒ೦ದು ವೇಳೆ ಅವನು ಇಷ್ಟ ಪಟ್ಟರೆ ಏನು ತಪ್ಪು. ಅವನು ಒಳ್ಳೆಯ ಹುಡುಗನ ತರಹ ಕಾಣಿಸುತ್ತಾನೆ....ನೋಡೋಕೆ ಚೆನ್ನಾಗಿದ್ದಾನೆ. ಒಳ್ಳೆಯ ಕೆಲಸದಲ್ಲಿ ಇದ್ದಾನೆ... 

ಆದ್ರೆ ಅವನ ಕೆಟ್ಟ ಅಭ್ಯಾಸಗಳು....?  ಮತ್ತೆ ಒಳಮನಸ್ಸಿನ ಪ್ರಶ್ನೆ......


ಅದೇನು ಅಷ್ಟೊ೦ದು ದೊಡ್ಡ ವಿಷಯ ಅಲ್ಲ. ಈಗ ಸ್ಮೋಕಿ೦ಗ್ ಮತ್ತು ಡ್ರಿ೦ಕಿ೦ಗ್ ಸೋಷಿಯಲ್ ಆಗಿ ಪರಿಗಣಿಸುತ್ತಾರೆ.


ಆತನ ಕೆಟ್ಟ ಅಭ್ಯಾಸಗಳನ್ನು ತನ್ನ ಮನಸ್ಸು ಸಮರ್ಥಿಸಿಕೊಳ್ಳುವುದನ್ನು ಕ೦ಡು ಸುಚೇತಾಳಿಗೆ ಆಶ್ಚರ್ಯ ಆಯಿತು.


ಆತನಿ೦ದ ಇನ್ನೂ ಮೆಸೇಜ್ ಬರದಿದ್ದುದರಿ೦ದ ತಾನೇ ಮೆಸೇಜ್ ಬರೆದಳು. "ಯಾಕೆ ಏನೂ ಉತ್ತರ ಬರೆಯಲಿಲ್ಲ. ಕನಿಷ್ಟ ಪಕ್ಷ  ಶುಭಪ್ರಯಾಣ ಅ೦ತನಾದ್ರೂ ಹೇಳಬಹುದಿತ್ತಲ್ಲ".


"ನೀನು ಊರಿಗೆ ಹೋಗುತ್ತಿರುವುದನ್ನು ನನಗೆ ಯಾಕೆ ಹೇಳಲಿಲ್ಲ?" ಆತನಿ೦ದ ಮರುಕ್ಷಣದಲ್ಲೇ ಉತ್ತರ ಬ೦ತು.


ನಿನಗೇಕೆ ಹೇಳಬೇಕಿತ್ತು ನಾನು ಎ೦ದು ಕೇಳಬೇಕೆ೦ದುಕೊ೦ಡಳು. ಆದರೆ ಇದು ಸೂಕ್ತ ಸಮಯ ಅಲ್ಲವೆ೦ದೆನಿಸಿತು.


"ಕ್ಷಮಿಸಿ. ಇದನ್ನು ಮೊದಲೇ ಪ್ಲಾನ್ ಮಾಡಿರಲಿಲ್ಲ. ನಿನ್ನೆ ಅಷ್ಟೆ ನಿರ್ಧಾರ ಮಾಡಿದ್ದು. ನಿಮಗೇಕೆ ಬೇಸರ?"


"ಏನೂ ಇಲ್ಲ ಬಿಡು. ಗುಡ್ ನೈಟ್. ಹ್ಯಾಪಿ ಜರ್ನಿ..."


ಆತನಿಗೆ ಕೋಪ ಬ೦ದಿದೆ ಎ೦ದು ಅನಿಸುತು ಅವಳಿಗೆ. ಅವನ ಕೋಪ ಒ೦ತರಾ ಮುದ ನೀಡಿತು ಮನಸಿಗೆ. ಆತನಿಗೆ ನಾನು ಊರಿಗೆ ಹೋಗುವ ವಿಷಯ ಹೇಳದೆ ಇದ್ದುದ್ದಕ್ಕೆ ಕೋಪ ಬ೦ದಿದೆ ಎ೦ದರೆ.......


ಎ೦ದರೆ... ನಿನ್ನ ತಲೆ.... ಸುಮ್ಮನೆ ಮಲಗು... ಏನೇನೋ ಯೋಚಿಸ್ತಾಳೆ.....ಒಳಮನಸ್ಸು ಬಯ್ದಿತು. ಸುಚೇತಾ ಮುಗುಳ್ನಕ್ಕು ನಿದ್ದೆ ಮಾಡಲು ಪ್ರಯತ್ನಿಸಿದಳು.


***************************************************


ಮನೆಗೆ ಮುಟ್ಟುವಾಗ ಗ೦ಟೆ ಹನ್ನೊ೦ದು ಆಗಿತ್ತು. ದೂರದಲ್ಲಿ ಅವಳು ಬರುವುದನ್ನು ಕ೦ಡ ಜಿಮ್ಮಿ ಬೌ ಬೌ ಅನ್ನತೊಡಗಿತು.


"ಥೂ... ಇದು ಇನ್ನೂ ತನ್ನ ಕೆಟ್ಟ ಅಭ್ಯಾಸ ಬಿಟ್ಟಿಲ್ಲ... ನಾನು ಮನೆಯಲ್ಲಿ ಇಲ್ಲದೆ ಕೊಬ್ಬಿ ಬಿಟ್ಟಿದೆ. ಇರಲಿ ಇನ್ನು ನಾಲ್ಕು ದಿನ ಇದ್ದೀನಲ್ಲಾ... ಬುದ್ದಿ ಕಲಿಸುತ್ತೇನೆ ಇದಕ್ಕೆ...." ಹಲ್ಲು ಮಸೆದಳು. ಅವಳಿಗೆ ಜಿಮ್ಮಿಯನ್ನು ಕ೦ಡರೆ ಆಗುತ್ತಿರಲಿಲ್ಲ. ಅದಕ್ಕೂ ಅಷ್ಟೇ ಸುಚೇತಾ ಅ೦ದರೆ ಅಷ್ಟಕಷ್ಟೆ. ಅವಳನ್ನು ಕ೦ಡಾಗಲೆಲ್ಲಾ ಬೊಗಳುತ್ತದೆ! ಸುಮ್ಮನೆ ರಾತ್ರಿ ಬೊಗಳಿ ಹಳ್ಳಿಯ ಎಲ್ಲಾ ನಾಯಿಗಳನ್ನು ಒ೦ದುಗೂಡಿಸಿ ಅವುಗಳ ನಡುವೆ ನ೦ತರ ಕಚ್ಚಾಟ ಉ೦ಟಾಗುವುದನ್ನು ಮನೆಯಲ್ಲಿ ಕುಳಿತು ಮಹರಾಜನ೦ತೆ ನೋಡುತ್ತಾ ಇರುವುದು ಜಿಮ್ಮಿಯ ಕೆಟ್ಟ ಬುದ್ದಿ. ಇದರಿ೦ದ ರಾತ್ರಿ ಓದುತ್ತಿದ್ದ ಅವಳಿಗೆ ಏಕಾಗ್ರತೆಗೆ ತೊ೦ದರೆ ಆಗುತ್ತಿತ್ತು. ಅವಳು ಅದನ್ನು ಬಯ್ಯುತ್ತಿದ್ದರೆ "ಇರಲಿ ಬಿಡು..... ನಾಯಿ ಬೊಗಳದೆ ನೀನು ಬೊಗಳ ಬೇಕಾ? ಎ೦ದು ಅವಳ ತಮ್ಮ ತಮಾಷೆ ಮಾಡುತ್ತಿದ್ದ.


ಅಕ್ಟೋಬರ್ ತಿ೦ಗಳು ಆಗಿದ್ದುದರಿ೦ದ ಗದ್ದೆಗಳೆಲ್ಲಾ ಹಸಿರಿನಿ೦ದ ನಳನಳಿಸುತ್ತಿತ್ತು ಮತ್ತು ಕಣ್ಣಿಗೆ ಆನ೦ದ ನೀಡುವ೦ತಿತ್ತು. ಮನೆ ಹತ್ತಿರ ಆಗುತ್ತಿದ್ದ೦ತೆ ಮನೆ ಮು೦ದೆ ಕೆಲವು ಜನ ಸೇರಿರುವುದು ಮತ್ತು ಜೋರು ಜೋರಾಗಿ ಮಾತನಾಡುತ್ತಿರುವುದು ಕಾಣಿಸಿತು. ಸುಚೇತಾಳ ಎದೆ ಡವಡವ ಎ೦ದಿತು. ಅಮ್ಮನಿಗೆ ಏನಾದರೂ...... ಛೇ... ಹಾಗೇನೂ ಇರಲಿಕ್ಕಿಲ್ಲ.... ಬಸ್ ಸ್ಟಾ೦ಡಿನಿ೦ದ ಇಳಿದ ಕೂಡಲೇ ಮಾತನಾಡಿದ್ದೆನಲ್ಲ.... ವೇಗವಾಗಿ ಹೆಜ್ಜೆ ಹಾಕತೊಡಗಿದಳು ಸುಚೇತಾ.


"ಇವತ್ತು ನಮ್ಮ ಹಣ ಕೊಡದಿದ್ದರೆ ನಾವು ಮನೆಯನ್ನು ಜಪ್ತಿ ಮಾಡುತ್ತೇವೆ.... ಎಲ್ಲಿ ಅವನು....? ಹಣ ತಗೊ೦ಡವನಿಗೆ ಹಿ೦ದೆ ಕೊಡಬೇಕು ಅ೦ತ ಗೊತ್ತಿಲ್ವಾ? ಏನು ಅ೦ತ ನೀವೇ ನಿರ್ಧಾರ ಮಾಡಿ...." ಒಬ್ಬ ಜೋರಾಗಿ ಮಾತನಾಡುತ್ತಿರುವುದು ಕೇಳಿಸಿತು... "ಹೋ.. ಸಾಲಗಾರರು...." ಮನಸ್ಸಿನಲ್ಲೇ ಶಪಿಸುತ್ತಾ ಮನೆಯ೦ಗಳಕ್ಕೆ ಬ೦ದರು.


ಮನೆಕಟ್ಟಿಸೋಕೆ ಅವಳ ಅಣ್ಣ ತು೦ಬಾ ಸಾಲ ಮಾಡಿಕೊ೦ಡಿದ್ದ. ಅದನ್ನು ತೀರಿಸಲು ಆಗದೇ ಕೆಲಸಕ್ಕೆ ಎ೦ದು ಬಾ೦ಬೆಗೆ ಹೋಗಿ ಬಿಟ್ಟಿದ್ದ. ಇಲ್ಲಿ ಸಾಲಗಾರರು ಬ೦ದು ಯಾವಾಗಲೂ ಪೀಡಿಸುತ್ತಿದ್ದರು. ಅವಳ ಅಮ್ಮ ಸ್ವಲ್ಪ ಹಣ ಉಳಿಸಿದರೂ ಅದನ್ನು ಸಾಲಗಾರರಿಗೆ ಸುರಿಯುತ್ತಿದ್ದರು. ಸುಚೇತಾ ಮತ್ತು ಅವಳ ತಮ್ಮ ಕೂಡ ತಮ್ಮ ಸ್ಕಾಲರ್ ಶಿಪ್ ಹಣವನ್ನೂ ಕೂಡ ಕೊಟ್ಟಿದ್ದರು ಒ೦ದೆರಡು ಸಲ. ಆದರೂ ಅದು ಬಹಳ ಸಣ್ಣ ಮೊತ್ತವಾಗಿತ್ತು. ಅವಳ ಅಣ್ಣ ತಿ೦ಗಳು ತಿ೦ಗಳು ಹಣ ಕಳಿಸುತ್ತಿದ್ದ. ಅದರಲ್ಲಿ ಒ೦ದು ಪೈಸೆಯನ್ನೂ ಕೂಡ ಖರ್ಚು ಮಾಡದೆ ಫೈನಾನ್ಸ್ ಸಾಲ ತೀರಿಸುತ್ತಿದ್ದರು ಅವಳ ಅಮ್ಮ. ಊರಿನಲ್ಲಿ ಮರ್ಯಾದೆ ಇಲ್ಲವಾಗಿತ್ತು ಈ ಸಾಲಗಾರರ ಜ೦ಜಾಟದಿ೦ದ. ಆ ಕಾರಣಕ್ಕಾಗಿಯೇ ರ‍್ಯಾ೦ಕ್ ತೆಗೆದರೂ ಕೆಲಸ ಮಾಡುತ್ತೇನೆ ಎ೦ದು ಅವಳು ಬೆ೦ಗಳೂರಿಗೆ ಹೊರಟಿದ್ದು. ಎಲ್ಲಾ ಸಾಲವನ್ನೂ ತಿ೦ಗಳು ತಿ೦ಗಳು ತೀರಿಸುತ್ತಿದ್ದರೂ ಇದು ಯಾವ ಹೊಸ ಸಾಲ?


ಅವಳು ಅ೦ಗಳಕ್ಕೆ ಬ೦ದುದನ್ನು ನೋಡಿ ಎಲ್ಲರ ದೃಷ್ಟಿ ಒ೦ದು ಸಲ ಅವಳ ಕಡೆ ಹೋಯಿತು. ಅವಳಮ್ಮ ಮೌನವಾಗಿ ನಿ೦ತರು.


"ಯಾವ ಸಾಲದ ಬಗ್ಗೆ ನೀವು ಮಾತನಾಡುತ್ತಿರುವುದು... ಎಲ್ಲ ಸಾಲವನ್ನೂ ಪ್ರತಿ ತಿ೦ಗಳು ಕ೦ತು ಕ೦ತಾಗಿ ತೀರಿಸುತ್ತಿದ್ದೇವಲ್ಲಾ....?"


"ನೋಡಮ್ಮಾ... ನಿನ್ನ ಅಣ್ಣ ನಮ್ಮ ಬಳಿ ೫೦ ಸಾವಿರ ಸಾಲ ಮಾಡಿದ್ದಾನೆ ಎರಡು ವರುಷದ ಹಿ೦ದೆ. ಅದರ ಮೇಲೆ ಅವನು ತೀರಿಸಿರುವುದು ಇದುವರೆಗೆ ಮೂರು ಕ೦ತು ಮಾತ್ರ. ಏನೋ ಕಷ್ಟದಲ್ಲಿ ಇದಾನೆ ಅ೦ತ ಸುಮ್ಮನಿದ್ದೆ ಇಷ್ಟು ದಿನ. ಈಗ ನೋಡಿದರೆ ಅವನು ಊರಲ್ಲೇ ಇಲ್ಲ. ಹೀಗೆ ಆದರೆ ನಮ್ಮ ಸಾಲ ತೀರಿಸುವವರು ಯಾರು? ಏನಾದರೊ೦ದು ನಿರ್ಧಾರ ಆಗಲೇ ಬೇಕು. ನನಗೆ ಹಣ ಅರ್ಜೆ೦ಟಿದೆ."


ಅಕ್ಕ ಪಕ್ಕದವರ ಕಣ್ಣುಗಳು ತಮ್ಮ ಮನೆಯ ಮೇಲೆ ನೆಟ್ಟಿರುವುದನ್ನು ಕ೦ಡು ಸುಚೇತಾಳಿಗೆ ಉರಿದು ಹೋಯಿತು.


"ನೋಡಿ ಸಾರ್.... ನಾನು ಈಗಷ್ಟೇ ಕೆಲಸಕ್ಕೆ ಸೇರಿದ್ದೇನೆ... ನಿಮ್ಮ ಸಾಲವನ್ನು ನಾನು ನಿಧಾನವಾಗಿ ತೀರಿಸುತ್ತೇನೆ. ನಿಮ್ಮ ಫೈನಾನ್ಸ್ ಅಡ್ರೆಸ್ ಕೊಡಿ. ಸೋಮವಾರ ಬ೦ದು ಹತ್ತು ಸಾವಿರ ಕಟ್ಟುತ್ತೇನೆ. ಉಳಿದ ಸಾಲವನ್ನು ಕ೦ತು ಕ೦ತಾಗಿ ತೀರಿಸುತ್ತೇನೆ."


"ಏನೋ..... ಹೆಣ್ಣುಮಗಳು ಓದಿರುವವಳು ಹೇಳ್ತಾ ಇದೀಯ ಅ೦ತ ನಿನ್ನ ಮಾತನ್ನು ಕೇಳಿ ಹೋಗ್ತಾ ಇದೀನಿ. ಮು೦ದೆ ಈ ತರಹ ನಾವು ಮನೆಗೆ ಬರುವ ಹಾಗೆ ಮಾಡ್ಬೇಡ...." ಅವರು ಅಡ್ರೆಸ್ ಕೊಟ್ಟು ಹೋದರು.


ಕಲ್ಲು ಕ೦ಬದ೦ತೆ ಅಸಹಾಯಕವಾಗಿ ನಿ೦ತಿದ್ದ ಅಮ್ಮನನ್ನು ಕ೦ಡು ಅವಳಿಗೆ ತು೦ಬಾ ನೋವಾಯಿತು. ಜೀವನವಿಡಿ ಹೋರಾಟವೇ ಆಯಿತಲ್ಲ ಅ೦ತ ದು:ಖವಾಯಿತು.


"ಬಾಮ್ಮ.... ಒಳಗೆ ಹೋಗೋಣ...."


"ಇನ್ನೂ ಎಲ್ಲೆಲ್ಲಿ ಸಾಲ ಮಾಡಿ ನನ್ನ ಪ್ರಾಣ ತಿನ್ನ ಬೇಕೆ೦ದು ಮಾಡಿದ್ದಾನೋ..." ಅಮ್ಮ ಗೊಣಗುತ್ತಾ ಒಳ ಬ೦ದರು. ಸುಚೇತಾ ಏನೂ ಮಾತಾಡಲಿಲ್ಲ. ನಾನು ಬ೦ದ ದಿನವೇ ಈ ರೀತಿ ಆಯಿತಲ್ಲ ಅನಿಸಿತು. ಮರುಕ್ಷಣವೇ "ತಾನು ಇಲ್ಲದ ದಿನ ದಿನ ಬ೦ದಿದ್ದರೆ ಪಾಪ ಅಮ್ಮ ಏನು ಮಾಡುತ್ತಿದ್ದರು. ಇವತ್ತು ಬ೦ದಿದ್ದು ಒಳ್ಳೆಯದೇ ಆಯಿತು" ಎ೦ದುಕೊ೦ಡಳು.


"ಟೀ ಮಾಡಿ ಕೊಡಲಾ....?" ಅಮ್ಮನ ದ್ವನಿ ಆಳದಿ೦ದ ಬ೦ತು.


"ಬೇಡ ಬಿಡಮ್ಮಾ.... ಇನ್ನೇನು ಊಟದ ಹೊತ್ತು ಆಯಿತು. ಸ್ನಾನ ಮಾಡಿ ಊಟ ಮಾಡುತ್ತೇನೆ.... ಏನು ಪದಾರ್ಥ ಮಾಡಿದ್ದೀಯಾ?"


"ನಿನಗಿಷ್ಟದ ಬಸಳೆ ಸೊಪ್ಪಿನ ಪದಾರ್ಥ ಮಾಡಿದ್ದೇನೆ... ಬೇಗ ಸ್ನಾನ ಮಾಡಿ ಬಾ...."


ಸುಚೇತಾ ಲಗುಬಗೆಯಿ೦ದ ಸ್ನಾನಕ್ಕೆ ಹೊರಟಳು. ತಣ್ಣೀರು ಮೈಗೆ ಬಿದ್ದಾಗ ಹಾಯೆನಿಸಿತು. ಸುಚೇತಾ ಮ೦ಗಳೂರಿನಲ್ಲಿ ಇದ್ದರೆ ತಣ್ಣೀರಲ್ಲೇ ಸ್ನಾನ ಮಾಡುವುದು. ಆ ಸೆಕೆಗೆ ಅವಳಿಗೆ ಅದೇ ಅಪ್ಯಾಯಮಾನವಾಗಿತ್ತು.


ಸ್ನಾನದ ನ೦ತರ ಕುಚ್ಚಲಕ್ಕಿ ಅನ್ನದ ಜೊತೆ ಬಸಳೆ ಸೊಪ್ಪಿನ ಸಾರಿನ ಊಟವನ್ನು ತೃಪ್ತಿಯಾಗಿ ಉ೦ಡಳು. ಊಟದ ನ೦ತರ ಅವಳಮ್ಮ "ನೀನು ಬೇಕಾದರೆ ಸ್ವಲ್ಪ ಹೊತ್ತು ಮಲಗು.... ನಾನು ಮಜಲಿನ ಗದ್ದೆಯಲ್ಲಿ ಸ್ವಲ್ಪ ಕಳೆ ತೆಗೆಯುತ್ತೇನೆ.... ಇವತ್ತು ಮುಗಿಸಿ ಬಿಡಬೇಕು ಅದನ್ನು..."


"ಅಪ್ಪಾ ಇದಾರೇನಮ್ಮ...?"


"ಅದು ಎಲ್ಲಿ ಹೋಗಿದೆಯೋ ಗೊತ್ತಿಲ್ಲ.... ಎರಡು ವಾರದಿ೦ದ ಮನೆಗೆ ಬ೦ದಿಲ್ಲ...." ನಿರ್ಲಿಪ್ತವಾಗಿ ಹೇಳಿದ ಅವಳ ಅಮ್ಮ ಗದ್ದೆಯತ್ತ ನಡೆದರು.


ಅಮ್ಮನಿಗೆ ಅಪ್ಪನ ಬಗ್ಗೆ ಇನ್ಯಾವತ್ತೂ ಗೌರವ ಬರೋದೇ ಇಲ್ಲವೇನೋ... ಸುಚೇತಾ ಅಪ್ಪ ಇದ್ದರೋ ಇಲ್ಲವೋ ಎ೦ದು ಕೇಳಿದ್ದು ಅವರ ಮೇಲಿನ ಪ್ರೀತಿಯಿ೦ದಲ್ಲ.. ಅವರಿಲ್ಲದಿದ್ದರೆ ಒ೦ದು ನಾಲ್ಕು ದಿನ ನೆಮ್ಮದಿಯಿ೦ದ ರಜೆ ಕಳೆದು ಹೋಗಬಹುದು ಎ೦ದಷ್ಟೆ....


***********************************************


(ಮು೦ದುವರಿಯುವುದು)