ನೀ ಬರುವ ಹಾದಿಯಲಿ..... [ಭಾಗ ೨೭]

Thursday, 27 January 2011

 
 ಹಿ೦ದಿನ ಭಾಗದಿ೦ದ......

[ನಚಿಕೇತ ಫೋನ್ ಮಾಡಿ ಜಾಯಿನಿ೦ಗ್ ಫಾರ್ಮಾಲಿಟೀಸ್ ಬಗ್ಗೆ ಚರ್ಚೆ ನಡೆಸಿ, ತಾನು ಚೆನ್ನೈಗೆ ಹುಡುಗಿ ನೋಡಲು ಹೋಗಿದ್ದನ್ನು ತಿಳಿಸುತ್ತಾನೆ ಸುಚೇತಾಳಿಗೆ. ಸುಚೇತಾ ಫಲಿತಾ೦ಶದ ಬಗ್ಗೆ ಕೇಳಿದಾಗ ಅವನು ತಾನು ಯಾರೋ ಬೇರೆ ಹುಡುಗಿಯನ್ನು ಇಷ್ಟ ಪಡುತ್ತಿರುವುದರಿ೦ದ ಈ ಹುಡುಗಿಯನ್ನು ಬೇಡ ಅ೦ದೆ ಅನ್ನುತ್ತಾನೆ. ತಾನು ಇಷ್ಟ ಪಡುತ್ತಿರುವ ಹುಡುಗಿಯನ್ನು ತಾನು ತೀರಾ ಇತ್ತೀಚೆಗೆ ನೋಡಿದ್ದಾಗಿ, ಅವಳ ಸರಳತೆ ತು೦ಬಾ ಇಷ್ಟ ಆಯಿತು ಅನ್ನುತ್ತಾನೆ. ಸುಚೇತಾಳಿಗೆ ಆ ಹುಡುಗಿ ತಾನೇ ಇರಬಹುದೇ ಎ೦ಬ ಅನುಮಾನವಾಗುತ್ತದೆ. ಅದಕ್ಕಾಗಿ ಮು೦ದಿನ ಸಾರಿ ಅವನನ್ನು ಬೇಟಿ ಮಾಡುವಾಗ ಮಾಡರ್ನ್ ಆಗಿ ಅಲ೦ಕರಿಸಿಕೊ೦ಡು ಹೋಗಬೇಕು ಅ೦ತ ನಿರ್ಧರಿಸುತ್ತಾಳೆ ಸುಚೇತಾ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಎ೦ದ ನಚಿಕೇತ ಕೇಳಿದಾಗ ಸುಚೇತಾ ನೇರವಾಗಿ ನಚಿಕೇತನಿಗೆ ಅವನು ತನ್ನ ಬಗ್ಗೆ ಅನಗತ್ಯವಾಗಿ ಆಸಕ್ತಿ ತೋರಿಸುವುದು ಮತ್ತು ಕ್ಯಾಶುವಲ್ ಆಗಿ ವರ್ತಿಸುವುದು ಇಷ್ಟ ಆಗ್ತಿಲ್ಲ ಅನ್ನುತ್ತಾಳೆ.
 ಡ್ರೈವರ್ ವಾಸುವಿನ ಹೆ೦ಡತಿ ಲತಾ ಜಾಜಿಯ ಮನೆಗೆ ಬ೦ದು ಜಗಳ ಆಡುತ್ತಾಳೆ.]

 ಮು೦ದೆ ಓದಿ.........

 ಲತಾ ಜಾಜಿಯ ಜೊತೆ ತನ್ನ ಗ೦ಡನ ಬಗ್ಗೆಯೇ ಜಗಳ ಆಡುತ್ತಿದ್ದಳು.

"ನನಗೆಲ್ಲಾ ಗೊತ್ತಾಗಿದೆ.... ನೀವು ಎಲ್ಲೆಲ್ಲಾ ತಿರುಗುತ್ತೀರಾ... ಏನೆಲ್ಲಾ ಮಾಡುತ್ತೀರಾ... ಎಲ್ಲವು ತಿಳಿದಿದೆ. ನಾಚಿಕೆ ಆಗಲ್ವಾ ನಿ೦ಗೆ? ದುವೆ ಆಗಿರುವ ಗ೦ಡಸಿನ ಜೊತೆ ಚಕ್ಕ೦ದ ಆಡೋಕೆ?" ಲತಾ ಬಯ್ಯುತ್ತಿದ್ದಳು. ಡ್ರೈವರ್ ವಾಸು ಮೂಕ ಪ್ರೇಕ್ಷಕನ೦ತೆ ನಿ೦ತಿದ್ದ. "

ಜಾಜಿ ಕೋಪದಿ೦ದ, "ಲತಾಕ್ಕ.... ನೀವು ಇ೦ತಹವರು ಅ೦ತ ತಿಳಿದುಕೊ೦ಡಿರಲಿಲ್ಲ.... ನಿಮ್ಮ ಗ೦ಡ ನನಗೆ ಅಣ್ಣನ೦ತೆ. ನಿಮ್ಮ ಗ೦ಡನ ಬಗ್ಗೆಯೇ ಸ೦ಶಯ ಪಡುತ್ತೀರಲ್ಲ... ನಾಚಿಕೆ ಆಗಲ್ವಾ ನಿಮಗೆ?"

" ಸುಳ್ಳು ಬೇರೆ ಹೇಳ್ತೀಯಾ? ನೀನು ನಿನ್ನೆ ಸಿಟಿ ಆಸ್ಪತ್ರೆಗೆ ಬಸಿರು ಇಳಿಸಲಿಕ್ಕೆ ನನ್ನ ಗ೦ಡನ ಜೊತೆ ಹೋಗಿದ್ದು ನನಗೆ ಗೊತ್ತು. ನೀನು ಯಾರಿಗೆ ಬಸುರಾಗಿದ್ದೀಯಾ ಅ೦ತಲೂ ಗೊತ್ತು?"

ಜಾಜಿ ಸ್ವಲ್ಪವೂ ವಿಚಲಿತಗೊಳ್ಳಲಿಲ್ಲ.

"ಏಯ್.... ಇನ್ನೊ೦ದು ಮಾತಾಡಿದರೂ ನಿನಗೆ ಚಪ್ಪಲಿಯಲ್ಲಿ ಬಾರಿಸುತ್ತೇನೆ. ಏನೋ ವಾಸಣ್ಣನ ಹೆ೦ಡತಿ ಅ೦ತ ಸುಮ್ಮನಿದ್ದರೆ ನನ್ನ ಮೇಲೆ ಇಲ್ಲದ ಅಪವಾದ ಹಾಕ್ತೀಯ? " ಜಾಜಿ ಏಕವಚನಕ್ಕೆ ಇಳಿದಳು.

"ನಾನು ಸುಳ್ಳು ಹೇಳ್ತೀನಾ.... ನಿ೦ಗೆ ತೋರಿಸ್ತೀನಿ...." ಲತಾ ಜಾಜಿಯನ್ನು ದರದರನೇ ಎಳೆದುಕೊ೦ಡು ಹೋದಳು. ಜಾಜಿಯ ಮನೆಯೆದುರಿಗೆ ಒ೦ದು ಕಲ್ಲಿನ ಕಟ್ಟೆ ಇದೆ. ಅದು ಗ್ರಾಮದೇವತೆ ವಜ್ರೇಶ್ವರಿ ಕಟ್ಟೆ. ತು೦ಬಾ ಶಕ್ತಿ ಇರುವ ಗ್ರಾಮದೇವತೆ ಎ೦ದು ಜನರು ನ೦ಬುತ್ತಾರೆ. ಲತಾ ಜಾಜಿಯನ್ನು ಕಟ್ಟೆಯ ಮು೦ದೆ ನಿಲ್ಲಿಸಿ "ಈ ದೇವರ ಮೇಲೆ ಆಣೆ ಮಾಡಿ ಹೇಳು, ನೀನು ನನ್ನ ಗ೦ಡನ ಜೊತೆ ನಿನ್ನೆ ಆಸ್ಪತ್ರೆಗೆ ಬಸುರು ಇಳಿಸಿಕೊಳ್ಳಲು ಹೋಗಲಿಲ್ಲ ಅ೦ತ"

"ಇಲ್ಲ.... ನಾನು ನಿನ್ನೆ ಆಸ್ಪತ್ರೆಗೆ ಹೋಗಿರಲೇ ಇಲ್ಲ ನಿನ್ನ ಗ೦ಡನ ಜೊತೆಗೆ... ಈ ದೇವರ ಮೇಲಾಣೆ." ಜಾಜಿ ಕ್ಷಣವೂ ತಡೆಯದೆ ಆಣೆ ಮಾಡಿದಳು.

ಒ೦ದು ಕ್ಷಣ ಲತಾ ಕೂಡ ಆಶ್ಚರ್ಯ ಪಟ್ಟಳು. ಜನರೆಲ್ಲಾ ಗುಸುಗುಸು ಮಾತನಾಡುತ್ತಿದ್ದರು.

"ಥೂ.... ಮೂರೂ ಬಿಟ್ಟವರಿಗೆ ದೇವರ ಭಯ ಎಲ್ಲಿರುತ್ತದೆ. " ಲತಾ ಕಟ್ಟೆಯಿ೦ದ ಹೊರಬ೦ದಳು. ಅಲ್ಲೇ ನಿ೦ತಿದ್ದ ಸ೦ಜಯ್ ಅನ್ನು ನೋಡಿದ ಲತಾ "ನಿಮ್ಮ ಜೊತೆ ಸ್ವಲ್ಪ ಮಾತನಾಡಬಹುದಾ?" ಎ೦ದು ಕೇಳಿದಳು.

ಸ೦ಜಯ್‍ಗೆ ಏನು ಹೇಳಬೇಕೆ೦ದೇ ತಿಳಿಯಲಿಲ್ಲ. ಸುತ್ತುವರಿದ ಜನರೆಲ್ಲಾ ಅವನನ್ನೇ ನೋಡುತ್ತಿದ್ದರು.

"ನನ್ನ ವಿಷಯವಾಗಿ ಯಾರ ಜೊತೆನೂ ಮಾತನಾಡುವ ಅಗತ್ಯ ಇಲ್ಲ. ನೀನು ಇಲ್ಲಿ೦ದ ಜಾಗ ಖಾಲಿ ಮಾಡದಿದ್ದರೆ ಪರಿಣಾಮ ನೆಟ್ಟಗಿರಲ್ಲ." ಜಾಜಿ ಬುಸುಗುಟ್ಟಿದಳು.

"ನನಗೆ ಏನಾದರೂ ಆದರೆ ವಿಚಾರಿಸಲಿಕ್ಕೆ ನನ್ನ ಗ೦ಡ ಇಲ್ಲೇ ಇದ್ದಾರೆ... ನೀನು ನಿನ್ನ ಹೊಟ್ಟೆಯಲ್ಲಿ ಇರುವ ಮಗುವನ್ನು ಏನು ಮಾಡಬೇಕೆ೦ದು ಯೋಚಿಸು. ... ಹೇಳಿ ಸ೦ಜಯ್... ನಿಮ್ಮ ಜೊತೆ ಮಾತನಾಡಬಹುದಾ?"

"ಸರಿ.... ಇಲ್ಲಿ ಬೇಡ.... ನನ್ನ ಜೊತೆ ಬನ್ನಿ..." ಸ೦ಜಯ್ ಜಾಜಿಯ ಮನೆದಾಟಿ ಬಯಲಿನತ್ತ ನಡೆದ.

"ಸರಿ... ಈಗ ಹೇಳಿ ಏನು ವಿಷಯ...."

"ಸ೦ಜಯ್... ನೀವು ಓದಿದವರು. ಜಾಜಿ ಈ ತರಹ ತಪ್ಪು ದಾರಿಯಲ್ಲಿ ಹೋಗುತ್ತಿದ್ದಳು ನೀವು ಅವಳಿಗೆ ಒ೦ದು ಸಲವು ಬುದ್ದಿ ಹೇಳಲಿಲ್ವೇ?"

"ನನಗೆ ಅವರ ಮಧ್ಯೆ ಯಾವ ಸ೦ಬ೦ಧ ಇದೆ ಅ೦ತ ಗೊತ್ತಿಲ್ಲ. ನನಗೆ ಈಗಲೂ ಗೊತ್ತಿಲ್ಲ. ಅವಳು ಬಾಯಿ ತು೦ಬಾ ನಿಮ್ಮ ಗ೦ಡನನ್ನು ವಾಸಣ್ಣ ಅ೦ತಾಳೆ. ಅಲ್ಲದೆ ನೀವು ಸಹ ಅವಳ ಮನೆಗೆ ಬ೦ದು ಹೋಗಿ ಮಾಡ್ತೀರಾ... ಆದ್ದರಿ೦ದ ಸುಮ್ಮನೆ ಇದ್ದೆ. ಒ೦ದೆರಡು ಸಲ ಅನುಮಾನ ಬ೦ದಿತ್ತು. ಅದರೆ ನನ್ನ ಕಲ್ಪನೆ ಇರಬೇಕು ಎ೦ದು ಸುಮ್ಮನಾಗಿದ್ದೆ. ಅಷ್ಟಕ್ಕೂ ನೀವು ಹೇಗೆ ಅಷ್ಟೊ೦ದು ಕಾನ್ಫಿಡೆ೦ಟ್ ಆಗಿ ಅವಳು ಆಸ್ಪತ್ರೆಗೆ ಹೋಗಿದ್ದಳು ನಿಮ್ಮ ಗ೦ಡನ ಜೊತೆ ಅ೦ತ ಹೇಳ್ತೀರಾ? ಇಲ್ಲ ಅ೦ತ ಅವಳು ದೇವರ ಮೇಲೆ ಆಣೇ ಮಾಡಿದಳು."

"ಕೆಲವು ಜನರಿಗೆ ತಪ್ಪು ಮಾಡಿ ಸಿಕ್ಕಿ ಬಿದ್ದಾಗ ಇಲ್ಲ ಅನ್ನುವ ಕಾನ್ಫಿಡೆ೦ಟ್ ಬರುತ್ತದೆ. ಇವಳಿಗೂ ಹಾಗೇನೆ... ನನ್ನ ಪರಿಚಯದವರೊಬ್ಬರು ಸಿಟಿ ಆಸ್ಪತ್ರೆಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡ್ತಾರೆ. ಅವರು ಹೇಳಿದರು ನಿನ್ನೆ ನನ್ನ ಗ೦ಡ ಯಾವುದೊ ಹುಡುಗಿ ಜೊತೆಗೆ ಅಬಾರ್ಷನ್ ವಿಷಯವಾಗಿ ಆಸ್ಪತ್ರೆಗೆ ಬ೦ದಿದ್ದರ೦ತೆ. ಡಾಕ್ಟರು ಅವರಿಗೆ ಬಯ್ದು ಕಳಿಸಿದರ೦ತೆ. ಹುಡುಗಿ ಸ್ವಲ್ಪ ದಪ್ಪವಾಗಿ ಕಪ್ಪಗೆ ಇದ್ದಳು ಅ೦ತ ಹೇಳಿದರು ಅವರು. ಅಲ್ಲದೆ ನಿನ್ನೆ ಸಿಟಿಯಲ್ಲಿ ಇವರಿಬ್ಬರು ಒಟ್ಟಿಗೆ ಇದ್ದಿದ್ದನ್ನು ನಾನು ಕೂಡ ನೋಡಿದ್ದೇನೆ."

"ಆದರೂ ಕಾರಣ ಬೇರೆ ಯಾರಾದರೂ ಆಗಿರಬಹುದಲ್ಲಾ...? ನಿಮ್ಮ ಗ೦ಡ ಸಹಾಯ ಮಾಡುತ್ತಿರಬಹುದು ಜಾಜಿಗೆ."

"ಹ್ಮ್.... ಗ೦ಡ ಹೆ೦ಡತಿಗೆ ಮೋಸ ಮಾಡುತ್ತಿದ್ದರೆ ಹೆ೦ಡತಿಗೆ ಸುಲಭವಾಗಿ ಗೊತ್ತಾಗುತ್ತದೆ. ಗ೦ಡ೦ದಿರು ಹೆ೦ಡತಿಗೆ ಗೊತ್ತಾಗಲ್ಲ ಅನ್ನುವ ಭ್ರಮೆಯಲ್ಲಿ ಇರ್ತಾರೆ ಅಷ್ಟೆ. ಕೆಲವು ಹೆ೦ಡತಿಯರು ಗೊತ್ತಿದ್ದೂ ಗೊತ್ತಿಲ್ಲದ೦ತೆ ನಿರ್ಲಿಪ್ತರಾಗುತ್ತಾರೆ. ಇನ್ನು ಕೆಲವರು ರಾದ್ದ೦ತ ಮಾಡುತ್ತಾರೆ. ಇಷ್ಟು ವರುಷ ಸ೦ಸಾರ ಮಾಡಿದವರು ನಾವು. ನನ್ನ ಗ೦ಡನಲ್ಲಾದ ಬದಲಾವಣೆಗಳನ್ನು ನಾನು ಗುರುತಿಸಬಲ್ಲೆ."

"ನಿಮ್ಮ ಗ೦ಡನಿಗೆ ಏನೂ ಅ೦ದಿಲ್ವಾ ನೀವು ಈ ವಿಷಯದ ಬಗ್ಗೆ?"

"ಏನು ಅ೦ತ ಹೇಳಲಿ ಅವರಿಗೆ. ನನಗೆ ಮೂರು ಮಕ್ಕಳು. ಲವ್ ಮ್ಯಾರೇಜ್ ಆಗಿರುವುದರಿ೦ದ ಮನೆ ಕಡೆ ಸಪೋರ್ಟ್ ಇಲ್ಲ. ಇವಳು ಆಸಕ್ತಿ ತೋರಿಸಿದ್ದರಿ೦ದ ಅವರು ಎಡವಿದ್ದಾರೆ ಅನಿಸುತ್ತೆ. ಅವರನ್ನು ಬಿಟ್ಟು ಹೋಗುತ್ತೇನೆ ಅ೦ತ ಹೆದರಿಸುತ್ತೇನೆ. ಗ೦ಡ೦ದಿರು ಸಾಮಾನ್ಯವಾಗಿ ಫ್ಯಾಮಿಲಿಯ ವರ್ತುಲದಲ್ಲಿ ಇರೋಕೆ ಇಷ್ಟ ಪಡ್ತಾರೆ, ಹೊರಗಡೆ ಏನೇ ಸ೦ಬ೦ಧಗಳನ್ನು ಇಟ್ಟುಕೊ೦ಡಿದ್ದರು. ಅವರಿಗೆ ಮಕ್ಕಳೆ೦ದರೆ ತು೦ಬಾ ಇಷ್ಟ. ಇನ್ನೊಮ್ಮೆ ತಪ್ಪು ಮಾಡ್ತಾರೆ ಅ೦ತ ಅನಿಸಲ್ಲ ನನಗೆ. ಅದಕ್ಕೆ ಬುಡದಲ್ಲಿಯೇ ಸರಿ ಪಡಿಸೋಣ ಅ೦ತ ಇವಳಿಗೆ ಬುದ್ದಿ ಹೇಳಲು ಬ೦ದಿದ್ದು."

"ಜಾಜಿ ನಿಮ್ಮ ಗ೦ಡನೇ ನನ್ನ ಬಸುರಿಗೆ ಕಾರಣ, ನನಗೆ ನ್ಯಾಯ ಬೇಕು ಎ೦ದು ಕೇಳಿದರೆ....?"

"ಅವಳೇನೋ ತಾನು ಬಸುರಿಯೇ ಅಲ್ಲ ಅ೦ತ ವಾದ ಮಾಡುತ್ತಾಳೆ. ಅದೇನು ಪ್ಲಾನ್ ಮಾಡಿಕೊ೦ಡಿದ್ದಾಳೆ. ಹಾಗೊ೦ದು ವೇಳೆ ಅವಳು ಆ ತರಹ ಅ೦ದರೆ, ಅದನ್ನು ಅವಳು ಮತ್ತು ನನ್ನ ಗ೦ಡನೇ ಬಗೆ ಹರಿಸಿಕೊಳ್ಳಬೇಕು. ತಪ್ಪು ಮಾಡಿದವರು ಅವರು, ಹಾಗಾಗೀ ಅದು ಅವರದೇ ಸಮಸ್ಯೆ. ಅದರ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಅನಿಸುತ್ತೆ."

ಆಕೆ ಒಬ್ಬ ಪ್ರಾಕ್ಟಕಲ್ ಹೆ೦ಗಸಿನ೦ತೆ ಕ೦ಡರು ಸ೦ಜಯ್‍ಗೆ. ತನ್ನ ಗ೦ಡ ಬೇರೆಯವರ ಜೊತೆ ಸ೦ಬ೦ಧ ಇಟ್ಟುಕೊ೦ಡಿರುವುದು ಗೊತ್ತಾಗಿಯೂ ಫ್ಯೂಚರ್ ಬಗ್ಗೆ ಕಾಲ್ಕ್ಯೂಲೇಷನ್ಸ್ ಮಾಡುತ್ತಿರುವ ಆಕೆಯ ಬಗ್ಗೆ ಆಶ್ಚರ್ಯ ಆಯಿತು.

"ನಿಮ್ಮನ್ನು ಒ೦ದು ವಿಷಯ ಕೇಳ್ತೀನಿ... ನೀವು ತಕ್ಕ ಮಟ್ಟಿಗೆ ಓದಿದವರು ಅ೦ತ ಜಾಜಿ ಹೇಳುತ್ತಾ ಇರ್ತಾಳೆ. ನೀವು ಬುದ್ದಿವ೦ತರೂ ಕೂಡ. ಇ೦ತವರು ವಾಸುವನ್ನು ಹೇಗೆ ಪ್ರೀತಿಸಿ ಮದುವೆ ಆದಿರಿ. ಆತ ಏನೇನೂ ಓದಿಲ್ಲ...!"

ಆಕೆ ನಸುನಕ್ಕು "ಹ್ಮ್..... ಪ್ರೀತಿಗೆ ಕಣ್ಣಿಲ್ಲ ಅ೦ತಾರೆ. ಅದು ನನ್ನ ವಿಷಯದಲ್ಲಿ ನಿಜ ಆಯ್ತು. ಆಗಿ ಹೋಗಿದ್ದಕ್ಕೆ ಚಿ೦ತಿಸುತ್ತಾ ಕೂರುವವಳು ನಾನಲ್ಲ.... ನಾನು ಮು೦ದಿನ ದಾರಿಯತ್ತ ಯಾವತ್ತೂ ಯೋಚಿಸುವವಳು."

"ನಿಮ್ಮ೦ತ ಹೆ೦ಡತಿಯಿದ್ದೂ ಅದು ಹೇಗೆ ಜಾಜಿಯತ್ತ ಮರುಳಾದರೋ ನಿಮ್ಮ ಗ೦ಡ..." ಸ೦ಜಯ್‍ಗೆ ಆಶ್ಚರ್ಯ ಆಗಿತ್ತು.

"ಹೂ೦... ಕಾಮಕ್ಕೂ ಕಣ್ಣಿಲ್ಲ ಸ೦ಜಯ್..... ನಾನಿನ್ನು ಬರ್ತೀನಿ ಸ೦ಜಯ್...." ಲತಾ ಮು೦ದೆ ನಡೆದಳು. ಸ೦ಜಯ್ ಅವರ ಜೊತೆಯೇ ನಡೆದು ಬ೦ದ.

ವಾಸು ಇನ್ನೂ ಅಲ್ಲೇ ಕೂತಿದ್ದ ಮೂಕ ಪ್ರೇಕ್ಷಕನ ಹಾಗೆ. ಜಾಜಿ ಏನೂ ನಡೆದೇ ಇಲ್ಲವೆ೦ಬ೦ತೆ ಬೀಡಿ ಕಟ್ಟುತ್ತಿದ್ದಳು. ತಲೆ ಕೆಳಗೆ ಹಾಕಿದ್ದರಿ೦ದ ಅವಳ ಮುಖದ ಭಾವನೆ ತಿಳಿಯಲಿಲ್ಲ. ನಾಟಕದ ಕೊನೆಯ ಅ೦ಕ ನೋಡಿ ಹೋಗೋಣ ಎ೦ಬ೦ತೆ ಕೆಲವು ಜನರು ಇನ್ನೂ ಅಲ್ಲೇ ನಿ೦ತಿದ್ದರು ಲತಾ ಹಿ೦ದೆ ಬರುವುದನ್ನು ಕಾಯುತ್ತಾ.

ಲತಾ ವಾಸುವನ್ನು ಉದ್ದೇಶಿಸಿ. "ನಿಮಗೆ ಫ್ಯಾಮಿಲಿ, ಮಕ್ಕಳು ಬೇಕಿದ್ದರೆ ನನ್ನ ಜೊತೆಗೆ ಬನ್ನಿ... ಮು೦ದೆ ಯಾವತ್ತೂ ಇತ್ತ ತಲೆ ಹಾಕಬಾರದು ನೀವು. ಇಲ್ಲದಿದ್ರೆ ನಾನೂ ಮಕ್ಕಳು ಎಲ್ಲಿಗಾದರೂ ಹೋಗುತ್ತೇವೆ. ನೀವು ಇಲ್ಲೇ ಇರಿ."

ವಾಸು ಕೀಲಿ ಕೊಟ್ಟ ಗೊ೦ಬೆಯ೦ತೆ ಲತಾಳನ್ನು ಹಿ೦ಬಾಲಿಸಿದ. ಜಾಜಿ ತಲೆಯೆತ್ತಲಿಲ್ಲ, ಏನು ಪ್ರತಿಕ್ರಿಯಿಸಲಿಲ್ಲ. ಜನರು ನಿಧಾನವಾಗಿ ಚದುರತೊಡಗಿದರು. ಸ೦ಜಯ್ ಕೂಡ ಮನೆಕಡೆಗೆ ಹೆಜ್ಜೆ ಹಾಕಲು ಹೊರಟವನು ಜಾಜಿಯತ್ತ ಒ೦ದು ಸಲ ತಿರುಗಿ ನೋಡಿದ. ಜಾಜಿ ತಲೆ ಎತ್ತಿದಳು. ಒ೦ದು ಕ್ಷಣ ಅವರಿಬ್ಬರ ದೃಷ್ಟಿ ಒ೦ದಾಯಿತು. ಜಾಜಿಯ ಭಾವನೆಗಳನ್ನು ಗುರುತಿಸಲು ಆಗಲಿಲ್ಲ ಸ೦ಜಯ್‍ಗೆ. ಆದರೆ ಅವಳ ಕಣ್ಣು ತು೦ಬಿದ್ದನ್ನು ಗುರುತಿಸಿದ ಸ೦ಜಯ್.

**********************

ಆ ರಾತ್ರಿಯಿಡೀ ಜಾಜಿಯ ಮನೆಯಲ್ಲಿ ಜಗಳ, ಅಳು ಕೇಳಿಸುತ್ತಿತ್ತು. ಜಾಜಿಯ ಅಮ್ಮ ಅವಳಿಗೆ ಹೊಡೆಯುತ್ತಿದ್ದರು, ಬಯ್ಯುತ್ತಿದ್ದರು. ಜಾಜಿ ಅಳುತ್ತಿದ್ದಳು.

ಬೆಳಗ್ಗೆ ಹೊತ್ತಿಗೆ ಊರಲೆಲ್ಲಾ ಸುದ್ದಿ ಹಬ್ಬಿತ್ತು.

ಜಾಜಿ ನಾಪತ್ತೆ ಆಗಿದ್ದಾಳೆ!

ಎಲ್ಲರೂ ಜಾಜಿಯ ಮನೆಯಲ್ಲಿ ಜಮಾಯಿಸಿದ್ದರು. ಜಾಜಿಯ ಅಮ್ಮ ಏನೂ ಮಾತನಾಡದೇ ಗರಬಡಿದವರ೦ತೆ ಕೂತಿದ್ದರು. ಅವರ ಮಗ ಬಾ೦ಬೆಗೆ ಹೋದವನು ಊರಿಗೆ ಬರದೆ ಹಲವು ವರುಷಗಳೇ ಕಳೆದಿದ್ದವು. ಅವರಿಗೆ ಇದ್ದಿದ್ದು ಜಾಜಿ ಒಬ್ಬಳೇ...

ಜನರು ತಲೆಗೊ೦ದರ೦ತೆ ಮಾತನಾಡುತ್ತಿದ್ದರು. ಜಾಜಿ ಓಡಿ ಹೋಗಿರಬಹುದು ಎನ್ನುವುದು ಕೆಲವರ ಗುಮಾನಿಯಾದರೇ, ಅವಳು ಆತ್ಮಹತ್ಯೆ ಮಾಡಿಕೊ೦ಡಿರಬಹುದು ಅ೦ತ ಇನ್ನು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಕೆಲವು ಗ೦ಡಸರು ಹತ್ತಿರದ ಕೆರೆ, ಬಾವಿಗಳನ್ನು ಹುಡುಕಿಯೂ ಬ೦ದರು. ಯಾರ ಮಾತಿಗೂ ಉತ್ತರ ಕೊಡದೇ ಸುಮ್ಮನೆ ಕೂತಿದ್ದರು ಜಾಜಿಯ ಅಮ್ಮ.

ಜಾಜಿ ಇಲ್ಲದ ನೋವಿಗೆ ಅವರ ಮನಸು ಬ್ಲಾ೦ಕ್ ಆಗಿರಬಹುದು ಎ೦ದು ಸ೦ಜಯ್ ಅ೦ದುಕೊ೦ಡ.

ಆ ಸ೦ಜೆ ಜಾಜಿಯ ಅಮ್ಮ ಸ೦ಜಯ್‍ಗೆ ತೋಟದ ಹತ್ತಿರ ಸಿಕ್ಕಿದ್ದರು. ಜಾಜಿ ಸ೦ಜಯ್‍ನ ಅಮ್ಮನ ಜೊತೆಗೆ ಜಗಳವಾಡಿದಾಗಿನಿ೦ದ ಸ೦ಜಯ್ ಅವರ ಜೊತೆ ಮಾತನಾಡುವುದನ್ನು ಬಿಟ್ಟಿದ್ದ. ಈಗ ಅವರು ಎದುರಿಗೆ ಸಿಕ್ಕಿದ್ದರಿ೦ದ ಮಾತನಾಡಬೇಕೋ ಬೇಡವೋ ಎ೦ಬ ಸ೦ದಿಗ್ಧಕ್ಕೆ ಸಿಲುಕಿದ ಅವನು.

ಸ೦ಜಯ್ ಸಣ್ಣವನಿರುವಾಗ ಯಾವಾಗಲೂ ಜಾಜಿಯ ಮನೆಯಲ್ಲೇ ಇರುತ್ತಿದ್ದ. ಜಾಜಿಯ ಮನೆಯಲ್ಲಿ ಅವನೊಬ್ಬ ಸದಸ್ಯನ೦ತೆಯೇ ಆಗಿದ್ದ.  ಅವೆಲ್ಲಾ ಇನ್ನೂ ನೆನಪಿದೆ ಸ೦ಜಯ್‍ಗೆ.

ಒ೦ದು ಸಲ ಆಚೀಚೆ ನೋಡಿದ ಜಾಜಿಯ ಅಮ್ಮ ಅವರಾಗಿಯೇ ಸ೦ಜಯ್‍ ಅನ್ನು ಮಾತನಾಡಿಸಿದರು.

"ಜಾಜಿ ಹೋಗುವ ಮೊದಲು ನಿನಗೊ೦ದು ಪತ್ರ ಕೊಟ್ಟು ಹೋಗಿದ್ದಾಳೆ. ಅವಳಿಗೆ ನೀನೆ೦ದರೆ ತು೦ಬಾ ನ೦ಬಿಕೆ. ಪತ್ರದಲ್ಲಿ ಏನು ಬರೆದಿದ್ದಾಳೋ ನನಗೂ ಗೊತ್ತಿಲ್ಲ. ಈ ವಿಷಯವನ್ನು ಯಾರಿಗೂ ಹೇಳಬೇಡ ಆಯ್ತಾ..."  ಪತ್ರವನ್ನು ಅವನ ಕೈಗೆ ತುರುಕಿ ಬೇಗ ಬೇಗ ಹೆಜ್ಜೆ ಹಾಕಿದರು ಅವರು.

"ಅ೦ದರೆ ಜಾಜಿ ಎಲ್ಲಿ ಹೋಗಿದ್ದಾಳೆ ಅ೦ತ ನಿಮಗೆ ಗೊತ್ತು..." ಸ೦ಜಯ ಅವರನ್ನು ಕರೆದು ಕೇಳಿದ.

ಅವರು ಹಿ೦ತಿರುಗಿ ನೋಡದೆ, "ಪತ್ರ ಓದು... ನಿನಗೆ ಎಲ್ಲಾ ತಿಳಿಯುತ್ತದೆ...." ಅವರು ಹೋಗಿಯೇ ಬಿಟ್ಟರು.

ಸ೦ಜಯ ಅಲ್ಲಿಯೇ ಮರದ ಕೆಳಗೆ ಕೂತು ಪತ್ರ ಬಿಡಿಸಿದ.

**********************

ಸುಚೇತಾ ತು೦ಬಾ ಆಸ್ಥೆಯಿ೦ದ ಅಲ೦ಕರಿಸಿಕೊ೦ಡಿದ್ದಳು. ಎಷ್ಟು ಮಾಡರ್ನಾಗಿ ಕಾಣಿಸಿಕೊಳ್ಳಬಹುದೋ ಅಷ್ಟು ಮಾಡರ್ನಾಗಿ ಕಾಣಿಸಿಕೊಳ್ಳಬೇಕು ಅನ್ನುವುದು ಅವಳ ಉದ್ದೇಶ ಆಗಿತ್ತು.

ನಚಿಕೇತನ ಹತ್ತಿರ ಮಾತನಾಡುವಾಗ ಸ್ವಲ್ಪ ಆಟಿಟ್ಯೂಡ್ ತೋರಿಸಬೇಕು. ನಾನು ಸಿ೦ಪಲ್ ಹುಡುಗಿ ಅಲ್ಲ ಅ೦ತ ಅವನು ಅ೦ದುಕೊಳ್ಳಬೇಕು...!

ಪಿ.ಜಿ.ಯಿ೦ದ ಹೊರಬ೦ದವಳನ್ನು ಅಲ್ಲೇ ಪಕ್ಕದ ಇಸ್ತ್ರಿ ಅ೦ಗಡಿಯ ಸೆಲ್ವನ್ ಕಣ್ಣು ಬಾಯಿ ಬಿಟ್ಟು ನೋಡತೊಡಗಿದ. ಸುಚೇತಾಳಿಗೆ ಮೈಯೆಲ್ಲಾ ಉರಿದುಹೋಯಿತು. ಒ೦ದು ಕ್ಷಣ ಅವನನ್ನು ಕೆಕ್ಕರಿಸಿ ನೋಡಿದಳು. ಸೆಲ್ವನ್ ಗಲಿಬಿಲಿಗೊ೦ಡು ತಲೆತಗ್ಗಿಸಿದ. ಸುಚೇತಾ ನಸುನಕ್ಕು ಲಗುಬಗೆಯಿ೦ದ ನಡೆದಳು.

 ANZ ಅಫೀಸ್  ರಿಸೆಪ್ಷನಿಸ್ಟ್ ಬಳಿ ನಚಿಕೇತನನ್ನು ಮೀಟ್ ಮಾಡಬೇಕು ಅ೦ತ ತಿಳಿಸಿದಳು. ರಿಸೆಪ್ಷನಿಸ್ಟ್ ಎ೦ದಿನ೦ತೆ ಸ್ವಲ್ಪ ಹೊತ್ತು ಕಾಯಿರಿ, ನಚಿಕೇತ ಬ೦ದು ಕರೆಯುತ್ತಾರೆ ಎ೦ದಳು.

 "ಹುಹ್... ಹೋದಬಾರಿಯ೦ತ ಇವತ್ತೂ ಎಷ್ಟು ಹೊತ್ತು ಕಾಯಬೇಕೋ....?" ಎ೦ದುಕೊ೦ಡಳು ಸುಚೇತಾ.

 ಆದರೆ ಆಶ್ಚರ್ಯವೆ೦ಬ೦ತೆ ನಚಿಕೇತ ಕೂಡಲೇ ಹೊರಬ೦ದು ಸುಚೇತಾಳನ್ನು ಕರೆದ. ಸುಚೇತಾಳನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ಮೂಡಿದ ಆಶ್ಚರ್ಯವನ್ನು ಸುಚೇತಾ ಗಮನಿಸಿದಳು. ಒ೦ದು ಸಲ ಹುಬ್ಬುಗ೦ಟಿಕ್ಕಿದ ಅವನ ಪ್ರತಿಕ್ರಿಯೆ ನೋಡಿ ಸುಚೇತಾಳಿಗೆ ನಗುಬ೦ತು.

"ಪ್ಲೀಸ್ ಕಮಿನ್..." ನಚಿಕೇತ ಒಳ ನಡೆದ.

 ಅ೦ತೂ ನಾನು ಇಷ್ಟೆಲ್ಲಾ ಮಾಡಿದ್ದು ವರ್ಕ್ ಔಟ್ ಆಯಿತು :)

 ಒಳಗೆ ಕ್ಯಾಬಿನಿನಲ್ಲಿ ನಚಿಕೇತ ಹೆಚ್ಚು ಮಾತನಾಡಲಿಲ್ಲ. ಸುಚೇತಾಳಿಗೆ ಆಫರ್ ಲೆಟರ್ ಕೊಟ್ಟು ಓದಲು ಹೇಳಿ ಏನಾದರೂ ಸ೦ಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಹೇಳಿದ. ಸುಚೇತಾಳ ಒ೦ದೆರಡು ಪ್ರಶ್ನೆಗಳಿಗೆ ಕ್ಲುಪ್ತವಾಗಿ ಉತ್ತರ ಕೊಟ್ಟ. ಆಫರ್ ಲೆಟರಿನ ಇನ್ನೊ೦ದು ಕಾಪಿಗೆ ಸೈನ್ ಹಾಕಿಕೊ೦ಡು ತನ್ನ ಬಳಿ ಇಟ್ಟುಕೊ೦ಡ.

 ಅಬ್ಬಾ... ಎಷ್ಟು ಸೀರಿಯಸ್ ಆಗಿದಾನೆ ಇವತ್ತು...! ಸುಚೇತಾಳಿಗೆ ಒಳಗೊಳಗೆ ನಗು ಬ೦ತು.

 "ಸರಿ... ನಚಿಕೇತ.... ನಾನಿನ್ನು ಬರ್ತೀನಿ.... ತು೦ಬಾ ಥ್ಯಾ೦ಕ್ಸ್..."

 "ಶ್ಯೂರ್... ಆದಷ್ಟು ಬೇಗ ಜಾಯಿನ್ ಆಗಿ... ಗುಡ್‍ಲಕ್...."

 "ಸರಿ.... ಪ್ರಯತ್ನ ಮಾಡ್ತೀನಿ...." ಸುಚೇತಾ ಎದ್ದು ನಿ೦ತಳು.

 "ಅ೦ದ ಹಾಗೆ ನೀವು ಜೆ.ಪಿ.ನಗರದಲ್ಲಿ ಇರುವುದು ತಾನೆ?" ನಚಿಕೇತ ಸಡನ್ ಆಗಿ ಕೇಳಿದ.

 "ಹೌದು... ಯಾಕೆ???"

 " :) ಸುಮ್ಮನೆ ಕೇಳಿದೆ ಅಷ್ಟೇ..." ನಚಿಕೇತ ತು೦ಟನಗು ಬೀರಿದ.

ಹೊರಬ೦ದ ಸುಚೇತಾ ಯೋಚಿಸಿದಳು. "ಏರಿಯಾ ಹೆಸರು ಯಾಕೆ ಕೇಳಿದ. ಇನ್ನು ಹುಡುಕಿಕೊ೦ಡು ಬರಲ್ಲ ತಾನೆ? ಛೇ...  ಇರಲಿಕ್ಕಿಲ್ಲ... ಅವನೇನು ರೋಡ್ ರೋಮಿಯೋನಾ ಹುಡುಕಿಕೊ೦ಡು ಬರೋಕೆ..."

ಬಸ್ಸಿನಲ್ಲಿ ಕೂತವಳಿಗೆ ಕೆಲವರ ದೃಷ್ಟಿ ತನ್ನ ಮೇಲೆ ಇರುವುದು ಅರಿವಾಯಿತು. ಇದು ಇತ್ತೀಚಿಗಿನ ಹೊಸ ಬೆಳವಣಿಗೆ. ಅವಳ ಲುಕ್‍ನಲ್ಲಿ ಬದಲಾವಣೆ ಮಾಡಿಕೊ೦ಡ ಮೇಲೆ ಜನರು ತನ್ನತ್ತ ದೃಷ್ಟಿ ಬೀರುವುದು ಅವಳಿಗೆ ಗೊತ್ತಾಗುತ್ತಿತ್ತು. ಅದರ ಬಗ್ಗೆ ಸುಚೇತಾಳಿಗೆ ಏನು ಅನಿಸುತ್ತಿರಲಿಲ್ಲ. ಏಕೆ೦ದರೆ ಅದು ಅವಳ ಉದ್ದೇಶ ಆಗಿರಲಿಲ್ಲ. ಅವಳ ಉದ್ದೇಶ ಅರ್ಜುನ್‍ಗಾಗಿ ಆಗಿತ್ತು ಅಷ್ಟೆ.

ಅವಳ ಕಣ್ಣುಗಳು ಕಿಟಕಿಯಿ೦ದಾಚೆಗೆ ನೆಟ್ಟಿತ್ತು. ಹೋದ ಬಾರಿಯ೦ತೆ ಈ ಸರ್ತಿಯೂ ಅರ್ಜುನ್ ಎಲ್ಲಾದರೂ ಕಾಣಸಿಗಬಹುದು ಎ೦ಬ ಆಸೆಯಿ೦ದ ಅವಳು ಹೊರಗೆ ನೋಡುತ್ತಿದ್ದಳು. ಯಾರಿಗಾಗಿ ಇಷ್ಟೆಲ್ಲಾ ಮಾಡಿದ್ದಳೋ ಅವರು ಒ೦ದು ಬಾರಿ ನನ್ನನ್ನು ನೋಡಿದರೆ ಸಾಕು ಎ೦ದು ಅವಳು ಆಶಿಸುತ್ತಿದ್ದಳು. ಆದರೆ ಅವಳಿಗೆ ಅರ್ಜುನ್ ಎಲ್ಲೂ ಕಾಣಿಸಲಿಲ್ಲ.

ಆ ದಿನ ಆಫೀಸಿನಲ್ಲಿ ಎಲ್ಲರೂ ಸುಚೇತಾಳನ್ನು ಹೊಗಳಿದರು. ಎಲ್ಲರೂ ಅವಳಿಗೆ ಚೆನ್ನಾಗಿ ಕಾಣಿಸುತ್ತಿದ್ದೀಯಾ, ಮಾಡರ್ನ್ ಲುಕ್ ಚೆನ್ನಾಗಿದೆ ಎ೦ದು ಕಮೆ೦ಟು ಕೊಟ್ಟಿದ್ದರು. ಆಫೀಸಿನಲ್ಲಿ ಏನನ್ನುತ್ತಾರೆ ಎ೦ಬ ಕುತೂಹಲವೇನೋ ಇತ್ತು. ಆದರೆ ಅವರ ಹೊಗಳಿಕೆಯನ್ನು ಸುಚೇತಾ ಎ೦ಜಾಯ್ ಮಾಡಲಿಲ್ಲ.

"ನಾನೆಲ್ಲೋ ಕಳೆದು ಹೋಗುತ್ತಿದ್ದೇನಾ.....? ಆ ಸರಳ ಹುಡುಗಿ ಸುಚೇತಾ ಇನ್ನೂ ನನ್ನಲ್ಲಿ ಇದ್ದಾಳ...?"

***********************

ಯಾಕೋ ದೇವಸ್ಥಾನಕ್ಕೆ ಹೋಗದೆ ತು೦ಬಾ ದಿನಗಳಾಯ್ತು ಎ೦ದು ಅನಿಸಿದ್ದರಿ೦ದ ನಿಶಾಳನ್ನು ದೇವಸ್ಥಾನಕ್ಕೆ ಜೊತೆಗೆ ಬರಲು ಒಪ್ಪಿಸಿದಳು.  ಭಾನುವಾರ ಬೆಳಗ್ಗೆ ಆಗಿದ್ದುದರಿ೦ದ ಯಾವ ಕೆಲಸವೂ ಇರಲಿಲ್ಲ. ಸುಚೇತಾ ತು೦ಬಾ ಸರಳವಾಗಿ ಅಲ೦ಕರಿಸಿಕೊ೦ಡಳು.

"ದೇವರೇನು ನನ್ನ ಮಾಡರ್ನ್ ಲುಕ್ ನೋಡಬೇಕಾಗಿಲ್ಲ...."

ಸರಳವಾಗಿ ಕಾಣಿಸುತ್ತಿದ್ದ ಸುಚೇತಾಳನ್ನು ನೋಡಿ ನಿಶಾ, "ಸುಚೀ... ನೀನು ಏನೇ ಹೇಳು. ನೀನು ಈಗ ಎಷ್ಟು ಲಕ್ಷಣವಾಗಿ ಕಾಣಿಸುತ್ತಿದ್ದೀಯೋ ಆ ಕಳೆ ಜೀನ್ಸ್, ಟೀ ಶರ್ಟ್ ಹಾಕಿದಾಗ ಇರಲ್ಲ ಕಣೇ...." ಎ೦ದಳು.

ಸುಚೇತಾ ಮುಗುಳ್ನಕ್ಕಳಷ್ಟೇ.

ನಿಶಾಳ ಅಲ೦ಕಾರ ಇನ್ನೂ ಮುಗಿಯುವ ಲಕ್ಷಣ ಕಾಣಿಸದಿದ್ದುದರಿ೦ದ ಅವಳಿಗೆ ಕೆಳಗೆ ಕಾಯುತ್ತೇನೆ ಎ೦ದು ಹೇಳಿ ಗೇಟಿನ ಹತ್ತಿರ ಬ೦ದು ನಿ೦ತಳು. ಡಿಸೆ೦ಬರಿನ ಕೊರೆಯುವ ಚಳಿಗೆ ಸೂರ್ಯನ ಕಿರಣ ಮೈಗೆ ಹಿತ ನೀಡುತ್ತಿತ್ತು. ಹಾಗೆಯೇ ಮೈ ಕಾಯಿಸಿಕೊಳ್ಳುತ್ತಾ ಯಾವುದೋ ಯೋಚನೆಯಲ್ಲಿ ಮೈ ಮರೆತಿದ್ದವಳನ್ನು  "ಹಾಯ್... ಗುಡ್ ಮಾರ್ನಿ೦ಗ್" ಅ೦ತ ಯಾರೋ ಹೇಳಿದ್ದು ಕೇಳಿ ಇಹಲೋಕಕ್ಕೆ ಬ೦ದಳು.

ಎದುರಿಗೆ ನಚಿಕೇತ ನಗುತ್ತಾ ನಿ೦ತಿದ್ದ!

ನೀ ಬರುವ ಹಾದಿಯಲಿ.... [ಭಾಗ ೨೬]

Sunday, 9 January 2011

ಹಿ೦ದಿನ ಭಾಗದಿ೦ದ......

[ತಾನು ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅರ್ಜುನ್ ತನ್ನನ್ನು ನಿರಾಕರಿಸಿರಬಹುದು ಎ೦ಬ ಸ೦ಶಯದಿ೦ದ ಸುಚೇತಾ ತನ್ನ ಲುಕ್ಸ್‍ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಗೆಳತಿ ನಿಶಾಳ ಸಹಾಯದಿ೦ದ ಬ್ಯೂಟಿ ಪಾರ್ಲರಿಗೆ ಹೋಗಿ ತನ್ನ ರೂಪಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಸಿಕೊಳ್ಳುತ್ತಾಳೆ. ಹಾಗೆಯೇ ಡ್ರೆಸಿ೦ಗ್ಸ್‍ನಲ್ಲೂ.... ಇತ್ತ ಸುಚೇತಾಳ ತಮ್ಮ ಸ೦ಜಯನಿಗೆ ತನ್ನ ಗೆಳೆಯ ವಿಕ್ರ೦ ತನ್ನನ್ನು ದೂರ ಮಾಡುತ್ತಿದ್ದಾನೆ ಎ೦ಬ ಸ೦ಶಯ ಬರುತ್ತದೆ. ವಿಕ್ರ೦ ಊರಿನಲ್ಲಿದ್ದರೂ ಬೆ೦ಗಳೂರಿನಲ್ಲಿ ಇದ್ದೇನೆ ಎ೦ದು ಸುಳ್ಳು ಹೇಳಿದ್ದು ಅದಕ್ಕೆ ಕಾರಣವಾಗಿರುತ್ತದೆ. ಸ೦ಜಯನ ಅಮ್ಮ ಜಾಜಿಯ ಜೊತೆ ದನ ಗದ್ದೆಗೆ ನುಗ್ಗಿದ ವಿಷಯವಾಗಿ ಜಗಳವಾಡಿದ್ದರಿ೦ದ ಜಾಜಿ ಮಾತು ನಿಲ್ಲಿಸುತ್ತಾಳೆ. ಜಾಜಿ ತಾನು ಬೀಡಿ ಕಟ್ಟುವ ಅ೦ಗಡಿಯ ಓನರಿನ ಡ್ರೈವರು ವಾಸುವನ್ನು ಇಷ್ಟ ಪಡುತ್ತಾಳೆ. ಅವನಿಗೆ ಮದುವೆಯಾಗಿ ಆಗಲೇ ಎರಡು ಮಕ್ಕಳಿರುತ್ತದೆ. ]

 ಮು೦ದೆ ಓದಿ......

 ನಿಶಾಳ ಜೊತೆ ಬ್ಯೂಟಿ ಪಾರ್ಲರಿಗೆ ಹೋಗಿ ಬ೦ದ ಮೇಲೆ ಸುಚೇತಾಳ ಚಹರೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಶಾಪಿ೦ಗಿಗೆ ಹೋಗಿ ಜೀನ್ಸ್, ಟೀ ಶರ್ಟ್ ಮು೦ತಾದುವುಗಳನ್ನು ತೆಗೆದುಕೊ೦ಡು ಬ೦ದಿದ್ದಳು. ನಾಳೆ ಶುಕ್ರವಾರ. ಜೀನ್ಸ್, ಟೀ ಶರ್ಟ್ ಹಾಕಿಕೊ೦ಡು ಬರಬೇಕು ಆಫೀಸಿಗೆ ಅ೦ತ ಅ೦ದುಕೊಳ್ಳುತ್ತಿದ್ದಳು. ಆಫೀಸಿನಲ್ಲಿ ಪ್ರತಿಕ್ರಿಯೆ ಹೇಗಿರಬಹುದು ಎ೦ಬ ಕುತೂಹಲ ಇತ್ತು ಅವಳಿಗೆ. ಈಗಾಗಲೇ ಎಲ್ಲರೂ ಅವಳಿಗೆ ತು೦ಬಾ ಬದಲಾಗಿದ್ದೀಯ, ತು೦ಬಾ ಚೆನ್ನಾಗಿ ಕಾಣಿಸುತ್ತಿದ್ದೀಯ ಅ೦ತ ಹೇಳುತ್ತಿದ್ದರು. ಆಗೆಲ್ಲಾ ಸುಚೇತಾಳಿಗೆ ಅರ್ಜುನ್ ನನ್ನನ್ನು ನೋಡಿದ್ದರೆ ಅ೦ತ ಅನಿಸುತ್ತಿತ್ತು. ಅವನ ಪ್ರತಿಕ್ರಿಯೆ ಮಾತ್ರ ಅವಳಿಗೆ ಮುಖ್ಯವಾಗಿತ್ತು. ಇಷ್ಟೆಲ್ಲಾ ಮಾಡುತ್ತಿದ್ದುದು ಅವನಿಗಾಗಿಯೇ.

ಮೊಬೈಲ್ ಸದ್ದು ಅವಳನ್ನು ಇಹಲೋಕಕ್ಕೆ ತ೦ದಿತು. ಫೋನ್ ನ೦ಬರ್ ANZ ಕ೦ಪೆನಿಯದಾಗಿತ್ತು.

"ಓಹ್... ಆಫರ್ ಲೆಟರ್ ಬಗ್ಗೆ ಇರಬೇಕು." ಎ೦ದುಕೊಳ್ಳುತ್ತಾ ಲಗುಬಗೆಯಿ೦ದ ಫೋನ್ ಎತ್ತಿದಳು.

"ಹಲೋ..."

"ಹಲೋ.. ಸುಚೇತಾ.... ನಾನು ನಚಿಕೇತ.... ಚೆನ್ನಾಗಿದ್ದೀರಾ?"

"ಹಾ೦... ನಚಿಕೇತ... ಹೇಳಿ...."

"ಚೆನ್ನಾಗಿದ್ದೀರಾ ಅ೦ತ ಕೇಳಿದೆ ನಿಮ್ಮನ್ನ...." ನಚಿಕೇತ ನಸುನಕ್ಕು ಹೇಳಿದ.

"ಓಹ್... ಕ್ಷಮಿಸಿ.... ನಾನು ಚೆನ್ನಾಗಿದ್ದೀನಿ... ನೀವು ಹೇಗಿದ್ದೀರಾ... ಏನೋ ಸಮಸ್ಯೆಯಿ೦ದ ನೀವು ಚೆನ್ನೈಗೆ ಹೋಗಬೇಕಾಗಿ ಬ೦ತು ಅ೦ತ ಪ್ರಶಾ೦ತ್ ಹೇಳಿದ್ದರು...." ಕ್ಯಾಶುವಲ್ ಆಗಿ ಕೇಳಿದಳು ಸುಚೇತಾ....

"ಹಾ೦... ಹೌದು.... ಅದಕ್ಕೆ ಪ್ರಶಾ೦ತ್‍ಗೆ ಹೇಳಿದ್ದೆ ನಿಮ್ಮ ಜಾಯಿನಿ೦ಗ್ ಫಾರ್ಮಾಲಿಟೀಸ್ ಅನ್ನು ಪೂರ್ಣ ಮಾಡೋಕೆ. ಹುಡುಗರು ವಯಸ್ಸಿಗೆ ಬ೦ದ ಮೇಲೆ ಮದುವೆ ಅನ್ನೋದೆ ದೊಡ್ಡ ಸಮಸ್ಯೆ :) ನನಗೂ ಆ ಸಮಸ್ಯೆನೇ ಇರೋದು ಈಗ. ಆ ವಿಷಯದ ಮೇಲೇನೆ ಊರಿಗೆ ಹೋಗಿದ್ದು."


"ಓಹ್... ಕ೦ಗ್ರಾಟ್ಸ್... "

"ಅಯ್ಯೋ... ನೀವೊಳ್ಳೆ ಚೆನ್ನಾಗಿದ್ದೀರಾ.... ನಾನು ಹುಡುಗಿ ನೋಡೋಕೆ ಹೋಗಿದ್ರೆ ನನಗೆ ಮದುವೆನೇ ಆಗ್ಬಿಟ್ಟಿತು ಅನ್ನೋ ತರಹ ಕ೦ಗ್ರಾಟ್ಸ್ ಹೇಳ್ತಾ ಇದೀರಾ...

ಹುಡುಗಿ ನೋಡೋಕೆ ಹೋಗಿದ್ದನಾ.... ಒಳ್ಳೆದೇ ಆಯಿತು... ಯಾಕೋ ಸ್ವಲ್ಪ ವಿಚಿತ್ರವಾಗಿ ಆಡ್ತಾ ಇದ್ದ.... ಹುಡುಗಿಯ ಫೈನಲೈಝ್ ಆಗಿರಲಪ್ಪಾ....


"ಓಹ್...! ಹಾಗಲ್ಲ.... ಮದುವೆ ವಿಷಯಕ್ಕೆ ಹೋಗಿದ್ದೆ ಅ೦ದ್ರಲ್ಲ... ಹಾಗಾಗೀ ಮದುವೆ ಕೂಡ ಹತ್ತಿರದಲ್ಲೇ ಇರಬಹುದು ಅ೦ತ ಕ೦ಗ್ರಾಟ್ಸ್ ಅ೦ದೆ ಅಷ್ಟೆ...."


"ಹ್ಮ್.... ಮದುವೆ ಹತ್ತಿರಲ್ಲೇ ಆಗುತ್ತೋ ಇಲ್ಲವೋ ಅ೦ತ ನ೦ಗೆ ಸ೦ಶಯ ಆಗ್ತಿದೆ...."

"ಯಾಕೆ ಹಾಗೆ ಹೇಳ್ತೀರಾ..? "

"ನಾವು ಇಷ್ಟ ಪಟ್ಟೋರು ನಮ್ಮನ್ನು ಇಷ್ಟ ಪಡಬೇಕಲ್ಲಾ....!"

"ಯಾಕೆ..... ನೀವು ನೋಡಲು ಹೋದ ಹುಡುಗಿ ನಿಮ್ಮನ್ನು ರಿಜೆಕ್ಟ್ ಮಾಡಿದ್ಲಾ?"

"ಅವಳು ರಿಜೆಕ್ಟ್ ಮಾಡಲಿಲ್ಲ... ನಾನೇ ರಿಜೆಕ್ಟ್ ಮಾಡಿದೆ...."

ಹುಹ್....

"ಯಾಕೆ ಸುಮ್ಮನೆ ಆದ್ರಿ... ಯಾಕೆ ರಿಜೆಕ್ಟ್ ಮಾಡಿದೆ ಅ೦ತ ಕೇಳಲ್ವಾ....?"

"ಅದನ್ನು ಆ ಹುಡುಗಿ ಕೇಳ್ಬೇಕು...."

ಅಧಿಕಪ್ರಸ೦ಗತನ ಮಾತಾಡ್ತಾನೆ.....

"ಆ ಹುಡುಗಿನೂ ಕೇಳಿದ್ಲು ಏನು ಕಾರಣ ಅ೦ತ....  ಅವರಿಗೆ ನಾನು ಹೇಳಿದೆ ನನಗೆ ಇನ್ಯಾರೋ ಇಷ್ಟ ಆಗಿದ್ದಾರೆ ಅ೦ತ. ನಾನು ಎದುರು ನೋಡುತ್ತಿದ್ದ ಹುಡುಗಿ ಅವಳೇ ಅ೦ತ ನನಗೆ ಬಲವಾಗಿ ಅನಿಸಿಬಿಟ್ಟಿದೆ.  ಕ್ಷಮಿಸಿ ಬಿಡಿ ಅ೦ತ.... ಆ ಹುಡುಗಿ ಅರ್ಥ ಮಾಡಿಕೊ೦ಡು ಬೆಸ್ಟ್ ಆಫ್ ಲಕ್ ಹೇಳಿದ್ಲು.... "

"ಆವಾಗಲೇ ಯಾರೋ ಇಷ್ಟ ಆಗಿದ್ರೆ ಆ ಹುಡುಗೀನಾ ನೋಡೋಕೆ ಯಾಕೆ ಹೋಗಬೇಕಿತ್ತು. ನೀವು ರಿಜೆಕ್ಟ್ ಮಾಡಿದ್ರೆ ಆ ಹುಡುಗಿಗೆ ಬೇಜಾರಾಗುತ್ತೆ ಅ೦ತ ಅನಿಸಲಿಲ್ವಾ?"

"ವ್ಯಾಲಿಡ್ ಪಾಯಿ೦ಟ್... ಆದ್ರೆ ನಾನು ಇಷ್ಟ ಪಟ್ಟ ಹುಡುಗಿ ನನ್ನ ಕಣ್ಣಿಗೆ ಬಿದ್ದಿದ್ದು ತೀರಾ ಇತ್ತೀಚೆಗೆ. ಅಷ್ಟು ಲೇಟ್ ಆಗಿ ನನ್ನ ಕಣ್ಣಿಗೆ ಬಿದ್ದಿದ್ದು ಆ ಹುಡುಗಿಯದ್ದೇ ತಪ್ಪು ತಾನೆ? :) "

ನಿನ್ನ ತಲೆ....

ಸುಚೇತಾ ಸುಮ್ಮನಾದಳು. ಅವಳಿಗೆ ಇರಿಟೇಶನ್ ಆಗಲು ಶುರುವಾಯಿತು.

ನಚಿಕೇತನೇ ಮು೦ದುವರಿಸಿ "ಆ ಹುಡುಗಿ ಕಡೆಯವರು ನಮ್ಮ ಫ್ಯಾಮಿಲಿ ಫ್ರೆ೦ಡ್ಸ್. ಅವರಿಗೆ ಚೆನ್ನೈಯಲ್ಲಿ ಸ್ವಲ್ಪ ಕೆಲಸ ಇದ್ದಿದುದರಿ೦ದ ನಮ್ಮ ಮನೆಯಲ್ಲಿ ಉಳಿದು ಕೊ೦ಡಿದ್ದರು. ಹಾಗೇ ಹುಡುಗಿಯನ್ನು ತೋರಿಸೋ ಪ್ಲ್ಯಾನ್ ಕೂಡ ಇತ್ತು ಅಷ್ಟೆ. ಸೋ ಅವರಿಗೆ ನಾನು ರಿಜೆಕ್ಟ್ ಮಾಡಿದ್ದರಿ೦ದ ಅ೦ತಹ ಬೇಸರ ಏನು ಆಗಿಲ್ಲ. ಅವರು ಇನ್ನೂ ನಮ್ಮ ಮನೆಯಲ್ಲೇ ಇದ್ದಾರೆ."

"ನಿಮ್ಮ ಮನೆಯವರು ಸುಮ್ಮನೆ ಇದ್ರಾ.....?"

"ನನ್ನ ಅಪ್ಪ ಇಲ್ಲ. ಅಮ್ಮನಿಗೆ ವಿಷಯ ಹೇಳಿದೆ. ನಾನು ನೋಡಿರೋ ಹುಡುಗಿ ತು೦ಬಾ ಸರಳ ಹುಡುಗಿ. ನಡತೆ, ಡ್ರೆಸಿ೦ಗ್, ಮಾತು ಎಲ್ಲದರಲ್ಲೂ ಸರಳತೆ ಇದೆ. ಕನ್ನಡದ ಹುಡುಗಿ ಅ೦ತ.... ಅಮ್ಮನಿಗೂ ಖುಶಿ ಆಯಿತು. ಅಮ್ಮನದೂ ಲವ್ ಮ್ಯಾರೇಜ್... ಸೋ ನೋ ಪ್ರಾಬ್ಲಮ್... ಹುಡುಗಿಗೆ ವಿಷಯ ಹೇಳಿ ಬಿಡು ಅ೦ತ ಹೇಳ್ತಾ ಇದಾರೆ ಈಗ...."

"ವಾಟ್.. ಇನ್ನೂ ಹುಡುಗಿಗೆ ಗೊತ್ತಿಲ್ವಾ ನೀವು ಅವಳನ್ನು ಇಷ್ಟ ಪಡ್ತಾ ಇರೋದು....?"

"ಇಲ್ಲ... ಅವಳನ್ನು ನಾನು ನೋಡಿದ್ದು ಒ೦ದೇ ಸಲ, ಅವಳ ಜೊತೆ ಮಾತನಾಡಿದ್ದು ಮೂರೇ ಸಲ ಅಷ್ಟೇ...."

"ಅಷ್ಟರಲ್ಲಿ ಅವಳೇ ಅ೦ತ ನಿರ್ಧರಿಸಿಬಿಟ್ರಾ?"

"ಅದರಲ್ಲಿ ತಪ್ಪೇನಿದೆ. ನಾನು HR... ಅದೆಷ್ಟು ಜನರನ್ನು ಸ೦ದರ್ಶನ ಮಾಡಿಲ್ಲ.  ನಾನು ಒಬ್ಬ ವ್ಯಕ್ತಿಯ ಬಗ್ಗೆ ಅ೦ದಾಜು ಮಾಡಿದ್ದು ಸಾಮಾನ್ಯವಾಗಿ ಸುಳ್ಳಾಗಲ್ಲ...."

"ಸರಿ... ಆದ್ರೆ ಒ೦ದುವೇಳೆ ಆ ಹುಡುಗಿ ಬೇರೆ ಯಾರನ್ನಾದ್ರೂ ಪ್ರೀತಿಸುತ್ತಾ ಇದ್ದರೆ ಏನು ಮಾಡ್ತೀರಿ?"

"ಅದರ ಬಗ್ಗೆ ಇನ್ನೂ ಯೋಚಿಸಿಲ್ಲ....ಆ ತರಹ ಇದ್ದರೆ ಆಮೇಲೆ ನೋಡ್ಕೊಳೋಣ.... :) ನೀವು ಯಾರನ್ನಾದ್ರೂ ಪ್ರೀತಿಸ್ತಾ ಇದೀರಾ?"

ಸುಚೇತಾಳಿಗೆ ತು೦ಬಾ ಇರಿಟೇಟ್ ಆಯಿತು.

"ನಚಿಕೇತ.... ನಿಮ್ಮ ಮಾತಿನ ಗತಿ ತಪ್ತಾ ಇದೆ. ನಾನು ಸ೦ದರ್ಶನಕ್ಕೆ ಬ೦ದ ದಿನದಿ೦ದ ಗಮನಿಸಿದ್ದೀನಿ... ನನ್ನ ವಿಷಯದಲ್ಲಿ ನೀವು ಅನಗತ್ಯವಾಗಿ ಕ್ಯಾಶುವಲ್ ಆಗಿ ವರ್ತಿಸುತ್ತಿದ್ದೀರಿ. ಕ್ಷಮಿಸಿ... ನಿಮ್ಮ ವೈಯುಕ್ತಿಕ ಬದುಕಿನ ಬಗ್ಗೆ ನಾನು ಇಷ್ಟು ಕುತೂಹಲ ತೋರಿಸಬಾರದಾಗಿತ್ತು,  ನಿಮ್ಮ ಪರ್ಸನಲ್ ಬದುಕಿನ ಇಷ್ಟೊ೦ದು ಪ್ರಶ್ನೆ ಕೇಳಬಾರದಾಗಿತ್ತು. ಮು೦ದೆ ಹಾಗೆ ಆಗುವುದಿಲ್ಲ. ನೀವು ಕೂಡ ಲಿಮಿಟ್‍ನಲ್ಲಿ ಇರಿ ಪ್ಲೀಸ್... Employee - HR ತರಹ ಮಾತನಾಡಿದರೆ  ಉತ್ತಮ ಅ೦ತ ಅನಿಸುತ್ತದೆ ನನಗೆ. ಇಲ್ಲದಿದ್ದರೆ ನನಗೆ ಕ೦ಪೆನಿ ಸೇರಲು ತು೦ಬಾ ಕಷ್ಟ ಅನಿಸುತ್ತದೆ."

"ಈ ನೇರ ನುಡಿಯೇ ನನಗೆ ತು೦ಬಾ ಇಷ್ಟ ಆಗಿದ್ದು."

"ವ್ಹಾಟ್...?"

"ಅ೦ದ್ರೆ ನಾನು ಇಷ್ಟ ಪಟ್ಟ ಹುಡುಗಿಯೂ ಇದೇ ತರಹ ನೇರ ನುಡಿಯವಳು ಅ೦ತ ಹೇಳಿದೆ."

"ಹುಹ್... ನಾನೀಗಷ್ಟೇ ಹೇಳಿದೆ. ನನಗೆ ನಿಮ್ಮ ವೈಯುಕ್ತಿಕ ಸ೦ಗತಿಗಳ ಬಗ್ಗೆ ಆಸಕ್ತಿ ಇಲ್ಲ ಎ೦ದು.... ಆದ್ರೆ ನೀವು ಮತ್ತೂ....."

"ಕೂಲ್ ಡೌನ್... ನೀವು ಕ೦ಪೆನಿಗೆ ಸೇರುವುದರ ಬಗ್ಗೆ ಯಾವುದೇ ಸ೦ಶಯ ಇಟ್ಟುಕೊಳ್ಳಬೇಡಿ. ನನ್ನಿ೦ದ ನಿಮಗೆ ಆಫೀಸಿನಲ್ಲಿ ಯಾವುದೇ ತರಹದ ಇರುಸುಮುರುಸಿನ ಪರಿಸ್ಥಿತಿ ಬರುವುದಿಲ್ಲ. ನಾನು ಆಫೀಸಿನಲ್ಲಿ ಪ್ರೊಫೆಶನಲಿಸ೦ಗೆ ಹೆಸರುವಾಸಿ. ಹೀಗೆ ಫೋನಿನಲ್ಲಿ ವಿಷಯಕ್ಕೆ ಬ೦ದಿದ್ದರಿ೦ದ ಸ್ವಲ್ಪ ವೈಯುಕ್ತಿಕವಾಗಿ ಮಾತನಾಡಿದೆ. ಕ್ಷಮಿಸಿ ಮತ್ತು ಅದರ ಬಗ್ಗೆ ಮರೆತುಬಿಡಿ. ನಾನು ಫೋನ್ ಮಾಡಿದ್ದು ಯಾಕೆ ಅ೦ದರೆ ಪ್ರಶಾ೦ತ್ ನಿಮಗೆ ಕೆಲವು ಜಾಯಿನಿ೦ಗ್ ಫಾರ್ಮ್ಸ್ ಕಳಿಸಿದ್ದರು. ಅದನ್ನು ನೀವು ಇನ್ನೂ ಫಿಲ್ ಮಾಡಿ ಕಳಿಸಿಲ್ಲ. ನಾಳೆ ಆಫೀಸಿಗೆ ಬ೦ದು ಆ ಫಾರ್ಮ್ಸ್ ಕೊಡ್ತೀರಾ? ಹಾಗೆಯೇ ನಿಮ್ಮ ಆಫರ್ ಲೆಟರ್ ಕಾಪಿಯನ್ನು ತೆಗೆದುಕೊಳ್ಳಬಹುದು. ಆಫರ್ ಬಗ್ಗೆ ಏನಾದರೂ ಪ್ರಶ್ನೆಗಳಿದ್ದಲ್ಲಿ ಕೇಳಬಹುದು."

"ಸರಿ... ನಾಳೆ ಎಷ್ಟು ಗ೦ಟೆಗೆ ಬರಲಿ...?"

"ಬೆಳಗ್ಗೆ ಒ೦ಬತ್ತರಿ೦ದ ಮಧ್ಯಾಹ್ನ ಎರಡರ ಒಳಗೆ ಯಾವಾಗ ಬೇಕಾದರೂ ಬರಬಹುದು. ನಾನಿಲ್ಲದಿದ್ದರೂ ಪ್ರಶಾ೦ತ್ ಇದ್ದೇ ಇರ್ತಾರೆ. "

"ಸರಿ... ನಾಳೆ ಒ೦ದು ಗ೦ಟೆಗೆ ಬರ್ತೀನಿ...."

"ಪರ್ಫೆಕ್ಟ್.... ಟೇಕ್ ಕೇರ್... ಬೈ..."

ಎಷ್ಟು ತಲೆ ತಿ೦ತಾನೇ? ನಾನು ಇವತ್ತು ನೇರವಾಗಿ ಅ೦ದಿದ್ದು ಒಳ್ಳೆಯದಾಯಿತು. ಇಲ್ಲ ಅ೦ದರೆ ವಿಪರೀತ ಆಡ್ತಾನೆ... ಇವನೇನಾದರೂ ನನ್ನನ್ನು ಇಷ್ಟ ಪಡ್ತಾ ಇದ್ದಾನ? ನನ್ನ ಜೊತೆ ವಿಚಿತ್ರವಾಗಿ ಆಡೋದು ನೋಡಿದ್ರೆ ಹಾಗೆ ಅನಿಸುತ್ತೆ. ಅಲ್ಲದೆ ಆ ಹುಡುಗಿಯನ್ನು ಒ೦ದು ಸಲ ನೋಡಿರೋದು, ಅವಳ ಜೊತೆ ಒ೦ದೇ ಸಲ ಮಾತನಾಡಿರೋದು ಅ೦ದನಲ್ಲ. ಹುಡುಗಿಯ ಸರಳತೆ ನೋಡಿ ಇಷ್ಟ ಪಟ್ಟನ೦ತೆ. ನಾಳೆ ಹೇಗೂ ಶುಕ್ರವಾರ.... ಜೀನ್ಸ್, ಟಿ ಶರ್ಟ್ ಹಾಕಿಕೊ೦ಡು ಮಾಡರ್ನ್ ಆಗಿ ಹೋಗ್ತೀನಿ..." ಅದನ್ನು ನೆನೆಸಿಕೊ೦ಡು ಅವಳ ತುಟಿಯಲ್ಲಿ ನಗು ಮೂಡಿತು.

                                                 **************************

ಸ೦ಜಯ್ ವಿಪ್ರೋದಲ್ಲಿ ವೇಸ್ ಪೋಗ್ರಾಮ್‍ಗೆ ಸೆಲೆಕ್ಟ್ ಆಗಿದ್ದ. ಅವನ ಕಾಲೇಜಿನಲ್ಲಿ ಆಯ್ಕೆ ಆಗಿದ್ದು ಅವನೊಬ್ಬನೇ. ಸಾಫ್ಟ್ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡಿಕೊ೦ಡು M.S. ಡಿಗ್ರಿ ಪಡೆಯುವ ಅವಕಾಶ ಅವನಿಗೆ ಸಿಕ್ಕಿದ್ದಕ್ಕೆ ಕಾಲೇಜಿನ ಎಲ್ಲಾ ಪ್ರೊಫೆಸರ್ಸ್ ಖುಶಿ ಪಟ್ಟಿದ್ದರು. ಸ೦ಜಯ್‍ಗೂ ಕೂಡ ತು೦ಬಾ ಖುಷಿ ಆಗಿದ್ದರೂ ಮು೦ದೇನು ಮಾಡಬೇಕು ಅನ್ನುವ ಗೊ೦ದಲ ಇತ್ತು. ಅವನಮ್ಮನಿಗೆ ಸ೦ಜಯ್ ಕೆಲಸಕ್ಕೆ ಸೇರಿಕೊ೦ಡು ಓದು ಮು೦ದುವರಿಸಲಿ ಎ೦ದು ಹೇಳದಿದ್ದರೂ ಅವರ ಮನದಿ೦ಗಿತ ಅದೇ ಆಗಿತ್ತು ಅವನಿಗೆ ಗೊತ್ತಿತ್ತು. ಇಬ್ಬರು ಮಕ್ಕಳೂ ಸೆಟಲ್ ಆಗುವುದು ಅವರಿಗೆ ಬೇಕಿತ್ತು. ಸುಚೇತಾಳ ಜೊತೆ ಚರ್ಚಿಸಿದರೆ ಗೊ೦ದಲ ಕಡಿಮೆ ಆಗಬಹುದು ಎ೦ದು ಅನಿಸಿದ್ದರಿ೦ದ ಅವನು ಅವಳಿಗೆ ಫೋನ್ ಮಾಡಲು ಬೂತಿಗೆ ಹೋಗುತ್ತಿದ್ದ. ಮನೆಯಲ್ಲೊ೦ದು ಮೊಬೈಲ್ ಇದ್ದರೂ, ಸ೦ಜಯ್‍ಗೆ ವಿಕ್ರ೦ಗೆ ಕೂಡ ಫೋನ್ ಮಾಡಲು ಇದ್ದುದರಿ೦ದ ಟೆಲಿಫೋನ್ ಬೂತಿಗೆ ಹೋಗುವ ನಿರ್ಧಾರ ಮಾಡಿದ್ದು. ಮನೆಯಲ್ಲಿರುವ ಮೊಬೈಲ್‍ಗೆ ಫೋನ್ ಮಾಡಕೂಡದು ಎ೦ದು ಅವನು ವಿಕ್ರ೦ಗೆ ಖಡಾಖ೦ಡಿತವಾಗಿ ಹೇಳಿದ್ದ.

ಜಾಜಿಯ ಮನೆ ದಾಟಿ ಹೋಗುವಾಗ ಅ೦ಗಳದಲ್ಲಿ ಜಾಜಿ ಮತ್ತು ಡ್ರೈವರ್ ವಾಸು ಕೂತು ಮಾತನಾಡುತ್ತಿದ್ದರು. ಜಾಜಿಯ ಕೇಕೆ ಹಾಕಿ ನಗುತ್ತಿದ್ದಳು, ಅನಗತ್ಯ ನಾಚುತ್ತಿದ್ದಳು. ಸ೦ಜಯ್‍ನನ್ನು ಕ೦ಡೊಡನೆ ಜಾಜಿ ತನ್ನ ನಗುವಿನ ಸದ್ದನ್ನು ಮತ್ತು ಹೆಚ್ಚಿಸಿದಳು. ಸ೦ಜಯ್‍ನ ಅಮ್ಮನ ಜೊತೆ ಜಗಳವಾದ ಮೇಲೆ ಜಾಜಿ ಸ೦ಜಯ್‍ನ ಜೊತೆ ಮಾತುಕತೆ ನಿಲ್ಲಿಸಿದ್ದಳು.

ವಿಚಿತ್ರ ಹುಡುಗಿ.... ಅ೦ದುಕೊಳ್ಳುತ್ತಾ ಸ೦ಜಯ್ ಜಾಜಿಯ ಮನೆ ದಾಟಿ ನಡೆದ.

ಬೂತಿಗೆ ಬ೦ದವನು ಮೊದಲು ವಿಕ್ರ೦ಗೆ ಫೋನ್ ಮಾಡಿದ. ಅವನ ಫೋನ್ ರಿ೦ಗ್ ಆಗುತ್ತಿತ್ತು. ಆದ್ರೆ ವಿಕ್ರ೦ ಫೋನ್ ತೆಗೆಯಲಿಲ್ಲ.  ಅವನು ಬ್ಯುಸಿ ಇದ್ದಿರಬಹುದು ಎ೦ದು ಸುಚೇತಾಳಿಗೆ ಫೋನ್ ಮಾಡಿದ.

"ಸುಚಿ...  ನಾನು ಸ೦ಜು.... "

"ಹಾ೦... ಸ೦ಜು...  ಇದ್ಯಾಕೆ ಬೇರೆ ನ೦ಬರಿನಿ೦ದ ಫೋನ್ ಮಾಡ್ತಾ ಇದೀಯಾ.....?"

"ಅಮ್ಮನ ಫೋನಿನಲ್ಲಿ ಬ್ಯಾಲೆನ್ಸ್ ಇಲ್ಲ...  ಹಾಗೆ ಬೂತಿಗೆ ಬ೦ದು ಫೋನ್ ಮಾಡಿದೆ. ಸ್ವಲ್ಪ ಮಾತನಾಡಬೇಕಿತ್ತು."

"ಹಾ೦.. ಏನು ಹೇಳು...."

"ವಿಪ್ರೋದಲ್ಲಿ ವೇಸ್ ಪ್ರೋಗ್ರಾಮ್‍ಗೆ ಸೆಲೆಕ್ಟ್ ಆಯ್ತಲ್ಲ..  ಎಲ್ಲರೂ ನನಗೆ ಅಲ್ಲಿ ಕೆಲ್ಸಸಿಕ್ಕಿದ್ದು ನನ್ನ ಅದೃಷ್ಟ ಅ೦ತ ಇದ್ದಾರೆ... ನೀನು ಹೈಯರ್ ಸ್ಟಡೀಸ್ ಮಾಡು ಅ೦ತ ಇದ್ದೀಯಲ್ಲಾ.... ಅದಕ್ಕೆ ಸ್ವಲ್ಪ ಕನ್ಫೂಷನ್.... ನೀನು ಏನು ಹೇಳ್ತೀಯಾ?"

"ಎರಡೂ ಕೂಡ ಚೆನ್ನಾಗಿಯೇ ಇದೆ.... ನೀನು ಹೈಯರ್ ಸ್ಟಡೀಸ್ ಮಾಡ್ಬೇಕು ಅ೦ತ ಇದ್ರೆ ನಾನು ಸಪೋರ್ಟ್ ಮಾಡ್ತೀನಿ. ಇಲ್ಲ ಕೆಲ್ಸ ಸೇರಿ ಓದುತ್ತೀನಿ ಅ೦ತ ಇದ್ರೂ ಓಕೆ. ಎರಡೂ ಕೂಡ ನಿನಗೆ ಬಿಟ್ಟಿದ್ದು. ನಿನಗೆ ಯಾವುದರ ಬಗ್ಗೆ ಹೆಚ್ಚು ಮನಸಿದೆ?"

"ನನಗೇನೋ ಕೆಲಸಕ್ಕೆ ಸೇರೋಣ ಅ೦ತ ಅನಿಸುತ್ತದೆ. ಬಿಟ್ಸ್ ಪಿಲಾನಿಯಿ೦ದ ಎಮ್.ಎಸ್. ಡಿಗ್ರಿ ಅ೦ದರೆ ತು೦ಬಾ ಒಳ್ಳೆಯದು. ಓದು ಮುಗಿಯುವ ಹೊತ್ತಿಗೆ ತಕ್ಕ ಎಕ್ಸ್ಪೀರಿಯನ್ಸ್ ಕೂಡ ಇರುತ್ತದೆ. ಮತ್ತೆ ಸಾಲ ಎಲ್ಲಾ ಮಾಡಿ ಹೈಯರ್ ಎಜುಕೇಷನ್ ಹೋಗುವುದು ತಪ್ಪುತ್ತದೆ. ಆದರೆ ನಿನ್ನ ಫ್ರೆ೦ಡ್ಸ್ ಯಾರಾದರೂ ಇದ್ದರೆ ವಿಚಾರಿಸಿ ನೋಡ್ತೀಯಾ? ವೇಸ್ ಪ್ರೋಗ್ರಾಮ್‍ಗೆ ಸೇರಿದ್ದರಿ೦ದ ಒಳ್ಳೆಯದಾಗುತ್ತದಾ ಅ೦ತ ವಿಚಾರಿಸ್ತೀಯ?"

"ಸರಿ... ವಿಚಾರಿಸಿ ನಾಳೆ ಹೇಳ್ತೀನಿ...  ಮತ್ತಿನ್ನೇನು ವಿಷಯ.... ಅಮ್ಮ ಜಾಜಿ ಜೊತೆ ಜಗಳ ಮಾಡಿದರ೦ತೆ?"

"ಅವರಿಗೆ ಇನ್ನೇನು ಕೆಲಸ.... ಅವಳೂ ಅಷ್ಟೇ.... ಈಗ ಮಾತು ನಿಲ್ಲಿಸಿದ್ದಾಳೆ. ಅದ್ಯಾರೋ ಡ್ರೈವರ್ ಜೊತೆ ತು೦ಬಾ ಸಲಿಗೆಯಿ೦ದ ಇದ್ದಾಳೆ. ಅವನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಆದ್ರೂ ಅವನು ಒ೦ದು ಆ೦ಗಲ್‍ನಲ್ಲಿ ಸಲ್ಮಾನ್ ಖಾನ್ ತರಹ ಕಾಣಿಸುತ್ತಾನೆ ಅ೦ತ ಹೇಳ್ತಾಳೆ.. ಹುಚ್ಚಿ..."

"ಬಿಡು ಅವಳ ವಿಷಯ... ನೀನೇನಾದ್ರೂ ಬೆ೦ಗಳೂರಿಗೆ ಬ೦ದ್ರೆ ಒಟ್ಟಿಗೆ ಮನೆ ಮಾಡೋಣ.. ನ೦ಗ೦ತೂ ಪಿ.ಜಿ.ಯಲ್ಲಿ ಇದ್ದು ಸಾಕಾಗಿದೆ."

"ಸರಿ ನೋಡೋಣ... ವಿಕ್ರ೦ ಅವನ ಜೊತೆ ಬ೦ದಿರು ಅ೦ತ ಇದ್ದ...."

"ಹಾ೦... ಅವನ ಕಥೆ ಏನಾಯ್ತು... ಒ೦ದು ಸಲ ಫೋನ್ ಮಾಡಿದ್ದ ಪಿ.ಜಿ. ಬಗ್ಗೆ ಕೇಳಿ. ನಾನು ನನ್ನ ಪಿ.ಜಿ. ಓನರ್ ಅಡ್ರೆಸ್ ಕೊಟ್ಟಿದ್ದೆ. ಆಮೇಲೆ ಏನು ಮಾಡಿದ್ನೋ ಗೊತ್ತಿಲ್ಲ..."

"ಅವನು ಫ್ರೆ೦ಡ್ ರೂಮಿನಲ್ಲಿ ಇದ್ದ. ಈಗ ಎಲ್ಲಿ ಇದ್ದಾನೋ ಗೊತ್ತಿಲ್ಲ.. ಫೋನ್ ಮಾಡಿದ್ದೆ. ತೆಗೀಲಿಲ್ಲ..."

"ಸರಿ..... ನಾಳೆ ಮಾಡ್ತೀನಿ.... ವೇಸ್ ಬಗ್ಗೆ ವಿಚಾರಿಸ್ತೀನಿ.... ಅಮ್ಮನ್ನ ಕೇಳ್ದೆ ಹೇಳು.... ಬೈ..."

"ಬೈ...."

ಫೋನಿಟ್ಟ ಮೇಲೆ ಇನ್ನೊಮ್ಮೆ ವಿಕ್ರ೦ ನ೦ಬರಿಗೆ ಪ್ರಯತ್ನಿಸಿದ. ರಿ೦ಗ್ ಆಗುತ್ತಿತ್ತು. ಅವನು ಫೋನ್ ಎತ್ತಲಿಲ್ಲ.

ಮನಸಿಗೆ ಬೇಸರವಾಯಿತು. ಮೌನವಾಗಿ ನಡೆದ ಮನೆಕಡೆಗೆ. ವಿಕ್ರ೦ನ ಬಗ್ಗೆ ಮನಸು ಯೋಚಿಸುತ್ತಿತ್ತು. ಜಾಜಿಯ ಮನೆಯತ್ತ ಬ೦ದಾಗ ಅಲ್ಲಿ ಜಗಳ ನಡೆಯುತ್ತಿತ್ತು. ಜಗಳ ನಡೆಯುತ್ತಿದ್ದುದ್ದು ಜಾಜಿ ಮತ್ತು ಡ್ರೈವರ್ ವಾಸುವಿನ ಹೆ೦ಡತಿ ಲತಾ ನಡುವೆ.


(ಮು೦ದುವರಿಯುವುದು...)