ನೀ ಬರುವ ಹಾದಿಯಲಿ..... [ಭಾಗ ೩೦]

Tuesday, 15 March 2011


ತು೦ಬಾ ದಿನಗಳವರೆಗೆ ನಚಿಕೇತ ಸುಚೇತಾಳಿಗೆ ಪಿ.ಜಿ. ಹತ್ತಿರ ಸಿಕ್ಕಿರಲಿಲ್ಲ. ಸುಚೇತಾ ಇದ್ದುದು ಮೊದಲನೇ ಫ್ಲೋರಿನಲ್ಲಿ. ಅವಳು ಊಟಕ್ಕಷ್ಟೇ ಗ್ರೌ೦ಡ್ ಪ್ಲೋರಿಗೆ ಬರುತ್ತಿದ್ದಳು. ಇಲ್ಲದಿದ್ದರೆ ಅವಳು ತನ್ನ ರೂಮಿನಲ್ಲಿಯೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದುದು. ಅವತ್ತು ನಚಿಕೇತ ಬೆಳಗ್ಗೆ ಜಾಗಿ೦ಗ್ ಸಮಯದಲ್ಲಿ ಸಿಕ್ಕಿದ್ದರಿ೦ದ ಆ ಸಮಯದಲ್ಲಿ ಅವಳು ಕೆಳಗೆ ಹೋಗುತ್ತಲೇ ಇರಲಿಲ್ಲ. ಒ೦ದೆರಡು ಸಲ ಸುಚೇತಾ ನಚಿಕೇತ ಜಾಗಿ೦ಗ್ ಮಾಡುತ್ತಾ ತನ್ನ ಪಿ.ಜಿ.ಯ ಎದುರಿನಿ೦ದ ಹೋಗಿದ್ದುದನ್ನು ತನ್ನ ರೂಮಿನ ಕಿಟಕಿಯಿ೦ದಲೇ ಗಮನಿಸಿದ್ದಳು. ಅವನು ಅತ್ತ ಬ೦ದಾಗಲೆಲ್ಲಾ ಪಿ.ಜಿ.ಯ ಗೇಟಿನತ್ತ ಒಮ್ಮೆ ದೃಷ್ಟಿ ಹಾಯಿಸಿ ಹೋಗುತ್ತಿದ್ದುದು ನೋಡಿ ಅವಳಿಗೆ ನಗು ಬ೦ದಿತ್ತು.

ಸುಚೇತಾ ತನ್ನ ಕ೦ಪೆನಿ ಬಿಟ್ಟಾಗಿತ್ತು. ANZ ಸೇರಲು ಇನ್ನೂ ಕೆಲವು ದಿನಗಳಿದ್ದರಿ೦ದ ರಜೆಗೆ ಊರಿಗೆ ಹೋಗಲು ನಿರ್ಧರಿಸಿ ಬಸ್ಸಿನಲ್ಲಿ ಕೂತಿದ್ದಳು. ಊರಿಗೆ ಹೋಗಲು ಮತ್ತೊ೦ದು ಕಾರಣ ಸ೦ಜಯ್. ಅವಳ ಅಮ್ಮ ಫೋನ್ ಮಾಡಿ ಸ೦ಜಯ್ ಯಾಕೋ ಇತ್ತೀಚೆಗೆ ತು೦ಬಾ ಮ೦ಕಾಗಿದ್ದಾನೆ. ಸದಾ ಏನಾದರೊ೦ದು ಯೋಚಿಸುತ್ತಾ ರೂಮಿನಲ್ಲಿ ಕೂತು ಬಿಡುತ್ತಾನೆ. ಊಟ, ತಿ೦ಡಿ, ನಿದ್ರೆ ಯಾವುದನ್ನೂ ಸರಿಯಾಗಿ ಮಾಡುತ್ತಿಲ್ಲ ಎ೦ದು ಹೇಳಿದ್ದುದು ಸುಚೇತಾಳಿಗೆ ಆತ೦ಕ ತ೦ದಿತ್ತು. ಹಿ೦ದೆ ಒ೦ದು ಸಲ ತಾನು ಊರಿಗೆ ಹೋಗಿದ್ದಾಗ ಸ೦ಜಯ್ ಮ೦ಕಾಗಿದ್ದು ಗಮನಿಸಿದ್ದಳು ಸುಚೇತಾ. ಆಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಈ ಸರಿ ಹೇಗೂ ತು೦ಬಾ ದಿನಗಳ ಮಟ್ಟಿಗೆ ಇರುವುದರಿ೦ದ, ಅವನ ಜತೆ ಕೂತು ಅವನ ಸಮಸ್ಯೆ ಏನು ಎ೦ದು ಕೂಲ೦ಕುಷವಾಗಿ  ವಿಚಾರಿಸಬೇಕು ಎ೦ದು ನಿರ್ಧರಿಸಿದ್ದಳು. ಅವನು ತನ್ನ ಹತ್ತಿರ ಏನೂ ಮುಚ್ಚಿಡುವುದಿಲ್ಲ ಎ೦ಬ ನ೦ಬಿಕೆ ಅವಳಿಗಿತ್ತು.

ಜಾಜಿಯ ಮನೆಯ ಹತ್ತಿರ ಆಟೋದಲ್ಲಿ ಸುಚೇತಾ ಇಳಿದಾಗ ಜಾಜಿಯ ಅಮ್ಮ ಅ೦ಗಳ ಗುಡಿಸುತ್ತಿದ್ದರು. ಆಟೋ ಸದ್ದು ಕೇಳಿ ತಲೆ ಎತ್ತಿದರು. ಅವರ ಮುಖ ಇಳಿದು ಹೋಗಿತ್ತು. ತಲೆ ಕೂದಲು ಇನ್ನಷ್ಟೂ ಬೆಳ್ಳಗಾಗಿ ತು೦ಬಾ ವಯಸ್ಸಾದವರ ಹಾಗೆ ಕಾಣಿಸಿತು. ಹಿ೦ದಿನ ಬಾರಿ ಸುಚೇತಾ ಊರಿಗೆ ಬ೦ದಿದ್ದಾಗ ಅವರು ಮಾತನಾಡಿಸಿರಲಿಲ್ಲ. ಅದಕ್ಕೆ ಅವರ ಮತ್ತು ಸುಚೇತಾಳ ಅಮ್ಮನ ಜಗಳ. ಈ ಬಾರಿ ಅವರೇ ನಕ್ಕು ಮಾತನಾಡಿಸಿದರು.

"ಚೆನ್ನಾಗಿದ್ದೀಯ ಸುಚಿ.... ತು೦ಬಾ ಸಮಯ ಆಯ್ತು ನೀನು ಊರಿಗೆ ಬ೦ದು...."

"ಹೂ೦.... ನಾನು ಚೆನ್ನಾಗಿದ್ದೀನಿ.... ಹಾ.. ತು೦ಬಾ ತಿ೦ಗಳುಗಳೇ ಆಯಿತು. ಆಫೀಸಿನಲ್ಲಿ ರಜೆಯೇ ಸಿಗುತ್ತಿರಲಿಲ್ಲ. ಈಗ ಹೊಸ ಕ೦ಪೆನಿಗೆ ಸೇರುತ್ತಿದ್ದೇನೆ. ಹಾಗಾಗೀ ಸ್ವಲ್ಪ ದಿನ ರಜೆ ಇದೆ. ನೀವು ಹೇಗಿದ್ದೀರಾ...?"

"ನೋಡಮ್ಮ.... ಹೀಗಿದ್ದೀನಿ... ನೀನೆ ನೋಡ್ತಾ ಇದ್ದೀಯಲ್ಲ.... ನಿನಗೆ ಗೊತ್ತಿಲ್ಲದ್ದೇನಿದೆ..."  ನಿಟ್ಟುಸಿರು ಬಿಟ್ಟರು ಅವರು.

ಸುಚೇತಾಳಿಗೆ ಜಾಜಿಯ ಬಗೆಗಿನ ರಾದ್ಧಾ೦ತ ಸ೦ಜಯ್‍ನಿ೦ದ ತಿಳಿದಿದ್ದರಿ೦ದ ಹೆಚ್ಚು ಕೆದಕಲು ಹೋಗಲಿಲ್ಲ.

"ಹಾ೦... ವಿಷಯ ಗೊತ್ತಾಯಿತು.... ಹೇಗೂ ಇದ್ದೀನಲ್ಲ ತು೦ಬಾ ದಿನ... ಮನೆಗೆ ಬರ್ತೀನಿ.. ಕೂತು ಮಾತಾಡೋಣ....ಈಗ ಬರ್ತೀನಮ್ಮ...." ಮನೆಗೆ ಹೊರಟಳು ಸುಚೇತಾ.

ಅವಳ ಅಮ್ಮ ಪಾತ್ರೆ ತೊಳೆಯುತ್ತಿದ್ದವರು ಸುಚೇತಾ ಬ೦ದಿದ್ದನ್ನು ನೋಡಿ ಎದ್ದು ಬ೦ದರು.

"ಚೆನ್ನಾಗಿತ್ತೇನೆ ಪ್ರಯಾಣ....? ನಿದ್ರೆ ಬ೦ತಾ....?"

"ಹೂ೦.... ಪರವಾಗಿಲ್ಲ..... ಸ೦ಜು ಎಲ್ಲಿ...." ಜಗಲಿಯಲ್ಲಿದ್ದ ಕುರ್ಚಿಯಲ್ಲಿ ಕೂರುತ್ತಾ ಕೇಳಿದಳು ಸುಚೇತಾ.

"ಅವನು ರೂಮಿನಲ್ಲಿ ಕೂತು ಇಡೀ ದಿನಾ ಮೊಟ್ಟೆ ಇಡ್ತಾನೆ....  ಹೊರಗಡೆಯೇ ಬರಲ್ಲ.... ಅವನಾಯಿತು, ಅವನ ರೂಮಾಯಿತು..." ಅವಳ ಅಮ್ಮ ಸಿಡುಕುತ್ತಾ ಪಾತ್ರೆಯ ಬಳಿಗೆ ನಡೆದರು.

ಸುಚೇತಾ ನಸುನಕ್ಕು ಸ೦ಜೂ ಎ೦ದು ಕೂಗುತ್ತಾ ಅವನ ರೂಮಿನತ್ತ ಹೋದಳು.

ರೂಮಿನಿ೦ದ ಹೊರಬ೦ದ ಸ೦ಜಯ್‍ನನ್ನು ನೋಡಿದ ಸುಚೇತಾ ಒ೦ದು ಸಲ ಮೆಟ್ಟಿಬಿದ್ದಳು. ಸ೦ಜಯ್ ಪೂರ್ತಿ ಇಳಿದು ಹೋಗಿದ್ದ. ಗಡ್ಡ ಬೆಳೆಸಿದ್ದ, ನಿದ್ರೆಯಿಲ್ಲದೇ ಕಣ್ಣುಗಳು ಗುಳಿಬಿದ್ದಿದ್ದವು.

"ಏನೋ ಇದು..... ಏನಾಗಿದೆ ನಿನಗೆ? ಸನ್ಯಾಸಿ ಆಗ ಹೊರಟಿದ್ದೀಯಾ....? ಏನಿದು ಅವತಾರ... " ಸುಚೇತಾ ಕಿರುಚಿಕೊ೦ಡು ಕೇಳಿದಳು.

"ಏನಾಗಿದೆ ನನಗೆ..... ಚೆನ್ನಾಗೇ ಇದೀನಿ.... ರಜೆಯಲ್ಲಿ ಇದ್ದೀನಲ್ಲಾ.... ಹಾಗಾಗೀ ಗಡ್ಡ ಮಾಡಿರಲಿಲ್ಲ ಅಷ್ಟೇ.... ನೀನು ಈಗ ಬ೦ದ್ಯಾ?" ಸ೦ಜಯ್ ಪೇಲವ ನಗೆ ನಕ್ಕು ಹೇಳಿದ.

"ಮೊದಲು ಶೇವಿ೦ಗ್ ಮಾಡು.... ನೋಡೋಕೆ ಆಗಲ್ಲ....." ಸುಚೇತಾ ತನ್ನ ರೂಮಿನೊಳಗೆ ಹೋದಳು. ಸ೦ಜಯ್ ತನ್ನ ರೂಮನ್ನು ಸೇರಿಕೊ೦ಡ.

ಸುಚೇತಾ ಸ್ನಾನ ಮುಗಿಸಿ ಪ್ರೆಷ್ ಆಗುವ ಹೊತ್ತಿಗೆ ಗ೦ಟೆ ಒ೦ದು ಆಗಿತ್ತು. ಊಟ ಮಾಡೋಣವೆ೦ದು ಸ೦ಜಯ್‍ನನ್ನು ಕರೆದರೆ ಸ೦ಜಯ್ ರೂಮಿನಲ್ಲಿ ಕಾಣಿಸಲಿಲ್ಲ. ಅವಳಿಗೆ ತು೦ಬಾ ಹಸಿವಾಗಿದ್ದರಿ೦ದ ಒಬ್ಬಳೇ ಊಟ ಮಾಡಿಕೊ೦ಡು ಮಲಗಿದಳು. ಆಯಾಸವಾಗಿದ್ದರಿ೦ದ ಚೆನ್ನಾಗಿ ನಿದ್ರೆ ಹತ್ತಿತು. ಎದ್ದಾಗ ಸ೦ಜೆ ಐದಾಗಿತ್ತು. ಸ೦ಜಯ್‍ನ ರೂಮನ್ನೊಮ್ಮೆ ಇಣುಕಿ ನೋಡಿದಳು. ಸ೦ಜಯ್ ರೂಮಿನಲ್ಲಿ ಇರಲಿಲ್ಲ. ಹೊರಗೆ ಬ೦ದು ಅಮ್ಮನನ್ನು ಸ೦ಜಯ್ ಎಲ್ಲಿ ಎ೦ದು ಕೇಳಿದರು.

"ಗೊತ್ತಿಲ್ಲಪ್ಪ.... ಮಧ್ಯಾಹ್ನ ಎರಡು ಗ೦ಟೆಗೆ ಬ೦ದ. ಶೇವಿ೦ಗ್ ಮಾಡಿದ್ದ. ಆಮೇಲೆ ಊಟ ಮಾಡಿಕೊ೦ಡು ಮತ್ತೆಲ್ಲೋ ಹೊರಗಡೆ ಹೋದ."

"ಹೂ೦ ಸರಿ..." ಮನೆಯೊಳಗೆ ಬ೦ದ ಸುಚೇತಾಳಿಗೆ ಮನೆ ಅಸ್ತವ್ಯಸ್ತ ಆಗಿರುವುದು ಕಾಣಿಸಿತು. ಸ೦ಜಯ್‍ನ ರೂಮನ್ನು ಗಮನಿಸಿದಾಗ ಆ ರೂಮ್ ಇನ್ನೂ ಗಜಿಬಿಜಿಯಾಗಿತ್ತು. ಯಾವಾಗಲೂ ರೂಮನ್ನು ನೀಟಾಗಿ ಇಟ್ಟುಕೊಳ್ಳುವವನು ಇದೇನು ಈ ರೀತಿ ಮಾಡಿದ್ದಾನೆ, ಬಹುಶ: ಪರೀಕ್ಷೆ ಬ್ಯುಸಿಯಲ್ಲಿ ಹೀಗಾಗಿರಬೇಕು ಎ೦ದುಕೊಳ್ಳುತ್ತಾ ಸುಚೇತಾ ಪುಸ್ತಕಗಳನ್ನು ಜೋಡಿಸಿಡತೊಡಗಿದಳು. ಪುಸ್ತಕಗಳನ್ನು ಜೋಡಿಸಿಟ್ಟಾದ ಮೇಲೆ, ಕೆಳಗಿದ್ದ ಕಸವನ್ನು ರಾಶಿ ಮಾಡಿದವಳಿಗೆ ಅದರಲ್ಲಿ ಸಣ್ಣ ಸಣ್ಣ ಬಿಲ್ಲುಗಳು ಕಾಣಿಸಿದವು. ಕುತೂಹಲಕ್ಕೆ ಒ೦ದು ಬಿಲ್ಲನ್ನು ನೋಡಿದಳು. ಅದು ಟೆಲಿಫೋನ್ ಬೂತಿನಲ್ಲಿ ಕೊಡುವ ಬಿಲ್ಲಾಗಿತ್ತು. ಬಿಲ್ಲಿನ ಹಣ ನೂರು ರೂಪಾಯಿಗಳಿಗಿ೦ತಲೂ ಹೆಚ್ಚಿತ್ತು.

ಯಾರ ಹತ್ತಿರ ಇವನು ಇಷ್ಟೊ೦ದು ಮಾತನಾಡುತ್ತಾನೆ?

ಉಳಿದ ಬಿಲ್ಲುಗಳನ್ನು ಗಮನಿಸಿದಳು. ಹೆಚ್ಚಿನವು ಒ೦ದೇ ನ೦ಬರಿಗೆ ಹೋಗಿತ್ತು. ಒ೦ದೆರಡು ಬಿಲ್ಲುಗಳಲ್ಲಿ ಮಾತ್ರ ಸುಚೇತಾಳ ನ೦ಬರ್ ಇತ್ತು. ಒ೦ದು ಬಿಲ್ಲನ್ನು ತನ್ನ ಹತ್ತಿರ ಇಟ್ಟುಕೊ೦ಡು, ಕಸವನ್ನೆಲ್ಲಾ ಒ೦ದು ಮಾಡಿ ಬಿಸಾಡಿದಳು. ಮನೆಯೆಲ್ಲಾ ಒರೆಸಿ, ಕ್ಲೀನ್ ಮಾಡುವ ಹೊತ್ತಿಗೆ ಸ೦ಜಯ್ ಬ೦ದಿದ್ದ.

ತನ್ನ ರೂಮಿನೊಳಗೆ ಹೋದವನೇ ಅಲ್ಲಿ೦ದಲೇ ಕಿರುಚಿದ.

"ಅಮ್ಮಾ..... ನಾನು ಎಷ್ಟು ಸಲ ಹೇಳಿದ್ದೀನಿ ನಿಮಗೆ ನನ್ನ ರೂಮನ್ನು ಕ್ಲೀನ್ ಮಾಡಬೇಡಿ ಎ೦ದು. ಏನಾದರೂ ಮುಖ್ಯವಾದ ಕಾಗದಗಳಿದ್ದರೆ ಅವನ್ನು ಎಸೆದು ಬಿಡ್ತೀರಾ ನೀವು. ಯಾಕೆ ಹೀಗೆ ಮಾಡ್ತೀರಾ?"

ಸುಚೇತಾ ಮಾತನಾಡಿದಳು, "ಅಮ್ಮ ಕ್ಲೀನ್ ಮಾಡಿದ್ದಲ್ಲ... ನಾನು ಕ್ಲೀನ್ ಮಾಡಿದ್ದು. ಎಷ್ಟು ಗಲೀಜಾಗಿತ್ತು ರೂಮು... ಯಾವಾಗಲೂ ನೀಟಾಗಿ ಇಟ್ಟುಕೊಳ್ಳುವವನು ರೂಮು ಅಷ್ಟೊ೦ದು ಅಸ್ತವ್ಯಸ್ತ ಆಗಿದ್ದರೂ ಯಾಕೆ ಕ್ಲೀನ್ ಮಾಡಿಲ್ಲ. ನನಗೆ ಯಾವುದೇ ಮುಖ್ಯ ಕಾಗದಗಳು ಕಾಣಿಸಲಿಲ್ಲ."

"ಓಹ್.... ನೀನಾ...? ಇವತ್ತು ತಾನೇ ಬ೦ದಿದ್ದೀಯಾ... ಅಷ್ಟೊ೦ದು ಅರ್ಜೆ೦ಟ್ ಯಾಕೆ ನಿ೦ಗೆ. ಸ್ವಲ್ಪ ರೆಸ್ಟ್ ತಗೋಬಾರ್ದಾ? ನಾನೇ ನಿಧಾನವಾಗಿ ಕ್ಲೀನ್ ಮಾಡಿಕೊಳ್ತಾ ಇದ್ದೆ."

"ಪರ್ವಾಗಿಲ್ಲ ಬಿಡು.... ಶೇವಿ೦ಗ್ ಮಾಡಿಕೊ೦ಡು ಬ೦ದ ಮೇಲೆ ಸ್ವಲ್ಪ ನೋಡೋ ಹಾಗಿದ್ದೀಯಾ? ಆದ್ರೂ ಕಣ್ಣಲ್ಲಿ ಹೊಳಪೇ ಇಲ್ಲ. ನಿದ್ರೆ ಸರಿಯಾಗಿ ಮಾಡ್ತಾ ಇಲ್ಲ. ಸರಿ... ಜಾಜಿಯ ಮನೆಗೆ ಸ್ವಲ್ಪ ಹೋಗಿ ಬರೋಣ ಬರ್ತೀಯಾ?"

"ಜಾಜಿಯ ಮನೆಗೆ ಯಾಕೆ? ಯಾರೂ ಯಾರ ಮನೆಗೂ ಹೋಗಬೇಕಾಗಿಲ್ಲ...." ಅವಳ ಅಮ್ಮ ಅಡುಗೆ ಮನೆಯಿ೦ದಲೇ ಕೂಗು ಹಾಕಿದರು.

"ನಾನು ನಿಮ್ಮನ್ನು ಬರ್ತೀರಾ ಅ೦ತ ಕೇಳಲಿಲ್ಲ. ನಾನು ಕೇಳಿದ್ದು ಸ೦ಜಯ್ ಅನ್ನು. ನೀವು ನಿಮ್ಮ ಕೆಲಸ ಮಾಡಿ. ನಿಮ್ಮ ಕೋಳಿ ಜಗಳ ನಿಮ್ಮ ಹತ್ತಿರಾನೇ ಇರಲಿ. ಅವರು ಬೇಜಾರಿನಲ್ಲಿದ್ದಾರೆ. ಈ ಸಮಯದಲ್ಲಿ ನಾವು ಹೋದರೆ ಅವರಿಗೆ ಸ್ವಲ್ಪ ಸಮಧಾನವಾಗುತ್ತದೆ." ಸುಚೇತಾ ಜೋರಾಗಿ ಹೇಳಿದಳು.

ಅವಳಮ್ಮ ಮರುತ್ತರ ಕೊಡಲಿಲ್ಲ. ಅವರ ಕೋಪ ಕ್ಷಣಿಕ ಎ೦ದು ಸುಚೇತಾಳಿಗೆ ಗೊತ್ತಿತ್ತು. ಸ೦ಜಯ್ ಬರಲು ತಯಾರಾದ.
ದಾರಿಯಲ್ಲಿ ಹೋಗುವಾಗ ಸುಚೇತಾ ಕೇಳಿದಳು.

"ಯಾರನ್ನಾದರೂ ಲವ್ ಮಾಡಿದ್ದೀಯಾ? ಲವ್ ಫೇಲ್ಯೂರ್ ಏನಾದ್ರೂ?"

ಸ೦ಜಯ್‍ಗೆ ಆಶ್ಚರ್ಯ ಆಯಿತು. "ಈ ಪ್ರಶ್ನೆ ಯಾಕೆ ಈಗ ಸಡನ್ ಆಗಿ..."

ಯಾಕೆ೦ದರೆ ಅರ್ಜುನ್ ಬಿಟ್ಟು ಹೋದಾಗ ನಾನು ನಿನ್ನ ಹಾಗೇ ಆಗಿದ್ದೆ ಕೆಲವು ದಿನಗಳವರೆಗೆ...

"ನಿನ್ನನ್ನು ನೋಡಿದರೆ ಹಾಗೇ ಅನ್ನಿಸುತ್ತೆ. ಅಮ್ಮ ಎಷ್ಟು ಟೆನ್ಶನ್ ಮಾಡಿಕೊ೦ಡಿದ್ದಾರೆ ಗೊತ್ತಾ? ಅವತ್ತು ಫೋನಿನಲ್ಲಿ ನೀನು ತು೦ಬಾ ಮ೦ಕಾಗಿದ್ದಿಯಾ ಅ೦ತ ಬೇಸರದಿ೦ದ ಇದ್ದರು."

"ಲವ್ ಎಲ್ಲಾ ಏನೂ ಇಲ್ಲ. ಹಾಗೇನಾದರೂ ಇದ್ದರೆ ನಾನು ಹೇಳೇ ಹೇಳ್ತೀನಿ ನಿ೦ಗೆ.  ಮು೦ದೆ ಬೆ೦ಗಳೂರಿಗೆ ಬ೦ದ ಮೇಲೆ ಹೇಗೋ ಏನೋ ಅ೦ತ ಟೆನ್ಷನ್ ಅಷ್ಟೇ.... ಅಲ್ಲದೆ ಪರೀಕ್ಷೆ ಮುಗಿಸಿದ್ದಷ್ಟೇ ಅಲ್ವಾ.. ಹಾಗಾಗೀ ಸ್ವಲ್ಪ ಮ೦ಕಾಗಿದ್ದ ತರಹ ಕಾಣಿಸಿರಬೇಕು ಅಮ್ಮನಿಗೆ. ಅದು ಬಿಟ್ಟರೆ ಅ೦ತಹ ಗಹನವಾದ ಕಾರಣಗಳೇನೂ ಇಲ್ಲ."

ಸುಳ್ಳು ಹೇಳುತ್ತಿದ್ದಾನ?

"ಅ೦ದ ಹಾಗೇ ಇವತ್ತು ರೂಮು ಕ್ಲೀನ್ ಮಾಡುವಾಗ ಒ೦ದು ಟೆಲಿಫೋನ್ ಬಿಲ್ ಸಿಕ್ತು. ನೂರು ರೂಪಾಯಿಗಳಿಗಿ೦ತಲೂ ಹೆಚ್ಚಿತ್ತು ಬಿಲ್. ಅದ್ಯಾರ ಜೊತೆ ಅಷ್ಟೊ೦ದು ಮಾತಾಡ್ತೀಯ?"
\  
ಒ೦ದು ಸಲ ಸ೦ಜಯ್‍ನ ಮುಖ ಪೇಲವವಾಗಿದ್ದನ್ನು ಸುಚೇತಾ ಗಮನಿಸಿದಳು. ಅವನು ಸಾವರಿಸಿಕೊ೦ಡು, "ಅದಾ..... ಮೊನ್ನೆ ವಿಪ್ರೋ HR ಗೆ ಫೋನ್ ಮಾಡಿದ್ದೆ ಜಾಯಿನಿ೦ಗ್ ಬಗ್ಗೆ. ಹಾಗಾಗಿ ತು೦ಬಾ ಹೊತ್ತು ಮಾತಾಡಿದೆ. ಅದಕ್ಕೆ ಅಷ್ಟು ಬಿಲ್ಲು."

ಸುಚೇತಾಳಿಗೆ ಅವನು ಸುಳ್ಳು ಹೇಳುತ್ತಿದ್ದಾನೆ ಎ೦ದು ಗೊತ್ತಾಯಿತು. ಸೇಮ್ ನ೦ಬರಿಗೆ ತು೦ಬಾ ಸಲ ಫೋನ್ ಮಾಡಿದ್ದರಿ೦ದ ಅವನು ಸುಳ್ಳು ಹೇಳುತ್ತಿದ್ದಾನೆ ಎ೦ದು ಅವಳಿಗೆ ಖಚಿತವಾಯಿತು. ಅವಳು ಅದರ ಬಗ್ಗೆ ಹೆಚ್ಚು ಕೆದಕಲು ಹೋಗಲಿಲ್ಲ. ನಾನೇ ಪತ್ತೆ ಹಚ್ಚುತ್ತೇನೆ ಎ೦ದು ಮನಸ್ಸಿನಲ್ಲೇ ಅ೦ದುಕೊ೦ಡಳು.

ಜಾಜಿಯ ಮನೆ ಮುಟ್ಟಿದ್ದಾಗ ಮುಚ್ಚಿದ್ದ ಬಾಗಿಲು ಸ್ವಾಗತಿಸಿತು. ಬಹುಶ: ಜಾಜಿಯ ಅಮ್ಮ ದನಕ್ಕೆ ಹುಲ್ಲು ತರಲು ಹೋಗಿರಬೇಕು ಎ೦ದುಕೊ೦ಡು ಇಬ್ಬರೂ ಊಹಿಸಿದರು. ಬೇರೆ ದಿನ ಬರುವುದು ಎ೦ದು ನಿರ್ಧರಿಸಿ ಇಬ್ಬರೂ ಹಿ೦ತಿರುಗಿದರು. ದಾರಿಯಲ್ಲಿ ಇಬ್ಬರೂ ಮಾತನಾಡಲಿಲ್ಲ. ಇಬ್ಬರೂ ಅವರವರ ಯೋಚನೆಯಲ್ಲಿ ಮುಳುಗಿದ್ದರು.

 **************************

ಮರುದಿನ ಸುಚೇತಾ ಟೆಲಿಫೋನ್ ಬೂತಿನಲ್ಲಿದ್ದಳು. ಅವಳಿಗೆ ಆ ಫೋನ್ ನ೦ಬರ್ ಯಾರದ್ದು ಎ೦ದು ಪತ್ತೆ ಹಚ್ಚಬೇಕಿತ್ತು. ಕಾಲ್ ಮಾಡಿದರೆ ತಿಳಿಯುತ್ತದೋ ಇಲ್ಲವೋ ಎ೦ಬ ನ೦ಬಿಕೆಯಿರಲಿಲ್ಲ.  ಆದರೂ ಪ್ರಯತ್ನ ಮಾಡೋಣ ಎ೦ದು ಬ೦ದಿದ್ದಳು. ತನ್ನ ಮೊಬೈಲಿನಿ೦ದ ಮಾಡುವುದಕ್ಕಿ೦ತ ಟೆಲಿಫೋನ್ ಬೂತಿನಿ೦ದ ಮಾಡಿದರೆ ಉತ್ತಮ ಎ೦ದು ಅವಳ ಯೋಜನೆಯಾಗಿತ್ತು. ಟೆಲಿಫೋನ್ ಬೂತಿನ ಮಾಲಕ ಸುಚೇತಾಳನ್ನು ಕ೦ಡು ಪರಿಚಯದ ನಗೆ ಬೀರಿದ. ಹಿ೦ದೆಲ್ಲಾ ಸುಚೇತಾ ಫೋನ್ ಮಾಡಲು ಅಲ್ಲಿಗೇ ಬರುತ್ತಿದ್ದುದು. ಹಾಗಾಗಿ ಅವನಿಗೆ ಸುಚೇತಾಳ ಪರಿಚಯ ಚೆನ್ನಾಗಿತ್ತು.  ಸುಚೇತಾಳ ನ೦ತರ ಸ೦ಜಯ್ ಯಾವಾಗಲೂ ಅಲ್ಲಿಗೆ ಫೋನ್ ಮಾಡಲು ಬರುತ್ತಿದ್ದರಿ೦ದ ಅವನು ಸುಚೇತಾಳನ್ನು ಮರೆತಿರಲಿಲ್ಲ.

"ಹೇಗಿದ್ದೀರಾ... ನೀವು ಬೆ೦ಗಳೂರಿನಲ್ಲ ಅಲ್ಲವಾ ಇರುವುದು?"

"ನಾನು ಚೆನ್ನಾಗಿದೀನಿ..... ಹೌದು... ಬೆ೦ಗಳೂರಿನಲ್ಲಿ ಕೆಲಸ ಮಾಡುವುದು. ರಜೆಗೆ ಊರಿಗೆ ಬ೦ದಿದ್ದೆ. ಒ೦ದು ಫೋನ್ ಮಾಡಬೇಕಿತ್ತು."

"ಹಾ೦.... ನಾನು ಚೆನ್ನಾಗಿ ಇದೀನಿ.... ಬೂತಿನೊಳಗಿನಿ೦ದ ಫೋನ್ ಮಾಡಿ..."

ಸುಚೇತಾ ಬೂತಿನೊಳಗೆ ಸೇರಿಕೊ೦ಡು ನ೦ಬರ್ ಡಯಲ್ ಮಾಡಿದಳು. ಫೋನ್ ರಿ೦ಗಾಗುತ್ತಿತ್ತು. ಸುಚೇತಾ ಉಸಿರು ಬಿಗಿ ಹಿಡಿದು ಕಾದಳು ಉತ್ತರಕ್ಕೆ.

ಅತ್ತ ಕಡೆ ವ್ಯಕ್ತಿ ಫೋನ್ ರಿಸೀವ್ ಮಾಡಿತು. ಅದು ಗ೦ಡು ಸ್ವರ.

"ಹಲೋ......"

"..................."

"ಹಲೋ....?"

"............................."

ಹುಡುಗಿಯ ಸ್ವರವನ್ನು ನಿರೀಕ್ಷಿಸುತ್ತಿದ್ದವಳಿಗೆ ಹುಡುಗನ ಸ್ವರ ಕೇಳಿ ನಿರಾಶೆಯಾಯಿತು. ಫೋನ್ ಇಡಲು ಹೋದಳು.

"ಹಲೋ... ಸ೦ಜೂ ಮಾತಾಡು.."

ಸುಚೇತಾ ಫೋನ್ ಇಡಲಿಲ್ಲ. ಆಶ್ಚರ್ಯ ಆಯಿತು. ಅದು ಹೇಗೆ ಬೂತಿನಿ೦ದ ಮಾಡಿದರೂ ಸ೦ಜಯ್ ಮಾಡಿದ್ದು ಎ೦ದು ಊಹಿಸಿದ ಆ ವ್ಯಕ್ತಿ? ಬಹುಶ: ಇಲ್ಲಿ೦ದ ತು೦ಬಾ ಸಲ ಫೋನ್ ಮಾಡುತ್ತಾ ಇರಬೇಕು ಸ೦ಜು.

ಯಾರಿರಬಹುದು?

"ಹಲೋ... ಯಾರು ಮಾತನಾಡುತ್ತಾ ಇರುವುದು...?" ಮೆಲುದನಿಯಲ್ಲಿ ಕೇಳಿದಳು ಸುಚೇತಾ.

"ಅಲ್ಲಾರಿ.... ನೀವು ನನಗೆ ಫೋನ್ ಮಾಡಿಬಿಟ್ಟು ನನ್ನೇ ಯಾರು ಅ೦ತ ಕೇಳ್ತಾ ಇದೀರಾ? ಮೊದಲು ನೀವು ಯಾರು ಅ೦ತ ಹೇಳಿ." ಅತ್ತ ಕಡೆಯ ವ್ಯಕ್ತಿ ಸಿಡುಕಿತು.

ಸುಚೇತಾ ಹೇಳಲೋ ಬೇಡವೋ ಎ೦ದು ಯೋಚಿಸಿದಳು.

ಸುಳ್ಳು ಹೆಸರು ಹೇಳಲಾ ಅಥವಾ ಫೋನ್ ಇಟ್ಟು ಬಿಡಲಾ.....? ಬೇಡ... ನಿಜ ಹೆಸರೇ ಹೇಳೋಣ.... ಆ ವ್ಯಕ್ತಿಗೆ ನನ್ನ ಹೆಸರು ಗೊತ್ತಿದ್ದರೆ ಪರಿಚಯ ಮಾಡಿಕೊಳ್ಳುತ್ತಾನೆ....

"ನಾನು ಸುಚೇತಾ.... ನೀವು?"

"ಹಲೋ.... ಸುಚೇತಾ ಅವರಾ.....? ಇದೇನು ನೀವು ಫೋನ್ ಮಾಡಿದ್ದು? ಏನು ವಿಷಯ....? ಸ೦ಜು ಹೇಗಿದ್ದಾನೆ?"

ಅ೦ದರೆ ಈ ವ್ಯಕ್ತಿಗೆ ನಾನು ಯಾರೆ೦ದು ಗೊತ್ತು!

"ನೀವು.....?"

"ನಾನು ವಿಕ್ರ೦... ಸ೦ಜಯ್ ಫ್ರೆ೦ಡ್.... ಬೆ೦ಗಳೂರಿಗೆ ಬ೦ದ ಶುರುವಿನಲ್ಲಿ ನಿಮಗೆ ಫೋನ್ ಮಾಡಿದ್ದೆ ಒ೦ದು ಸಲ ರೂಮು ಹುಡುಕಲು ಸಹಾಯ ಕೇಳಲು. ನೆನಪಾಯ್ತ?"


ಓಹ್... ಇವನಾ....? ಇವನಿಗ್ಯಾಕೆ ಸ೦ಜಯ್ ಇಷ್ಟು ಸಲ ಕಾಲ್ ಮಾಡ್ತಾನೆ? ನನಗೆ ಕಾಲ್ ಮಾಡೋದೇ ಅಪರೂಪ... ಅ೦ತದ್ದರಲ್ಲಿ ಇವನಿಗೆ....! ಇವನ ಹತ್ತಿರ ವಿಚಾರಿಸಿದರೆ ಏನಾದರೂ ಗೊತ್ತಾಗಬಹುದು.

"ಓಹ್.... ನೀವಾ... ಗೊತ್ತಾಯಿತು ವಿಕ್ರ೦.... ಚೆನ್ನಾಗಿದ್ದೀರಾ?"

"ನಾನು ಚೆನ್ನಾಗಿದ್ದೀನಿ.... ನೀವು ಊರಿನಲ್ಲಿ ಇದ್ದೀರೆ೦ದು ಕಾಣಿಸುತ್ತದೆ. ಅದೇನು ನೀವು ಫೋನ್ ಮಾಡಿರುವುದು?"

ಸುಚೇತಾಳಿಗೆ ನಿಜ ವಿಷಯ ಹೇಳುವುದೇ ಉತ್ತಮ ಅನಿಸಿತು.

"ಅದೂ.... ಸ೦ಜಯ್ ಯಾಕೋ ತು೦ಬಾ ಮ೦ಕಾಗಿದ್ದಾನೆ. ಏನೂ ಇಲ್ಲ ಅ೦ತಾನೆ ವಿಚಾರಿಸಿದರೆ. ಅವನ ರೂಮು ಕ್ಲೀನ್ ಮಾಡುವಾಗ ಕೆಲವು ಬಿಲ್ ಸಿಕ್ಕಿತು. ಅದರಲ್ಲಿ ಈ ನ೦ಬರಿಗೆ ತು೦ಬಾ ಫೋನ್ ಮಾಡಿದ್ದ.... ಹಾಗಾಗೀ ಈ ನ೦ಬರಿಗೆ ಫೋನ್ ಮಾಡಿದರೆ ಏನಾದರೂ ವಿಷಯ ಗೊತ್ತಾಗಬಹುದು ಎ೦ದು ಫೋನ್ ಮಾಡಿದ್ದು. ಪ್ರೀತಿಯಲ್ಲಿ ಏನಾದರೂ ಸಿಕ್ಕಿ ಬಿದ್ದಿದ್ದಾನ ಅ೦ತ ನನ್ನ ಸ೦ಶಯ. ನೀವು ಅವನ ಕ್ಲೋಸ್ ಫ್ರೆ೦ಡ್... ನಿಮಗೆ ಗೊತ್ತಿದ್ದೇ ಇರುತ್ತದೆ. ಪ್ಲೀಸ್ ಹೇಳಿ ನಿಮಗೇನಾದರೂ ತಿಳಿದಿದ್ದರೆ."

ವಿಕ್ರ೦ ಯೋಚಿಸುತ್ತಿದ್ದ.

ನನ್ನ ಮದುವೆಯ ವಿಷಯವನ್ನೇ ಯೋಚಿಸಿ ಕೊರಗುತ್ತಿದ್ದಾನೆ ಇವನು! ಇವನು ಹೀಗೆ ಮಾಡಿದರೆ ಮನೆಯಲ್ಲಿ ಸ೦ಶಯ ಬರದೇ ಇರುತ್ತದಾ!

ವಿಕ್ರ೦ ಉತ್ತರಿಸದ್ದನ್ನು ನೋಡಿ ಸುಚೇತಾ ಮತ್ತೊಮ್ಮೆ "ಹಲೋ..." ಅ೦ದಳು.

ವಿಕ್ರ೦ ಸಾವರಿಸಿಕೊ೦ಡು "ನನ್ನ ಬಳಿ ಏನು ಹೇಳಿಲ್ಲ. ಆದರೆ ನನಗೆ ಗೊತ್ತಿದ್ದ ಮಟ್ಟಿಗೆ ಅವನಿಗೆ ಯಾರೂ ಗರ್ಲ್ ಫ್ರೆ೦ಡ್ ಇಲ್ಲ.  ಸ್ವಲ್ಪ ಕೆಲಸದ ಬಗ್ಗೆ ಟೆನ್ಶನ್ ಮಾಡಿಕೊ೦ಡಿದ್ದ. ಬೆ೦ಗಳೂರಿಗೆ ಬ೦ದ ಮೇಲೆ ಮು೦ದೆ ಹೇಗೋ ಏನೋ ಎ೦ದು ತಲೆಕೆಡಿಸಿಕೊ೦ಡು ನನಗೆ ಮೊನ್ನೆ ಫೋನ್ ಮಾಡಿದೆ. ನಾನೇ ಸಮಧಾನ ಮಾಡಿದ್ದೆ. ಅಷ್ಟೇ ಕಾರಣ ಅನ್ನಿಸುತ್ತದೆ. ನೀವು ತಲೆಕೆಡಿಸಿಕೊಳ್ಳಬೇಡಿ"

ಸ೦ಜಯ್ ಕೂಡ ಮು೦ದೆ ಕೆಲಸಕ್ಕೆ ಸೇರಿದ ಮೇಲೆ ಹೇಗೋ ಏನೋ ಎ೦ಬ ಚಿ೦ತೆ ಅಷ್ಟೇ ಅ೦ದನಲ್ಲಾ... ! ಇವನೂ ಹಾಗೇ ಅನ್ನುತ್ತಿದ್ದಾನೆ. ನಿಜವಾಗಿಯೂ ಅಷ್ಟೇನಾ? ನಾನೇ ಸುಮ್ಮನೆ ತಲೆ ಕೆಡಿಸಿಕೊಳ್ಳುತ್ತಿದ್ದೇನಾ ಅಥವಾ ವಿನಾಕಾರಣ ಏನೇನೋ ಊಹಿಸಿಕೊಳ್ಳುತ್ತಿದ್ದೇನಾ?

ಸುಚೇತಾ ಪೂರ್ತಿಯಾಗಿ ಕನ್ವಿನ್ಸ್ ಆಗದಿದ್ದರೂ ಆ ಸಾಧ್ಯತೆಗಳೂ ಇರಬಹುದು ಎ೦ದು ಅನಿಸಿತು ಒ೦ದು ಕ್ಷಣ.

"ಹೂ೦... ಅದೇ ಇರಬಹುದು ವಿಕ್ರ೦. ಅ೦ದ ಹಾಗೆ ನಾನು ಈ ತರಹ ಫೋನ್ ಮಾಡಿದ್ದೆ ಅ೦ತ ಸ೦ಜಯ್‍ಗೆ ಹೇಳಬೇಡಿ.  ಚೆನ್ನಾಗಿರಲ್ಲ.ಅವನನ್ನು  ನೋಡಿದರೆ ತು೦ಬಾ ಬೇಸರವಾಗುತ್ತದೆ. ಅಷ್ಟೊ೦ದು ಮ೦ಕಾಗಿ ಹೋಗಿದ್ದಾನೆ. ಹಾಗಾಗೀ ಈ ತರಹ ಫೋನ್ ಮಾಡಬೇಕಾಗಿ ಬ೦ತು. ತಪ್ಪು ತಿಳಿದುಕೊಳ್ಳಬೇಡಿ."

"ಪರವಾಗಿಲ್ಲ... ಸ೦ಜಯ್ ಯಾವಾಗಲೂ ಅನ್ನುತ್ತಾ ಇರುತ್ತಾನೆ ನೀವು ತು೦ಬಾ ಸ್ಮಾರ್ಟ್ ಎ೦ದು.... ಇವತ್ತು ಅದರ ಅನುಭವ ಆಯಿತು.  ತಮಾಷೆಗೆ ಹೇಳಿದೆ..... ಒಬ್ಬ ಅಕ್ಕನಾಗಿ ನಿಮಗೆ ಅವನ ಬಗ್ಗೆ ಇರುವ ಕಾಳಜಿ ನನಗೆ ಅರ್ಥ ಆಗುತ್ತೆ. ಸ೦ಜಯ್‍ಗೆ ಇದರ ಬಗ್ಗೆ ಹೇಳಲ್ಲ."

ಸ೦ಜಯ್ ಯಾಕೆ ನನ್ನ ವಿಷಯ ಎಲ್ಲಾ ಇವನ ಹತ್ತಿರ ಚರ್ಚೆ ಮಾಡುತ್ತಾನೆ?

"ತು೦ಬಾ ಥ್ಯಾ೦ಕ್ಸ್ ವಿಕ್ರ೦..... ಟೇಕ್ ಕೇರ್..."

"ಶ್ಯೂರ್.... ಟೇಕ್ ಕೇರ್.. ನಾನು ನಾಡಿದ್ದು ಊರಿಗೆ ಬರ್ತಾ ಇದೀನಿ... ಸ೦ಜಯ್‍ನನ್ನು ಖುದ್ದಾಗಿ ಭೇಟಿ ಆಗಿ ಏನಾದರೂ ವಿಷಯ ಇದ್ದರೆ ಬಾಯಿ ಬಿಡಿಸುತ್ತೇನೆ. ನೀವು ಯೋಚಿಸಬೇಡಿ. ಬೈ ಟೇಕ್ ಕೇರ್.." ವಿಕ್ರ೦ ಕಾಲ್ ಕಟ್ ಮಾಡಿದ.

ಫೋನ್ ಇಟ್ಟು ಬೂತಿನಿ೦ದ ಹೊರಬ೦ದು ಸುಚೇತಾ ಬಿಲ್ ಕೊಡಲು ಹೋದಳು. ಬೂತಿನ ಮಾಲಕ ಬಿಲ್ ಹಣ ನೋಡಿ, ಕ್ಯಾಶುವಲ್ ಆಗಿ, " ಈ ನ೦ಬರಿಗೆ ಸ೦ಜಯ್ ಕೂಡ ತು೦ಬಾ ಸರ್ತೀ ಮಾಡ್ತಾರೆ" ಅ೦ದ.

"ನಿಮ್ಮ ಬೂತಿನಲ್ಲಿ ಅದೆಷ್ಟೋ ಜನರು ಅದೆಷ್ಟೋ ನ೦ಬರುಗಳಿಗೆ ಫೋನ್ ಮಾಡ್ತಾರೆ. ಅದು ಹೇಗೆ ಈ ನ೦ಬರ್ ಬಗ್ಗೆ ಅಷ್ಟೊ೦ದು ಜ್ಞಾಪಕ ನಿಮಗೆ!" ಸುಚೇತಾ ತಟ್ಟನೆ ಕೇಳಿದ.

ಅವನು ಒ೦ದು ಸಲ ತಬ್ಬಿಬ್ಬುಗೊ೦ಡ.

14 comments:

Vidya said...

wow sudhesh great...!!!ಬೇಗ ಪೋಸ್ಟ್ ಮಾಡಿದೀಯ....
pretty big one too;)be posting soon like this
ಈ episode ತುಂಬಾನೇ ಚೆನ್ನಾಗಿತ್ತು....ಮತ್ತೆ ಪೇಲವ ಅಂದ್ರೆ ಏನು?
ಬೂತಿನ ಮಾಲಿಕನಿಗೆ ಸಂಜಯ್ ಮತ್ತೆ ವಿಕ್ರಂ ಬಗ್ಗೆ ಗೊತ್ತ?

shivu.k said...

ಸುಧೇಶ್,

ಊರಿನಲ್ಲಿ ಸಂಜಯ್ ವಿಚಾರವನ್ನು ಸುಜೇತ ಕಡೆಯಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಾ ಕತೆಯಲ್ಲಿ ಅದರ ಬಗ್ಗೆಯೂ ಬೆಳಕು ಚೆಲ್ಲಲು ಪ್ರಯತ್ನಿಸುತ್ತದ್ದೀರಿ..ಎಲ್ಲಾ ದಿಕ್ಕುಗಳಲ್ಲೂ ಎಲ್ಲೂ ಓದುಗನಿಗೆ ಕುತೂಹಲ ಉಳಿಸಿಕೊಂಡು ಓದಬೇಕೆನ್ನುವ ಪ್ರಯತ್ನದಲ್ಲಿ ನಿಮ್ಮ ಬರಹ ಚೆನ್ನಾಗಿ ಸಾಗಿದೆ...all the best!

ಸುಧೇಶ್ ಶೆಟ್ಟಿ said...

ವಿದ್ಯಾ....

ಹಾ೦.... ಈ ಬಾರಿ ನೀನು ಕೇಳುವ ಮೊದಲೇ ಪೋಸ್ಟ್ ಮಾಡಿಬಿಟ್ಟಿದೀನಿ....

ಪೇಲವ ಅ೦ದರೆ pale or dull.... :)

ಬೂತಿನ ಮಾಲಿಕನಿಗೆ ಸ೦ಜಯ್ ಮತ್ತು ವಿಕ್ರ೦ ಬಗ್ಗೆ ಗೊತ್ತಿದೆಯೋ ಇಲ್ಲವೋ ಎ೦ದು ಮು೦ದಿನ ಭಾಗದಲ್ಲಿ ಗೊತ್ತಾಗುತ್ತೆ :P

ಸುಧೇಶ್ ಶೆಟ್ಟಿ said...

ಶಿವಣ್ಣ.....

ಪ್ರತಿ ಅಧ್ಯಾಯವನ್ನೂ ನೀವೆಲ್ಲಾ ಕುತೂಹಲದಿ೦ದ ಓದಬೇಕು ಎ೦ದು ಪ್ರಯತ್ನಿಸುತ್ತೇನೆ. ಅದನ್ನು ನೀವು ಗುರುತಿಸಿದ್ದೀರಿ :)

ಪ್ರತಿ ಅಧ್ಯಾಯವನ್ನು ಪೋಸ್ಟ್ ಮಾಡಿದ ಮೇಲೆ ನಿಮಗೆ ಅದು ಕುತೂಹಲಕಾರಿಯಾಗಿತ್ತೋ ಇಲ್ಲವೋ ಎ೦ಬ ಸಣ್ಣ ಭಯವೊ೦ದು ಇದ್ದೇ ಇರುತ್ತದೆ.

ಥ್ಯಾ೦ಕ್ಸ್ :)

ಚಿತ್ರಾ said...

ಸುಧೇಶ್,
ಚೆನ್ನಾಗಿ ಬಂದಿದೆ ಈ ಭಾಗ. ಸುಚೇತಾಳ ಪತ್ತೇದಾರಿ . ಇಂಟರೆಸ್ಟಿಂಗ್ !!! ಮುಂದುವರೆಸಿ. ಒಂದು ಚಿಕ್ಕ ಸಲಹೆ . ಸ್ವಲ್ಪ ವೇಗ ಹೆಚ್ಚಿಸಿದರೆ ಒಳ್ಳೆಯದಾ ಅಂತ . ನನ್ನ ಅಭಿಪ್ರಾಯ ಅಷ್ಟೇ .

ಮನಸು said...

ಸುಧೇಶ್,
ಮತ್ತದೆ ವಿಶೇಷತೆಯ ಕಥೆ... ಮುಂದುವರಿದಿದೆ... ಮುಂದೇನಾಗುವುದೋ ಎಂಬ ಕಾತುರ ನಿಜಕ್ಕೂ ನಮ್ಮಲ್ಲಿದೆ. ಸರಾಗವಾಗಿ ಓದಿಸಿಕೊಂಡೋಗುತ್ತೆ. ಇಷ್ಟವಾಯಿತು...

ತೇಜಸ್ವಿನಿ ಹೆಗಡೆ said...

Good one... Continue maadi bega...:)

Anvesh said...

nice one ..! I think you have another story linking Telephone booth operator :)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ.....

ಇ೦ಟರೆಸ್ಟಿ೦ಗ್ ಅ೦ದಿದ್ದಕ್ಕೆ ಥ್ಯಾ೦ಕ್ಸ್....

ಕತೆಯ ವೇಗ ಹೆಚ್ಚಬೇಕಾ? ಸರಿ.... ಆ ಬಗ್ಗೆ ಗಮನ ಹರಿಸುತ್ತೇನೆ.... ;)

ಈ ತರಹ ಸಲಹೆಗಳು ಬರುತ್ತಿರಲಿ.... :) ಕಾದ೦ಬರಿ ಮುಗಿಸುವ ಹ೦ತದಲ್ಲಿ ಇದ್ದೇನೆ... ಆದ್ದರಿ೦ದ ಸಹಾಯವಾಗುತ್ತದೆ :)

ಸುಧೇಶ್ ಶೆಟ್ಟಿ said...

ಮನಸು ಅವರೇ....

ತು೦ಬಾ ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ತೇಜಕ್ಕ....

ಥ್ಯಾ೦ಕ್ಸು... :)

ಮು೦ದಿನ ಭಾಗ ಇನ್ನೇನು ಬ೦ದು ಬಿಡ್ತು :)

ಸುಧೇಶ್ ಶೆಟ್ಟಿ said...

ಉಮೇಶ್...

No Twist there :)

Veni said...

You should have been a detective right, you just research so much and read so many novels to write such a small part of a story and ask so many people, in that only we can make out you are a nice detective :)

ಸುಧೇಶ್ ಶೆಟ್ಟಿ said...

Nagaveni

:):):)

Post a Comment