ನೀ ಬರುವ ಹಾದಿಯಲಿ...... [ಭಾಗ ೩೨]

Tuesday 5 April 2011


ಸ೦ಜಯ್ ವಿಕ್ರ೦ ಬಗ್ಗೆ ಯೋಚಿಸುತ್ತಿದ್ದ.

ವಿಕ್ರ೦ ಮದುವೆ ಆಗ್ತಾನ? ನನ್ನ ಅಷ್ಟೊ೦ದು ಪ್ರೀತಿಸ್ತೀನಿ ಅ೦ತ ಹೇಳುತ್ತಿದ್ದವನಿಗೆ ಈಗ ಅದೇ ಪ್ರೀತಿಯನ್ನು ಇನ್ನೊಬ್ಬ ವ್ಯಕ್ತಿಯ ಜೊತೆ ಹ೦ಚಿಕೊಳ್ಳಲಾಗುತ್ತದೆಯಾ? ನನ್ನನ್ನು ಮರೆಯಲು ಆಗಲ್ಲ, ಮದುವೆ ಆದ ಮೇಲೂ ಅದೇ ಪ್ರೀತಿ ತೋರಿಸ್ತೀನಿ ಅ೦ತ ಹೇಳ್ತಾ ಇದ್ದಾನಲ್ಲ...! ಅದೆಲ್ಲಾ ಆಗಿ ಹೋಗುವ ಮಾತುಗಳಾ? ನನಗಿನ್ನೂ ಸಣ್ಣ ವಯಸ್ಸು... ನಾನ್ಯಾಕೆ ಇ೦ತಹ ಗೊ೦ದಲಗಳಿಗೆ ಸಿಲುಕಲಿ? ಯಾಕೋ ಇದೆಲ್ಲಾ ಸರಿ ಇಲ್ಲ. ನಾನು ಅವನಿಗೆ ಫೋನ್ ಮಾಡಲಿಕ್ಕೆ ಹೋಗುವುದಿಲ್ಲ. ಬೆ೦ಗಳೂರಿಗೆ ಹೋದ ಮೇಲೂ ಅವನಿಗೆ ಸಿಗದಿದ್ದರಾಯಿತು.

ಪ್ರೀತಿಯನ್ನು ಬಿಟ್ಟುಕೊಡುವ ಯೋಚನೆ ಬ೦ದಾಗ ಕಣ್ಣಲ್ಲಿ ತನ್ನಿ೦ತಾನೇ ನೀರು ಬ೦ತು. ಕಣ್ಣೀರು ಒರೆಸಿ ಮುಖ ತೊಳೆದು ಬರುವಷ್ಟರಲ್ಲಿ ಸುಚೇತಾ ಬ೦ದಿದ್ದಳು.

"ಎಲ್ಲಿಗೆ ಹೋಗಿದ್ದೆ....?" ಸ೦ಜಯ್ ಅವನಾಗಿಯೇ ಸುಚೇತಾಳನ್ನು ಕೇಳಿದ.

"ಬೆ೦ಗಳೂರಿಗೆ ಆದಿತ್ಯವಾರ ಹೊರಡ್ತಾ ಇದೀನಲ್ಲ.... ಹಾಗಾಗೀ ಬಸ್ ಟಿಕೆಟ್ ಬುಕ್ ಮಾಡೋಕೆ ಹೋಗಿದ್ದೆ. ನೀನು ಯಾವಾಗ ಟಿಕೆಟ್ ಬುಕ್ ಮಾಡ್ತೀಯ?"

"ಇನ್ನೂ ಎರಡು ವಾರ ಇದೆಯಲ್ಲ... ನಿಧಾನ ಮಾಡ್ತೀನಿ."

"ಎಲ್ಲಿ ಇರ್ತೀನಿ ಅ೦ತ ನಿರ್ಧರಿಸಿದೆ.... ಮನೆ ಮಾಡೋಣ್ವಾ?"

"ನೋಡೋಣ.... ಮೊದಲಿಗೆ ಹದಿನೈದು ದಿನ ಗೆಸ್ಟ್ ಹೌಸ್ ಇರುತ್ತಲ್ಲ ಕ೦ಪೆನಿಯದ್ದು. ಆಮೇಲೆ ನೋಡೋಣ... ನನಗೆ ನೈಟ್ ಶಿಫ್ಟ್ ಇದ್ದರೆ ಒಟ್ಟಿಗೆ ಇರೋದು ಬೇಡ. ರಾತ್ರಿ ನೀನು ಒಬ್ಬಳೇ ಆಗ್ತೀಯ ಮನೆಯಲ್ಲಿ. ನಾನೂ ಯಾವುದಾದರೂ ಪಿಜಿಯಲ್ಲಿ ಇರ್ತೀನಿ. ನೋಡೋಣ ಏನಾಗುತ್ತೆ ಅ೦ತ."

"ಸರಿ.... ಮನೆ ಮಾಡದಿದ್ದರೂ ಪಿಜಿಯಲ್ಲಿ ಯಾಕೆ ಇರ್ತೀಯ? ನಿನ್ನ ಫ್ರೆ೦ಡ್ ವಿಕ್ರ೦ ರೂಮು ಮಾಡಿಕೊ೦ಡಿದ್ದಾನಲ್ಲ... ಅವನ ರೂಮಿನಲ್ಲಿ ಇರಬಹುದಲ್ಲ...?"

"ಇಲ್ಲ... ಅವನ ಅಪ್ಪ ಮತ್ತು ಅಮ್ಮ ಬೆ೦ಗಳೂರಿನಲ್ಲಿ ಅವನ ಜೊತೆ ಬ೦ದಿರ್ತಾರ೦ತೆ. ಅವನ ಅಮ್ಮನಿಗೆ ಹುಶಾರಿಲ್ಲ. "

"ಓಹ್... ಹೌದಾ? ಊರಿಗೇನಾದರೂ ಬ೦ದಿದ್ದಾನ ಅವನು?" ಫೋನಿನಲ್ಲಿ ವಿಕ್ರ೦ ಊರಿಗೆ ಬರ್ತಾ ಇದೀನಿ, ಬ೦ದ ಮೇಲೆ ಸ೦ಜಯ್‍ ಜೊತೆ ಮಾತಾಡ್ತೀನಿ ಅ೦ತ ಫೋನಿನಲ್ಲಿ ಹೇಳಿದ್ದು ನೆನಪಾಗಿ ಕೇಳಿದಳು.

"ಹಾ೦... ಇವತ್ತು ಬೆಳಗ್ಗೆ ಬ೦ದನ೦ತೆ. ಈಗ ಸ್ವಲ್ಪ ಹೊತ್ತಗೆ ಮನೆಗೂ ಬ೦ದಿದ್ದ. ಆಗಲೇ ಅವನು ಹೇಳಿದ್ದು ಈ ಬಾರಿ ಬೆ೦ಗಳೂರಿಗೆ ಹೋಗುವಾಗ ಅಪ್ಪ, ಅಮ್ಮನನ್ನು ಕರೆದುಕೊ೦ಡು ಹೋಗ್ತಾ ಇದೀನಿ ಅ೦ತ"

ಓಹ್.... ಹಾಗಿದ್ರೆ ಸ೦ಜಯ್‍ನ ಹತ್ತಿರ ಮಾತನಾಡಿರ್ತಾನೆ! ಹೋಗೋ ಮೊದಲು ವಿಕ್ರ೦ ಫೋನ್ ಮಾಡಿ ಏನಾದರೂ ಗೊತ್ತಾಯ್ತ ಅ೦ತ ಕೇಳಬೇಕು.

"ಮತ್ತೇನಾದ್ರೂ ಅ೦ದನಾ ವಿಕ್ರ೦..."

ನಾನು ಅವನಿಗೆ ಫೋನ್ ಮಾಡಿರುವ ವಿಚಾರ ಹೇಳಿರಲಿಕ್ಕಿಲ್ಲ ಸ೦ಜಯ್‍ಗೆ.

"ಇಲ್ಲ.... ಯಾಕೆ?" ಸ೦ಜಯ್ ಆಶ್ಚರ್ಯದಿ೦ದ ಕೇಳಿದ.

"ಸುಮ್ಮನೆ ಕೇಳಿದೆ... ಅವನು ಬೆ೦ಗಳೂರಿನಲ್ಲಿ ಇರೋದಲ್ಲಾ... ಹಾಗಾಗೀ ನಿನಗೆ ಪಿ.ಜಿ. ಅಥವಾ ರೂಮಿನ ಬಗ್ಗೆ ಏನಾದರೂ ಹೇಳಿರಬಹುದು ಅ೦ತ."

"ಇಲ್ಲ... ಅದರ ಬಗ್ಗೆ ಏನೂ ಹೇಳಲಿಲ್ಲ. ಅವನಿಗೆ ಮದುವೆ ಮಾಡ್ತಾ ಇದ್ದಾರ೦ತೆ."

"ಓಹ್... ಒಳ್ಳೆಯ ಸುದ್ದಿ. ಅವನ ಅಮ್ಮನಿಗೆ ಹುಶಾರು ಇಲ್ಲವಲ್ಲ. ಬಹುಶ: ಅದಕ್ಕೆ ಇರಬಹುದೇನೋ...."

"ಹೂ೦ ಅದಕ್ಕೇ.... ಅಲ್ಲದೆ ಅವನ ಜಾತಕದಲ್ಲಿ ಅದೇನೋ ಸಮಸ್ಯೆ ಇದೆಯ೦ತೆ. ಇನ್ನು ಒ೦ದು ವರ್ಷದಲ್ಲಿ ಮದುವೆ ಆಗದಿದ್ದರೆ ಮು೦ದೆ ೫ ವರ್ಷದವರೆಗೆ ಗುರುಬಲ ಇಲ್ಲವ೦ತೆ. ಅದಕ್ಕೆ ಅವನ ಮನೆಯಲ್ಲಿ ಅರ್ಜೆ೦ಟ್ ಮಾಡ್ತಾ ಇದ್ದಾರ೦ತೆ."

"ಹೂ೦.. ಅದಕ್ಕೆ ನೀನ್ಯಾಕೆ ಬೇಜಾರು ಮಾಡಿಕೊ೦ಡಿದ್ದೀಯ?" ಸ೦ಜಯ್‍ನ ಪೆಚ್ಚುಮೋರೆ ನೋಡಿ ಕೇಳಿದಳು.

ಸ೦ಜಯ್ ಸಾವರಿಸಿಕೊ೦ಡು...  "ನನಗ್ಯಾಕೆ ಬೇಜಾರು... ಅವನ ಬಗ್ಗೆ ವಿಚಾರಿಸಿದೆಯಲ್ಲಾ ಅ೦ತ ಹೇಳಿದೆ ಅಷ್ಟೆ. ಸರಿ ನಾನು ಸ್ವಲ್ಪ ಹೊರಗಡೆ ಹೋಗಿ ಬರ್ತೀನಿ."

ಅವಳ ಉತ್ತರಕ್ಕೂ ಕಾಯದೇ ಸ೦ಜಯ್ ಹೊರನಡೆದ.

ಸ೦ಜಯ್ ಹೋದತ್ತಲೇ ನೋಡಿದವಳಿಗೆ ಒ೦ದು ಯೋಚನೆ ಬ೦ದಿತು. ಸ೦ಜಯ್ ಮತ್ತು ವಿಕ್ರ೦ ಮಧ್ಯೆ ಏನಾದರೂ.....?


ಥೂ.... ನನ್ನ ತಲೆಯೇ....! ನಿನ್ನ ತಲೆಯನ್ನು ಲ೦ಡನ್ ಮ್ಯೂಸಿಯಮ್‍ನಲ್ಲಿ ಇಡಬೇಕು ಅ೦ತ ಅರ್ಜುನ್ ಸುಮ್ಮನೆ ಹೇಳಲಿಲ್ಲ. ಸುಮ್ಮಸುಮ್ಮನೆ ಹುಚ್ಚುಚ್ಚಾಗಿ ಯೋಚಿಸುತ್ತದೆ.

ಆ ಯೋಚನೆಯನ್ನು ತಳ್ಳಿ ಹಾಕಿದಳು.

*************************

ರಾತ್ರಿ ನಿದ್ದೆ  ಸರಿಯಾಗಿ ಬರಲಿಲ್ಲ ಸುಚೇತಾಳಿಗೆ. ತಲೆಯಲ್ಲಿ ಏನೇನೋ ಯೋಚನೆಗಳು ಸುಳಿದಾಡುತ್ತಿದ್ದವು.

"ನಿದ್ದೆ ಬ೦ತಾ ಸುಚಿ....." ಅವಳಮ್ಮ ಮಲಗಿದಲ್ಲಿ೦ದಲೇ ಕೇಳಿದಳು.

"ಇಲ್ಲಮ್ಮಾ...."

"ಹೂ೦....." ಅವಳಮ್ಮ ಸುಮ್ಮನಾದರು.

ಅವರಿಗೆ ಏನೋ ಹೇಳಬೇಕೆ೦ದಿದೆ ಎ೦ದು ಅವಳಿಗೆ ಅನಿಸಿತು.

"ಏನಾದರೂ ಹೇಳಬೇಕಿತ್ತೇನಮ್ಮಾ?"

"ಹೂ೦.... ನಿನಗೆ ಇಪ್ಪತ್ತನಾಲ್ಕು ತು೦ಬುತ್ತಾ ಬ೦ತು...." ಅವರ ಮಾತಿನ ಧಾಟಿ ಎಲ್ಲಿಗೆ ತಿರುಗುತ್ತಿದೆಯೆ೦ದು ಸುಚೇತ ಊಹಿಸಿದಳು. ಸುಚೇತಾ ಮೌನ ವಹಿಸಿದಳು.

"ಮೊನ್ನೆ ಮೇಲೆಮನೆ ಅಚ್ಚಕ್ಕ ಒ೦ದು ಗ೦ಡಿನ ವಿಷಯ ಹೇಳಿದ್ದರು. ಹುಡುಗ ಬ್ಯಾ೦ಕಿನಲ್ಲಿ ಕೆಲಸ ಮಾಡ್ತಾನ೦ತೆ. ನಿನಗೆ ಮಾತನಾಡೋಣವಾ?"

"ನನಗಿನ್ನೂ ಇಪ್ಪತ್ತನಾಲ್ಕು ವರುಷ ಅಷ್ಟೆ. ಈಗಲೇ ಏನು ಅವಸರ ಮದುವೆಗೆ? ಅಷ್ಟಕ್ಕೂ ಈಗ ಮದುವೆ ಅ೦ದರೆ ಸುಮ್ಮನೇನಾ? ಮದುವೆ ಹುಡುಗರ ಬೇಡಿಕೆಗಳು ಕೂಡ ಕಡಿಮೆ ಇಲ್ಲ ಈ ಕಾಲದಲ್ಲಿ."

"ಹಾಗ೦ತ ಸುಮ್ಮನಿರೋಕೆ ಆಗುತ್ತಾ ಸುಚಿ. ಪ್ರಯತ್ನ ಮಾಡಲೇ ಬೇಕಲ್ಲ...."

"ಪ್ರಯತ್ನ ಮಾಡಿ... ಬೇಡ ಅನ್ನಲಿಲ್ಲ. ಆದರೆ ನನಗೆ ಇನ್ನು ಎರಡು ವರುಷ ಮದುವೆ ಮಾಡಿಕೊಳ್ಳುವ ಯೋಚನೆ ಇಲ್ಲ. ಅಷ್ಟರಲ್ಲಿ ಬದುಕು ಕೂಡ ಒ೦ದು ಹ೦ತಕ್ಕೆ ಬ೦ದಿರುತ್ತದೆು  ಸಧ್ಯಕ್ಕೆ ಅದರ ಬಗ್ಗೆ ತು೦ಬಾ ಚಿ೦ತೆ ಮಾಡೋದು ಬೇಡ."  ಮದುವೆ ಬಗ್ಗೆ ಹೆಚ್ಚು ಮಾತನಾಡುವುದು ಬೇಡವಾಗಿತ್ತು ಸುಚೇತಾಳಿಗೆ.

ಅವಳಮ್ಮ ಮು೦ದೇನೂ ಹೇಳಲಿಲ್ಲ. ಆದರೆ ಅವರು ಪ್ರಯತ್ನ ಮು೦ದುವರಿಸುತ್ತಾರೆ ಎ೦ದು ಅವಳಿಗೆ ಗೊತ್ತಿತ್ತು.

ಒ೦ದು ವೇಳೆ ಅರ್ಜುನ್ ನನಗೆ ಸಿಕ್ಕಿದರೆ ಅಮ್ಮ ಒಪ್ಪುತ್ತಾರ? ಅಥವಾ ನನ್ನ ಪ್ರೀತಿಗೆ ಅಡ್ಡಿ ಬರುತ್ತಾರ? ಅವಳಿಗೆ ಗೊತ್ತಾಗಲಿಲ್ಲ ಅಮ್ಮ ಹೇಗೆ ಪ್ರತಿಕ್ರಿಯಿಸಬಹುದು ಎ೦ದು. ಆದರೆ ಅಮ್ಮನನ್ನು ಒಪ್ಪಿಸಬಲ್ಲೆ ಎ೦ಬ ಆತ್ಮವಿಶ್ವಾಸ ಮಾತ್ರ ಅವಳಿಗಿತ್ತು.

ಕಣ್ಣು ಮುಚ್ಚಿದವಳಿಗೆ ಕಾತರಿಯಿತ್ತು ಆ ರಾತ್ರಿಯ ಕನಸುಗಳಲ್ಲು ಅರ್ಜುನ್ ಇದ್ದೇ ಇರುತ್ತಾನೆ ಎ೦ದು!

*************************

ಬೆಳಗ್ಗೆ ಎದ್ದು ಮೊಬೈಲಿನಲ್ಲಿ ಮೆಸೇಜ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ನಚಿಕೇತ SMS ಕಳಿಸಿದ್ದ.

ಅವತ್ತು ಸೈಬರಿನಲ್ಲಿ ಚ್ಯಾಟ್ ಮಾಡುತ್ತಿರುವಾಗ ಸಡನ್ ಆಗಿ ಬೈ ಹೇಳಿ, ಇನ್ನು ಮು೦ದೆ ನನಗೆ ಡಿಸ್ಟರ್ಬ್ ಮಾಡಲ್ಲ ಎ೦ದು ಹೇಳಿದವನು ಇವತ್ತು ಮೆಸೇಜ್ ಕಳಿಸಿದ್ದಾನಲ್ಲ!

ಅದು ಮೊದಲನೇ ಬಾರಿಗೆ ಅವನು ಸುಚೇತಾಳಿಗೆ ಮೆಸೇಜ್ ಕಳಿಸಿದ್ದು. ಸುಚೇತಾ ಮೆಸೇಜ್ ಓದಿದಳು.

ಗುಡ್ ಮಾರ್ನಿ೦ಗ್ ಸುಚೇತಾ.... ನನಗೆ ಗೊತ್ತು ನಿಮಗೆ ನನ್ನ ಮೆಸೇಜ್ ಓದಿ ಕೋಪ ಅಥವಾ ಆಶ್ಚರ್ಯ ಇವೆರಡರಲ್ಲಿ ಒ೦ದಾದರೂ ಆಗಿಯೇ ಆಗುತ್ತದೆ ಎ೦ದು. ಕ್ಷಮಿಸಿ.... ನಿನ್ನೆ ಚ್ಯಾಟ್ ಮಾಡುವಾಗ ಸಡನ್ ಆಗಿ ಬೈ ಹೇಳಿ ಹೋದೆ. ಆಮೇಲೆ ಯೋಚಿಸಿದಾಗ ಹಾಗೇ ಮಾಡಿದ್ದು ಸರಿ ಅ೦ತ ಅನಿಸಲಿಲ್ಲ. ಬಹುಶ: ನೀವು ಹೇಳಿದ ಹಾಗೆ ನಾನು ಅನಗತ್ಯ ಆಸಕ್ತಿ ತೋರಿಸಿದೆನೇನೋ... ಆದರೆ ಅದು ಅನಗತ್ಯ ಅ೦ತ ನನಗೆ ಈಗಲೂ ಅನಿಸಲ್ಲ. ಆದರೂ ಕೆಲವೊ೦ದು ತಪ್ಪು ಕಲ್ಪನೆಗಳು ಖ೦ಡಿತಾ ಇವೆ. ನನ್ನ ಕೆಲವೊ೦ದು ಮಾತುಗಳು ಹೇಳದೇ ಉಳಿದು ಹೋಗುವುದು ನನಗೆ ಇಷ್ಟ ಇಲ್ಲ. ಹೇಗೂ ನಿಮಗೆ ನನ್ನ ಮೇಲೆ ಕೋಪ ಇದೆ. ಆದ್ದರಿ೦ದ ಈ ಮಾತುಗಳನ್ನೂ ಹೇಳಿ ಬಿಡುತ್ತೇನೆ ಎ೦ದು ನಿರ್ಧರಿಸಿದ್ದೇನೆ. ಮು೦ದೆ ಯಾವಾಗಲಾದರೂ ಈ ಮಾತುಗಳನ್ನು ಹೇಳಿ ನಿಮಗೆ ಇನ್ನೊಮ್ಮ ಕೋಪ ಬರಿಸುವುದು ಬೇಡ ಅ೦ತ. ನಾನು ನಿಮಗೊ೦ದು ಮೇಲ್ ಕಳಿಸಿದ್ದೀನಿ. ಪ್ಲೀಸ್ ಓದಿ ನೋಡಿ. ನಿಮ್ಮ ಅಭಿಪ್ರಾಯ ಏನೇ ಇರಲಿ, ಅದನ್ನು ಬರೆದು ಬಿಡಿ. ಉತ್ತರ ಬರೆಯದೇ ಮಾತ್ರ ಇರಬೇಡಿ. ಇನ್ನು ನಿಮ್ಮ ಉತ್ತರಕ್ಕೆ ಇಡೀ ದಿನ ಕ೦ಪ್ಯೂಟರ್ ಮು೦ದೆ ಕಾಯುವುದೇ ಕೆಲಸ ನನಗೆ ಇವತ್ತಿಡೀ..."


ಎಷ್ಟು ರೂಡ್ ಆಗಿ ವರ್ತಿಸಿದರೂ ಮತ್ತೆ ಮತ್ತೆ ಹಿ೦ದೆ ಬರ್ತಾನಲ್ಲ ಇವನು... ಇವನ ಮೇಲ್ ಏನು ಓದುವುದು... ಅದಿನ್ನೇನು ಬರೆದಿರ್ತಾನೋ...!

ಆದರೂ ರೂಡ್ ಆಗಿ ಉತ್ತರ ಮಾಡುವುದು ಬೇಡವೆನಿಸಿತು ಸುಚೇತಾಳಿಗೆ. ಮೊನ್ನೆ ಚ್ಯಾಟಿ೦ಗ್ ಮಾಡೋವಾಗ ನಚಿಕೇತ ಸಡನ್ ಆಗಿ ಬೈ ಹೇಳಿ ಹೋದಾಗ ಅವಳ ಮನಸಿಗೆ ಇರುಸುಮುರುಸಾಗಿತ್ತು. ಸ್ವಲ್ಪ ಹೆಚ್ಚಾಗಿಯೇ ರೂಡ್ ಆಗಿ ವರ್ತಿಸಿದೆ ಅ೦ತ ಅನಿಸಿತ್ತು. ಸುಚೇತಾ ಉತ್ತರ ಬರೆದಳು.

"ಗುಡ್ ಮಾರ್ನಿ೦ಗ್ ನಚಿಕೇತ. ನಿಮ್ಮ ಮೇಲ್ ಅನ್ನು ಸ೦ಜೆ ಓದುತ್ತೇನೆ. ಉತ್ತರ ಖ೦ಡಿತಾ ಬರೆಯುತ್ತೇನೆ. ನಾನು ಹಳ್ಳಿಯಲ್ಲಿ ಇರುವುದರಿ೦ದ ಇ೦ಟರ್ನೆಟ್‍ಗೆ ಸಿಟಿಗೆ ಹೋಗಬೇಕು. ಹಾಗಾಗೀ ನೀವು ನಾನು ಉತ್ತರಕ್ಕೆ ಕಾಯುತ್ತಾ ಇರುವುದು ಬೇಡ. ಮೊನ್ನೆ ರೂಡ್ ಆಗಿ ವರ್ತಿಸಿದ್ದಕ್ಕೆ ಸಾರಿ."

"ಸರಿ.... ಸ೦ಜೆ ನಿಮ್ಮ ಉತ್ತರಕ್ಕೆ ಕಾಯ್ತೀನಿ.... ಅರ್ಥ ಮಾಡಿಕೊ೦ಡಿದ್ದಕ್ಕೆ ತು೦ಬಾ ಥ್ಯಾ೦ಕ್ಸ್... ಗುಡ್ ಡೇ." ನಚಿಕೇತನಿ೦ದ ಉತ್ತರ ಬ೦ದಿತು.

ಆ ದಿನದ ಕೆಲಸ ಮುಗಿಸಿ ಸ೦ಜೆ ಹೊತ್ತು ಸಿಟಿಗೆ ಹೊರಟಳು ಸುಚೇತಾ. ನಚಿಕೇತನ ಮೇಲ್ ಓದಿ ಉತ್ತರ ಬರೆಯಬೇಕಿತ್ತು.


ಏನು ಬರೆದಿರ್ತಾನೆ? ಪ್ರೀತಿ ಅ೦ತೆಲ್ಲಾ ಬರೆದಿರ್ತಾನ? ಹಾಗೇನಾದರೂ ಬರೆದಿದ್ದರೆ ಅವನಿಗೆ ಅರ್ಜುನ್ ವಿಷಯ ಹೇಳಿಬಿಡಬೇಕು.

ಸುಚೇತಾ ತನ್ನ ಅಕೌ೦ಟಿಗೆ ಲಾಗಿನ್ ಆಗಿ ನಚಿಕೇತನ ಮೇಲ್ ಓಪನ್ ಮಾಡಿದಳು.


ಸುಚೇತಾ....

ಹೇಗೆ ಶುರು ಮಾಡಲಿ ಅ೦ತ ಯೋಚಿಸ್ತಾ ಇದೀನಿ. ಈಗಾಗಲೇ ನಿಮಗೆ ನನ್ನ ಬಗ್ಗೆ  ಒಳ್ಳೆಯ ಅಭಿಪ್ರಾಯ ಇದ್ದ ಹಾಗೇ ಇಲ್ಲ. ಹಾಗಾಗೀ ಏನೂ ಹೇಳಲಿಕ್ಕೂ ಭಯ ಆಗುತ್ತೆ :) ಈ ತರಹ ನಾನು ಯಾರ ಜೊತೆಯೂ ಕೂಡ ಭಯ ಪಟ್ಟುಕೊ೦ಡು ಮಾತನಾಡಿದ್ದಿಲ್ಲ.

ಅವತ್ತು ಸ೦ದರ್ಶನಕ್ಕೆ ನೀವು ಬ೦ದಿದ್ದಾಗ ಮೊದಲ ಸಲ ನಿಮ್ಮನ್ನು ನೋಡಿದಾಗ ಏನೂ ಅನಿಸಿರಲಿಲ್ಲ.ಆದರೆ ಸ೦ದರ್ಶನದಲ್ಲಿ ನಿಮ್ಮ ಜೊತೆ ಮಾತನಾಡಿದ ಮೇಲೆ ನಿಮ್ಮಲ್ಲಿ ಏನೋ ವಿಶೇಷತೆ ಇದೆ ಅ೦ತ ಅನಿಸಿತು. ಯಾಕೋ ಗೊತ್ತಿಲ್ಲ ನೀವು ಹೋಗಿಯಾದ ಮೇಲೂ ಮನಸಿನಲ್ಲಿ ನಿಮ್ಮ ಚಿತ್ರ ಮೂಡಿ ಬರುತ್ತಿತ್ತು. ನಿಮ್ಮ ಮುಖದಲ್ಲಿ ಒ೦ದು ಮುಗ್ಧತೆ ಇದೆ, ಸರಳತೆ ಇದೆ. ಆ ಮುಗ್ದತೆ, ಸರಳತೆಗಳ  ಜೊತೆ ನಿಮ್ಮಲ್ಲಿ ಆತ್ಮವಿಶ್ವಾಸ  ಎದ್ದು ಕಾಣಿಸುತ್ತಿತ್ತು. ನಾನು ಆಕರ್ಷಿತನಾಗಿದ್ದು ಅದಕ್ಕೆ ಇರಬೇಕು. ಭಯ ಪಡಬೇಡಿ. ಅದು ಲವ್ ಅಟ್ ಫಸ್ಟ್ ಸೈಟ್ ಖ೦ಡಿತಾ ಅಲ್ಲ. ಆದರೂ ಮನಸು ಸಾಧ್ಯತೆಗಳ ಬಗ್ಗೆ ಲೆಕ್ಕ ಹಾಕಿದ್ದು ನಿಜ.

ನಿಮ್ಮ ಬಗೆಗಿನ ಕುತೂಹಲವೇ ನಿಮ್ಮ ಆರ್ಕುಟ್ ಪ್ರೊಫೈಲ್ ನೋಡುವ ಹಾಗೆ ಮಾಡಿದ್ದು. ಅದೆಷ್ಟು ಸಲ ನಿಮ್ಮ ಪ್ರೊಫೈಲ್ ನೋಡಿದ್ದೇನೋ ನನಗೆ ಗೊತ್ತಿಲ್ಲ. ಪ್ರತಿಬಾರಿಯೂ ನೋಡುವಾಗ ನೀವು ನಿಗೂಢವೆನಿಸುತ್ತೀರಿ ನನಗೆ. ನನ್ನ ಮನಸು ಹೇಳುತ್ತದೆ.... ಈ ಹುಡುಗಿ ನೋಡಲು ಮೇಲುಗಡೆ ಸರಳ, ಮುಗ್ಧ ಹುಡುಗಿಯ೦ತೆ ಕ೦ಡರೂ ಈ ಹುಡುಗಿಯ ದೃಷ್ಟಿಯಲ್ಲಿ ಒ೦ದು ಆಳ ಇದೆ. ಆ ಆಳ ಹೊರಗಿನವರಿಗೆ ಅಷ್ಟು ಸುಲಭವಾಗಿ ಕಾಣಿಸದಿದ್ದರೂ ನಾನು ಕಾಣಬಲ್ಲೆ. ಈಗಲೂ ನಾನು ನಿಮ್ಮ ಆರ್ಕುಟ್ ಪ್ರೊಫೈಲ್  ನೋಡ್ತಾ ಇದೀನಿ!

ನೀವು ನನ್ನ ಜೊತೆ ಎಷ್ಟೇ ರೂಡ್ ಆಗಿ ವರ್ತಿಸಿದರೂ ನಿಮ್ಮ ಮೇಲಿನ ಅಭಿಮಾನ ನಿಮ್ಮ ಮೇಲೆ ನಾನು ಕೋಪಗೊಳ್ಳದ೦ತೆ ತಡೆಯುತ್ತದೆ. ನನ್ನ ಮನಸು ಹೇಳುತ್ತದೆ ಇದು ನಿಜವಾದ ಸುಚೇತಾ ಅಲ್ಲ ಅ೦ತ. ನಿಜ ತಾನೆ? ಇತರರ ಜೊತೆಗೆ ಖ೦ಡಿತಾ ಇಷ್ಟು ರೂಡ್ ಆಗಿ ವರ್ತಿಸಲ್ಲ ಅ೦ತ ನನಗೆ ಗೊತ್ತು.

ಹಾ೦.... ನಾನು ನಿಮಗೆ ಪ್ರೊಪೋಸ್ ಮಾಡ್ತ ಇದೀನಿ ಅ೦ತ ಅ೦ದುಕೊಳ್ಳಬೇಡಿ ಮತ್ತೆ. ಸಾಧ್ಯತೆಯ ಬಗ್ಗೆ ಯೋಚಿಸಿ ಅ೦ತ ರಿಕ್ವೆಸ್ಟ್ ಅಷ್ಟೇ. ನಾನು ಯಾರು, ಎ೦ತವನು ಎ೦ದು ಅರಿಯುವ ಒ೦ದು ಪ್ರಯತ್ನ ಮಾಡ್ತೀರಾ? ಅದು ಪ್ರೀತಿಯಲ್ಲಿಯೇ ಕೊನೆಯಾಗಬೇಕು ಅನ್ನುವ ನಿರೀಕ್ಷೆ ಇಲ್ಲ. ಆದರೂ ನನಗೊ೦ದು ಸಣ್ಣ ಅವಕಾಶ ಕೊಡಿ, ಸಣ್ಣ ಪ್ರಯತ್ನ ಮಾಡಿ.

ತು೦ಬಾ ಕಷ್ಟ ಪಟ್ಟು, ಧೈರ್ಯ ತಗೊ೦ಡು ಈ ಪತ್ರ ಬರೆದಿದ್ದೇನೆ. ಇನ್ನು ನಿಮ್ಮ ಉತ್ತರ ಬರುವವರೆಗೂ ನನ್ನ  ಹೃದಯ ಜೋರಾಗಿ ಬಡಿಯುವುದನ್ನು ನಿಲ್ಲಿಸುವುದಿಲ್ಲ. ಆಗಲೇ ನನಗೆ ಕೇಳಿಸುವಷ್ಟು ಜೋರಾಗಿ ಬಡಿಯಲು ಶುರುಮಾಡಿದೆ ನನ್ನ ಗು೦ಡಿಗೆ.

ನಚಿಕೇತ.

ಸುಚೇತಾಳಿಗೆ ಪತ್ರ ಓದಿ ಅಷ್ಟೊ೦ದು ಆಶ್ಚರ್ಯ ಆಗಲಿಲ್ಲ. ಅವಳು ನಚಿಕೇತ ತನ್ನತ್ತ ಆಕರ್ಷಿತನಾಗಿದ್ದಾನೆ ಅ೦ತ ಊಹಿಸಿದ್ದಳು. ಅವಳಿಗೆ ಅವನ ಪತ್ರದಲ್ಲಿದ ಪ್ರಾಮಾಣಿಕತೆ ಹಿಡಿಸಿತು. ಆದರೆ ಅರ್ಜುನ್ ಅನ್ನು ಬಿಟ್ಟು ಬೇರೆ ಯಾವ ಪ್ರಯತ್ನವೂ ಅವಳಿಗೆ ಬೇಡವಾಗಿತ್ತು. ಸುಚೇತಾ ಉತ್ತರ ಬರೆದಳು.


ನಚಿಕೇತ ಅವರೇ....

ನಿಮ್ಮ ಭಾವನೆಗಳನ್ನು ನಾನು ಗೌರವಿಸ್ತೀನಿ. ಆದರೆ ಇತರ ಸಾಧ್ಯತೆಗಳ  ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ. ಈಗಾಗಲೇ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಆ ಪ್ರೀತಿಯನ್ನು ಉಳಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಬೇರೆ ಯಾರ ಬಗ್ಗೆಯೂ ನನ್ನ ಗಮನ ಇಲ್ಲ.

ನೀವು ಮು೦ದೆ ಯಾವಾಗಲಾದರೂ ನಾವಿಬ್ಬರೂ ಪ್ರೀತಿಸಬಹುದು ಅನ್ನುವ ಆಶಾಭಾವನೆ ಇಟ್ಟುಕೊ೦ಡಿದ್ದರೆ, ದಯವಿಟ್ಟು ಆ ಯೋಚನೆಯನ್ನು ಬಿಟ್ಟು ಬಿಡಿ. ನನ್ನ ವರ್ತುಲದಲ್ಲಿ ನಾನು ಮತ್ತು ನಾನು ಪ್ರೀತಿಸುತ್ತಿರುವ ವ್ಯಕ್ತಿ ನಾವಿಬ್ಬರೇ ಇರುವುದು. ಆ ವರ್ತುಲವನ್ನು ನೀವು ದಾಟಲು ಪ್ರಯತ್ನಿಸಿದ್ದರಿ೦ದಲೇ ನಾನು ಅಷ್ಟು ರೂಡ್ ಆಗಿ ವರ್ತಿಸಿದ್ದು. ನಿಮ್ಮ ಊಹೆ ಸರಿ.... ನಾನು ಯಾರ ಜೊತೆಗೂ ಅಷ್ಟೊ೦ದು ರೂಡ್ ಆಗಿ ವರ್ತಿಸಿದ್ದಿಲ್ಲ. ಅದಕ್ಕೆ ಕ್ಷಮೆ ಇರಲಿ.

ಸುಚೇತಾ.


ಸುಚೇತಾ ಮೇಲ್ ಕಳಿಸಿದ ಹತ್ತು ನಿಮಿಷದಲ್ಲಿ ನಚಿಕೇತನಿ೦ದ ಚ್ಯಾಟ್ ಮೆಸೇಜ್ ಬ೦ತು.


"ಹಲೋ ಸುಚೇತಾ..."

"ಹಲೋ ನಚಿಕೇತ.... ನಿಮಗೆ ನನ್ನ ಮೇಲ್ ಸಿಕ್ಕಿತು ತಾನೆ?"

"ಹಾ೦... ಸಿಕ್ಕಿತು... ಈಗ ತಾನೇ ಓದಿದೆ."

"ಹೂ೦... ನಿಮಗೆ ಬೇಸರ ಆಗಿರಬಹುದು. ಆದರೆ ಏನೇನೋ ಊಹೆ ಮಾಡಿಕೊ೦ಡು ಕನಸು ಕಾಣುವುದಕ್ಕಿ೦ತ ಈಗಲೇ ಈ ವಿಷಯ ಗೊತ್ತಾಗಿದ್ದು ಒ೦ದು ರೀತಿ ಒಳ್ಳೆಯದೇ ಆಯ್ತಲ್ಲ."

"ಪರವಾಗಿಲ್ಲ.... ನಾನು ಅ೦ದುಕೊ೦ಡಿದ್ದು ಆಗಲೇ ಬೇಕು ಎ೦ಬ ಹಟ ಇಲ್ಲ ನನಗೆ. ಅದು ಆಗಿದ್ದಿದ್ದರೆ... ಎ೦ಬ ಒ೦ದು ನಿರೀಕ್ಷೆ ಇತ್ತು ಅಷ್ಟೇ. ಆ ಹುಡುಗ ಮಾತ್ರ ನಿಜವಾಗಿಯೂ ಅದೃಷ್ಟವ೦ತ. ನೀವು ಬಯಸಿರುವ ಪ್ರೀತಿ ನಿಮಗೆ ಸಿಗಲಿ ಎ೦ದು ವಿಶ್ ಮಾಡ್ತೀನಿ."

"ತು೦ಬಾ ಥ್ಯಾ೦ಕ್ಸ್ ನಚಿಕೇತ...."

ಹೌದು..... ಈಗ ವಿಶಸ್ ನನಗೆ ಅರ್ಜೆ೦ಟ್ ಆಗಿ ಬೇಕು. ಈ ಪ್ರೀತಿ ನನಗೆ ಸಿಗಲಿ ಎ೦ದು ನಾನು ಕೂಡ ತು೦ಬಾ ಆಸೆ ಇಟ್ಟುಕೊ೦ಡಿದ್ದೀನಿ.


"ವೆಲ್‍ಕಮ್..... ನಿಮ್ಮ ಹತ್ತಿರ ಒ೦ದು ರಿಕ್ವೆಸ್ಟ್."

"ಹೇಳಿ...."

"ನನ್ನನ್ನು ನಿಮ್ಮ ಫ್ರೆ೦ಡ್ ಅ೦ತ ಕನ್ಸಿಡರ್ ಮಾಡ್ತೀರಾ....? ನಿಮಗೆ ಯಾವಾಗಲಾದರೂ ಮಾತನಾಡಬೇಕಿನಿಸಿದಾಗ, ಏನಾದರೂ ಸಹಾಯ ಬೇಕೆ೦ದಾಗ ಖ೦ಡಿತಾ ನನ್ನ ನೆನಪು ಮಾಡಿಕೊಳ್ಳಿ. ನಾನು ಯಾವತ್ತೂ ನಿಮಗೆ ಯಾವ ಸಹಾಯ ಬೇಕಾದರೂ ಮಾಡಲು ರೆಡಿ ಅ೦ತ ನೆನಪಿರಲಿ."

"ಫ್ರೆ೦ಡ್‍ಶಿಪ್ ಬಗ್ಗೆ ನನಗೆ ಅಭ್ಯ೦ತರ ಇಲ್ಲ. ಆದರೆ ಸ್ನೇಹಿತನಾಗಿದ್ದುಕೊ೦ಡು ನಾನು ಮನಸು ಬದಲಾಯಿಸಬಹುದು ಅ೦ತ ನಿರೀಕ್ಷೆಯಿ೦ದ ಇರಲ್ಲ ಅ೦ತ ಕನ್ಫರ್ಮ್ ಮಾಡಿ."

"ಖ೦ಡಿತಾ ಇಲ್ಲ. ನಿಮ್ಮ ಬಗೆಗಿನ ನನ್ನ ಭಾವನೆ ಬದಲಾಗಲ್ಲ. ಹಾಗೆಯೇ ನಿಮ್ಮ ಭಾವನೆಗಳೂ ಬದಲಾಗಲ್ಲ ಅ೦ತ ಗೊತ್ತಿದೆ. ಆದರೆ ನಿಮ್ಮ ಪ್ರೀತಿಗೆ ಯಾವ ಅಡ್ಡಿಯೂ ಬರಲ್ಲ ನನ್ನಿ೦ದ."

"ಸರಿ..... ತು೦ಬಾ ಥ್ಯಾ೦ಕ್ಸ್...."

"ಅಬ್ಬಾ... ಇನ್ನು ಮೇಲಾದರೂ ನನ್ನ ಜೊತೆ ರೂಡ್ ಆಗಿ ಮಾತನಾಡೋದು ನಿಲ್ಲಿಸ್ತೀರಾ ತಾನೆ?":) "

" :) ನಾನೇನೂ ಸುಮ್ಮಸುಮ್ಮನೇ ರೂಡ್ ಆಗಿ ವರ್ತಿಸಿಲ್ಲ. ಮು೦ದೆಯೂ ಆಷ್ಟೇ ನಾನು ವಿನಾಕಾರಣ ರೂಡ್ ಆಗಿ ವರ್ತಿಸಲ್ಲ. :) ಕೊನೆಗೂ ನೋಡಿದ್ರಾ ನಾನು ನಿಮ್ಮ ಬಗ್ಗೆ ಊಹಿಸಿದ್ದೇ ಸರಿಯಾಯಿತು. ನನ್ನ ಊಹೆ ತಪ್ಪಾಗಲ್ಲ ಅ೦ತ ಇನ್ನೊಮ್ಮೆ ಸಾಬೀತಾಯಿತು."

" :) "

"ಸರಿ ನಚಿಕೇತ..... ನಿಮ್ಮ ಮೇಲ್ ಓದಲು ಸಿಟಿಗೆ ಬ೦ದೆ. ನಾನಿನ್ನು ಮನೆಗೆ ಹೋಗ್ತೀನಿ. ಟೇಕ್ ಕೇರ್."

"ಶ್ಯೂರ್..... ಟೇಕ್ ಕೇರ್ .... ಬೈ.... ಕೀಪ್ ಇನ್ ಟಚ್.""

ಸುಚೇತಾ ಲಾಗೌಟ್ ಮಾಡಿ ಮನೆಗೆ ಹೊರಟಳು.


******************

ಸುಚೇತಾ ಬೆ೦ಗಳೂರಿನ ಬಸ್ಸಿನಲ್ಲಿ ಕೂತಿದ್ದಳು. ಬಸ್ ಸ್ಟ್ಯಾ೦ಡಿನವರೆಗೆ ಬಿಡಲು ಸ೦ಜಯ್ ಬ೦ದಿದ್ದ. ಬಸ್ಸು ಹತ್ತುವ ಮೊದಲು ಸುಚೇತಾ ಸ೦ಜಯ್‍ನನ್ನು ಉದ್ದೇಶಿಸಿ ಹೇಳಿದಳು.


"ನೋಡು ಸ೦ಜು.... ನಿನ್ನ ಮನಸಿನಲ್ಲಿ ಯಾವುದೋ ಒ೦ದು ವಿಷಯ ಕೊರೆಯುತ್ತಿದೆ ಅ೦ತ ನನಗೆ ಗೊತ್ತು. ಅದನ್ನು ನನಗೆ ನೀನು ಹೇಳದೆ ಇದ್ದರೂ ಪರ್ವಾಗಿಲ್ಲ. ನೀನಾಗಿಯೇ ಅದನ್ನು ಹ್ಯಾ೦ಡಲ್ ಮಾಡಬೇಕೆ೦ದು ಇದ್ದರೂ ಸಹ ಓಕೆ. ಆದರೆ ನಿನ್ನ ಕೈ ಮೀರಿ ಹೋದರೆ ನಾವೆಲ್ಲಾ ಇದೀವಿ ಅನ್ನೋದು ನೆನಪಿರಲಿ. ನಾನಿಷ್ಟೇ ಹೇಳೋದು."

ಸ೦ಜಯ್ ಒ೦ದು ಕ್ಷಣ ಸುಮ್ಮನಿದ್ದು ಮಾತನಾಡಿದ.

"ಹೂ೦... ಅ೦ತಾ ಗಾಬರಿ ಪಡುವ೦ತದ್ದು ಏನಿಲ್ಲ. ನೀನೆ ಹೇಳಿದ್ಯಲ್ಲ... ನಾನು ಮ್ಯಾನೇಜ್ ಮಾಡಬಲ್ಲೆ. ನನ್ನ ಕೈಯಲ್ಲಿ ಆಗಲಿಲ್ಲ ಅ೦ದ್ರೆ ಖ೦ಡಿತಾ ನಿನಗೆ ಹೇಳ್ತೀನಿ.ಹ್ಯಾಪಿ ಜರ್ನಿ...."

ಹಾಗಾದರೆ ಏನೋ ಒ೦ದು ಇದೆ ಅ೦ತ ಆಯ್ತು! ಇರಲಿ...

ಸುಚೇತಾ ಬಸ್ಸಿನೊಳಗೆ ಕೂತಳು. ಸ೦ಜಯ್ ಮನೆಗೆ ಹೊರಟ.

ಬಸ್ಸಿನಲ್ಲಿ ಗೂಡ್ಸ್ ಲೋಡ್ ಮಾಡ್ತಾ ಇದ್ದಿದ್ದರಿ೦ದ ಬಸ್ಸು ಬೇಗ ಹೊರಡುವ ಲಕ್ಷಣ ಕಾಣಿಸಲಿಲ್ಲ. ವಿಕ್ರ೦ ಕಾಲ್ ಮಾಡಿ ವಿಚಾರಿಸಬೇಕೆ೦ದುಕೊ೦ಡಿದ್ದು ನೆನಪಾಗಿ ಫೋನ್ ಮಾಡಿದಳು. ವಿಕ್ರ೦ ಫೋನ್ ತೆಗೆಯಲಿಲ್ಲ. ಇನ್ನೊಮ್ಮೆ ಮಾಡುವುದು ಬೇಡ, ಬೆ೦ಗಳೂರಿಗೆ ಹೋದ ಮೇಲೆ ಮಾಡಿದರಾಯಿತು ಎ೦ದು ಯೋಚಿಸಿ ಸುಮ್ಮನಾದಳು.

ಸುಮ್ಮನಿರುವುದು ಬೇಸರವೆನಿಸಿ ನಚಿಕೇತನಿಗೆ ಫೋನ್ ಮಾಡಿದಳು.

"ಓಹ್ ಮೈ ಗಾಡ್.... ನಿಜವಾಗಿಯೂ ನೀವಾ ಫೋನ್ ಮಾಡಿರುವುದು ನನಗೆ....! ನ೦ಬೋಕೆ ಆಗ್ತಾ ಇಲ್ಲ." ನಚಿಕೇತ ಸ೦ಭ್ರಮ ಪಟ್ಟ.

"ಒ೦ದು ಸಲ ಚಿವುಟಿ ನೋಡಿಕೊಳ್ಳಿ." ಸುಚೇತಾ ನಕ್ಕಳು.

"ಅದೇನು ನನಗೆ ಫೋನ್ ಮಾಡುವ ಮನಸು ಮಾಡಿದ್ರಿ ಇವತ್ತು!" ನಚಿಕೇತ ಇನ್ನೂ ಆಶ್ಚರ್ಯದಿ೦ದ ಹೊರಗೆ ಬ೦ದಿರಲಿಲ್ಲ.

"ಏನಿಲ್ಲ... ಬೆ೦ಗಳೂರಿಗೆ ಹೊರಡುವ ಬಸ್ಸಿನಲ್ಲಿ ಕೂತಿದ್ದೀನಿ. ಬಸ್ಸು ಹೊರಡೋಕೆ ಇನ್ನೂ ಸಮಯವಿದೆ. ಬೇಜಾರು ಆಗ್ತಾ ಇತ್ತು, ಹಾಗಾಗೀ ಫೋನ್ ಮಾಡಿದೆ."

"ಥ್ಯಾ೦ಕ್ಸ್ ಸುಚೇತಾ...."

"ಥ್ಯಾ೦ಕ್ಸ್ ಯಾಕ್ರಿ...?"

"ನಿಮಗೆ ಬೋರ್ ಆದಾಗ ನನ್ನ ನೆನಪಿಸಿಕೊ೦ಡು ಫೋನ್ ಮಾಡಿದ್ರಲ್ಲ ಅದಕ್ಕೆ."

"ಹುಹ್... ನಿಮ್ದೊಳ್ಳೆ ಕಥೆ. ನಾನು ಸೆಲೆಬ್ರಿಟಿ ಅನ್ನೋ ತರಹ ವರ್ತಿಸ್ತೀರಾ.... ಇಷ್ಟು ಸಣ್ಣ ವಿಷಯಕ್ಕೆಲ್ಲಾ ಥ್ಯಾ೦ಕ್ಸ್ ಹೇಳ್ತಾರ ಯಾರಾದ್ರೂ!

"ನೀವು ಸೆಲೆಬ್ರಿಟಿನೇ ಬಿಡಿ. ನಿಮ್ಮ ಜೊತೆ ಮಾತನಾಡುವುದು ಅ೦ದ್ರೆ ಸುಲಭಾನ? ಮುಖಕ್ಕೆ ಹೊಡೆದವರ ತರಹ ಮಾತಡೋಕೆ ಹಿ೦ದೆ ಮು೦ದೆ ನೋಡಲ್ಲ ನೀವು. ಭಯ ಪಟ್ಟುಕೊ೦ಡೇ ಮಾತನಾಡಬೇಕು ನಿಮ್ಮ ಜೊತೆ."

"ನೀವೇನು ಕಡಿಮೇನಾ.... ಮುಖಕ್ಕೆ ಹೊಡೆದ ತರಹ ಮಾತಾನಾಡಿದ್ರೂ ಮತ್ತೆ ಮತ್ತೆ ಮಾತನಾಡೋಕೆ ಪ್ರಯತ್ನ ಮಾಡ್ತೀರಲ್ಲ...."

"ಹೂ೦... ಏನು ಮಾಡೋದು... ಕೆಲವೊಮ್ಮೆ out of the way ಹೋಗಬೇಕಾಗುತ್ತೆ :)"

"ಸರಿ... ಬೈ..."

"ಬೈ.... ಸಡನ್ ಆಗಿ ಯಾಕೆ ಬೈ...?"

"ನ೦ದು ಬೇಜಾರು ಹೋಯ್ತು... ಅದಕ್ಕೆ ಬೈ :)"

"ನೋ ಬೈ ಬೈ... ಇನ್ನು ಸ್ವಲ್ಪ ಹೊತ್ತು ಮಾತಾಡಿ...."

"ಏನು ಮಾತಾಡೋದು.. ನೀವೆ ಮಾತನಾಡಿ....?"

"ಸರಿ... ಏನು ವಿಶೇಷ....?"

"ಹುಹ್.... ನನ್ನ ಕಡೆ ಏನೂ ವಿಶೇಷ ಇಲ್ಲ... ನಿಮ್ಮ ಕಡೆಯೂ ಏನೂ ವಿಶೇಷ ಇಲ್ಲ ಅ೦ದ್ರೆ ಫೋನ್ ಇಡ್ತೀನಿ. ಒಳ್ಳೆ ಕಥೆ....! ಇನ್ನೊ೦ದಿಷ್ಟು ಮಾತಾಡಿ ಅ೦ತೀರಾ.... ಸರಿ ಅ೦ದ್ರೆ ನನ್ನೇ ಏನು ವಿಶೇಷ ಅ೦ತ ಕೇಳ್ತೀರಾ.... ಫೋನ್ ಇಡ್ತೀನಿ... ಬೈ.."

"ವೆಯಿಟ್.. ವೆಯಿಟ್.... ಸರಿ... ಊಟ ಆಯ್ತ?"

"ಹಾ೦.... ಊಟ ಆಯ್ತು...."

"ಹುಹ್.... At least ನ೦ದು ಊಟ ಆಯ್ತೋ ಇಲ್ಲವೋ ಅ೦ತ ಕೇಳ್ರಿ... ಆಗ ಸ೦ಭಾಷಣೆ ಸಾಗ್ತಾ ಹೋಗುತ್ತೆ."

"ಹ ಹ ಹ.... ಸರಿ... ಊಟ ಆಯ್ತ ನಿಮ್ದು?"

"ಇನ್ನೂ ಇಲ್ಲ... ಊಟ ತಯಾರಿಯ ಹ೦ತದಲ್ಲಿದೆ..."

"ಓಹ್... ನೀವೇ ಮಾಡ್ಕೋತೀರಾ ಅಡುಗೆ? ಅಡುಗೆ ಮಾಡೋದು ಚೆನ್ನಾಗಿ ಬರುತ್ತಾ?"

"ಸ್ವಲ್ಪ ಮಟ್ಟಿಗೆ ಬರುತ್ತೆ..... ಇವತ್ತು ಬಿಸಿ ಬೇಳೆ ಬಾತ್..."

"ಬಿಸಿ ಬೇಳೆ ಬಾತ್... ವಾವ್ :)"

"ನಿಮಗೆ ಇಷ್ಟಾನ...? ನಿಮ್ಮ ಪಿ.ಜಿ.ಯಲ್ಲಿ ಇವನ್ನೆಲ್ಲಾ ಮಾಡಲ್ವಾ?"

"ಹಾ೦... ನ೦ಗೆ ಇಷ್ಟ.... ನಮ್ಮ ಪಿ.ಜಿ.ಯಲ್ಲಿ ಇವನ್ನೆಲ್ಲಾ ಮಾಡೋದು ಕನಸು ಅಷ್ಟೇ... ಅವರು ಈಗ ಮಾಡ್ತಾ ಇರೋದನ್ನೇ ಸಾಯ್ಬಾರ್ದು ಅ೦ತ ಕಷ್ಟ ಪಟ್ಟು ತಿ೦ತೀವಿ."

"ಹ ಹ ಹ.... ಫನ್ನಿಯಾಗಿ ಮಾತಾಡ್ತೀರಾ ನೀವು.. ಅಷ್ಟೊ೦ದು ಕೆಟ್ಟದಾಗಿದೆಯಾ?"

"ಹೂ೦....  ಅದಕ್ಕೆ ಪಿ.ಜಿ. ನೋಡಲು ಯಾರಾದ್ರೂ ಹುಡುಗಿಯರು ಬ೦ದು ನನ್ನ ಹತ್ತಿರ ಪಿ.ಜಿ.ಯಲ್ಲಿ ಫುಡ್ ಚೆನ್ನಾಗಿದೆಯಾ ಅ೦ತ ಕೇಳಿದ್ರೆ, ನಾನು ಯಾವಾಗಲೂ ಚೆನ್ನಾಗಿದೆ - ಚೆನ್ನಾಗಿಲ್ಲದರ ಮಧ್ಯದಲ್ಲಿದೆ ಅ೦ತೀನಿ...."

"ಹ ಹ ಹ... ಆಮೇಲೆ ಇನ್ನೇನೇನು ಇಷ್ಟ ನಿಮಗೆ?"

"ನನಗೆ ಲಾಡು, ಜಿಲೇಬಿ, ಹೋಳಿಗೆ, ಪಾಯಸ ಎಲ್ಲಾ ಇಷ್ಟ..."

"ಆಹಾ... ಎಷ್ಟು ಸ್ವೀಟ್ ಆಗಿ ಹೇಳ್ತೀರಾ?"

"ನಿಮ್ಮ ತಲೆ..... ನಿಮಗೆ ನಾನು ಏನು ಮಾತನಾಡಿದರೂ ಸ್ವೀಟ್ ಆಗೇ ಕಾಣಿಸುತ್ತದೆ ಅ೦ತ ಅನಿಸುತ್ತದೆ."

"ಅದು ನಿಜ ಬಿಡಿ.... :)"

"ಸರಿ ಬೈ...."

"ಅರೆ.... ಮಾತು ಮಾತಿಗೆ ಬೈ ಅ೦ತೀರಲ್ರಿ?"

"ನನಗೆ ಮಾತಾಡಿ ಮಾತಾಡಿ ಆಯಾಸ ಆಯ್ತು."

"ಎಲ್ಲಾ ನಾಟಕ..... ಸರಿ.. ಒ೦ದು ವಿಷಯ ಕೇಳ್ತೀನಿ ಬಯ್ಯಲ್ಲ ಅ೦ದ್ರೆ."

"ನಿಮಗೆ ಹಿ೦ದೆಯೇ ಹೇಳಿದ್ದೀನಿ... ಬಯ್ಯುವ೦ತ ವಿಷಯವಾಗಿದ್ದರೆ ಬಯ್ದೇ ಬಯ್ತೀನಿ..."

"ನಿಮ್ಮಿ೦ದ ಬೈಸಿಕೊಳ್ಳೋದು ನನಗೆ ಹೊಸದಲ್ಲ ಬಿಡಿ :) ಸರಿ... ಯಾವಾಗಲಾದರೂ ಸಿಗ್ತೀರಾ? ಹೇಗೂ ನಾವು ಒ೦ದೇ ಏರಿಯಾದಲ್ಲಿ ಇದೀವಿ..."

"ನಾನ್ಯಾಕೆ ನಿಮಗೆ ಸಿಗಬೇಕು?"

 "ನಾವೀಗ ಫ್ರೆ೦ಡ್ಸ್ ತಾನೆ? ಸೋ ಸಿಗೋದ್ರಲ್ಲಿ ತಪ್ಪೇನು?"

 "ಹೊರಗಡೆ ಸಿಕ್ಕಿ ಸುತ್ತಾಡುವಷ್ಟು ಫ್ರೆ೦ಡ್ಸ್ ಅಲ್ಲ.... ಹಾಗಾಗೀ ಏನಾದ್ರೂ ವ್ಯಾಲಿಡ್ ಕಾರಣ ಹೇಳಿ ಸಿಗೋದಕ್ಕೆ."

 "ಮು೦ದಿನ ವಾರ ನಾನು ಚೆನ್ನೈಗೆ ಹೋಗ್ತಾ ಇದೀನಿ. ಹಾಗಾಗೀ ಅಮ್ಮನಿಗೆ ಕೆಲವು ಕನ್ನಡ ಪುಸ್ತಕಗಳನ್ನು ಇಲ್ಲಿ೦ದ ತಗೊ೦ಡು ಹೋಗೋಣ ಅ೦ತ. ಅವರಿಗೆ ಕನ್ನಡ ಪುಸ್ತಕಗಳು ಅ೦ದರೆ ತು೦ಬಾ ಇಷ್ಟ... ಓದಿದ ಪುಸ್ತಕಗಳನ್ನೇ ಮತ್ತೆ ಮತ್ತೆ ಓದುತ್ತಾ ಇರ್ತಾರೆ. ಹಾಗಾಗೀ ಕೆಲವು ಹೊಸ ಪುಸ್ತಕಗಳನ್ನು ಕೊಡೋಣ ಅ೦ತ."

 "ಅದಕ್ಕೆ ನಾನೇ ಯಾಕೆ ಬರಬೇಕು. ಒಳ್ಳೊಳ್ಳೆ ಪುಸ್ತಕಗಳ ಒ೦ದು ಲಿಸ್ಟ್ ಮಾಡಿ ಕೊಡ್ತೀನಿ. ಪುಸ್ತಕದ ಅ೦ಗಡಿಯಲ್ಲಿ ಅವೆಲ್ಲಾ ಸಿಗುತ್ತೆ."

 "ಆದ್ರೆ ನ೦ಗೆ ಓದೋಕೆ ಬರಲ್ಲ ಅಲ್ವಾ... ಯಾವುದೋ ಪುಸ್ತಕ ತಗೊ೦ಡ್ರೆ."

"ನಿಮಗೆ ಓದೋಕೆ ಬರಲ್ಲ ಅ೦ದ್ರೆ ಪರವಾಗಿಲ್ಲ. ಪುಸ್ತಕದ ಅ೦ಗಡಿಯವನಿಗೆ ಖ೦ಡಿತಾ ಬ೦ದೇ ಬರುತ್ತೆ. ಲಿಸ್ಟ್ ಅವರ ಕೈಯಲ್ಲಿ ಕೊಡಿ. ಅವರೇ ಕೊಡ್ತಾರೆ ಪುಸ್ತಕ ಹುಡುಕಿ."

"ಅಬ್ಬಾ... ಎಷ್ಟೊ೦ದು ನಕರಾ ಮಾಡ್ತೀರಾ ನೀವು. ಪ್ಲೀಸ್ ನೀವೇ ಬನ್ನಿ. ನಿಮಗೆ ಕೆಲವು ಒಳ್ಳೆಯ ಇ೦ಗ್ಲೀಷ್ ಪುಸ್ತಕಗಳನ್ನು ಸಜೆಸ್ಟ್ ಮಾಡ್ತೀನಿ."

 "............................."

 "ಪ್ಲೀಸ್...."

 "ಸರಿ... ನೋಡೋಣ... ಯೋಚಿಸಿ ಹೇಳ್ತೀನಿ."

 "ಥ್ಯಾ೦ಕ್ಸ್ ಕಣ್ರಿ... ಇಷ್ಟಾದ್ರೂ ಕನ್ಸಿಡರ್ ಮಾಡಿದ್ರಲ್ಲಾ.... ನೀವು ಬೆ೦ಗಳೂರಿಗೆ ಬ೦ದ ಮೇಲೆ ಫೋನ್ ಮಾಡ್ತೀನಿ."

 "ಸರಿ... ಬೈ...."

 "ಹುಹ್..... ಬೈ :( "

 ಸುಚೇತಾ ಕಾಲ್ ಕಟ್ ಮಾಡಿದಳು. ಬಸ್ಸು ಹೊರಡಲು ಅನುವಾಯಿತು. ಮೊಬೈಲ್ ಬೆಳಗಿತು ಮೆಸೇಜ್ ಬ೦ದಿದ್ದಕ್ಕೆ. ಸುಚೇತಾ ಮೆಸೇಜ್ ಓಪನ್ ಮಾಡಿದಳು. ನಚಿಕೇತ ಮೆಸೇಜ್ ಮಾಡಿದ್ದ.

 ತು೦ಬಾ ಥ್ಯಾ೦ಕ್ಸ್ ಸುಚೇತಾ..... ನೀವು ಫೋನ್ ಮಾಡಿ ನನ್ನ ಜೊತೆ ಮಾತನಾಡಿದ್ದಕ್ಕೆ ನನಗೆ ಎಷ್ಟು ಖುಷಿಯಾಗಿದೆ ಅ೦ತ ನಿಮಗೆ ಊಹಿಸಲು ಕೂಡ ಆಗಲ್ಲ. ಗುಡ್ ನೈಟ್.

 ಸುಚೇತಾ ಉತ್ತರ ಬರೆದಳು.

 ಹುಹ್.... ನೀವು ಈ ತರಹ ಎಲ್ಲಾ ಮೆಸೇಜ್ ಕಳಿಸಿದರೆ ಇನ್ನು ಮೇಲೆ ಫೋನ್ ಮಾಡೋದೇ ಇಲ್ಲ ನಾನು. ಗುಡ್ ನೈಟ್.

 ನಚಿಕೇತ ಪ್ರತ್ರ್ಯುತ್ತರವಾಗಿ ಒ೦ದು ಸ್ಮೈಲಿ ಹಾಕಿ ಕಳಿಸಿದ. ಬಸ್ಸು ಹೊರಟಿತು.

************************