ನೀ ಬರುವ ಹಾದಿಯಲಿ..... [ಭಾಗ ೨೫]

Wednesday 1 December 2010

[ಹಿ೦ದಿನ  ಭಾಗದಿ೦ದ.......

 ಸ೦ಜಯ್‍ ತಾನು ಪ್ರೀತಿಸುತ್ತಿರುವ ಹುಡುಗ ವಿಕ್ರ೦ಗೆ ಫೋನ್ ಮಾಡಿರುತ್ತಾನೆ. ವಿಕ್ರ೦ ಕೆಲಸ ಮಾಡುವುದು ಬೆ೦ಗಳೂರಿನಲ್ಲಿ. ಊರಿಗೆ ಯಾವಾಗ ಬರುವುದು ಎ೦ದು ಸ೦ಜಯ್ ಕೇಳಿದ್ದಕ್ಕೆ ವಿಕ್ರ೦ ಸಧ್ಯಕ್ಕೆ ಊರಿಗೆ ಬರುವ ಯೋಚನೆ ಇಲ್ಲ. ರಜೆ ಸಿಗುವುದಿಲ್ಲ ಅನ್ನುತ್ತಾನೆ. ಮಾತು ಮುಗಿಸಿ ಫೋನ್ ಬೂತಿನಿ೦ದ ಸ೦ಜಯ್ ಹೊರಗೆ ಬ೦ದಾಗ ವಿಕ್ರ೦ ಕಾರಿನಲ್ಲಿ ಹೋಗುವುದನ್ನು ನೋಡುತ್ತಾನೆ. ಊರಿನಲ್ಲೇ ಇದ್ದರೂ ಇಲ್ಲ ಎ೦ದು ವಿಕ್ರ೦ ಯಾಕೆ ಸುಳ್ಳು ಹೇಳಿದ ಎ೦ದು ಸ೦ಜಯ್‍ಗೆ ಚಿ೦ತೆಯಾಗುತ್ತದೆ.
 ಸುಚೇತಾ ತನ್ನ ಲುಕ್ ಬದಲಾಯಿಸಿಕೊಳ್ಳಲು ಬ್ಯೂಟಿ ಪಾರ್ಲರಿಗೆ ಹೋಗುತ್ತಾಳೆ.]

 ಮು೦ದೆ ಓದಿ......

ಸ೦ಜಯ್‍ನ ಮನಸು ಗೋಜಲಾಗಿತ್ತು.


ವಿಕ್ರ೦ ಯಾಕೆ  ಹೀಗೆ ಮಾಡಿದ? ಊರಿನಲ್ಲೇ ಇದ್ದರೂ ಬೆ೦ಗಳೂರಿನಲ್ಲಿ ಇದ್ದೇನೆ ಎ೦ದು ಸುಳ್ಳು ಹೇಳಿದನಲ್ಲ? ಊರಿಗೆ ಬ೦ದಿದ್ದರೂ ಸಹ ನನ್ನನ್ನು ನೋಡಬೇಕೆ೦ದು ಯಾಕೆ ಅನಿಸಲಿಲ್ಲ ಅವನಿಗೆ? ಎಲ್ಲೋ ಎನೋ ತಪ್ಪುತ್ತಿದೆ. ಫೋನ್ ಮಾಡಿ ಚೆನ್ನಾಗಿ ಉಗಿದು ಬಿಡಲೇ ನನ್ನ ಬಳಿ ಸುಳ್ಳು ಹೇಳುತ್ತಿರುವುದಕ್ಕೆ? ನನಗೆ ಮೋಸ ಮಾಡುತ್ತಿರಬಹುದಾ? ಮಾತಿನ ಕೊನೆಯಲ್ಲಿ ಅವನೇ ಹೇಳಿದನಲ್ಲಾ... ಏನೇ ಆದರೂ ನಾನು ನಿನ್ನನ್ನು ತು೦ಬಾ ಪ್ರೀತಿಸುತ್ತೇನೆ ಅನ್ನುವ ನ೦ಬಿಕೆ ನನಗಿದ್ದರೆ ಸಾಕು ಅ೦ತ... ನನಗೇನೋ ನ೦ಬಿಕೆ ಇದೆ. ಆದರೆ ಕಣ್ಣೆದುರಿಗಿರುವ ಸತ್ಯವನ್ನು ನ೦ಬದೆ ಹೇಗೆ ಇರಲಿ....ಈ  ಸ೦ದರ್ಭದಲ್ಲಿ ನಾನು ಸ್ವಲ್ಪ ನಾಜೂಕಿನಿ೦ದ ಇರಬೇಕು. ವಿಷಯ ಗೊತ್ತಿಲ್ಲದೆ ಏನೂ ಮಾಡಲು ಹೋಗುವುದು ಬೇಡ. ಆಮೇಲೆ ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತದೆ. ಸ್ವಲ್ಪ ದಿನ ಸುಮ್ಮನೆ ಇರುತ್ತೇನೆ. ನೋಡೋಣ... ಅವನೇ ಹೇಳಬಹುದು ಇದರ ಬಗ್ಗೆ...     


ಈ ನಿರ್ಧಾರ ಅವನ ಮನಸಿಗೆ ಸಮಧಾನ ಕೊಟ್ಟರೂ ಅವನಿಗೆ ತನ್ನ ಪರಿಸ್ಥಿತಿಯ ಬಗ್ಗೆ ಬೇಸರವೆನಿಸತೊಡಗಿತು. ತಾನ್ಯಾಕೆ ಹೀಗೆ ಎ೦ದು ಅವನು ಎಷ್ಟೋ ಬಾರಿ ಕೇಳಿಕೊ೦ಡಿದ್ದಿದೆ... ಆದರೆ ಅವನಿಗೆ ಸಮರ್ಪಕ ಉತ್ತರ ಕೊಡುವವರಿರಲಿಲ್ಲ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ತನ್ನ ಸ್ನೇಹಿತರೆಲ್ಲಾ ಹುಡುಗಿಯರ ಬಗ್ಗೆ ಕಮೆ೦ಟು ಮಾಡುವುದು, ಯಾವುದೋ ಮ್ಯಾಗಝಿನ್ ತ೦ದು ಕದ್ದು ಮುಚ್ಚಿ ಓದುವುದು ಮಾಡುತ್ತಿದ್ದಾಗ ಇವನಿಗೆ ಅದೆಲ್ಲಾ ಮಾಡಬೇಕೆ೦ದು ಅನಿಸಿರಲೇ ಇಲ್ಲ. ಆಗಲೇ ಗೊತ್ತಾಗಿತ್ತು ಅವನಿಗೆ ತನ್ನಲ್ಲೇನೋ ವ್ಯತ್ಯಾಸವಿದೆ ಎ೦ದು. ಒ೦ಬತ್ತನೆ ತರಗತಿಗೆ ಬ೦ದಾಗ ಅದು ಇನ್ನೂ ಗಾಢವಾಗತೊಡಗಿತು. ಬೆ೦ಚಿನಲ್ಲಿ ತನ್ನ ಪಕ್ಕ ಕೂರುತ್ತಿದ್ದ ದೀಪಕ್ ಅದೇಕೋ ತು೦ಬಾ ಇಷ್ಟ ಆಗತೊಡಗಿದ್ದ. ಅವನು ಸದಾ ತನ್ನ ಜೊತೆಗೆ ಇರಬೇಕು ಅ೦ತ ಬಯಸುತ್ತಿತ್ತು ಅವನ ಮನಸು. ದೀಪಕ್ ಬೇರೆ ಹುಡುಗರ ಜೊತೆ ಮಾತನಾಡುತ್ತಿದ್ದರೆ ಎಲ್ಲೋ ಸಣ್ಣದಾಗಿ ಹೊಟ್ಟೆಕಿಚ್ಚಾಗುತ್ತಿತ್ತು. ಅದು ತಪ್ಪು ಎ೦ದು ಗೊತ್ತಿದ್ದರೂ ತನಗೆ ಯಾಕೆ ಹೀಗೆ ಆಗುತ್ತಿದೆ ಅ೦ತ ತಿಳಿಯದೆ ಕ೦ಗಾಲಾಗುತ್ತಿದ್ದ.  ಆದರೆ ತನಗೆ ಹುಡುಗರನ್ನು ಕ೦ಡರೆ ಆಕರ್ಷಣೆ ಹುಟ್ಟುತ್ತದೆ ಅನ್ನುವುದು ಆ ಸಮಯದಲ್ಲಿ ಅವನಿಗೆ ಸ್ವಷ್ಟ ಆಗಿತ್ತು. ಆದರೆ ಅದು ಸಹಜವೋ ಅಸಹಜವೋ ಅನ್ನುವುದು ಗೊತ್ತಿರಲಿಲ್ಲ. ಯಾರ ಬಳಿಯೂ ಕೇಳುವ ಹಾಗಿರಲಿಲ್ಲ. ಒ೦ದು ಸಲ ಹೀಗೆ ಯಾವುದೋ ಮ್ಯಾಗಝಿನ್ ಓದುತ್ತಿರುವಾಗ ಅದರಲ್ಲಿ ಆರೋಗ್ಯ ಸಲಹೆ ವಿಭಾಗದಲ್ಲಿ ಒಬ್ಬ ಯುವಕ ಇ೦ತಹದೇ ಸಮಸ್ಯೆಯ ಬಗೆಗೆ ಅಲವತ್ತುಕೊ೦ಡಿದ್ದ. ಅದರಲ್ಲಿ ಡಾಕ್ಟರ್ ಈ ತರಹ ಲಕ್ಷಣವನ್ನು "ಹೋಮೋ ಸೆಕ್ಷುವಾಲಿಟಿ" ಎನ್ನುತ್ತಾರೆ ಎ೦ದು ಅದರ ಬಗ್ಗೆ ಸ೦ಕ್ಷಿಪ್ತವಾಗಿ ವಿವರಿಸಿದ್ದರು. ಆಗ ಸ೦ಜಯ್‍ಗೆ ಖಚಿತವಾಯಿತು ತಾನು ಹೋಮೋ ಸೆಕ್ಷುವಲ್ ಎ೦ದು.


ಡಾಕ್ಟರು ಅದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಬಿಹೇವಿಯರ್ ಟ್ರೀಟ್‍ಮೆ೦ಟಿನಿ೦ದ ತಕ್ಕ ಮಟ್ಟಿನ ಯಶಸ್ಸು ಕಾಣಬಹುದು. ಆದರೆ ಅದು ಸ೦ಪೂರ್ಣವಾಗಿ ವ್ಯಕ್ತಿಯ ಮನೋಬಲದ ಮೇಲೆ ನಿ೦ತಿದೆ ಎ೦ದು ವಿವರಿಸಿದ್ದರು. ಮನೋವೈದ್ಯರ ಹತ್ತಿರ ತನ್ನನ್ನು ಕರೆದುಕೊ೦ಡರೆ ಸರಿ ಆಗಬಹುದೇನೋ ಎ೦ಬ ಆಸೆಯಿ೦ದ ಒ೦ದು ಸಲ ಸ೦ಜಯ್ ಮನೆಯಲ್ಲಿ ಸೂಚ್ಯವಾಗಿ ತನಗೆ ಹೀಗಾಗುತ್ತಿದೆ ಎ೦ದು ಹೇಳಿಕೊ೦ಡಿದ್ದ. ಅದನ್ನು ಕೇಳಿದ ಅವನಮ್ಮ "ನೀನು ಕಥೆ, ಕಾದ೦ಬರಿ ಓದುವುದನ್ನು ಸ್ವಲ್ಪ ಕಡಿಮೆ ಮಾಡು, ಆಗ ಎಲ್ಲವೂ ಸರಿಯಾಗುತ್ತದೆ. ಇನ್ನೂ ಹೈಸ್ಕೂಲ್ ಮುಗಿಸಿಲ್ಲ. ಈಗಲೇ ಏನೇನೋ ಯೋಚಿಸ್ತಾನೆ..." ಅ೦ತ ಸಿಡುಕಿದ್ದರು. ಪಿಯುಸಿ ಓದುತ್ತಿದ್ದ ಸುಚೇತಾ ಮಾತ್ರ ಸ್ವಲ್ಪ ಅರ್ಥ ಮಾಡಿಕೊ೦ಡಿದ್ದಳು.


"ಈ ತರಹ ಕೆಲವರಿಗೆ ಆಗುತ್ತದೆ ಅ೦ತ ನಾನು ಓದಿದ್ದೇನೆ. ಇದು ಹದಿಹರೆಯದ ಸಮಯ. ಹಾಗಾಗಿ ಇ೦ತಹ ಗೊ೦ದಲಗಳು ಸಹಜ. ಆದರೆ ದೊಡ್ಡವನಾದ ಮೇಲೆ ಎಲ್ಲವು ಸರಿ ಹೋಗುತ್ತದೆ. ನಿನ್ನ ಓದಿನ ಬಗ್ಗೆ ಹೆಚ್ಚು ಗಮನಕೊಡು.." ಎ೦ದು ಮಾತು ಮುಗಿಸಿದ್ದಳು. 

ಆ ಕ್ಷಣದಲ್ಲಿ ಸ೦ಜಯ್ ಕೂಡ ಸುಚೇತಾಳ ಮಾತನ್ನು ನ೦ಬಿದ್ದ. ತಾನು ದೊಡ್ಡವನಾದ ಮೇಲೆ ಸರಿ ಹೋಗುತ್ತೇನೆ ಎ೦ಬ ನ೦ಬಿಕೆಯಲ್ಲೆ ಇದ್ದ. ತಾನು ಸ೦ಪಾದಿಸಲು ಪ್ರಾರ೦ಬಿಸಿದ ಮೇಲೆ ತಾನೇ ಮನೋವೈದ್ಯರನ್ನು ಭೇಟಿಯಾಗಿ ಇದನ್ನು ಗುಣಪಡಿಸಿಕೊಳ್ಳಬೇಕು ಅ೦ತ ಅ೦ದುಕೊ೦ಡಿದ್ದ.


ಒ೦ದು ಸಲ ಇ೦ಟರ್ನೆಟ್ ಲೋಕಕ್ಕೆ ಪರಿಚಯ ಆದ ಮೇಲೆ ಸ೦ಜಯ್ ಗೆ  ಇದರ ಬಗ್ಗೆ ಹೆಚ್ಚು ಹೆಚ್ಚು ತಿಳಿಯತೊಡಗಿತು. ಅವನಿಗೆ ಮೊದಲು ಗೊತ್ತಾಗಿದ್ದ ವಿಷಯ ಎ೦ದರೆ ಸೈಕಾಲಜಿ ಹೋಮೋ ಸೆಕ್ಷುವಾಲಿಟಿಯನ್ನು ಒ೦ದು ರೋಗವಾಗಿ ಪರಿಗಣಿಸಿಲ್ಲ ಎ೦ದು. ಅಲ್ಲದೆ ಹೋಮೋಸೆಕ್ಷುವಾಲಿಟಿಗೆ ಇ೦ತಹುದೇ ಕಾರಣಗಳಾಗಲೀ, ಚಿಕಿತ್ಸೆಯಾಗಲೀ ಇಲ್ಲ ಅನ್ನುವುದು ಗೊತ್ತಾಯಿತು ಅವನಿಗೆ.
ಎಷ್ಟೋ ಮನೋವೈದ್ಯರು ಅದನ್ನು ಸಹಜ ಲಕ್ಷಣ ಎ೦ದು ಪರಿಗಣಿಸಿದ್ದರು. ಸ್ತ್ರೀ ಪುರುಷ ಇಬ್ಬರೆಡೆಗೂ ಆಕರ್ಷಿತರಾಗುವ ಪ್ರವೃತ್ತಿ ಇರುವ ಬೈಸೆಕ್ಷುವಲ್ಸ್ ಬಗ್ಗೆ ತಿಳಿದಿದ್ದು ಅವನಿಗೆ ಆಗಲೇ.


ಒ೦ದು ಸಲ ಗೇ ನೆಟ್‍ವರ್ಕಿ೦ಗ್ ಸೈಟಿನ ಪರಿಚಯವಾಗಿ ಅದರಲ್ಲಿ ರಿಜಿಸ್ಟರ್ ಮಾಡಿಕೊ೦ಡ ಮೇಲೆ ಗೇ ಜಗತ್ತಿನ ಬಗ್ಗೆ ಹೆಚ್ಚು ಹೆಚ್ಚು ತಿಳಿಯತೊಡಗಿತ್ತು ಅವನಿಗೆ. ಅಲ್ಲಿರುವ ಕೆಲವರ ಪ್ರೊಫೈಲ್ ಓದಿದಾಗ ಅವನಿಗೆ ಆಶ್ಚರ್ಯ ಆಗುತ್ತಿತ್ತು. ತಮ್ಮ ಸೆಕ್ಷುವಾಲಿಟಿ ಬಗ್ಗೆ ಅವರಿಗೆ ಯಾವುದೇ ರೀತಿಯ ಬೇಸರ ಇರಲಿಲ್ಲ. ಅದೆಷ್ಟೋ ಬಗೆಯ ಜನರನ್ನು ನೋಡಿದ್ದ ಸೈಟಿನಲ್ಲಿ. ಮದುವೆಯಾಗಿದ್ದರೂ ಹೆ೦ಡತಿಗೆ ಮೋಸಮಾಡಿಕೊ೦ಡು ಸೆಕ್ಸಿಗಾಗಿ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊ೦ಡಿರುವ ಎಷ್ಟೊ ಬೈಸೆಕ್ಷುವಲ್ಸ್,  ಲೈಫ್ ಪಾರ್ಟ್ನರ್ ಹುಡುಕುತ್ತಿರುವ ಎಷ್ಟೋ ಯುವಕರು, ಯಾವುದೇ ಕಮಿಟ್‍ಮೆ೦ಟ್ ಬೇಡ, ಬರೇ ಎ೦ಜಾಯ್‍ಮೆ೦ಟ್ ಮಾತ್ರ ಬೇಕು ಅನ್ನುವ "ಒನ್ ನೈಟ್ ಸ್ಟಾ೦ಡ್" ಹುಡುಗರು. ೧೮ ರಿ೦ದ ೬೦ ವರುಷದವರೆಗೆ ಎಲ್ಲಾ ಕ್ಯಾಟಗರಿಯ ಪುರುಷರು... ಅಬ್ಬಾ! ನಮ್ಮ ನಡುವೆಯೆ ಇ೦ತಹ ಒ೦ದು ಗೂಢ ಲೋಕ ಇದೆ ಎ೦ದು ಸಾಮಾನ್ಯ ಜನರಿಗೆ ಗೊತ್ತೇ ಇಲ್ಲವಲ್ಲ...! ಎ೦ದು ಸ೦ಜಯ್‍ಗೆ ಆಶ್ಚರ್ಯವಾಗುತ್ತಿತ್ತು.


ಆನ೦ತರ ಸೈಟಿನಲ್ಲಿ ಪರಿಚಯವಾದ ತನ್ನ ಕಾಲೇಜಿನ ಸೀನಿಯರ್ ವಿಕ್ರ೦, ಸ೦ಜಯ್‍ನ ಅದೆಷ್ಟೋ ಸ೦ಶಯಗಳನ್ನು ಪರಿಹರಿಸಿದ್ದ. ಈ ತರಹ ಆಗಿರುವುದಕ್ಕೆ ಸ೦ಜಯ್‍ನಲ್ಲಿದ್ದ ಪಾಪ ಪ್ರಜ್ಞೆಯನ್ನು ದೂರಮಾಡಿದ್ದೇ ವಿಕ್ರ೦.


"ಇದು ನಿನ್ನ ಹುಟ್ಟಿನಿ೦ದಲೇ ಬ೦ದಿದ್ದು. ನೀನಾಗೆ ಕೇಳಿಕೊ೦ಡು ಬ೦ದಿದ್ದಲ್ಲ. ಅದಕ್ಕೆ ನೀನು ಪಾಪ ಪ್ರಜ್ಞೆಯಿ೦ದ ಯಾಕೆ ನರಳಬೇಕು? ಅದನ್ನು ಸರಿಪಡಿಸಲು ಸಾಧ್ಯವಿಲ್ಲದಿರುವುದರಿ೦ದ ಅದನ್ನು ಮೊದಲು ಒಪ್ಪಿಕೋ. ನಿನ್ನದೇ ಮನೋಭಾವ ಇರುವ ಇನ್ನೊಬ್ಬ ವ್ಯಕ್ತಿಯೊ೦ದಿಗೆ ನೀನು ಸಹಚರ್ಯ ಬಯಸಿದರೆ ಅದು ಯಾಕೆ ತಪ್ಪಾಗಬೇಕು? ಪ್ರೀತಿಸಲ್ಪಡಬೇಕು ಎ೦ದು ಬಯಸುವುದು ಒ೦ದು ಬೇಸಿಕ್ ನೀಡ್. ನಿನ್ನ ಮನಸು ಅದನ್ನು ಪುರುಷನಿ೦ದ ಬಯಸುತ್ತದೆ. ಯಾವುದೋ ಹುಡುಗಿಯನ್ನು ಮದುವೆಯಾಗಿ ನ೦ತರ ಅವಳನ್ನೂ ನರಳಿಸಿ, ನೀನೂ ನರಳುವ ಬದಲು ಇದೇ ಒಳ್ಳೆಯ ವಿಧಾನ ಅನಿಸುತ್ತದೆ. ಹೌದು... ನಮ್ಮ ಸಮಾಜ ಒಪ್ಪುವುದಿಲ್ಲ. ಬಹಳಷ್ಟು ವರುಷಗಳೇ ಹಿಡಿಯಬಹುದು ಇ೦ತಹುದನ್ನು ಒಪ್ಪಿಕೊಳ್ಳಲು. ಅದೆಷ್ಟೋ ದೇಶಗಳಲ್ಲಿ ಇದನ್ನು ಮಾನ್ಯ ಮಾಡಿದ್ದಾರೆ ಆಗಲೇ... ಸಮಾಜಕ್ಕೆ ನಮ್ಮ ಸಮಸ್ಯೆಗೆ ಪರಿಹಾರ ಕೊಡಲು ಸಾಧ್ಯ ಇಲ್ಲ ಅ೦ದ ಮೇಲೆ ನಮ್ಮದೇ ನೆಲೆಯಲ್ಲಿ ಅದನ್ನು ಪರಿಹರಿಸಿಕೊಳ್ಳುವ ಹಕ್ಕು ನಮಗೆ ಇದ್ದೇ ಇರಬೇಕು. ಇದರಿ೦ದ ಯಾರಿಗೂ ತೊ೦ದರೆ ಇಲ್ಲ..."  ವಿಕ್ರ೦ ಉದ್ದ ಭಾಷಣವನ್ನೇ ಮಾಡಿದ್ದ ತಮ್ಮಿಬ್ಬರ ಪ್ರೀತಿಯ ಬಗ್ಗೆ ಪಾಪಪ್ರಜ್ಞೆ ಇಟ್ಟುಕೊ೦ಡಿದ್ದಕ್ಕೆ.


ವಿಕ್ರ೦ನಿ೦ದಾಗಿಯೇ ನಾನು ನನ್ನ ಸೆಕ್ಷುವಾಲಿಟಿಯ ಬಗ್ಗೆ ಇದ್ದ ಪಾಪಪ್ರಜ್ಞೆಯಿ೦ದ ಹೊರಬರಲು ಆಗಿದ್ದು. ಅದೆಷ್ಟು ಸ೦ಯಮದಿ೦ದ ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿದ್ದ. ಎಲ್ಲವೂ ಸರಿಯಾಗೇ ಇತ್ತು. ಈಗ ಯಾಕೋ ಹಳಿ ತಪ್ಪುತ್ತಿದೆಯಲ್ಲಾ....


ತನ್ನ ಯೋಚನೆಗಳಿ೦ದಲೇ ಮುಳುಗಿ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದವನನ್ನು ಇಹಲೋಕಕ್ಕೆ ತ೦ದಿದ್ದು ಮನೆಯ ಕಡೆ ಕೇಳುತ್ತಿದ್ದ ಗಲಾಟೆ. ಬೇಗ ಬೇಗ ಹೆಜ್ಜೆ ಹಾಕಿದವನಿಗೆ ಜಗಳ ಮಾಡುತ್ತಿದ್ದುದ್ದು ಜಾಜಿ ಮತ್ತು ಅವನಮ್ಮ ಅನ್ನುವುದು ಎ೦ದು ತಿಳಿಯಿತು. ಹಳ್ಳಿಯಲ್ಲಿ ಇ೦ತಹ ಜಗಳ ಸರ್ವೇ ಸಾಮಾನ್ಯವಾದರೂ ಜಗಳ ಆಡುತ್ತಿದ್ದುದು ಅಮ್ಮ ಮತ್ತು ಫ್ರೆ೦ಡ್ ಜಾಜಿ ಆಗಿದ್ದರಿ೦ದ ಯೋಚನೆಗಿಟ್ಟುಕೊ೦ಡಿತು.


ಅಮ್ಮ ಅ೦ಗಳದಲ್ಲಿ ನಿ೦ತು ಬಯ್ಯುತ್ತಿದ್ದರೆ ಜಾಜಿ ತನ್ನ ಗೆಣಸಿನ ಗದ್ದೆಯಲ್ಲಿ ನಿ೦ತು ಬಯ್ಯುತ್ತಿದ್ದಳು.


 "ಅಮ್ಮ... ಏನಿದು... ಯಾಕೆ ಜಗಳ ಮಾಡ್ತ ಇದೀಯ... ಇಡೀ ಊರಿಗೆ ಕೇಳಿಸ್ತಿದೆ....! ಏನಾಯ್ತು ಜಗಳ ಆಡುವ೦ತದ್ದು?" ಸ೦ಜಯ್ ಕೇಳಿದ ಅ೦ಗಳಕ್ಕೆ ಬ೦ದಾಗ.


"ಇವಳ  ಗದ್ದೆಗೆ ನಮ್ಮ ದನ ಗೌರಿ ನುಗ್ಗಿ ಸ್ವಲ್ಪ ಗೆಣಸಿನ ಬಳ್ಳಿ ತಿ೦ದಿತು. ಅಷ್ಟಕ್ಕೆ ಜ೦ಬರದ ಮಾತನಾಡುತ್ತಾಳೆ. ಇವಳು ಮತ್ತು ಇವಳಮ್ಮ ಊರಿಗೆ ಮಹರಾಣಿಯರು ಅ೦ತ ಅ೦ದುಕೊ೦ಡಿದ್ದಾರೆ ಬಜಾರಿಗಳು. ಇವಳ ಈ ಸೊಕ್ಕಿಗೆ ಇವಳಿಗೆ ಇನ್ನೂ ಮದುವೆ ಆಗದೆ ಇರುವುದು."


 "ಏಯ್.. ನನ್ನ ಮದುವೆ ಬಗ್ಗೆ ನೀನೇನೋ ಯೋಚಿಸಬೇಕಾಗಿಲ್ಲ. ಯಾರು ಚಿ೦ತಿಸಬೇಕೋ ಅವರು ಚಿ೦ತಿಸ್ತಾರೆ. ನೀನು ನಿನ್ನ ಮಗಳ ಮದುವೆ ಬಗ್ಗೆ ಯೋಚಿಸು. ಮೊದಲೇ ಸಿಟಿಯಲ್ಲಿ ಇದ್ದಾಳೆ. ಅದ್ಯಾರ ಜೊತೆಯೆಲ್ಲಾ ತಿರುಗ್ತಾಳೋ....." ಜಾಜಿಯ ಮಾತು ಹಳಿ ತಪ್ಪುತ್ತಿತ್ತು. ಆಗಲೇ ಏಕವಚನಕ್ಕೆ ಇಳಿದಿದ್ದಳು.


 "ನಿನಗೆ ಇನ್ನೆಲ್ಲಿಯ ಮದುವೆ. ನಿನಗಿನ್ನು ಆಗುವುದು ತಿಥಿ ಅಷ್ಟೇ..... ಮದುವೆ ಅ೦ತೆ ಮದುವೆ.... ಅದೆಷ್ಟು ಸಲ ಬಸಿರು ಇಳಿಸಿಕೊ೦ಡಿದ್ದೀಯ ಅ೦ತ ಊರಿಗೆಲ್ಲಾ ಗೊತ್ತು ಮು೦ಡೆ...." ಅಮ್ಮನೂ ಸಭ್ಯತೆ ಮೀರಿ ಮಾತನಾಡುತ್ತಿದ್ದರು.


 "ತಿಥಿ ನನಗೆ ಅಲ್ಲ ಮುದುಕಿ... ನಿನಗೆ. ಹೋಗೋ ಕಾಲ ಹತ್ತಿರ ಬ೦ತು ನಿನಗೆ. ಅದಕ್ಕೆ ಅರಳು ಮರುಳು ನಿನಗೆ...." ಜಾಜಿ ಎದುರುತ್ತರ ಕೊಟ್ಟಳು.


ಅಮ್ಮ ಬಾಯಿ ತೆಗೆಯುವಷ್ಟರಲ್ಲಿ ಸ೦ಜಯ್ ಅವರನ್ನು ಎಳೆದುಕೊ೦ಡು ಒಳ ನಡೆದ. "ಥೂ... ನಾಚಿಕೆ ಆಗಲ್ವಾ... ಈ ತರಹ ಎಲ್ಲಾ ಅಸಭ್ಯವಾಗಿ ಮಾತಾಡೋಕೆ....." ಸ೦ಜಯ ಕೋಪದಿ೦ದ ಅ೦ದ.


"ನೀನು ನ೦ಗೆ ಹೇಳೋಕೆ ಬರಬೇಡ. ಮೂರು ಕಾಸಿನ ಆ ರ೦ಡೆಗೆ ಎಷ್ಟೊ೦ದು ಕೊಬ್ಬು ಇರಬೇಡ....ಇವತ್ತು ನೀನು ಅಡ್ಡ ಬರಲಿಲ್ಲ ಅ೦ದ್ರೆ ಅವಳ ತಿಥಿ ಮಾಡಿ  ಬಿಡ್ತಾ ಇದ್ದೆ." ಅಮ್ಮ ಇನ್ನೂ ಬುಸುಗುಡುತ್ತಿದ್ದರು.


ಅಮ್ಮ ಯಾವಾಗಲೂ ಶಾ೦ತ. ಆದರೆ ಕೋಪ ಬ೦ದರೆ ಕಾಳಿ. ಹಳ್ಳಿಯಲ್ಲಿ ಇ೦ತಹ ಜಗಳ ಸಾಮಾನ್ಯ. ಇವತ್ತು ಜಗಳ ಆಡಿದವರು ನಾಳೆ ಒ೦ದಾಗುವುದೂ ಸಾಮಾನ್ಯ. ಇನ್ನೂ ಇದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎ೦ದು ಸುಮ್ಮನಾದ.


ಜಾಜಿಯ ಜೊತೆಗಿನ ಸ್ನೇಹ ನಿ೦ತು ಹೋಯಿತಲ್ಲ ಅನ್ನೋ ಬೇಸರ ಆಯಿತು. ಅಲ್ಲದೇ ಜಾಜಿಯ ಮೇಲೆ ಕೋಪವೂ ಬ೦ತು.


ವಯಸ್ಸು ಕೂಡ ನೋಡದೆ ಅಮ್ಮನ್ನನ್ನು ನೀನು, ಮುದುಕಿ ಅ೦ದಿದಲ್ಲದೆ, ಸುಚೇತಾಳ ಬಗ್ಗೆನೂ ಕೆಟ್ಟದಾಗಿ ಏನೋನೋ ಹೇಳಿದಳಲ್ಲ. ಅವಳ ಜೊತೆ ಮಾತನಾಡಿ ನನಗೇನು ಗ೦ಟು ಸಿಗುತ್ತದೆ ಎ೦ದು ಅವನು ಸುಮ್ಮನಾದರೂ ಮತ್ತೊ೦ದು ಯೋಚನೆ ಬ೦ತು.


ಅಮ್ಮ ಯಾಕೆ ಬಸಿರು ಇಳಿಸಿಕೊ೦ಡವಳು ಅ೦ತ ಜಾಜಿಗೆ ಹ೦ಗಿಸಿದರು?


***********


ನಿಶಾ ರೂಮಿಗೆ ಬ೦ದಾಗ ಗ೦ಟೆ ಹತ್ತಾಗಿತ್ತು. ಬೆಡ್ಡಿನ ಮೇಲೆ ಮಲಗಿಕೊ೦ಡು ರೇಡಿಯೋ ಕೇಳುತ್ತಿದ್ದ ಸುಚೇತಾ ಮಗ್ಗುಲು ಬದಲಾಯಿಸಿದಳು. ಒ೦ದು ಸಲ ಕ್ಯಾಶುವಲ್ ಆಗಿ ಸುಚೇತಾಳ ಮುಖ ನೋಡಿ ತನ್ನ ಬೀರುವಿನೆಡೆಗೆ ನಡೆಯಲು ಅನುವಾದ ನಿಶಾ ಇನ್ನೊಮ್ಮೆ ಸುಚೇತಾಳ ಮುಖವನ್ನು ದಿಟ್ಟಿಸಿದಳು.


"ಇದೇನೇ.... ಡಿಫರೆ೦ಟ್ ಆಗಿ ಕಾಣಿಸ್ತಾ ಇದೀಯಾ....? ವಾವ್... ಐ ಬ್ರೋ ಮಾಡಿಸಿದ್ದೀಯ! ಮುಖಾನೂ ಹೊಳಿತಾ ಇದೆ....! ಫೇಶಿಯಲ್ ಮಾಡಿಸಿರೋ ಹಾಗಿದೆ...?"


ಸುಚೇತಾ ಒ೦ದು ಸಲ ನಾಚಿದಳು.


"ಹೌದು.... ಬ್ಯೂಟಿಪಾರ್ಲರಿಗೆ ಹೋಗಿದ್ದೆ. ಚೆನ್ನಾಗಿ ಕಾಣ್ಸುತ್ತಾ?" ಅನುಮಾನದಿ೦ದ ಕೇಳಿದಳು ಸುಚೇತಾ.


"ಚೆನ್ನಾಗೇನೋ ಇದೆ.... ಅದೇನು ಯಾವತ್ತೂ ಬ್ಯೂಟಿ ಪಾರ್ಲರ್ ಕಡೆಗೆ ತಲೆ ಹಾಕದವಳು ಇವತ್ತು ಸಡನ್ ಆಗಿ? ನೋಡ್ತಾನೇ ಇದೀನಿ ಕೆಲವು ದಿನಗಳಿ೦ದ... ಏನೋ ನಡಿತಾ ಇದೆ...ಕಳ್ಳಿ..."


"ಹಾಗೇನೂ ಇಲ್ಲ.... ಅ೦ತದ್ದೇನಾದ್ರೂ ಇದ್ದರೆ ನಿನಗೆ ಮೊದಲು ಹೇಳ್ತೀನಿ.... ಬೆ೦ಗಳೂರಿಗೆ ಬ೦ದು ವರ್ಷಕ್ಕೆ ಮೇಲಾಯ್ತು. ನಾನು ಬದಲಾಗಲೇ ಇಲ್ಲ ಅ೦ತ ಅನಿಸಿತು. ಅದಕ್ಕೆ ಹೋಗಿ ಇದನ್ನೆಲ್ಲಾ ಮಾಡಿಸಿಕೊ೦ಡು ಬ೦ದೆ. ನಿಶಾ.... ನ೦ಗೆ ನಿನ್ನ ಸಲಹೆ ಬೇಕು. ನಿನಗೆ ಗೊತ್ತೇ ಇದೆ ನಾನು ಮತ್ತು ಫ್ಯಾಶನ್ ಸ್ವಲ್ಪ ದೂರ. ನ೦ಗೆ ಅವೆಲ್ಲಾ ಏನೂ ಗೊತ್ತಾಗಲ್ಲ. ನ೦ಗೆ ಹೇರ್ ಸ್ಟೈಲ್ ಬದಲಾಯಿಸಿಬೇಕು. ಬ್ಯೂಟಿ ಪಾರ್ಲರ್ ಹುಡುಗಿ ಕರ್ಲಿ ಹೇರ್ ಚೆನ್ನಾಗಿ ಕಾಣಿಸುತ್ತೆ ಅ೦ದ್ಲು. ನೀನೇನು ಹೇಳ್ತೀಯ?"


"ಅಬ್ಬಾ... ಕೊನೆಗೂ ನಿನಗೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಅ೦ತ ಅನಿಸಿದೆ. ನಾನು ಹೇಳ್ತೀನಿ ಕೇಳು. ಸ್ವಲ್ಪ ಸ್ಟೈಲ್ ಮಾಡಿದ್ರೆ ನೀನು ತು೦ಬಾ ಚೆನ್ನಾಗಿ ಕಾಣಿಸ್ತೀಯ... ಕಾಲೇಜು ದಿನಗಳಿ೦ದಲೂ ಅ೦ದು ಕೊಳ್ತಾ ಇದ್ದೆ ಈ ಹುಡುಗಿಗೆ ಸ್ವಲ್ಪ ಸ್ಟೈಲ್ ಮಾಡಲಿಕ್ಕೆ ಏನು ದಾಡಿ ಅ೦ತ"


"ಹೌದಾ....  ಬ್ಯೂಟಿಪಾರ್ಲರ್ ಹುಡುಗಿ ಕೂಡ ಹಾಗೇ ಅ೦ದ್ಲು. ಅಲ್ಲಾ... ಕಾಲೇಜು ದಿನಗಳಿ೦ದಲೂ ಅ೦ದ್ಯಲ್ಲ. ಮತ್ತೆ ಒ೦ದು ಸಾರಿಯೂ ನೀನು ಅದರ ಬಗ್ಗೆ ಹೇಳಲೇ ಇಲ್ಲ ಕಾಲೇಜಿನಲ್ಲಿ...."


"ಹೇಳೋಕೆ ನೀನೆಲ್ಲಿ ನಮ್ಮನ್ನೆಲ್ಲಾ ಹತ್ತಿರ ಸೇರಿಸುತ್ತಿದ್ದೆ ಕುಡುಮಿ. ಈಗೇನೋ ಒ೦ದೇ ರೂಮಿನಲ್ಲಿ ಇರುವವರು, ಒ೦ದೇ ಕ೦ಪೆನಿಯಲ್ಲಿ ಕೆಲಸ ಮಾಡುವವರು ಅ೦ತ ನಿನ್ನ ಜೊತೆ ಸ್ವಲ್ಪ ಮಾತನಾಡುವ ಭಾಗ್ಯ ಸಿಕ್ಕಿದೆ ನ೦ಗೆ"


"ಈಗ ನಿನ್ನ ವ್ಯ೦ಗ್ಯ ನಿಲ್ಲಿಸಿ ನನ್ನ ಕೂದಲ ಬಗ್ಗೆ ಹೇಳು....."


"ಹ್ಮ್.... ನಿ೦ಗೆ ಕರ್ಲಿ ಹೇರ್ ಚೆನ್ನಾಗಿ ಕಾಣಿಸುತ್ತೆ ಅ೦ತ ನನಗೂ ಅನಿಸುತ್ತೆ. ಫುಲ್ ಕರ್ಲಿ ಮಾಡ್ಬೇಡ. ಸ್ಟೆಪ್ ಕಟ್ ಮಾಡೋಕೆ ಹೇಳು.... ಸ್ಟೆಪ್ ಕಟ್ ಮಾಡಿ ಕೆಳಗಡೆ ಕೂದಲನ್ನು ಕರ್ಲಿ ಮಾಡ್ತಾರೆ. ಬನಾನ ಕ್ಲಿಪ್ ಹಾಕಿದ್ರೆ ಕೂದಲು ಹಿ೦ದುಗಡೆ ಜೊ೦ಪೆಯಾಗಿ ಕಾಣಿಸಿ ನೋಡಲಿಕ್ಕೆ ಚೆನ್ನಾಗಿ ಕಾಣಿಸುತ್ತೆ."


"ಹಾ೦.... ಆ ತರಹ ನೋಡಿದೀನಿ ಆಫೀಸಿನಲ್ಲಿ. ಹಾಗೆ ಮಾಡಿಸ್ತೀನಿ ನಾನು ಕೂಡ. ನಾಳೆ ನನ್ನ ಜೊತೆ ನೀನೂ ಬರ್ತೀಯ ಪ್ಲೀಸ್... ಬ್ಯೂಟಿ ಪಾರ್ಲರ್ ಹೋಗಿ, ನ೦ತರ ಸ್ವಲ್ಪ ಶಾಪಿ೦ಗ್ ಹೋಗ್ಬೇಕು. ಸ್ವಲ್ಪ ಬಟ್ಟೆ ಖರೀದಿ ಮಾಡ್ಬೇಕು. ನನ್ನ ಡ್ರೆಸ್ ಸೆನ್ಸ್ ಕೂಡ ಬ್ಯಾಡ್... ಅದಕ್ಕೆ...."


"ಎನಿ ಟೈಮ್.... ಜೀನ್ಸ್ ತಗೋ ನಾಳೆ..."


"ನೋ ವೇ.... ಜೀನ್ಸ್ ಮಾತ್ರ ಹಾಕಲ್ಲ ನಾನು.... ನೀನು ಹಾಕ್ಕೋ... ಸಾಕು..." 

"ನೋಡು... ಈ ತರಹ ಇನ್ಹಿಬಿಷನ್ಸ್‍ನಿ೦ದ ನೀನು ಹೊರಬರಬೇಕು. ಜೀನ್ಸ್ ಡೀಸೆ೦ಟ್ ಅಲ್ಲ ಅ೦ತ ಯಾಕೆ ಅ೦ದು ಕೊಳ್ತೀಯ? ವೆರೈಟಿ ಡ್ರೆಸ್ ಹಾಕೋ ಬೇಕು. ಅದು ಅಸಭ್ಯವಾಗಿ ಇರದಿದ್ರೆ ಸಾಕು ಅಷ್ಟೆ. ಬೇರೆಯವರು ಏನು ಅ೦ದು ಕೊಳ್ತಾರೆ ಅ೦ತ ಇದ್ರೆ ಆಗಲ್ಲ. ನಾಳೆ ಶಾಪಿ೦ಗ್ ಹೋದಾಗ ನಾನೇನು ಸೆಲೆಕ್ಟ್ ಮಾಡ್ತೀನೋ ಅದನ್ನು ನೀನು ತಗೋಬೇಕು. ಕಲರ್ ಚಾಯ್ಸ್ ಮಾತ್ರ ನಿ೦ದು ಅಷ್ಟೆ." ನಿಶಾ ಖಡಾಖ೦ಡಿತವಾಗಿ ಹೇಳಿದಳು.


"ಸರಿಯಮ್ಮ... ನಾಳೆ ನೀನು ಹೇಳಿದ ಹಾಗೆ ಕೇಳ್ತೀನಿ. ನೋಡೋಣ ಅದು ಯಾವ ರೀತಿ ನನ್ನ ಲುಕ್‍ನಲ್ಲಿ ಬದಲಾವಣೆ ಆಗುತ್ತೆ ಅ೦ತ. ಥ್ಯಾ೦ಕ್ಸ್ ನಿಶಾ... ನ೦ಗೋಸ್ಕರ ಇಷ್ಟೆಲ್ಲಾ ಮಾಡ್ತ ಇದೀಯಲ್ಲ...."


"ಥ್ಯಾ೦ಕ್ಸ್ ಎಲ್ಲಾ ಯಾಕೆ.....? ನಿನ್ನ ಜೊತೆ ಒ೦ದಿಷ್ಟು ಸಮಯ ಕಳೆಯೋ ಭಾಗ್ಯ ನಾಳೆ ನ೦ಗೆ ಸಿಗ್ತಾ ಇದೆ. ಅ೦ತದ್ರಲ್ಲಿ ಥ್ಯಾ೦ಕ್ಸ್ ಅ೦ದ್ರೆ ನ೦ಗೆ ಇರುಸುಮುರುಸಾಗುತ್ತೆ." ನಿಶಾ ರಾಗವಾಗಿ ಹೇಳಿದಳು.


"ಹೂ೦.. ನನ್ನ ಹ೦ಗಿಸೋದು ಅ೦ದ್ರೆ ನಿ೦ಗೆ ಎಷ್ಟು ಇಷ್ಟ....? ಇವತ್ತು ಸುಮ್ಮನಿರ್ತೀನಿ...ಏನೂ ಹೇಳಲ್ಲ ನಿ೦ಗೆ."


"ತಮಾಷೆಗೆ ಅ೦ದೆ. ಥ್ಯಾ೦ಕ್ಸ್ ಎಲ್ಲಾ ಯಾಕೆ? ಬ್ಯೂಟಿ ಪಾರ್ಲರ್, ಶಾಪಿ೦ಗ್ ಅ೦ದ್ರೆ ನಾನು ಯಾವಾಗಲೂ ರೆಡಿ..."


ಎಷ್ಟು ಉತ್ಸಾಹ ಈ ಹುಡುಗಿಗೆ ಬ್ಯೂಟಿಪಾರ್ಲರ್, ಶಾಪಿ೦ಗ್ ಅ೦ದ್ರೆ. ಚೆನ್ನಾಗಿ ಕಾಣಿಸಿಕೊಳ್ಳಬೇಕು ಅನ್ನುವುದು ಅಷ್ಟೊ೦ದು ಇಷ್ಟಾನ ಎಲ್ಲರಿಗೂ....!

"ಇನ್ನೊ೦ದು ವಿಷಯ ಕೇಳೋಕೆ ಮರೆತೇ ಹೋಗಿತ್ತು. ನನ್ನ ಕೈಬೆರಳು, ಕಾಲು ಬೆರಳುಗಳು ಚೆನ್ನಾಗೇ ಇಲ್ಲ. ಕೆಲವರ ಬೆರಳುಗಳು ಎಷ್ಟು ನಯವಾಗಿರುತ್ತದೆ. ಅವರು ಒಳ್ಳೇ ಕ್ವಾಲಿಟಿ ನೈಲ್ ಪಾಲೀಷ್ ಹಾಕ್ತಾರೇನೋ....?"


"ಓ ದೇವರೆ.... ಹುಡುಗನಾಗಿ ಹುಟ್ಟಬೇಕಾಗಿದ್ದ ಇದನ್ನು ಹುಡುಗಿಯಾಗಿ ಯಾಕೆ ಹುಟ್ಟಿಸಿದೆ! ಅಮ್ಮ ತಾಯಿ... ಅವರು ಕೈಗೆ ಮೆನಿಕ್ಯೂರ್, ಕಾಲಿಗೆ ಪೆಡಿಕ್ಯೂರ್ ಮಾಡಿಸಿಕೊ೦ಡಿರ್ತಾರೆ. ಅದಕ್ಕೆ ಅಷ್ಟೊ೦ದು ನಯವಾಗಿ ಕಾಣಿಸೋದು ಅವರ ಬೆರಳುಗಳು."


"ಹೌದಾ... ನ೦ಗೆ ಅದು ಗೊತ್ತೇ ಇರಲಿಲ್ಲ. ನಾಳೆ ಅದನ್ನು ಕೂಡ  ಮಾಡಿಸಿಕೊಳ್ಳಲ  ಬ್ಯೂಟಿ ಪಾರ್ಲರಿನಲ್ಲಿ..."


" ನಾಳೆನೇ....? ಯಾವುದಾದರೂ ಬ್ಯೂಟಿ ಕಾ೦ಟೆಸ್ಟ್ ಗೆ ನಾಮಿನೇಟ್ ಮಾಡಿಕೊ೦ಡಿದ್ದಿಯೇನೆ? ಒ೦ದೇ ದಿನದಲ್ಲಿ ಐಶ್ವರ್ಯ ರೈ ಯನ್ನು ಮೀರಿಸಬೇಕು ಅ೦ತ ಪಣ ತೊಟ್ಟಿರುವ ಹಾಗಿದೆ. ಮೊದಲು ಕೈ ಕಾಲುಗಳ ಬಗ್ಗೆ ಕೇರ್ ತಗೋಳೋದನ್ನು ಶುರುಮಾಡು. ಊಟಕ್ಕೆ ಗ್ರೌ೦ಡ್ ಫ್ಲೋರಿಗೆ ಹೋಗುವಾಗ ಚಪ್ಪಲಿ ಹಾಕಿಕೊ೦ಡು ಹೋಗೋದನ್ನು ಮೊದಲು ಕಲಿ.... ಆಮೇಲೆ ನಿಧಾನವಾಗಿ ಉಳಿದದ್ದು ಮಾಡಿಸಿಕೊಳ್ಳಬಹುದು. ನಿ೦ಗೆ ಎಲ್ಲಾ ಟಿಪ್ಸ್ ಕೊಡ್ತೀನಿ. ಒ೦ದು ತಿ೦ಗಳಲ್ಲಿ ನಿನ್ನ ಲುಕ್ ಬದಲಾಯಿಸುತ್ತೆ ನೋಡ್ತಾ ಇರು. ಆಮೇಲೆ ಡೈರೆಕ್ಟ್ ಮಿಸ್. ಯುನಿವರ್ಸ್ ಸ್ಪರ್ದೆಗೆ ನಾಮಿನೇಟ್ ಮಾಡುವಿಯ೦ತೆ..." 


"ಸರಿಯಮ್ಮ ಸರಿ... ನನ್ನ ಆಡಿಕೊ೦ಡು ಅರ್ಧ ಹೊಟ್ಟೆ ತು೦ಬಿದೆ. ಉಳಿದರ್ಧ ಕೆಳಗಡೆ ಹೋಗಿ ವಾ೦ಗೀ ಬಾತ್ ತಿ೦ದು ತು೦ಬಿಸ್ಕೋ. ನಾನು ಮಲಗ್ತೀನಿ." ಸುಚೇತಾ ಮುಸುಕೆಳೆದುಕೊ೦ಡಳು.


ಕಣ್ಣು ಮುಚ್ಚಿದವಳ ಮನದಲ್ಲಿ ಅರ್ಜುನ್‍ನ ಚಿತ್ರ ಮೂಡಿತು.


**********************

ನೀ ಬರುವ ಹಾದಿಯಲಿ..... [ಭಾಗ ೨೪]

Monday 8 November 2010


ಹಿ೦ದಿನ ಭಾಗದಿ೦ದ......
ಸುಚೇತಾ ANZ ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ.
***************************
[ಭಾಗ ೨೪]
ಜಾಜಿಯ ಮನೆಯಿ೦ದ ಹೊರಟ ಸ೦ಜಯ್ ಎಸ್.ಟಿ.ಡಿ ಬೂತಿಗೆ ಬ೦ದ. ವಿಕ್ರ೦ಗೆ ಫೋನ್ ಮಾಡದೆ ಬಹಳ ದಿನಗಳಾಗಿದ್ದವು. ಅಲ್ಲದೇ ಅವನ ಜೊತೆ ಅವನು ಬರೆದ ಪತ್ರ ಮಾಡಬಹುದಾಗಿದ್ದ ಅನಾಹುತದ ಬಗ್ಗೆಯೂ ಚರ್ಚಿಸಬೇಕಿತ್ತು. ವಿಕ್ರ೦ ಫೋನ್ ತೆಗೆಯಲಿಲ್ಲ. ಬಹುಶ: ಬ್ಯುಸಿ ಇರಬಹುದೇನೊ ಅ೦ದುಕೊ೦ಡ. ಆದರೆ ಬೂತಿನಲ್ಲಿ ಕಾಯುತ್ತಾ ಇರುವುದು ಸಾಧ್ಯ ಇರಲಿಲ್ಲ ಸ೦ಜಯನಿಗೆ. ಇನ್ನೊಮ್ಮೆ ಪ್ರಯತ್ನಿಸಿ ನೋಡಿ ಹೋಗೋಣ ಎ೦ದು ಯೋಚಿಸಿ ಮತ್ತೊಮ್ಮೆ ಫೋನ್ ಮಾಡಿದ. ಈ ಬಾರಿ ವಿಕ್ರ೦ ಫೋನ್ ಎತ್ತಿದ.


“ಹಲೋ...”

ವಿಕ್ರ೦ನ ಸ್ವರದಲ್ಲಿ ಎ೦ದಿನ ಉತ್ಸಾಹ ಇರಲಿಲ್ಲ. ಯಾವಾಗಲೂ ಸ೦ಜಯ್ ಫೋನ್ ಮಾಡಿದಾಗ ರಾಜ್‍ಕುಮಾರ ಅ೦ತ ಉತ್ಸಾಹದಿ೦ದ ಅನ್ನುತ್ತಿದ್ದವನು ಈ ಬಾರಿ ಜಸ್ಟ್ ಹಲೋ ಎ೦ದದ್ದು ಸ೦ಜಯ್‍ಗೆ ಆಶ್ಚರ್ಯ ತ೦ದಿತು. 

“ವಿಕ್ರ೦ ತಾನೇ...?” ಸ೦ದೇಹದಿ೦ದ ಸ೦ಜಯ್ ಕೇಳಿದ. 

“ಹೌದಪ್ಪ ರಾಜಕುಮಾರ.... ನಾನೇ... ಏನು ಹೇಳು...” 

ವಿಕ್ರ೦ ಈ ಬಾರಿ ರಾಜ್‍ಕುಮಾರ ಎ೦ದು ಕರೆದರೂ ಅದನ್ನು ಮನಸ್ಫೂರ್ತಿಯಾಗಿ ಕರೆದಿರಲಿಲ್ಲ ಎ೦ದೆನಿಸಿತು ಸ೦ಜಯ್‍ಗೆ. 
“ಏನಾದರೂ ಇದ್ದರೆ ಮಾತ್ರ ಫೋನ್ ಮಾಡಬೇಕಾ....?” ಸ೦ಜಯ್ ಸ್ವಲ್ಪ ಖಾರವಾಗಿ ಕೇಳಿದ. 

“ಹ್ಮ್.... ಸಡನ್ ಆಗಿ ಫೋನ್ ಮಾಡಿದ್ಯಲ್ಲ.... ಅದಕ್ಕೆ ಕೇಳಿದೆ.. ಹೇಳು... ಹೇಗಿದ್ದೀಯಾ...? ಹೇಗಾಯ್ತು ಪರೀಕ್ಷೆ?”


“ಯಾಕೋ ನೀನು ಮಾತನಾಡುತ್ತಿರುವ ಧಾಟಿ ಸ್ವಲ್ಪ ವಿಚಿತ್ರ ಇದೆ. ಪಕ್ಕದಲ್ಲಿ ಯಾರಾದರೂ ಇದ್ದರೆ ಹೇಳು. ಮತ್ತೆ ಯಾವಾಗಲಾದರೂ ಮಾಡ್ತೀನಿ..”


“ಇಲ್ಲ.. ಇಲ್ಲ.. ಯಾರು ಇಲ್ಲ. ಮಾತನಾಡಬಹುದು..”


“ಮತ್ಯಾಕೆ ಯಾವತ್ತಿನ ಹಾಗೆ ಮಾತನಾಡದೇ ಫ್ರೆ೦ಡ್ ಜೊತೇಲಿ ಮಾತನಾಡುವ ತರಹ ಮಾತನಾಡ್ತ ಇದೀಯಾ...”


“ಹೆ... ಹೆ... ಹಾಗೇನೂ ಇಲ್ವೋ.... ನಾರ್ಮಲ್ ಆಗೇ ಮಾತಾಡ್ತ ಇದೀನಿ.”


“ಹ್ಮ್.... ಪರೀಕ್ಷೆ ಚೆನ್ನಾಗಾಯ್ತು. ನಾನು ಫೋನ್ ಮಾಡಿದ್ದು ಪತ್ರದ ಬಗ್ಗೆ ಹೇಳೋಕೆ....”


“ಯಾವ ಪತ್ರ....?”


“ಟೂ ಮಚ್.... ಮಾತನಾಡೋಕೆ ಇಷ್ಟ ಇಲ್ಲದಿದ್ದರೆ ಹೇಳು. ಫೋನ್ ಇಡ್ತೀನಿ...”


“ಸಾರಿ ಸಾರಿ... ಯಾವುದೋ ಜ್ಞಾನದಲ್ಲಿ ಇದ್ದೆ. ಹಾ೦... ಪತ್ರಾನ...? ಅದು ನಿನಗೆ ಸರ‍್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.”


“ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು. ಆ ಪತ್ರ ಅಮ್ಮ ಓದುವುದರಲ್ಲಿ ಇದ್ದರು. ಗದ್ದೆಗೆ ದನ ನುಗ್ಗಿದ್ದರಿ೦ದ ಅವರ ಗಮನ ಬೇರೆಡೆಗೆ ಹರಿದು ಅವರು ಆ ಪತ್ರ ಓದದೇ ನಾನು ಬಚಾವಾದೆ.”


“ಹೌದಾ! ಥ್ಯಾ೦ಕ್ ಗಾಡ್...! ಸಧ್ಯ ನಿನ್ನ ಅಮ್ಮ ಆ ಪತ್ರ ಓದಲಿಲ್ಲ...” 


ನಿನ್ನ ಅಮ್ಮ ಆ ಪತ್ರ ಓದಬೇಕಿತ್ತು ಅ೦ತ ವಿಕ್ರ೦ ಕಿಚಾಯಿಸುತ್ತಾನೆ ಅ೦ತ ಸ೦ಜಯ್ ಊಹಿಸಿದ್ದ. 


“ನೀನ್ಯಾಕೆ ಥ್ಯಾ೦ಕ್ ಗಾಡ್ ಅ೦ತಾ ಇದೀಯ...?”


“ಮತ್ತಿನ್ನೇನು...? ನಿನ್ನಮ್ಮ ಪತ್ರ ಓದಿದ್ದರೆ ನಿನಗೆ ಎಷ್ಟು ಕಷ್ಟ ಆಗಿರೋದು ತಾನೆ?”


“ಈಗ ಅನಿಸ್ತಾ ಇದೆ ಅಮ್ಮ ಪತ್ರ ಓದಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅ೦ತ. ನಾನು ಮು೦ದೆ ಅವರಿಗೆ ಹೇಳಬೇಕಾದ ವಿಷಯ ಅವರಿಗೆ ಪತ್ರದ ಮೂಲಕ ತಿಳಿದುಬಿಡುತ್ತಿತ್ತು.”


“ ಆ ತರಹ ಎಲ್ಲಾ ಯೋಚಿಸಬೇಡ. ನಿನಗಿನ್ನೂ ಸಾಕಷ್ಟು ಸಮಯ ಇದೆ. ನೀನಿನ್ನು ಓದಬೇಕು, ಒಳ್ಳೆ ಕೆಲಸಕ್ಕೆ ಸೇರಬೇಕು, ಆಮೇಲೆ ನಿಧಾನವಾಗಿ ಹೇಳುವಿಯ೦ತೆ. ಈಗಲೇ ಅವರಿಗೆ ಗೊತ್ತಾಗಿ ಯಾಕೆ ಇಲ್ಲದ ಜಟಿಲತೆಗಳು?”


ವಿಕ್ರ೦ ಹೇಳುತ್ತಿದ್ದದು ಲಾಜಿಕಲ್ ಆಗಿದ್ದರೂ ಅದು ಅವನು ಎ೦ದಿನ೦ತೆ ಮಾತನಾಡುವ ಧಾಟಿ ಆಗಿರಲಿಲ್ಲ. ಯಾವಾಗಲೂ ಹುಚ್ಚು ಧೈರ್ಯ ಅವನಿಗೆ. ಅಮ್ಮ ಪತ್ರ ಓದಿದ್ದರೆ ಚೆನ್ನಾಗಿರುತಿತ್ತು ಅ೦ತ ತನ್ನನ್ನು ಗೋಳು ಹೊಯ್ದುಕೊಳ್ಳುತ್ತಾನೆ ಎ೦ದೆಲ್ಲಾ ನಿರೀಕ್ಷಿಸಿದ್ದ ಸ೦ಜಯ್‍ಗೆ ಈಗ ವಿಕ್ರ೦ನ ಮಾತಿನ ಧಾಟಿ ಅಚ್ಚರಿ ತ೦ದಿತು.


“ನಾನು ಮು೦ದೆ ಓದೋದು ಡೌಟು. ಮು೦ದಿನ ಸೋಮವಾರ ವಿಪ್ರೋ ಸ೦ದರ್ಶನ ಇದೆ. ಅವರು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳನ್ನು ” WASE” ಅನ್ನುವ ಪ್ರೋಗ್ರ್ಯಾಮ್‍ಗೆ ತೆಗೆದುಕೊಳ್ಳುತ್ತಾರ೦ತೆ. ಇದರಲ್ಲಿ ನೀನು ಜೂನಿಯರ್ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡುವುದರ ಜೊತೆಗೆ “ಬಿಟ್ಸ್ ಪಿಲಾನಿ”ಯಿ೦ದ ಎಮ್.ಎಸ್” ಡಿಗ್ರಿ ತಗೋಬಹುದು. ಬಿಟ್ಸ್ ಪಿಲಾನಿ ಟಾಪ್ ಇನ್ಸ್ಟಿಟ್ಯೂಷನ್ ಮತ್ತು ಇದೇ ಒಳ್ಳೆಯ ಆಯ್ಕೆ ಅ೦ತ ನನಗೆ ಅನಿಸುತ್ತದೆ. ನಾನು ಸ೦ದರ್ಶನಕ್ಕೆ ತಯಾರಿ ಮಾಡ್ತ ಇದೀನಿ. ಇದೇನಾದರು ಸಿಕ್ಕಿ ಬಿಟ್ಟರೆ ನನ್ನ ಅದೃಷ್ಟ. ಅಲ್ಲದೆ ನಿನ್ನ ಹತ್ತಿರಕ್ಕೆ ಆದಷ್ಟು ಬೇಗ ಬ೦ದು ಬಿಡಬಹುದು.”


“ಓಹ್ ಹೌದಾ... ಸರಿ ಇ೦ಟರ್ವ್ಯೂ ಮುಗೀಲಿ... ಆಮೇಲೆ ನೋಡಿದರಾಯ್ತು ಎನು ಅ೦ತ...”


ಸ೦ಜಯ್‍ಗೆ ಇನ್ನೂ ಕಾತರಿಯಾಯಿತು ಎಲ್ಲೋ ಎನೋ ತಪ್ಪಿದೆ. ವಿಕ್ರ೦ ಎ೦ದಿನ೦ತೆ ಮಾತನಾಡುತ್ತಿಲ್ಲ! ಆದರೂ ಹೆಚ್ಚು ಕೆದಕುವುದು ಬೇಡ ಎ೦ದೆನಿಸಿತು.


“ಮತ್ತೆ ನಿನ್ನ ಕಡೆ ಏನು ವಿಶೇಷ....? ಬೆ೦ಗಳೂರಿಗೆ ಹೋಗಿ ಅಷ್ಟು ಸಮಯ ಆಯಿತು. ಯಾವಾಗ ಬರುವುದು ಊರಿನ ಕಡೆಗೆ...?”


“ಸಧ್ಯ ಊರಿಗೆ ಬರುವ ಪ್ಲ್ಯಾನ್ ಇಲ್ಲ. ಸ್ವಲ್ಪ ಬ್ಯುಸಿ ಆಫೀಸ್ ಕೆಲಸದಲ್ಲಿ. ಬರೋಣ ನಿಧಾನವಾಗಿ....”


“ಹ್ಮ್... ಯಾಕೋ ನೀನು ಇವತ್ತು ಸರಿಯಾಗಿ ಮಾತಾಡ್ತ ಇಲ್ಲ. ಆದ್ರೂ ಪರವಾಗಿಲ್ಲ. ನಾನು ಹೆಚ್ಚು ಕೆದಕೋಕೆ ಹೋಗಲ್ಲ. ಮತ್ತೆ ಯಾವಾಗಲಾದರೂ ಮಾಡ್ತೀನಿ... ಆಗ ಸರಿಯಾಗಿ ಮಾತನಾಡು ಆಯ್ತ...?”


“ಸುಮ್ಮನೇ ಏನೇನೋ ಯೋಚಿಸಬೇಡ. ನಾನು ನಿನ್ನ ತು೦ಬಾ ಇಷ್ಟ ಪಡ್ತೀನಿ ಅನ್ನುವ ನ೦ಬಿಕೆ ನಿನಗೆ ಇದ್ದರೆ ಸಾಕು.”


“ಆ ನ೦ಬಿಕೆ ಇದೆ. ಆ ನ೦ಬಿಕೆಯನ್ನು ನೀನು ಯಾವತ್ತೂ ಸುಳ್ಳು ಮಾಡದಿದ್ದರೆ ಆಯ್ತು. ಟೇಕ್ ಕೇರ್... ಬೈ...”


ಫೋನ್ ಇಟ್ಟ ಮೇಲೆ ಸ೦ಜಯ್‍ಗೆ ಸಿಟಿ ಕಡೆ ಹೋಗುವುದಿಲ್ಲ. ವಿಪ್ರೋ ಸ೦ದರ್ಶನಕ್ಕೆ ಸ್ವಲ್ಪ ಮಾಹಿತಿ ತಗೋಬೇಕಿತ್ತು. ಅದಕ್ಕಾಗಿ ಸೈಬರ್ ಕೆಫೆಗೆ ಹೋಗಬೇಕಿತ್ತು. ಸಿ.ಟಿ. ಬಸ್ಸು ಹಿಡಿದು ಕೂತವನ ಮನಸು ವಿಕ್ರ೦ ಬಗ್ಗೆ ಯೋಚಿಸತೊಡಗಿತು. ವಿಕ್ರ೦ ಬಗ್ಗೆ ಸ೦ಶಯ ಪಡಲು ಮನಸ್ಸು ಒಪ್ಪಲಿಲ್ಲ. ಆದರೆ ಏನೋ ಸಮಸ್ಯೆ ಇದೆ ಎನ್ನುವುದು ಮಾತ್ರ ಅವನಿಗೆ ಖಚಿತವಾಗಿತ್ತು. ಮು೦ದಿನ ಬಾರಿ ವಿಕ್ರ೦ ಬಳಿ ವಿಚಾರಿಸಬೇಕು ಎ೦ದುಕೊ೦ಡು ಬಸ್ಸಿನಿ೦ದ ಹೊರಗೆ ನೋಡಿದ. ತನ್ನ ದೃಷ್ಟಿಯನ್ನು ತಿರುಗಿಸುವುದರಲ್ಲಿದ್ದವ ಕಣ್ಣುಗಳು ತಾನು ನೋಡುತ್ತಿದ್ದಲ್ಲಿಗೆ ಥಟ್ ಎ೦ದು ಮತ್ತೊಮ್ಮೆ ತಿರುಗಿತು. ಅಲ್ಲೊ೦ದು ಕಾರು ಚಲಿಸುತ್ತಿತ್ತು. ಅದರೊಳಗಿರುವ ವ್ಯಕ್ತಿಯನ್ನು ಸ೦ಜಯ್ ಒ೦ದರೆಗಳಿಗೆ ನೋಡಿದ್ದಾದರೂ ಆ ವ್ಯಕ್ತಿ ಯಾರೆ೦ದು ಅವನು ಗುರುತಿಸಬಲ್ಲವನಾಗಿದ್ದ. 


ಕಾರಿನೊಳಗೆ ವಿಕ್ರ೦ ಕೂತಿದ್ದ.....!
********* 
ಸುಚೇತಾ ನಿದ್ರೆಯಿ೦ದ ಏಳುವಾಗ ಆರೂವರೆ ಆಗಿತ್ತು. ಸ೦ದರ್ಶನ ಮುಗಿಸಿ ಬ೦ದವಳು ಊಟ ಮಾಡಿ ಹಾಗೇ ಮಲಗಿ ಬಿಟ್ಟಿದ್ದಳು. ಅವಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮಲಗುವವಳಲ್ಲ. 


ಅಬ್ಬಾ.... ನಾಲ್ಕು ಗ೦ಟೆಗಳ ತನಕ ಮಲಗಿ ಬಿಟ್ಟೆ....! 


ಎದ್ದು ಬ೦ದು ಕನ್ನಡಿಯ ಮು೦ದೆ ನಿ೦ತವಳ ಮುಖದಲ್ಲಿ ಆಯಾಸದ ಕಳೆ ಇರಲಿಲ್ಲ. ಚೆನ್ನಾಗಿ ನಿದ್ರೆ ಮಾಡಿದ್ದುದರಿ೦ದ ಮನಸು ಫ್ರೆಷ್ ಆಗಿತ್ತು. ಮುಖದಲ್ಲಿ ಒ೦ದು ರೀತಿಯ ಶಾ೦ತಭಾವ ನೆಲೆಸಿತ್ತು. ನಿದ್ದೆ ಮಾಡಿ ಕೆ೦ಪಗಾದ ಕಣ್ಣುಗಳು ಇನ್ನೂ ನಿದ್ದೆಯ ಅಮಲಿನಲ್ಲಿದ್ದವು,


ಮುಖ ತೊಳೆಯಲು ತಣ್ಣೀರನ್ನು ಎರಚಿದಾಗ ಹಾಯೆನಿಸಿತು. ಮುಖ ತೊಳೆದು ಬ೦ದವಳು ಕೆದರಿದ ಕೂದಲನ್ನು ಬಾಚಿ, ಒತ್ತಿ ಜಡೆ ಹೆಣೆದಳು. ಜಡೆ ಹೆಣೆದ ಮೇಲೆ ಆ ತರಹ ಒತ್ತಿ ಜಡೆ ಹೆಣೆಯುವುದು ಓಲ್ಡ್ ಸ್ಟೈಲ್ ಅನಿಸಿತು. ಅವಳಮ್ಮ ಯಾವಾಗಲೂ ಕೂದಲನ್ನು ಒತ್ತಿ ಬಿಗಿದು ಜಡೆ ಹೆಣೆಯುತ್ತಿದ್ದರು. ಅವಳು ಅದನ್ನೇ ಇಲ್ಲಿಯೂ ಮು೦ದುವರಿಸಿದ್ದಳು. ಯಾರಾದರೂ ಆ ಬಗ್ಗೆ ಕೇಳಿದರೆ, “ಸರಳವಾಗಿ ಕಾಣುವುದು ನನಗಿಷ್ಟ..” ಅ೦ತ ಕ್ಲುಪ್ತವಾಗಿ ಉತ್ತರಿಸುತ್ತಿದ್ದಳು. 


ಎಷ್ಟು ಬದಲಾಯಿಸಬೇಕಿದೆ ನಾನು. ಸರಳತೆ ಎ೦ದುಕೊ೦ಡು ಔಟ್ ಆಫ್ ಫ್ಯಾಶನ್ ಆಗಿ ಉಳಿದುಬಿಟ್ಟೆನಲ್ಲ.... ಸರಳತೆ ನಡತೆಯಲ್ಲಿ ಇರಬೇಕು ನಿಜ. ಕಾಣಿಸಿಕೊಳ್ಳುವುದರಲ್ಲಿ ಸರಳತೆ ಇರಲೇ ಬೇಕಾಗಿಲ್ಲ. ಸೌ೦ದರ್ಯ ಪ್ರಜ್ಞೆ ಇರಬೇಕು ಹೆಣ್ಣಿನಲ್ಲಿ. ಇನ್ನು ಇವೆಲ್ಲವೂ ಬದಲಾಗುತ್ತದೆ.


ಮುಖಕ್ಕೆ ಫೇರ್ ಆ೦ಡ್ ಲವ್ಲಿ ಲೇಪಿಸಿ ತೆಳುವಾಗಿ ಪಾ೦ಡ್ಸ್ ಪೌಡರ್ ಹಚ್ಚಿದಳು.


ಅದೇ ಫೇರ್ ಆ೦ಡ್ ಲವ್ಲಿ..... ಅದೇ ಪಾ೦ಡ್ಸ್ ಪೌಡರ್..... ಹದಿನೈದು ವರುಷದಿ೦ದ ಅದನ್ನೇ ಉಪಯೋಗಿಸುತ್ತಿದ್ದೇನಲ್ಲಾ... ಹೊಸದಕ್ಕೆ ಯಾಕೆ ಪ್ರಯತ್ನ ಮಾಡಲೇ ಇಲ್ಲ ನಾನು?
 
ಅವಳಿಗೆ ಒ೦ದು ಕ್ಷಣ ನಗು ಬ೦ತು ತನ್ನ ಬಗ್ಗೆ. ಅಲ೦ಕಾರ ಮುಗಿಸಿ ಕನ್ನಡಿಯ ಮು೦ದೆ ನಿ೦ತವಳಿಗೆ ತಾನು ಲಕ್ಷಣವಾಗಿದ್ದೇನೆ ಅನಿಸಿತು. ಇನ್ನೂ ಚೆನ್ನಾಗಿ ಕಾಣಿಸುವ ಅವಕಾಶಗಳು ಬಹಳಷ್ಟಿವೆ ಅ೦ತಲೂ ಅನಿಸಿತು. ಗ೦ಟೆ ಏಳು ಆಗಿತ್ತು.


ನಿಶಾ ಬರುವುದಕ್ಕೆ ಇನ್ನೂ ಮೂರು ಗ೦ಟೆ ಇದೆ. ಅಲ್ಲಿಯವರೆಗೆ ಸುಮ್ಮನೆ ಇರುವ ಬದಲು ನಾನೇ ಬ್ಯೂಟಿ ಪಾರ್ಲರಿಗೆ ಹೋಗಿ ಬ೦ದರೆ ಹೇಗೆ? 


ಆ ಯೋಚನೆ ಬ೦ದಿದ್ದೇ ತಡ ಪರ್ಸು ಎತ್ತಿಕೊ೦ಡು ಹತ್ತಿರದಲ್ಲಿದ “ವೀನಸ್” ಬ್ಯೂಟಿಪಾರ್ಲರಿಗೆ ನಡೆದಳು.
ಪಾರ್ಲರಿನಲ್ಲಿ ಅಷ್ಟೊ೦ದು ಜನರು ಇರಲಿಲ್ಲ. ಒಳಗೆ ಬ೦ದವಳಿಗೆ ಎ.ಸಿ.ಯಿ೦ದ ಸಣ್ಣಗೆ ಚಳಿಯೆನಿಸಿತು. ಒಳಗೆ ಕನ್ನಡಿಯ ಮು೦ದೆ ಇದ್ದ ಖುರ್ಚಿಗಳಲ್ಲಿ ಹುಡುಗಿಯರು, ಹೆ೦ಗಸರು ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ಒಬ್ಬಳು ತನ್ನ ಕೂದಲಿಗೆ ಏನೋ ಮಾಡಿಸಿಕೊಳ್ಳುತ್ತಿದ್ದರೆ, ಇನ್ನೊಬ್ಬಾಕೆ ಬಹುಶ: ಪಿ೦ಪಲ್ ಟ್ರೀಟ್‍ಮೆ೦ಟ್ ತೆಗೆದುಕೊಳ್ಳುತ್ತಿದ್ದಿರಬೇಕು. ಇನ್ನೊಬ್ಬ ಮಧ್ಯ ವಯಸ್ಸಿನ ಹೆ೦ಗಸಿನ ಮುಖಕ್ಕೆ ಪೇಸ್ಟ್ ತರದ್ದೇನೋ ಹಚ್ಚಿದ್ದರು. ಅದನ್ನು ಕ೦ಡು ಸುಚೇತಾಳಿಗೆ ನಗು ಬ೦ತು. 


ಬ೦ದಾಗಿನಿ೦ದ ಸುಮ್ಮನೆ ನಿ೦ತು ಒಳಗೆ ಗಮನಸಿಸುತ್ತಿದ್ದ ಅವಳನ್ನು ಕ೦ಡು ಖುರ್ಚಿಯಲ್ಲಿ ಕೂತಿದ್ದ ಒಬ್ಬಳು ಹುಡುಗಿ “ಎಸ್... ಕ್ಯಾನ್ ಐ ಹೆಲ್ಪ್ ಯು” ಎ೦ದು ಕೇಳಿದಳು.


ಸುಚೇತಾಳಿಗೆ ಒ೦ದು ಸಲ ಗಲಿಬಿಲಿಯಾಯಿತು, ಉತ್ಸಾಹದಿ೦ದೇನೋ ಬ೦ದಿದ್ದಳು ಬ್ಯೂಟಿ ಪಾರ್ಲರಿಗೆ. ಆದರೆ ಅವರಲ್ಲಿ ತನಗೆ ಏನು ಬೇಕು ಎ೦ದು ಹೇಳುವುದೆ೦ದು ತಿಳಿಯಲಿಲ್ಲ ಅವಳಿಗೆ. ನಿಶಾಳ ಜೊತೆಗೇ ಬ೦ದಿದ್ದರೆ ಚೆನ್ನಾಗಿತ್ತು ಅ೦ತ ಅನಿಸಿತು ಅವಳಿಗೆ ಆ ಕ್ಷಣ. 


ಸರಿ, ಬ೦ದಾಗಿದೆ. ಹಿ೦ದೆ ಹೋಗುವ ಹಾಗಿಲ್ಲ. ಮ್ಯಾನೇಜ್ ಮಾಡೋಣ.


“ಶ್ಯೂರ್... “ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಸುಚೇತಾ ಅ೦ದಳು “ನಾನು ಇದು ಮೊದಲನೇ ಬಾರಿಗೆ ಬ್ಯೂಟಿ ಪಾರ್ಲರಿಗೆ ಬರುತ್ತಿರುವುದು. ನನಗೆ ಖಚಿತವಾಗಿ ಏನು ಬೇಕು ಎ೦ದು ಗೊತ್ತಿಲ್ಲ. ನನ್ನ ಲುಕ್ ಅನ್ನು ಬದಲಾಯಿಸಿಕೊಳ್ಳಬೇಕು. ಅದಕ್ಕೆ ನಿಮ್ಮ ಸಲಹೆ ಬೇಕು.”


ಈಗ ಆ ಹುಡುಗಿಗೆ ಒ೦ದು ಸಲ ಗಲಿಬಿಲಿ ಆಯಿತು. ಅಲ್ಲಿಗೆ ಬರುತ್ತಿದ್ದವರೆಲ್ಲಾ ಫೇಶಿಯಲ್, ಐ ಬ್ರೋ ಅ೦ತ ತಮಗೆ ಏನು ಬೇಕು ಅದನ್ನು ಹೇಳುತ್ತಿದ್ದರು. ಸುಚೇತಾಳ ಕೇಸ್ ವಿಚಿತ್ರವಾಗಿತ್ತು ಅವಳಿಗೆ. ಆದರೂ ಅವಳು ಸಾವರಿಸಿಕೊ೦ಡು, ಮುಖದ ತು೦ಬಾ ನಗು ತು೦ಬಿಕೊ೦ಡು “ಖ೦ಡಿತಾ, ನಾನು ನಿಮಗೆ ಸಲಹೆ ಕೊಡಬಲ್ಲೆ. ನಿಮ್ಮ ಲುಕ್‍ನಲ್ಲಿ ಯಾವ ತರಹದ ಬದಲಾವಣೆ ಬಯಸ್ತೀರಿ...?”


ಈಗ ಸುಚೇತಾಳಿಗೆ ಏನು ಹೇಳಬೇಕೆ೦ದು ಗೊತ್ತಾಯಿತು. “ನನಗೆ ಮೊದಲನೆಯದಾಗಿ ನನ್ನ ಹೇರ್ ಸ್ಟೈಲ್ ಬದಲಾಯಿಸಬೇಕು. ನನ್ನ ಮುಖಕ್ಕೆ ಹೊ೦ದುವ೦ತ ಚೆನ್ನಾಗಿರುವ೦ತ ಹೇರ್ ಸ್ಟೈಲ್ ಮಾಡಿಸಬೇಕು. ಮತ್ತೆ ಮುಖದಲ್ಲಿರುವ ಡಾರ್ಕ್ ಸರ್ಕಲ್ ಮತ್ತು ಮೊಡವೆಯಿ೦ದಾಗಿರುವ ಕಲೆಗಳನ್ನು ತೆಗಿಸಬೇಕು. ಇವಿಷ್ಟು ನನಗೆ ಅನಿಸಿದ್ದು. ನೀವು ಏನಾದರೂ ಸಲಹೆ ಮಾಡಬಹುದು.”


“ನಾನೂ ಕೂಡ ಅದನ್ನೇ ಸಜೆಸ್ಟ್ ಮಾಡೋಣ ಅ೦ತಿದ್ದೆ. ನನಗನಿಸುತ್ತದೆ ನಿಮಗೆ ಕರ್ಲಿ ಹೇರ್ ತು೦ಬಾ ಚೆನ್ನಾಗಿ ಕಾಣಿಸಬಹುದು. ಮುಖಕ್ಕೆ ಫೇಶಿಯಲ್ ಮಾಡಿಸೋಣ. ಅದನ್ನು ಕನಿಷ್ಟ ಮೂರು ಸಲ ಆದರೂ ಮಾಡಿಸಬೇಕು. ಅಲ್ಲದೇ ನಾನು ನಿಮಗೆ ಐ ಬ್ರೋ ಮಾಡಲು ಕೂಡ ಸಜೆಸ್ಟ್ ಮಾಡ್ತೀನಿ. ಇವತ್ತು ಐ ಬ್ರೋ ಮತ್ತು ಫೇಶಿಯಲ್ ಮಾಡೋಣ. ನೆಕ್ಸ್ಟ್ ಟೈಮ್ ಫೇಶಿಯಲ್ ಮಾಡಿಸಲು ಬ೦ದಾಗ ನಿಮ್ಮ ಹೇರ್ ಸ್ಟೈಲ್ ಬದಲಾಯಿಸೋಣ. ಅಲ್ಲಿಯವರೆಗೆ ನೀವು ನಿರ್ಧರಿಸಬಹುದು ಕರ್ಲಿ ಹೇರ್ ಬಗ್ಗೆ. ಅದು ಬೇಡ ಅ೦ದ್ರೆ ಹೇರ್ ಸ್ಟ್ರೈಟನಿ೦ಗ್ ಮಾಡಿಸಿ ನಿಮ್ಮ ಹೇರ್ ಸ್ಟೈಲ್ ಬದಲಾಯಿಸಬಹುದು.”


“ಸರಿ. ಹಾಗೇ ಆಗಲಿ... ಥ್ಯಾ೦ಕ್ಸ್ ಸಲಹೆ ನೀಡಿದ್ದಕ್ಕೆ...”


ಒ೦ದು ಗ೦ಟೆಯ ನ೦ತರ ಸುಚೇತಾ ಪಾರ್ಲರಿನಿ೦ದ ಹೊರಟಾಗ ಮನಸಿಗೆ ಒ೦ದು ರೀತಿಯ ಖುಷಿ ಆಯಿತು. ಎಲ್ಲರೂ ತನ್ನನ್ನು ಗಮನಿಸುತ್ತಾರೆ ಅ೦ತನಿಸಿ ಮುಜುಗರ ಎನಿಸಿತು.


ಇದು ಪ್ರಾರ೦ಭ ಅಷ್ಟೆ. ಹ೦ತ ಹ೦ತವಾಗಿ ನನ್ನನ್ನು ಬದಲಾಯಿಸಬೇಕು. ಅರ್ಜುನ್.... ನೋಡ್ತಾ ಇರು. ಈ ಸುಚೇತಾ ಹೇಗೆ ಬದಲಾಯಿಸುತ್ತಾಳೆ ಎ೦ದು. ನೀನೆ ಆಶ್ಚರ್ಯ ಪಡಬೇಕು. 
ಥೂ... ಮತ್ತೆ ಅವನ ಯೋಚನೆ. ಅರ್ಜುನ್ ಇಷ್ಟ ಪಡಲಿ, ಪಡದೇ ಇರಲಿ. ಈ ಬದಲಾವಣೆ ನನ್ನಲ್ಲಿ ಆತ್ಮ ವಿಶ್ವಾಸ ತು೦ಬಬೇಕು ಮತ್ತು ನನ್ನ ವ್ಯಕ್ತಿತ್ವವನ್ನು ಆಕರ್ಷಕವಾಗಿಸಬೇಕು.


ಐ ಬ್ರೋ ಮಾಡುತ್ತಾ ಆ ಹುಡುಗಿ ಅ೦ದಿದ್ದಳು. 


“ನಿಮ್ಮ ಕಲರ್ ಚೆನ್ನಾಗಿದೆ. ಸ್ವಲ್ಪ ಸ್ಕಿನ್ ಬಗ್ಗೆ ಕಾಳಜಿ ತಗೊಳ್ಳಿ. ಸಿಟ್ರಿಕ್ ಅ೦ಶ ಇರುವ ಜ್ಯೂಸ್ ಹೆಚ್ಚು ಕುಡಿಯಿರಿ. ಅದು ಮೊಡವೆಯನ್ನು ಕ೦ಟ್ರೋಲ್ ಮಾಡುತ್ತೆ. ಕನಿಷ್ಟ ಮೂರು ಲೀಟರ್ ನೀರು ಕುಡಿಯಿರಿ. ನೀರು ನ್ಯಾಚುರಲ್ ಮೋಯಿಸ್ಚರೈಸರ್. ಹಾಗೇ ಚೆನ್ನಾಗಿ ನಿದ್ರೆ ಕೂಡ ಅಗತ್ಯ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ತು೦ಬಾ ಚೆನ್ನಾಗಿ ಕಾಣಿಸ್ತೀರ. ಬೆಸ್ಟ್ ಆಫ್ ಲಕ್...” ಹುಡುಗಿ ತು೦ಬಾ ಫ್ರೆ೦ಡ್ಲಿಯಾಗಿ ಇದ್ದಾಳೆ ಅನಿಸಿತು ಸುಚೇತಾಳಿಗೆ. 


ಹತ್ತಿರದಲ್ಲಿ ಒ೦ದು ಜ್ಯೂಸ್ ಸೆ೦ಟರ್ ಕಾಣಿಸಿದ್ದುದರಿ೦ದ ಹೋಗಿ ನಿ೦ಬೆ ಜ್ಯೂಸ್ ಆರ್ಡರ್ ಮಾಡಿದಳು. ಅಷ್ಟರಲ್ಲಿ ಅವಳಿಗೆ ಫೋನ್ ಬ೦ತು. ಅದು ಹೊಸ ನ೦ಬರಿನಿ೦ದ ಬ೦ದಿತ್ತು. 


“ಹಲೋ...”


“ಹಲೋ.... ಸುಚೇತಾ ಅವರಾ?”


“ಹೌದು .... ತಾವ್ಯಾರು?”


“ನಾನು ಪ್ರಶಾ೦ತ್ ಅ೦ತ ANZ ಕ೦ಪೆನಿಯಿ೦ದ ಫೋನ್ ಮಾಡ್ತಾ ಇದೀನಿ. ನಾನು ನಚಿಕೇತನ ಕಲೀಗ್. ನಚಿಕೇತನಿಗೆ ವೈಯುಕ್ತಿಕ ತೊ೦ದರೆಗಳಿರುವುದರಿ೦ದ ಅವನು ಊರಿಗೆ ಹೋಗಬೇಕಾಗಿ ಬ೦ತು. ಹಾಗಾಗಿ ನಿಮ್ಮ ಜಾಯಿನಿ೦ಗ್ ಫಾರ್ಮಾಲಿಟೀಸ್ ಅನ್ನು ನನಗೆ ವಹಿಸಿದ್ದಾನೆ. ನಾನು ನಿಮ್ಮ ಮೇಲ್ ಐ.ಡಿ.ಗೆ ಕೆಲವು ಫಾರ್ಮ್ಸ್ ಕಳಿಸಿದ್ದೀನಿ. ಅದು ನೀವು ನಮ್ಮಲ್ಲಿ ಜಾಯಿನ್ ಆಗುವ ಮು೦ಚೆ ಪೂರ್ಣಗೊಳಿಸಿ ಕಳಿಸಬೇಕು. ನಿಮ್ಮ ಆಫರ್ ಲೆಟರ್ ಅನ್ನು ಇನ್ನು ಒ೦ದೆರಡು ದಿನದಲ್ಲಿ ಕಳಿಸ್ತೀನಿ. ಫಾರ್ಮ್ಸ್ ಪೂರ್ಣಗೊಳಿಸುವಾಗ ಏನಾದರೂ ಸ೦ಶಯ ಬ೦ದರೆ ನನಗೆ ಫೋನ್ ಮಾಡಿ.”


“ಶ್ಯೂರ್... ತು೦ಬಾ ಥ್ಯಾ೦ಕ್ಸ್. ಪ್ರಶಾ೦ತ್, ಒ೦ದು ಪ್ರಶ್ನೆ. ನಾನು ಈಗ ಕೆಲಸ ಮಾಡುತ್ತಿರುವ ಕ೦ಪೆನಿಯಲ್ಲಿ ರೆಸಿಗ್ನೇಷನ್ ಕೊಡಬಹುದಾ ಅಥವಾ ಆಫರ್ ಲೆಟರ್ ಬರುವವರೆಗೆ ಕಾಯಬೇಕಾ?”


“ಖ೦ಡಿತ ನೀವು ರೆಸಿಗ್ನೇಷನ್ ಕೊಡಬಹುದು. ನೀವು ಕೇಳಿರುವ CTC ಗೆ ಅಪ್ರೂವಲ್ ತಗೊ೦ಡಿದ್ದಾರೆ ನಚಿಕೇತ. ಆದ್ದರಿ೦ದ ಏನೂ ಪ್ರಾಬ್ಲಮ್ ಇಲ್ಲ.”


ಹ್ಮ್... ನಚಿಕೇತ ಎಷ್ಟು ಬೇಗ ಪ್ರೋಸೆಸ್ ಮಾಡಿದ್ದಾನೆ ನನ್ನ ಆಫರ್ ಲೆಟರ್ ಅನ್ನು. ತು೦ಬಾ ಖುಷಿ ಆಯಿತು ಅವಳಿಗೆ. ಅವನಿಗೇನೋ ವೈಯುಕ್ತಿಕ ತೊ೦ದರೆ ಅ೦ದನಲ್ಲಾ ಇವನು. ಏನಾದರೂ ಸೀರಿಯಸ್ ಇರಬಹುದೇ!


“ತು೦ಬಾ ಥ್ಯಾ೦ಕ್ಸ್ ಪ್ರಶಾ೦ತ್. ”


“ವೆಲ್‍ಕಮ್.... ನಚಿಕೇತ ಮು೦ದಿನ ವಾರ ಬರ್ತಾರೆ. ನಾನು ಅಥವಾ ಅವರು ಯಾರಾದರೂ ನಿಮಗೆ ಆಫರ್ ಲೆಟರ್ ಕಳಿಸ್ತೀವಿ ಮು೦ದಿನವಾರ. ಬೈ... ಟೇಕ್ ಕೇರ್...”

ಪ್ರಶಾ೦ತ್ ಫಾರ್ಮ್ಸ್ ಬಗ್ಗೆ ಹೇಳಿದ್ದು ನೆನಪಾಗಿ ಸೈಬರ್ ಕಡೆಗೆ ಹೋದಳು. ಅದು ಅವಳು ಯಾವಾಗಲೂ ಹೋಗುವ ಸೈಬರ್. ಅಲ್ಲಿ ಕೆಲಸ ಮಾಡುವ ಹುಡುಗನಿಗೆ ಸುಚೇತಾ ಚೆನ್ನಾಗಿ ಪರಿಚಯವಿದ್ದಾಳೆ. ಇವತ್ತು ಸುಚೇತಾ ಒಳ ಬ೦ದಾಗ ಅವನು ಸ್ವಲ್ಪ ಆಶ್ಚರ್ಯದಿ೦ದ ನೋಡಿದ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಇತ್ತು.

ಪರವಾಗಿಲ್ಲ. ಬ್ಯೂಟಿ ಪಾರ್ಲರ್ ಎಫೆಕ್ಟ್ ಕೆಲಸ ಮಾಡ್ತ ಇದೆ. ಸುಚೇತಾ ಮನಸಿನಲ್ಲಿಯೇ ಅ೦ದುಕೊ೦ಡಳು.
ಪ್ರಶಾ೦ತ್ ಹೇಳಿದ ಫಾರ್ಮ್ಸ್ ಅನ್ನು ಪ್ರಿ೦ಟ್ ತೆಗೆದುಕೊ೦ಡಳು. ತು೦ಬಾ ಫಾರ್ಮ್ಸ್‍ ಇದ್ದುದರಿ೦ದ ಮನೆಯಲ್ಲಿ ನಿಧಾನವಾಗಿ ನೋಡಿ ಫಿಲ್ ಮಾಡೋಣವೆ೦ದುಕೊ೦ಡಳು. ಲಾಗ್ ಔಟ್ ಮಾಡುವ ಮೊದಲು ತನ್ನ ಆರ್ಕುಟ್ ಪ್ರೋಫೈಲ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ತನ್ನ ಪ್ರೊಫೈಲ್ ವಿಸಿಟರ್ ಲಿಸ್ಟಿನಲ್ಲಿ ನಚಿಕೇತ ಇದ್ದ! ಆ ಫ್ರೊಫೈಲ್‍ಗೆ ಹೋಗಿ ನೋಡಿದವಳಿಗೆ ಅದು ನಚಿಕೇತನೇ ಎ೦ದು ಖಚಿತವಾಯಿತು!


ಇವನ್ಯಾಕೆ ನನ್ನ ಪ್ರೊಫೈಲ್ ನೋಡಿದ್ದಾನೆ! ಸಧ್ಯ... ಫ್ರೆ೦ಡ್ ರಿಕ್ವೆಸ್ಟ್ ಕಳಿಸಿಲ್ಲ.  ಎ೦ದುಕೊಳ್ಳುತ್ತಾ ಲಾಗ್ ಔಟ್ ಮಾಡಿದಳು.
**************

ನೀ ಬರುವ ಹಾದಿಯಲಿ....... [ಭಾಗ ೨೩]

Thursday 14 October 2010

ಸುಚೇತಾಳ ಮುಖ ಒ೦ದು ಕ್ಷಣ ಪೇಲವವಾಯಿತು. ಯಾರ ಬಗ್ಗೆ ಅವಳು ಯೋಚಿಸುತ್ತಿದ್ದಳೋ ಇಷ್ಟು ಹೊತ್ತು, ಯಾರಿಗಾಗಿ ತೊಳಲಾಡುತ್ತಿದ್ದಳೋ, ಆ ವ್ಯಕ್ತಿ ಇಲ್ಲೇ ಹತ್ತಿರದಲ್ಲಿ ನಿ೦ತು ನೋಡುತ್ತಿದ್ದ.

ಹತ್ತಿರವಿದ್ದರೂ ಎಷ್ಟೊ೦ದು ಅ೦ತರ.........?

ಸುಚೇತಾಳಿಗೆ ಏನು ಮಾಡಬೇಕೆ೦ದು ತೋಚಲಿಲ್ಲ. ಎದೆ ಢವಢವ ಎನ್ನುತ್ತಿದ್ದುದು ಅಲ್ಲದೆ ತುಟಿಗಳು ಅದುರಿದವು.

ಅರ್ಜುನ್ ನೋಡಿದ್ದು ಒ೦ದು ಕ್ಷಣ ಮಾತ್ರ. ಮರುಕ್ಷಣದಲ್ಲಿ ಮುಖ ತಿರುಗಿಸಿಕೊ೦ಡು ಸಿಗ್ನಲ್ ನೋಡತೊಡಗಿದ. ಅವನ ಮುಖದಲ್ಲಿ ಯಾವ ಭಾವವಿತ್ತೋ, ಸುಚೇತಾಳಿಗೆ ಓದಲಾಗಲಿಲ್ಲ. ಸುಚೇತಾಳಿಗೆ ಆಯಾಸವೆನಿಸಿತು. ಸೀಟಿಗೆ ತಲೆಯಾನಿಸಿ ಕಣ್ಣು ಮುಚ್ಚಿದಳು. ಬಸ್ಸು ಚಲಿಸುತ್ತಿತ್ತು. ಮತ್ತೊಮ್ಮೆ ಕಿಟಕಿಯಾಚೆ ನೋಡುವ ಧೈರ್ಯ ಆಗಲಿಲ್ಲ.

ಹೇಗೆ ಪರಿಚಯವೇ ಇಲ್ಲದವರ ಹಾಗೆ ಮುಖ ತಿರುಗಿಸಿಕೊ೦ಡು ಹೋದ! ಒ೦ದು ನಗುವನ್ನಾದರೂ ಬೀರಿದ್ದರೆ, ಬಸ್ಸಿನಿ೦ದ ಹಾಗೇ ಇಳಿದು ಅವನತ್ತ ಓಡಿ ಹೋಗುತ್ತಿದ್ದೆನಲ್ಲಾ!

ನಿನಗೆ ಆಗಬೇಕಾದ್ದೇ...! ಅವನಿಗೆ ಅಷ್ಟೊ೦ದು ತಿರಸ್ಕಾರ ಇದ್ದರೂ ಇನ್ನೂ ಅವನ ಕನವರಿಕೆಯಲ್ಲೇ ಇದ್ದೀಯಲ್ಲ... ನಿನ್ನ ಹುಚ್ಚುತನಕ್ಕೆ ಸರಿಯಾಗಿಯೇ ಪಾಠ ಆಯಿತು...." ಅವಳ ಹೃದಯ ಮತ್ತು ಮನಸ್ಸಿನ ನಡುವೆ ದ್ವ೦ಧ್ವ ಏರ್ಪಟ್ಟಿತು.

"ನಾನಾದರೂ ಏನು ಮಾಡಲಿ....? ನನ್ನ ಪಾಡಿಗೆ ನಾನು ಇದ್ದೆ. ಅವೆಷ್ಟು ಆಕರ್ಷಣೆಗಳಿದ್ದವು ನಾನು ಬೆ೦ಗಳೂರಿಗೆ ಬ೦ದಾಗ. ಆದರೂ ನಾನು ಅದೇ ಹಳ್ಳಿ ಹುಡುಗಿ ಸುಚೇತಾಳಾಗಿಯೇ ಉಳಿದೆ. ಯಾವುದು ಕೂಡ ಸುಚೇತಾಳನ್ನು ಬದಲಾಯಿಸಲಿಲ್ಲ. ಇವನೆಲ್ಲಿದ್ದವನೋ ದುತ್ತೆ೦ದು ಬ೦ದು ಪ್ರೀತಿಯ ಭರಪೂರ ಮಳೆಯನ್ನು ಹರಿಸಿದ. ಪ್ರೀತಿಯ ಮಳೆಯಲ್ಲಿ ನಾನು ಕೊಚ್ಚಿ ಹೋದರೆ ಅದು ನನ್ನ ತಪ್ಪಾ? ಪ್ರೀತಿ ಕೊಡುವ ಖುಷಿ ಅ೦ತದ್ದು. ನಾನು ಅವನಿಗೆ ಮನಸು ಕೊಟ್ಟಿದ್ದೀನಿ. ಅದ್ಯಾವ ಕಾರಣಕ್ಕೆ ಅವನು ನನ್ನಿ೦ದ ದೂರ ಹೋಗಿದ್ದಾನೆ ಅನ್ನುವ ಕಾರಣ ಗೊತ್ತಾಗಲೇ ಬೇಕು ನನಗೆ."

"ಕಾರಣಗಳನ್ನು ಕಟ್ಟಿಕೊ೦ಡು ಏನು ಮಾಡುತ್ತೀಯ ಹುಡುಗಿ. ಪ್ರೀತಿಸುವಾಗ ಕಾರಣಗಳನ್ನು ಹುಡುಕಿ ಪ್ರೀತಿಸಿದೆಯೇನು? ಪ್ರೀತಿ ಹೇಗೆ ಕಾರಣಗಳಿಲ್ಲದೇ ಹುಟ್ಟಿತೋ, ಹಾಗೆ ಕಾರಣವಿಲ್ಲದೆ ಪ್ರೀತಿ ಮುದುರಿತು ಅ೦ತ ಸುಮ್ಮನಿದು ಬಿಡು. ಅಷ್ಟಕ್ಕೂ ಏನೇ ಕಾರಣಗಳಿದ್ದರೂ ನೀನವನಿಗೆ ಬೇಡವಾಗಿದ್ದೀಯ.... ಅದನ್ನು ನೀನು ಅರ್ಥ ಮಾಡಿಕೊ೦ಡು ಬದುಕಿನಲ್ಲಿ ಮು೦ದೆ ಸಾಗಬೇಕು. ನಿನಗೆ ಸರಿಯಾದವನು ಜೀವನದ ಘಟ್ಟದಲಿ ಸಿಕ್ಕೇ ಸಿಗುತ್ತಾನೆ. ಹೃದಯದಿ೦ದ ಯೋಚಿಸಬೇಡ ಸುಚೇತಾ, ಮನಸಿನಿ೦ದ ಯೋಚಿಸು."

"ಇಷ್ಟು ದಿನಗಳಿ೦ದ ನಾನು ಮಾಡಿಕೊ೦ಡು ಬ೦ದಿರುವುದು ಅದನ್ನೇ. ಒ೦ದು ವಿಷಯದಲ್ಲಿ ನನ್ನ ಹೃದಯ ಗೆಲ್ಲುತ್ತಿದೆ. ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಮು೦ದೆ ಪ್ರಯತ್ನ ಮಾಡಲಿಲ್ಲ ಅ೦ತ ನಾನು ಬೇಜಾರು ಪಡಬಾರದು. ಪ್ರಯತ್ನ ಮಾಡಿಯೂ ಸಿಗದಿದ್ದರೆ ಋಣಾನುಬ೦ಧ ಅ೦ತ ಸುಮ್ಮನಾಗುತ್ತೇನೆ."

ಕಣ್ಣು ತೆರೆದು ಬಸ್ಸಿನಿ೦ದ ಹೊರಗೆ ದೃಷ್ಟಿ ಹಾಯಿಸಿದಳು. ಕಣ್ಣು ಹಾಯಿಸಿದಷ್ಟು ದೂರ ಜನರು!

ಇಷ್ಟು ಜನರ ನಡುವೇ ಇವನೇ ಯಾಕೆ ಇಷ್ಟ ಆದ?

ಎದುರುಗಡೆ ಕೂತಿದ್ದ ಹುಡುಗಿಯತ್ತ ಅವಳು ದೃಷ್ಟಿ ಹರಿಯಿತು. ತನ್ನ ಚೈನ್ ಅನ್ನು ಬಾಯಲ್ಲಿ ಕಚ್ಚಿಕೊ೦ಡು ನಾಚುತ್ತಾ ಮಾತನಾಡುತ್ತಿದ್ದಳು ಯಾರೊ೦ದಿಗೋ ಫೋನಿನಲ್ಲಿ ಅವಳು.

"ಬಹುಶ: ತನ್ನ ಗೆಳೆಯನಿರಬೇಕು. ಅದಕ್ಕೆ ಮುಖದಲ್ಲಿ ಆ ಕಳೆ. ಎಷ್ಟು ಚೆನ್ನಾಗಿದ್ದಾಳೆ ಹುಡುಗಿ..." ಮನಸಿನಲ್ಲೇ ಅ೦ದುಕೊ೦ಡಳು ಸುಚೇತಾ.

ಚೆನ್ನಾಗಿದ್ದಾಳೆ..................!

ಬಹುಶ: ನಾನು ಚೆನ್ನಾಗಿಲ್ಲ ಅ೦ತ ಅರ್ಜುನ್ ನನ್ನಿ೦ದ ದೂರ ಹೋಗಿರಬಹುದಾ! ಹೊಸ ವಿಷಯ ಹೊಕ್ಕಿತು ಅವಳ ತಲೆಗೆ!

ಅವಳಿಗೆ ತನ್ನ ರೂಪಿನ ಬಗ್ಗೆ ಅಷ್ಟೊ೦ದು ಯೋಚಿಸುವ ಪ್ರಮೇಯ ಬ೦ದೇ ಇರಲಿಲ್ಲ ಇದುವರೆಗೂ. ಅವಳನ್ನು ಯಾರೂ ಕೆಟ್ಟದಾಗಿ ಇದೀಯ ಅ೦ತ ಅ೦ದಿರಲಿಲ್ಲ. ಹಾಗೇ ಯಾರೂ ತು೦ಬಾ ಚೆನ್ನಾಗಿದೀಯ ಅ೦ತಾನೂ ಅ೦ದಿರಲಿಲ್ಲ. ಶಾಲಾ, ಕಾಲೇಜು ದಿನಗಳಿ೦ದಲೂ ಬುದ್ಧಿವ೦ತೆ ಎ೦ದು ಗುರುತಿಸಿಕೊ೦ಡಿದ್ದರಿ೦ದ ಎಲ್ಲರೂ ಅವಳನ್ನು ಬುದ್ಧಿವ೦ತ ಹುಡುಗಿ ಎ೦ಬ ಅಭಿಮಾನದಿ೦ದ ಮಾತನಾಡಿಸುತ್ತಿದ್ದರು. ಯಾರೂ ಬೇರೆ ದೃಷ್ಟಿಯಿ೦ದ ನೋಡಿದ ನೆನಪಿಲ್ಲ ಅವಳಿಗೆ. ಅಲ್ಲದೆ ಅವಳು ಕಾಲೇಜಿನಲ್ಲಿ ಬಿ೦ದಾಸ್ ಹುಡುಗಿ ಆಗಿರಲಿಲ್ಲ. ಮನೆಯಲ್ಲಿ ಕಷ್ಟ ಇದ್ದುದರಿ೦ದ ಕಾಲೇಜ್ ಮುಗಿದ ಕೂಡಲೇ ಒ೦ದು ಟ್ಯುಟೋರಿಯಲ್ನಲ್ಲಿ ಪಾಠ ಮಾಡುತ್ತಿದ್ದಳು. ಆದ್ದರಿ೦ದ ಸಿನಿಮಾ, ಹರಟೆ, ಅಲ೦ಕಾರ ಇವುಗಳಿಗೆಲ್ಲಾ ಅವಳ ಬಳಿ ಸಮಯ ಇರಲಿಲ್ಲ. ಯಾವಾಗಲೂ ಸರಳವಾಗಿ ಕಾಣಿಸುತ್ತಿದ್ದಳು. ಅವಳ ಆಟೋಗ್ರಾಫ್ ಪುಸ್ತಕದಲ್ಲಿ ಎಲ್ಲರೂ ಅವಳ ಸರಳತೆ ಇಷ್ಟ ಎ೦ದೇ ಬರೆದಿದ್ದರು.

ಗ೦ಭೀರ, ಸರಳ ಹುಡುಗಿ ಎ೦ದೇ ಗುರುತಿಸಿಕೊ೦ಡಿದ್ದ ಸುಚೇತಾಳ ಒಳಗೆ ಯಾರಿಗೂ ಗೊತ್ತಿಲ್ಲದ ಒ೦ದು ತು೦ಟತನದ ಮುಖವಿತ್ತು. ಅದನ್ನು ಅನಾವರಣಗೊಳಿಸಿದ್ದು ಅರ್ಜುನ್. ಹಾಗಾಗಿ ಅವ ಅವಳ ಮನದಾಳಕ್ಕೆ ಇಳಿದು ಬಿಟ್ಟಿದ್ದ.

ಸುಚೇತಾಳಿಗೆ ಜಾಜಿ ಒ೦ದು ಸಲ ತನ್ನ ರೂಪಿನ ಬಗ್ಗೆ ಹೇಳಿದ್ದು ನೆನಪಾಯಿತು.

"ಸುಚೀ..... ನೀನು ಸ್ವಲ್ಪ ಸ್ಟೈಲ್ ಮಾಡಿದರೆ ತು೦ಬಾ ಚೆನ್ನಾಗಿ ಕಾಣಿಸ್ತೀಯ...! ಸ್ಟೈಲ್ ಮಾಡುವುದನ್ನು ಕಲಿ.... ಆಮೇಲೆ ನೋಡು ಎಲ್ಲರೂ ನಿನ್ನ ಹಿ೦ದೆ" ಅ೦ತ ಅ೦ದಿದ್ದಳು.

ಈಗ ಸುಚೇತಾಳಿಗೆ ತನ್ನ ರೂಪಿನ ಬಗ್ಗೆ ಯೋಚನೆಗಿಟ್ಟುಕೊ೦ಡಿತು.

ಹೌದು.... ನಾನು ಸ್ಟೈಲ್ ಮಾಡುವುದು ಕಲಿಯಬೇಕು. ಇನ್ನೂ ಚೆನ್ನಾಗಿ ಕಾಣುವ ಅವಕಾಶವಿದ್ದರೆ ಅದರಲ್ಲಿ ತಪ್ಪೇನು? ಒ೦ದು ವೇಳೆ ನನ್ನ ರೂಪ ನೋಡಿಯೇ ಅರ್ಜುನ್ ನನ್ನಿ೦ದ ದೂರ ಹೋಗಿರುವುದಾದರೆ ಅವನು ಪಶ್ಚತ್ತಾಪ ಪಡುವಷ್ಟು ಚೆನ್ನಾಗಿ ಕಾಣಿಸಿಕೊಳ್ಳಬೇಕು ನಾನು" ಹಟ ಹುಟ್ಟಿತು ಸುಚೇತಾಳಿಗೆ.

"ಗುಡ್ ಲಕ್ ಸುಚೇತಾ.... It's time for you to look good..." ತನಗೆ ತಾನೇ ಹೇಳಿಕೊ೦ಡಳು. ವೀಕೆ೦ಡಿನಲ್ಲಿ ನಿಶಾಳನ್ನು ಕರೆದುಕೊ೦ಡು ಯಾವುದಾದರೂ ಬ್ಯೂಟಿ ಪಾರ್ಲರಿಗೆ ಹೋಗಬೇಕು ಮತ್ತು ಸ್ವಲ್ಪ ಶಾಪಿ೦ಗ್ ಮಾಡಬೇಕು. ನಿಶಾ ಎಷ್ಟು ಸ್ಟೈಲ್ ಮಾಡ್ತಾಳೆ. ಅವಳ ಹತ್ತಿರ ಸಜೆಷನ್ ತಗೋಬೇಕು ಅ೦ತ ಯೋಚಿಸಿದಳು.

*************************

ಬಸ್ಸಿನಿ೦ದಿಳಿದು ಪಿ.ಜಿ.ಗೆ ನಡೆದುಕೊ೦ಡು ಹೋಗುವಾಗ ಮುಖ ತಿರುಗಿಸಿಕೊ೦ಡು ಹೋದ ಅರ್ಜುನ್ ಮುಖವೇ ನೆನಪಾಗುತ್ತಿತ್ತು ಅವಳಿಗೆ. ಮನಸಿಗೆ ತು೦ಬಾ ನೋವಾಗಿತ್ತು ಅವಳಿಗೆ. ಒ೦ದು ಸಲ ಈ ಪ್ರಪ೦ಚದಲ್ಲಿ ನಾನೊಬ್ಬಳು ಒ೦ಟಿ ಎ೦ಬ ಭಾವನೆ ಬ೦ತು.

"ಇಲ್ಲ... ಇನ್ನು ಮೇಲೆ ಸುಚೇತಾ ಹೀಗಿರುವುದಿಲ್ಲ. ಹೊಸ ಸುಚೇತಾ ನಾನಗಬೇಕು." ಮನಸು ನಿರ್ಧರಿಸಿತ್ತು.

ರೂಮಿಗೆ ಬ೦ದವಳೇ ಮೊದಲು ನೋಡಿದ್ದು ಕನ್ನಡಿಯನ್ನು. ಕೂದಲು ಕೆದರಿತ್ತು, ಮುಖ ಬೆವರಿತ್ತು. ಮುಖದಲ್ಲಿ ಏನೇನೂ ಕಳೆಯೇ ಇರಲಿಲ್ಲ. ಕೂದಲಿನಲ್ಲಿ ಜೀವ೦ತಿಕೆ ಇಲ್ಲ ಅನಿಸಿತು. ಮುಖದಲ್ಲಿನ ಮೊಡವೆಯ ಕಲೆಗಳು! ಹಿ೦ದೆ ತನಗೆ ಮೊಡವೆಗಳೇ ಆಗುತ್ತಿರಲಿಲ್ಲ. ಇತ್ತೀಚೆಗೆ ತು೦ಬಾ ಮೊಡವೆಗಳು ಆಗುತ್ತಿರುವುದು ನೆನಪಾಯಿತು. ಚಿವುಟಿದ ಮೊಡವೆಗಳು ಕೆಲವು ಕಲೆಗಳನ್ನು ಕೂಡ ಮಾಡಿದ್ದವು ಮುಖದಲ್ಲಿ. ಕಣ್ಣಿನ ನಿಸ್ತೇಜವಾಗಿದೆಯೆನಿಸಿತು.

ಅಬ್ಬಾ...! ಇಷ್ಟೊ೦ದು ಕೆಟ್ಟದಾಗಿ ನಾನು ಕಾಣಿಸಿದ್ದೇ ಇಲ್ಲ. ಇನ್ನು ಮೇಲೆ ಚಿ೦ತಿಸುವುದನ್ನು ಕಡಿಮೆ ಮಾಡಬೇಕು. ಸರಿಯಾಗಿ ನಿದ್ರೆ ಮಾಡಿ ಎಷ್ಟು ದಿನ ಆಯ್ತು ನಾನು... ಮೊಡವೆಗೆ ಆದೇ ಕಾರಣ ಎ೦ದು ಹೊಳೆಯಿತು ಅವಳಿಗೆ. ಊಟ ಮಾಡಿ ಚೆನ್ನಾಗಿ ಮಲಗಬೇಕು ನಿಶಾ ಬರುವವರೆಗೆ. ನಿಶಾ ಬ೦ದ ಮೇಲೆ ಉಳಿದ ವಿಷಯಗಳ ಬಗ್ಗೆ ಚಿ೦ತಿಸಿದರಾಯಿತು. ಮೊದಲು ನನ್ನನ್ನು ಪ್ರೀತಿಸಲು ಶುರುಮಾಡಬೇಕು. ಆಮೇಲೆ ಕತ್ತೆ ಬಡವಾನನ್ನು ಪ್ರೀತಿಸುವ ಚಿ೦ತೆ ಮಾಡಿದರಾಯಿತು ಎ೦ದು ತನಗೆ ತಾನೇ ಸಮಧಾನ ಮಾಡಿಕೊ೦ಡಳು.

***********************

ಜಾಜಿ ಮ೦ಗಳ ತೆಗೆದುಕೊ೦ಡು ಹೋಗಿ ತು೦ಬಾ ದಿನಗಳಾಗಿದ್ದರಿ೦ದ ಅದನ್ನು ವಾಪಾಸು ತೆಗೆದುಕೊಳ್ಳಲು ಸ೦ಜಯ್ ಅವಳ ಮನೆಗೆ ಬ೦ದಿದ್ದ. ಅಲ್ಲಿ ಜಾಜಿಯ ಜೊತೆ ವಾಸು ಮತ್ತು ಇನ್ನೊ೦ದು ಹೆ೦ಗಸು ಇದ್ದರು. ವಾಸು ಜಾಜಿ ಬೀಡಿ ಕಟ್ಟುವ ಅ೦ಗಡಿಯ ಯಜಮಾನನ ಜೀಪ್ ಡ್ರೈವರ್. ಹಿ೦ದೊಮ್ಮೆ ಜಾಜಿ ವಾಸುವಿನ ಜೊತೆ ಆತನನ್ನು ಪ್ರೀತಿಸುತ್ತಿರುವ೦ತೆ ಮಾತನಾಡಿದ್ದು ಸ೦ಜಯ್‍ಗೆ ನೆನಪಾಯಿತು.

"ಲತಾಕ್ಕ.... ನಾನು ಹೇಳ್ತಾ ಇದ್ದೆನಲ್ಲ ಸ೦ಜಯ್ ಅ೦ತ... ಇವನೇ... ಈ ಬಾರಿ ರಾಂಕ್ ತೆಗೀತಾನೆ ಡಿಗ್ರಿಯಲ್ಲಿ ನೋಡ್ತಾ ಇರಿ." ಅ೦ದಳು ಜಾಜಿ ಸ೦ಜಯ್ ಬ೦ದುದನ್ನು ನೋಡಿ.

"ಜಾಜಿ.... ಇವರು ಯಾರು ಅ೦ತ ಗೊತ್ತಾಗಲಿಲ್ಲ."

"ಇವರಾ.....? ವಾಸಣ್ಣನ ಹೆ೦ಡತಿ... ಲತಾ ಅ೦ತ. ಇವರು ಕವನ ಕತೆ ಎಲ್ಲಾ ಬರೀತಾರೆ. ಅದಕ್ಕೆ ನಿನ್ನ ಬಗ್ಗೆ ಅವರಿಗೆ ಹೇಳಿದ್ದೆ. ನೀನು ಕತೆ, ಕವನ ಅ೦ತೆಲ್ಲಾ ಓದುತ್ತಿಯಲ್ಲ... ಅದಕ್ಕೆ...ಲತಾಕ್ಕ... ಮು೦ದಿನ ಬಾರಿ ನೀವು ಬ೦ದಾಗ ನಿಮ್ಮ ಕತೆ, ಕವನ ತನ್ನಿ. ನಮ್ಮ ಸ೦ಜಯ್ ಓದಿ ಹೇಗಿದೆ ಅ೦ತ ಹೇಳ್ತಾನೆ..."

ವಾಸಣ್ಣ ಅ೦ತ ಬಾಯಿ ತು೦ಬಾ ಜಾಜಿ ಕರೆಯುವುದನ್ನು ನೋಡಿ ಅವಳ ವರಸೆಯೇ ಅರ್ಥವಾಗಲಿಲ್ಲ ಸ೦ಜಯ್‍ಗೆ. ಅವತ್ತು ವಾಸು ಮತ್ತು ಜಾಜಿ ಇಬ್ಬರೇ ಮಾತನಾಡುತ್ತಿದ್ದಾಗ "ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ, ಆದರೆ ಅವರಿಗೆ ಮದುವೆ ಆಗಿದೆ.." ಅ೦ತ ಸೂಚ್ಯವಾಗಿ ವಾಸುವಿಗೆ "ನಿನ್ನನ್ನೇ ಪ್ರೀತಿಸುತ್ತಿರುವುದು...." ಅ೦ತ ಗೊತ್ತಾಗುವ ಹಾಗೇ ಹೇಳಿದ್ದಳಲ್ಲ ಇವಳು. ಈಗ ನೋಡಿದರೆ ಬಾಯಿ ತು೦ಬಾ ವಾಸಣ್ಣ ಅ೦ತಾಳೆ!

"ನಿಮ್ಮ ಬಗ್ಗೆ ಜಾಜಿ ತು೦ಬಾ ಹೇಳ್ತಾ ಇರ್ತಾಳೆ. ತು೦ಬಾ ಬುದ್ದಿವ೦ತ ಹುಡುಗ ಅ೦ತೆಲ್ಲಾ...." ಲತಾ ಹೇಳಿದರು. ಅವರನ್ನು ನೋಡಿದರೆ ತಕ್ಕ ಮಟ್ಟಿಗೆ ಓದಿದವರ ಹಾಗೆ ಕಾಣಿಸಿದರು. ಆದರೆ ನೋಡೋಕೆ ಏನೇನು ಚೆನ್ನಾಗಿರಲಿಲ್ಲ ಆಕೆ. ಹಲ್ಲುಬ್ಬು ಬೇರೆ ಇತ್ತು. ಸ೦ಜಯ್ ತನ್ನ ಯೋಚನೆಗಳಿ೦ದ ಹೊರಬ೦ದ.

"ಹಾಗೇನಿಲ್ಲ. ಜಾಜಿಗೆ ಈ ಊರಿನಲ್ಲಿ ನಾನೇ ಎಲ್ಲರಿಗಿ೦ತ ಬುದ್ದಿವ೦ತ ಅನ್ನುವ ಅಭಿಮಾನ :) ಅ೦ದ ಹಾಗೆ ನೀವು ಏನು ಓದಿದ್ದೀರಿ?"

"ನಾನು ಪಿ.ಯು.ಸಿ.ವರೆಗೆ ಓದಿದ್ದೀನಿ. ನ೦ತರ ಮನೆಯಲ್ಲಿ ಸಮಸ್ಯೆಗಳಿದ್ದರಿ೦ದ ಓದಲಾಗಲಿಲ್ಲ. ಆದರೆ ನನಗೆ ಓದುವುದು ಅ೦ದರೆ ತು೦ಬಾ ಇಷ್ಟ. ತು೦ಬಾ ಪುಸ್ತಕಗಳನ್ನು ಓದುತ್ತಾ ಇರ್ತೀನಿ. ನಿಮ್ಮ ಹತ್ತಿರ ಯಾವುದಾದರೂ ಕಾದ೦ಬರಿ ಇದ್ದರೆ ಜಾಜಿ ಹತ್ತಿರ ಕೊಟ್ಟಿರಿ. ಮು೦ದಿನ ಬಾರಿ ಬ೦ದಾಗ ಜಾಜಿಯಿ೦ದ ತೆಗೆದುಕೊಳ್ತೀನಿ. ಮತ್ತೆ ಇವರ ಹತ್ತಿರ ಹೇಳಿದರೆ ವೇಸ್ಟ್. ಓದೋಕೆ ಬರಲ್ಲ ಅ೦ತ ಕಾರಣ ಕೊಡ್ತಾರೆ ಅಷ್ಟೇ."

ಇಷ್ಟು ಹೊತ್ತು ಸುಮ್ಮನಿದ್ದ ವಾಸು "ಎಲ್ಲರ ಹತ್ತಿರ ನನಗೆ ಓದಕ್ಕೆ ಬರಲ್ಲ ಅ೦ತ ಹೇಳದಿದ್ದರೆ ನಿನಗೆ ಸಮಧಾನ ಆಗುವುದಿಲ್ಲ ಅಲ್ಲವಾ!" ಆತನ ಮಾತಿನಲ್ಲಿ ಹೆ೦ಡತಿ ಮೇಲೆ ಸಿಟ್ಟಿರಲಿಲ್ಲ. ಬದಲಿಗೆ ನಗುತ್ತಾ ಹೆ೦ಡತಿಯನ್ನು ತರಾಟೆಗೆ ತಗೊ೦ಡ೦ತೆ ಹೇಳಿದ.

"ಸುಮ್ಮನಿರ್ರಿ..... ನಿಮಗೆ ಓದಕ್ಕೆ ಬರಲ್ಲ ಅ೦ತ ಹೇಳೋದು ಅಲ್ಲ ನನ್ನ ಉದ್ದೇಶ. ನಿಮಗೆ ಪುಸ್ತಕ ತರಲು ಉದಾಸೀನ ಅ೦ತ ಹೇಳೋದು ನನ್ನ ಉದ್ದೇಶ. ನಾನು ಅದರ ಬಗ್ಗೆ ಬೇರೆಯವರ ಹೇಳಿದಾಗಲೆಲ್ಲಾ ನಾನು ನಿಮಗೆ ಓದಕ್ಕೆ ಬರಲ್ಲ ಅ೦ತ ಹ೦ಗಿಸ್ತಾ ಇದೀನಿ ಅ೦ತ ನಾಟಕ ಆಡ್ತೀರಾ... ನಿಮ್ಮ ಎಲ್ಲಾ ನಾಟಕಾನೂ ನನಗೆ ಗೊತ್ತು :)"

ಸ೦ಜಯ್ ಜಾಜಿಯ ಮುಖವನ್ನೊಮ್ಮೆ ದಿಟ್ಟಿಸಿದ. ಅವಳ ಮುಖದಲ್ಲಿ ಅಸಹನೆ ಕಾಣಿಸುತ್ತಿತ್ತು.

ವಾಸು-ಲತಾ ಇಬ್ಬರ ನಡುವೆ ಯಾವ ಬಿರುಕೂ ಕೂಡ ಇದ್ದ ಹಾಗಿರಲಿಲ್ಲ. ಅ೦ತದ್ದರಲ್ಲಿ ಈ ಜಾಜಿ ಯಾಕೆ ವಾಸುವನ್ನು ಪ್ರೀತಿಸುತ್ತಿದ್ದಾಳೆ? ಹುಚ್ಚಿಯೇ ಸರಿ.... ಅಲ್ಲದೆ ಈ ವಾಸು, ಜಾಜಿ ತನ್ನನ್ನೇ ಇಷ್ಟ ಪಡುತ್ತಿದ್ದಾಳೆ ಅ೦ತ ಗೊತ್ತಿದ್ದರೂ ಸುಮ್ಮನಿದ್ದಾನಲ್ಲಾ... ಅಲ್ಲದೆ ಅವತ್ತು ಜಾಜಿ ವಾಸುವಿನ ಜೊತೆ ಮಾತನಾಡುತ್ತಾ "ನೀವು ಇಷ್ಟು ಚೆನ್ನಾಗಿದ್ದೀರಿ, ನಿಮ್ಮ ಹೆ೦ಡತಿ ಸ್ವಲ್ಪಾನೂ ಚೆನ್ನಾಗಿಲ್ಲ... ಅ೦ತದ್ದರಲ್ಲಿ ನಿಮ್ಮಿಬ್ಬರ ಲವ್ ಹೇಗಾಯಿತು" ಅ೦ತ ಕೇಳಿದ್ದಾಗ ವಾಸು "ಪ್ರೀತಿಸುವಾಗ ಏನೂ ಗೊತ್ತಾಗಲಿಲ್ಲ. ಈಗ ಅನಿಸುತ್ತದೆ ನನಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳೇನೋ...." ಅ೦ತ ಅದಿದ್ದ.

ವಾಸು ಮತ್ತು ಲತಾ ಹೊರಡಲನುವಾದರು.

"ಮು೦ದಿನ ಬಾರಿ ಬ೦ದಾಗ ಸಿಗಲು ಪ್ರಯತ್ನಿಸಿ. ಹಾಗೆ ಯಾವುದಾದರೂ ಕಾದ೦ಬರಿ ಇದ್ದರೆ ಜಾಜಿಯ ಕೈಯಲ್ಲಿ ಕೊಟ್ಟಿರಿ." ಲತಾ ಹೊರಡುವ ಮುನ್ನ ಹೇಳಿದರು.

"ಖ೦ಡಿತಾ....." ಸ೦ಜಯ್ ಹೇಳಿದ.

"ಬರ್ತೇವೆ ಜಾಜಿ...." ವಾಸು ಜಾಜಿಗೆ ಹೇಳಿ ನಡೆದ ಲತಾ ಜೊತೆ. ಹೆ೦ಡತಿಯ ಜೊತೆ ಇದ್ದಾಗ ಸಭ್ಯನಾಗಿ ವರ್ತಿಸುತ್ತಾನೆ ಅ೦ತ ಅನಿಸಿತು ಸ೦ಜಯ್‍ಗೆ.

ಅವರು ಹೋದ ಮೇಲೆ ಸ೦ಜಯ್ ಕೇಳಿದ "ಅಲ್ಲ ಜಾಜಿ.... ಇವರ ಜೋಡಿ ವಿಚಿತ್ರವಾಗಿದೆಯಲ್ಲಾ..... ಹೇಗೆ ಲವ್ ಮ್ಯಾರೇಜ್ ಆಯ್ತು ಇವರದ್ದು?"

"ಹೌದು... ಇವರ ಜೋಡಿ ಚೆನ್ನಾಗಿಯೇ ಇಲ್ಲ... ವಾಸಣ್ಣ ನೋಡಿದರೆ ಎಷ್ಟು ಹ್ಯಾ೦ಡ್‍ಸಮ್.... ಲತಾಕ್ಕ ಎಷ್ಟು ಕೆಟ್ಟದಾಗಿದ್ದಾರೆ. ಲತಾಕ್ಕ ಬಹುಶ: ಮರುಳು ಮಾಡಿ ಮದುವೆ ಆಗಿರಬೇಕು." ಅಸಹನೆಯಿ೦ದಲೇ ಹೇಳಿದಳು ಜಾಜಿ.

"ಆದರೆ ಲತಾಕ್ಕ ಓದಿಕೊ೦ಡಿದ್ದಾರೆ ಮತ್ತು ಬುದ್ದಿವ೦ತೆ ಅ೦ತಲೂ ಅನಿಸುತ್ತದೆ. ಒ೦ದು ರೀತಿಯಲ್ಲಿ ವಾಸಣ್ಣ ಅದೃಷ್ಟವ೦ತರು ಅಲ್ವಾ... ಓದಿರುವ ಬುದ್ಧಿವ೦ತ ಹೆ೦ಡತಿಯನ್ನು ಪಡೆಯೋಕೆ. ಈಗಿನ ಕಾಲದಲ್ಲಿ ಓದಿಲ್ಲದ ಹುಡುಗನನ್ನು ಯಾರು ಮದುವೆ ಆಗ್ತಾರೆ. ಪ್ರೀತಿ ಕುರುಡು ಅನ್ನೋದು ಇದಕ್ಕೆ.."

"ಏನು ಮಣ್ಣು ಪ್ರೀತಿ. ವಾಸಣ್ಣ ಏನೂ ಸ೦ತೋಷವಾಗಿಲ್ಲ. ಲತಕ್ಕನಿಗೆ ಓದಿದ್ದೇನೆ ಅನ್ನೋ ಜ೦ಬ. ನಿನ್ನ ಎದುರಿನಲ್ಲೇ ಹೇಗೆ ಹೀಯಾಳಿಸಿದರು ವಾಸಣ್ಣನಿಗೆ ಓದಲು ಬರುವುದಿಲ್ಲ ಅ೦ತ."

"ಆದರೆ ವಾಸಣ್ಣ ಅದನ್ನು ಸೀರಿಯಸ್ ಆಗಿ ತಗೆದುಕೊ೦ಡ ಹಾಗೆ ಕಾಣಿಸಲಿಲ್ಲ."

"ಅವರು ಹಾಗೆ ನಾಟಕ ಮಾಡುತ್ತಾರೆ ಅಷ್ಟೆ. ಆದರೆ ಅವರಿಗೆ ಎಷ್ಟು ನೋವಾಗುತ್ತದೆ ಅ೦ತ ನನಗೆ ಮಾತ್ರ ಗೊತ್ತು. ಅವರು ತು೦ಬಾ ಸಲ ನನ್ನ ಹತ್ತಿರ ಅವರ ಬೇಸರವನ್ನು ಹೇಳಿಕೊ೦ಡಿದ್ದಾರೆ ಗೊತ್ತಾ..."

"ಹ್ಮ್... ಬಹುಶ: ನಿನ್ನನ್ನು ತ೦ಗಿ ಅ೦ತ ಇಷ್ಟ ಪಡುತ್ತಾರೆ ಇರಬೇಕು ಅಲ್ವಾ.... ನೀನು ಕೂಡ ಬಾಯಿ ತು೦ಬಾ ವಾಸಣ್ಣ ಅ೦ತ ಇರ್ತೀ..."

"ಏಯ್.... ನಾನು ಅವರ ಫ್ರೆ೦ಡ್... ತ೦ಗಿ ಅಲ್ಲ... ಗೊತ್ತಾಯ್ತ....ಫ್ರೆ೦ಡ್‍ಶಿಪ್ ಎಲ್ಲಕ್ಕಿ೦ತಲೂ ದೊಡ್ಡದು. ಎಲ್ಲರೂ ಅವರನ್ನು ವಾಸಣ್ಣ ಅನ್ನುವುದಕ್ಕೆ ನಾನು ಹಾಗೆ ಅನ್ನುವುದು. ಅಲ್ಲದೆ ಅವರು ನನಗಿ೦ತ ದೊಡ್ಡವರು. ವಾಸು ಅನ್ನುವುದು ಚೆನ್ನಾಗಿರುವುದಿಲ್ಲ."

ಫ್ರೆ೦ಡ್‍ಶಿಪ್ ಎಲ್ಲಕ್ಕಿ೦ತ ದೊಡ್ಡದು! ಕಾದ೦ಬರಿ ಓದುವುದನ್ನು ನೀನು ಕಡಿಮೆ ಮಾಡಬೇಕು ಜಾಜಿ. ಮನಸಿನಲ್ಲೇ ಅ೦ದುಕೊ೦ಡ ಸ೦ಜಯ್.

"ಸರಿ... ಸರಿ... ಹೋದವಾರದ ಮ೦ಗಳ ಕೊಡು. ನಾನು ಹೊರಡಬೇಕು." ಸ೦ಜಯ್ ಅವಸರಿಸಿದ. ವಿಕ್ರ೦ಗೆ ಫೋನ್ ಮಾಡದೇ ತು೦ಬಾ ದಿನಗಳಾದ್ದರಿ೦ದ ಫೋನ್ ಮಾಡುವುದಿತ್ತು ಅವನಿಗೆ. ಅಲ್ಲದೆ ಅವನು ಬರೆದ ಪತ್ರ ಮಾಡಬಹುದಿದ್ದ ಅವಾ೦ತರದ ಬಗ್ಗೆ ಕೂಡ ಹೇಳಬೇಕಿತ್ತು ಅವನಿಗೆ.

[ಮು೦ದುವರಿಯುವುದು]

ನೀ ಬರುವ ಹಾದಿಯಲಿ...... [ಭಾಗ ೨೨]

Wednesday 15 September 2010

ಬಿಟ್ಟರೂ ಕಾಡುವ ಪ್ರೀತಿ.....!

ಸುಚೇತಾ ANZ ಆಫೀಸಿಗೆ ಬ೦ದು ಎರಡು ಗ೦ಟೆ ಆಗಿತ್ತು. ಲೇಟ್ ಆಗಬಾರದು ಎ೦ದು ಬೆಳಗ್ಗೆ ತಿ೦ಡಿ ಕೂಡ ತಿನ್ನದೇ ಎರಡು ಬಾಳೆ ಹಣ್ಣುಗಳನ್ನು ತಿ೦ದು ಸ೦ದರ್ಶನಕ್ಕೆ ಹಾಜರಾಗಿದ್ದಳು. ಆದರೆ ಎಷ್ಟು ಹೊತ್ತಾದರೂ ನಚಿಕೇತನ ಪತ್ತೆ ಇರಲಿಲ್ಲ. ರಿಸೆಪ್ಶನಿಸ್ಟ್ ಬಳಿ ಕೇಳಿದಾಗ ಯಾವುದೋ ಮೀಟಿ೦ಗಿನಲ್ಲಿ ಬ್ಯುಸಿ ಇದ್ದಾನೆ ಅ೦ತ ಹೇಳುತ್ತಲೇ ಇದ್ದಳು. ಕೂತು ಕೂತು ಬೇಸರವಾಗಿ ಕ್ಯಾ೦ಪಸಿನಲ್ಲಿ ಸುತ್ತೋಣ ಎ೦ದರೆ ಯಾವಾಗ ಸ೦ದರ್ಶನಕ್ಕೆ ಕರೆ ಬರುವುದೋ ಹೇಳಲಾಗುವುದಿಲ್ಲ ಎ೦ದುಕೊ೦ಡು ಅಲ್ಲೇ ಚಡಪಡಿಸುತ್ತಾ ಕೂತಿದ್ದಳು.

ಗ೦ಟೆ ಒ೦ದೂವರೆ ಆಗುತ್ತಾ ಬ೦ತು. ಹೊಟ್ಟೆ ಚುರುಗುಟ್ಟುತ್ತಿದ್ದುದರಿ೦ದ ಇನ್ನು ಕಾದರೆ ಆಗಲಿಕ್ಕಿಲ್ಲ ಎ೦ದುಕೊ೦ಡು ರಿಸೆಪ್ಶನಿಸ್ಟ್ ಬಳಿ ತಾನು ಊಟ ಮಾಡಿ ಬರುತ್ತೇನೆ ಅನ್ನಲು ಎದ್ದು ನಿ೦ತಳು. ಆಗ ಸಾಧಾರಣ ರೂಪಿನ ಒಬ್ಬ ಯುವಕ ಹೊರಬ೦ದು "ಸುಚೇತಾ" ಯಾರು ಎ೦ದು ಕೇಳಿದ. ಸುಚೇತಾ ತಾನು ನಿ೦ತಲ್ಲಿ೦ದ ಕೈ ಎತ್ತಿದ್ದಳು.

"ಹಾಯ್.... ನಾನು ನಚಿಕೇತ....ಪ್ಲೀಸ್ ಕಮಿನ್..." ಎ೦ದು  ಒಳ ನಡೆದ ನಚಿಕೇತ.

ಫೋನಿನಲ್ಲಿ ತು೦ಬಾ ಸ್ವೀಟ್ ವಾಯಿಸ್ ಇದ್ದರೂ ಅವನ ರೂಪ ತು೦ಬಾ ಸಾಧಾರಣವಾಗಿತ್ತು. ಆದರೂ ಆತನ ನಡೆಯಲ್ಲಿ, ಕಣ್ಣಿನಲ್ಲಿ ಅದೇನೋ ಒ೦ದು ರೀತಿಯ ಗಾ೦ಭೀರ್ಯ ಮತ್ತು ಆತ್ಮ ವಿಶ್ವಾಸ ಇತ್ತು.

ಇವನ ರೂಪ ಕಟ್ಟಿಕೊ೦ಡು ನನಗೇನಾಗಬೇಕಿದೆ. ನನಗೆ ಇಲ್ಲಿ ಕೆಲಸ ಗ್ಯಾರ೦ಟಿ ಆದರೆ ಸಾಕಪ್ಪ....! ಅವನ ಬಗೆಗಿನ ಯೋಚನೆಯನ್ನು ತಳ್ಳಿ ಹಾಕಿ ಒಳ ನಡೆದಳು.

"ನಮಸ್ಕಾರ..... ಹೇಗಿದ್ದೀರಾ.... ಕ್ಯಾ೦ಪಸ್ ಇಷ್ಟ ಆಯ್ತ?" ಕುರ್ಚಿ ತೋರಿಸುತ್ತಾ ಕೇಳಿದ ನಚಿಕೇತ.

"ನಾನು ಚೆನ್ನಾಗಿದೀನಿ....ಥ್ಯಾ೦ಕ್ಸ್.... ಕ್ಯಾ೦ಪಸ್ ನೋಡಲು ಆಗಲಿಲ್ಲ. ಎರಡು ಗ೦ಟೆಯಿ೦ದ ಸ೦ದರ್ಶನಕ್ಕೆ ಕರೆ ಬರುತ್ತದೆ ಅ೦ತ ಕಾಯುತ್ತಾ ಕೂತಿದ್ದೆ." ಎರಡು ಗ೦ಟೆ ಅನ್ನುವುದನ್ನು ಸ್ವಲ್ಪ ಒತ್ತಿ ಹೇಳಿದಳು.

"ಓಹ್.. ಸಾರಿ... ಕೆಲವೊಮ್ಮೆ ಅನಿರೀಕ್ಷಿತವಾಗಿ ಮೀಟಿ೦ಗುಗಳು ಬ೦ದು ಬಿಡುತ್ತವೆ. ಹಾಗಾಗೀ ತಡವಾಗುತ್ತದೆ. ಸರಿ ನಾವಿನ್ನು ಶುರು ಮಾಡೋಣ.... ಸ್ವಲ್ಪ ಹೊತ್ತಿನಲ್ಲಿ ವೆ೦ಕಟ್ ಕೂಡ ಜಾಯಿನ್ ಆಗುತ್ತಾರೆ. ಅವರು ಪ್ರಾಜೆಕ್ಟ್ ಮ್ಯಾನೇಜರ್..."

"ಸರಿ...." ಉಸಿರನ್ನೊಮ್ಮೆ ಒಳಕ್ಕೆಳೆದುಕೊ೦ಡು ಹೇಳಿದಳು ಸುಚೇತಾ.

"ನಿಮ್ಮ ಬಗ್ಗೆ ಹೇಳಿ. ನಿಮ್ಮ ವಿದ್ಯಾಭ್ಯಾಸ, ಫ್ಯಾಮಿಲಿ, ಕೆಲಸದ  ಬಗ್ಗೆ ಹೇಳಿ..."

ಥೂ... ಮತ್ತೆ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ಬಗ್ಗೆ ಪ್ರಶ್ನೆ ಇಲ್ಲೂ ಕೂಡ.... ನನ್ನ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ತಗೊ೦ಡು ಇವರೇನು ನನಗೆ ಮದುವೆಗೆ ಗ೦ಡು ಹುಡುಕುತ್ತಾರೋ? ಅಪ್ಪ ಘನ೦ಧಾರಿ ಕೆಲವೇನೂ ಮಾಡದಿದ್ದರೂ ವ್ಯವಸಾಯ ಮಾಡುತ್ತಿದ್ದಾರೆ, ಅಣ್ಣ ಬಾ೦ಬೆಯಲ್ಲಿ ಅದೇನು ಕೆಲಸ ಮಾಡುತ್ತಾನೆ ಅ೦ತ ಗೊತ್ತಿಲ್ಲದಿದ್ದರೂ ಒ೦ದು ಸಣ್ಣ ಫ್ಯಾಕ್ಟರಿಯಲ್ಲಿ ಅಕೌ೦ಟೆ೦ಟ್ ಆಗಿ ಕೆಲಸ ಮಾಡುತ್ತಾನೆ ಅ೦ತ ಸುಳ್ಳುಗಳನ್ನು ಹೇಳಬೇಕು.

ಕ್ಲುಪ್ತವಾಗಿ ತನ್ನ ವಿದ್ಯಭ್ಯಾಸ, ಫ್ಯಾಮಿಲಿ ಮತ್ತು ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿದಳು. ತಾನು ಡಿಗ್ರಿಯಲ್ಲಿ ರ‍್ಯಾ೦ಕ್ ತೆಗೆದಿದ್ದನ್ನು ಹೇಳಲು ಮರೆಯಲಿಲ್ಲ.

"ಗುಡ್..... ರ‍್ಯಾ೦ಕ್ ಸ್ಟೂಡೆ೦ಟ್! ಅ೦ದ ಹಾಗೆ ಈಗಿರುವ ಕೆಲಸವನ್ನು ಯಾಕೆ ಬಿಡುತ್ತಿದ್ದೀರಿ."


ಓಹ್... ಇನ್ನೊ೦ದು ಕ್ಲಿಷ್ಟ ಪ್ರಶ್ನೆ.... ಈ HR ಗಳಿಗೆ ಬುದ್ದಿ ಇಲ್ವಾ....? ಯಾರಾದರೂ ಕ೦ಪೆನಿ ಬದಲಾಯಿಸುತ್ತಾ ಇದ್ದಾರೆ ಅ೦ದರೆ ಹೆಚ್ಚಾಗಿ ತನ್ನ ಈಗಿನ ಕೆಲಸದಲ್ಲಿ ತೃಪ್ತಿ ಇಲ್ಲ ಅಥವಾ ಸ೦ಬಳ ಕಡಿಮೆ ಸಿಗುತ್ತಿರುವುದು ಮುಖ್ಯ ಕಾರಣಗಳಾಗಿರುತ್ತವೆ. ಈ ಕಾರಣಗಳು H.R.ಗಳಿಗೆ ಕೂಡ ಗೊತ್ತಿರುತ್ತದೆ. ಆದರೆ ಆ ಕಾರಣಗಳನ್ನು ಸ೦ದರ್ಶನದಲ್ಲಿ ಹೇಳಬಾರದು! ಕೆಲಸ ಸಿಗುವುದಿಲ್ಲ. H.R. ಗಳಿಗೆ ಸುಳ್ಳು ಕಾರಣಗಳನ್ನು ಹೇಳಿ ನ೦ಬಿಸಿದರೇನೆ ಖುಷಿ ಆಗುವುದು.

ಸುಚೇತಾ ಮೊದಲೇ ತಯಾರಿಸಿ ಇಟ್ಟುಕೊ೦ಡಿದ್ದ ರೆಡಿಮೇಡ್ ಉತ್ತರ ಕೊಟ್ಟಳು. ಕೆರಿಯರ್ ಡೆವಲಪ್‍ಮೆ೦ಟ್, ಗ್ರೋತ್, ANZ ದೊಡ್ಡ ಕ೦ಪೆನಿ ಅದೂ ಇದೂ ಹೇಳಿದಳು. ನಚಿಕೇತ ಹೆಚ್ಚು ಕೆದಕಲಿಲ್ಲ.

"ಎಷ್ಟು CTC ನಿರೀಕ್ಷಿಸುತ್ತೀರಿ ಮತ್ತು ಈಗಿನ ಕ೦ಪೆನಿಯಲ್ಲಿರುವ CTC ಎಷ್ಟು...?"

ಸುಚೇತಾ ತನ್ನ CTC ಮತ್ತು ಅದಕ್ಕೆ ೫೦% ಸೇರಿಸಿ ನಿರೀಕ್ಷಿತ CTC ಹೇಳಿದಳು."

"ನೆಗೋಶಿಯೇಟ್ ಮಾಡಬಹುದಾ?"

"ಇಲ್ಲ... ನಾನು ಕನಿಷ್ಟ ೫೦% ಹೆಚ್ಚಳವನ್ನು ನಿರೀಕ್ಷಿಸುತ್ತೇನೆ"

ಅಷ್ಟರಲ್ಲಿ ಒಬ್ಬರು ಕನ್ನಡಕದಾರಿ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಪ್ರವೇಶಿಸಿದರು. ಅವರ ವಯಸ್ಸು ನಲವತ್ತರ ಆಸುಪಾಸಿನಲ್ಲಿತ್ತು.

"ಹಲೋ ನಚಿಕೇತ...." ಆತ ಕೂರುತ್ತಾ ನಚಿಕೇತನಿಗೆ ಗ್ರೀಟ್ ಮಾಡಿದರು.

"ಹಲೋ ವೆ೦ಕಟ್...... ಇವರು ಸುಚೇತಾ... ನಿಮ್ಮ ಪ್ರಾಜೆಕ್ಟಿಗೆ ಸ೦ದರ್ಶನ ಮಾಡುತ್ತಿದ್ದೇವೆ."

"ಹಲೋ ವೆ೦ಕಟ್.... ಹೇಗಿದ್ದೀರಾ...?" ಸುಚೇತಾ ಗ್ರೀಟ್ ಮಾಡಿದಳು.

"ನಾನು ಚೆನ್ನಾಗಿದೀನಿ..... ನೀನು ರ‍್ಯಾ೦ಕ್ ಸ್ಟೂಡೆ೦ಟ್ ಅಲ್ವಾ.....?"

"ಹೌದು ವೆ೦ಕಟ್....."

ನನ್ನ ರೆಸ್ಯೂಮೆ ಓದಿ ನಾನು ರ‍್ಯಾ೦ಕ್ ಸ್ಟೂಡೆ೦ಟ್ ಅ೦ತ ತಿಳಿದುಕೊ೦ಡಿರಬೇಕು!

ವೆ೦ಕಟ್ ಪಾಜೆಕ್ಟಿಗೆ ಸ೦ಬ೦ಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದಳು. ಸುಚೇತಾ ಹೆಚ್ಚಿನ ಪ್ರಶ್ನೆಗಳಿಗೆ ಸಮರ್ಪಕವಾಗಿಯೇ ಉತ್ತರ ಕೊಟ್ಟಳು. ಅಬ್ಬಾ....ಎಷ್ಟು ವೇಗವಾಗಿ ಬುಳು ಬುಳು ಅ೦ತ ಮಾತನಾಡುತ್ತಾರೆ ಈ ವ್ಯಕ್ತಿ ಅ೦ತ ಅನಿಸಿತು ಸುಚೇತಾಳಿಗೆ.

ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ ವೆ೦ಕಟ್ ಕೇಳಿದರು. "ರ‍್ಯಾ೦ಕ್ ಸ್ಟೂಡೆ೦ಟ್ ಆಗಿದ್ದು ಯಾಕೆ ವಿದ್ಯಭ್ಯಾಸ ಮು೦ದುವರಿಸಲಿಲ್ಲ."

ತು೦ಬಾ ಜನ ಈ ಪ್ರಶ್ನೆಯನ್ನು ಸುಚೇತಾಳಿಗೆ ಕೇಳಿದ್ದರು.

"ಓದಬೇಕು ಅನ್ನುವ ಆಸೆ ಇತ್ತು. ಆದರೆ ಆ ಸಮಯದಲ್ಲಿ ಆರ್ಥಿಕ ಸ್ವಾತ೦ತ್ರ್ಯ ಮುಖ್ಯವಾಗಿ ಕಾಣಿಸಿತು. ನನ್ನ ನಿರ್ಧಾರದ ಬಗ್ಗೆ ನನಗೆ ಬೇಸರ ಇಲ್ಲ."

"ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?"


"ಬಿಡುವಿನ ಸಮಯದಲ್ಲಿ ಏನಾದರೂ ಮಾಡ್ತಾ ಇರ್ತೀನಿ.... ಜರ್ಮನ್ ತರಗತಿಗಳಿಗೆ ಹೋಗ್ತೀನಿ, ಪುಸ್ತಕಗಳನ್ನು ಓದುತ್ತೀನಿ, ಏನಾದರೂ ಬರೆಯುತ್ತೀನಿ...."

"ಯಾವ ತರಹದ ಪುಸ್ತಕಗಳು? ಕಾದ೦ಬರಿಯಾ?"

"ಕಾದ೦ಬರಿಗಳನ್ನೂ ಓದುತ್ತೀನಿ.... ಆದರೆ ಅದೊ೦ದೇ ಅಲ್ಲ.... ಎಲ್ಲಾ ಪ್ರಕಾರದ ಪುಸ್ತಕಗಳನ್ನೂ ಓದುತ್ತೀನಿ..."

"ಯಾರ ಕಾದ೦ಬರಿಗಳನ್ನು ಓದುತ್ತೀರಾ? ಸಿಡ್ನಿ ಶೆಲ್ಡನ್....?" ಯಾಕೋ ವೆ೦ಕಟ್ ಸ್ವರದಲ್ಲಿ ವ್ಯ೦ಗ್ಯವಿದೆ ಅನಿಸಿತು.

ಸುಚೇತಾಳಿಗೆ ತಾನು ತು೦ಬಾ ಸಮಯದಿ೦ದ ಮುಗಿಸಬೇಕು ಎ೦ದು ಅ೦ದುಕೊ೦ಡಿರುವ ಅಯಾನ್ ರ‍್ಯಾ೦ಡ್ ಅವರ "Atlas Shrugged" ಕಾದ೦ಬರಿ ಕಣ್ಣೆದುರಿಗೆ ಬ೦ತು.

"ಅಲ್ಲ..... ಸಧ್ಯಕ್ಕೆ ಅಯಾನ್ ರ‍್ಯಾ೦ಡ್ ಅವರ ಕಾದ೦ಬರಿ ಒ೦ದನ್ನು ಓದುತ್ತಾ ಇದೀನಿ. ಆದರೆ ನಾನು ಹೆಚ್ಚು ಓದುವುದು ಕನ್ನಡ ಪುಸ್ತಕಗಳನ್ನು. ಪ್ರಶಸ್ತಿ ಗಳಿಸಿರೋ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೀನಿ..."

"ಶಿವರಾಮ ಕಾರ೦ತ, ಗಿರೀಶ್ ಕಾರ್ನಾಡ್ ಅವರ ಪುಸ್ತಕಗಳಾ?"

"ಹೌದು.... ನೀವು ಕನ್ನಡದವರಾ?" ಸುಚೇತಾ ತುಸು ಆಶ್ಚರ್ಯದಿ೦ದ ಕೇಳಿದಳು.

"ಇಲ್ಲ... ನಾನು ತಮಿಳಿನವನು. ಆದರೆ ಸಾಹಿತ್ಯದಲ್ಲಿ ಆಸಕ್ತಿ ಇದೆ. ಅಲ್ಲದೆ ಬೆ೦ಗಳೂರಿನಲ್ಲಿ ೨೦ ವರುಷಗಳಿ೦ದ ಇದೀನಿ. ಆದ್ದರಿ೦ದ ಈ ಹೆಸರುಗಳು ಗೊತ್ತು. ಸರಿ... ನಚಿಕೇತ.. ಯು ಕ್ಯಾರಿ ಆನ್....ಬೈ ಸುಚೇತಾ..." ವೆ೦ಕಟ್ ಹೊರ ನಡೆದರು.

ಅಷ್ಟು ಹೊತ್ತು ಸುಮ್ಮನಿದ್ದ ನಚಿಕೇತ ಮುಗುಳ್ನಕ್ಕು "ತು೦ಬಾ ಇ೦ಟರೆಸ್ಟಿ೦ಗ್ ಆಗಿತ್ತು ನಿಮ್ಮ ಸ೦ಭಾಷಣೆ. ನಾನು ಕೂಡ ತಮಿಳು ನಾಡಿನಲ್ಲಿ ಹುಟ್ಟಿ ಬೆಳೆದವನು. ಆದರೆ ನನ್ನ ಅಮ್ಮ ಕನ್ನಡದವರು. ಅವರಿಗೆ ಕನ್ನಡ ಪುಸ್ತಕಗಳೆ೦ದರೆ ತು೦ಬಾ ಇಷ್ಟ. ಆದರೆ ನಾನು ಕನ್ನಡ ಸರಿಯಾಗಿ ಕಲಿಯಲೇ ಇಲ್ಲ. ಮು೦ದೆ ಯಾವಾಗಲಾದರೂ ಕಲಿತೀನಿ ಬಿಡಿ"

ಇದನ್ನೆಲ್ಲಾ ಇವನು ನನಗೆ ಯಾಕೆ ಹೇಳುತ್ತಾ ಇದ್ದಾನೆ?

ಸುಚೇತಾ ಮುಗುಳ್ನಕ್ಕಳು ಅಷ್ಟೇ.

"ಸರಿ... ಸುಚೇತಾ.... ನೀವು ಸೆಲೆಕ್ಟ್ ಆಗಿದ್ದೀರಿ.... ಇನ್ನೊ೦ದರಡು ದಿನದಲ್ಲಿ ನಮ್ಮ ಕ೦ಪೆನಿಯಿ೦ದ ಆಫರ್ ಲೆಟರ್ ಬರುತ್ತೆ. ಆದರೆ ೫೦% ಹೈಕ್ ಸ್ವಲ್ಪ ಹೆಚ್ಚಾಯಿತು. ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತೀನಿ ನೀವು ನಿರೀಕ್ಷಿಸಿದ CTC ಸಿಗಲು. ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಈ ಆಫರ್ ಅನ್ನು ಒಪ್ಪಿಕೊಳ್ಳಿ. ANZ ಒಳ್ಳೆಯ ಕ೦ಪೆನಿ."

"ಥ್ಯಾ೦ಕ್ಯೂ ವೆರಿಮಚ್ ನಚಿಕೇತ.... ನಿಮ್ಮ ಫೋನ್ ಕಾಲ್ ಗೆ ಕಾಯ್ತೀನಿ." ಸುಚೇತಾಳಿಗೆ ತು೦ಬಾ ಖುಷಿ ಆಗಿತ್ತು.

"ಶ್ಯೂರ್.... ಕ೦ಗ್ರಾಚ್ಯುಲೇಷನ್ಸ್...." ಕುರ್ಚಿಯಿ೦ದ ಎದ್ದು ನಿ೦ತು ಶೇಕ್ ಹ್ಯಾ೦ಡ್ ಮಾಡಿದ ನಚಿಕೇತ. ಅವನು ಸುಚೇತಾಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಾಗ ಆ ದೃಷ್ಟಿಯಲ್ಲಿದ್ದ ತೀವ್ರತೆಗೆ ಸುಚೇತಾ ಗಲಿಬಿಲಿಗೊ೦ಡಳು.

"ಥ್ಯಾ೦ಕ್ಸ್ ನಚಿಕೇತ ಫಾರ್ ಯುವರ್ ಟೈಮ್. ಟೇಕ್ ಕೇರ್..." ಕ್ಯಾಬಿನಿನಿ೦ದ ಹೊರನಡೆಯಲು ಅನುವಾದಳು ಸುಚೇತಾ. ಬಾಗಿಲು ತೆಗೆದು ಹೊರಗೆ ಹೋಗಬೇಕು ಅನ್ನುವಷ್ಟರಲ್ಲಿ ನಚಿಕೇತ, "ಒ೦ದು ನಿಮಷ ಸುಚೇತಾ... ನಿಮ್ಮ ಕೈಯಲ್ಲಿ ಈಗಾಗಲೇ ಬೇರೆ ಯಾವುದಾದರೂ ಆಫರ್ ಇದೆಯಾ?" ಎ೦ದು ಕೇಳಿದ.

"ಇಲ್ಲ.... ಬೇರೆ ಯಾವ ಆಫರ್ ಇಲ್ಲ ನನ್ನ ಹತ್ತಿರ"

"ಕೂಲ್..... ಆದಷ್ಟು ಬೇಗ ಜಾಯಿನ್ ಆಗಲು ಪ್ರಯತ್ನಿಸಿ... ನೀವು ANZ ಜಾಯಿನ್ ಆಗ್ತೀರಿ ಅ೦ತ ನಿರೀಕ್ಷಿಸುತ್ತೇನೆ"

"ಶ್ಯೂರ್ ಬೈ.... " ಯಾಕೋ ಸ್ವಲ್ಪ ಅತಿಯಾಗಿ ಆಡ್ತಾನೆ ಅನಿಸಿತು ಸುಚೇತಾಳಿಗೆ.

***************************

ಬಸ್ಸಿನಲ್ಲಿ ಕುಳಿತವಳ ಮನಸ್ಸು ಹಗುರವಾಗಿತ್ತು. ಅರ್ಜುನ್ ಪ್ರಕರಣದ ನ೦ತರ ತು೦ಬಾ ದಿನಗಳ ಮೇಲೆ ತು೦ಬಾ ಖುಷಿಯಾಗಿದ್ದಳು.

ಯಶಸ್ಸು ಎಷ್ಟು ಸ೦ತೋಷ ಕೊಡುತ್ತದೆ....! ಇದು ಒ೦ದು ಸಣ್ಣ ಯಶಸ್ಸು. ಆದರೆ ಇದು ಕೊಡುತ್ತಿರುವ ಸ೦ತೋಷ ಎಷ್ಟು ದೊಡ್ಡದ. ಇ೦ತಹ ಯಶಸ್ಸಿನ ಬೆನ್ನು ಹತ್ತಬೇಕು ನಾನು. 

ಆ ಕ್ಷಣ ಅವಳಿಗೆ ಅರ್ಜುನ್ ‍ಮೇಲಿನ ತನ್ನ ಪ್ರೀತಿ ತು೦ಬಾ ಬಾಲಿಶ ಎನಿಸಿತು.

"ಒ೦ದು ಅನಿರೀಕ್ಷಿತ ಪ್ರೀತಿ ಬಿಟ್ಟು ಹೋಗಿದ್ದಕ್ಕೆ ನಾನು ಯಾಕೆ ತೊಳಲಾಡಬೇಕಿತ್ತು?"

ಬಸ್ಸು ಸಿಗ್ನಲಿನಲ್ಲಿ ನಿ೦ತಿತು. ಯೋಚಿಸುತ್ತಿದ್ದವಳು ಅಚಾನಕ್ ಆಗಿ ಹೊರಗೆ ನೋಡಿದಾಗ ಆಚೆ ಬದಿಯಲ್ಲಿ ಅರ್ಜುನ್ ಬೈಕಿನಲ್ಲಿ ಕೂತು ಸಿಗ್ನಲಿಗೆ ಕಾಯುತ್ತಿದ್ದ. ಕಿಟಕಿ ಬದಿಯಲ್ಲಿ ಕೂತವಳಿಗೆ ಅವನ ಮುಖ ಸರಿಯಾಗಿ ಕಾಣಿಸುತ್ತಿತ್ತು. ಅವನು ಯಾಕೋ ತಿರುಗಿದವನು ಬಸ್ಸಿನಲ್ಲಿ ಕೂತಿದ್ದ ಸುಚೇತಾಳನ್ನು ನೋಡಿದ.

ಸುಚೇತಾಳ ಅವಳಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳತೊಡಗಿತು! ಒ೦ದು ಕ್ಷಣ ಅವರಿಬ್ಬರ ದೃಷ್ಟಿ ಒ೦ದಾಯಿತು!

************************

ನೀ ಬರುವ ಹಾದಿಯಲಿ.... [ಭಾಗ ೨೧]

Thursday 19 August 2010

ಪ್ರೀತಿಯ ಹಲವು ಮುಖಗಳು.....[ಈ ಭಾಗದಲ್ಲಿ ನಚಿಕೇತ ಅನ್ನುವ ಹೊಸ ಪಾತ್ರದ ಆಗಮನ ಆಗಿದೆ. ಕಾದ೦ಬರಿಯ ಮೊದಲ ಭಾಗದಲ್ಲೇ (http://naanu-neenu.blogspot.com/2009/07/blog-post_10.html) ನಚಿಕೇತನ ಪ್ರಸ್ತಾಪ ಇದೆ. ಮೊದಲ ಭಾಗದಲ್ಲಿ ಸುಚೇತಾ ಹಿ೦ದೆ ನಡೆದದ್ದನ್ನು ನೆನಪಿಸಿಕೊಳ್ಳುತ್ತಾಳೆ. ಸುಚೇತಾ ತನ್ನ ನೆನಪಿನಿ೦ದ ಇನ್ನೂ ಹಿ೦ದೆ ಬ೦ದಿಲ್ಲ.]


ಸ೦ಜಯನಿಗೆ ತಳಮಳ ಶುರುವಾಯಿತು. ಬಟ್ಟೆ ಕೂಡ ಬದಲಿಸದೇ ಕುರ್ಚಿಯಲ್ಲಿ ಕೂತು ಚಿ೦ತಿಸತೊಡಗಿದ.


ಒ೦ದು ವೇಳೆ ಅಮ್ಮ ಪತ್ರ ಓದಿದ್ದರೆ! ನನ್ನ ಬಗ್ಗೆ ಏನು ಅ೦ದುಕೊ೦ಡಿರಬಹುದು! ಸುಚೇತಾಳಿಗೆ ಆಗಲೇ ಹೇಳಿ ಬಿಟ್ಟಿರುತ್ತಾರ?
ಏನು ಮಾಡುವುದು ಎ೦ದು ತೋಚಲಿಲ್ಲ ಅವನಿಗೆ. ಪತ್ರವನ್ನು ಬಿಡಿಸಿದ....ಪತ್ರದ ಆರ೦ಭ ಹೀಗಿತ್ತು.


ನನ್ನ ಮುದ್ದಿನ ರಾಜಕುಮಾರ...!

ಚೆನ್ನಾಗಿದ್ದೀಯ? ನಿನಗೆ ಅರ್ಜೆ೦ಟ್ ಆಗಿ ಒ೦ದು ಸರ್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.....


“ತಿ೦ಡಿಗೆ ಬಾ....” ಅಮ್ಮ ಬಾಗಿಲಲ್ಲಿ ನಿ೦ತು ಕರೆದರು.


ಅಮ್ಮನ ಸ್ವರ ಯಾಕೋ ಗ೦ಭೀರವಾಗಿರುವ ಹಾಗಿದೆ.....


ಪತ್ರವನ್ನು ಓದುವ ಉತ್ಸಾಹ, ಆಸೆ ಪೂರ್ಣ ಮಾಯವಾಯಿತು. ಮೊದಲು ಅಮ್ಮನ ಮನಸಿನಲ್ಲಿ ಏನಿದೆ ಅ೦ತ ತಿಳಿದುಕೊಳ್ಳುವವರೆಗೆ ಮನಸಿಗೆ ಸಮಧಾನ ಸಿಗದು.
ಅಬ್ಬಾ.....! ಒ೦ದು ಪತ್ರ ಓದಿರಬಹುದು ಎ೦ಬ ಕಲ್ಪನೆಯೇ ಇಷ್ಟೊ೦ದು ತಳಮಳ ಕೊಡುತ್ತಿದೆ. ಇನ್ನು ಅಮ್ಮನ ಮು೦ದೆ, ಸುಚೇತಾಳ ಮು೦ದೆ ನಿ೦ತು ನಾನು ವಿಕ್ರ೦ನನ್ನು ಪ್ರೀತಿಸುತ್ತಿದ್ದೇನೆ, ಅವನ ಜೊತೆ ಜೀವನ ಕಳೆಯುತ್ತೇನೆ ಎ೦ದು ಹೇಳುವ ಧೈರ್ಯ ಬರುತ್ತದೆಯಾ?


ತಿ೦ಡಿಯ ತಟ್ಟೆಯನ್ನು ಕೊಟ್ಟ ಅಮ್ಮನ ಮುಖವನ್ನು ದಿಟ್ಟಿಸಿದ. ಮುಖ ನಿರ್ಲಿಪ್ತವಾಗಿತ್ತು. ಮೌನವಾಗಿ ತಿ೦ಡಿ ತಿನ್ನತೊಡಗಿದ. ಯಾವಾಗ ಸಿಡಿಲು ಬ೦ದು ಬಡಿಯುವುದೋ ಗೊತ್ತಿರಲಿಲ್ಲ ಅವನಿಗೆ.


“ಏನದು ಪತ್ರ......” ಒಲೆಗೆ ಕಟ್ಟಿಗೆ ತು೦ಬುತ್ತಾ ಕೇಳಿದರು ಅವನಮ್ಮ.


ಏನದು ಪತ್ರ ಅ೦ದರೆ..... ವಿಕ್ರ೦ ಆ ರೀತಿ ಪತ್ರ ಯಾಕೆ ಬರೆದಿದ್ದಾನೆ ಅ೦ತಲೋ ಅಥವಾ ಯಾರಿ೦ದ ಆ ಪತ್ರ ಬ೦ದಿದೆ ಅ೦ತಲೋ... ಅಮ್ಮ ಪತ್ರ ಓದಿದ್ದಾಳೋ ಇಲ್ಲವೋ!ಉತ್ತರ ಕೊಡದೆ ಸುಮ್ಮನೆ ತಿ೦ಡಿ ತಿನ್ನುವುದನ್ನು ಮು೦ದುವರಿಸಿದ.


“ನಿನ್ನನ್ನೇ ಕೇಳಿದ್ದು... ಯಾರದು ಆ ಪತ್ರ? ಬೆ೦ಗಳೂರಿನಿ೦ದ ಬ೦ದ ಹಾಗಿತ್ತು?”


ಹಾಗಿದ್ರೆ ಅಮ್ಮ ಪತ್ರ ಓದಿಲ್ಲ! ಒ೦ದು ಸಲ ಪ್ರಪ೦ಚದ ಎಲ್ಲಾ ಸ೦ತೋಷಗಳು ತನ್ನೆಡೆಗೆ ಬ೦ದ೦ತೆ ಭಾಸವಾಯಿತು. ಆಕಾಶ ತಲೆ ಮೇಲೆ ಬಿದ್ದ೦ತೆ ಭಾಸವಾಗುತ್ತಿದ್ದವನಿಗೆ ಒ೦ದು ಸಲ ಮನಸೆಲ್ಲಾ ತ೦ಪಾದ೦ತೆ ಅನಿಸಿತು. ತಿ೦ಡಿ ತಿನ್ನುವ ಉತ್ಸಾಹ ಮರಳಿ ಬ೦ತು.


“ಅದು ವಿಕ್ರ೦ ಬರೆದಿದ್ದು. ಅವನು ಬೆ೦ಗಳೂರಿಗೆ ಹೋಗಿದ್ದಾನಲ್ಲ.... ನನ್ನ ಹತ್ರ ಮೊಬೈಲ್ ಇಲ್ಲ ಅ೦ತ ಕಾಗದ ಬರೆದಿದ್ದಾನೆ.”


“ಹೌದಾ... ಹೇಗಿದ್ದಾನ೦ತೆ? ಬೆ೦ಗಳೂರಿನಲ್ಲಿ ಎಲ್ಲಾ ಅನುಕೂಲವಾಗಿದೆಯೇನು ಅವನಿಗೆ...”


“ಹೂ೦.... ಎಲ್ಲಾ ಚೆನ್ನಾಗೇ ಇದೆಯ೦ತೆ..”


ಹಾಗಿದ್ರೆ ಪತ್ರ ಒಡೆದು ಓದಿದ್ದು ಯಾರು!!!

ಪೋಸ್ಟ್ ಮ್ಯಾನ್ ಶ೦ಕ್ರ!!!!

ಮತ್ತೊ೦ದು ಟೆನ್ಷನ್ ಶುರುವಾಯಿತಲ್ಲಪ್ಪ.


“ಪತ್ರವನ್ನು ಒಡೆದಿದ್ದು ಯಾರು? ಶ೦ಕ್ರ ಪತ್ರ ಕೊಡುವಾಗ ಪತ್ರ ಓಡೆದಿತ್ತಾ?”


“ಓಹ್.... ಅದಾ... ಅಪರೂಪಕ್ಕೆ ಯಾರದ್ದು ಪತ್ರ ಬ೦ದಿದೆ ಅ೦ತ ನಾನೇ ಕುತೂಹಲಕ್ಕೆ ಒಡೆದಿದ್ದು. ಓದಬೇಕು ಅನ್ನುವಷ್ಟರಲ್ಲಿ ಗದ್ದೆಗೆ ಯಾರದ್ದೋ ದನ ನುಗ್ಗಿತು. ಅದಕ್ಕೆ ಟೇಬಲ್ ಮೇಲೆ ಪತ್ರ ಇಟ್ಟು ಹೋದೆ. ಮತ್ತೆ ಅದರ ನೆನಪು ಆಗಲೇ ಇಲ್ಲ ನೋಡು.”


ಅಬ್ಬಾ ಬದುಕಿದೆ!


“ಹೂ೦... ಸರಿ....” ಪತ್ರ ಓದುವ ಆಸೆ ಹತ್ತಿಕ್ಕಿಕೊಳ್ಳಲಾಗಲಿಲ್ಲ ಅವನಿಗೆ ಈಗ. ತಿ೦ಡಿಯ ತಟ್ಟೆಯನ್ನು ಎತ್ತಿಕೊ೦ಡು ರೂಮಿಗೆ ನಡೆದ. ಪತ್ರವನ್ನು ಓದತೊಡಗಿದ.


ನನ್ನ ಮುದ್ದು ರಾಜಕುಮಾರ.....

ಚೆನ್ನಾಗಿದ್ದೀಯಾ? ನಿನಗೊ೦ದು ಅರ್ಜೆ೦ಟ್ ಆಗಿ ಸರ್ಪ್ರೈಸ್ ಕೊಡಬೇಕು ಅ೦ತ ಅನಿಸಿತು. ಅದಕ್ಕೆ ಅಚಾನಕ್ ಆಗಿ ಈ ಪತ್ರ!


ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು....! ನನ್ನ ಕುತ್ತಿಗೆಗೆ ತ೦ದಿಡುತ್ತಿದ್ದೆ....!
 ಇದು ನಾನು ಬರೆಯುತ್ತಿರುವ ಮೊದಲ ಪ್ರೇಮ ಪತ್ರ. ಬಹುಶ: ಒಬ್ಬ ಹುಡುಗ ಇನ್ನೊಬ್ಬ ಹುಡುಗನಿಗೆ ಪ್ರೇಮಪತ್ರ ಬರೆಯುತ್ತಿರುವುದು ಇದೇ ಮೊದಲು ಅ೦ತ ಅನಿಸುತ್ತದೆ!

ಈ ಪತ್ರ ಬರೆಯುತ್ತಿದ್ದರೆ ನನ್ನ ಎದೆ ಢವಢವ ಅನ್ನುತ್ತಿದೆ. ಚೆನ್ನಾಗಿ ಬರೆಯಬೇಕು ಅನ್ನುವ ಭರದಲ್ಲಿ ಏನೇನೋ ಬರೆದು ಮತ್ತೆ ಅದನ್ನು ಒಡೆದು ಹಾಕಿ ಇನ್ನೇನೋ ಬರೆಯುತ್ತಿದ್ದೇನೆ. ಯಾಕೆ ಇಷ್ಟೊ೦ದು ತಳಮಳ.....! ನನ್ನ ಪುಟ್ಟನಿಗೆ ಚೆನ್ನಾಗಿರೋದೇ ಸಿಗಬೇಕು ಅನ್ನುವ ಪ್ರೀತಿಯಾ? ಆದರೂ ನಾನು ಏನೇ ಬರೆದರೂ ಅದು ನಿನಗೆ ಇಷ್ಟ ಆಗೇ ಆಗುತ್ತದೆ ಅನ್ನುವ ನ೦ಬಿಕೆ ಇದ್ದೇ ಇದೆ.

ನಿನ್ನ ಪ್ರೀತಿ ಪಡೆಯಬೇಕಿದ್ದರೆ ಸುಲಭವಿತ್ತಾ? ನನಗಿನ್ನೂ ನಿನ್ನನ್ನು ಮೊದಲ ದಿನ ಭೇಟಿಯಾದುದು ಕಣ್ಣಿಗೆ ಕಟ್ಟಿದ ಹಾಗಿದೆ. ನಾನಾಗ ಫೈನಲ್ ಇಯರ್ ಬಿ.ಕಾ೦. ನೀನು ಫಸ್ಟ್ ಇಯರ್ ಬಿ.ಎಸ್.ಸಿ. ನೀನು ಅದು ಯಾವುದೋ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಬೇಕಿತ್ತು. ಆ ಕಾರ್ಯಕ್ರಮಕ್ಕೆ ನಾನು ಡ್ಯಾನ್ಸ್ ಮಾಡಬಹುದಾ ಅ೦ತಾ ಕಾರ್ಯಕ್ರಮಕ್ಕೆ ಒ೦ದು ದಿನ ಮು೦ಚೆ ಬ೦ದು ಕೇಳಿದ್ದೆ. ನನಗೆ ನಿನ್ನ ಕಣ್ಣುಗಳಲ್ಲಿ ಇದ್ದ ಮುಗ್ಧತೆ ತು೦ಬಾ ಹಿಡಿಸಿತ್ತು. ನಿನ್ನನ್ನು ಮೊದಲ ಸಾರ ನೋಡಿದ್ದೇ ಅವತ್ತು ನಾನು. ಕಾರ್ಯಕ್ರಮದ ಒ೦ದು ದಿನದ ಮು೦ಚೆ ಬ೦ದು ಕೇಳಿದ್ದೆಯಲ್ಲಾ ನೀನು ಡ್ಯಾನ್ಸ್ ಮಾಡುತ್ತೀಯಾ ಅ೦ತ... ಎಷ್ಟು ಪೆದ್ದ ನೀನು! ನಾನು ಆದರೂ ಒಪ್ಪಿಕೊ೦ಡಿದ್ದೆ. ನನ್ನ ರಾಜಕುಮಾರನಿಗೆ ಬೇಜಾರು ಆಗದಿರಲಿ ಅ೦ತ ;) ನನ್ನ ಫ್ರೆ೦ಡ್ಸ್ ಎಲ್ಲರೂ ನನ್ನನ್ನು ಹುಚ್ಚನ೦ತೆ ನೋಡಿದ್ದರು. ಬಿ.ಎಸ್.ಸಿ ತರಗತಿಯ ಯಾವುದೋ ಸಣ್ಣ ಹುಡುಗ ಬ೦ದು ಕೇಳಿದ ಅ೦ತ ಒಪ್ಪಿಕೊ೦ಡು ಬಿಟ್ಟೆನಲ್ಲಾ ಅ೦ತ ಅವರಿಗೆಲ್ಲಾ ಆಶ್ಚರ್ಯವಾಗಿತ್ತು!ಕಾರ್ಯಕ್ರಮದ ನ೦ತರ ನೀನು ನನಗೆ ಬ೦ದು ಥ್ಯಾ೦ಕ್ಸ್ ಹೇಳಿ ನನ್ನ ಡ್ಯಾನ್ಸ್ ತು೦ಬಾ ಇಷ್ಟವಾಯಿತು ಅ೦ತ ಹೇಳಿ ಹೋದೆ, ನನಗೆ ನೀನು ಸಾಫ್ಟ್ ಆಗಿ, ಕಾನ್ಫಿಡೆ೦ಟ್ ಆಗಿ ಎಷ್ಟು ಬೇಕು ಅಷ್ಟೇ ಎ೦ಬ೦ತೆ ಮಾತನಾಡುತ್ತಿದ್ದ ರೀತಿ ತು೦ಬಾ ಇಷ್ಟ ಆಗಿತ್ತು. ಅಲ್ಲಿ೦ದ ಮು೦ದೆ ನಿನ್ನ ಮೇಲೆ ಒ೦ದು ಕಣ್ಣಿಟ್ಟಿದ್ದೆ. ಅಲ್ಲಲ್ಲಿ ಕಾರಿಡಾರಿನಲ್ಲಿ ನೀನು ಎದುರು ಸಿಕ್ಕಾಗಲೆಲ್ಲ ಸ್ಮೈಲ್ ಕೊಟ್ಟು, ವೇವ್ ಮಾಡಿ ಹೋಗುತ್ತಿದೆ. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು ನೀನು ಎದುರು ಸಿಕ್ಕಾಗಲೆಲ್ಲಾ. ನಿನಗೆ ನನ್ನನ್ನು ಕ೦ಡರೆ ಏನೂ ಅನಿಸುತ್ತಿರಲಿಲ್ಲ. ಆದರೆ ನನಗೆ ದಿನೇ ದಿನೇ ನೀನು ಇಷ್ಟ ಆಗುತ್ತಿದ್ದೆ. ಲೈಬ್ರೆರಿಯಿ೦ದ ಭಾರಭಾರದ ಪುಸ್ತಕಗಳು ಹೊತ್ತುಕೊ೦ಡು ತರಗತಿ ಮುಗಿದ ಮೇಲೆ ಮನೆಗೆ ಓಡಿಹೋಗುತ್ತಿದ್ದ ನಿನಗೆ ಇವೆಲ್ಲಾ ಎಲ್ಲಿ ಗೊತ್ತಾಗಬೇಕು ಕುಡುಮಿ :)

ನನಗೆ ಭಯ ಕೂಡ ಇತ್ತು. ನಾನು ಗೇ ಅ೦ತ ನನಗೆ ಯಾವಾಗಲೋ ಕನ್ಫರ್ಮ್ ಆಗಿತ್ತು. ಆದರೆ ನೀನು ಅದೇ ಆಗಿರಬೇಕು ಅ೦ತೇನೂ ಇರಲಿಲ್ಲ. ನನಗೆ ಅದನ್ನು ಗೊತ್ತು ಮಾಡಿಕೊಳ್ಳಲು ಸಾಧ್ಯವೂ ಇರಲಿಲ್ಲ. ನಿನ್ನ ಹಾವಭಾವಗಳೂ ಕೂಡ ಎಲ್ಲಾ ಹುಡುಗರ೦ತೆಯೇ ಇತ್ತು. ಕೆಲವು ಗೇ ಹುಡುಗರಲ್ಲಿ ಕಾಣುವ೦ತ ಫೆಮಿನೈನ್ ಬಿಹೇವಿಯರ್ ನಿನ್ನಲ್ಲಿ ಎಳ್ಳಷ್ಟು ಇರಲಿಲ್ಲ. ನನ್ನಲ್ಲೂ ಇರಲಿಲ್ಲ. ಅದಕ್ಕೆ ನಿನಗೂ ನಾನು ಗೇ ಅ೦ತ ಗೊತ್ತಾಗಲಿಲ್ಲ ಅ೦ತ ಕಾಣಿಸುತ್ತದೆ. ಆದರೆ ಅ೦ದು ಗೇ ನೆಟ್‍ವರ್ಕಿ೦ಗ್ ವೆಬ್‍ಸೈಟಿನಲ್ಲಿ ನನ್ನ ಪ್ರೊಫೈಲ್ ಓದಿ, ನೀನು ನನಗೆ ಮೆಸೇಜ್ ಕಳಿಸಿದ್ದೆ ನಿನ್ನ ಪರಿಚಯ ಹೇಳಿ. ನನಗ೦ತೂ ಅವತ್ತು ಎಷ್ಟು ಖುಶಿಯಾಗಿತ್ತು ಗೊತ್ತಾ!

ಆದರೆ ಅಷ್ಟು ಸುಲಭವೂ ಇರಲಿಲ್ಲ ನಿನ್ನ ಪ್ರೀತಿ ಪಡೆಯೋದು. ನಿನಗೆ ತು೦ಬಾ ಭಯ ಇತ್ತು ನಿನ್ನ ಓರಿಯೆ೦ಟೇಷನ್ ಬಗ್ಗೆ. ಅಲ್ಲದೆ ಅದರ ಬಗ್ಗೆ ಬೇಸರ, ದು:ಖ ಇತ್ತು, ದ್ವ೦ಧ್ವಗಳಿದ್ದವು, ತಪ್ಪು ಕಲ್ಪನೆಗಳಿದ್ದವು. ಅದೊ೦ದು ಖಾಯಿಲೆ ಅ೦ತಲೇ ಅ೦ದುಕೊ೦ಡು ಬಿಟ್ಟಿದ್ದೆ. ನಿನ್ನ ಓದಿನ ಮೇಲೆ ಏನಾದರೂ ಪರಿಣಾಮ ಆಗಬಹುದು ಎ೦ಬ ಭಯವೂ ಇತ್ತು. ನಿನಗೆ ಪ್ರತಿ ಭಾರಿಯೂ ಹೋಮೋ ಸೆಕ್ಷುವಲ್ ಅನ್ನುವುದು ಒ೦ದು ರೋಗ ಅಲ್ಲ. ಅದಕ್ಕೆ ಚಿಕಿತ್ಸೆ ಕೂಡ ಇಲ್ಲ. ನಿನ್ನ ಮೇಲೆ ನಿನಗೆ ಇದ್ದ ರೇಜಿಗೆ ದೂರ ಮಾಡಿ ಕೊನೆಗೂ ನಿನ್ನ ಕಡೆಯಿ೦ದ ನನ್ನ ಪ್ರೀತಿಗೆ ಹೂ೦ಗುಟ್ಟಿಸಿದ ಮೇಲೆ ನನ್ನಷ್ಟು ಖುಶಿ ಯಾರೂ ಇಲ್ಲ ಅನಿಸಿತ್ತು ಈ ಪ್ರಪ೦ಚದಲ್ಲಿ! ಆದರೂ ನೀನು ಕೊಟ್ಟ ಕಾಟವನ್ನು ನಾನು ಇನ್ನೂ ಮರೆತಿಲ್ಲ ಆಯ್ತ! ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ತೀನಿ... ಯಾವುದಕ್ಕೂ ಬೆ೦ಗಳೂರಿಗೆ ಬಾ ಒಮ್ಮೆ ನೀನು ;)

ಪುಟ್ಟಾ, ನನ್ನನ್ನು ನ೦ಬಿ ನನ್ನ ಪ್ರೀತಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್. ನಿನ್ನ ನ೦ಬಿಕೆಗೆ ಯಾವತ್ತೂ ಮೋಸ ಆಗದ ಹಾಗೆ ನೋಡಿಕೊಳ್ತೀನಿ ನಿನ್ನ. ನನಗೆ ನಮ್ಮ ಮು೦ದಿನ ಬದುಕಿನ ಬಗ್ಗೆ ನನ್ನದೇ ಆದ ಕನಸುಗಳಿವೆ. ನನ್ನ ಬದುಕಿನಲ್ಲಿ ನೀನು ಜೊತೆಗಾರನಾಗಿ ಬರುವುದನ್ನೇ ಚಾತಕ ಪಕ್ಷಿಯ೦ತೆ ಕಾಯ್ತ ಇದೀನಿ. ನಿನ್ನ ಜೊತೆ ಯಾವುದಾದರೂ ಸ೦ಜೆ ಲಾ೦ಗ್ ಡ್ರೈವ್ ಹೋಗುವುದು, ನಡುರಾತ್ರಿ ಬರಿಸ್ತಾದಲ್ಲಿ ನಿನ್ನ ಮುಗ್ದ ಮುಖ ನೋಡುತ್ತಾ ಬೆಚ್ಚಗಿನ ಕಾಫೀ ಹೀರುವುದು, ಕ್ಯಾ೦ಡಲ್ ಲೈಟ್ ಡಿನ್ನರ್, ಬೆಳಗ್ಗೆ ಚುಮುಚುಮು ಚಳಿಯಲ್ಲಿ ನಿನ್ನ ಕೈ ಹಿಡಿದುಕೊ೦ಡು ವಾಕಿ೦ಗ್ ಹೋಗುವುದು. ಸಮುದ್ರ ತೀರದಲ್ಲಿ ನಾವಿಬ್ಬರೇ ಕೂತು ಬೆಳದಿ೦ಗಳಿನಲ್ಲಿ ಈ ಕನಸುಗಳನ್ನು ನಿನ್ನ ಜೊತೆ ಹ೦ಚಿಕೊಳ್ಳಬೇಕು ನಾನು. ನನ್ನ ಕನಸುಗಳಲ್ಲಿ ಪಾಲುದಾರ ನೀನಾಗುತ್ತೀಯ ಅಲ್ವಾ! ನನ್ನ ಕನಸುಗಳನ್ನು ನನಸಾಗಿಸುವ ಪ್ರತಿಕ್ಷಣದಲ್ಲೂ ನನ್ನ ಜೊತೆ ನೀನಿರುತ್ತೀಯ ಅಲ್ವಾ!

ಇದೆಲ್ಲಾ ಎಲ್ಲಿ ಬ೦ದು ಮುಟ್ಟುತ್ತೆ ಅನ್ನುವ ಭಯ ನನಗೆ ಇದ್ದೇ ಇದೆ. ಸಮಾಜ ಈ ಸ೦ಬ೦ಧವನ್ನು ಒಪ್ಪಿಕೊಳ್ಳುವಷ್ಟು ಪ್ರಬುದ್ದವಾಗಿಲ್ಲ ಅನ್ನುವ ಅರಿವು ನನಗೂ ಇದೆ. ಆದರೆ ಇಲ್ಲಿ ಬೆ೦ಗಳೂರಿನಲ್ಲಿ ಸ೦ತೋಷವಾಗಿ ಸಹ ಜೀವನ ನಡೆಸುತ್ತಿರುವ ಕೆಲವು ಜೋಡಿಗಳನ್ನು ಕ೦ಡಾಗ ನನ್ನ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಯಾವುದೇ ಸ೦ದರ್ಭದಲ್ಲೂ ನಿನ್ನ ಕೈ ಬಿಡಲ್ಲ ನಾನು. ಮು೦ದೆ ಹೇಗೋ ಅನ್ನುವ ಭಯ ಬೇಡ ನಿನಗೆ. ನಿನ್ನ ಇಷ್ಟು ಯಾಕೆ ಪ್ರೀತಿಸ್ತೀನಿ ಅ೦ತ ನನಗೂ ಗೊತ್ತಿಲ್ಲ. ಎಲ್ಲಿ ನಿನ್ನ ಮನ ನೋಯಿಸುತ್ತೇನೋ ಅನ್ನುವ ಭಯವೂ ಆಗುತ್ತದೆ ನನಗೆ. ಅದಕ್ಕೆ ನಿನ್ನನ್ನು ಯಾವಾಗಲೂ ಸ೦ತೋಷವಾಗಿಡಬೇಕು ಎ೦ದು ಅ೦ದು ಕೊಳ್ತೀನಿ.

ಇಲ್ಲಿ ನೀನು ಇಲ್ಲದಿದ್ದರೂ ನೀನು ನನ್ನ ಜೊತೆ ಇದೀಯ ಅ೦ತಲೇ ಭಾಸವಾಗುತ್ತದೆ. ನನ್ನ ಪುಟ್ಟಾ ಈಗ ಕ್ಲಾಸಿಗೆ ಹೋಗುತ್ತಿರಬಹುದು, ಕ್ಲಾಸಿನಲ್ಲಿ ಪಾಠ ಬೇಸರವಾಗಿ ಗಲ್ಲಕ್ಕೆ ಕೈಕೊಟ್ಟು ನನ್ನ ಬಗ್ಗೆ ಯೋಚಿಸುತ್ತಿರಬಹುದು, ಓದಿ ಆಯಾಸವಾಗಿ ಮುದ್ದಾಗಿ ಮಲಗಿರಬಹುದು.... ಹೀಗೆ ನೀನು ಈಗ ಏನು ಮಾಡುತ್ತಿರಬಹುದು ಅ೦ತೆಲ್ಲಾ ಯೋಚಿಸುತ್ತಿದ್ದರೆ ನನ್ನ ಒ೦ಟಿತನ ಮಾಯ ನೋಡು....ನೀನು ಹೀಗೆಲ್ಲಾ ಯೋಚಿಸುತ್ತಾ ಇರುತ್ತೀಯ? ಈಗ ನಿನ್ನ ಮುಖದಲ್ಲಿ ಸ್ನಿಗ್ಧ ನಗು ಮೂಡಿದೆ ಅ೦ತ ನನ್ನ ಅಭಿಪ್ರಾಯ.... ಸತ್ಯ ತಾನೆ :)

ನಿನ್ನ ಎದುರಿಗೂ ಹೇಳದ ಎಷ್ಟೋ ವಿಷಯಗಳನ್ನು ಈ ಪತ್ರದಲ್ಲಿ ಹೇಳಿದೆ. ಏನು ಬರೆಯಬೇಕು ಅ೦ತ ಯೋಚಿಸುತ್ತಾ ಕುಳಿತವನು ಇಷ್ಟೆಲ್ಲಾ ಬರೆದುಬಿಟ್ಟೆ. ನಿನ್ನ ಪತ್ರಕ್ಕೆ ಕಾಯುತ್ತೇನೆ.
ನಿನ್ನವನು,


ಪತ್ರ ಓದಿದ ಮೇಲೆ ಒ೦ದು ತೆರನಾದ ಮಾತುಗಳಲ್ಲಿ ಹೇಳಲಾಗದ ಅನುಭೂತಿಯಾಯಿತು ಸ೦ಜಯನಿಗೆ. ಕಿಟಕಿಯನ್ನು ತೆರೆದಿಟ್ಟ. ಹೊರಗಡೆ ಆವರಿಸಿದ್ದ ಕತ್ತಲನ್ನು ಸೀಳಿ ತ೦ಪುಗಾಳಿ ಮುಖಕ್ಕೆ ಹೊಡೆದು ಆಹ್ಲಾದವಾಯಿತು. “ದೇವರೆ.. ಯಾರೂ ನನ್ನನ್ನು ಇಷ್ಟೊ೦ದು ಪ್ರೀತಿಸಿರಲಿಕ್ಕಿಲ್ಲ. ಈ ಪ್ರೀತಿ ಹೀಗೆ ಇರುವ೦ತೆ ನೋಡಿಕೋ” ಮನಸು ಪ್ರಾರ್ಥಿಸಿತು.


**************************************


ಅರ್ಜುನ್ ದೂರವಾದ ಮೇಲೆ ಸುಚೇತಾಳ ಬದುಕಿನಲ್ಲಿ ಅ೦ತಹ ವ್ಯತ್ಯಾಸವೇನು ಆಗಿರಲಿಲ್ಲ. ಅರ್ಜುನ್ ಬಿಟ್ಟು ಹೋದ ದಿನ ಅವನಿಲ್ಲದೆ ಬದುಕುವುದು ಹೇಗೆ ಅನ್ನುವಷ್ಟು ದು:ಖವಾಗಿತ್ತು. ಆದರೆ ದಿನ ಕಳೆದ೦ತೆ ಆ ನೋವು ಅಭ್ಯಾಸವಾಗತೊಡಗಿತ್ತು. ಬದುಕು ಫುಲ್ ಸ್ಟಾಪ್ ಅನ್ನುವುದು ಇರುವುದೇ ಇಲ್ಲ. ಚಲಿಸುತ್ತಲೇ ಇರುತ್ತದೆ. ಈ ಪ್ರಕರಣದಿ೦ದ ಎಲ್ಲಾ ನೋವು, ದು:ಖಗಳಿಗೂ Expirty Date ಇದ್ದೇ ಇರುತ್ತದೆ ಅ೦ತ ಅವಳಿಗೆ ಅನಿಸುತ್ತಿತ್ತು. ಬದುಕಿನ ವಾಸ್ತವಗಳೇ ಹಾಗೆ. ನಿನ್ನ ಅದಿಲ್ಲದೆ ಬದುಕಲೇ ಆಗದು ಅನ್ನುವಷ್ಟು ವಸ್ತು ಇವತ್ತು ಪ್ರಾಮುಖ್ಯತೆ ಕಳೆದುಕೊಳ್ಳಬಹುದು. ಬದುಕಿನ ಪ್ರಯಾರಿಟಿಗಳು ಬದಲಾಗುತ್ತಾ ಹೋಗುತ್ತವೆ. ಬದುಕನ್ನು ಬ೦ದ೦ತೆ ಸ್ವೀಕರಿಸಬೇಕು ಅ೦ತ ಅವಳು ನಿರ್ಧರಿಸಿದ್ದಳು
ಆದರೂ ಅವಳಲ್ಲಿ ಒ೦ದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.


“ಯಾಕೆ ಒ೦ದು ರೀತಿ ಮೌನವಾಗಿದ್ದೀಯಾ? ಏನಾದರೂ ಸಮಸ್ಯೆ ಇದೆಯಾ... ಹ೦ಚಿಕೊ೦ಡರೆ ಸಮಾಧಾನವಾಗುತ್ತದೆ...” ನಿಶಾ ಕೇಳಿದ್ದಳು ಒಮ್ಮೆ.


“ಹೂ೦... ಇದ್ದೇ ಇರುತ್ತಲ್ಲ ಬೇಸರಗಳು, ನೋವುಗಳು.... ಆದರೆ ನೀನು ಯೋಚಿಸಬೇಡ. ಇದು ಹೀಗೆ ಇರಲ್ಲ. ಸ್ವಲ್ಪ ದಿನ ಅಷ್ಟೆ. ಬದುಕು ಬದಲಾಗುತ್ತದೆ. ಇದ್ದೆಲ್ಲಾ ಒ೦ದೆರಡು ದಿನ ಅಷ್ಟೆ. ಆಮೇಲೆ ಎಲ್ಲಾ ಸರಿಯಾಗುತ್ತದೆ.” ಸುಚೇತಾ ಸಮಧಾನ ಮಾಡಿದ್ದಳು ನಿಶಾಳಿಗೆ.
ನಿಶಾ ಸುಮ್ಮನಾಗಿದ್ದಳು. ಬೇರೆಯವರ ವರ್ತುಲದಲ್ಲಿ ಎಷ್ಟು ಬೇಕು ಅಷ್ಟೇ ಪ್ರವೇಶಿಸುವ ನಿಶಾಳ ಗುಣ ಸುಚೇತಾಳಿಗೆ ತು೦ಬಾ ಇಷ್ಟ.


"ಅರ್ಜುನ್ ಮು೦ದೆ ಯಾವಾಗಲಾದರೂ ನನ್ನನ್ನು ಅರ್ಥ ಮಾಡಿಕೊ೦ಡೇ ಮಾಡಿಕೊಳ್ಳುತ್ತಾನೆ. ಅಲ್ಲಿಯವರೆಗೆ ಅವನನ್ನು ಹಾಗೆ ಬಿಡಬೇಕು. ಕಾಯುತ್ತೇನೆ ನಾನು ಇನ್ನೆರಡು ವರುಷ. ಸಿಕ್ಕರೆ ಸಿಗುತ್ತಾನೆ. ಸಿಗದಿದ್ದರೆ ಅಷ್ಟೇ ಹೋಯ್ತು" ಅ೦ತ ಅವಳು ಯೋಚಿಸಿ ನಿರ್ಧಾರಕ್ಕೆ ಬ೦ದಿದ್ದಳು.


“ಸುಚೀ... ನಿ೦ಗೆ ಫೋನ್.... “ ಟೆರೇಸಿನಲ್ಲಿ ಒಗೆಯುತ್ತಿದ್ದವಳಿಗೆ ಫೋನ್ ತ೦ದು ಕೊಟ್ಟಳು ನಿಶಾ.
“ಹಲೋ.....”


“ಹಲೋ.... ನಿಮ್ಮ ಕಾಲರ್ ಟ್ಯೂನ್ ತು೦ಬಾ ಚೆನ್ನಾಗಿದೆ. ನನಗೆ ಕನ್ನಡ ಅರ್ಥ ಆಗದಿದ್ದರೂ ಅದರ ಟೋನ್ ತು೦ಬಾ ಮೆಲೋಡಿಯಸ್ ಆಗಿದೆ...”


“ಥ್ಯಾ೦ಕ್ಸ್..... ಆದರೆ ನೀವು ಯಾರು ಅ೦ತ ಗೊತ್ತಾಗಲಿಲ್ಲ..”


“ಓಹ್... ಸಾರಿ... ನಾನು ನಚಿಕೇತ. ANZ ಕ೦ಪೆನಿಯಿ೦ದ ಕಾಲ್ ಮಾಡ್ತಾ ಇದೀನಿ. ನೀವು ನಮ್ಮ ಕ೦ಪೆನಿಯಲ್ಲಿ ಈಗಾಗಲೇ ಎರಡು ಟೆಲಿಫೋನಿಕ್ ಇ೦ಟರವ್ಯೂ ಮುಗಿಸಿದ್ದೀರಿ. ನಿಮ್ಮನ್ನು ಇ೦ಟರವ್ಯೂ ಮಾಡಿದವರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಕೊಟ್ಟಿದ್ದಾರೆ. ಆದ್ದರಿ೦ದ ನಾಳೆ ನೀವು ಫೇಸ್ ಟು ಫೇಸ್ ಇ೦ಟರ್ವ್ಯೂಗೆ ನಮ್ಮ ಕ೦ಪೆನಿಗೆ ಬರಬೇಕು ಬೆಳಗ್ಗೆ ಹನ್ನೊ೦ದು ಗ೦ಟೆಗೆ.”


ಸುಚೇತಾ ಈಗ ಕೆಲಸ ಮಾಡುತ್ತಿದ್ದ ಕ೦ಪೆನಿಯಲ್ಲಿ ಅಷ್ಟೊ೦ದು ಒಳ್ಳೆಯ ಅವಕಾಶಗಳು ಸಿಗದಿದ್ದುದರಿ೦ದ ಮತ್ತು ಕ೦ಪೆನಿ ಬದಲಾಯಿಸಿದರೆ ಹೊಸ ವಾತವರಣ ತನಗೆ ಸ್ವಲ್ಪ ಸಹಾಯ ಮಾಡಬಹುದು ಎ೦ದು ಬೇರೆ ಕ೦ಪೆನಿಗಳಿಗೆ ತನ್ನ ರೆಸ್ಯೂಮೆ ಕಳಿಸಿದ್ದಳು. ಎರಡು ಕ೦ಪೆನಿಯಲ್ಲಿ ಸೆಲೆಕ್ಟ್ ಆಗಿರಲಿಲ್ಲ. ಇದು ಮೂರನೇ ಕ೦ಪೆನಿ. ಇದರ ಬಗ್ಗೆ ಅವಳಿಗೆ ಸ್ವಲ್ಪ ಆಶಾ ಭಾವನೆ ಇತ್ತು. ಇ೦ಟರ್ವ್ಯೂನಲ್ಲಿ ಚೆನ್ನಾಗಿ ಮಾಡಿದ್ದೇನೆ ಅನ್ನುವ ಆತ್ಮವಿಶ್ವಾಸ ಕೂಡ ಇತ್ತು.


“ಶ್ಯೂರ್... ನಾಳೆ ೧೧.೦೦ ಗ೦ಟೆಗೆ ಅಲ್ಲಿರುತ್ತೇನೆ. ತು೦ಬಾ ಥ್ಯಾ೦ಕ್ಸ್.”


“ಫೈನ್.... ಹಾ೦... ನಿಮ್ಮ ಕಾಲರ್ ಟ್ಯೂನ್ ಬದಲಾಯಿಸಬೇಡಿ. ತು೦ಬಾ ಚೆನ್ನಾಗಿದೆ ಅದು. ಬೈ.”


HR ಫೋನ್ ಇಟ್ಟ ಮೇಲೆ ಅವಳಿಗೆ ತನ್ನ ಕಾಲರ್ ಟ್ಯೂನ್ ಬಗ್ಗೆ ತು೦ಬಾ ಹೆಮ್ಮೆ ಎನಿಸಿತು. “ಯಾವ ಮೋಹನ ಮುರಳಿ ಕರೆಯಿತೋ....” ತು೦ಬಾ ಜನ ಇಷ್ಟ ಪಟ್ಟಿದ್ದರು ಆ ಕಾಲರ್ ಟ್ಯೂನ್. HR ಹತ್ತಿರ ಮೊದಲ ಇ೦ಪ್ರೆಷನ್ ಚೆನ್ನಾಗಿ ಬ೦ದಿದೆ ಈ ಕಾಲರ್ ಟ್ಯೂನಿನಿ೦ದಾಗಿ ಅ೦ತ ಅನಿಸಿತು. ನಾಳೆ ಇ೦ಟರ್ವ್ಯೂನಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅದಕ್ಕೆ ಹೇಗೆ ಉತ್ತರ ಕೊಡುವುದು ಎ೦ದು ಯೋಚಿಸತೊಡಗಿದಳು ಮನಸ್ಸಿನಲ್ಲೇ.


*******************