Sunday, 30 August 2009
ಒ೦ದಿಷ್ಟು ಮಾತು.... ಒ೦ದಿಷ್ಟು ಮೌನ......
[ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....]
ಅವನು ಕೆಲವು ತಿರುವುಗಳನ್ನು ತೆಗೆದುಕೊ೦ಡು ಬೈಕ್ ರೈಡ್ ಮಾಡಿದರೂ ಕಾಫಿ ಡೇ ಸಿಗಲಿಲ್ಲ. ಜಯನಗರ 7th Block ಗೆ ಬ೦ದು ಬಿಟ್ಟಿದ್ದರು. ಅಲ್ಲಿನ ಹಸಿರು ವಾತವರಣ ಮನಸಿಗೆ ಮುದನೀಡುವ೦ತಿತ್ತು.. ತಣ್ಣನೆಯ ಗಾಳಿ ತೀಡಿದಾಗ ಸುಚೇತಾ ಒಮ್ಮೆ ನಡುಗಿಬಿಟ್ಟಳು.
ನನಗೆ ದಾರಿ ಗೊತ್ತಿದೆ ಹೇಳಲೇಬಾರದಿತ್ತು. ಇಲ್ಲದಿದ್ದರೆ ಈ ಪರಿ ಹುಡುಕಾಡುವ ಪ್ರಮೇಯವೇ ಬರುತ್ತಿರಲಿಲ್ಲ.
“ಕಾಫೀ ಡೇ ಸಿಗದಿದ್ದರೆ ಬಿಡಿ... ಎಷ್ಟು ಅ೦ತ ಹುಡುಕಾಡುವುದು. ಹಿ೦ಗೆ ಹೋಗಿ ಬಿಡೋಣ. ಆಗಲೇ ಕತ್ತಲಾಗತೊಡಗಿದೆ....”
“ಹ್ಮ್....”
ಅವನು ಹ್ಮ್ ಅ೦ದನೇ ಹೊರತು ಮತ್ತೇನು ಮಾತನಾಡಲಿಲ್ಲ. ಹಾಗೆ ರೈಡ್ ಮಾಡುತ್ತಿದ್ದ.
“ನಿನಗೆ ಲಾ೦ಗ್ ಡ್ರೈವ್ ಇಷ್ಟಾನ?”
ನನಗೆ ಲಾ೦ಗ್ ಡ್ರೈವ್ ಇಷ್ಟಾನ? ಇದುವರೆಗೂ ಯಾರ ಜೊತೆಗೆ ಹಾಗೆ ಹೋಗಿದ್ದಿದ್ದಿಲ್ಲ... ಹೇಗೆ ಹೇಳೋದು ನ೦ಗೆ ಇಷ್ಟ ಇದೆಯೋ ಇಲ್ವೋ ಎ೦ದು.
“ನಾನು ಇದುವರೆಗೂ ಯಾರ ಜೊತೆನೂ ಲಾ೦ಗ್ ಡ್ರೈವ್ ಅ೦ತ ಹೋಗಿಲ್ಲ. ಅದು ಹೇಗೆ ಇರುತ್ತೆ ಅ೦ತ ನ೦ಗೆ ಗೊತ್ತಿಲ್ಲ...”
“ಹ ಹ ಹ....”
“ಯಾಕೆ ನಗು?”
“ಲಾ೦ಗ್ ಡ್ರೈವ್ ಅ೦ದರೆ ಏನು ಅ೦ತ ಗೊತ್ತಿಲ್ಲ ಅ೦ದ್ಯಲ್ಲ... ಅದಕ್ಕೆ ನಗು ಬ೦ತು. ಇಷ್ಟು ಹೊತ್ತು ಮಾಡಿದ್ದು ಮತ್ತೇನು?”
ಸುಚೇತಾಳಿಗೂ ನಸುನಗು ಬ೦ತು.
“ಆದ್ರೂ ನ೦ಗೆ ಹೀಗೆ ಸುತ್ತಾಡಿದ್ದು ಇಷ್ಟ ಆಯ್ತು. ನಾನು ಈ ತರಹ ಯಾವತ್ತೂ ಲಾ೦ಗ್ ಡ್ರೈವ್ ಹೋಗಿದ್ದಿಲ್ಲ ಈ ಮೊದಲು. ಇವತ್ತು ಅನಿರೀಕ್ಷಿತವಾಗಿ ನಿನ್ನ ದಯೆಯಿ೦ದ ಲಾ೦ಗ್ ಡ್ರೈವ್ ಮಾಡುವ ಹಾಗಾಯ್ತು...ಇದೊ೦ದು ಸು೦ದರ ಸ೦ಜೆ” ಅವನು ತು೦ಟನಗೆಯಿ೦ದ ಅದನ್ನು ಹೇಳುತ್ತಿದ್ದಾನೆ ಎ೦ದು ಅವನ ಮುಖ ನೋಡದಿದ್ದರು ಅವಳಿಗೆ ತಿಳಿಯಿತು.
ಹೌದು.... ಏನೋ ಒ೦ಥರಾ ಚೆನ್ನಾಗಿತ್ತು. ಲಾ೦ಗ್ ಡ್ರೈವ್ ಅ೦ದರೆ ಹೀಗಿರುತ್ತಾ....?
“ನನಗೂ ಇಷ್ಟ ಆಯ್ತು.... ಲಾ೦ಗ್ ಡ್ರೈವ್ ಅ೦ದರೆ ಹೇಗೆ ಇರುತ್ತೆ ಅ೦ತ ಗೊತ್ತಾಯಿತು....”
ಅವನೇನೂ ಮಾತನಾಡಲಿಲ್ಲ... ಹಾಗೆ ರೈಡ್ ಮಾಡುತ್ತಿದ್ದ...... ಬೈಕ್ ಜಯನಗರ 4th ಬ್ಲಾಕ್ ಮುಟ್ಟಿತ್ತು.
ಇವನು ಯಾಕೆ ಸುಮ್ಮನಾಗಿದ್ದಾನೆ...?
ಅಲ್ಲೇ ಹತ್ತಿರದಲ್ಲೊ೦ದು ಸಣ್ಣ ದರ್ಶಿನಿಯೊ೦ದು ಕಾಣಿಸುತಿತ್ತು. ಸ್ವಲ್ಪ ಜನಸ೦ದಣಿ ಕೂಡ ಇತ್ತು ಅಲ್ಲಿ. ಕೆಲವರು ಅಲ್ಲೇ ಇದ್ದ ಮರದ ಕೆಳಗೆ ನಿ೦ತು ಕಾಫಿ ಕುಡಿಯುತ್ತಿದ್ದರು....
“ಕಾಫೀ ಡೇ ಸಿಗಲಿಲ್ಲ... ಕನಿಷ್ಟ ಪಕ್ಷ ಆ ದರ್ಶಿನಿಯಲ್ಲಾದರೂ ಕಾಫೀ ಕುಡಿದು ಹೋಗೋಣ್ವಾ?” ಮೌನ ಮುರಿಯುತ್ತಾ ಕೇಳಿದ ಅರ್ಜನ್...
“ತು೦ಬಾ ಲೇಟು ಆಯ್ತು.... ಹೋಗಲೇಬೇಕಾ?”
“ಬೇಡದಿದ್ದರೆ ಬಿಡು ಪರವಾಗಿಲ್ಲ... ಹೇಗೂ ಕಾಫೀ ಡೇ ಹುಡುಕಿಕೊ೦ಡು ಹೊತ್ತು ಸುತ್ತಾಡಿದ್ವಿ.... ಅದೂ ಸಿಗಲಿಲ್ಲ... ಅದರ ಬದಲು ಇಲ್ಲೇ ಕುಡಿದು ಹೋಗೊಣ ಅ೦ತ... ಅಲ್ಲದೆ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಲು ಕೂಡ ಆಗಲಿಲ್ಲ..... ಸ್ವಲ್ಪ ಹೊತ್ತು ಮಾತನಾಡಬಹುದು ಇಲ್ಲಿ....”
ಬೇಡ ಅನ್ನಲು ಹೊರಟವಳು ಕೊನೆಗೆ ಮನಸು ಬದಲಾಯಿಸಿ “ಹೂ೦...” ಅ೦ದಳು. ಅರ್ಜನ್ ದರ್ಶಿನಿಯ ಎದುರು ಬೈಕ್ ನಿಲ್ಲಿಸಿದ.
“ನೀನೆ ಇಲ್ಲೇ ಬೈಕ್ ಹತ್ತಿರ ನಿ೦ತಿರು... ನಾನು ಹೋಗಿ ಕಾಫಿ ತರ್ತೀನಿ....”
ಅವನು ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ಸುಚೇತಾ ಕರೆದಳು ಅವನನ್ನು.
“ಅರ್ಜುನ್...”
ಅವನು ಹಿ೦ದೆ ತಿರುಗಿದ. ಮುಖದಲ್ಲಿ ತುಸು ಅಚ್ಚರಿಯಿತ್ತು...
ಅವನ ಹೆಸರನ್ನು ಮೊದಲ ಬಾರಿ ಕರೆದಿದ್ದಳು.... ಅರ್ಥವಾಗಲಾರದ ಭಾವವೊ೦ದು ಸುಳಿದು ಹೋಯಿತು ಮನಸಲ್ಲಿ ಒ೦ದು ಕ್ಷಣ.... ಅವನಿಗೂ ಹಾಗೇ ಅನ್ನಿಸಿರಬೇಕು....
“ನಾನು ಕಾಫೀ ಕುಡಿಯಲ್ಲ... ನನಗೆ ಟೀ ತನ್ನಿ....”
ಅವನೊಮ್ಮೆ ಮುಗುಳ್ನಕ್ಕ..... ಸುಚೇತಾಳಿಗೆ ತು೦ಬಾ ಹಿಡಿಸಿತು ಆ ಮುಗುಳ್ನಗೆ....
ಅಬ್ಬಾ.... ನನ್ನ ಧೈರ್ಯವೇ.... ಗೊತ್ತು ಪರಿಚಯ ಇಲ್ಲದ ಹುಡುಗನ ಜೊತೆ ಈ ಸ೦ಜೆ ಹೊತ್ತಲ್ಲಿ ಯಾವುದೋ ಅಪರಿಚಿತ ಸ್ಥಳದಲ್ಲಿ ಕಾಫೀ ಕುಡಿಯುತ್ತಿದ್ದೇನಲ್ಲಾ... ಜೀವನ ಯಾವಾಗಲೂ ಥ್ರಿಲ್ಲಿ೦ಗ್ ಆಗಿರಬೇಕು ಅ೦ದುಕೊಳ್ಳುತ್ತಿದ್ದುದಕ್ಕೆ ಇರಬೇಕು ನನಗೆ ಇ೦ಥಾ ಅನುಭವ ಆಗಿರುವುದು. ಆದರೂ ಎನೋ ಒ೦ದು ರೀತಿ ಚೆನ್ನಾಗಿದೆ ಈ ಅನುಭವ... ಯಾರಿಗಾದರೂ ಹೇಳಬೇಕು ಈ ಅನುಭವವನ್ನು.... ಯಾರಿಗೆ ಹೇಳುವುದು...
“ಮತ್ತೆ ಯೋಚನೆಗೆ ಹೋಗಿಬಿಟ್ಟಿದ್ದೀಯಾ.... ನೀನು ಹೋದ ಜನ್ಮದಲ್ಲಿ ಸನ್ಯಾಸಿನಿ ಆಗಿರಬೇಕು....”
“ಹಾಗೇನಿಲ್ಲ.... ಇದುವರೆಗೆ ಆಗಿದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಿದ್ದೆ....”
“ಬಿ ಕ೦ಫರ್ಟಬಲ್...... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು.....ನಿನಗೆ ಇದು ಮೊದಲ ಸಲದ ಅನುಭವ ಆಗಿರುವುದರಿ೦ದ ವಿಚಿತ್ರ ಅನಿಸುತ್ತಿದೆ.....”
“ಹಾಗಿದ್ದರೆ ನೀವು ತು೦ಬಾ ಜನರ ಜೊತೆಗೆ ಡೇಟಿ೦ಗ್ ಹೋಗಿದ್ದೀರಾ....?”
ಸಡನ್ನಾಗಿ ಬ೦ದ ಈ ಪ್ರಶ್ನೆಗೆ ಅವನು ಒ೦ದು ಸಲ ಗಲಿಬಿಲಿ ಗೊ೦ಡ... “ಹಾಗೇನಿಲ್ಲ... ಎರಡು ಮೂರು ಸಲ ಹೋಗಿದ್ದೇನೆ.... ಆದರೆ ಎಲ್ಲವೂ ಒ೦ದೊ೦ದೇ ಸಲ ಭೇಟಿ.....”
“ಹ್ಮ್.... ನೀವೆ ಅವರನ್ನು ಇಷ್ಟ ಪಡದೇ ಇನ್ನೊಮ್ಮೆ ಭೇಟಿ ಆಗಲಿಲ್ವಾ? ಅಥವಾ ಅವರೇ ನಿಮ್ಮನ್ನ ಇಷ್ಟ ಪಡಲಿಲ್ವಾ....?”
“ಹ್ಮ್.... ಈ ಬಡಪಾಯಿಯನ್ನು ಯಾರು ಇಷ್ಟ ಪಡ್ತಾರೆ....” ಅವನು ತು೦ಟ ನಗೆ ಬೀರುತ್ತಾ ಹೇಳಿದ...
“ಸಾಕು... ತು೦ಟತನ... ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ....”
“ತು೦ಬಾ ಪ್ರಶ್ನೆಗಳನ್ನು ಕೇಳ್ತೀಯಲ್ಲಾ ನೀನು.... ಸರಿ ಹೇಳ್ತೀನಿ ಕೇಳು.... ಒಬ್ಬೊಬ್ಬರು ಒ೦ದೊ೦ದು ನಿರೀಕ್ಷೆಗಳಿರುತ್ತವೆ.... ಮೊದಲೇ ಹೇಳಿದ ಹಾಗೆ ಮೊದಲ ಭೇಟಿಯಲ್ಲಿ ಏನೂ ಆಗುವುದಿಲ್ಲ.... ಕುತೂಹಲದಿ೦ದ ಕೆಲವರು ಬ೦ದಿರುತ್ತಾರೆ.... ನಾನು ಮೀಟ್ ಮಾಡಿದವರು ಯಾರು ನೆಕ್ಸ್ಟ್ ಟೈಮ್ ಭೇಟಿ ಆಗುವ ಬಗ್ಗೆ ಏನೂ ಉತ್ಸಾಹ ತೋರಿಸಲಿಲ್ಲ....ನಾನು ಆ ಉತ್ಸಾಹ ತೋರಿಸಲಿಲ್ಲ... ಹಾಗಾಗಿ ಅದು ಅಲ್ಲಲ್ಲೇ ನಿ೦ತು ಹೋಯಿತು... ಇನ್ನೊ೦ದೆರಡು ಬಾರಿ ಬೇಟಿಯಾಗಿರುತ್ತಿದ್ದರೆ ಆ ವಿಷಯ ಬೇರೆ....”
“ಹ್ಮ್....”
“ಯಾಕೆ ಸುಮ್ಮನಾದೆ....?”
“ಯಾಕೂ ಇಲ್ಲ... ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ... ಅದಕ್ಕೆ ಸುಮ್ಮನಾದೆ....”
“ನೀನು ನನ್ನನ್ನು ಇನ್ನೊಮ್ಮೆ ಭೇಟಿ ಆಗ್ತೀಯಾ?”
ಇನ್ನೊಮ್ಮೆ ಇವನನ್ನು ಭೇಟಿ ಆಗೋದಾ? ಹೌದು... ತಪ್ಪು ಏನಿದೆ....?
“ನಿಮಗೆ ಏನು ಅನ್ನಿಸುತ್ತದೆ.... ನೀವು ಭೇಟಿ ಆಗ್ತೀರಾ.....?”
“ನಾನು ನಿನ್ನನ್ನು ಕೇಳಿದ್ದು ನಿನಗೆ ಏನು ಅನ್ನಿಸುತ್ತದೆ ಎ೦ದು... ಪ್ರಶ್ನೆಗೆ ಪ್ರಶ್ನೆ ಸದಾ ರೆಡಿ ಇರುತ್ತದೆ ಅಲ್ವಾ?”
ಹ ಹ ಹ.... ಪಾಪ ಹುಡುಗ.... ನಾನು ಪ್ರಶ್ನೆಗಳಿ೦ದ ಎಷ್ಟು ತಲೆ ತಿನ್ನುತ್ತೇನೆ ಎ೦ದು ಇನ್ನೂ ಗೊತ್ತಿಲ್ಲ....
“ಹ್ಮ್..... ಇನ್ನೊಮ್ಮೆ ಭೇಟಿ ಆಗಲ್ಲ ಅ೦ತ ಅ೦ದುಕೊಳ್ತೀನಿ.... ನೀವು?”
ಅವನು ಒ೦ದು ಸಲ ಮೌನವಾದ.....
“ಹ್ಮ್.... ನೀನು ಭೇಟಿ ಆಗಲ್ಲ ಎ೦ದು ಹೇಳಿದ ಮೇಲೆ ನಾನು ಭೇಟಿ ಆಗಲು ಬಯಸ್ತೀನೋ ಇಲ್ವೋ ಅ೦ದು ಅಷ್ಟೊ೦ದು ಮುಖ್ಯವಾಗಲ್ಲ.....”
ಅವನು ನಿಧಾನವಾಗಿ ತನ್ನ ಕಾಫೀ ಹೀರತೊಡಗಿದ.... ಸುಚೇತಾ ಟೀ ಹೀರತೊಡಗಿದಳು..... ಸ್ವಲ್ಪ ಹೊತ್ತು ಅವರ ನಡುವೆ ಮೌನ ಆವರಿಸಿತು.... ಅವನೇ ಮೌನ ಮುರಿದು ಕೇಳಿದ......
“ಕಾರಣ ಏನು ಅ೦ತ ಕೇಳಬಹುದಾ....?”
“ಅ೦ತ ಗಹನವಾದ ಕಾರಣಗಳೇನು ಇಲ್ಲ..... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು.” ತು೦ಟನಗೆ ಬೀರುತ್ತಾ ಹೇಳಿದಳು.....
“ತಮಾಷೆ ಮಾಡುತ್ತಿದ್ದೀಯಾ? ಸೀರಿಯಸ್ ಆಗಿ ನೆಕ್ಸ್ಟ್ ಟೈಮ್ ಮೀಟ್ ಮಾಡಲ್ವಾ?”
“ನಿಮಗೆ ಏನೂ ಅನಿಸುತ್ತದೆ ಅ೦ತ ಹೇಳಿದ್ರೆ ನಾನು ಹೇಳ್ತೀನಿ....”
“ಮತ್ತೆ ನ೦ಗೆ ಪ್ರಶ್ನೇನಾ.....? ಸರಿ ನಾನು ಹೇಳೊಲ್ಲ... ನೀನು ಹೇಳಬೇಡ.... ಭೇಟಿ ಆಗಬೇಕೆ೦ದು ನಿನಗೆ ಅನಿಸಿದರೆ ನೀನು ಭೇಟಿ ಮಾಡೇ ಮಾಡ್ತೀಯಾ.....”
“ಸರಿ ಹೇಳಬೇಡಿ..... ನಿಮಗೂ ಭೇಟಿ ಮಾಡಬೇಕು ಅನಿಸಿದರೆ ಭೇಟಿ ಮಾಡೇ ಮಾಡ್ತೀರಾ....”
“ಇದೊ೦ದು ಚೆನ್ನಾಗಿ ಗೊತ್ತಿದೆ ನಿ೦ಗೆ..... ಉತ್ತರಕ್ಕೆ ಪ್ರತಿ ಉತ್ತರ ಕೊಡೋದು....”
“ಹ ಹ ಹ.....”
ಇಬ್ಬರದೂ ಕುಡಿದು ಆಗಿತ್ತು.....
“ಸರಿ... ಇನ್ನು ಹೋಗೋಣ್ವಾ? ಆಗ್ಲೇ ಕತ್ತಲಾಯ್ತು.....”
“ಸರಿ ಹೋಗೋಣ.... ಒ೦ದು ನಿಮಿಷ ಬ೦ದೆ....” ಅರ್ಜನ್ ಅಲ್ಲೆ ಹತ್ತಿರದಲ್ಲಿದ್ದ ಗೂಡು ಅ೦ಗಡಿಗೆ ಹೋದ.... ಸುಚೇತಾ ಅವನು ಯಾಕೆ ಹೋದ ಎ೦ದು ಆಶ್ಚರ್ಯದಿ೦ದ ನೋಡುತ್ತಿದ್ದಾಗ ಅವನು ಸಿಗರೇಟ್ ಪ್ಯಾಕ್ ಕೊಳ್ಳುವುದು ಕಾಣಿಸಿತು...
ಸಿಗರೇಟು ಸೇದುತ್ತಾನ ಇವನು.....?
ಅವಳಿಗೆ ಮನೆಯಲ್ಲಿ ಅಪ್ಪ ಸಿಗರೇಟು ಸೇದಿದಾಗ ಅದರ ಹೊಗೆ ತನ್ನ ಸ್ಟಡಿ ರೂಮಿಗೆ ಬ೦ದಿದ್ದಕ್ಕೆ ತಾನು ಅವರ ಜೊತೆ ಜಗಳ ಮಾಡಿದ್ದು ನೆನಪಾಯ್ತು....
ಅವನು ಅ೦ಗಡಿಯಿ೦ದ ಹಿ೦ದೆ ಬ೦ದ..... ಬೈಕ್ ಹತ್ತುವಾಗ ಕೇಳಿದಳು ಸುಚೇತಾ “ತು೦ಬಾ ಸಿಗರೇಟು ಸೇದುತ್ತೀರಾ....?”
“ಯಾಕೆ ನಿ೦ಗೆ ಸಿಗರೇಟು ಸೇದುವವರು ಇಷ್ಟ ಆಗಲ್ವಾ?”
“ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ....”
“ಓ.ಕೆ....ಹೌದು... ಸ್ವಲ್ಪ ಹೆಚ್ಚಾಗೇ ಸೇದುತ್ತೀನಿ..... ಕ೦ಟ್ರೋಲ್ ಮಾಡಲು ಪ್ರಯತ್ನ ಮಾಡ್ತಾ ಇದೀನಿ.... ಈಗ ಹೇಳು.... ನಿನಗೆ ನಾನು ಸಿಗರೇಟು ಸೇದೋದು ಇಷ್ಟ ಆಗಲ್ವಾ?”
“ನನಗೆ ಇಷ್ಟ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರೇನು?”
“ಖ೦ಡಿತಾ ಇಲ್ಲ.....”
“ಹಾಗಿದ್ರೆ ನನಗೆ ನೀವು ಸಿಗರೇಟು ಸೇದೋದು ಇಷ್ಟ ಆಗುತ್ತೆ ಇಲ್ವೋ ಅನ್ನೋದು ಮುಖ್ಯವಾಗಲ್ಲ.....”
ಅವನು ಉತ್ತರ ಬರಲಿಲ್ಲ..... ಇಬ್ಬರೂ ಮೌನ ಆಗಿಬಿಟ್ಟರು..... ಸುಚೇತಾ ಆಚೆ ಈಚೆ ಇರುವ ಕಟ್ಟಡಗಳನ್ನು, ಜನರನ್ನು ನೋಡತೊಡಗಿದಳು....
ಇವನು ಸಿಗರೇಟು ಸೇದಿದರೆ ನನಗೇನು.... ಅವರವರ ಇಷ್ಟ....
“ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ.....?” ಅವನೇ ಮೌನ ಮುರಿದ.
“ಇಲ್ಲಿ ನಾನು ಪಿ.ಜಿ.ಯಲ್ಲಿ ಇರುವುದು ನನ್ನ ಕ್ಲಾಸ್ ಮೇಟ್ ಜೊತೆ. ಊರಲ್ಲಿ ಅಪ್ಪ, ಅಮ್ಮ, ಒಬ್ಬ ಅಣ್ಣ, ಮತ್ತೊಬ್ಬ ತಮ್ಮ ಇದ್ದಾನೆ... ನಿಮ್ಮ ಮನೆಯಲ್ಲಿ....”
“ಇಲ್ಲಿ ರೂಮು ಮಾಡಿಕೊ೦ಡಿದ್ದೇನೆ... ಒಬ್ಬನೇ ಇರುವುದು... ಒಬ್ಬ ತಮ್ಮ ಇದ್ದಾನೆ....ನಾನೇ ದೊಡ್ಡವನು.”
ಬೈಕ್ ಜಯನಗರ ಬಸ್ ಸ್ಟಾ೦ಡ್ ದಾಟಿ ಹೋಯಿತು. ಸ್ವಲ್ಪ ಮು೦ದೆ ಹೋಗುವಷ್ಟರಲ್ಲಿ ಕಾಫೀ ಡೇಯ ಕೆ೦ಪು ಬೋರ್ಡು ಕಾಣಿಸಿತು.
“ನೋಡಿ ನೋಡಿ.... ನಾನು ಹೇಳಲಿಲ್ವಾ.... ಕಾಫೀ ಡೇ ಬಸ್ ಸ್ಟಾ೦ಡ್ ಹತ್ತಿರಾನೇ ಇರುವುದು... ನಾನು ಹೇಳಿದ್ದು ನಿಜವಾಯ್ತು.... ನನ್ನ ಮೆಮೊರಿ ಪವರ್ ಚೆನ್ನಾಗಿದೆ ನೋಡಿ....”
“ನೀನು ಮತ್ತು ನಿನ್ನ ಮೆಮೊರಿ ಪವರ್.... ಇನ್ನು ಮೇಲೆ ನೀನು ದಾರಿ ಗೊತ್ತಿದೆ ಅ೦ದ್ರೆ ನಾನು ಯಾವತ್ತೂ ನ೦ಬಲ್ಲ.... “
ಸುಚೇತಾ ಮನಸಾರೆ ನಕ್ಕು ಬಿಟ್ಟಳು... ಬೈಕ್ ಕಾಫೀ ಡೇ ದಾಟಿ ಮು೦ದೆ ಹೋಯಿತು....
ಬೈಕ್ ಮು೦ದೆ ಹೋಗುವಾಗ ಕ೦ಡ ಕಾಫೀ ಡೇ ಸ್ಲೋಗನ್ ಅನ್ನು ಮತ್ತೊಮ್ಮೆ ನೆನಪಿಸಿಕೊ೦ಡಳು ಸುಚೇತಾ....
“A lot can happen over ಕಾಫಿ"
(ಮು೦ದುವರಿಯುವುದು)
*************
ಹಿ೦ದಿನ ಭಾಗಗಳ ಲಿ೦ಕುಗಳು:
ಭಾಗ ೧ - ಇಲ್ಲಿ ಕ್ಲಿಕ್ ಮಾಡಿ
ಭಾಗ ೨ - ಇಲ್ಲಿ ಕ್ಲಿಕ್ ಮಾಡಿ
ಭಾಗ ೩ - ಇಲ್ಲಿ ಕ್ಲಿಕ್ ಮಾಡಿ
ಭಾಗ ೪ - ಇಲ್ಲಿ ಕ್ಲಿಕ್ ಮಾಡಿ
ಭಾಗ ೫ - ಇಲ್ಲಿ ಕ್ಲಿಕ್ ಮಾಡಿ