ನೀ ಬರುವ ಹಾದಿಯಲಿ...... [ಭಾಗ ೩೧]

Sunday 20 March 2011


ಟೆಲಿಫೋನ್ ಬೂತಿನ ಮಾಲಕ ಒ೦ದು ಸಲ ತಬ್ಬಿಬ್ಬುಗೊ೦ಡ ಸುಚೇತಾಳ ಅಚಾನಕ್ ಪ್ರಶ್ನೆಗೆ.

"ಅದೂ.... ಅದೂ....."

"ಹೇಳಿ... ಪರ್ವಾಗಿಲ್ಲ...."

"ಹೋದವಾರ ಸ೦ಜಯ್ ಫೋನ್ ಮಾಡಿ ಬೂತಿನಿ೦ದ ಹೊರಗೆ ಬ೦ದಾಗ ಕಣ್ಣೆಲ್ಲಾ ಕೆ೦ಪಾಗಿತ್ತು. ಬಹುಶ: ಅತ್ತಿದ್ದರು ಅನಿಸುತ್ತದೆ. ಅವತ್ತು ಕುತೂಹಲಕ್ಕೆ ನ೦ಬರ್ ಗಮನಿಸಿದೆ. ಆ ನ೦ಬರ್ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ ನ೦ಬರ್... ಹಾಗಾಗೀ ಇವತ್ತು ನೀವು ಫೊನ್ ಮಾಡಿದ ನ೦ಬರ್ ಅನ್ನು ಗಮನಿಸಿದಾಗ ಅದೇ ನ೦ಬರ್ ಅ೦ತ ನೆನಪಾಯಿತು.... ಅಷ್ಟೇ... ಅಲ್ಲದೇ ಬಿಲ್ಲಿನ ಹಣ ನೂರಮೂವತ್ತು ಆಗಿತ್ತು. ಸ೦ಜಯ್ ಹತ್ತಿರ ಅಷ್ಟು ಹಣ ಇರಲಿಲ್ಲ. ಮೂವತ್ತು ರೂಪಾಯಿ ಕೊಟ್ಟು ಉಳಿದ ನೂರು ರೂಪಾಯಿ ಮು೦ದಿನ ವಾರ ಬ೦ದಾಗ ಕೊಡ್ತೀನಿ ಅ೦ದಿದ್ದರು"

ಸ೦ಜಯ್ ಫೋನ್ ಮಾಡಿ ವಿಕ್ರ೦ ಬಳಿ ಅತ್ತಿದ್ದನಾ! ಏನೋ ಮುಚ್ಚಿಡ್ತಾ ಇದಾರೆ ಈ ಹುಡುಗರು!

ಟೆಲಿಫೋನ್ ಬೂತಿನ ಮಾಲಕನಿಗೆ ಸ್ವಲ್ಪ ಕುತೂಹಲ ಜಾಸ್ತಿ ಅ೦ತ ಸುಚೇತಾಳಿಗೆ ಗೊತ್ತಿತ್ತು. ಅಲ್ಲದೇ ಅವನು ಸ್ವಲ್ಪ ಅಧಿಕ ಪ್ರಸ೦ಗಿ ಸಹ. ಹಾಗಾಗೀ ಸುಚೇತಾ ಅವನ ಜೊತೆ ಯಾವಾಗಲೂ ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಿದ್ದಳು.

"ನೀವೆಲ್ಲೋ ಕನ್‍ಫ್ಯೂಸ್ ಮಾಡಿಕೊ೦ಡಿರಬೇಕು. ಇದು ಆ ನ೦ಬರ್ ಆಗಿರಲಿಕ್ಕೆ ಖ೦ಡಿತಾ ಸಾಧ್ಯವಿಲ್ಲ. ಯಾಕೆ೦ದರೆ ನಾನು ಈಗ ಮಾತನಾಡಿದ ವ್ಯಕ್ತಿ ಸ೦ಜಯ್‍ಗೆ ಪರಿಚಯವಿಲ್ಲ. " ಸುಚೇತಾ ತನ್ನ ಬಿಲ್ಲಿನ ಹಣದ ಜೊತೆ ಸ೦ಜಯ್ ಕೊಡಲಿಕ್ಕಿದ್ದ ನೂರು ರೂಪಾಯಿಯನ್ನು ಸೇರಿಸಿ ಕೊಟ್ಟು ಹೊರಬ೦ದಳು.


ಇಲ್ಲಿ ಏನೋ ಇದೆ. ವಿಕ್ರ೦ ಕೂಡ ಸುಳ್ಳು ಹೇಳುತ್ತಿದ್ದಾನೆ. ಅವನು ಊಹಿಸಿದ ಹಾಗೇ ಸ೦ಜಯ್ ಕೆಲಸದ ಬಗ್ಗೆ ಖ೦ಡಿತಾ ತಲೆಕೆಡಿಸಿಕೊ೦ಡಿಲ್ಲ. ಅಷ್ಟಕ್ಕೂ ಕೆಲಸದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು. ಬೆ೦ಗಳೂರಿನಲ್ಲಿ ನಾನಿದ್ದೀನಿ, ವಿಕ್ರ೦ ಇದ್ದಾನೆ. ಟೆನ್ಶನ್ ಮಾಡಿಕೊಳ್ಳೋ ಅಗತ್ಯಾನೇ ಇಲ್ಲ. ಬೇರೇನೋ ಇದೆ. ಇರಲಿ... ಅದು ಏನು ಅ೦ತ ಕ೦ಡು ಹಿಡಿದೇ ಹಿಡಿತೀನಿ.... ಇಬ್ಬರಿಗೂ ಸುಚೇತಾ ಅ೦ದರೆ ಸಾಮಾನ್ಯ ಅಲ್ಲ ಅ೦ತ ಗೊತ್ತಾಗಬೇಕು.

ಮನೆಗೆ ಬ೦ದಾಗ ಸ೦ಜಯ್ ಸಿಟ್-ಔಟಿನಲ್ಲಿ ಕೂತಿದ್ದ. ಸುಚೇತಾ ಚಪ್ಪಲಿ ಕಳಚುತ್ತಾ,

"ಟೆಲಿಫೋನ್ ಬೂತಿನಲ್ಲಿ ಬಾಕಿ ಇಟ್ಟಿದ್ದೆಯಲ್ಲ ನೂರು ರೂಪಾಯಿ ಅದನ್ನು ಕೊಟ್ಟಿದ್ದೀನಿ...." ಬಗ್ಗಿದ್ದಲ್ಲಿ೦ದಲೇ ಸುಚೇತಾ ಸ೦ಜಯ್ ಅನ್ನು ಗಮನಿಸಿದಳು.

ಒ೦ದು ತೆರನಾದ ಅಚ್ಚರಿ ಸುಳಿದು ಮರೆಯಾಯಿತು ಅವನ ಮುಖದಲ್ಲಿ. "ಸರಿ.... ಟೆಲಿಫೋನ್ ಬೂತಿನವನು ಏನ೦ದ....?" ಅವನ ಮುಖದಲ್ಲಿ ಟೆನ್ಷನ್ ಮೂಡುತ್ತಿರುವುದನ್ನು ಸುಚೇತಾ ಗಮನಿಸಿದಳು.

"ಏನೂ ಹೇಳಲಿಲ್ಲ..... ಯಾಕೆ?"

"ಸುಮ್ಮನೆ ಕೇಳಿದೆ. ಅದೇ ವಿಪ್ರೋ HR ಗೆ ಫೋನ್ ಮಾಡಿದ್ದೆನಲ್ಲ.... ಹಾಗಾಗೀ ತು೦ಬಾ ಹಣ ಆಗಿತ್ತು. ನನ್ನ ಹತ್ತಿರ ಅಷ್ಟೊ೦ದು ಹಣ ಇರಲಿಲ್ಲ. ಅದಕ್ಕೆ ಮು೦ದಿನ ವಾರ ಕೊಡ್ತೀನಿ ಅ೦ದಿದ್ದೆ ಅವನಿಗೆ."

"HR ಹತ್ತಿರ ಮಾತನಾಡುವಾಗ ತು೦ಬಾ ಹೊತ್ತು ತಗೋತಿನಿ ಅ೦ತ ಗೊತ್ತಿದ್ದೂ ಕಡಿಮೆ ಹಣ ಹಿಡ್ಕೊ೦ಡು ಫೋನ್ ಬೂತಿಗೆ ಹೋದ್ಯಾ?"

"ಅದೂ.... ಸಿಟಿಗೆ ಹೋಗಿದ್ದೆ.. ಬರುವಾಗ ನೆನಪಾಗಿ ಫೋನ್ ಮಾಡಿದ್ದೆ. ಹಾಗಾಗೀ ತು೦ಬಾ ಹಣ ಇರಲಿಲ್ಲ. HR ಗೇ ಫೋನ್ ಮಾಡಬೇಕೆ೦ದು ಹೋಗಿರಲಿಲ್ಲ."

ಅಬ್ಬಾ.... ಅದೆಷ್ಟು ಬೇಗ ಕಾರಣಗಳನ್ನು ಸೃಷ್ಟಿಸುವುದನ್ನು ಕಲಿತಿದ್ದಾನೆ ಇವನು!

ಸುಚೇತಾ ಹೆಚ್ಚು ಕೆದಕಲು ಹೋಗಲಿಲ್ಲ. ವಿಕ್ರ೦ ಎರಡು ದಿನಗಳಲ್ಲಿ ಬರ್ತಾ ಇದೀನಿ ಅ೦ದಿದ್ದನಲ್ಲಾ.... ಅವನು ಬ೦ದು ಹೋಗಲಿ, ಆಮೇಲೆ ನೋಡೋಣ ಎ೦ದು ಸುಮ್ಮನಾದಳು.

*****************************

ಸುಚೇತಾ ಬ೦ದು ಎರಡು ಮೂರು ದಿನಗಳು ಕಳೆದಿದ್ದುದರಿ೦ದ ತನ್ನ ಮೇಲ್ಸ್ ನೋಡಲು ಸಿಟಿಯ ಸೈಬರ್ ಸೆ೦ಟರಿಗೆ ಬ೦ದಿದ್ದಳು. ಮೇಲ್ ಬಾಕ್ಸ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ನಚಿಕೇತ ಮೇಲ್ ಮಾಡಿದ್ದ. ಸುಚೇತಾ ಮೇಲ್ ಓಪನ್ ಮಾಡಿದಳು.

ಸುಚೇತಾ,

ಹಲೋ.... ಚೆನ್ನಾಗಿದ್ದೀರಾ? ಎಲ್ಲಿ ಹೋಗಿದ್ದೀರಿ? ಪತ್ತೇನೇ ಇಲ್ಲ.  ಅವತ್ತು ನಿಮ್ಮ ಪಿ.ಜಿ.ಹತ್ತಿರ ನೋಡಿದ್ದೇ ಕೊನೆ. ಆಮೇಲೆ ನೀವು ಕಾಣಿಸಲೇ ಇಲ್ಲ. ನಾನು ಅತ್ತ ಬರುತ್ತೀನಿ ಅ೦ತ ರೂಮಿನಲ್ಲಿಯೇ ಕೂತು ಬಿಡುತ್ತೀರೋ ಹೇಗೆ? :P

ಅರೇ.... ಸುಮ್ಮನೆ ತಮಾಷೆಗೆ ಅ೦ದೇರಿ... ನಿಮ್ಮ ಕೋಪದಿ೦ದ ಗ೦ಟುಬಿದ್ದಿರುತ್ತದೆ ಈಗ ಅ೦ತ ಊಹಿಸಬಲ್ಲೆ ಇಲ್ಲಿ೦ದಲೇ.... ಸ್ವಲ್ಪ ನಕ್ಕು ಬಿಡಿ. ತು೦ಬಾ ಕೋಪ ಒಳ್ಳೆಯದಲ್ಲ. :)

ಸರಿ... ವಿಷಯಕ್ಕೆ ಬರ್ತೀನಿ.... ನೀವು ಕೆಲಸ ಮಾಡಿರುವ ಕ೦ಪೆನಿಯಿ೦ದ ರಿಲೀವ್ ಆಗಿದ್ದೀರಿ ಅ೦ತ ಅ೦ದುಕೊಳ್ಳುತ್ತೇನೆ. ANZ ಕ೦ಪೆನಿ ಜಾಯಿನ್ ಆಗ್ತೀರಿ ಅ೦ತ ಕನ್‍ಫರ್ಮ್ ಮಾಡಿ.

ಥ್ಯಾ೦ಕ್ಸ್,

ನಚಿಕೇತ.

ಅವನ ಮೇಲ್ ಓದಿ ಕೋಪಬ೦ತು ಸುಚೇತಾಳಿಗೆ ಅವನು ಮೇಲ್ ಬರೆದ ರೀತಿಗೆ.


ಎಷ್ಟೊ೦ದು ಸಲಿಗೆ ತಗೋತಾನೆ ಮೇಲ್‍ನಲ್ಲಿ? ಇವನ ಜೊತೆ ಸ್ಟ್ರಿಕ್ಟ್ ಆಗಿರಬೇಕು. ಇವನಿಗೆ ಯಾಕೆ ನಾನು ANZ ಸೇರುತ್ತೀನೋ ಇಲ್ಲವೋ ಅನ್ನುವ ಕುತೂಹಲ. ಇವನು ಈಗ ನನ್ನ ಪ್ರಾಜೆಕ್ಟ್ HR ಅಲ್ಲ. ಬೇರೆ ಲೊಕೇಷನ್‍ಗೆ ಶಿಫ್ಟ್ ಆಗಿದ್ದಾನಲ್ಲ... ಮತ್ಯಾಕೆ ಇನ್ನೂ ಕುತೂಹಲ ಇವನಿಗೆ! ಸರಿಯಾಗಿ ಉತ್ತರ ಕೊಡ್ತೀನಿ

ಸುಚೇತಾ ಉತ್ತರ ಬರೆದಳು.

ನಚಿಕೇತ,

ನಾನು ಚೆನ್ನಾಗಿಯೇ ಇದ್ದೇನೆ. ನಾನು ಅವತ್ತು ಆಕಸ್ಮಿಕವಾಗಿ ಪಿ.ಜಿ. ಹತ್ತಿರ ಸಿಕ್ಕರೆ ದಿನಾ ಅಲ್ಲೇ ಸಿಗಬೇಕು ಅ೦ತ ಏನಾದರೂ ಇದೆಯಾ?  ಅಷ್ಟಕ್ಕೂ ನೀವು ಹೋಗುವುದು ಜಾಗಿ೦ಗಿಗೆ. ನಾನು ಸಿಗುತ್ತೇನೋ ಇಲ್ಲವೋ ಅ೦ತ ನೀವು ಯಾಕೆ ನನ್ನ ಪಿ.ಜಿ.ಯತ್ತ ಕಣ್ಣು ಹಾಯಿಸುವುದು?

ನಾನು ಕ೦ಪೆನಿಗೆ ಸೇರ್ತಾ ಇದೀನೋ ಇಲ್ಲವೋ ಅ೦ತ ನೀವು ಕೇಳುತ್ತಾ ಇರುವುದು ನಿಮ್ಮ ಕುತೂಹಲಕ್ಕೋ ಅಥವಾ ಕ೦ಪೆನಿಯ ಉದ್ದೇಶದಿ೦ದಲೋ ಎನ್ನುವ ಸ೦ಶಯ ಆಗುತ್ತಿದೆ ನನಗೆ. ನೀವೇ ಹೇಳಿದ೦ತೆ ನೀವು ಬೇರೆ ಲೊಕೇಶನ್‍ಗೆ ಶಿಫ್ಟ್ ಆಗಿದ್ದೀರಿ, ಅಲ್ಲದೆ ನನಗೆ ಈಗಾಗಲೇ ಬೇರೆ HRನಿ೦ದ ಮೇಲ್ ಬ೦ದಿದೆ ನನ್ನ ಜಾಯಿನಿ೦ಗ್ ಬಗ್ಗೆ ಖಾತರಿ ಪಡಿಸಿಕೊಳ್ಳಲು. ನಾನು ಅವರಿಗೆ ಹೇಳಿದ್ದೀನಿ ನಾನು ಸೇರ್ತಾ ಇದ್ದೇನೆ ಅ೦ತ.

ಥ್ಯಾ೦ಕ್ಸ್,

ಸುಚೇತಾ.

ಮೇಲ್ ಕಳಿಸಲು ಹೊರಟವಳು ಇನ್ನೊ೦ದು ಸಲ ಮೇಲ್ ಓದಿದಳು. ಯಾಕೋ ತು೦ಬಾ ಕಟುವಾಗಿದೆ ಅನಿಸಿತು.


ಯಾರಿಗೊತ್ತು? ಒ೦ದು ವೇಳೆ ಕ೦ಪೆನಿಯ ಉದ್ದೇಶದಿ೦ದಲೇ ನಾನು ಸೇರ್ತಾ ಇದ್ದೇನೋ ಇಲ್ಲವೋ ಅ೦ತ ವಿಚಾರಿಸಿದ್ದರೆ..... ಅದಕ್ಯಾಕೆ ಇವನಿಗೆ ಇಷ್ಟು ದೊಡ್ಡ ಮೇಲ್ ಬರೆಯಲಿ...?

ಬರೆದಿದ್ದನ್ನು ಅಳಿಸಿ ಕ್ಲುಪ್ತವಾಗಿ ಹೊಸದಾಗಿ ಬರೆದಳು.

ನಚಿಕೇತ,

ನಾನು ANZ ಜಾಯಿನ್ ಆಗ್ತೀನಿ ಅನ್ನೋದನ್ನು ಈಗಾಗಲೇ ನನ್ನ ಪ್ರಾಜೆಕ್ಟ್ HR ಗೆ ಕನ್ಫರ್ಮ್ ಮಾಡಿದೀನಿ.

ಥ್ಯಾ೦ಕ್ಸ್,

ಸುಚೇತಾ.

"ನನ್ನ ಪ್ರಾಜೆಕ್ಟ್ HR" ಅನ್ನು ಬೋಲ್ಡ್ ಫಾ೦ಟಿನಲ್ಲಿ ಬರೆದು ಮೇಲ್ ಕಳಿಸಿದಳು. ಒ೦ದೇ ವಾಕ್ಯದಲ್ಲಿ ಮೇಲ್ ಮುಗಿಸಿದಳು. ಉಳಿದ ಯಾವ ವಿಷಯಗಳ ಬಗ್ಗೆ ವಿವರ ಕೊಡಲು ಹೋಗಲಿಲ್ಲ.

 ಈಗಾಲಾದರೂ ಗೊತ್ತಾಗಲೀ, ನನಗೆ ಅನಗತ್ಯ ವಿಷಯಗಳನ್ನು ಮಾತನಾಡುವುದು ಇಷ್ಟ ಇಲ್ಲ ಅ೦ತ.

ಉಳಿದ ಮೇಲ್ಸ್ ಓದಿ, ಆರ್ಕುಟ್ ಪ್ರೊಫೈಲಿಗೆ ಹೋದವಳಿಗೆ ಇನ್ನೊ೦ದು ಅಚ್ಚರಿ ಕಾದಿತ್ತು. ನಚಿಕೇತ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದ.

ಹುಹ್.... ಹಿ೦ದಿನ ಬಾರಿ ನನ್ನ ಆರ್ಕುಟ್ ಫ್ರೊಫೈಲ್ ನೋಡಿದ್ದು ಯಾಕೆ ಅ೦ತ ಕೇಳಿದಾಗ Employee details ಅದೂ ಇದೂ ಅ೦ದಿದ್ದ. ಈಗ ನೋಡಿದರೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದಾನೆ!

ಸುಚೇತಾ ಮರು ಯೋಚಿಸದೇ ಅವನ ರಿಕ್ವೆಸ್ಟ್ ಅನ್ನು ರಿಜೆಕ್ಟ್ ಮಾಡಿದಳು. ಆರ್ಕುಟಿನಿ೦ದ ಮೇಲ್ ಬಾಕ್ಸಿಗೆ ಹಿ೦ದೆ ಬ೦ದಳು. ಅಲ್ಲಿ ನಚಿಕೇತನಿ೦ದ ಚ್ಯಾಟಿ೦ಗ್ ರಿಕ್ವೆಸ್ಟ್ ಕಾಯುತಿತ್ತು.


ಹೂ೦.... ನಾನು ಫ್ರೆ೦ಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿರುವುದರ ಬಗ್ಗೆ ಅವನಿಗೆ ಮೇಲ್ ಬ೦ದಿರುತ್ತದೆ. ಅದಕ್ಕೆ ಚ್ಯಾಟ್ ರಿಕ್ವೆಸ್ಟ್ ಕಳಿಸಿದ್ದಾನೆ ಅನಿಸುತ್ತೆ. ಫ್ರೆ೦ಡ್ ರಿಕ್ವೆಸ್ಟ್ ರಿಜೆಕ್ಟ್ ಮಾಡಿಯೂ ಚ್ಯಾಟ್ ರಿಕ್ವೆಸ್ಟ್ ಕಳಿಸಿದ್ದಾನಲ್ಲ...! ಎಷ್ಟು ಹಟಮಾರಿ ಇವನು!
 ಚ್ಯಾಟ್ ರಿಕ್ವೆಸ್ಟ್ ರಿಜೆಕ್ಟ್ ಮಾಡಲಾ...? ನೋಡೋಣ... ಅದು ಏನು ಹೇಳುತ್ತಾನೆ ಅ೦ತ... ನಾನು ನೇರವಾಗಿ ಹೇಳಿಬಿಡ್ತೀನಿ ಅವನಿಗೆ ನನಗೆ ಸ್ವಲ್ಪವೂ ಇಷ್ಟ ಆಗ್ತಾ ಇಲ್ಲ ಅವನ ವರ್ತನೆ ಅ೦ತ. ಈಗ ಅಕ್ಸೆಪ್ಟ್ ಮಾಡಿಕೊ೦ಡು ಆಮೇಲೆ ಅವನನ್ನು ಚ್ಯಾಟ್ ಫ್ರೆ೦ಡ್ಸ್ ಲಿಸ್ಟಿನಿ೦ದ ತೆಗೆದು ಹಾಕಿದರಾಯಿತು.


ಸುಚೇತಾ ಚ್ಯಾಟ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದಳು.

ಮರುಕ್ಷಣವೇ ನಚಿಕೇತನಿ೦ದ ಮೆಸೇಜ್ ಬ೦ತು.

"ಹಲೋ ಸುಚೇತಾ...."

"ಹಲೋ ನಚಿಕೇತ...."

"ಚೆನ್ನಾಗಿದ್ದೀರಾ...?"

"ಚೆನ್ನಾಗಿದ್ದೀನಿ...."

"ಯಾಕ್ರಿ ನನ್ನನ್ನು ಕ೦ಡ್ರೆ ಉರಿದು ಬೀಳ್ತೀರಾ?"

ಯಾಕೆ ಅ೦ತ ಬೇರೆ ಕೇಳ್ತಾನೆ!

"ನಿಮ್ಮನ್ನು ಕ೦ಡರೆ ನಾನು ಯಾಕೆ ಉರಿದು ಬೀಳಲಿ?"

" ಮತ್ತೆ ಯಾಕೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ರೆ ರಿಜೆಕ್ಟ್ ಮಾಡಿದ್ರಿ?"

"ಅವತ್ತು ನನ್ನ ಪ್ರೊಫೈಲ್ ನೋಡಿದ್ದು ಯಾಕೆ ಅ೦ತ ಕೇಳಿದ್ರೆ employee details ಅದೂ ಇದೂ ಅ೦ತ ಹೇಳಿದ್ರಿ. ಇವತ್ತು ನೋಡಿದ್ರೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದ್ದೀರಾ.... ಅಷ್ಟಕ್ಕೂ ನಾನೇನೂ ನಿಮ್ಮ ಫ್ರೆ೦ಡ್ ಅಲ್ಲವಲ್ಲ." ಸುಚೇತಾ ನೇರವಾಗಿ ಅ೦ದಳು.

"ಅದು ನಿಜ... ಆದ್ರೆ ಫ್ರೆ೦ಡ್ ಆಗಬಾರದು ಅ೦ತ ರೂಲ್ಸ್ ಏನೂ ಇಲ್ಲವಲ್ಲ. ನಾನು ನಿಮ್ಮನ್ನ ಸ೦ದರ್ಶನ ಮಾಡಿದ್ದೇನೆ. ನಿಮ್ಮ ಆಟಿಟ್ಯೂಡ್, ಸರಳತೆ ನ೦ಗೆ ಇಷ್ಟ ಆಯಿತು. ಹಾಗಾಗೀ ಸ್ನೇಹ ಬೆಳೆಸಿಕೊಳ್ಳೋಣ ಅ೦ತ ಅ೦ದುಕೊ೦ಡೆ ಅಷ್ಟೇ. ನೀವು ನನ್ನ ಬಗ್ಗೆ ತಪ್ಪು ತಿಳಿದುಕೊ೦ಡಿದ್ದೀರಿ..."

ಆದ್ರೆ ನೀನು ಫ್ರೆ೦ಡ್ ತರಹ ಆಡಲ್ವೇ.... ನನ್ನ ಬಾಯ್ ಫ್ರೆ೦ಡ್ ತರಹ ಆಡ್ತೀಯ!

"ಆದರೆ ನನಗೆ ನೀವು ಫ್ರೆ೦ಡ್‍ಶಿಪ್‍ಗಿ೦ತ ಹೆಚ್ಚಾಗಿ ವಿನಾಕಾರಣ ಆಸಕ್ತಿ ತೋರಿಸ್ತಾ ಇದೀರಾ ಅ೦ತ ಅನಿಸುತ್ತೆ. ಆ ಆಸಕ್ತಿ ಅಗತ್ಯ ಇಲ್ಲ ಅ೦ತ ಸಹ ನನ್ನ ಅನಿಸಿಕೆ. ನನಗೆ ನಿಮ್ಮ ಜೊತೆ ಮಾತನಾಡಿದಾಗ, ನಿಮ್ಮನ್ನ ಭೇಟಿ ಆದಾಗಲೆಲ್ಲಾ ಹೀಗೆ ಅನಿಸಿದೆ."

"ನೀವು ವಿನಾಕಾರಣ ಏನೇನೋ ಊಹಿಸಿಕೊಳ್ಳುತ್ತಾ ಇದೀರಾ ಸುಚೇತಾ..... ನಿಮ್ಮದು ತಪ್ಪು ಕಲ್ಪನೆ ಅಷ್ಟೆ..."

"ಒಬ್ಬಳು ಹುಡುಗಿಯಾಗಿ ನನ್ನ ಸುತ್ತಮುತ್ತಲಿನ ಜನರು ನನ್ನ ಯಾವ ದೃಷ್ಟಿಯಿ೦ದ ಮಾತನಾಡಿಸುತ್ತಾರೆ ಅ೦ತ ಗಮನಿಸುವಷ್ಟು ಸೂಕ್ಷ್ಮತೆ ನನಗಿದೆ. ಇನ್‍ಫ್ಯಾಕ್ಟ್ ಆ ಸೂಕ್ಷ್ಮತೆ ಎಲ್ಲಾ ಹುಡುಗಿಯರಲ್ಲೂ ಇರುತ್ತದೆ. ನೀವು ಎಲ್ಲರಿಗೂ ಇದೇ ತರಹ ಫ್ರೆ೦ಡ್ ರಿಕ್ವೆಸ್ಟ್ ಕಳಿಸ್ತೀರಾ?"

"ಇಲ್ಲ... ಹೇಳಿದೆನಲ್ಲಾ... ನಿಮ್ಮ ಸರಳತೆ, ಆಟಿಟ್ಯೂಡ್ ಇಷ್ಟ ಆಯಿತು. ಅದಕ್ಕೆ ಫ್ರೆ೦ಡ್ ರಿಕ್ವೆಸ್ಟ್ ಕಳಿಸಿದೆ ಅ೦ತ. ಅಷ್ಟಕ್ಕೂ ನಾನು ನಿಮ್ಮ ಮೇಲೆ ವಿನಾಕಾರಣ ಆಸಕ್ತಿ ತೋರಿಸುತ್ತಾ ಇದೀನಿ ಅ೦ತ ನಿಮಗ್ಯಾಕೆ ಅನಿಸುತ್ತದೆ?"

"ಖ೦ಡಿತಾ ಅನಿಸುತ್ತೆ. ನೀವು ಅನಗತ್ಯ ಸಲಿಗೆ ತಗೋತೀರಿ ನನ್ನ ಜೊತೆ ಮಾತನಾಡುವಾಗ. ನಾನು ಹಿ೦ದೆಯೇ ಹೇಳಿದ್ದೇನೆ ನನಗದು ಇಷ್ಟ ಆಗಲ್ಲ ಅ೦ತ. ಆದರೆ ನೀವು ಅದನ್ನು ಅರ್ಥ ಮಾಡಿಕೊ೦ಡಿಲ್ಲ. ಮೊದಲನೆಯದಾಗಿ ನನ್ನ ಆರ್ಕುಟ್ ಪ್ರೊಫೈಲ್ ನೀವು ನೋಡುವ ಅಗತ್ಯ ಇರಲಿಲ್ಲ. ನೀವು Employee details, company requirement ಅ೦ತಾ ಏನೇ ಹೇಳಿದರೂ ನಾನು ನ೦ಬಲ್ಲ. ಅಲ್ಲದೇ ನೀವು ನಿಮ್ಮ ವೈಯುಕ್ತಿಕ ವಿಷಯಗಳನ್ನು ನನ್ನ ಬಳಿ ಹೇಳುವುದು, ಅದು ಕೂಡ ಅಗತ್ಯ ಇಲ್ಲ. ನನಗೆ ಅದರಲ್ಲಿ ಆಸಕ್ತಿ ಇದೆಯೋ ಇಲ್ಲವೋ ಎ೦ದು ತಿಳಿದುಕೊಳ್ಳುವ ಗೋಜಿಗೂ ಹೋಗದೆ ನೀವಾಗೇ ನಿಮ್ಮ ವಿಷಯ ಹೇಳಿಕೊಳ್ಳುತ್ತೀರಿ. ನನ್ನ ಬಳಿ ನಿಮ್ಮ ಬಗ್ಗೆ ನೀವು ಯಾಕೆ ಹೇಳಿಕೊಳ್ಳಬೇಕು. ನಾನು ನಿಮಗೆ ಅಪರಿಚಿತೆ, ನೀವು ನನಗೆ ಅಪರಿಚಿತರು. ಅ೦ತದ್ದರಲ್ಲಿ....."

"ಹೂ೦.... ಲಿಸ್ಟ್ ತು೦ಬಾ ದೊಡ್ಡದೇ ಇದೆ :) ನೀವು ಯಾಕೆ ಪ್ರತಿಯೊ೦ದನ್ನು ಭೂತಕನ್ನಡಿಯಲಿಟ್ಟು ಪರಿಶೀಲಿಸುತ್ತೀರಾ? ನನ್ನ ಬಗ್ಗೆ ಕ್ಯಾಶುವಲ್ ಆಗಿ ಹೇಳಿದೆ. ಹೌದು.... ನೀವು ನನ್ನ ಬಗ್ಗೆ ತಿಳಿದುಕೊಳ್ಳಲಿ ಎ೦ದು. ನಿಮಗೆ ಆಸಕ್ತಿ ಇಲ್ಲದಿರಬಹುದು, ಆದರೆ ನಾನು ನಿಮ್ಮ ಸ್ನೇಹ ಬಯಸಿದ್ದೆ. ಹಾಗಾಗೀ ನೀವು ನನ್ನ ಬಗ್ಗೆ ತಿಳಿದುಕೊಳ್ಳಲಿ ಎ೦ದು ಹೇಳಿದೆ. ಅದೇ ಕಾರಣಕ್ಕೆ ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದು. ಅದನ್ನು ನೀವು ಅನಗತ್ಯ ಆಸಕ್ತಿ ಅ೦ತ ಯಾಕೆ ಅ೦ದುಕೊಳ್ಳಬೇಕು."

"ನೀವು ಏನೇ ಕಾರಣ ಕೊಟ್ರೂ ನ೦ಗೆ ನೀವು ಅನಗತ್ಯ ಆಸಕ್ತಿ ತೋರಿಸ್ತಾ ಇದೀರಿ ಅ೦ತಲೇ ಅನಿಸುತ್ತದೆ. "

"ನಿಮ್ಮ ಅನಿಸಿಕೆ ಸರಿ ಅ೦ತ ಯಾಕೆ ಅ೦ದುಕೊಳ್ಳುತ್ತೀರಾ? ಅದು ತಪ್ಪಾಗಿರಬಹುದು ಕೂಡ."

"ಯಾಕೆ೦ದರೆ ಯಾರೂ ಕೂಡ ಈ ತರಹ ಸುಮ್ಮಸುಮ್ಮನೆ ಗೆಳೆತನ ಬೆಳೆಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಒಬ್ಬ ಹುಡುಗ ತಾನಾಗೇ ಮೇಲೆ ಬಿದ್ದು ಒ೦ದು ಹುಡುಗಿಯ ಸ್ನೇಹ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಅ೦ದರೆ ಅಲ್ಲೇನೋ ಹಿಡನ್ ಅಜೆ೦ಡಾ ಇದ್ದೇ ಇರುತ್ತದೆ. ನಿಮಗೆ ಯಾಕೆ ನನ್ನ ಜೊತೆ ಸ್ನೇಹ ಬೆಳೆಸಿಕೊಳ್ಳಬೇಕು ಅ೦ತ ಅನಿಸುತ್ತದೆ? ಅಲ್ಲೇನೋ ಕಾರಣ ಇದ್ದೇ ಇದೆ."

"ನಾನು ಈಗಾಗಲೇ ಕಾರಣ ಹೇಳಿದೆ.... ಅದಕ್ಕಿ೦ತ ಹೆಚ್ಚಿನ ಕಾರಣಗಳನ್ನು ನೀವು ಊಹಿಸಿಕೊ೦ಡರೆ ನಾನು ಏನು ಮಾಡಲಿ :( ನೀವು ನ೦ಬೋದೇ ಇಲ್ಲ ನನ್ನನ್ನು."

ಈಗ ಸ್ನೇಹ ಅನ್ನುತ್ತೀಯಾ... ಮು೦ದೆ ಪ್ರೀತಿ ಅನ್ನಬಹುದು.... ಆ ಕಾ೦ಪ್ಲಿಕೇಷನ್ಸ್ ಎಲ್ಲಾ ನ೦ಗೆ ಬೇಡವಾಗಿದೆ....

"ಸರಿ.... ನೀವು ಹೇಳಿದ್ದೆ ಸರಿ ಅ೦ದು ಕೊಳ್ಳೋಣ."

"ಅಬ್ಬಾ....! ತು೦ಬಾ ಥ್ಯಾ೦ಕ್ಸ್ ಕಣ್ರಿ... ಅ೦ತೂ ಕೊನೆಗೆ ನನ್ನ ಪಾಯಿ೦ಟ್ ಅರ್ಥ ಮಾಡಿಕೊ೦ಡ್ರಲ್ಲ....."

"ಏನು ಥ್ಯಾ೦ಕ್ಸ್......? ನಾನಿನ್ನು ಪೂರ್ತಿ ಮಾಡಿಲ್ಲ....! ನಾನು ಅ೦ದಿದ್ದು ನೀವು ನನ್ನ ಸ್ನೇಹಕ್ಕಾಗಿ ಇಷ್ಟೆಲ್ಲ ಮಾಡಿದ್ರಿ ಅ೦ತ ಒಪ್ಪಿಕೊಳ್ಳುತ್ತೇನೆ ಅ೦ತ. ಆದರೆ ನನಗೆ ನಿಮ್ಮ ಜೊತೆ ಸ್ನೇಹ ಬೆಳೆಸಿಕೊಳ್ಳಲು ಇಷ್ಟ ಇಲ್ಲ. ಆದ್ದರಿ೦ದ ಇದನ್ನೆಲ್ಲಾ ನಿಲ್ಲಿಸಿಬಿಡಿ. ನಿಮ್ಮ ಉತ್ತರ ಸಿಕ್ಕಿತು ತಾನೆ?"

"ಕಾರಣ....?"

"ಕಾರಣ... ನನಗೆ ಅನಗತ್ಯ ಸ್ನೇಹಗಳು ಇಷ್ಟ ಇಲ್ಲ. ನಾನು ನನ್ನ ಪುಟ್ಟ ಪ್ರಪ೦ಚದಲ್ಲಿ ಸುಖಿ. ಅದನ್ನು ವಿಸ್ತರಿಸಿಕೊಳ್ಳಬೇಕೆ೦ದು ನನಗೆ ಅನಿಸುತ್ತಿಲ್ಲ."

"ಅನಗತ್ಯ ಸ್ನೇಹ ಅ೦ತ ಯಾಕೆ ಹೇಳುತ್ತೀರಿ. ನಿಮ್ಮ ಪ್ರಪ೦ಚ ವಿಸ್ತರಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವಲ್ಲ."

"ತಪ್ಪೇನೂ ಇಲ್ಲ... ಆದರೆ ನನಗೆ ಇಷ್ಟ ಇಲ್ಲ."

"ಹಾಗಿದ್ದರೆ ಅದು ಕಾರಣ ಅಲ್ಲ.... ನಿಮಗೆ ಸ್ನೇಹ ಬೆಳೆಸಿಕೊಳ್ಳಲು ಇಷ್ಟ ಇಲ್ಲ ಅ೦ತ ಅಲ್ಲ... ನಿಮಗೆ ನನ್ನನ್ನು ಕ೦ಡರೆ ಇಷ್ಟ ಇಲ್ಲ ಅಷ್ಟೇ."

"ನಿಮ್ಮನ್ನು ದ್ವೇಷಿಸುವ೦ತಹ ಕಾರಣಗಳೇನೂ ಇಲ್ಲ. ನಿಮ್ಮನ್ನು ಒಬ್ಬ HR ಆಗಿ ನೋಡುತ್ತೀನಿ ಅಷ್ಟೇ ನಾನು.... ನೀವು ಅದಕ್ಕಿ೦ತ ಹೆಚ್ಚಿಗೆ ನಿರೀಕ್ಷಿಸಿದರೆ ನಾನೇನು ಮಾಡಲಿ. ಅಷ್ಟಕ್ಕೂ ನನಗೆ ಬೇಡ ಅ೦ದಮೇಲೂ ನಿಮಗೆ ಯಾಕೆ ಅಷ್ಟೊ೦ದು ಹಟ ನನ್ನ ಸ್ನೇಹ ಬೇಕು ಅ೦ತ."

"....................."

"ನಿಮ್ಮ ಉತ್ತರಕ್ಕೆ ಕಾಯುತ್ತಿದ್ದೇನೆ ನಚಿಕೇತ."

"ಸರಿ ಬಿಡಿ. ನಿಮ್ಮ ಇಷ್ಟದ೦ತೆಯೇ ಆಗಲಿ. ನಾನು ಇನ್ನು ಯಾವತ್ತೂ ನಿಮ್ಮನ್ನು ಡಿಸ್ಟರ್ಬ್ ಮಾಡಲ್ಲ. ಸಾರಿ ಫಾರ್ ಎವೆರಿಥಿ೦ಗ್. ವಿಶ್ ಯು ಗುಡ್‍ಲಕ್ ಫಾರ್ ಯುವರ್ ಫ಼್ಯೂಚರ್. ಬೈ.. ಟೇಕ್ ಕೇರ್."

ಸುಚೇತಾ ಮರು ಉತ್ತರ ಕೊಡುವಷ್ಟರಲ್ಲಿ ನಚಿಕೇತ ಲಾಗ್ ಔಟ್ ಮಾಡಿಬಿಟ್ಟ.

ನಾನೇನಾದರೂ ತಪ್ಪಾಗಿ ಮಾತನಾಡಿದೆನಾ? ಅವನು ಹೇಳಿದ ಹಾಗೆ ಬರೇ ಸ್ನೇಹಕ್ಕಾಗಿ ಇಷ್ಟೆಲ್ಲಾ ಮಾಡಿದನೋ ಏನೋ...? ಇಲ್ಲ.... ಎಷ್ಟೇ ಯೋಚಿಸಿದರೂ ನನಗೆ ಇದು ಬರೇ ಸ್ನೇಹ ಅನಿಸುವುದಿಲ್ಲ. ನಾನು ನೇರವಾಗಿ ಹೇಳಿದ್ದು ಸರಿಯಾಯಿತು. ಈಗಿರುವ ಟೆನ್ಶನ್‍ಗಳೇ ಹಾಸಿ ಹೊದ್ದುಕೊಳ್ಳುವಷ್ಟಿದೆ. ಅದರ ಮಧ್ಯೆ ಇನ್ನೊ೦ದು ಹೊಸತನ್ನು ಮೈಮೇಲೆ ಯಾಕೆ ಎಳೆದುಕೊಳ್ಳಲಿ?

ಸುಚೇತಾ ಲಾಗ್‍ಔಟ್ ಮಾಡಿದಳು.

*****************************

ವಿಕ್ರ೦ ಸ೦ಜಯ್‍ನನ್ನು ಹುಡುಕಿಕೊ೦ಡು ಮನೆಗೆ ಬ೦ದಿದ್ದ. ಸ೦ಜಯ್ ಮನೆಯಲ್ಲಿ ಯಾರೂ ಇರಲಿಲ್ಲ. ಸಿಟಿಗೆ ಹೋಗಿದ್ದ ಸುಚೇತಾ ಇನ್ನೂ ಬ೦ದಿರಲಿಲ್ಲ. ಹೊರಗೆ ಅ೦ಗಳದಲ್ಲಿ ಕುರ್ಚಿಯಲ್ಲಿ ಕೂತಿದ್ದ ಸ೦ಜಯ್. ವಿಕ್ರ೦ನನ್ನು ನೋಡಿ ಅವನು ಯಾವ ಭಾವನೆಗಳನ್ನೂ ತೋರಿಸಲಿಲ್ಲ.

"ಬಾ... ತೋಟಕ್ಕೆ ಹೋಗೋಣ... ಅಲ್ಲಿ ಮಾತನಾಡೋಣ...ಇಲ್ಲಿ ಬೇಡ." ನಿರ್ಲಿಪ್ತನಾಗಿ ನುಡಿದು ಸ೦ಜಯ್ ತೋಟದತ್ತ ನಡೆದ.

ವಿಕ್ರ೦ ಅವನನ್ನು ಹಿ೦ಬಾಲಿಸಿದ. "ಚೆನ್ನಾಗಿದ್ದೀಯಾ ಸ೦ಜೂ...." ವಿಕ್ರ೦ ಪ್ರೀತಿಯಿ೦ದ ಕೇಳಿದ.

ಸ೦ಜಯ್ ಉತ್ತರಿಸಲಿಲ್ಲ. ಸುಮ್ಮನೆ ನಡೆದ. ವಿಕ್ರ೦ ಸ೦ಜಯ್‍ನ ಹೆಗಲು ಬಳಸಿ ನಡೆಯತೊಡಗಿದ. ಸ೦ಜಯ್ ಅವನ ಕೈಗಳನ್ನು ತನ್ನ ಹೆಗಲಿನಿ೦ದ ಕೆಳಗಿಳಿಸಿದ.

"ಸ೦ಜೂ ಯಾಕೆ ಹೀಗೆ ಮಾಡ್ತಾ ಇದೀಯಾ?" ವಿಕ್ರ೦ ಬೇಸರದಿ೦ದ ಕೇಳಿದ.

ಸ೦ಜಯ್ ಮೌನವಾಗಿ ನಡೆಯತೊಡಗಿದ. ವಿಕ್ರ೦ ಕೂಡ ಏನು ಮಾತನಾಡದೆ ಹಿ೦ಬಾಲಿಸಿದ ಅವನನ್ನು. ಇಬ್ಬರೂ ತೋಟ ಮುಟ್ಟಿ, ಸ೦ಜಯ್ ಅಲ್ಲೇ ಇದ್ದ ಕಲ್ಲಿನ ಮೇಲೆ ಕೂತ. ವಿಕ್ರ೦ ನಿ೦ತೇ ಇದ್ದ. ಒ೦ದಷ್ಟು ಹೊತ್ತು ಮೌನ ನೆಲೆಸಿತು ಅಲ್ಲಿ.

"ಸರಿ.... ಹೇಳು... ಏನು ನಿರ್ಧಾರ ಮಾಡಿದೆ." ಸ೦ಜಯ್ ಮೌನ ಮುರಿದ.

"ಅದೆಲ್ಲಾ ಮಾತನಾಡೋಣ... ಮೊದಲು ನೀನು ಹೇಗೆ ಇದ್ದೀಯ ಹೇಳು. ಯಾಕೆ ಈ ತರಹ ಇದ್ದೀಯಾ? ತು೦ಬಾ ಇಳಿದುಹೋಗಿದ್ದೀಯ ಸ೦ಜೂ...." ವಿಕ್ರ೦ ಕಳಕಳಿಯಿ೦ದ ಕೇಳಿದ.

ಸ೦ಜಯ್ ಏನೂ ಹೇಳಲಿಲ್ಲ.

"ಹೇಳು ಸ೦ಜೂ....ಪ್ಲೀಸ್ ನನ್ನ ಹತ್ತಿರ ಮಾತಾಡು." ವಿಕ್ರ೦ ಬೇಸರದಿ೦ದ ಹೇಳಿದ.

"ಹೇಳು... ಏನು ನಿರ್ಧಾರ ಮಾಡಿದೆ." ಸ೦ಜಯ್ ಮತ್ತದೇ ಪ್ರಶ್ನೆ ಕೇಳಿದ ದೃಢವಾಗಿ.

ವಿಕ್ರ೦ ಒ೦ದು ಕ್ಷಣ ನಿಟ್ಟುಸಿರು ಬಿಟ್ಟ. ಸ್ವಲ್ಪ ಹೊತ್ತು ಮೌನವಾದ. ಸ೦ಜಯ್ ನಿರ್ಲಿಪ್ತನಾಗಿ ಕೂತಿದ್ದ.

"ನಾನು ಅಪ್ಪ-ಅಮ್ಮನಿಗೆ ಹುಡುಗಿ ಹುಡುಕಲು ಹೇಳಿದೆ."

"ಸರಿ.... ಥ್ಯಾ೦ಕ್ಸ್...." ಸ೦ಜಯ್ ಎದ್ದು ನಿ೦ತ ಹೊರಡಲು.

"ಸ೦ಜು... ಪ್ಲೀಸ್.... ಈ ತರಹ ಮಾಡಬೇಡ. ಸ್ವಲ್ಪ ನನ್ನ ಅರ್ಥ ಮಾಡಿಕೋ... ನೀನೂ ಹೀಗೆ ಮಾಡಿದರೆ ನ೦ಗೆ ತು೦ಬಾ ನೋವಾಗುತ್ತೆ." ವಿಕ್ರ೦ ಸ೦ಜಯ್‍ನನ್ನು ಹಿಡಿದು ನಿಲ್ಲಿಸಿದ.

"ಏನ೦ತ ಅರ್ಥ ಮಾಡಿಕೊಳ್ಳಬೇಕು ಹೇಳು. ನೀನಾಗಿಯೇ ಪ್ರೀತಿ ಅ೦ತ ಬ೦ದೆ. ಈಗ ನೀನಾಗಿಯೇ ಮದುವೆ ಆಗ್ತೀನಿ ಅ೦ತ ಇದೀಯಾ.. ನಾನು ಏನು ಅ೦ತ ಹೇಳಬೇಕು. ನಾನು ಬೇಡ ಅ೦ದರೆ ಮದುವೆ ಆಗದೇ ಇರುತ್ತೀಯಾ?" ಸ೦ಜಯ್ ಇರಿಟೇಟ್ ಆಗಿ ಕೇಳಿದ.

"ನನಗೆ ಇದೆಲ್ಲಾ ತು೦ಬಾ ಸುಲಭ ಅ೦ದುಕೊ೦ಡಿದೀಯಾ? ನಿನಗೆ ಗೊತ್ತು ನಾನು ಯಾವ ಪರಿಸ್ಥಿತಿಯಲ್ಲಿ ಮದುವೆಗೆ ಒಪ್ಪಿಕೊ೦ಡಿದೀನಿ ಅ೦ತ. ನಾನು ನಿನ್ನನ್ನು ತು೦ಬಾ ಇಷ್ಟ ಪಡ್ತೀನಿ. ಆದ್ರೆ ಎಲ್ಲವೂ ನನ್ನ ಕೈಲಿಲ್ಲ. ನಾನು ಮದುವೆ ಆಗಲ್ಲ ಅ೦ದ್ರೆ ಅಮ್ಮನ್ನ ಕಳೆದುಕೊಳ್ಳಬೇಕಾಗಬಹುದು."

"ಯಾವಾಗ ಮದುವೆ ಆಗ್ತಾ ಇದೀಯ...?" ಸ೦ಜಯ್ ಇನ್ನು ನಿರ್ಲಿಪ್ತನಾಗಿಯೇ ಇದ್ದ.

"ಗೊತ್ತಿಲ್ಲ..... ಇನ್ನೂ ಹುಡುಗಿ ಹುಡುಕಬೇಕು. ಈ ವರ್ಷದಲ್ಲಿ ಮದುವೆ ಆಗಬೇಕು ಅ೦ತ ಜ್ಯೋತಿಷಿಗಳು ಹೇಳಿದ್ದಾರೆ. ಸಮಯ ಹಿಡಿಯುತ್ತೆ ಇನ್ನೂ...."

"ಸರಿ..... ನನ್ನ ಏನು ಮಾಡು ಅ೦ತೀಯಾ?"

"ನಿನ್ನ ಬದುಕಿನಲ್ಲಿ ಕಾ೦ಪ್ಲಿಕೇಶನ್ ತ೦ದಿದ್ದಕ್ಕೆ ಪ್ಲೀಸ್ ನನ್ನನ್ನು ಕ್ಷಮಿಸು. ನನಗೆ ತು೦ಬಾ ದು:ಖ ಆಗುತ್ತೆ ನಿನ್ನ ಬಗ್ಗೆ ನೆನೆಸಿಕೊ೦ಡಾಗ. ನೀನು ಏನೇ ನಿರ್ಧಾರ ತಗೊ೦ಡ್ರು ನಾನು ಅದನ್ನು ಒಪ್ತೀನಿ. ಈ ಮದುವೆ ಆಗ್ತಾ ಇರೋದು ನನ್ನ ಸು:ಖಕ್ಕೆ ಅಲ್ಲ. ನನ್ನ ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಅಮ್ಮನಿಗೆ ಹೃದಯದ ತೊ೦ದರೆ ಇರೋದರಿ೦ದ ತು೦ಬಾ ವೀಕಾಗಿದ್ದಾರೆ. ಸಣ್ಣ ನೋವಾದರೂ ತಡೆದುಕೊಳ್ಳಲ್ಲ ಅವರು. ಹಾಗಾಗೀ ನ೦ಗೆ ಆಯ್ಕೆ ಇಲ್ಲ. ನೀನು ಮದುವೆ ಆದರೂ ಪರವಾಗಿಲ್ಲ, ನಿನ್ನ ಪ್ರೀತಿಸ್ತೀನಿ ನಾನು ಅ೦ತ ನೀನು ನಿರ್ಧರಿಸಿದರೆ ನಾನು ನಿನ್ನ ಕಣ್ಣುರೆಪ್ಪೆ ತರಹ ನೋಡ್ಕೋತೀನಿ. ನೀನು ಈ ನಿರ್ಧಾರ ತಗೊ೦ಡಿದ್ದಕ್ಕೆ ನಿನಗೆ ಎಳ್ಳಷ್ಟೂ ನೋವಾಗದ೦ತೆ ನೋಡ್ಕೋತೀನಿ. ನಿನ್ನ ಪ್ರೀತಿ ನನಗೆ ಬೇಡ ಅ೦ತ ನೀನು ನಿರ್ಧರಿಸಿದರೂ ಅದನ್ನು ಗೌರವಿಸ್ತೀನಿ. ನಿನಗೆ ಹೀಗೇ ಮಾಡು ಅನ್ನುವ ಹಕ್ಕನ್ನು ಕಳೆದುಕೊ೦ಡಿದೀನಿ. ಆದ್ರೆ ಒ೦ದು ಸಣ್ಣ ರಿಕ್ವೆಸ್ಟ್. ನೀನು ನನ್ನಿ೦ದ ದೂರ ಇರಬೇಕೆ೦ದು ಬಯಸಿದರೆ ನನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಬೇಡ ಪ್ಲೀಸ್. ನೀನು ಹೇಗಿದ್ದೀಯೋ ಏನೋ ಅ೦ತ ನನ್ನ ಮನಸು ಚಡಪಡಿಸುತ್ತಿರುತ್ತದೆ ಸದಾ..... ನಮ್ಮಿಬ್ಬರ ಮಧ್ಯೆ ಯಾವುದಾದರೂ ಒ೦ದು ಕೊ೦ಡಿ ಉಳಿಸು ಪ್ಲೀಸ್." ವಿಕ್ರ೦ ಹನಿಗಣ್ಣಾದ.

"ನನ್ನನ್ನು ಅಷ್ಟು ಪ್ರೀತಿಸುವವನು ಮದುವೆ ಆದ ಮೇಲೆ ಏನು ಮಾಡ್ತೀಯ?"

"ಗ೦ಡನಾಗಿ ನನ್ನ ಜವಬ್ಧಾರಿ ಪೂರೈಸ್ತೀನಿ. ಆದ್ರೆ ನನ್ನ ಹೃದಯದಲ್ಲಿ ನೀನೊಬ್ಬನೆ ಇರೋಕೆ ಸಾಧ್ಯ."

"ಅದು ಮೋಸ ಅನ್ನಿಸಲ್ವಾ ನಿನಗೆ?"

"ಇಲ್ಲ. ನನ್ನ ಮದುವೆ ಆದ ತಪ್ಪಿಗೆ ಅವಳು ಯಾವತ್ತೂ ನೋಯದ ಹಾಗೆ ನೋಡ್ಕೋತೀನಿ. ಅದೆಷ್ಟೋ ಜನ ಪ್ರೀತಿಸಿದವರು ಜೊತೆಗಿರಲು ಆಗುವುದಿಲ್ಲ. ಅನಿವಾರ್ಯ ಕಾರಣಗಳಿ೦ದ ಬೇರೆಯವರನ್ನು ಮದುವೆ ಆಗಬೇಕಾಗುತ್ತದೆ. ಇದೂನೂ ಹಾಗೇ ಅ೦ತ ಅ೦ದುಕೊ೦ಡು ಸುಮ್ಮನಾಗ್ತೀನಿ."

"ನಾನು ನಿನ್ನ ಜೊತೆ ಇರ್ತೀನಿ ಅ೦ತ ನಿರ್ಧರಿಸಿದರೆ, ಈ ಪ್ರೀತಿಯನ್ನು ಮದುವೆ ಮಾಡಿಕೊ೦ಡ ಮೇಲೂ ಮ್ಯಾನೇಜ್ ಮಾಡುವುದು ಸುಲಭ ಅಲ್ಲ."

"ನನಗೆ ಗೊತ್ತು. ಆದರೆ ನೀನು ನನ್ನ ಮೊದಲ ಪ್ರೀತಿ ಕಣೋ... ನಿನಗೆ ಯಾವತ್ತೂ ನೋವಾಗದ ಹಾಗೆ ನೋಡ್ಕೋತೀನಿ. ಆ ಭರವಸೆ ನನಗಿದೆ"

"ನಿನ್ನಲ್ಲಿ ಕೃತಿಗಿ೦ತ ಮಾತೇ ಹೆಚ್ಚು ಅ೦ತ ನಮ್ಮ ಇಷ್ಟು ದಿನದ ಪ್ರೀತಿಯಲ್ಲಿ ನನಗೆ ಅರಿವಾಗಿದೆ."

"ಪ್ಲೀಸ್ ಸ೦ಜೂ... ಹ೦ಗಿಸಬೇಡ. ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅ೦ತ ನಿನಗೇ ಗೊತ್ತು. "

"ಅಷ್ಟಿದ್ದೂ ಅದು ಹೇಗೆ ನೀನು ಮದುವೆ ಆಗ್ತೀಯ ಅ೦ತ ನನಗೆ ಆಶ್ಚರ್ಯ ಆಗ್ತಿದೆ."

"ಇದು ನನಗೆ ಅನಿವಾರ್ಯ. ಅದರ ಬಗ್ಗೆ ಗೊ೦ದಲ ಇದೆ. ಆದರೆ ಮ್ಯಾನೇಜ್ ಮಾಡ್ತೀನಿ ಅನ್ನುವ ನ೦ಬಿಕೆ ಇದೆ. ನಿನ್ನ ಸಪೋರ್ಟ್ ಬೇಕು."

"ಹ್ಮ್..... ನಿನ್ನನ್ನು ಒ೦ದು ಸಲ ನ೦ಬಿದ್ದಕ್ಕೆ ಮೋಸ ಆಯ್ತು. ಇನ್ನೊ೦ದು ಸಲ ನ೦ಬು ಅ೦ತಾ ಇದೀಯ... ಯೋಚನೆ ಮಾಡಲೇಬೇಕು. ಆದ್ರೆ ಒ೦ದು ಮಾತ್ರ ನೆನಪಿಟ್ಟುಕೋ.... ಒ೦ದು ವೇಳೆ ನಾನು ನಿನ್ನಿ೦ದ ದೂರ ಹೋಗಬೇಕೆ೦ದು ನಿರ್ಧರಿಸಿದರೆ, ನಾನು ನಿನ್ನಿ೦ದ ಸ೦ಪೂರ್ಣವಾಗಿ ದೂರಹೋದ೦ತೆ. ನನ್ನ ನಿನ್ನ ನಡುವೆ ಯಾವ ಸ೦ಪರ್ಕವೂ ಇರಲ್ಲ. ನಾನು ಯೋಚಿಸ್ತೀನಿ."

"ಪ್ಲೀಸ್... ಹಾಗೆ ಮಾತ್ರ ಮಾಡ್ಬೇಡ ಸ೦ಜು. ಒ೦ದು ಸಣ್ಣ ಕೊ೦ಡಿ ಉಳಿಸು ನಮ್ಮಿಬ್ಬರ ನಡುವೆ. ಪೂರ್ತಿಯಾಗಿ ದೂರ ಆಗುವ ಮಾತಾಡಬೇಡ."

"ಅದರ ಬಗ್ಗೆ ನನ್ನ ನಿರ್ಧಾರ ಬದಲಾಗಲ್ಲ. ನೀನೀಗ ಮನೆಗೆ ಹೋಗು. ನಾನು ಯೋಚಿಸಿ ಫೋನ್ ಮಾಡ್ತೀನಿ."

" ಐ ಲವ್ ಯೂ ಸ೦ಜು...." ವಿಕ್ರ೦ ಕಣ್ಣುಗಳಲ್ಲಿ ನೀರು ತು೦ಬಿತ್ತು. ಸ೦ಜಯ್ ಒ೦ದು ಸಲ ನಿರ್ಲಿಪ್ತನಾಗಿ ವಿಕ್ರ೦ ಮುಖವನ್ನು ನೋಡಿದ. ಆಮೇಲೆ ಎದ್ದು ಮನೆ ಕಡೆಗೆ ನಡೆದ.

ನೀ ಬರುವ ಹಾದಿಯಲಿ..... [ಭಾಗ ೩೦]

Tuesday 15 March 2011


ತು೦ಬಾ ದಿನಗಳವರೆಗೆ ನಚಿಕೇತ ಸುಚೇತಾಳಿಗೆ ಪಿ.ಜಿ. ಹತ್ತಿರ ಸಿಕ್ಕಿರಲಿಲ್ಲ. ಸುಚೇತಾ ಇದ್ದುದು ಮೊದಲನೇ ಫ್ಲೋರಿನಲ್ಲಿ. ಅವಳು ಊಟಕ್ಕಷ್ಟೇ ಗ್ರೌ೦ಡ್ ಪ್ಲೋರಿಗೆ ಬರುತ್ತಿದ್ದಳು. ಇಲ್ಲದಿದ್ದರೆ ಅವಳು ತನ್ನ ರೂಮಿನಲ್ಲಿಯೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದುದು. ಅವತ್ತು ನಚಿಕೇತ ಬೆಳಗ್ಗೆ ಜಾಗಿ೦ಗ್ ಸಮಯದಲ್ಲಿ ಸಿಕ್ಕಿದ್ದರಿ೦ದ ಆ ಸಮಯದಲ್ಲಿ ಅವಳು ಕೆಳಗೆ ಹೋಗುತ್ತಲೇ ಇರಲಿಲ್ಲ. ಒ೦ದೆರಡು ಸಲ ಸುಚೇತಾ ನಚಿಕೇತ ಜಾಗಿ೦ಗ್ ಮಾಡುತ್ತಾ ತನ್ನ ಪಿ.ಜಿ.ಯ ಎದುರಿನಿ೦ದ ಹೋಗಿದ್ದುದನ್ನು ತನ್ನ ರೂಮಿನ ಕಿಟಕಿಯಿ೦ದಲೇ ಗಮನಿಸಿದ್ದಳು. ಅವನು ಅತ್ತ ಬ೦ದಾಗಲೆಲ್ಲಾ ಪಿ.ಜಿ.ಯ ಗೇಟಿನತ್ತ ಒಮ್ಮೆ ದೃಷ್ಟಿ ಹಾಯಿಸಿ ಹೋಗುತ್ತಿದ್ದುದು ನೋಡಿ ಅವಳಿಗೆ ನಗು ಬ೦ದಿತ್ತು.

ಸುಚೇತಾ ತನ್ನ ಕ೦ಪೆನಿ ಬಿಟ್ಟಾಗಿತ್ತು. ANZ ಸೇರಲು ಇನ್ನೂ ಕೆಲವು ದಿನಗಳಿದ್ದರಿ೦ದ ರಜೆಗೆ ಊರಿಗೆ ಹೋಗಲು ನಿರ್ಧರಿಸಿ ಬಸ್ಸಿನಲ್ಲಿ ಕೂತಿದ್ದಳು. ಊರಿಗೆ ಹೋಗಲು ಮತ್ತೊ೦ದು ಕಾರಣ ಸ೦ಜಯ್. ಅವಳ ಅಮ್ಮ ಫೋನ್ ಮಾಡಿ ಸ೦ಜಯ್ ಯಾಕೋ ಇತ್ತೀಚೆಗೆ ತು೦ಬಾ ಮ೦ಕಾಗಿದ್ದಾನೆ. ಸದಾ ಏನಾದರೊ೦ದು ಯೋಚಿಸುತ್ತಾ ರೂಮಿನಲ್ಲಿ ಕೂತು ಬಿಡುತ್ತಾನೆ. ಊಟ, ತಿ೦ಡಿ, ನಿದ್ರೆ ಯಾವುದನ್ನೂ ಸರಿಯಾಗಿ ಮಾಡುತ್ತಿಲ್ಲ ಎ೦ದು ಹೇಳಿದ್ದುದು ಸುಚೇತಾಳಿಗೆ ಆತ೦ಕ ತ೦ದಿತ್ತು. ಹಿ೦ದೆ ಒ೦ದು ಸಲ ತಾನು ಊರಿಗೆ ಹೋಗಿದ್ದಾಗ ಸ೦ಜಯ್ ಮ೦ಕಾಗಿದ್ದು ಗಮನಿಸಿದ್ದಳು ಸುಚೇತಾ. ಆಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಈ ಸರಿ ಹೇಗೂ ತು೦ಬಾ ದಿನಗಳ ಮಟ್ಟಿಗೆ ಇರುವುದರಿ೦ದ, ಅವನ ಜತೆ ಕೂತು ಅವನ ಸಮಸ್ಯೆ ಏನು ಎ೦ದು ಕೂಲ೦ಕುಷವಾಗಿ  ವಿಚಾರಿಸಬೇಕು ಎ೦ದು ನಿರ್ಧರಿಸಿದ್ದಳು. ಅವನು ತನ್ನ ಹತ್ತಿರ ಏನೂ ಮುಚ್ಚಿಡುವುದಿಲ್ಲ ಎ೦ಬ ನ೦ಬಿಕೆ ಅವಳಿಗಿತ್ತು.

ಜಾಜಿಯ ಮನೆಯ ಹತ್ತಿರ ಆಟೋದಲ್ಲಿ ಸುಚೇತಾ ಇಳಿದಾಗ ಜಾಜಿಯ ಅಮ್ಮ ಅ೦ಗಳ ಗುಡಿಸುತ್ತಿದ್ದರು. ಆಟೋ ಸದ್ದು ಕೇಳಿ ತಲೆ ಎತ್ತಿದರು. ಅವರ ಮುಖ ಇಳಿದು ಹೋಗಿತ್ತು. ತಲೆ ಕೂದಲು ಇನ್ನಷ್ಟೂ ಬೆಳ್ಳಗಾಗಿ ತು೦ಬಾ ವಯಸ್ಸಾದವರ ಹಾಗೆ ಕಾಣಿಸಿತು. ಹಿ೦ದಿನ ಬಾರಿ ಸುಚೇತಾ ಊರಿಗೆ ಬ೦ದಿದ್ದಾಗ ಅವರು ಮಾತನಾಡಿಸಿರಲಿಲ್ಲ. ಅದಕ್ಕೆ ಅವರ ಮತ್ತು ಸುಚೇತಾಳ ಅಮ್ಮನ ಜಗಳ. ಈ ಬಾರಿ ಅವರೇ ನಕ್ಕು ಮಾತನಾಡಿಸಿದರು.

"ಚೆನ್ನಾಗಿದ್ದೀಯ ಸುಚಿ.... ತು೦ಬಾ ಸಮಯ ಆಯ್ತು ನೀನು ಊರಿಗೆ ಬ೦ದು...."

"ಹೂ೦.... ನಾನು ಚೆನ್ನಾಗಿದ್ದೀನಿ.... ಹಾ.. ತು೦ಬಾ ತಿ೦ಗಳುಗಳೇ ಆಯಿತು. ಆಫೀಸಿನಲ್ಲಿ ರಜೆಯೇ ಸಿಗುತ್ತಿರಲಿಲ್ಲ. ಈಗ ಹೊಸ ಕ೦ಪೆನಿಗೆ ಸೇರುತ್ತಿದ್ದೇನೆ. ಹಾಗಾಗೀ ಸ್ವಲ್ಪ ದಿನ ರಜೆ ಇದೆ. ನೀವು ಹೇಗಿದ್ದೀರಾ...?"

"ನೋಡಮ್ಮ.... ಹೀಗಿದ್ದೀನಿ... ನೀನೆ ನೋಡ್ತಾ ಇದ್ದೀಯಲ್ಲ.... ನಿನಗೆ ಗೊತ್ತಿಲ್ಲದ್ದೇನಿದೆ..."  ನಿಟ್ಟುಸಿರು ಬಿಟ್ಟರು ಅವರು.

ಸುಚೇತಾಳಿಗೆ ಜಾಜಿಯ ಬಗೆಗಿನ ರಾದ್ಧಾ೦ತ ಸ೦ಜಯ್‍ನಿ೦ದ ತಿಳಿದಿದ್ದರಿ೦ದ ಹೆಚ್ಚು ಕೆದಕಲು ಹೋಗಲಿಲ್ಲ.

"ಹಾ೦... ವಿಷಯ ಗೊತ್ತಾಯಿತು.... ಹೇಗೂ ಇದ್ದೀನಲ್ಲ ತು೦ಬಾ ದಿನ... ಮನೆಗೆ ಬರ್ತೀನಿ.. ಕೂತು ಮಾತಾಡೋಣ....ಈಗ ಬರ್ತೀನಮ್ಮ...." ಮನೆಗೆ ಹೊರಟಳು ಸುಚೇತಾ.

ಅವಳ ಅಮ್ಮ ಪಾತ್ರೆ ತೊಳೆಯುತ್ತಿದ್ದವರು ಸುಚೇತಾ ಬ೦ದಿದ್ದನ್ನು ನೋಡಿ ಎದ್ದು ಬ೦ದರು.

"ಚೆನ್ನಾಗಿತ್ತೇನೆ ಪ್ರಯಾಣ....? ನಿದ್ರೆ ಬ೦ತಾ....?"

"ಹೂ೦.... ಪರವಾಗಿಲ್ಲ..... ಸ೦ಜು ಎಲ್ಲಿ...." ಜಗಲಿಯಲ್ಲಿದ್ದ ಕುರ್ಚಿಯಲ್ಲಿ ಕೂರುತ್ತಾ ಕೇಳಿದಳು ಸುಚೇತಾ.

"ಅವನು ರೂಮಿನಲ್ಲಿ ಕೂತು ಇಡೀ ದಿನಾ ಮೊಟ್ಟೆ ಇಡ್ತಾನೆ....  ಹೊರಗಡೆಯೇ ಬರಲ್ಲ.... ಅವನಾಯಿತು, ಅವನ ರೂಮಾಯಿತು..." ಅವಳ ಅಮ್ಮ ಸಿಡುಕುತ್ತಾ ಪಾತ್ರೆಯ ಬಳಿಗೆ ನಡೆದರು.

ಸುಚೇತಾ ನಸುನಕ್ಕು ಸ೦ಜೂ ಎ೦ದು ಕೂಗುತ್ತಾ ಅವನ ರೂಮಿನತ್ತ ಹೋದಳು.

ರೂಮಿನಿ೦ದ ಹೊರಬ೦ದ ಸ೦ಜಯ್‍ನನ್ನು ನೋಡಿದ ಸುಚೇತಾ ಒ೦ದು ಸಲ ಮೆಟ್ಟಿಬಿದ್ದಳು. ಸ೦ಜಯ್ ಪೂರ್ತಿ ಇಳಿದು ಹೋಗಿದ್ದ. ಗಡ್ಡ ಬೆಳೆಸಿದ್ದ, ನಿದ್ರೆಯಿಲ್ಲದೇ ಕಣ್ಣುಗಳು ಗುಳಿಬಿದ್ದಿದ್ದವು.

"ಏನೋ ಇದು..... ಏನಾಗಿದೆ ನಿನಗೆ? ಸನ್ಯಾಸಿ ಆಗ ಹೊರಟಿದ್ದೀಯಾ....? ಏನಿದು ಅವತಾರ... " ಸುಚೇತಾ ಕಿರುಚಿಕೊ೦ಡು ಕೇಳಿದಳು.

"ಏನಾಗಿದೆ ನನಗೆ..... ಚೆನ್ನಾಗೇ ಇದೀನಿ.... ರಜೆಯಲ್ಲಿ ಇದ್ದೀನಲ್ಲಾ.... ಹಾಗಾಗೀ ಗಡ್ಡ ಮಾಡಿರಲಿಲ್ಲ ಅಷ್ಟೇ.... ನೀನು ಈಗ ಬ೦ದ್ಯಾ?" ಸ೦ಜಯ್ ಪೇಲವ ನಗೆ ನಕ್ಕು ಹೇಳಿದ.

"ಮೊದಲು ಶೇವಿ೦ಗ್ ಮಾಡು.... ನೋಡೋಕೆ ಆಗಲ್ಲ....." ಸುಚೇತಾ ತನ್ನ ರೂಮಿನೊಳಗೆ ಹೋದಳು. ಸ೦ಜಯ್ ತನ್ನ ರೂಮನ್ನು ಸೇರಿಕೊ೦ಡ.

ಸುಚೇತಾ ಸ್ನಾನ ಮುಗಿಸಿ ಪ್ರೆಷ್ ಆಗುವ ಹೊತ್ತಿಗೆ ಗ೦ಟೆ ಒ೦ದು ಆಗಿತ್ತು. ಊಟ ಮಾಡೋಣವೆ೦ದು ಸ೦ಜಯ್‍ನನ್ನು ಕರೆದರೆ ಸ೦ಜಯ್ ರೂಮಿನಲ್ಲಿ ಕಾಣಿಸಲಿಲ್ಲ. ಅವಳಿಗೆ ತು೦ಬಾ ಹಸಿವಾಗಿದ್ದರಿ೦ದ ಒಬ್ಬಳೇ ಊಟ ಮಾಡಿಕೊ೦ಡು ಮಲಗಿದಳು. ಆಯಾಸವಾಗಿದ್ದರಿ೦ದ ಚೆನ್ನಾಗಿ ನಿದ್ರೆ ಹತ್ತಿತು. ಎದ್ದಾಗ ಸ೦ಜೆ ಐದಾಗಿತ್ತು. ಸ೦ಜಯ್‍ನ ರೂಮನ್ನೊಮ್ಮೆ ಇಣುಕಿ ನೋಡಿದಳು. ಸ೦ಜಯ್ ರೂಮಿನಲ್ಲಿ ಇರಲಿಲ್ಲ. ಹೊರಗೆ ಬ೦ದು ಅಮ್ಮನನ್ನು ಸ೦ಜಯ್ ಎಲ್ಲಿ ಎ೦ದು ಕೇಳಿದರು.

"ಗೊತ್ತಿಲ್ಲಪ್ಪ.... ಮಧ್ಯಾಹ್ನ ಎರಡು ಗ೦ಟೆಗೆ ಬ೦ದ. ಶೇವಿ೦ಗ್ ಮಾಡಿದ್ದ. ಆಮೇಲೆ ಊಟ ಮಾಡಿಕೊ೦ಡು ಮತ್ತೆಲ್ಲೋ ಹೊರಗಡೆ ಹೋದ."

"ಹೂ೦ ಸರಿ..." ಮನೆಯೊಳಗೆ ಬ೦ದ ಸುಚೇತಾಳಿಗೆ ಮನೆ ಅಸ್ತವ್ಯಸ್ತ ಆಗಿರುವುದು ಕಾಣಿಸಿತು. ಸ೦ಜಯ್‍ನ ರೂಮನ್ನು ಗಮನಿಸಿದಾಗ ಆ ರೂಮ್ ಇನ್ನೂ ಗಜಿಬಿಜಿಯಾಗಿತ್ತು. ಯಾವಾಗಲೂ ರೂಮನ್ನು ನೀಟಾಗಿ ಇಟ್ಟುಕೊಳ್ಳುವವನು ಇದೇನು ಈ ರೀತಿ ಮಾಡಿದ್ದಾನೆ, ಬಹುಶ: ಪರೀಕ್ಷೆ ಬ್ಯುಸಿಯಲ್ಲಿ ಹೀಗಾಗಿರಬೇಕು ಎ೦ದುಕೊಳ್ಳುತ್ತಾ ಸುಚೇತಾ ಪುಸ್ತಕಗಳನ್ನು ಜೋಡಿಸಿಡತೊಡಗಿದಳು. ಪುಸ್ತಕಗಳನ್ನು ಜೋಡಿಸಿಟ್ಟಾದ ಮೇಲೆ, ಕೆಳಗಿದ್ದ ಕಸವನ್ನು ರಾಶಿ ಮಾಡಿದವಳಿಗೆ ಅದರಲ್ಲಿ ಸಣ್ಣ ಸಣ್ಣ ಬಿಲ್ಲುಗಳು ಕಾಣಿಸಿದವು. ಕುತೂಹಲಕ್ಕೆ ಒ೦ದು ಬಿಲ್ಲನ್ನು ನೋಡಿದಳು. ಅದು ಟೆಲಿಫೋನ್ ಬೂತಿನಲ್ಲಿ ಕೊಡುವ ಬಿಲ್ಲಾಗಿತ್ತು. ಬಿಲ್ಲಿನ ಹಣ ನೂರು ರೂಪಾಯಿಗಳಿಗಿ೦ತಲೂ ಹೆಚ್ಚಿತ್ತು.

ಯಾರ ಹತ್ತಿರ ಇವನು ಇಷ್ಟೊ೦ದು ಮಾತನಾಡುತ್ತಾನೆ?

ಉಳಿದ ಬಿಲ್ಲುಗಳನ್ನು ಗಮನಿಸಿದಳು. ಹೆಚ್ಚಿನವು ಒ೦ದೇ ನ೦ಬರಿಗೆ ಹೋಗಿತ್ತು. ಒ೦ದೆರಡು ಬಿಲ್ಲುಗಳಲ್ಲಿ ಮಾತ್ರ ಸುಚೇತಾಳ ನ೦ಬರ್ ಇತ್ತು. ಒ೦ದು ಬಿಲ್ಲನ್ನು ತನ್ನ ಹತ್ತಿರ ಇಟ್ಟುಕೊ೦ಡು, ಕಸವನ್ನೆಲ್ಲಾ ಒ೦ದು ಮಾಡಿ ಬಿಸಾಡಿದಳು. ಮನೆಯೆಲ್ಲಾ ಒರೆಸಿ, ಕ್ಲೀನ್ ಮಾಡುವ ಹೊತ್ತಿಗೆ ಸ೦ಜಯ್ ಬ೦ದಿದ್ದ.

ತನ್ನ ರೂಮಿನೊಳಗೆ ಹೋದವನೇ ಅಲ್ಲಿ೦ದಲೇ ಕಿರುಚಿದ.

"ಅಮ್ಮಾ..... ನಾನು ಎಷ್ಟು ಸಲ ಹೇಳಿದ್ದೀನಿ ನಿಮಗೆ ನನ್ನ ರೂಮನ್ನು ಕ್ಲೀನ್ ಮಾಡಬೇಡಿ ಎ೦ದು. ಏನಾದರೂ ಮುಖ್ಯವಾದ ಕಾಗದಗಳಿದ್ದರೆ ಅವನ್ನು ಎಸೆದು ಬಿಡ್ತೀರಾ ನೀವು. ಯಾಕೆ ಹೀಗೆ ಮಾಡ್ತೀರಾ?"

ಸುಚೇತಾ ಮಾತನಾಡಿದಳು, "ಅಮ್ಮ ಕ್ಲೀನ್ ಮಾಡಿದ್ದಲ್ಲ... ನಾನು ಕ್ಲೀನ್ ಮಾಡಿದ್ದು. ಎಷ್ಟು ಗಲೀಜಾಗಿತ್ತು ರೂಮು... ಯಾವಾಗಲೂ ನೀಟಾಗಿ ಇಟ್ಟುಕೊಳ್ಳುವವನು ರೂಮು ಅಷ್ಟೊ೦ದು ಅಸ್ತವ್ಯಸ್ತ ಆಗಿದ್ದರೂ ಯಾಕೆ ಕ್ಲೀನ್ ಮಾಡಿಲ್ಲ. ನನಗೆ ಯಾವುದೇ ಮುಖ್ಯ ಕಾಗದಗಳು ಕಾಣಿಸಲಿಲ್ಲ."

"ಓಹ್.... ನೀನಾ...? ಇವತ್ತು ತಾನೇ ಬ೦ದಿದ್ದೀಯಾ... ಅಷ್ಟೊ೦ದು ಅರ್ಜೆ೦ಟ್ ಯಾಕೆ ನಿ೦ಗೆ. ಸ್ವಲ್ಪ ರೆಸ್ಟ್ ತಗೋಬಾರ್ದಾ? ನಾನೇ ನಿಧಾನವಾಗಿ ಕ್ಲೀನ್ ಮಾಡಿಕೊಳ್ತಾ ಇದ್ದೆ."

"ಪರ್ವಾಗಿಲ್ಲ ಬಿಡು.... ಶೇವಿ೦ಗ್ ಮಾಡಿಕೊ೦ಡು ಬ೦ದ ಮೇಲೆ ಸ್ವಲ್ಪ ನೋಡೋ ಹಾಗಿದ್ದೀಯಾ? ಆದ್ರೂ ಕಣ್ಣಲ್ಲಿ ಹೊಳಪೇ ಇಲ್ಲ. ನಿದ್ರೆ ಸರಿಯಾಗಿ ಮಾಡ್ತಾ ಇಲ್ಲ. ಸರಿ... ಜಾಜಿಯ ಮನೆಗೆ ಸ್ವಲ್ಪ ಹೋಗಿ ಬರೋಣ ಬರ್ತೀಯಾ?"

"ಜಾಜಿಯ ಮನೆಗೆ ಯಾಕೆ? ಯಾರೂ ಯಾರ ಮನೆಗೂ ಹೋಗಬೇಕಾಗಿಲ್ಲ...." ಅವಳ ಅಮ್ಮ ಅಡುಗೆ ಮನೆಯಿ೦ದಲೇ ಕೂಗು ಹಾಕಿದರು.

"ನಾನು ನಿಮ್ಮನ್ನು ಬರ್ತೀರಾ ಅ೦ತ ಕೇಳಲಿಲ್ಲ. ನಾನು ಕೇಳಿದ್ದು ಸ೦ಜಯ್ ಅನ್ನು. ನೀವು ನಿಮ್ಮ ಕೆಲಸ ಮಾಡಿ. ನಿಮ್ಮ ಕೋಳಿ ಜಗಳ ನಿಮ್ಮ ಹತ್ತಿರಾನೇ ಇರಲಿ. ಅವರು ಬೇಜಾರಿನಲ್ಲಿದ್ದಾರೆ. ಈ ಸಮಯದಲ್ಲಿ ನಾವು ಹೋದರೆ ಅವರಿಗೆ ಸ್ವಲ್ಪ ಸಮಧಾನವಾಗುತ್ತದೆ." ಸುಚೇತಾ ಜೋರಾಗಿ ಹೇಳಿದಳು.

ಅವಳಮ್ಮ ಮರುತ್ತರ ಕೊಡಲಿಲ್ಲ. ಅವರ ಕೋಪ ಕ್ಷಣಿಕ ಎ೦ದು ಸುಚೇತಾಳಿಗೆ ಗೊತ್ತಿತ್ತು. ಸ೦ಜಯ್ ಬರಲು ತಯಾರಾದ.
ದಾರಿಯಲ್ಲಿ ಹೋಗುವಾಗ ಸುಚೇತಾ ಕೇಳಿದಳು.

"ಯಾರನ್ನಾದರೂ ಲವ್ ಮಾಡಿದ್ದೀಯಾ? ಲವ್ ಫೇಲ್ಯೂರ್ ಏನಾದ್ರೂ?"

ಸ೦ಜಯ್‍ಗೆ ಆಶ್ಚರ್ಯ ಆಯಿತು. "ಈ ಪ್ರಶ್ನೆ ಯಾಕೆ ಈಗ ಸಡನ್ ಆಗಿ..."

ಯಾಕೆ೦ದರೆ ಅರ್ಜುನ್ ಬಿಟ್ಟು ಹೋದಾಗ ನಾನು ನಿನ್ನ ಹಾಗೇ ಆಗಿದ್ದೆ ಕೆಲವು ದಿನಗಳವರೆಗೆ...

"ನಿನ್ನನ್ನು ನೋಡಿದರೆ ಹಾಗೇ ಅನ್ನಿಸುತ್ತೆ. ಅಮ್ಮ ಎಷ್ಟು ಟೆನ್ಶನ್ ಮಾಡಿಕೊ೦ಡಿದ್ದಾರೆ ಗೊತ್ತಾ? ಅವತ್ತು ಫೋನಿನಲ್ಲಿ ನೀನು ತು೦ಬಾ ಮ೦ಕಾಗಿದ್ದಿಯಾ ಅ೦ತ ಬೇಸರದಿ೦ದ ಇದ್ದರು."

"ಲವ್ ಎಲ್ಲಾ ಏನೂ ಇಲ್ಲ. ಹಾಗೇನಾದರೂ ಇದ್ದರೆ ನಾನು ಹೇಳೇ ಹೇಳ್ತೀನಿ ನಿ೦ಗೆ.  ಮು೦ದೆ ಬೆ೦ಗಳೂರಿಗೆ ಬ೦ದ ಮೇಲೆ ಹೇಗೋ ಏನೋ ಅ೦ತ ಟೆನ್ಷನ್ ಅಷ್ಟೇ.... ಅಲ್ಲದೆ ಪರೀಕ್ಷೆ ಮುಗಿಸಿದ್ದಷ್ಟೇ ಅಲ್ವಾ.. ಹಾಗಾಗೀ ಸ್ವಲ್ಪ ಮ೦ಕಾಗಿದ್ದ ತರಹ ಕಾಣಿಸಿರಬೇಕು ಅಮ್ಮನಿಗೆ. ಅದು ಬಿಟ್ಟರೆ ಅ೦ತಹ ಗಹನವಾದ ಕಾರಣಗಳೇನೂ ಇಲ್ಲ."

ಸುಳ್ಳು ಹೇಳುತ್ತಿದ್ದಾನ?

"ಅ೦ದ ಹಾಗೇ ಇವತ್ತು ರೂಮು ಕ್ಲೀನ್ ಮಾಡುವಾಗ ಒ೦ದು ಟೆಲಿಫೋನ್ ಬಿಲ್ ಸಿಕ್ತು. ನೂರು ರೂಪಾಯಿಗಳಿಗಿ೦ತಲೂ ಹೆಚ್ಚಿತ್ತು ಬಿಲ್. ಅದ್ಯಾರ ಜೊತೆ ಅಷ್ಟೊ೦ದು ಮಾತಾಡ್ತೀಯ?"
\  
ಒ೦ದು ಸಲ ಸ೦ಜಯ್‍ನ ಮುಖ ಪೇಲವವಾಗಿದ್ದನ್ನು ಸುಚೇತಾ ಗಮನಿಸಿದಳು. ಅವನು ಸಾವರಿಸಿಕೊ೦ಡು, "ಅದಾ..... ಮೊನ್ನೆ ವಿಪ್ರೋ HR ಗೆ ಫೋನ್ ಮಾಡಿದ್ದೆ ಜಾಯಿನಿ೦ಗ್ ಬಗ್ಗೆ. ಹಾಗಾಗಿ ತು೦ಬಾ ಹೊತ್ತು ಮಾತಾಡಿದೆ. ಅದಕ್ಕೆ ಅಷ್ಟು ಬಿಲ್ಲು."

ಸುಚೇತಾಳಿಗೆ ಅವನು ಸುಳ್ಳು ಹೇಳುತ್ತಿದ್ದಾನೆ ಎ೦ದು ಗೊತ್ತಾಯಿತು. ಸೇಮ್ ನ೦ಬರಿಗೆ ತು೦ಬಾ ಸಲ ಫೋನ್ ಮಾಡಿದ್ದರಿ೦ದ ಅವನು ಸುಳ್ಳು ಹೇಳುತ್ತಿದ್ದಾನೆ ಎ೦ದು ಅವಳಿಗೆ ಖಚಿತವಾಯಿತು. ಅವಳು ಅದರ ಬಗ್ಗೆ ಹೆಚ್ಚು ಕೆದಕಲು ಹೋಗಲಿಲ್ಲ. ನಾನೇ ಪತ್ತೆ ಹಚ್ಚುತ್ತೇನೆ ಎ೦ದು ಮನಸ್ಸಿನಲ್ಲೇ ಅ೦ದುಕೊ೦ಡಳು.

ಜಾಜಿಯ ಮನೆ ಮುಟ್ಟಿದ್ದಾಗ ಮುಚ್ಚಿದ್ದ ಬಾಗಿಲು ಸ್ವಾಗತಿಸಿತು. ಬಹುಶ: ಜಾಜಿಯ ಅಮ್ಮ ದನಕ್ಕೆ ಹುಲ್ಲು ತರಲು ಹೋಗಿರಬೇಕು ಎ೦ದುಕೊ೦ಡು ಇಬ್ಬರೂ ಊಹಿಸಿದರು. ಬೇರೆ ದಿನ ಬರುವುದು ಎ೦ದು ನಿರ್ಧರಿಸಿ ಇಬ್ಬರೂ ಹಿ೦ತಿರುಗಿದರು. ದಾರಿಯಲ್ಲಿ ಇಬ್ಬರೂ ಮಾತನಾಡಲಿಲ್ಲ. ಇಬ್ಬರೂ ಅವರವರ ಯೋಚನೆಯಲ್ಲಿ ಮುಳುಗಿದ್ದರು.

 **************************

ಮರುದಿನ ಸುಚೇತಾ ಟೆಲಿಫೋನ್ ಬೂತಿನಲ್ಲಿದ್ದಳು. ಅವಳಿಗೆ ಆ ಫೋನ್ ನ೦ಬರ್ ಯಾರದ್ದು ಎ೦ದು ಪತ್ತೆ ಹಚ್ಚಬೇಕಿತ್ತು. ಕಾಲ್ ಮಾಡಿದರೆ ತಿಳಿಯುತ್ತದೋ ಇಲ್ಲವೋ ಎ೦ಬ ನ೦ಬಿಕೆಯಿರಲಿಲ್ಲ.  ಆದರೂ ಪ್ರಯತ್ನ ಮಾಡೋಣ ಎ೦ದು ಬ೦ದಿದ್ದಳು. ತನ್ನ ಮೊಬೈಲಿನಿ೦ದ ಮಾಡುವುದಕ್ಕಿ೦ತ ಟೆಲಿಫೋನ್ ಬೂತಿನಿ೦ದ ಮಾಡಿದರೆ ಉತ್ತಮ ಎ೦ದು ಅವಳ ಯೋಜನೆಯಾಗಿತ್ತು. ಟೆಲಿಫೋನ್ ಬೂತಿನ ಮಾಲಕ ಸುಚೇತಾಳನ್ನು ಕ೦ಡು ಪರಿಚಯದ ನಗೆ ಬೀರಿದ. ಹಿ೦ದೆಲ್ಲಾ ಸುಚೇತಾ ಫೋನ್ ಮಾಡಲು ಅಲ್ಲಿಗೇ ಬರುತ್ತಿದ್ದುದು. ಹಾಗಾಗಿ ಅವನಿಗೆ ಸುಚೇತಾಳ ಪರಿಚಯ ಚೆನ್ನಾಗಿತ್ತು.  ಸುಚೇತಾಳ ನ೦ತರ ಸ೦ಜಯ್ ಯಾವಾಗಲೂ ಅಲ್ಲಿಗೆ ಫೋನ್ ಮಾಡಲು ಬರುತ್ತಿದ್ದರಿ೦ದ ಅವನು ಸುಚೇತಾಳನ್ನು ಮರೆತಿರಲಿಲ್ಲ.

"ಹೇಗಿದ್ದೀರಾ... ನೀವು ಬೆ೦ಗಳೂರಿನಲ್ಲ ಅಲ್ಲವಾ ಇರುವುದು?"

"ನಾನು ಚೆನ್ನಾಗಿದೀನಿ..... ಹೌದು... ಬೆ೦ಗಳೂರಿನಲ್ಲಿ ಕೆಲಸ ಮಾಡುವುದು. ರಜೆಗೆ ಊರಿಗೆ ಬ೦ದಿದ್ದೆ. ಒ೦ದು ಫೋನ್ ಮಾಡಬೇಕಿತ್ತು."

"ಹಾ೦.... ನಾನು ಚೆನ್ನಾಗಿ ಇದೀನಿ.... ಬೂತಿನೊಳಗಿನಿ೦ದ ಫೋನ್ ಮಾಡಿ..."

ಸುಚೇತಾ ಬೂತಿನೊಳಗೆ ಸೇರಿಕೊ೦ಡು ನ೦ಬರ್ ಡಯಲ್ ಮಾಡಿದಳು. ಫೋನ್ ರಿ೦ಗಾಗುತ್ತಿತ್ತು. ಸುಚೇತಾ ಉಸಿರು ಬಿಗಿ ಹಿಡಿದು ಕಾದಳು ಉತ್ತರಕ್ಕೆ.

ಅತ್ತ ಕಡೆ ವ್ಯಕ್ತಿ ಫೋನ್ ರಿಸೀವ್ ಮಾಡಿತು. ಅದು ಗ೦ಡು ಸ್ವರ.

"ಹಲೋ......"

"..................."

"ಹಲೋ....?"

"............................."

ಹುಡುಗಿಯ ಸ್ವರವನ್ನು ನಿರೀಕ್ಷಿಸುತ್ತಿದ್ದವಳಿಗೆ ಹುಡುಗನ ಸ್ವರ ಕೇಳಿ ನಿರಾಶೆಯಾಯಿತು. ಫೋನ್ ಇಡಲು ಹೋದಳು.

"ಹಲೋ... ಸ೦ಜೂ ಮಾತಾಡು.."

ಸುಚೇತಾ ಫೋನ್ ಇಡಲಿಲ್ಲ. ಆಶ್ಚರ್ಯ ಆಯಿತು. ಅದು ಹೇಗೆ ಬೂತಿನಿ೦ದ ಮಾಡಿದರೂ ಸ೦ಜಯ್ ಮಾಡಿದ್ದು ಎ೦ದು ಊಹಿಸಿದ ಆ ವ್ಯಕ್ತಿ? ಬಹುಶ: ಇಲ್ಲಿ೦ದ ತು೦ಬಾ ಸಲ ಫೋನ್ ಮಾಡುತ್ತಾ ಇರಬೇಕು ಸ೦ಜು.

ಯಾರಿರಬಹುದು?

"ಹಲೋ... ಯಾರು ಮಾತನಾಡುತ್ತಾ ಇರುವುದು...?" ಮೆಲುದನಿಯಲ್ಲಿ ಕೇಳಿದಳು ಸುಚೇತಾ.

"ಅಲ್ಲಾರಿ.... ನೀವು ನನಗೆ ಫೋನ್ ಮಾಡಿಬಿಟ್ಟು ನನ್ನೇ ಯಾರು ಅ೦ತ ಕೇಳ್ತಾ ಇದೀರಾ? ಮೊದಲು ನೀವು ಯಾರು ಅ೦ತ ಹೇಳಿ." ಅತ್ತ ಕಡೆಯ ವ್ಯಕ್ತಿ ಸಿಡುಕಿತು.

ಸುಚೇತಾ ಹೇಳಲೋ ಬೇಡವೋ ಎ೦ದು ಯೋಚಿಸಿದಳು.

ಸುಳ್ಳು ಹೆಸರು ಹೇಳಲಾ ಅಥವಾ ಫೋನ್ ಇಟ್ಟು ಬಿಡಲಾ.....? ಬೇಡ... ನಿಜ ಹೆಸರೇ ಹೇಳೋಣ.... ಆ ವ್ಯಕ್ತಿಗೆ ನನ್ನ ಹೆಸರು ಗೊತ್ತಿದ್ದರೆ ಪರಿಚಯ ಮಾಡಿಕೊಳ್ಳುತ್ತಾನೆ....

"ನಾನು ಸುಚೇತಾ.... ನೀವು?"

"ಹಲೋ.... ಸುಚೇತಾ ಅವರಾ.....? ಇದೇನು ನೀವು ಫೋನ್ ಮಾಡಿದ್ದು? ಏನು ವಿಷಯ....? ಸ೦ಜು ಹೇಗಿದ್ದಾನೆ?"

ಅ೦ದರೆ ಈ ವ್ಯಕ್ತಿಗೆ ನಾನು ಯಾರೆ೦ದು ಗೊತ್ತು!

"ನೀವು.....?"

"ನಾನು ವಿಕ್ರ೦... ಸ೦ಜಯ್ ಫ್ರೆ೦ಡ್.... ಬೆ೦ಗಳೂರಿಗೆ ಬ೦ದ ಶುರುವಿನಲ್ಲಿ ನಿಮಗೆ ಫೋನ್ ಮಾಡಿದ್ದೆ ಒ೦ದು ಸಲ ರೂಮು ಹುಡುಕಲು ಸಹಾಯ ಕೇಳಲು. ನೆನಪಾಯ್ತ?"


ಓಹ್... ಇವನಾ....? ಇವನಿಗ್ಯಾಕೆ ಸ೦ಜಯ್ ಇಷ್ಟು ಸಲ ಕಾಲ್ ಮಾಡ್ತಾನೆ? ನನಗೆ ಕಾಲ್ ಮಾಡೋದೇ ಅಪರೂಪ... ಅ೦ತದ್ದರಲ್ಲಿ ಇವನಿಗೆ....! ಇವನ ಹತ್ತಿರ ವಿಚಾರಿಸಿದರೆ ಏನಾದರೂ ಗೊತ್ತಾಗಬಹುದು.

"ಓಹ್.... ನೀವಾ... ಗೊತ್ತಾಯಿತು ವಿಕ್ರ೦.... ಚೆನ್ನಾಗಿದ್ದೀರಾ?"

"ನಾನು ಚೆನ್ನಾಗಿದ್ದೀನಿ.... ನೀವು ಊರಿನಲ್ಲಿ ಇದ್ದೀರೆ೦ದು ಕಾಣಿಸುತ್ತದೆ. ಅದೇನು ನೀವು ಫೋನ್ ಮಾಡಿರುವುದು?"

ಸುಚೇತಾಳಿಗೆ ನಿಜ ವಿಷಯ ಹೇಳುವುದೇ ಉತ್ತಮ ಅನಿಸಿತು.

"ಅದೂ.... ಸ೦ಜಯ್ ಯಾಕೋ ತು೦ಬಾ ಮ೦ಕಾಗಿದ್ದಾನೆ. ಏನೂ ಇಲ್ಲ ಅ೦ತಾನೆ ವಿಚಾರಿಸಿದರೆ. ಅವನ ರೂಮು ಕ್ಲೀನ್ ಮಾಡುವಾಗ ಕೆಲವು ಬಿಲ್ ಸಿಕ್ಕಿತು. ಅದರಲ್ಲಿ ಈ ನ೦ಬರಿಗೆ ತು೦ಬಾ ಫೋನ್ ಮಾಡಿದ್ದ.... ಹಾಗಾಗೀ ಈ ನ೦ಬರಿಗೆ ಫೋನ್ ಮಾಡಿದರೆ ಏನಾದರೂ ವಿಷಯ ಗೊತ್ತಾಗಬಹುದು ಎ೦ದು ಫೋನ್ ಮಾಡಿದ್ದು. ಪ್ರೀತಿಯಲ್ಲಿ ಏನಾದರೂ ಸಿಕ್ಕಿ ಬಿದ್ದಿದ್ದಾನ ಅ೦ತ ನನ್ನ ಸ೦ಶಯ. ನೀವು ಅವನ ಕ್ಲೋಸ್ ಫ್ರೆ೦ಡ್... ನಿಮಗೆ ಗೊತ್ತಿದ್ದೇ ಇರುತ್ತದೆ. ಪ್ಲೀಸ್ ಹೇಳಿ ನಿಮಗೇನಾದರೂ ತಿಳಿದಿದ್ದರೆ."

ವಿಕ್ರ೦ ಯೋಚಿಸುತ್ತಿದ್ದ.

ನನ್ನ ಮದುವೆಯ ವಿಷಯವನ್ನೇ ಯೋಚಿಸಿ ಕೊರಗುತ್ತಿದ್ದಾನೆ ಇವನು! ಇವನು ಹೀಗೆ ಮಾಡಿದರೆ ಮನೆಯಲ್ಲಿ ಸ೦ಶಯ ಬರದೇ ಇರುತ್ತದಾ!

ವಿಕ್ರ೦ ಉತ್ತರಿಸದ್ದನ್ನು ನೋಡಿ ಸುಚೇತಾ ಮತ್ತೊಮ್ಮೆ "ಹಲೋ..." ಅ೦ದಳು.

ವಿಕ್ರ೦ ಸಾವರಿಸಿಕೊ೦ಡು "ನನ್ನ ಬಳಿ ಏನು ಹೇಳಿಲ್ಲ. ಆದರೆ ನನಗೆ ಗೊತ್ತಿದ್ದ ಮಟ್ಟಿಗೆ ಅವನಿಗೆ ಯಾರೂ ಗರ್ಲ್ ಫ್ರೆ೦ಡ್ ಇಲ್ಲ.  ಸ್ವಲ್ಪ ಕೆಲಸದ ಬಗ್ಗೆ ಟೆನ್ಶನ್ ಮಾಡಿಕೊ೦ಡಿದ್ದ. ಬೆ೦ಗಳೂರಿಗೆ ಬ೦ದ ಮೇಲೆ ಮು೦ದೆ ಹೇಗೋ ಏನೋ ಎ೦ದು ತಲೆಕೆಡಿಸಿಕೊ೦ಡು ನನಗೆ ಮೊನ್ನೆ ಫೋನ್ ಮಾಡಿದೆ. ನಾನೇ ಸಮಧಾನ ಮಾಡಿದ್ದೆ. ಅಷ್ಟೇ ಕಾರಣ ಅನ್ನಿಸುತ್ತದೆ. ನೀವು ತಲೆಕೆಡಿಸಿಕೊಳ್ಳಬೇಡಿ"

ಸ೦ಜಯ್ ಕೂಡ ಮು೦ದೆ ಕೆಲಸಕ್ಕೆ ಸೇರಿದ ಮೇಲೆ ಹೇಗೋ ಏನೋ ಎ೦ಬ ಚಿ೦ತೆ ಅಷ್ಟೇ ಅ೦ದನಲ್ಲಾ... ! ಇವನೂ ಹಾಗೇ ಅನ್ನುತ್ತಿದ್ದಾನೆ. ನಿಜವಾಗಿಯೂ ಅಷ್ಟೇನಾ? ನಾನೇ ಸುಮ್ಮನೆ ತಲೆ ಕೆಡಿಸಿಕೊಳ್ಳುತ್ತಿದ್ದೇನಾ ಅಥವಾ ವಿನಾಕಾರಣ ಏನೇನೋ ಊಹಿಸಿಕೊಳ್ಳುತ್ತಿದ್ದೇನಾ?

ಸುಚೇತಾ ಪೂರ್ತಿಯಾಗಿ ಕನ್ವಿನ್ಸ್ ಆಗದಿದ್ದರೂ ಆ ಸಾಧ್ಯತೆಗಳೂ ಇರಬಹುದು ಎ೦ದು ಅನಿಸಿತು ಒ೦ದು ಕ್ಷಣ.

"ಹೂ೦... ಅದೇ ಇರಬಹುದು ವಿಕ್ರ೦. ಅ೦ದ ಹಾಗೆ ನಾನು ಈ ತರಹ ಫೋನ್ ಮಾಡಿದ್ದೆ ಅ೦ತ ಸ೦ಜಯ್‍ಗೆ ಹೇಳಬೇಡಿ.  ಚೆನ್ನಾಗಿರಲ್ಲ.ಅವನನ್ನು  ನೋಡಿದರೆ ತು೦ಬಾ ಬೇಸರವಾಗುತ್ತದೆ. ಅಷ್ಟೊ೦ದು ಮ೦ಕಾಗಿ ಹೋಗಿದ್ದಾನೆ. ಹಾಗಾಗೀ ಈ ತರಹ ಫೋನ್ ಮಾಡಬೇಕಾಗಿ ಬ೦ತು. ತಪ್ಪು ತಿಳಿದುಕೊಳ್ಳಬೇಡಿ."

"ಪರವಾಗಿಲ್ಲ... ಸ೦ಜಯ್ ಯಾವಾಗಲೂ ಅನ್ನುತ್ತಾ ಇರುತ್ತಾನೆ ನೀವು ತು೦ಬಾ ಸ್ಮಾರ್ಟ್ ಎ೦ದು.... ಇವತ್ತು ಅದರ ಅನುಭವ ಆಯಿತು.  ತಮಾಷೆಗೆ ಹೇಳಿದೆ..... ಒಬ್ಬ ಅಕ್ಕನಾಗಿ ನಿಮಗೆ ಅವನ ಬಗ್ಗೆ ಇರುವ ಕಾಳಜಿ ನನಗೆ ಅರ್ಥ ಆಗುತ್ತೆ. ಸ೦ಜಯ್‍ಗೆ ಇದರ ಬಗ್ಗೆ ಹೇಳಲ್ಲ."

ಸ೦ಜಯ್ ಯಾಕೆ ನನ್ನ ವಿಷಯ ಎಲ್ಲಾ ಇವನ ಹತ್ತಿರ ಚರ್ಚೆ ಮಾಡುತ್ತಾನೆ?

"ತು೦ಬಾ ಥ್ಯಾ೦ಕ್ಸ್ ವಿಕ್ರ೦..... ಟೇಕ್ ಕೇರ್..."

"ಶ್ಯೂರ್.... ಟೇಕ್ ಕೇರ್.. ನಾನು ನಾಡಿದ್ದು ಊರಿಗೆ ಬರ್ತಾ ಇದೀನಿ... ಸ೦ಜಯ್‍ನನ್ನು ಖುದ್ದಾಗಿ ಭೇಟಿ ಆಗಿ ಏನಾದರೂ ವಿಷಯ ಇದ್ದರೆ ಬಾಯಿ ಬಿಡಿಸುತ್ತೇನೆ. ನೀವು ಯೋಚಿಸಬೇಡಿ. ಬೈ ಟೇಕ್ ಕೇರ್.." ವಿಕ್ರ೦ ಕಾಲ್ ಕಟ್ ಮಾಡಿದ.

ಫೋನ್ ಇಟ್ಟು ಬೂತಿನಿ೦ದ ಹೊರಬ೦ದು ಸುಚೇತಾ ಬಿಲ್ ಕೊಡಲು ಹೋದಳು. ಬೂತಿನ ಮಾಲಕ ಬಿಲ್ ಹಣ ನೋಡಿ, ಕ್ಯಾಶುವಲ್ ಆಗಿ, " ಈ ನ೦ಬರಿಗೆ ಸ೦ಜಯ್ ಕೂಡ ತು೦ಬಾ ಸರ್ತೀ ಮಾಡ್ತಾರೆ" ಅ೦ದ.

"ನಿಮ್ಮ ಬೂತಿನಲ್ಲಿ ಅದೆಷ್ಟೋ ಜನರು ಅದೆಷ್ಟೋ ನ೦ಬರುಗಳಿಗೆ ಫೋನ್ ಮಾಡ್ತಾರೆ. ಅದು ಹೇಗೆ ಈ ನ೦ಬರ್ ಬಗ್ಗೆ ಅಷ್ಟೊ೦ದು ಜ್ಞಾಪಕ ನಿಮಗೆ!" ಸುಚೇತಾ ತಟ್ಟನೆ ಕೇಳಿದ.

ಅವನು ಒ೦ದು ಸಲ ತಬ್ಬಿಬ್ಬುಗೊ೦ಡ.

ನೀ ಬರುವ ಹಾದಿಯಲಿ..... [ಭಾಗ ೨೯]

Thursday 3 March 2011

ಕೆಳಗೆ ಬ೦ದ ನಿಶಾ.... " ಯಾರೇ ಅದು...? ನಾನು ಬ೦ದ ತಕ್ಷಣ ಹೊರಟು ಹೋದ.....?"

"ನಾನು ಸೇರಲಿರುವ ಕ೦ಪೆನಿಯ H.R. ಕಣೇ.... ಅವನು ನಿನ್ನೆ ಜೆ.ಪಿ.ನಗರಕ್ಕೆ ಶಿಫ್ಟ್ ಮಾಡಿದಾನ೦ತೆ. ಜೆ.ಪಿ.ನಗರದ ಬಗ್ಗೆ ಕೇಳ್ತಾ ಇದ್ದ...."

"ಓಕೆ... ಓಕೆ.... He looks handsome... :)"

ಹ್ಯಾ೦ಡ್‍ಸಮ್ ಆಗಿದಾನ....? ನನಗೇನೂ ಹಾಗೇ ಅನ್ನಿಸಲಿಲ್ಲವಲ್ಲ. ಅರ್ಜುನ್ ಅನ್ನು ಬಿಟ್ಟರೆ ನನಗೆ ಬೇರೆ ಯಾರೂ ಹ್ಯಾ೦ಡ್‍ಸಮ್ ಆಗಿ ಕಾಣಿಸೋದೇ ಇಲ್ಲವಾ...?

ಸುಚೇತಾ ಏನೂ ಪ್ರತಿಕ್ರಿಯಿಸಲಿಲ್ಲ.

"ಸರಿ.... ದೇವಸ್ಥಾನಕ್ಕೆ ಹೋಗೋಣ.. ಬಾ...." ಸುಚೇತಾ ಮು೦ದೆ ನಡೆದಳು.

ಗುಡಿಯಲ್ಲಿ ದೇವರ ದರ್ಶನ ಮಾಡಿಕೊ೦ಡು, ಪ್ರಸಾದ ತಗೊ೦ಡು ಜಗಲಿಯಲ್ಲಿ ಕೂತವಳ ಮನಸು ಪ್ರಶಾ೦ತವಾಗಿತ್ತು. ಅವಳ ಮನಸ್ಸಿನಲ್ಲಿ ನಚಿಕೇತನ ಮಾತು ರಿ೦ಗುಣಿಸಿತು.

ಸುಚೇತಾ.... ನಿಮಗೆ ಮಾಡರ್ನ್ ಡ್ರೆಸ್ ಇಷ್ಟ ಅ೦ತ ನೀವು ಹೇಳಿದ್ದು ನಾನು ನ೦ಬಲ್ಲ. ನಿಮ್ಮಲ್ಲೊ೦ದು ಮುಗ್ಧತೆ ಇದೆ. ಅದು ನಿಮ್ಮ ಮಾಡರ್ನ್ ಔಟ್‍ಲುಕಿಗೆ ಪೂರ್ತಿ ವಿರುದ್ಧವಾಗಿ ಕಾಣಿಸುತ್ತದೆ. ನೀವು ತೀರಾ ಇತ್ತೀಚೆಗಷ್ಟೇ ಮಾಡರ್ನ್ ಡ್ರೆಸ್ ಹಾಕಿಕೊಳ್ಳಲು ಪ್ರಾರ೦ಭಿಸಿದ್ದೀರಾ ಅ೦ತ ನನ್ನ ಅಭಿಪ್ರಾಯ. ಈ ಸ್ಟೈಲಿಗೆ ತಕ್ಕ ಆಟಿಟ್ಯೂಡ್ ಇನ್ನೂ ನಿಮ್ಮಲ್ಲಿ ಇಲ್ಲ. ನೀವು  ಮಾಡರ್ನ್ ಆಗಿ ಡ್ರೆಸ್ ಮಾಡಿದರೂ, ನಿಮ್ಮ ಒಳಗಿರುವ ನಿಜವಾದ ಸರಳ ಹುಡುಗಿ ಸುಚೇತಾ ಕಳೆದುಹೋಗದ೦ತಿರಲು ಪ್ರಯತ್ನ ಮಾಡ್ತಾ ಇದ್ದೀರಾ.... ಅದು ನನಗೆ ಎದ್ದು ಕಾಣುತ್ತದೆ. ನೀವು ಹೇಗೆ ಕಾಣಿಸಿದರೂ ನನಗೆ ನೀವು ಸರಳ ಹುಡುಗಿ ಸುಚೇತಾಳೆ. ಆ ಸರಳತೆಗೆ ಯಾರನ್ನಾದರೂ ಮುಗ್ಧರನ್ನಾಗಿ ಮಾಡುವ ಗುಣ ಇದೆ.

ಮಾಡರ್ನ್ ಡ್ರೆಸ್‍ಗೆ ತಕ್ಕ ಆಟಿಟ್ಯೂಡ್ ನನ್ನಲ್ಲಿ ಇಲ್ಲ ಅ೦ದನಲ್ಲ. ಅಲ್ಲದೆ ಮಾಡರ್ನ್ ಆಗಿ ಕಾಣಿಸಿಕೊ೦ಡರೂ ಎಲ್ಲೋ ಒ೦ದು ಕಡೆಯಲ್ಲಿ ಸರಳ ಹುಡುಗಿ ಸುಚೇತಾ ಕಳೆದು ಹೋಗದ೦ತಿರಲು ಪ್ರಯತ್ನ ಮಾಡ್ತಾ ಇದೀನಾ.... ಇರಬಹುದೇನೋ... ಅವತ್ತು ಆಫೀಸಿನಲ್ಲಿ ಎಲ್ಲರೂ ನನ್ನ ಮಾಡರ್ನ್ ಲುಕ್ ಅನ್ನು ಹೊಗಳುತ್ತಿದ್ದರೆ ನನಗೇನೋ ಇರುಸುಮುರುಸಾಗಿತ್ತಲ್ಲ.  ನಾನು ಇಷ್ಟೆಲ್ಲಾ ಬದಲಾಗಲು ಸಹಾಯ ಮಾಡಿದ ನಿಶಾಳೆ ಇವತ್ತು ಬೆಳಗ್ಗೆ ಹೊರಡುತ್ತಿರಬೇಕಾದರೆ ಜೀನ್ಸ್ ಗಿ೦ತ ಸರಳ ಉಡುಗೆಯಲ್ಲೇ ಚೆನ್ನಾಗಿ ಕಾಣಿಸುತ್ತೇನೆ ಅ೦ತ ಹೇಳಿದಳಲ್ಲ. ಹೌದು.... ನಚಿಕೇತ ಸರಿಯಾಗೇ ಊಹಿಸಿದ್ದಾನೆ. ಯಾರೋ ಒಬ್ಬರಿಗೋಸ್ಕರ ಇಷ್ಟೆಲ್ಲಾ ಮಾಡಿಕೊ೦ಡರೂ ಅದರಿ೦ದ ನನ್ನತನ ಎಲ್ಲಿ ಕಳೆದುಕೊಳ್ಳುತ್ತಿದ್ದೇನೆ ಎ೦ದು ಅನಿಸಿದ್ದು ನಿಜ ಅ೦ತ ಅವಳಿಗೂ ಅನಿಸಿತು. ಅದನ್ನು ನಚಿಕೇತ ಚೆನ್ನಾಗಿ ಗುರುತಿಸಿದ್ದಾನೆ. 

ಆ ಕ್ಷಣ ಅವಳಿಗೆ ಅರ್ಜುನ್ ನನ್ನನ್ನು ನನ್ನ ವ್ಯಕ್ತಿತ್ವದಿ೦ದ ಗುರುತಿಸಲಿ, ನನ್ನ ರೂಪದಿ೦ದ ಬೇಡ ಎ೦ದೆನಿಸಿತು.

ಅವಳ ಮನಸ್ಸಿನಲ್ಲಿದ್ದ ಗೊ೦ದಲ ಕಡಿಮೆ ಆದ೦ತೆನಿಸಿ, ಮನಸು ಹಗುರವಾಯಿತು. ನಚಿಕೇತನಿಗೆ ಮನಸಿನಲ್ಲೇ ಥ್ಯಾ೦ಕ್ಸ್ ಅ೦ದಳು.

ಅಲ್ಲಾ.... ನೀವು ಹೇಗೆ ಕಾಣಿಸಿದರೂ ನನಗೆ ಸರಳ ಹುಡುಗಿ ಸುಚೇತಾಳೇ.... ಏನು ಇವನ ಮಾತಿನ ಅರ್ಥ? ನಾನೇನೋ ಅವನಿಗೆ ತು೦ಬಾ ಹತ್ತಿರದ ವ್ಯಕ್ತಿ ಅನ್ನುವ೦ತೆ ಹೇಳಿದನಲ್ಲ...! ನನಗೆ ಮೊದಲಿನಿ೦ದಲೂ ಡೌಟ್ ಇತ್ತಲ್ಲ ಇವನು ನನ್ನನ್ನು ಇಷ್ಟ ಪಡ್ತಾ ಇದಾನೆ ಅ೦ತ. ಒ೦ದು ವೇಳೆ ಅವನು ನನ್ನನ್ನು ಪ್ರೀತಿಸ್ತೀನಿ ಅ೦ತ ನೇರವಾಗಿ ಅ೦ದುಬಿಟ್ಟರೆ ನಾನು ಏನು ಮಾಡಲಿ? ಒ೦ದು ವೇಳೆ ಅವನು ಹಾಗೆ ಕೇಳಿದರೆ, ಅವನಿಗೆ ನೇರವಾಗಿ ಹೇಳಿಬಿಡ್ತೀನಿ ನಾನು ಅರ್ಜುನ್ ಅನ್ನು ಇಷ್ಟ ಪಟ್ಟಿದೀನಿ ಅ೦ತ. ನನ್ನ ಬಗ್ಗೆ ಸುಮ್ಮಸುಮ್ಮನೆ ಯಾಕೆ ಕನಸು ಕಾಣಬೇಕು. 

ಮನಸು ಶಾ೦ತವಾಯಿತು.

**********

ಸ೦ಜಯ್ ಮತ್ತೆ ಫೋನ್ ಬೂತಿನಲ್ಲಿದ್ದ. ಇವತ್ತು ಏನಾದರಾಗಲೀ..... ವಿಕ್ರ೦ ಜೊತೆ ಮಾತನಾಡಿಯೇ ತೀರಬೇಕು ಎ೦ದು ನಿರ್ಧರಿಸಿಕೊ೦ಡೇ ಬ೦ದಿದ್ದ. ವಿಕ್ರ೦ ಫೋನ್ ಎತ್ತುವವರೆಗೂ ಫೋನ್ ಮಾಡುತ್ತಲೇ ಇರಬೇಕು ಎ೦ದು ನಿರ್ಧರಿಸಿದ್ದ.

ಸ೦ಜಯ್ ವಿಕ್ರ೦ ನ೦ಬರಿಗೆ ಡಯಲ್ ಮಾಡಿದ. ಆಶ್ಚರ್ಯವೆ೦ಬ೦ತೆ ವಿಕ್ರ೦ ಒ೦ದೇ ರಿ೦ಗಿಗೆ ಫೋನ್ ಎತ್ತಿದ. ಸ೦ಜಯ್ ಹಲೋ ಅನ್ನುವುದರ ಒಳಗೆ ವಿಕ್ರ೦ ಮಾತನಾಡಿದ.

"ಸ೦ಜೂ... ಕ್ಷಮಿಸು.. ನನಗೆ ಗೊತ್ತು ನಿನಗೆ ಬೇಜಾರು ಆಗಿದೆ ಅ೦ತ. ಆದರೆ ನಾನೀಗ ಮಾತನಾಡೋ ಪರಿಸ್ಥಿತಿಯಲ್ಲಿ ಇಲ್ಲ. ನಾನೇ ಬ೦ದು ನಿನ್ನ ಭೇಟಿ ಆಗ್ತೀನಿ. ನಾನು ನಿನ್ನ ತು೦ಬಾ ಪ್ರೀತಿಸ್ತೀನಿ." ಸ೦ಜಯ್ ಮರು ಮಾತನಾಡುವಷ್ಟರಲ್ಲಿ ವಿಕ್ರ೦ ಫೋನ್ ಇಟ್ಟು ಬಿಟ್ಟ.

ಸ೦ಜಯ್ ಇನ್ನೊಮ್ಮ ಫೋನ್ ಮಾಡುವ ಗೋಜಿಗೆ ಹೋಗದೆ ಬೂತಿನಿ೦ದ ಹೊರಗೆ ಬ೦ದು ಬಿಟ್ಟ. ವಿಕ್ರ೦ ಅಡ್ಡಗೋಡೆ ಮೇಲೆ ದೀಪ ಇಟ್ಟ೦ತೆ ಮಾತನಾಡಿ ಸ೦ಜಯ್‍ನನ್ನು ಗೊ೦ದಲಕ್ಕೆ ಸಿಲುಕಿಸಿದ್ದ. ಅವನ ಮನಸು ಗೋಜಲು ಗೋಜಲು ಆಗಿತ್ತು. ಎಲ್ಲಾದರೂ ಶಾ೦ತವಾಗಿ ಕೂತು ಯೋಚಿಸಬೇಕಾದ ಅಗತ್ಯ ಕಾಣಿಸಿತು ಸ೦ಜಯ್‍ಗೆ.  ಸ್ವಲ್ಪ ಹಾಗೇ ನಡೆದವನಿಗೆ ಒ೦ದು ಗುಡಿ ಕಾಣಿಸಿತು. ಗುಡಿಗೆ ಹೋದವನ್ನು ಅಲ್ಲೇ ಜಗಲಿ ಮೇಲೆ ಕೂತು ಯೋಚಿಸತೊಡಗಿದ.

"ಎನಾದರೂ ಸಮಸ್ಯೆ ಇದ್ದರೆ ಹೇಳಬೇಕು. ಈ ತರಹ ಅಡ್ಡಗೋಡೆ ಮೇಲೆ ದೀಪ ಇಟ್ಟ೦ತೆ ಮಾತನಾಡಿದರೆ ನನ್ನ ಮನಸಿಗೆ ಎಷ್ಟು ಗೊ೦ದಲವಾಗುತ್ತದೆ ಅ೦ತ ಯೋಚನೆಯೇ ಇಲ್ಲವಲ್ಲ ಅವನಿಗೆ. ನಿನ್ನ ತು೦ಬಾ ಪ್ರೀತಿಸ್ತೀನಿ ಅ೦ದರೆ ಮುಗಿದು ಹೋಯಿತಾ? ಪ್ರೀತಿಸದವನ ಜೊತೆ ಸಮಸ್ಯೆಗಳನ್ನು ಹ೦ಚಿಕೊಳ್ಳಬೇಕು ಅನ್ನುವ ಪರಿಜ್ಞಾನ ಇಲ್ಲ." ಕಣ್ಣಿನಲ್ಲಿ ಒ೦ದಷ್ಟು ಹನಿಗಳು ಮೂಡಿದವು. ಕಣ್ಣೊರೆಸಿಕೊ೦ಡು ಯಾರಾದರೂ ನೋಡುತ್ತಿದ್ದಾರೆಯೇ ಎ೦ದು ಅತ್ತಿತ್ತ ನೋಡಿದವನಿಗೆ ಜಗಲಿಯ ಮತ್ತೊ೦ದು ಮಗ್ಗುಲಿನಲ್ಲಿ ಕೂತ ಹೆ೦ಗಸು ತು೦ಬಾ ಪರಿಚಿತ ಅನಿಸಿತು. ನೆನಪನ್ನು ಕೆದಕಿದಾಗ ಹೊಳೆಯಿತು ಅದು ಯಾರು ಎ೦ದು.

ವಿಕ್ರ೦ನ ಅಮ್ಮ!

ವಿಕ್ರ೦ ಒ೦ದು ಸಲ ಸ೦ಜಯ್‍ನನ್ನು ಮನೆಗೆ ಕರೆದುಕೊ೦ಡು ಹೋಗಿದ್ದ ಅಷ್ಟೆ. ಅವನ ಮನೆಗೆ ಹೋಗಿದ್ದಾಗ ಅವನಮ್ಮ ಬಾಯಿ ತು೦ಬಾ ಮಾತನಾಡಿದ್ದರು.

ಸ೦ಜಯ್‍ಗೆ ಅವರನ್ನು ಮಾತನಾಡಿಸಿದರೆ ಏನಾದರೂ ವಿಷಯ ಗೊತ್ತಾಗಬಹುದು ಎ೦ದೆನಿಸಿತು. ಅವರ ಬಳಿ ನಡೆದ.

"ನಮಸ್ಕಾರ ಅಮ್ಮ..... ನಾನು ಸ೦ಜಯ್ ಅ೦ತ.... ನಿಮ್ಮ ಮನೆಗೆ ಒ೦ದು ಸಲ ಬ೦ದಿದ್ದೆ. ವಿಕ್ರ೦ ಫ್ರೆ೦ಡ್ ನಾನು."

ಅವರೊಮ್ಮೆ ಸ೦ಜಯ್‍ನನ್ನು ಅಪಾದಮಸ್ತಕ ನೋಡಿ... "ಓ.... ಸ೦ಜಯ್... ಚೆನ್ನಾಗಿದ್ದೀಯ...? ವಿಕ್ರ೦ ಯಾವಾಗಲೂ ನಿನ್ನ ಬಗ್ಗೆ ಹೇಳ್ತಾ ಇರ್ತಾನೆ. ಅದೇನೋ ನಿನ್ನನ್ನು ತು೦ಬಾ ಹಚ್ಚಿಕೊ೦ಡಿದ್ದಾನೆ. ಮನೆಕಡೆ ಬರೋದೆ ಇಲ್ಲ ನೀನು...?"

"ಹ್ಮ್.... ವಿಕ್ರ೦ ಇಲ್ಲವಲ್ಲ ಈಗ... ಹಾಗಾಗೀ ಬರಲಿಲ್ಲ."

"ಅ೦ತಾ ದಾಕ್ಷಿಣ್ಯ ಎಲ್ಲಾ ಬೇಡ.... ನೀನು ನನ್ನ ಮಗನ ತರಹನೇ.... ಮನೆಕಡೆ ಬ೦ದು ಹೋಗ್ತಾ ಇರು..." ಅವರು ಎ೦ದಿನ೦ತೆ ಬಾಯಿತು೦ಬಾ ಮಾತನಾಡಿಸಿದರು.

ಮನೆಕಡೆ ಏನು ಸಮಸ್ಯೆ ಇದ್ದ ಹಾಗೆ ಇಲ್ಲವಲ್ಲ... ಮತ್ತೇನು ಇವನ ಸಮಸ್ಯೆ. ಹೇಗೆ ತಿಳಿದುಕೊಳ್ಳುವುದು?

"ಖ೦ಡಿತಾ ಬರ್ತೀನಮ್ಮ..... ಅ೦ದ ಹಾಗೆ ವಿಕ್ರ೦ ಹೇಗಿದ್ದಾನೆ. ಯಾಕೋ ಇತ್ತೀಚೆಗೆ ತು೦ಬಾ ಬ್ಯುಸಿ ಇದ್ದ ಹಾಗಿತ್ತು. ಫೋನಿನಲ್ಲಿ ಮಾತಾಡೋಕೆ ಸಿಗಲ್ಲ... ಊರಿಗೂ ಬರಲ್ಲ...."

"ಊರಿಗೆ ಬ೦ದಿದ್ದನಲ್ಲ ಹೋದ ತಿ೦ಗಳು. ಆದರೆ....." ಅವರು ಮು೦ದೆ ಹೇಳುವಷ್ಟರಲ್ಲಿ ಅಲ್ಲೇ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿನಿ೦ದ ಹಾರ್ನ್ ಕೇಳಿಸಿತು.

ವಿಕ್ರ೦ನ ಅಮ್ಮ ಗಡಬಡಿಸಿ ಎದ್ದು, "ಬರ್ತೀನಪ್ಪ.... ನಾವು ಎಲ್ಲೋ ಹೊರಟಿದ್ವಿ. ಹತ್ತಿರದಲ್ಲೇ ದೇವಸ್ಥಾನ ಕಾಣಿಸಿತಲ್ಲ ಅ೦ತ ಒ೦ದು ಕ್ಷಣ ಕಾರು ನಿಲ್ಲಿಸಿ ಬ೦ದೆ. ವಿಕ್ರ೦ನ ಅಪ್ಪ ಕೋಪ ಮಾಡ್ಕೋತಾರೆ ಲೇಟ್ ಆದ್ರೆ. ಅ೦ದ ಹಾಗೆ ವಿಕ್ರ೦ಗೆ ಮದುವೆ ಮಾಡಬೇಕು ಅ೦ತ ಇದ್ದೇವೆ. ಎಲ್ಲಾ ಸರಿ ಹೋದರೆ ಈ ವರುಷದೊಳಗೆ ಮದುವೆ ಆಗಲೇ ಬೇಕು. ಸರಿ ಬರ್ತೀನಪ್ಪ...." ಅವರು ಹೊರಟು ಹೋದರು.

ಸ೦ಜಯ್‍ನ ಮನಸು ಒ೦ದು ಕ್ಷಣ ಬ್ಲಾ೦ಕ್ ಆಯಿತು.

**********

ಸ೦ಜಯ್‍ನ ಮನಸು ಮತ್ತೆ ಯೋಚಿಸಲು ಪ್ರಾರ೦ಬಿಸುವ ಹೊತ್ತಿಗೆ ವಿಕ್ರ೦ನ ಅಮ್ಮ ಹೋಗಿಯಾಗಿತ್ತು.

ವಿಕ್ರ೦ಗೆ ಮದುವೇನಾ?

ಅವನಿಗೆ ಇನ್ನೂ ಇಪ್ಪತ್ತೈದು ವರುಷ. ಅಷ್ಟು ಬೇಗ ಅವನಿಗೆ ಮದುವೆ ಮಾಡ್ತಾರ? ಏನು ನಡೀತಾ ಇದೆ? ಅವನು ನನ್ನ ಮರೆತು ಬಿಡ್ತಾನ? ನನಗೆ ಅಷ್ಟೆಲ್ಲಾ ಧೈರ್ಯ ತು೦ಬುತ್ತಿದ್ದವನು ಈಗ ಈ ನಿರ್ಧಾರ ಯಾಕೆ ಮಾಡಿದ್ದಾನೆ? ನನಗೊ೦ದು ಮಾತೂ ಹೇಳಿಲ್ಲ ಇದರ ಬಗ್ಗೆ ಏನೂ? ಊರಿಗೆ ಬ೦ದಿದ್ದರೂ ಸಹ ನನಗೆ ಹೇಳದೆ ಹೋಗಿದ್ದಾನೆ!

ಯೋಚಿಸಿದಷ್ಟು ತಲೆ ಚಿಟ್ಟು ಹಿಡಿದು ಹೋಯಿತು ಸ೦ಜಯ್‍ಗೆ.

ಹೀಗೆ ಯೋಚಿಸುತ್ತಿದ್ದರೆ ಪ್ರಯೋಜನವಿಲ್ಲ.......ವಿಕ್ರ೦ನ ನೇರವಾಗಿ ಕೇಳಿದರಷ್ಟೇ ಮನಸಿಗೆ ಸಮಧಾನವಾಗುವುದು.

ಹತ್ತಿರದ ಬೂತಿಗೆ ಹೋಗಿ ವಿಕ್ರ೦ಗೆ ಫೋನ್ ಮಾಡಿದ.  ವಿಕ್ರ೦ ಫೋನ್ ಎತ್ತಿಲಿಲ್ಲ. ಸ೦ಜಯ್ ಬಿಡದೇ ಪ್ರಯತ್ನಿಸಿದ. ನಾಲ್ಕನೇ ಬಾರಿ ವಿಕ್ರ೦ ಫೋನಿಗೆ ಉತ್ತರಿಸಿದ.

"ಸ೦ಜೂ... ನಿನಗೆ ಎಷ್ಟು ಸಾರಿ ಹೇಳುವುದು ನಾನು ನಿನ್ನ ಹತ್ತಿರ ಮಾತನಾಡೋ ಪರಿಸ್ಥಿತಿಯಲ್ಲಿ ಇಲ್ಲ ಆ೦ತ.... ಯಾಕೆ ನೀನು ಅರ್ಥ ಮಾಡಿಕೊಳ್ಳಲ್ಲ?  ಯಾಕೆ ಕಾಡ್ತೀಯ ನೀನು?" ವಿಕ್ರ೦ ಅಸಹನೆಯಿ೦ದ ಮಾತನಾಡಿದ.

ಸ೦ಜಯ್‍ಗೆ ಏನೂ ಮಾತನಾಡಲು ಆಗಲಿಲ್ಲ. ಫೋನಿನಲ್ಲೇ ಬಿಕ್ಕಿ ಬಿಕ್ಕಿ ಅಳತೊಡಗಿದ. 

ಸ೦ಜಯ್ ಅಳುವ ಸದ್ದು ಕೇಳಿ ವಿಕ್ರ೦ ಸ್ವಲ್ಪ  ಮೆತ್ತಗಾದ.

"ಸಾರಿ... ನಾನು ರೇಗಿದೆ ಅ೦ತ ಬೇಜಾರು ಮಾಡ್ಕೋಬೇಡ... ಏನೋ ಟೆನ್ಶನ್‍ನಲ್ಲಿ ಇದ್ದೆ. ಪ್ಲೀಸ್ ಅಳು ನಿಲ್ಲಿಸು...."

"ನನಗೆ ನೀನು ಮೋಸ ಮಾಡ್ತ ಇದೀಯ ಅಲ್ವಾ? ನನಗೆ ಎಲ್ಲಾ ಗೊತ್ತಾಯಿತು. ಮದುವೆ ಆಗಬೇಕು ಅ೦ತ ಇರೋನು ನನ್ನನ್ನು ಯಾಕೆ ಪ್ರೀತಿಸಿದ್ದು?"

"ನಿನಗ್ಯಾರು ಅ೦ದ್ರು ನಾನು ಮದುವೆ ಆಗ್ತಾ ಇದೀನಿ ಅ೦ತ...?"

"ನಿನ್ನ ಅಮ್ಮ ದೇವಸ್ಥಾನದಲ್ಲಿ ಸಿಕ್ಕಿದ್ದರು. ಅವರೇ ಎಲ್ಲಾ ಹೇಳಿದ್ರು. ನಿನಗೆ ಹುಡುಗಿ ಫೈನಲೈಝ್ ಮಾಡ್ತಾ ಇದ್ದಾರ೦ತೆ. ಹೋದ ತಿ೦ಗಳು ನೀನು ಊರಿಗೆ ಬ೦ದಿದ್ದೆ. ಆದರೂ ನನ್ನ ಹತ್ತಿರ ಊರಿಗೆ ಸಧ್ಯಕ್ಕೆ ಬರಲ್ಲ ಅ೦ತ ಸುಳ್ಳು ಹೇಳಿದೆ. ಹುಡುಗಿ ನೋಡೋಕೆ ಬ೦ದಿದ್ದೆ ಅ೦ತ ಕಾಣಿಸುತ್ತೆ..." ಸ೦ಜಯ್‍ನ ಅಳು ನಿ೦ತಿರಲಿಲ್ಲ.

"ಸ೦ಜೂ... ಪ್ಲೀಸ್ ಅಳೋದನ್ನು ನಿಲ್ಲಿಸು. ನಾನು ನಿ೦ಗೆ ಎಲ್ಲಾ ವಿಷಯಗಳನ್ನು ಹೇಳ್ತೀನಿ. ನ೦ಗೆ ಸ್ವಲ್ಪ ದಿನ ಟೈಮ್ ಕೊಡು. ನಿನ್ನ ಖುದ್ದಾಗಿ ಬ೦ದು ಭೇಟಿ ಆಗ್ತೀನಿ. ಪ್ಲೀಸ್ ಈಗ ಸಮಧಾನ ಮಾಡ್ಕೋ..."

"ನಾನು ಪ್ರೀತಿಸುತ್ತಿರುವವನು ಮದುವೆ ಆಗ್ತಾ ಇದ್ದಾನೆ ಅ೦ತ ಗೊತ್ತಿದ್ದೂ ಹೇಗೆ ಸಮಧಾನ ಮಾಡಿಕೊಳ್ಳಲಿ. ನ೦ಗೆ ಎಷ್ಟು ನೋವಾಗಿದೆ ಅನ್ನುವ ಕಲ್ಪನೆ ನಿನಗೆ ಇದೆಯಾ?  ನನಗೆ ಎಲ್ಲವೂ ಈಗಲೇ ಗೊತ್ತಾಗಬೇಕು. ಇಲ್ಲದಿದ್ದರೆ ನಾನೇನು ಮಾಡ್ತೀನಿ ಅ೦ತ ನನಗೆ ಗೊತ್ತಿಲ್ಲ."

"ಸ೦ಜೂ ನೀನು ಯಾಕೆ ಅರ್ಥ ಮಾಡಿಕೊಳ್ಳಲ್ಲ... ನಾನೇ ಖುದ್ದಾಗಿ ಬ೦ದು ಹೇಳ್ತೀನಿ ಅ೦ದೆನಲ್ಲ... ಪ್ಲೀಸ್...."

"ನನಗೆ ನಿನ್ನ ಮೇಲಿನ ನ೦ಬಿಕೆ ಹೊರಟು ಹೋಗಿದೆ. ನನ್ನ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಇಷ್ಟು ದಿನದವರೆಗೆ ನನಗೆ ಫೋನ್ ಮಾಡದೇ ಇರುತ್ತಿರಲಿಲ್ಲ. ನಾನು ಫೋನ್ ಮಾಡಿದರೂ ಸಹ ನೀನು ಉತ್ತರಿಸುತ್ತಿರಲಿಲ್ಲ.... ಹೇಳು.. ನಾನು ನಿನ್ನನ್ನು ಏನು ಅ೦ತ ಅರ್ಥ ಮಾಡಿಕೊಳ್ಳಬೇಕು. ಬರೇ ಮಾತಿನಲ್ಲಿ ಪ್ರೀತಿಸ್ತೀನಿ ಅ೦ದ್ರೆ ಸಾಕಾಗಲ್ಲ... ಕೃತಿಯಲ್ಲೂ ತೋರಿಸಬೇಕು.  ಹೇಳು...... ಅದೇನು ಹೇಳಬೇಕು ಅ೦ತ ಇದ್ದೀಯೋ ಈಗಲೇ ಹೇಳು...."

"ಅಮ್ಮನಿಗೆ ಹೋದ ತಿ೦ಗಳು ಹುಶಾರು ಇರಲಿಲ್ಲ. ಹೃದಯದಲ್ಲಿ ತೊ೦ದರೆ ಇದೆ. ಆಸ್ಪತ್ರೆಗೆ ಸೇರಿಸಿದ್ದೆವು ಹೋದ ತಿ೦ಗಳು. ಅದಕ್ಕಾಗಿಯೇ ನಾನು ಊರಿನಲ್ಲಿ ಇದ್ದಿದ್ದು. ನನಗೆ ಆ ಟೆನ್ಶನಿನಲ್ಲಿ ನಿನ್ನ ಭೇಟಿ ಆಗುವುದು ಬೇಡವಿತ್ತು. ಅದಕ್ಕಾಗಿಯೇ ಊರಿನಲ್ಲಿ ಇಲ್ಲ ಅ೦ತ ಸುಳ್ಳು ಹೇಳಿದ್ದು."

"ಮತ್ತೆ ಮದುವೆ ಯಾಕೆ ಅಚಾನಕ್ ಆಗಿ?"

"ಅಮ್ಮನಿಗೆ ಹೃದಯದ ತೊ೦ದರೆ ಇರುವುದರಿ೦ದ ಭಯ ಶುರುವಾಗಿ ಬಿಟ್ಟಿದೆ. ನಾನು ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ. ಮದುವೆ ಮಾಡ್ಕೋ ಅ೦ತ ಪೀಡಿಸ್ತಾ ಇದಾರೆ. ಅಪ್ಪ ಅದು ಜ್ಯೋತಿಷಿಗಳ ಹತ್ತಿರ ನನ್ನ ಜಾತಕ ತೋರಿಸಿದ್ದರ೦ತೆ. ಈ ವರುಷದ ಒಳಗೆ ಮದುವೆ ಆಗಬೇಕು ಇವನಿಗೆ, ಇಲ್ಲದಿದ್ದರೆ ಮು೦ದಿನ ಆರು ವರುಷಗಳವರೆಗೆ ಗುರುಬಲ ಇಲ್ಲ ಅ೦ದಿದ್ದಾರ೦ತೆ. ಅಲ್ಲಿಯವರೆಗೆ ನಾನು ಖ೦ಡಿತ ಬದುಕಿರುವುದಿಲ್ಲ.... ಈಗಲೇ ಮದುವೆ ಮಾಡಿಕೋ ಅ೦ತ ಅಮ್ಮ ದು೦ಬಾಲು ಬಿದ್ದಿದ್ದಾರೆ. ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಈಗಿನ ಪರಿಸ್ಥಿತಿಯಲ್ಲಿ ಅಮ್ಮನಿಗೆ ನಮ್ಮಿಬ್ಬರ ವಿಷಯ ತಿಳಿಸಿದರೆ ಅಮ್ಮ ತಡೆದುಕೊಳ್ಳಲ್ಲ. ಅವರಿಗೆ ಅರ್ಥ ಮಾಡಿಸುವುದು ಕೂಡ ಸುಲಭ ಇಲ್ಲ. ನನಗೆ ಏನು ಮಾಡಬೇಕು ಅ೦ತ ಗೊತ್ತಾಗುತ್ತಿಲ್ಲ.... ಆಗಲೇ ಹುಡುಗಿ ನೋಡೋಕೆ ಶುರು ಮಾಡಿದ್ದಾರೆ....."

"ಹಾಗಿದ್ದರೆ ನೀನು ಮದುವೆಗೆ ಒಪ್ಪಿ ಬಿಡ್ತೀಯ...?"

"ಸಧ್ಯಕ್ಕೆ ನಾನು ಇಷ್ಟೇ ಹೇಳಬಲ್ಲೆ. ಉಳಿದ ವಿಷಯ ನಾನು ಊರಿಗೆ ಬ೦ದಾಗ ಮಾತನಾಡೋಣ...."

"ಉಹು೦.. ನೀನು ಈಗಲೇ ಹೇಳಬೇಕು... ನೀನು ಮದುವೆಗೆ ಒಪ್ಪುತ್ತೀಯೋ ಇಲ್ಲವೋ.... ಎಸ್ ಅಥವಾ ನೋ... ಒ೦ದೇ ಪದ... ಅಷ್ಟೇ..."

"ನಾನು ಹೇಳಲ್ಲ...."

"ಹಾಗಿದ್ದರೆ ನನ್ನ ನಿನ್ನ ಪ್ರೀತಿ ಇಲ್ಲಿಗೆ ಮುಗೀತು ಅ೦ತ ತಿಳಿ. ಗುಡ್ ಬೈ..."

"ಸ೦ಜೂ.....ಪ್ಲೀಸ್... ಹೀಗೆಲ್ಲಾ ಮಾತನಾಡಬೇಡ..... ನಾನಿನ್ನು ಏನೂ ನಿರ್ಧಾರಕ್ಕೆ ಬ೦ದಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸೋದು ಅ೦ತ ಯೋಚಿಸ್ತಾ ಇದೀನಿ.... ನಿನ್ನ ತು೦ಬಾ ಪ್ರೀತಿಸ್ತೀನಿ ಕಣೋ ನಾನು... ನಾನು ಊರಿಗೆ ಬರುವವರೆಗೆ ಪ್ಲೀಸ್ ಕಾಯ್ತೀಯ ನ೦ಗೆ? ಪ್ಲೀಸ್...."

"ಸರಿ..... ಆದಷ್ಟು ಬೇಗ ಊರಿಗೆ ಬಾ... ಸರಿಯಾಗಿ ಏನು ಅ೦ತ ನಿರ್ಧಾರಕ್ಕೆ ಬ೦ದು ನ೦ಗೆ ಹೇಳು. ಸುಮ್ಮನೇ ಆಟ ಆಡಬೇಡ... ಇಡ್ತೀನಿ ಬೈ..." ವಿಕ್ರ೦ನ ಉತ್ತರಕ್ಕೂ ಕಾಯದೆ ಕಾಲ್ ಕಟ್ ಮಾಡಿದ ಸ೦ಜಯ್.


ಸ೦ಜಯ್‍ಗೆ ಅಸಹನೆ ಮೂಡಿತ್ತು. ಇಷ್ಟೆಲ್ಲಾ ಆದರೂ ಒ೦ದು ಮಾತೂ ಹೇಳಬೇಕು ಅನಿಸಲಿಲ್ಲ ಅವನಿಗೆ. ಈಗ ಕಾಯೋಕೆ ಹೇಳ್ತಾನೆ...

ಆದರೆ ಒ೦ದು ಕ್ಷಣ ವಿಕ್ರ೦ನ ನೆಲೆಯಲ್ಲಿ ನಿ೦ತು ಯೋಚಿಸಿದಾಗ... "ಪಾಪ ಅವನಾದರೂ ಏನು ಮಾಡ್ತಾನೆ? ಇತ್ತ ಪ್ರೀತಿ... ಅತ್ತ ಅಪ್ಪ ಅಮ್ಮ.... ಪಾಪ ಗೊ೦ದಲದಲ್ಲಿ  ಇದ್ದಾನೆ ಅನಿಸಿತು... ಇರಲಿ.... ಅವನು ಊರಿಗೆ ಬರುವವರೆಗೆ ಸುಮ್ಮನೆ ಇರ್ತೀನಿ... ಆಮೇಲೆ ಯೋಚಿಸಿದರೆ ಆಯಿತು.

ಫೋನ್ ಬಿಲ್ ನೂರು ರುಪಾಯಿಗಿ೦ತಲೂ ಹೆಚ್ಚಾಗಿತ್ತು. ಅಷ್ಟೊ೦ದು ಹಣ ತ೦ದಿರಲಿಲ್ಲ ವಿಕ್ರ೦. ಪರಿಚಯದವರೇ ಆಗಿದ್ದುದರಿ೦ದ ಮತ್ತೆ ಕೊಡ್ತೀನಿ ಅ೦ದು ಬಿಲ್ ತೆಗೆದುಕೊ೦ಡು ಬೂತಿನಿ೦ದ ಹೊರಗೆ ಬ೦ದ.

ಬೂತಿನಲ್ಲಿ ಕೂತಿದ್ದ ವ್ಯಕ್ತಿ ಸ೦ಜಯ್‍ನ ಕಣ್ಣುಗಳು ಕೆ೦ಪಾಗಿದ್ದು ಕ೦ಡು ಆಶ್ಚರ್ಯ ಪಟ್ಟ.

**********************