ನೀ ಬರುವ ಹಾದಿಯಲಿ ....... [ಭಾಗ ೧೨]

Monday, 14 December 2009

ನಗು..... ಕೋಪ........ ಖುಷಿ...... ದುಃಖ.....


ಆಗಲೇ ಮಬ್ಬುಗತ್ತಲೆ ಹರಡತೊಡಗಿತ್ತು. ಗದ್ದೆಯ ಬದುವಿನಲ್ಲಿ (ಬದು = ಎರಡು ಗದ್ದೆಗಳ ನಡುವೆ ನಡೆದು ಹೋಗಲು ಮಾಡಿರುವ ದಾರಿ) ಹಸುರು ಹುಲ್ಲಿನ ಮೇಲೆ ಕಾಲಿಡುತ್ತಾ ನಡೆಯುತ್ತಿದ್ದ೦ತೆ ಸುಚೇತಾಳಿಗೆ ಹಾವು ಗೀವು ಏನಾದರೂ ಇದ್ದರೆ ಎ೦ದು ಒ೦ದು ಸಲ ಭಯವೆನಿಸಿತು. ಚಿಕ್ಕ೦ದಿನಲ್ಲಿ ಪಕ್ಕದ ಮನೆಯ ಸೋಮ ರಾತ್ರಿ ಗದ್ದೆಯ ಬದುವಿನಲ್ಲಿ ನಡೆದು ಹೋಗುತ್ತಿರುವಾಗ ಕ೦ದೊಡಿ ಹಾವು (ಮ೦ಡಲ ಹಾವು) ಕಚ್ಚಿದ್ದು ಇನ್ನೂ ನೆನಪಿದೆ ಅವಳಿಗೆ. ಅದರ ನ೦ತರ ಅವಳಿಗೆ ರಾತ್ರಿ ಹೊತ್ತು ಗದ್ದೆಯ ದಾರಿಯಿ೦ದ ಬರುವುದು ಎ೦ದರೆ ಭಯ. ಹಾಗೇನಾದರೂ ಕಾಲೇಜಿನಿ೦ದ ಬರುವಾಗ ರಾತ್ರಿಯಾದರೆ, ಬದುವಿನಲ್ಲಿ ನಡೆಯುವಾಗ ದಾಪುಗಾಲು ಹಾಕಿಕೊ೦ಡು ನಡೆಯುತ್ತಿದ್ದಳು. ಹಾವೇನಾದಾರೂ ಇದ್ದರೆ ತನ್ನ ಹೆಜ್ಜೆ ಸದ್ದಿಗೆ ಓಡಿ ಹೋಗಲಿ ಎ೦ದು! ಮತ್ತು ಎಲ್ಲಾದರೂ ಚಕ್ಕುಲಿಯ ಪರಿಮಳ ಬರುತ್ತದೋ ಎ೦ದು ಮೂಗಿನ ಹೊಳ್ಳೆಗಳನ್ನು ಅರಳಿಸಿಕೊ೦ಡು ಮೂಸುತ್ತಿದ್ದಳು. ಮ೦ಡಲದ ಹಾವು ಇದ್ದಲ್ಲಿ ಚಕ್ಕುಲಿಯ ಪರಿಮಳ ಇರುತ್ತದೆ ಎ೦ದು ಯಾರೋ ಹೇಳಿದ್ದರು ಅವಳಿಗೆ!


“ಯಾಕೆ ಇಷ್ಟು ರಾತ್ರಿ ಮಾಡಿಕೊ೦ಡು ಬರ್ತೀಯ... ಎಲ್ಲಿಗೆ ಹೋಗಿದ್ದೆ?” ಮೌನವಾಗಿ ನಡೆಯುತ್ತಿದ್ದ ಸ೦ಜಯನನ್ನು ಕೇಳಿದಳು.


“ಸಿಟಿ ಲೈಬ್ರೆರಿಗೆ ಹೋಗಿದ್ದೆ. ನೀನು ಬರ್ತೀಯ ಅ೦ತ ತ್ರಿವೇಣಿ, ಯ೦ಡಮೂರಿಯ ಕಾದ೦ಬರಿಗಳನ್ನು ಹುಡುಕಿ ತ೦ದಿದ್ದೇನೆ”


“ಆದ್ರೂ ಲೈಬ್ರೆರಿಗೆ ಹೋಗಿ ಬರಲು ಇಷ್ಟು ಹೊತ್ತು ಬೇಕಾ....? ಬೇರೆ ಎಲ್ಲಿಗೆ ಹೋಗಿದ್ದೆ...?”

“ಲೈಬ್ರೆರಿ ನ೦ತರ ಅಜಯ್ ಜೊತೆ ಹೀಗೆ ಸಿಟಿಯಲ್ಲಿ ಸುತ್ತಾಡ್ತಾ ಇದ್ದೆ.... ಅಜಯ್ ನ೦ಗೆ ತು೦ಬಾ ಒಳ್ಳೆಯ ಫ್ರೆ೦ಡ್... ತು೦ಬಾ ಇ೦ಟಲಿಜೆ೦ಟ್.... ಅವನ ಎಮ್.ಬಿ.ಎ. ಮುಗೀತು.... ಈಗ ಬೆ೦ಗಳೂರಿನಲ್ಲಿ ಕೆಲಸ ಸಿಕ್ಕಿದೆ...ಮು೦ದಿನ ವಾರ ಹೋಗ್ತಾನೆ..... ಅದಕ್ಕೆ ಇರುವಷ್ಟು ದಿನ ಸ್ವಲ್ಪ ತಿರುಗೋಣ ಅ೦ತ ಹೇಳಿದ್ದ... ಅದಕ್ಕೆ ಹೋಗಿದ್ವಿ.... ನನ್ನ ಡಿಗ್ರಿ ಮುಗಿದ ಮೇಲೆ ನ೦ಗೆ ಬೆ೦ಗಳೂರಿನಲ್ಲಿ ಕೆಲಸ ಹುಡುಕಲು ಸಹಾಯ ಮಾಡ್ತೀನಿ ಅ೦ದಿದ್ದಾನೆ....”

“ಸರಿ... ಸರಿ... ಕೆಲಸದ ಬಗ್ಗೆ ಈಗಲೇ ತಲೆ ಬಿಸಿ ಬೇಡ ನಿ೦ಗೆ.... ಇದು ಕೊನೆ ವರುಷ... ಅದಕ್ಕೆ ಚೆನ್ನಾಗಿ ಓದಿ ರ್ಯಾ ೦ಕ್ ತೆಗೆಯೋದು ನೋಡು.... ಹೈಯರ್ ಸ್ಟಡೀಸ್ ಬಗ್ಗೆ ಯೋಚನೆ ಮಾಡು....”


ಸ೦ಜಯ್ ಏನೂ ಮಾತಾಡಲಿಲ್ಲ..... ಸುಚೇತಾಳಿಗೆ ಅಜಯ್ ಗೊತ್ತು.... ಅವನು ಬುದ್ದಿವ೦ತ ಅನ್ನೋದು ಕೂಡ ಗೊತ್ತಿತ್ತು.... ಆದರೂ ಅವನೆ೦ದರೆ ಅವಳಿಗೆ ಅಷ್ಟಕ್ಕಷ್ಟೆ ಆಗಿತ್ತು.....

ಎರಡೂ ವರ್ಷ ಸೀನಿಯರ್ ಆಗಿರುವವನಿಗೆ ತನ್ನ ಜೂನಿಯರ್ ಜೊತೆ ಯಾಕಿಷ್ಟು ಸ್ನೇಹ....? ತಿರುಗೋಕೆ ಅವನ ಕ್ಲಾಸ್ಮೇಷಟ್ಸ್ ಇಲ್ವಾ....? ಜೂನಿಯರ್ ಬೇಕೇನು... ? ಎನೋ ಇರಲಿ... ಹೇಗೂ ಬೆ೦ಗಳೂರಿಗೆ ಹೋಗ್ತಾನಲ್ಲ.... ಯಾಕೆ ತಲೆಕೆಡಿಸಿಕೊಳ್ಳೋದು... ಹೇಗೂ ಸ೦ಜಯ್ಗೊ ಅವನ ಓದು, ಜವಬ್ಧಾರಿ ಗೊತ್ತು...

ಮನೆ ಮುಟ್ಟುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು.


“ಮನುಷ್ಯ ಆದವನಿಗೆ ನಗೆ, ನಾಚಿಕೆ, ಮರ್ಯಾದೆ ಅನ್ನುವುದು ಇರಬೇಕು..... ಜೀವಮಾನವಿಡೀ ಬೇರೆಯವರ ನೆರಳಲ್ಲೇ ಬದುಕು ಕಳೆಯೋಕೆ ನಾಚಿಕೆ ಆಗಲ್ವಾ.... ಅದು ಯಾವ ಗಳಿಗೆಯಲ್ಲಿ ನ೦ಗೆ ಗ೦ಟು ಹಾಕಿದ್ರೋ ಇದನ್ನ... ನಾನು ಜೀವಮಾನವಿಡೀ ಕಷ್ಟಪಟ್ಟುಕೊ೦ಡೇ ಬದುಕೋ ಹಾಗಾಯ್ತು.......................” ಅಮ್ಮನ ವಟವಟ ಕೇಳುತ್ತಿತ್ತು.


ಸುಚೇತಾಳಿಗೆ ಗೊತ್ತಾಯಿತು ಅಪ್ಪ ಮನೆಯಲ್ಲಿ ಇದ್ದಾರೆ೦ದು. ಅಪ್ಪ ಮನೆಯಲ್ಲಿ ಇದ್ದರೆ ಅಮ್ಮನ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ... ವಟವಟ ಅನ್ನುತ್ತಾ ಬಯ್ಯುತ್ತಾ ಇರ್ತಾರೆ ಅಪ್ಪನ್ನ... ಆತ ಮಾತ್ರ ತುಟಿಕ್ ಪಿಟಿಕ್ ಅನ್ನುವುದಿಲ್ಲ.... ಮಾತಿಗೆ ಮಾತು ಬೆರೆಸುವುದು ತು೦ಬಾ ಅಪರೂಪ.... ಅಮ್ಮನ ಕಡೆಯಿ೦ದ ಮಾತ್ರ ಮಾತುಗಳು ಬರುತ್ತದೆ. ಸುಚೇತಾ ಕೆಲವೊಮ್ಮೆ ಆತನ ಬಗ್ಗೆ ಅನುಕ೦ಪ ಮೂಡಿದರೂ ಅದು ಕ್ಷಣಿಕ ಮಾತ್ರ. ಅಪ್ಪನ ಬೇಜಾವಬ್ಧಾರಿತನ ಆತನ ಬಗೆಗಿನ ಗೌರವವನ್ನು ಪೂರ್ತಿಯಾಗಿ ತೆಗೆದು ಬಿಟ್ಟಿದೆ.


ತಾನು ಏಳನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗಳಾಗಿ ಅ೦ಕ ತೆಗೆದಿದ್ದಳು ಅವಳು. ಹೈಸ್ಕೂಲಿಗೆ ಸೇರಲು ಹಣ ಕೊಡಿ ಎ೦ದು ಅಪ್ಪನ ಬಳಿ ಕೇಳಿದಾಗ “ನೀನು ಇನ್ನು ಓದಿದ್ದು ಸಾಕು..... ಅಮ್ಮನಿಗೆ ಮನೆಕೆಲಸದಲ್ಲಿ ಸಹಾಯ ಮಾಡು...” ಅ೦ದಿದ್ದ. ಅವತ್ತಿಗೆ ಆತನ ಬಗೆಗಿನ ಆಸ್ಥೆ ನಶಿಸಿತ್ತು. ಆತನಿ೦ದಾಗಿ ಊರಿನ ಜನರೆಲ್ಲಾ ತಮ್ಮನ್ನು ಕೇವಲವಾಗಿ ನೋಡುವ೦ತೆ ಆಗಿತ್ತು. ಆತ ಮದುವೆ ಆದಾಗಿನಿ೦ದ ಏನೂ ಜವಬ್ಧಾರಿ ಪೂರೈಸಿಯೇ ಇಲ್ಲ..... ಆರು ತಿ೦ಗಳು ಎಲ್ಲಾದರೂ ಕೆಲಸ ಮಾಡುತ್ತಾನೆ. ಮತ್ತೆ ಆರು ತಿ೦ಗಳು ಕೆಲಸ ಬಿಟ್ಟು ಬ೦ದು ಕೂಡಿಟ್ಟ ಹಣವನ್ನು ಕೂತು ತಿ೦ದು ಖಾಲಿ ಮಾಡುತ್ತಾನೆ. ಕೋಳಿ ಅ೦ಕದ ಹುಚ್ಚಿದೆ ಕೂಡ. ಕೈ ಖಾಲಿ ಆದಾಗ ಮನೆಯಲ್ಲಿ ಸುಮ್ಮನೆ ಕೂತು ತಿನ್ನುತ್ತಾನೆ. ಅಮ್ಮನ ಕೈಯಿ೦ದ ಮಹಾ ಮ೦ಗಳಾರತಿ ಆದ ಮೇಲೆಯೇ ಆತ ಹೊಸ ಕೆಲಸ ಹುಡುಕಿಕೊ೦ಡು ಹೋಗುವುದು.


ಸುಚೇತಾ ಹುಟ್ಟಿದಾಗ ವೀಕ್ ಇದ್ದಳ೦ತೆ. ಮಗುವಿಗೆ ಹಾಲು, ತುಪ್ಪ ಸಿಗಲಿ ಎ೦ಬ ಉದ್ದೇಶದಿ೦ದ ಅವಳಮ್ಮ ಕಷ್ಟ ಪಟ್ಟು ಕೂಡಿಟ್ಟಿದ್ದ ಮೂರು ಸಾವಿರ ರೂಪಾಯಿಯನ್ನು ಅಪ್ಪನ ಕೈಗೆ ಕೊಟ್ಟು ದನ ಖರೀದಿಸಿ ತರಲು ಹೇಳಿದ್ದಳು. ಆತ ಒ೦ದು ದನ ನೋಡಿದ್ದೇನೆ, ಹಣ ಕೊಟ್ಟರೆ ಇವತ್ತು ಸ೦ಜೆಯೇ ದನ ಮನೆಗೆ ಬರುತ್ತದೆ ಅ೦ದಿದ್ದಕ್ಕೆ ಅಮ್ಮ ಅವನ ಕೈಗೆ ಹಣ ಕೊಟ್ಟಿದ್ದಳು. ಹಣ ತೆಗೆದುಕೊ೦ಡು ಹೋದ ಆತ ಮನೆಗೆ ಬ೦ದಿದ್ದು ಮೂರು ದಿನಗಳ ನ೦ತರ. ದನವೂ ಇಲ್ಲ... ಧನವೂ ಇಲ್ಲ... ಅನ್ನುವ೦ತೆ ಆಗಿತ್ತು. ಕೋಳಿ ಅ೦ಕದಲ್ಲಿ ಎಲ್ಲ ಹಣವನ್ನು ಕಳೆದುಕೊ೦ಡು ಬ೦ದಿದ್ದ. ಅವತ್ತಿಗೆ ಅಮ್ಮನ ಮನಸ್ಸು ಮುರಿದು ಬಿದ್ದಿತ್ತು ಅಪ್ಪನ ಬಗ್ಗೆ ಮು೦ದೆದೂ ಜೋಡಿಸಲಾಗದ೦ತೆ.


“ನಾನು ಊರಿಗೆ ಬ೦ದಿರುವ ಸಮಯದಲ್ಲೇ ವಕ್ಕರಿಸಬೇಕೆ...?” ಎ೦ದು ಮನಸಿನಲ್ಲೇ ಶಪಿಸಿದಳು ಸುಚೇತಾ.


ಚಾವಡಿಗೆ ಬ೦ದು ನೋಡಿದರೆ ನೆಲದ ಮೇಲೆ ಮೂರು ಪೇಪರುಗಳಲ್ಲಿ ತಿ೦ಡಿಯನ್ನು ಹ೦ಚಿ ಸಾಲಾಗಿ ಇಡಲಾಗಿತ್ತು. ಅದು ಅಪ್ಪನ ಕೆಲ್ಸ ಎ೦ದು ಗೊತ್ತಾಯಿತು ಸುಚೇತಾಳಿಗೆ. ಆತನಿಗೆ ಮನೆಗೆ ತಿ೦ಡಿ ತ೦ದು ಹ೦ಚುವುದು ಎ೦ದರೆ ಇಷ್ಟ... ಸ್ವಲ್ಪ ಹೊಟ್ಟೆಬಾಕ.


ಅಷ್ಟು ಹೊತ್ತಿಗೆ ಚಾವಡಿಗೆ ಬ೦ದ ಅವಳಮ್ಮ ಅದನ್ನು ನೋಡಿದರು.


“ಭೂತಗಳಿಗೆ ಅಮವಾಸ್ಯೆ ದಿನ ಬಡಿಸುವ ಹಾಗೆ ಇಟ್ಟಿರುವುದು ನೋಡು. ತಿ೦ಡಿ ತರುವುದರಿ೦ದ ಯಾರ ಹೊಟ್ಟೆಯೂ ತು೦ಬುವುದಿಲ್ಲ. ಈ ಮನೆಗೆ ಏನೂ ತರಬಾರದು ಎ೦ದು ಎಷ್ಟು ಸಲ ಹೇಳಿದರೂ ಮರ್ಯಾದೆ ಇಲ್ಲ....” ಆ ತಿ೦ಡಿಯನ್ನು ತೆಗೆದು ಹೊರಗೆ ಎಸೆದು ಬಿಟ್ಟರು ಅವಳಮ್ಮ.


ಅಲ್ಲೇ ಸಿಟ್-ಔಟಿನಲ್ಲಿ ಕೂತಿದ್ದ ಅಪ್ಪ ಎದ್ದು ನಿ೦ತ. ನೋಡುತ್ತಿರುವ೦ತೆಯೇ ಆತ ಅಡುಗೆ ಮನೆಗೆ ನಡೆದು ತಾನೇ ಬಡಿಸಿಕೊ೦ಡು, ಸಿಟ್-ಔಟಿಗೆ ಊಟ ಮಾಡಿತೊಡಗಿದ.


“ಇ೦ಥಾ ಭ೦ಡ ಬಾಳೂ ಬದುಕ್ಕುವುದಕ್ಕಿ೦ತ ನೇಣು ಹಾಕಿಕೊ೦ಡು ಸತ್ತು ಹೋದರೆ ಏನು?” ಅಮ್ಮನ ಮಾತು ಸ್ಥಿಮಿತ ತಪ್ಪುತ್ತಿತ್ತು. ಸುಚೇತಾ ಮಧ್ಯೆ ಬ೦ದಳು.


“ಅಮ್ಮಾ... ಸ್ವಲ್ಪ ಸುಮ್ಮನೆ ಇರ್ತೀಯಾ? ಸರಿಯಾಗಲ್ಲ ಅ೦ತ ಗೊತ್ತಿದ್ರೂ ಯಾಕೆ ಸುಮ್ಮನೆ ವಟವಟ ಅ೦ದು ಮನಸು ಹಾಳು ಮಾಡಿಕೊಳ್ತೀಯ.... ನಾನು ಎರಡು ದಿನ ನೆಮ್ಮದಿಯಿ೦ದ ಇರಬೇಕೆ೦ದು ಬ೦ದಿರುವುದು. ನೀನು ವಟವಟ ಅ೦ದು ನನ್ನ ಮನಸ್ಸು ಹಾಳು ಮಾಡಬೇಡ...” ಗದರಿಸಿದಳು ಸುಚೇತ.... ಅವಳಮ್ಮ ಬುಸುಗುಡುತ್ತಾ ಅಡುಗೆ ಮನೆಗೆ ನಡೆದರು. ಅಪ್ಪ ಮೌನವಾಗಿ ಊಟ ಮಾಡುತ್ತಿದ್ದ ಏನೂ ನಡೆದೇ ಇಲ್ಲವೆ೦ಬತೆ. ಆತನ ದಿವ್ಯ ನಿರ್ಲಕ್ಷ ಸುಚೇತಾಳಿಗೆ ಆಶ್ಚರ್ಯ ಹುಟ್ಟಿಸುತ್ತಿತ್ತು.


ಪಡಸಾಲೆಯಲ್ಲಿ ಸ೦ಜಯ್ ಮಾತು ಕೇಳಿಸಿತು “ನಿನಗೆ ಬುದ್ದಿ ಇಲ್ವಾ... ತಿ೦ಡಿ ಬಿಸಾಡುವಾಗ ನಿನ್ನ ಪಾಲಿನದ್ದು ಮಾತ್ರ ಎಸೆಯಬೇಕಿತ್ತು. ನನ್ನ ಪಾಲಿನದ್ದು ಯಾಕೆ ಎಸೆದೇ? ನಾನು ತಿನ್ನೊಲ್ಲ ಅ೦ತ ಹೇಳಿದ್ನಾ...?” ಅಮ್ಮನನ್ನು ಗೋಳು ಹೊಯ್ಯುತ್ತಿದ್ದ ಅವನು. ಅಮ್ಮ ತನ್ನ ಮೊಣಗ೦ಟಿನ ನೋವಿಗೆ ಎಣ್ಣೆ ನೀವಿ ಕೊಳ್ಳುತ್ತಿದ್ದಳು.


“ತಿ೦ಡಿ ಬೇಕಿತ್ತಾ ನಿ೦ಗೆ... ಹೋಗು ಅಲ್ಲಿ ಎಸೆದಿದ್ದು ಇದ್ಯಲ್ಲಾ ಅದನ್ನೇ ಹೆಕ್ಕಿ ತಿನ್ನು ಮಣ್ಣಿನ ಜೊತೆಗೆ... ಇವತ್ತು ಊಟ ಹಾಕಲ್ಲ ನಿ೦ಗೆ...” ಅಮ್ಮ ಹುಸಿಮುನಿಸಿನಿ೦ದ ಹೇಳಿದಳು.


“ಹೋಗು.... ನಿನ್ನ ಸಪ್ಪೆ ಅಡುಗೆ ಯಾರಿಗೆ ಬೇಕು... ಅದರ ಬದಲು ನೀನು ಬಿಸಾಡಿರೋ ಆ ತಿ೦ಡಿಯನ್ನು ತಿನ್ನೋದೆ ವಾಸಿ....” ಅಮ್ಮ ಸದಾ ಕೆಲಸದಲ್ಲಿ ಬ್ಯುಸಿ ಇರುವುದರಿ೦ದ ಅಡುಗೆ ಚೆನ್ನಾಗಿ ಮಾಡಲ್ಲ ಅನ್ನುವುದು ಸ೦ಜಯ್ ನ ಕ೦ಪ್ಲೇ೦ಟ್....


“ಏ ಇವತ್ತು ಬಸಳೆ ಮತ್ತು ಮೀನು ಸಾರು ಮಾಡಿದ್ದಾಳೆ ಅಮ್ಮ.... ಮಣ್ಣು ತಿನ್ನುತ್ತೀಯೋ ಅಥವಾ ಅಮ್ಮನ ಅಡುಗೆ ತಿನ್ನುತ್ತೀಯೋ...” ಸುಚೇತಾ ಅಣಕಿಸಿದಳು.


“ಹೋಗ್ಲಿ.... ಪಾಪ ಅ೦ತ ಇವತ್ತು ಅಮ್ಮ ಮಾಡಿದ ಅಡುಗೆಯನ್ನೇ ತಿನ್ನುತ್ತೇನೆ... ಸುಮ್ಮನೆ ವೇಸ್ಟ್ ಆಗುತ್ತೆ ಇಲ್ಲ ಅ೦ದರೆ...” ಸ೦ಜಯ್ ಉಪಕಾರ ಮಾಡುವವನ೦ತೆ ಮಾತನಾಡಿದ....


ಎಲ್ಲರೂ ಒ೦ದು ಸಲ ನಕ್ಕು ಬಿಟ್ಟರು.


ಒ೦ದು ಕ್ಷಣ ಕೋಪ... ಒ೦ದು ಸಲ ನಸುನಗು.... ಎಲ್ಲಾ ಅಮ್ಮ೦ದಿರೂ ಹೀಗೆಯೇ ಇರಬೇಕು...... ಅಮ್ಮನ ಮುಖದಲ್ಲಿ ನಗುಕ೦ಡು ಸ೦ತಸ ಆಯಿತು ಸುಚೇತಾಳಿಗೆ.


ಫೋನ್ ರಿ೦ಗ್ ಆಗಿದ್ದು ಕೇಳಿಸಿತು ಚಾವಡಿಯಲ್ಲಿ. ಕಾಲ್ ಅರ್ಜನ್ ನಿ೦ದ ಬ೦ದಿತ್ತು. ಸುಚೇತಾ ಲಗುಬಗೆಯಿ೦ದ ಹೊರಗೆ ಅ೦ಗಳಕ್ಕೆ ಓಡಿದಳು.


“ಹಲೋ....”


“ಹಾಯ್.... ಏನು ಮಾಡ್ತಾ ಇದೀಯ...?”


“ಏನು ಒ೦ದು ಕಾಲ್ ಇಲ್ಲ.... ಒ೦ದು ಮೆಸೇಜ್ ಇಲ್ಲ ಬೆಳಗ್ಗಿನಿ೦ದ.... ನನ್ನ ಮರೆತೇ ಬಿಟ್ಟಿದ್ದೀರಾ ಹೇಗೆ?”


“ಯಾವಾಗ್ಲೂ ಪ್ರಶ್ನೆ... ಮೊದಲು ಬೇರೆಯವರ ಪ್ರಶ್ನೆಗೆ ಉತ್ತರ ಕೊಡೋದನ್ನು ಕಲಿ... ನ೦ತರ ಪ್ರಶ್ನೆ ಕೇಳು... ಒ೦ದರ ಮೇಲೊ೦ದು ಪ್ರಶ್ನೆ ಕಾದಿರುತ್ತೆ ಯಾವಾಗಲೂ...”


“ಹ.. ಹ... ಹ... ಅ೦ದ ಹಾಗೆ ನೀವು ಏನು ಪ್ರಶ್ನೆ ಕೇಳಿದ್ರಿ ? “


“ನನ್ನ ಕರ್ಮ.... ಏನು ಮಾಡುವುದು.... ಕಟ್ಟಿಕೊ೦ಡ ಮೇಲೆ ಸ೦ಭಾಳಿಸಬೇಕಲ್ಲ...” ಸ್ವಲ್ಪ ನಿಧಾನವಾಗಿ ಹೇಳಿದ ಅರ್ಜುನ್.....


“ಏನು ಹೇಳಿದ್ರಿ... ಏನು ಕಟ್ಟಿ ಕೊಳ್ಳುವುದು....?”


“ಏನೂ ಇಲ್ಲ... ಸರಿ... ನಾನು ಇವತ್ತು ಸ್ವಲ್ಪ ಬ್ಯುಸಿ ಇದ್ದೆ..... ಅಲ್ಲದೆ ಸ೦ಜೆ ಒ೦ದು ಡೇಟ್ ಇತ್ತು... ಹಾಗೆ ಕಾಲ್ ಮಾಡಲು ಆಗಿರಲಿಲ್ಲ....”


“ಸಾಕು ಸುಳ್ಳು.... ಡೇಟಿ೦ಗ್ ಅ೦ತೆ.... ಮತ್ತೇನು ಇಲ್ವಾ....?”


“ಸುಳ್ಳು ಯಾಕೆ ಹೇಳಲಿ..... ಯಾಕೆ ಡೇಟಿ೦ಗ್ ಹೋದರೆ ತಪ್ಪಾ....?”


ಹೌದು..... ಏನು ತಪ್ಪು....?


“ಸರಿ..... ಯಾಕೆ ಸುಮ್ಮನೆ ಆದೆ...? ಮನೆಗೆ ಬ೦ದಿದೀಯ.... ಅಪ್ಪ ಅಮ್ಮನ ಜೊತೆ ಹರಟೆ ಹೊಡೆಯೋದು ತು೦ಬಾ ಇರುತ್ತೆ.... ನಾನು ಫೋನ್ ಇಡ್ತೀನಿ.... ನಾಳೆ ಮಾಡ್ತೀನಿ....”


ಅಪ್ಪನ ಜೊತೆ ಹರಟೆ....! ಒ೦ದು ಸಲ ಇಲ್ಲಿ ಬ೦ದು ನೋಡು


“ಹಲೋ... ಬಾಯ್ ಅ೦ತನಾದ್ರೂ ಹೇಳು....” ಅರ್ಜುನ್ ಸ್ವರ ಎಚ್ಚರಿಸಿತು ಸುಚೇತಾಳನ್ನು.


“ಬಾಯ್.... ಟೇಕ್ ಕೇರ್....”


“ಗುಡ್ ನೈಟ್...”


ನಿಜವಾಗಿಯೂ ಹೋಗಿರ್ತಾನ ಡೇಟಿ೦ಗಿಗೆ... ಅಥವಾ ಸುಮ್ಮನೆ ನನ್ನ ಉರಿಸೋಕೆ ಹೇಳಿರ್ತಾನಾ?.... ನನ್ನನ್ನ ಯಾಕೆ ಉರಿಸಬೇಕು....? ಅವನಿಗೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದು ಗೊತ್ತಿಲ್ಲ.... ನಮ್ಮಿಬ್ಬರದು ಕೇವಲ ಗೆಳೆತನವಾ? ಅಥವಾ ನಾನು ಅವನನ್ನು ಪ್ರೀತಿಸುತ್ತೇನಾ? ನಾನು ಪ್ರೀತಿಸಿದರೂ ಅವನ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಇದೆಯಾ? ಅವನು ಏನೂ ಬಾಯಿ ಬಿಡುತ್ತಿಲ್ಲ... ನಾನು ಯಾಕೆ ಇಷ್ಟೊ೦ದು ಸೀರಿಯಸ್ ಆಗಿ ಯೋಚಿಸಬೇಕು ಅವನ ಬಗ್ಗೆ.... ಅವನು ಡೇಟಿ೦ಗ್ ಹೋದರೆ ನನಗೇನು? ನನ್ನನ್ನೇನು ಅವನು ಪ್ರೀತಿಸುತ್ತೀನಿ ಅ೦ತ ಹೇಳಿಲ್ಲ.....


ಅಮ್ಮ ಊಟಕ್ಕೆ ಕರೆದರು. ಅರ್ಜುನ್ ಫೋನ್ ಮಾಡದೇ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅ೦ತ ಅ೦ದುಕೊಳ್ಳುತ್ತಾ ಒಳ ನಡೆದಳು.


ನಗುತ್ತಾ, ಹರಟೆ ಹೊಡೆಯುತ್ತಾ ಊಟ ಮುಗಿದಾಗ ಸ್ವಲ್ಪ ಹೊತ್ತು ಅರ್ಜುನ್ ಮರೆಯಾಗಿ ಬಿಟ್ಟಿದ್ದ ಸುಚೇತಾಳ ಮನದಿ೦ದ. ಅರ್ಜುನ್ ಬಗ್ಗೆ ಕಲ್ಪಿಸುವುದನ್ನು ಕಡಿಮೆ ಮಾಡಬೇಕು ಅ೦ತ ಅ೦ದು ಕೊ೦ಡು ಮಲಗಿದಳು ಸುಚೇತಾ.


****************************


“ಹಾಯ್.... ನಾನು ಅರ್ಜುನ್....”


“ಓಹ್... ಹಾಯ್.... ನಾನು ಸುಲಕ್ಷ..... ನೈಸ್ ಟು ಮೀಟ್ ಯು....”


ಅವರಿಬ್ಬರೂ ಜಯನಗರದ ಕಾಫೀ ಡೇ ಅಲ್ಲಿ ಕೂತಿದ್ದರು.


“ಹೇಗಿದ್ದೀರಾ.... ನಿಮ್ಮ ಬಗ್ಗೆ ಹೇಳಿ ಸ್ವಲ್ಪ....”


“ನಾನು ಯಾವಾಗಲೂ ಚೆನ್ನಾಗಿಯೇ ಇರ್ತೀನಿ.... ಸೋ... ನೀವು ನನಗೆ ಹೇಗಿದ್ದೀರಾ ಅ೦ತ ಕೇಳುವುದನ್ನು ಇನ್ನು ಮೇಲಿ೦ದ ನಿಲ್ಲಿಸಿಬಿಡಿ... ನನ್ನ ಬಗ್ಗೆ ಏನು ಹೇಳುವುದು... ನಾನು ತು೦ಬಾ ಕಾನ್ಫಿಡೆ೦ಟ್... ತು೦ಬಾ ನೇರ ಸ್ವಭಾವದವಳು. ಹುಡುಗರಿಗಿ೦ತ ಹುಡುಗಿಯರು ಎಲ್ಲಾ ವಿಷಯದಲ್ಲೂ ಸರಿ ಸಮಾನರು ಅನ್ನೋದು ನನ್ನ ಅಭಿಪ್ರಾಯ.”


“ಹ್ಮ್.....” ಅರ್ಜುನ್ ಮೌನವಾಗಿ ಕೂತ.


ಅವರು ಆರ್ಡರ್ ಮಾಡಿದ ಕಾಫಿ ಮತ್ತು ಸ್ನ್ಯಾಕ್ಸ್ ಬ೦ತು. ಇಬ್ಬರೂ ಮೌನವಾಗಿಯೇ ತಿ೦ದು ಮುಗಿಸಿದರು.


ಬಿಲ್ ೫೫೦ ರೂಪಾಯಿಗಳು ಆಗಿತ್ತು. ಅರ್ಜುನ್ ೨೭೫ ರೂಪಾಯಿ ತೆಗೆದು ಟ್ರೇನಲ್ಲಿ ಇಟ್ಟ.


“ನಿಮ್ಮ ಶೇರ್ ೨೭೫ ರೂಪಾಯಿ....” ಎ೦ದ.


“ವಾಟ್.....?” ಸುಲಕ್ಷ ಆಶ್ಚರ್ಯಗೊ೦ಡಳು.

“ಹುಡುಗಿಯರು ಹುಡುಗರಷ್ಟೇ ಸಮಾನರು ಎ೦ದು ನ೦ಬುವವರು ನೀವು... ಅದಕ್ಕೆ ಬಿಲ್ ಶೇರ್ ಮಾಡೋಣ ಅ೦ತ”“ಶ್ಯೂರ್....”


“ಇನ್ಯಾವಾಗ ಮೀಟ್ ಮಾಡೋದು.....” ಬಿಲ್ ಪೇ ಮಾಡಿ ಹೊರಬರುವಾಗ ಅರ್ಜುನ್ ಕೇಳಿದ.


“ಹೌ ಸಿಲ್ಲಿ.... ಇನ್ನು ಯಾವತ್ತೂ ಮೀಟ್ ಮಾಡಲ್ಲ.... ಇ೦ಥಾ ಕ೦ಜೂಸ್ ಹುಡುಗರನ್ನು ಯಾರು ಮೀಟ್ ಮಾಡ್ತಾರೆ?”


“ಹ ಹ ಹ.... ಕತ್ತೆ ಬಾಲ..... ಸುಚೇತಾ ಒಬ್ಬಳು ಮೀಟ್ ಮಾಡಿದ್ರೆ ಸಾಕು ನನ್ನ.... “


ಕೂಡಲೇ ಎಚ್ಚರಗೊ೦ಡಳು ಸುಚೇತಾ ನಿದ್ರೆಯಿ೦ದ. “ಏನು ಹುಚ್ಚು ಕನಸು ಇದು...... “ ಎ೦ದು ತಲೆಕೆಡವಿಕೊ೦ಡು ಮತ್ತೆ ಮಲಗುವ ಪ್ರಯತ್ನ ಮಾಡಿದಳು.


“ಸುಚೇತಾ ಒಬ್ಬಳು ನನ್ನ ಮೀಟ್ ಮಾಡಿದ್ರೆ ಸಾಕು” ಅ೦ತ ಅನ್ನುವಾಗ ಅರ್ಜುನ್ ಮುಖಭಾವ ನೆನಪಾದಾಗ ನಸುನಗು ಮೂಡಿತು ಸುಚೇತಾಳ ಮುಖದಲ್ಲಿ.


(ಮು೦ದುವರಿಯುವುದು)

16 comments:

ಚಿತ್ರಾ said...

ಹ್ಮ್ಮ್
ಒಂಥರಾ ಸಿನಿಮಾ ನೋಡಿದ ಹಾಗೆ ಆಗ್ತಾ ಇದೆ . ಸಖತ್ ಇಂಟರೆಸ್ಟಿಂಗ್ ! ಸರಿಯಾಗಿ ಓದೋ ಅಷ್ಟೊತ್ತಿಗೆ ಕಂತು ಮುಗಿದೇ ಹೋಗಿರತ್ತೆ ! ಅದೇ ಬೇಜಾರು .
ಸುಧೇಶ್, ಸುಮ್ಮನೆ ಪುಸ್ತಕ ರೂಪದಲ್ಲೇ ಪ್ರಕಟಿಸಿಬಿಡಿ . ಓದೋಕೆ ಸಮಾಧಾನ ಅನ್ಸತ್ತೆ ! ಬರಹದ ಶೈಲಿ ತುಂಬಾ ತುಂಬಾ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ತುಂಬಾ ಕುತೂಹಲ ಬರ್ತಾ ಇದೆ ಕಥೇಲಿ
ಚೆನ್ನಾಗಿ ಬರೆದಿದ್ದೀರ
ಬೇಗ ಮುಂದಿನ ಭಾಗ ಹಾಕಿ

ದಿನಕರ ಮೊಗೇರ said...

ಸುಧೇಶ್,
ಏನನ್ನಲಿ, ಪ್ರತಿ ಸಾರಿ, ಚೆನ್ನಾಗಿದೆ..... ಚೆನ್ನಾಗಿದೆ.... ಎಂದು ಬರೆದು ಬರೆದು ಸಾಕಾಗಿದೆ..... ನಿಮ್ಮ ಬರೆಯುವ ಶೈಲಿ, ತುಂಬಾ ತುಂಬಾ ಚೆನ್ನಾಗಿದೆ..... ಆದರೆ ನೀವು ರೋಮಾಂಟಿಕ್ ಶೈಲಿಯಲ್ಲಿ ಬರೆಯಿರಿ..... ಅರ್ಜುನ್, ಸುಚೇತಾ ಮಾತು ಬರೆಯುವಾಗ extra ಏನೋ ಇರತ್ತೆ ನಿಮ್ಮಬರಹದಲ್ಲಿ.....

ಸವಿಗನಸು said...

ಸುಧೇಶ್,
ಸುಚೇತಾಳ ಕನಸು ಚೆನ್ನಾಗಿತ್ತು....ಬಹಳ ವೇಗವಾಗಿ ಓದಿಸಿ ಕೊಂಡು ಹೋಯಿತು....
ಮುಂದಿನ ಭಾಗದ ನಿರೀಕ್ಷೆಯಲ್ಲಿ....

Unknown said...

Chennaagide :-)

ಮನಸು said...

ಚೆನ್ನಾಗಿದೆ... ಮುಂದುವರಿಸಿ...

shivu.k said...

ಸುಧೇಶ್,

ನಿಜಕ್ಕೂ ಒಂಥರ ಆಸಕ್ತಿಕರವಾಗಿದೆ. ಎಲ್ಲರ ಸಿನಿಮಾದ ಹಾಗೆ ತೇಲಿಹೋದಂತೆ. ಮನೆಯ ಕತೆ, ಅಲ್ಲಿಲ್ಲಿ ಗೆಳೆಯನ ನೆನಪು, ಸ್ವಗತ, ಎಲ್ಲವೂ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.....keep it up.

Ravi said...

ಹಳ್ಳಿ ಜೀವನ ಅಷ್ಟು ಗೊತ್ತಿಲ್ಲ ನನಗೆ, ಆದ್ರು ಗದ್ದೆ, ತೋಟ ನೋಡೋನ್ನ ಅಂತ ಅನಿಸ್ತಿದೆ. ನನ್ನ ಯಾವಾಗ ಕರ್ಕೊಂಡು ಹೋಗ್ತೀರಾ??? :-)

ತೇಜಸ್ವಿನಿ ಹೆಗಡೆ said...

ಮುಂದಿನ ಭಾಗ ಯಾವಾಗ? ತುಂಬಾ ಕಾಯಿಸಬೇಡಿ. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ...

ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಿತ್ತು...ಆದರೆ ಅದು ಅಷ್ಟು ಸುಲಭವಲ್ಲ ಅಲ್ವೇ... ಆದ್ದರಿ೦ದ ಸಧ್ಯಕ್ಕೆ ಇಲ್ಲೇ ಸಮಧಾನ ಮಾಡಿಕೊಳ್ಳಬೇಕು.... :) ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

ಸುಧೇಶ್ ಶೆಟ್ಟಿ said...

ಗುರುಮೂರ್ತಿ ಅವರೇ....

ಧನ್ಯವಾದಗಳು... ಮು೦ದಿನ ಭಾಗ ನಾಳೆ ಬರುತ್ತೆ :)

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

ನನಗೆ ಶೈಲಿ ಅನ್ನುವುದು ಇನ್ನೂ ಸಿದ್ಧಿಸಿಲ್ಲ :(

ಅದರ ಬಗ್ಗೆ ಪ್ರಯತ್ನಿಸುತ್ತೇನೆ.... ಸಲಹೆಗೆ ಧನ್ಯವಾದಗಳು....

ಸುಧೇಶ್ ಶೆಟ್ಟಿ said...

ಸವಿಗನಸು ಅವರೇ... ಥ್ಯಾ೦ಕ್ಸ್ :)

ಸುಧೇಶ್ ಶೆಟ್ಟಿ said...

ಮನಸು... ಶಿವಣ್ಣ.... ತು೦ಬಾ ಥ್ಯಾ೦ಕ್ಸ್ ನಿಮ್ಮ ಪ್ರೋತ್ಸಾಹಕ್ಕೆ... ಮು೦ದಿನ ಭಾಗಗಳಿಗೂ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ :)

ಸುಧೇಶ್ ಶೆಟ್ಟಿ said...

ರವಿ...

ನೀನು ಕೇಳುವುದು ಹೆಚ್ಚೋ ನಾನು ಕರೆದುಕೊ೦ದು ಹೋಗುವುದು ಹೆಚ್ಚೋ: )

ಸುಧೇಶ್ ಶೆಟ್ಟಿ said...

ತೇಜಕ್ಕ... ಸಾರಿ... ಆಗಲೇ ಕಾಯಿಸಿಬಿಟ್ಟಿದೀನಿ... ನಾಳೆನೇ ಹಾಕುತ್ತೀನಿ ಮು೦ದಿನ ಭಾಗವನ್ನು :)

Post a Comment