Wednesday, 25 March 2020
(ಬಹಳ ಸಮಯದ ನಂತರ ಬರೆದ ಒಂದು ಕತೆ)
ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ.
ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ಕಟ್ಟಿನ ಕುಟುಂಬ ಆದುದರಿಂದ ಆ ಶೆಟ್ಟರ ಹೆಣ್ಣುಮಕ್ಕಳು ಮದುವೆಯಾದ ಬಳಿಕ ಗಂಡನ ಊರಿಗೆ ಹೋಗುತ್ತಿರಲಿಲ್ಲ. ಬದಲಿಗೆ ಗಂಡನೇ ಹೆಂಡತಿಯ ಊರಿಗೆ ಬಂದು ಮನೆ ಅಳಿಯ ಆಗಿರುತ್ತಿದ್ದ ಅಥವಾ ತನ್ನ ಊರಿನಲ್ಲೇ ಇದ್ದುಕೊಂಡು ಹೆಂಡತಿಯ ಮನೆಗೆ ಬಂದು ಹೋಗಿ ಮಾಡಿ ಸಂಸಾರ ಮತ್ತು ತನ್ನ ಹಳ್ಳಿಯ ಜಮೀನನ್ನು ನಿಭಾಯಿಸುತ್ತಿದ್ದ. ರತ್ನಕ್ಕ ಮದುವೆಯಾಗಿ ಬಂದ ಮನೆಯವರು ಅಷ್ಟೊಂದು ಜಮೀನು ಉಳ್ಳವರಾಗಿರಲಿಲ್ಲ ಮತ್ತು ಅದರ ಜೊತೆಗೆ ರತ್ನಕ್ಕ ಯಜಮಾನಿಕೆ ಮಾಡುತ್ತೇನೆ ಅಂತ ಕೂತರೆ ಒಪ್ಪಿಕೊಂಡು ಸುಮ್ಮನಿರುವಷ್ಟೂ ಧಾರಾಳಿಯೂ ಆಗಿರಲಿಲ್ಲ ಆಕೆಯ ಗಂಡ ಅಲಿಯಾಸ್ ಮರ್ಲ.
ಹೀಗಿರಲಾಗಿ ರತ್ನಕ್ಕನೂ ಉಲ್ಲಾಳ್ದಿ ಎಂದು ಕರೆಯಲ್ಪಡುವ ಸಂದರ್ಭವೊಂದು ಒದಗಿ ಬ೦ತು. ರತ್ನಕ್ಕನ ಕೈ ದಾನ ಮಾಡುವುದರಲ್ಲಿ ಮುಂದೆ. ಅಲ್ಲಿ ಯಾವುದೇ ದೊಡ್ಡ ಹಬ್ಬದ ದಿನ ಕೊರಗರು ಡೋಲು ಬಾರಿಸಿಕೊಂಡು ಪ್ರತಿಯೊಬ್ಬರ ಮನೆಗೆ ಹೋಗುತ್ತಾರೆ. ಅವರಿಗೆ ಸ್ವಲ್ಪ ಅಕ್ಕಿಯನ್ನೋ ಅಥವಾ ಹಬ್ಬಕ್ಕೆ ಮಾಡಿದ ಅಡ್ಡೆಯನ್ನೋ (ತಿಂಡಿ) ಕೊಡುತ್ತಾರೆ ಹಳ್ಳಿಯ ಜನ. ಅದರ ಜೊತೆಗೆ ಕೊರತಿಯರಿಗಾದರೆ ವೀಳ್ಯಕ್ಕೆ ಅಂತಲೋ ಕೊರಗನಿಗಾದರೆ ಗಡಂಗಿನಲ್ಲಿ ಕೊಟ್ಟೆ ಸಾರಾಯಿ ಕುಡಿಯಲು ಅಂತಲೋ ಒಂದು ಅಥವಾ ಎರಡು ರೂಪಾಯಿ ಕೊಡುವುದೂ ಇದೆ. ಹೀಗೆ ಒಂದು ಅಷ್ಟಮಿಯ ದಿನ ರತ್ನಕ್ಕನ ಗಂಡ ಊರಿನಲ್ಲಿ ಇರಲಿಲ್ಲವಾಗಿ, ಅಂದು ರತ್ನಕ್ಕನದೇ ಯಜಮಾನಿಕೆಯಾಗಿತ್ತು. ಅದೇ ಹುರುಪಿನಲ್ಲಿ ಮನೆಗೆ ಡೋಲು ಬಾರಿಸಿಕೊಂಡು ಬಂದ ಕೊರಗರಿಗೆ ಅಂದು ರತ್ನಕ್ಕ ಹಬ್ಬಕ್ಕೆ ಮಾಡಿದ್ದ ಅಡ್ಡೆಗಳಲ್ಲಿ ಅರಶಿನ ಎಲೆಯ ಗಟ್ಟಿ, ಹಲಸಿನ ಎಲೆಯಲ್ಲಿ ಕೊಟ್ಟೆ ಮಾಡಿ ತಯಾರಿಸಿದ ಗುಂಡ, ಜೊತೆಗೆ ಅಕ್ಕಿ ಅದರ ಮೇಲೆ ಎರಡು ರೂಪಾಯಿಗಳನ್ನು ಇಟ್ಟು ದಾನ ಮಾಡಿದರು. ಅವರ ಆ ಧಾರಾಳತನ ಕಂಡು ಸಂತುಷ್ಟನಾದ ಕೊರಗರ ತಿಮ್ಮ “ಉಲ್ಲಾಳ್ದಿ, ನಿಮ್ಮ ಮನಸು ದೊಡ್ಡದು” ಎಂದು ಮನಸಾರೆ ಹೊಗಳಿದ. ಅಂದು ರತ್ನಕ್ಕನ ಬಹಳ ದಿನದ ಕನಸು ನನಸಾಯಿತು. ಆಮೇಲೆ ಬೈಲು, ಬಾಕೇರು, ಮಜಲು ಎಲ್ಲೇ ರತ್ನಕ್ಕ ಕಂಡರೂ ಕೊರಗರು ಉಲ್ಲಾಳ್ದಿಗೆ ಒಂದು ನಮಸ್ಕಾರ ಹೇಳಿಯೇ ಹೇಳುವರು. ಆನಂತರ ರತ್ನಕ್ಕನ ಮನೆಗೆ ನಟ್ಟಿಗೆ , ಕೊಯಿಲಿಗೆ ಬರುವ ಹೆಂಗಸರು ಉಲ್ಲಾಳ್ದಿ ಎ೦ದು ಕರೆಯಲು ಶುರು ಮಾಡಿ ಆ ಪಟ್ಟ ಖಾಯಂ ಆಯಿತು ರತ್ನಕ್ಕನಿಗೆ.
ಆ ಊರಿಗೆ ವಿನ್ನಿ ಬಂದಿದ್ದು ಪೈಂಟರ್ ಆಗಿ. ಉಲ್ಲಾಳ್ದಿಯ ಮನೆಯನ್ನು ನವೀಕರಿಸಿದಾಗ ಪೇಯಿಂಟ್ ಬಳಿಯಲು ಬಂದಿದ್ದವರಲ್ಲಿ ಅವನೂ ಒಬ್ಬ. ಆತ ಬ೦ದ ಶುರುವಿನಲ್ಲಿ ಯಾರೂ ಅಂತಹ ಕುತೂಹಲ ತೋರಿಸಿರಲಿಲ್ಲ ಅವನ ಬಗ್ಗೆ. ಊರಿಗೆ ಹೊಸಬರು ಕೆಲಸಕ್ಕೆ ಬಂದು ಸ್ವಲ್ಪ ದಿನ ಇದ್ದು ವಾಪಸ್ ಹೋಗುವುದು ಸಾಮಾನ್ಯ ಆಗಿತ್ತು. ವಿನ್ನಿ ಸುದ್ದಿಯಾದದ್ದು ಆತ ವಾಪಾಸ್ ಹೋಗದೆ ಇದ್ದುದರಿ೦ದ ಮತ್ತು ಸುಮತಿಯ ಮನೆಯಲ್ಲಿ ಉಳಿಯಲು ಶುರು ಮಾಡಿದ್ದರಿಂದ. ಸುಮತಿಯ ಅಕ್ಕ ಬೀಡಿ ಕಟ್ಟುವ ಲತಾ ಮತ್ತು ವಿನ್ನಿಗೂ ಲವ್ ಶುರುವಾದ್ದರಿಂದ ಆತ ಊರಿನಲ್ಲಿ ಕೆಲಸ ಮುಗಿದ ಮೇಲೂ ಹಿ೦ದಿರುಗಲಿಲ್ಲ. ತನ್ನ ದಿನದ ಕೆಲಸ ಮುಗಿಸಿ ತೋಟದ ಬಾವಿ ಕಟ್ಟೆಗೆ ಸ್ನಾನಕ್ಕೆ ಹೋಗುವ ಸಮಯಕ್ಕೂ ಮತ್ತು ಲತಾ ಬೀಡಿ ಅಂಗಡಿಯಿಂದ ತೋಟದ ದಾರಿಯಾಗಿ ಮನೆಗೆ ವಾಪಾಸ್ ಬರುವ ಸಮಯಕ್ಕೂ ಮ್ಯಾಚ್ ಆದುದರಿಂದ ಅವರಿಬ್ಬರ ನಡುವೆ ಪ್ರೇಮಾಂಕುರ ಆಗಲು ಹೆಚ್ಚು ಸಮಯ ಬೇಕಿರಲಿಲ್ಲ.
ಕಿರಿಸ್ತಾನರ ಯುವಕನೊಬ್ಬ ಹಿಂದೂ ಮನೆಯಲ್ಲಿ ಉಳಿಯಲು ಶುರು ಮಾಡಿದ್ದು ದೊಡ್ಡ ಸುದ್ದಿಯೇ ಆಯಿತು. ವಿನ್ನಿಯ ಪೂರ್ತಿ ಹೆಸರು ವಿನ್ಸೆಂಟ್ ಡಿ’ಸೋಜಾ. ಆತನ ತಂದೆ ತುಂಬಾ ದುಡ್ಡು ಇರುವವರು. ಕಲಿ (ಕಳ್ಳು) ತಯಾರಿಸುವ ಬಿಸಿನೆಸ್ ಹಿಡಿದು ಕೋಳಿ ಫಾರಂ ನಡೆಸುವುದರ ಜೊತೆಗೆ ಕಳ್ಳ ಬಟ್ಟಿಯ ವ್ಯಾಪಾರ ಕೂಡ ಇದೆಯಂತೆ ಎನ್ನುವುದು ಊರವರ ಊಹೆಗಳು. ಓದು ಹತ್ತದೆ ಪೋಕ್ರಿಯಾಗಿ ಊರು ಸುತ್ತುತ್ತಿದ್ದುದರಿಂದ ವಿನ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರಂತೆ ಎಂಬ ಅ೦ತೆ ಕ೦ತೆಗಳು ಊರಿನ ಗಡಂಗಿನಲ್ಲಿ , ಧೂಮಾವತಿ ದೇವಸ್ಥಾನದ ಜಗಲಿಯ ಪಟ್ಟಾಂಗದಲ್ಲಿ, ಕೋಳಿ ಅಂಕಗಳಲ್ಲಿ ಚರ್ಚೆಗೆ ಒಳಪಟ್ಟವು. ಈ ಚರ್ಚೆಗಳು ತಣ್ಣಗೆ ಆಗುವಷ್ಟರಲ್ಲಿ, ದಿನ ಕಳೆಯುತ್ತಿದ್ದಂತೆ ದೊಡ್ದದಾಗುತ್ತಿದ್ದ ಲತಾಳ ಹೊಟ್ಟೆ ಮತ್ತಷ್ಟು ಚರ್ಚೆಗೆ ರ೦ಗು ನೀಡಿತು. ಆ ಎಲ್ಲಾ ಸುದ್ದಿಗಳೂ ವಿನ್ನಿಯ ತ೦ದೆಯ ಕಿವಿಗೂ ಮುಟ್ಟಿ ಇನ್ನು ಮುಂದೆ ಅವನಿಗೂ ನಮಗೂ ಸಂಬಂಧ ಇಲ್ಲ ಎಂದು ನಿರ್ಧರಿಸಿದ ಸುದ್ದಿಯೂ ಸ್ವಲ್ಪ ಮಟ್ಟಿಗೆ ಪ್ರಾಮುಖ್ಯತೆ ಪಡೆಯಿತು. ಕೊನೆಗೂ ಊರ ಜನರ ಕುತೂಹಲ, ಕೊಂಕುಗಳು ನಿಂತಿದ್ದು ಲತಾ ಮಗುವನ್ನು ಹೆತ್ತ ಮೇಲೆ. ಮದುವೆ ಆಗಿರಲಿ ಬಿಡಲಿ ಒಟ್ಟಾರೆ ಅವಳ ಜೊತೆಗೆ ಸಂಸಾರ ಮಾಡಿಕೊಂಡು ಇದ್ದಾನಲ್ಲ ಅ೦ತ ಒಂದಿಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ವಿವಿಧ ಸಂದರ್ಭಗಳಲ್ಲಿ ಮಂಡಿಸಿದ ಮೇಲೆ ಇತರರೂ ಅದನ್ನು ಕ್ರಮೇಣ ಒಪ್ಪಿಕೊಂಡು ಅಂತೂ ವಿನ್ನಿ ಕೂಡ ಆ ಊರಿನವನೇ ಆಗಿ ಹೋದ. ಲತಾಳ ಮದುವೆಯಾಗದ ಗಂಡ, ಅವಳ ಮಗುವಿನ ತ೦ದೆ ಮತ್ತು ಊರಿನವರಿಗೆ ಕೆಲಸಕ್ಕೆ ಬೇಕಾದ ವ್ಯಕ್ತಿಯಾಗಿ ವಿನ್ನಿ ತನ್ನದೇ ಒಂದು ಸ್ಥಾನ ಗಳಿಸಿದ ಆ ಊರಿನಲ್ಲಿ.
ಇಷ್ಟೆಲ್ಲಾ ನಡೆದು ತಣ್ಣಗಾದರೂ ಆ ಊರಿನ ಕೆಲ ಯುವಕರಿಗೆ ಈ ಘಟನೆಗಳು ಸುಮತಿಯ ಕುಟುಂಬದ ಬಗ್ಗೆ ಸದರ ನೀಡಿದವು. ಸುಮತಿ ಬೀಜದ ಫ್ಯಾಕ್ಟರಿಯಿಂದ ವಾಪಸ್ ಬರಬೇಕಾದರೆ ಆಕೆಯನ್ನು ಫಾಲೋ ಮಾಡುವುದು, ಹಲ್ಲು ಕಿರಿಯುವುದು ಎಲ್ಲಾ ಶುರುವಾಯಿತು. ತಾವು ಒಂದು ಕೈ ನೋಡಿಬಿಡುವ ಅನ್ನುವ ಮನೋಭಾವ ಅವರೆಲ್ಲರದು. ಹಾಗೆ ಒಂದು ಕೈ ನೋಡಿ ಬಿಡುವ ಅಂತ ಅಂದು ಕೊಂಡವರಲ್ಲಿ ಮರ್ಲ ಕೂಡ ಒಬ್ಬ. ಮರ್ಲನಿಗೆ ಮನೆಯಲ್ಲಿ ಏನೂ ಕಡಿಮೆ ಇರಲಿಲ್ಲ. ಉಲ್ಲಾಳ್ದಿ ತುಂಬಾ ಲಕ್ಷಣದ ಬೆಳ್ಳಗಿನ ಹೆಂಗಸು. ಅಪ್ಪಟವಾಗಿ ಜರಿ ಸೀರೆ ಉಟ್ಟುಕೊಂಡು, ಹಣೆಗೆ ಬೊಟ್ಟು, ಕೈಗೆ ಕೆಂಪು ಗಾಜಿನ ಬಳೆಗಳು, ತಲೆಗೆ ಅಬ್ಬಲಿಗೆ ಅಥವಾ ಕೇದಗೆ ಅಥವಾ ಪಿಂಗಾರ ಹೂವನ್ನು ಮುಡಿದುಕೊಂಡು ದೇವಸ್ಥಾನಕ್ಕೋ ಮದುವೆಗೋ ಹೊರಟು ನಿಂತರೆ ಸಾಕ್ಷಾತ್ ದೇವತೆಯೇ ಹೊರಟ ಹಾಗೆ. ಇಷ್ಟಿದ್ದೂ ಮರ್ಲನಿಗೆ ಸ್ವಲ್ಪ ಕಚ್ಚೆ ಹರಕುತನ.
ಅಂದು ಸುಮತಿಗೆ ಸಂಬಳದ ದಿನ. ಸಂಬಳ ಆದ ದಿನ ಸುಮತಿ ಮತ್ತು ಆಕೆಯ ಜೊತೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಒಂದಿಷ್ಟು ಹುಡುಗಿಯರು ಭಟ್ಟರ ಹೋಟೆಲಿನಲ್ಲಿ ಮಸಾಲೆ ದೋಸೆಯೋ, ಉದ್ದಿನ ಅ೦ಬಡೆಯೋ, ಬಟಾಟೆ ಅಂಬಡೆಯೋ ಹೀಗೆ ಏನಾದರೂ ತಿಂದು ಹೋಗುವುದು ವಾಡಿಕೆ. ಅದಾದ ಮೇಲೆ ಸುಮತಿ ಅಲ್ಲೇ ಜನತಾ ಬೇಕರಿಯಲ್ಲಿ ಏನಾದರೂ ಸಿಹಿ ಮತ್ತು ಖಾರದ ಮಿಕ್ಷರ್
ಅನ್ನು ಖರೀದಿಸುತ್ತಾಳೆ. ಅಂದೂ ಇಷ್ಟೆಲ್ಲಾ ಆಗಿ ಮನೆಗೆ ಹೊರಡುವ ಹೊತ್ತಿಗೆ ಒಂದಿಷ್ಟು ಕತ್ತಲಾಗಿತ್ತು. ಬಿರಬಿರನೆ ಹೆಜ್ಜೆ ಹಾಕಿದಳು ಸುಮತಿ ಮನೆಯ ಕಡೆಗೆ. ಮನೆಗೆ ಹೋಗುವ ದಾರಿಯಲ್ಲಿ ಒಂದು ಗುಡ್ಡ ಬರುತ್ತದೆ. ಆ ಗುಡ್ಡದ ದಾರಿಯಾಗಿ ಹೋದರೆ ಮನೆಗೆ ಹತ್ತೇ ನಿಮಿಷ. ರಸ್ತೆಯನ್ನು ಬಳಸಿ ಹೋದರೆ ಅರ್ಧ ಗಂಟೆ. ಸ್ವಲ್ಪ ದಿಗಿಲಾದರೂ ಗುಡ್ಡದ ದಾರಿಯಾಗಿಯೇ ನಡೆದಳು. ಆವಳು ಸ್ವಲ್ಪ ದೂರ ನಡೆದ ಮೇಲೆ ಅಲ್ಲಿ ಮತ್ತೊಬ್ಬರು ನಡೆದು ಹೋಗುವುದು ಮಬ್ಬು ಕತ್ತಲಿನಲ್ಲಿ ಕಾಣಿಸಿತು. ಆ ವ್ಯಕ್ತಿ ಒಂದು ಸಲ ಹಿಂದೆ ತಿರುಗಿ ನೋಡಿ ಅಲ್ಲೇ ನಿಂತಿತು. ಸುಮತಿಯ ಎದೆ ಢವಢವ ಅಂದರೂ ಬಹುಷಃ ಯಾರೋ ಪರಿಚಯದವರು ಇರಬೇಕೆ೦ದು ಧೈರ್ಯ ತ೦ದುಕೊಂಡಳು. ಆ ವ್ಯಕ್ತಿಯನ್ನು ಸಮೀಪಿಸಿ ನೋಡಿದರೆ ಅದು ಮರ್ಲ. ಆತನೆಂದರೆ ಸುಮತಿಗೆ ಮೊದಲಿನಿಂದಲೂ ಅಷ್ಟಕಷ್ಟೇ. ಸದಾ ಹಲ್ಲು ಕಿರಿಯುತ್ತಾ ನಿಲ್ಲುವ ಆತನಿಂದ ಆದಷ್ಟು ದೂರವಿರುತ್ತಿದ್ದಳು. “ಎಂತ ಸುಮತಿ, ಕೆಲಸದಿಂದ ವಾಪಾಸ್ ಬರ್ತಾ ಇದ್ದೀಯಾ?” ಮರ್ಲ ಹಲ್ಲು ಕಿರಿಯುತ್ತಾ ಕೇಳಿದ. “ಹೌದು” ಎಂದು ಚುಟುಕಾಗಿ ಉತ್ತರಿಸಿದ ಸುಮತಿ ಮುಂದೆ ನಡೆಯತೊಡಗಿದಳು. “ನಿಲ್ಲು ಮಾರಾಯ್ತಿ, ಯಾಕೆ ಹಾಗೆ ಓಡ್ತಿ?” ಎ೦ದು ಮರ್ಲ ಹಿಂಬಾಲಿಸಿ ಹೋಗಿ ಅವಳ ಹೆಗಲಿಗೆ ಕೈ ಹಾಕಿ ನಿಲ್ಲಿಸಿದ ಅವಳನ್ನು. “ನಾನೆಂದರೆ ಭಯವಾ ನಿಂಗೆ? ನನಗೆ ನೀನು ಅಂದರೆ ಸ್ವಲ್ಪ ಮೋಕೆ ಅಷ್ಟೇ” ಅ೦ದ ಅವಳನ್ನು ಬಳಸುತ್ತಾ. “ನನ್ನ ಜೊತೆ ಬರ್ತೀಯಾ? ನಿಂಗೆ ಚಿನ್ನ ತೆಗೆಸಿ ಕೊಡ್ತೇನೆ, ಪಿಕ್ಚರಿಗೆ ಕರೆದುಕೊಂಡು ಹೊಗ್ತೇನೆ” ಎ೦ದು ಅನುನಯಿಸುತ್ತಾ ಕೇಳಿದ ಅವಳನ್ನು ಅಪ್ಪಿಕೊಳ್ಳುತ್ತಾ. ಸುಮತಿ ಅವನನ್ನು ಜೋರಾಗಿ ದೂಕಿ “ಮುಂಡೇ ಮಗನೇ, ಚಿನ್ನ ಕೊಡ್ತೀಯಾ? ಪಿಕ್ಚರಿಗೆ ಕರೆದುಕೊಂಡು ಹೋಗ್ತೀಯಾ? ನಿಂಗೆ ಏನು ಮಾಡ್ತೇನೆ ನೋಡು” ಎಂದು ಜೋರಾಗಿ ಬೊಬ್ಬೆ ಹಾಕಿ “ಅಯ್ಯೋ.. ಯಾರಾದರೂ ಬನ್ನಿ, ಇವ ನನ್ನನ್ನು ಹಾಳು ಮಾಡಲಿಕ್ಕೆ ನೋಡ್ತಿದ್ದಾನೆ” ಎಂದು ಕಿರಿಚಿದಳು. ಅ ಗುಡ್ಡದಿಂದ ಮನೆಗಳು ತುಂಬಾ ದೂರ ಇಲ್ಲ. ಅವಳ ಬೊಬ್ಬೆ ಕೇಳಿ ಒಂದಿಷ್ಟು ಮನೆಯವರು ಓಡೋಡಿ ಬಂದರು. ಸುಮತಿ ಹಾಗೆ ಮಾಡ್ತಾಳೆ ಎಂದು ನಿರೀಕ್ಷಿಸಿರದ ಮರ್ಲ ಒಂದು ಕ್ಷಣ ತಬ್ಬಿಬ್ಬಾದರೂ ಸುಧಾರಿಸಿಕೊಂಡು “ಏಯ್ ರಂಡೆ, ನೀನೇ ನನ್ನ ಮೈ ಮೇಲೆ ಬಿದ್ದು ಈಗ ಸುಳ್ಳು ಹೇಳ್ತೀಯಾ ಮಾನ ಇಲ್ಲದವಳೇ” ಎಂದು ಜೋರು ಮಾಡಿದ.
ಆಮೇಲೆ ದೊಡ್ಡ ಪಂಚಾಯಿತಿಯೇ ಆಯಿತು ಗುಡ್ಡದಲ್ಲಿ. ತನ್ನನ್ನು ಬಲಾತ್ಕಾರಿಸಲು ಪ್ರಯತ್ನಿಸಿದ ಎ೦ದು ಸುಮತಿ, ತನ್ನ ಮೇಲೆ ಅವಳೇ ಮೇಲೆ ಬಿದ್ದುಕೊಂಡು ಬಂದಳು ಎಂದು ಮರ್ಲ ತಮ್ಮ ವಾದ ಮಂಡಿಸಿದರು. ಸಾಕ್ಷಿ ಯಾವುದೂ ಇರಲಿಲ್ಲ. “ಇವಳ ಅಕ್ಕ ಮದುವೆಯಾಗದೇ ಅದ್ಯಾವನೋ ಜೊತೆಗೆ ಮಲಗಿ ಬಸುರಿ ಆದಳು. ಇನ್ನು ಇವಳು ಯಾವ ಊರಿನ ಗರತಿ? ನಿಮಗೆಲ್ಲಾ ಎಷ್ಟು ಧೈರ್ಯ ಇರಬೇಕು ನನ್ನ ಮೇಲೆ ದೂರು ನಡೆಸಲು” ಎಂದು ಮರ್ಲ ದಬಾಯಿಸಿದಾಗ ಊರಿನವರಿಗೆ ಅದು ಒಂದು ಸಲ ಸರಿಯಾಗಿಯೇ ಕಂಡಿತು. “ಇನ್ನು ಮುಂದೆ ನನ್ನ ಮನೆಯ ತೊಡಮೆಯ ಬಳಿ ಕಂಡರೆ ಕಾಲು ಮುರಿತೇನೆ ನಿಂದು” ಎ೦ದು ಮರ್ಲ ಸುಮತಿಗೆ ಎಚ್ಚರಿಕೆ ನೀಡಿ ಮನೆಗೆ ನಡೆದ.
ಅಂದ ಹಾಗೇ ಉಲ್ಲಾಳ್ದಿಯ ಪತಿರಾಯನಿಗೆ ಮರ್ಲ ಎ೦ದು ಹೇಗೆ ನಾಮಾಂಕಿತವಾಯಿತು ಎ೦ಬ ವಿಷಯಕ್ಕೆ ಬರುತ್ತೆನೆ. ಆತನ ನಿಜ ಹೆಸರು ಅಪ್ಪಣ್ಣ ಶೆಟ್ಟಿ ಎಂದು. ಅಪ್ಪಣ್ಣ ಸುಮತಿಯನ್ನು ಬಲಾತ್ಕರಿಸುವ ಪ್ರಯತ್ನದಲ್ಲಿ ವಿಫಲನಾಗಿ ಇನ್ನು ಮು೦ದೆ ಮನೆಯ ತೊಡಮೆ ದಾಟಬಾರದು ಎಂದು ಸುಮತಿಗೆ ಎಚ್ಚರಿಕೆ ನೀಡಿದನು ಎಂದು ಹೇಳಿದೆನಷ್ಟೇ. ಆದರೆ ಸುಮತಿಗೆ ಅಪ್ಪಣ್ಣನ ಮನೆಯ ತೊಡಮೆ ದಾಟದೆ ಕೆಲಸಕ್ಕೆ ಹೋಗುವ ವಿನಹ ಬೇರೆ ಗತ್ಯಂತರ ಇರಲಿಲ್ಲ. ಬೇರೆ ದಾರಿಯಿಂದ ಹೋದರೆ ತುಂಬಾ ಸಮಯ ತಗುಲುತ್ತದೆ. ಅಲ್ಲದೇ, ತಪ್ಪು ಮಾಡಿದರ ಜೊತೆಗೆ ರೋಪು ಬೇರೆ ಹಾಕುತ್ತಾನೆ ಎಂದು ಸುಮತಿ ಉರಿಯುತ್ತಿದ್ದಳು. ‘ಅವನ ಕಣ್ಣೆದುರಿಗೆ ಅವನ ಮನೆಯ ತೊಡಮೆ ದಾಟಿ ಹೋಗ್ತೇನೆ. ಏನು ಮಾಡುತ್ತಾನೆ ನೋಡ್ತೇನೆ’ ಎಂದು ಸುಮತಿಯೂ ಕೂಡ ರೊಚ್ಚಿನಲ್ಲಿದ್ದಳು.
ಅ೦ದು ಆದಿತ್ಯವಾರ. ಸುಮತಿಗೆ ಕೆಲಸಕ್ಕೆ ರಜೆ. ಪ್ರತೀ ಆದಿತ್ಯವಾರ ತಿಂಡಿ ಆದ ಬಳಿಕ ೩ ಮೈಲಿ ದೂರದಲ್ಲಿ ನಡೆಯುವ ಸಂತೆಗೆ ಹೋಗಿ ವಾರಕ್ಕೆ ಬೇಕಾದ ತರಕಾರಿ ದಿನಸುಗಳನ್ನು ತರುವುದು ವಾಡಿಕೆ. ಅಂದು ಕೂಡ ಸುಮತಿ ಸಂತೆಗೆ ಹೋಗಲು ತಯಾರಾಗಿ ಅಪ್ಪಣ್ಣನ ಮನೆಯ ತೊಡಮೆಯನ್ನು ದಾಟಿ ರಾಜಾರೋಷವಾಗಿ ಹೋದಳು. ಮನೆಯ ಅಂಗಳದಲ್ಲಿ ಅಡಿಕೆಯ ಸಿಪ್ಪೆ ಸುಲಿಯುವ ಕೆಲಸದಲ್ಲಿದ್ದ ಅಪ್ಪಣ್ಣ ಸುಮತಿ ಹೋದುದನ್ನು ನೋಡಿದರೂ ಸುಮ್ಮನಿದ್ದ. ಆತ ಸುಮ್ಮನಿದ್ದುದನ್ನು ಕಂಡು ಬಹುಷಃ ನನ್ನ ಬಾಯಿಗೆ ಹೆದರಿರಬೇಕು ಎಂದು ಮನದಲ್ಲೇ ನಕ್ಕಳು. ಸುಮತಿ ಹೋದ ಸ್ವಲ್ಪ ಸಮಯದ ಬಳಿಕ ತೊಡಮೆಯ ಸ್ವಲ್ಪ ದೂರದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ಒಂದು ರಾಶಿ ಮಾಡಿ ಅಲ್ಲೇ ಕಾಯುತ್ತಾ ಕೂತ ಅಪ್ಪಣ್ಣ. ಬೆಳ್ಳ೦ಬೆಳಗ್ಗೆ ಕಲ್ಲು ರಾಶಿ ಮಾಡಿ ತೊಡಮೆಯ ಹತ್ತಿರ ಕಾದುಕೂತಿರುವ ಗಂಡನ ವರಸೆ ಉಲ್ಲಾಳ್ದಿಗೂ ಅರ್ಥವಾಗಲಿಲ್ಲ. “ಓಯ್ ಮಾರಾಯ್ರೆ… ಬಿಸಿಲಿನಲ್ಲಿ ಕಲ್ಲುರಾಶಿ ಮಾಡಿ ಎಂತ ಮಾಡ್ತೀರಿ ನೀವು?” ಎ೦ದು ಪ್ರಶ್ನಿಸಿದ ಹೆಂಡತಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ನಿನ್ನ ಕೆಲಸ ನೋಡ್ಕೋ ಅನ್ನುವಂತೆ ದುರುಗುಟ್ಟಿ ನೋಡಿದ ಅಷ್ಟೇ ಅಪ್ಪಣ್ಣ.
ಸಂತೆಯಿಂದ ವಾಪಾಸು ಬಂದ ಸುಮತಿಗೆ ತೊಡಮೆಯಿಂದ ಸ್ವಲ್ಪ ದೂರದಲ್ಲಿ ಕಾದು ಕೂತಿರುವ ಅಪ್ಪಣ್ಣನನ್ನು ಕಂಡು ದಿಗಿಲಾಯಿತು. ಆದರೂ ತೊಡಮೆಯ ಹತ್ತಿರ ಬಂದು ಬಿಟ್ಟಿದ್ದರಿಂದ ಹಿಂತಿರುಗಿದರೆ ಆತನಿಗೆ ಹೆದರಿ ಓಡಿದ ಹಾಗಾಗುತ್ತದೆ, ಅಷ್ಟಕ್ಕೂ ಏನು ಮಾಡುತ್ತಾನೆ ಎಂಬ ಭಂಢ ಧೈರ್ಯದಿಂದ ತೊಡಮೆ ದಾಟಲು ನೋಡಿದಳು. ಅಷ್ಟರಲ್ಲಿ ರಭಸದಿಂದ ಬಂದ ಕಲ್ಲು ಕೈ ಬೆರಳುಗಳನ್ನು ಉಜ್ಜಿಕೊಂಡು ಹೋಯಿತು. ಕಲ್ಲು ಉಜ್ಜಿದ ಜಾಗದಲ್ಲಿ ರಕ್ತ ಒಸರಿತು. ಆ ಅಚಾನಕ್ ಧಾಳಿಗೆ ಭಯಭೀತಳಾಗಿ ಹಿಂದೆ ತಿರುಗಿದ ಸುಮತಿಗೆ ಕೈಯಲ್ಲಿ ಸ್ವಲ್ಪ ದೊಡ್ಡ ಕಲ್ಲು ಹಿಡಿದು ನಿಂತಿರುವ ಅಪ್ಪಣ್ಣ ಕಾಣಿಸಿದ.
“ಅಯ್ಯೊಯ್ಯೋ..... ಮರ್ಲ ಕಲ್ಲಿನಿಂದ ಹೊಡೆಯುತ್ತಿದ್ದಾನೆ ನನ್ನನ್ನು. ಎಲ್ಲರೂ ಬನ್ನಿ, ಕಾಪಾಡಿ” ಎಂದು ಇಡೀ ಹಳ್ಳಿಗೆ ಕೇಳುವಷ್ಟು ಜೋರಾಗಿ ಬೊಬ್ಬೆ ಹಾಕಿದಳು ಸುಮತಿ.
ಅಷ್ಟರಲ್ಲಿ ಅಪ್ಪಣ್ಣ ಇನ್ನೊಂದು ಕಲ್ಲನ್ನು ಬೀಸಿದ. ಸುಮತಿ ಅದರಿಂದ ತಪ್ಪಿಸಿಕೊಂಡಳು. ಇಷ್ಟು ಆಗುವ ಹೊತ್ತಿಗೆ ಸುಮತಿಯ ಮನೆಯವರೂ ಸೇರಿ ಇಡೀ ಹಳ್ಳಿಯೇ ಜಮಾಯಿಸಿತ್ತು.
“ಮುಂಡೇ ಮಗನೇ, ಕಲ್ಲು ಹೊಡಿತೀಯ? ನಿನ್ನ ಕೈ ಕಾಲು ಮುರಿಯುತ್ತೇನೆ ನೋಡು” ಎ೦ದು ವಿನ್ನಿ ಅಪ್ಪಣ್ಣನ ಕಡೆಗೆ ನಡೆದಾಗ ಆತ ಬೀಸಿದ ಕಲ್ಲು ವಿನ್ನಿಯ ಎದೆಗೆ ತಗುಲಿತು. ಅಷ್ಟು ಹೊತ್ತಿಗೆ ಸುಧಾರಿಸಿದ ಸುಮತಿ ತನಗೆ ಕಾಣಿಸಿದ ಒಂದು ಕಲ್ಲು ತೆಗೆದು ಅಪ್ಪಣ್ಣನತ್ತ ಬೀಸಿ ಒಗೆದಳು.
“ಅಯ್ಯೋ! ನನ್ನ ಗಂಡನ ಮೇಲೆ ಕಲ್ಲು ಎಸೆಯುವಷ್ಟು ಧೈರ್ಯ ಬ೦ತ ನಿನಗೆ. ಸನ್ನಿಯಾಗಲಿ ನಿನ್ನ ಕೈಗೆ” ಎಂದು ಉಲ್ಲಾಳ್ದಿ ಓಡೋಡಿ ಬಂದರು.
ಸುಮತಿಯ ಕಲ್ಲಿನಿಂದ ತಪ್ಪಿಸಿಕೊಂಡ ಅಪ್ಪಣ್ಣ ಇನ್ನೊಂದು ಕಲ್ಲು ಬೀಸುವ ಪ್ರಯತ್ನ ಮಾಡಿದಾಗ, ಸುಮತಿ ಉಲ್ಲಾಳ್ದಿಯನ್ನು ಕುರಿತು “ನಿನ್ನ ಹುಚ್ಚು ಗಂಡನನ್ನು ಮನೆಯಲ್ಲಿ ಕಟ್ಟಿ ಹಾಕು. ಬೀದಿಯ ಹೆಣ್ಣುಮಕ್ಕಳ ಹಿಂದೆ ಬಾಲ ಅಲ್ಲಾಡಿಸಿಕೊಂಡು ಹೋಗ್ತಾನಲ್ಲ, ಸ್ವಲ್ಪ ಆದರೂ ಮರ್ಯಾದೆ ಇದೆಯಾ? ಥೂ…” ಎಂದು ಉಗಿದಳು.
“ಓ ನಿನ್ನ ಬಾಯಿಯೇ! ನಾಲಗೆ ಬಿದ್ದು ಹೋಗಲಿ ನಿಂದು” ಎಂದು ಉಲ್ಲಾಳ್ದಿ ಸುಮತಿಯನ್ನು ಶಪಿಸಿದರು. ಅಷ್ಟು ಹೊತ್ತಿಗೆ ಇನ್ನೊಂದು ಕಲ್ಲು ಹೊಡೆಯಲು ತಯಾರಾದ ಗಂಡನನ್ನು ತಡೆದು “ಸ್ವಲ್ಪ ಸುಮ್ಮನೆ ಇರಿ ಮಾರಾಯ್ರೇ. ನಿಮ್ಮದೊಂದು ಕೋಲ. ಮರ್ಯಾದೆ ತೆಗೀಬೇಡಿ ಎಲ್ಲರ ಎದುರು. ಬನ್ನಿ ಮನೆಗೆ ಹೋಗೋಣ” ಎಂದು ಗಂಡನನ್ನು ಕೈ ಹಿಡಿದ ಉಲ್ಲಾಳ್ದಿಯನ್ನು ತಳ್ಳಿ “ನಿನ್ನ ಸೊಂಟ ಮುರಿತೇನೆ ಈಗ ನನಗೆ ಎದುರು ಮಾತಾಡಿದರೆ” ಎಂದು ಅಬ್ಬರಿಸಿದ ಅಪ್ಪಣ್ಣ. ಅಲ್ಲೇ ಹತ್ತಿರದಲ್ಲಿ ಇದ್ದ ದಂಟೆಯನ್ನು ಎತ್ತಿಕೊಂಡಾಗ ಇನ್ನೇನು ಹೊಡೆದೇ ಬಿಡುತ್ತಾನೇನೋ ಎಂದು ಭಾವಿಸಿದ ಮಗ ಸ೦ದೀಪ ಅಪ್ಪಣ್ಣನನ್ನು ತಡೆದ. ಅಪ್ಪಣ್ಣನಿಗೆ ಹೊಡೆಯಲು ಬಂದ ವಿನ್ನಿಗೆ, ಅಡ್ಡ ನಿಂತ ದೊಡ್ಡ ಕಾಯದ ಸ೦ದೀಪನನ್ನು ಕಂಡು ಭಯ ಆಯಿತು. ಹಳ್ಳಿಯ ಜನ ಬಾಕೇರಿನಲ್ಲಿ ಕೂತು ತಮಾಷೆ ನೋಡಿದರೇ ಹೊರತು ಜಗಳ ನಿಲ್ಲಿಸುವ ಗೋಜಿಗೆ ಹೋಗಲಿಲ್ಲ.
“ಬೋಳಿಮಗನೇ… ಒಂದಲ್ಲ ಒಂದು ದಿನ ಗುಡ್ಡೆಯಲ್ಲಿ ಸಿಗು, ನಿನ್ನ ಕಾಲು ಮುರಿಯದಿದ್ದರೆ ನಾನು ನನ್ನ ಅಪ್ಪನಿಗೆ ಹುಟ್ಟಿದವನಲ್ಲ. ಗಂಡು ದಿಕ್ಕಿಲ್ಲದ ಮನೆ ಅಂತ ಸದರ ಮಾಡ್ತೀಯಾ? ಆ ಮನೆಯ ಗಂಡು ದಿಕ್ಕು ನಾನು. ಊರಿಗೆ ದೊಡ್ದವನಾದರೆ ಅದು ನಿನಗಾಯಿತು, ನನಗೆ ನೀನು ಕಂತ್ರಿ ನಾಯಿ ಅಷ್ಟೇ” ಎಂದು ಅವಾಝ್ ಹಾಕಿದ ವಿನ್ನಿ.
ಅಷ್ಟರಲ್ಲಿ ನೆರೆದಿದ್ದವರಲ್ಲಿ ಕೆಲವು ಹಿರಿಯರು ಬಿಗಡಾಯಿಸುತ್ತಿದ್ದ ಜಟಾಪಟಿಯನ್ನು ನಿಲ್ಲಿಸಿದರು. ಅವರು ಮಾಡಿದ ಪಂಚಾಯಿತಿಯಿಂದ ಇನ್ನು ಮುಂದೆ ಅಪ್ಪಣ್ಣ ಸುಮತಿಯ ಸುದ್ದಿಗೆ ಹೋಗುವುದಿಲ್ಲ ಎಂದು ಒಪ್ಪಿದ. ಊರಿನವರನ್ನು ಮತ್ತು ಮಗನನ್ನು ಎದುರು ಹಾಕಿಕೊಳ್ಳುವಷ್ಟು ಧೈರ್ಯ ಇರಲಿಲ್ಲ ಅಪ್ಪಣ್ಣನಿಗೆ.
ಊರ ಹಿರಿಯರ ಪಂಚಾಯಿತಿಯಿಂದ ಜಗಳ ನಿಂತರೂ ಅಪ್ಪಣ್ಣನಿಗೆ ವಿನ್ನಿಯ ಬೆದರಿಕೆ ಮರೆತಿರಲಿಲ್ಲ. ವಿನ್ನಿ ಶ್ರೀಮಂತ ಮನೆಯಿಂದ ಬಂದವನಾದ್ದರಿಂದ ಮತ್ತು ಬೇರೆ ಊರಿನವ ಆಗಿದ್ದುದರಿಂದ ಅವನಿಗೆ ಅಪ್ಪಣ್ಣನನ್ನು ಗೌರವಿಸುವ ಪ್ರಮೇಯ ಇರಲಿಲ್ಲ. ಅಲ್ಲದೆ ಟೈಟ್ ಆದಾಗ ಯಾರನ್ನೂ ಲೆಕ್ಕಿಸದ ವಿನ್ನಿಯನ್ನು ಹಗುರವಾಗಿ ತೆಗೆದುಕೊಳ್ಳುವ೦ತಿರಲಿಲ್ಲ. ಹಾಗಾಗಿ ಅಂದಿನಿಂದ ಎಲ್ಲೇ ಹೊರಟರೂ ಕೈಯಲ್ಲೊಂದು ಕತ್ತಿ ಹಿಡಿದುಕೊಂಡು ಹೊರಡುತ್ತಿದ್ದ ಅಪ್ಪಣ್ಣ. ಸುಮತಿ ಎಲ್ಲೇ ಹೋದರೂ ಎಲ್ಲರೂ ಜಗಳದ ವಿಷಯವನ್ನೇ ಕೇಳುವರು. ಅವರೆಲ್ಲರಿಗೂ ಜಗಳ ನಡೆದ ದಿನವನ್ನು ಕಣ್ಣಮುಂದೆ ನಡೆದಂತೆ ವಿವರಿಸಿ, ಅವನಿಗೆ ಹುಚ್ಚು ಹಿಡಿದಿದೆ ಎಂದು ಕತೆ ಮುಗಿಸುತ್ತಿದ್ದಳು ಸುಮತಿ. ಸದಾ ಕತ್ತಿಯನ್ನೇ ಹಿಡಿದುಕೊಂಡು ಅಲೆದಾಡುತ್ತಿದ್ದ ಅಪ್ಪಣ್ಣನನ್ನು ಕಂಡು ಊರವರಿಗೂ ಆತನಿಗೆ ಹುಚ್ಚು ಹಿಡಿದಿರಬೇಕು ಎ೦ದು ಅನುಮಾನಿಸ ತೊಡಗಿದರು. ಅಪ್ಪಣ್ಣ ಕತ್ತಿ ಹಿಡಿದುಕೊಂಡು ಹೊರಟರೆ ಹಳ್ಳಿಯ ಚಳ್ಳೆಪಿಳ್ಳೆಗಳೆಲ್ಲಾ “ಮರ್ಲ ಬ೦ದ..... ಕಾಯಿ ಕಡುಬು ತಿಂದ” ಎಂದು ಜೋರಾಗಿ ಹಾಡಿಕೊಂಡು ಆಟ ಆಡಿಕೊಳ್ಳುತ್ತಿದ್ದವು. ಇದೆಲ್ಲಾ ಜ೦ಬರ ನೋಡಿ ಸಾಕಾಗಿ ರೋಸಿ ಹೋದ ಉಲ್ಲಾಳ್ದಿ ಬೈಕಾಡಿಯಲ್ಲಿರುವ ಅಪ್ಪಣ್ಣನ ಅಣ್ಣನನ್ನು ಕರೆಸಿ ಸ್ವಲ್ಪ ದಿನದ ಮಟ್ಟಿಗೆ ಊರಿಗೆ ಕರೆದು ಹೋಗುವಂತೆ ಕೇಳಿಕೊಂಡರು. ಅಣ್ಣನ ಮಾತನ್ನು ಮೀರದ ಅಪ್ಪಣ್ಣ ಬೈಕಾಡಿಯಲ್ಲಿ ಸ್ವಲ್ಪ ಸಮಯ ಇರಲು ಒಪ್ಪಿದ. ಆ ನಡೆ ಉಪಕಾರ ಮಾಡುವುದಕ್ಕಿಂತ ಹೆಚ್ಚಾಗಿ ಅಪಕಾರ ಮಾಡಿತು.
“ಅಪ್ಪಣ್ಣನಿಗೆ ಹುಚ್ಚು ಹಿಡಿಯಿತಂತೆ. ಅದಕ್ಕಾಗಿ ದೂರದ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದಾರಂತೆ. ಬೈಕಾಡಿಗೆ ಹೋಗಿದ್ದಾರೆ ಅಂತ ಸುಳ್ಳು ಹೇಳುತ್ತಿದ್ದಾರೆ ಮನೆಯವರು” ಅಂತ ಊರೆಲ್ಲಾ ಸುದ್ದಿಯಾಗಿ ಅಪ್ಪಣ್ಣನಿಗೆ “ಮರ್ಲ” ಪಟ್ಟ ಖಾಯ೦ ಆಯಿತು.
ಆ ನಡುವೆ ಸುಮತಿಯ ಬಗ್ಗೆಯೂ ಒಂದು ಸುದ್ದಿ ಹಬ್ಬಿತು ಊರಿನಲ್ಲಿ. ಅವಳು ಅದ್ಯಾರೋ ಶ್ರೀಮಂತ ಹುಡುಗನ ಜೊತೆ ತಿರುಗಾಡುತ್ತಿದ್ದಾಳಂತೆ. ಅವತ್ತು ಸಂಜೆ ಅಲಂಕಾರು ಥಿಯೇಟರಿನಲ್ಲಿ ಜೊತೆಗೆ ಸಿನಿಮಾ ನೋಡುತ್ತಿದ್ದರಂತೆ, ಇನ್ನೊಂದು ದಿನ ಮಲ್ಪೆ ಬೀಚಿನಲ್ಲಿ ಕೈ ಕೈ ಹಿಡಿದುಕೊಂಡು ತಿರುಗಾಡುತಿದ್ದರ೦ತೆ, ಹುಡುಗನ ಅಕ್ಕ ಉಡುಪಿ ನಗರದಲ್ಲಿ ಲಾಯರ್ ಅ೦ತೆ ಎ೦ದೆಲ್ಲಾ ಸುದ್ದಿ ಹರಡಿತು. ಅದಕ್ಕೆ ಪುಷ್ಠಿ ನೀಡುವಂತೆ ಒಬ್ಬ ಯುವಕ ಸುಮತಿಯ ಮನೆಗೆ ಬಂದು ಹೋಗುವುದು ಶುರು ಮಾಡಿದ. ಸಂಜೆ ಬಂದು ಮರುದಿನ ಬೆಳಗ್ಗೆ ಟಿಪ್-ಟಾಪ್ ಆಗಿ ಹೊರಡುತ್ತಿದ್ದ ಆತ ಹಳ್ಳಿಯವರಿಗೆ ಒಂದು ಸೋಜಿಗ. ಯಾರ ಬಳಿಯೂ ಮಾತನಾಡದೇ ತಾನಾಯ್ತು ತನ್ನ ಕೆಲಸ ಆಯಿತು ಎಂದು ಹೊರಡುತ್ತಿದ್ದ ಆತ ಹಳ್ಳಿಯವರಿಗೆ ಪಟ್ಟಾಂಗದ ಹೊಸ ವಿಷಯವಾಗಿದ್ದ.
ಆ ದಿನ ಗದ್ದೆಯಿಂದ ಹರಿದು ತಂದಿದ್ದ ಬಲಿತ ಹೆಸರುಕಾಳು ಪೈರನ್ನು ಅಂಗಳದಲ್ಲಿ ಒಣಗಲು ಹರಡುತ್ತಿದ್ದ ಉಲ್ಲಾಳ್ದಿ ನಾಯಿ ಬೊಗಳಿದ ಸದ್ದಿಗೆ ತಲೆ ಎತ್ತಿದಾಗ ಅಂಗಳದಲ್ಲಿ ಇಬ್ಬರು ಹೆಂಗಸರು ನಿಂತಿದ್ದರು. ಬಹುಷಃ ಅಮ್ಮ ಮಗಳು ಇರಬೇಕು. ಸೆರಗು ಸರಿಪಡಿಸಿಕೊ೦ಡು “ಯಾರು ಬೇಕಿತ್ತು?” ಎ೦ದು ಕೇಳಿದರು ಉಲ್ಲಾಳ್ದಿ.
ಅವರಲ್ಲಿ ಪ್ರಾಯದ ಹೆಂಗುಸು “ಈ ಸುಮತಿ ಅ೦ಬೋಳ್ ಮನಿ ಎಲ್ ಬತ್ತ್?” ಎ೦ದು ಕೇಳಿದರು ನಿಟ್ಟುಸಿರು ಬಿಡುತ್ತಾ. ಆಕೆಯ ಬಡಕಾಯಿ ಕನ್ನಡ ಕೇಳಿ ಉಲ್ಲಾಳ್ದಿಗೆ ತುಂಬಾ ಖುಷಿ ಆಯಿತು. ಉಲ್ಲಾಳ್ದಿ ಬ್ರಹ್ಮಾವರದಿಂದ ಬಂದವರು. ಮನೆ ಭಾಷೆ ಬಡಕಾಯಿ ಕನ್ನಡ. ಮದುವೆ ಆಗಿ ತುಳು ಮಾತನಾಡುವ ಈ ಹಳ್ಳಿಗೆ ಬಂದ ಮೇಲೆ ಮೊದಮೊದಲು ತನ್ನ ಬಡಕಾಯಿ ಕನ್ನಡದಿಂದ ನಗೆ ಪಾಟಾಲಾಗಿದ್ದುಂಟು. ಅಲ್ಲದೆ ಹಬ್ಬಕ್ಕೆ ಬರುತ್ತಿದ್ದ ನೆ೦ಟರಲ್ಲಿ ಕೆಲವರು ಅಪ್ಪಣ್ಣನ ಕಿವಿ ಕಚ್ಚುತಿದ್ದುದುಂಟು. “ಬಡಕಾಯಿ ಹೆಣ್ಣುಗಳು ತುಂಬಾ ಘಾಟಿ. ಕೋಳಿ ಗಸಿ ಎಷ್ಟು ಚೆನ್ನಾಗಿ ಖಾರವಾಗಿ ಮಾಡ್ತಾರೋ ಮಾತು ಕೂಡ ಹಾಗೇ. ಹೆಣ್ತಿಯ ಮಾತಿಗೆಲ್ಲಾ ಹೂ೦ ಅನ್ನುತ್ತಾ ಇರಬೇಡ. ಸ್ವಲ್ಪ ಕಟ್ಟುನಿಟ್ಟು ಮಾಡು”. ಇವೆಲ್ಲದರಿಂದ ಸ್ವಲ್ಪ ರೋಸಿದ್ದ ಉಲ್ಲಾಳ್ದಿ ಬಲುಬೇಗನೆ ತುಳು ಕಲಿತಿದ್ದರು. ಆಮೇಲಾಮೇಲೆ ಅವರು ಬಡಕಾಯಿ ಹೆಣ್ಣು ಎಂಬುದೇ ಮರೆತು ಹೋಗಿತ್ತು ಆಕೆಗೂ ಊರಿನವರಿಗೂ.
ಯಾರಾದರೂ ಬಡಕಾಯಿ ಕನ್ನಡ ಮಾತನಾಡುವರು ಸಿಕ್ಕರೆ ಅಭಿಮಾನ ಉಕ್ಕಿ ಬರುತ್ತದೆ ಉಲ್ಲಾಳ್ದಿಗೆ.
“ಅಲ್ ತೋರ್ತ್ ಕಾಣಿ, ಅದ್ ಅವಳ್ ಮನಿ” ಬಡಕಾಯಿ ಕನ್ನಡದಲ್ಲಿ ಉತ್ತರಿಸುತ್ತಾ ಅಂಗಳದಲ್ಲೇ ಕೈ ಚಾಚಿ ತೋರಿಸಿದರು ಉಲ್ಲಾಳ್ದಿ.
“ಯಾವ್ದ್… ಆ ಹೆಂಚಿನ್ ಮನಿಯ?”
“ಅಲ್ದೇ…. ಅದ್ ಅರುಣಕ್ಕನ್ ಮನಿ. ಅದ್ರ್ ಹಿಂದ್ ಬೈ ಹುಲ್ ಮಾಡಿನ್ ಗುಡಿಸ್ಲ್ ಇತ್ತಲಾ, ಅದ್ ಸುಮತಿ ಮನಿ”
“ಅಯ್ಯೋ… ಬೈ ಹುಲ್ ಮನೀನಾ!” ಇಷ್ಟು ಹೊತ್ತು ಮೌನವಾಗಿ ನಿಂತಿದ್ದ ಮಗಳು ಮೂಗು ಸಿ೦ಡರಿದಳು.
ಅಷ್ಟು ಹೊತ್ತಿಗೆ ಉಲ್ಲಾಳ್ದಿಯೂ ಬಡಕಾಯಿ ಕನ್ನಡದಲ್ಲಿ ಮಾತನಾಡಿದುದನ್ನು ಗುರುತಿಸಿದ ಪ್ರಾಯದ ಹೆಂಗುಸು “ನಿಮ್ದ್ ಯಾವ್ ಊರ್?” ಎಂದು ವಿಚಾರಿಸಿದರು.
“ನಮ್ದ್ ಬ್ರಹ್ಮಾವರ. ಮೇಲ್ ಮನಿ ಶಂಬು ಶೆಟ್ರ್ ಮಗಳ್ ನಾನ್” ಎಂದು ಹೇಳುವಾಗ ಉಲ್ಲಾಳ್ದಿಯ ದನಿಯಲ್ಲಿ ಗತ್ತು ಇತ್ತು.
“ಹೌದಾ…. ನಮ್ದ್ ಕೊಕ್ಕರ್ಣೆ. ಇವ್ಳ್ ನನ್ ಮಗಳ್. ಉಡುಪಿಲ್ ಲಾಯರ್”. ಕನ್ನಡಕ ಹಾಕಿಕೊಂಡಿದ್ದ ಮಗಳ ಮುಖದಲ್ಲಿ ವಕೀಲೆಯ ಗಾಂಭೀರ್ಯವಿತ್ತು.
“ಸುಮತೀನ ಯಾಕ್ ಹುಡ್ಕೊ೦ಡ್ ಬಂದಿದ್?”
“ಅದೊಂದ್ ಕರ್ಮ. ನನ್ ಮಗ ಇವ್ಳ್ ಜೊತಿ ಸುತ್ತುತ ಅಂತ ಊರ್ ತುಂಬಾ ಸುದ್ದಿ. ತಲಿ ಎತ್ತಿ ತಿರುಗುಕ್ ಆತ್ಲೇ. ಅಲ್ದೇ ಕೆಲವ್ ರಾತ್ರಿ ಮನಿಗೂ ಬತ್ತಿಲ್ಲ.” ಆಕೆಯ ಮುಖದಲ್ಲಿ ನೆರಿಗೆಗಳು ಕಾಣಿಸಿದವು.
“ಓ… ಆ ಗಂಡ್ ನಿಮ್ ಮಗನಾ? ಕಾಂಬತ್ತಿಗೆ ಗೊತ್ತಾಯ್ತ್ ಯಾವ್ದೊ ದೊಡ್ಡ್ ಮನಿ ಗಂಡ್ ಇರ್ಕ್ ಅಂತ. ಬೈಯಪತ್ತಿಗೆ ಬಂದವ ಬೆಳ್ಗಾತ ವಾಪಸ್ ಹೋತ. ಅದ್ ಹೆಂಗ್ ಆ ಮನೀಲಿ ಇರ್ತಾನೋ ಗೊತ್ಲೆ. ಕರೆಂಟ್ ಇಲ್ಲ, ಫ್ಯಾನ್ ಇಲ್ಲ ಆ ಮನಿಯಂಗೆ”
“ಅಯ್ಯೋ… ಕರೆಂಟ್ ಕೂಡ ಇಲ್ಯಾ?” ಮತ್ತೊಮ್ಮೆ ಮೂಗು ಸಿಂಡರಿಸಿದಳು ಮಗಳು. “ಮನಿಯಲ್ ಒಂದ್ ದಿನ ಕೂಡ ಫ್ಯಾನ್ ಇಲ್ದೇ ಮನ್ಕಾತಿಲ್ಲ. ಇಲ್ ಹೆಂಗ್ ಇರ್ತ?.”
“ಓದಿದ್ ಗಂಡ್ ಹಿಂಗ್ ದಾರಿ ತಪ್ರೆ ಹೆಂಗ್ ತಡ್ಕಂಬುದು ನೀವ್ ಹೇಳಿ? ಎ೦ದು ಹುಡುಗನ ಅಮ್ಮ ಪ್ರಶ್ನಿಸಿದಾಗ, “ಇಂತಾ ಮಾನ ಬಿಟ್ಟ್ ಹೆಣ್ಣ್ ಗಳು ಇಪ್ಪತ್ತಿಗೆ ಎಂತಾ ಮಾಡುಕ್ ಆತ್ಲೆ. ನಮ್ ಮನಿಯವ್ರ್ನ್ ಕೂಡ ಅವಳ್ ಬಲೆಗ್ ಬೀಸುಕ್ ಪ್ರಯತ್ನ ಪಡ್ತಾಳ್” ಉಲ್ಲಾಳ್ದಿ ಈ ಮಾತನ್ನು ಹೇಳುವುದಕ್ಕೂ ಮನೆಯ ಅಂಗಳದಲ್ಲಿ ಸುಮತಿ ಬರುವುದಕ್ಕೂ ಸರಿಯಾಯಿತು. ಉಲ್ಲಾಳ್ದಿಯ ಮಾತು ಅವಳ ಕಿವಿಗೂ ಬಿದ್ದಿತ್ತು.
“ಯಾರು ನೀವು? ನನ್ನನ್ನು ಹುಡುಕಿಕೊಂಡು ಬಂದವರು ನೀವೇನಾ?” ಸುಮತಿ ಅವರನ್ನು ಪ್ರಶ್ನಿಸಿದರು.
“ಅಮ್ಮ… ನಾನು ಈ ಮಾನವಿಲ್ಲದವಳ ಜೊತೆ ಮಾತನಾಡುವುದಿಲ್ಲ. ಏನು ಹೇಳಬೇಕೋ ಬೇಗ ಹೇಳಿಬಿಡಿ. ಮೊದಲು ಇಲ್ಲಿಂದ ಹೋಗಿಬಿಡೋಣ” ಮಗಳು ಅಸಹನೆಯಿಂದ ಉಸುರಿದಳು ಮುಖ ಸಿಂಡರಿಸುತ್ತಲೇ.
“ನೋಡು…. ನೀನು ನನ್ನ ಮಗನನ್ನು ಬಲೆಗೆ ಹಾಕಿಕೊಂಡಿದೀಯ ಅಂತ ನಮಗೆಲ್ಲಾ ಗೊತ್ತು. ಅವನು ಮತ್ತು ನೀನು ಇನ್ಯಾವತ್ತು ಬೇಟಿ ಆಗಬಾರದು. ಅವನು ನಿನ್ನನ್ನು ಮದುವೆ ಆಗ್ತಾನೆ ಅಂತ ಕನಸು ಕಾಣಬೇಡ. ಅದು ಯಾವತ್ತೂ ಸಾಧ್ಯ ಇಲ್ಲ.”
“ನಿಮ್ಮ ಮಗನ ಹತ್ತಿರ ಈ ಮಾತು ಹೇಳಿದ್ದೀರಾ?” ಸುಮತಿ ಎದುರುತ್ತರ ಕೊಟ್ಟಳು.
“ಅವನ ಹತ್ತಿರ ಎ೦ತಾ ಮಾತು? ಅದೇನು ಮಾಟ ಮಾಡಿ ಅವನನ್ನು ಒಳಗೆ ಹಾಕಿಕೊ೦ಡಿದ್ದೀಯೋ? ನೋಡು ನಮಗೆ ತು೦ಬಾ ಜನ ಗೊತ್ತು ಉಡುಪಿಯಲ್ಲಿ. ನೀನು ಇದೇ ರೀತಿ ಮುಂದುವರಿದರೆ ಮುಂದೆ ನಿನಗೇ ಕಷ್ಟ.”
“ನಿಮ್ಮ ಗತ್ತು ನಿಮ್ಮ ಊರಿನಲ್ಲಿ ತೋರಿಸಿ. ಒಂದು ಹೆಣ್ಣು ಹುಡುಗಿ ಒಬ್ಬನ್ನನ್ನು ಪ್ರೀತಿಸಿದರೆ ಅವಳು ಮಾನಗೆಟ್ಟವಳು, ಅದೇ ನಿಮ್ಮ ಮಗ ಮಾತ್ರ ಅಪರಂಜಿ. ಮೊದಲು ನಿಮ್ಮ ಮಗನ ಹತ್ತಿರ ಮಾತಾಡಿ. ನನ್ನನ್ನು ಪ್ರೀತಿಸುತ್ತೇನೆ ಎಂದು ಬೆನ್ನ ಹಿಂದೆ ಬಿದ್ದವರು ಅವರೇ. ನಾನೇನು ಅವರನ್ನು ಮಾಟ ಮಾಡಿ ಒಳಗೆ ಹಾಕಿಕೊಳ್ಳಲಿಲ್ಲ. ಅವರು ನನ್ನ ಕೈ ಬಿಡುವುದಿಲ್ಲ ಅನ್ನುವ ನಂಬಿಕೆ ನನಗೆ ಇದೆ. ನಿಮ್ಮ ಮಗಳೇ ಈ ಪರಿಸ್ಥಿತಿಯಲ್ಲಿ ಇದ್ದರೆ ಹೀಗೆ ಮಾಡ್ತಿದ್ದಿರಾ?” ಸುಮತಿಯ ಪ್ರಶ್ನೆಯಿಂದ ಮಗಳಿಗೆ ಉರಿದು ಹೋಯಿತು.
“ಅಮ್ಮ ಮೊದಲು ಇಲ್ಲಿಂದ ಹೊರಡುವ. ಇದೆಲ್ಲಾ ಬೇಡ ಅಂತ ಮೊದಲೇ ಹೇಳಿದರೆ ಕೇಳಲಿಲ್ಲ. ಇಂತಾ ಮಾನಗೆಟ್ಟ ಹುಡುಗಿಯರು ಮಾತನ್ನೂ ಚೆನ್ನಾಗಿ ಆಡ್ತಾರೆ” ಲಾಯರ್ ಹುಡುಗಿ ಅಮ್ಮನ ಕೈ ಹಿಡಿದು ಎಳೆದುಕೊಂಡು ಹೋದಳು.
“ಇನ್ನೊಮ್ಮೆ ನನ್ನ ಬಗ್ಗೆ ಯಾರ ಬಳಿಯಾದರೂ ಕೆಟ್ಟದ್ದನ್ನು ಮಾತನಾಡಿದ್ದು ಕೇಳಿಸಿಕೊಂಡರೆ ಸುಮ್ಮನಿರುವವಳಲ್ಲ ನಾನು, ಜಾಗ್ರತೆ” ಸುಮತಿ ಉಲ್ಲಾಳ್ದಿಗೆ ಅವಾಜ್ ಹಾಕಿ ಮನೆ ಕಡೆ ನಡೆದಳು.
“ಹಡಬೆ…” ಉಲ್ಲಾಳ್ದಿ ತಮ್ಮಲ್ಲೇ ಹೇಳಿಕೊಂಡದ್ದು ಸುಮತಿಗೆ ಕೇಳಿಸಿತು. ಒಂದು ಕ್ಷಣ ನಿಂತವಳು ಹಿಂತಿರುಗಿ “ಥೂ…ನಿನ್ನದು ಒಂದು ಜನ್ಮವಾ? ಒಂದು ಹುಡುಗಿಯನ್ನು ಹಾಳು ಮಾಡಲು ಪ್ರಯತ್ನಿಸಿದ ಗಂಡ, ಅವನು ತಪ್ಪು ಮಾಡಿಲ್ಲ ಎ೦ದು ನಂಬುವ ನೀನು…ನಾಚಿಕೆ ಆಗ್ಬೇಕು!” ಎ೦ದು ಅಂಗಳಕ್ಕೆ ಎಂಜಲನ್ನು ಕ್ಯಾಕರಿಸಿ ಉಗಿದು ದುರದುರನೆ ಮನೆಗೆ ನಡೆದಳು. ಉಲ್ಲಾಳ್ದಿ ಸ್ವಲ್ಪ ಹೊತ್ತು ದಂಗಾಗಿ ನಿಂತರು.
ಮರುದಿನ ಕೆಲಸದಿಂದ ವಾಪಸ್ ಬಂದ ಸುಮತಿಯ ಕತ್ತಿನಲ್ಲಿ ಕರಿಮಣಿ ತಾಳಿ ಇತ್ತು. ಅದೊಂದು ದೊಡ್ಡ ಸುದ್ದಿಯೇ ಆಯಿತು ಹಳ್ಳಿಯಲ್ಲಿ. ಬೇರೆ ಬೇರೆ ವದಂತಿಗಳು ಹಬ್ಬಿದವು. ಹುಡುಗನ ಮನೆಯವರು ಸುಮತಿಗೆ ಬೈದು ಹೋದ ಮೇಲೆ ಅವನ ಮನೆಯಲ್ಲಿ ಬಂದೋಬಸ್ತು ಮಾಡಿದರಂತೆ. ಸುಮತಿಯ ಹಿಂದೆ ಸುತ್ತಿದರೆ ಮೆಯಯಿಂದ ಹೊರಗೆ ಹಾಕುತ್ತೇವೆ ಮತ್ತು ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ ಮೇಲೆ ಹುಡುಗ ಸುಮತಿಯನ್ನು ಬಿಟ್ಟಿದ್ದಾನಂತೆ, ಆದರೆ ಸುಮತಿ ಗರ್ಬಿಣಿ ಆಗಿದ್ದಾಳಂತೆ. ಆದಕ್ಕೆ ಕರಿಮಣಿ ಹಾಕಿಕೊಂಡು ಮದುವೆ ಆಗಿರುವ ನಾಟಕ ಆಡುತ್ತಿದ್ದಾಳ೦ತೆ.
ಒಂಬತ್ತು ತಿಂಗಳುಗಳ ನಂತರ ಹುಟ್ಟಿದ ಮಗುವನ್ನು ಸುಮತಿ ಉಲ್ಲಾಳ್ದಿ ಎಂದೇ ಕರೆಯುತ್ತಿದ್ದಳು. ಅದು ಉಲ್ಲಾಳ್ದಿ ರತ್ನಕ್ಕನನ್ನು ಉರಿಸಲೆಂದು ಹಾಗೆ ಕರೆಯುತ್ತಿದ್ದಳೊ ಅಥವಾ ತನ್ನ ಮಗು ತನಗೆ ಯಜಮಾನತಿ ಎ೦ಬ ಅರ್ಥದಲ್ಲಿ ಕರೆಯುತ್ತಿದ್ದಳೋ ಸುಮತಿಗೇ ಗೊತ್ತು!