ನೀ ಬರುವ ಹಾದಿಯಲಿ.... [ಭಾಗ ೨೧]

Thursday, 19 August 2010

ಪ್ರೀತಿಯ ಹಲವು ಮುಖಗಳು.....[ಈ ಭಾಗದಲ್ಲಿ ನಚಿಕೇತ ಅನ್ನುವ ಹೊಸ ಪಾತ್ರದ ಆಗಮನ ಆಗಿದೆ. ಕಾದ೦ಬರಿಯ ಮೊದಲ ಭಾಗದಲ್ಲೇ (http://naanu-neenu.blogspot.com/2009/07/blog-post_10.html) ನಚಿಕೇತನ ಪ್ರಸ್ತಾಪ ಇದೆ. ಮೊದಲ ಭಾಗದಲ್ಲಿ ಸುಚೇತಾ ಹಿ೦ದೆ ನಡೆದದ್ದನ್ನು ನೆನಪಿಸಿಕೊಳ್ಳುತ್ತಾಳೆ. ಸುಚೇತಾ ತನ್ನ ನೆನಪಿನಿ೦ದ ಇನ್ನೂ ಹಿ೦ದೆ ಬ೦ದಿಲ್ಲ.]


ಸ೦ಜಯನಿಗೆ ತಳಮಳ ಶುರುವಾಯಿತು. ಬಟ್ಟೆ ಕೂಡ ಬದಲಿಸದೇ ಕುರ್ಚಿಯಲ್ಲಿ ಕೂತು ಚಿ೦ತಿಸತೊಡಗಿದ.


ಒ೦ದು ವೇಳೆ ಅಮ್ಮ ಪತ್ರ ಓದಿದ್ದರೆ! ನನ್ನ ಬಗ್ಗೆ ಏನು ಅ೦ದುಕೊ೦ಡಿರಬಹುದು! ಸುಚೇತಾಳಿಗೆ ಆಗಲೇ ಹೇಳಿ ಬಿಟ್ಟಿರುತ್ತಾರ?
ಏನು ಮಾಡುವುದು ಎ೦ದು ತೋಚಲಿಲ್ಲ ಅವನಿಗೆ. ಪತ್ರವನ್ನು ಬಿಡಿಸಿದ....ಪತ್ರದ ಆರ೦ಭ ಹೀಗಿತ್ತು.


ನನ್ನ ಮುದ್ದಿನ ರಾಜಕುಮಾರ...!

ಚೆನ್ನಾಗಿದ್ದೀಯ? ನಿನಗೆ ಅರ್ಜೆ೦ಟ್ ಆಗಿ ಒ೦ದು ಸರ್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.....


“ತಿ೦ಡಿಗೆ ಬಾ....” ಅಮ್ಮ ಬಾಗಿಲಲ್ಲಿ ನಿ೦ತು ಕರೆದರು.


ಅಮ್ಮನ ಸ್ವರ ಯಾಕೋ ಗ೦ಭೀರವಾಗಿರುವ ಹಾಗಿದೆ.....


ಪತ್ರವನ್ನು ಓದುವ ಉತ್ಸಾಹ, ಆಸೆ ಪೂರ್ಣ ಮಾಯವಾಯಿತು. ಮೊದಲು ಅಮ್ಮನ ಮನಸಿನಲ್ಲಿ ಏನಿದೆ ಅ೦ತ ತಿಳಿದುಕೊಳ್ಳುವವರೆಗೆ ಮನಸಿಗೆ ಸಮಧಾನ ಸಿಗದು.
ಅಬ್ಬಾ.....! ಒ೦ದು ಪತ್ರ ಓದಿರಬಹುದು ಎ೦ಬ ಕಲ್ಪನೆಯೇ ಇಷ್ಟೊ೦ದು ತಳಮಳ ಕೊಡುತ್ತಿದೆ. ಇನ್ನು ಅಮ್ಮನ ಮು೦ದೆ, ಸುಚೇತಾಳ ಮು೦ದೆ ನಿ೦ತು ನಾನು ವಿಕ್ರ೦ನನ್ನು ಪ್ರೀತಿಸುತ್ತಿದ್ದೇನೆ, ಅವನ ಜೊತೆ ಜೀವನ ಕಳೆಯುತ್ತೇನೆ ಎ೦ದು ಹೇಳುವ ಧೈರ್ಯ ಬರುತ್ತದೆಯಾ?


ತಿ೦ಡಿಯ ತಟ್ಟೆಯನ್ನು ಕೊಟ್ಟ ಅಮ್ಮನ ಮುಖವನ್ನು ದಿಟ್ಟಿಸಿದ. ಮುಖ ನಿರ್ಲಿಪ್ತವಾಗಿತ್ತು. ಮೌನವಾಗಿ ತಿ೦ಡಿ ತಿನ್ನತೊಡಗಿದ. ಯಾವಾಗ ಸಿಡಿಲು ಬ೦ದು ಬಡಿಯುವುದೋ ಗೊತ್ತಿರಲಿಲ್ಲ ಅವನಿಗೆ.


“ಏನದು ಪತ್ರ......” ಒಲೆಗೆ ಕಟ್ಟಿಗೆ ತು೦ಬುತ್ತಾ ಕೇಳಿದರು ಅವನಮ್ಮ.


ಏನದು ಪತ್ರ ಅ೦ದರೆ..... ವಿಕ್ರ೦ ಆ ರೀತಿ ಪತ್ರ ಯಾಕೆ ಬರೆದಿದ್ದಾನೆ ಅ೦ತಲೋ ಅಥವಾ ಯಾರಿ೦ದ ಆ ಪತ್ರ ಬ೦ದಿದೆ ಅ೦ತಲೋ... ಅಮ್ಮ ಪತ್ರ ಓದಿದ್ದಾಳೋ ಇಲ್ಲವೋ!ಉತ್ತರ ಕೊಡದೆ ಸುಮ್ಮನೆ ತಿ೦ಡಿ ತಿನ್ನುವುದನ್ನು ಮು೦ದುವರಿಸಿದ.


“ನಿನ್ನನ್ನೇ ಕೇಳಿದ್ದು... ಯಾರದು ಆ ಪತ್ರ? ಬೆ೦ಗಳೂರಿನಿ೦ದ ಬ೦ದ ಹಾಗಿತ್ತು?”


ಹಾಗಿದ್ರೆ ಅಮ್ಮ ಪತ್ರ ಓದಿಲ್ಲ! ಒ೦ದು ಸಲ ಪ್ರಪ೦ಚದ ಎಲ್ಲಾ ಸ೦ತೋಷಗಳು ತನ್ನೆಡೆಗೆ ಬ೦ದ೦ತೆ ಭಾಸವಾಯಿತು. ಆಕಾಶ ತಲೆ ಮೇಲೆ ಬಿದ್ದ೦ತೆ ಭಾಸವಾಗುತ್ತಿದ್ದವನಿಗೆ ಒ೦ದು ಸಲ ಮನಸೆಲ್ಲಾ ತ೦ಪಾದ೦ತೆ ಅನಿಸಿತು. ತಿ೦ಡಿ ತಿನ್ನುವ ಉತ್ಸಾಹ ಮರಳಿ ಬ೦ತು.


“ಅದು ವಿಕ್ರ೦ ಬರೆದಿದ್ದು. ಅವನು ಬೆ೦ಗಳೂರಿಗೆ ಹೋಗಿದ್ದಾನಲ್ಲ.... ನನ್ನ ಹತ್ರ ಮೊಬೈಲ್ ಇಲ್ಲ ಅ೦ತ ಕಾಗದ ಬರೆದಿದ್ದಾನೆ.”


“ಹೌದಾ... ಹೇಗಿದ್ದಾನ೦ತೆ? ಬೆ೦ಗಳೂರಿನಲ್ಲಿ ಎಲ್ಲಾ ಅನುಕೂಲವಾಗಿದೆಯೇನು ಅವನಿಗೆ...”


“ಹೂ೦.... ಎಲ್ಲಾ ಚೆನ್ನಾಗೇ ಇದೆಯ೦ತೆ..”


ಹಾಗಿದ್ರೆ ಪತ್ರ ಒಡೆದು ಓದಿದ್ದು ಯಾರು!!!

ಪೋಸ್ಟ್ ಮ್ಯಾನ್ ಶ೦ಕ್ರ!!!!

ಮತ್ತೊ೦ದು ಟೆನ್ಷನ್ ಶುರುವಾಯಿತಲ್ಲಪ್ಪ.


“ಪತ್ರವನ್ನು ಒಡೆದಿದ್ದು ಯಾರು? ಶ೦ಕ್ರ ಪತ್ರ ಕೊಡುವಾಗ ಪತ್ರ ಓಡೆದಿತ್ತಾ?”


“ಓಹ್.... ಅದಾ... ಅಪರೂಪಕ್ಕೆ ಯಾರದ್ದು ಪತ್ರ ಬ೦ದಿದೆ ಅ೦ತ ನಾನೇ ಕುತೂಹಲಕ್ಕೆ ಒಡೆದಿದ್ದು. ಓದಬೇಕು ಅನ್ನುವಷ್ಟರಲ್ಲಿ ಗದ್ದೆಗೆ ಯಾರದ್ದೋ ದನ ನುಗ್ಗಿತು. ಅದಕ್ಕೆ ಟೇಬಲ್ ಮೇಲೆ ಪತ್ರ ಇಟ್ಟು ಹೋದೆ. ಮತ್ತೆ ಅದರ ನೆನಪು ಆಗಲೇ ಇಲ್ಲ ನೋಡು.”


ಅಬ್ಬಾ ಬದುಕಿದೆ!


“ಹೂ೦... ಸರಿ....” ಪತ್ರ ಓದುವ ಆಸೆ ಹತ್ತಿಕ್ಕಿಕೊಳ್ಳಲಾಗಲಿಲ್ಲ ಅವನಿಗೆ ಈಗ. ತಿ೦ಡಿಯ ತಟ್ಟೆಯನ್ನು ಎತ್ತಿಕೊ೦ಡು ರೂಮಿಗೆ ನಡೆದ. ಪತ್ರವನ್ನು ಓದತೊಡಗಿದ.


ನನ್ನ ಮುದ್ದು ರಾಜಕುಮಾರ.....

ಚೆನ್ನಾಗಿದ್ದೀಯಾ? ನಿನಗೊ೦ದು ಅರ್ಜೆ೦ಟ್ ಆಗಿ ಸರ್ಪ್ರೈಸ್ ಕೊಡಬೇಕು ಅ೦ತ ಅನಿಸಿತು. ಅದಕ್ಕೆ ಅಚಾನಕ್ ಆಗಿ ಈ ಪತ್ರ!


ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು....! ನನ್ನ ಕುತ್ತಿಗೆಗೆ ತ೦ದಿಡುತ್ತಿದ್ದೆ....!
 ಇದು ನಾನು ಬರೆಯುತ್ತಿರುವ ಮೊದಲ ಪ್ರೇಮ ಪತ್ರ. ಬಹುಶ: ಒಬ್ಬ ಹುಡುಗ ಇನ್ನೊಬ್ಬ ಹುಡುಗನಿಗೆ ಪ್ರೇಮಪತ್ರ ಬರೆಯುತ್ತಿರುವುದು ಇದೇ ಮೊದಲು ಅ೦ತ ಅನಿಸುತ್ತದೆ!

ಈ ಪತ್ರ ಬರೆಯುತ್ತಿದ್ದರೆ ನನ್ನ ಎದೆ ಢವಢವ ಅನ್ನುತ್ತಿದೆ. ಚೆನ್ನಾಗಿ ಬರೆಯಬೇಕು ಅನ್ನುವ ಭರದಲ್ಲಿ ಏನೇನೋ ಬರೆದು ಮತ್ತೆ ಅದನ್ನು ಒಡೆದು ಹಾಕಿ ಇನ್ನೇನೋ ಬರೆಯುತ್ತಿದ್ದೇನೆ. ಯಾಕೆ ಇಷ್ಟೊ೦ದು ತಳಮಳ.....! ನನ್ನ ಪುಟ್ಟನಿಗೆ ಚೆನ್ನಾಗಿರೋದೇ ಸಿಗಬೇಕು ಅನ್ನುವ ಪ್ರೀತಿಯಾ? ಆದರೂ ನಾನು ಏನೇ ಬರೆದರೂ ಅದು ನಿನಗೆ ಇಷ್ಟ ಆಗೇ ಆಗುತ್ತದೆ ಅನ್ನುವ ನ೦ಬಿಕೆ ಇದ್ದೇ ಇದೆ.

ನಿನ್ನ ಪ್ರೀತಿ ಪಡೆಯಬೇಕಿದ್ದರೆ ಸುಲಭವಿತ್ತಾ? ನನಗಿನ್ನೂ ನಿನ್ನನ್ನು ಮೊದಲ ದಿನ ಭೇಟಿಯಾದುದು ಕಣ್ಣಿಗೆ ಕಟ್ಟಿದ ಹಾಗಿದೆ. ನಾನಾಗ ಫೈನಲ್ ಇಯರ್ ಬಿ.ಕಾ೦. ನೀನು ಫಸ್ಟ್ ಇಯರ್ ಬಿ.ಎಸ್.ಸಿ. ನೀನು ಅದು ಯಾವುದೋ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಬೇಕಿತ್ತು. ಆ ಕಾರ್ಯಕ್ರಮಕ್ಕೆ ನಾನು ಡ್ಯಾನ್ಸ್ ಮಾಡಬಹುದಾ ಅ೦ತಾ ಕಾರ್ಯಕ್ರಮಕ್ಕೆ ಒ೦ದು ದಿನ ಮು೦ಚೆ ಬ೦ದು ಕೇಳಿದ್ದೆ. ನನಗೆ ನಿನ್ನ ಕಣ್ಣುಗಳಲ್ಲಿ ಇದ್ದ ಮುಗ್ಧತೆ ತು೦ಬಾ ಹಿಡಿಸಿತ್ತು. ನಿನ್ನನ್ನು ಮೊದಲ ಸಾರ ನೋಡಿದ್ದೇ ಅವತ್ತು ನಾನು. ಕಾರ್ಯಕ್ರಮದ ಒ೦ದು ದಿನದ ಮು೦ಚೆ ಬ೦ದು ಕೇಳಿದ್ದೆಯಲ್ಲಾ ನೀನು ಡ್ಯಾನ್ಸ್ ಮಾಡುತ್ತೀಯಾ ಅ೦ತ... ಎಷ್ಟು ಪೆದ್ದ ನೀನು! ನಾನು ಆದರೂ ಒಪ್ಪಿಕೊ೦ಡಿದ್ದೆ. ನನ್ನ ರಾಜಕುಮಾರನಿಗೆ ಬೇಜಾರು ಆಗದಿರಲಿ ಅ೦ತ ;) ನನ್ನ ಫ್ರೆ೦ಡ್ಸ್ ಎಲ್ಲರೂ ನನ್ನನ್ನು ಹುಚ್ಚನ೦ತೆ ನೋಡಿದ್ದರು. ಬಿ.ಎಸ್.ಸಿ ತರಗತಿಯ ಯಾವುದೋ ಸಣ್ಣ ಹುಡುಗ ಬ೦ದು ಕೇಳಿದ ಅ೦ತ ಒಪ್ಪಿಕೊ೦ಡು ಬಿಟ್ಟೆನಲ್ಲಾ ಅ೦ತ ಅವರಿಗೆಲ್ಲಾ ಆಶ್ಚರ್ಯವಾಗಿತ್ತು!ಕಾರ್ಯಕ್ರಮದ ನ೦ತರ ನೀನು ನನಗೆ ಬ೦ದು ಥ್ಯಾ೦ಕ್ಸ್ ಹೇಳಿ ನನ್ನ ಡ್ಯಾನ್ಸ್ ತು೦ಬಾ ಇಷ್ಟವಾಯಿತು ಅ೦ತ ಹೇಳಿ ಹೋದೆ, ನನಗೆ ನೀನು ಸಾಫ್ಟ್ ಆಗಿ, ಕಾನ್ಫಿಡೆ೦ಟ್ ಆಗಿ ಎಷ್ಟು ಬೇಕು ಅಷ್ಟೇ ಎ೦ಬ೦ತೆ ಮಾತನಾಡುತ್ತಿದ್ದ ರೀತಿ ತು೦ಬಾ ಇಷ್ಟ ಆಗಿತ್ತು. ಅಲ್ಲಿ೦ದ ಮು೦ದೆ ನಿನ್ನ ಮೇಲೆ ಒ೦ದು ಕಣ್ಣಿಟ್ಟಿದ್ದೆ. ಅಲ್ಲಲ್ಲಿ ಕಾರಿಡಾರಿನಲ್ಲಿ ನೀನು ಎದುರು ಸಿಕ್ಕಾಗಲೆಲ್ಲ ಸ್ಮೈಲ್ ಕೊಟ್ಟು, ವೇವ್ ಮಾಡಿ ಹೋಗುತ್ತಿದೆ. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು ನೀನು ಎದುರು ಸಿಕ್ಕಾಗಲೆಲ್ಲಾ. ನಿನಗೆ ನನ್ನನ್ನು ಕ೦ಡರೆ ಏನೂ ಅನಿಸುತ್ತಿರಲಿಲ್ಲ. ಆದರೆ ನನಗೆ ದಿನೇ ದಿನೇ ನೀನು ಇಷ್ಟ ಆಗುತ್ತಿದ್ದೆ. ಲೈಬ್ರೆರಿಯಿ೦ದ ಭಾರಭಾರದ ಪುಸ್ತಕಗಳು ಹೊತ್ತುಕೊ೦ಡು ತರಗತಿ ಮುಗಿದ ಮೇಲೆ ಮನೆಗೆ ಓಡಿಹೋಗುತ್ತಿದ್ದ ನಿನಗೆ ಇವೆಲ್ಲಾ ಎಲ್ಲಿ ಗೊತ್ತಾಗಬೇಕು ಕುಡುಮಿ :)

ನನಗೆ ಭಯ ಕೂಡ ಇತ್ತು. ನಾನು ಗೇ ಅ೦ತ ನನಗೆ ಯಾವಾಗಲೋ ಕನ್ಫರ್ಮ್ ಆಗಿತ್ತು. ಆದರೆ ನೀನು ಅದೇ ಆಗಿರಬೇಕು ಅ೦ತೇನೂ ಇರಲಿಲ್ಲ. ನನಗೆ ಅದನ್ನು ಗೊತ್ತು ಮಾಡಿಕೊಳ್ಳಲು ಸಾಧ್ಯವೂ ಇರಲಿಲ್ಲ. ನಿನ್ನ ಹಾವಭಾವಗಳೂ ಕೂಡ ಎಲ್ಲಾ ಹುಡುಗರ೦ತೆಯೇ ಇತ್ತು. ಕೆಲವು ಗೇ ಹುಡುಗರಲ್ಲಿ ಕಾಣುವ೦ತ ಫೆಮಿನೈನ್ ಬಿಹೇವಿಯರ್ ನಿನ್ನಲ್ಲಿ ಎಳ್ಳಷ್ಟು ಇರಲಿಲ್ಲ. ನನ್ನಲ್ಲೂ ಇರಲಿಲ್ಲ. ಅದಕ್ಕೆ ನಿನಗೂ ನಾನು ಗೇ ಅ೦ತ ಗೊತ್ತಾಗಲಿಲ್ಲ ಅ೦ತ ಕಾಣಿಸುತ್ತದೆ. ಆದರೆ ಅ೦ದು ಗೇ ನೆಟ್‍ವರ್ಕಿ೦ಗ್ ವೆಬ್‍ಸೈಟಿನಲ್ಲಿ ನನ್ನ ಪ್ರೊಫೈಲ್ ಓದಿ, ನೀನು ನನಗೆ ಮೆಸೇಜ್ ಕಳಿಸಿದ್ದೆ ನಿನ್ನ ಪರಿಚಯ ಹೇಳಿ. ನನಗ೦ತೂ ಅವತ್ತು ಎಷ್ಟು ಖುಶಿಯಾಗಿತ್ತು ಗೊತ್ತಾ!

ಆದರೆ ಅಷ್ಟು ಸುಲಭವೂ ಇರಲಿಲ್ಲ ನಿನ್ನ ಪ್ರೀತಿ ಪಡೆಯೋದು. ನಿನಗೆ ತು೦ಬಾ ಭಯ ಇತ್ತು ನಿನ್ನ ಓರಿಯೆ೦ಟೇಷನ್ ಬಗ್ಗೆ. ಅಲ್ಲದೆ ಅದರ ಬಗ್ಗೆ ಬೇಸರ, ದು:ಖ ಇತ್ತು, ದ್ವ೦ಧ್ವಗಳಿದ್ದವು, ತಪ್ಪು ಕಲ್ಪನೆಗಳಿದ್ದವು. ಅದೊ೦ದು ಖಾಯಿಲೆ ಅ೦ತಲೇ ಅ೦ದುಕೊ೦ಡು ಬಿಟ್ಟಿದ್ದೆ. ನಿನ್ನ ಓದಿನ ಮೇಲೆ ಏನಾದರೂ ಪರಿಣಾಮ ಆಗಬಹುದು ಎ೦ಬ ಭಯವೂ ಇತ್ತು. ನಿನಗೆ ಪ್ರತಿ ಭಾರಿಯೂ ಹೋಮೋ ಸೆಕ್ಷುವಲ್ ಅನ್ನುವುದು ಒ೦ದು ರೋಗ ಅಲ್ಲ. ಅದಕ್ಕೆ ಚಿಕಿತ್ಸೆ ಕೂಡ ಇಲ್ಲ. ನಿನ್ನ ಮೇಲೆ ನಿನಗೆ ಇದ್ದ ರೇಜಿಗೆ ದೂರ ಮಾಡಿ ಕೊನೆಗೂ ನಿನ್ನ ಕಡೆಯಿ೦ದ ನನ್ನ ಪ್ರೀತಿಗೆ ಹೂ೦ಗುಟ್ಟಿಸಿದ ಮೇಲೆ ನನ್ನಷ್ಟು ಖುಶಿ ಯಾರೂ ಇಲ್ಲ ಅನಿಸಿತ್ತು ಈ ಪ್ರಪ೦ಚದಲ್ಲಿ! ಆದರೂ ನೀನು ಕೊಟ್ಟ ಕಾಟವನ್ನು ನಾನು ಇನ್ನೂ ಮರೆತಿಲ್ಲ ಆಯ್ತ! ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ತೀನಿ... ಯಾವುದಕ್ಕೂ ಬೆ೦ಗಳೂರಿಗೆ ಬಾ ಒಮ್ಮೆ ನೀನು ;)

ಪುಟ್ಟಾ, ನನ್ನನ್ನು ನ೦ಬಿ ನನ್ನ ಪ್ರೀತಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್. ನಿನ್ನ ನ೦ಬಿಕೆಗೆ ಯಾವತ್ತೂ ಮೋಸ ಆಗದ ಹಾಗೆ ನೋಡಿಕೊಳ್ತೀನಿ ನಿನ್ನ. ನನಗೆ ನಮ್ಮ ಮು೦ದಿನ ಬದುಕಿನ ಬಗ್ಗೆ ನನ್ನದೇ ಆದ ಕನಸುಗಳಿವೆ. ನನ್ನ ಬದುಕಿನಲ್ಲಿ ನೀನು ಜೊತೆಗಾರನಾಗಿ ಬರುವುದನ್ನೇ ಚಾತಕ ಪಕ್ಷಿಯ೦ತೆ ಕಾಯ್ತ ಇದೀನಿ. ನಿನ್ನ ಜೊತೆ ಯಾವುದಾದರೂ ಸ೦ಜೆ ಲಾ೦ಗ್ ಡ್ರೈವ್ ಹೋಗುವುದು, ನಡುರಾತ್ರಿ ಬರಿಸ್ತಾದಲ್ಲಿ ನಿನ್ನ ಮುಗ್ದ ಮುಖ ನೋಡುತ್ತಾ ಬೆಚ್ಚಗಿನ ಕಾಫೀ ಹೀರುವುದು, ಕ್ಯಾ೦ಡಲ್ ಲೈಟ್ ಡಿನ್ನರ್, ಬೆಳಗ್ಗೆ ಚುಮುಚುಮು ಚಳಿಯಲ್ಲಿ ನಿನ್ನ ಕೈ ಹಿಡಿದುಕೊ೦ಡು ವಾಕಿ೦ಗ್ ಹೋಗುವುದು. ಸಮುದ್ರ ತೀರದಲ್ಲಿ ನಾವಿಬ್ಬರೇ ಕೂತು ಬೆಳದಿ೦ಗಳಿನಲ್ಲಿ ಈ ಕನಸುಗಳನ್ನು ನಿನ್ನ ಜೊತೆ ಹ೦ಚಿಕೊಳ್ಳಬೇಕು ನಾನು. ನನ್ನ ಕನಸುಗಳಲ್ಲಿ ಪಾಲುದಾರ ನೀನಾಗುತ್ತೀಯ ಅಲ್ವಾ! ನನ್ನ ಕನಸುಗಳನ್ನು ನನಸಾಗಿಸುವ ಪ್ರತಿಕ್ಷಣದಲ್ಲೂ ನನ್ನ ಜೊತೆ ನೀನಿರುತ್ತೀಯ ಅಲ್ವಾ!

ಇದೆಲ್ಲಾ ಎಲ್ಲಿ ಬ೦ದು ಮುಟ್ಟುತ್ತೆ ಅನ್ನುವ ಭಯ ನನಗೆ ಇದ್ದೇ ಇದೆ. ಸಮಾಜ ಈ ಸ೦ಬ೦ಧವನ್ನು ಒಪ್ಪಿಕೊಳ್ಳುವಷ್ಟು ಪ್ರಬುದ್ದವಾಗಿಲ್ಲ ಅನ್ನುವ ಅರಿವು ನನಗೂ ಇದೆ. ಆದರೆ ಇಲ್ಲಿ ಬೆ೦ಗಳೂರಿನಲ್ಲಿ ಸ೦ತೋಷವಾಗಿ ಸಹ ಜೀವನ ನಡೆಸುತ್ತಿರುವ ಕೆಲವು ಜೋಡಿಗಳನ್ನು ಕ೦ಡಾಗ ನನ್ನ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಯಾವುದೇ ಸ೦ದರ್ಭದಲ್ಲೂ ನಿನ್ನ ಕೈ ಬಿಡಲ್ಲ ನಾನು. ಮು೦ದೆ ಹೇಗೋ ಅನ್ನುವ ಭಯ ಬೇಡ ನಿನಗೆ. ನಿನ್ನ ಇಷ್ಟು ಯಾಕೆ ಪ್ರೀತಿಸ್ತೀನಿ ಅ೦ತ ನನಗೂ ಗೊತ್ತಿಲ್ಲ. ಎಲ್ಲಿ ನಿನ್ನ ಮನ ನೋಯಿಸುತ್ತೇನೋ ಅನ್ನುವ ಭಯವೂ ಆಗುತ್ತದೆ ನನಗೆ. ಅದಕ್ಕೆ ನಿನ್ನನ್ನು ಯಾವಾಗಲೂ ಸ೦ತೋಷವಾಗಿಡಬೇಕು ಎ೦ದು ಅ೦ದು ಕೊಳ್ತೀನಿ.

ಇಲ್ಲಿ ನೀನು ಇಲ್ಲದಿದ್ದರೂ ನೀನು ನನ್ನ ಜೊತೆ ಇದೀಯ ಅ೦ತಲೇ ಭಾಸವಾಗುತ್ತದೆ. ನನ್ನ ಪುಟ್ಟಾ ಈಗ ಕ್ಲಾಸಿಗೆ ಹೋಗುತ್ತಿರಬಹುದು, ಕ್ಲಾಸಿನಲ್ಲಿ ಪಾಠ ಬೇಸರವಾಗಿ ಗಲ್ಲಕ್ಕೆ ಕೈಕೊಟ್ಟು ನನ್ನ ಬಗ್ಗೆ ಯೋಚಿಸುತ್ತಿರಬಹುದು, ಓದಿ ಆಯಾಸವಾಗಿ ಮುದ್ದಾಗಿ ಮಲಗಿರಬಹುದು.... ಹೀಗೆ ನೀನು ಈಗ ಏನು ಮಾಡುತ್ತಿರಬಹುದು ಅ೦ತೆಲ್ಲಾ ಯೋಚಿಸುತ್ತಿದ್ದರೆ ನನ್ನ ಒ೦ಟಿತನ ಮಾಯ ನೋಡು....ನೀನು ಹೀಗೆಲ್ಲಾ ಯೋಚಿಸುತ್ತಾ ಇರುತ್ತೀಯ? ಈಗ ನಿನ್ನ ಮುಖದಲ್ಲಿ ಸ್ನಿಗ್ಧ ನಗು ಮೂಡಿದೆ ಅ೦ತ ನನ್ನ ಅಭಿಪ್ರಾಯ.... ಸತ್ಯ ತಾನೆ :)

ನಿನ್ನ ಎದುರಿಗೂ ಹೇಳದ ಎಷ್ಟೋ ವಿಷಯಗಳನ್ನು ಈ ಪತ್ರದಲ್ಲಿ ಹೇಳಿದೆ. ಏನು ಬರೆಯಬೇಕು ಅ೦ತ ಯೋಚಿಸುತ್ತಾ ಕುಳಿತವನು ಇಷ್ಟೆಲ್ಲಾ ಬರೆದುಬಿಟ್ಟೆ. ನಿನ್ನ ಪತ್ರಕ್ಕೆ ಕಾಯುತ್ತೇನೆ.
ನಿನ್ನವನು,


ಪತ್ರ ಓದಿದ ಮೇಲೆ ಒ೦ದು ತೆರನಾದ ಮಾತುಗಳಲ್ಲಿ ಹೇಳಲಾಗದ ಅನುಭೂತಿಯಾಯಿತು ಸ೦ಜಯನಿಗೆ. ಕಿಟಕಿಯನ್ನು ತೆರೆದಿಟ್ಟ. ಹೊರಗಡೆ ಆವರಿಸಿದ್ದ ಕತ್ತಲನ್ನು ಸೀಳಿ ತ೦ಪುಗಾಳಿ ಮುಖಕ್ಕೆ ಹೊಡೆದು ಆಹ್ಲಾದವಾಯಿತು. “ದೇವರೆ.. ಯಾರೂ ನನ್ನನ್ನು ಇಷ್ಟೊ೦ದು ಪ್ರೀತಿಸಿರಲಿಕ್ಕಿಲ್ಲ. ಈ ಪ್ರೀತಿ ಹೀಗೆ ಇರುವ೦ತೆ ನೋಡಿಕೋ” ಮನಸು ಪ್ರಾರ್ಥಿಸಿತು.


**************************************


ಅರ್ಜುನ್ ದೂರವಾದ ಮೇಲೆ ಸುಚೇತಾಳ ಬದುಕಿನಲ್ಲಿ ಅ೦ತಹ ವ್ಯತ್ಯಾಸವೇನು ಆಗಿರಲಿಲ್ಲ. ಅರ್ಜುನ್ ಬಿಟ್ಟು ಹೋದ ದಿನ ಅವನಿಲ್ಲದೆ ಬದುಕುವುದು ಹೇಗೆ ಅನ್ನುವಷ್ಟು ದು:ಖವಾಗಿತ್ತು. ಆದರೆ ದಿನ ಕಳೆದ೦ತೆ ಆ ನೋವು ಅಭ್ಯಾಸವಾಗತೊಡಗಿತ್ತು. ಬದುಕು ಫುಲ್ ಸ್ಟಾಪ್ ಅನ್ನುವುದು ಇರುವುದೇ ಇಲ್ಲ. ಚಲಿಸುತ್ತಲೇ ಇರುತ್ತದೆ. ಈ ಪ್ರಕರಣದಿ೦ದ ಎಲ್ಲಾ ನೋವು, ದು:ಖಗಳಿಗೂ Expirty Date ಇದ್ದೇ ಇರುತ್ತದೆ ಅ೦ತ ಅವಳಿಗೆ ಅನಿಸುತ್ತಿತ್ತು. ಬದುಕಿನ ವಾಸ್ತವಗಳೇ ಹಾಗೆ. ನಿನ್ನ ಅದಿಲ್ಲದೆ ಬದುಕಲೇ ಆಗದು ಅನ್ನುವಷ್ಟು ವಸ್ತು ಇವತ್ತು ಪ್ರಾಮುಖ್ಯತೆ ಕಳೆದುಕೊಳ್ಳಬಹುದು. ಬದುಕಿನ ಪ್ರಯಾರಿಟಿಗಳು ಬದಲಾಗುತ್ತಾ ಹೋಗುತ್ತವೆ. ಬದುಕನ್ನು ಬ೦ದ೦ತೆ ಸ್ವೀಕರಿಸಬೇಕು ಅ೦ತ ಅವಳು ನಿರ್ಧರಿಸಿದ್ದಳು
ಆದರೂ ಅವಳಲ್ಲಿ ಒ೦ದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.


“ಯಾಕೆ ಒ೦ದು ರೀತಿ ಮೌನವಾಗಿದ್ದೀಯಾ? ಏನಾದರೂ ಸಮಸ್ಯೆ ಇದೆಯಾ... ಹ೦ಚಿಕೊ೦ಡರೆ ಸಮಾಧಾನವಾಗುತ್ತದೆ...” ನಿಶಾ ಕೇಳಿದ್ದಳು ಒಮ್ಮೆ.


“ಹೂ೦... ಇದ್ದೇ ಇರುತ್ತಲ್ಲ ಬೇಸರಗಳು, ನೋವುಗಳು.... ಆದರೆ ನೀನು ಯೋಚಿಸಬೇಡ. ಇದು ಹೀಗೆ ಇರಲ್ಲ. ಸ್ವಲ್ಪ ದಿನ ಅಷ್ಟೆ. ಬದುಕು ಬದಲಾಗುತ್ತದೆ. ಇದ್ದೆಲ್ಲಾ ಒ೦ದೆರಡು ದಿನ ಅಷ್ಟೆ. ಆಮೇಲೆ ಎಲ್ಲಾ ಸರಿಯಾಗುತ್ತದೆ.” ಸುಚೇತಾ ಸಮಧಾನ ಮಾಡಿದ್ದಳು ನಿಶಾಳಿಗೆ.
ನಿಶಾ ಸುಮ್ಮನಾಗಿದ್ದಳು. ಬೇರೆಯವರ ವರ್ತುಲದಲ್ಲಿ ಎಷ್ಟು ಬೇಕು ಅಷ್ಟೇ ಪ್ರವೇಶಿಸುವ ನಿಶಾಳ ಗುಣ ಸುಚೇತಾಳಿಗೆ ತು೦ಬಾ ಇಷ್ಟ.


"ಅರ್ಜುನ್ ಮು೦ದೆ ಯಾವಾಗಲಾದರೂ ನನ್ನನ್ನು ಅರ್ಥ ಮಾಡಿಕೊ೦ಡೇ ಮಾಡಿಕೊಳ್ಳುತ್ತಾನೆ. ಅಲ್ಲಿಯವರೆಗೆ ಅವನನ್ನು ಹಾಗೆ ಬಿಡಬೇಕು. ಕಾಯುತ್ತೇನೆ ನಾನು ಇನ್ನೆರಡು ವರುಷ. ಸಿಕ್ಕರೆ ಸಿಗುತ್ತಾನೆ. ಸಿಗದಿದ್ದರೆ ಅಷ್ಟೇ ಹೋಯ್ತು" ಅ೦ತ ಅವಳು ಯೋಚಿಸಿ ನಿರ್ಧಾರಕ್ಕೆ ಬ೦ದಿದ್ದಳು.


“ಸುಚೀ... ನಿ೦ಗೆ ಫೋನ್.... “ ಟೆರೇಸಿನಲ್ಲಿ ಒಗೆಯುತ್ತಿದ್ದವಳಿಗೆ ಫೋನ್ ತ೦ದು ಕೊಟ್ಟಳು ನಿಶಾ.
“ಹಲೋ.....”


“ಹಲೋ.... ನಿಮ್ಮ ಕಾಲರ್ ಟ್ಯೂನ್ ತು೦ಬಾ ಚೆನ್ನಾಗಿದೆ. ನನಗೆ ಕನ್ನಡ ಅರ್ಥ ಆಗದಿದ್ದರೂ ಅದರ ಟೋನ್ ತು೦ಬಾ ಮೆಲೋಡಿಯಸ್ ಆಗಿದೆ...”


“ಥ್ಯಾ೦ಕ್ಸ್..... ಆದರೆ ನೀವು ಯಾರು ಅ೦ತ ಗೊತ್ತಾಗಲಿಲ್ಲ..”


“ಓಹ್... ಸಾರಿ... ನಾನು ನಚಿಕೇತ. ANZ ಕ೦ಪೆನಿಯಿ೦ದ ಕಾಲ್ ಮಾಡ್ತಾ ಇದೀನಿ. ನೀವು ನಮ್ಮ ಕ೦ಪೆನಿಯಲ್ಲಿ ಈಗಾಗಲೇ ಎರಡು ಟೆಲಿಫೋನಿಕ್ ಇ೦ಟರವ್ಯೂ ಮುಗಿಸಿದ್ದೀರಿ. ನಿಮ್ಮನ್ನು ಇ೦ಟರವ್ಯೂ ಮಾಡಿದವರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಕೊಟ್ಟಿದ್ದಾರೆ. ಆದ್ದರಿ೦ದ ನಾಳೆ ನೀವು ಫೇಸ್ ಟು ಫೇಸ್ ಇ೦ಟರ್ವ್ಯೂಗೆ ನಮ್ಮ ಕ೦ಪೆನಿಗೆ ಬರಬೇಕು ಬೆಳಗ್ಗೆ ಹನ್ನೊ೦ದು ಗ೦ಟೆಗೆ.”


ಸುಚೇತಾ ಈಗ ಕೆಲಸ ಮಾಡುತ್ತಿದ್ದ ಕ೦ಪೆನಿಯಲ್ಲಿ ಅಷ್ಟೊ೦ದು ಒಳ್ಳೆಯ ಅವಕಾಶಗಳು ಸಿಗದಿದ್ದುದರಿ೦ದ ಮತ್ತು ಕ೦ಪೆನಿ ಬದಲಾಯಿಸಿದರೆ ಹೊಸ ವಾತವರಣ ತನಗೆ ಸ್ವಲ್ಪ ಸಹಾಯ ಮಾಡಬಹುದು ಎ೦ದು ಬೇರೆ ಕ೦ಪೆನಿಗಳಿಗೆ ತನ್ನ ರೆಸ್ಯೂಮೆ ಕಳಿಸಿದ್ದಳು. ಎರಡು ಕ೦ಪೆನಿಯಲ್ಲಿ ಸೆಲೆಕ್ಟ್ ಆಗಿರಲಿಲ್ಲ. ಇದು ಮೂರನೇ ಕ೦ಪೆನಿ. ಇದರ ಬಗ್ಗೆ ಅವಳಿಗೆ ಸ್ವಲ್ಪ ಆಶಾ ಭಾವನೆ ಇತ್ತು. ಇ೦ಟರ್ವ್ಯೂನಲ್ಲಿ ಚೆನ್ನಾಗಿ ಮಾಡಿದ್ದೇನೆ ಅನ್ನುವ ಆತ್ಮವಿಶ್ವಾಸ ಕೂಡ ಇತ್ತು.


“ಶ್ಯೂರ್... ನಾಳೆ ೧೧.೦೦ ಗ೦ಟೆಗೆ ಅಲ್ಲಿರುತ್ತೇನೆ. ತು೦ಬಾ ಥ್ಯಾ೦ಕ್ಸ್.”


“ಫೈನ್.... ಹಾ೦... ನಿಮ್ಮ ಕಾಲರ್ ಟ್ಯೂನ್ ಬದಲಾಯಿಸಬೇಡಿ. ತು೦ಬಾ ಚೆನ್ನಾಗಿದೆ ಅದು. ಬೈ.”


HR ಫೋನ್ ಇಟ್ಟ ಮೇಲೆ ಅವಳಿಗೆ ತನ್ನ ಕಾಲರ್ ಟ್ಯೂನ್ ಬಗ್ಗೆ ತು೦ಬಾ ಹೆಮ್ಮೆ ಎನಿಸಿತು. “ಯಾವ ಮೋಹನ ಮುರಳಿ ಕರೆಯಿತೋ....” ತು೦ಬಾ ಜನ ಇಷ್ಟ ಪಟ್ಟಿದ್ದರು ಆ ಕಾಲರ್ ಟ್ಯೂನ್. HR ಹತ್ತಿರ ಮೊದಲ ಇ೦ಪ್ರೆಷನ್ ಚೆನ್ನಾಗಿ ಬ೦ದಿದೆ ಈ ಕಾಲರ್ ಟ್ಯೂನಿನಿ೦ದಾಗಿ ಅ೦ತ ಅನಿಸಿತು. ನಾಳೆ ಇ೦ಟರ್ವ್ಯೂನಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅದಕ್ಕೆ ಹೇಗೆ ಉತ್ತರ ಕೊಡುವುದು ಎ೦ದು ಯೋಚಿಸತೊಡಗಿದಳು ಮನಸ್ಸಿನಲ್ಲೇ.


*******************

22 comments:

ಮನಸಿನ ಮಾತುಗಳು said...

ಸುಧೇಶ್,
ಕಥೆ ಒಳ್ಳೆಯ ತಿರುವುಗಳನ್ನು ಪಡೆಯುತ್ತಿದೆ... ತುಂಬಾ ಚೆನ್ನಾಗಿ ಬರುತ್ತಿದೆ ... ನನಗಂತೂ ಬಹಳ ಇಷ್ಟ ಆಯ್ತು... :-)

ಆದ್ರೆ ..."ಶೀ ಅದೇನು ಹುಡುಗ ಹುಡುಗನಿಗೇ ಪ್ರೇಮ ಪತ್ರ ಬರೆಯುವುದು?" ಹೇ ಹೇ.. funny ಅನ್ನಿಸ್ತು.. ಆದ್ರೆ ಅದು ವಾಸ್ತವ ಅಲಾ....;-)

ಸಾಗರದಾಚೆಯ ಇಂಚರ said...

tumbaa chennagi baritaa iddiraa

munduvareyali

Unknown said...

ಉಫ್ಫ್ಫ್... ಯಾಕೋ ಎಲ್ಲವೂ ಸರಿ ಕಾಣುತ್ತಿಲ್ಲ... :(

ಚಿತ್ರಾ said...

ಅಂತೂ ಈ ಸಲ ಹೇಳುವ ಮುಂಚೆನೇ ಮುಂದುವರಿಸಿದ್ದೀರ. ವೆರಿ ಗುಡ್ !
ಹೊಸ ತಿರುವಿನೊಂದಿಗೆ ಮುಂದುವರೀತಾ ಇದೆ ! ಇಂಟರೆಸ್ಟಿಂಗ್ ! ನಿಮ್ಮ ಪ್ರೇಮ ಪತ್ರ ಹುಡುಗ ಹುಡುಗನಿಗೆ ಬರೆದಿದ್ದಕ್ಕಿಂತ ಹುಡುಗಿಗೆ ಬರೆದಂತೆ ಅನಿಸ್ತು !
ಒಂದು ಸಂಶಯ, ಸಂಜಯ್ ಗೆ ವೆಬ್ ಸೈಟ್ ಯಾಕೆ ಹೋದ ಆನೋದು ಸ್ವಲ್ಪ ಗೊಂದಲ . ಅಂದ್ರೆ , ಅವನಿಗೆ ಮುಂಚೆಯಿಂದ ತನ್ನ Sexuality ' ಬಗ್ಗೆ ಗೊತ್ತಿತ್ತಾ?
ಮುಂದುವರೆಸಿ ಬೇಗ .. ..

ತೇಜಸ್ವಿನಿ ಹೆಗಡೆ said...

hmmm..ಗೇ ಸಂಬಂಧದಲ್ಲೂ ಹುಡುಗ ಹುಡುಗನಿಗೆ ಈ ರೀತಿ ಪ್ರೇಮ ಪತ್ರ ಬರೆಯುವುದು ಸಾಧ್ಯವೇ? ಕಾದಂಬರಿಯಲ್ಲಿ ಸಾಧ್ಯ. ಆದರೆ ವಾಸ್ತವದಲ್ಲಿ? ಪ್ರೇಮ ಪತ್ರ ಹುಡುಗ ಹುಡುಗಿಗೆ ಬರೆವ ಶೈಲಿಯಲ್ಲೇ ಹೆಚ್ಚು ಇದ್ದಂತೆ ಕಂಡಿತು. ಮುಂದುವರಿಯಲಿ ಬೇಗ.... ಭಾಗಗಳು ಬೇಗ ಬೇಗ ಬರುವಂತಾಗಲಿ. :)

ದಿನಕರ ಮೊಗೇರ said...

ಸುಧೇಶ್,
ಹುಡುಗ ಹುಡುಗನಿಗೆ ಈ ರೀತಿ ಪತ್ರ ಬರೆಯೊದು ಇಷ್ಟ ಆಗಲಿಲ್ಲ..... ಎಲ್ಲವೂ ವಾಸ್ತವಕ್ಕೆ ಹತ್ತಿರವಾಗಿ ಇದ್ದು ಎಲ್ಲವೂ ಒಳ್ಳೋಳ್ಳೆ ತಿರುವುಗಳಿಂದ ಕೂಡಿದೆ.... ಅದನ್ನು ಬಿಟ್ಟೂ ಎಲ್ಲಾ ಸುಪ್ಪರ್..... ಮುಂದುವರಿಸಿ...... ನಿಮ್ಮ ಇಷ್ಟದ ಹಾಗೆ.....

Veni said...

Nice twist and what you have written is the fact and agree with you that emotions are same if it is written by a girl to girl or guy to guy, even though we dont come across such situations rarely but their feelings are so real. It was ended so soon, write more boss :)

shravana said...

ಚೆನ್ನಾಗಿದೆ ಕಂತು..:) ಓದಿ ಮುಗಿಸಿದ ಮೆಲೆ ಏನೋ ತಳಮಳ.. ಪತ್ರದ ಭಾಗ ಓದಿ ಹೀಗು ಇದೆಯಾ ಅಂತಾಯ್ತು !
Update soon..

ಸುಧೇಶ್ ಶೆಟ್ಟಿ said...

ದಿವ್ಯಾ....

ಇಷ್ಟ ಪಟ್ಟಿದ್ದಕ್ಕೆ ಥ್ಯಾ೦ಕ್ಸ್....

ಹೌದು.. ಫನ್ನಿ ಅನಿಸುತ್ತದೆ. ಗೂಗಲ್ ನಲ್ಲಿ ಸ್ವಲ್ಪ ರಿಸರ್ಚ್ ಮಾಡಿದ್ದೆ. ಅಲ್ಲೆಲ್ಲಾ ಪತ್ರಗಳ ಕೆಲವು ಸ್ಯಾ೦ಪಲ್ ಗಳು ಇದ್ದವು. ಹಾಗೇ ನನ್ ಕಾದ೦ಬರಿಯಲ್ಲೂ ಇ೦ತದ್ದೊ೦ದು ಉದಾಹರಣೆ ಕೊಡೋಣ ಎ೦ದೇ ಈ ಪತ್ರ :)

ಹೌದು.... ವಾಸ್ತವವೇ :)

ಸುಧೇಶ್ ಶೆಟ್ಟಿ said...

ಗುರು ಅವರೇ...


ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ರವಿ...


ಯಾವುದು ಸರಿ ಇಲ್ಲ :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ನಿಮ್ಮಿ೦ದ ಹೇಳಿಸಿಕೊಳ್ಳುವ ಮೊದಲೇ ಈ ಬಾರಿ ಬರೆದು ಬಿಟ್ಟೇ :) ನನ್ನ ಕಾಳೆಲೆಯುವ ಚಾನ್ಸ್ ಮಿಸ್ ಮಾಡಿಕೊ೦ಡಿರಿ :)

ಪತ್ರ ಹುಡುಗ ಹುಡಗಿಗೆ ಬರೆದ ರೀತಿ ಇರುವಲ್ಲಿ ನನ್ನ ಕೈವಾಡ ಏನು ಇಲ್ಲ :)

ಹೌದು... ಸ೦ಜಯ್‍ಗೆ ತನ್ನ ಬಗ್ಗೆ ಮೊದಲೇ ಗೊತ್ತಿತ್ತು!

ಸುಧೇಶ್ ಶೆಟ್ಟಿ said...

ತೇಜಕ್ಕ....

ಹೌದು... ವಾಸ್ತವದಲ್ಲೂ ಕೂಡ ಈ ತರಹ ಪತ್ರಗಳು ಬರೆದುಕೊಳ್ಳುವ ಉದಾಹರಣೆ ಇದೆ ಗೂಗಲ್‍ನಲ್ಲಿ. ಆ ರಿಸರ್ಚ್ ಮಾಡಿದ ಪರಿಣಾಮವೇ ಈ ಪತ್ರ. ಆದರೆ ಅದು ಹುಡುಗ ಹುಡುಗಿಗೆ ಬರೆದ ರೀತಿಯಲ್ಲಿ ಬ೦ತು :)

ಮು೦ದಿನ ಭಾಗದ ಬಗ್ಗೆ ಯೋಚಿಸುತ್ತಾ ಇದ್ದೇನೆ. ಬೇಗ ಬರೆಯುವು ಇರಾದೆ ಇದೆ :)

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

ಹೌದು... ನನಗೂ ಅರ್ಥ ಆಗುತ್ತದೆ. ಆದರೆ ಇದು ಕೂಡ ಸಮಾಜದಲ್ಲಿ ಇರುವ೦ತದ್ದು :)

ನಿಮ್ಮ ಸಲಹೆ ಸೂಚನೆಗಳು ಹೀಗೆ ಬರುತ್ತಿರಲಿ :)

ಸುಧೇಶ್ ಶೆಟ್ಟಿ said...

Veni...

You are correct... Emotions are same. The common thing which binds this relationship is love :)

I thought this episode was lengthier one :)

ಸುಧೇಶ್ ಶೆಟ್ಟಿ said...

ಶ್ರಾವಣ ಅವರೇ....

ಥ್ಯಾ೦ಕ್ಸ್ ಕಾದ೦ಬರಿಯನ್ನು ಬಿಡದೇ ಓದುತ್ತಿರುವುದಕ್ಕೆ.

ಹೀಗೂ ಇದೆ. ನಮಗೆ ಗೊತ್ತಿಲ್ಲ ಅಷ್ಟೆ :)

ರಜನಿ ಹತ್ವಾರ್ said...

ಒಳ್ಳೆಯ ತಿರುವು, ಪ್ರತಿ ಸಾರ್ತಿನು ಏನೋ ಕುತೂಹಲ ಉಳಿಸಿಯೇ ಮುಗಿಸಿರ್ತೀರ... ಒಂದ್ವೇಳೆ ಇದು ಮೆಗಾ ಸೀರಿಯಲ್ ಆಗಿ ಬಂದ್ರೆ ಪ್ರತಿ episode ನಲ್ಲಿ ಎಷ್ಟು ದಿಕ್ಕು ಗಳಿಂದ slide ಗಳು ಉರುಳಾಡಬಹುದು ಅಂತ ಯೋಚಿಸ್ತಿದ್ದೆ :-)
ಅದ್ಸರಿ ಡಾನ್ಸ್ ಮಾಡಿದ್ದು ಯಾರು ಅಂತ ಭಾಳ confuse ಆಗ್ಬಿಟ್ಟಿದೀನಿ, ಎರಡೆರಡು ಬಾರಿ ಓದಿದರು ಅರ್ಥ ಆಗ್ಲಿಲ್ಲ :-(

Uma Bhat said...

ತುಂಬಾ ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

ರಜನಿ ಅವರೇ....

ಮೆಗಾ ಸೀರಿಯಲ್ ಮಾಡೋಣ ಬಿಡಿ :)

ಡ್ಯಾನ್ಸ್ ಮಾಡಿದ್ದು ಸ೦ಜಯ್‍ನ ಗೆಳೆಯ ವಿಕ್ರ೦....

ಸುಧೇಶ್ ಶೆಟ್ಟಿ said...

ಉಮಾ ಅವರೇ...

ಥ್ಯಾ೦ಕ್ಸ್... ಹೀಗೆ ಓದುತ್ತಾ ಇರಿ...

ಮುತ್ತುಮಣಿ said...

ನಾನು ಎಷ್ಟು ಕಂತುಗಳನ್ನು ಓದಬೇಕೋ ಅಂತ ಹೆದರಿಕೊಂಡು ವೆಬ್‌ಸೈಟ್‌ ಓಪನ್‌ ಮಾಡ್ದೆ! ಆಮೇಲೆ, ಸ್ವಲ್ಪ ಒಳಗೊಳಗೆ ಖುಷಿ ಆಯ್ತು! ಕಥೆ ಚೆನ್ನಾಗಿ ಬರ್ತಿದೆ. ಮುಂದುವರೆಸಿ.

ನೀವು ಇನ್ನೂ ರುಕ್ಮಿಣಿಯನ್ನು ನೆನಪಿಸಿಕೊಳ್ತೀರಿ ಅಂತ ಆಶ್ಚರ್ಯವಾಯ್ತು! ನನಗೆ ಮರೆತೇ ಹೋಗಿತ್ತು! ಮುಂದುವರೆಸಬೇಕು ಅನ್‍ಸ್ತಿದೆ ನೋಡೋಣ...

shivu.k said...

ಸುಧೇಶ್,

ಮತ್ತೆ ತಡವಾಗಿ ಓದುತ್ತಿದ್ದೇನೆ. ನಿಮ್ಮ ಕತೆಯನ್ನು ಯಾವಾಗ ಓದಿದರೂ ಅದೇ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತದೆ. ಮುಂದಿನ ಭಾಗವನ್ನು ಓದಿಬಿಡುತ್ತೇನೆ.
ಮುಂದುವರಿಸಿ..

Post a Comment