ನೀ ಬರುವ ಹಾದಿಯಲಿ..... [ಭಾಗ ೧೮]

Thursday, 15 April 2010

["ಮಾನಸ" ಬ್ಲಾಗಿನ ಮೂಲಕ ನಮಗೆ ಸದಬಿರುಚಿಯ ಬರಹಗಳನ್ನು ನೀಡುತ್ತಿರುವ ತೇಜಸ್ವಿನಿ ಹೆಗಡೆಯವರು ನಾನು ಬ್ಲಾಗ್ ಆರ೦ಬಿಸಿದ ದಿನಗಳಿ೦ದ ಹಿಡಿದು ಇ೦ದಿನವರೆಗೂ ತು೦ಬಾ ಪ್ರೋತ್ಸಾಹ ನೀಡುತ್ತ ಬ೦ದಿದ್ದಾರೆ. ಅವರು "ನೀ ಬರುವ ಹಾದಿಯಲಿ...." ಕಾದ೦ಬರಿಯ ಬಗ್ಗೆ ತಮ್ಮ ಬ್ಲಾಗಿನಲ್ಲಿ ಪ್ರಶ೦ಸೆಯ ನುಡಿಗಳನ್ನು ಬರೆದು ನನ್ನ ಬೆನ್ನು ತಟ್ಟಿದ್ದಾರೆ. ಅವರು ಆ ಲೇಖನ ಬರೆದ ಮೇಲೆ ನನ್ನ ಕಾದ೦ಬರಿಯನ್ನು ಓದುವವರ ಸ೦ಖ್ಯೆ ಹೆಚ್ಚಾಗಿದೆ ಎನ್ನುವುದು ಸುಳ್ಳಲ್ಲ. ಇನ್ನು ಕೆಲವರು ನನಗೆ ಮೇಲ್ ಬರೆದು ಕಾದ೦ಬರಿ ಚೆನ್ನಾಗಿ ಬರುತ್ತಿದೆ ಎ೦ದು ತಿಳಿಸಿದ್ದಾರೆ. ತೇಜಕ್ಕ.... ತು೦ಬಾ ಥ್ಯಾಂಕ್ಸ್ :)]



"Arjun is typing message..." ಎ೦ದು ತೋರಿಸಿದಾಗ ಢವಢವ ಅ೦ತ ಸುಚೇತಾಳ ಎದೆ ಬಡಿದುಕೊಳ್ಳತೊಡಗಿತು.

ಅ೦ದರೆ ನಾನು ಮೆಸೇಜ್ ಮಾಡಿದಾಗ ಬೇಕೆ೦ದೇ ಅವನು ಉತ್ತರ ಬರೆಯಲ್ಲ. ಈಗ ನಾನು ಬೇರೆ ಐ.ಡಿ.ಯಿ೦ದ ಮೆಸೇಜ್ ಮಾಡಿದರೆ ಉತ್ತರ ಬರೆಯುತ್ತಾ ಇದಾನೆ. ಅವನು ನನ್ನನ್ನು ಅವೈಡ್ ಮಾಡ್ತಾ ಇದಾನೆ.

"ಹಲೋ... ಹೂ ಇಸ್ ದಿಸ್?" ಅರ್ಜುನ್ ಮೆಸೇಜ್ ಬರೆದ.

"ನಾನು ಸ್ವೀಟಿ ಅ೦ತ. ಬೆ೦ಗಳೂರಿನಿ೦ದ. ನೀವು?"

"ನಾನು ನಿಮಗೆ ಗೊತ್ತಾ? ನನಗೆ ನಿಮ್ಮ ಜೊತೆ ಈ ಹಿ೦ದೆ ಚಾಟ್ ಮಾಡಿದ ನೆನಪು ಇಲ್ಲ."

"ಇಲ್ಲ... ನನಗೂ ನೀವು ಯಾರು ಅಂತ ಗೊತ್ತಿಲ್ಲ. ವೀಕೆಂಡ್ ನಲ್ಲಿ ಬೋರ್ ಹೊಡಿತಿತ್ತು. ಅದಕ್ಕೆ ಚಾಟ್ ರೂಮಿಗೆ ಬಂದೆ ಮತ್ತು ನಿಮಗೆ ಮೆಸೇಜ್ ಮಾಡಿದೆ. ನೀವು ಬ್ಯುಸಿ ಇದ್ದರೆ ಡಿಸ್ಟರ್ಬ್ ಮಾಡಲ್ಲ."

"ಅಯ್ಯೋ ಹಾಗೇನಿಲ್ಲ. ಸುಮ್ಮನೆ ಹೇಳಿದೆ ಅಷ್ಟೇ. ಮಾತನಾಡಬಹುದು. ತು೦ಬಾ ಬ್ಯುಸಿಯಾಗಿಯೇನೂ ಇಲ್ಲ. ನಿಮ್ಮ ಬಗ್ಗೆ ಹೇಳಿ."

"ಬರೇ ನನ್ನ ಬಗ್ಗೆ ಕೇಳೋದೇ ಆಯಿತು. ನೀವು ಎಲ್ಲಿಯವರು ಅಂತ ನಾನು ನಿಮಗೆ ಕೇಳಿದೆ. ನೀವು ಅದಕ್ಕೆ ಉತ್ತರ ಕೊಟ್ಟಿಲ್ಲ."

"ಓಹ್.... ಸಾರಿ... ನಾನೂ ಬೆ೦ಗಳೂರಿನಲ್ಲೇ ಕೆಲಸ ಮಾಡೋದು. ಐ.ಟಿ. ಇಂಡಸ್ಟ್ರಿ. ಬನ್ನೇರು ಘಟ್ಟ ಹತ್ತಿರ ಮನೆ. ಮೂಲತಃ ಆ೦ದ್ರಪ್ರದೇಶ"

"ಓ.ಕೆ. ತೆಲುಗುವಾಳ್ಳು :)"

"ಒಹ್... ನಿಮಗೆ ತೆಲುಗು ಬರುತ್ತಾ?"

"ಇಲ್ಲಪ್ಪ... ಅಲ್ಲೋ ಇಲ್ಲೋ ಹೆಕ್ಕಿ ತಂದ ಒಂದೆರಡು ತೆಲುಗು ಪದಗಳು ಗೊತ್ತು. ಅದನ್ನು ಉಪಯೋಗಿಸಿ ಸ್ಕೋಪ್ ತಗೊಳ್ಳೋದು ಅಷ್ಟೇ.:)"

ತಾನು ಸುಚೇತಾ ತರಹ ಮಾತನಾಡುತ್ತಿದ್ದೇನೋ ಎ೦ಬ ಅನುಮಾನ ಒ೦ದು ಸಲ ಬ೦ತು ಅವಳಿಗೆ. ಆದರೆ ಅರ್ಜುನ್ ಅಷ್ಟೊಂದು ಗಮನಿಸಿದ ಹಾಗೆ ಕಾಣಲಿಲ್ಲ ಅವಳಿಗೆ.

" :) ಸರಿ.. ನಿಮ್ಮನ್ನು ನೋಡಬಹುದಾ? ಫೋಟೋ ಕಳಿಸಿ"

"ಫೋಟೋ ನೋಡದೆ ನೀವು ಚಾಟ್ ಮಾಡಲ್ವ?"

"ನನಗೆ ದೆವ್ವ ಭೂತಗಳ ಜೊತೆ ಚಾಟ್ ಮಾಡಿ ಅಭ್ಯಾಸವಿಲ್ಲ :)"

ಸುಚೇತಾ ಕೂಡಲೇ ಗೂಗಲ್ ಗೆ ಹೋಗಿ ಒಬ್ಬಳು ಸು೦ದರವಾದ ರೂಪದರ್ಶಿಯ ಫೋಟೋ ಆರಿಸಿ ಅರ್ಜುನ್ ಗೆ ಕಳಿಸಿದಳು.

"ಇದು ನೀವೇನಾ?"


ಸಿಕ್ಕಿಬಿದ್ದೆನಾ? ಆ ಫೋಟೋ ಅರ್ಜುನ್ ಗೆ ಗೊತ್ತಿರುವ ರೂಪದರ್ಶಿ ಆಗಿರದೆ ಇದ್ದಾರೆ ಸಾಕಪ್ಪ

"ಯಾಕೆ ಅನುಮಾನ?"

"ಏನಿಲ್ಲ... ತು೦ಬಾ ಚೆನ್ನಾಗಿದೆಯಲ್ಲ ಫೋಟೋ ಅಂತ ಅಷ್ಟೇ :)"

"ಅದು ನನ್ನ ತಪ್ಪು ಅ೦ತೀರಾ? :)"

"ಹ್ಮ್ಮ್...."

ಕನ್ವಿನ್ಸ್ ಆಗ್ಲಿಲ್ವಾ?

"ಸರಿ... ನಾನು ಇರುವುದು ಬಿ.ಟಿ.ಎ೦. ಲೇಔಟಿನಲ್ಲಿ. ಹತ್ತಿರದ ಏರಿಯಾದಲ್ಲಿ ಇರೋದರಿ೦ದ ಭೇಟಿ ಆಗಲು ಸಮಸ್ಯೆ ಇಲ್ಲ." ಅವನು ಮತ್ತೇನಾದರೂ ಕೇಳುತ್ತಾನೆ ಅ೦ದುಕೊ೦ಡು ತಾನೇ ಮಾತು ಮು೦ದುವರಿಸಿದಳು.


"ಅಬ್ಬಾ... ತು೦ಬಾ ಫಾಸ್ಟ್ ಇದ್ದೀರಾ ನೀವು. ಆಗಲೇ ಭೇಟಿ ಆಗುವ ಮಾತು ಆಡುತ್ತ ಇದೀರಾ :)"

"ಓಹ್.. ಹಾಗಲ್ಲ ನಾನು ಹೇಳಿದ್ದು. ಇವತ್ತೇ ಭೇಟಿ ಆಗಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. ಸುಮ್ಮನೆ ಫಾರ್ ದಿ ರೆಕಾರ್ಡ್ಸ್ ಹೇಳಿದೆ ಅಷ್ಟೇ...:)"


ಆಮೇಲೆ ಅವರಿಬ್ಬರೂ ಸ್ವಲ್ಪ ಜನರಲ್ ಆಗಿ ಕೆಲಸದ ಬಗ್ಗೆ ಮಾತನಾಡಿದರು. ಫ್ಯಾಶನ್ ಲೋಕದ ಬಗ್ಗೆ ಓದಿ ತಿಳಿದಿದ್ದರಿಂದ ಅರ್ಜುನ್ ಹತ್ತಿರ ಸ೦ಭಾಷಣೆ ಮಾಡುವುದು ಅವಳಿಗೆ ಅಷ್ಟೊಂದು ಕಷ್ಟ ಆಗಲಿಲ್ಲ. ಸ್ವಲ್ಪ ಮಾತುಕತೆ ಆದಮೇಲೆ ಅರ್ಜುನ್ ಕೇಳಿದ. "ಯಾವಾಗ ಭೇಟಿ ಆಗುವುದು?"

"ನೀವೇ ಹೇಳಿ.... ನಾನು ತುಂಬ ಫಾಸ್ಟ್ ಆಗಿದೇನೆ ಅ೦ತ ನೀವೇ ತಾನೇ ಹೇಳಿದ್ದು."

"ಇವತ್ತೇ ಭೇಟಿ ಮಾಡಿದರೆ ಹೇಗೆ? ಹೇಗೂ ನಾವಿಬ್ಬರು ಹತ್ತಿರದ ಏರಿಯಾದಲ್ಲಿ ಇದೀವಿ. ಕಾಫಿ ಅಥವಾ ಡಿನ್ನರ್... ಏನಾದರೂ ಓಕೆ."

ಆಹಾ..... ಸೋ ನನ್ನ ಹತ್ತಿರ ಆಫೀಸ್ ಕೆಲಸ ಇದೆ ಅಂತ ಎಲ್ಲ ಹೇಳಿದ್ದು ಬುರುಡೆ!

"ನನಗೇನೋ ಓಕೆ. ಆದರೆ ನೀವು ಬ್ಯುಸಿ ಆಗಿರಬಹುದು. ನಿಮ್ಮ ಇಂಡಸ್ಟ್ರಿ ಅಲ್ಲಿ ಆದಿತ್ಯವಾರ ಕೂಡ ಕೆಲವರು ಕೆಲಸ ಮಾಡ್ತಾರ೦ತೆ." ಆಫೀಸಿನಲ್ಲಿ ಇದ್ದೀನಿ ಅ೦ತ ಅವನು ಹೇಳಿದ್ದು ಸುಳ್ಳೋ ಸತ್ಯಾನೋ ಅ೦ತ ಅವಳಿಗೆ ತಿಳಿದುಕೊಳ್ಳಬೇಕಾಗಿತ್ತು.

"ಸ೦ಡೆ ಆಫೀಸಿಗೆ ಹೋಗೋದಾ? ನಾನ೦ತೂ ಯಾವತ್ತು ಹೋಗಲ್ಲ. ನಿಮಗೆ ಅಭ್ಯ೦ತರ ಇಲ್ಲದಿದ್ದರೆ ಡಿನ್ನರಿಗೆ ಹೋಗೋಣ್ವಾ?"

ಓಹೋ ಇದಾ ವಿಷಯ. ನಾನು ಊಹಿಸಿದ್ದು ಯಾವತ್ತು ಸುಳ್ಳಾಗಲ್ಲ. ನನ್ನ ಹತ್ತಿರಾನೆ ನಾಟಕ ಮಾಡ್ತಾನೆ.

ಸುಚೇತಾಳಿಗೆ ಮೈಯೆಲ್ಲಾ ಉರಿದು ಹೋಯಿತು.

"ನಾನೇನೋ ನೀವು ತುಂಬ ಬ್ಯುಸಿ ಇರುತ್ತೀರಾ ಅ೦ತ ಅ೦ದುಕೊ೦ಡಿದ್ದೆ. ನೀವು ನೋಡಿದ್ರೆ ಫುಲ್ ಫ್ರೀ!" ವ್ಯ೦ಗ್ಯವಾಗಿ ಅ೦ದಳು.

"ಯಾಕೆ ಒಂದು ರೀತಿ ಮಾತನಾಡುತ್ತಿದ್ದೀರ? ನಿಜ ಹೇಳಿ ಯಾರು ನೀವು? ನಿಮ್ಮ ನಂಬರ್ ಕೊಡಿ." ಅವನಿಗೆ ಸ್ವಲ್ಪ ಡೌಟ್ ಬ೦ತು.

ಸುಚೇತ ಅವಳ ನಂಬರ್ ಬರೆದಳು. "ಟೇಕ್ ಅಂಡ್ ಗೆಟ್ ಲಾಸ್ಟ್".

"What's wrong with you?" ಅರ್ಜುನ್ ಗೆ ಎಲ್ಲವೂ ಅಯೋಮಯವಾಗಿತ್ತು. 'ಡಿನ್ನರ್ ಗೆ ಹೋಗ್ತಾ ಇದೀವಾ ನಾವು?"

ಸುಚೇತ ಅಷ್ಟರೊಳಗೆ ಲಾಗ್-ಔಟ್ ಮಾಡಿದಳು. ಅವಳಿಗೆ ಕೋಪ ಮತ್ತು ಬೇಸರದಿಂದ ಮೈಯೆಲ್ಲಾ ಉರಿದು ಹೋಯಿತು.

ದಾರಿಯಲ್ಲಿ ಹೋಗುವಾಗ ಯೋಚಿಸಿದಳು.

ಇಷ್ಟು ಹೊತ್ತಿಗೆ ಗೊತ್ತಾಗಿರುತ್ತೆ ನಾನು ಯಾರು ಅಂತ ಅವನಿಗೆ. ಗೊತ್ತಾಗಲಿ... ನನಗೂ ತಲೆ ಇದೆ ಅ೦ತ ಗೊತ್ತಾಗಲಿ ಅವನಿಗೆ.


ಮು೦ದಿನ ಎಲ್ಲ ಪರಿಣಾಮಗಳಿಗೆ ಅವಳು ತಯಾರಾಗಿದ್ದಳು. ಸಿಕ್ಕಿ ಬೀಳುವ ಪರಿಸ್ಥಿತಿ ಬ೦ದಾಗ ಅರ್ಜುನ್ ಸೆಲ್ಫ್ ಡಿಫೆನ್ಸ್ ಮಾಡ್ತಾನೆ ಅನ್ನೋದು ಅವಳಿಗೆ ಅವನ ಜೊತೆಗಿನ ಇಷ್ಟು ದಿನದ ಸಹವಾಸದಲ್ಲಿ ಗೊತ್ತಾಗಿತ್ತು. ಅವನ ಸೆಲ್ಫ್ ಡಿಫೆನ್ಸ್ ಪಾಯಿಂಟುಗಳಿಗೆ ಹೇಗೆ ಉತ್ತರಿಸಬೇಕು ಎ೦ದು ಮನಸ್ಸಿನಲ್ಲೇ ಯೋಚಿಸುತ್ತಿದ್ದಳು. ಅರ್ಜುನ್ ಅನ್ನು ರೆಡ್ ಹ್ಯಾ೦ಡ್ ಆಗಿ ಹಿಡಿದಿದ್ದಕ್ಕೆ ಸ೦ತೋಷ ಕೂಡ ಆಯ್ತು.

ಮನೆ ಮುಟ್ಟುವ ಹೊತ್ತಿಗೆ ಕೋಪವೆಲ್ಲ ಇಳಿದು ಅಸಹಾಯಕತೆ ಮನೆ ಮಾಡಿತು. ಕೋಪ ಬ೦ದಾಗ ನಾಲ್ಕು ಹೆಜ್ಜೆ ನಡೆದರೆ ಕೋಪವೆಲ್ಲ ಇಳಿಯುತ್ತದ೦ತೆ.

ನಾನು ಯಾವುದೋ ರಾ೦ಗ್ ನ೦ಬರ್ ಕೊಟ್ಟು ಸುಮ್ಮನೆ ಬರಬೇಕಿತ್ತು. ಚಾಟ್ ಮಾಡುತ್ತಿದ್ದುದು ನಾನೇ ಎ೦ದು ಅರ್ಜುನ್ ಗೆ ಗೊತ್ತಾದರೆ ನಮ್ಮಿಬ್ಬರ ಸ್ನೇಹ ಇಲ್ಲಿಗೆ ಮುಗಿದ೦ತೆ. ಅವನು ನನ್ನ ಜೊತೆ ಮಾತನಾಡುವುದು ನಿಲ್ಲಿಸಿದರೆ ನಾನು ಏನು ಮಾಡಲಿ. ಅವನನ್ನು ಮರೆತು ಇರುವ ಬಗೆ ಹೇಗೆ. ಆದರೂ ಅವನು ಮಾಡಿದ್ದು ತಪ್ಪು. ನನ್ನ ಜೊತೆ ಸುಮ್ಮನೆ ಯಾಕೆ ನಾಟಕ ಆಡಬೇಕು? ನಾನೇ ಚಾಟ್ ಮಾಡುತ್ತಿದ್ದುದು ಅ೦ತ ಗೊತ್ತಾಗಿ ಉರಿದು ಕೊಳ್ಳಲಿ. ನನ್ನನ್ನು ತು೦ಬ ಕಡಿಮೆಯಾಗಿ ಎಸ್ಟಿಮೇಟ್ ಮಾಡಿದ್ದಾನೆ. ನಾನು ಕೂಡ ಯೋಚಿಸಬಲ್ಲೆ ಅನ್ನುವುದು ಗೊತ್ತಾಗಲಿ...

ದ್ವ೦ದ್ವ ಭಾವಗಳೊ೦ದಿಗೆ ಸಮಯ ಕಳೆದಳು ಅವಳು.

ಅಷ್ಟು ಹೊತ್ತಿಗೆ ಸೆಲ್ ಫೋನ್ ಸದ್ದು ಮಾಡಿತು.

ಕಾಲ್ ಅರ್ಜುನ್ ಇ೦ದ ಬ೦ದಿತ್ತು.

"ಹಲೋ..." ಸುಚೇತಾಳ ಸ್ವರ ನಡುಗಿತು.

ಒ೦ದು ನಿಮಿಷ ಅರ್ಜುನ್ ಏನು ಮಾತನಾಡಲಿಲ್ಲ. ಬಹುಷಃ ಅವನಿಗೆ ಏನೋ ಕನ್ಫ್ಯೂಸ್ ಆಗಿರಬೇಕು.

"ಓಹ್.... ನೀನಾ? ನಾನು ಯಾರಿಗೋ ಫೋನ್ ಮಾಡುವ ಬದಲು ನಿನಗೆ ಮಾಡಿರಬೇಕು. ನೆವರ್ ಮೈ೦ಡ್. ಸರಿ. ಮತ್ತೆ ಫೋನ್ ಮಾಡ್ತೀನಿ." ಅರ್ಜುನ್ ಫೋನ್ ಇಟ್ಟ.

ಸುಚೇತಾ ಭಾರವಾದ ಉಸಿರು ದಬ್ಬಿದಳು.

ಅಬ್ಬಾ... ಅವನಿಗೆ ಇನ್ನೂ ಗೊತ್ತಾಗಿಲ್ಲ ನಾನೇ ಅವನ ಹತ್ತಿರ ಚಾಟ್ ಮಾಡಿದ್ದೂ ಅ೦ತ. ಗೊತ್ತಾಗದಿದ್ದರೆ ಒಳ್ಳೆಯದೇ ಆಯಿತು! ಇನ್ನೊಮ್ಮೆ ಏನಾದರು ಅವನು ಅದರ ಬಗ್ಗೆ ವಿಚಾರಿಸಿದರೆ ನಾನು ಚಾಟ್ ಮಾಡಿದ್ದು ಅಲ್ಲ ಅ೦ತ ಅನ್ನಬೇಕು.

ಅಷ್ಟರಲ್ಲಿ ಅರ್ಜುನ್ ಮತ್ತೆ ಫೋನ್ ಮಾಡಿದ.

ಈ ಬಾರಿ ಸುಚೇತಾಳ ಎದೆ ವೇಗವಾಗಿ ಬಡಿದುಕೊಳ್ಳತೊಡಗಿತು.

"ಹಲೋ..."

"ಮಿಸ್. ಸುಚೇತಾ. Is that you who was chatting with me?" ಅರ್ಜುನ್ ವ್ಯ೦ಗ್ಯವಾಗಿ ಕೇಳಿದ.

ಒ೦ದು ಸಲ ನಾನಲ್ಲ ಅ೦ತ ಹೇಳೋಣ ಅ೦ತ ಅನಿಸಿತು ಸುಚೇತಾಳಿಗೆ. ಕೊನೆಗೆ ತನ್ನ ಮನಸು ಬದಲಾಯಿಸಿದಳು. ಅವಳಿಗೆ ಅದೇನೋ ಧೈರ್ಯ ಬಂತು.


"ಯೆಸ್. ನಾನೇ ಅದು. ರೆಡ್ ಹ್ಯಾ೦ಡ್ ಆಗಿ ಸಿಕ್ಕಿಬಿದ್ರಲ್ಲ."

"How dare you! ಎಷ್ಟು ಧೈರ್ಯ ಇರಬೇಡ ನಿನಗೆ ಆ ತರಹ ಮಾಡೋಕೆ. ನೀನು ಇಷ್ಟೊಂದು ಚೀಪ್ ಆಗಿ ಬಿಹೇವ್ ಮಾಡ್ತೀಯ ಅ೦ತ ನಾನು ಊಹಿಸಿರಲಿಲ್ಲ."

"ನಿನಗೂ ಎಷ್ಟು ಧೈರ್ಯ ಇರಬೇಡ ನನ್ನ ಜೊತೆ ಪ್ರೀತಿ ನಾಟಕ ಆಡೋಕೆ? ನನ್ನನ್ನೇನು ದಡ್ಡಿ ಅ೦ತ ಅ೦ದುಕೊ೦ಡಿದ್ದೀಯ? ನಾನು ಮಾಡಿದ್ದರಲ್ಲಿ ಚೀಪ್ ಆಗಿರುವ೦ತದ್ದು ಏನೂ ಇಲ್ಲ. ನೇರ ದಾರಿಯಲ್ಲಿ ಬಗ್ಗದವರಿಗೆ ಅಡ್ಡ ದಾರಿಯಲ್ಲೇ ಉತ್ತರ ಕೊಡಬೇಕು."

"ಬುಲ್ ಶಿಟ್... ಇನ್ನು ಮೇಲೆ ನನಗೇನಾದರೂ ಕಾಲ್ ಮಾಡಿದರೆ ನೆಟ್ಟಗಿರಲ್ಲ."

"ಗುಡ್ ಜೋಕ್. ಇಷ್ಟೆಲ್ಲಾ ಆದ ಮೇಲೂ ನಿನಗೆ ನಾನು ಕಾಲ್ ಮಾಡಬಹುದು ಅ೦ತ ನಿರೀಕ್ಷೆ ಮಾಡ್ತಾ ಇದೀರಲ್ಲ! ನಿಮಗೆ ಮು೦ದೆ ಯಾವಾಗಲಾದರೂ ಬುದ್ದಿ ಬರುತ್ತದೆ. ಗೋ ಟು ಹೆಲ್ ಅ೦ಕಲ್." ಅಕ್ಷರಶ: ಕಿರುಚಿ ಹೇಳಿದಳು.

ಅರ್ಜುನ್ ಫೋನ್ ಕಟ್ ಮಾಡಿದ.

ಅರ್ಜುನ್ ಜೊತೆ ಮಾತಾನಾಡುತ್ತಿರುವಷ್ಟು ಹೊತ್ತು ಕಿರುಚಿಕೊಂಡು, ಕೋಪದಿಂದ ಬುಸುಗುಡುತ್ತಾ ಮಾತನಾಡಿದರೂ, ಅವನು ಫೋನ್ ಇಟ್ಟ ಮೇಲೆ ತು೦ಬಾ ಬೇಸರವಾಯಿತು. ತನ್ನ ಮನಸಿನಲ್ಲಿ ಮೊಳಕೆ ಒಡೆದಿದ್ದ ಪ್ರೀತಿ ಮೊಗ್ಗಿನಲ್ಲಿ ಮುರುಟಿ ಹೋಗಿದ್ದಕ್ಕೆ ಮನಸು ಮುಮ್ಮಲ ಮರುಗಿತು. ಒ೦ದು ಕ್ಷಣ ಏನು ಮಾಡಬೇಕು ಅ೦ತ ಅವಳಿಗೆ ತೋಚಲಿಲ್ಲ. ಮನಸು ಬ್ಲಾ೦ಕ್ ಆಯಿತು.

ಸತ್ತು ಹೋಗಿ ಬಿಡಲೇ ಅ೦ತ ಒ೦ದು ಸಲ ಯೋಚನೆ ಬ೦ತು. ಟೇಬಲ್ ಮೇಲೆ ನಿಶಾ ಹಣ್ಣು ಕತ್ತರಿಸಲು ಇಟ್ಟಿದ್ದ ಚಾಕು ಎದುರಿಗೆ ಇತ್ತು.ಚಾಕುವನ್ನು ಕೈಗೆತ್ತಿಕೊ೦ಡವು ಕೈ ನರವನ್ನು ಕತ್ತರಿಸಿಬಿಡಲೇ ಎ೦ದು ಯೋಚಿಸಿದಳು. ಆ ಬಗ್ಗೆ ಯೋಚಿಸಿದಾಗ ಮೈಯೆಲ್ಲಾ ಜುಮ್ ಅನ್ನಿಸಿ ಒ೦ದು ರೀತಿಯ ಉನ್ಮಾದವಾಯಿತು ಅವಳಿಗೆ.

************

ನೀ ಬರುವ ಹಾದಿಯಲಿ......... [ಭಾಗ ೧೭]

Sunday, 4 April 2010

ಅಷ್ಟೆಲ್ಲಾ ಅತ್ತರೂ ರಾತ್ರಿ ಮಲಗುವ ಮೊದಲು ಮನಸು ಕೇಳದೇ ಮತ್ತೆ ಅರ್ಜುನ್ ಗೆ ಫೋನ್ ಮಾಡಲು ಪ್ರಯತ್ನಿಸಿದಳು ಸುಚೇತಾ. ಆದರೆ ಅವನು ಫೋನ್ ಎತ್ತಲಿಲ್ಲ. ಬೇಸರವಾಗಿ ಸುಮ್ಮನೆ ಮಲಗಿದಳು. ಅಲ್ಲೇ ಲ್ಯಾ೦ಡ್ ಲೈನ್ ಫೋನ್ ಇದ್ದುದು ನೋಡಿ ಅದರಿ೦ದ ಕಾಲ್ ಮಾಡಿದಳು.

ಅರ್ಜುನ್ ಫೋನ್ ಎತ್ತಿದ.

"ಹಲೋ...." ಅರ್ಜುನ್ ಸ್ವರದಿ೦ದ ಅವನು ಕುಡಿದಿದ್ದಾನೆ ಎ೦ದು ಅನಿಸಿತು ಸುಚೇತಾಳಿಗೆ.

"ಹಲೋ....ನಾನು ಸುಚೇತಾ."

"ನೀನಾ.... ಆ೦.... ಹೇಳು."

"ಯಾಕೆ ಹೀಗೆ ಮಾಡ್ತಾ ಇದೀರಿ. ಎಷ್ಟು ಬಾರಿ ಫೋನ್ ಮಾಡಿದೀನಿ ಇವತ್ತು. ಒ೦ದು ಬಾರಿಯಾದರೂ ಫೋನ್ ಎತ್ತೋಕೆ ಏನು?"

"ನಾನು ನಿ೦ಗೆ ಮೊದಲೇ ಹೇಳಿದ್ದೆ. ನಾನು ಆಫೀಸಿನಲ್ಲಿ ಬ್ಯುಸಿ ಇರ್ತೀನಿ ಅ೦ತ. ಅದಕ್ಕೆ ನೀನು ಫೋನ್ ಮಾಡಿದಾಗ ಉತ್ತರ ಕೊಡಲಿಲ್ಲ. ನಾನು ಫೋನ್ ರಿಸೀವ್ ಮಾಡದೇ ಇದ್ದರೆ ಸುಮ್ಮನೆ ಇರಬೇಕು ತಾನೆ? ಅಷ್ಟು ಸಲ ಫೋನ್ ಯಾಕೆ ಮಾಡ್ಬೇಕು?"

"ಯಾಕೆ ಸುಳ್ಳು ಹೇಳ್ತೀರಾ? ಆಫೀಸಿನಲ್ಲಿ ಬ್ಯುಸಿ ಇದ್ದವರು ಯಾಹೂ ಮೆಸೇ೦ಜರ್ ಆನ್ಲೈನ್ ಇರೋಕೆ ಆಗುತ್ತೇನು? "
"ಡಿಟೆಕ್ಟಿವ್ ಕೆಲಸ ಮಾಡೋದನ್ನು ಮೊದಲು ಬಿಡು. ಮನೆಯಿ೦ದ ಲಾಗ್ ಇನ್ ಆಗಿದ್ದೆ. ಆಫೀಸಿಗೆ ಹೋಗುವಾಗ ಲಾಗ್ ಔಟ್ ಮಾಡಲು ಮರೆತು ಹೋಯಿತು. ಅದಿಕ್ಕೆ ನಿನಗೆ ನಾನು ಲಾಗ್ ಇನ್ ಆಗಿರೋ ಹಾಗೆ ಕ೦ಡಿದ್ದು. "

"ಏನೋಪ್ಪಾ... ಆದರೂ ನನಗೆ ನೀವು ಅವೈಡ್ ಮಾಡ್ತಾ ಇದೀರಿ ಅನ್ಸುತ್ತೆ..... ನೆಗ್ಲೆಕ್ಟ್ ಮಾಡ್ತಾ ಇದೀರಿ ಅನ್ಸುತ್ತೆ....ಸುಳ್ಳು ಹೇಳ್ತಾ ಇದೀರಿ ಅನ್ಸುತ್ತೆ...."

"ಜಸ್ಟ್ ಗೆಟ್ ಲಾಸ್ಟ್.... ನಾನು ಒಳ್ಳೆ ಮೂಡಿನಲ್ಲಿ ಇಲ್ಲ.. ಇರಿಟೇಟ್ ಮಾಡಬೇಡ..."

"ನಿಮಗೆ ನಾನು ಏನು ಮಾಡಿದರು ಇರಿಟೇಟ್ ಅನ್ಸುತ್ತೆ. ನಾನು ಏನು ಮಾಡ್ಲಿ...?"

"ಸುಚಿ.... ಹುಹ್.... ಬೈ."

ಅವನು ಫೋನ್ ಕಟ್ ಮಾಡಿದ. ಮತ್ತೊಮ್ಮೆ ಅವನಿಗೆ ಫೋನ್ ಮಾಡುವ ಗೋಜಿಗೆ ಹೋಗಲಿಲ್ಲ ಸುಚೇತ.

ಅವನು ನಿಜವಾಗಿಯೂ ಬದಲಾಗಿಲ್ವ? ಆಫೀಸಿನಲ್ಲಿ ಇದ್ದು ಬುಸಿ ಆಗಿದ್ದಿರಬಹುದಾ ನಾನು ಫೋನ್ ಮಾಡಿದಾಗ. ಇಪ್ಪತ್ತು ಸಲ ಫೋನ್ ಮಾಡಿದ್ದು ನನ್ನ ತಪ್ಪೆ! ನಾನೇ ಏನೇನೊ ಕಲ್ಪಿಸಿಕೊಳ್ತಾ ಇದೀನಿ ಅನ್ಸುತ್ತೆ. ನಾಳೆ ಅವನ ಜೊತೆ ಸಮಾಧಾನದಿ೦ದ ಮಾತನಾಡಬೇಕು. ಇವತ್ತು ಕುಡಿದ ಕಾರಣ ಇರಿಟೇಟ್ ಆಗಿರ್ತಾನೆ ಅಷ್ಟೇ.

ಸುಚೇತಾ ಮಲಗಳು ಪ್ರಯತ್ನಿಸಿದಳು.

ಕೂಡಲೇ ಅವಳಿಗೆ ಒ೦ದು ವಿಷಯ ಫ್ಲಾಶ್ ಆಯಿತು!

ಯಾಹೂ ಮೆಸೇ೦ಜರಿನಲ್ಲಿ ಲಾಗಿನ್ ಆಗಿ ಅದನ್ನು ಹಾಗೆ ಬಿಟ್ಟು ಹೋದರೆ ನಮ್ಮ ಸ್ಟೇಟಸ್ "Idle " ಎ೦ದು ತೋರಿಸಬೇಕು. ನಾನು ಲಾಗಿನ್ ಆಗಿದ್ದು ಸ೦ಜೆ ನಾಲ್ಕು ಗಂಟೆಗೆ. ಇವನು ಆಫೀಸಿಗೆ ಹೋಗಿದ್ದು ಹತ್ತು ಗಂಟೆಗೆ. ಹತ್ತು ಗಂಟೆಯಿಂದ ಸ೦ಜೆ ನಾಲ್ಕು ಗಂಟೆವರೆಗೆ ಇವನು ಯಾಹೂ ಮೆಸೇ೦ಜರ್ ಉಪಯೋಗಿಸದೆ ಇದ್ದಿದ್ದರೆ ಇವನ ಸ್ಟೇಟಸ್ idle ಇರಬೇಕಿತ್ತು. ಆದರೆ ನಾನು ಲಾಗಿನ್ ಆದಾಗ ಹಾಗೆ ಇರಲಿಲ್ಲ. ನನ್ನ ಹತ್ತಿರ ಸುಳ್ಳು ಹೇಳಿದ್ದಾನೆ!

**********************

ಬೆಳಗ್ಗೆ ಬೆ೦ಗಳೂರು ಮುಟ್ಟಿದಾಗ ತಲೆ ಚಿಟ್ಟು ಹಿಡಿದು ಹೋಗಿತ್ತು ಸುಚೆತಾಳಿಗೆ. ಬಸ್ಸಿನಲ್ಲಿಡಿ ಅರ್ಜುನ್ ಬಗ್ಗೆ ಯೋಚಿಸಿ ಯೋಚಿಸಿ ನಿದ್ದೆಯೇ ಬಳಿಗೆ ಸುಳಿದಿರಲಿಲ್ಲ. ರೂಮಿಗೆ ಬ೦ದಾಗ ಯಾರೂ ಇರಲಿಲ್ಲ. ಯಾಕೋ ತಾನು ಒ೦ಟಿ ಎ೦ಬ ಭಾವನೆ ಬ೦ತು ಅವಳಿಗೆ. ಬಾಗಿಲು ಹಾಕಿಕೊ೦ಡಾಗ ಮತ್ತೊಂದಿಷ್ಟು ಅಳು ಬ೦ತು. ಒಬ್ಬಳೇ ಮನಸಾರೆ ಅತ್ತು ಬಿಟ್ಟಳು. ಪ್ರೀತಿ ತನ್ನಲ್ಲಿ ಇಷ್ಟೊಂದು ಅಭದ್ರತಾ ಭಾವನೆ ತರುತ್ತದೆ ಎ೦ದು ಅವಳು ಎ೦ದಿಗೂ ಊಹಿಸಿರಲಿಲ್ಲ. ಅಳು ನಿ೦ತ ಮೇಲೆ "ಇವತ್ತು ಏನಾದರೂ ಒ೦ದು ತೀರ್ಮಾನ ಆಗಲೇ ಬೇಕು. ಅರ್ಜುನ್ ನನ್ನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಾ ಇದಾನ ಅಥವಾ ನಾಟಕ ಆಡುತ್ತ ಇದಾನ ಎ೦ದು ಕೇಳಿಯೇ ಬಿಡುತ್ತೇನೆ. ಈ ಅಳು, ನೋವು ನನಗೆ ಸಾಕಾಗಿ ಬಿಟ್ಟಿದೆ." ಎ೦ದುಕೊ೦ಡು ಅರ್ಜುನ್ ಗೆ ಕಾಲ್ ಮಾಡಿದಳು.

ಊಹಿಸಿದಂತೆ ಅರ್ಜುನ್ ಫೋನ್ ತೆಗೆಯಲಿಲ್ಲ.

"ನಿಮಗೆ ಇಷ್ಟೊಂದು ಕಟು ಹೃದಯ ಇದೆ ಅಂತ ನನಗೆ ಗೊತ್ತಿರಲಿಲ್ಲ. ನಿಮಗೆ ನಾನು ಸತ್ತರೆ ಮಾತ್ರ ಸಮಾಧಾನ ಆಗುವುದು ಅಂತ ಕಾಣಿಸುತ್ತದೆ." ಒ೦ದು ಎಸ್.ಎಂ.ಎಸ್ ಕಳಿಸಿದಳು. ಆನ೦ತರ ಆ ತರಹ ಮೆಸೇಜ್ ಕಳಿಸಬಾರದಿತ್ತು ಅ೦ತ ಅನಿಸಿತು ಅವಳಿಗೆ.

ಅವಳಿಗೆ ಎ೦ತಹ ಕಷ್ಟದ ಸ೦ದರ್ಭದಲ್ಲೂ ಇದುವರೆಗೂ ಸಾಯುವ ಯೋಚನೆ ಬ೦ದಿರಲಿಲ್ಲ.

ಮರುಕ್ಷಣದಲ್ಲಿ ಅರ್ಜುನ್ ಫೋನ್ ಮಾಡಿದ.

"ಹಲೋ"

"ಏನದು ಮೆಸೇಜ್?"

"ಯಾವುದು?"

"ನಾಟಕ ಮಾಡಬೇಡ... ಸತ್ತು ಹೋಗುತ್ತೀಯ? ಈಗಲೇ ಸತ್ತು ಹೋಗಿಬಿಡು. ನನಗೆ ಏನು ಆಗಲ್ಲ. ಏನು ಅ೦ದು ಕೊ೦ಡಿದ್ದೀಯ ನೀನು. ನೀನು ಹೀಗೆಲ್ಲ ಮೆಸೇಜ್ ಬರೆದರೆ ನಾನು ಹೆದರುತ್ತೇನೆ ಅ೦ತ ಅ೦ದುಕೊ೦ಡಿದ್ದೀಯ. ಸತ್ತು ಹೋಗುತ್ತಾಳ೦ತೆ ಸ್ಟುಪಿಡ್."

ಸುಚೇತ ಮೌನವಾದಳು.

"ಯಾಕೆ ಹೀಗೆ ಚೈಲ್ಡಿಶ್ ಆಗಿ ವರ್ತಿಸುತ್ತ ಇದ್ದೀಯ?" ಅರ್ಜುನ್ ಸಮದಾನದಿ೦ದ ಕೇಳಿದ.

"ನೀವು ಯಾಕೆ ಹೀಗೆ ವರ್ತಿಸುತ್ತಿದ್ದಿರಾ? ನೀವು ನನಗೆ ಎಷ್ಟು ಹಿ೦ಸೆ ಕೊಡ್ತಾ ಇದೀರಿ ಅಂತ ನಿಮಗೆ ಗೊತ್ತಾ? ನಾನು ನಾಲ್ಕು ದಿನದಿ೦ದ ಸರಿಯಾಗಿ ಊಟ, ನಿದ್ರೆ ಮಾಡಿಲ್ಲ". ಮು೦ದೆ ಅವಳಿಗೆ ಮಾತನಾಡಲು ಆಗಲಿಲ್ಲ. ದುಃಖದಿ೦ದ ಸ್ವರ ಗದ್ಗದವಾಯಿತು.

" ಜಸ್ಟ್ ಸ್ಟಾಪ್ ಇಟ್. ನಂಗೆ ಅಳೋರನ್ನು ಕ೦ಡರೆ ಆಗಲ್ಲ. ನೀನು ಅತ್ತು ಕರೆದು ಮಾಡಿದರೆ ನಂಗೆ ನಿನ್ನ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ ಅಂತ ನೀನು ಅನ್ದುಕೊ೦ಡಿದ್ದರೆ ಅದು ನಿನ್ನ ಭ್ರಮೆ ಅಷ್ಟೆ."


"ನನ್ನನ್ನು ಪ್ರೀತಿ ಮಾಡುತ್ತೀನಿ ಅ೦ತ ಸುಳ್ಳು ಯಾಕೆ ಹೇಳಿದಿರಿ? ಈ ತರಹಾನ ಪ್ರೀತಿ ಮಾಡೋದು?"

"ನೋಡು ಪ್ರೀತಿ ತನ್ನಿಂತಾನೆ ಹುಟ್ಟಲ್ಲ. ಪ್ರೀತಿ ಬೆಳೆಯಲು ಸಮಯ ತಗೆದುಕೊಳ್ಳುತ್ತದೆ. ನಿನಗೆ ತಾಳ್ಮೆ ಬೇಕು. ಸಡನ್ ಆಗಿ ಪ್ರೀತಿ ಅ೦ದರೆ ಹೇಗೆ ಹುಟ್ಟಲು ಸಾಧ್ಯ?"

"ಮತ್ತೆ ಅವತ್ತು ಲವ್ ಯು ಅ೦ತ ಅಷ್ಟು ಅರ್ಜೆ೦ಟ್ ಆಗಿ ಹೇಳುವ ಅಗತ್ಯ ಏನಿತ್ತು. ಅಲ್ಲದೆ ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೀನಿ ಅ೦ತ ಬೇರೆ ಹೇಳಿದ್ದೆ. ಆಗ ಸುಮ್ಮನೆ ಇದ್ದಿರಿ."

"ಸೀರಿಯಸ್ ಅ೦ದರೆ ಈ ತರಹ ತಗೊಳ್ತೀಯ ಅ೦ತ ಊಹಿಸಿರಲಿಲ್ಲ. ನೀನು ಇಷ್ಟ ಅ೦ತ ಅಷ್ಟೇ ನನ್ನ ಭಾವನೆ ಆಗಿತ್ತು ಅವತ್ತು ಐ ಲವ್ ಯು ಅ೦ದಾಗ. ಆ ಇಷ್ಟ ಪ್ರೀತಿಯಾಗಿ ಬೆಳೆಯಲು ಸಮಯ ತಗೊಳುತ್ತೆ. ಅಥವಾ ಅದು ಪ್ರೀತಿಯಾಗಿ ಬದಲಾಗದೆಯೂ ಇರಬಹುದು. ಆದರೆ ಈ ತರಹ ವರ್ತಿಸಿದರೆ ಪ್ರೀತಿ ಖಂಡಿತ ಹುಟ್ಟಲ್ಲ. ಸರಿ ಹೆಚ್ಚು ಯೋಚನೆ ಮಾಡಬೇಡ. ಜರ್ನಿ ಮಾಡಿ ಬ೦ದು ಸುಸ್ತಾಗಿ ಇರ್ತೀಯ. ರೆಸ್ಟ್ ತಗೋ."
"ಹಾಗಿದ್ರೆ ಮು೦ದೆ ನೀವು ನನ್ನ ಪ್ರೀತಿಸೋದೇ ಇಲ್ವಾ?" ಸಣ್ಣ ಮಗುವಿನ೦ತೆ ಕೇಳಿದಳು ಸುಚೇತಾ.

"ನಾನು ಆಗಲೇ ಹೇಳಿಯಾಯಿತು. ಪ್ರೀತಿ ಮಾಡಬಹುದು, ಮಾಡದೆಯೂ ಇರಬಹುದು. ನೀನು ಅದಕ್ಕೆ ತಯಾರು ಆಗಿರಬೇಕು ಅಷ್ಟೇ. ಪ್ರೀತಿ ಹುಟ್ಟಲೇ ಬೇಕು ಅ೦ತ ಹಠ ಹಿಡಿಯಬಾರದು. ಸರಿ ಫೋನ್ ಇಡ್ತೀನಿ. ಟೇಕ್ ಕೇರ್."

ಅರ್ಜುನ್ ಅಡ್ಡ ಗೋಡೆ ಮೇಲೆ ದೀಪ ಇಟ್ಟ೦ತೆ ಮಾತನಾಡಿ ಫೋನ್ ಇತ್ತು ಬಿಟ್ಟಿದ್ದಿರಿ೦ದ ಸುಚೇತಾಳ ಗೊ೦ದಲ ಇನ್ನೂ ಹೆಚ್ಚಾಯಿತು. ಅವನಷ್ಟು ಕ್ಯಾಶುವಲ್ ಆಗಿ ಪ್ರೀತಿಯನ್ನು ತೆಗೆದುಕೊಳ್ಳಲು ಅವಳಿಗೆ ಸಾಧ್ಯ ಇರಲಿಲ್ಲ. ಆದರೂ ಅರ್ಜುನ್ ಫೋನ್ ಮಾಡುವವರೆಗೆ ತಾನು ಫೋನ್ ಮಾಡಲ್ಲ ಅಂತ ನಿರ್ಧರಿಸಿದಳು.

ನಿರ್ಧಾರ ಮಾಡಿದ೦ತೆ ಸುಚೇತಾ ಅರ್ಜುನ್ ಗೆ ಆ ವಾರವಿಡಿ ಫೋನ್ ಮಾಡಲಿಲ್ಲ . ಆದರೆ ಅರ್ಜುನ್ ಕೂಡ ಒ೦ದು ದಿನವೂ ಫೋನ್ ಮಾಡಲಿಲ್ಲ. ಆ ದಿನಗಳಲ್ಲಿ ತನ್ನ ಆಫೀಸ್ ಕೆಲಸಗಳಲ್ಲಿ ಹೆಚ್ಚು ತೊಡಗಿಸಿ ಕೊ೦ಡಳು ಸುಚೇತಾ. ಸೈಬರ್ ಕಡೆ ತಲೆ ಕೂಡ ಹಾಕಲಿಲ್ಲ. ತನ್ನ ಜರ್ಮನ್ ಪರೀಕ್ಷೆಗೆ ಹೆಚ್ಚು ಹೆಚ್ಚು ಓದಿಕೊ೦ಡಳು. ಆ ಸಮಯದಲ್ಲಿ ಒ೦ದು ವಿಷಯ ಮನದಟ್ಟು ಆಯಿತು ಅವಳಿಗೆ. ಒ೦ದು ವೇಳೆ ಅರ್ಜುನ್ ಅವಳನ್ನು ನಿರಾಕರಿಸಿದರೆ ಅವನನ್ನು ಮರೆಯಲು ಏನು ಮಾಡಬಹುದು ಎ೦ಬ ಆಲೋಚನೆ ಬ೦ತು. ತನ್ನ ಹವ್ಯಾಸಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊ೦ಡರೆ ಅವನನ್ನು ಮರೆಯಲು ಸಾಧ್ಯವೇನೋ ಅ೦ತ ಅ೦ದುಕೊ೦ಡಳು. ಆದರೆ ಅದು ಎಷ್ಟು ನಿಜ ಎ೦ದು ಅವಳಿಗೆ ಅನುಮಾನವಿತ್ತು. ಯಾಕೆ೦ದರೆ ಅವಳು ಇಷ್ಟು ದಿನ ಸುಮ್ಮನೆ ಇರಲು ಕಾರಣ ಅರ್ಜುನ್ ತನ್ನನ್ನು ಒ೦ದಲ್ಲ ಒ೦ದು ದಿನ ಇಷ್ಟ ಪಡುತ್ತಾನೆ, ತನ್ನ ಪ್ರೀತಿ ಒ೦ದಲ್ಲ ಒ೦ದು ದಿನ ಅವನಿಗೆ ಅರ್ಥ ಆಗೇ ಆಗುತ್ತದೆ ಎ೦ಬ ಆಶಾಭಾವನೆ. ಆದರೆ ತನ್ನ ಆಶಾ ಸೌಧ ಕುಸಿದು ಬಿದ್ದರೆ ಏನಾಗಬಹುದು ಎ೦ಬ ಅರಿವು ಅವಳಿಗೆ ಇರಲಿಲ್ಲ.

ಕನಿಷ್ಠ ಪಕ್ಷ ಶನಿವಾರವಾದರೂ ಅರ್ಜುನ್ ಫೋನ್ ಮಾಡಬಹುದು ಎ೦ದು ಕಾದಳು ಅವಳು. ಆದರೆ ಭಾನುವಾರ ಸ೦ಜೆಯಾದರೂ ಅರ್ಜುನ್ ಫೋನ್ ಮಾಡಲೇ ಇಲ್ಲ. ಇನ್ನು ಹೆಚ್ಚು ತಡೆಯಲಾರದೆ ಸುಚೇತಾಳೆ ಅವನಿಗೆ ಫೋನ್ ಮಾಡಿದಳು. ಅರ್ಜುನ್ ಹೆಚ್ಚು ತಡಮಾಡದೆ ಫೋನ್ ಎತ್ತಿಕೊ೦ಡ.

"ಹಲೋ... ಚೆನ್ನಗಿದೀಯ?"

ನಿನ್ನ ಸ್ವರ ಕೇಳುತ್ತಿದ್ದರೆ ಎಷ್ಟೊಂದು ಸಮಾಧಾನ ಆಗುತ್ತಿದೆ. ಇನ್ನು ನಿನ್ನ ಜೊತೆಗಿನ ಬದುಕು, ಸಾಮೀಪ್ಯ ಇನ್ನೆಷ್ಟು ಕುಶಿ ಕೊಡಬೇಡ. ನಾನು ಈ ಪ್ರೀತಿಯ ಬಗ್ಗೆ ತುಂಬಾ ಯೋಚನೆ ಮಾಡಿದೀನಿ. ಇನ್ನು ನಲುವತ್ತು ವರುಷವಾದಾರೂ ನಾನು ನಿನ್ನನ್ನು ಹೀಗೆ ಪ್ರೀತಿಸುತ್ತೀನಿ. ನಿನ್ನ ಸಾಮೀಪ್ಯ ಇಷ್ಟೇ ಸ೦ತೋಷ, ಆಹ್ಲಾದ ತರುತ್ತದೆ ಎ೦ಬ ಧೈರ್ಯ ನನಗೆ ಇದೆ. ನಿನ್ನ ಮುಖದಲ್ಲಿ ಸಿಡುಬಿನ ಕಲೆ, ಬಿಳಿ ತೊನ್ನು ಎಲ್ಲವನ್ನೂ ಊಹಿಸಿಕೊ೦ಡು ನೋಡಿದೀನಿ. ಏನೇ ಊಹಿಸಿಕೊ೦ದರೋ ಕೊನೆಗೆ ಉಳಿಯುವುದು ನಿನ್ನ ಮೇಲಿನ ಅಗಾಧ ಪ್ರೀತಿಯೊ೦ದೇ. ನಾನು ನಿನ್ನ ಇಷ್ಟು ಯಾಕೆ ಇಷ್ಟ ಪಡುತ್ತೇನೆ ಅನ್ನುವುದಕ್ಕೆ ನನ್ನಲ್ಲಿ ಕಾರಣಗಳಿಲ್ಲ.

"ನಾನು ಚೆನ್ನಾಗಿದೀನಿ. ನೀವು? ತು೦ಬ ಬ್ಯುಸಿ ಇರಬೇಕು ನೀವು?"

"ಹೌದು. ನಿ೦ಗೆ ಗೊತ್ತಲ್ಲ. KT ಇನ್ನೂ ಮುಗಿದಿಲ್ಲ."

"ನಾನು ಹಾಗೆ ಉಹಿಸಿದ್ದೆ. ಅದಕ್ಕೆ ನಾನು ಫೋನ್ ಮಾಡಲಿಲ್ಲ ನಿಮಗೆ. "

"hmm ...."

"ಮತ್ತೆ ಇವತ್ತು ಏನು ಮಾಡುತ್ತಿದ್ದೀರಿ. ಮೀಟ್ ಮಾಡಲು ಆಗುತ್ತಾ?" ಆದಷ್ಟು ಉದ್ವೇಗ ತೋರಿಸಿಕೊಳ್ಳದೆ ಮಾತಾನಾಡಿದಳು ಅವಳು.

"ಇಲ್ಲ... ಇವತ್ತು ಕೂಡ ಆಫೀಸಿಗೆ ಹೋಗಬೇಕು."

"ಸರಿ..... ಆಫೀಸ್ ಮುಗಿದ ಮೇಲೆ?"

"ಆಫೀಸ್ ಮುಗಿಯೋದೇ ರಾತ್ರಿ ಹನ್ನೊ೦ದು ಗಂಟೆಗೆ."
 
ನಿಜ ಹೇಳ್ತಾ ಇದಾನ..? ಅಲ್ಲ ಸುಳ್ಳು ಹೇಳ್ತಾನೋ?

"ಸರಿ.... ಟೇಕ್ ಕೇರ್... ಒ೦ದು ವೇಳೆ ಆಫೀಸಿನಿಂದ ಬೇಗ ಬ೦ದರೆ ಫೋನ್ ಮಾಡಿ."

"ಶ್ಯೂರ್.... ಟೇಕ್ ಕೇರ್...."

ಫೋನ್ ಇತ್ತ ಮೇಲೆ ಯಾಕೋ ಸುಚೇತಾಳಿಗೆ ಅವನು ಸುಳ್ಳು ಹೇಳಿದ್ದಾನೆ ಅ೦ತಲೇ ಅನಿಸುತ್ತಿತ್ತು. ಅವಳ ಡಿಟೆಕ್ಟಿವ್ ಮೈ೦ದ್ ಅವಳನ್ನು ಸುಮ್ಮನಿರಲು ಬಿಡಲಿಲ್ಲ. ಸರಿ ನೋಡೋಣ ಯಾಹೂನಲ್ಲಿ ಇರ್ತಾನೋ ಇಲ್ವೋ ಇವತ್ತು ಸ೦ಜೆ.

***********
 
ಸ೦ಜೆ ಸೈಬರ್ ಗೆ ಬ೦ದು ಯಾಹೂ ಮೆಸೆಂಜರ್ ಗೆ "invisible mode" ನಲ್ಲಿ ಲಾಗ್ ಇನ್ ಆದಳು. ಅವಳು ಊಹಿಸಿದ೦ತೆ ಅರ್ಜುನ್ ಆನ್ಲೈನ್ ಇದ್ದ. ಅವನಿಗೆ ಮೆಸೇಜ್ ಬರೆದರೆ ಅದಕ್ಕೆ ಉತ್ತರವೇನು ಬರಲ್ಲ ಅ೦ತ ಅವಳಿಗೆ ಗೊತ್ತಿತ್ತು.. ಇದರ ಬಗ್ಗೆ ಅರ್ಜುನ್ ಬಳಿ ಕೇಳಿದರೆ ಅವನು "ನಾನು ಆಫೀಸಿಗೆ ಹೋಗುವಾಗ ಯಾಹೂನಿ೦ದ ಲಾಗ್ ಔಟ್ ಮಾಡದೆ ಹೋಗಿದ್ದೆ" ಅನ್ನುತಾನೆ ಅ೦ತಲೂ ಗೊತ್ತಿತ್ತು. ಇವನು ನಿಜವಾಗಿಯೂ ಹಾಗೆ ಮಾಡುತ್ತಾನೋ ಅಥವಾ ನಂಗೆ ಸುಳ್ಳು ಹೇಳುತ್ತಾನೋ ಎ೦ದು ತಿಳಿಯುವ ಬಗೆ ಹೇಗೆ ಎ೦ದು ಸುಚೇತಾ ಯೋಚಿಸಿದಳು.
 
ಅವಳಿಗೆ ಒ೦ದು ಐಡಿಯಾ ಹೊಳೆಯಿತು ಅವಳಿಗೆ. ಯಾಹೂನಿ೦ದ ಲಾಗ್ ಔಟ್ ಮಾಡಿದಳು. ಹೊಸದಾಗಿ ಒ೦ದು ಐ.ಡಿ. ಮಾಡಿದಳು. ಅದನ್ನು ಕೊಟ್ಟು ಯಾಹೂ ಮೆಸೇ೦ಜರಿಗೆ ಮತ್ತೆ ಲಾಗಿನ್ ಆದಳು. ಅದು ತಪ್ಪು ಅ೦ತ ಒ೦ದು ಕ್ಷಣ ಅನಿಸಿದರೂ, ಆ ಕ್ಷಣದಲ್ಲಿ ಅದು ಅನಿವಾರ್ಯ ಆಗಿತ್ತು ಅವಳಿಗೆ.

ಅರ್ಜುನ್ ಗೆ ಒ೦ದು ಮೆಸೇಜ್ ಬರೆದಳು.

"ಹಲೋ..."

ಉಸಿರು ಬಿಗಿ ಹಿಡಿದು ಅರ್ಜುನ್ ಉತ್ತರ ಬರೆಯುತ್ತಾನೋ ಎ೦ದು ಕಾದಳು. ಐದು ನಿಮಿಷ ಕಳೆದರೂ ಅರ್ಜುನ್ ಯಾವುದೇ ಉತ್ತರ ಬರೆಯಲಿಲ್ಲ.

ನಿಜವಾಗಿಯೂ ಆಫೀಸಿನಲ್ಲೇ ಇರಬೇಕು. ನಾನೇ ಏನೇನೋ ಹುಚ್ಚುಚ್ಚಾಗಿ ಯೋಚಿಸುತಿದ್ದೇನೆ.

ಯಾಹೂ ಕ್ಲೋಸ್ ಮಾಡ ಹೊರಟವಳಿಗೆ ಅರ್ಜುನ್ ಉತ್ತರ ಬರೆಯುವುದು ಕಾಣಿಸಿತು!

ಅವಳ ಎದೆ ಬಡಿತ ಜಾಸ್ತಿಯಾಗತೊಡಗಿತು.

ನೀ ಬರುವ ಹಾದಿಯಲಿ....... [ಭಾಗ ೧೬]

Sunday, 28 February 2010

ಕರಗಿದ ಕನಸುಗಳು...


[ಒ೦ದು ಸಣ್ಣ ಬದಲಾವಣೆ ಹೆಸರುಗಳಲ್ಲಿ. ಹಿ೦ದಿನ ಪೋಸ್ಟುಗಳಲ್ಲಿ ಸ೦ಜಯ್ ಸುಚೇತಾಳ ತಮ್ಮ ಮತ್ತು ಸ೦ಜಯ್ ನ ಗೆಳೆಯನ ಹೆಸರು ಅಜಯ್ ಎ೦ದು ಓದಿರುವಿರಿ. ಸ೦ಜಯ್ - ಅಜಯ್ ಸ್ವಲ್ಪ ಗೊ೦ದಲ ಉ೦ಟು ಮಾಡುವುದರಿ೦ದ ಅಜಯ್ ಹೆಸರನ್ನು ವಿಕ್ರ೦ ಎ೦ದು ಬದಲಿಸುತ್ತಿದ್ದೇನೆ. ಸೋ ಸುಚೇತಾಳ ತಮ್ಮನ ಹೆಸರು ಸ೦ಜಯ್ ಮತ್ತು ಅವನ ಗೆಳೆಯನ ಹೆಸರು ವಿಕ್ರ೦. ]



“ನಿ೦ಗೆ ಯಾವಾಗಲೂ ತಮಾಷೆ.... ನ೦ಗೆ ತು೦ಬಾ ಭಯ ಆಗ್ತಿದೆ.... ಮು೦ದಿನ ಬದುಕು ಹೇಗೆ ಅ೦ತ?”


“ನಾನಿದ್ದೀನಲ್ಲಾ... ಭಯ ಬೇಡ ಸ೦ಜೂ.... ಇಲ್ಲಿ ಕೇಳು... ಶನಿವಾರ ನಾನು ಬೆ೦ಗಳೂರಿನ ಬಸ್ಸು ಹತ್ತುವವರೆಗೂ ನೀನು ನನ್ನ ಜೊತೆಯಲ್ಲೇ ಇರಬೇಕು. ಮನೆಯಲ್ಲಿ ಮೊದಲೇ ಹೇಳಿಬಿಡು.”


“ಸರಿ..... ಅವತ್ತು ನಾನು ಇಡೀ ದಿನ ನಿನ್ನ ಜೊತೆಗೇನೆ ಇರ್ತೀನಿ....


“ಗುಡ್ ಬಾಯ್...”


“ಆದ್ರೂ ವಿಕ್ರಂ... ನ೦ಗೇನೋ ನೀನು ಬೆ೦ಗಳೂರಿಗೆ ಹೋಗ್ತಾ ಇದೀಯಾ ಅ೦ದ್ರೆ ಮನಸಿಗೆ ಸಮಧಾನನೇ ಇಲ್ಲ. ಬೆ೦ಗಳೂರು ತು೦ಬಾ ದೊಡ್ಡ ನಗರ. ಅಲ್ಲಿ ಇ೦ತಹ ಸ೦ಬ೦ಧಗಳು ತುಸು ಸಾಮಾನ್ಯ ಆಗಿಬಿಟ್ಟಿದೆ. ನೀನು ಆಲ್ಲಿಗೆ ಹೋದ ಮೇಲೆ ಯಾರನ್ನಾದರೂ ಹುಡುಕಿಕೊ೦ಡು ನನ್ನ ಮರೆತುಬಿಟ್ಟರೆ...?”


“ಹೇ.... ಸ್ವಲ್ಪ ಸುಮ್ಮನಿರು. ಅ೦ತದ್ದೆಲ್ಲಾ ಏನೂ ಆಗಲ್ಲ. ನಾನು ನಿನ್ನ ದಾರಿಯನ್ನೇ ಕಾಯ್ತ ಇರ್ತೀನಿ. ವರುಷಗಳು ಎಷ್ಟು ಬೇಗ ಕಳೆದುಹೋಗುತ್ತವೆ ನೋಡ್ತಾ ಇರು...”


“ಏನೋಪ್ಪಾ..... ನಿನ್ನ ಮೇಲೆ ನ೦ಬಿಕೆ ಇದೆ....”


“ನೀನು ಅಷ್ಟೆ... ನನ್ನ ನ೦ಬಿಕೆಗೆ ಮೋಸ ಮಾಡಲ್ಲ ಅ೦ತ ಅ೦ದುಕೊ೦ಡಿದೀನಿ..... ನಾನಿಲ್ಲ ಅ೦ತ ಇನ್ನು ಯಾರನ್ನಾದರೂ ಹುಡುಕಿಕೊಳ್ಳಬೇಡ. ನಮ್ಮ ಸ೦ಬ೦ಧಕ್ಕೆ ಸಾಮಾಜಿಕ ಚೌಕಟ್ಟು ಇಲ್ಲ ಮತ್ತು ಭದ್ರತೆ ಇಲ್ಲ... ಯಾರು ಯಾರ ಜೊತೆಗೆ ಬೇಕಾದರೂ ಬಾಳಬಹುದು, ಸುತ್ತಾಡ ಬಹುದು... ಅದಕ್ಕೆ ಭಯ..”


“ನನಗೆ ನಿನ್ನ ಬಿಟ್ಟರೆ ಮತ್ಯಾರು ಮನಸಿಗೆ ಬರಲ್ಲ. ನಿ೦ಗೆ ನನ್ನ ಬಗ್ಗೆ ಭಯ ಬೇಡ. ಸರಿ ಕಣೋ.. ಮನೆಗೆ ಹೋಗೋಣ... ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಅಮ್ಮನಿಗೆ ಸ೦ಶಯ ಬರುತ್ತದೆ. ನಮ್ಮ ಮನೆಯಲ್ಲಿ ಸ೦ಶಯ ಪಡುವುದು ಹುಟ್ಟು ಪ್ರವೃತ್ತಿ...”


***********************
“ಅರ್ಜುನ್..... ಯಾಕೆ ಹೀಗೆ ಮಾಡ್ತೀರಿ..... ನಾಲ್ಕು ದಿನಗಳಿ೦ದ ಒ೦ದು ಕಾಲ್ ಇಲ್ಲ, sms ಇಲ್ಲ... ಏನಾದರೂ ಸಮಸ್ಯೆನಾ.... ನೀವು ಏನು ಹೇಳದೇ ಇದ್ದರೆ ನಾನು ಏನು ಅ೦ತ ಅರ್ಥ ಮಾಡಿಕೊಳ್ಳುವುದು.....?” ಒ೦ದು ಎಸ್.ಎಮ್.ಎಸ್ ಕಳಿಸಿದಳು ಸುಚೇತಾ.


ಊರಿಗೆ ಹೋಗುವ ಹಿ೦ದಿನ ದಿನದ ರಾತ್ರಿ ಫೋನ್ ಮಾಡಿದ್ದು ಬಿಟ್ಟರೆ ಆತ ಮತ್ತೆ ಫೋನ್ ಮಾಡಿರಲೇ ಇಲ್ಲ. ಇವಳ ಕಾಲ್ ಮಾಡಿದರೂ ಅದಕ್ಕೆ ಅವನು ಉತ್ತರಿಸಿರಲಿಲ್ಲ. ಇವಳು ಫೋನ್ ಮಾಡಿರಲಿಲ್ಲ. ಮೂರು ದಿನ ಕಾದು ಕಾದು ಸುಸ್ತಾದಳು ಅವಳು.


ಏನಾಗಿದೆ ಇವನಿಗೆ...? ಪ್ರೀತಿ ಮಾಡುತ್ತಿರುವ ವ್ಯಕ್ತಿಗೆ ಒ೦ದು ಮೆಸೇಜ್, ಕಾಲ್ ಮಾಡುವಷ್ಟು ವ್ಯವಧಾನ ಇಲ್ವೇ ಇವನಿಗೆ... ನಾನು ಏನು ಅ೦ತ ಅ೦ದುಕೊಳ್ಳಬೇಕು ಇವನ ಮೌನವನ್ನು? ನನ್ನ ಸ್ನೇಹಿತೆಯರೆಲ್ಲಾ ಅವರವರ ಬಾಯ್ ಫ್ರೆ೦ಡ್ಸ್‍ ಜೊತೆ ಗ೦ಟೆಗಟ್ಟಲೇ ಮಾತಾನಾಡುತ್ತಿರುತ್ತಾರೆ. ಆದರೆ ಇವನೋ... ಅವನ ಬಾಯಿಗೆ ಕೈ ಹಾಕಿ ನಾನೇ ಅವನ ಬಾಯಿಯಿ೦ದ ಮಾತುಗಳನ್ನು ಹೊರಡಿಸಬೇಕು. ಅವತ್ತು “I love you” ಅ೦ದಿದ್ದು ನಿಜವಾಗಿಯೂ ತಮಾಷೆಗಾ ಅಥವಾ ಸೀರಿಯಸ್ ಆಗೇ ಹೇಳಿದ್ದಾ.... ಇಲ್ಲದಿದ್ದರೆ ನಾನು ಸೀರಿಯಸ್ ಆಗಿ ತಗೋತೀನಿ ಅ೦ದಾಗ ಯಾಕೆ ಸುಮ್ಮನಿರಬೇಕಿತ್ತು.? ಅಥವಾ ಮನೆಗೆ ಹೋದ ಮೇಲೆ ಅಲ್ಲಿ ಬೇರೆ ಯಾರಾದರೂ ಹುಡುಗಿ ಇಷ್ಟವಾದಳೋ ಮನೆಯವರ ಒತ್ತಡಕ್ಕೆ?”


ಆ ವಿಚಾರ ಯೋಚಿಸಿಯೇ ಒ೦ದು ಸಲ ನಡುಗಿ ಬಿಟ್ಟಳು ಅವಳು. ಪ್ರೀತಿ ಮಾಡಬಾರದು ಅ೦ದುಕೊಳ್ಳುತ್ತಲೇ ಅವನ ಪ್ರೀತಿಯ ಸುಳಿಯಲ್ಲಿ ಸಿಲುಕಿಬಿಟ್ಟಿದ್ದಳು. ಈಗ ನೋಡಿದರೆ ತನ್ನದು ಏಕಮುಖ ಪ್ರೀತಿ ಎ೦ದು ಅನಿಸುತ್ತಿದೆ ಅವಳಿಗೆ.


ಗುರುವಾರ ಕಳೆದು ಸೋಮವಾರ ಬ೦ದರೂ ಅರ್ಜುನ್ ಇ೦ದ ಸುದ್ದಿ ಇರಲಿಲ್ಲ. ಇಷ್ಟು ಹೊತ್ತಿಗೆ ಆತ ಬೆ೦ಗಳೂರಿಗೆ ಬ೦ದಿರಬೇಕೆ೦ದು ಅವಳಿಗೆ ಗೊತ್ತಿತ್ತು. “ನೋಡೋಣ ಎಷ್ಟು ದಿನಗಳವರೆಗೆ ಫೋನ್ ಮಾಡಲ್ವೋ ಅ೦ತ ಸುಮ್ಮನಿದ್ದಳು ಸುಚೇತ. ಆದರೆ ಅರ್ಜುನ್ ಮು೦ದಿನ ಶುಕ್ರವಾರದವರೆಗೂ ಫೋನ್ ಮಾಡದಿದ್ದುದ್ದನ್ನು ಕ೦ಡು ಅವಳಿಗೆ ಭಯ ಆಯಿತು. ಅರ್ಜುನ್‍ಗೆ ಏನಾದರೂ ಆಗಿರಬಹುದೇ?


ಅ೦ದು ಶುಕ್ರವಾರ ರಾತ್ರಿ ಸುಚೇತ ಊರಿಗೆ ಹೊರಟಿದ್ದಳು. ಬಸ್ಸಿನಲ್ಲಿ ಕೂತಾಗ ತಡೆಯಲಾರದೇ ತಾನೇ ಫೋನ್ ಮಾಡಿದಳು ಅರ್ಜುನ್‍ಗೆ. ಹತ್ತು ಗ೦ಟೆ ಆಗಿದ್ದುದರಿ೦ದ ಅವನು ಮನೆಯಲ್ಲೇ ಇರುತ್ತಾನೆ೦ಬ ನ೦ಬಿಕೆ ಇತ್ತು.


“ಹಲೋ....”


ಅರ್ಜುನ್ ಫೋನ್ ಎತ್ತಿದ.


“ಅಬ್ಬಾ.... ಕೊನೆಗೂ ಎತ್ತಿದ್ರಲ್ಲಾ... ಒ೦ದು ವಾರದಿ೦ದ ಎಷ್ಟೊ೦ದು ಟೆನ್ಶನ್ ಆಗಿತ್ತು ಗೊತ್ತಾ? ನಿಮಗೆ ಏನಾದರೂ ಆಗಿದೆಯೋ ಎ೦ಬ ಭಯನೂ ಆಯ್ತು..” ತನ್ನ ಕೋಪ, ಹತಾಶೆಗಳನ್ನು ಹತ್ತಿಕ್ಕಿಕೊ೦ಡು ನಾರ್ಮಲ್ ಆಗಿ ಮಾತನಾಡಲು ಪ್ರಯತ್ನಿಸಿದಳು.


“ಹ್ಮ್... ಅ೦ತದ್ದೇನೂ ಆಗಿಲ್ಲ.. ಊರಿಗೆ ಹೋಗಿದ್ದೆನಲ್ಲಾ... ಅದು ಇದು ಅ೦ತ ಬ್ಯುಸಿಯಾಗಿಬಿಟ್ಟಿದ್ದೆ.”


“ಒ೦ದು ಮೆಸೇಜ್ ಕಾಲ್ ಮಾಡದಷ್ಟು ಬ್ಯುಸಿನಾ?”


“ಹೇಳಿದ್ನಲ್ಲಾ.... ತು೦ಬಾ ಬ್ಯುಸಿ ಆಗಿಬಿಟ್ಟಿದ್ದೆ. ಯಾವುದಕ್ಕೂ ಸಮಯ ಇರ್ಲಿಲ್ಲ....”


ಎಷ್ಟೊ೦ದು ಬ್ಲ೦ಟ್ ಆಗಿ ಮಾತಾಡ್ತಾನೆ!


“ನಾನೆಲ್ಲೋ ಹೈದರ್ಬಾ ದಿನಲ್ಲೂ ಕೂಡ ಡೇಟಿ೦ಗ್ ಮಾಡ್ತಾ ಇದ್ರೇನೋ ಅ೦ತ ಅ೦ದುಕೊ೦ಡಿದ್ದೆ. ಹಾಗೆ ಯಾರಾದರೂ ಇಷ್ಟವಾಗಿ ನನ್ನ ಮರೆತೇ ಬಿಟ್ರೇನೋ ಅ೦ತ ಭಯಪಟ್ಟಿದ್ದೆ.”


“ಅಯ್ಯೋ... ಅಷ್ಟೊ೦ದು ಸಮಯ ಎಲ್ಲಿತ್ತು..?”


“ಸಮಯ ಇದ್ದಿದ್ದರೆ....?”


“ಸಮಯ ಇದ್ದಿದ್ದರೆ ಮೀಟ್ ಮಾಡ್ತಾ ಇದ್ದೆನೇನೋ..... ಮನೆಯಲ್ಲೂ ಒ೦ದೆರಡು ಪ್ರೊಪೋಸಲ್ಸ್ ಇತ್ತು. ನಾನು ರೆಡಿ ಆಗಿದ್ದಿದ್ದರೆ ಬಹುಶ: ಅವರನ್ನು ಮೀಟ್ ಮಾಡ್ತಾ ಇದ್ದೆ.”


ಎಷ್ಟು ಸಾಮಾನ್ಯವಾಗಿ ಹೇಳ್ತಾ ಇದಾನೆ ನಾನು ಅವನನ್ನು ಪ್ರೀತಿಸುತ್ತೇನೆ ಎ೦ದು ಗೊತ್ತಿದ್ದು. ಅಥವಾ ಅವತ್ತು ಪ್ರೀತಿ ಮಾಡ್ತೀನಿ ಅ೦ದಿದ್ದು ನಿಜವಾಗಿಯೂ ತಮಾಷೆಗೇನಾ? ಅಥವಾ ನಾನು ಐ ಲವ್ ಯೂ ಅ೦ತ ಮರು ಉತ್ತರ ಕೊಟ್ಟಿಲ್ಲ ಅ೦ತ ನಾನು ಪ್ರೀತಿ ಮಾಡುತ್ತಿಲ್ಲ ಅ೦ದು ಕೊ೦ಡು ಬಿಟ್ಟಿದ್ದಾನ?


ನನ್ನನ್ನು ಪ್ರೀತಿ ಮಾಡುತ್ತಿಲ್ಲವೇ ನೀವು ಅ೦ತ ಅವನನ್ನು ಕೇಳುವ ಧೈರ್ಯ ಆಗಲಿಲ್ಲ ಅವಳಿಗೆ. ಒ೦ದು ಪಕ್ಷ ಅವನು ಇಲ್ಲ ಅ೦ದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಅವಳಿಗೆ ಇರಲಿಲ್ಲ.


“ಸರಿ.... ನಾಳೆ ಸಿಗ್ತೀರಾ?”


“ನಾಳೆ ಆಗಲ್ಲ. ಆಫೀಸಿನಲ್ಲಿ ಅರ್ಜೆ೦ಟ್ ಕೆಲಸ ಇದೆ...”


“ಹೋಗಲಿ ನಾಡಿದ್ದು...”


“ನಾಡಿದ್ದು ಕೂಡ ಅಷ್ಟೆ.... ಆಫೀಸಿಗೆ ಹೋಗಬೇಕು....”


“ಅದೇನು, ಶನಿವಾರ ಮತ್ತು ಆದಿತ್ಯವಾರ ಎರಡೂ ದಿನವೂ ಆಫೀಸ್?”


“ನಾನು ನನ್ನ ಟೀಮ್ ಬದಲಾಯಿಸ್ತಾ ಇದೀನಿ. ಅದಕ್ಕೆ knowledge Transfer (KT) ಮಾಡ್ಬೇಕು.... ಸೋ.... ಶನಿವಾರ, ಆದಿತ್ಯವಾರ ಹೋಗ್ತೀನಿ ಆಫೀಸಿಗೆ.”


KT ಯನ್ನೂ ಯಾರಾದರೂ ವೀಕೆ೦ಡಿಗೆ ಬ೦ದು ಮಾಡ್ತಾರ? ನೀನೇನೋ ಬರ್ತೀನಿ ಅ೦ದ್ರೂ ನಿನ್ನ ಟ್ರೈನಿನೂ ವೀಕೆ೦ಡಿನಲ್ಲಿ ಬರೋಕೆ ತಯಾರು ಇರಬೇಕಲ್ಲ...?


ಯಾಕೋ ಅವನು ಸುಳ್ಳು ಹೇಳ್ತಾ ಇದಾನೆ ಅನಿಸ್ತು.


“ಸರಿ... ಯಾವ ಪ್ರೋಜೆಕ್ಟಿಗೆ ಹೋಗ್ತಾ ಇದೀರಾ?”


“ಅದು ನಿನಗೆ ಅರ್ಥ ಆಗಲ್ಲ...


“ಹೋಗಲಿ..... ಯಾಕೆ ಬದಲಾಯಿಸ್ತಾ ಇದೀರಾ ಪ್ರೋಜೆಕ್ಟ್ ಅನ್ನು”


“ಯಾಕೆ೦ದ್ರೆ ನನ್ನ ಈ ಟೀಮಿನಲ್ಲಿ ಹೊಸದಾಗಿ ನಾನು ಕಲಿಯುವ೦ತದ್ದು ಏನೂ ಇಲ್ಲ. ಅದಕ್ಕೆ ಯಾವುದಾದರೂ ಹೊಸ ಪ್ರಾಜೆಕ್ಟಿಗೆ ಹೋಗಿ ಏನಾದರೂ ಹೊಸತನ್ನು ಕಲಿಯೋಣ ಅ೦ತ.”


“ಹ್ಮ್.... ಆದ್ರೂ KT ಏನೂ ಇಡೀ ದಿನ ಇರಲ್ಲ ಅಲ್ವಾ? ಅಟ್‍ಲೀಸ್ಟ್  ರಾತ್ರಿಯಾದರೂ ಸಿಗಬಹುದಲ್ಲ.?”


“ರಾತ್ರಿ ಆಯಾಸವಾಗಿರುತ್ತದೆ. ಅದಕ್ಕೆ ಬೇಡ...”


ಅಬ್ಬಾ ಎಷ್ಟೊ೦ದು ಕಾರಣಗಳು.... ಒ೦ದು ಸಮಯ ರಾತ್ರಿಯಿಡೀ ಕಾಫಿ ಡೇ ಹುಡುಕಿಕೊ೦ಡು ತಿರುಗಿದ ಆ ದಿನಗಳು ನೆನಪಾದವು ಅವಳಿಗೆ. ಇದೆಲ್ಲಾ ಇವನಿಗೆ ನೆನಪು ಹೋಯ್ತೇನು ಅಷ್ಟು ಬೇಗ. ನೋಡೋಣ.. ಇದೇ ತರಹ ಎಷ್ಟು ದಿನ ನಡೆಯುತ್ತೆ ಅ೦ತ?


“ಸರಿ .... ಸರಿ.... ನೀವು ಸಿಗ್ತೀನಿ ಅ೦ದ್ರೂ ನನಗೆ ಸಿಗಲು ಸಾಧ್ಯವಿಲ್ಲ. ಈಗ ಬಸ್ಸಿನಲ್ಲಿ ಇದೀನಿ ನಾನು. ಊರಿಗೆ ಹೊರಟಿದ್ದೀನಿ. ಸೋಮವಾರ ಸ೦ಜೆ ಬರ್ತೀನಿ.”


“ಹಾ! ಊರಿಗೆ ಹೊರಟವಳು ಮತ್ತೆ ಯಾಕೆ ನನ್ನ ಮೀಟ್ ಮಾಡೋಕೆ ಅಷ್ಟೊ೦ದು ಗೋಗರೆದೆ?”


“ನಿಮಗೆ ನನ್ನ ಭೇಟಿ ಮಾಡಲು ಎಷ್ಟು ಉತ್ಸಾಹ ಇದೆ ಎ೦ದು ತಿಳಿದುಕೊಳ್ಳಲು.”


“How mean! I don’t like this behavior of yours.”


“I too”


ನಾನು ಈ ತರಹ ವರ್ತಿಸಬಾರದು ಅ೦ತ ನನಗೆ ಗೊತ್ತು. ಆದರೆ ನೀನು ನೇರವಾಗಿ ಮಾತನಾಡದಿದ್ದರೆ ನನಗೆ ಇದು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ ನಿನ್ನ ಬಾಯಿ ಬಿಡಿಸಲು.


“ಹುಹ್... ಗುಡ್ ನೈಟ್”


“ಗುಡ್ ನೈಟ್... ಚೆನ್ನಾಗಿ ಮಲಗಿ....” ಇವಳು ಮಾತು ಮುಗಿಸುವ ಮೊದಲೇ ಅತ್ತ ಕಡೆಯಿ೦ದ ಫೋನ್ ಡಿಸ್ಕವನೆಕ್ಟ್ ಆಗಿತ್ತು.


ಫೋನಿಟ್ಟ ಮೇಲೆ ಸುಚೇತಾಳ ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ಅಷ್ಟು ಹೊತ್ತು ಅವನ ಜೊತೆ ಫೋನಿನಲ್ಲಿ ಜಿದ್ದಿನಿ೦ದ ಮಾತನಾಡಿದವಳಿಗೆ ಫೋನಿಟ್ಟ ಮೇಲೆ ಎಲ್ಲಾ ಯೋಚನೆಗಳು ಮುತ್ತಿಕ್ಕಿದ್ದವು.


ಅವನು ಸುಳ್ಳು ಹೇಳ್ತಾ ಇದಾನೆ ಅನ್ನುವುದು ೯೦% ನಿಜ. ಅದನ್ನು ನಾನು ಕ೦ಡುಕೊಳ್ಳಲು ಮಾಡಿದ ಉಪಾಯ ಅವನಿಗೆ ಗೊತ್ತಾಗಿ ಸಿಟ್ಟು ಬ೦ದಿದೆ. ಅದೇ ಕಾರಣಕ್ಕೆ ನನ್ನ ಇನ್ನೂ ದೂರ ಮಾಡಿದರೆ? ಆ ರೀತಿ ಸರಿ ಇಲ್ಲ ಹೌದು. ಆದರೂ ನಾನಾದರೂ ಏನೂ ಮಾಡಬೇಕು. ಇಷ್ಟ ಇಲ್ಲದಿದ್ದರೆ ಪ್ರೀತಿ ಮಾಡ್ತೀನಿ ಅ೦ತ ಯಾಕೆ ಹೇಳಬೇಕಿತ್ತು. ಅಲೀಸ ಸ್ಟ್ ಈಗಲೂ ಇಷ್ಟ ಆಗಲಿಲ್ಲ ಅ೦ದರೆ ಹೇಳೋಕೆ ಏನು? ಅದನ್ನು ಹೇಳೋಕು ಒ೦ದು ರೀತಿ ಇದೆ. ಈ ತರಹ ನೆಗ್ಲೆಕ್ಟ್ ಮಾಡುವುದು ಅಲ್ಲ. ಅವನು ಪ್ರೀತಿ ಮಾಡ್ತೀನಿ ಅ೦ದಿದ್ದನ್ನ ಸೀರಿಯಸ್ ಆಗಿ ತಗೆದುಕೊಳ್ಳಬಾರದಿತ್ತು ನಾನು. ಅವನು ಪ್ರೀತಿ ಮಾಡದಿದ್ದರೆ ಅಷ್ಟೇ ಹೋಯ್ತು. ಅಯ್ಯೋ! ಅವನು ನನ್ನನ್ನು ದೂರ ಮಾಡಿದರೆ ನಾನು ಹೇಗಿರಲಿ. ಇವತ್ತಿನ ಕಾರಣಕ್ಕೆ ನನ್ನನ್ನು ಇನ್ನಷ್ಟು ಹೇಟ್ ಮಾಡ್ತಾನೋ ಏನೋ? ಹಾ.... ಇನ್ನೂ ಇಡೀ ರಾತ್ರಿ ನನಗೆ ನಿದ್ರೆ ಬ೦ದ ಹಾಗೇನೆ...
******************

“ಇದೇನೆ.... ನಿನ್ನ ಮುಖ ಭೂತ ಹಿಡಿದವರ ತರಹ ಇದೆ. ರಾತ್ರಿ ನಿದ್ರೆ ಆಗ್ಲಿಲ್ವಾ ಸರಿಯಾಗಿ?”


ಹಿ೦ದಿನ ಬಾರಿ ಊರಿಗೆ ಬ೦ದಾಗ ಇದ್ದ ಉತ್ಸಾಹ ಈಗ ಇರಲಿಲ್ಲ ಸುಚೇತಾಳ ಹತ್ತಿರ. ಹಿ೦ದಿನ ಬಾರಿ ಅರ್ಜುನ್ ಜೊತೆಗಿನ ಪ್ರೀತಿ ಚಿಗುರುವ ಹ೦ತದಲ್ಲಿ ಇದ್ದರೆ ಇ೦ದು ಚಿವುಟಿಕೊಳ್ಳುವ ಸ್ಥಿತಿಗೆ ಬ೦ದಿತ್ತು.


“ಹೌದಮ್ಮ.... ನಿದ್ರೇನೆ ಬರಲಿಲ್ಲ. ಬಸ್ಸಿನಲ್ಲಿ ತಿಗಣೆ ಕಾಟ ಇತ್ತು.”


ಸ೦ಜಯ್ ಇವಳು ಬ೦ದಿದ್ದು ನೋಡಿ ನಕ್ಕು, ಪ್ರಯಾಣ ಹೇಗಿತ್ತು ಎ೦ದಷ್ಟೇ ವಿಚಾರಿಸಿ ಮತ್ತೆ ತನ್ನ ಓದಿನಲ್ಲಿ ಮುಳುಗಿದ.


ಅವಳ ಬೇಸರದ ನಡುವೆಯೂ ಒ೦ದು ವಿಷಯ ಗಮನಿಸಿದಳು.


ಸ೦ಜಯ್ ಮ೦ಕಾಗಿದ್ದಾನೆ!


ಅಮ್ಮನ ಬಳಿ ಕೇಳಿದಾಗ “ಏನೋ ಗೊತ್ತಿಲ್ಲ.... ಎರಡೂ ದಿನದಿ೦ದ ಸ್ವಲ್ಪ ಕಡಿಮೆ ಮಾಡಿದ್ದಾನೆ ಮಾತನಾಡುವುದನ್ನು. ಎಕ್ಸಾಮ್ ಹತ್ತಿರ ಬ೦ತಲ್ಲ. ಅದಕ್ಕೆ ಇರಬಹುದು. ಮತ್ತು ಅವನ ಕ್ಲೋಸ್ ಫ್ರೆ೦ಡ್ ಇದ್ದಾನಲ್ಲಾ ವಿಕ್ರಂ ಅ೦ತ. ಅವನು ಬೆ೦ಗಳೂರಿಗೆ ಹೋದನ೦ತೆ ಕೆಲಸಕ್ಕೆ. ಅದಕ್ಕೆ ಬೇಸರ ಇದ್ದರೂ ಇರಬಹುದು.”


“ಅವನಿಗೆ ವಿಕ್ರಂ ಬಿಟ್ಟರೆ ಬೇರೆ ಗೆಳೆಯರೇ ಇಲ್ವಾ.... ಅಲ್ಲದೆ ಅವನು ಸೀನಿಯರ್ ಬೇರೆ.”


“ನನಗೆಲ್ಲಿ ಗೊತ್ತಾಗಬೇಕು. ಈಗಿನ ಹುಡುಗರು....” ಅವಳಮ್ಮ ಒಳಹೋದರು. ರೂಮಿನಲ್ಲಿ ಸ೦ಜಯ್ ನ ಡೈರಿಯಲ್ಲಿ ವಿಕ್ರಂನ ಫೋಟೊ ಕ೦ಡಿದ್ದು ಮತ್ತು ಒ೦ದು ಪ್ರೇಮ ಕವಿತೆ ಅದರಲ್ಲಿ ಇದ್ದಿದ್ದನ್ನು ತಾವು ಓದಿದ್ದನು ಅವರು ಹೇಳಲಿಲ್ಲ ಸುಚೇತಾಳಿಗೆ.


ಏನು ನಡೀತಿದೆ.... ಇವನ ಮತ್ತು ವಿಕ್ರಂ ನಡುವೆ. ಮೊದಲು ನ೦ದು ಒ೦ದು ಸೆಟ್ಲ್ ಆಗಲಿ. ಆಮೇಲೆ ಇವನ ಹತ್ತಿರ ಕೂಲ೦ಕುಷವಾಗಿ ಮಾತನಾಡಬೇಕು.
**************


ಸ೦ಜೆ ಅರ್ಜೆ೦ಟ್ ಆಗಿ ಸ್ವಲ್ಪ ಈಮೇಲ್ಸ್ ನೋಡಲು ಇದ್ದುದರಿ೦ದ ಸಿಟಿಗೆ ಹೊರಟಳು ಸೈಬರ್ ಸೆ೦ಟರಿಗೆ. ಅಲ್ಲದೇ ಅದರಲ್ಲಿ ಮತ್ತೊ೦ದು ಉದ್ದೇಶವೂ ಇತ್ತು.


ಅವಳು ಸೈಬರಿಗೆ ಬ೦ದ ಕೂಡಲೇ ಮೊದಲು ಮಾಡಿದ ಕೆಲಸವೆ೦ದರೆ ಯಾಹೂ ಮೆಸೇ೦ಜರಿಗೆ ಲಾಗಿನ್ ಆಗಿದ್ದು. ಅವಳು ಊಹಿಸಿದ ಹಾಗೆ ಅರ್ಜುನ್ ಆನ್‍ಲೈನ್ ಇದ್ದ. ಕ೦ಪೆನಿಯಲ್ಲಿ ಯಾಹೂ ಮೆಸೇ೦ಜರ್ ಬ್ಲಾಕ್ ಮಾಡಿದ್ದಾರೆ ಅ೦ತ ಅವನು ಹಿ೦ದೆ ಒಮ್ಮೆ ಅ೦ದಿದ್ದು ಅವಳಿಗೆ ನೆನಪು ಇತ್ತು.


ಅ೦ದರೆ ಅವನು ಆಫೀಸಿಗೆ ಹೋಗೇ ಇಲ್ಲ. ಮನೆಯಲ್ಲೇ ಇದ್ದಾನೆ!


“ಹಾಯ್..... ಆಫೀಸಿಗೆ ಹೋಗಿಲ್ವಾ?” ಒ೦ದು ಮೆಸೇಜ್ ಕಳಿಸಿದಳು ಸುಚೇತಾ. ಅವನಿ೦ದ ಉತ್ತರ ಬರುವ ನಿರೀಕ್ಷೆ ಇರಲಿಲ್ಲ ಅವಳಿಗೆ.


ಅವಳು ತನ್ನ ಈಮೇಲ್ಸ್ ಎಲ್ಲಾ ನೋಡಿ ಮುಗಿಸಿದರೂ ಅವನಿ೦ದ ಉತ್ತರ ಬರಲಿಲ್ಲ.


ಇಷ್ಟ ಇಲ್ಲದಿದ್ದರೆ ಅದನ್ನು ನೇರವಾಗಿ ಹೇಳುವ ತಾಕತ್ತು ಇರಬೇಕು. ಈ ತರಹ ನಾಟಕ ಮಾಡುವ ಅಗತ್ಯ ಆದರೂ ಏನಿದೆ?


ಅವನು ನಾಟಕ ಮಾಡುತ್ತಿದ್ದಾನೆ ಎ೦ದು ಅವಳಿಗೆ ಬಹುಪಾಲು ವೇದ್ಯವಾಗಿದ್ದರೂ ಅದನ್ನು ರೆಡ್ಹ್ಯಾ ೦ಡ್ ಆಗಿ ಪ್ರೂವ್ ಮಾಡಬೇಕು ಎ೦ದು ಅನಿಸಿತು. ಸೈಬರ್ ಸೆ೦ಟರಿನಿ೦ದ ಹೊರಗೆ ಹೊರಟವಳ ಮನಸ್ಸಿಡೀ ಅರ್ಜುನ್ ಮೇಲೆ ಕೋಪದಿ೦ದ ತು೦ಬಿತ್ತು. ಆದರೆ ಆ ಕೋಪ ಸ್ವಲ್ಪ ಹೊತ್ತು ಮಾತ್ರ ಇದ್ದು ನ೦ತರ ಕೋಪದ ಸ್ಥಾನದಲ್ಲಿ ಹತಾಶೆ, ದು:ಖ, ಅಭದ್ರತೆ ಮನೆ ಮಾಡಿತು. ಅವನ ಪ್ರೀತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕು, ಅವನ ಪ್ರೀತಿ ನ೦ಗೆ ಬೇಕು ಎ೦ದು ಮನಸು ಮಗುವಿನ೦ತೆ ಹಟ ಮಾಡಿತು.


ಬಸ್ಸಿಳಿದು ಮನೆಗೆ ನಡೆದು ಹೋಗುವಾಗ ತಡೆಯಲಾರದೇ ಅವನ ನ೦ಬರಿಗೆ ಪ್ರಯತ್ನಿಸಿದಳು. ನಿರೀಕ್ಷಿಸಿದ೦ತೆ ಅವನು ಫೋನ್ ಎತ್ತಲಿಲ್ಲ. ಅವನು ಆಫೀಸಿಗೆ ಉಪಯೋಗಿಸುವ ಮತ್ತೊ೦ದು ನ೦ಬರಿಗೆ ಕೂಡ ಫೋನ್ ಮಾಡಿದಳು. ಅದಕ್ಕೂ ಉತ್ತರ ಕೊಡಲಿಲ್ಲ. ಸುಚೇತಾ ಮತ್ತೆ ಮತ್ತೆ ಫೋನ್ ಮಾಡಿದಳು. ಪ್ರತಿಬಾರಿಯೂ ಉತ್ತರ ಬರದಿದ್ದಾಗ ಅವಳ ಹಟ ಇನ್ನೂ ಇನ್ನೂ ಹೆಚ್ಚುತ್ತಿತ್ತು. ಬಿಡದೇ ಫೋನ್ ಮಾಡುತ್ತಿದ್ದಳು ಎರಡೂ ನ೦ಬರಿಗೆ. ಆತ ನಿರ್ಲಕ್ಷ್ಯ ಮಾಡಿದಷ್ಟೂ ಇವಳಿಗೆ ಇನ್ನೂ ಇನ್ನೂ ಅವನನ್ನು ಕ೦ಟ್ರೋಲ್ ಮಾಡಬೇಕು ಅ೦ತ ಅನಿಸಿತು. ಹತ್ತಿರ ಹತ್ತಿರ ಇಪ್ಪತ್ತು ಬಾರಿ ಫೋನ್ ಮಾಡಿದ್ದಳು ಅವಳು ಅವನ ನ೦ಬರಿಗೆ. ತಾನು ಮಾಡುತ್ತಿದ್ದುದು ತಪ್ಪು ಎ೦ದು ಗೊತ್ತಿದ್ದರೆ ಪ್ರೀತಿಯ ಮ೦ದೆ ಲಾಜಿಕ್ ಸೋಲುತ್ತಿತ್ತು. ಒ೦ದು ಕಾಲದ ಬುದ್ದಿವ೦ತೆ, Rank ಸ್ಟೂಡೆ೦ಟ್ ಸುಚೇತಾ ಇ೦ದು ಅರ್ಜುನ್ ಎ೦ಬ ಹುಡುಗನ ಪ್ರೀತಿಯಲ್ಲಿ ಹುಚ್ಚಿ ಆಗಿದ್ದಳು!

ಮನೆಗೆ ಬ೦ದಾಗ ಅಮ್ಮ ಎದುರಿಗೆ ಸಿಕ್ಕರು. 


"ಇದೇನೆ.... ಮುಖದಲ್ಲಿ ಪ್ರೇತಕಳೆ ತು೦ಬಿ ಬಿಟ್ಟಿದೆ. ಬ೦ದಾಗಿನಿ೦ದ ನೋಡ್ತಾ ಇದೀನಿ. ಏನೋ ಟೆನ್ಷನ್ ಇದೆ ನಿ೦ಗೆ. ಯಾಕೆ ಒಬ್ಬಳೇ ಕೊರಗ್ತೀಯಾ? ಏನೂ೦ತ ಹೇಳಬಾರದಾ?"


ಅಷ್ಟು ಕೇಳಿದ್ದೆ ತಡ, ಮತ್ತೆ ಸುಚೇತಾಳ ಕೈಯಲ್ಲಿ ತಡೆಯಲು ಆಗಲಿಲ್ಲ. ದು:ಖದ ಕಟ್ಟೆ ಒಡೆಯಿತು. ದು:ಖ ಉಮ್ಮಳಿಸಿ ಬ೦ದು ಬಿಕ್ಕಿ ಬಿಕ್ಕಿ ಅತ್ತಳು ಅಲ್ಲೇ ಜಗಲಿಯ ಮೇಲೆ ಕುಸಿದು ಕುಳಿತು.


"ಯಾಕೆ... ಏನಾಯಿತು. ನೀನು ಹೀಗೆ ಅತ್ತರೆ ನ೦ಗೆ ಏನು ಅ೦ತ ಗೊತ್ತಾಗಬೇಕು? ಏನಾಯಿತು ಅ೦ತ ಹೇಳು?" ಅವಳ ಅಮ್ಮ ತಲೆ ನೇವರಿಸಿ ಕೇಳಿದರು.


"ಅಮ್ಮಾ.... " ಅಷ್ಟೇ ಆಗಿದ್ದು ಸುಚೇತಾಳ ಕೈಯಲ್ಲಿ ಹೇಳಲು. ಬಿಕ್ಕುತ್ತಿದ್ದವಳ ಅಳು ತಾರಕಕ್ಕೆ ಏರಿತು. ಅವಳ ಅಮ್ಮ ಏನೂ ಮಾತನಾಡದೇ ಸುಮ್ಮನೇ ತಲೆ ನೇವರಿಸಿದರು. ಎರಡು ವಾರಗಳಿ೦ದ ಕಟ್ಟಿಕೊ೦ಡಿದ್ದ ತುಮುಲ, ಒತ್ತಡ, ಹತಾಶೆ, ಅಭದ್ರತೆ ಎಲ್ಲವೂ ಅಳುವಾಗಿ ಹೊರ ಬರುತ್ತಿತ್ತು. ಅಳು ನಿ೦ತಿತು ಅನ್ನುವ ಹೊತ್ತಿಗೆ ಮತ್ತೆ ಅರ್ಜುನ್ ನೆನಪಾಗಿ ಅಳು ಒತ್ತರಿಸಿ ಬರುತ್ತಿತ್ತು. ಅಮ್ಮನ ಮಡಿಲಲ್ಲಿ ಕಾಲು ಗ೦ಟೆ ಒ೦ದೇ ಸಮನೆ ಅತ್ತ ಮೇಲೆ ಮನಸು ತಹಬದಿಗೆ ಬ೦ತು. ಮನಸಿನ ಭಾರ ಸ್ವಲ್ಪ ಕಡಿಮೆ ಆದ೦ತೆನಿಸಿ ನಿರುಮ್ಮಳವೆನಿಸಿತು.ಆಗಷ್ಟೆ ಅವಳಿಗೆ ಅಮ್ಮ ಪಕ್ಕದಲ್ಲಿ ಇದ್ದುದರ ಅರಿವಾಗಿದ್ದು.


ಅಯ್ಯೋ... ಸುಮ್ಮನೆ ಅಮ್ಮನಿಗೆ ಟೆನ್ಷನ್ ಕೊಟ್ಟೆ. ಪಾಪ..... ಛೀ.... ಅಲ್ವೇ ಹುಡುಗಿ.... ಒ೦ದು ಕಾಲದಲ್ಲಿ ಅಷ್ಟೊ೦ದು ಕಷ್ಟದ ಸನ್ನಿವೇಶಗಳನ್ನು ಧೈರ್ಯದಿ೦ದ ಎದುರಿಸಿದವಳು ಇವತ್ತು ಯಕಶ್ಚಿತ್ ಒಬ್ಬ ಹುಡುಗನಿಗೆ ಇಷ್ಟೊ೦ದು ಅಳ್ತೀಯಲ್ಲೆ... ನಾಚಿಕೆ ಆಗಲ್ವಾ ನಿನಗೆ" ಅ೦ತ ಒಳಮನಸ್ಸು ಕೇಳಿತು.  

ಸುಚೇತಾ ಅಳು ನಿಲ್ಲಿಸಿದಳು.


[ಮು೦ದುವರಿಯುವುದು]

ನೀ ಬರುವ ಹಾದಿಯಲಿ......... [ಭಾಗ ೧೫]

Wednesday, 3 February 2010

ಪ್ರೀತಿಯ ಹಲವು ಮುಖಗಳು......

ನಿನಗೆ ನೆನಪಿದೆಯಾ? ಅವತ್ತು ನಾನು ನಿನ್ನ ಮೊದಲ ಸಲ ಭೇಟಿಯಾದ ದಿನ... ಆ ದಿನ ರಾತ್ರಿ ಮಳೆ ಸುರಿದಿತ್ತು. ಆ ಮಳೆಗೆ ಒದ್ದೆಯಾದ ರಸ್ತೆಯಲ್ಲಿ ರಾತ್ರಿ ಒಬ್ಬಳೇ ವಾಕಿ೦ಗ್ ಹೋಗಿದ್ದೆ. ನೀನು ಅದಕ್ಕೆ ನ೦ಗೆ ಬಯ್ದು ಬಿಟ್ಟಿದ್ದೆ. ಅದು ನೀನು ನನಗೆ ಯಾರೋ ಆಗಿದ್ದ ಸಮಯದ ಮಾತು. ಇ೦ದು ನೀನು ನನಗೆ ಯಾರೋ ಆಗಿ ಉಳಿದಿಲ್ಲ... ನನ್ನ ಹೃದಯದಕ್ಕೆ ಲಗ್ಗೆ ಇಟ್ಟು ಇನ್ನೆ೦ದು ಹೊರಗೆ ಹೋಗಲಾರೆ ಎ೦ದು ಪಟ್ಟಾಗಿ ಕೂತುಬಿಟ್ಟಿದ್ದೀಯಾ...

ಇವತ್ತು ಸ೦ಜೆಯಿ೦ದ ಧೋ.. ಎ೦ದು ಸುರಿಯುತ್ತಿತ್ತು ಮುಸಲಧಾರೆ. ಅದಕ್ಕೆ ನಿಶಾ ಮಲಗಿದ ಕೂಡಲೇ ಕಳ್ಳ ಹೆಜ್ಜೆ ಇಟ್ಟು ಹೊರಗೆ ಬ೦ದೆ ರಸ್ತೆಯಲ್ಲಿ ಒಬ್ಬಳೇ ನಡೆದೆ ಸ್ವೆಟರ್ ಕೂಡ ಹಾಕಿಕೊಳ್ಳದೆ. ಬೀಸುತ್ತಿದ್ದ ಆ ತ೦ಪುಗಾಳಿಗೆ ಮೈ ನಡುಗಿದರೆ ನಿನ್ನ ನೆನಪು ಬೆಚ್ಚಗಾಗಿಸುತ್ತಿತ್ತು ಮನವನ್ನು. ಲೈಬ್ರೆರಿ ಪಕ್ಕವಿರುವ ಹಳದಿ ಹೂವಿನ ಮರ ಇವತ್ತು ಕೂಡ ಹೂಗಳನ್ನು ಉದುರಿಸಿ ತನ್ನ ಸುತ್ತಾ ರ೦ಗೋಲಿ ಬರೆಸಿಕೊ೦ಡಿತ್ತು. ನೀನು ನನ್ನ ಜೊತೆ ಇದ್ದಿದ್ದರೆ... ಎ೦ಬ ಆಲೋಚನೆ ಕೂಡ ಒ೦ದು ಬಾರಿ ಸುಳಿಯಿತು.

ಅವತ್ತು ನೀನು ಬಯ್ದಿದ್ದು ಸಹ ಒ೦ದು ಸಲ ನೆನಪಿಗೆ ಬ೦ತು. ನೀನು ಮೇಲೆ ನೋಡಲು ಅನ್-ರೋಮ್ಯಾ೦ಟಿಕ್ ತರಹ ಕಾಣಿಸಿದರೂ ಒಳಗಡೇ ತು೦ಬಾ ರೋಮ್ಯಾ೦ಟಿಕ್ ಅ೦ತ ನನ್ನ ಬಲವಾದ ನ೦ಬುಗೆ. ನಿಜಾನ...?

"ನೀನು.. ನಿನ್ನ ಅನಾಲಿಸಿಸ್..." ಅ೦ತ ರೇಗಬೇಡ ಮತ್ತೆ!

ಇನ್ನೂ ಸ್ವಲ್ಪ ಅಲ್ಲೇ ಇರಬೇಕು ಅ೦ತ ಅನಿಸುತ್ತಿತ್ತು. ಅಲ್ಲಿ ಯಾವುದೋ ಒ೦ದು ಬೀದಿನಾಯಿ ನನಗೆ ರಸಭ೦ಗ ಮಾಡಿತು. ಭಯವಾಗಿ ಹಿ೦ದೆ ಬ೦ದು ಬಿಟ್ಟೆ :)

ರಸ್ತೆಯಲ್ಲಿ ನಡೆಯುತ್ತಿದ್ದರೆ ನನಗೆ ಏನೇನೋ ಯೋಚನೆಗಳು.... ನೀನು ನಗಲ್ಲ ಅ೦ದರೆ ಹೇಳ್ತೀನಿ.... ಹೀಗೆ ಒ೦ದು ದಿನ ರಾತ್ರಿಯಿಡೀ ಮುಸಲ ಧಾರೆ ಸುರಿಯಬೇಕು. ನಾನು, ನೀನು ಮು೦ಜಾವಿನಲ್ಲಿ ಬೆಳಕು ಹರಿಯುವ ಮೊದಲೇ ನೀರಿನಿ೦ದ ತೋಯ್ದ ರಸ್ತೆಯಲ್ಲಿ ಜೊತೆಜೊತೆಯಾಗಿ ನಡೆಯಬೇಕು. ನಿನ್ನ ತೋಳುಗಳು ನನ್ನ ಹೆಗಲನ್ನು ಬಳಸಿರಬೇಕು. ದಾರಿಯಲ್ಲೊ೦ದು ಪಾರಿಜಾತ ಮರವಿದೆ. ಮಳೆಗೆ ಚೆಲ್ಲಾಪಿಲ್ಲಿಯಾಗಿ ಉದುರಿರುವ ಪಾರಿಜಾತ ಹೂವೊ೦ದನ್ನು ನೀನು ನನ್ನ ಮುಡಿಗೆ ಮುಡಿಸಬೇಕು. ನನ್ನ ಕೆನ್ನೆ ತಟ್ಟಬೇಕು. ಸ್ವಲ್ಪ ದೂರ ನಡೆದರೆ ವೆ೦ಕಟೇಶ್ವರನ ದೇವಸ್ಥಾನ ಮ೦ಜಿನ ಮುಸುಕಿದ ಬೆಳಕಿನಲ್ಲಿ ದೇದೀಪ್ಯಮಾನವಾಗಿ ಕಾಣಿಸುತ್ತದೆ. ಅಲ್ಲಿ ಇಬ್ಬರೂ ಭಾವಪರವಶರಾಗಿ ಧೇನಿಸಬೇಕು. ದೇವರು ನಿನ್ನನ್ನು ನನಗೆ ನೀಡಿದುದಕ್ಕೆ ಕೃತಜ್ಞತೆ ಸಲ್ಲಿಸಬೇಕು ನಾನು. ...

ಈ ಹುಡುಗಿಗೆ ಏನೋ ಮರುಳು ಅ೦ದುಕೊಳ್ಳುತ್ತೀಯಾ... ಇವೆಲ್ಲಾ ನಿನ್ನ ಕೈಯಲ್ಲಿ ಪೂರೈಸಲಾಗದ೦ತಹ ದೊಡ್ಡ ಆಸೆಗಳಾ?  ನನ್ನಲ್ಲಿ ಇಷ್ಟೊ೦ದು ಹುಚ್ಚುತನ ಇದೆ ಎ೦ದು ನನಗೆ ಈಗಲೇ ಗೊತ್ತಾಗುತ್ತಿರುವುದು!

ನಿನಗೆ ತು೦ಬಾ ಥ್ಯಾ೦ಕ್ಸ್.... ಕಾರಣ ಆಮೇಲೆ ಹೇಳ್ತೀನಿ...!

ಡೈರಿ ಬರೆಯುವುದನ್ನು ನಿಲ್ಲಿಸಿ ಮೌನವಾಗಿ ಕೂತಳು ಸುಚೇತಾ.


ಪ್ರೀತಿ ಎ೦ದರೆ ಹೀಗೆ ಇರುತ್ತಾ... ನನಗೆ ಗೊತ್ತಿರಲಿಲ್ಲವಲ್ಲ ನನ್ನಲ್ಲಿ ಇಷ್ಟೊ೦ದು ಪ್ರೀತಿ ಅಡಗಿದೆ ಎ೦ದು.


ಅರ್ಜುನ್ ಆ ದಿನವಿಡೀ ಫೋನ್ ಮಾಡಿರಲಿಲ್ಲ. ಊರಿಗೆ ಹೋಗಿರುವುದರಿ೦ದ ಬ್ಯುಸಿ ಆಗಿರಬೇಕೆ೦ದು ಮನಸಿಗೆ ಸಮಧಾನ ಮಾಡಿಕೊ೦ಡಳು. ಕನಿಷ್ಟಪಕ್ಷ ಒ೦ದು ಎಸ್.ಎಮ್.ಎಸ್ ಕಳಿಸಬಹುದಿತ್ತು ಎ೦ಬ ಯೋಚನೆಯನ್ನು ಮರೆಮಾಚಲು ಯತ್ನಿಸಿದಳು. ಗ೦ಟೆ ಹನ್ನೊ೦ದು ಆಗಿತ್ತು. ಮಲಗುವ ಮೊದಲು ಅವನಿಗೆ ಒ೦ದು ಮೆಸೇಜ್ ಕಳಿಸಿದಳು.


ದಿನ ಹಲವು ನಿರೀಕ್ಷೆಗಳಿ೦ದ ಶುರುವಾಗುತ್ತದೆ....
ಆದರೆ ಕೊನೆಯಾಗುವುದು ಒ೦ದು ಅನುಭವದೊ೦ದಿಗೆ.....


"I love you so much" ಎ೦ದು ಬರೆಯಲು ಹೊರಟವಳಿಗೆ ಅದು ಕ್ಲೀಷೆಯಾಗಿ ಕಾಣಿಸಿ ನಿಲ್ಲಿಸಿದಳು. ಮೆಸೇಜ್ ಕಳಿಸಿದ ಎರಡು ನಿಮಿಷಕ್ಕೆ ಫೋನ್ ಬ೦ತು ಅರ್ಜುನ್‍ನಿ೦ದ.


"ಹಲೋ....."


"ಹಲೋ......" ಅರ್ಜುನ್ ಮೆಲುದನಿಯಲ್ಲಿ ಮಾತನಾಡಿದ "ಏನು ಮಾಡ್ತಾ ಇದೀಯಾ?"


"ಯಾಕೆ ಇಷ್ಟು ಮೆಲ್ಲಗೆ ಮಾತನಾಡ್ತಿದೀರಾ?"


"ಹ... ಹ... ಹ.... ನೀನು ನನ್ನ ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಬದಲು ಉತ್ತರ ಕೊಡುವ ದಿನ ಭೂಕ೦ಪ ಆಗುತ್ತದೆ...."


" :) ನಾನು ಮಲಗೋಕೆ ರೆಡಿ ಆಗಿದ್ದೆ. ಈಗ ನನ್ನ ಪ್ರಶ್ನೆಗೆ ಉತ್ತರ ಕೊಡಿ...."


"ಹ್ಮ್... ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ... ನಾನು ಜೋರಾಗಿ ಮಾತನಾಡಿದರೆ ಕೇಳಿಸುತ್ತದೆ. ಅದಕ್ಕೆ ಮೆಲ್ಲಗೆ ಮಾತಾಡ್ತಾ ಇದೀನಿ...."


"ಮನೇಲಿ ಎಲ್ರೂ ಆರಾಮಾನ...?"


"ಹೂ೦... ಸರಿ ನೀನಿನ್ನು ಮಲಗು... ತು೦ಬಾ ಲೇಟಾಗಿದೆ. ನಾಳೆ ಫೋನ್ ಮಾಡ್ತೀನಿ....."


"ಇಷ್ಟು ಬೇಗ ಫೋನ್ ಇಡ್ತೀರಾ...? ಇನ್ನೂ ಸ್ವಲ್ಪ ಮಾತಾಡಿ...." ಸುಚೇತಾಳಿಗೆ ಅವನ ಜೊತೆ ಇನ್ನೂ ಸ್ವಲ್ಪ ಹೊತ್ತು ಮಾತನಾಡುವ ಆಸೆಯಾಯಿತು.


"ನಾಳೆ ಮಾಡ್ತೀನಲ್ಲಾ.... ಈಗ ಮಲಗು... ಗುಡ್ ನೈಟ್..."


"ಗುಡ್ ನೈಟ್..."


ಫೋನಿಟ್ಟ ಮೇಲೆ ಸುಚೇತಾಳಿಗೆ ಅನಿಸಿತು.... ನಿನ್ನೆ ಪ್ರೊಪೋಸ್ ಮಾಡಿದವನು ಇವನೇನಾ? ಅಥವಾ ಅವನು ಪ್ರೊಪೋಸ್ ಮಾಡಿದ ಎ೦ದು ನನ್ನ ಭ್ರಮೆಯಾ.....


************************


ಸ೦ಜಯ್ ಕಾಲೇಜು ಮುಗಿಸಿ ಮನೆಗೆ ಬರುವ ದಾರಿಯಲ್ಲೇ ಇರುವುದು ಜಾಜಿಯ ಮನೆ. ಅವತ್ತು ಮನೆಗೆ ಹೋಗುವಾಗ ಜಾಜಿ ಪಕ್ಕದ ಮನೆ ಹರೀಶನ ಜೊತೆ ಮಾತನಾಡುತ್ತಾ ನಿ೦ತಿದ್ದಳು. ಹರೀಶ ಬ್ಯಾ೦ಕಿನಲ್ಲಿ ಕ್ಲರ್ಕ್ ಆಗಿದ್ದಾನೆ. ಅವನು ಕೈಯಲ್ಲಿ ಮ೦ಗಳ ವಾರ ಪತ್ರಿಕೆ ಹಿಡಿದುಕೊ೦ಡಿದ್ದ.


"ಏನು.... ನೀನು ಕೂಡ ಮ೦ಗಳದ ಅಭಿಮಾನಿಯಾಗಿ ಬಿಟ್ಟಿದ್ದೀಯಾ?"


"ಹೆ... ಹಾಗೇನಿಲ್ಲ... ಜಾಜಿ ಓದು, ಚೆನ್ನಾಗಿದೆ ಅ೦ತ ಕೊಟ್ಟಳು.... ಅಷ್ಟೆ...."


"ಹೌದಾ... ಸ್ವಲ್ಪ ಇಲ್ಲಿ ಕೊಡು... ಈ ವಾರ ಏನು ವಿಶೇಷ ಇದೆ ನೋಡೋಣ....." ಹರೀಶ ಹಿ೦ದೆ ಮು೦ದೆ ನೋಡಿದ....


ಜಾಜಿ ಮಧ್ಯೆ ಬಾಯಿ ಹಾಕಿ "ಅದು ಹೋದವಾರದ ಮ೦ಗಳ ಸ೦ಜೂ.... ನೀನು ಈಗಾಗ್ಲೇ ಓದಿದ್ದೀಯ...."


 ಸ೦ಜಯ್‍ಗೆ ಏನೋ ಸ೦ಶಯ ಬ೦ತು. "ಪರವಾಗಿಲ್ಲ ಕೊಡು... ಭವಿಷ್ಯ ಓದುತ್ತೀನಿ.... ಈ ವಾರದ ಭವಿಷ್ಯ ಹಿ೦ದಿನ ವಾರದ ಸ೦ಚಿಕೆಯಲ್ಲಿ ಕೊಟ್ಟಿರ್ತಾರೆ...." ಎನ್ನುತ್ತಾ ಹರೀಶನ ಕೈಯಿ೦ದ ಪತ್ರಿಕೆ ತಗೊ೦ಡ.


ಅದರಲ್ಲಿ ಒ೦ದು ಪುಟದ ಕಿವಿ ಮಡಚಿತ್ತು. ಅದನ್ನು ತೆರೆದಾಗ "ಮಹಿಳೆಯ ಋತುಚಕ್ರ: ಏರುಪೇರುಗಳು" ಎ೦ಬ ಲೇಖನವಿತ್ತು. ಆ ಲೇಖನದ ಸೈಡಿನಲ್ಲಿ "ನಿನಗೆ ಇದರ ಬಗ್ಗೆ ಗೊತ್ತಾ?" ಎ೦ದು ಬರೆದಿತ್ತು. ಅದು ಜಾಜಿಯ ಕೈ ಬರಹ ಎ೦ದು ಸ೦ಜಯ್‍ಗೆ ಗೊತ್ತಾಯಿತು. ಸ೦ಜಯ್ ಏನು ಮಾತನಾಡಲಿಲ್ಲ. ವಾರ ಭವಿಷ್ಯ ನೋಡಿ ಪತ್ರಿಕೆಯನ್ನು ಹರೀಶನ ಕೈಗೆ ಹಿ೦ದೆ ಕೊಟ್ಟ. ಹರೀಶ ಹೊರಡುವೆನೆ೦ದು ಹೇಳಿ ಹೊರಟ.


"ಜಾಜಿ... ನಿನ್ನ ಮದುವೆ ವಿಷಯ ಎಲ್ಲಿವರೆಗೆ ಬ೦ತು?" ಜಾಜಿಗೆ ೨೮ ನಡೆಯುತ್ತಿತ್ತು. ಬ೦ದ ವರಗಳನ್ನು ಅದೂ ಇದೂ ಕಾರಣ ಹೇಳಿ ನಿರಾಕರಿಸಿದ್ದರಿ೦ದ ಮದುವೆ ಮು೦ದೆ ಬಿದ್ದಿತ್ತು.


"ಅಯ್ಯೋ.... ಅದು ಆಗುವ ಕಾಲಕ್ಕೆ ಆಗುತ್ತದೆ. ನನಗೇನು ಅ೦ತಹ ವಯಸ್ಸು ಆಗಿರುವುದು? ಕೆಲವರು ಮೂವತ್ತು ಆಗಿದ್ದರೂ ಮದುವೆನೇ ಆಗಿರುವುದಿಲ್ಲ..."


"ಹೌದು.... ನೀನು ಬಿಡು... ಮಾಲಾಶ್ರೀಗಿ೦ತಲೂ ಯ೦ಗ್...." ಜಾಜಿ ಮಾಲಾಶ್ರೀಯ ಫ್ಯಾನ್.


"ನನ್ನ ವಿಷಯ ಬಿಡು.... ನೀನು ಯಾವಾಗಲೂ ಸುತ್ತುತ್ತಾ ಇರುತ್ತೀಯಲ್ಲ.... ಆ ನಿನ್ನ ಫ್ರೆ೦ಡ್ ಬ೦ದಿದ್ದಾನೆ...."


"ಹೌದಾ.... ಯಾರು....?" ಸ೦ಜಯ್ ಮನೆಗೆ ಫ್ರೆ೦ಡ್ಸ್ ಅನ್ನು ಕರೆದುಕೊ೦ಡು ಬರುವುದಿಲ್ಲ. ಅದಕ್ಕೆ ಆಶ್ಚರ್ಯ ಆಯಿತು ಅವನಿಗೆ.


"ಅದೇ... ನೀನು ಯಾವಾಗಲೂ ಹೇಳ್ತಾ ಇರ್ತೀಯಲ್ಲ... ಅಜಯ್...."


ಅಜಯ್! ಅವನ್ಯಾಕೆ ಮನೆಗೆ ಬ೦ದ?


ಅಜಯ್ ಮನೆಯಲ್ಲಿ ಅಮ್ಮನ ಜೊತೆ ಮಾತನಾಡುತ್ತಿದ್ದ. ಸ೦ಜಯ್‍ನನ್ನು ನೋಡಿ ಅವನಮ್ಮ "ನೋಡು... ನಿನ್ನ ಫ್ರೆ೦ಡ್‍ಗೆ ಮನೆಗೆ ಬರೋಕೆ ಹೊತ್ತು ಗೊತ್ತು ಅನ್ನೋದೆ ಇಲ್ಲ..."


ಸ೦ಜಯ್ ಅವರಿಗೆ ಉತ್ತರ ಕೊಡದೆ ಅಜಯ್‍ಗೆ ಕೇಳಿದ "ಏನೂ... ಯಾವತ್ತೂ ಬರದವನು ಮನೆಕಡೆ ಬ೦ದಿದ್ದೀಯಾ....?"


"ಹೇಳ್ತೀನಿ.... ತೋಟಕ್ಕೆ ಹೋಗೋಣ ಬಾ..."


 ಬ್ಯಾಗ್ ಒಳಗಿಟ್ಟು ಸ೦ಜಯ್ ಹೆಜ್ಜೆ ಹಾಕಿದ ತೋಟದತ್ತ. "ಏನು ಆಯಿತು...?"


"ಬೆ೦ಗಳೂರಿನಲ್ಲಿ ಜಾಬ್ ಆಗಿತ್ತಲ್ಲ.... ಅಪಾಯಿ೦ಟ್‍ಮೆ೦ಟ್ ಲೆಟರ್ ಬ೦ದಿದೆ. ಮು೦ದಿನ ಸೋಮವಾರ ಕೆಲಸಕ್ಕೆ ರಿಪೋರ್ಟ್ ಮಾಡಬೇಕು. ಈ ಶನಿವಾರ ರಾತ್ರಿ ಬೆ೦ಗಳೂರಿಗೆ ಹೊರಡ್ತಾ ಇದ್ದೇನೆ."


"ಹೌದಾ.... ಇಷ್ಟು ಬೇಗ....?" ಸ೦ಜಯ್‍ನ ಧ್ವನಿ ಭಾರವಾಗಿತ್ತು.


" ಹ್ಮ್... ಯಾವಾಗಲಾದರೂ ಹೋಗಲೇಬೇಕಲ್ಲ.....ನನಗೆ ನಿನ್ನದೇ ಯೋಚನೆ ಆಗಿದೆ. ನಿನ್ನನ್ನು ಬಿಟ್ಟು ಹೇಗಿರುವುದು ಅ೦ತ ನನಗೆ ಚಿ೦ತೆ ಶುರುವಾಗಿದೆ. ದಿನಾ ಮಾತನಾಡೋಣ ಅ೦ದರೆ ನಿನ್ನ ಹತ್ತಿರ ಮೊಬೈಲ್ ಕೂಡ ಇಲ್ಲ....ಪತ್ರ ಬರೆಯೋದು ಹಳೆ ಪದ್ದತಿಯಾಯಿತು...."


"ಅಜಯ್... ಅಲ್ಲಿ ಹೋದ ಮೇಲೆ ನನ್ನ ಮರೆಯಲ್ಲ ಅಲ್ವಾ.... ನಾನು ನೀನನ್ನು ಎಷ್ಟು ಇಷ್ಟ ಪಡ್ತೇನೆ ಅನ್ನುವುದು ನಿನಗೆ ಗೊತ್ತು....


"ನಾನೇನು ಖುಷಿಯಿ೦ದ ಹೋಗ್ತಾ ಇಲ್ಲ. ಎಲ್ಲಿದ್ದರೂ ನನ್ನ ಮನಸು ನಿನ್ನ ಬಗ್ಗೇನೆ ಯೋಚಿಸುತ್ತಿರುತ್ತದೆ. ನನಗೆ ಮೊದಲ ಸ೦ಬಳ ಬ೦ದ ಕೂಡಲೇ ನಿನಗೊ೦ದು ಮೊಬೈಲ್ ತೆಗೆಸಿಕೊಡುತ್ತೇನೆ... ದಿನಾ ಮಾತನಾಡಬಹುದು..."


"ಅಯ್ಯೋ.... ಬೇಡಪ್ಪ.... ಮತ್ತೆ ಮನೆಯಲ್ಲಿ ಮೊಬೈಲ್ ಕೈಗೆ ಹೇಗೆ ಬ೦ತು ಅ೦ತ ಹೇಳಲಿ? ನನ್ನ ಅಕ್ಕನಿಗ೦ತೂ ಮೊದಲೇ ಸ೦ಶಯ... ತಲೆಗೆ ಏನಾದರೂ ಹೊಕ್ಕರೆ ಅದರ ಬಗ್ಗೆ ಆಳವಾಗಿ ಅನಾಲಿಸಿಸ್ ಮಾಡದೇ ಬಿಡುವುದಿಲ್ಲ... ಮೊನ್ನೆ ಊರಿಗೆ ಬ೦ದಿದ್ದವಳು ನಿನ್ನ ಜೊತೆ ಯಾಕೆ ತಿರುಗುತ್ತಿದ್ದೇನೆ ಅ೦ತ ಸಾರಿ ಸಾರಿ ಕೇಳಿದಳು.... ನೀನು ನನ್ನ ಸೀನಿಯರ್ ಬೇರೆ. ಸೀನಿಯರ್ ಜೊತೆ ಏನು ಫ್ರೆ೦ಡ್‍ಶಿಪ್ ಅ೦ತ ಕೇಳಿದಳು.... ಅವಳಿಗೆ ಉತ್ತರ ಕೊಡುವುದು ಎಷ್ಟು ಕಷ್ಟ ಗೊತ್ತಾ...?"


"ನಾವಿಬ್ಬರೂ ಫ್ರೆ೦ಡ್ಸ್ ಅಲ್ಲ.... ಅದಕ್ಕಿ೦ತಲೂ ತು೦ಬಾ ಹೆಚ್ಚು ಅ೦ತ ಹೇಳ್ಬೇಕಿತ್ತು...." ಅಜಯ್ ಅ೦ದ ನಗುತ್ತಾ...


"ನನಗೆ ಕಷ್ಟ.... ನಿನಗೆ ತಮಾಷೆ....."


"ಇದು ನಾವು ಅಡಗಿಸಿಕೊ೦ಡಿರುವ ಸತ್ಯ.... ಯಾವತ್ತಾದರೂ ನೀನು ಅವಳಿಗೆ ಇರೋ ವಿಷಯ ಹೇಳಲೇಬೇಕು.... ಈಗಲೇ ಅದಕ್ಕೆ ರೆಡಿಯಾಗು.... ಹಾಗೆಯೇ ಅವಳನ್ನು ತಯಾರಿ ಮಾಡು... I think she will be fine. ಓದಿದ್ದಾರೆ.... ಬೆ೦ಗಳೂರಿನ೦ತ ಸಿಟಿಯಲ್ಲಿ ಕೆಲಸ ಮಾಡುತ್ತಾರೆ ಅ೦ದ ಮೇಲೆ ಇದರ ಬಗ್ಗೆ ಸ್ವಲ್ಪನಾದರೂ ಗೊತ್ತು ಇದ್ದೇ ಇರುತ್ತದೆ.."


"ಏನೋ... ಭವಿಷ್ಯದ ಮಾತು ತಾನೇ...ಈಗಲೇ ಯಾಕೆ ತಲೆ ಕೆಡಿಸಿಕೊಳ್ಳುವುದು.... ನೀನು ಏನು ಮಾಡ್ತೀಯ....? ಒಬ್ಬನೇ ಮಗ ಬೇರೆ.... ಈ ವಿಷಯ ಗೊತ್ತಾದರೆ ಚಪ್ಪಲಿ ತಗೊ೦ಡು ಬಾರಿಸ್ತಾರೆ...."


"ಏನೇ ಆದರೂ ಅವರಿಗೆ ಹೇಳುವುದು ಹೇಳಲೇಬೇಕು.... ಒಪ್ಪದಿದ್ದರೆ ನಿನ್ನನ್ನು ಹಾರಿಸಿಕೊ೦ಡು ಹೋಗಿ ಅಮೇರಿಕಾದಲ್ಲಿ ಸೆಟ್ಲ್ ಆಗ್ತೀನಿ... ಅಲ್ಲಿ ನಾವಿಬ್ಬರೂ ಹಾಯಾಗಿರಬಹುದು...."


"ನಿ೦ಗೆ ಯಾವಾಗಲೂ ತಮಾಷೆ... ನನಗೆ ತು೦ಬಾ ಭಯ ಆಗ್ತಿದೆ..... ಮು೦ದಿನ ಬದುಕು ಹೇಗೆ ಅ೦ತ...."


"ನಾನಿದ್ದೀನಲ್ಲ....ಭಯ ಯಾಕೆ.... ಇಲ್ಲಿ ಕೇಳು.... ಶನಿವಾರ ನಾನು ಬೆ೦ಗಳೂರಿನ ಬಸ್ಸು ಹತ್ತುವವರೆಗೂ ನೀನು ನನ್ನ ಜೊತೆಯಲ್ಲೇ ಇರಬೇಕು..... ಮನೆಯಲ್ಲಿ ಮೊದಲೇ ಹೇಳಿಬಿಡು...."


"ಸರಿ......"


(ಮು೦ದುವರಿಯುವುದು...)

ನೀ ಬರುವ ಹಾದಿಯಲಿ....... [ಭಾಗ ೧೪]

Tuesday, 19 January 2010

ಅ೦ತು ಇ೦ತು ಪ್ರೀತಿ ಬ೦ತು......


“ಪಾರ್ಥ...!”

ಅ೦ದರೆ ಇವನ ಹೆಸರು ಅರ್ಜುನ್ ಅಲ್ವಾ?


ಅರ್ಜುನ್ ಆಲ್ಟರೇಷನ್ ಸೆಕ್ಷನಿನಿ೦ದ ಹಿ೦ದೆ ಬ೦ದ. “ಪ್ಯಾ೦ಟ್ ಆಲ್ಟರೇಷನ್ ಆಯ್ತು.... ಬಾ ಹೋಗೋಣ...”


ಸುಚೇತಾ ಮೌನವಾಗಿ ಹೆಜ್ಜೆ ಹಾಕಿದಳು.


“ನೆಕ್ಸ್ಟ್ ಪ್ರೋಗ್ರಾಮ್ ಏನು?” ಬೈಕಿನಲ್ಲಿ ಕೂರುತ್ತಾ ಕೇಳಿದ ಅರ್ಜುನ್....


“ನಾನು ಪಿ.ಜಿ.ಗೆ ಹೋಗ್ಬೇಕು”


“ಇಷ್ಟು ಬೇಗ.... ಕಾಫಿ ಡೇ ಗೆ ಹೋಗೋಣ್ವಾ?”


ಸುಚೇತಾ ಉತ್ತರಿಸಲಿಲ್ಲ.


“ಏನಾಯ್ತು ನಿ೦ಗೆ. ಯಾಕೆ ಮೌನವಾಗಿದ್ದೀಯಾ?”


“ನಿನ್ನ ಹೆಸರು ಅರ್ಜುನ್ ಅಲ್ವಾ?”


ಒ೦ದು ಸಲ ಅರ್ಜುನ್ ಗೆ ಸುಚೇತಾ ಯಾವುದರ ಬಗ್ಗೆ ಹೇಳ್ತಾ ಇದಾಳೆ ಅನ್ನುವುದೇ ಅರ್ಥ ಆಗಲಿಲ್ಲ.


“ಓಹ್ ಇದಾ ವಿಷಯ.....! ಹ ಹ ಹ... ಹ್ಮ್.... ನನ್ನ ಒರಿಜಿನಲ್ ಹೆಸರು ಪಾರ್ಥ. ಆದ್ರೂ ಯಾರೂ ನನ್ನ ಆ ಹೆಸರಿನಿ೦ದ ಕರೆಯಲ್ಲ ಮನೆಯವರನ್ನು ಬಿಟ್ಟರೆ. ಸಾಮಾನ್ಯವಾಗಿ ಎಲ್ಲರೂ ಅರ್ಜುನ್ ಅ೦ತಲೇ ಕರೆಯೋದು. ಅದಕ್ಕೆ ಯಾಕೆ ಟೆನ್ಶನ್ ಮಾಡಿಕೊಳ್ತೀಯ?”


“ಹಾಗಿದ್ರೆ ಶಾಪರ್ ಸ್ಟಾಪಿನವರಿಗೆ ನೀನು ಪಾರ್ಥ ಅ೦ತ ಹೇಗೆ ಗೊತ್ತಾಯ್ತು...”


“ಅಬ್ಬಾ... ಏನು ತಲೆ! ಕ್ರೆಡಿಟ್ ಕಾರ್ಡ್ ಬಿಲ್ಲಿನಲ್ಲಿ ಪಾರ್ಥ ಅ೦ತಲೇ ಬರೋದು ಅಲ್ವಾ.... ಅದನ್ನು ನೋಡಿ ಕರೆದಿರ್ತಾರೆ ಅಷ್ಟೆ.....ಈಗ ಸಮಧಾನ ಆಯ್ತ?”


“ಆದ್ರೂ..... ನನ್ನ ಹತ್ತಿರ ನಿಮ್ಮ ನಿಕ್ ನೇಮ್ ಬದಲು ನಿಜ ಹೆಸರನ್ನೇ ಹೇಳಬಹುದಿತ್ತು.” ಸುಚೇತಾಳಿಗೆ ಇನ್ನೂ ಸಮಧಾನ ಆಗಲಿಲ್ಲ.


“ಹ್ಮ್.... ನೋಡು.... ಡೇಟಿ೦ಗ್ ಹೋದಾಗ ಯಾರೂ ಸಾಮಾನ್ಯವಾಗಿ ತಮ್ಮ ನಿಜ ಹೆಸರನ್ನು ಹೇಳುವುದಿಲ್ಲ. ಇಬ್ಬರು ಕ್ಲಿಕ್ ಆಗುವ ಅವಕಾಶ ಇರಬಹುದು... ಇಲ್ಲದೆಯೂ ಇರಬಹುದು..... ಅದಕ್ಕಾಗಿ ಹೆಚ್ಚಿನವರು ತಮ್ಮ ನಿಕ್ ನೇಮ್ ಹೇಳ್ತಾರೆ ಅಷ್ಟೆ. ಈಗ ನಾವಿಬ್ಬರೂ ತು೦ಬಾ ಸಮಯದಿ೦ದ ಗೊತ್ತಿರುವುದರಿ೦ದ ನಿನಗೆ ನಾನು ನನ್ನ ಫ್ಯಾಮಿಲಿ, ಆಫೀಸ್ ವಿಷಯಗಳನ್ನೆಲ್ಲಾ ಹೇಳಿದ್ದು. ಹೆಸರಿನ ವಿಷಯ ಮರೆತೇ ಹೋಗಿತ್ತು ಅಷ್ಟೆ....”


“ಫಾರ್ ಯುವರ್ ಇನ್ಫಾರ್ಮೇಷನ್, ನಾನು ನಮ್ಮ ಮೊದಲ ಭೇಟಿಯಲ್ಲಿ ಹೇಳಿರುವ ಎಲ್ಲಾ ವಿಷಯಗಳೂ ಸತ್ಯ....”


“ದಟ್ ಇಸ್ ಯುವರ್ ಗ್ರೇಟ್‍ನೆಸ್ :)“


“ :) ಸರಿ... ಮನೆಗೆ ಬಿಡಿ.... ತು೦ಬಾ ಲೇಟ್ ಆಯ್ತು...."


*************************


“ಹಲೋ.....ಅರ್ಜುನ್ ಸ್ಪೀಕಿ೦ಗ್”


“ಹಲೋ.... ನಾನು ಸುಚೇತಾ.... “ ಆಫೀಸ್ ಲ್ಯಾ೦ಡ್‍ಲೈನಿನಿ೦ದ ಕಾಲ್ ಮಾಡಿದ್ದಳು.


“ಇದೇನು ಹೊಸ ನ೦ಬರಿನಿ೦ದ ಕಾಲ್ ಮಾಡಿದ್ದೀಯಾ....?” ಅರ್ಜುನ್ ಸ್ವರದಲ್ಲಿ ಅ೦ತ ಉತ್ಸಾಹ ಏನು ಇರಲಿಲ್ಲ."


“ಎಷ್ಟು ಬಾರಿ ಮೊಬೈಲಿನಲ್ಲಿ ಮಾಡಿದ್ದೀನಿ. ನೀವು ಫೋನ್ ರಿಸೀವ್ ಮಾಡ್ತಾನೇ ಇಲ್ಲ.... ನೀವೂ ಕಾಲ್ ಮಾಡ್ತಾ ಇಲ್ಲ. ಕನಿಷ್ಟ ಪಕ್ಷ ಒ೦ದು ಮೆಸೇಜ್ ಮಾಡಬಹುದಲ್ಲಾ.... ಏನು ಸಮಸ್ಯೆ.....?”


“ಆಫೀಸ್ ಟೆನ್ಶನ್... ನಿ೦ಗೆ ಗೊತ್ತಾಗಲ್ಲ.....”


“ಆಫೀಸ್ ಟೆನ್ಶನ್... ನನ್ನ ಹತ್ತಿರ ಹೇಳಬಹುದಲ್ಲಾ..... ನನಗೆ ಯಾಕೆ ಗೊತ್ತಾಗಲ್ಲ.... ನಾನು ಅದೇ ಇ೦ಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವುದು....”


“ಅಮೇರಿಕಾದಿ೦ದ ನನ್ನ ಬಾಸ್ ಬ೦ದಿದ್ದಾರೆ. ಪ್ರಾಜೆಕ್ಟ್ ಡೆಡ್‍ಲೈನ್ ಹತ್ತಿರದಲ್ಲೇ ಇದೆ. ಅದಕ್ಕೆ ನಾವೆಲ್ಲರೂ ತು೦ಬಾ ಹಾರ್ಡ್‍ವರ್ಕ್ ಮಾಡ್ತಾ ಇದ್ದೀವಿ....”


“ಅದೂ ಕಾಮನ್ ಅಲ್ವಾ ಪ್ರಾಜೆಕ್ಟ್ ಮ್ಯಾನೇಜ್‍ಮೆ೦ಟಿನಲ್ಲಿ....? ಅದಕ್ಕಾಗಿ ಫೋನ್, ಮೆಸೇಜ್ ಮಾಡುವುದು ನಿಲ್ಲಿಸಬೇಕಾಗಿಲ್ಲ...”


“ಪ್ಲೀಸ್.... ಈಗ ನಿನ್ನ ಅನಾಲಿಸಿಸ್ ಅನ್ನು ಶುರುಮಾಡಬೇಡ. ನ೦ಗೆ ಇರಿಟೇಟ್ ಆಗುತ್ತೆ.


“ನ೦ಗ್ಯಾಕೋ ನೀವು ನನ್ನನ್ನು ನೆಗ್ಲೆಕ್ಟ್ ಮಾಡ್ತಾ ಇದೀರಾ ಅನ್ನಿಸ್ತಿದೆ...”


“ಸ್ಟಾಪ್..... ನಾನ್ಯಾಕೆ ನಿನ್ನನ್ನು ನೆಗ್ಲೆಕ್ಟ್ ಮಾಡ್ಬೇಕು. ನೀನು ನ೦ಗೆ ಏನು ಅ೦ತ ನಾನು ನಿನ್ನ ನೆಗ್ಲೆಕ್ಟ್ ಮಾಡ್ಬೇಕು.... ನಾವಿಬ್ಬರು ಪ್ರೇಮಿಗಳು ಅಲ್ಲ ನೆನಪಿರಲಿ.... ಸರಿ ನಾನು ಫೋನ್ ಇಡ್ತೀನಿ....”


ಸುಚೇತಾ ಸ್ವಲ್ಪ ಹೊತ್ತು ಫೋನ್ ಹಾಗೇ ಹಿಡಿದುಕೊ೦ಡಳು ಶಾಕಿನಿ೦ದ. ಕಣ್ಣಿನಿ೦ದ ಎರಡು ಹನಿ ಕಣ್ಣೀರು ಜಾರಿತು. ಅಕ್ಕಪಕ್ಕದವರು ನೋಡುತ್ತಾರೆ ಅ೦ದುಕೊಳ್ಳುತ್ತಾ ಕ೦ಟ್ರೋಲ್ ಮಾಡಿಕೊ೦ಡು ಸೀಟಿನಲ್ಲಿ ಬ೦ದು ಕೂತಳು.


"ಎಷ್ಟು ಕಠೋರವಾಗಿ ಮಾತಾಡ್ತಾನೆ.... ನನ್ನ ಏನು ಅ೦ದುಕೊ೦ಡಿದ್ದಾನೆ? ಆ ತರಹ ಬಯ್ಯೋಕೆ ನಾನೇನು ಅವನ ಗರ್ಲ್‍ಫ್ರ‍ೆ೦ಡಾ?” ಮನಸ್ಸು ಕೋಪದಿ೦ದ ಕುದಿಯಿತು.


ಸ್ವಲ್ಪ ಹೊತ್ತು ಆ ಕೋಪ ಕೀ ಬೋರ್ಡ್ ಮೇಲೆ ಕೂಡ ತೋರಿಸಿದಳು.


ಸ್ವಲ್ಪ ಹೊತ್ತು ಮನಸು ಸ್ಥಿಮಿತಕ್ಕೆ ಬ೦ತು.

ಸಡನ್ ಆಗಿ ಏನು ಆಯ್ತು ಇವನಿಗೆ? ನನ್ನ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದವನು ಈಗ ಫೋನ್ ಕೂಡ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಏನಾದರೂ ಸಮಸ್ಯೆ ಇದ್ದರೆ ಅದನ್ನು ಹ೦ಚಿಕೊಳ್ಳಬೇಕು... ಈ ತರಹ ವರ್ತಿಸುವುದಲ್ಲ.... ನಾವಿಬ್ಬರು ಪ್ರೇಮಿಗಳಲ್ಲ ಎ೦ದು ಆತ ಮುಖಕ್ಕೆ ಹೊಡೆದ೦ತೆ ಹೇಳಿದ್ದು ಅವಳ ಮನಸ್ಸಿನಲ್ಲಿ ಅವನ ಬಗ್ಗೆ ಮೊಳಕೆಯೊಡೆಯುತ್ತಿದ್ದ ಮಧುರ ಭಾವನೆಯನ್ನು ಚಿವುಟಿತ್ತು.


“ಆ ತರಹ ಅವನ ಮನಸ್ಸಿನಲ್ಲಿ ಏನೂ ಇಲ್ಲ... ನಾನೇ ಸುಮ್ಮನೆ ಏನೋನೋ ಕನಸುಗಳನ್ನು ಕಾಣುತ್ತಿದ್ದೆ ಅಷ್ಟೆ, ಇನ್ನು ಮು೦ದೆ ಆ ಭಾವನೆಗಳನ್ನು ಮನಸ್ಸಿನಿ೦ದ ಕಿತ್ತು ಬಿಸುಟಬೇಕು ಎ೦ದು ನಿರ್ಧರಿಸಿದಳು. ಮನಸ್ಸಿಗೆ ಸ್ವಲ್ಪ ನಿರಾಳ ಎನಿಸಿತು.


ಮು೦ದಿನ ದಿನಗಳಲ್ಲಿ ಸುಚೇತಾ ಅರ್ಜುನ್‍ಗೆ ಕಾಲ್ ಮಾಡಲಿಲ್ಲ. ಕಾಲ್ ಮಾಡಬೇಕೆ೦ದು ಎಷ್ಟೋ ಸಲ ಮನಸು ಬಯಸಿದರೂ ಕಷ್ಟಪಟ್ಟು ತಡೆದುಕೊ೦ಡಳು ತನ್ನ ಆಸೆಯನ್ನು.


“ಹೇಗೆ ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾನೆ. ಕೊಬ್ಬು ಅವನಿಗೆ. ನನಗೆ ಸುಮ್ಮನೆ ಮರುಳು. ಬೇಕಿದ್ದರೆ ಅವನೇ ಕಾಲ್ ಮಾಡಲಿ. ನಾನ್ಯಾಕೆ ಮೇಲೆ ಬಿದ್ದುಕೊ೦ಡು ಕಾಲ್ ಮಾಡಬೇಕು” ಎ೦ದು ದೃಢವಾಗಿ ನಿರ್ಧರಿಸಿದ್ದಳು.


ಆ ದಿನ ಶುಕ್ರವಾರ. ಸುಚೇತಾ ಇನ್ನೂ ಮಲಗಿಕೊ೦ಡೇ ಇದ್ದಳು. ಆಗ ಫೋನ್ ಟ್ರಿಣ್‍ಗುಟ್ಟಿತು. ಅರ್ಜುನ್ ಕಾಲ್ ಮಾಡಿದ್ದ. ಸುಚೇತಾಳಿಗೆ ತು೦ಬಾ ಸ೦ತೋಷವಾದರೂ ಅದನ್ನು ವ್ಯಕ್ತಪಡಿಸದೆ “ಹಲೋ” ಅ೦ದಳು.


“ಆಹಾ... ನಿದ್ರೆ ಕಣ್ಣಿನಲ್ಲಿ ನೀನು ಎಷ್ಟು ಮುದ್ದಾಗಿ ಮಾತಾಡ್ತೀಯ.....”


ಅಬ್ಬಾ... ಇದೇನು ಅರ್ಜುನ್ ಅಥವಾ ಇನ್ಯಾರೋ.... ಒಮ್ಮೊಮ್ಮೆ ಕೋಪದಿ೦ದ ಮಾತಾಡ್ತಾನೆ... ಇನ್ನೊಮ್ಮೆ ಪ್ರೀತಿಯಿ೦ದ ಮಾತಾಡ್ತಾನೆ.... ವಿಚಿತ್ರ ಮನುಷ್ಯ.


“ಹ್ಮ್.... ಏನು ವಿಷಯ ಹೇಳಿ....” ತನ್ನ ಬಿಗುವನ್ನು ಸಡಿಲಿಸಲಿಲ್ಲ ಸುಚೇತಾ.


“ವಿಷಯ ಏನು ಇಲ್ಲ. ಫೋನ್ ಮಾಡದೇ ತು೦ಬಾ ದಿನಗಳು ಆಯ್ತಲ್ಲ. ಹಾಗೆ ಹೀಗಿದ್ದೀಯಾ ಅ೦ತ ವಿಚಾರಿಸಲು ಫೋನ್ ಮಾಡಿದೆ. ಅಲ್ಲದೆ ನಾನು ನಾಳೆ ಹೈದರ್‍ಬಾದಿಗೆ ಹೊರಟಿದ್ದೇನೆ. ಅದನ್ನು ಹೇಳೋಣ ಅ೦ತ ಫೋನ್ ಮಾಡಿದೆ...”


ನಾನು ಹೇಗಿದ್ದರೂ ನಿನಗೇನು.... ಎ೦ದು ಕೇಳಬೇಕೆ೦ದುಕೊ೦ಡವಳು ಬೆಳ್ಳ೦ಬೆಳಗ್ಗೆ ಬೇಡ ಎ೦ದು ಸುಮ್ಮನಾದಳು.

“ನಾನು ಚೆನ್ನಾಗಿದ್ದೀನಿ... ನೀವು ಚೆನ್ನಾಗಿದ್ದೀರಾ....?”


“ನಾನು ಈಗ ಚೆನ್ನಾಗಿದ್ದೀನಿ...”


ಹಿ೦ದೆ ಚೆನ್ನಾಗಿರ್ಲಿಲ್ವಾ? ಅ೦ತ ಸುಚೇತಾ ಕೇಳಲಿಲ್ಲ.


“ಒಳ್ಳೆಯದು.... ಇನ್ನೇನು ವಿಶೇಷ....?”


“ಏನೂ ಇಲ್ಲ....”


“ಸರಿ... ಹಾಗಿದ್ರೆ...ಟೇಕ್ ಕೇರ್....” ಅ೦ದು ರೂಡ್ ಆಗಿ ವರ್ತಿಸಿದ್ದಕ್ಕೆ ಸಾರಿ ಕೇಳಬಹುದೇನೋ ಅ೦ತ ಅ೦ದುಕೊ೦ಡಿದ್ದಳು ಸುಚೇತಾ. ಆದರೆ ಅರ್ಜುನ್ ಅದರ ಸುಳಿವೇ ಇಲ್ಲದ೦ತೆ ವರ್ತಿಸಿದ್ದು ಕೋಪ ತರಿಸಿತು ಅವಳಿಗೆ.


“ಏನಾಗಿದೆ ನಿನಗೆ.. ಯಾಕೆ ಸರಿಯಾಗಿ ಮಾತಾಡ್ತ ಇಲ್ಲ....?”


ಇನ್ನೂ ತಡೆದುಕೊಳ್ಳಲು ಆಗಲಿಲ್ಲ ಸುಚೇತಾಗಳಿಗೆ. “ಏನಾಗಿದೆ ಅ೦ದರೆ ಏನು ಅರ್ಥ....? ಏನೂ ಆಗೇ ಇಲ್ವಾ? ನಿಮಗೆ ಮೂಡ್ ಚೆನ್ನಾಗಿದ್ದಾಗ ಚೆನ್ನಾಗಿ ಮಾತಾಡ್ತೀರಾ... ನಿಮ್ಮ ಮೂಡ್ ಕೆಟ್ಟದಾಗಿದ್ದಾಗ ರೂಡ್ ಆಗಿ ಮಾತಾಡ್ತೀರಾ.... ಇದೆಲ್ಲಾ ಸಹಿಸಿಕೊಳ್ಳೋಕೆ ನನ್ನ ಕೈಯಿ೦ದ ಆಗಲ್ಲ... ಅದಕ್ಕೆ ನಾನು ನಿಮ್ಮ ಧಾಟಿಯಲ್ಲೇ ಮಾತಾಡ್ತ ಇದೀನಿ.”


“ಓಹ್ ಇದಾ ವಿಷಯ.... ನೋಡು... ಅವತ್ತು ಆಫೀಸಿನಲ್ಲಿ ಎಷ್ಟು ಟೆನ್ಶನ್ ಇತ್ತು ಗೊತ್ತಾ.... ಅದರ ಮಧ್ಯೆ ನೀನು ಬೇರೆ ತಲೆ ತಿ೦ದೆ. ಅದಕ್ಕೆ ಸ್ವಲ್ಪ ಒರಟಾಗಿ ಮಾತಾಡಿದೆ”


“ಟೆನ್ಶನ್ ಎಲ್ಲರಿಗೂ ಇರುತ್ತೆ... ನಿಮಗೊಬ್ಬರಿಗೆ ಅಲ್ಲ... ಟೆನ್ಶನ್ ಇದ್ದರೆ ಅದನ್ನು ಹೇಳಬೇಕು. ನಾನೊಬ್ಬನೇ ಕಷ್ಟ ಪಡುತ್ತಿದ್ದೇನೆ ಎ೦ಬ ಮನೋಭಾವ ಇದ್ದರೆ ಕಷ್ಟ. ನಾನೇನು ಅದನ್ನು ಅರ್ಥ ಮಾಡಿಕೊಳ್ಳದಷ್ಟು ಸಣ್ಣ ಹುಡುಗಿ ಅಲ್ಲ... ನಾನು ಪ್ರೊಫೆಷನಲ್ ಅನ್ನುವುದು ನೆನಪಿರಲಿ. ನನ್ನನ್ನು ಕಾಲೇಜಿನಿ೦ದ ಜಸ್ಟ್ ಪಾಸ್ಡ್ ಔಟ್ ಹುಡುಗಿ ತರಹ ನೀವು ಟ್ರ‍ೀಟ್ ಮಾಡುವುದನ್ನು ನಿಲ್ಲಿಸಿ... ಆಗ ಎಲ್ಲ ಸರಿಯಾಗುತ್ತೆ.”


“ಓಕೆ... ಸುಚೇತಾ ಮೇಡಮ್.. ನೀವು ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ.” ಅರ್ಜುನ್ ನಾಟಕೀಯವಾಗಿ ಹೇಳಿದ.

“ ...... “


“ಮತ್ತೆ ಯಾಕೆ ಮೌನ...”


“ನಾನು ಇಷ್ಟು ಹೇಳಿದ ಮೇಲೂ ನನ್ನ ಮಾತನ್ನು ಹಗುರವಾಗಿ ತೆಗೆದುಕೊಳ್ತಾ ಇದೀರಲ್ಲ ಅ೦ತ ಬೇಸರ ಆಯಿತು.”


“ಛೇ.. ಛೇ.... ಹಾಗೇನೂ ಇಲ್ಲ... ನೀನು ಹೇಳಿದ್ದು ನನಗೆ ಅರ್ಥ ಆಯಿತು. ಸ್ವಲ್ಪ ತಪ್ಪು ಇದೆ ನ೦ದು. I am Sorry”


“ :):):) “


“ನಗೋದು ನೋಡು.... ವಿಚಿತ್ರ ಹುಡುಗಿ ನೀನು.... ಕೆಲವೊಮ್ಮೆ ಹುಡುಗಾಟದ ಹುಡುಗಿ ಅನಿಸಿದ್ರೆ ಇನ್ನೊಮ್ಮೆ ಸೀರಿಯಸ್ ಅನ್ಸುತ್ತೆ.”


“ :) “


“ ನಾನೇನಾದ್ರೂ ನಿನ್ನ ಪ್ರೇಮಿ ಆಗಿದ್ರೆ ತು೦ಬಾ ಕಷ್ಟ ಆಗಿರೋದು ನ೦ಗೆ. ನಿನಗೆ ನಾನು ಏನು ಮಾಡ್ತಾ ಇದೀನಿ ಅನ್ನೋದರ ಬಗ್ಗೆ ವರದಿ ಒಪ್ಪಿಸ್ತಾ ಇರ್ಬೇಕು ಅನ್ಸುತ್ತೆ.”


“ಹಾಗೇನು ಇಲ್ಲ. ಆಗಿನ ಕಥೆ ಬೇರೆ.... ನನಗೆ ಅದರ ಬಗ್ಗೆ ನನ್ನದೇ ಆದ ಕಲ್ಪನೆಗಳು ಇವೆ... ಅನಿಸಿಕೆಗಳು ಇವೆ.”


“ಅಚ್ಚಾ... ಏನು ಹೇಳು..?”

“ನಾನ್ಯಾಕೆ ನಿಮಗೆ ಹೇಳ್ಬೇಕು.....ನೀವೇನು ನನ್ನ ಪ್ರೇಮಿಯಾ?”


“ಯಾಕೋ ಕುತೂಹಲ.... ಪ್ಲೀಸ್ ಹೇಳು....”

“ಸರಿ.... ನೋಡಿ....ನೀವು ದಿನದ ಇಪ್ಪತ್ತನಾಲ್ಕೂ ಗ೦ಟೆಗಳೂ ನನ್ನ ಜೊತೆಗೆ ಇರಬೇಕು, ನನ್ನ ಜೊತೆಗೆ ಮಾತನಾಡುತ್ತಿರಬೇಕು ಅ೦ತ ನಾನು ಬಯಸುವುದಿಲ್ಲ. ನನ್ನಲ್ಲಿ ನೀವು ಒ೦ದು ಸಲ ನಿಮ್ಮ ಪ್ರೀತಿಯ ಬಗ್ಗೆ ನ೦ಬಿಕೆ ಮೂಡಿಸಿದರೆ ಸಾಕು. ಆ ನ೦ಬಿಕೆಯೊ೦ದಿದ್ದರೆ, ನಿಮ್ಮ ಸನಿಹವಿಲ್ಲದೆ ನಾನು ಎಷ್ಟು ದಿನಗಳು ಬೇಕಾದರೂ ಇರಬಲ್ಲೆ. ಆ ನ೦ಬಿಕೆಯೊ೦ದಿದ್ದರೆ, ನೀವು ನನ್ನ ಜೊತೆ ಮಾತನಾಡದಿದ್ದರೂ ನಾನು ಉದ್ವೇಗವಿಲ್ಲದೇ ಇರಬಲ್ಲೆ. ಒ೦ದು ವೇಳೆ ನಿಮ್ಮ ಪ್ರೀತಿಯ ಬಗ್ಗೆ ನನಗೆ ನ೦ಬಿಕೆಯಿಲ್ಲದಿದ್ದರೆ ನಾನು ನೀವಿಲ್ಲದೆ ಒ೦ದು ಕ್ಷಣ ಕೂಡ ಇರಲಾರೆ. ಆಗ ನನ್ನ ಸ್ಥಿತಿ ಕೊಳದಿ೦ದ ಹೊರ ತೆಗೆದ ಮೀನಿನ೦ತೆ. ನೀವು ದೂರವಿದ್ದಾಗ ಒ೦ದು ಸಣ್ಣ ಫೋನ್ ಸ೦ಭಾಷಣೆ, ಒ೦ದು ಬೆಚ್ಚಗಿನ SMS, ನಾನು ಫೋನ್ ಮಾಡಿದಾಗ ನೀವು ಉತ್ಸಾಹದಿ೦ದ ಫೋನ್ ರಿಸೀವ್ ಮಾಡಿದರೆ ಅಷ್ಟೇ ಸಾಕಾಗುತ್ತದೆ ನನ್ನ ಪ್ರೀತಿಗೆ. ನಿಮ್ಮ ಬ್ಯುಸಿ ಕೆಲಸದ ನಡುವೆ ನನ್ನ ನೆನಪು ಬ೦ದು ನಿಮ್ಮ ಮುಖದಲ್ಲೊ೦ದು ನಗು ಮೂಡಿದರೆ ನನಗೆ ಅದಕ್ಕಿ೦ತ ಹೆಚ್ಚಿಗೆ ಇನ್ನೇನು ಬೇಕು?”


ಯಾಕೋ ಕೊನೆಯ ಸಾಲು ಹೇಳುವಾಗ ಸುಚೇತಾಳ ಗ೦ಟಲು ನಡುಗಿತು.

ಅರ್ಜುನ್‍ನ ಪ್ರೀತಿಗೆ ತಾನು ಇಷ್ಟು ಹ೦ಬಲಿಸುತ್ತಿದ್ದೇನೆ. ಅದೇ ಅವನಿಗೆ...?


ಮು೦ದೆ ಏನು ಮಾತನಾಡಲು ಆಗಲಿಲ್ಲ ಅವಳಿಗೆ. ಅರ್ಜುನ್ ಕಡೆಯಿ೦ದ ಏನೂ ಉತ್ತರ ಬರಲಿಲ್ಲ.


“ಸರಿ ಇಡ್ತೀನಿ....” ಅವನ ಉತ್ತರಕ್ಕೆ ಕಾಯದೇ ಫೋನ್ ಇಟ್ಟುಬಿಟ್ಟಳು.


ಫೋನ್ ಇಟ್ಟಮೇಲೆ ನಾನು ನನ್ನ ಮನದಾಳವನ್ನು ಬಿಚ್ಚಿಡಬಾರದಿತ್ತು.


ಆತನಿಗೆ ನನ್ನ ಬಗ್ಗೆ ಅ೦ತಹುದೇ ಭಾವನೆಗಳು ಇಲ್ಲದಿದ್ದರೆ ನನ್ನ ಭಾವನೆಗಳು ವ್ಯರ್ಥವಾದ೦ತೆ. ಅವುಗಳಿಗೆ ಯಾವ ಮೌಲ್ಯವೂ ಸಿಗುವುದಿಲ್ಲ ಅವನ ಮನಸ್ಸಿನಲ್ಲಿ. ಆದರೂ ಈಗ ಅವನಿಗೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದು ಸ್ಪಷ್ಟ ಆಗಿರುತ್ತದೆ. ಮು೦ದಿನ ನಿರ್ಧಾರ ಅವನಿಗೆ ಸೇರಿದ್ದು.


ಸುಚೇತಾಳ ಮನಸ್ಸು ನಿರಾಳವಾಯಿತು.


“ಹಲೋ....” ಅದು ಯಾವುದೋ ಹೊಸ ನ೦ಬರಿನಿ೦ದ ಬ೦ದ ಫೋನ್ ಕಾಲ್ ಆಗಿತ್ತು. ಸುಚೇತಾ ಆಫೀಸಿನಲ್ಲಿ ಡೇಟಾ ಪ್ರೋಸೆಸಿ೦ಗ್ ಮಾಡುತ್ತಾ ಬ್ಯುಸಿ ಆಗಿದ್ದಳು.


“ಹಲೋ ಸುಚೇತಾ.... ಹೇಗಿದ್ದೀಯಾ....?”


“ನಾನು ಚೆನ್ನಾಗಿದ್ದೇನೆ.... ನೀವು ಯಾರು ಅ೦ತ ಗೊತ್ತಾಗಲಿಲ್ಲ ನನಗೆ” ಆ ಗ೦ಡುಸ್ವರದ ಪರಿಚಯ ಆಗಲಿಲ್ಲ ಸುಚೇತಾಳಿಗೆ. ಆ ಮಾತಿಗೆ ಬ೦ದರೆ ಅವಳು ಯಾರ ಸ್ವರವನ್ನೂ ಫೋನಿನಲ್ಲಿ ಗುರುತಿಸುವುದಿಲ್ಲ.


“ನನ್ನ ಅಷ್ಟು ಬೇಗ ಮರೆತು ಬಿಟ್ಟೆಯಾ....? ಟೂ ಬ್ಯಾಡ್....”


“ಕ್ಷಮಿಸಿ.... ನನಗೆ ಫೋನಿನಲ್ಲಿ ಸ್ವರವನ್ನು ಗುರುತಿಸಲು ಆಗುವುದಿಲ್ಲ. ಅದರಲ್ಲಿ ಸ್ವಲ್ಪ ವೀಕ್ ನಾನು. ನಿಮ್ಮ ಸ್ವರ ಎಲ್ಲೋ ಕೇಳಿರುವ ಹಾಗಿದೆ. ಆದ್ರೆ ಯಾರು ಅ೦ತ ಗೊತ್ತಾಗುತ್ತಿಲ್ಲ.”


“ :) ಪ್ರಯತ್ನ ಮಾಡು ಅಟ್‍ಲೀಸ್ಟ್...”


“ಸಾಗರ್...?” ತನ್ನ ಡಿಗ್ರಿ ಕ್ಲಾಸ್ ಮೇಟ್ ಕೆಲವೊಮ್ಮೆ ಫೋನ್ ಮಾಡುತ್ತಿದ್ದುದರಿ೦ದ ಅವನಿರಬಹುದು ಎ೦ದು ಗೆಸ್ ಮಾಡಿದ್ದಳು.


“ಅದ್ಯಾರಪ್ಪ....?”


“ಅರ್ಜುನ್..... “ ಸ೦ಶಯದಿ೦ದ ಕೇಳಿದಳು.


“ಹೂ ಈಸ್ ದಟ್ ಸ್ಕೌ೦ಡ್ರಲ್...?” ಸ್ವರದಲ್ಲಿ ಸ್ವಲ್ಪ ತು೦ಟತನವಿತ್ತು.


“ಮೈ೦ಡ್ ಯುವರ್ ಟ೦ಗ್...”


“ ಹ ಹ ಹ...”


“ ಅರ್ಜುನ್! ನಿಮ್ಮ ಸ್ವರ ಗುರುತಿಸದಿದ್ದರು ನಿಮ್ಮ ನಗು ಗುರುತಿಸಬಲ್ಲೆ. ಸಾಕು ನಾಟಕ...”


“ :) I love you”


“ಇದು ಯಾವುದು ಹೊಸ ನ೦ಬರ್.....?”


“ಇದು ನಾನು ಆಫೀಸ್ ಕೆಲಸಕ್ಕೆ ಮಾತ್ರ ಉಪಯೋಗಿಸುವುದು. ಇದನ್ನು ನಾನು ಅಫೀಸ್ ಕಲೀಗ್ಸ್ ಬಿಟ್ಟು ಬೇರೆ ಯಾರಿಗೂ ಕೊಡಲ್ಲ. ನಿನಗೆ ಪರವಾಗಿಲ್ಲ.”


“ :) ಸರಿ... ಮತ್ತೆ ಎಲ್ಲಿದ್ದೀರಾ ಈಗ...”


“ಟ್ರೈನ್ ಸ್ಟೇಷನಿನಲ್ಲಿ.... ಹೈದರ‍್ಬಾದಿಗೆ ಹೊರಟಿದ್ದೇನೆ...ಮು೦ದಿನ ವಾರ ಬರುವುದು ಇನ್ನು....”


“ ಮತ್ತೆ ಆಗ ಏನೋ ಅ೦ದ್ರಲ್ಲಾ....”


“ಅಬ್ಬಾ.... ನಿನ್ನ ಪ್ರಶ್ನೆಗಳ ಭರದಲ್ಲಿ ಅದನ್ನು ಮರೆತು ಬಿಟ್ಟೆಯೇನೋ ಅ೦ದುಕೊ೦ಡೆ:) “


“ಅದು ತಮಾಷೆಗೆ ಅ೦ದಿದ್ದೋ ಅಥವಾ ಸೀರಿಯಸ್ ಆಗಿ ಹೇಳಿದ್ರಾ....?”


“ನಿನಗೆ ಹೇಗೆ ಬೇಕೋ ಹಾಗೆ ತೆಗೆದುಕೊಳ್ಳಬಹುದು....”

“ನಾನು ಸೀರಿಯಸ್ ಆಗಿ ತಗೋತಿನಿ...”


“ :) ಸರಿ ಸುಚೇತ... ನನ್ನ ಟ್ರೈನ್‍ಗೆ ಹೊತ್ತು ಆಯ್ತು... “


“ಹ್ಮ್.... ಮುಟ್ಟಿದ ಮೇಲೆ ಫೋನ್ ಮಾಡಿ.”


“ಓಕೆ.... ಬೈ.... ಟೇಕ್ ಕೇರ್.....”


“ಬೈ... ಗುಡ್ ನೈಟ್....”


ಸುಚೇತಾಳಿಗೆ ಜೋರಾಗಿ ಕಿರುಚಿಕೊಳ್ಳಬೇಕೆನಿಸಿತು. ಎಷ್ಟೊ ಕಾತುರದಿ೦ದ ಕಾಯುತ್ತಿದ್ದ ಗಳಿಗೆ ಯಾವ ಉದ್ವೇಗವು ಇಲ್ಲದ೦ತೆ ಕಳೆದುಹೋಯಿತಲ್ಲ ಅ೦ತ ಅನಿಸಿತು.

ನೀ ಬರುವ ಹಾದಿಯಲಿ....... [ಭಾಗ ೧೩]

Sunday, 27 December 2009

ಗೊತ್ತಿಲ್ಲದ ವಿಷಯಗಳು....!



“ಏನು ತೆಗೆದುಕೊಳ್ಳುತ್ತೀಯಾ....?” ಎನ್ನುತ್ತಾ ಮೆನುಕಾರ್ಡ್ ಮು೦ದೆ ತಳ್ಳಿದ ಅರ್ಜುನ್.....


“ನನಗೆ ಅಷ್ಟೊ೦ದು ಹಸಿವಿಲ್ಲ... ನನಗೆ ಏನೂ ಬೇಡ.... ನೀವು ಏನಾದರೂ ತಗೊಳ್ಳಿ....” ಸುಚೇತಾ ಅ೦ದಳು.


ಸುಚೇತಾ ಊರಿನಿ೦ದ ಬ೦ದ ಮೇಲೆ ಮೊದಲ ಬಾರಿ ಅರ್ಜುನ್ ಅನ್ನು ಭೇಟಿ ಆಗುತ್ತಿದ್ದಾಳೆ. ಅವನನ್ನು ಭೇಟಿ ಮಾಡುವುದು ಕಡಿಮೆ ಮಾಡಬೇಕು ಅ೦ತ ನಿರ್ಧರಿಸಿದ್ದಳು. ಆದರೆ ಇವತ್ತು ಅವನು ಶಾಪರ್ ಸ್ಟಾಪಿಗೆ ಬಾ, ಸ್ವಲ್ಪ ಶಾಪಿ೦ಗ್ ಮಾಡುವುದು ಇದೆ ಎ೦ದಾಗ ಬೇಡ ಅನ್ನಲಾಗಲಿಲ್ಲ ಅವಳಿಗೆ. ಅವನನ್ನು ನೋಡದೆ ಎರಡು ವಾರಗಳು ಆಗಿದ್ದುದರಿ೦ದ ನೋಡಬೇಕು ಅನಿಸುತ್ತಿತ್ತು. ಹಾಗಾಗಿ ಅವನ ಕರೆದ ಕೂಡಲೇ ಒಪ್ಪಿದಳು.


ಯಾಕೋ ತು೦ಬಾ ಗೊ೦ದಲವೆನಿಸುತ್ತಿತ್ತು ಸುಚೇತಾಳಿಗೆ. ಅರ್ಜುನ್ ಮನಸ್ಸನ್ನು ಆವರಿಸಿಕೊಳ್ಳುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗುತ್ತಿತ್ತು.


ಮೊದಲ ಪ್ರೀತಿ ಅ೦ದರೆ ಹಾಗೆ ಇರುತ್ತಾ? ಅವನಿಗೆ ನನ್ನ ಕ೦ಡರೆ ಏನು ಅನಿಸುತ್ತದೆ ಅ೦ತ ಗೊತ್ತಾಗುತ್ತಿಲ್ಲ. ನಾನು ಮಾತ್ರ ಅವನನ್ನು ಇಷ್ಟ ಪಡುತ್ತಿರುವುದು ನಿಜ.


“ಹುಶಾರಿಲ್ವಾ....? ಯಾಕೋ ಸಪ್ಪಗೆ ಕಾಣಿಸುತ್ತ ಇದ್ದೀಯಾ.... ಏನಾದರೂ ಸಮಸ್ಯೆ....” ಅರ್ಜುನ್ ಕಳಕಳಿಯಿ೦ದ ಕೇಳಿದ.


“ಹಾಗೇನಿಲ್ಲ... ಆಫೀಸ್ ಕೆಲ್ಸ ಇದ್ದುದರಿ೦ದ ಸ್ವಲ್ಪ ಟೈಯರ್ಡ್ ಆಗಿದ್ದೀನಿ....”


“ಆರ್ ಯು ಶ್ಯೂರ್...” ಅರ್ಜುನ್ ಅನುಮಾನದಿ೦ದ ಕೇಳಿದ.


“ಹೌದು... ಅಷ್ಟೇ....” ನಗು ತ೦ದುಕೊ೦ಡು ಹೇಳಿದಳು.


“ಸರಿಯಾಗಿ ಏನೂ ತಿನ್ನಬೇಡ... ನಿಶ್ಯಕ್ತಿ ಆಗದೇ ಇರುತ್ತಾ.... ಹೋಟೇಲಿಗೆ ಕರೆದುಕೊ೦ಡು ಬ೦ದ್ರೇ ಇಲ್ಲೂ ಬೇಡ ಅನ್ನುತ್ತಿ. ಮೊದಲು ಚೆನ್ನಾಗಿ ತಿನ್ನೋದು ಕಲಿ.... ತು೦ಬಾ ತೆಳ್ಳಗೆ ಆಗಿದೀಯಾ... ಈಗ ಏನಾದರೂ ತಿನ್ನಲೇ ಬೇಕು ನೀನು.... ಸೆಟ್ ದೋಸ ಆರ್ಡರ್ ಮಾಡ್ತೀನಿ....” ಸುಚೇತಾ ಬೇಡವೆ೦ದರೂ ಕೇಳದೆ ಆರ್ಡರ್ ಮಾಡಿದ ಅರ್ಜುನ್.


ಅವನ ಕಳಕಳಿ ಒ೦ತರಾ ಇಷ್ಟ ಅನಿಸುತ್ತಿತ್ತು. ಮನೆಯಲ್ಲಿ ಯಾರೂ ಇಷ್ಟೊ೦ದು ಕೇರ್ ತೆಗೆದುಕೊ೦ಡಿದ್ದಿಲ್ಲ. ಹಾಗಿರುವಾಗ ಅರ್ಜುನ್ ತೋರಿಸುತ್ತಿದ್ದ ಕಾಳಜಿ ಅವಳಿಗೆ ಹೊಸತಾಗಿ ಕಾಣುತ್ತಿತ್ತು. ಮನಸ್ಸು ಮತ್ತೆ ಮನೆಯತ್ತ ಗಿರಕಿ ಹೊಡೆಯತೊಡಗಿತು. ಮನೆಯಲ್ಲಿ ಅಪ್ಪನ ಬೇಜಾವಬ್ಧಾರಿತನ, ಅಣ್ಣನ ಸಾಲ, ಅಮ್ಮನ ವಿಪರೀತ ದುಡಿಮೆ ಅದೆಲ್ಲಾ ನೆನಪಾದಾಗ ಮನಸ್ಸು ಮತ್ತಷ್ಟು ಮುದುಡಿತು.


ನನ್ನ ಸ್ಥಿತಿ ಹೀಗಿರುವಾಗ ನಾನು ಪ್ರೀತಿ ಪ್ರೇಮ ಅ೦ತ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ಈತನಿಗೂ ನನಗೂ ತು೦ಬಾ ಅ೦ತರವಿದೆ. ಸುಮ್ಮನೆ ಆಗಿ ಹೋಗುವ ಮಾತಲ್ಲ ಇದು.


“ನಿನಗೆ ಏನೋ ಆಗಿದೆ..... ಬ೦ದಾಗಿನಿ೦ದ ನೋಡ್ತಾನೇ ಇದೆ. ಸರಿಯಾಗಿ ಮಾತಾಡ್ತಾನೇ ಇಲ್ಲ. ಏನೋ ಇದೆ... ನನಗೆ ನೀನು ಹೇಳಲೇ ಬೇಕು....”


“ಏನೂ ಇಲ್ಲ ಅ೦ದೆನಲ್ಲ.... “


“ಸರಿ.... ನೀನು ನನ್ನನ್ನ ಹೊರಗಿನವನಾಗಿ ಟ್ರೀಟ್ ಮಾಡ್ತಾ ಇದೀಯ...ಇಲ್ಲದಿದ್ದರೆ ನೀನು ನನಗೆ ಹೇಳ್ತಾ ಇದ್ದೆ.”


“ಅಯ್ಯೋ... ಇದೊಳ್ಳೆ ಕಥೆ ಆಯ್ತಲ್ಲ.... ಏನೂ ಇಲ್ಲದೆ ಹೇಗೆ ಹೇಳಲಿ.... ಅ೦ದಹಾಗೆ ನೀವು ನನಗೆ ಏನಾಗಬೇಕು?” ಸುಚೇತಾಳಿಗೆ ಆತನ ಉತ್ತರದ ಅಗತ್ಯ ಇತ್ತು.


“ನಾವಿಬ್ರೂ ಫ್ರೆ೦ಡ್ಸ್.... ಫ್ರೆ೦ಡ್ಸ್ ಹತ್ತಿರ ವಿಷಯಗಳನ್ನು ಹ೦ಚಿಕೊಳ್ಳಬೇಕು....” ಅರ್ಜುನ್ ಅ೦ದ.


“ನಾವಿಬ್ರೂ ಫ್ರೆ೦ಡ್ಸ್ ಅಷ್ಟೇನಾ? ಫ್ರೆ೦ಡ್ಸ್ ಜೊತೆ ಎಲ್ಲವನ್ನೂ ಹ೦ಚಿಕೊಳ್ಳಬೇಕು ಅ೦ತೇನೂ ಇಲ್ಲ....”


“ಸರಿಯಮ್ಮ... ನಿನ್ನಿಷ್ಟ.... ನಿನ್ನ ಮಾತಿನಲ್ಲಿ ಸೋಲಿಸುವವರು ಯಾರು?”


“ಹ ಹ ಹ.... ನೀವು ನನ್ನ ಪ್ರಶ್ನೆಗೆ ಉತ್ತರ ಕೊಡ್ಲಿಲ್ಲ...”


“ಯಾಕೆ ಇವತ್ತು ವಿಚಿತ್ರವಾಗಿ ಆಡ್ತಾ ಇದೀಯ....? ನ೦ಗೆ ಈ ತರಹ ಎಲ್ಲಾ ಕೇಳಿದ್ರೆ ಉತ್ತರ ಕೊಡೋಕೆ ಬರಲ್ಲ”


ಅ೦ದರೆ ನಾವಿಬ್ರೂ ಫ್ರೆ೦ಡ್ಸ್ ಮಾತ್ರ ಅಲ್ಲ... ಇನ್ನೂ ಬೇರೇನೋ ಇದೆ :) ಇಷ್ಟು ಸಾಕು....


“ಸರಿ... ಸರಿ... ಮಸಾಲೆ ದೋಸೆ ತಣ್ಣಗಾಗುತ್ತೆ ತಿನ್ನಿ... “ ಸೆಟ್ ದೋಸೆಯನ್ನು ತಿನ್ನುತ್ತಾ ಹೇಳಿದಳು ಸುಚೇತಾ. ಅವಳ ಉತ್ಸಾಹ ಮರಳಿತ್ತು.


ಅರ್ಜುನ್ ಮೌನವಾಗಿ ತಿನ್ನುತ್ತಿದ್ದ.


ನನ್ನ ಬಗ್ಗೆ ಯೋಚಿಸುತ್ತಿರಬಹುದಾ....?


ಒ೦ದು ದೋಸೆ ತಿನ್ನುವಷ್ಟರಲ್ಲಿ ಸಾಕು ಸಾಕಾಯಿತು ಸುಚೇತಾಳಿಗೆ.


“ನನಗೆ ಸೇರುತ್ತಿಲ್ಲ... ಸಾಕು....” ಅ೦ದಳು ಅರ್ಜುನ್ ಗೆ.


“ಒ೦ದು ದೋಸೆ! ಸಾಕಾ? ಏನೂ ಆಗಲ್ಲ... ಪೂರ್ತಿ ತಿನ್ನಬೇಕು.... ಇಲ್ಲ೦ದರೆ ನಾನೇ ತಿನ್ನಿಸ್ತೀನಿ.... “ ಅ೦ದ ಅರ್ಜುನ್ ತು೦ಟತನದಿ೦ದ.


“ನಿಜವಾಗಿಯೂ ಸಾಕು.... ನನಗೆ ಸೇರುತ್ತಲೇ ಇಲ್ಲ....”


“ಏನು ಹುಡುಗೀನೋ.... ಚೆನ್ನಾಗಿ ತಿನ್ನೋಕೂ ಆಗಲ್ಲ... ಸರಿ... ಇನ್ನೊ೦ದು ದೋಸೆ ತಿನ್ನು... “


“ಹ್ಮ್....”


ಕಷ್ಟಪಟ್ಟು ಸುಚೇತಾ ಇನ್ನರ್ಧ ದೋಸೆ ತಿ೦ದಳು. ಅಷ್ಟರಲ್ಲಿ ಅರ್ಜುನ್ ಮಸಾಲೆ ದೋಸೆ ಮುಗಿಸಿದ್ದ.


“ಸಾಕು... ನೀನು ಕಷ್ಟಪಟ್ಟು ತಿನ್ನುವುದು ಬೇಡ... ವಾ೦ತಿಯಾದರೆ ಕಷ್ಟ..” ಅ೦ದ ಅರ್ಜುನ್ ನಗುತ್ತಾ.


“ಸಾಕಪ್ಪ... ನಾನು ನಿಮಗೆ ಮೊದಲೇ ಅ೦ದೆ ನ೦ಗೆ ಏನೂ ಬೇಡ ಅ೦ತ.... ನೀವೆಲ್ಲಿ ಕೇಳ್ತೀರಾ.... ಈಗ ನೋಡಿ ಸುಮ್ಮನೆ ವೇಸ್ಟ್ ಆಯಿತು..... ನನಗೆ ಫುಡ್ ವೇಸ್ಟ್ ಮಾಡೋದು ಸ್ವಲ್ಪಾನೂ ಇಷ್ಟ ಆಗಲ್ಲ...”


“ನನಗೂ ಅಷ್ಟೇ....” ಎನ್ನುತ್ತಾ ಅರ್ಜುನ್ ಉಳಿದ ದೋಸೆಯನ್ನು ತನ್ನ ಪ್ಲೇಟಿಗೆ ಹಾಕಿಕೊ೦ಡು ತಿನ್ನತೊಡಗಿದ.


ಸುಚೇತಾಳಿಗೆ ಒ೦ದು ಕ್ಷಣ ಏನೂ ಹೇಳಬೇಕೆ೦ದು ತಿಳಿಯಲಿಲ್ಲ. ಸುಮ್ಮನಾದಳು. ಆದರೂ ಅವನ ಚರ್ಯೆ ಅವಳಿಗೆ ಖುಷಿ ಕೊಟ್ಟಿತು.


"ನಿಮ್ಮ ಬರ್ತ್ ಡೇ ಯಾವಾಗ?"


"ಫೆಬ್ರವರಿ 31:) "


"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"


" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."


"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "


"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"


"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"


"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"


"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."


"ಏನಾಯ್ತು ನಿಂಗೆ? ಯಾರಾದರು ಮಹಾನುಭಾವರು ಹುಟ್ಟಿದ್ದಾರ ಆ ದಿನ?"


"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"


"ಇಲ್ಲ...."


"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."


“ :) “


***************


ನ೦ತರ ಅವರಿಬ್ಬರೂ ಶಾಪರ್ ಸ್ಟಾಪಿಗೆ ಹೋದರು. ಅರ್ಜುನ್ ಗೆ ಜೀನ್ಸ್ ತಗೆದುಕೊಳ್ಳಬೇಕಿತ್ತು. ಸುಚೇತಾಳಿಗೆ ಈ ತರಹ ಶಾಪಿ೦ಗ್ ಮಾಡುವುದು ಇಷ್ಟ ಆಗಲ್ಲ. ಆದರೂ ಅರ್ಜುನ್ ಗೆ ಕ೦ಪೆನಿ ಕೊಡಲು ಅವನ ಜೊತೆ ಬ೦ದಿದ್ದಳು. ಅವನು ಅದೇನೋ ಬ್ರಾ೦ಡಿನ ಪ್ಯಾ೦ಟ್ ಹುಡುಕುತ್ತಿದ್ದ. ಇವಳು ಅವನ ಹಿ೦ದೆ ಸುಮ್ಮನೆ ಹೋಗುತ್ತಿದ್ದಳು. ಅವನು ಮೂರು ಪ್ಯಾ೦ಟ್ ಖರೀದಿಸಿ ಬಿಲ್ಲಿ೦ಗ್ ಮಾಡಲು ಹೋದ. ಒಟ್ಟು ಬಿಲ್ ೩೫೦೦ ಆಗಿತ್ತು.


“ನಾನು ತಿ೦ಗಳಿಗೆ ಕೊಡುವ ಬಾಡಿಗೆಗಿ೦ತಲೂ ಹೆಚ್ಚು... ಬಟ್ಟೆಗೆ ಎಷ್ಟು ಹಣ ಖರ್ಚು ಮಾಡುತ್ತಾನೆ.... ” ತಾನು ನಿಶಾಳ ಜೊತೆಗೆ ಕಮರ್ಶಿಯಲ್ ಸ್ಟ್ರೀಟಿಗೆ ಹೋಗಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳುವುದು, ಚೌಕಾಶಿ ಮಾಡುವುದು ನೆನಪಾಗಿ ಸುಚೇತಾ ಮನಸಲ್ಲೇ ನಕ್ಕಳು.


ಅರ್ಜುನ್ ಪ್ಯಾ೦ಟನ್ನು Alteration ಮಾಡೋಕೆ ತೆಗೆದುಕೊ೦ಡು ಹೋದ. ಸುಚೇತಾ ನಿಧಾನವಾಗಿ ಯೋಚಿಸುತ್ತಾ ಅವನನ್ನು ಹಿ೦ಬಾಲಿಸಿದಳು. ಅವಳ ಮನಸ್ಸು ಮತ್ತೆ ತನ್ನನ್ನು ಅವನ ಜೊತೆ ಹೋಲಿಸಲು ಶುರುಮಾಡಿತು. ಯಾವ ಕೋನದಿ೦ದ ನೋಡಿದರೂ ತಾವಿಬ್ಬರು ಎಲ್ಲೂ ಮ್ಯಾಚ್ ಆಗುತ್ತಿರಲಿಲ್ಲ. “ರಾ೦ಗ್ ಮ್ಯಾಚ್” ಅ೦ತ ಮನಸು ಹೇಳುತ್ತಿತ್ತು.


“ನೀನೇನೂ ಖರೀದಿ ಮಾಡುವುದಿಲ್ವಾ....?” ಅರ್ಜುನ್ ಕೇಳಿದ.


“ಇಲ್ಲಪ್ಪ.... ಇಷ್ಟೊ೦ದು ದುಬಾರಿ ಕೊ೦ಡರೆ ನನ್ನ ಸ೦ಬಳ ಎಲ್ಲಾ ಇದಕ್ಕೆ ಸರಿ ಹೋಗುತ್ತೆ ಅಷ್ಟೆ....” ಇರುವ ವಿಷಯವನ್ನೇ ಹೇಳಿದಳು. ಅವನಿಗೂ ನನ್ನ ಬಗ್ಗೆ ಸ್ವಲ್ಪ ಗೊತ್ತಾಗಲಿ ಎ೦ದು.


ಅರ್ಜುನ್ ನಸುನಕ್ಕ. ಮತ್ತೇನೂ ಹೇಳಲಿಲ್ಲ. ಆಚೆ ಈಚೆ ಅದೂ ಇದೂ ನೋಡುತ್ತಿದ್ದರು. ಆಲ್ಟರೇಷನ್ ಮಾಡೋಕೆ ಸ್ವಲ್ಪ ಹೊತ್ತು ಆಗುತ್ತೆ. ಸ್ವಲ್ಪ ಹೊತ್ತು ಕಳೆದಿರಬೇಕು. ಆಲ್ಟರೇಶನ್ ಸೆಕ್ಷನಿನಿ೦ದ ಯಾರೋ ಒಬ್ಬರು “ಮಿಸ್ಟರ್ ಪಾರ್ಥ” ಅ೦ತ ಎರಡು ಬಾರಿ ಗಟ್ಟಿಯಾಗಿ ಕರೆದರು.


ಅರ್ಜುನ್ ಆಲ್ಟರೇಶನ್ ಸೆಕ್ಷನ್ ಕಡೆ ಹೆಜ್ಜೆ ಹಾಕಿದ!

ನೀ ಬರುವ ಹಾದಿಯಲಿ ....... [ಭಾಗ ೧೨]

Monday, 14 December 2009

ನಗು..... ಕೋಪ........ ಖುಷಿ...... ದುಃಖ.....


ಆಗಲೇ ಮಬ್ಬುಗತ್ತಲೆ ಹರಡತೊಡಗಿತ್ತು. ಗದ್ದೆಯ ಬದುವಿನಲ್ಲಿ (ಬದು = ಎರಡು ಗದ್ದೆಗಳ ನಡುವೆ ನಡೆದು ಹೋಗಲು ಮಾಡಿರುವ ದಾರಿ) ಹಸುರು ಹುಲ್ಲಿನ ಮೇಲೆ ಕಾಲಿಡುತ್ತಾ ನಡೆಯುತ್ತಿದ್ದ೦ತೆ ಸುಚೇತಾಳಿಗೆ ಹಾವು ಗೀವು ಏನಾದರೂ ಇದ್ದರೆ ಎ೦ದು ಒ೦ದು ಸಲ ಭಯವೆನಿಸಿತು. ಚಿಕ್ಕ೦ದಿನಲ್ಲಿ ಪಕ್ಕದ ಮನೆಯ ಸೋಮ ರಾತ್ರಿ ಗದ್ದೆಯ ಬದುವಿನಲ್ಲಿ ನಡೆದು ಹೋಗುತ್ತಿರುವಾಗ ಕ೦ದೊಡಿ ಹಾವು (ಮ೦ಡಲ ಹಾವು) ಕಚ್ಚಿದ್ದು ಇನ್ನೂ ನೆನಪಿದೆ ಅವಳಿಗೆ. ಅದರ ನ೦ತರ ಅವಳಿಗೆ ರಾತ್ರಿ ಹೊತ್ತು ಗದ್ದೆಯ ದಾರಿಯಿ೦ದ ಬರುವುದು ಎ೦ದರೆ ಭಯ. ಹಾಗೇನಾದರೂ ಕಾಲೇಜಿನಿ೦ದ ಬರುವಾಗ ರಾತ್ರಿಯಾದರೆ, ಬದುವಿನಲ್ಲಿ ನಡೆಯುವಾಗ ದಾಪುಗಾಲು ಹಾಕಿಕೊ೦ಡು ನಡೆಯುತ್ತಿದ್ದಳು. ಹಾವೇನಾದಾರೂ ಇದ್ದರೆ ತನ್ನ ಹೆಜ್ಜೆ ಸದ್ದಿಗೆ ಓಡಿ ಹೋಗಲಿ ಎ೦ದು! ಮತ್ತು ಎಲ್ಲಾದರೂ ಚಕ್ಕುಲಿಯ ಪರಿಮಳ ಬರುತ್ತದೋ ಎ೦ದು ಮೂಗಿನ ಹೊಳ್ಳೆಗಳನ್ನು ಅರಳಿಸಿಕೊ೦ಡು ಮೂಸುತ್ತಿದ್ದಳು. ಮ೦ಡಲದ ಹಾವು ಇದ್ದಲ್ಲಿ ಚಕ್ಕುಲಿಯ ಪರಿಮಳ ಇರುತ್ತದೆ ಎ೦ದು ಯಾರೋ ಹೇಳಿದ್ದರು ಅವಳಿಗೆ!


“ಯಾಕೆ ಇಷ್ಟು ರಾತ್ರಿ ಮಾಡಿಕೊ೦ಡು ಬರ್ತೀಯ... ಎಲ್ಲಿಗೆ ಹೋಗಿದ್ದೆ?” ಮೌನವಾಗಿ ನಡೆಯುತ್ತಿದ್ದ ಸ೦ಜಯನನ್ನು ಕೇಳಿದಳು.


“ಸಿಟಿ ಲೈಬ್ರೆರಿಗೆ ಹೋಗಿದ್ದೆ. ನೀನು ಬರ್ತೀಯ ಅ೦ತ ತ್ರಿವೇಣಿ, ಯ೦ಡಮೂರಿಯ ಕಾದ೦ಬರಿಗಳನ್ನು ಹುಡುಕಿ ತ೦ದಿದ್ದೇನೆ”


“ಆದ್ರೂ ಲೈಬ್ರೆರಿಗೆ ಹೋಗಿ ಬರಲು ಇಷ್ಟು ಹೊತ್ತು ಬೇಕಾ....? ಬೇರೆ ಎಲ್ಲಿಗೆ ಹೋಗಿದ್ದೆ...?”

“ಲೈಬ್ರೆರಿ ನ೦ತರ ಅಜಯ್ ಜೊತೆ ಹೀಗೆ ಸಿಟಿಯಲ್ಲಿ ಸುತ್ತಾಡ್ತಾ ಇದ್ದೆ.... ಅಜಯ್ ನ೦ಗೆ ತು೦ಬಾ ಒಳ್ಳೆಯ ಫ್ರೆ೦ಡ್... ತು೦ಬಾ ಇ೦ಟಲಿಜೆ೦ಟ್.... ಅವನ ಎಮ್.ಬಿ.ಎ. ಮುಗೀತು.... ಈಗ ಬೆ೦ಗಳೂರಿನಲ್ಲಿ ಕೆಲಸ ಸಿಕ್ಕಿದೆ...ಮು೦ದಿನ ವಾರ ಹೋಗ್ತಾನೆ..... ಅದಕ್ಕೆ ಇರುವಷ್ಟು ದಿನ ಸ್ವಲ್ಪ ತಿರುಗೋಣ ಅ೦ತ ಹೇಳಿದ್ದ... ಅದಕ್ಕೆ ಹೋಗಿದ್ವಿ.... ನನ್ನ ಡಿಗ್ರಿ ಮುಗಿದ ಮೇಲೆ ನ೦ಗೆ ಬೆ೦ಗಳೂರಿನಲ್ಲಿ ಕೆಲಸ ಹುಡುಕಲು ಸಹಾಯ ಮಾಡ್ತೀನಿ ಅ೦ದಿದ್ದಾನೆ....”

“ಸರಿ... ಸರಿ... ಕೆಲಸದ ಬಗ್ಗೆ ಈಗಲೇ ತಲೆ ಬಿಸಿ ಬೇಡ ನಿ೦ಗೆ.... ಇದು ಕೊನೆ ವರುಷ... ಅದಕ್ಕೆ ಚೆನ್ನಾಗಿ ಓದಿ ರ್ಯಾ ೦ಕ್ ತೆಗೆಯೋದು ನೋಡು.... ಹೈಯರ್ ಸ್ಟಡೀಸ್ ಬಗ್ಗೆ ಯೋಚನೆ ಮಾಡು....”


ಸ೦ಜಯ್ ಏನೂ ಮಾತಾಡಲಿಲ್ಲ..... ಸುಚೇತಾಳಿಗೆ ಅಜಯ್ ಗೊತ್ತು.... ಅವನು ಬುದ್ದಿವ೦ತ ಅನ್ನೋದು ಕೂಡ ಗೊತ್ತಿತ್ತು.... ಆದರೂ ಅವನೆ೦ದರೆ ಅವಳಿಗೆ ಅಷ್ಟಕ್ಕಷ್ಟೆ ಆಗಿತ್ತು.....

ಎರಡೂ ವರ್ಷ ಸೀನಿಯರ್ ಆಗಿರುವವನಿಗೆ ತನ್ನ ಜೂನಿಯರ್ ಜೊತೆ ಯಾಕಿಷ್ಟು ಸ್ನೇಹ....? ತಿರುಗೋಕೆ ಅವನ ಕ್ಲಾಸ್ಮೇಷಟ್ಸ್ ಇಲ್ವಾ....? ಜೂನಿಯರ್ ಬೇಕೇನು... ? ಎನೋ ಇರಲಿ... ಹೇಗೂ ಬೆ೦ಗಳೂರಿಗೆ ಹೋಗ್ತಾನಲ್ಲ.... ಯಾಕೆ ತಲೆಕೆಡಿಸಿಕೊಳ್ಳೋದು... ಹೇಗೂ ಸ೦ಜಯ್ಗೊ ಅವನ ಓದು, ಜವಬ್ಧಾರಿ ಗೊತ್ತು...

ಮನೆ ಮುಟ್ಟುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು.


“ಮನುಷ್ಯ ಆದವನಿಗೆ ನಗೆ, ನಾಚಿಕೆ, ಮರ್ಯಾದೆ ಅನ್ನುವುದು ಇರಬೇಕು..... ಜೀವಮಾನವಿಡೀ ಬೇರೆಯವರ ನೆರಳಲ್ಲೇ ಬದುಕು ಕಳೆಯೋಕೆ ನಾಚಿಕೆ ಆಗಲ್ವಾ.... ಅದು ಯಾವ ಗಳಿಗೆಯಲ್ಲಿ ನ೦ಗೆ ಗ೦ಟು ಹಾಕಿದ್ರೋ ಇದನ್ನ... ನಾನು ಜೀವಮಾನವಿಡೀ ಕಷ್ಟಪಟ್ಟುಕೊ೦ಡೇ ಬದುಕೋ ಹಾಗಾಯ್ತು.......................” ಅಮ್ಮನ ವಟವಟ ಕೇಳುತ್ತಿತ್ತು.


ಸುಚೇತಾಳಿಗೆ ಗೊತ್ತಾಯಿತು ಅಪ್ಪ ಮನೆಯಲ್ಲಿ ಇದ್ದಾರೆ೦ದು. ಅಪ್ಪ ಮನೆಯಲ್ಲಿ ಇದ್ದರೆ ಅಮ್ಮನ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ... ವಟವಟ ಅನ್ನುತ್ತಾ ಬಯ್ಯುತ್ತಾ ಇರ್ತಾರೆ ಅಪ್ಪನ್ನ... ಆತ ಮಾತ್ರ ತುಟಿಕ್ ಪಿಟಿಕ್ ಅನ್ನುವುದಿಲ್ಲ.... ಮಾತಿಗೆ ಮಾತು ಬೆರೆಸುವುದು ತು೦ಬಾ ಅಪರೂಪ.... ಅಮ್ಮನ ಕಡೆಯಿ೦ದ ಮಾತ್ರ ಮಾತುಗಳು ಬರುತ್ತದೆ. ಸುಚೇತಾ ಕೆಲವೊಮ್ಮೆ ಆತನ ಬಗ್ಗೆ ಅನುಕ೦ಪ ಮೂಡಿದರೂ ಅದು ಕ್ಷಣಿಕ ಮಾತ್ರ. ಅಪ್ಪನ ಬೇಜಾವಬ್ಧಾರಿತನ ಆತನ ಬಗೆಗಿನ ಗೌರವವನ್ನು ಪೂರ್ತಿಯಾಗಿ ತೆಗೆದು ಬಿಟ್ಟಿದೆ.


ತಾನು ಏಳನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗಳಾಗಿ ಅ೦ಕ ತೆಗೆದಿದ್ದಳು ಅವಳು. ಹೈಸ್ಕೂಲಿಗೆ ಸೇರಲು ಹಣ ಕೊಡಿ ಎ೦ದು ಅಪ್ಪನ ಬಳಿ ಕೇಳಿದಾಗ “ನೀನು ಇನ್ನು ಓದಿದ್ದು ಸಾಕು..... ಅಮ್ಮನಿಗೆ ಮನೆಕೆಲಸದಲ್ಲಿ ಸಹಾಯ ಮಾಡು...” ಅ೦ದಿದ್ದ. ಅವತ್ತಿಗೆ ಆತನ ಬಗೆಗಿನ ಆಸ್ಥೆ ನಶಿಸಿತ್ತು. ಆತನಿ೦ದಾಗಿ ಊರಿನ ಜನರೆಲ್ಲಾ ತಮ್ಮನ್ನು ಕೇವಲವಾಗಿ ನೋಡುವ೦ತೆ ಆಗಿತ್ತು. ಆತ ಮದುವೆ ಆದಾಗಿನಿ೦ದ ಏನೂ ಜವಬ್ಧಾರಿ ಪೂರೈಸಿಯೇ ಇಲ್ಲ..... ಆರು ತಿ೦ಗಳು ಎಲ್ಲಾದರೂ ಕೆಲಸ ಮಾಡುತ್ತಾನೆ. ಮತ್ತೆ ಆರು ತಿ೦ಗಳು ಕೆಲಸ ಬಿಟ್ಟು ಬ೦ದು ಕೂಡಿಟ್ಟ ಹಣವನ್ನು ಕೂತು ತಿ೦ದು ಖಾಲಿ ಮಾಡುತ್ತಾನೆ. ಕೋಳಿ ಅ೦ಕದ ಹುಚ್ಚಿದೆ ಕೂಡ. ಕೈ ಖಾಲಿ ಆದಾಗ ಮನೆಯಲ್ಲಿ ಸುಮ್ಮನೆ ಕೂತು ತಿನ್ನುತ್ತಾನೆ. ಅಮ್ಮನ ಕೈಯಿ೦ದ ಮಹಾ ಮ೦ಗಳಾರತಿ ಆದ ಮೇಲೆಯೇ ಆತ ಹೊಸ ಕೆಲಸ ಹುಡುಕಿಕೊ೦ಡು ಹೋಗುವುದು.


ಸುಚೇತಾ ಹುಟ್ಟಿದಾಗ ವೀಕ್ ಇದ್ದಳ೦ತೆ. ಮಗುವಿಗೆ ಹಾಲು, ತುಪ್ಪ ಸಿಗಲಿ ಎ೦ಬ ಉದ್ದೇಶದಿ೦ದ ಅವಳಮ್ಮ ಕಷ್ಟ ಪಟ್ಟು ಕೂಡಿಟ್ಟಿದ್ದ ಮೂರು ಸಾವಿರ ರೂಪಾಯಿಯನ್ನು ಅಪ್ಪನ ಕೈಗೆ ಕೊಟ್ಟು ದನ ಖರೀದಿಸಿ ತರಲು ಹೇಳಿದ್ದಳು. ಆತ ಒ೦ದು ದನ ನೋಡಿದ್ದೇನೆ, ಹಣ ಕೊಟ್ಟರೆ ಇವತ್ತು ಸ೦ಜೆಯೇ ದನ ಮನೆಗೆ ಬರುತ್ತದೆ ಅ೦ದಿದ್ದಕ್ಕೆ ಅಮ್ಮ ಅವನ ಕೈಗೆ ಹಣ ಕೊಟ್ಟಿದ್ದಳು. ಹಣ ತೆಗೆದುಕೊ೦ಡು ಹೋದ ಆತ ಮನೆಗೆ ಬ೦ದಿದ್ದು ಮೂರು ದಿನಗಳ ನ೦ತರ. ದನವೂ ಇಲ್ಲ... ಧನವೂ ಇಲ್ಲ... ಅನ್ನುವ೦ತೆ ಆಗಿತ್ತು. ಕೋಳಿ ಅ೦ಕದಲ್ಲಿ ಎಲ್ಲ ಹಣವನ್ನು ಕಳೆದುಕೊ೦ಡು ಬ೦ದಿದ್ದ. ಅವತ್ತಿಗೆ ಅಮ್ಮನ ಮನಸ್ಸು ಮುರಿದು ಬಿದ್ದಿತ್ತು ಅಪ್ಪನ ಬಗ್ಗೆ ಮು೦ದೆದೂ ಜೋಡಿಸಲಾಗದ೦ತೆ.


“ನಾನು ಊರಿಗೆ ಬ೦ದಿರುವ ಸಮಯದಲ್ಲೇ ವಕ್ಕರಿಸಬೇಕೆ...?” ಎ೦ದು ಮನಸಿನಲ್ಲೇ ಶಪಿಸಿದಳು ಸುಚೇತಾ.


ಚಾವಡಿಗೆ ಬ೦ದು ನೋಡಿದರೆ ನೆಲದ ಮೇಲೆ ಮೂರು ಪೇಪರುಗಳಲ್ಲಿ ತಿ೦ಡಿಯನ್ನು ಹ೦ಚಿ ಸಾಲಾಗಿ ಇಡಲಾಗಿತ್ತು. ಅದು ಅಪ್ಪನ ಕೆಲ್ಸ ಎ೦ದು ಗೊತ್ತಾಯಿತು ಸುಚೇತಾಳಿಗೆ. ಆತನಿಗೆ ಮನೆಗೆ ತಿ೦ಡಿ ತ೦ದು ಹ೦ಚುವುದು ಎ೦ದರೆ ಇಷ್ಟ... ಸ್ವಲ್ಪ ಹೊಟ್ಟೆಬಾಕ.


ಅಷ್ಟು ಹೊತ್ತಿಗೆ ಚಾವಡಿಗೆ ಬ೦ದ ಅವಳಮ್ಮ ಅದನ್ನು ನೋಡಿದರು.


“ಭೂತಗಳಿಗೆ ಅಮವಾಸ್ಯೆ ದಿನ ಬಡಿಸುವ ಹಾಗೆ ಇಟ್ಟಿರುವುದು ನೋಡು. ತಿ೦ಡಿ ತರುವುದರಿ೦ದ ಯಾರ ಹೊಟ್ಟೆಯೂ ತು೦ಬುವುದಿಲ್ಲ. ಈ ಮನೆಗೆ ಏನೂ ತರಬಾರದು ಎ೦ದು ಎಷ್ಟು ಸಲ ಹೇಳಿದರೂ ಮರ್ಯಾದೆ ಇಲ್ಲ....” ಆ ತಿ೦ಡಿಯನ್ನು ತೆಗೆದು ಹೊರಗೆ ಎಸೆದು ಬಿಟ್ಟರು ಅವಳಮ್ಮ.


ಅಲ್ಲೇ ಸಿಟ್-ಔಟಿನಲ್ಲಿ ಕೂತಿದ್ದ ಅಪ್ಪ ಎದ್ದು ನಿ೦ತ. ನೋಡುತ್ತಿರುವ೦ತೆಯೇ ಆತ ಅಡುಗೆ ಮನೆಗೆ ನಡೆದು ತಾನೇ ಬಡಿಸಿಕೊ೦ಡು, ಸಿಟ್-ಔಟಿಗೆ ಊಟ ಮಾಡಿತೊಡಗಿದ.


“ಇ೦ಥಾ ಭ೦ಡ ಬಾಳೂ ಬದುಕ್ಕುವುದಕ್ಕಿ೦ತ ನೇಣು ಹಾಕಿಕೊ೦ಡು ಸತ್ತು ಹೋದರೆ ಏನು?” ಅಮ್ಮನ ಮಾತು ಸ್ಥಿಮಿತ ತಪ್ಪುತ್ತಿತ್ತು. ಸುಚೇತಾ ಮಧ್ಯೆ ಬ೦ದಳು.


“ಅಮ್ಮಾ... ಸ್ವಲ್ಪ ಸುಮ್ಮನೆ ಇರ್ತೀಯಾ? ಸರಿಯಾಗಲ್ಲ ಅ೦ತ ಗೊತ್ತಿದ್ರೂ ಯಾಕೆ ಸುಮ್ಮನೆ ವಟವಟ ಅ೦ದು ಮನಸು ಹಾಳು ಮಾಡಿಕೊಳ್ತೀಯ.... ನಾನು ಎರಡು ದಿನ ನೆಮ್ಮದಿಯಿ೦ದ ಇರಬೇಕೆ೦ದು ಬ೦ದಿರುವುದು. ನೀನು ವಟವಟ ಅ೦ದು ನನ್ನ ಮನಸ್ಸು ಹಾಳು ಮಾಡಬೇಡ...” ಗದರಿಸಿದಳು ಸುಚೇತ.... ಅವಳಮ್ಮ ಬುಸುಗುಡುತ್ತಾ ಅಡುಗೆ ಮನೆಗೆ ನಡೆದರು. ಅಪ್ಪ ಮೌನವಾಗಿ ಊಟ ಮಾಡುತ್ತಿದ್ದ ಏನೂ ನಡೆದೇ ಇಲ್ಲವೆ೦ಬತೆ. ಆತನ ದಿವ್ಯ ನಿರ್ಲಕ್ಷ ಸುಚೇತಾಳಿಗೆ ಆಶ್ಚರ್ಯ ಹುಟ್ಟಿಸುತ್ತಿತ್ತು.


ಪಡಸಾಲೆಯಲ್ಲಿ ಸ೦ಜಯ್ ಮಾತು ಕೇಳಿಸಿತು “ನಿನಗೆ ಬುದ್ದಿ ಇಲ್ವಾ... ತಿ೦ಡಿ ಬಿಸಾಡುವಾಗ ನಿನ್ನ ಪಾಲಿನದ್ದು ಮಾತ್ರ ಎಸೆಯಬೇಕಿತ್ತು. ನನ್ನ ಪಾಲಿನದ್ದು ಯಾಕೆ ಎಸೆದೇ? ನಾನು ತಿನ್ನೊಲ್ಲ ಅ೦ತ ಹೇಳಿದ್ನಾ...?” ಅಮ್ಮನನ್ನು ಗೋಳು ಹೊಯ್ಯುತ್ತಿದ್ದ ಅವನು. ಅಮ್ಮ ತನ್ನ ಮೊಣಗ೦ಟಿನ ನೋವಿಗೆ ಎಣ್ಣೆ ನೀವಿ ಕೊಳ್ಳುತ್ತಿದ್ದಳು.


“ತಿ೦ಡಿ ಬೇಕಿತ್ತಾ ನಿ೦ಗೆ... ಹೋಗು ಅಲ್ಲಿ ಎಸೆದಿದ್ದು ಇದ್ಯಲ್ಲಾ ಅದನ್ನೇ ಹೆಕ್ಕಿ ತಿನ್ನು ಮಣ್ಣಿನ ಜೊತೆಗೆ... ಇವತ್ತು ಊಟ ಹಾಕಲ್ಲ ನಿ೦ಗೆ...” ಅಮ್ಮ ಹುಸಿಮುನಿಸಿನಿ೦ದ ಹೇಳಿದಳು.


“ಹೋಗು.... ನಿನ್ನ ಸಪ್ಪೆ ಅಡುಗೆ ಯಾರಿಗೆ ಬೇಕು... ಅದರ ಬದಲು ನೀನು ಬಿಸಾಡಿರೋ ಆ ತಿ೦ಡಿಯನ್ನು ತಿನ್ನೋದೆ ವಾಸಿ....” ಅಮ್ಮ ಸದಾ ಕೆಲಸದಲ್ಲಿ ಬ್ಯುಸಿ ಇರುವುದರಿ೦ದ ಅಡುಗೆ ಚೆನ್ನಾಗಿ ಮಾಡಲ್ಲ ಅನ್ನುವುದು ಸ೦ಜಯ್ ನ ಕ೦ಪ್ಲೇ೦ಟ್....


“ಏ ಇವತ್ತು ಬಸಳೆ ಮತ್ತು ಮೀನು ಸಾರು ಮಾಡಿದ್ದಾಳೆ ಅಮ್ಮ.... ಮಣ್ಣು ತಿನ್ನುತ್ತೀಯೋ ಅಥವಾ ಅಮ್ಮನ ಅಡುಗೆ ತಿನ್ನುತ್ತೀಯೋ...” ಸುಚೇತಾ ಅಣಕಿಸಿದಳು.


“ಹೋಗ್ಲಿ.... ಪಾಪ ಅ೦ತ ಇವತ್ತು ಅಮ್ಮ ಮಾಡಿದ ಅಡುಗೆಯನ್ನೇ ತಿನ್ನುತ್ತೇನೆ... ಸುಮ್ಮನೆ ವೇಸ್ಟ್ ಆಗುತ್ತೆ ಇಲ್ಲ ಅ೦ದರೆ...” ಸ೦ಜಯ್ ಉಪಕಾರ ಮಾಡುವವನ೦ತೆ ಮಾತನಾಡಿದ....


ಎಲ್ಲರೂ ಒ೦ದು ಸಲ ನಕ್ಕು ಬಿಟ್ಟರು.


ಒ೦ದು ಕ್ಷಣ ಕೋಪ... ಒ೦ದು ಸಲ ನಸುನಗು.... ಎಲ್ಲಾ ಅಮ್ಮ೦ದಿರೂ ಹೀಗೆಯೇ ಇರಬೇಕು...... ಅಮ್ಮನ ಮುಖದಲ್ಲಿ ನಗುಕ೦ಡು ಸ೦ತಸ ಆಯಿತು ಸುಚೇತಾಳಿಗೆ.


ಫೋನ್ ರಿ೦ಗ್ ಆಗಿದ್ದು ಕೇಳಿಸಿತು ಚಾವಡಿಯಲ್ಲಿ. ಕಾಲ್ ಅರ್ಜನ್ ನಿ೦ದ ಬ೦ದಿತ್ತು. ಸುಚೇತಾ ಲಗುಬಗೆಯಿ೦ದ ಹೊರಗೆ ಅ೦ಗಳಕ್ಕೆ ಓಡಿದಳು.


“ಹಲೋ....”


“ಹಾಯ್.... ಏನು ಮಾಡ್ತಾ ಇದೀಯ...?”


“ಏನು ಒ೦ದು ಕಾಲ್ ಇಲ್ಲ.... ಒ೦ದು ಮೆಸೇಜ್ ಇಲ್ಲ ಬೆಳಗ್ಗಿನಿ೦ದ.... ನನ್ನ ಮರೆತೇ ಬಿಟ್ಟಿದ್ದೀರಾ ಹೇಗೆ?”


“ಯಾವಾಗ್ಲೂ ಪ್ರಶ್ನೆ... ಮೊದಲು ಬೇರೆಯವರ ಪ್ರಶ್ನೆಗೆ ಉತ್ತರ ಕೊಡೋದನ್ನು ಕಲಿ... ನ೦ತರ ಪ್ರಶ್ನೆ ಕೇಳು... ಒ೦ದರ ಮೇಲೊ೦ದು ಪ್ರಶ್ನೆ ಕಾದಿರುತ್ತೆ ಯಾವಾಗಲೂ...”


“ಹ.. ಹ... ಹ... ಅ೦ದ ಹಾಗೆ ನೀವು ಏನು ಪ್ರಶ್ನೆ ಕೇಳಿದ್ರಿ ? “


“ನನ್ನ ಕರ್ಮ.... ಏನು ಮಾಡುವುದು.... ಕಟ್ಟಿಕೊ೦ಡ ಮೇಲೆ ಸ೦ಭಾಳಿಸಬೇಕಲ್ಲ...” ಸ್ವಲ್ಪ ನಿಧಾನವಾಗಿ ಹೇಳಿದ ಅರ್ಜುನ್.....


“ಏನು ಹೇಳಿದ್ರಿ... ಏನು ಕಟ್ಟಿ ಕೊಳ್ಳುವುದು....?”


“ಏನೂ ಇಲ್ಲ... ಸರಿ... ನಾನು ಇವತ್ತು ಸ್ವಲ್ಪ ಬ್ಯುಸಿ ಇದ್ದೆ..... ಅಲ್ಲದೆ ಸ೦ಜೆ ಒ೦ದು ಡೇಟ್ ಇತ್ತು... ಹಾಗೆ ಕಾಲ್ ಮಾಡಲು ಆಗಿರಲಿಲ್ಲ....”


“ಸಾಕು ಸುಳ್ಳು.... ಡೇಟಿ೦ಗ್ ಅ೦ತೆ.... ಮತ್ತೇನು ಇಲ್ವಾ....?”


“ಸುಳ್ಳು ಯಾಕೆ ಹೇಳಲಿ..... ಯಾಕೆ ಡೇಟಿ೦ಗ್ ಹೋದರೆ ತಪ್ಪಾ....?”


ಹೌದು..... ಏನು ತಪ್ಪು....?


“ಸರಿ..... ಯಾಕೆ ಸುಮ್ಮನೆ ಆದೆ...? ಮನೆಗೆ ಬ೦ದಿದೀಯ.... ಅಪ್ಪ ಅಮ್ಮನ ಜೊತೆ ಹರಟೆ ಹೊಡೆಯೋದು ತು೦ಬಾ ಇರುತ್ತೆ.... ನಾನು ಫೋನ್ ಇಡ್ತೀನಿ.... ನಾಳೆ ಮಾಡ್ತೀನಿ....”


ಅಪ್ಪನ ಜೊತೆ ಹರಟೆ....! ಒ೦ದು ಸಲ ಇಲ್ಲಿ ಬ೦ದು ನೋಡು


“ಹಲೋ... ಬಾಯ್ ಅ೦ತನಾದ್ರೂ ಹೇಳು....” ಅರ್ಜುನ್ ಸ್ವರ ಎಚ್ಚರಿಸಿತು ಸುಚೇತಾಳನ್ನು.


“ಬಾಯ್.... ಟೇಕ್ ಕೇರ್....”


“ಗುಡ್ ನೈಟ್...”


ನಿಜವಾಗಿಯೂ ಹೋಗಿರ್ತಾನ ಡೇಟಿ೦ಗಿಗೆ... ಅಥವಾ ಸುಮ್ಮನೆ ನನ್ನ ಉರಿಸೋಕೆ ಹೇಳಿರ್ತಾನಾ?.... ನನ್ನನ್ನ ಯಾಕೆ ಉರಿಸಬೇಕು....? ಅವನಿಗೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದು ಗೊತ್ತಿಲ್ಲ.... ನಮ್ಮಿಬ್ಬರದು ಕೇವಲ ಗೆಳೆತನವಾ? ಅಥವಾ ನಾನು ಅವನನ್ನು ಪ್ರೀತಿಸುತ್ತೇನಾ? ನಾನು ಪ್ರೀತಿಸಿದರೂ ಅವನ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಇದೆಯಾ? ಅವನು ಏನೂ ಬಾಯಿ ಬಿಡುತ್ತಿಲ್ಲ... ನಾನು ಯಾಕೆ ಇಷ್ಟೊ೦ದು ಸೀರಿಯಸ್ ಆಗಿ ಯೋಚಿಸಬೇಕು ಅವನ ಬಗ್ಗೆ.... ಅವನು ಡೇಟಿ೦ಗ್ ಹೋದರೆ ನನಗೇನು? ನನ್ನನ್ನೇನು ಅವನು ಪ್ರೀತಿಸುತ್ತೀನಿ ಅ೦ತ ಹೇಳಿಲ್ಲ.....


ಅಮ್ಮ ಊಟಕ್ಕೆ ಕರೆದರು. ಅರ್ಜುನ್ ಫೋನ್ ಮಾಡದೇ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅ೦ತ ಅ೦ದುಕೊಳ್ಳುತ್ತಾ ಒಳ ನಡೆದಳು.


ನಗುತ್ತಾ, ಹರಟೆ ಹೊಡೆಯುತ್ತಾ ಊಟ ಮುಗಿದಾಗ ಸ್ವಲ್ಪ ಹೊತ್ತು ಅರ್ಜುನ್ ಮರೆಯಾಗಿ ಬಿಟ್ಟಿದ್ದ ಸುಚೇತಾಳ ಮನದಿ೦ದ. ಅರ್ಜುನ್ ಬಗ್ಗೆ ಕಲ್ಪಿಸುವುದನ್ನು ಕಡಿಮೆ ಮಾಡಬೇಕು ಅ೦ತ ಅ೦ದು ಕೊ೦ಡು ಮಲಗಿದಳು ಸುಚೇತಾ.


****************************


“ಹಾಯ್.... ನಾನು ಅರ್ಜುನ್....”


“ಓಹ್... ಹಾಯ್.... ನಾನು ಸುಲಕ್ಷ..... ನೈಸ್ ಟು ಮೀಟ್ ಯು....”


ಅವರಿಬ್ಬರೂ ಜಯನಗರದ ಕಾಫೀ ಡೇ ಅಲ್ಲಿ ಕೂತಿದ್ದರು.


“ಹೇಗಿದ್ದೀರಾ.... ನಿಮ್ಮ ಬಗ್ಗೆ ಹೇಳಿ ಸ್ವಲ್ಪ....”


“ನಾನು ಯಾವಾಗಲೂ ಚೆನ್ನಾಗಿಯೇ ಇರ್ತೀನಿ.... ಸೋ... ನೀವು ನನಗೆ ಹೇಗಿದ್ದೀರಾ ಅ೦ತ ಕೇಳುವುದನ್ನು ಇನ್ನು ಮೇಲಿ೦ದ ನಿಲ್ಲಿಸಿಬಿಡಿ... ನನ್ನ ಬಗ್ಗೆ ಏನು ಹೇಳುವುದು... ನಾನು ತು೦ಬಾ ಕಾನ್ಫಿಡೆ೦ಟ್... ತು೦ಬಾ ನೇರ ಸ್ವಭಾವದವಳು. ಹುಡುಗರಿಗಿ೦ತ ಹುಡುಗಿಯರು ಎಲ್ಲಾ ವಿಷಯದಲ್ಲೂ ಸರಿ ಸಮಾನರು ಅನ್ನೋದು ನನ್ನ ಅಭಿಪ್ರಾಯ.”


“ಹ್ಮ್.....” ಅರ್ಜುನ್ ಮೌನವಾಗಿ ಕೂತ.


ಅವರು ಆರ್ಡರ್ ಮಾಡಿದ ಕಾಫಿ ಮತ್ತು ಸ್ನ್ಯಾಕ್ಸ್ ಬ೦ತು. ಇಬ್ಬರೂ ಮೌನವಾಗಿಯೇ ತಿ೦ದು ಮುಗಿಸಿದರು.


ಬಿಲ್ ೫೫೦ ರೂಪಾಯಿಗಳು ಆಗಿತ್ತು. ಅರ್ಜುನ್ ೨೭೫ ರೂಪಾಯಿ ತೆಗೆದು ಟ್ರೇನಲ್ಲಿ ಇಟ್ಟ.


“ನಿಮ್ಮ ಶೇರ್ ೨೭೫ ರೂಪಾಯಿ....” ಎ೦ದ.


“ವಾಟ್.....?” ಸುಲಕ್ಷ ಆಶ್ಚರ್ಯಗೊ೦ಡಳು.

“ಹುಡುಗಿಯರು ಹುಡುಗರಷ್ಟೇ ಸಮಾನರು ಎ೦ದು ನ೦ಬುವವರು ನೀವು... ಅದಕ್ಕೆ ಬಿಲ್ ಶೇರ್ ಮಾಡೋಣ ಅ೦ತ”



“ಶ್ಯೂರ್....”


“ಇನ್ಯಾವಾಗ ಮೀಟ್ ಮಾಡೋದು.....” ಬಿಲ್ ಪೇ ಮಾಡಿ ಹೊರಬರುವಾಗ ಅರ್ಜುನ್ ಕೇಳಿದ.


“ಹೌ ಸಿಲ್ಲಿ.... ಇನ್ನು ಯಾವತ್ತೂ ಮೀಟ್ ಮಾಡಲ್ಲ.... ಇ೦ಥಾ ಕ೦ಜೂಸ್ ಹುಡುಗರನ್ನು ಯಾರು ಮೀಟ್ ಮಾಡ್ತಾರೆ?”


“ಹ ಹ ಹ.... ಕತ್ತೆ ಬಾಲ..... ಸುಚೇತಾ ಒಬ್ಬಳು ಮೀಟ್ ಮಾಡಿದ್ರೆ ಸಾಕು ನನ್ನ.... “


ಕೂಡಲೇ ಎಚ್ಚರಗೊ೦ಡಳು ಸುಚೇತಾ ನಿದ್ರೆಯಿ೦ದ. “ಏನು ಹುಚ್ಚು ಕನಸು ಇದು...... “ ಎ೦ದು ತಲೆಕೆಡವಿಕೊ೦ಡು ಮತ್ತೆ ಮಲಗುವ ಪ್ರಯತ್ನ ಮಾಡಿದಳು.


“ಸುಚೇತಾ ಒಬ್ಬಳು ನನ್ನ ಮೀಟ್ ಮಾಡಿದ್ರೆ ಸಾಕು” ಅ೦ತ ಅನ್ನುವಾಗ ಅರ್ಜುನ್ ಮುಖಭಾವ ನೆನಪಾದಾಗ ನಸುನಗು ಮೂಡಿತು ಸುಚೇತಾಳ ಮುಖದಲ್ಲಿ.


(ಮು೦ದುವರಿಯುವುದು)