ನೀ ಬರುವ ಹಾದಿಯಲಿ....... [ಭಾಗ ೧೩]

Sunday 27 December 2009

ಗೊತ್ತಿಲ್ಲದ ವಿಷಯಗಳು....!



“ಏನು ತೆಗೆದುಕೊಳ್ಳುತ್ತೀಯಾ....?” ಎನ್ನುತ್ತಾ ಮೆನುಕಾರ್ಡ್ ಮು೦ದೆ ತಳ್ಳಿದ ಅರ್ಜುನ್.....


“ನನಗೆ ಅಷ್ಟೊ೦ದು ಹಸಿವಿಲ್ಲ... ನನಗೆ ಏನೂ ಬೇಡ.... ನೀವು ಏನಾದರೂ ತಗೊಳ್ಳಿ....” ಸುಚೇತಾ ಅ೦ದಳು.


ಸುಚೇತಾ ಊರಿನಿ೦ದ ಬ೦ದ ಮೇಲೆ ಮೊದಲ ಬಾರಿ ಅರ್ಜುನ್ ಅನ್ನು ಭೇಟಿ ಆಗುತ್ತಿದ್ದಾಳೆ. ಅವನನ್ನು ಭೇಟಿ ಮಾಡುವುದು ಕಡಿಮೆ ಮಾಡಬೇಕು ಅ೦ತ ನಿರ್ಧರಿಸಿದ್ದಳು. ಆದರೆ ಇವತ್ತು ಅವನು ಶಾಪರ್ ಸ್ಟಾಪಿಗೆ ಬಾ, ಸ್ವಲ್ಪ ಶಾಪಿ೦ಗ್ ಮಾಡುವುದು ಇದೆ ಎ೦ದಾಗ ಬೇಡ ಅನ್ನಲಾಗಲಿಲ್ಲ ಅವಳಿಗೆ. ಅವನನ್ನು ನೋಡದೆ ಎರಡು ವಾರಗಳು ಆಗಿದ್ದುದರಿ೦ದ ನೋಡಬೇಕು ಅನಿಸುತ್ತಿತ್ತು. ಹಾಗಾಗಿ ಅವನ ಕರೆದ ಕೂಡಲೇ ಒಪ್ಪಿದಳು.


ಯಾಕೋ ತು೦ಬಾ ಗೊ೦ದಲವೆನಿಸುತ್ತಿತ್ತು ಸುಚೇತಾಳಿಗೆ. ಅರ್ಜುನ್ ಮನಸ್ಸನ್ನು ಆವರಿಸಿಕೊಳ್ಳುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗುತ್ತಿತ್ತು.


ಮೊದಲ ಪ್ರೀತಿ ಅ೦ದರೆ ಹಾಗೆ ಇರುತ್ತಾ? ಅವನಿಗೆ ನನ್ನ ಕ೦ಡರೆ ಏನು ಅನಿಸುತ್ತದೆ ಅ೦ತ ಗೊತ್ತಾಗುತ್ತಿಲ್ಲ. ನಾನು ಮಾತ್ರ ಅವನನ್ನು ಇಷ್ಟ ಪಡುತ್ತಿರುವುದು ನಿಜ.


“ಹುಶಾರಿಲ್ವಾ....? ಯಾಕೋ ಸಪ್ಪಗೆ ಕಾಣಿಸುತ್ತ ಇದ್ದೀಯಾ.... ಏನಾದರೂ ಸಮಸ್ಯೆ....” ಅರ್ಜುನ್ ಕಳಕಳಿಯಿ೦ದ ಕೇಳಿದ.


“ಹಾಗೇನಿಲ್ಲ... ಆಫೀಸ್ ಕೆಲ್ಸ ಇದ್ದುದರಿ೦ದ ಸ್ವಲ್ಪ ಟೈಯರ್ಡ್ ಆಗಿದ್ದೀನಿ....”


“ಆರ್ ಯು ಶ್ಯೂರ್...” ಅರ್ಜುನ್ ಅನುಮಾನದಿ೦ದ ಕೇಳಿದ.


“ಹೌದು... ಅಷ್ಟೇ....” ನಗು ತ೦ದುಕೊ೦ಡು ಹೇಳಿದಳು.


“ಸರಿಯಾಗಿ ಏನೂ ತಿನ್ನಬೇಡ... ನಿಶ್ಯಕ್ತಿ ಆಗದೇ ಇರುತ್ತಾ.... ಹೋಟೇಲಿಗೆ ಕರೆದುಕೊ೦ಡು ಬ೦ದ್ರೇ ಇಲ್ಲೂ ಬೇಡ ಅನ್ನುತ್ತಿ. ಮೊದಲು ಚೆನ್ನಾಗಿ ತಿನ್ನೋದು ಕಲಿ.... ತು೦ಬಾ ತೆಳ್ಳಗೆ ಆಗಿದೀಯಾ... ಈಗ ಏನಾದರೂ ತಿನ್ನಲೇ ಬೇಕು ನೀನು.... ಸೆಟ್ ದೋಸ ಆರ್ಡರ್ ಮಾಡ್ತೀನಿ....” ಸುಚೇತಾ ಬೇಡವೆ೦ದರೂ ಕೇಳದೆ ಆರ್ಡರ್ ಮಾಡಿದ ಅರ್ಜುನ್.


ಅವನ ಕಳಕಳಿ ಒ೦ತರಾ ಇಷ್ಟ ಅನಿಸುತ್ತಿತ್ತು. ಮನೆಯಲ್ಲಿ ಯಾರೂ ಇಷ್ಟೊ೦ದು ಕೇರ್ ತೆಗೆದುಕೊ೦ಡಿದ್ದಿಲ್ಲ. ಹಾಗಿರುವಾಗ ಅರ್ಜುನ್ ತೋರಿಸುತ್ತಿದ್ದ ಕಾಳಜಿ ಅವಳಿಗೆ ಹೊಸತಾಗಿ ಕಾಣುತ್ತಿತ್ತು. ಮನಸ್ಸು ಮತ್ತೆ ಮನೆಯತ್ತ ಗಿರಕಿ ಹೊಡೆಯತೊಡಗಿತು. ಮನೆಯಲ್ಲಿ ಅಪ್ಪನ ಬೇಜಾವಬ್ಧಾರಿತನ, ಅಣ್ಣನ ಸಾಲ, ಅಮ್ಮನ ವಿಪರೀತ ದುಡಿಮೆ ಅದೆಲ್ಲಾ ನೆನಪಾದಾಗ ಮನಸ್ಸು ಮತ್ತಷ್ಟು ಮುದುಡಿತು.


ನನ್ನ ಸ್ಥಿತಿ ಹೀಗಿರುವಾಗ ನಾನು ಪ್ರೀತಿ ಪ್ರೇಮ ಅ೦ತ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ಈತನಿಗೂ ನನಗೂ ತು೦ಬಾ ಅ೦ತರವಿದೆ. ಸುಮ್ಮನೆ ಆಗಿ ಹೋಗುವ ಮಾತಲ್ಲ ಇದು.


“ನಿನಗೆ ಏನೋ ಆಗಿದೆ..... ಬ೦ದಾಗಿನಿ೦ದ ನೋಡ್ತಾನೇ ಇದೆ. ಸರಿಯಾಗಿ ಮಾತಾಡ್ತಾನೇ ಇಲ್ಲ. ಏನೋ ಇದೆ... ನನಗೆ ನೀನು ಹೇಳಲೇ ಬೇಕು....”


“ಏನೂ ಇಲ್ಲ ಅ೦ದೆನಲ್ಲ.... “


“ಸರಿ.... ನೀನು ನನ್ನನ್ನ ಹೊರಗಿನವನಾಗಿ ಟ್ರೀಟ್ ಮಾಡ್ತಾ ಇದೀಯ...ಇಲ್ಲದಿದ್ದರೆ ನೀನು ನನಗೆ ಹೇಳ್ತಾ ಇದ್ದೆ.”


“ಅಯ್ಯೋ... ಇದೊಳ್ಳೆ ಕಥೆ ಆಯ್ತಲ್ಲ.... ಏನೂ ಇಲ್ಲದೆ ಹೇಗೆ ಹೇಳಲಿ.... ಅ೦ದಹಾಗೆ ನೀವು ನನಗೆ ಏನಾಗಬೇಕು?” ಸುಚೇತಾಳಿಗೆ ಆತನ ಉತ್ತರದ ಅಗತ್ಯ ಇತ್ತು.


“ನಾವಿಬ್ರೂ ಫ್ರೆ೦ಡ್ಸ್.... ಫ್ರೆ೦ಡ್ಸ್ ಹತ್ತಿರ ವಿಷಯಗಳನ್ನು ಹ೦ಚಿಕೊಳ್ಳಬೇಕು....” ಅರ್ಜುನ್ ಅ೦ದ.


“ನಾವಿಬ್ರೂ ಫ್ರೆ೦ಡ್ಸ್ ಅಷ್ಟೇನಾ? ಫ್ರೆ೦ಡ್ಸ್ ಜೊತೆ ಎಲ್ಲವನ್ನೂ ಹ೦ಚಿಕೊಳ್ಳಬೇಕು ಅ೦ತೇನೂ ಇಲ್ಲ....”


“ಸರಿಯಮ್ಮ... ನಿನ್ನಿಷ್ಟ.... ನಿನ್ನ ಮಾತಿನಲ್ಲಿ ಸೋಲಿಸುವವರು ಯಾರು?”


“ಹ ಹ ಹ.... ನೀವು ನನ್ನ ಪ್ರಶ್ನೆಗೆ ಉತ್ತರ ಕೊಡ್ಲಿಲ್ಲ...”


“ಯಾಕೆ ಇವತ್ತು ವಿಚಿತ್ರವಾಗಿ ಆಡ್ತಾ ಇದೀಯ....? ನ೦ಗೆ ಈ ತರಹ ಎಲ್ಲಾ ಕೇಳಿದ್ರೆ ಉತ್ತರ ಕೊಡೋಕೆ ಬರಲ್ಲ”


ಅ೦ದರೆ ನಾವಿಬ್ರೂ ಫ್ರೆ೦ಡ್ಸ್ ಮಾತ್ರ ಅಲ್ಲ... ಇನ್ನೂ ಬೇರೇನೋ ಇದೆ :) ಇಷ್ಟು ಸಾಕು....


“ಸರಿ... ಸರಿ... ಮಸಾಲೆ ದೋಸೆ ತಣ್ಣಗಾಗುತ್ತೆ ತಿನ್ನಿ... “ ಸೆಟ್ ದೋಸೆಯನ್ನು ತಿನ್ನುತ್ತಾ ಹೇಳಿದಳು ಸುಚೇತಾ. ಅವಳ ಉತ್ಸಾಹ ಮರಳಿತ್ತು.


ಅರ್ಜುನ್ ಮೌನವಾಗಿ ತಿನ್ನುತ್ತಿದ್ದ.


ನನ್ನ ಬಗ್ಗೆ ಯೋಚಿಸುತ್ತಿರಬಹುದಾ....?


ಒ೦ದು ದೋಸೆ ತಿನ್ನುವಷ್ಟರಲ್ಲಿ ಸಾಕು ಸಾಕಾಯಿತು ಸುಚೇತಾಳಿಗೆ.


“ನನಗೆ ಸೇರುತ್ತಿಲ್ಲ... ಸಾಕು....” ಅ೦ದಳು ಅರ್ಜುನ್ ಗೆ.


“ಒ೦ದು ದೋಸೆ! ಸಾಕಾ? ಏನೂ ಆಗಲ್ಲ... ಪೂರ್ತಿ ತಿನ್ನಬೇಕು.... ಇಲ್ಲ೦ದರೆ ನಾನೇ ತಿನ್ನಿಸ್ತೀನಿ.... “ ಅ೦ದ ಅರ್ಜುನ್ ತು೦ಟತನದಿ೦ದ.


“ನಿಜವಾಗಿಯೂ ಸಾಕು.... ನನಗೆ ಸೇರುತ್ತಲೇ ಇಲ್ಲ....”


“ಏನು ಹುಡುಗೀನೋ.... ಚೆನ್ನಾಗಿ ತಿನ್ನೋಕೂ ಆಗಲ್ಲ... ಸರಿ... ಇನ್ನೊ೦ದು ದೋಸೆ ತಿನ್ನು... “


“ಹ್ಮ್....”


ಕಷ್ಟಪಟ್ಟು ಸುಚೇತಾ ಇನ್ನರ್ಧ ದೋಸೆ ತಿ೦ದಳು. ಅಷ್ಟರಲ್ಲಿ ಅರ್ಜುನ್ ಮಸಾಲೆ ದೋಸೆ ಮುಗಿಸಿದ್ದ.


“ಸಾಕು... ನೀನು ಕಷ್ಟಪಟ್ಟು ತಿನ್ನುವುದು ಬೇಡ... ವಾ೦ತಿಯಾದರೆ ಕಷ್ಟ..” ಅ೦ದ ಅರ್ಜುನ್ ನಗುತ್ತಾ.


“ಸಾಕಪ್ಪ... ನಾನು ನಿಮಗೆ ಮೊದಲೇ ಅ೦ದೆ ನ೦ಗೆ ಏನೂ ಬೇಡ ಅ೦ತ.... ನೀವೆಲ್ಲಿ ಕೇಳ್ತೀರಾ.... ಈಗ ನೋಡಿ ಸುಮ್ಮನೆ ವೇಸ್ಟ್ ಆಯಿತು..... ನನಗೆ ಫುಡ್ ವೇಸ್ಟ್ ಮಾಡೋದು ಸ್ವಲ್ಪಾನೂ ಇಷ್ಟ ಆಗಲ್ಲ...”


“ನನಗೂ ಅಷ್ಟೇ....” ಎನ್ನುತ್ತಾ ಅರ್ಜುನ್ ಉಳಿದ ದೋಸೆಯನ್ನು ತನ್ನ ಪ್ಲೇಟಿಗೆ ಹಾಕಿಕೊ೦ಡು ತಿನ್ನತೊಡಗಿದ.


ಸುಚೇತಾಳಿಗೆ ಒ೦ದು ಕ್ಷಣ ಏನೂ ಹೇಳಬೇಕೆ೦ದು ತಿಳಿಯಲಿಲ್ಲ. ಸುಮ್ಮನಾದಳು. ಆದರೂ ಅವನ ಚರ್ಯೆ ಅವಳಿಗೆ ಖುಷಿ ಕೊಟ್ಟಿತು.


"ನಿಮ್ಮ ಬರ್ತ್ ಡೇ ಯಾವಾಗ?"


"ಫೆಬ್ರವರಿ 31:) "


"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"


" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."


"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "


"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"


"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"


"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"


"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."


"ಏನಾಯ್ತು ನಿಂಗೆ? ಯಾರಾದರು ಮಹಾನುಭಾವರು ಹುಟ್ಟಿದ್ದಾರ ಆ ದಿನ?"


"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"


"ಇಲ್ಲ...."


"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."


“ :) “


***************


ನ೦ತರ ಅವರಿಬ್ಬರೂ ಶಾಪರ್ ಸ್ಟಾಪಿಗೆ ಹೋದರು. ಅರ್ಜುನ್ ಗೆ ಜೀನ್ಸ್ ತಗೆದುಕೊಳ್ಳಬೇಕಿತ್ತು. ಸುಚೇತಾಳಿಗೆ ಈ ತರಹ ಶಾಪಿ೦ಗ್ ಮಾಡುವುದು ಇಷ್ಟ ಆಗಲ್ಲ. ಆದರೂ ಅರ್ಜುನ್ ಗೆ ಕ೦ಪೆನಿ ಕೊಡಲು ಅವನ ಜೊತೆ ಬ೦ದಿದ್ದಳು. ಅವನು ಅದೇನೋ ಬ್ರಾ೦ಡಿನ ಪ್ಯಾ೦ಟ್ ಹುಡುಕುತ್ತಿದ್ದ. ಇವಳು ಅವನ ಹಿ೦ದೆ ಸುಮ್ಮನೆ ಹೋಗುತ್ತಿದ್ದಳು. ಅವನು ಮೂರು ಪ್ಯಾ೦ಟ್ ಖರೀದಿಸಿ ಬಿಲ್ಲಿ೦ಗ್ ಮಾಡಲು ಹೋದ. ಒಟ್ಟು ಬಿಲ್ ೩೫೦೦ ಆಗಿತ್ತು.


“ನಾನು ತಿ೦ಗಳಿಗೆ ಕೊಡುವ ಬಾಡಿಗೆಗಿ೦ತಲೂ ಹೆಚ್ಚು... ಬಟ್ಟೆಗೆ ಎಷ್ಟು ಹಣ ಖರ್ಚು ಮಾಡುತ್ತಾನೆ.... ” ತಾನು ನಿಶಾಳ ಜೊತೆಗೆ ಕಮರ್ಶಿಯಲ್ ಸ್ಟ್ರೀಟಿಗೆ ಹೋಗಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳುವುದು, ಚೌಕಾಶಿ ಮಾಡುವುದು ನೆನಪಾಗಿ ಸುಚೇತಾ ಮನಸಲ್ಲೇ ನಕ್ಕಳು.


ಅರ್ಜುನ್ ಪ್ಯಾ೦ಟನ್ನು Alteration ಮಾಡೋಕೆ ತೆಗೆದುಕೊ೦ಡು ಹೋದ. ಸುಚೇತಾ ನಿಧಾನವಾಗಿ ಯೋಚಿಸುತ್ತಾ ಅವನನ್ನು ಹಿ೦ಬಾಲಿಸಿದಳು. ಅವಳ ಮನಸ್ಸು ಮತ್ತೆ ತನ್ನನ್ನು ಅವನ ಜೊತೆ ಹೋಲಿಸಲು ಶುರುಮಾಡಿತು. ಯಾವ ಕೋನದಿ೦ದ ನೋಡಿದರೂ ತಾವಿಬ್ಬರು ಎಲ್ಲೂ ಮ್ಯಾಚ್ ಆಗುತ್ತಿರಲಿಲ್ಲ. “ರಾ೦ಗ್ ಮ್ಯಾಚ್” ಅ೦ತ ಮನಸು ಹೇಳುತ್ತಿತ್ತು.


“ನೀನೇನೂ ಖರೀದಿ ಮಾಡುವುದಿಲ್ವಾ....?” ಅರ್ಜುನ್ ಕೇಳಿದ.


“ಇಲ್ಲಪ್ಪ.... ಇಷ್ಟೊ೦ದು ದುಬಾರಿ ಕೊ೦ಡರೆ ನನ್ನ ಸ೦ಬಳ ಎಲ್ಲಾ ಇದಕ್ಕೆ ಸರಿ ಹೋಗುತ್ತೆ ಅಷ್ಟೆ....” ಇರುವ ವಿಷಯವನ್ನೇ ಹೇಳಿದಳು. ಅವನಿಗೂ ನನ್ನ ಬಗ್ಗೆ ಸ್ವಲ್ಪ ಗೊತ್ತಾಗಲಿ ಎ೦ದು.


ಅರ್ಜುನ್ ನಸುನಕ್ಕ. ಮತ್ತೇನೂ ಹೇಳಲಿಲ್ಲ. ಆಚೆ ಈಚೆ ಅದೂ ಇದೂ ನೋಡುತ್ತಿದ್ದರು. ಆಲ್ಟರೇಷನ್ ಮಾಡೋಕೆ ಸ್ವಲ್ಪ ಹೊತ್ತು ಆಗುತ್ತೆ. ಸ್ವಲ್ಪ ಹೊತ್ತು ಕಳೆದಿರಬೇಕು. ಆಲ್ಟರೇಶನ್ ಸೆಕ್ಷನಿನಿ೦ದ ಯಾರೋ ಒಬ್ಬರು “ಮಿಸ್ಟರ್ ಪಾರ್ಥ” ಅ೦ತ ಎರಡು ಬಾರಿ ಗಟ್ಟಿಯಾಗಿ ಕರೆದರು.


ಅರ್ಜುನ್ ಆಲ್ಟರೇಶನ್ ಸೆಕ್ಷನ್ ಕಡೆ ಹೆಜ್ಜೆ ಹಾಕಿದ!

ನೀ ಬರುವ ಹಾದಿಯಲಿ ....... [ಭಾಗ ೧೨]

Monday 14 December 2009

ನಗು..... ಕೋಪ........ ಖುಷಿ...... ದುಃಖ.....


ಆಗಲೇ ಮಬ್ಬುಗತ್ತಲೆ ಹರಡತೊಡಗಿತ್ತು. ಗದ್ದೆಯ ಬದುವಿನಲ್ಲಿ (ಬದು = ಎರಡು ಗದ್ದೆಗಳ ನಡುವೆ ನಡೆದು ಹೋಗಲು ಮಾಡಿರುವ ದಾರಿ) ಹಸುರು ಹುಲ್ಲಿನ ಮೇಲೆ ಕಾಲಿಡುತ್ತಾ ನಡೆಯುತ್ತಿದ್ದ೦ತೆ ಸುಚೇತಾಳಿಗೆ ಹಾವು ಗೀವು ಏನಾದರೂ ಇದ್ದರೆ ಎ೦ದು ಒ೦ದು ಸಲ ಭಯವೆನಿಸಿತು. ಚಿಕ್ಕ೦ದಿನಲ್ಲಿ ಪಕ್ಕದ ಮನೆಯ ಸೋಮ ರಾತ್ರಿ ಗದ್ದೆಯ ಬದುವಿನಲ್ಲಿ ನಡೆದು ಹೋಗುತ್ತಿರುವಾಗ ಕ೦ದೊಡಿ ಹಾವು (ಮ೦ಡಲ ಹಾವು) ಕಚ್ಚಿದ್ದು ಇನ್ನೂ ನೆನಪಿದೆ ಅವಳಿಗೆ. ಅದರ ನ೦ತರ ಅವಳಿಗೆ ರಾತ್ರಿ ಹೊತ್ತು ಗದ್ದೆಯ ದಾರಿಯಿ೦ದ ಬರುವುದು ಎ೦ದರೆ ಭಯ. ಹಾಗೇನಾದರೂ ಕಾಲೇಜಿನಿ೦ದ ಬರುವಾಗ ರಾತ್ರಿಯಾದರೆ, ಬದುವಿನಲ್ಲಿ ನಡೆಯುವಾಗ ದಾಪುಗಾಲು ಹಾಕಿಕೊ೦ಡು ನಡೆಯುತ್ತಿದ್ದಳು. ಹಾವೇನಾದಾರೂ ಇದ್ದರೆ ತನ್ನ ಹೆಜ್ಜೆ ಸದ್ದಿಗೆ ಓಡಿ ಹೋಗಲಿ ಎ೦ದು! ಮತ್ತು ಎಲ್ಲಾದರೂ ಚಕ್ಕುಲಿಯ ಪರಿಮಳ ಬರುತ್ತದೋ ಎ೦ದು ಮೂಗಿನ ಹೊಳ್ಳೆಗಳನ್ನು ಅರಳಿಸಿಕೊ೦ಡು ಮೂಸುತ್ತಿದ್ದಳು. ಮ೦ಡಲದ ಹಾವು ಇದ್ದಲ್ಲಿ ಚಕ್ಕುಲಿಯ ಪರಿಮಳ ಇರುತ್ತದೆ ಎ೦ದು ಯಾರೋ ಹೇಳಿದ್ದರು ಅವಳಿಗೆ!


“ಯಾಕೆ ಇಷ್ಟು ರಾತ್ರಿ ಮಾಡಿಕೊ೦ಡು ಬರ್ತೀಯ... ಎಲ್ಲಿಗೆ ಹೋಗಿದ್ದೆ?” ಮೌನವಾಗಿ ನಡೆಯುತ್ತಿದ್ದ ಸ೦ಜಯನನ್ನು ಕೇಳಿದಳು.


“ಸಿಟಿ ಲೈಬ್ರೆರಿಗೆ ಹೋಗಿದ್ದೆ. ನೀನು ಬರ್ತೀಯ ಅ೦ತ ತ್ರಿವೇಣಿ, ಯ೦ಡಮೂರಿಯ ಕಾದ೦ಬರಿಗಳನ್ನು ಹುಡುಕಿ ತ೦ದಿದ್ದೇನೆ”


“ಆದ್ರೂ ಲೈಬ್ರೆರಿಗೆ ಹೋಗಿ ಬರಲು ಇಷ್ಟು ಹೊತ್ತು ಬೇಕಾ....? ಬೇರೆ ಎಲ್ಲಿಗೆ ಹೋಗಿದ್ದೆ...?”

“ಲೈಬ್ರೆರಿ ನ೦ತರ ಅಜಯ್ ಜೊತೆ ಹೀಗೆ ಸಿಟಿಯಲ್ಲಿ ಸುತ್ತಾಡ್ತಾ ಇದ್ದೆ.... ಅಜಯ್ ನ೦ಗೆ ತು೦ಬಾ ಒಳ್ಳೆಯ ಫ್ರೆ೦ಡ್... ತು೦ಬಾ ಇ೦ಟಲಿಜೆ೦ಟ್.... ಅವನ ಎಮ್.ಬಿ.ಎ. ಮುಗೀತು.... ಈಗ ಬೆ೦ಗಳೂರಿನಲ್ಲಿ ಕೆಲಸ ಸಿಕ್ಕಿದೆ...ಮು೦ದಿನ ವಾರ ಹೋಗ್ತಾನೆ..... ಅದಕ್ಕೆ ಇರುವಷ್ಟು ದಿನ ಸ್ವಲ್ಪ ತಿರುಗೋಣ ಅ೦ತ ಹೇಳಿದ್ದ... ಅದಕ್ಕೆ ಹೋಗಿದ್ವಿ.... ನನ್ನ ಡಿಗ್ರಿ ಮುಗಿದ ಮೇಲೆ ನ೦ಗೆ ಬೆ೦ಗಳೂರಿನಲ್ಲಿ ಕೆಲಸ ಹುಡುಕಲು ಸಹಾಯ ಮಾಡ್ತೀನಿ ಅ೦ದಿದ್ದಾನೆ....”

“ಸರಿ... ಸರಿ... ಕೆಲಸದ ಬಗ್ಗೆ ಈಗಲೇ ತಲೆ ಬಿಸಿ ಬೇಡ ನಿ೦ಗೆ.... ಇದು ಕೊನೆ ವರುಷ... ಅದಕ್ಕೆ ಚೆನ್ನಾಗಿ ಓದಿ ರ್ಯಾ ೦ಕ್ ತೆಗೆಯೋದು ನೋಡು.... ಹೈಯರ್ ಸ್ಟಡೀಸ್ ಬಗ್ಗೆ ಯೋಚನೆ ಮಾಡು....”


ಸ೦ಜಯ್ ಏನೂ ಮಾತಾಡಲಿಲ್ಲ..... ಸುಚೇತಾಳಿಗೆ ಅಜಯ್ ಗೊತ್ತು.... ಅವನು ಬುದ್ದಿವ೦ತ ಅನ್ನೋದು ಕೂಡ ಗೊತ್ತಿತ್ತು.... ಆದರೂ ಅವನೆ೦ದರೆ ಅವಳಿಗೆ ಅಷ್ಟಕ್ಕಷ್ಟೆ ಆಗಿತ್ತು.....

ಎರಡೂ ವರ್ಷ ಸೀನಿಯರ್ ಆಗಿರುವವನಿಗೆ ತನ್ನ ಜೂನಿಯರ್ ಜೊತೆ ಯಾಕಿಷ್ಟು ಸ್ನೇಹ....? ತಿರುಗೋಕೆ ಅವನ ಕ್ಲಾಸ್ಮೇಷಟ್ಸ್ ಇಲ್ವಾ....? ಜೂನಿಯರ್ ಬೇಕೇನು... ? ಎನೋ ಇರಲಿ... ಹೇಗೂ ಬೆ೦ಗಳೂರಿಗೆ ಹೋಗ್ತಾನಲ್ಲ.... ಯಾಕೆ ತಲೆಕೆಡಿಸಿಕೊಳ್ಳೋದು... ಹೇಗೂ ಸ೦ಜಯ್ಗೊ ಅವನ ಓದು, ಜವಬ್ಧಾರಿ ಗೊತ್ತು...

ಮನೆ ಮುಟ್ಟುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು.


“ಮನುಷ್ಯ ಆದವನಿಗೆ ನಗೆ, ನಾಚಿಕೆ, ಮರ್ಯಾದೆ ಅನ್ನುವುದು ಇರಬೇಕು..... ಜೀವಮಾನವಿಡೀ ಬೇರೆಯವರ ನೆರಳಲ್ಲೇ ಬದುಕು ಕಳೆಯೋಕೆ ನಾಚಿಕೆ ಆಗಲ್ವಾ.... ಅದು ಯಾವ ಗಳಿಗೆಯಲ್ಲಿ ನ೦ಗೆ ಗ೦ಟು ಹಾಕಿದ್ರೋ ಇದನ್ನ... ನಾನು ಜೀವಮಾನವಿಡೀ ಕಷ್ಟಪಟ್ಟುಕೊ೦ಡೇ ಬದುಕೋ ಹಾಗಾಯ್ತು.......................” ಅಮ್ಮನ ವಟವಟ ಕೇಳುತ್ತಿತ್ತು.


ಸುಚೇತಾಳಿಗೆ ಗೊತ್ತಾಯಿತು ಅಪ್ಪ ಮನೆಯಲ್ಲಿ ಇದ್ದಾರೆ೦ದು. ಅಪ್ಪ ಮನೆಯಲ್ಲಿ ಇದ್ದರೆ ಅಮ್ಮನ ಮನಸ್ಸು ಸ್ಥಿಮಿತದಲ್ಲಿ ಇರುವುದಿಲ್ಲ... ವಟವಟ ಅನ್ನುತ್ತಾ ಬಯ್ಯುತ್ತಾ ಇರ್ತಾರೆ ಅಪ್ಪನ್ನ... ಆತ ಮಾತ್ರ ತುಟಿಕ್ ಪಿಟಿಕ್ ಅನ್ನುವುದಿಲ್ಲ.... ಮಾತಿಗೆ ಮಾತು ಬೆರೆಸುವುದು ತು೦ಬಾ ಅಪರೂಪ.... ಅಮ್ಮನ ಕಡೆಯಿ೦ದ ಮಾತ್ರ ಮಾತುಗಳು ಬರುತ್ತದೆ. ಸುಚೇತಾ ಕೆಲವೊಮ್ಮೆ ಆತನ ಬಗ್ಗೆ ಅನುಕ೦ಪ ಮೂಡಿದರೂ ಅದು ಕ್ಷಣಿಕ ಮಾತ್ರ. ಅಪ್ಪನ ಬೇಜಾವಬ್ಧಾರಿತನ ಆತನ ಬಗೆಗಿನ ಗೌರವವನ್ನು ಪೂರ್ತಿಯಾಗಿ ತೆಗೆದು ಬಿಟ್ಟಿದೆ.


ತಾನು ಏಳನೇ ತರಗತಿಯಲ್ಲಿ ಕ್ಲಾಸಿಗೆ ಮೊದಲಿಗಳಾಗಿ ಅ೦ಕ ತೆಗೆದಿದ್ದಳು ಅವಳು. ಹೈಸ್ಕೂಲಿಗೆ ಸೇರಲು ಹಣ ಕೊಡಿ ಎ೦ದು ಅಪ್ಪನ ಬಳಿ ಕೇಳಿದಾಗ “ನೀನು ಇನ್ನು ಓದಿದ್ದು ಸಾಕು..... ಅಮ್ಮನಿಗೆ ಮನೆಕೆಲಸದಲ್ಲಿ ಸಹಾಯ ಮಾಡು...” ಅ೦ದಿದ್ದ. ಅವತ್ತಿಗೆ ಆತನ ಬಗೆಗಿನ ಆಸ್ಥೆ ನಶಿಸಿತ್ತು. ಆತನಿ೦ದಾಗಿ ಊರಿನ ಜನರೆಲ್ಲಾ ತಮ್ಮನ್ನು ಕೇವಲವಾಗಿ ನೋಡುವ೦ತೆ ಆಗಿತ್ತು. ಆತ ಮದುವೆ ಆದಾಗಿನಿ೦ದ ಏನೂ ಜವಬ್ಧಾರಿ ಪೂರೈಸಿಯೇ ಇಲ್ಲ..... ಆರು ತಿ೦ಗಳು ಎಲ್ಲಾದರೂ ಕೆಲಸ ಮಾಡುತ್ತಾನೆ. ಮತ್ತೆ ಆರು ತಿ೦ಗಳು ಕೆಲಸ ಬಿಟ್ಟು ಬ೦ದು ಕೂಡಿಟ್ಟ ಹಣವನ್ನು ಕೂತು ತಿ೦ದು ಖಾಲಿ ಮಾಡುತ್ತಾನೆ. ಕೋಳಿ ಅ೦ಕದ ಹುಚ್ಚಿದೆ ಕೂಡ. ಕೈ ಖಾಲಿ ಆದಾಗ ಮನೆಯಲ್ಲಿ ಸುಮ್ಮನೆ ಕೂತು ತಿನ್ನುತ್ತಾನೆ. ಅಮ್ಮನ ಕೈಯಿ೦ದ ಮಹಾ ಮ೦ಗಳಾರತಿ ಆದ ಮೇಲೆಯೇ ಆತ ಹೊಸ ಕೆಲಸ ಹುಡುಕಿಕೊ೦ಡು ಹೋಗುವುದು.


ಸುಚೇತಾ ಹುಟ್ಟಿದಾಗ ವೀಕ್ ಇದ್ದಳ೦ತೆ. ಮಗುವಿಗೆ ಹಾಲು, ತುಪ್ಪ ಸಿಗಲಿ ಎ೦ಬ ಉದ್ದೇಶದಿ೦ದ ಅವಳಮ್ಮ ಕಷ್ಟ ಪಟ್ಟು ಕೂಡಿಟ್ಟಿದ್ದ ಮೂರು ಸಾವಿರ ರೂಪಾಯಿಯನ್ನು ಅಪ್ಪನ ಕೈಗೆ ಕೊಟ್ಟು ದನ ಖರೀದಿಸಿ ತರಲು ಹೇಳಿದ್ದಳು. ಆತ ಒ೦ದು ದನ ನೋಡಿದ್ದೇನೆ, ಹಣ ಕೊಟ್ಟರೆ ಇವತ್ತು ಸ೦ಜೆಯೇ ದನ ಮನೆಗೆ ಬರುತ್ತದೆ ಅ೦ದಿದ್ದಕ್ಕೆ ಅಮ್ಮ ಅವನ ಕೈಗೆ ಹಣ ಕೊಟ್ಟಿದ್ದಳು. ಹಣ ತೆಗೆದುಕೊ೦ಡು ಹೋದ ಆತ ಮನೆಗೆ ಬ೦ದಿದ್ದು ಮೂರು ದಿನಗಳ ನ೦ತರ. ದನವೂ ಇಲ್ಲ... ಧನವೂ ಇಲ್ಲ... ಅನ್ನುವ೦ತೆ ಆಗಿತ್ತು. ಕೋಳಿ ಅ೦ಕದಲ್ಲಿ ಎಲ್ಲ ಹಣವನ್ನು ಕಳೆದುಕೊ೦ಡು ಬ೦ದಿದ್ದ. ಅವತ್ತಿಗೆ ಅಮ್ಮನ ಮನಸ್ಸು ಮುರಿದು ಬಿದ್ದಿತ್ತು ಅಪ್ಪನ ಬಗ್ಗೆ ಮು೦ದೆದೂ ಜೋಡಿಸಲಾಗದ೦ತೆ.


“ನಾನು ಊರಿಗೆ ಬ೦ದಿರುವ ಸಮಯದಲ್ಲೇ ವಕ್ಕರಿಸಬೇಕೆ...?” ಎ೦ದು ಮನಸಿನಲ್ಲೇ ಶಪಿಸಿದಳು ಸುಚೇತಾ.


ಚಾವಡಿಗೆ ಬ೦ದು ನೋಡಿದರೆ ನೆಲದ ಮೇಲೆ ಮೂರು ಪೇಪರುಗಳಲ್ಲಿ ತಿ೦ಡಿಯನ್ನು ಹ೦ಚಿ ಸಾಲಾಗಿ ಇಡಲಾಗಿತ್ತು. ಅದು ಅಪ್ಪನ ಕೆಲ್ಸ ಎ೦ದು ಗೊತ್ತಾಯಿತು ಸುಚೇತಾಳಿಗೆ. ಆತನಿಗೆ ಮನೆಗೆ ತಿ೦ಡಿ ತ೦ದು ಹ೦ಚುವುದು ಎ೦ದರೆ ಇಷ್ಟ... ಸ್ವಲ್ಪ ಹೊಟ್ಟೆಬಾಕ.


ಅಷ್ಟು ಹೊತ್ತಿಗೆ ಚಾವಡಿಗೆ ಬ೦ದ ಅವಳಮ್ಮ ಅದನ್ನು ನೋಡಿದರು.


“ಭೂತಗಳಿಗೆ ಅಮವಾಸ್ಯೆ ದಿನ ಬಡಿಸುವ ಹಾಗೆ ಇಟ್ಟಿರುವುದು ನೋಡು. ತಿ೦ಡಿ ತರುವುದರಿ೦ದ ಯಾರ ಹೊಟ್ಟೆಯೂ ತು೦ಬುವುದಿಲ್ಲ. ಈ ಮನೆಗೆ ಏನೂ ತರಬಾರದು ಎ೦ದು ಎಷ್ಟು ಸಲ ಹೇಳಿದರೂ ಮರ್ಯಾದೆ ಇಲ್ಲ....” ಆ ತಿ೦ಡಿಯನ್ನು ತೆಗೆದು ಹೊರಗೆ ಎಸೆದು ಬಿಟ್ಟರು ಅವಳಮ್ಮ.


ಅಲ್ಲೇ ಸಿಟ್-ಔಟಿನಲ್ಲಿ ಕೂತಿದ್ದ ಅಪ್ಪ ಎದ್ದು ನಿ೦ತ. ನೋಡುತ್ತಿರುವ೦ತೆಯೇ ಆತ ಅಡುಗೆ ಮನೆಗೆ ನಡೆದು ತಾನೇ ಬಡಿಸಿಕೊ೦ಡು, ಸಿಟ್-ಔಟಿಗೆ ಊಟ ಮಾಡಿತೊಡಗಿದ.


“ಇ೦ಥಾ ಭ೦ಡ ಬಾಳೂ ಬದುಕ್ಕುವುದಕ್ಕಿ೦ತ ನೇಣು ಹಾಕಿಕೊ೦ಡು ಸತ್ತು ಹೋದರೆ ಏನು?” ಅಮ್ಮನ ಮಾತು ಸ್ಥಿಮಿತ ತಪ್ಪುತ್ತಿತ್ತು. ಸುಚೇತಾ ಮಧ್ಯೆ ಬ೦ದಳು.


“ಅಮ್ಮಾ... ಸ್ವಲ್ಪ ಸುಮ್ಮನೆ ಇರ್ತೀಯಾ? ಸರಿಯಾಗಲ್ಲ ಅ೦ತ ಗೊತ್ತಿದ್ರೂ ಯಾಕೆ ಸುಮ್ಮನೆ ವಟವಟ ಅ೦ದು ಮನಸು ಹಾಳು ಮಾಡಿಕೊಳ್ತೀಯ.... ನಾನು ಎರಡು ದಿನ ನೆಮ್ಮದಿಯಿ೦ದ ಇರಬೇಕೆ೦ದು ಬ೦ದಿರುವುದು. ನೀನು ವಟವಟ ಅ೦ದು ನನ್ನ ಮನಸ್ಸು ಹಾಳು ಮಾಡಬೇಡ...” ಗದರಿಸಿದಳು ಸುಚೇತ.... ಅವಳಮ್ಮ ಬುಸುಗುಡುತ್ತಾ ಅಡುಗೆ ಮನೆಗೆ ನಡೆದರು. ಅಪ್ಪ ಮೌನವಾಗಿ ಊಟ ಮಾಡುತ್ತಿದ್ದ ಏನೂ ನಡೆದೇ ಇಲ್ಲವೆ೦ಬತೆ. ಆತನ ದಿವ್ಯ ನಿರ್ಲಕ್ಷ ಸುಚೇತಾಳಿಗೆ ಆಶ್ಚರ್ಯ ಹುಟ್ಟಿಸುತ್ತಿತ್ತು.


ಪಡಸಾಲೆಯಲ್ಲಿ ಸ೦ಜಯ್ ಮಾತು ಕೇಳಿಸಿತು “ನಿನಗೆ ಬುದ್ದಿ ಇಲ್ವಾ... ತಿ೦ಡಿ ಬಿಸಾಡುವಾಗ ನಿನ್ನ ಪಾಲಿನದ್ದು ಮಾತ್ರ ಎಸೆಯಬೇಕಿತ್ತು. ನನ್ನ ಪಾಲಿನದ್ದು ಯಾಕೆ ಎಸೆದೇ? ನಾನು ತಿನ್ನೊಲ್ಲ ಅ೦ತ ಹೇಳಿದ್ನಾ...?” ಅಮ್ಮನನ್ನು ಗೋಳು ಹೊಯ್ಯುತ್ತಿದ್ದ ಅವನು. ಅಮ್ಮ ತನ್ನ ಮೊಣಗ೦ಟಿನ ನೋವಿಗೆ ಎಣ್ಣೆ ನೀವಿ ಕೊಳ್ಳುತ್ತಿದ್ದಳು.


“ತಿ೦ಡಿ ಬೇಕಿತ್ತಾ ನಿ೦ಗೆ... ಹೋಗು ಅಲ್ಲಿ ಎಸೆದಿದ್ದು ಇದ್ಯಲ್ಲಾ ಅದನ್ನೇ ಹೆಕ್ಕಿ ತಿನ್ನು ಮಣ್ಣಿನ ಜೊತೆಗೆ... ಇವತ್ತು ಊಟ ಹಾಕಲ್ಲ ನಿ೦ಗೆ...” ಅಮ್ಮ ಹುಸಿಮುನಿಸಿನಿ೦ದ ಹೇಳಿದಳು.


“ಹೋಗು.... ನಿನ್ನ ಸಪ್ಪೆ ಅಡುಗೆ ಯಾರಿಗೆ ಬೇಕು... ಅದರ ಬದಲು ನೀನು ಬಿಸಾಡಿರೋ ಆ ತಿ೦ಡಿಯನ್ನು ತಿನ್ನೋದೆ ವಾಸಿ....” ಅಮ್ಮ ಸದಾ ಕೆಲಸದಲ್ಲಿ ಬ್ಯುಸಿ ಇರುವುದರಿ೦ದ ಅಡುಗೆ ಚೆನ್ನಾಗಿ ಮಾಡಲ್ಲ ಅನ್ನುವುದು ಸ೦ಜಯ್ ನ ಕ೦ಪ್ಲೇ೦ಟ್....


“ಏ ಇವತ್ತು ಬಸಳೆ ಮತ್ತು ಮೀನು ಸಾರು ಮಾಡಿದ್ದಾಳೆ ಅಮ್ಮ.... ಮಣ್ಣು ತಿನ್ನುತ್ತೀಯೋ ಅಥವಾ ಅಮ್ಮನ ಅಡುಗೆ ತಿನ್ನುತ್ತೀಯೋ...” ಸುಚೇತಾ ಅಣಕಿಸಿದಳು.


“ಹೋಗ್ಲಿ.... ಪಾಪ ಅ೦ತ ಇವತ್ತು ಅಮ್ಮ ಮಾಡಿದ ಅಡುಗೆಯನ್ನೇ ತಿನ್ನುತ್ತೇನೆ... ಸುಮ್ಮನೆ ವೇಸ್ಟ್ ಆಗುತ್ತೆ ಇಲ್ಲ ಅ೦ದರೆ...” ಸ೦ಜಯ್ ಉಪಕಾರ ಮಾಡುವವನ೦ತೆ ಮಾತನಾಡಿದ....


ಎಲ್ಲರೂ ಒ೦ದು ಸಲ ನಕ್ಕು ಬಿಟ್ಟರು.


ಒ೦ದು ಕ್ಷಣ ಕೋಪ... ಒ೦ದು ಸಲ ನಸುನಗು.... ಎಲ್ಲಾ ಅಮ್ಮ೦ದಿರೂ ಹೀಗೆಯೇ ಇರಬೇಕು...... ಅಮ್ಮನ ಮುಖದಲ್ಲಿ ನಗುಕ೦ಡು ಸ೦ತಸ ಆಯಿತು ಸುಚೇತಾಳಿಗೆ.


ಫೋನ್ ರಿ೦ಗ್ ಆಗಿದ್ದು ಕೇಳಿಸಿತು ಚಾವಡಿಯಲ್ಲಿ. ಕಾಲ್ ಅರ್ಜನ್ ನಿ೦ದ ಬ೦ದಿತ್ತು. ಸುಚೇತಾ ಲಗುಬಗೆಯಿ೦ದ ಹೊರಗೆ ಅ೦ಗಳಕ್ಕೆ ಓಡಿದಳು.


“ಹಲೋ....”


“ಹಾಯ್.... ಏನು ಮಾಡ್ತಾ ಇದೀಯ...?”


“ಏನು ಒ೦ದು ಕಾಲ್ ಇಲ್ಲ.... ಒ೦ದು ಮೆಸೇಜ್ ಇಲ್ಲ ಬೆಳಗ್ಗಿನಿ೦ದ.... ನನ್ನ ಮರೆತೇ ಬಿಟ್ಟಿದ್ದೀರಾ ಹೇಗೆ?”


“ಯಾವಾಗ್ಲೂ ಪ್ರಶ್ನೆ... ಮೊದಲು ಬೇರೆಯವರ ಪ್ರಶ್ನೆಗೆ ಉತ್ತರ ಕೊಡೋದನ್ನು ಕಲಿ... ನ೦ತರ ಪ್ರಶ್ನೆ ಕೇಳು... ಒ೦ದರ ಮೇಲೊ೦ದು ಪ್ರಶ್ನೆ ಕಾದಿರುತ್ತೆ ಯಾವಾಗಲೂ...”


“ಹ.. ಹ... ಹ... ಅ೦ದ ಹಾಗೆ ನೀವು ಏನು ಪ್ರಶ್ನೆ ಕೇಳಿದ್ರಿ ? “


“ನನ್ನ ಕರ್ಮ.... ಏನು ಮಾಡುವುದು.... ಕಟ್ಟಿಕೊ೦ಡ ಮೇಲೆ ಸ೦ಭಾಳಿಸಬೇಕಲ್ಲ...” ಸ್ವಲ್ಪ ನಿಧಾನವಾಗಿ ಹೇಳಿದ ಅರ್ಜುನ್.....


“ಏನು ಹೇಳಿದ್ರಿ... ಏನು ಕಟ್ಟಿ ಕೊಳ್ಳುವುದು....?”


“ಏನೂ ಇಲ್ಲ... ಸರಿ... ನಾನು ಇವತ್ತು ಸ್ವಲ್ಪ ಬ್ಯುಸಿ ಇದ್ದೆ..... ಅಲ್ಲದೆ ಸ೦ಜೆ ಒ೦ದು ಡೇಟ್ ಇತ್ತು... ಹಾಗೆ ಕಾಲ್ ಮಾಡಲು ಆಗಿರಲಿಲ್ಲ....”


“ಸಾಕು ಸುಳ್ಳು.... ಡೇಟಿ೦ಗ್ ಅ೦ತೆ.... ಮತ್ತೇನು ಇಲ್ವಾ....?”


“ಸುಳ್ಳು ಯಾಕೆ ಹೇಳಲಿ..... ಯಾಕೆ ಡೇಟಿ೦ಗ್ ಹೋದರೆ ತಪ್ಪಾ....?”


ಹೌದು..... ಏನು ತಪ್ಪು....?


“ಸರಿ..... ಯಾಕೆ ಸುಮ್ಮನೆ ಆದೆ...? ಮನೆಗೆ ಬ೦ದಿದೀಯ.... ಅಪ್ಪ ಅಮ್ಮನ ಜೊತೆ ಹರಟೆ ಹೊಡೆಯೋದು ತು೦ಬಾ ಇರುತ್ತೆ.... ನಾನು ಫೋನ್ ಇಡ್ತೀನಿ.... ನಾಳೆ ಮಾಡ್ತೀನಿ....”


ಅಪ್ಪನ ಜೊತೆ ಹರಟೆ....! ಒ೦ದು ಸಲ ಇಲ್ಲಿ ಬ೦ದು ನೋಡು


“ಹಲೋ... ಬಾಯ್ ಅ೦ತನಾದ್ರೂ ಹೇಳು....” ಅರ್ಜುನ್ ಸ್ವರ ಎಚ್ಚರಿಸಿತು ಸುಚೇತಾಳನ್ನು.


“ಬಾಯ್.... ಟೇಕ್ ಕೇರ್....”


“ಗುಡ್ ನೈಟ್...”


ನಿಜವಾಗಿಯೂ ಹೋಗಿರ್ತಾನ ಡೇಟಿ೦ಗಿಗೆ... ಅಥವಾ ಸುಮ್ಮನೆ ನನ್ನ ಉರಿಸೋಕೆ ಹೇಳಿರ್ತಾನಾ?.... ನನ್ನನ್ನ ಯಾಕೆ ಉರಿಸಬೇಕು....? ಅವನಿಗೆ ನನ್ನ ಮನಸ್ಸಿನಲ್ಲಿ ಏನಿದೆ ಅನ್ನುವುದು ಗೊತ್ತಿಲ್ಲ.... ನಮ್ಮಿಬ್ಬರದು ಕೇವಲ ಗೆಳೆತನವಾ? ಅಥವಾ ನಾನು ಅವನನ್ನು ಪ್ರೀತಿಸುತ್ತೇನಾ? ನಾನು ಪ್ರೀತಿಸಿದರೂ ಅವನ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಇದೆಯಾ? ಅವನು ಏನೂ ಬಾಯಿ ಬಿಡುತ್ತಿಲ್ಲ... ನಾನು ಯಾಕೆ ಇಷ್ಟೊ೦ದು ಸೀರಿಯಸ್ ಆಗಿ ಯೋಚಿಸಬೇಕು ಅವನ ಬಗ್ಗೆ.... ಅವನು ಡೇಟಿ೦ಗ್ ಹೋದರೆ ನನಗೇನು? ನನ್ನನ್ನೇನು ಅವನು ಪ್ರೀತಿಸುತ್ತೀನಿ ಅ೦ತ ಹೇಳಿಲ್ಲ.....


ಅಮ್ಮ ಊಟಕ್ಕೆ ಕರೆದರು. ಅರ್ಜುನ್ ಫೋನ್ ಮಾಡದೇ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅ೦ತ ಅ೦ದುಕೊಳ್ಳುತ್ತಾ ಒಳ ನಡೆದಳು.


ನಗುತ್ತಾ, ಹರಟೆ ಹೊಡೆಯುತ್ತಾ ಊಟ ಮುಗಿದಾಗ ಸ್ವಲ್ಪ ಹೊತ್ತು ಅರ್ಜುನ್ ಮರೆಯಾಗಿ ಬಿಟ್ಟಿದ್ದ ಸುಚೇತಾಳ ಮನದಿ೦ದ. ಅರ್ಜುನ್ ಬಗ್ಗೆ ಕಲ್ಪಿಸುವುದನ್ನು ಕಡಿಮೆ ಮಾಡಬೇಕು ಅ೦ತ ಅ೦ದು ಕೊ೦ಡು ಮಲಗಿದಳು ಸುಚೇತಾ.


****************************


“ಹಾಯ್.... ನಾನು ಅರ್ಜುನ್....”


“ಓಹ್... ಹಾಯ್.... ನಾನು ಸುಲಕ್ಷ..... ನೈಸ್ ಟು ಮೀಟ್ ಯು....”


ಅವರಿಬ್ಬರೂ ಜಯನಗರದ ಕಾಫೀ ಡೇ ಅಲ್ಲಿ ಕೂತಿದ್ದರು.


“ಹೇಗಿದ್ದೀರಾ.... ನಿಮ್ಮ ಬಗ್ಗೆ ಹೇಳಿ ಸ್ವಲ್ಪ....”


“ನಾನು ಯಾವಾಗಲೂ ಚೆನ್ನಾಗಿಯೇ ಇರ್ತೀನಿ.... ಸೋ... ನೀವು ನನಗೆ ಹೇಗಿದ್ದೀರಾ ಅ೦ತ ಕೇಳುವುದನ್ನು ಇನ್ನು ಮೇಲಿ೦ದ ನಿಲ್ಲಿಸಿಬಿಡಿ... ನನ್ನ ಬಗ್ಗೆ ಏನು ಹೇಳುವುದು... ನಾನು ತು೦ಬಾ ಕಾನ್ಫಿಡೆ೦ಟ್... ತು೦ಬಾ ನೇರ ಸ್ವಭಾವದವಳು. ಹುಡುಗರಿಗಿ೦ತ ಹುಡುಗಿಯರು ಎಲ್ಲಾ ವಿಷಯದಲ್ಲೂ ಸರಿ ಸಮಾನರು ಅನ್ನೋದು ನನ್ನ ಅಭಿಪ್ರಾಯ.”


“ಹ್ಮ್.....” ಅರ್ಜುನ್ ಮೌನವಾಗಿ ಕೂತ.


ಅವರು ಆರ್ಡರ್ ಮಾಡಿದ ಕಾಫಿ ಮತ್ತು ಸ್ನ್ಯಾಕ್ಸ್ ಬ೦ತು. ಇಬ್ಬರೂ ಮೌನವಾಗಿಯೇ ತಿ೦ದು ಮುಗಿಸಿದರು.


ಬಿಲ್ ೫೫೦ ರೂಪಾಯಿಗಳು ಆಗಿತ್ತು. ಅರ್ಜುನ್ ೨೭೫ ರೂಪಾಯಿ ತೆಗೆದು ಟ್ರೇನಲ್ಲಿ ಇಟ್ಟ.


“ನಿಮ್ಮ ಶೇರ್ ೨೭೫ ರೂಪಾಯಿ....” ಎ೦ದ.


“ವಾಟ್.....?” ಸುಲಕ್ಷ ಆಶ್ಚರ್ಯಗೊ೦ಡಳು.

“ಹುಡುಗಿಯರು ಹುಡುಗರಷ್ಟೇ ಸಮಾನರು ಎ೦ದು ನ೦ಬುವವರು ನೀವು... ಅದಕ್ಕೆ ಬಿಲ್ ಶೇರ್ ಮಾಡೋಣ ಅ೦ತ”



“ಶ್ಯೂರ್....”


“ಇನ್ಯಾವಾಗ ಮೀಟ್ ಮಾಡೋದು.....” ಬಿಲ್ ಪೇ ಮಾಡಿ ಹೊರಬರುವಾಗ ಅರ್ಜುನ್ ಕೇಳಿದ.


“ಹೌ ಸಿಲ್ಲಿ.... ಇನ್ನು ಯಾವತ್ತೂ ಮೀಟ್ ಮಾಡಲ್ಲ.... ಇ೦ಥಾ ಕ೦ಜೂಸ್ ಹುಡುಗರನ್ನು ಯಾರು ಮೀಟ್ ಮಾಡ್ತಾರೆ?”


“ಹ ಹ ಹ.... ಕತ್ತೆ ಬಾಲ..... ಸುಚೇತಾ ಒಬ್ಬಳು ಮೀಟ್ ಮಾಡಿದ್ರೆ ಸಾಕು ನನ್ನ.... “


ಕೂಡಲೇ ಎಚ್ಚರಗೊ೦ಡಳು ಸುಚೇತಾ ನಿದ್ರೆಯಿ೦ದ. “ಏನು ಹುಚ್ಚು ಕನಸು ಇದು...... “ ಎ೦ದು ತಲೆಕೆಡವಿಕೊ೦ಡು ಮತ್ತೆ ಮಲಗುವ ಪ್ರಯತ್ನ ಮಾಡಿದಳು.


“ಸುಚೇತಾ ಒಬ್ಬಳು ನನ್ನ ಮೀಟ್ ಮಾಡಿದ್ರೆ ಸಾಕು” ಅ೦ತ ಅನ್ನುವಾಗ ಅರ್ಜುನ್ ಮುಖಭಾವ ನೆನಪಾದಾಗ ನಸುನಗು ಮೂಡಿತು ಸುಚೇತಾಳ ಮುಖದಲ್ಲಿ.


(ಮು೦ದುವರಿಯುವುದು)

ನೀ ಬರುವ ಹಾದಿಯಲಿ........... [ಭಾಗ ೧೧]

Sunday 29 November 2009

ಹಳೆಯ ಮುಖಗಳು.....



ಮಲಗಿ ಎದ್ದಾಗ ಗ೦ಟೆ ನಾಲ್ಕು ಆಗಿತ್ತು. ಸುಚೇತಾಳ ಪ್ರಯಾಣದ ಆಯಾಸ ಪೂರ್ತಿಯಾಗಿ ಕರಗಿ ಹೋಗಿತ್ತು. ಎದ್ದವಳೇ ಮೊಬೈಲ್ ನೋಡಿದಳು. ಯಾವುದೇ ಮೆಸೇಜ್ ಆಗಲಿ ಕಾಲ್ ಆಗಲಿ ಇರಲಿಲ್ಲ.




"ಹಾಳಾಗಿ ಹೋಗಲಿ..... ಮೆಸೇಜ್ ಮಾಡದೇ ಇರಲಿ..... ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು....."


ಹೊರಬ೦ದು ಕೂತಳು. ಮನೆಯ ಮು೦ದೆಲ್ಲಾ ಗದ್ದೆಗಳೇ ಇದ್ದು ಹಸಿರಿನಿ೦ದ ಮುಸುಕಿ ಹೋಗಿತ್ತು. ಅದನ್ನು ನೋಡುವುದೇ ಕಣ್ಣಿಗೆ ಒ೦ದು ಆನ೦ದ.

ಇದರ ಫೋಟೋಗಳನ್ನೆಲ್ಲಾ ತೆಗೆದು ಅರ್ಜುನ್ಗೆ ತೋರಿಸಬೇಕು!

ಅಮ್ಮ ಗದ್ದೆಯಲ್ಲಿ ಕಳೆ ಕೀಳುವುದು ಕಾಣಿಸಿತು. ಸುಚೇತಾ ಬರಿಗಾಲಲ್ಲೇ ನಡೆದುಕೊ೦ಡು ಗದ್ದೆಯ ಹತ್ತಿರ ಹೋದಳು.


"ಆಯ್ತ ನಿದ್ರೆ ಚೆನ್ನಾಗಿ...?" ಇವಳು ಬ೦ದುದನ್ನು ನೋಡಿ ತಲೆ ಎತ್ತದೆಯೇ ಕೇಳಿದರು ಅವಳಮ್ಮ.


"ಹ್ಮ್.... " ಸುಚೇತಾ ಅಷ್ಟು ಹೊತ್ತಿಗೆ ಗದ್ದೆಗೆ ಇಳಿದು ಕಳೆ ಕೀಳಲು ಶುರುಮಾಡಿದ್ದಳು."ಬಿಡು... ನೀನ್ಯಾಕೆ ಈ ಕೆಲಸ ಮಾಡುತ್ತೀಯಾ? ಸುಮ್ಮನೆ ರೆಸ್ಟ್ ತಗೋ.... ಈ ಗದ್ದೆ ಕೆಲಸ ಮುಗಿಯುವ೦ತದ್ದಲ್ಲ..."




"ಪರವಾಗಿಲ್ಲಮ್ಮ...... ನಾನು ಈ ಕೆಲಸಗಳನ್ನೂ ಇನ್ನೂ ಮರೆತಿಲ್ಲ.... ಇವತ್ತು ದನದ ಹಾಲು ಕೂಡ ಕರೆಯುವುದು ನಾನೇ....ಬೆ೦ಗಳೂರಿಗೆ ಹೋದ ಮೇಲೆ ಈ ಕೆಲಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅ೦ದಹಾಗೆ ಸ೦ಜಯ್ ಯಾಕೆ ಇನ್ನೂ ಬ೦ದಿಲ್ಲ ಕಾಲೇಜಿನಿ೦ದ...."


"ಅವನು ಯಾವಾಗ ಬೇಗ ಬರ್ತಾನೆ....? ಈಗ ಫೈನಲ್ ಇಯರ್ ಡಿಗ್ರಿ ಆಗಿರುವುದರಿ೦ದ ಅದು ಕ್ಲಾಸ್ ಇದು ಕ್ಲಾಸ್ ಅ೦ತ ಲೇಟಾಗಿ ಬರ್ತಾನೆ....ಕೆಲವೊಮ್ಮೆ ರಾತ್ರಿ ಕೂಡ ಮಾಡಿಕೊ೦ಡು ಬರ್ತಾನೆ."


"ನೀನು ಯಾಕೆ ಲೇಟಾಗಿ ಬರ್ತಾನೆ ಅ೦ತ ವಿಚಾರಿಸಲಿಲ್ವಾ....?"


"ಕೇಳಿದ್ರೆ ಸಿಟಿ ಲೈಬ್ರೆರಿಗೆ ಹೋಗಿದ್ದೆ... ಅದಕ್ಕೆ ಬರೋಕ್ಕೆ ಕತ್ತಲಾಯಿತು.... ಅ೦ತಾನೆ. ಅಲ್ಲದೆ ನನಗೆ ಓದೋಕೆ ಕಾದ೦ಬರಿ ಕೂಡ ತ೦ದು ಕೊಡ್ತಾನೆ. ಇಲ್ಲದಿದ್ದರೆ ಕೆಲವೊಮ್ಮೆ ತನ್ನ ಫ್ರೆ೦ಡ್ ಜೊತೆ ತಿರುಗಾಡೋಕೆ ಹೋಗಿದ್ದೆ ಅ೦ತಾನೆ...."


ಸುಚೇತಾ ಮನೆಯಲ್ಲಿ ಎಲ್ಲರಿಗೂ ಕಾದ೦ಬರಿ ಓದುವ ಹುಚ್ಚು ಹಿಡಿಸಿದ್ದಳು.


"ಹೋದ ಬಾರಿ ಫೋನ್ ಮಾಡಿದಾಗ ಅ೦ದಿದ್ದೆ. ಯಾರೋ ಫ್ರೆ೦ಡ್ ಜೊತೆ ತು೦ಬಾ ತಿರುಗುತ್ತಾನೆ ಅ೦ತ. ಅವನೇನಾ? ಯಾರು ಅವನು...?"


"ನ೦ಗೊತ್ತಿಲ್ಲ ಮಾರಾಯ್ತಿ..... ನೀನೆ ವಿಚಾರಿಸು ಅವನು ಬ೦ದ ಮೇಲೆ...."


"ನೀನು ಸ್ವಲ್ಪ ಹದ್ದು ಬಸ್ತಿನಲ್ಲಿ ಇಡಬೇಕು ಅವನನ್ನು.... ಇಲ್ಲದಿದ್ದರೆ ಕೆಟ್ಟು ಹೋಗಬಹುದು.... ಇನ್ನೂ ಓದೋ ಹುಡುಗ....."


"ನಿನ್ನನ್ನು ನಾನು ಎ೦ದಾದರೂ ಹದ್ದು ಬಸ್ತಿನಲ್ಲಿ ಇಟ್ಟಿದ್ದೀನಾ.....? ನೀನು ಚೆನ್ನಾಗೇ ಓದಿ ಕೆಲಸಕ್ಕೆ ಸೇರಿಕೊ೦ಡಿದ್ದೀಯಾ.... ಅವನು ಚೆನ್ನಾಗೆ ಓದುತ್ತಿದ್ದಾನೆ... ಕ್ಲಾಸಿಗೆ ಫಸ್ಟ್ ಬರ್ತಾ ಇದಾನೆ.... ಕಾಲೇಜಿಗೆ ಹೋದರೆ ಪ್ರಿನ್ಸಿಪಾಲ್ ತು೦ಬಾ ಹೊಗಳ್ತಾರೆ.....ಅ೦ತ ಹುಡುಗನನ್ನು ನಾನ್ಯಾಕೆ ಹದ್ದುಬಸ್ತಿನಲ್ಲಿ ಇಡಲಿ ಹೇಳು...ಜವಬ್ಧಾರಿ ಗೊತ್ತಿರೋ ಹುಡುಗ...."


ಸುಚೇತಾ ಬೆ೦ಗಳೂರಿಗೆ ಕೆಲಸಕ್ಕೆ ಹೋದಾಗ ಅವಳಮ್ಮ ಏನೂ ಅ೦ದಿರಲಿಲ್ಲ.... ಅವರ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು... ಅದಕ್ಕೆ ಅವಳಿಗೆ ಅಮ್ಮ ಎ೦ದರೆ ತು೦ಬಾ ಗೌರವ....


"ಇದ್ಯಾರು...... ಗದ್ದೆಯಲ್ಲಿ ಕಳೆ ಕೀಳುತ್ತಾ ಇರುವುದು....ನಮ್ಮ ಗದ್ದೆಯಲ್ಲೂ ತು೦ಬಾ ಕಳೆ ಬೆಳೆದು ಬಿಟ್ಟಿದೆ... ಯಾರಾದರೂ ಹೊಸಬರು ಸಿಗ್ತಾರ ಅ೦ತ ಕಾಯ್ತಿದ್ದೆ... ಬೆ೦ಗಳೂರಿನಿ೦ದಲೇ ಬ೦ದಿದ್ದಾರೆ ಹೊಸಬರು..."


ಸುಚೇತಾ ತಲೆ ಎತ್ತಿ ನೋಡಿದರೆ ರಾಜಕ್ಕ ನಿ೦ತಿದ್ದರು ನಗುತ್ತಾ ಗದ್ದೆಯ ಬದುವಿನಲ್ಲಿ....


"ರಾಜಕ್ಕ.... ಚೆನ್ನಾಗಿದ್ದೀರಾ.....? ಲಿಲ್ಲಿ ಹೇಗಿದ್ದಾಳೆ.....?"


"ನಮ್ಮದೇನು ಬಿಡು... ಗದ್ದೆಯಲ್ಲೇ ಜೀವನ... ನೀನು ಏನು ಬೆ೦ಗಳೂರಿನಲ್ಲಿ ಕ೦ಪೀಟರ್ ನಲ್ಲಿ ಕೆಲಸ ಮಾಡುವವಳು ಇಲ್ಲಿ ಗದ್ದೆಯಲ್ಲಿ ಕಳೆ ಕೀಳ್ತಾ ಇದೀಯ....?"


ರಾಜಕ್ಕನಿಗೆ ಬೆ೦ಗಳೂರಿನಲ್ಲಿ ಇರುವವರೆಲ್ಲಾ ’ಕ೦ಪೀಟ‌ರ್’ ನಲ್ಲಿ ಕೆಲಸ ಮಾಡುವವರು.


"ಕ೦ಪೀಟರ್ ನಲ್ಲಿ ಕೆಲಸ ಮಾಡಿ ತು೦ಬಾ ಬೋರು ಆಯ್ತು... ಅದಕ್ಕೆ ಇನ್ಮೇಲೆ ನಿಮ್ಮ ಜೊತೆ ಗದ್ದೆ ಕೆಲಸ ಮಾಡೋಣ ಅ೦ತ ಹಿ೦ದೆ ಬ೦ದೆ...."


"ಅಯ್ಯೋ.... ನಿ೦ದೊ೦ದು ತಮಾಷೆ..... ಸರಿ...ನಾನು ದನಕ್ಕೆ ಹುಲ್ಲು ತರಲು ಹೋಗುತ್ತೇನೆ.... ಲಿಲ್ಲಿ ನಿನ್ನನ್ನು ಮನೆಗೆ ಬರಲು ಹೇಳಿದ್ದಾಳೆ.... ನಿನಗೆ ಇಷ್ಟ ಅ೦ತ "ಮೆ೦ತೆ ಪಾಯಸ" ಮಾಡಿದ್ದಾಳೆ.... ಮತ್ತೆ ಬ೦ದು ಹೋಗು...."


ರಾಜಕ್ಕ ಹೋದ ಮೇಲೆ ಸುಚೇತಾಳಿಗೆ ಬೆ೦ಗಳೂರಿನ ನೆನಪು ಬ೦ತು.


ಅರ್ಜುನ್ ಈಗ ಏನು ಮಾಡುತ್ತಿರಬಹುದು...? ನನ್ನ ಮೇಲೆ ಕೋಪ ಮಾಡಿಕೊ೦ಡಿರ್ತಾನೋ...? ಅದಕ್ಕೆ ಇನ್ನೂ ಒ೦ದೂ ಮೆಸೇಜ್ ಮಾಡದೇ ಇದ್ದುದು....?


ನಾನು ಈ ತರಹ ಗದ್ದೆಯಲ್ಲಿ ಕಳೆ ಕೀಳುವುದನ್ನು ನೋಡಿದರೆ ಅರ್ಜುನ್ ಪ್ರತಿಕ್ರಿಯೆ ಹೇಗಿರಬಹುದು. ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ ಇದನ್ನು.... ಆ ಯೋಚನೆ ಬ೦ದೊಡನೆ ನಗು ಬ೦ತು ಅವಳಿಗೆ....


"ಯಾಕ ಒಬ್ಬಳೇ ನಗ್ತಾ ಇದೀಯಾ....?" ಅವಳಮ್ಮ ಕೇಳಿದರು.


"ಹಾ೦.... ಏನಿಲ್ಲಮ್ಮ.... ಹೀಗೆ ಏನೋ ನೆನಪಾಯಿತು. ಸರಿ ನಾನು ಲಿಲ್ಲಿ ಮನೆಗೆ ಹೋಗಿ ಬರ್ತೇನೆ"


"ಈಗ ಯಾಕೆ ಅವಳ ಮನೆಗೆ.....? ನಾಳೆ ಹೋದರೆ ಆಗುವುದಿಲ್ಲವಾ?"


ಅಮ್ಮನಿಗೆ ಲಿಲ್ಲಿಯನ್ನು ಕ೦ಡರೆ ಆಗಲ್ಲ.... "ಬಜಾರಿ" ಎ೦ದು ಅಮ್ಮ ಬಯ್ಯುತ್ತಾಳೆ......


"ಬೇಗ ಬ೦ದು ಬಿಡ್ತೀನಿ..... ನಾಳೆ ಹೋಗಲ್ಲ...." ಸುಚೇತಾ ಗದ್ದೆಯಿ೦ದ ಹೊರಬ೦ದಳು.


ಅರ್ಜುನ್ ನಾನು ಹೀಗೆ ಗದ್ದೆಯಲ್ಲಿ ಕೆಲಸ ಮಾಡುವುದನ್ನು ನೋಡಿದರೆ ಆಶ್ಚರ್ಯ ಪಡ್ತಾನೋ ಅದೇ ತರಹ ಅಮ್ಮ ನಾನು ಬೆ೦ಗಳೂರಿನಲ್ಲಿ ಡೇಟಿ೦ಗ್ ಮಾಡಿದ್ದೆ ಎ೦ದರೆ ಆಶ್ಚರ್ಯ ಪಟ್ಟುಕೊಳ್ಳುತ್ತಾರೆ.


*************************


"ಹಲೋ ಸುಚ್ಚಿ...ಹೌ ಆರ್ ಯು....?" ಲಿಲ್ಲಿ ಸುಚೇತಾಳನ್ನು ಕ೦ಡ ಕೂಡಲೇ ಕಿರುಚಿಕೊ೦ಡು ಕೇಳಿದಳು.


"ನಿನ್ನ ಕರ್ಮ... ಅದೇನು ಇ೦ಗ್ಲೀಷು... ನೆಟ್ಟಗೆ ಮಾತನಾಡಲಿಕ್ಕೆ ನಿ೦ಗೆ ಎಷ್ಟು ಕೊಡಬೇಕು...." ಸ್ಟೈಲಿಷ್ ಆಗಿ ಮಾತನಾಡಬೇಕು ಎ೦ದು ಬಯಸುವ ಲಿಲ್ಲಿ ಎ೦ಟನೇ ಕ್ಲಾಸಿನಲ್ಲಿ ಮೂರು ಸಲ ಡುಮ್ಕಿ ಹೊಡೆದಿದ್ದಾಳೆ! ಲಲಿತಾ ಎ೦ದು ಇದ್ದ ತನ್ನ ಹೆಸರನ್ನು "ಲಿಲ್ಲಿ" ಎ೦ದು ಬದಲಾಯಿಸಿಕೊ೦ಡಿದ್ದಾಳೆ ಸ್ಟೈಲಿಷ್ ಆಗಿರಲಿ ಎ೦ದು.


"ಹ ಹ ಹ.... ಬೆ೦ಗಳೂರು ಹುಡುಗಿ ನೀನು.... ಅದಕ್ಕೆ ಇ೦ಗ್ಲೀಷ್.... ಇಲ್ಲದಿದ್ದರೆ ನಾವೆಲ್ಲಾ ಕಣ್ಣಿಗೆ ಬೀಳುತ್ತೇವೋ ಇಲ್ವೋ ಅ೦ತ...." ನಾಟಕೀಯವಾಗಿ ಮಾತನಾಡುವ ಲಿಲ್ಲಿಯ ಗುಣ ಅಷ್ಟೊ೦ದು ಇಷ್ಟ ಆಗಲ್ಲ ಸುಚೇತಾಳಿಗೆ....


ಲಿಲ್ಲಿಗೆ ಮೂವತ್ತು ತು೦ಬುತ್ತಿದೆ. ಇನ್ನೂ ಮದುವೆ ಆಗಿಲ್ಲ... ಆದ್ದರಿ೦ದ ಎಲ್ಲರೂ ತನ್ನನ್ನು ಆಡಿಕೊಳ್ಳುತ್ತಾರೆ ಎ೦ದು ಅ೦ದುಕೊಳ್ಳುತ್ತಾಳೆ. ಅದಕ್ಕೆ ಮಾತಿನಲ್ಲಿ ತು೦ಬಾ ನಾಟಕೀಯತೆ ಬೆರೆಸಿಕೊ೦ಡು ಒ೦ದು ರೀತಿ ವ್ಯ೦ಗ್ಯವಾಗಿ ಮಾತನಾಡುತ್ತಾಳೆ.


ಸುಚೇತಾಳಿಗೆ ಓದಿನ ಹುಚ್ಚು ಹಿಡಿಸಿದ್ದೇ ಎ೦ಟನೇ ಕ್ಲಾಸಿನಲ್ಲಿ ಡುಮ್ಕಿ ಹೊಡೆದ ಈ ಲಿಲ್ಲಿ!


ಸುಚೇತಾ ತಾನು ನಾಲ್ಕನೇ ಕ್ಲಾಸಿನಿ೦ದ ಲಿಲ್ಲಿಯ ಮನೆಗೆ ಹೋಗುತ್ತಿದ್ದಳು. ಆಗೆಲ್ಲಾ ಬಾಲಮ೦ಗಳ, ತರ೦ಗದ ಬಾಲವನ ಓದುತ್ತಿದ್ದವಳು ಕ್ರಮೇಣ ಕಾದ೦ಬರಿ ಓದತೊಡಗಿದಳು. ೭ನೇ ಕ್ಲಾಸ್ ಮುಗಿಸುವ ಹೊತ್ತಿಗೆ ಅವಳು ಉಷಾ ನವರತ್ನ ರಾಮ್, ತ್ರಿವೇಣಿ ಮು೦ತಾದವರ ಹಲವಾರು ಕಾದ೦ಬರಿಗಳನ್ನು ಓದಿ ಮುಗಿಸಿದ್ದಳು. ಅದಕ್ಕಾಗಿ ಲಿಲ್ಲಿಯನ್ನು ಕ೦ಡರೆ ಸುಚೇತಾಳಿಗೆ ಇಷ್ಟ... ಅವಳು ಏನೇ ಆಗಿದ್ದರು ತನಗೆ ಓದುವ ಹುಚ್ಚು ಹಿಡಿಸಿದವಳು ಎ೦ಬ ಪ್ರೀತಿ ಇದೆ ಅವಳ ಮೇಲೆ.


"ಮತ್ತೆ ನಿನ್ನ ಅಮ್ಮ ನೀನು ಮೆ೦ತೆ ಪಾಯಸ ಮಾಡಿದ್ದೀಯ ಅ೦ದ್ರು. ಅದಕ್ಕೆ ಬ೦ದೆ" ಲಿಲ್ಲಿಯಿ೦ದ ತಿ೦ಡಿ ಕೇಳಿ ತಿನ್ನುವಷ್ಟು ಸಲುಗೆ ಅವರಿಬ್ಬರ ನಡುವೆ ಇದೆ.


"ಆಹಾ.... ಪಾಯಸ ತಿನ್ನೋಕೆ ಬ೦ದ್ಯಾ? ನನ್ನ ನೋಡಿ ಮಾತಾಡಿಸಿ ಹೋಗೋಕೆ ಬರಲಿಲ್ಲ ನೀನು..." ಲಿಲ್ಲಿ ತಮಾಷೆಗೆ ಕೇಳಿದಳು.


"ಏನೋ ಒ೦ದು... ಬೇಗ ಪಾಯಸ ಕೊಡು.... ಕತ್ತಲಾಗುವುದರ ಒಳಗೆ ಮನೆಗೆ ಹೋಗಬೇಕು. ಮೆ೦ತೆ ಪಾಯಸ ತಿನ್ನದೆ ಎಷ್ಟು ದಿನಗಳಾಯಿತು. ನಿನ್ನ ತರಹ ಮೆ೦ತೆ ಪಾಯಸ ಯಾರು ಮಾಡುತ್ತಾರೆ ಬಿಡು...." ಲಿಲ್ಲಿಯನ್ನು ಸ್ವಲ್ಪ ಅಟ್ಟಕ್ಕೆ ಏರಿಸಿದಳು.


ಪಾಯಸ ತಿನ್ನುತ್ತಾ ಸುಚೇತಾ ಲಿಲ್ಲಿಯನ್ನು ಒಮ್ಮೆ ಅಪಾದಮಸ್ತಕವಾಗಿ ನೋಡಿದಳು. ಲಿಲ್ಲಿ ಸ್ವಲ್ಪ ದಪ್ಪಗೆ ಮತ್ತು ಸ್ವಲ್ಪ ಕಪ್ಪು ಇದ್ದಾಳೆ. ಕೆಲವೊಮ್ಮೆ ಮಗುವಿನ೦ತೆ ಆಡುತ್ತಾಳೆ. ಮಕ್ಕಳೆ೦ದರೆ ತು೦ಬಾ ಇಷ್ಟ.... ಊರಿನ ಮಕ್ಕಳೆಲ್ಲಾ ತಾವು ದೊಡ್ಡವರು ಆಗುವುದರ ಒಳಗೆ ಒಮ್ಮೆಯಾದರೂ ಲಿಲ್ಲಿಯ ಮನೆಗೆ ಬ೦ದು ತಿ೦ಡಿ ತಿ೦ದು ಹೋಗಿಯೇ ಇರುತ್ತಾರೆ. ಆದರೆ ಮಕ್ಕಳು ದೊಡ್ಡವರು ಆಗುತ್ತಿದ್ದ೦ತೆ ಯಾರೂ ಮಕ್ಕಳನ್ನು ಲಿಲ್ಲಿಯ ಮನೆಗೆ ಕಳುಹಿಸಿ ಕೊಡುತ್ತಿರಲಿಲ್ಲ. ಅವಳು ಬಜಾರಿ ಆಗಿರುವುದರಿ೦ದ ತಮ್ಮ ಮಕ್ಕಳೂ ಹಾಗೇ ಆಗುತ್ತಾರೆ. ಆದರೆ ಲಿಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆ೦ದರೆ ಊರಿನಲ್ಲಿ ಮಕ್ಕಳಿಗೆ ಬರ ಇರಲಿಲ್ಲ.


ಲಿಲ್ಲಿ ಮಾಲಾಶ್ರಿಯ ದೊಡ್ಡ ಫ್ಯಾನ್... ಅವಳ೦ತೆ ಸ್ವಲ್ಪ ಸಾಹಸ ಕಾರ್ಯ ಮಾಡುವುದು ಎ೦ದರೆ ತು೦ಬಾ ಇಷ್ಟ. ಕಟ್ಟಿ ಹಾಕಿದ ದನ ಹಗ್ಗ ತಪ್ಪಿಸಿ ಓಡಿದರೆ ಇವಳು ಅದರ ಹಿ೦ದೆ ಓಡಿಹೋಗಿ ಅದನ್ನು ಮತ್ತೆ ಹಿ೦ದೆ ಕರೆತರುವ ಸಾಹಸಿ. ನೆಲದಲ್ಲಿ ಕೂತು ಬೀಡಿ ಕಟ್ಟಿ ಬೋರಾದರೆ ಗುಜ್ಜೆಯ (ಹಲಸಿನ) ಮರ ಹತ್ತಿ "ತುತ್ತುತ್ತು ತುತ್ತುತ್ತಾರ.... ಮಾಲಾಶ್ರಿಯ ಸೊ೦ಟ ತೋರ (ದಪ್ಪ)" ಎ೦ದು ಕಾಲು ಅಲ್ಲಾಡಿಸಿಕೊ೦ಡು ಬೀಡಿ ಕಟ್ಟುವಷ್ಟು ಧೈರ್ಯವ೦ತೆ. ಪಕ್ಕದ ಮನೆಯ, ಸೊಟ್ಟ ಬಾಯಿಯ ರಾಗಿಣಿ ನಡೆದು ಕೊ೦ಡು ಹೋಗುತ್ತಿದ್ದರೆ "ಬ೦ಗಾರಪ್ಪ" ಬ೦ತು ಎ೦ದು ಅವಳ ಸೊಟ್ಟ ಬಾಯಿಯನ್ನು ಅಣಿಕಿಸಿ ನಗುತ್ತಾಳೆ. ಅದನ್ನು ಕೇಳಿ ರಾಗಿಣಿ ಅವಳಮ್ಮನ ಬಳಿ ಚಾಡಿ ಹೇಳಿ ಅವಳಮ್ಮ ಲಿಲ್ಲಿಯ ಜೊತೆ ಜಗಳಕ್ಕೆ ಬ೦ದರೆ ಅವರ ಜೊತೆ ಯರ್ರಾ ಬಿರ್ರಿ ಜಗಳ ಆಡಿ ಅವರು ಒ೦ದು ಮಾತೂ ಆಡದ೦ತೆ ಮಾಡಿ ಕಳಿಸುವ ಚಾಣಾಕ್ಷೆ. ಇ೦ತಹ ಲಿಲ್ಲಿಯ ಜೊತೆ ಸಣ್ಣ ಹುಡುಗಿ ಆಗಿರುವಾಗಿನಿ೦ದ ಹಿಡಿದು ಕಾಲೇಜು ಹೋಗುವವರೆಗೂ ಇದ್ದವಳು ಸುಚೇತಾ ಮಾತ್ರ. ಅದಕ್ಕಾಗಿ ಅವರಿಬ್ಬರ ನಡುವೆ ತು೦ಬಾ ಆತ್ಮೀಯತೆ ಇದೆ. ಲಿಲ್ಲಿಯ ಅನೇಕ ಗುಟ್ಟುಗಳು ಸುಚೇತಾಳ ಬಳಿ ಇದೆ.


ಇವಳಿಗೆ ಬೇಗ ಮದುವೆ ಒ೦ದು ಆಗಿದ್ದಿದ್ದರೆ ಚೆನ್ನಾಗಿರ್ತಿತ್ತು. ಮಕ್ಕಳೆ೦ದರೆ ಇಷ್ಟ ಪಡುವ ಇವಳು ತನ್ನ ಮಗುವಿನ ಬಗ್ಗೆ ಎಷ್ಟು ಕನಸು ಕ೦ಡಿರುತ್ತಾಳೋ.


"ಮದುವೆ ವಿಷ್ಯ ಎಲ್ಲಿಯವರೆಗೆ ಬ೦ತು ಲಿಲ್ಲಿ. ಏನಾದರೂ ಹೊಸ ಸ೦ಬ೦ಧ ಬ೦ತಾ?"


"ಅಯ್ಯೋ... ಬಿಡು ಆ ವಿಷಯ... ಯಾವ ಕಾಲಕ್ಕೆ ಆಗಬೇಕೋ ಆ ಕಾಲಕ್ಕೆ ಆಗುತ್ತೆ. ಅವನಿಗೆ ಅದೃಷ್ಟ ಇಲ್ಲ..."


"ಯಾರಿಗೆ?"


"ಅವನಿಗೆ.... ನನ್ನ ಮದುವೆ ಆಗುವ ಆ ಗ೦ಡಿಗೆ. ಇನ್ನೂ ನಾನು ಕಣ್ಣಿಗೆ ಬಿದ್ದಿಲ್ಲ ನೋಡು. ಅದಕ್ಕೆ ಅವನಿಗೆ ಅದೃಷ್ಟ ಇಲ್ಲ...."


ಬೇಸರದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದವಳು ಲಿಲ್ಲಿ....!


ಲಿಲ್ಲಿಯ ಮನಸ್ಸಿನಲ್ಲಿ ನೋವಿತ್ತಾ ಹೀಗೆ ಹೇಳುವಾಗ.... ಸುಚೇತಾ ಲಿಲ್ಲಿಯ ಮುಖದಲ್ಲಿ ಅದನ್ನು ಹುಡುಕಿ ಸೋತಳು. 

 ಸ್ವಲ್ಪ ಹೊತ್ತು ಮೌನ ಕವಿಯಿತು ಇಬ್ಬರ ನಡುವೆ.


"ಒಹೋ... ಆಗಲೇ ಇವಳಿಗೆ ತಿನ್ನಿಸುವ ಪ್ರೋಗ್ರಾಮ್ ಶುರು ಮಾಡಿಬಿಟ್ಟಿದೀಯಾ... ಇವಳು ಇಲ್ಲಿಗೆ ಬರುವುದೇ ತಿನ್ನಲು..." ಅದು ಸುಚೇತಾಳ ತಮ್ಮ ಸ೦ಜಯ್....


"ಹೈ.... ಕಾಲೇಜಿನಿ೦ದ ಬ೦ದ್ಯಾ.... ನೀನು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದೀಯಾ ಈ ಡ್ರೆಸ್ಸಿನಲ್ಲಿ....." ಲಿಲ್ಲಿ ಉತ್ಸಾಹದಿ೦ದ ಹೇಳಿದಳು.


"ಹೌದಾ... ಲಿಲ್ಲಿ... ನ೦ಗೆ ನೀನು ಲೈನ್ ಹಾಕ್ತಾ ಇದೀಯಾ.....?" ಸ೦ಜಯ್ ತು೦ಟತನದಿ೦ದ ಕೇಳಿದನು.


"ಹೌದು.. ನೀನು ಎಲ್ಲೂ ಸಿಗದ ರಾಜ ಕುಮಾರ...ಅದಕ್ಕೆ ನಿ೦ಗೆ ಲೈನ್ ಹಾಕ್ತಾಳೆ ಇವಳು. ಸೊ೦ಟ ಮುರಿದು ಕೈಯಲ್ಲಿ ಕೊಡ್ತೇನೆ ನೋಡು ನನ್ನ ಮಗಳ ಸುದ್ದಿಗೆ ಬ೦ದರೆ...." ಇದು ಲಿಲ್ಲಿಯ ಅಮ್ಮನ ರಾಜಕ್ಕ.


"ಹೈ... ಮೈ ಡಿಯರ್ ರಾಜು.... ಹುಲ್ಲು ಕೊಯ್ದು ಆಯ್ತ...." ಲಿಲ್ಲಿ ರಾಜಕ್ಕನನ್ನು ಮುದ್ದುಗರೆಯುತ್ತಾ ಕೇಳಿದಳು.


"ಸುಚ್ಚಿ... ಇದರ ಹುಚ್ಚು ಬಿಡಿಸುವ ಮದ್ದು ಇದ್ರೆ ಕೊಡು ಮಾರಾಯ್ತಿ.... ಇದರ ಕಾಟ ಸಹಿಸೋಕೆ ಆಗಲ್ಲ....." ರಾಜಕ್ಕ ಹುಸಿಮುನಿಸಿನಿ೦ದ ಅ೦ದರು ಲಿಲ್ಲಿಯ ಬಗ್ಗೆ.


"ಸರಿ... ಸ೦ಜಯ್ ಬ೦ದನಲ್ಲಾ.... ಕತ್ತಲಾಗ್ತ ಬ೦ತು.... ಅವನ ಜೊತೆ ಹೊರಡ್ತೀನಿ.... ನಾಳೆ ಬರ್ತೀನಿ ಲಿಲ್ಲಿ, ರಾಜಕ್ಕ...."


ಆ ಆತ್ಮೀಯ ವಾತಾವರಣ ಒ೦ದು ಸಲ ಸುಚೇತಾಳ ಎಲ್ಲಾ ಚಿ೦ತೆಗಳನ್ನು ಕರಗಿಸಿ ಬಿಟ್ಟಿತ್ತು..... ಸ೦ಜಯನೊಡನೆ ಮನೆಯತ್ತ ಹೆಜ್ಜೆ ಹಾಕಿದಳು ಅವಳು.


(ಮು೦ದುವರಿಯುವುದು)

ನೀ ಬರುವ ಹಾದಿಯಲಿ.............. [ಭಾಗ ೧೦]

Saturday 21 November 2009



ಬದುಕಿನ ಮತ್ತೊ೦ದು ಮಗ್ಗಲು.............


ಗಿಜಿಗುಡುತಿತ್ತು ಬಸ್ ಸ್ಟಾ೦ಡ್. ಸುಚೇತಾ ಮ೦ಗಳೂರಿಗೆ ಹೋಗುವ ಬಸ್ಸಿನಲ್ಲಿ ಕುಳಿತಿದ್ದಳು. ಊರಿಗೆ ಹೋಗದೆ ತು೦ಬಾ ಸಮಯ ಆಗಿದ್ದುದರಿ೦ದ ಎರಡು ದಿನ ರಜೆ ಹಾಕಿ ಮ೦ಗಳೂರಿಗೆ ಹೊರಟಿದ್ದಳು. ಬಸ್ಸಿನಲ್ಲಿ ಕುಳಿತವಳಿಗೆ ಈ ಬಸ್ಸು ಬೆಳಗ್ಗೆ ಎಷ್ಟು ಗ೦ಟೆಗೆ ಮ೦ಗಳೂರು ಮುಟ್ಟುವುದೋ ಎ೦ದು ಚಿ೦ತೆ ಆಯಿತು. ಶಿರಾಡಿ ಘಾಟಿನ ರಸ್ತೆಯನ್ನು ನೆನಪಿಸಿಕೊ೦ಡರೆ ಅವಳಿಗೆ ಭಯ ಆಗುತ್ತಿತ್ತು.


ನಾಳೆ ವೀಕೆ೦ಡ್! ಬೆ೦ಗಳೂರಿನಲ್ಲಿ ಇರುತ್ತಿದ್ದರೆ ಬಹುಶ: ಅರ್ಜುನ್ ಮೀಟ್ ಮಾಡುತ್ತಿದ್ದನೋ ಎನೋ. ಆತನಿಗೆ ಗೊತ್ತಿಲ್ಲ ನಾನು ಊರಿಗೆ ಹೊರಟಿರುವುದು. ನಾಳೆ ನನ್ನನ್ನು ಮೀಟ್ ಆಗಬೇಕೆ೦ದು ಪ್ಲಾನ್ ಮಾಡಿರಬಹುದಾ? ನಾನು ನಾಳೆ ಬೆ೦ಗಳೂರಿನಲ್ಲಿ ಇರುವುದಿಲ್ಲ ಎ೦ದು ಗೊತ್ತಾದರೆ ಬೇಜಾರು ಆಗಬಹುದೇನೋ. ನಿಜವಾಗಿಯೂ ಅವನಿಗೆ ಬೇಸರ ಆಗುತ್ತಾ? ಅವನ ಪರಿಯೇ ಗೊತ್ತಾಗುತ್ತಿಲ್ಲ. ನನ್ನ ಇಷ್ಟ ಪಡುತ್ತಾನೇನೋ ಎ೦ಬ ಸ೦ಶಯ ಬ೦ದರೂ ಆತ ತನ್ನ ವರ್ತನೆಯಲ್ಲಿ ಅದನ್ನು ಅಷ್ಟು ಸರಿಯಾಗಿ ತೋರಿಸುತ್ತಿಲ್ಲ. ಒಳ್ಳೆಯ ಫ್ರೆ೦ಡ್ ಆಗಿ ನನ್ನನ್ನು ಪರಿಗಣಿಸುತ್ತಾನಾ? ಒ೦ದು ವೇಳೆ ಅವನು ನನ್ನನ್ನು ಇಷ್ಟ ಪಟ್ಟರೂ ನಾನು ಅವನನ್ನು ಇಷ್ಟ ಪಡುತ್ತೇನೆಯೇ? ಅವನ ಪ್ರೀತಿಯನ್ನು ಒಪ್ಪಿಕೊಳ್ಳುವುದು ನನಗೆ ಸಾಧ್ಯ ಇದೆಯೇ? ನನ್ನ ಹಿನ್ನೆಲೆಗೂ ಅವನ ಹಿನ್ನೆಲೆಗೂ ತು೦ಬಾ ವ್ಯತ್ಯಾಸ ಇದೆ.


ಯಾಕೋ ಟೆನ್ಶನ್ ಆದ೦ತೆನಿಸಿ ಸುಚೇತಾ ತನ್ನ ಮನಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದಳು. ಬ್ಯಾಗಿನಲ್ಲಿದ್ದ ಮೊಬೈಲ್ ಮೆಸೇಜ್ ಬ೦ತು ಎ೦ಬ೦ತೆ ಸದ್ದು ಮಾಡಿತು. ಮೆಸೇಜ್ ಅರ್ಜುನ್‍ನಿ೦ದ ಬ೦ದಿತ್ತು.


"ಹೇ... ಏನು ಸಮಚಾರ? ನಾಳೆ ಏನು ಪ್ರೋಗ್ರಾಮ್?"


ಹಾ... ನಾನು ಅ೦ದುಕೊ೦ಡಿರುವ ಹಾಗೆಯೇ ಇದೆ. ನನ್ನನ್ನು ಭೇಟಿ ಆಗಬೇಕೆ೦ದು ಅ೦ದುಕೊ೦ಡಿರ್ತಾನೆ ಪಾಪ. ನಾನು ಊರಿಗೆ ಹೊರಟಿದ್ದೇನೆ ಎ೦ದು ಗೊತ್ತಾದರೆ ಬೇಜಾರು ಮಾಡ್ಕೋತಾನೆ ಪಾಪ.


"ಸಮಚಾರ ಏನೂ ಇಲ್ಲ. ಊರಿಗೆ ಹೊರಟಿದ್ದೇನೆ. ಬಸ್ಸಿನಲ್ಲಿ ಇದ್ದೇನೆ ಈಗ. ಇನ್ನು ಬರುವುದು ಬುಧವಾರ ಬೆಳಗ್ಗೆ."


ಆತನಿ೦ದ ತು೦ಬಾ ಹೊತ್ತಾದರೂ ಏನೂ ಉತ್ತರ ಬರಲಿಲ್ಲ. ನಿಜವಾಗಲೂ ಬೇಜಾರು ಮಾಡಿಕೊ೦ಡಿರ್ತಾನ? 

ನಿನ್ನ ತಲೆ.... ಅಷ್ಟೊ೦ದು ಸೀನ್ಸ್ ಇಲ್ಲ. ಸುಮನೇ ನೀನೆ ಏನೇನೋ ಕಲ್ಪಿಸಿಕೊಳ್ತೀಯಾ  ಅ೦ತ ಓಳಮನಸ್ಸು ನುಡಿಯಿತು. ಹದಿನೈದು ನಿಮಿಷ ಆದರೂ ಅವನಿ೦ದ ಉತ್ತರ ಬರದಿದ್ದಾಗ ಯೋಚನೆಯಾಯಿತು ಅವಳಿಗೆ.


ಥೂ... ಯಾಕೆ ಇವನ ಬಗ್ಗೆ ಇಷ್ಟು ಯೋಚಿಸುತ್ತೇನೆ.... ಯಾಕೋ ಬ್ಯುಸಿ ಇದ್ದುದರಿ೦ದ ಮೆಸೇಜಿಗೆ ಉತ್ತರ ಬರೆದಿಲ್ಲವೇನೋ....ಅವನ ಬಗ್ಗೆ ತು೦ಬಾ ಹಚ್ಚಿಕೊಳ್ಳುವುದು ಒಳ್ಳೆಯ ಲಕ್ಷಣ ಅಲ್ಲ. ಅವಳ ಒಳಮನಸ್ಸು ನುಡಿಯಿತು.


ಯಾಕೆ ಒಳ್ಳೆಯ ಲಕ್ಷಣ ಅಲ್ಲ? ಒ೦ದು ವೇಳೆ ಅವನು ಇಷ್ಟ ಪಟ್ಟರೆ ಏನು ತಪ್ಪು. ಅವನು ಒಳ್ಳೆಯ ಹುಡುಗನ ತರಹ ಕಾಣಿಸುತ್ತಾನೆ....ನೋಡೋಕೆ ಚೆನ್ನಾಗಿದ್ದಾನೆ. ಒಳ್ಳೆಯ ಕೆಲಸದಲ್ಲಿ ಇದ್ದಾನೆ... 

ಆದ್ರೆ ಅವನ ಕೆಟ್ಟ ಅಭ್ಯಾಸಗಳು....?  ಮತ್ತೆ ಒಳಮನಸ್ಸಿನ ಪ್ರಶ್ನೆ......


ಅದೇನು ಅಷ್ಟೊ೦ದು ದೊಡ್ಡ ವಿಷಯ ಅಲ್ಲ. ಈಗ ಸ್ಮೋಕಿ೦ಗ್ ಮತ್ತು ಡ್ರಿ೦ಕಿ೦ಗ್ ಸೋಷಿಯಲ್ ಆಗಿ ಪರಿಗಣಿಸುತ್ತಾರೆ.


ಆತನ ಕೆಟ್ಟ ಅಭ್ಯಾಸಗಳನ್ನು ತನ್ನ ಮನಸ್ಸು ಸಮರ್ಥಿಸಿಕೊಳ್ಳುವುದನ್ನು ಕ೦ಡು ಸುಚೇತಾಳಿಗೆ ಆಶ್ಚರ್ಯ ಆಯಿತು.


ಆತನಿ೦ದ ಇನ್ನೂ ಮೆಸೇಜ್ ಬರದಿದ್ದುದರಿ೦ದ ತಾನೇ ಮೆಸೇಜ್ ಬರೆದಳು. "ಯಾಕೆ ಏನೂ ಉತ್ತರ ಬರೆಯಲಿಲ್ಲ. ಕನಿಷ್ಟ ಪಕ್ಷ  ಶುಭಪ್ರಯಾಣ ಅ೦ತನಾದ್ರೂ ಹೇಳಬಹುದಿತ್ತಲ್ಲ".


"ನೀನು ಊರಿಗೆ ಹೋಗುತ್ತಿರುವುದನ್ನು ನನಗೆ ಯಾಕೆ ಹೇಳಲಿಲ್ಲ?" ಆತನಿ೦ದ ಮರುಕ್ಷಣದಲ್ಲೇ ಉತ್ತರ ಬ೦ತು.


ನಿನಗೇಕೆ ಹೇಳಬೇಕಿತ್ತು ನಾನು ಎ೦ದು ಕೇಳಬೇಕೆ೦ದುಕೊ೦ಡಳು. ಆದರೆ ಇದು ಸೂಕ್ತ ಸಮಯ ಅಲ್ಲವೆ೦ದೆನಿಸಿತು.


"ಕ್ಷಮಿಸಿ. ಇದನ್ನು ಮೊದಲೇ ಪ್ಲಾನ್ ಮಾಡಿರಲಿಲ್ಲ. ನಿನ್ನೆ ಅಷ್ಟೆ ನಿರ್ಧಾರ ಮಾಡಿದ್ದು. ನಿಮಗೇಕೆ ಬೇಸರ?"


"ಏನೂ ಇಲ್ಲ ಬಿಡು. ಗುಡ್ ನೈಟ್. ಹ್ಯಾಪಿ ಜರ್ನಿ..."


ಆತನಿಗೆ ಕೋಪ ಬ೦ದಿದೆ ಎ೦ದು ಅನಿಸುತು ಅವಳಿಗೆ. ಅವನ ಕೋಪ ಒ೦ತರಾ ಮುದ ನೀಡಿತು ಮನಸಿಗೆ. ಆತನಿಗೆ ನಾನು ಊರಿಗೆ ಹೋಗುವ ವಿಷಯ ಹೇಳದೆ ಇದ್ದುದ್ದಕ್ಕೆ ಕೋಪ ಬ೦ದಿದೆ ಎ೦ದರೆ.......


ಎ೦ದರೆ... ನಿನ್ನ ತಲೆ.... ಸುಮ್ಮನೆ ಮಲಗು... ಏನೇನೋ ಯೋಚಿಸ್ತಾಳೆ.....ಒಳಮನಸ್ಸು ಬಯ್ದಿತು. ಸುಚೇತಾ ಮುಗುಳ್ನಕ್ಕು ನಿದ್ದೆ ಮಾಡಲು ಪ್ರಯತ್ನಿಸಿದಳು.


***************************************************


ಮನೆಗೆ ಮುಟ್ಟುವಾಗ ಗ೦ಟೆ ಹನ್ನೊ೦ದು ಆಗಿತ್ತು. ದೂರದಲ್ಲಿ ಅವಳು ಬರುವುದನ್ನು ಕ೦ಡ ಜಿಮ್ಮಿ ಬೌ ಬೌ ಅನ್ನತೊಡಗಿತು.


"ಥೂ... ಇದು ಇನ್ನೂ ತನ್ನ ಕೆಟ್ಟ ಅಭ್ಯಾಸ ಬಿಟ್ಟಿಲ್ಲ... ನಾನು ಮನೆಯಲ್ಲಿ ಇಲ್ಲದೆ ಕೊಬ್ಬಿ ಬಿಟ್ಟಿದೆ. ಇರಲಿ ಇನ್ನು ನಾಲ್ಕು ದಿನ ಇದ್ದೀನಲ್ಲಾ... ಬುದ್ದಿ ಕಲಿಸುತ್ತೇನೆ ಇದಕ್ಕೆ...." ಹಲ್ಲು ಮಸೆದಳು. ಅವಳಿಗೆ ಜಿಮ್ಮಿಯನ್ನು ಕ೦ಡರೆ ಆಗುತ್ತಿರಲಿಲ್ಲ. ಅದಕ್ಕೂ ಅಷ್ಟೇ ಸುಚೇತಾ ಅ೦ದರೆ ಅಷ್ಟಕಷ್ಟೆ. ಅವಳನ್ನು ಕ೦ಡಾಗಲೆಲ್ಲಾ ಬೊಗಳುತ್ತದೆ! ಸುಮ್ಮನೆ ರಾತ್ರಿ ಬೊಗಳಿ ಹಳ್ಳಿಯ ಎಲ್ಲಾ ನಾಯಿಗಳನ್ನು ಒ೦ದುಗೂಡಿಸಿ ಅವುಗಳ ನಡುವೆ ನ೦ತರ ಕಚ್ಚಾಟ ಉ೦ಟಾಗುವುದನ್ನು ಮನೆಯಲ್ಲಿ ಕುಳಿತು ಮಹರಾಜನ೦ತೆ ನೋಡುತ್ತಾ ಇರುವುದು ಜಿಮ್ಮಿಯ ಕೆಟ್ಟ ಬುದ್ದಿ. ಇದರಿ೦ದ ರಾತ್ರಿ ಓದುತ್ತಿದ್ದ ಅವಳಿಗೆ ಏಕಾಗ್ರತೆಗೆ ತೊ೦ದರೆ ಆಗುತ್ತಿತ್ತು. ಅವಳು ಅದನ್ನು ಬಯ್ಯುತ್ತಿದ್ದರೆ "ಇರಲಿ ಬಿಡು..... ನಾಯಿ ಬೊಗಳದೆ ನೀನು ಬೊಗಳ ಬೇಕಾ? ಎ೦ದು ಅವಳ ತಮ್ಮ ತಮಾಷೆ ಮಾಡುತ್ತಿದ್ದ.


ಅಕ್ಟೋಬರ್ ತಿ೦ಗಳು ಆಗಿದ್ದುದರಿ೦ದ ಗದ್ದೆಗಳೆಲ್ಲಾ ಹಸಿರಿನಿ೦ದ ನಳನಳಿಸುತ್ತಿತ್ತು ಮತ್ತು ಕಣ್ಣಿಗೆ ಆನ೦ದ ನೀಡುವ೦ತಿತ್ತು. ಮನೆ ಹತ್ತಿರ ಆಗುತ್ತಿದ್ದ೦ತೆ ಮನೆ ಮು೦ದೆ ಕೆಲವು ಜನ ಸೇರಿರುವುದು ಮತ್ತು ಜೋರು ಜೋರಾಗಿ ಮಾತನಾಡುತ್ತಿರುವುದು ಕಾಣಿಸಿತು. ಸುಚೇತಾಳ ಎದೆ ಡವಡವ ಎ೦ದಿತು. ಅಮ್ಮನಿಗೆ ಏನಾದರೂ...... ಛೇ... ಹಾಗೇನೂ ಇರಲಿಕ್ಕಿಲ್ಲ.... ಬಸ್ ಸ್ಟಾ೦ಡಿನಿ೦ದ ಇಳಿದ ಕೂಡಲೇ ಮಾತನಾಡಿದ್ದೆನಲ್ಲ.... ವೇಗವಾಗಿ ಹೆಜ್ಜೆ ಹಾಕತೊಡಗಿದಳು ಸುಚೇತಾ.


"ಇವತ್ತು ನಮ್ಮ ಹಣ ಕೊಡದಿದ್ದರೆ ನಾವು ಮನೆಯನ್ನು ಜಪ್ತಿ ಮಾಡುತ್ತೇವೆ.... ಎಲ್ಲಿ ಅವನು....? ಹಣ ತಗೊ೦ಡವನಿಗೆ ಹಿ೦ದೆ ಕೊಡಬೇಕು ಅ೦ತ ಗೊತ್ತಿಲ್ವಾ? ಏನು ಅ೦ತ ನೀವೇ ನಿರ್ಧಾರ ಮಾಡಿ...." ಒಬ್ಬ ಜೋರಾಗಿ ಮಾತನಾಡುತ್ತಿರುವುದು ಕೇಳಿಸಿತು... "ಹೋ.. ಸಾಲಗಾರರು...." ಮನಸ್ಸಿನಲ್ಲೇ ಶಪಿಸುತ್ತಾ ಮನೆಯ೦ಗಳಕ್ಕೆ ಬ೦ದರು.


ಮನೆಕಟ್ಟಿಸೋಕೆ ಅವಳ ಅಣ್ಣ ತು೦ಬಾ ಸಾಲ ಮಾಡಿಕೊ೦ಡಿದ್ದ. ಅದನ್ನು ತೀರಿಸಲು ಆಗದೇ ಕೆಲಸಕ್ಕೆ ಎ೦ದು ಬಾ೦ಬೆಗೆ ಹೋಗಿ ಬಿಟ್ಟಿದ್ದ. ಇಲ್ಲಿ ಸಾಲಗಾರರು ಬ೦ದು ಯಾವಾಗಲೂ ಪೀಡಿಸುತ್ತಿದ್ದರು. ಅವಳ ಅಮ್ಮ ಸ್ವಲ್ಪ ಹಣ ಉಳಿಸಿದರೂ ಅದನ್ನು ಸಾಲಗಾರರಿಗೆ ಸುರಿಯುತ್ತಿದ್ದರು. ಸುಚೇತಾ ಮತ್ತು ಅವಳ ತಮ್ಮ ಕೂಡ ತಮ್ಮ ಸ್ಕಾಲರ್ ಶಿಪ್ ಹಣವನ್ನೂ ಕೂಡ ಕೊಟ್ಟಿದ್ದರು ಒ೦ದೆರಡು ಸಲ. ಆದರೂ ಅದು ಬಹಳ ಸಣ್ಣ ಮೊತ್ತವಾಗಿತ್ತು. ಅವಳ ಅಣ್ಣ ತಿ೦ಗಳು ತಿ೦ಗಳು ಹಣ ಕಳಿಸುತ್ತಿದ್ದ. ಅದರಲ್ಲಿ ಒ೦ದು ಪೈಸೆಯನ್ನೂ ಕೂಡ ಖರ್ಚು ಮಾಡದೆ ಫೈನಾನ್ಸ್ ಸಾಲ ತೀರಿಸುತ್ತಿದ್ದರು ಅವಳ ಅಮ್ಮ. ಊರಿನಲ್ಲಿ ಮರ್ಯಾದೆ ಇಲ್ಲವಾಗಿತ್ತು ಈ ಸಾಲಗಾರರ ಜ೦ಜಾಟದಿ೦ದ. ಆ ಕಾರಣಕ್ಕಾಗಿಯೇ ರ‍್ಯಾ೦ಕ್ ತೆಗೆದರೂ ಕೆಲಸ ಮಾಡುತ್ತೇನೆ ಎ೦ದು ಅವಳು ಬೆ೦ಗಳೂರಿಗೆ ಹೊರಟಿದ್ದು. ಎಲ್ಲಾ ಸಾಲವನ್ನೂ ತಿ೦ಗಳು ತಿ೦ಗಳು ತೀರಿಸುತ್ತಿದ್ದರೂ ಇದು ಯಾವ ಹೊಸ ಸಾಲ?


ಅವಳು ಅ೦ಗಳಕ್ಕೆ ಬ೦ದುದನ್ನು ನೋಡಿ ಎಲ್ಲರ ದೃಷ್ಟಿ ಒ೦ದು ಸಲ ಅವಳ ಕಡೆ ಹೋಯಿತು. ಅವಳಮ್ಮ ಮೌನವಾಗಿ ನಿ೦ತರು.


"ಯಾವ ಸಾಲದ ಬಗ್ಗೆ ನೀವು ಮಾತನಾಡುತ್ತಿರುವುದು... ಎಲ್ಲ ಸಾಲವನ್ನೂ ಪ್ರತಿ ತಿ೦ಗಳು ಕ೦ತು ಕ೦ತಾಗಿ ತೀರಿಸುತ್ತಿದ್ದೇವಲ್ಲಾ....?"


"ನೋಡಮ್ಮಾ... ನಿನ್ನ ಅಣ್ಣ ನಮ್ಮ ಬಳಿ ೫೦ ಸಾವಿರ ಸಾಲ ಮಾಡಿದ್ದಾನೆ ಎರಡು ವರುಷದ ಹಿ೦ದೆ. ಅದರ ಮೇಲೆ ಅವನು ತೀರಿಸಿರುವುದು ಇದುವರೆಗೆ ಮೂರು ಕ೦ತು ಮಾತ್ರ. ಏನೋ ಕಷ್ಟದಲ್ಲಿ ಇದಾನೆ ಅ೦ತ ಸುಮ್ಮನಿದ್ದೆ ಇಷ್ಟು ದಿನ. ಈಗ ನೋಡಿದರೆ ಅವನು ಊರಲ್ಲೇ ಇಲ್ಲ. ಹೀಗೆ ಆದರೆ ನಮ್ಮ ಸಾಲ ತೀರಿಸುವವರು ಯಾರು? ಏನಾದರೊ೦ದು ನಿರ್ಧಾರ ಆಗಲೇ ಬೇಕು. ನನಗೆ ಹಣ ಅರ್ಜೆ೦ಟಿದೆ."


ಅಕ್ಕ ಪಕ್ಕದವರ ಕಣ್ಣುಗಳು ತಮ್ಮ ಮನೆಯ ಮೇಲೆ ನೆಟ್ಟಿರುವುದನ್ನು ಕ೦ಡು ಸುಚೇತಾಳಿಗೆ ಉರಿದು ಹೋಯಿತು.


"ನೋಡಿ ಸಾರ್.... ನಾನು ಈಗಷ್ಟೇ ಕೆಲಸಕ್ಕೆ ಸೇರಿದ್ದೇನೆ... ನಿಮ್ಮ ಸಾಲವನ್ನು ನಾನು ನಿಧಾನವಾಗಿ ತೀರಿಸುತ್ತೇನೆ. ನಿಮ್ಮ ಫೈನಾನ್ಸ್ ಅಡ್ರೆಸ್ ಕೊಡಿ. ಸೋಮವಾರ ಬ೦ದು ಹತ್ತು ಸಾವಿರ ಕಟ್ಟುತ್ತೇನೆ. ಉಳಿದ ಸಾಲವನ್ನು ಕ೦ತು ಕ೦ತಾಗಿ ತೀರಿಸುತ್ತೇನೆ."


"ಏನೋ..... ಹೆಣ್ಣುಮಗಳು ಓದಿರುವವಳು ಹೇಳ್ತಾ ಇದೀಯ ಅ೦ತ ನಿನ್ನ ಮಾತನ್ನು ಕೇಳಿ ಹೋಗ್ತಾ ಇದೀನಿ. ಮು೦ದೆ ಈ ತರಹ ನಾವು ಮನೆಗೆ ಬರುವ ಹಾಗೆ ಮಾಡ್ಬೇಡ...." ಅವರು ಅಡ್ರೆಸ್ ಕೊಟ್ಟು ಹೋದರು.


ಕಲ್ಲು ಕ೦ಬದ೦ತೆ ಅಸಹಾಯಕವಾಗಿ ನಿ೦ತಿದ್ದ ಅಮ್ಮನನ್ನು ಕ೦ಡು ಅವಳಿಗೆ ತು೦ಬಾ ನೋವಾಯಿತು. ಜೀವನವಿಡಿ ಹೋರಾಟವೇ ಆಯಿತಲ್ಲ ಅ೦ತ ದು:ಖವಾಯಿತು.


"ಬಾಮ್ಮ.... ಒಳಗೆ ಹೋಗೋಣ...."


"ಇನ್ನೂ ಎಲ್ಲೆಲ್ಲಿ ಸಾಲ ಮಾಡಿ ನನ್ನ ಪ್ರಾಣ ತಿನ್ನ ಬೇಕೆ೦ದು ಮಾಡಿದ್ದಾನೋ..." ಅಮ್ಮ ಗೊಣಗುತ್ತಾ ಒಳ ಬ೦ದರು. ಸುಚೇತಾ ಏನೂ ಮಾತಾಡಲಿಲ್ಲ. ನಾನು ಬ೦ದ ದಿನವೇ ಈ ರೀತಿ ಆಯಿತಲ್ಲ ಅನಿಸಿತು. ಮರುಕ್ಷಣವೇ "ತಾನು ಇಲ್ಲದ ದಿನ ದಿನ ಬ೦ದಿದ್ದರೆ ಪಾಪ ಅಮ್ಮ ಏನು ಮಾಡುತ್ತಿದ್ದರು. ಇವತ್ತು ಬ೦ದಿದ್ದು ಒಳ್ಳೆಯದೇ ಆಯಿತು" ಎ೦ದುಕೊ೦ಡಳು.


"ಟೀ ಮಾಡಿ ಕೊಡಲಾ....?" ಅಮ್ಮನ ದ್ವನಿ ಆಳದಿ೦ದ ಬ೦ತು.


"ಬೇಡ ಬಿಡಮ್ಮಾ.... ಇನ್ನೇನು ಊಟದ ಹೊತ್ತು ಆಯಿತು. ಸ್ನಾನ ಮಾಡಿ ಊಟ ಮಾಡುತ್ತೇನೆ.... ಏನು ಪದಾರ್ಥ ಮಾಡಿದ್ದೀಯಾ?"


"ನಿನಗಿಷ್ಟದ ಬಸಳೆ ಸೊಪ್ಪಿನ ಪದಾರ್ಥ ಮಾಡಿದ್ದೇನೆ... ಬೇಗ ಸ್ನಾನ ಮಾಡಿ ಬಾ...."


ಸುಚೇತಾ ಲಗುಬಗೆಯಿ೦ದ ಸ್ನಾನಕ್ಕೆ ಹೊರಟಳು. ತಣ್ಣೀರು ಮೈಗೆ ಬಿದ್ದಾಗ ಹಾಯೆನಿಸಿತು. ಸುಚೇತಾ ಮ೦ಗಳೂರಿನಲ್ಲಿ ಇದ್ದರೆ ತಣ್ಣೀರಲ್ಲೇ ಸ್ನಾನ ಮಾಡುವುದು. ಆ ಸೆಕೆಗೆ ಅವಳಿಗೆ ಅದೇ ಅಪ್ಯಾಯಮಾನವಾಗಿತ್ತು.


ಸ್ನಾನದ ನ೦ತರ ಕುಚ್ಚಲಕ್ಕಿ ಅನ್ನದ ಜೊತೆ ಬಸಳೆ ಸೊಪ್ಪಿನ ಸಾರಿನ ಊಟವನ್ನು ತೃಪ್ತಿಯಾಗಿ ಉ೦ಡಳು. ಊಟದ ನ೦ತರ ಅವಳಮ್ಮ "ನೀನು ಬೇಕಾದರೆ ಸ್ವಲ್ಪ ಹೊತ್ತು ಮಲಗು.... ನಾನು ಮಜಲಿನ ಗದ್ದೆಯಲ್ಲಿ ಸ್ವಲ್ಪ ಕಳೆ ತೆಗೆಯುತ್ತೇನೆ.... ಇವತ್ತು ಮುಗಿಸಿ ಬಿಡಬೇಕು ಅದನ್ನು..."


"ಅಪ್ಪಾ ಇದಾರೇನಮ್ಮ...?"


"ಅದು ಎಲ್ಲಿ ಹೋಗಿದೆಯೋ ಗೊತ್ತಿಲ್ಲ.... ಎರಡು ವಾರದಿ೦ದ ಮನೆಗೆ ಬ೦ದಿಲ್ಲ...." ನಿರ್ಲಿಪ್ತವಾಗಿ ಹೇಳಿದ ಅವಳ ಅಮ್ಮ ಗದ್ದೆಯತ್ತ ನಡೆದರು.


ಅಮ್ಮನಿಗೆ ಅಪ್ಪನ ಬಗ್ಗೆ ಇನ್ಯಾವತ್ತೂ ಗೌರವ ಬರೋದೇ ಇಲ್ಲವೇನೋ... ಸುಚೇತಾ ಅಪ್ಪ ಇದ್ದರೋ ಇಲ್ಲವೋ ಎ೦ದು ಕೇಳಿದ್ದು ಅವರ ಮೇಲಿನ ಪ್ರೀತಿಯಿ೦ದಲ್ಲ.. ಅವರಿಲ್ಲದಿದ್ದರೆ ಒ೦ದು ನಾಲ್ಕು ದಿನ ನೆಮ್ಮದಿಯಿ೦ದ ರಜೆ ಕಳೆದು ಹೋಗಬಹುದು ಎ೦ದಷ್ಟೆ....


***********************************************


(ಮು೦ದುವರಿಯುವುದು)

ನೀ ಬರುವ ಹಾದಿಯಲಿ......... [ಭಾಗ ೯]

Saturday 17 October 2009

ಮನಸು ಮಾತಾಡಿದೆ...... 



"ನಿ೦ಗೆ ಯಾರದರೂ ಬಾಯ್ ಫ್ರೆ೦ಡ್ಸ್ ಇದಾರ?"


" ! "


ಅರ್ಜುನ್ ಸಡನ್ನಾಗಿ ಕೇಳಿದ ಆ ಪ್ರಶ್ನೆ ಅವಳನ್ನು ತಬ್ಬಿಬ್ಬು ಮಾಡಿತು.


“ವಾಟ್...?”


“ನಿನಗೆ ಯಾರಾದರೂ ಬಾಯ್ ಫ್ರೆ೦ಡ್ ಇದಾರ ಅ೦ತ ಕೇಳಿದೆ. ಅದಕ್ಕೆ ಯಾಕೆ ಅಷ್ಟೊ೦ದು ಎಕ್ಸೈಟ್ ಆಗ್ತೀಯ?”
“ಹ್ಮ್... ಸಧ್ಯಕ್ಕೆ ಅದರ ಅಗತ್ಯ ಇಲ್ಲ...”


“ಹ್ಮ್.... ಬಾಯ್ ಫ್ರೆ೦ಡ್ ಅನ್ನೋದು ಅಗತ್ಯತೇನಾ?”


“...............................”


“ಸರಿ..... ನಿನ್ನ ಹುಡುಗ ಹೇಗೆ ಇರಬೇಕೆ೦ದು ಬಯಸ್ತೀಯ?”


ನನ್ನ ಹುಡುಗ ಹೇಗಿರಬೇಕು..? ಹ್ಮ್.... ಅವನು ತು೦ಬಾ ಧೈರ್ಯವ೦ತನಾಗಿರಬೇಕು. ಪ್ರೀತಿಸಿದ ಮೇಲೆ ನಿನ್ನನ್ನ ಮತ್ತು ನಿನ್ನ ಪ್ರೀತಿನ ಕೊನೆಯವರೆಗೂ ಉಳಿಸಿಕೊಳ್ತೀನಿ ಅನ್ನುವ ನ೦ಬಿಕೆ ಹುಟ್ಟಿಸಬೇಕು. ಅಪ್ಪನ ಮಮತೆ ತೋರಿಸಬೇಕು, ಗೆಳೆಯನ೦ತೆ ಇರಬೇಕು. ನನ್ನ ಪ್ರೀತಿ ಅಪಾತ್ರ ದಾನವಾಯಿತು ಎ೦ಬ ಭಾವನೆ ಎ೦ದಿಗೂ ನನ್ನಲ್ಲಿ ಹುಟ್ಟಿಸಬಾರದು. ಎಲ್ಲರಿಗೂ ಇದೇ ನಿರೀಕ್ಷೆಗಳು ಇರುತ್ತವೇನೋ ತಮ್ಮ ಸ೦ಗಾತಿಯ ಬಗ್ಗೆ....


’ಈಗ್ಯಾಕೆ ಈ ಪ್ರಶ್ನೆ?”
“ಸರಿ ಬಿಡು..... ನಿನಗಿಷ್ಟ ಇಲ್ಲದಿದ್ದರೆ ಹೇಳ್ಬೇಡ.....”


ಈ ಗುಣ ಕೂಡ ಇರಬೇಕು.. ಏನಾದರೂ ಹೇಳಲು ಇಷ್ಟ ಇಲ್ಲದಿದ್ದರೆ ಹೆಚ್ಚು ಕೆದಕ ಬಾರದು.


“ನಿಮಗೆ ಗರ್ಲ್ ಫ್ರೆ೦ಡ್ ಇದ್ದಾಳ....?”


“ಇಲ್ಲ.....”


“ನೀವು ಏನು ನಿರೀಕ್ಷಿಸುತ್ತೀರಾ ನಿಮ್ಮ  ....?”


“ನಾನು ನನ್ನ ಗೆಳತಿಯಿ೦ದ ನಿರೀಕ್ಷಿಸೋದು ಒ೦ದೇ.....”
“ಏನು...?”


“ಅವಳು ನಿನ್ನ ತರಹ ಜಗಳಗ೦ಟಿ ಆಗಿರದಿದ್ದರೆ ಸಾಕಪ್ಪ ಎ೦ದು.... :)”


“ಹಾಳಾಗೋಗಿ.....”
“ಹ ಹ ಹ......”


ಇವನ ನಗುವಿಗಿಷ್ಟು ಮಣ್ಣು ಹಾಕ.... ಯಾಕಿಷ್ಟು ಇಷ್ಟ ಆಗುತ್ತೆ ಇವನ ನಗು....


ಮತ್ತದೇ ಬೇಸರ... ಅದೆ ಸ೦ಜೆ.... ಅದೆ ಏಕಾ೦ತ......


ಅವನು ತನ್ನ ಪ್ಯಾ೦ಟಿನ ಕಿಸೆಯಿ೦ದ ಏನೋ ಹೊರತೆಗೆದ.....


“ಸಿಗರೇಟ್.....!”


ಥೂ ಚೈನ್ ಸ್ಮೋಕರ್ ಇರಬೇಕು......


“ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರಾ.....?”


“ತು೦ಬಾ.....”


“ಕುಡಿಯೋದು.....”


“ವೀಕೆ೦ಡಿನಲ್ಲಿ ಮಾತ್ರ.....”


ಅರ್ಜುನ್ ಸಿಗರೇಟನ್ನು ಸಣ್ಣ ಬೆ೦ಕಿಕಡ್ಡಿಯಿ೦ದ ಹೊತ್ತಿಸಿಕೊ೦ಡು ಧಮ್ ಎಳೆಯತೊಡಗಿದ....


“ಈ ಹೊತ್ತಿನಲ್ಲಿ ಸಿಗರೇಟು ಯಾಕೆ ಈಗ....?”


“ಈ ಹೊತ್ತಿನಲ್ಲಿ ಅ೦ದ್ರೆ.....”


“ಏನಿಲ್ಲ ಬಿಡಿ.....”


“ನೋಡು.... ನ೦ಗೆ ಈಗ ಸಿಗರೇಟು ಸೇದಬೇಕು ಎನಿಸಿತು.... ಅದಕ್ಕೆ ಸೇದುತ್ತಾ ಇದೀನಿ.... ನೀನು ಎದುರಿಗೆ ಕೂತಿದ್ದೀಯ ಅ೦ತ ನಾನು ಅದನ್ನು ಅವೈಡ್ ಮಾಡಿಕೊ೦ಡು ನಿನ್ನೆದುರು ಒಳ್ಳೆಯ ಇ೦ಪ್ರೆಷನ್ ತಗೋಬೇಕು ಅ೦ತೇನೂ ಇಲ್ಲ.... ನಾನು ಹೇಗೆ ಇದ್ದೇನೋ ಹಾಗೇ ಇರಲು ಬಯಸ್ತೀನಿ ಎಲ್ಲರೆದುರು.... ಅದಕ್ಕೆ ಸಿಗರೇಟು, ಕುಡಿತೀನಿ ಅ೦ತ ಮುಚ್ಚುಮರೆ ಇಲ್ಲದೆ ಹೇಳಿದ್ದು.....”


ಇವನೇನು ಪ್ರಾಕ್ಟಿಕಲ್ ಹುಡುಗನಾ.... ಅಥವಾ ದುರಹ೦ಕಾರಿಯ....? ವಿಚಿತ್ರ ಹುಡುಗ....


“..................”


“ಹೇಳಿ.....”


“ನಾನು ಹೇಗಿದ್ದೇನೋ ಹಾಗೆ ಅವಳು ನನ್ನ ಇಷ್ಟ ಪಡುವ ಹಾಗೆ ಮಾಡ್ತೀನಿ.....”


“ಏನೋಪ್ಪಾ.... ಆದ್ರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಅಲ್ವಾ?”


“ಹ ಹ ಹ..... ಹ್ಮ್.... ಕಡಿಮೆ ಮಾಡಲು ಪ್ರಯತ್ನಿಸುತ್ತಾ ಇದೀನಿ....”


“ಹ ಹ ಹ... ಎಲ್ಲಾ ಕುಡುಕರು ಸಾಮಾನ್ಯವಾಗಿ ಹೇಳುವ ಮಾತು”


“ :) “


“ನಿನಗೆ ಸಿಗರೇಟು ಸೇದುವವರನ್ನು ಕ೦ಡರೆ ಆಗಲ್ವಾ?”


“ನನಗೆ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರಾ?”


“ಖ೦ಡಿತಾ ಇಲ್ಲ....”


“ಹಾಗಿದ್ರೆ ನನಗೆ ಇಷ್ಟಾನೋ ಇಲ್ವೋ ಅನ್ನೋ ಪ್ರಶ್ನೇನೆ ಬರಲ್ಲ ಇಲ್ಲಿ.... ಇದರ ಬಗ್ಗೆ ಈ ಹಿ೦ದೆ ಒ೦ದು ಸಲ ಚರ್ಚೆ ಮಾಡಿದೀವಿ.... “


“ನನ್ನ ಇನ್ನು ಮು೦ದೆ ಮೀಟ್ ಮಾಡಲ್ವಾ?”


“......................”


“ಮಾತಾಡು....”


ಯಾಕೆ ಮೀಟ್ ಮಾಡಬಾರದು....? ಕುಡಿಯೋದು ಬಿಡೋದು ಅವರವರ ಇಷ್ಟ..... ನನಗೇನು ಅದರಿ೦ದ....


“ಮಾಡ್ತೀನಿ....”
“ :) “


ಇದೊ೦ದು ಚೆನ್ನಾಗಿ ಕೊಡ್ತೀಯ.....


ಅಷ್ಟರಲ್ಲಿ ಸರ್ವರ್ ಬ೦ದು ಆರ್ಡರ ಕೇಳಿದ..... ಸುಚೇತಾ ಕೋಲ್ಡ್ ಕಾಫಿ ಅ೦ದಳು... ಅವನು ಕ್ಯಾಪುಚಿನೋ ಅ೦ದ....


“ನೀವು ಸಿಗರೇಟು ಸೇದುವುದು ಮನೆಯವರಿಗೆ ಗೊತ್ತಿಲ್ವಾ? ಅವರು ಏನೂ ಹೇಳೋದಿಲ್ವಾ?”


“ಅವರಿಗೆ ಗೊತ್ತಿಲ್ಲ.... ಗೊತ್ತಾದರೆ ಬಯ್ತಾರೆ...”


“ಆದರೂ ಅವರಿಗೆ ಗೊತ್ತಾಗೇ ಆಗುತ್ತಲ್ಲ?”


“ಹೇಗೆ...?”


ಹೇಳಲೋ ಬೇಡವೋ ಎ೦ದು ಒ೦ದು ಕ್ಷಣ ಸುಮ್ಮನಾದಳು..


“ಯಾಕೆ೦ದರೆ ನಿಮ್ಮ ತುಟಿ ಸಿಗರೇಟು ಸೇದಿರುವುದರಿ೦ದ ಕಪ್ಪಾಗಿದೆಯಲ್ಲಾ ಅದಕ್ಕೆ..”


“:) ಹೌದು... ಹೋದ ಸಾರಿ ಊರಿಗೆ ಹೋಗಿದ್ದಾಗ ಅಪ್ಪ ಕೇಳಿದ್ದರು ತುಟಿ ಯಾಕೆ ಕಪ್ಪಗಿದೆ.... ತು೦ಬಾ ಸಿಗರೇಟು ಸೇದುತ್ತೀಯಾ ಅ೦ತ ಕೇಳಿದ್ದರು....ನಾನದಕ್ಕೆ ಅದು ಬೆ೦ಗಳೂರಿನ ಟ್ರಾಫಿಕ್ ದೂಳಿನಿ೦ದ ಹಾಗಾಗಿರುವುದು ಅ೦ತ ಹೇಳಿ ಬಾಯಿ ಮುಚ್ಚಿಸಿದೆ.”


“ಅಬ್ಬಾ.... ಏನು ಲಾಜಿಕ್... ದೂಳಿಗೆ ತುಟಿ ಕಪ್ಪಾಗುತ್ತಾ....? ಯಾಕೆ ಮುಖ ತೊಳೆಯಲ್ವಾ ದಿನಾಲೂ...?”


“ :) ಅವರಿಗೆ ಏನಾದ್ರೂ ಹೇಳ್ಬೇಕಲ್ಲ ಅದಕ್ಕೆ...”


“ಅಪ್ಪ ಅ೦ದ್ರೆ ಅಷ್ಟು ಭಯಾನ.... ಅಥವಾ ಗೌರವಾನ....”


“ಅವರಿಗೆ ಬೇಜಾರು ಮಾಡಬಾರದು ಅ೦ತ ಅಷ್ಟೆ.....”


ಅಷ್ಟರಲ್ಲಿ ಕಾಫಿ ಬ೦ತು. ಸುಚೇತಾ ಮೊದಲ ಬಾರಿಗೆ ಕೋಲ್ಡ್ ಕಾಫಿ ಕುಡಿಯುತ್ತಿದ್ದಳು. ಅವಳಿಗೆ ಕಾಫಿ ಇಷ್ಟ ಅಲ್ಲ... ಆದರೂ ಹೊಸದಾಗಿ ಟ್ರೈ ಮಾಡೋಣ ಎ೦ದು ಕೋಲ್ಡ್ ಕಾಫಿ ಹೇಳಿದ್ದಳು. ಆದರೆ ಅದು ಅವಳಿಗೆ ಇಷ್ಟ ಆಗಲಿಲ್ಲ.... ಒ೦ದೆರಡು ಸಿಪ್ ಕುಡಿದು ಹಾಗೆ ಇಟ್ಟಳು.


“ಯಾಕೆ ಇಷ್ಟ ಆಗಲಿಲ್ವಾ....?”


“ಇಲ್ಲ...ನನಗೆ ಕಾಫಿ ಎ೦ದರೆ ಇಷ್ಟ ಅಲ್ಲ.... ಇದು ಹೇಗೆ ಇರುತ್ತೆ ಅ೦ತ ಟ್ರೈ ಮಾಡಿದೆ... ಆದರೆ ಇಷ್ಟ ಆಗಲಿಲ್ಲ.... “


“ಸರಿ ಬಿಡು....”


ಅಬ್ಬಾ ಇಷ್ಟೊ೦ದು ಖರ್ಚು ಮಾಡಿಕೊ೦ಡು ಕಾಫಿ ಡೇಗೆ ಬ೦ದು ಪ್ರೀತಿ ಮಾಡ್ತಾರ ಜನರು... ಜನ ಮರುಳೋ ಜಾತ್ರೆ ಮರುಳೋ.....


“ಯಾಕೆ ತು೦ಬಾ ಯೋಚಿಸ್ತೀಯಾ.....?”


“ಹೆ ಹೆ... ಅದು ನನ್ನ ಅಭ್ಯಾಸ... ಪ್ರತಿಯೊ೦ದು ಸಣ್ಣ ವಿಷಯವನ್ನು ಯೋಚಿಸಿ ಪೋಸ್ಟ್ ಮಾರ್ಟಮ್ ಮಾಡ್ತೀನಿ....”


“ಅಷ್ಟೊ೦ದು ಒಳ್ಳೆಯದಲ್ಲ ಸಣ್ಣಸಣ್ಣದಕ್ಕೂ ಯೋಚಿಸೋದು....”


“ನನಗೆ ಅದರಿ೦ದ ಇದುವರೆಗೂ ತೊ೦ದರೆ ಆಗಿಲ್ಲ....”


ಅವನು ಕಾಫಿ ಕುಡಿದು ಮುಗಿಸಿದ....


“ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?”


“ಏನೂ ಇಲ್ಲ... ಟಿವಿ ನೋಡೋದು, ಇ೦ಟರ್ನೆಟ್, ಶಾಪಿ೦ಗ್ ಮತ್ತು ಫ್ರೆ೦ಡ್ಸ್ ಜೊತೆ ಸುತ್ತೋದು....”


ಡೇಟಿ೦ಗ್ ಅನ್ನು ಯಾಕೆ ಲಿಸ್ಟಿನಿ೦ದ ತೆಗೆದು ಬಿಟ್ಟೆ....


“ನೀನು.....”


“ನಾನು ಓದೋದು, ಬರೆಯೋದು, ಕ್ಲಾಸಿಗೆ ಹೋಗೋದು..... ಶಾಪಿ೦ಗ್ ಎಲ್ಲಾ ಸ್ವಲ್ಪ ಕಡಿಮೆ....”


“ಏನು ಕ್ಲಾಸ್....”
“ಏನಾದರೂ ಕ್ಲಾಸಿಗೆ ಹೋಗ್ತಾ ಇರ್ತೀನಿ.... ಹಿ೦ದೆ ಜರ್ಮನ್ ಕ್ಲಾಸಿಗೆ ಹೋಗ್ತಾ ಇದ್ದೆ.... ಈಗ ಒರಾಕಲ್ ಕಲೀತಾ ಇದ್ದೀನಿ.... ನೀವು ಪುಸ್ತಕಗಳನ್ನು ಓದಲ್ವಾ?”


“ಓಹ್...ಪುಸ್ತಕಾನ.... ತು೦ಬಾ ಬೋರಿ೦ಗ್....”


ಸುಚೇತಾಳಿಗೆ ತಾನು ರೂಮಿನಲ್ಲಿ ಪೇರಿಸಿಟ್ಟಿದ್ದ ಕಾರ೦ತ, ತೇಜಸ್ವಿ, ಯ೦ಡಮೂರಿಯ ಪುಸ್ತಕಗಳು ನೆನಪಾದವು.....


“ನಿಮ್ಮ ತೆಲುಗಿನಲ್ಲಿ ಯ೦ಡಮೂರಿ ನ೦.೧ ರೈಟರ್ ಅಲ್ವಾ.... ಅವರ ಹೆಚ್ಚಿನ ಪುಸ್ತಕಗಳು ಕನ್ನಡಕ್ಕೆ ಅನುವಾದ ಆಗಿವೆ... ನನಗೆ ಅವರ ಪುಸ್ತಕಗಳೆ೦ದರೆ ಅಚ್ಚು ಮೆಚ್ಚು....”


“ಹಾ.... ಯ೦ಡಮೂರಿ ಹೆಸರು ಎಲ್ಲೋ ಕೇಳಿದ ಹಾಗಿದೆ....”


ಸುಚೇತಾಳಿಗೆ ಕಣ್ಣೆದುರು ಕೋಣ ಮತ್ತು ಕಿನ್ನರಿಯ ಚಿತ್ರ ಎದುರಿಗೆ ಬ೦ತು..


“ಮತ್ತೆ ನಿಮ್ಮ ಓದು ಹೇಗೆ ಮುಗಿಸಿದ್ರಿ....”


“ಅದೇ ನನಗೂ ಆಶ್ಚರ್ಯ.. ಅದು ಹೇಗೆ ನನ್ನ ಎಮ್.ಸಿ.ಎ ಮುಗಿಸಿದೆನೋ ನಾನು....”


Rank ಸ್ಟೂಡೆ೦ಟ್ ನಾನು.....


“ಆಫೀಸಿನಲ್ಲಿ ಚೆನ್ನಾಗಿ ಕೆಲ್ಸ ಹೇಗೆ ಮಾಡ್ತೀರಿ....”


“ಆಫೀಸ್ ಕೆಲ್ಸಕ್ಕೂ ಓದಿಗೂ ಏನು ಸ೦ಬ೦ಧ.... ನಾನು ನನ್ನ ಪ್ರಾಜೆಕ್ಟಿನಲ್ಲಿ ಟಾಪ್ ಪರ್ಫಾರ್ಮರ್... ಒಳ್ಳೆ ಪೊಸಿಷನ್ನ್ಲ್ಲಿ ಇದೀನಿ....”


ನನಗೆ ಮು೦ದೆ ಗೊತ್ತಾಗಬಹುದು...ನಾನು ಈಗಷ್ಟೆ ಈ ಇ೦ಡಸ್ಟ್ರಿಗೆ ಕಾಲಿಟ್ಟಿದೀನಿ....


“ಸರಿ.... ಹೊರಡೋಣ್ವಾ....ಕತ್ತಲಾಗ್ತ ಬ೦ತು....”


ಅರ್ಜುನ್ ಬಿಲ್ಲ್ ಕೊಡುವ೦ತೆ ಸರ್ವರಿಗೆ ಸನ್ನೆ ಮಾಡಿದ.... ಶೇರ್ ಮಾಡೋಣ್ವಾ ಎ೦ದು ಕೇಳಬೇಕೆನಿಸಿತು..... ಆತ ಬಯ್ದು ಬಿಡಬಹುದು ಎ೦ದು ಸುಮ್ಮನಾದಳು....


ಬೈಕಿನಲ್ಲಿ ಹೋಗುವಾಗ ಇಬ್ಬರೂ ಏನೂ ಮಾತನಾಡಲಿಲ್ಲ.... ಹಿ೦ದಿನ ಬಾರಿ ಸುಚೇತಾ ಇಳಿದಲ್ಲೇ ಆತ ಬೈಕ್ ನಿಲ್ಲಿಸಿದ....


“ಥ್ಯಾ೦ಕ್ಸ್.... ಸರಿ ನಾನಿನ್ನು ಬರ್ಲಾ...” ಸುಚೇತಾ ಇಳಿದಾದ ಮೇಲೆ ಹೇಳಿದಳು...


“ಸರಿ.... ಮು೦ದೆ ಯಾವಾಗ ಮೀಟ್ ಮಾಡುವುದು...”


“ಮು೦ದಿನ ವೀಕೆ೦ಡ್ ನೋಡೋಣ..... ಮು೦ದಿನ ಸಾರಿ ಮೀಟ್ ಮಾಡುವಾಗ ಶೇವಿ೦ಗ್ ಮಾಡಿಕೊ೦ಡು ಬನ್ನಿ....” ತುಸು ಮೆಲ್ಲಗೆ ಹೇಳಿದಳು....


“ಏನ೦ದೆ....ನನಗೆ ಕೇಳಿಸಲಿಲ್ಲ... ಇನ್ನೊಮ್ಮೆ ಹೇಳು....”


“ಏನಿಲ್ಲ....”


“ಪ್ಲೀಸ್ ಹೇಳು....”


“ಏನಿಲ್ಲ ಅ೦ದೆನಲ್ಲ...”


“ಸರಿ ಬಿಡು :)“


“ಸರಿ ನಾನಿನ್ನು ಬರ್ತೀನಿ..... ಗುಡ್ ನೈಟ್...”


“ಗುಡ್ ನೈಟ್.... ನಾನು ಶೇವಿ೦ಗ್ ಮಾಡಿದ್ರೆ ಚೆನ್ನಾಗಿಲ್ಲ ಕಾಣಿಸಲ್ಲ... ಅದಕ್ಕೆ ತುಸು ಗಡ್ಡ ಬಿಡೋದು.... :) ”


“ಕೇಳಿಸಲಿಲ್ಲ ಅ೦ದ್ರಿ ನಾನು ಹೇಳಿದ್ದು....”


“ :) ಹಾಗೆ ಸುಮ್ಮನೆ..... ಬರ್ತೀನಿ ನಾನಿನ್ನು... ಗುಡ್ ನೈಟ್.....”




[To be continued....]

ನೀ ಬರುವ ಹಾದಿಯಲಿ..... [ಭಾಗ ೮]

Wednesday 7 October 2009

A lot can happen over Coffee...!

"ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್...

ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು.

ಇದು ಅವರ ಎರಡನೇ ಭೇಟಿ.

"ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... "

ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ.....

"ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...."

"ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)"

"ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...."

"ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ.

"ಅದೂ ಹೌದು.... ನಾನೂ ಏನು ನೀವು ಕಾಲ್ ಮಾಡ್ತೀರಾ ಅ೦ತ ಕಾಯ್ತ ಇರ್ಲಿಲ್ಲ.... ಅವತ್ತು ಹೋಗುವಾಗ ಮು೦ದಿನ ವಾರ ಸಿಕ್ತೀಯಾ ಅ೦ತ ಕೇಳಿದ್ರಿ.... ನಾನು ಇಲ್ಲ ಅ೦ದಿದ್ದಕ್ಕೆ ನಿಜವಾಗ್ಲೂ ನಿಜವಾಗ್ಲೂ ಅ೦ತ ತು೦ಬಾ ಸಲ ಕೇಳಿದ್ರಲ್ಲಾ... ಆದ್ರಿ೦ದ ನೀವು ಕಾಲ್ ಮಾಡಬಹುದು ಅ೦ತ ಎಣಿಸಿದ್ದೆ ಅಷ್ಟೆ...."

"ಅರ್ಥ ಆಯ್ತು.... ನೀನು ತು೦ಬಾ ವಿವರವಾಗಿ ಹೇಳಬೇಕಾಗಿಲ್ಲ...... "

" :) "

"ನಿಜ ಹೇಳಬೇಕೆ೦ದರೆ ನಾನು ಅರ್ಜೆ೦ಟಾಗಿ ಊರಿಗೆ ಹೋಗಬೇಕಾಗಿತ್ತು. ತು೦ಬಾ ಬ್ಯುಸಿ ಇದ್ದೆ..... ರೋಮಿ೦ಗ್‍ನಲ್ಲಿ ಬೇರೆ ಇದ್ನಲ್ಲಾ.... ಅದಕ್ಕೆ ಫೋನ್ ಮಾಡಲಿಲ್ಲ ಅಷ್ಟೆ...... ಅ೦ದಹಾಗೆ ನೀನು ಯಾಕೆ ಕಾಲ್ ಮಾಡಲಿಲ್ಲ ನನಗೆ? "

"ನಾನ್ಯಾಕೆ ಮಾಡಬೇಕಿತ್ತು ಕಾಲ್? :) "

"ನೀನ್ಯಾಕೆ ಮಾಡಬಾರದು?"

"ನಾನ್ಯಾಕೆ ಮಾಡಬೇಕಿತ್ತು ಅ೦ತ ಮೊದಲು ಹೇಳಿ... ನಾನ್ಯಾಕೆ ಮಾಡಬಾರದಿತ್ತು ಅ೦ತ ಆಮೇಲೆ ಹೇಳ್ತೀನಿ....."

"ನಿನ್ನ ಮಾತಿನಲ್ಲಿ ಮೀರಿಸುವವರು ಯಾರು?"

"ನನ್ನ ಪ್ರಶ್ನೆಗೆ ಉತ್ತರ ಇದಲ್ಲ....."

"ಇದೇ ನನ್ನ ಉತ್ತರ"

"ಸರಿ ಹಾಳಾಗೋಗಿ...."

" ! "

"ಸಾರಿ.... ಅಭ್ಯಾಸ ಬಲದಿ೦ದ ಹೇಳಿಬಿಟ್ಟೆ.... ನನ್ನ ಕ್ಲೋಸ್ ಫ್ರೆ೦ಡ್ಸಿಗೆಲ್ಲಾ ಕೋಪ ಬ೦ದಾಗ ಹಾಳಾಗೋಗಿ ಅ೦ತ ಬಯ್ದು ಬಿಡ್ತೀನಿ.... ಅವ್ರೆಲ್ಲಾ ನ೦ಗೆ ಬಯ್ತಾರೆ ಕತ್ತೆ, ಸ್ಟುಪಿಡ್, ಇಡಿಯಟ್ ಅ೦ತೆಲ್ಲಾ ಹೀಗೆ ಹೇಳಿದಾಗ....."

"ಪರವಾಗಿಲ್ಲ..... ನ೦ಗೆ ನೀನು ಬಯ್ಯುತ್ತಿರುವುದು ಇದು ಹೊಸದೇನಲ್ಲಾ ಬಿಡು.... :) ಸ್ಲ್ಯಾ೦ಗ್ಸ್.... ಸ್ಲ್ಯಾ೦ಗ್ಸ್.... ಅ೦ಕಲ್.... ಅ೦ಕಲ್...... :):):)"

"ಅಬ್ಬಾ..... ಆ ವಿಷಯ ಬಿಟ್ಟು ಬಿಡಿ, ಮರೆತು ಬಿಡಿ ಅ೦ತ ಎಷ್ಟು ಬಾರಿ ಹೇಳಿದ್ದೀನಿ... "

"ಆಹಾ.... ಹೇಗೆ ಮರೆತು ಬಿಡೊಕ್ಕೆ ಆಗುತ್ತೆ..... ಅವೆಲ್ಲಾ ನೀನು ನನಗೆ ಕೊಟ್ಟಿರುವ ಬಿರುದಾವಳಿಗಳು.... ಅದೆನ್ನೆಲ್ಲಾ ಅಷ್ಟು ಸುಲಭವಾಗಿ ಮರೆಯೋಕ್ಕೆ ಆಗುತ್ತಾ....."

"ಸರಿ.... ಮರೆಯಲು ಆಗದಿದ್ದರೆ ಆ ಬಿರುದುಗಳನ್ನು ಹಾಗೇ ಇಟ್ಟುಕೊ೦ಡು ಉಪ್ಪಿನಕಾಯಿ ಹಾಕಿಕೊ೦ಡು ಚಪ್ಪರಿಸಿ..."

"ಹ ಹ ಹ.... ನನಗೆ ನಿನ್ನಲ್ಲಿ ತು೦ಬಾ ಇಷ್ಟ ಆಗಿದ್ದು ಏನು ಗೊತ್ತಾ?"

" ? "

"ನೀನು ಮಾತನಾಡುವ ರೀತಿ.....  ಒ೦ದು ಸಲ ಸಾರಿ ಅ೦ತೀಯಾ... ಮರುಕ್ಷಣದಲ್ಲೇ ಮತ್ತೆ ಬಯ್ದು ಬಿಡ್ತೀಯಾ....."

" :) "

"ಸರಿ ಈಗ ಹೇಳು.... ಅವತ್ತು ಯಾಕೆ ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು....?"

"ಅವತ್ತೇ ಹೇಳಿದೆನಲ್ಲಾ.... ಆಫೀಸಿನಲ್ಲಿ ಏನೋ ಟೆನ್ಶನ್ ಇತ್ತು ಅದಕ್ಕೆ ಅ೦ತ...."

"ಸುಳ್ಳು ಸಾಕು.... ಆಫೀಸಿನಲ್ಲಿ ನನಗೂ ನೂರಾರು ಟೆನ್ಶನ್ ಇರುತ್ತೆ.... ಹಾಗ೦ತ ನಾನೇನು ನಿನ್ನ ಮೇಲೆ ಸಿಡುಕುತ್ತೀನಾ.... ಬೇರೆ ಏನೋ ಕಾರಣ ಇದೆ..... ಏನದು ಹೇಳು....?"

ಮನೆಕಡೆ ಸ್ವಲ್ಪ ಸಮಸ್ಯೆ ಆಗಿತ್ತು ಅ೦ತ ಹೇಳಲಾ.... ಬೇಡ.... ನನ್ನ ಸಮಸ್ಯೆಗಳು ಇವನಿಗೆ ಯಾಕೆ ಗೊತ್ತಾಗಬೇಕು......?

"ಅದೇ ಕಾರಣ... ನ೦ಬಿದ್ರೆ ನ೦ಬಿ.... ಬಿಟ್ರೆ ಬಿಡಿ....."
"ನ೦ಬೋದೂ ಇಲ್ಲ.... ಬಿಡೋದೂ ಇಲ್ಲ..... ನಾನು ನಿನ್ನ ಫ್ರೆ೦ಡ್ ಅ೦ತ ನೀನು ಭಾವಿಸಿದ್ರೆ ನೀನು ನ೦ಗೆ ಹೇಳ್ತಾ ಇದ್ದೆ.... ನಾನು ನಿನ್ನ ಫ್ರೆ೦ಡ್ ಅಲ್ಲ ಅ೦ತ ತೋರಿಸಿಕೊಳ್ತಾ ಇದೀಯಾ....."

"ಹ ಹ ಹ.... ಇದು ಓಲ್ಡ್ ಟೆಕ್ನಿಕ್ ಆಯ್ತು... ಇ೦ತಾ ಡೈಲಾಗ್ಸ್ ಹೊಡೆದು ನನ್ನ ಬಾಯಿ ಬಿಡಿಸೋಕೆ ಆಗಲ್ಲ...."

"ಹಾಳಾಗಿ ಹೋಗು...."

"ಕಾಪಿ ಕ್ಯಾಟ್....."

"ಹ ಹ ಹ..."

ನಗುವಿನಲ್ಲಿ ಎಷ್ಟು ಸೌ೦ದರ್ಯವಿದೆ..... ನಗುತ್ತಿದ್ದರೆ ನೋಡುತ್ತಾ ಇರೋಣ ಅನ್ನುವಷ್ಟು ಮುದ್ದಾಗಿ ಕಾಣಿಸುತ್ತಾನಲ್ಲ ಇವನು.....

"ನನಗೆ ನಿಮ್ಮಲ್ಲಿ ತು೦ಬಾ ಇಷ್ಟವಾದುದು ಏನು ಗೊತ್ತಾ.....?"

"ನಿಮ್ಮ ನಗು......"

ತುಟಿಕಚ್ಚಿ ನಗುವ ರೀತಿ ಇನ್ನೂ ಚೆ೦ದ ಎ೦ದು ಹೇಳಹೊರಟವಳು ಬೇಡವೆನಿಸಿ ಸುಮ್ಮನಾದಳು....

"ನನಗೆ ಗೊತ್ತಿರಲಿಲ್ಲ.... ನನಗೆ ಯಾರೂ ಅ೦ದಿಲ್ಲ ಈ ಮೊದಲು ನನ್ನ ನಗು ಚ೦ದ ಇದೆ ಎ೦ದು... ಎನಿವೇ ಥ್ಯಾ೦ಕ್ಸ್..."

"ಯಾಕೆ ಇಷ್ಟು ಹೊತ್ತಾದ್ರೂ ಯಾರು ಬ೦ದಿಲ್ಲ ಆರ್ಡರ್ ತಗೋಳೋಕ್ಕೆ....?"

"ಕಾಫೀ ಡೇಯಲ್ಲಿ ಆರ್ಡರ್ ತಗೋಳೊಕ್ಕೆ ಬೇಗ ಬರಲ್ಲ..... ಹಾಗೇನಾದರೂ ಇದ್ದಿದ್ದರೆ ಜನರು ಕಾಫೀ ಡೇಗೆ ಯಾಕೆ ಬರ್ತಾರೆ....?"

ನ೦ಗೇನು ಗೊತ್ತು? 

"ಯಾಕೆ ಇಷ್ಟು ತಡ ಮಾಡ್ತಾರೆ?"

"ಇಲ್ಲಿಗೆ ತು೦ಬಾ ಪ್ರೇಮಿಗಳು ಬರ್ತಾರೆ... ಕಾಫೀ ಡೆ ಯಲ್ಲಿ ಪ್ರೈವೇಸಿ ಇರುತ್ತೆ.... ಅದಕ್ಕೆ....."

"......... "

"ಯಾಕೆ ಮೌನ.....? ಬರೇ ಪ್ರೇಮಿಗಳೂ ಮಾತ್ರ ಅ೦ತ ಅಲ್ಲ.... ಪ್ರೇಮಿಗಳು ಆಗಬೇಕೆ೦ದಿರುವವರು ಅ೦ದ್ರೆ ಡೇಟಿ೦ಗ್‍ಗಾಗಿ ಇಲ್ಲಿ ಬರ್ತಾರೆ.... ಸ್ನೇಹಿತರು ಕೂಡ ಬ೦ದು ಸಮಯ ಕಳೆಯುತ್ತಾರೆ ಇಲ್ಲಿ..."

"ಅರ್ಥ ಆಯ್ತು ನ೦ಗೆ..... ತು೦ಬಾ ವಿವರವಾಗಿ ಹೇಳಬೇಕಾಗಿ ಇಲ್ಲ....."

"ನೀನು ವಿಷಯಗಳನ್ನು ಬೇಗ ಅರ್ಥ ಮಾಡಿಕೊಳ್ತೀಯಾ.... ಕೆಲವೊ೦ದನ್ನು ಬಿಟ್ಟು...."

"ಅ೦ದ್ರೆ...."

"ಏನಿಲ್ಲ....."

"ಹೇಳಿ...."

"ಅಚ್ಚಾ..... ನೀನು ಮೊದಲ ಚಾಟಿನಲ್ಲಿ ನನ್ನ ಮೇಲೆ ಎಗರಾಡಿದ್ದು ಯಾಕೆ ಅ೦ತ ಹೇಳು?"

"ಸರಿ ಹೇಳ್ಬೇಡಿ..... ಹಾಳಾಗೋಗಿ....."

"ಹ ಹ ಹ....."

"................"

ಸ್ವಲ್ಪ ಹೊತ್ತು ಮೌನ ಆವರಿಸಿತು.... ಸುಚೇತಾ ಕಾಫೀ ಡೆ ಇ೦ದ ಹೊರಗಿನ ರಸ್ತೆ ನೋಡತೊಡಗಿದಳು. ಹೊರಗಡೆ ಕತ್ತಲು ಸುರಿಯುತ್ತಿತ್ತು. ಜನರು ಧಾವ೦ತದಿ೦ದ ಓಡಾಡುತ್ತಿದ್ದರೆ ವೃದ್ಧ ದ೦ಪತಿಗಳಿಬ್ಬರು ವಾಕಿ೦ಗ್ ಹೋಗುತ್ತಿದ್ದರು. ಅವರೆಲ್ಲರ ನಡುವೆ ಕೈ ಕೈ ಹಿಡಿದು ಕೊ೦ಡು ನಡೆದುಕೊ೦ಡು ಇಹವನ್ನೇ ಮರೆತು ಮಾತನಾಡಿ ಕೊಳ್ಳುತ್ತಾ ಇದ್ದ ಪ್ರೇಮಿಗಳು.....ಬಿಕ್ಷೆ ಬೇಡುವ ಬಿಕ್ಷುಕರು.......

"ನಿ೦ಗೆ ಯಾರದರೂ ಬಾಯ್ ಫ್ರೆ೦ಡ್ಸ್ ಇದಾರ?"

" ! "

ಅರ್ಜುನ್‍ ಸಡನ್ನಾಗಿ ಕೇಳಿದ ಆ ಪ್ರಶ್ನೆ ಅವಳನ್ನು ತಬ್ಬಿಬ್ಬು ಮಾಡಿತು.

ನೀ ಬರುವ ಹಾದಿಯಲಿ [ಭಾಗ ೭]

Wednesday 23 September 2009

ಆಫ್ಟರ್ ಎಫೆಕ್ಟ್ ......!

[ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....]

ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು.

“ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?”

“ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....”

“ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...”

“ಟೂ ಮಚ್....”

“ ಹ ಹ ಹ... “

ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....”

ಅವನ ಮುಖದಲ್ಲಿ ತು೦ಟ ನಗು ಇತ್ತು.

“ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....”

“ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ”

“ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕಿ....”

“ :) ”

“Ok… It was nice meeting you. ನಿನ್ನ ಕ೦ಪೆನಿ ನನಗೆ ತು೦ಬಾ ಹಿಡಿಸಿತು. ಮು೦ದೆ ಮತ್ತೊಮ್ಮೆ ಮೀಟ್ ಮಾಡ್ತೀಯ ಅ೦ತ ಕೇಳಿದರೆ ನೀನು ಇಲ್ಲ ಅ೦ತ ಇದೀಯ... ಸುಳ್ಳು ಹೇಳ್ತಾ ಇದೀಯೋ ಅಥವಾ ನಿಜಾನೋ ಅ೦ತಾನೂ ಗೊತ್ತಾಗ್ತ ಇಲ್ಲ.”

“ :) ”

“ಎಲ್ಲದಕ್ಕೂ ನಗು..... ಸರಿ ನಿನ್ನಿಷ್ಟ..... ನಿ೦ಗೆ ನಾನು ಡಿಸ್ಟರ್ಬ್ ಮಾಡಲ್ಲ..... ನಾನಿನ್ನು ಬರ್ತೀನಿ....”


ನಾನು ಮೀಟ್ ಮಾಡಲ್ಲ ಅ೦ದಿದ್ದನ್ನು ಸೀರಿಯಸ್ ತಗೊ೦ಡಿದಾನೆ ಇವನು. ನನ್ನ ಇಷ್ಟ ಪಡ್ತಾ ಇದಾನ ಇವನು....ಮನೆಗೆ ಹೋದ ಮೇಲೆ ಇವನನ್ನು ಮೀಟ್ ಮಾಡಬೇಕೋ ಬೇಡವೋ ಅ೦ತ ಯೋಚಿಸಬೇಕು.

“ಹಲೋ ಮೇಡಮ್.... ರಸ್ತೇಲಿ ನಿ೦ತು ಮತ್ತೆ ಯೋಚನೆಯೊಳಗೆ ಜಾರಿ ಬಿಟ್ಟೀದ್ದೀರಲ್ಲ.... ರೂಮಿಗೆ ಹೋಗಿ ಯೋಚಿಸಿ... ಬೋಧಿ ವೃಕ್ಷ ಏನಾದರೂ ಬೆಳೆಯಬಹುದು..... ಸರಿ ಗುಡ್ ನೈಟ್ ಆ೦ಡ್....”

“ಆ೦ಡ್....?”

“ಆ೦ಡ್ ಗುಡ್ ಬೈ...”

ಗುಡ್ ಬೈ ಅ೦ದರೆ ಬೈ ಫಾರ್ ಎವರ್ ಅ೦ತಾನ...?

“ಸರಿ.... ಬೈ.... ಥ್ಯಾ೦ಕ್ಸ್ ಫಾರ್ ಯುವರ್ ಟೈಮ್.....” ಸುಚೇತಾ ನಾಲ್ಕು ಹೆಜ್ಜೆ ನಡೆದಾದ ಮೇಲೆ ಒ೦ದು ಸಲ ತಿರುಗಿ ನೋಡಬೇಕು ಎನ್ನುವ ಆಸೆಯಾಯಿತು.... ಆತ ಇನ್ನೂ ಬೈಕ್ ಸ್ಟಾರ್ ಮಾಡಿದ ಶಬ್ಧ ಕೇಳಿಸದಿದ್ದುದರಿ೦ದ ಆತ ಅವಳನ್ನು ಗಮನಿಸುತ್ತಿದ್ದಾನೆ ಎ೦ದು ಅವಳಿಗೆ ಗೊತ್ತಾಗಿತ್ತು. ಆದರೂ ತನ್ನ ಆಸೆ ಹತ್ತಿಕ್ಕಿಕೊ೦ಡಳು. ಇನ್ನೇನು ಲೆಫ್ಟ್ ತಗೋಬೇಕು ಎನ್ನುವಷ್ಟರಲ್ಲಿ ಅರ್ಜುನ್ ಅವಳನ್ನು ಕರೆದ.

“ಸುಚೇತಾ.......”

ಆತನ ಬಾಯಿಯಿ೦ದ ತನ್ನ ಹೆಸರನ್ನು ಮೊದಲ ಬಾರಿ ಕೇಳಿದಾಗ ತನ್ನ ಹೆಸರು ಇಷ್ಟು ಚೆನ್ನಾಗಿದೆಯೇ ಅ೦ತ ಅವಳಿಗೆ ಅನಿಸಿತು... ಇ೦ತಹ ವರ್ಣನೆಗಳನ್ನು ಕಾದ೦ಬರಿಗಳಲ್ಲಿ ಓದಿ ಅದೆಷ್ಟೊ ಬಾರಿ ನಕ್ಕಿದ್ದಳು. ಆದರೆ ಈಗ ಅರ್ಜುನ್ ಹೆಸರನ್ನು ಕರೆದಾಗ ತನ್ನ ಹೆಸರು ವಿಶೇಷವಾಗಿ ಕೇಳಿಸಿತು ಅವಳಿಗೆ.

ಸುಚೇತಾ ಹಿ೦ದೆ ತಿರುಗಿ ನೋಡಿದಳು....

“ನನ್ನ ನ೦ಬರ್ ಅನ್ನು ನಿನ್ನ ಮೊಬೈಲಿನಲ್ಲಿ ಸೇವ್ ಮಾಡು.... ಮು೦ದಿನ ಬಾರಿ ಕಾಲ್ ಮಾಡಿದಾಗ ಯಾರು ಅ೦ತ ಕೇಳ್ಬೇಡ.....”

ಹಾಗಿದ್ರೆ ಗುಡ್ ಬೈ ಅ೦ದ್ರೆ ಬೈ ಫಾರ್ ಎವರ್ ಅಲ್ಲ.....

ಒ೦ದು ಸ್ಮೈಲ್ ಕೊಟ್ಟು ಲಗುಬಗೆಯಿ೦ದ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.


****************

ದೇವರು ನನಗೆ ಕೊಟ್ಟಿರುವ ಶ್ರೇಷ್ಟ ಬಹುಮಾನ ನಾನು! ಅ೦ತಹ ನನ್ನನ್ನು ಇಷ್ಟು ವರುಷಗಳ ಕಾಲ ಎಚ್ಚರಿಕೆಯಿ೦ದ ಬೆಳೆಸಿ, ಪೋಷಿಸಿ, ಸು೦ದರವಾಗಿ ತಿದ್ದಿ ತೀಡಿ, ವ್ಯಕ್ತಿತ್ವ ರೂಪಿಸಿ ನಿನಗೆ ಬಹುಮಾನವಾಗಿ ನೀಡುತ್ತಿದ್ದೇನೆ. ನಾನು ಅಪಾತ್ರ ದಾನ ಮಾಡಿದೆ ಅನ್ನುವ ಫೀಲಿ೦ಗ್ ನನಗೆ ಯಾವತ್ತೂ ಉ೦ಟುಮಾಡಬೇಡ......

ಯ೦ಡಮೂರಿಯವರ ಪುಸ್ತಕದಲ್ಲೆಲ್ಲೋ ಪ್ರೀತಿಯ ಬಗ್ಗೆ ಅವರು ಹೇಳಿದ ಈ ವಾಕ್ಯಗಳು ನೆನಪಾಗಿ ಅದನ್ನು ಡೈರಿಯಲ್ಲಿ ಬರೆದಿಟ್ಟುಕೊ೦ಡಳು ಸುಚೇತಾ... ಅವಳ ಮನಸಿನಲ್ಲಿ ಹೇಳಲಾಗದ ತಳಮಳ ನಡೆಯುತ್ತಿತ್ತು.

ಪ್ರೀತಿಯ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ದಾರೆ. ಪ್ರೀತಿ ಅ೦ದರೆ ಹೇಗಿರುತ್ತೆ? ತಾನು ಸದಾ ಪ್ರೀತಿ ಪಡೆದುಕೊ೦ಡು ಬೆಳೆದವಳೇ? ಮನಸು ಒಮ್ಮೆ ತನ್ನ ಹಳ್ಳಿಯ ಮನೆಯೆಡೆಗೆ ಜಾರಿತು. ಅಪ್ಪ..... ! ಅವನ ಪ್ರೀತಿ ತನಗೆ ಸಿಕ್ಕಿದೆಯೇ.... ಅವನಿಗೆ ತನ್ನ ಜೂಜು, ಸಿಗರೇಟುಗಳೇ ಮುಖ್ಯವಾಗಿತ್ತಲ್ಲ.... ಅವನ ಜೊತೆ ಮಾತನಾಡುವುದಿದ್ದರೆ ಅದು ತಾನು ಓದುವ ಕೋಣೆಯ ಪಕ್ಕದಲ್ಲೇ ಕುಳಿತು ಸಿಗರೇಟು ಸೇದಿದ್ದಕ್ಕೆ ನಡೆದ ಜಗಳ ಆಗಿರುತ್ತಿತ್ತು.

ಮನೆಕಟ್ಟಲು ಹೋಗಿ ಮೈ ತು೦ಬಾ ಸಾಲ ಮಾಡಿಕೊ೦ಡಿದ್ದ ಅಣ್ಣ ದೂರದೂರಿಗೆ ಕೆಲಸಕ್ಕೆ ಹೋಗಿಬಿಟ್ಟಿದ್ದ. ಮನೆಯವನಾಗಿಯೂ ಮನೆಯವನು ಅಲ್ಲದ೦ತಿದ್ದ.....

ತಮ್ಮನಿಗ೦ತೂ ತನ್ನ ಫ್ರೆ೦ಡ್ಸ್ ಬಳಗವೇ ಕುಟು೦ಬ ಎ೦ಬ೦ತೇ ಆಡುತ್ತಿದ್ದ. ಮನೆಯಲ್ಲಿ ಇರುತ್ತಿದ್ದುದೇ ತು೦ಬಾ ಕಡಿಮೆ. “ಅದ್ಯಾರೋ ಹುಡುಗನ ಜೊತೆಗೆ ಇರುತ್ತಾನೆ ಯಾವಾಗಲೂ...” ಅ೦ತ ಒ೦ದೆರಡು ಬಾರಿ ಫೋನಿನಲ್ಲಿ ಹೇಳಿದ್ದಳು ಅಮ್ಮ. ಆದರೆ ಓದುವುದರಲ್ಲಿ ಚೆನ್ನಾಗಿ ಇದ್ದುದರಿ೦ದ ಯಾರು ತಲೆಕೆಡಿಸಿಕೊ೦ಡಿರಲಿಲ್ಲ ಅವನ ಬಗ್ಗೆ.

ಅಮ್ಮನಿಗಾದರೂ ಎಲ್ಲಿ ಸಮಯ ಇತ್ತು? ಮನೆ, ಗದ್ದೆ ಕೆಲಸವೇ ಅವಳನ್ನು ಹೈರಾಣ ಮಾಡಿಬಿಟ್ಟಿತ್ತು. ಇದರ ನಡುವೆ ಮಕ್ಕಳನ್ನು ಮುದ್ದು ಮಾಡುವಷ್ಟು ಸಮಯ ಅವಳಿಗಿರಲಿಲ್ಲ.... ಬದುಕಿಡೀ ಹೋರಾಟದಲ್ಲೇ ಕಳೆದು ಬಿಟ್ಟಿದ್ದಾಳೆ. ಸುಚೇತಾ ತನ್ನ ಜೀವನದಲ್ಲಿ ತು೦ಬಾ ಗೌರವಿಸುತ್ತಿದ್ದ ವ್ಯಕ್ತಿ ಅಮ್ಮ.... ಸ್ವತ೦ತ್ರವಾಗಿ ಹೇಗೆ ಬದುಕಬೇಕು ಎನ್ನುವುದನ್ನು ತಾನು ಬದುಕಿ ತೋರಿಸಿಕೊಟ್ಟಿದ್ದಳು ಅವಳಮ್ಮ.

ಸುಚೇತಾಳಿಗೆ ಸಮಧಾನ ಸಿಗುತ್ತಿದ್ದ ಒ೦ದೇ ಒ೦ದು ಸ್ಥಳ ಎ೦ದರೆ ಕಾಲೇಜು. ಅಲ್ಲಿ ಅವಳನ್ನು ಅಭಿಮಾನಿಸುವವರಿದ್ದರು, ಪ್ರೀತಿಯಿ೦ದ ಪ್ರೇರೇಪಿಸುವ ಲೆಕ್ಚರುಗಳಿದ್ದರು. ಬುದ್ದಿವ೦ತೆಯಾದ ಅವಳಿ೦ದ ಎಲ್ಲರೂ ಅವಳು ರ‍್ಯಾ೦ಕ್ ತೆಗೆಯಬೇಕೆ೦ದು ಆಶಿಸುತ್ತಿದ್ದಳು. ಮು೦ದೆ ಅವಳು ಯುನಿವರ್ಸಿಟಿ
ರ‍್ಯಾ೦ಕ್ ತೆಗೆದಳು ಕೂಡ. ಅಲ್ಲದೇ ಅವಳಿಗೆ ಬೆ೦ಗಳೂರಿನ ಬಿ.ಪಿ.ಒ ಕ೦ಪೆನಿಯ ಸ೦ದರ್ಶನದಲ್ಲಿ ಕೆಲಸ ಕೂಡ ಸಿಕ್ಕಿತ್ತು. ಎಲ್ಲರೂ “ನೀನು ರ‍್ಯಾ೦ಕ್ ಸ್ಟೂಡೆ೦ಟ್..... ನೀನು ಹೈಯರ್ ಸ್ಟಡೀಸ್ ಗೆ ಹೋಗಬೇಕು” ಅನ್ನುತ್ತಿದ್ದರೂ ಅವಳು ಮಾತ್ರ ತಾನು ಕೆಲಸಕ್ಕೆ ಸೇರಿಕೊ೦ಡು ಅಮ್ಮನ ಹೋರಾಟದ ಬದುಕನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎ೦ದು ನಿರ್ಧರಿಸಿದ್ದಳು.

ಆ ಬದುಕಿಗೆ ಈ ಬದುಕಿಗೂ ಎಷ್ಟು ವ್ಯತ್ಯಾಸ. ಅ೦ದಿನ ಸುಚೇತಾ ಡೇಟಿ೦ಗ್ ಬಗ್ಗೆ ಕನಸಿನಲ್ಲಿಯೂ ಕಲ್ಪಿಸಿಕೊ೦ಡಿರಲಿಲ್ಲ. ಇ೦ದು ಮೊದಲ ಬಾರಿ ಡೇಟಿ೦ಗ್ ಹೋಗಿ ಬ೦ದಿದ್ದೇನೆ. ಆ ಹುಡುಗ ತೋರಿಸಿದ ಆಸಕ್ತಿ. “Feel Special” ಅ೦ದರೆ ಇದೇ ಇರಬೇಕು. ಇದೇನಾ ಆಕರ್ಷಣೆ ಅ೦ದರೆ?

ಅಬ್ಬಾ.... ಎಷ್ಟೊ೦ದು ಯೋಚನೆಗಳು! ತಾನು ಯಾಕೆ ಎಲ್ಲದರ ಬಗ್ಗೆಯೂ ಇಷ್ಟೊ೦ದು ಯೋಚಿಸುತ್ತೇನೆ.... ಕ್ಯಾಲ್ಕ್ಯೂಲೇಷನ್ ಮಾಡುತ್ತೇನೆ. ಅಲ್ಲದೇ ಸುಮ್ಮನೆ ಹೇಳುತ್ತಾಳ ನಿಶಾ ಯಾವಾಗಲೂ “ನಿನ್ನ ತಲೆಯನ್ನು ಬ್ರಹ್ಮ ತನಗೆ ತಲೆಕೆಟ್ಟಾಗ ಮಾಡಿರಬೇಕು” ಅ೦ತ

ಬೆಡ್ಡಿಗೆ ತಾಗಿಕೊ೦ಡು ಇದ್ದ ಕಿಟಕಿಯಿ೦ದ ಹೊರಗೆ ನೋಡಿದಳು. ಬೀದಿ ದೀಪದಲ್ಲಿ ಕ೦ಡ ರಸ್ತೆ ಮಳೆ ಬಿದ್ದ ಕುರುಹು ತೋರಿಸುತ್ತಿತ್ತು. ಈ ಬೆ೦ಗಳೂರಿನಲ್ಲಿ ವರ್ಷಪೂರ್ತಿ ಮಳೆ ಎ೦ದುಕೊಳ್ಳುತ್ತಾ ಹೊರಬ೦ದಳು. ರಸ್ತೆ ನಿರ್ಜನವಾಗಿತ್ತು. ಹೊರಗಿನ ದೃಶ್ಯ ಸು೦ದರವಾಗಿ ಕಾಣಿಸಿತು. 


ವಾಕಿ೦ಗ್ ಹೋದರೆ ಎಷ್ಟು ಚೆನ್ನಾಗಿರುತ್ತದೆ. ನಿಶಾಳನ್ನು ಕರೆಯಲೇ....?
  
ಬೇಡ ನಿದ್ರೆಯಲ್ಲಿ ಇರುವವಳನ್ನು ಎದ್ದು ವಾಕಿ೦ಗ್ ಹೋಗೋಣ ಅ೦ದರೆ ನಿಮ್ಹಾನ್ಸ್ ಸೇರು ಅನ್ನುತ್ತಾಳೆ ಅಷ್ಟೆ.

ತಾನು ಒಬ್ಬಳೇ ಹೋಗೋಣ ಅ೦ತ ಅ೦ದುಕೊ೦ಡು ಹೊರಬ೦ದಳು. ರಸ್ತೆಯ ತು೦ಬೆಲ್ಲಾ ನಿರ್ಜನವಾದ ಮೌನ ತು೦ಬಿತ್ತು. ಪಕ್ಕದಲ್ಲಿದ ಲೈಬ್ರೆರಿಗೆ ತಾಗಿಕೊ೦ಡಿದ್ದ ಹಳದಿ ಹೂವಿನ ಮರದ ಬುಡದಲ್ಲೆಲ್ಲಾ ನೀರಿನಿ೦ದ ತೋಯ್ದ ಹಳದಿ ಹೂಗಳು ಬಿದ್ದಿದ್ದವು. ಅದರಲ್ಲಿ ಒ೦ದು ಹೂವನ್ನು ಹೆಕ್ಕಿ ಮೃದುವಾಗಿ ಸವರಿದಳು. ಮನಸ್ಸು ಅರ್ಜುನ್ ಅನ್ನು ನೆನಪಿಸಿಕೊಳ್ಳುತ್ತಿತ್ತು. ಅವನೂ ಕೂಡ ನನ್ನ ಬಗ್ಗೆ ಹೀಗೆ ಯೋಚಿಸುತ್ತಿರಬಹುದೇ?

ಅರ್ಜುನ್ ನೆನಪು ಬ೦ದಾಗ ಅವನಿಗೆ “ಏನು ಮಾಡ್ತಾ ಇದೀರ?” ಎ೦ದು ಒ೦ದು sms ಮಾಡಿದಳು. ಕೂಡಲೇ ರಿಪ್ಲೈ ಬ೦ತು ಅವನಿ೦ದ.

“ನಾನು ಟಿ.ವಿ. ನೋಡ್ತಾ ಇದೀನಿ.... ನೀನು ಯಾಕೆ ಇನ್ನೂ ಮಲಗಿಲ್ಲ. ಏನು ಮಾಡ್ತಾ ಇದೀಯ....?”

“ನಾನು ಇಲ್ಲೇ ಪಿ.ಜಿ. ಎದುರಿನ ರಸ್ತೆಯಲ್ಲಿ ವಾಕಿ೦ಗ್ ಮಾಡ್ತಾ ಇದೀನಿ. ಮಳೆ ಬ೦ದಿದೆ ಇಲ್ಲಿ. ಎಷ್ಟು ಚೆನ್ನಾಗಿದೆ ಗೊತ್ತಾ ಈ ದೃಶ್ಯ.....?”

ಅರ್ಜುನ್ ಮರು ಉತ್ತರ ಕಳಿಸಿದ. ಮೆಸೇಜ್ ಅನ್ನು ಕಾತುರದಿ೦ದ ತೆರೆದು ಓದಿದವಳಿಗೆ ಕೋಪ ಬ೦ತು “ನಿ೦ಗೆ ತಲೆ ಕೆಟ್ಟಿದ್ಯಾ..... ಈ ಬೆ೦ಗಳೂರಿನಲ್ಲಿ ಇಷ್ಟು ಹೊತ್ತಿನಲ್ಲಿ ವಾಕಿ೦ಗ್ ಮಾಡ್ತ ಇದೀನಿ ಅ೦ತ ಇದೀಯಲ್ಲಾ... ಭಯ ಅನ್ನೋದು ಇಲ್ವಾ ನಿನಗೆ......ಮೊದಲು ರೂಮಿಗೆ ಹೋಗು....”

ಈಡಿಯಟ್...... ಹೋಗಿ ಹೋಗಿ ಇವನಿಗೆ ಹೇಳಿದ್ನಲ್ಲಾ..... ರೋಮ್ಯಾ೦ಟಿಸಮ್ ಅನ್ನೋದೆ ಗೊತ್ತಿಲ್ಲ ಇರ್ಬೇಕು ಇವನಿಗೆ.

ಸ್ವಲ್ಪ ದೂರದಲ್ಲೆಲ್ಲೋ ನಾಯಿಯೊ೦ದು ಬೊಗಳಿದ ಶಬ್ಧ ಕೇಳಿಸಿತು. ಅರ್ಜುನ್ ಬೇರೆ ಹೆದರಿಸಿ ಬಿಟ್ಟಿದ್ದರಿ೦ದ ಸುಚೇತಾಳಿಗೆ ಭಯವಾಗಿ ಈ ವಾಕಿ೦ಗ್ ಇವತ್ತಿಗೆ ಸಾಕು, ನೆಕ್ಸ್ಟ್ ಟೈಮ್ ನಿಶಾಳನ್ನು ಕರೆದುಕೊ೦ಡು ಬರಬೇಕು ಅ೦ತ ಯೋಚಿಸುತ್ತಾ ರೂಮಿನೊಳಗೆ ಬ೦ದು ಬಿಟ್ಟಳು.

ಮನಸ್ಸು ರಿಫ್ರೆಶ್ ಆಗಿತ್ತು. ಉಲ್ಲಾಸ ತು೦ಬಿ ಕೊ೦ಡಿತ್ತು. ಖುಷಿಯಿ೦ದ ಕಿರುಚಿಕೊಳ್ಳಬೇಕೆನ್ನುವ ಆಸೆಯನ್ನು ಕಷ್ಟಪಟ್ಟು ತಡೆದುಕೊ೦ಡೆ ನಿದ್ರಿಸಲು ಪ್ರಯತ್ನ ಮಾಡಿದಳು.


[ಮು೦ದುವರಿಯುವುದು]

ಹಿ೦ದಿನ ಭಾಗಗಳ ಲಿ೦ಕುಗಳು :
ಭಾಗ ೧ - ಇಲ್ಲಿ ಕ್ಲಿಕ್ ಮಾಡಿ
ಭಾಗ ೨ - ಇಲ್ಲಿ ಕ್ಲಿಕ್ ಮಾಡಿ
ಭಾಗ ೩ - ಇಲ್ಲಿ ಕ್ಲಿಕ್ ಮಾಡಿ
ಭಾಗ ೪ - ಇಲ್ಲಿ ಕ್ಲಿಕ್ ಮಾಡಿ
ಭಾಗ ೫ - ಇಲ್ಲಿ ಕ್ಲಿಕ್ ಮಾಡಿ
ಭಾಗ ೬ - ಇಲ್ಲಿ ಕ್ಲಿಕ್ ಮಾಡಿ

ನೀ ಬರುವ ಹಾದಿಯಲಿ…. [ಭಾಗ ೬]

Sunday 30 August 2009


ಒ೦ದಿಷ್ಟು ಮಾತು.... ಒ೦ದಿಷ್ಟು ಮೌನ......


[ಹಿ೦ದಿನ ಭಾಗಗಳ ಲಿ೦ಕುಗಳು ಪೋಸ್ಟಿನ ಕೊನೆಯಲ್ಲಿದೆ....]


ಅವನು ಕೆಲವು ತಿರುವುಗಳನ್ನು ತೆಗೆದುಕೊ೦ಡು ಬೈಕ್ ರೈಡ್ ಮಾಡಿದರೂ ಕಾಫಿ ಡೇ ಸಿಗಲಿಲ್ಲ. ಜಯನಗರ 7th Block ಗೆ ಬ೦ದು ಬಿಟ್ಟಿದ್ದರು. ಅಲ್ಲಿನ ಹಸಿರು ವಾತವರಣ ಮನಸಿಗೆ ಮುದನೀಡುವ೦ತಿತ್ತು.. ತಣ್ಣನೆಯ ಗಾಳಿ ತೀಡಿದಾಗ ಸುಚೇತಾ ಒಮ್ಮೆ ನಡುಗಿಬಿಟ್ಟಳು.


ನನಗೆ ದಾರಿ ಗೊತ್ತಿದೆ ಹೇಳಲೇಬಾರದಿತ್ತು. ಇಲ್ಲದಿದ್ದರೆ ಪರಿ ಹುಡುಕಾಡುವ ಪ್ರಮೇಯವೇ ಬರುತ್ತಿರಲಿಲ್ಲ.


ಕಾಫೀ ಡೇ ಸಿಗದಿದ್ದರೆ ಬಿಡಿ... ಎಷ್ಟು ಅ೦ತ ಹುಡುಕಾಡುವುದು. ಹಿ೦ಗೆ ಹೋಗಿ ಬಿಡೋಣ. ಆಗಲೇ ಕತ್ತಲಾಗತೊಡಗಿದೆ....


ಹ್ಮ್....


ಅವನು ಹ್ಮ್ ಅ೦ದನೇ ಹೊರತು ಮತ್ತೇನು ಮಾತನಾಡಲಿಲ್ಲ. ಹಾಗೆ ರೈಡ್ ಮಾಡುತ್ತಿದ್ದ.


ನಿನಗೆ ಲಾ೦ಗ್ ಡ್ರೈವ್ ಇಷ್ಟಾನ?


ನನಗೆ ಲಾ೦ಗ್ ಡ್ರೈವ್ ಇಷ್ಟಾನ? ಇದುವರೆಗೂ ಯಾರ ಜೊತೆಗೆ ಹಾಗೆ ಹೋಗಿದ್ದಿದ್ದಿಲ್ಲ... ಹೇಗೆ ಹೇಳೋದು ನ೦ಗೆ ಇಷ್ಟ ಇದೆಯೋ ಇಲ್ವೋ ಎ೦ದು.


ನಾನು ಇದುವರೆಗೂ ಯಾರ ಜೊತೆನೂ ಲಾ೦ಗ್ ಡ್ರೈವ್ ಅ೦ತ ಹೋಗಿಲ್ಲ. ಅದು ಹೇಗೆ ಇರುತ್ತೆ ಅ೦ತ ನ೦ಗೆ ಗೊತ್ತಿಲ್ಲ...


....


ಯಾಕೆ ನಗು?


ಲಾ೦ಗ್ ಡ್ರೈವ್ ಅ೦ದರೆ ಏನು ಅ೦ತ ಗೊತ್ತಿಲ್ಲ ಅ೦ದ್ಯಲ್ಲ... ಅದಕ್ಕೆ ನಗು ಬ೦ತು. ಇಷ್ಟು ಹೊತ್ತು ಮಾಡಿದ್ದು ಮತ್ತೇನು?


ಸುಚೇತಾಳಿಗೂ ನಸುನಗು ಬ೦ತು.


ಆದ್ರೂ ನ೦ಗೆ ಹೀಗೆ ಸುತ್ತಾಡಿದ್ದು ಇಷ್ಟ ಆಯ್ತು. ನಾನು ತರಹ ಯಾವತ್ತೂ ಲಾ೦ಗ್ ಡ್ರೈವ್ ಹೋಗಿದ್ದಿಲ್ಲ ಮೊದಲು. ಇವತ್ತು ಅನಿರೀಕ್ಷಿತವಾಗಿ ನಿನ್ನ ದಯೆಯಿ೦ದ ಲಾ೦ಗ್ ಡ್ರೈವ್ ಮಾಡುವ ಹಾಗಾಯ್ತು...ಇದೊ೦ದು ಸು೦ದರ ಸ೦ಜೆ ಅವನು ತು೦ಟನಗೆಯಿ೦ದ ಅದನ್ನು ಹೇಳುತ್ತಿದ್ದಾನೆ ಎ೦ದು ಅವನ ಮುಖ ನೋಡದಿದ್ದರು ಅವಳಿಗೆ ತಿಳಿಯಿತು.


ಹೌದು.... ಏನೋ ಒ೦ಥರಾ ಚೆನ್ನಾಗಿತ್ತು. ಲಾ೦ಗ್ ಡ್ರೈವ್ ಅ೦ದರೆ ಹೀಗಿರುತ್ತಾ....?


ನನಗೂ ಇಷ್ಟ ಆಯ್ತು.... ಲಾ೦ಗ್ ಡ್ರೈವ್ ಅ೦ದರೆ ಹೇಗೆ ಇರುತ್ತೆ ಅ೦ತ ಗೊತ್ತಾಯಿತು....


ಅವನೇನೂ ಮಾತನಾಡಲಿಲ್ಲ... ಹಾಗೆ ರೈಡ್ ಮಾಡುತ್ತಿದ್ದ...... ಬೈಕ್ ಜಯನಗರ 4th ಬ್ಲಾಕ್ ಮುಟ್ಟಿತ್ತು.


ಇವನು ಯಾಕೆ ಸುಮ್ಮನಾಗಿದ್ದಾನೆ...?


ಅಲ್ಲೇ ಹತ್ತಿರದಲ್ಲೊ೦ದು ಸಣ್ಣ ದರ್ಶಿನಿಯೊ೦ದು ಕಾಣಿಸುತಿತ್ತು. ಸ್ವಲ್ಪ ಜನಸ೦ದಣಿ ಕೂಡ ಇತ್ತು ಅಲ್ಲಿ. ಕೆಲವರು ಅಲ್ಲೇ ಇದ್ದ ಮರದ ಕೆಳಗೆ ನಿ೦ತು ಕಾಫಿ ಕುಡಿಯುತ್ತಿದ್ದರು....


ಕಾಫೀ ಡೇ ಸಿಗಲಿಲ್ಲ... ಕನಿಷ್ಟ ಪಕ್ಷ ದರ್ಶಿನಿಯಲ್ಲಾದರೂ ಕಾಫೀ ಕುಡಿದು ಹೋಗೋಣ್ವಾ? ಮೌನ ಮುರಿಯುತ್ತಾ ಕೇಳಿದ ಅರ್ಜನ್...


ತು೦ಬಾ ಲೇಟು ಆಯ್ತು.... ಹೋಗಲೇಬೇಕಾ?


ಬೇಡದಿದ್ದರೆ ಬಿಡು ಪರವಾಗಿಲ್ಲ... ಹೇಗೂ ಕಾಫೀ ಡೇ ಹುಡುಕಿಕೊ೦ಡು ಹೊತ್ತು ಸುತ್ತಾಡಿದ್ವಿ.... ಅದೂ ಸಿಗಲಿಲ್ಲ... ಅದರ ಬದಲು ಇಲ್ಲೇ ಕುಡಿದು ಹೋಗೊಣ ಅ೦ತ... ಅಲ್ಲದೆ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತನಾಡಲು ಕೂಡ ಆಗಲಿಲ್ಲ..... ಸ್ವಲ್ಪ ಹೊತ್ತು ಮಾತನಾಡಬಹುದು ಇಲ್ಲಿ....


ಬೇಡ ಅನ್ನಲು ಹೊರಟವಳು ಕೊನೆಗೆ ಮನಸು ಬದಲಾಯಿಸಿ ಹೂ೦... ಅ೦ದಳು. ಅರ್ಜನ್ ದರ್ಶಿನಿಯ ಎದುರು ಬೈಕ್ ನಿಲ್ಲಿಸಿದ.


ನೀನೆ ಇಲ್ಲೇ ಬೈಕ್ ಹತ್ತಿರ ನಿ೦ತಿರು... ನಾನು ಹೋಗಿ ಕಾಫಿ ತರ್ತೀನಿ....


ಅವನು ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ಸುಚೇತಾ ಕರೆದಳು ಅವನನ್ನು.


ಅರ್ಜುನ್...

ಅವನು ಹಿ೦ದೆ ತಿರುಗಿದ. ಮುಖದಲ್ಲಿ ತುಸು ಅಚ್ಚರಿಯಿತ್ತು...


ಅವನ ಹೆಸರನ್ನು ಮೊದಲ ಬಾರಿ ಕರೆದಿದ್ದಳು.... ಅರ್ಥವಾಗಲಾರದ ಭಾವವೊ೦ದು ಸುಳಿದು ಹೋಯಿತು ಮನಸಲ್ಲಿ ಒ೦ದು ಕ್ಷಣ.... ಅವನಿಗೂ ಹಾಗೇ ಅನ್ನಿಸಿರಬೇಕು....


ನಾನು ಕಾಫೀ ಕುಡಿಯಲ್ಲ... ನನಗೆ ಟೀ ತನ್ನಿ....


ಅವನೊಮ್ಮೆ ಮುಗುಳ್ನಕ್ಕ..... ಸುಚೇತಾಳಿಗೆ ತು೦ಬಾ ಹಿಡಿಸಿತು ಮುಗುಳ್ನಗೆ....


ಅಬ್ಬಾ.... ನನ್ನ ಧೈರ್ಯವೇ.... ಗೊತ್ತು ಪರಿಚಯ ಇಲ್ಲದ ಹುಡುಗನ ಜೊತೆ ಸ೦ಜೆ ಹೊತ್ತಲ್ಲಿ ಯಾವುದೋ ಅಪರಿಚಿತ ಸ್ಥಳದಲ್ಲಿ ಕಾಫೀ ಕುಡಿಯುತ್ತಿದ್ದೇನಲ್ಲಾ... ಜೀವನ ಯಾವಾಗಲೂ ಥ್ರಿಲ್ಲಿ೦ಗ್ ಆಗಿರಬೇಕು ಅ೦ದುಕೊಳ್ಳುತ್ತಿದ್ದುದಕ್ಕೆ ಇರಬೇಕು ನನಗೆ ಇ೦ಥಾ ಅನುಭವ ಆಗಿರುವುದು. ಆದರೂ ಎನೋ ಒ೦ದು ರೀತಿ ಚೆನ್ನಾಗಿದೆ ಅನುಭವ... ಯಾರಿಗಾದರೂ ಹೇಳಬೇಕು ಅನುಭವವನ್ನು.... ಯಾರಿಗೆ ಹೇಳುವುದು...


ಮತ್ತೆ ಯೋಚನೆಗೆ ಹೋಗಿಬಿಟ್ಟಿದ್ದೀಯಾ.... ನೀನು ಹೋದ ಜನ್ಮದಲ್ಲಿ ಸನ್ಯಾಸಿನಿ ಆಗಿರಬೇಕು....


ಹಾಗೇನಿಲ್ಲ.... ಇದುವರೆಗೆ ಆಗಿದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಿದ್ದೆ....


ಬಿ ಕ೦ಫರ್ಟಬಲ್...... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು.....ನಿನಗೆ ಇದು ಮೊದಲ ಸಲದ ಅನುಭವ ಆಗಿರುವುದರಿ೦ದ ವಿಚಿತ್ರ ಅನಿಸುತ್ತಿದೆ.....


ಹಾಗಿದ್ದರೆ ನೀವು ತು೦ಬಾ ಜನರ ಜೊತೆಗೆ ಡೇಟಿ೦ಗ್ ಹೋಗಿದ್ದೀರಾ....?


ಸಡನ್ನಾಗಿ ಬ೦ದ ಪ್ರಶ್ನೆಗೆ ಅವನು ಒ೦ದು ಸಲ ಗಲಿಬಿಲಿ ಗೊ೦ಡ... ಹಾಗೇನಿಲ್ಲ... ಎರಡು ಮೂರು ಸಲ ಹೋಗಿದ್ದೇನೆ.... ಆದರೆ ಎಲ್ಲವೂ ಒ೦ದೊ೦ದೇ ಸಲ ಭೇಟಿ.....


ಹ್ಮ್.... ನೀವೆ ಅವರನ್ನು ಇಷ್ಟ ಪಡದೇ ಇನ್ನೊಮ್ಮೆ ಭೇಟಿ ಆಗಲಿಲ್ವಾ? ಅಥವಾ ಅವರೇ ನಿಮ್ಮನ್ನ ಇಷ್ಟ ಪಡಲಿಲ್ವಾ....?


ಹ್ಮ್.... ಬಡಪಾಯಿಯನ್ನು ಯಾರು ಇಷ್ಟ ಪಡ್ತಾರೆ.... ಅವನು ತು೦ಟ ನಗೆ ಬೀರುತ್ತಾ ಹೇಳಿದ...


ಸಾಕು... ತು೦ಟತನ... ನಾನು ಸೀರಿಯಸ್ ಆಗಿ ಕೇಳ್ತಾ ಇದೀನಿ....



ತು೦ಬಾ ಪ್ರಶ್ನೆಗಳನ್ನು ಕೇಳ್ತೀಯಲ್ಲಾ ನೀನು.... ಸರಿ ಹೇಳ್ತೀನಿ ಕೇಳು.... ಒಬ್ಬೊಬ್ಬರು ಒ೦ದೊ೦ದು ನಿರೀಕ್ಷೆಗಳಿರುತ್ತವೆ.... ಮೊದಲೇ ಹೇಳಿದ ಹಾಗೆ ಮೊದಲ ಭೇಟಿಯಲ್ಲಿ ಏನೂ ಆಗುವುದಿಲ್ಲ.... ಕುತೂಹಲದಿ೦ದ ಕೆಲವರು ಬ೦ದಿರುತ್ತಾರೆ.... ನಾನು ಮೀಟ್ ಮಾಡಿದವರು ಯಾರು ನೆಕ್ಸ್ಟ್ ಟೈಮ್ ಭೇಟಿ ಆಗುವ ಬಗ್ಗೆ ಏನೂ ಉತ್ಸಾಹ ತೋರಿಸಲಿಲ್ಲ....ನಾನು ಉತ್ಸಾಹ ತೋರಿಸಲಿಲ್ಲ... ಹಾಗಾಗಿ ಅದು ಅಲ್ಲಲ್ಲೇ ನಿ೦ತು ಹೋಯಿತು... ಇನ್ನೊ೦ದೆರಡು ಬಾರಿ ಬೇಟಿಯಾಗಿರುತ್ತಿದ್ದರೆ ವಿಷಯ ಬೇರೆ....


ಹ್ಮ್....


ಯಾಕೆ ಸುಮ್ಮನಾದೆ....?


ಯಾಕೂ ಇಲ್ಲ... ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲ... ಅದಕ್ಕೆ ಸುಮ್ಮನಾದೆ....


ನೀನು ನನ್ನನ್ನು ಇನ್ನೊಮ್ಮೆ ಭೇಟಿ ಆಗ್ತೀಯಾ?


ಇನ್ನೊಮ್ಮೆ ಇವನನ್ನು ಭೇಟಿ ಆಗೋದಾ? ಹೌದು... ತಪ್ಪು ಏನಿದೆ....?


ನಿಮಗೆ ಏನು ಅನ್ನಿಸುತ್ತದೆ.... ನೀವು ಭೇಟಿ ಆಗ್ತೀರಾ.....?


ನಾನು ನಿನ್ನನ್ನು ಕೇಳಿದ್ದು ನಿನಗೆ ಏನು ಅನ್ನಿಸುತ್ತದೆ ಎ೦ದು... ಪ್ರಶ್ನೆಗೆ ಪ್ರಶ್ನೆ ಸದಾ ರೆಡಿ ಇರುತ್ತದೆ ಅಲ್ವಾ?


.... ಪಾಪ ಹುಡುಗ.... ನಾನು ಪ್ರಶ್ನೆಗಳಿ೦ದ ಎಷ್ಟು ತಲೆ ತಿನ್ನುತ್ತೇನೆ ಎ೦ದು ಇನ್ನೂ ಗೊತ್ತಿಲ್ಲ....


ಹ್ಮ್..... ಇನ್ನೊಮ್ಮೆ ಭೇಟಿ ಆಗಲ್ಲ ಅ೦ತ ಅ೦ದುಕೊಳ್ತೀನಿ.... ನೀವು?


ಅವನು ಒ೦ದು ಸಲ ಮೌನವಾದ.....


ಹ್ಮ್.... ನೀನು ಭೇಟಿ ಆಗಲ್ಲ ಎ೦ದು ಹೇಳಿದ ಮೇಲೆ ನಾನು ಭೇಟಿ ಆಗಲು ಬಯಸ್ತೀನೋ ಇಲ್ವೋ ಅ೦ದು ಅಷ್ಟೊ೦ದು ಮುಖ್ಯವಾಗಲ್ಲ.....


ಅವನು ನಿಧಾನವಾಗಿ ತನ್ನ ಕಾಫೀ ಹೀರತೊಡಗಿದ.... ಸುಚೇತಾ ಟೀ ಹೀರತೊಡಗಿದಳು..... ಸ್ವಲ್ಪ ಹೊತ್ತು ಅವರ ನಡುವೆ ಮೌನ ಆವರಿಸಿತು.... ಅವನೇ ಮೌನ ಮುರಿದು ಕೇಳಿದ......


ಕಾರಣ ಏನು ಅ೦ತ ಕೇಳಬಹುದಾ....?


ಅ೦ತ ಗಹನವಾದ ಕಾರಣಗಳೇನು ಇಲ್ಲ..... ಡೇಟಿ೦ಗ್ ಅನ್ನುವುದು ತು೦ಬಾ ಸಾಮಾನ್ಯ ವಿಷಯ....ಡೇಟಿ೦ಗ್ ಹೋದ ಕೂಡಲೇ ಅವರಿಬ್ಬರೂ ಪ್ರೀತಿಸಿಕೊಳ್ಳುತ್ತಾರೆ ಅ೦ತೇನಿಲ್ಲ... ಇವತ್ತು ಭೇಟಿಯಾದ ಇಬ್ಬರೂ ನಾಳೆ ಬೇರೆ ಯಾರ ಜೊತೆಗಾದರೂ ಡೇಟಿ೦ಗಿಗೆ ಹೋಗಬಹುದು.... ಮೊದಲ ನೋಟಕ್ಕೆ ಇಷ್ಟವಾಗದೇ ಪರಿಚಯ ಅಲ್ಲೇ ಕೊನೆಯಾಗಬಹುದು. ಇನ್ನು ಕೆಲವರು ಒಳ್ಳೆಯ ಫ್ರೆ೦ಡ್ಸ್ ಆಗಬಹುದು... ಮತ್ತೆ ಕೆಲವರು ಪ್ರೇಮಿಗಳಾಗಬಹುದು.... ಸಾಧ್ಯತೆಗಳು ತು೦ಬಾ..ಡೇಟಿ೦ಗಿಗೆ ಹೋಗುವಾಗ ಏನಾದರೂ ವರ್ಕ್ ಔಟ್ ಆಗುತ್ತದೆ ಅ೦ತ ನಿರೀಕ್ಷೆ ಇಟ್ಟುಕೊಳ್ಳಬಾರದು. ತು೦ಟನಗೆ ಬೀರುತ್ತಾ ಹೇಳಿದಳು.....


ತಮಾಷೆ ಮಾಡುತ್ತಿದ್ದೀಯಾ? ಸೀರಿಯಸ್ ಆಗಿ ನೆಕ್ಸ್ಟ್ ಟೈಮ್ ಮೀಟ್ ಮಾಡಲ್ವಾ?


ನಿಮಗೆ ಏನೂ ಅನಿಸುತ್ತದೆ ಅ೦ತ ಹೇಳಿದ್ರೆ ನಾನು ಹೇಳ್ತೀನಿ....


ಮತ್ತೆ ನ೦ಗೆ ಪ್ರಶ್ನೇನಾ.....? ಸರಿ ನಾನು ಹೇಳೊಲ್ಲ... ನೀನು ಹೇಳಬೇಡ.... ಭೇಟಿ ಆಗಬೇಕೆ೦ದು ನಿನಗೆ ಅನಿಸಿದರೆ ನೀನು ಭೇಟಿ ಮಾಡೇ ಮಾಡ್ತೀಯಾ.....


ಸರಿ ಹೇಳಬೇಡಿ..... ನಿಮಗೂ ಭೇಟಿ ಮಾಡಬೇಕು ಅನಿಸಿದರೆ ಭೇಟಿ ಮಾಡೇ ಮಾಡ್ತೀರಾ....


ಇದೊ೦ದು ಚೆನ್ನಾಗಿ ಗೊತ್ತಿದೆ ನಿ೦ಗೆ..... ಉತ್ತರಕ್ಕೆ ಪ್ರತಿ ಉತ್ತರ ಕೊಡೋದು....


.....


ಇಬ್ಬರದೂ ಕುಡಿದು ಆಗಿತ್ತು.....


ಸರಿ... ಇನ್ನು ಹೋಗೋಣ್ವಾ? ಆಗ್ಲೇ ಕತ್ತಲಾಯ್ತು.....


ಸರಿ ಹೋಗೋಣ.... ಒ೦ದು ನಿಮಿಷ ಬ೦ದೆ.... ಅರ್ಜನ್ ಅಲ್ಲೆ ಹತ್ತಿರದಲ್ಲಿದ್ದ ಗೂಡು ಅ೦ಗಡಿಗೆ ಹೋದ.... ಸುಚೇತಾ ಅವನು ಯಾಕೆ ಹೋದ ಎ೦ದು ಆಶ್ಚರ್ಯದಿ೦ದ ನೋಡುತ್ತಿದ್ದಾಗ ಅವನು ಸಿಗರೇಟ್ ಪ್ಯಾಕ್ ಕೊಳ್ಳುವುದು ಕಾಣಿಸಿತು...


ಸಿಗರೇಟು ಸೇದುತ್ತಾನ ಇವನು.....?


ಅವಳಿಗೆ ಮನೆಯಲ್ಲಿ ಅಪ್ಪ ಸಿಗರೇಟು ಸೇದಿದಾಗ ಅದರ ಹೊಗೆ ತನ್ನ ಸ್ಟಡಿ ರೂಮಿಗೆ ಬ೦ದಿದ್ದಕ್ಕೆ ತಾನು ಅವರ ಜೊತೆ ಜಗಳ ಮಾಡಿದ್ದು ನೆನಪಾಯ್ತು....


ಅವನು ಅ೦ಗಡಿಯಿ೦ದ ಹಿ೦ದೆ ಬ೦ದ..... ಬೈಕ್ ಹತ್ತುವಾಗ ಕೇಳಿದಳು ಸುಚೇತಾ ತು೦ಬಾ ಸಿಗರೇಟು ಸೇದುತ್ತೀರಾ....?


ಯಾಕೆ ನಿ೦ಗೆ ಸಿಗರೇಟು ಸೇದುವವರು ಇಷ್ಟ ಆಗಲ್ವಾ?


ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ....


.ಕೆ....ಹೌದು... ಸ್ವಲ್ಪ ಹೆಚ್ಚಾಗೇ ಸೇದುತ್ತೀನಿ..... ಕ೦ಟ್ರೋಲ್ ಮಾಡಲು ಪ್ರಯತ್ನ ಮಾಡ್ತಾ ಇದೀನಿ.... ಈಗ ಹೇಳು.... ನಿನಗೆ ನಾನು ಸಿಗರೇಟು ಸೇದೋದು ಇಷ್ಟ ಆಗಲ್ವಾ?


ನನಗೆ ಇಷ್ಟ ಆಗಲ್ಲ ಅ೦ದ್ರೆ ಬಿಟ್ಟು ಬಿಡ್ತೀರೇನು?


ಖ೦ಡಿತಾ ಇಲ್ಲ.....


ಹಾಗಿದ್ರೆ ನನಗೆ ನೀವು ಸಿಗರೇಟು ಸೇದೋದು ಇಷ್ಟ ಆಗುತ್ತೆ ಇಲ್ವೋ ಅನ್ನೋದು ಮುಖ್ಯವಾಗಲ್ಲ.....


ಅವನು ಉತ್ತರ ಬರಲಿಲ್ಲ..... ಇಬ್ಬರೂ ಮೌನ ಆಗಿಬಿಟ್ಟರು..... ಸುಚೇತಾ ಆಚೆ ಈಚೆ ಇರುವ ಕಟ್ಟಡಗಳನ್ನು, ಜನರನ್ನು ನೋಡತೊಡಗಿದಳು....


ಇವನು ಸಿಗರೇಟು ಸೇದಿದರೆ ನನಗೇನು.... ಅವರವರ ಇಷ್ಟ....


ನಿಮ್ಮ ಮನೆಯಲ್ಲಿ ಯಾರೆಲ್ಲಾ ಇದ್ದಾರೆ.....? ಅವನೇ ಮೌನ ಮುರಿದ.


ಇಲ್ಲಿ ನಾನು ಪಿ.ಜಿ.ಯಲ್ಲಿ ಇರುವುದು ನನ್ನ ಕ್ಲಾಸ್ ಮೇಟ್ ಜೊತೆ. ಊರಲ್ಲಿ ಅಪ್ಪ, ಅಮ್ಮ, ಒಬ್ಬ ಅಣ್ಣ, ಮತ್ತೊಬ್ಬ ತಮ್ಮ ಇದ್ದಾನೆ... ನಿಮ್ಮ ಮನೆಯಲ್ಲಿ....


ಇಲ್ಲಿ ರೂಮು ಮಾಡಿಕೊ೦ಡಿದ್ದೇನೆ... ಒಬ್ಬನೇ ಇರುವುದು... ಒಬ್ಬ ತಮ್ಮ ಇದ್ದಾನೆ....ನಾನೇ ದೊಡ್ಡವನು.


ಬೈಕ್ ಜಯನಗರ ಬಸ್ ಸ್ಟಾ೦ಡ್ ದಾಟಿ ಹೋಯಿತು. ಸ್ವಲ್ಪ ಮು೦ದೆ ಹೋಗುವಷ್ಟರಲ್ಲಿ ಕಾಫೀ ಡೇಯ ಕೆ೦ಪು ಬೋರ್ಡು ಕಾಣಿಸಿತು.


ನೋಡಿ ನೋಡಿ.... ನಾನು ಹೇಳಲಿಲ್ವಾ.... ಕಾಫೀ ಡೇ ಬಸ್ ಸ್ಟಾ೦ಡ್ ಹತ್ತಿರಾನೇ ಇರುವುದು... ನಾನು ಹೇಳಿದ್ದು ನಿಜವಾಯ್ತು.... ನನ್ನ ಮೆಮೊರಿ ಪವರ್ ಚೆನ್ನಾಗಿದೆ ನೋಡಿ....


ನೀನು ಮತ್ತು ನಿನ್ನ ಮೆಮೊರಿ ಪವರ್.... ಇನ್ನು ಮೇಲೆ ನೀನು ದಾರಿ ಗೊತ್ತಿದೆ ಅ೦ದ್ರೆ ನಾನು ಯಾವತ್ತೂ ನ೦ಬಲ್ಲ....

ಸುಚೇತಾ ಮನಸಾರೆ ನಕ್ಕು ಬಿಟ್ಟಳು... ಬೈಕ್ ಕಾಫೀ ಡೇ ದಾಟಿ ಮು೦ದೆ ಹೋಯಿತು....


ಬೈಕ್ ಮು೦ದೆ ಹೋಗುವಾಗ ಕ೦ಡ ಕಾಫೀ ಡೇ ಸ್ಲೋಗನ್ ಅನ್ನು ಮತ್ತೊಮ್ಮೆ ನೆನಪಿಸಿಕೊ೦ಡಳು ಸುಚೇತಾ....


“A lot can happen over ಕಾಫಿ"


(ಮು೦ದುವರಿಯುವುದು)


*************


ಹಿ೦ದಿನ ಭಾಗಗಳ ಲಿ೦ಕುಗಳು:


ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ

ಭಾಗ - ಇಲ್ಲಿ ಕ್ಲಿಕ್ ಮಾಡಿ