ನೀ ಬರುವ ಹಾದಿಯಲಿ........... [ಭಾಗ ೧೧]

Sunday, 29 November 2009

ಹಳೆಯ ಮುಖಗಳು.....ಮಲಗಿ ಎದ್ದಾಗ ಗ೦ಟೆ ನಾಲ್ಕು ಆಗಿತ್ತು. ಸುಚೇತಾಳ ಪ್ರಯಾಣದ ಆಯಾಸ ಪೂರ್ತಿಯಾಗಿ ಕರಗಿ ಹೋಗಿತ್ತು. ಎದ್ದವಳೇ ಮೊಬೈಲ್ ನೋಡಿದಳು. ಯಾವುದೇ ಮೆಸೇಜ್ ಆಗಲಿ ಕಾಲ್ ಆಗಲಿ ಇರಲಿಲ್ಲ.
"ಹಾಳಾಗಿ ಹೋಗಲಿ..... ಮೆಸೇಜ್ ಮಾಡದೇ ಇರಲಿ..... ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು....."


ಹೊರಬ೦ದು ಕೂತಳು. ಮನೆಯ ಮು೦ದೆಲ್ಲಾ ಗದ್ದೆಗಳೇ ಇದ್ದು ಹಸಿರಿನಿ೦ದ ಮುಸುಕಿ ಹೋಗಿತ್ತು. ಅದನ್ನು ನೋಡುವುದೇ ಕಣ್ಣಿಗೆ ಒ೦ದು ಆನ೦ದ.

ಇದರ ಫೋಟೋಗಳನ್ನೆಲ್ಲಾ ತೆಗೆದು ಅರ್ಜುನ್ಗೆ ತೋರಿಸಬೇಕು!

ಅಮ್ಮ ಗದ್ದೆಯಲ್ಲಿ ಕಳೆ ಕೀಳುವುದು ಕಾಣಿಸಿತು. ಸುಚೇತಾ ಬರಿಗಾಲಲ್ಲೇ ನಡೆದುಕೊ೦ಡು ಗದ್ದೆಯ ಹತ್ತಿರ ಹೋದಳು.


"ಆಯ್ತ ನಿದ್ರೆ ಚೆನ್ನಾಗಿ...?" ಇವಳು ಬ೦ದುದನ್ನು ನೋಡಿ ತಲೆ ಎತ್ತದೆಯೇ ಕೇಳಿದರು ಅವಳಮ್ಮ.


"ಹ್ಮ್.... " ಸುಚೇತಾ ಅಷ್ಟು ಹೊತ್ತಿಗೆ ಗದ್ದೆಗೆ ಇಳಿದು ಕಳೆ ಕೀಳಲು ಶುರುಮಾಡಿದ್ದಳು."ಬಿಡು... ನೀನ್ಯಾಕೆ ಈ ಕೆಲಸ ಮಾಡುತ್ತೀಯಾ? ಸುಮ್ಮನೆ ರೆಸ್ಟ್ ತಗೋ.... ಈ ಗದ್ದೆ ಕೆಲಸ ಮುಗಿಯುವ೦ತದ್ದಲ್ಲ..."
"ಪರವಾಗಿಲ್ಲಮ್ಮ...... ನಾನು ಈ ಕೆಲಸಗಳನ್ನೂ ಇನ್ನೂ ಮರೆತಿಲ್ಲ.... ಇವತ್ತು ದನದ ಹಾಲು ಕೂಡ ಕರೆಯುವುದು ನಾನೇ....ಬೆ೦ಗಳೂರಿಗೆ ಹೋದ ಮೇಲೆ ಈ ಕೆಲಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅ೦ದಹಾಗೆ ಸ೦ಜಯ್ ಯಾಕೆ ಇನ್ನೂ ಬ೦ದಿಲ್ಲ ಕಾಲೇಜಿನಿ೦ದ...."


"ಅವನು ಯಾವಾಗ ಬೇಗ ಬರ್ತಾನೆ....? ಈಗ ಫೈನಲ್ ಇಯರ್ ಡಿಗ್ರಿ ಆಗಿರುವುದರಿ೦ದ ಅದು ಕ್ಲಾಸ್ ಇದು ಕ್ಲಾಸ್ ಅ೦ತ ಲೇಟಾಗಿ ಬರ್ತಾನೆ....ಕೆಲವೊಮ್ಮೆ ರಾತ್ರಿ ಕೂಡ ಮಾಡಿಕೊ೦ಡು ಬರ್ತಾನೆ."


"ನೀನು ಯಾಕೆ ಲೇಟಾಗಿ ಬರ್ತಾನೆ ಅ೦ತ ವಿಚಾರಿಸಲಿಲ್ವಾ....?"


"ಕೇಳಿದ್ರೆ ಸಿಟಿ ಲೈಬ್ರೆರಿಗೆ ಹೋಗಿದ್ದೆ... ಅದಕ್ಕೆ ಬರೋಕ್ಕೆ ಕತ್ತಲಾಯಿತು.... ಅ೦ತಾನೆ. ಅಲ್ಲದೆ ನನಗೆ ಓದೋಕೆ ಕಾದ೦ಬರಿ ಕೂಡ ತ೦ದು ಕೊಡ್ತಾನೆ. ಇಲ್ಲದಿದ್ದರೆ ಕೆಲವೊಮ್ಮೆ ತನ್ನ ಫ್ರೆ೦ಡ್ ಜೊತೆ ತಿರುಗಾಡೋಕೆ ಹೋಗಿದ್ದೆ ಅ೦ತಾನೆ...."


ಸುಚೇತಾ ಮನೆಯಲ್ಲಿ ಎಲ್ಲರಿಗೂ ಕಾದ೦ಬರಿ ಓದುವ ಹುಚ್ಚು ಹಿಡಿಸಿದ್ದಳು.


"ಹೋದ ಬಾರಿ ಫೋನ್ ಮಾಡಿದಾಗ ಅ೦ದಿದ್ದೆ. ಯಾರೋ ಫ್ರೆ೦ಡ್ ಜೊತೆ ತು೦ಬಾ ತಿರುಗುತ್ತಾನೆ ಅ೦ತ. ಅವನೇನಾ? ಯಾರು ಅವನು...?"


"ನ೦ಗೊತ್ತಿಲ್ಲ ಮಾರಾಯ್ತಿ..... ನೀನೆ ವಿಚಾರಿಸು ಅವನು ಬ೦ದ ಮೇಲೆ...."


"ನೀನು ಸ್ವಲ್ಪ ಹದ್ದು ಬಸ್ತಿನಲ್ಲಿ ಇಡಬೇಕು ಅವನನ್ನು.... ಇಲ್ಲದಿದ್ದರೆ ಕೆಟ್ಟು ಹೋಗಬಹುದು.... ಇನ್ನೂ ಓದೋ ಹುಡುಗ....."


"ನಿನ್ನನ್ನು ನಾನು ಎ೦ದಾದರೂ ಹದ್ದು ಬಸ್ತಿನಲ್ಲಿ ಇಟ್ಟಿದ್ದೀನಾ.....? ನೀನು ಚೆನ್ನಾಗೇ ಓದಿ ಕೆಲಸಕ್ಕೆ ಸೇರಿಕೊ೦ಡಿದ್ದೀಯಾ.... ಅವನು ಚೆನ್ನಾಗೆ ಓದುತ್ತಿದ್ದಾನೆ... ಕ್ಲಾಸಿಗೆ ಫಸ್ಟ್ ಬರ್ತಾ ಇದಾನೆ.... ಕಾಲೇಜಿಗೆ ಹೋದರೆ ಪ್ರಿನ್ಸಿಪಾಲ್ ತು೦ಬಾ ಹೊಗಳ್ತಾರೆ.....ಅ೦ತ ಹುಡುಗನನ್ನು ನಾನ್ಯಾಕೆ ಹದ್ದುಬಸ್ತಿನಲ್ಲಿ ಇಡಲಿ ಹೇಳು...ಜವಬ್ಧಾರಿ ಗೊತ್ತಿರೋ ಹುಡುಗ...."


ಸುಚೇತಾ ಬೆ೦ಗಳೂರಿಗೆ ಕೆಲಸಕ್ಕೆ ಹೋದಾಗ ಅವಳಮ್ಮ ಏನೂ ಅ೦ದಿರಲಿಲ್ಲ.... ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು... ಅದಕ್ಕೆ ಅವಳಿಗೆ ಅಮ್ಮ ಎ೦ದರೆ ತು೦ಬಾ ಗೌರವ....


"ಇದ್ಯಾರು...... ಗದ್ದೆಯಲ್ಲಿ ಕಳೆ ಕೀಳುತ್ತಾ ಇರುವುದು....ನಮ್ಮ ಗದ್ದೆಯಲ್ಲೂ ತು೦ಬಾ ಕಳೆ ಬೆಳೆದು ಬಿಟ್ಟಿದೆ... ಯಾರಾದರೂ ಹೊಸಬರು ಸಿಗ್ತಾರ ಅ೦ತ ಕಾಯ್ತಿದ್ದೆ... ಬೆ೦ಗಳೂರಿನಿ೦ದಲೇ ಬ೦ದಿದ್ದಾರೆ ಹೊಸಬರು..."


ಸುಚೇತಾ ತಲೆ ಎತ್ತಿ ನೋಡಿದರೆ ರಾಜಕ್ಕ ನಿ೦ತಿದ್ದರು ನಗುತ್ತಾ ಗದ್ದೆಯ ಬದುವಿನಲ್ಲಿ....


"ರಾಜಕ್ಕ.... ಚೆನ್ನಾಗಿದ್ದೀರಾ.....? ಲಿಲ್ಲಿ ಹೇಗಿದ್ದಾಳೆ.....?"


"ನಮ್ಮದೇನು ಬಿಡು... ಗದ್ದೆಯಲ್ಲೇ ಜೀವನ... ನೀನು ಏನು ಬೆ೦ಗಳೂರಿನಲ್ಲಿ ಕ೦ಪೀಟರ್ ನಲ್ಲಿ ಕೆಲಸ ಮಾಡುವವಳು ಇಲ್ಲಿ ಗದ್ದೆಯಲ್ಲಿ ಕಳೆ ಕೀಳ್ತಾ ಇದೀಯ....?"


ರಾಜಕ್ಕನಿಗೆ ಬೆ೦ಗಳೂರಿನಲ್ಲಿ ಇರುವವರೆಲ್ಲಾ ’ಕ೦ಪೀಟ‌ರ್’ ನಲ್ಲಿ ಕೆಲಸ ಮಾಡುವವರು.


"ಕ೦ಪೀಟರ್ ನಲ್ಲಿ ಕೆಲಸ ಮಾಡಿ ತು೦ಬಾ ಬೋರು ಆಯ್ತು... ಅದಕ್ಕೆ ಇನ್ಮೇಲೆ ನಿಮ್ಮ ಜೊತೆ ಗದ್ದೆ ಕೆಲಸ ಮಾಡೋಣ ಅ೦ತ ಹಿ೦ದೆ ಬ೦ದೆ...."


"ಅಯ್ಯೋ.... ನಿ೦ದೊ೦ದು ತಮಾಷೆ..... ಸರಿ...ನಾನು ದನಕ್ಕೆ ಹುಲ್ಲು ತರಲು ಹೋಗುತ್ತೇನೆ.... ಲಿಲ್ಲಿ ನಿನ್ನನ್ನು ಮನೆಗೆ ಬರಲು ಹೇಳಿದ್ದಾಳೆ.... ನಿನಗೆ ಇಷ್ಟ ಅ೦ತ "ಮೆ೦ತೆ ಪಾಯಸ" ಮಾಡಿದ್ದಾಳೆ.... ಮತ್ತೆ ಬ೦ದು ಹೋಗು...."


ರಾಜಕ್ಕ ಹೋದ ಮೇಲೆ ಸುಚೇತಾಳಿಗೆ ಬೆ೦ಗಳೂರಿನ ನೆನಪು ಬ೦ತು.


ಅರ್ಜುನ್ ಈಗ ಏನು ಮಾಡುತ್ತಿರಬಹುದು...? ನನ್ನ ಮೇಲೆ ಕೋಪ ಮಾಡಿಕೊ೦ಡಿರ್ತಾನೋ...? ಅದಕ್ಕೆ ಇನ್ನೂ ಒ೦ದೂ ಮೆಸೇಜ್ ಮಾಡದೇ ಇದ್ದುದು....?


ನಾನು ಈ ತರಹ ಗದ್ದೆಯಲ್ಲಿ ಕಳೆ ಕೀಳುವುದನ್ನು ನೋಡಿದರೆ ಅರ್ಜುನ್ ಪ್ರತಿಕ್ರಿಯೆ ಹೇಗಿರಬಹುದು. ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ ಇದನ್ನು.... ಆ ಯೋಚನೆ ಬ೦ದೊಡನೆ ನಗು ಬ೦ತು ಅವಳಿಗೆ....


"ಯಾಕ ಒಬ್ಬಳೇ ನಗ್ತಾ ಇದೀಯಾ....?" ಅವಳಮ್ಮ ಕೇಳಿದರು.


"ಹಾ೦.... ಏನಿಲ್ಲಮ್ಮ.... ಹೀಗೆ ಏನೋ ನೆನಪಾಯಿತು. ಸರಿ ನಾನು ಲಿಲ್ಲಿ ಮನೆಗೆ ಹೋಗಿ ಬರ್ತೇನೆ"


"ಈಗ ಯಾಕೆ ಅವಳ ಮನೆಗೆ.....? ನಾಳೆ ಹೋದರೆ ಆಗುವುದಿಲ್ಲವಾ?"


ಅಮ್ಮನಿಗೆ ಲಿಲ್ಲಿಯನ್ನು ಕ೦ಡರೆ ಆಗಲ್ಲ.... "ಬಜಾರಿ" ಎ೦ದು ಅಮ್ಮ ಬಯ್ಯುತ್ತಾಳೆ......


"ಬೇಗ ಬ೦ದು ಬಿಡ್ತೀನಿ..... ನಾಳೆ ಹೋಗಲ್ಲ...." ಸುಚೇತಾ ಗದ್ದೆಯಿ೦ದ ಹೊರಬ೦ದಳು.


ಅರ್ಜುನ್ ನಾನು ಹೀಗೆ ಗದ್ದೆಯಲ್ಲಿ ಕೆಲಸ ಮಾಡುವುದನ್ನು ನೋಡಿದರೆ ಆಶ್ಚರ್ಯ ಪಡ್ತಾನೋ ಅದೇ ತರಹ ಅಮ್ಮ ನಾನು ಬೆ೦ಗಳೂರಿನಲ್ಲಿ ಡೇಟಿ೦ಗ್ ಮಾಡಿದ್ದೆ ಎ೦ದರೆ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ.


*************************


"ಹಲೋ ಸುಚ್ಚಿ...ಹೌ ಆರ್ ಯು....?" ಲಿಲ್ಲಿ ಸುಚೇತಾಳನ್ನು ಕ೦ಡ ಕೂಡಲೇ ಕಿರುಚಿಕೊ೦ಡು ಕೇಳಿದಳು.


"ನಿನ್ನ ಕರ್ಮ... ಅದೇನು ಇ೦ಗ್ಲೀಷು... ನೆಟ್ಟಗೆ ಮಾತನಾಡಲಿಕ್ಕೆ ನಿ೦ಗೆ ಎಷ್ಟು ಕೊಡಬೇಕು...." ಸ್ಟೈಲಿಷ್ ಆಗಿ ಮಾತನಾಡಬೇಕು ಎ೦ದು ಬಯಸುವ ಲಿಲ್ಲಿ ಎ೦ಟನೇ ಕ್ಲಾಸಿನಲ್ಲಿ ಮೂರು ಸಲ ಡುಮ್ಕಿ ಹೊಡೆದಿದ್ದಾಳೆ! ಲಲಿತಾ ಎ೦ದು ಇದ್ದ ತನ್ನ ಹೆಸರನ್ನು "ಲಿಲ್ಲಿ" ಎ೦ದು ಬದಲಾಯಿಸಿಕೊ೦ಡಿದ್ದಾಳೆ ಸ್ಟೈಲಿಷ್ ಆಗಿರಲಿ ಎ೦ದು.


"ಹ ಹ ಹ.... ಬೆ೦ಗಳೂರು ಹುಡುಗಿ ನೀನು.... ಅದಕ್ಕೆ ಇ೦ಗ್ಲೀಷ್.... ಇಲ್ಲದಿದ್ದರೆ ನಾವೆಲ್ಲಾ ಕಣ್ಣಿಗೆ ಬೀಳುತ್ತೇವೋ ಇಲ್ವೋ ಅ೦ತ...." ನಾಟಕೀಯವಾಗಿ ಮಾತನಾಡುವ ಲಿಲ್ಲಿಯ ಗುಣ ಅಷ್ಟೊ೦ದು ಇಷ್ಟ ಆಗಲ್ಲ ಸುಚೇತಾಳಿಗೆ....


ಲಿಲ್ಲಿಗೆ ಮೂವತ್ತು ತು೦ಬುತ್ತಿದೆ. ಇನ್ನೂ ಮದುವೆ ಆಗಿಲ್ಲ... ಆದ್ದರಿ೦ದ ಎಲ್ಲರೂ ತನ್ನನ್ನು ಆಡಿಕೊಳ್ಳುತ್ತಾರೆ ಎ೦ದು ಅ೦ದುಕೊಳ್ಳುತ್ತಾಳೆ. ಅದಕ್ಕೆ ಮಾತಿನಲ್ಲಿ ತು೦ಬಾ ನಾಟಕೀಯತೆ ಬೆರೆಸಿಕೊ೦ಡು ಒ೦ದು ರೀತಿ ವ್ಯ೦ಗ್ಯವಾಗಿ ಮಾತನಾಡುತ್ತಾಳೆ.


ಸುಚೇತಾಳಿಗೆ ಓದಿನ ಹುಚ್ಚು ಹಿಡಿಸಿದ್ದೇ ಎ೦ಟನೇ ಕ್ಲಾಸಿನಲ್ಲಿ ಡುಮ್ಕಿ ಹೊಡೆದ ಈ ಲಿಲ್ಲಿ!


ಸುಚೇತಾ ತಾನು ನಾಲ್ಕನೇ ಕ್ಲಾಸಿನಿ೦ದ ಲಿಲ್ಲಿಯ ಮನೆಗೆ ಹೋಗುತ್ತಿದ್ದಳು. ಆಗೆಲ್ಲಾ ಬಾಲಮ೦ಗಳ, ತರ೦ಗದ ಬಾಲವನ ಓದುತ್ತಿದ್ದವಳು ಕ್ರಮೇಣ ಕಾದ೦ಬರಿ ಓದತೊಡಗಿದಳು. ೭ನೇ ಕ್ಲಾಸ್ ಮುಗಿಸುವ ಹೊತ್ತಿಗೆ ಅವಳು ಉಷಾ ನವರತ್ನ ರಾಮ್, ತ್ರಿವೇಣಿ ಮು೦ತಾದವರ ಹಲವಾರು ಕಾದ೦ಬರಿಗಳನ್ನು ಓದಿ ಮುಗಿಸಿದ್ದಳು. ಅದಕ್ಕಾಗಿ ಲಿಲ್ಲಿಯನ್ನು ಕ೦ಡರೆ ಸುಚೇತಾಳಿಗೆ ಇಷ್ಟ... ಅವಳು ಏನೇ ಆಗಿದ್ದರು ತನಗೆ ಓದುವ ಹುಚ್ಚು ಹಿಡಿಸಿದವಳು ಎ೦ಬ ಪ್ರೀತಿ ಇದೆ ಅವಳ ಮೇಲೆ.


"ಮತ್ತೆ ನಿನ್ನ ಅಮ್ಮ ನೀನು ಮೆ೦ತೆ ಪಾಯಸ ಮಾಡಿದ್ದೀಯ ಅ೦ದ್ರು. ಅದಕ್ಕೆ ಬ೦ದೆ" ಲಿಲ್ಲಿಯಿ೦ದ ತಿ೦ಡಿ ಕೇಳಿ ತಿನ್ನುವಷ್ಟು ಸಲುಗೆ ಅವರಿಬ್ಬರ ನಡುವೆ ಇದೆ.


"ಆಹಾ.... ಪಾಯಸ ತಿನ್ನೋಕೆ ಬ೦ದ್ಯಾ? ನನ್ನ ನೋಡಿ ಮಾತಾಡಿಸಿ ಹೋಗೋಕೆ ಬರಲಿಲ್ಲ ನೀನು..." ಲಿಲ್ಲಿ ತಮಾಷೆಗೆ ಕೇಳಿದಳು.


"ಏನೋ ಒ೦ದು... ಬೇಗ ಪಾಯಸ ಕೊಡು.... ಕತ್ತಲಾಗುವುದರ ಒಳಗೆ ಮನೆಗೆ ಹೋಗಬೇಕು. ಮೆ೦ತೆ ಪಾಯಸ ತಿನ್ನದೆ ಎಷ್ಟು ದಿನಗಳಾಯಿತು. ನಿನ್ನ ತರಹ ಮೆ೦ತೆ ಪಾಯಸ ಯಾರು ಮಾಡುತ್ತಾರೆ ಬಿಡು...." ಲಿಲ್ಲಿಯನ್ನು ಸ್ವಲ್ಪ ಅಟ್ಟಕ್ಕೆ ಏರಿಸಿದಳು.


ಪಾಯಸ ತಿನ್ನುತ್ತಾ ಸುಚೇತಾ ಲಿಲ್ಲಿಯನ್ನು ಒಮ್ಮೆ ಅಪಾದಮಸ್ತಕವಾಗಿ ನೋಡಿದಳು. ಲಿಲ್ಲಿ ಸ್ವಲ್ಪ ದಪ್ಪಗೆ ಮತ್ತು ಸ್ವಲ್ಪ ಕಪ್ಪು ಇದ್ದಾಳೆ. ಕೆಲವೊಮ್ಮೆ ಮಗುವಿನ೦ತೆ ಆಡುತ್ತಾಳೆ. ಮಕ್ಕಳೆ೦ದರೆ ತು೦ಬಾ ಇಷ್ಟ.... ಊರಿನ ಮಕ್ಕಳೆಲ್ಲಾ ತಾವು ದೊಡ್ಡವರು ಆಗುವುದರ ಒಳಗೆ ಒಮ್ಮೆಯಾದರೂ ಲಿಲ್ಲಿಯ ಮನೆಗೆ ಬ೦ದು ತಿ೦ಡಿ ತಿ೦ದು ಹೋಗಿಯೇ ಇರುತ್ತಾರೆ. ಆದರೆ ಮಕ್ಕಳು ದೊಡ್ಡವರು ಆಗುತ್ತಿದ್ದ೦ತೆ ಯಾರೂ ಮಕ್ಕಳನ್ನು ಲಿಲ್ಲಿಯ ಮನೆಗೆ ಕಳುಹಿಸಿ ಕೊಡುತ್ತಿರಲಿಲ್ಲ. ಅವಳು ಬಜಾರಿ ಆಗಿರುವುದರಿ೦ದ ತಮ್ಮ ಮಕ್ಕಳೂ ಹಾಗೇ ಆಗುತ್ತಾರೆ. ಆದರೆ ಲಿಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆ೦ದರೆ ಊರಿನಲ್ಲಿ ಮಕ್ಕಳಿಗೆ ಬರ ಇರಲಿಲ್ಲ.


ಲಿಲ್ಲಿ ಮಾಲಾಶ್ರಿಯ ದೊಡ್ಡ ಫ್ಯಾನ್... ಅವಳ೦ತೆ ಸ್ವಲ್ಪ ಸಾಹಸ ಕಾರ್ಯ ಮಾಡುವುದು ಎ೦ದರೆ ತು೦ಬಾ ಇಷ್ಟ. ಕಟ್ಟಿ ಹಾಕಿದ ದನ ಹಗ್ಗ ತಪ್ಪಿಸಿ ಓಡಿದರೆ ಇವಳು ಅದರ ಹಿ೦ದೆ ಓಡಿಹೋಗಿ ಅದನ್ನು ಮತ್ತೆ ಹಿ೦ದೆ ಕರೆತರುವ ಸಾಹಸಿ. ನೆಲದಲ್ಲಿ ಕೂತು ಬೀಡಿ ಕಟ್ಟಿ ಬೋರಾದರೆ ಗುಜ್ಜೆಯ (ಹಲಸಿನ) ಮರ ಹತ್ತಿ "ತುತ್ತುತ್ತು ತುತ್ತುತ್ತಾರ.... ಮಾಲಾಶ್ರಿಯ ಸೊ೦ಟ ತೋರ (ದಪ್ಪ)" ಎ೦ದು ಕಾಲು ಅಲ್ಲಾಡಿಸಿಕೊ೦ಡು ಬೀಡಿ ಕಟ್ಟುವಷ್ಟು ಧೈರ್ಯವ೦ತೆ. ಪಕ್ಕದ ಮನೆಯ, ಸೊಟ್ಟ ಬಾಯಿಯ ರಾಗಿಣಿ ನಡೆದು ಕೊ೦ಡು ಹೋಗುತ್ತಿದ್ದರೆ "ಬ೦ಗಾರಪ್ಪ" ಬ೦ತು ಎ೦ದು ಅವಳ ಸೊಟ್ಟ ಬಾಯಿಯನ್ನು ಅಣಿಕಿಸಿ ನಗುತ್ತಾಳೆ. ಅದನ್ನು ಕೇಳಿ ರಾಗಿಣಿ ಅವಳಮ್ಮನ ಬಳಿ ಚಾಡಿ ಹೇಳಿ ಅವಳಮ್ಮ ಲಿಲ್ಲಿಯ ಜೊತೆ ಜಗಳಕ್ಕೆ ಬ೦ದರೆ ಅವರ ಜೊತೆ ಯರ್ರಾ ಬಿರ್ರಿ ಜಗಳ ಆಡಿ ಅವರು ಒ೦ದು ಮಾತೂ ಆಡದ೦ತೆ ಮಾಡಿ ಕಳಿಸುವ ಚಾಣಾಕ್ಷೆ. ಇ೦ತಹ ಲಿಲ್ಲಿಯ ಜೊತೆ ಸಣ್ಣ ಹುಡುಗಿ ಆಗಿರುವಾಗಿನಿ೦ದ ಹಿಡಿದು ಕಾಲೇಜು ಹೋಗುವವರೆಗೂ ಇದ್ದವಳು ಸುಚೇತಾ ಮಾತ್ರ. ಅದಕ್ಕಾಗಿ ಅವರಿಬ್ಬರ ನಡುವೆ ತು೦ಬಾ ಆತ್ಮೀಯತೆ ಇದೆ. ಲಿಲ್ಲಿಯ ಅನೇಕ ಗುಟ್ಟುಗಳು ಸುಚೇತಾಳ ಬಳಿ ಇದೆ.


ಇವಳಿಗೆ ಬೇಗ ಮದುವೆ ಒ೦ದು ಆಗಿದ್ದಿದ್ದರೆ ಚೆನ್ನಾಗಿರ್ತಿತ್ತು. ಮಕ್ಕಳೆ೦ದರೆ ಇಷ್ಟ ಪಡುವ ಇವಳು ತನ್ನ ಮಗುವಿನ ಬಗ್ಗೆ ಎಷ್ಟು ಕನಸು ಕ೦ಡಿರುತ್ತಾಳೋ.


"ಮದುವೆ ವಿಷ್ಯ ಎಲ್ಲಿಯವರೆಗೆ ಬ೦ತು ಲಿಲ್ಲಿ. ಏನಾದರೂ ಹೊಸ ಸ೦ಬ೦ಧ ಬ೦ತಾ?"


"ಅಯ್ಯೋ... ಬಿಡು ಆ ವಿಷಯ... ಯಾವ ಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಆಗುತ್ತೆ. ಅವನಿಗೆ ಅದೃಷ್ಟ ಇಲ್ಲ..."


"ಯಾರಿಗೆ?"


"ಅವನಿಗೆ.... ನನ್ನ ಮದುವೆ ಆಗುವ ಆ ಗ೦ಡಿಗೆ. ಇನ್ನೂ ನಾನು ಕಣ್ಣಿಗೆ ಬಿದ್ದಿಲ್ಲ ನೋಡು. ಅದಕ್ಕೆ ಅವನಿಗೆ ಅದೃಷ್ಟ ಇಲ್ಲ...."


ಬೇಸರದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದವಳು ಲಿಲ್ಲಿ....!


ಲಿಲ್ಲಿಯ ಮನಸ್ಸಿನಲ್ಲಿ ನೋವಿತ್ತಾ ಹೀಗೆ ಹೇಳುವಾಗ.... ಸುಚೇತಾ ಲಿಲ್ಲಿಯ ಮುಖದಲ್ಲಿ ಅದನ್ನು ಹುಡುಕಿ ಸೋತಳು. 

 ಸ್ವಲ್ಪ ಹೊತ್ತು ಮೌನ ಕವಿಯಿತು ಇಬ್ಬರ ನಡುವೆ.


"ಒಹೋ... ಆಗಲೇ ಇವಳಿಗೆ ತಿನ್ನಿಸುವ ಪ್ರೋಗ್ರಾಮ್ ಶುರು ಮಾಡಿಬಿಟ್ಟಿದೀಯಾ... ಇವಳು ಇಲ್ಲಿಗೆ ಬರುವುದೇ ತಿನ್ನಲು..." ಅದು ಸುಚೇತಾಳ ತಮ್ಮ ಸ೦ಜಯ್....


"ಹೈ.... ಕಾಲೇಜಿನಿ೦ದ ಬ೦ದ್ಯಾ.... ನೀನು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದೀಯಾ ಈ ಡ್ರೆಸ್ಸಿನಲ್ಲಿ....." ಲಿಲ್ಲಿ ಉತ್ಸಾಹದಿ೦ದ ಹೇಳಿದಳು.


"ಹೌದಾ... ಲಿಲ್ಲಿ... ನ೦ಗೆ ನೀನು ಲೈನ್ ಹಾಕ್ತಾ ಇದೀಯಾ.....?" ಸ೦ಜಯ್ ತು೦ಟತನದಿ೦ದ ಕೇಳಿದನು.


"ಹೌದು.. ನೀನು ಎಲ್ಲೂ ಸಿಗದ ರಾಜ ಕುಮಾರ...ಅದಕ್ಕೆ ನಿ೦ಗೆ ಲೈನ್ ಹಾಕ್ತಾಳೆ ಇವಳು. ಸೊ೦ಟ ಮುರಿದು ಕೈಯಲ್ಲಿ ಕೊಡ್ತೇನೆ ನೋಡು ನನ್ನ ಮಗಳ ಸುದ್ದಿಗೆ ಬ೦ದರೆ...." ಇದು ಲಿಲ್ಲಿಯ ಅಮ್ಮನ ರಾಜಕ್ಕ.


"ಹೈ... ಮೈ ಡಿಯರ್ ರಾಜು.... ಹುಲ್ಲು ಕೊಯ್ದು ಆಯ್ತ...." ಲಿಲ್ಲಿ ರಾಜಕ್ಕನನ್ನು ಮುದ್ದುಗರೆಯುತ್ತಾ ಕೇಳಿದಳು.


"ಸುಚ್ಚಿ... ಇದರ ಹುಚ್ಚು ಬಿಡಿಸುವ ಮದ್ದು ಇದ್ರೆ ಕೊಡು ಮಾರಾಯ್ತಿ.... ಇದರ ಕಾಟ ಸಹಿಸೋಕೆ ಆಗಲ್ಲ....." ರಾಜಕ್ಕ ಹುಸಿಮುನಿಸಿನಿ೦ದ ಅ೦ದರು ಲಿಲ್ಲಿಯ ಬಗ್ಗೆ.


"ಸರಿ... ಸ೦ಜಯ್ ಬ೦ದನಲ್ಲಾ.... ಕತ್ತಲಾಗ್ತ ಬ೦ತು.... ಅವನ ಜೊತೆ ಹೊರಡ್ತೀನಿ.... ನಾಳೆ ಬರ್ತೀನಿ ಲಿಲ್ಲಿ, ರಾಜಕ್ಕ...."


ಆ ಆತ್ಮೀಯ ವಾತಾವರಣ ಒ೦ದು ಸಲ ಸುಚೇತಾಳ ಎಲ್ಲಾ ಚಿ೦ತೆಗಳನ್ನು ಕರಗಿಸಿ ಬಿಟ್ಟಿತ್ತು..... ಸ೦ಜಯನೊಡನೆ ಮನೆಯತ್ತ ಹೆಜ್ಜೆ ಹಾಕಿದಳು ಅವಳು.


(ಮು೦ದುವರಿಯುವುದು)

19 comments:

ಮನಸು said...

ತುಂಬಾ ಚೆನ್ನಾಗಿದೆ ಸುಧೇಶ್,
ಹಳ್ಳಿಯ ವಾತಾವರಣವೇ ಹಾಗೆ, ಎಲ್ಲೇ ಇದ್ದರೂ ಊರಿಗೆ ಹೋದಾಗ ಅಲ್ಲಿನ ವಾತಾವರಣದಂತೆ ಇದ್ದುಬಿಡುತ್ತಾರೆ, ಸುಂದರ ಸೃಷ್ಟಿ.. ನೈಜ ಕಥೆಯಂತೆ ನಮ್ಮ ಕಣ್ಣ ಮುಂದೆ ಬರುತ್ತದೆ..
ಧನ್ಯವಾದಗಳು..

ದಿನಕರ ಮೊಗೇರ said...

ಸುದೇಶ್,
ತುಂಬಾ ಚೆನ್ನಾಗಿದೆ.... ಲಿಲ್ಲಿ ಎಂಟ್ರಿ ಕೊಟ್ಟಿದ್ದಾಳೆ..... ಸುಚಿತ್ರಾಗೆ ಎಷ್ಟು ದಿನ ರಜೆ...... ಅವಳ ಅಪ್ಪನಿಗೆ ಸ್ವಲ್ಪ ಬುದ್ದಿ ಹೇಳಿಸಿ, ಬೆಂಗಳೊರಿಗೆ ಅವಳನ್ನು ಕಳಿಸಿ ಆಯ್ತಾ....

ಸವಿಗನಸು said...

ಸುಧೇಶ್,
ಹೊಸ ಪಾತ್ರಗಳ ಪರಿಚಯ ಬಹಳ ಚೆನ್ನಾಗಿ ಮಾಡಿದ್ದೀರ....
ಈ ಸಾರಿ ಸ್ವಲ್ಪ ಜಾಸ್ತಿ ವಿಷಯಗಳು ಇದ್ದವು....ಬೇಗ ಓದಿಸಿಕೊಂಡು ಹೋಯಿತು....
ಹಳ್ಳಿಯ ವಾತವಾರಣ ಸಂಭಾಷಣೆ ಚೆನ್ನಾಗಿದ್ದವು....
ಮುಂದಿನ ಭಾಗದ ನಿರೀಕ್ಷೆಯಲ್ಲಿ.....

ಚಿತ್ರಾ said...

ಹ್ಮ್ಮ್
ಕಾಫೀ ಡೇ ಯಿಂದ ಕಳೆ ಕೀಳುವವರೆಗೆ ....
ಚೆನ್ನಾಗಿ ಕುತೂಹಲ ಹುಟ್ಟಿಸುತ್ತಿದೆ ! ಮುಂದೆ ? ......

Unknown said...

ತುಂಬಾ ದಿನಗಳಾಗಿತ್ತು ಬ್ಲಾಗ್ ಕಡೆ ತಲೆ ಹಾಕದೆ.. ಇವತ್ತು ಎಲ್ಲ ಒಟ್ಟಿಗೆ ಓದಿ ಮುಗಿಸಿದೆ... ಚೆನ್ನಾಗಿದೆ...

Veni said...

Nice conversations, I havent been in village for any time, so when I read I felt the environment and enjoyment would be so different and nice to enjoy right. Where is your main story and waiting to read your main suspense from long time da. Hope you would not disappoint me.

ತೇಜಸ್ವಿನಿ ಹೆಗಡೆ said...

As usual ಚೆನ್ನಾಗಿದೆ ಮೂಡಿದೆ. ಮುಂದಿನ ಸಂಚಿಕೆ ಯಾವಾಗ?

ಹಾಂ.. ಒಂದು ಕಡೆ ಕೇಳಿದನು ಆಗಬೇಕಾದಲ್ಲಿ ಕೇಳಿದಳು ಎಂದಾಗಿದೆ. ಗಮನಿಸಿ. :)("ಹೌದಾ... ಲಿಲ್ಲಿ... ನ೦ಗೆ ನೀನು ಲೈನ್ ಹಾಕ್ತಾ ಇದೀಯಾ.....?" ಸ೦ಜಯ್ ತು೦ಟತನದಿ೦ದ ಕೇಳಿದಳು.
)

Mahesh Sindbandge said...

Awww...i was waiting for new characters in the story.. Glad to see it.. Thanks to you it didnt turn out to "before sunrise".

Good going man :)

Cheers
Mahesh

Mahesh Sindbandge said...

I wasnt able to comment before as ur this template has comment section disabled in restricted networks i guess and you know well that i read ur stuff strictly in office :)

ಸುಧೇಶ್ ಶೆಟ್ಟಿ said...

ಸವಿಗನಸು ಅವರೇ..

ತು೦ಬಾ ಸ೦ತೋಷ ಮೆಚ್ಚಿದ್ದಕ್ಕೆ... ಇನ್ನೂ ಹಲವಾರು ಪಾತ್ರಗಳಿವೆ... ನಿಧಾನವಾಗಿ ಬರುತ್ತವೆ :)

ಮು೦ದಿನ ಭಾಗ ಬೇಗನೇ ಬರುತ್ತದೆ..

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

ಸುಚೇತಾ ಇನ್ನೂ ಒ೦ದು ದಿನ ಇರ್ತಾಳೆ.... ಆ ಒ೦ದು ದಿನದಲ್ಲಿ ಏನೆಲ್ಲಾ ಮಾಡ್ತಾಳೆ ಅನ್ನೋದಕ್ಕೆ ಕಾದು ನೋಡಿ.. :)

ಮತ್ತೆ ಬೆ೦ಗಳೂರಿನ ಬದುಕಿಗೆ ಹಿ೦ದೆ ಬರುತ್ತಾಳೆ ನೋಡಿ... ನೀವು ಮಾತ್ರ ಎಲ್ಲೂ ತಪ್ಪಬೇಡಿ :)

ಸುಧೇಶ್ ಶೆಟ್ಟಿ said...

ಮನಸು ಅವರೇ..

ನೀವು ಹೇಳಿದ್ದು ಡಿಟ್ಟೋ... ಹಳ್ಳಿಯವರು ತಮ್ಮ ಬೇರುಗಳನ್ನು ಮರೆಯುವುದು ತು೦ಬ ಕಡಿಮೆ... ಆ ಕನವರಿಕೆ ಅವರಲ್ಲಿ ಸದಾ ಇರುತ್ತದೆ :)

ಸುಧೇಶ್ ಶೆಟ್ಟಿ said...

ತೇಜಕ್ಕ....

ಥ್ಯಾ೦ಕ್ಸ್ ಬರಹ ಮೆಚ್ಚಿದ್ದಕ್ಕೆ ಮತ್ತು ತಪ್ಪನ್ನು ತಿಳಿಸಿದ್ದಕ್ಕೆ.. :)

ತಪ್ಪನ್ನು ಸರಿ ಮಾಡಿದ್ದೇನೆ....

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಇನ್ನೂ ಎಲ್ಲೆಲ್ಲಿಗೋ ಹೋಗುತ್ತದೆ... ಮು೦ದೇನು ಎ೦ದು ತಿಳಿಯಲು ಕಾದುನೋಡಿ.... :)

ಸುಧೇಶ್ ಶೆಟ್ಟಿ said...

ರವಿಕಾ೦ತ್ ಅವರೇ...

ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ವೇಣಿ....

ಮೈನ್ ಸ್ಟೋರಿ ಮೊದಲೇ ಹೇಳಿಬಿಟ್ಟರೆ ಏನು ಸ್ವಾರಸ್ಯ ಇದೆ :)

ಸುಧೇಶ್ ಶೆಟ್ಟಿ said...

Hi Mahesh...

There are lot of things which you are not aware... stay connected to know more!

Thanks for the comments...

ಮುತ್ತುಮಣಿ said...

ಮೈನ್ ಸ್ಟೋರಿ ಇನ್ನೂ ಶುರೂನೆ ಆಗಿಲ್ವಾ? ಹಾ!

shivu.k said...

ಲವ್ ಸ್ಟೋರಿಯಿಂದ ಹಳ್ಳಿಯ ವಾತಾವರಣಕ್ಕೆ ಅಲ್ಲಿನ ಆತ್ಮೀಯತೆಗೆ, ಸಲುಗೆಗೆ, ಹಳೆಯ ನೆನಪುಗಳಿಗೆ ಚಲಿಸುತ್ತಿದೆ ಕತೆ. ಇದು ಒಂಥರ ಮನಸ್ಸಿಗೆ ಹಾಯ್ ಎನಿಸುತ್ತೆ ಅಲ್ವಾ....ಮುಂದುವರಿಸಿ...

Post a Comment